ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಉಯ್ಯಾಲೆ

ಟಿ.ಎಸ್.ಶ್ರವಣಕುಮಾರಿ ಉಯ್ಯಾಲೆ ಉಯ್ಯಾಲೆ ಈಗಾರು ತಿಂಗಳಿನಿಂದಲೂ ಸೀತಕ್ಕನಿಗೆ ಅಷ್ಟು ಅರಾಮಿಲ್ಲ. ದಿನಕ್ಕೊಂದೊಂದು ತೊಂದರೆ. ಡಾಕ್ಟರಿಗೆ ತೋರಿಸಿಯೂ ಏನೂ ಪ್ರಯೋಜನವಾಗಿಲ್ಲ. ಅವರ ಪ್ರಕಾರ ವಯಸ್ಸಾಗಿರುವುದನ್ನು ಬಿಟ್ಟರೆ ಬೇರೇನೂ ಇಲ್ಲ. ಆದರೆ ಸೀತಕ್ಕನಿಗೆ ಮಾತ್ರಾ ದಿನದಿಂದ ದಿನಕ್ಕೆ ನಿತ್ರಾಣ. ಐವತ್ತು ಜನ ಬಂದರೂ ಹೆದರದೆ ಅಡುಗೆ ಮಾಡುತ್ತಿದ್ದವಳಿಗೆ ಈಗ ಐದು ಜನಕ್ಕೂ ಮಾಡಲೂ ಸಾದ್ಯವಾಗದಂತಾಗಿದೆ. ಈಗೊಂದು ತಿಂಗಳಿನಿಂದಂತೂ ಪೂರಾ ಹಾಸಿಗೆ ಹಿಡಿದು ಬಿಟ್ಟಿದ್ದಾಳೆ. ಶಾಮಿ, ಸರಳನೂ ತಮ್ಮ ಕೈಲಾದ್ದೆಲ್ಲಾ ಮಾಡುತ್ತಿದ್ದಾರೆ. ಸೀತಕ್ಕನಿಗೋ, ಹುಶಾರು ತಪ್ಪಿದಾಗಿನಿಂದಾಗಲೂ ಮಕ್ಕಳಿಗಾಗಿ ಹಂಬಲಿಸುವಂತಾಗಿದೆ. ಅವರೇನು ಹತ್ತಿರ ವಿದ್ದಾರೆಯೆ? ಶಾಲಿನಿಯಿರುವುದು ಡೆಲ್ಲಿಯಲ್ಲಾದರೆ, ರಾಜು ಇರುವುದು ಕಲ್ಕತ್ತೆಯಲ್ಲಿ. ಇರುವುದರಲ್ಲಿ ವಿಮಲ ಹತ್ತಿರದ ಬೆಂಗಳೂರಿನಲ್ಲಿದ್ದಾಳೆ. ಈ ನಡುವೆ ಒಬ್ಬಳೇ ತಿಂಗಳಿಗೋ, ಹದಿನೈದು ದಿನಕ್ಕೋ ಒಂದು ಸಲ ಬಂದು ಹೋಗುತ್ತಾಳೆ. ಎಲ್ಲ ಮೊಮ್ಮಕ್ಕಳಿಗೂ ಶಾಲೆ, ಕಾಲೇಜು. ಈಗಿನ ಕಾಲಕ್ಕೆ ರಜ ಹಾಕಿಸಿ ಕರೆದುಕೊಂಡು ಬರಲು ಸಾಧ್ಯವೇ?! ಮೊಮ್ಮಕ್ಕಳ ಮುಖಗಳಂತೂ ಮರೆತೇ ಹೋದಂತಾಗಿದೆ. ಬಾಣಂತನ ಮುಗಿಸಿಕೊಂಡು ಹೋದ ಮೇಲೆ ಎರಡೋ ಮೂರೋ ಸಲ ಬಂದಿದ್ದರೆ ಹೆಚ್ಹೆಚ್ಚು. ಸಧ್ಯ! ಎಲ್ಲೋ ಸುಖವಾಗಿದ್ದಾರಲ್ಲ; ನಾನೂ ಹೆಚ್ಚಾಗಿ ಬಯಸಬಾರದು ಎಂದು ಸಮಾಧಾನ ತಂದುಕೊAಡಿದ್ದಳು ಸೀತಕ್ಕ. ಆದರೂ ದೇಹ ನಿತ್ರಾಣವಾದಾಗ ತನ್ನವರನ್ನು ಬಯಸುವುದು ತಪ್ಪೆ?! ಯಾರು ಯಾರೋ ನೆಂಟರು, ಪರಿಚಿತರು, ಸ್ನೇಹಿತರು ಈ ಒಂದು ತಿಂಗಳಲ್ಲಿ ಬಂದು ನೋಡಿಕೊಂಡು ಹೋಗಿದ್ದಾರೆ. ರಾಜು, ಶಾಲಿನಿ ಮಾತ್ರ ಕಂಡಿಲ್ಲ. ಈಗೆರಡು ದಿನಗಳಿಂದಂತೂ ಪೂರಾ ಹಾಸಿಗೆಗೇ ಅಂಟಿಕೊಂಡಿದ್ದಾಳೆ. ಕಣ್ಣು ಬಿಡಲೂ ಸುಸ್ತಾಗುತ್ತಿದೆ. ಮಾತಾಡಲೂ ಸಾಧ್ಯವಾಗುತ್ತಿಲ್ಲ. ಉಸಿರಾಡುವುದನ್ನು ಬಿಟ್ಟರೆ ಅವಳು ಜೀವಂತವಾಗಿರುವುದು ಗೊತ್ತೇ ಆಗುತ್ತಿಲ್ಲ. ಮನಸ್ಸು ಸ್ವಲ್ಪ ಹೊತ್ತು ಎಚ್ಚರವಾಗಿರುತ್ತೆ, ಕೆಲವುಸಲ ಒಂದಕ್ಕೊಂದಕ್ಕೆ ಎಳೆ ತಪ್ಪುತ್ತಿರುತ್ತದೆ, ಮತ್ತೆ ಸ್ವಲ್ಪ ಹೊತ್ತು ಏನೋ ಮಂಪರು.. ಅರೆಜ್ಞಾನದ ಸ್ಥಿತಿ… ಎಲ್ಲೋ ಶಾಲಿನಿಯ ದನಿ ಕೇಳಿದಂತಾಯಿತು ಸೀತಕ್ಕನಿಗೆ… ಹೌದೋ ಅಲ್ಲವೋ… ಹೌದು ಅವಳದ್ದೇ ದನಿ… ಅವಳೇ… ಈಗ ಬಂದಳೇನೋ ಊರಿನಿಂದ.. ಜೊತೆಗೆ ಗೋಪಾಲನೂ ಬಂದಿದ್ದಾನೇನೋ.. ಮಕ್ಕಳು? ಏನವರ ಹೆಸರು?? ಇಲ್ಲ.. ನೆನಪಾಗುತ್ತಿಲ್ಲ… ಮೆದುಳಲ್ಲೆಲ್ಲಾ ಬರೀ ಕತ್ತಲೆ… ಏನೂ ನೆನಪಾಗುತ್ತಿಲ್ಲ… ಇವಳಿಗೆ ಎರಡೂ ಗಂಡು ಮಕ್ಕಳೇನಾ? ಅಥವಾ ಎರಡೂ ಹೆಣ್ಣೇನಾ.. ಅಥವಾ ಒಂದು ಗಂಡು ಒಂದು ಹೆಣ್ಣಾ… ಅಥವಾ ಒಂದೇ ಮಗುವಾ.. ಏಕೋ ತಲೆಯೆಲ್ಲಾ ಖಾಲಿಯಾದಂತೆನಿಸಿತು.. ಕಣ್ಣು ಬಿಡಬೇಕೆಂದುಕೊಂಡರೂ ಬಿಡಲಾಗುತ್ತಿಲ್ಲ… ಅಷ್ಟೇ ಶಾಮಿ ಎಲ್ಲೋ ಕರೆಸಿಕೊಂಡಿರಬೇಕು.. ಇವತ್ತೋ.., ನಾಳೆಯೋ.. ಒಂದು ಸಲ ನೋಡಲು ಬಂದುಬಿಡೂಂತ… ಎಲ್ಲೋ ಅವಳ ದನಿ ಕೇಳುತ್ತಿದೆ ಆದರೆ ಯಾವ ಮಾತೂ ಅರ್ಥವಾಗುತ್ತಿಲ್ಲ.. ಹಾಗಾದರೆ ಅವಳು ಈ ಕೋಣೆಯಲ್ಲಿ ಮಾತಾಡುತ್ತಿಲ್ಲ; ಇನ್ನೂ ಹೊರಗೇ ಎಲ್ಲೋ ಇದ್ದಾಳೆ. ಇದರ ಮಧ್ಯೆ ಈ ಜೋಕಾಲಿಯ ಜೀಕ್ ಜೀಕ್ ಸದ್ದು ಬೇರೆ.. ಬೆಳಗಾಗೆದ್ದು ಯಾರು ಆಡುತ್ತಿದ್ದಾರೆ……? ಯಾರಿರಬಹುದು……?? ಬಾಗಿಲ ಹತ್ತಿರ ಶಾಮಿ ಮಾತಾಡಿದಂತಾಯಿತು.. ಓ ಚೇತನಾ ಇವತ್ತು ರಜವೇನೋ, ಬೆಳಗ್ಗೇನೇ ಆಡಕ್ಕೆ ಬಂದು ಬಿಟ್ಟಿದೀಯ.. ಅಪ್ಪ ಅಮ್ಮ ಆಫೀಸಿಗೆ ಹೋಗಿದ್ದಾರ? ಕಾಲು ಬೇರೆ ನೆಲಕ್ಕೆ ಸಿಗಲ್ಲ ನಿಂಗೆ ಮೀಟಿಕೊಳ್ಳಕ್ಕೆ, ಸರಿ ಕೂತ್ಕೊ ತೂಗಿ ಕೊಡ್ತೀನಿ’. ನಾಲ್ಕಾರು ಬಾರಿ ತೂಗಿದ ಸದ್ದು. ಅಷ್ಟರಲ್ಲಿ ಶಾಲಿನಿಯ ಮಾತು ಕೇಳಿತು – “ಯಾರೋ ಇವನು?” “ಅದೇ ಔಟ್ ಹೌಸಿನಲ್ಲದ್ದಾರಲ್ಲ ಅವರ ಮಗ. ಒಂದೇ ಮಗು, ಇವತ್ತು ಇವನಿಗೆ ರಜ, ಇವನ ಅಪ್ಪ ಅಮ್ಮನಿಗೆ ಆಫೀಸು. ಹೊತ್ತು ಹೋಗಲ್ಲ. ಉಯ್ಯಾಲೆ ಆಡಕ್ಕೆ ಅಂತ ಬರ್ತಿರ್ತಾನೆ’ ಶಾಮಿ ಹೇಳಿದನೇನೋ… ಎಲ್ಲೋ ಗುಹೆಯಲ್ಲಿ ಮಾತಾಡಿದ ಹಾಗೆ ಕೇಳುತ್ತಿದೆ… “ಸರಿ ಅಮ್ಮನ್ನ ನೋಡೋಣ ಹೇಗಿದಾಳೋ” ಕೋಣೆಯೊಳಗೆ ಬಂದಳು ಶಾಲಿನಿ. ಇಲ್ಲೇ ಮಂಚದ ಪಕ್ಕದಲ್ಲೇ ನಿಂತ ಹಾಗಿದೆ.. ಆದರೆ ಕಣ್ಣು ಮಾತ್ರ ಬಿಡಲಾಗುತ್ತಿಲ್ಲ “ಅಮ್ಮಾ..” ಶಾಲಿನಿ ಕರೆದಳೇನೋ.ಏನೇನೋ ಮಾತಾಡಬೇಕು… ಹೇಗಿದೀಯ ಅಂತ ಕೇಳಬೇಕು… ಮಕ್ಕಳು ಬರಲಿಲ್ವಾಂತ ಕೇಳಬೇಕು… ಅವಳ ಅತ್ತೆ, ಮಾವ ಚೆನ್ನಾಗಿದ್ದಾರಾಂತ ಕೇಳಬೇಕು… ಅಂದ ಹಾಗೆ ಅವರ ಅತ್ತೆ, ಮಾವ ಇದಾರೋ ಇಲ್ಲಾ …’ ಇಲ್ಲ… ನೆನಪಾಗುತ್ತಿಲ್ಲ… ಬಾಯಿ ಹೊರಳುತ್ತಲೇ ಇಲ್ಲ… ಸ್ವಲ್ಪ ತುಟಿಯಲುಗಿತೇನೋ ಅಷ್ಟೆ.. “ಕೇಳಿಸುತ್ತೋ ಇಲ್ಲವೋ” ಗೋಪಾಲನ ದನಿ. “ಏನೋ ಗೊತ್ತಾಗುತ್ತಿಲ್ಲ; ಎರಡು ದಿನದಿಂದ ಹೀಗೆ… ಹತ್ತಿರ ನಿಂತು ಜೋರಾಗಿ ಸ್ವಲ್ಪ ಹೊತ್ತು ಮಾತಾಡಿದರೆ ತುಟಿ ಸ್ವಲ್ಪ ಅಲಗತ್ತೆ; ಕೇಳಿಸಿದೆಯೇನೋ ಅಂತ ಅನ್ಕೋತೀವಿ” ಶಾಮಿಯೇನೋ ಹೇಳಿದ್ದು… ಅಳುತ್ತಿರುವ ಸದ್ದು.. ಶಾಲಿನಿಯೇನೋ.. ಮಗಳಲ್ಲವೇ.. “ಏನೋ ಅಮ್ಮಾಂತ ಬಂದರೆ ಎರಡು ಮಾತಾಡಕ್ಕೂ ಇಲ್ವೇನೋ” “ಸಮಾಧಾನ ಮಾಡ್ಕೊಳೇ. ಏನು ಮಾಡಕ್ಕಾಗತ್ತೆ. ಇಷ್ಟು ವರ್ಷ ನಮ್ಮ ಜೊತೆ ಚೆನ್ನಾಗಿದ್ರಲ್ಲ ಅದೇ ಪುಣ್ಯ ಅಂತ ಅನ್ಕೋಬೇಕು.. ಅಲ್ವೇ ಗೋಪಾಲ್” ಶಾಮಿ ಅಂದ. “ಅಷ್ಟಲ್ಲದೇ, ಏನೋ ಈಗ್ಲೇ ಬರಕ್ಕಾಯ್ತಲ್ಲ ಅಂತ ಸಮಾಧಾನ ಮಾಡ್ಕೋಬೇಕು ಅಷ್ಟೆ” ಅಳಿಯನ ಮಾತೇನೋ. ಮೂಗಿನ ಸೊರಬರ ಇನ್ನೂ ಕೇಳುತ್ತಾ ಇತ್ತು. “ಅಳಬೇಡ್ವೇ ಬಿದ್ದು ಹೋಗೋ ಮರಕ್ಕೆ ಯಾಕೆ ಇಷ್ಟು ಹಂಬಲಿಸ್ತೀಯ” ಮಗಳ ಬೆನ್ನು ನೇವರಿಸಿ ಹೇಳಬೇಕು ಸೀತಕ್ಕನಿಗೆ.. ಕೈ ಬಿದ್ದು ಹೋಗಿದೆಯಲ್ಲ… “ರಾತ್ರಿಯೆಲ್ಲಾ ಪ್ರಯಾಣ ಮಾಡಿ ಬಂದಿದೀರಿ; ಬನ್ನಿ ಸ್ವಲ್ಪ ತಿಂಡಿ ತಿಂದು ಸುಧಾರಿಸಿಕೊಳ್ತೀರಂತೆ” ಸರಳನ ದನಿ. ಶಾಮಿಯೂ ಜೊತೆಗೂಡಿದ “ಹೌದ್ಹೌದು, ಬನ್ನಿ ಮೊದಲು ತಿಂಡಿ ತಿಂದು ಬಿಡಿ; ಯಾವ ಗಳಿಗೇನೋ, ರಶ್ಮಿ, ರಾಜೀವಂಗೆ ಕೊಟ್ಯಾ” ಶಾಮಿ ಹೊರನಡೆದ. ಹ್ಞಾಂ ಇವಳ ಮಕ್ಕಳು ರಶ್ಮಿ, ರಾಜೀವ.. ರಶ್ಮಿ ದೊಡ್ಡೋಳೋ, ರಾಜೀವಾನೋ.. ರಶ್ಮೀನೇ ಇರಬೇಕು… ಇಲ್ಲವೇನೋ… ರಾಜೀವನೇ ಇರಬೇಕು… ಯಾಕೋ ಮತ್ತೆ ಕಲಸು ಮೇಲೋಗರವಾಯಿತು.. ಸರಿ ಯಾರೋ ಒಬ್ಬರು.. ವಿಮಲನಿಗೆ ಎರಡೂ ಗಂಡು ಮಕ್ಕಳೇನಾ… ಇರಬೇಕು.. ಏನವರ ಹೆಸರು… “ಓ ಯಾರೂ ತೂಗೋವ್ರಿಲ್ವೇನೋ ಕೂತ್ಕೋ ತೂಕ್ಕೊಡ್ತೀನಿ” ಶಾಲಿನಿ ಹೇಳಿದ್ದು ಕೇಳಿತುಜೀಕ್ ಜೀಕ್… ಸದ್ದು “ತಿಂಡಿ ತೊಗೊಳ್ಳಿ ಬನ್ನಿ” ಮತ್ತೆ ಸರಳ ಕೂಗಿದಳು “ಬಂದೇ” ಶಾಲಿನಿ ಹೊರಟಳೇನೋ ಎರಡು ನಿಮಿಷ ಉಯ್ಯಾಲೆ ತೂಗಿಕೊಂಡು ನಿಂತೇ ಹೋಯಿತೇನೋ.. ಮತ್ತೆ ಮಂಪರು…. “ಓ ಹೋ ಹೋ ರಾಜಣ್ಣಾ ಬಾ ಬಾ, ಟ್ರೇನಿಗೆ ಬಂದ್ಯಾ, ಸದ್ಯ ದೀಪೂನೂ ಕರಕೊಂಡು ಬಂದ್ಯಲ್ಲ. ಒಳ್ಳೇದಾಯ್ತು. ಏನಮ್ಮಾ ದೀಪೂ ಅಜ್ಜಿ ಮನೇಗೆ ಬಂದು ಎಷ್ಟು ವರ್ಷ ಆಗಿತ್ತು ಅಂತೂ ಬಂದ್ಯಲ್ಲಾ… ಅತ್ಗೇ ಬನ್ನಿ ಕೈಕಾಲು ತೊಳೀರಿ. ಲೋ ಪ್ರಕಾಶ ದೊಡ್ಡಪ್ಪನ ಸೂಟ್ಕೇಸು ತೊಗೊಂಡು ಹೋಗಿ ಒಳಗಿಡು” ಶಾಮಿ ಒಂದೇ ಸಮ ಹೇಳ್ತಾನೇ ಇದ್ದ. “ಓ ಶಾಲಿನೀನು ಬಂದು ಬಿಟ್ಟಿದಾಳೆ…! ಯಾವಾಗ ಬಂದೆ” ಕಮಲನ ದನಿಯೇನೋ. “ಬೆಳಗ್ಗೆ ಬಂದ್ವಿ. ಹ್ಞೂ ಮಕ್ಕಳೂ ಬಂದಿದಾರೆ; ಅವಸರದಲ್ಲಿ ಹೊರಟಿದ್ದಲ್ಲಾ… ಕೂರಕ್ಕೇ ಸರಿಯಾಗಿ ಜಾಗ ಇರಲಿಲ್ಲ; ಇನ್ನ ಮಲಗೋದೆಲ್ಲಿ ಬಂತು ಅವಕ್ಕೆ ನಿದ್ರೆ ಕೆಟ್ಟು ರೂಡಿಯಿಲ್ಲ. ತಿಂಡಿ ತಿಂದು ಮಲಗಿದಾರೆ” ಶಾಲಿನಿ ಹೇಳುತ್ತಿದ್ದಳು “ಇನ್ನೇನು ವಿಮಲಾನೂ ಬರ‍್ತಾಳೇಂತ ಕಾಣತ್ತೆ. ಬೆಳಗ್ಗೆದ್ದು ಹೊರಟಿದಾರೆ ಅವರೆಲ್ಲಾ” ಶಾಮನ ದನಿಯಿರಬೇಕು… “ನೀನ್ಯಾರೋ ಮರಿ” ಕಮಲ ಕೇಳುತ್ತಿದ್ದಾಳೇನೋ. “ಉಯ್ಯಾಲೆ ಆಡ್ಬೇಕಾ. ಕೂತ್ಕೋ” ಮತ್ತೆ ಉಯ್ಯಾಲೆ ಜೀಕುವ ಸದ್ದು… ಕಿವಿಯಲ್ಲಿ ಗುಯ್ಯೆನ್ನುವ ಸದ್ದು… ಯಾರೋ ಪಕ್ಕದಲ್ಲಿ ಬಂದು ನಿಂತ ಹಾಗಿದೆ… ಸರಳಾನೇ ಇರಬೇಕು.. ಬಾಯಿಯ ಹತ್ತಿರ ತಣ್ಣಗಾಗುತ್ತಿದೆ. ಜ್ಯೂಸು ಕುಡಿಸುತ್ತಿದ್ದಾಳೇನೋ. ಮೆತ್ತಗೆ ಬಾಯಿ ಬಿಡಿಸುತ್ತಿದ್ದಾಳೇನೋ.. “ಇಷ್ಟೇನಾ ಆಹಾರ..” ವಿಮಲನೇ…? ಇರಬೇಕು. ಓ ಅವಳೂ ಬಂದಳೇನೋ.. “ಇಷ್ಟು ಹೋಗೋದೇ ಕಷ್ಟ ಆಗಿ ಬಿಟ್ಟಿದೆ ಎರಡು ದಿನದಿಂದ.. ತುಂಬಾ ಪ್ರಯತ್ನ ಪಟ್ಟರೆ ಎರಡು ಮೂರು ಚಮಚ ಅಷ್ಟೆ” ಸರಳ ಅಂದಳು. “ಸ್ವಲ್ಪ ತಿಳಿ ಗಂಜಿ ಕುಡಿಸಿದ್ರೆ” ಯಾರದೋ ಸಲಹೆಯೇನೋ. “ಎರಡು ದಿನದಿಂದ ಅದೂ ಹೋಗ್ತಾ ಇಲ್ಲ” “ಎಳನೀರಾದ್ರೆ” ಯಾರಿದು… “ತರಿಸಿ ನೋಡೋಣವಾ” ಇನ್ಯಾರದೋ ದನಿ. ಯಾರ ದನಿಯೂ ಗುರ್ತು ಸಿಗುತ್ತಿಲ್ಲ. ಅಂತೂ ಎಲ್ಲರೂ ಇಲ್ಲೇ ಸೇರಿಕೊಂಡಿರಬೇಕು. ಹಾಲಿನಲ್ಲಿ `ಜೀಕ್ ಜೀಕ್’ ಉಯ್ಯಾಲೆಯ ಶಬ್ದ. ಜೊತೆಯಲ್ಲೇ ನಾಲ್ಕೈದು ಮಕ್ಕಳು ಸೇರಿರುವ ಹಾಗಿದೆ. ಮೊಮ್ಮಕ್ಕಳೆಲ್ಲಾ ಸೇರಿದ್ದಾರೇನೋ. ಅವರ‍್ಯಾರೂ ಒಳಗೆ ಬಂದ ಹಾಗಿಲ್ಲ. ಅವರಿಗೆ ಅಜ್ಜಿಯ ಹಂಬಲ ಅಷ್ಟೊಂದಿಲ್ಲ. ಯಾರದೋ ಮಾತು… “ಇವನು ಪುಟ್ಟ ಹುಡುಗ ಅಲ್ವಾ; ನಾವೆಲ್ಲಾ ಒಬ್ಬರಾದ ಮೇಲೆ ಒಬ್ಬರು ಇವನನ್ನ ತೂಗೋಣ” “ಏ ಗಲಾಟೆ ಮಾಡಬೇಡ್ರೋ” ಯಾರದೋ ದೊಡ್ಡವರ ದನಿ.. ಗುರುತು ಸಿಗುತ್ತಿಲ್ಲ.. “ಓ ಆಡ್ಕೊಳ್ಳಿ ಬಿಡು ಅವುತಾನೇ ಏನು ಮಾಡ್ಬೇಕು. ಅಮ್ಮನಿಗಂತೂ ಈ ಕಡೆ ಜ್ಞಾನವೇ ಇಲ್ಲ” “ಅದೂ ಸರೀನ್ನು” ಯಾರು ಯಾರು ಮಾತಾಡ್ತಿದಾರೋ ಒಂದೂ ಗೊತ್ತಾಗುತ್ತಾ ಇಲ್ಲ… ಮತ್ತೆ ಕಿವಿಯಲ್ಲಿ ಗುಯ್ ಗುಡುತ್ತಿದೆ… ದ್ವನಿಯೆಲ್ಲಾ ಅಸ್ಪಷ್ಟ…. ಏನೂ ಕೇಳುತ್ತಿಲ್ಲ…… ಯಾರೋ ಕೈ ಮುಟ್ಟಿದ ಹಾಗೆ…ಡಾಕ್ಟರೇನೋ… “ಹೇಗಿದಾರೆ…” ಡಾಕ್ಟರೇನು ಹೇಳಿದರೋ.. ಬರೀ ಸನ್ನೆಯಲ್ಲಿ ಹೇಳಿರಬೇಕೇನೋ.. ಎದೆಯ ಮೇಲೆ…. ಸ್ಟೆತಾಸ್ಕೋಪಿರಬೇಕು.. ಕಣ್ಣು ಬಿಡಿಸುತ್ತಿದ್ದಾರೆ. ರೆಪ್ಪೆ ಬಿಟ್ಟುಕೊಂಡಿತೇನೋ ಆದರೆ ಏನೂ ಕಾಣುತ್ತಿಲ್ಲವಲ್ಲ.. “ಅಷ್ಟೇ.. ಕಾಯಬೇಕು.. ಎಮರ್ಜನ್ಸಿ ಇದ್ದರೆ ಫೋನು ಮಾಡಿ.. ಸಂಜೆಯ ತನಕ ಮನೆಯಲ್ಲೇ ರ‍್ತೇನೆ.” “ಸರಿ ಡಾಕ್ಟ್ರೇ’ ಯಾರ ದನಿ…. ರಾಜನದೇ?! ಎಲ್ಲೋ ಮಾತಾಡಿದ ಹಾಗೆ ಕೇಳುತ್ತಿದೆ. “ಇನ್ನೂ ಯಾರಾದ್ರೂ ಬರೋವ್ರು ಇದಾರಾ. ಅವರ ಅಕ್ಕ, ತಂಗಿ, ಅಣ್ಣ, ತಮ್ಮ… ಯಾರಾದ್ರೂ…” ಕೇಳಿದ್ದು ಡಾಕ್ಟರೇ? “ಅವರಕ್ಕಾನೂ ಹಾಸಿಗೆ ಹಿಡಿದಿದಾರೆ ಬರೋ ಸ್ಥಿತಿಯಲ್ಲಿ ಇಲ್ಲ. ಅವರ ತಮ್ಮ ಹೋಗಿ ಎರಡು ವರ್ಷವಾಯ್ತು. ನಾವು ಮಕ್ಕಳೆಲ್ಲಾ ಇದೀವಿ” ಶಾಮನೇ ಮಾತಾಡಿದ್ದು?! ಯಾರೋ ಗೊತ್ತಾಗುತ್ತಿಲ್ಲವಲ್ಲ.,, ಸರಸೀನೂ ಹಾಸಿಗೆ ಹಿಡಿದಿದಾಳ್ಯೇ? ನಂಗಿಂತ ಎರಡು ವರ್ಷಕ್ಕೆ ದೊಡ್ಡೋಳೇನೋ. ಅವಳಿಗೇನಾಗಿದ್ಯೋ… ನಂಗೇನಾಗಿದೆ?….. ಹೋಗೋ ಕಾಲ ಬಂದಿದೆ ಅಷ್ಟೆ… ಶಂಕರ ನನಗಿಂತಾ ಐದು ವರ್ಷಕ್ಕೆ ಚಿಕ್ಕೋನು. ಹೋಗಿ ಆಗ್ಲೇ ಎರಡು ವರ್ಷವಾಯ್ತೇನೋ… ಎಷ್ಟು ವರ್ಷವಾಯ್ತೋ… ಹಾಲಲ್ಲಿನ್ನೂ ಮಕ್ಕಳು ಆಡುತ್ತಲೇ ಇದ್ದಾರೆ ಅಂತ ಕಾಣುತ್ತೆ. ಗಲಾಟೆ ಕೇಳುತ್ತಿದೆ…. “ಎಲ್ರೂ ಊಟ ಮಾಡಿ ಬಿಡೋಣ.. ಏನಾದ್ರೂ ಹೆಚ್ಚು ಕಮ್ಮಿಯಾದ್ರೆ…” ರಾಜನೇನೋ.. ಅವನು ಮುಂಚಿಂದಲೂ ಹಾಗೇ… ಹಸಿವು ತಡೆಯಲ್ಲ. “ಹೆಚ್ಚು ಕಮ್ಮಿಯಾದ್ರೆ ಎಲ್ಲಾ ಮುಗಿಯೋ ತಂಕ ಅವನು ಊಟ ಮಾಡೋ ಹಾಗಿಲ್ಲವಲ್ಲ…” ಯಾರು ಹೇಳಿದ್ದೋ…? ಎಲ್ಲ ನಿಶ್ಯಬ್ದ… `ಜೀಕ್ ಜೀಕ್’ ಮಾತ್ರಾ ಕೇಳುತ್ತಿದೆ. ಆ ಹುಡುಗ ಮಾತ್ರಾ ಇನ್ನೂ ಆಡುತ್ತಾ ಇದ್ದಾನೇನೋ.. ಯಾರು ತೂಗುತ್ತಿದ್ದಾರೋ… “ಚೇತನಾ ಊಟ ಮಾಡಿದ್ಯೇನಪ್ಪ” ಯಾರೋ ಕೇಳ್ತಾ ಇದಾರೆ “ಇರಲಿ ಉಯ್ಯಾಲೆ ಮೇಲೆ ಕೂತ್ಕೊಂಡೇ ಇದನ್ನ ತಿನ್ನು” ಏನು ಕೊಟ್ಟರೋ… ಅಂತೂ ಉಯ್ಯಾಲೆಯ ಸದ್ದಂತೂ ನಿಂತಿಲ್ಲ…. “ಶಾಮಾ ಇಲ್ಲಿ ಬಾ” “ಏನು ರಾಜಣ್ಣ” ಇಲ್ಲೇ ಎಲ್ಲೋ ಪಕ್ಕದಲ್ಲೇ ಕೂತಿದ್ದಾರೆ. “ಒಂದಷ್ಟು ದುಡ್ಡು ಮನೇಲಿಟ್ಟಿದಿ ತಾನೆ?” “ಒಂದೈದು ಸಾವ್ರ ಇದೆ. ಬೇಕೂಂದ್ರೆ ಎಟಿಎಂ ನಿಂದ ತರಬೋದಲ್ಲ…” “ಹಾಗಾದ್ರೆ ಸರಿ. ಹೇಗಾದ್ರೂ ಆಗ್ಲಿ. ನಾಳೆಯಿಂದ ಒಬ್ಬ ಅಡುಗೆಯವ್ರಿಗೆ ಹೇಳ್ಬಿಡು. ಮನೆ ತುಂಬಾ ಜನ ಇದಾರೆ”. “ಇವತ್ತೇ ಬರಬೇಕಿತ್ತು. ಅವರ ಮನೇಲಿ ಏನೋ ಹೆಚ್ಚು ಗಟ್ಲೆಯಂತೆ. ನಾಳೆಯಿಂದ ಬರ‍್ತಾರೆ”. “ಆಮೇಲೆ ಇನ್ನೊಂದು ವಿಷಯ. ರಾಮಾಜೋಯಿಸರು ಊರಲ್ಲೇ ಇದ್ದಾರೆ ತಾನೆ. ಆಮೇಲೆ ಆ ಹೊತ್ತಲ್ಲಿ ಎಡವಟ್ಟಾದೀತು”. “ಬೆಳಗ್ಗೆ ಪ್ರಕಾಶನ್ನ ಕಳಿಸಿದ್ದೆ ಅವರ ಮನೆ ಹತ್ರ. ಊರಲ್ಲಿಲ್ಲ, ಮಧ್ಯಾನ್ಹದ ಮೇಲೆ ಬರ‍್ತಾರೆ’ ಅಂದರಂತೆ. ಹೇಗೂ ಇರ‍್ಲಿ ಅಂತ ತಿಪ್ಪಾ ಶಾಸ್ತ್ರಿಗಳ ಮನೆಗೂ ಕಳಿಸಿದ್ದೆ. ಅವರಂತೂ ಇದಾರೆ.” “ನೋಡು ಇವನ್ನೆಲ್ಲಾ ಮೊದಲೇ ವ್ಯವಸ್ಥೆ ಮಾಡಿಕೊಂಡುಬಿಡಬೇಕು. ಆಮೇಲೆ ಒದ್ದಾಡೋ ಹಾಗಾಗ್ಬಾರ‍್ದು ಅಷ್ಟೆ”. ಎಷ್ಟು ಸ್ಪಷ್ಟವಾಗಿ ಕೇಳುತ್ತಿದೆ… “ಮತ್ತೆ ಆಮೇಲೆ ಇನ್ನೊಂದು ವಿಷಯ…..” ಇಲ್ಲಾ… ಇನ್ನೇನೂ ಸರಿಯಾಗಿ ಕೇಳಿಸುತ್ತಿಲ್ಲ… ಪಕ್ಕದಲ್ಲೇ ಇದಾರೋ ಇಲ್ಲ ಎದ್ದು ಹೋದರೋ….. ಇರಬಹುದೇನೋ… ಅಸ್ಪಷ್ಟವಾಗಿ ಏನೇನೋ

ಉಯ್ಯಾಲೆ Read Post »

ಕಥಾಗುಚ್ಛ

ಯಾರೂ ಓದದೆಯೇ ಹೋದ ಕತೆ…

ಟಿ.ಎಸ್.ಶ್ರವಣ ಕುಮಾರಿ ಯಾರೂ ಓದದೆಯೇ ಹೋದ ಕತೆ… ಇದೋ ಅತ್ಯಂತ ಜನನಿಬಿಡವಾದ ಮಾರುಕಟ್ಟೆ ಪ್ರದೇಶ. ಈ ಮಾರುಕಟ್ಟೆ ಸಂಕೀರ್ಣ ಮತ್ತು ಅದರ ಸುತ್ತಮುತ್ತಲಿನ ಅಂಗಡಿಗಳಲ್ಲಿ ಮಾರದ, ಸಿಗದ ವಸ್ತುವೇ ಇಲ್ಲ ಎಂದುಕೊಳ್ಳಿ.  ಸಣ್ಣ ಪುಟ್ಟ ಸಾಸುವೆ, ಪಿನ್ನು ಇಂತಹ ವಸ್ತುಗಳನ್ನು ಮಾರುವ ಅಂಗಡಿಗಳಿಂದ ಹಿಡಿದು ಕಾರು, ರಿಯಲ್ ಎಸ್ಟೇಟ್ ಏಜೆನ್ಸಿಯಂತ ದೊಡ್ಡ ವಹಿವಾಟುಗಳೂ ಇಲ್ಲಿವೆ. ಇವೆಲ್ಲವೂ ಇಲ್ಲಿದೆ ಎಂದ ಮೇಲೆ ಇವನ್ನೆಲ್ಲಾ ಮಾರುವವರು, ಕೊಳ್ಳುವ ಗಿರಾಕಿಗಳು, ಸರಕನ್ನು ಹೊರುವ ಹಮಾಲಿಗಳು, ಸಾಗಿಸುವ ಚಾಲಕರು, ವ್ಯವಹಾರವನ್ನು ಕುದುರಿಸುವ ದಲ್ಲಾಳಿಗಳು, ಪಾರ್ಕಿಂಗ್ ಕಾಸು ವಸೂಲಿ ಮಾಡುವ ಹುಡುಗರು, ಇವೆಲ್ಲ ವ್ಯವಹಾರಗಳನ್ನು ನೋಡಿ ಮಜಾ ತೆಗೆದುಕೊಳ್ಳುವ, ಅಂದಿನ ನಾಷ್ಟ, ಊಟ, ಬೀಡಿ, ಸಿಗರೇಟು, ಸೇಂದಿ, ಖರ್ಚಿಗೊಂದಿಷ್ಟು ಕಾಸು ಇವನ್ನೆಲ್ಲಾ ಕಂಡವರ ದುಡ್ಡಿನಲ್ಲಿ ಗಿಟ್ಟಿಸುವ ಉಡಾಫೆ ಮಂದಿಗಳೂ ಸಾಕಷ್ಟು ಇದ್ದಾರೆ. ಅಂತೆಯೇ ಮಾರುಕಟ್ಟೆಯ ಸುತ್ತಲೂ ಬೀದಿಯ ಇಕ್ಕೆಲಗಳಲ್ಲೂ ಬುಟ್ಟಿ ವ್ಯಾಪಾರಸ್ತರೋ, ತಳ್ಳು ಗಾಡಿಯವರೋ ತಂತಮ್ಮ ಸರಕನ್ನು ಮುಂಜಾವಿನಿಂದ ಸರಿ ರಾತ್ರಿಯವರೆಗೂ ಮಾರುತ್ತಾ ತಮ್ಮ ದಿನದ ಸಂಪಾದನೆ ಎಣಿಸುತ್ತಿರುತ್ತಾರೆ.ಅಲ್ಲಿ, ಇಲ್ಲಿ ಗಿರಾಕಿಗಳಿಗೆ ಗಾಳ ಹಾಕುತ್ತಾ ನಿಲ್ಲುವ ವೈಯಾರಿಗಳು, ಇವರನ್ನೇ ಹುಡುಕುತ್ತಾ ಬರುವ ರಸಿಕ ಮಹಾಶಯರೂ ಇಬ್ಬರ ನಡುವಿನ ತಲೆಹಿಡುಕರೂ ಅಲ್ಲಿಲ್ಲಿ ಕಾಣ ಸಿಗುತ್ತಾರೆ.ಇಷ್ಟೆಲ್ಲದರ ಮದ್ಯೆಯೇ ಸಮಾಜದಲ್ಲಿ ಮರ್ಯಾದಸ್ತರೆಂದು ಗುರುತಿಸಿಕೊಂಡಿರುವ ಬಹಳಷ್ಟು ಜನರೂ ಯಾವುದೋ ಒಂದಲ್ಲ ಒಂದು ವ್ಯವಹಾರಕ್ಕೆ ಇಲ್ಲಿಗೆ ಬರುತ್ತಿರುತ್ತಾರೆ.ಇಷ್ಟೆಲ್ಲವೂ ಇದ್ದ ಮೇಲೆ ಪೋಲೀಸರ ಮೇಲ್ವಿಚಾರಣೆ? ಅವರೂ ಇದ್ದಾರೆ.ಇಷ್ಟೆಲ್ಲವನ್ನೂ ಏಕೆ ಹೇಳುತ್ತಿದ್ದೇನೆಂದರೆ ಇದು ಇಡೀ ಜಗತ್ತಿನ ಮಾರುಕಟ್ಟೆಯ ಒಂದು ಸಣ್ಣ ಸ್ವರೂಪವೆಂದು ಹೇಳುವುದಕ್ಕಷ್ಟೆ ಮತ್ತು ನನ್ನ ಈ ಕತೆ ಈ ಮಾರುಕಟ್ಟೆಯ ಬದಿಯ ಫುಟ್ ಪಾತೊಂದರಲ್ಲಿ ಬಿದ್ದಿದ್ದಕ್ಕೆ. ಆ ಕತೆ ಮಾರುಕಟ್ಟೆಯ ಮುಂಬಾಗದ ಮೂಲೆಯಲ್ಲಿ ಫುಟ್ ಪಾತ್ ವ್ಯಾಪಾರಸ್ತರ ಹಿಂಬಾಗದಲ್ಲಿ ಗೋಡೆಯ ಪಕ್ಕದಲ್ಲಿ ಪ್ರಾಯಶಃ ಬೆಳಗಿನಿಂದಲೇ ಬಿದ್ದಿತ್ತೇನೋ, ಅದನ್ನು ಗಮನಿಸಿದರ‍್ಯಾರು? ಬೆಳಗಿನ ಹೋಲ್ ಸೇಲ್ ವ್ಯಾಪಾರದಲ್ಲಿ ಕೊಂಡ ಸರಕನ್ನೋ, ಬೇರೇನೇನೋ ಸರಕುಗಳನ್ನೋ ತುಂಡು ವ್ಯಾಪಾರಸ್ತರು ಎಂದಿನಂತೆ ತಮ್ಮ ತಮ್ಮ ಅನಧಿಕೃತವಾದ ಅಧಿಕೃತ ಜಾಗಗಳಲ್ಲಿ ಹರಡಿಕೊಂಡು ಕುಳಿತುಕೊಂಡರು. ಅಂತವರಲ್ಲೊಬ್ಬ ಹೆಂಗಸುತನ್ನ ಊಟದ ಡಬ್ಬಿ, ಛತ್ರಿ, ಬಟ್ಟೆಯ ಗಂಟು, ಕಂಕುಳಲ್ಲಿದ್ದ, ಓಡಾಡುತ್ತಿದ್ದ ಚಿಳ್ಳೆ ಪಿಳ್ಳೆಗಳಿಗೆ ಜಾಗ ಮಾಡಲು ಹೋದಾಗ ಅನಾಥವಾಗಿ ಬಿದ್ದಿದ್ದ ಈ ಕತೆಯು ಕಾಣಿಸಿತು.`ರಾತ್ರಿ ಕುಡಿದಿದ್ದು ಇನ್ನೂ ಇಳ್ದಿಲ್ಲಾನ್ನೋಂಗದೆ’ ಎನ್ನುತ್ತಾ ಆ ಹೆಂಗಸು ಅದನ್ನು ಪಕ್ಕಕ್ಕೆ ಒತ್ತರಿಸಿ ತನ್ನ ಬಿಡಾರಕ್ಕೆ ಜಾಗ ಮಾಡಿಕೊಂಡಳು. ಪಕ್ಕಕ್ಕೆ ದೂಡಿದಾಗ ಅದಕ್ಕೇನಾದರೂ ನೋವಾಯಿತೇನೋ… ನರಳಿತೇನೋ… ಯಾರಿಗೇನೂ ಕೇಳಲಿಲ್ಲ ಬಿಡಿ. ʻಅದ್ರ ತಂಟೇಗೋಗ್ಬೇಡಿ. ಅಸಿವಾದ್ರೆ ಕವರ‍್ನಾಗೆ ಬನ್ನದೆ, ಡಬ್ಬೀನಾಗೆ ರೊಟ್ಟಿಯಿದೆ, ತಿನ್ಕೊಳಿʼ ಎಂದು ತನ್ನ ಮರಿಗಳಿಗೆ ಹೇಳುತ್ತಾ ತನ್ನ ವಹಿವಾಟಿನ ಜಾಗಕ್ಕೆ ಪ್ಲಾಸ್ಟಿಕ್ ಶೀಟ್ ಹರಡಿ ಒಂದೊಂದೇ ತರಕಾರಿಯನ್ನು ಅದರ ಮೇಲೆ ಜೋಡಿಸಿಕೊಳ್ಳುತ್ತಾ ಹೋದಳು. ಸ್ವಲ್ಪ ಹೊತ್ತು ಸುಮ್ಮನಿದ್ದ ಮಕ್ಕಳು ʻಅವ್ವಾ ಅದೇನವ್ವಾʼ ಎಂದು ಬೆರಳು ತೋರುತ್ತಾ ಕೇಳಿದವು ʻಮುಚ್ಕೊಂಡು ಸುಮ್ಕೆ ಕೂರಕ್ ಬರಾಕಿಲ್ವಾ.  ಏನ್ ಕತೆಯೋ ಏನ್ ಸುಡುಗಾಡೋ…ಇಲ್ಲಿ ಬಂದ್ ಬಿದ್ದದೆʼ ಎಂದು ಪಿಳ್ಳೆಗಳ ಮೇಲೆ ಒಂದು ಆವಾಜ್ ಹಾಕಿ ತನ್ನ ಕೆಲಸ ಮುಂದುವರಿಸಿದಳು.  ಅವೂ ಕುತೂಹಲದಿಂದ ಹಿಂದೆ ಮುಂದೆ ಅಕ್ಕ ಪಕ್ಕ ಎಲ್ಲಾ ನೋಡಿದವು ಅವಕ್ಕಂತೂ ಅದನ್ನು ಓದಲು ಬರಲಿಲ್ಲ… ಜಾಗರೂಕತೆಯಿಂದ ಅದರ ಮೇಲೆ ಬೀಳದಂತೆ ಅವು ತಮ್ಮ ಪಾಡಿಗೆ ತಾವು ಆಡಿಕೊಳ್ಳತೊಡಗಿದವು… ಹನ್ನೊಂದು ಗಂಟೆಯಾಗುತ್ತಾ ಬಂದಂತೆ ಆ ಜಾಗದ ಮುಂದಿನ ವಾರಸುದಾರ ತನ್ನ ಸರಕುಗಳೊಂದಿಗೆ ಹಾಜರಾದ. “ಯಕ್ಕೋ ನಿಂಟೈಮಾಯ್ತು. ಉಳ್ದಿರೋವೆಲ್ಲಾ ಎತ್ಕೋ. ನಂಜಾಗ ಬಿಡು” ಎನ್ನುತ್ತಾ ದೊಡ್ಡ ದೊಡ್ಡ ಎರಡು ಮೂಟೆಗಳನ್ನಿಳಿಸಿದ. “ವಸಿ ತಡ್ಯಣ್ಣೋ, ಎಲ್ಲಾ ಬ್ಯಾರೆ ಬ್ಯಾರೆ ಕವರ‍್ನಾಗೆ ಮಡಿಕ್ಕೊಂತಿನಿ. ಬೆರ‍್ತೋದ್ರೆ ಬ್ಯಾರೆ ಮಾಡೋದು ಕಸ್ಟ ಎನ್ನುತ್ತಾ ತುಂಬತೊಡಗಿದಳು. “ಉಳ್ದಿರೋವೆಲ್ಲಾ ಏನ್ ಮಾಡ್ತೀಯೆ? ಮನೇಗೆ ಉಪಯೋಗಿಸ್ಕತೀಯ? ಇಲ್ಲಾ ಬೀದೀಲ್ ಮಾರ‍್ಕೊಂಡು ಓಯ್ತೀಯಾ ಎಂದ. “ಇಷ್ಟ್ ತಿನ್ನೋಕಾಯ್ತದಾ? ವಸಿ ಮಡೀಕೊಂಡು ಉಳ್ದವನ್ನ ಮನೇತ್ರ ಮೆಸ್ಸು, ಕ್ಯಾಂಟೀನು ಅವೆ. ಅವ್ರಿಗೆ ಸುರೀತೀನಿ”.  “ಸರಿ, ಬೇಬೇಗ್ ಮಗ್ಸು” ಎನ್ನುತ್ತಾ ಒಂದು ಮೂಟೆಯನ್ನು ಹಿಂದಿಡಲು ನೋಡಿದಾಗ ಈ ಕತೆ ಕಾಣಬೇಕೆ?! “ಯಾವ್ದಕ್ಕೋ ಇದು ಇಲ್ಬಿದ್ದದೆ” ಎನ್ನುತ್ತಾ ಹಿಂದೆ ಹೋಗಿ ಅದನ್ನು ಪರಿಶೀಲಿಸಿದ. ಏನೂ ಅರ್ಥವಾಗಲಿಲ್ಲ. ಅಷ್ಟರಲ್ಲಿ ಆ ಹೆಂಗಸು ಜಾಗವನ್ನು ಖಾಲಿ ಮಾಡಿ “ಯಾವ್ದೋ ನಾಕಾಣೆ, ಬೆಳ್ಗಿಂದ ಅಂಗೇ ಬಿದ್ದದೆ… ತೊಗೋಣ್ಣೋ ನಿಂಜಾಗ. ಇದು ಮಡಿಕ್ಕೋ” ಎನ್ನುತ್ತಾ ಒಂದು ಕವರಿನಲ್ಲಿ ಹಾಕಿದ್ದ ಒಂದಿಷ್ಟು ತರಕಾರಿಯನ್ನು ಅವನಿಗೆ ಕೊಟ್ಟು ತನ್ನ ಗಂಟುಮೂಟೆಯನ್ನು ಕಟ್ಟಿಕೊಂಡು ಪಿಳ್ಳೆಗಳನ್ನು ಕಟ್ಟಿಕೊಂಡು ಹೊರಟಳು.ಇನ್ನು ತನ್ನ ವ್ಯಾಪಾರಕ್ಕೆ ತಡವಾಗುತ್ತದೆ ಎಂದುಕೊಳ್ಳುತ್ತಾ ಅವನೂ ಅದನ್ನು ಮತ್ತಷ್ಟು ಒತ್ತರಿಸಿ ತನ್ನ ಒಂದು ಮೂಟೆಯನ್ನು ಅಲ್ಲಿಟ್ಟ. ಮುಂದಿನ ಜಾಗದಲ್ಲಿ ತನ್ನ ಚಾಪೆಯನ್ನು ಹಾಸಿ ತನ್ನ ಸರಕಾದ ಚಡ್ಡಿ, ಬನೀನು, ಟೀಷರ್ಟು, ಟ್ರಾಕ್ ಪ್ಯಾಂಟು, ಮಕ್ಕಳ ಚಿಕ್ಕ ಪುಟ್ಟ ಉಡುಪುಗಳು ಮುಂತಾದವುಗಳಿಗೆ ಜಾಗಮಾಡಿಕೊಂಡು ತನ್ನ ಸರಕಿನ ಜಾಹೀರಾತನ್ನು ತಾನೇ ಕೂಗತೊಡಗಿದ. ಫುಟ್ಪಾತಿನುದ್ದಕ್ಕೂ, ಶೂ, ಚಪ್ಪಲಿಗಳು, ಪ್ಲಾಸ್ಟಿಕ್ ಸಾಮಾನು, ಆಟಿಕೆಗಳು, ಬಟ್ಟೆ, ಸೀರೆಗಳು, ಪೆಟಿಕೋಟ್, ಬ್ರಾ, ಪ್ಯಾಂಟೀಸ್‌ಗಳು, ತಿಂಡಿ ಸರಕುಗಳು ಇಂಥದೆನ್ನುವಂತಿಲ್ಲ ಎಲ್ಲ ಗೂಡುಗಳು ತಲೆಯೆತ್ತತೊಡಗಿದವು. ಪಕ್ಕದ ಬೀದಿಯಲ್ಲಿ ತಲಗಟ್ಟಮ್ಮನ ಜಾತ್ರೆ ಬೇರೆ. ಬಿಸಿಲಿನ ಚುರುಕಿನೊಂದಿಗೆ ವ್ಯಾಪಾರವೂ ಕುದುರಿಕೊಳ್ಳತೊಡಗಿತು. ಅದೆಷ್ಟು ಜನ ಆ ಫುಟ್ ಪಾತಿನ ಮೇಲೆ ಓಡಾಡಿದರೋ ಲೆಕ್ಕವಿಟ್ಟರ‍್ಯಾರು.ಕೆಲವರ ಕಣ್ಣಿಗಾದರೂ ಇದು ಬೀಳದೇ ಇರಲು ಸಾಧ್ಯವೇ?! ಬಿದ್ದೇ ಬಿತ್ತು.  ಒಬ್ಬಿಬ್ಬರು ಏನಿರಬಹುದು ಇದು…  ಯಾಕೆ ಇಲ್ಲಿ ಬಿದ್ದಿದೆ… ಎಂದುಕೊಂಡರು. ಆದರೆ ಅವರಿಗೆ ಇದನ್ನು ನೋಡಿ ಓದಲು ವ್ಯವಧಾನವೆಲ್ಲಿದೆ? ನಾಳೆಯ ಹೊತ್ತಿಗೆ ಇಡೀ ಜಗತ್ತೇ ಮುಳುಗಿಹೋಗುವುದೇನೋ?  ಅಷ್ಟರೊಳಗೆ ತಾನು ಮಾಡಿ ಮುಗಿಸಬೇಕಾದ ಕೆಲಸ ಒಂದು ಜನ್ಮಕ್ಕಾಗುವಷ್ಟಿದೆ! ಅಂತಹುದರಲ್ಲಿ ಯಾವುದೋ ಬಿಸಾಡಿಹೋದ ಈ ಕತೆಯನ್ನು ನೋಡುತ್ತಾ ಕೂಡುವುದೇ?! ಮೊದಲು ಇಲ್ಲಿನ ಕೆಲಸ ಮುಗಿಸಿ ಓಡಬೇಕು ಮುಂದಿನ ಕೆಲಸದ ಕಡೆಗೆ… ಎಲ್ಲರೂ ಓಡುವವರೆ… ಕತೆಗೋ ಇದ್ಯಾವುದರ ಪರಿವೆಯೂ ಇಲ್ಲ. ಬಿದ್ದುಕೊಂಡಿದೆ ತನ್ನ ಪಾಡಿಗೆ ತಾನು. ನೋಡಿಕೊಂಡೂ ಓಡುತ್ತಿರುವವರು ಓಡುತ್ತಿದ್ದಾರೆ ತಂತಮ್ಮ ಪಾಡಿಗೆ…  ಮಧ್ಯಾನ್ಹದ ಹೊತ್ತಿಗೆ ಅಲ್ಲೇ ಮೂಲೆಯ ತಳ್ಳುಗಾಡಿಯವನಿಂದ ಪಲಾವನ್ನು ಕೊಂಡು ತಿಂದು ನೀರು ಕುಡಿಯಲೆಂದು ಹಿಂದಿನ ಮೂಟೆಯ ಬಳಿ ಇಟ್ಟಿದ್ದ ನೀರಿನ ಬಾಟಲಿಗೆ ಕೈ ಹಾಕಿದವನಿಗೆ ಮತ್ತೆ ಇದರಮೇಲೆ ಬಿಸಿಲು ಬೀಳುತ್ತಿದ್ದುದು ಕಾಣಿಸಿತು. ಏನು ಸುಡುಗಾಡೋ ಎಂದುಕೊಳ್ಳುತ್ತಾ ಒಂದಷ್ಟು ನೆರಳಿನೆಡೆಗೆ ನೂಕಿದ. ಅಷ್ಟರಲ್ಲಿ ಯಾರೋ ಗಿರಾಕಿ ಕರೆಯುತ್ತಿದ್ದರು. “ಬಂದೇ.ಡಜನ್ನಿಗೆ ನೂರೈವತ್ತು ಕಣಕ್ಕ.  ಈ ಕೈ ಟವಲು ನೋಡಿ. ಬಟ್ಟೆ ಎಂಗದೆ.  ಇದಾದ್ರೆ ಇನ್ನೂರೈವತ್ತು ಆಗತ್ತೆ…” ತನ್ನದೇ ಕತೆಯಲ್ಲಿ ಮುಳುಗಿಹೋದ… ಮುಂದಿನ ಪಾಳಿಯವನು ಬಂದು ಜಾಗಕ್ಕೆ ತಕರಾರು ಮಾಡಿದಾಗಲೇ ಅವನಿಗೆ ಸಮಯವಾದದ್ದು ತಿಳಿದದ್ದು.  “ಓ… ಎದ್ದೆ ಕಣಣ್ಣೋ”  ಎನ್ನುತ್ತಾ ತನ್ನ ಬಿಡಾರವನ್ನು ಖಾಲಿ ಮಾಡತೊಡಗಿದ.  “ಎಂಗಾಯ್ತು ಇವತ್ತು ವ್ಯವಾರ”  ಮುಂದಿನವನು ತನ್ನ ಕಂತೆಯನ್ನು ಬಿಚ್ಚುತ್ತಾ ಕೇಳಿದ.  “ಪರ‍್ವಾಗಿಲ್ಲ ಕಣಾ. ತಲಗಟ್ಟಮ್ಮನ್ ಜಾತ್ರೆ ಅಲ್ವಾ.  ವಸಿ ಜನಾ ಜಾಸ್ತೀನೇ ದಿನಕ್ಕಿಂತ.”  “ಸೇಂದೀಗ್ ನಾಕ್ ಕಾಸು ಜಾಸ್ತಿ ಸಿಗ್ತೂನ್ನು” “ಇಲ್ ಕಣಣ್ಣೋ ಚಿಕ್ಮಗೀಗೆ ರವಷ್ಟು ಉಸಾರಿಲ್ಲ. ಎಂತೆಂತದೋ ಟೆಸ್ಟುಗಳಂತೆ ಬರ‍್ಕೊಟ್ಟವ್ರೆ. ನಾಳೀಕೆ ಕರ‍್ಕೊಂಡೋಗ್ಬೇಕು. ಅದಿಕ್ಕೊಂದೀಷ್ಟು ಅಗುರಾಯ್ತು ಅಷ್ಟೇಯ” ಅನ್ನುತ್ತಾ ತನ್ನೆರಡೂ ಮೂಟೆಗಳನ್ನು ಎತ್ತಿಕೊಳ್ಳುವಾಗ ಮತ್ತೊಮ್ಮೆ ಮುಖ ತೋರಿದ ಕತೆಗೆ ಮುಖದಿರುವಿ ನಡೆದ. ಆ ಸಂಕೀರ್ಣದಲ್ಲೇ ಇದ್ದ ಸಬ್ ರಿಜಿಸ್ತ್ರಾರ್ ಆಫೀಸಿನ ಮುಂದೆ ಆ ಬ್ರೋಕರ್ ಮದ್ಯಾನ್ಹ 3 ಘಂಟೆಯಿಂದಲೇ ಕಾಯುತ್ತಿದ್ದ. ಕ್ಷಣಕ್ಕೊಮ್ಮೆ ಮೊಬೈಲನ್ನು ಹಿಡಿದು “ಎಲ್ಲಿದೀರ? ಬೇಗಬನ್ನಿ. ಇಲ್ದಿದ್ರೆ ಇವತ್ತು ಕೆಲ್ಸ ಆಗಲ್ಲ. ಸಾಹೇಬ್ರು ಮುಂದಿನವಾರ ಟೂರ‍್ನಲ್ಲಿರ‍್ತಾರೆ. ನಿಮ್ಗೇ ತೊಂದ್ರೆ” ಎಂದು ಅವಸರಿಸುತ್ತಿದ್ದ.  “ಹಾ… ಸರಿ ಸರಿ ಬೇಗ್ಬನ್ನಿ… ಇಲ್ಲೇ ಮುಂದುಗಡೆ ಫುಟ್ಪಾತ್ ಅಂಗಡಿಗ್ಳು ಇದಾವಲ್ಲ ಅಲ್ಲೇ ಎರಡನೇ ಕಂಬದ ಹತ್ರ ನಿಂತುಕೊಂಡಿದೀನಿ” ಬರುವವರಿಗೆ ಸುಳಿವುಗಳನ್ನು ಕೊಡುತ್ತಿದ್ದ. ನೋಡುನೋಡುತ್ತಲೇ ನಾಲ್ಕು ಗಂಟೆಯಾಗಿ ಹೋಯ್ತು. ‘ಇವ್ರ ಕಮಿಷನ್ ನೆಚ್ಕೊಂಡು ನಾಳೇ ತಿರುಪತೀಗೆ ಕರಕೊಂಡು ಹೋಗ್ತೀನಿ ಅಂದಿದೀನಿ. ಈವಯ್ಯಾ ಏನಾದ್ರೂ ಕೈಕೊಟ್ರೆ ಮನೇನಲ್ಲಿ ಗೋವಿಂದಾ… ಗೋವಿಂದಾ’ ಎಂದುಕೊಳ್ಳುತ್ತಾ ಬಾಯಲ್ಲಿ ಬಂದ ಎಂಜಲನ್ನು ಉಗಿಯಲು ಕಟ್ಟೆಯ ಪಕ್ಕಕ್ಕೆ ಹೋದರೆ ಅಲ್ಲಿ ಬಿದ್ದಿದ್ದ ಕತೆ ಕಾಣಬೇಕೆ! ‘ಅಯ್ಯೋ ನನ್ಮಗಂದ್ ಇದ್ಯಾವುದಿದು’ ಎನ್ನುತ್ತಾ ಅದರೆಡೆಗೆ ಬಗ್ಗಿದ. ಅಷ್ಟರಲ್ಲಿ ಫೋನ್ ಬಡಕೊಳ್ಳಬೇಕೆ… ಒಂದೇ ಸಲ ನೆಟ್ಟಗಾಗಿ “ಬಂದೇ ಸಾರ್ ಬಂದೇ. ಇಲ್ಲೇ ಇದೀನಿ…”ಎನ್ನುತ್ತಾ ತಾನು ಸೂಚಿಸಿದ್ದ ಜಾಗದೆಡೆಗೆ ಓಡಿದ. ಮುಂದಿನವನು ತನ್ನ ಸರಕನ್ನೆಲ್ಲಾ ಮುಂದೆ ಜೋಡಿಸಿಕೊಳ್ಳುತ್ತಾ ಹೋದ. ಅಷ್ಟರಲ್ಲೇ ವ್ಯಾಪಾರ ಶುರುವಾಗಿದ್ದರಿಂದ ಎಷ್ಟೋ ಹೊತ್ತು ಹಿಂತಿರುಗಿ ನೋಡಲಾಗಲಿಲ್ಲ. ಬಳೆ, ರಿಬ್ಬನ್ನು, ಪೌಡರ್, ಸೆಂಟು, ಬಾಚಣಿಕೆ… ಒಂದೇ ಎರಡೇ. ಹೆಣ್ಣು ಮಕ್ಕಳು ಮುಗಿಬೀಳುವ ಎಲ್ಲಾ ಸಾಮಾನುಗಳೂ ಅವನ ಸರಕಲ್ಲಿತ್ತು.  ವಯಸ್ಸಿನ ಹೆಣ್ಣುಮಕ್ಕಳು ಮುಂದೆ ವ್ಯಾಪಾರಕ್ಕೆ ನಿಂತಿದ್ದಾಗ, ನಗನಗ್ತಾ ಚೌಕಾಸಿ ಮಾಡುತ್ತಿದ್ದಾಗ ಹೊತ್ತು ಓಡಿದ್ದು ಗೊತ್ತಾಗಲು ಸಾಧ್ಯವೇ.  ಹೇಳಿ ಕೇಳಿ ಜಾತ್ರೆಗೆ ಬಂದಿದ್ದ ಪೋರಿಯರು. ವ್ಯಾಪಾರ ಭರ್ಜರಿಯಾಗೇ ಸಾಗಿತ್ತು. ಮದ್ಯದಲ್ಲೊಮ್ಮೆ ವಂದಕ್ಕೆ ಹೋಗಿಬರುವಾ ಅನ್ನಿಸಿದ್ದಕ್ಕೆ ಪಕ್ಕದಲ್ಲಿದ್ದೋನನ್ನ ಸ್ವಲ್ಪ ಹೊತ್ತು ಅಂಗಡಿ ನೋಡಿಕೊಳ್ಳಕ್ಕೆ ಹೇಳಿ ಎದ್ದು ಹೋದವನಿಗೆ ಬಂದು ಕೂರುವಾಗ ಇದು ಕಣ್ಣಿಗೆ ಬಿತ್ತು.  ಹತ್ತಿರ ಹೋಗಿ ನೋಡಿದ… ಏನೂ ಅರ್ಥವಾಗದೆ  “ಯಾವಾಗಿಂದ ಬಿದ್ದದೆ?” ಪಕ್ಕದವನನ್ನು ಕೇಳಿದ. ”ಯಾವಾಗಿಂದ ಬಿದ್ದದೋ ಕಂಡರ‍್ಯಾರು? ನಾನೂ ಆಗ್ಲೇ ಎದ್ದೋಗಿದ್ದಾಗ ನೋಡ್ದಿ. ಏನೂ ತಿಳೀನಿಲ್ಲ. ಯಾವ್ದೋ ಬ್ಯಾವರ್ಸಿ; ಬದ್ಕೈತೋ, ಸತ್ತೈತೋ… ನಮ್ನಮ್ ಕತೆ ನೋಡ್ಕೊಂಡು ಹೋದ್ರೆ ಸಾಲ್ದಾ. ದಿನಕ್ಕಿಂತಾವೆಷ್ತೋ ಕಂಡೋರ‍್ಯಾರು” ಎಂದು ತನ್ನ ಸರಕಿನ ಜಾಹೀರಾತನ್ನು ಕೂಗುತ್ತಾ ಮಾತಿಗೆ ವಿರಾಮ ಹಾಕಿದ. ಅಷ್ಟು ಹೊತ್ತಿಗೆ ಇವ್ನ ಮುಂದೂ ಗಿರಾಕಿಗಳು ಬಂದಿದ್ದರಿಂದ ಈ ವಿಷಯ ಮರೆತು ತನ್ನ ವ್ಯಾಪಾರದಲ್ಲಿ ತಲ್ಲೀನನಾದ. ಈಗದು ಕತ್ತಲಲ್ಲಿ ಮಲಗಿತ್ತು. ಮುಂದಿನ ಬೀದಿಯ ದೀಪದ ಬೆಳಕು ಅದನ್ನು ತಲುಪುತ್ತಾ ಇರಲಿಲ್ಲ. ಆ ದೀಪದ ಕಂಬದ ಬಳಿ ತನ್ನ ಮಾಮೂಲಿ ಗಿರಾಕಿಗೆ ಕಾಯುತ್ತಾ ನಿಂತಿದ್ದವಳಿಗೆ ಎಷ್ಟು ಹೊತ್ತಾದರೂ ಬಾರದ್ದರಿಂದ ಕೋಪವುಕ್ಕುತ್ತಾ ಇತ್ತು. ಸುಮ್ಮನಿರಲಾಗದೇ ಈ ವ್ಯಾಪಾರಿ “ಏನವ್ವಾ ಇನ್ನೂ ಅಕ್ಕಿ ಬಂದಂಗಿಲ್ಲ” ಎನ್ನುತ್ತಾ ಮಾತಿಗೆಳೆದ. ಮೊದಲೇ ಕೋಪದಲ್ಲಿದ್ದವಳು “ಸುಮ್ ಕುಂತ್ಕೊಂಡು ನಿನ್ನ ಕ್ಯಾಮೆ ನೋಡ್ಕಾ” ಎನ್ನುತ್ತಾ ಮುಖದಿರುವಿದಳು. ಅವಳ ಕೋಪ ಕಂಡು ಖುಷಿಯಾಗಿ ಇವನು ಕಿಸಕ್ಕೆಂದು ನಕ್ಕ. ತಿರುಗಿಸಿ ಏನಾದರೂ ಅನ್ನುತ್ತಿದ್ದಳೇನೋ ನಮ್ಮ ಪುಣ್ಯ ಬಿಡಿ ಅವಳ ಮಾತುಗಳನ್ನು ಕೇಳಿಸಿಕೊಳ್ಳುವ ಭಾಗ್ಯ ನಮಗಿಲ್ಲ – ಅಷ್ಟರಲ್ಲಿ ಯಾವುದೋ ಹೊಸ ಮಿಕ ಅವಳ ಬಲೆಗೆ ಬಿದ್ದಿತ್ತು.  ವ್ಯವಹಾರ ಕುದುರಿಸಲು ಅವಳು ಆ ಕತೆ ಬಿದ್ದಿದ್ದ ಕತ್ತಲೆಯ ಕಡೆಗೆ ಅವನನ್ನು ಸನ್ನೆ ಮಾಡಿ ಕರೆದಳು. ಇನ್ನೇನು ಅದನ್ನೇ ಎಡುವುವವಳಿದ್ದಳು “ಥತ್ ಸೂಳೇಮಗಂದು” ಎಂದು ಝಾಡಿಸಿ ಒದ್ದು ಜಾಗಮಾಡಿಕೊಂಡಳು. “ಏನದು?” ಎಂದ ಹೊಸ ಮಿಕ.  “ದರಬೇಸಿ ನನ್‌ಮಗಂದು… ಅದನ್ ಅತ್ತಾಗ್ ಬಿಡು” ಎನ್ನುತ್ತಾ ವ್ಯವಹಾರ ಕುದುರಿದ ತಕ್ಷಣ ಅವರಿಬ್ಬರೂ ಆ ಕತ್ತಲಲ್ಲೇ ಎಲ್ಲೋ ಕರಗಿಹೋದರು. ರಾತ್ರಿ ಹತ್ತಾಗುತ್ತಾ ಬಂದಿತ್ತು. ಅಲ್ಲಿ ವ್ಯಾಪಾರ ಮಾಡುತ್ತಾ ಕುಳಿತಿದ್ದವರೆಲ್ಲಾ ತಂತಮ್ಮ ಸರಕನ್ನು ಎತ್ತಿಡತೊಡಗಿದರು. ಜಾತ್ರೆಯ ದಿನವಾದ್ದರಿಂದ ಅವರಿಗೆ ನಾಲ್ಕು ಕಾಸು ಹೆಚ್ಚಾಗಿಯೇ ಸಂಪಾದನೆಯಾಗಿತ್ತು.  ಕಟ್ಟಿಕೊಂಡ ಸರಕನ್ನು ಬೆನ್ನ ಮೇಲೆ ಹೊತ್ತು ಸಿಟಿಬಸ್ಸಿನ ಕಡೆಗೋ, ಅಥವಾ ಸ್ಟ್ಯಾಂಡಿನಲ್ಲಿ ನಿಲ್ಲಿಸಿದ್ದ ತಮ್ಮ ವಾಹನಗಳಿಗೆ ಕಟ್ಟಿಕೊಂಡೋ ಹೊರಡುವ ತಯಾರಿ ಮಾಡಿಕೊಂಡರು. ಇದರ ಮುಂದಿದ್ದವನೂ ತನ್ನ ಗಂಟುಮೂಟೆ ತಯಾರಿಸಿ ಇಟ್ಟುಕೊಂಡು ಗೆಳೆಯನಿಗಾಗಿ ಕಾಯುತ್ತಿದ್ದ. ಇಬ್ಬರೂ ಸೇರಿ ಆಟೋದಲ್ಲಿ ಹಾಕಿಕೊಂಡು ಹೋಗುವ ಮಾತಾಡಿಕೊಂಡಿದ್ದರು. ಆಗ ಅವನಿಗೆ ಹಿಂದೆ ಬಿದ್ದಿದ್ದ ಅದರ ಜ್ಞಾಪಕ ಬಂತು. ʻಏನಾಗಿದ್ಯೋ ನೋಡುಮಾʼ ಎಂದುಕೊಳ್ಳುತ್ತಾ ಅದರ ಹತ್ತಿರ ಹೋದ. ಇನ್ನೂ ಉಸಿರಾಡ್ತಾ ಇದೆಯೇನೋ ಅನ್ನಿಸ್ತು.  ಬಗ್ಗಿ ಇನ್ನೇನು ಮುಟ್ಟಬೇಕು, ಅಷ್ಟರಲ್ಲಿ ಆಟೋ ಮಾಡಿಕೊಂಡು ಬಂದಿದ್ದ ಗೆಳೆಯ “ಬೇಗ ಬಾ.. ಒತ್ತಾಗೈತೆ ಅಲ್ಲೇನ್ ನೋಡ್ತಾ ನಿಂತಿದೀಯ.. ಬಿರೀನ್ ಬಾ.. ಮನೇ ಅತ್ರ ರಾತ್ರಿ ನಾಟ್ಕ ಆಡ್ತಾವ್ರೆ. ನೋಡಾಕ್ ಓಗ್ಬೇಕು” ಎಂದು ಅವಸರಿಸಿದ. “ಬಂದೇ ಇರು; ಇದೇನ್ ಬದ್ಕಿದ್ಯೋ ಸತ್ತಿದ್ಯೋ ನೋಡುಮಾ ಅನ್ಕಂಡಿ. ಬದ್ಕಿದ್ರೆ ನಾ ಏನ್ಮಾಡೇನು… ಸತ್ತಿದ್ರೆ ಏನ್ಮಾಡೇನು.  ಎಲ್ಲಾ ಒಂದೇ.. ಅಂದಂಗೆ ಯಾವ್ ನಾಟ್ಕಾ ಅಂದಿ” ಎನ್ನುತ್ತಾ ತನ್ನ ಗಂಟು ಮೂಟೆಗೆ ಆಟೋದಲ್ಲಿ ಜಾಗಮಾಡಿಕೊಂಡು, ಹಸ್ತವಿಡುವಷ್ಟು ಉಳಿದ ಜಾಗದಲ್ಲಿ ಕುಂಡಿಯೂರಿಕೊಂಡು ಕುಳಿತ. ಆಟೋ ಬರ‍್ರನೆ ಹೋಗುವುದರಲ್ಲಿ ಅವರು ಮುಂದೇನು ಮಾತಾಡಿಕೊಂಡರೋ ಕೇಳಲಿಲ್ಲ. ಬೆಳಗಿನಿಂದ ಗಿಜಿಗಿಜಿಗುಡುತ್ತಿದ್ದ ವಾಣಿಜ್ಯ ಸಂಕೀರ್ಣ ನಿಧಾನವಾಗಿ ನಿರ್ಜನವಾಗುತ್ತಿತ್ತು. ಎಲ್ಲ ಅಂಗಡಿ ಮುಂಗಟ್ಟುಗಳೂ ಬಾಗಿಲನ್ನು ಜಡಿದುಕೊಂಡವು.ವಾಹನ ನಿಲ್ದಾಣದಲ್ಲಿದ್ದ ವಾಹನಗಳೆಲ್ಲಾ ಖಾಲಿಯಾದವು. ಸಿಟಿಬಸ್ಸಿನ ಕಂಡಕ್ಟರ್ “ಲಾಸ್ಟ್ ಟ್ರಿಪ್, ಲಾಸ್ಟ್ ಟ್ರಿಪ್. ಬೇಗ ಬೇಗ ಹತ್ತಿಕೊಳ್ಳಿ” ಎಂದು ಅಳಿದುಳಿದವರನ್ನು ಹತ್ತಿಸಿಕೊಳ್ಳತೊಡಗಿದ. ಪಕ್ಕದ ಬೀದಿಯ ಜಾತ್ರೆಯ ಸಂಭ್ರಮವೂ ಮುಗಿದು ತಲಗಟ್ಟಮ್ಮ ತನ್ನ ದೇಗುಲದಲ್ಲಿ ಬಂದಿಯಾಗಿ, ಸುಸ್ತಾಗಿ, ಕುಳಿತಲ್ಲೇ ನಿದ್ದೆಮಾಡತೊಡಗಿದಳು. ದಿನವಿಡೀ ಕಾಯೊಡೆದು, ಮಂಗಳಾರತಿ ಮಾಡಿ, ತಾಯಿತ ಕಟ್ಟಿ, ಭಂಡಾರ ಬಳಿದಿದ್ದ ಅಯ್ಯ ಮೈಯೆಲ್ಲಾ ಮುರಿದು ಹೋಗುವಷ್ಟು ಬಸವಳಿದಿದ್ದು, ಅಂದಿನ ಸಂಪಾದನೆಯನ್ನು ಕೈಚೀಲಕ್ಕೆ ತುರುಕಿಕೊಂಡು, ಬಾಗಿಲಿಗೆ ಬೀಗ ಜಡಿದು ಮನೆಯ ಕಡೆಗೆ ನಡೆದ. ಮಾರುಕಟ್ಟೆ ಬಳಸಿಕೊಂಡು ಹಿಂದಿನ ಬೀದಿಗೆ ಹೋದರೆ ಅವನ ಮನೆ. ಬಸ್ಸಿನ ದಾರಿಯಲ್ಲ; ಆಟೋದವರು ಬರುವುದಿಲ್ಲ. ಹೇಗೋ ಕಷ್ಟಪಟ್ಟುಕೊಂಡು ಬರುತ್ತಿರುವಾಗ ಕತ್ತಲಲ್ಲಿ ಕಾಣದೇ ಆ ಕತೆಯನ್ನು ಎಡವಿ ಅದರ ಮೇಲೇ ಬಿದ್ದುಬಿಟ್ಟ. ಪ್ರಾಣವೇ ಹೋದಷ್ಟು ಭಯವಾಗಿ “ಅಮ್ಮಾ ತಲಗಟ್ಟಮ್ಮಾ” ಎಂದು ಕಿರಿಚಿಕೊಂಡ. ಹತ್ತಿರದಲ್ಲಿ ಯಾರೂ ಓಡಾಡುತ್ತಿರಲಿಲ್ಲವಾದ್ದರಿಂದ ಯಾರಿಗೂ ಅವನ ಕೂಗು ಕೇಳಲಿಲ್ಲ. ಎದ್ದು ಕುಳಿತುಕೊಂಡು ಅಲುಗಾಡಿಸಿ ನೋಡಿದ. ಇನ್ನೂ ಸಣ್ಣಗೆ ಉಸಿರಾಡುತ್ತಿತ್ತು. ‘ಸಧ್ಯ ನಾನು ಬಿದ್ದು ಜೀವ ಹೋಗಲಿಲ್ಲವಲ್ಲ’ ಎಂದು ಸಮಾಧಾನಿಸಿಕೊಂಡು ಎದ್ದು ನಿಂತ. ಕೆಳಗೆ ಬಿದ್ದಿದ್ದ ತನ್ನ ಕೈಚೀಲವನ್ನು ಹೆಕ್ಕಿಕೊಂಡು ಮತ್ತೊಮ್ಮೆ ಅದರ ಕಡೆಗೆ ನೋಡಿದ. ‘ತಾನು

ಯಾರೂ ಓದದೆಯೇ ಹೋದ ಕತೆ… Read Post »

ಕಥಾಗುಚ್ಛ

ಕಥಾಗುಚ್ಛ

ವಿಧಿ! ಆರ್.ಸುನೀಲ್ ತರೀಕೆರೆ ರಂಗಪ್ಪನ ಮನೆ ಮುಂದೆ ಬೆಂಕಿ ಬಿದ್ದ ಸುದ್ದಿ ಊರಲ್ಲೆಲ್ಲಾ ಐದೇ ನಿಮಿಷಕ್ಕೆ ಹರಡಿಹೋಯಿತು.ಆ ಸುದ್ದಿ ನನ್ನ ಕಿವಿಗೂ ಬಿದ್ದ ಕ್ಷಣದಿಂದ ಮನಸ್ಸು ವ್ಯಾಕುಲಗೊಳ್ಳತೊಡಗಿತು.ಛೇ..ಅಂತೂ ಇಂತೂ ರಂಗಪ್ಪ ಹೋಗ್ನಿಟ್ಟ.! ಬದುಕಿದ್ದಾಗ ಅವನು ಪಟ್ಟ ಪಾಡು ನೆನೆಸಿಕೊಂಡು ಸಅಯ್ಯೋ ಅಂತ ಒಂದು ಕಡೆ ಅನ್ನಿಸತೊಡಗಿದರೆ ಮತ್ತೊಂದು ಕಡೆ ಬಿಡು ಅವನು ಹೋದದ್ದು ಒಳ್ಳೆಯದೇ ಆಯಿತು ಇಲ್ಲದಿದ್ದರೆ ಪಾಪ ಇನ್ನೂ ನೋವು ಅನುಭವಿಸುತ್ತಿದ್ದ.ಏನ್ ಈಗಾಗ್ಲೇ ಕಮ್ಮೀ ನೋವು ಅನುಭವಿಸಿದ್ದಾನಾ ಅವ್ನು..?!ಇಷ್ಟು ದಿನ ಅವ್ನು ಬದುಕಿದ್ದೂ ಸತ್ತಂಗೆ ತಾನೇ ಇದ್ದದ್ದು.ದಿನಾ ಬೆಳಗಾದ್ರೆ ಒಂದಲ್ಲ ಒಂದು ಗೋಳು ನೋವು ರಗಳೆ ಅವ್ನಿಗೆ ಇದ್ದೇ ಇತ್ತು ಪಾಪ.!ಅಂತ ಮನಸ್ಸು ಅವನ ಬಗ್ಗೆ ಇನ್ನಿಲ್ಲದಂತೆ ಮರುಗತೊಡಗಿತು. ರಂಗಪ್ಪ ತೀರಾ ಬಡವನೇನೂ ಆಗರ‍್ಲಿಲ್ಲ.ಇದ್ದ ಎರಡೆಕೆರೆ ಜಮೀನಿನಲ್ಲೇ ಅಡಿಕೆ ಗಿಡಕೆ ಬೆಳೆದುಕೊಂಡು ಅದರಲ್ಲೇ ತನಗೊಂದು ಸ್ವಂತದ ಸೂರು ಅಂತ ಮಾಡಿಕೊಂಡಿದ್ದ.ಹೆAಡ್ತಿ ಬೇರೆ ಸತ್ತು ಎಷ್ಟೋ ವರ್ಷ ಆಗಿತ್ತು.ಇದ್ದ ಒಬ್ಬ ಮಗನ ಮದ್ವೆ ಮಾಡಿ ಹೆಂಗೋ ಅಂತ ಒಂತ ಒಂದು ನೆಮ್ಮದಿಯ ಜೀವ್ನ ಮಾಡ್ತಿದ್ದ.ಮೊದ್ಲು ಮೊದ್ಲು ಎಲ್ಲಾ ಚೆನ್ನಾಗೇ ಇತ್ತು.ರಂಗಪ್ಪನ್ನೂ ಕೂಡ ಚೆನ್ನಾಗೇ ನೋದ್ಕೋತಿದ್ರು.ಆದ್ರೆ ಬರ್ತಾ ಬರ್ತಾ ರಂಗಪ್ಪನ ಮಗ ಸೊಸೆಗೆ ರೋಟದಿಂದ ಬರ್ತಿದ್ದ ಆದಾಯದ ಮೇಲೆ ಕಣ್ಣು ಬಿತ್ತು. ಮೊದ್ಲಿನಿಂದ್ಲೂ ಉಢಾಳನಾಗಿ ಬೆಳೆದಿದ್ದ ರಂಗಪ್ಪನ ಮಗ ಮಲ್ಲ ಯಾವ ಕೆಲ್ಸ ಕಾರ್ಯಾನೂ ಮಾಡ್ದೆ ಅಪ್ಪನ ದುಡ್ನಾಗೆ ಮಜಾ ಮಾಡ್ಕೊಂಡು ತಿರುಗ್ತಾ ಇದ್ದ.ಇಸ್ಪೀಟು ಹೆಂಡ ಜೊತೆಗೆ ಅದೂ ಇದೂ ಅಂತ ಸ್ವಲ್ಪ ಶೋಕೀನೂ ಕೂಡ ಜಾಸ್ತೀನೇ ಇತ್ತು.ಅವೆಲ್ಲಾ ಇತ್ತೀಚಿಗಂತೂ ತುಸು ಮಿತಿ ಮೀರಿ ಹೋಗಿದ್ವು.ಇಂತವ್ನಿಗೆ ಒಂದು ಮದ್ವೆ ಅಂತ ಮಾಡಿಬಿಟ್ರೆ ಸರಿಹೋಗ್ತಾನೆ ಅಂತ ಲೆಕ್ಕ ಹಾಕಿದ್ದ ರಂಗಪ್ಪನ ಎಣಿಕೆ ತಪ್ಪಾಗಿ ಹೋಗಿತ್ತು.ಅವ್ನಿಗೆ ಮದ್ವೆ ಮಾಡಿದ ತಕ್ಷಣ ತೋಟದ ವ್ಯವಹಾರವೆಲ್ಲಾ ಅವ್ನಿಗೆ ಸೊಸೆಗೆ ವಹಿಸ್ಬಿಟ್ಟು ತಾನು ಆರಾಮಾಗಿ ಮೊಮ್ಮಕ್ಕಳನ್ನ ಆಟ ಆಡಿಸ್ತಾ ಕಾಲ ಕಳೀಬಹುದು ಅಂತ ಅಂದುಕೊAಡಿದ್ದ ರಂಗಪ್ಪ ಮಲ್ಲ ನಾಯಿ ಬಾಲ ಡೊಂಕು ಎಂಬAತೆ ಮದ್ವೆ ಆದ್ಮೇಲೆ ಕೂಡ ಸರಿ ಹೋಗದ್ದು ಕಂಡು ಒಳಗೊಳಗೆ ಸ್ಯಾನೇ ನೋವು ಅನುಭವಿಸ್ತಿದ್ದ. ಇತ್ತ ತಾನು ಮದ್ವೆ ಆದ್ರೂ ಕೂಡ ಅಪ್ಪ ಯಾವ ವ್ಯವಹಾರಾನೂ ಕೊಡ್ತಾ ಇಲ್ವಲ್ಲಾ ಅಂತ ಮಲ್ಲ ಕೂಡ ಒಳಗೊಳಗೇ ಕುದ್ದು ಹೋಗ್ತಿದ್ದ.ಇಂಥಾ ಬೇಜವಾಬ್ದಾರಿ ಮಗನಿಗೆ ವ್ಯವಹಾರ ಕೊಟ್ರೆ ಆಸ್ತಿಯೆಲ್ಲಾ ನುಂಗಿ ನೀರು ಕುಡಿದಾನೂ ಅಂತ ರಂಗಪ್ಪ ಹೆದರಿದ್ರೆ ಅತ್ತ ಮಲ್ಲ ತಾನು ಮದ್ವೆ ಆದ್ರೂ ಕೂಡ ಖರ್ಚಿಗೆ ಕಾಸು ಬೇಕು ಅಂದ್ರೆ ಅಪ್ಪನ ಮುಂದೆಯೇ ಕೈ ಒಡ್ಡಬೇಕಲ್ಲಾ ಅನ್ನೋ ಅಸಹನೆಯಿಂದ ವಿಲವಿಲ ಒದ್ದಾಡ್ತಿದ್ದ.ಮಗ ನೋಡಿದ್ರೆ ಹಿಂಗೆ ಸೊಸೆನಾದ್ರೂ ಅವ್ನಿಗೆ ಬುದ್ದಿ ಹೇಳಿ ಸರಿ ದಾರಿಗೆ ತರಬಹುದು ಅನ್ನೋ ಎಲ್ಲೋ ಒಂದು ಸಣ್ಣ ಭರವಸೆ ಕೂಡ ಸೊಸೆ ಮದುವೆಯಾಗಿ ಬಂದ ಹೊಸತರಲ್ಲೇ ಸುಳ್ಳು ಮಾಡಿದ್ಳು.ಇರೋ ಇರಡೆಕೆರೆ ಜಮೀನಿನಲ್ಲೇ ಮೂರ್ನಾಲ್ಕು ಲಕ್ಷ ಆದಾಯ ಬರೋದು ನೋಡಿ ಸೊಸೆಯ ಕಣ್ಣು ಕೂಡ ಕುಕ್ಕುತ್ತಿತ್ತು.ಒಮ್ಮೊಮ್ಮೆ ಮಗನಿಗಿಂತ ಮೊದಲು ಇವಳೇ ದುಡ್ಡಿಗಾಗಿ ಜಗಳ ಕಾಯೋಕೆ ಮುಂದೆ ನಿಂತ್ಕೋತಿದ್ಲು.ಆದಷ್ಟು ಬೇಗ ಈ ವ್ಯವಹಾರನೆಲ್ಲಾ ತಾನೇ ವಹಿಸ್ಕೊಂಡ್ರೆ ತನಗೆ ಬೇಕಾದ ಒಡವೆ ವಸ್ತç ಮಾಡ್ಕೊಂಡು ಜಮ್ಮಂತ ರಾಣೀಯಂಗೆ ಮೆರೀಬಹ್ದು ಅಂತ ಕನಸು ಕಾಣ್ತಾ ತನ್ನ ಗಂಡನಿಗೇ ಇಲ್ಲಸಲ್ಲದ್ದು ಹೇಳಿಕೊಟ್ಟು ತನ್ನಪ್ಪನ ವಿರುದ್ಧವೇ ಯುದ್ಧಕ್ಕೆ ನಿಲ್ಸಿಬಿಡ್ತಿದ್ಳು.ಒಟ್ನಲ್ಲಿ ರಂಗಪ್ಪನ ಸ್ಥಿತಿ ಮನೆಯಲ್ಲಿ ಬಿಸಿ ತುಪ್ಪದ ಹಾಗೆ ಇತ್ತ ನುಂಗೋಕೂ ಆಗ್ದೆ ಉಗುಳೋಕೂ ಆಗ್ದೆ ಇರೋ ತರ ಅಯೋಮಯವಾಗಿಬಿಟಟಿತ್ತು. ದಿನಾ ಈ ಗೋಳು ರಗಳೆ ಯಾಕೆ ಆಕಡೆ ಹಾಳಾಗಿ ಹೋಗ್ಲಿ ಅಂತ ಆ ತೋಟವನ್ನ ಮನೆಯನ್ನ ಅವ್ರ ಹೆಸ್ರಿಗೇ ಮಾಡಿಬಿಡೋಣ ಇಲ್ಲದಿದ್ರೆ ಒಂದಲ್ಲಾ ಒಂದು ದಿನ ಇವು ಆಸ್ತಿ ಹಣದ ಆಸೆಗೆ ತನ್ನನ್ನ ಕೊಲ್ಲೋಕೂ ಹೇಸಲ್ಲಾ ಅಂತ ಯೋಚಿಸಿದ ರಂಗಪ್ಪ ಹೀಗೆ ಭಂಗ ಪಡೆದಾಗ್ಲೆಲ್ಲಾ ನನ್ನ ಹತ್ರ ಬಂದು ತನ್ನ ಗೋಳು ತೋಡ್ಕೊಂಡಾಗ “ಹಂಗೆಲ್ಲಾದ್ರೂ ಮಾಡ್ಬಿಟ್ಟಿಯೋ ರಂಗಪ್ಪ..ನೀನಿನ್ನೂ ಚೆನ್ನಾಗಿರೋವಾಗ್ಲೇ ಹಿಂಗೆಲ್ಲಾ ರ‍್ಕೊಟ್ಟು ಬಿಟ್ರೆ ಆಮೇಲೆ ಆ ಆಸ್ತೀನೂ ಇರಲ್ಲ ನೀನೂ ಇರಲ್ಲ ನಿನ್ನ ಭಿಕ್ಷೆ ಬೇಡೋ ಹಾಗೆ ಮಾಡಿಬಿಟ್ಟಾರು ಹುಶಾರೂ ಇನ್ನೂ ಸ್ವಲ್ಪ ದಿನ ಹೋಗ್ಲಿ ಆಮೇಲೆ ಬೇಕಾದ್ರೆ ಒಂದು ನಿರ್ಧಾರಕ್ಕೆ ಬರ್ತಿಯಂತೆ..!”ಅAತ ಏನೋ ಹೇಳಿ ಅವ್ನಿಗೆ ಸಮಾಧಾನ ಮಾಡುವ ಜೊತೆಗೆ ಸ್ವಲ್ಪ ಎಚ್ಚರಿಕೆಯ ಮಾತನ್ನೂ ಹೇಳ್ತಾ ಇದ್ದೆ.ಆದ್ರೆ ನನ್ನ ಮನಸ್ಸಿನ ಮೂಲೆಯಲ್ಲಿ ಎಲ್ಲೋ ಒಂದು ಕಡೆ ಆ ಹಾಳಾದವ್ರು ರಂಗಪ್ಪನಿಗೆ ಏನೋ ಒಂದು ಗತಿ ಕಾಣ್ಸೇ ಕಾಣಿಸ್ತಾರೆ ಅಂತ ಒಂದು ಸಣ್ಣ ಅನುಮಾನ ಮಾತ್ರ ಕಾಡ್ತಾನೇ ಇತ್ತು. ಇದನ್ನೆಲ್ಲಾ ನೋಡಿ ಬೇಸತ್ತು ಹೋಗಿ ನಾನೇ ಒಮ್ಮೆ ಮಲ್ಲನತ್ರ ಯಾಕಪ್ಪಾ ಹಿಂಗೆಲ್ಲಾ ಮಾಡ್ತೀರಾ ಒಂದಲ್ಲ ಒಂದು ದಿನ ಈ ತೋಟ ಮನೆಯೆಲ್ಲಾ ನಿಂಗೇ ತಾನೆ ಬರೋದು.ನೀವು ಕೊಡೋ ಕಾಟಕ್ಕೆ ಪಾಪ ನಿಮ್ಮಪ್ಪ ದಿನಾ ಕೊರಗ್ತಾ ಇದಾನೆ ಅಂತ ಬುದ್ದಿ ಹೇಳೋಕೆ ಹೋದ್ರೆ ನನಗೆ ಅವರಪ್ಪನ ತರ ವಯಸ್ಸಾಗಿದೆ ಅವನ ಹಾಗೆ ನಾನೂ ಒಬ್ಬ ಹಿರೀ ಮನುಷ್ಯ ಅಂತಾನೂ ನೋಡ್ದೆ ನಂಗೇ ಬಾಯಿಗೆ ಬಂದAಗೆ ಮಾತಾಡಿ ನಿಮಗ್ಯಾಕ್ರೀ ನಮ್ಮನೆ ಉಸಾಬರಿ ನಿಮ್ಮ ಕೆಲಸ ನೀವು ನೋಡ್ಕೊಳ್ಳಿ ಅಂತ ದಬಾಯಿಸಿ ಹೋಗಿದ್ದ.ಇವ್ನೇ ಹಿಂಗೆ ಇನ್ನು ರಂಗಪ್ಪನ ಬಾಯಿಂದ ಅವ್ನ ಸೊಸೆಯ ಗುಣಗಾನ ಕೇಳಿದ್ದ ನನಗೆ ಅಪ್ಪಿತಪ್ಪಿಯೂ ಅವಳ ಹತ್ರ ಮಾತಾಡೋ ಧೈರ್ಯ ಕೂಡ ಬರಲಿಲ್ಲ. ಅಲ್ಲಾ ಹೆಂಗೂ ರಂಗಪ್ಪನಿಗೆ ಒಬ್ನೇ ಮಗ.ಅಕಸ್ಮಾತ್ ರಂಗಪ್ಪ ಏನಾದ್ರೂ ತೀರಿಹೋದ್ರೂ ಆ ಆಸ್ತಿಯೆಲ್ಲಾ ಅವ್ನಿಗೇ ತಾನೆ ಬರೋದು ಸುಮ್ನೆ ಯಾಕೆ ಜಗಳ ಆಡಿ ಎಲ್ರೂ ನೆಮ್ಮದಿ ಹಾಳು ಮಾಡ್ಕೋತಾರೆ ಅಂತ ಅನ್ನಿಸಿದರೂ ಮಲ್ಲ ನಂಗೆ ಮಾಮೂಲಿ ಮನುಷ್ಯನ ತರ ಕಾಣಲಿಲ್ಲ.ಹೌದು ಕುಡಿದ ಅಂದ್ರೆ ಅವ್ನು ಮನುಷ್ಯನಾಗೇ ಇರ್ತಿರ್ಲಿಲ್ಲ.ಆ ನಶೆಯಾಗೆ ತಾನು ಏನು ಮಾಡ್ತಿದ್ದೀನೆಂಬ ಪರಿವೆಯೂ ಅವ್ನಿಗೆ ಇರ್ತಿರ್ಲಿಲ್ಲ.ಶುದ್ಧ ತಲೆ ಕೆಟ್ಟೋನಂಗೆ ಆಡ್ತಿದ್ದ. ಹಿಂಗೆ ದಿನಾ ಜಗಳ ನೋವು ಭಯ ಇವುಗಳಿಂದಲೇ ಕಾಲ ದೂಡುತ್ತಿದ್ದ ರಂಗಪ್ಪ ಅಂತೂ ಇವತ್ತು ಹೋಗ್ಬಿಟ್ಟ.ಪಾಪ ಏನ್ ಅವ್ನೇ ಅಚಾನಕ್ಕಾಗಿ ಸತ್ನೋ ಇಲ್ಲಾ ಮಗ ಸೊಸೆ ಸೇರಿ ಇಬ್ರೂ ಅವ್ನನ್ನ ಹೊಡೆದಾಕುದ್ರೋ ..?!ಏನೋ ಹಾಳಾಗೋಗ್ಲಿ ಬಿಡು ರಂಗಪ್ಪ ಇದ್ದಾಗಂತೂ ಜೀವನದಾಗೆ ನೆಮ್ಮದಿ ಕಾಣ್ಲಿಲ್ಲ.ಸತ್ತ ಮೇಲಾದ್ರೂ ನೆಮ್ಮದಿ ಸಿಕ್ತಲ್ಲಾ ಅಂತ ಮನಸ್ಸಿನಾಗೇ ಅಂದ್ಕೊAಡು ಕೊನೇ ಸಲ ಅವನ ಮುಖನಾದ್ರೂ ನೋಡ್ಕೊಂಡು ಬರೋಣ ಅಂತ ಅವನ ಮನೆ ಕಡೆ ಭಾರವಾದ ಮನಸ್ಸಿನಿಂದ ಹೆಜ್ಜೆ ಹಾಕತೊಡಗಿದೆ. ಆಗ್ಲೇ ಅವನ ಮನೆ ಮುಂದೆ ದೊಡ್ಡದಾಗಿ ಶಾಮಿಯಾನ ಹೊಡೆದಿತ್ತು.ನಾಲ್ಕೆöÊದು ಸೌಧೆ ತುಂಡುಗಳು ಸಣ್ಣಗೆ ಉರಿಯುತ್ತಿದ್ದವು.ಆಗಲೇ ತುಂಬಾ ಜನಗಳೂ ಕೂಡ ಸೇರಿದಂಗಿತ್ತು.ಇವನ್ನೆಲ್ಲಾ ದೂರದಿಂದಲೇ ನೋಡುತ್ತಲೇ ಅವನ ಮನೆಗೆ ಹತ್ತಿರ ಹತ್ತಿರವಾದಂತೆ ಹೃದಯದೊಳಗೆ ದುಃಖವೂ ಹೆಚ್ಚಾಯಿತು.ಕಣ್ಣು ತನಗರಿವಾಗದಂತೆ ತೇವವಾಗತೊಳ್ಳತೊಡಗಿದವು.ನಿಧಾನವಾಗಿ ಭೂಜದ ಮೇಲಿದ್ದ ಟವೆಲ್ಲಿನಿಂದ ಮುಖದ ಬೆವರನ್ನು ಒರೆಸಿಕೊಳ್ಳುತ್ತಾ ಅವನ ಮನೆಯ ಮುಂದಿನ ಜಗುಲಿಯ ಹತ್ತಿರ ಬಂದAತೇ ಅಲ್ಲಿ ಕೂತಿದ್ದವನನ್ನು ನೋಡಿ ಒಮ್ಮೆಲೆ ಹೌಹಾರಿದಂತಾಯ್ತು.ಕಣ್ಣುಗಳನ್ನು ದೊಡ್ಡದಾಗಿ ಬಿಡುತ್ತಾ ಇದೇನು ಆಶ್ಚರ್ಯವೆಂಬAತೆ ನೋಡಿದೆ.ಅಲ್ಲಿ ಕೂತಿದ್ದವನು ಅಕ್ಷರಶಃ ರಂಗಪ್ಪನೇ ಆಗಿದ್ದ.ಮತ್ತೊಮ್ಮೆ ಕಣ್ಣುಜ್ಜಿಕೊಂಡು ಅವನೇ ಹೌದೋ ಅಲ್ಲವೋ ಎಂಬAತೆ ನೋಡಿದೆ.ಅದರಲ್ಲಿ ಯಾವುದೇ ಅನುಮಾನವಿಲ್ಲ ಅವನು ರಂಗಪ್ಪನೇ ಆಗಿದ್ದ.!ಹಾಗಾದ್ರೆ ಸತ್ತೋನು ರಂಗಪ್ಪ ಅಪ್ಪ..ಹಾಗಾದ್ರೇ ಮತ್ಯಾರು..ಮಲ್ಲನಾ..ಸೊಸೆಯಾ..?! ಮತ್ತೆ ಸಾವಕಾಶದಿಂದ ಗಾಬರಿ ದುಗುಡದಿಂದ ರಂಗಪ್ಪನ ಪಕ್ಕದಲ್ಲಿ ಹೋಗಿ ಕೂತೆ.ಅವನಿಗೆ ಕಣ್ಣಲ್ಲೇ ಸಂಜ್ಙೆ ಮಾಡುತ್ತಾ ಇವೆಲ್ಲಾ ಏನು..?ಸತ್ತದ್ದು ಯಾರು..?!ಎಂಬAತೆ ಕೇಳಿದೆ.ಅದಕ್ಕವನಿಗೆ ದುಃಖ ಒಮ್ಮಳಿಸಿ ಬಂತು.ಬಿಕ್ಕುತ್ತಲೇ “ಏನAತ ಹೇಳಲಿ ಮಂಜಣ್ಣ..ನಿನ್ನೆ ರಾತ್ರಿ ಮಗ ಸೊಸೆ ಇಬ್ರೂ ಯಾರಿಗೂ ಗೊತ್ತಾಗ್ದಂಗೆ ತೋಟಕ್ಕೆ ಹೋಗವ್ರೆ ಅಡಿಕೆ ಗೊನೆ ಕದಿಯೋಕೆ.ಅಂತಾ ಕತ್ಲಾಗೆ ಮರ ಹತ್ತಿದವ್ನು ಗೊನೆ ಕೊಯ್ದು ಇಳಿಯೋ ರಭಸದಾಗೆ ಆಯಾ ತಪ್ಪಿ ಕೆಳಗೆ ಬಿದ್ದವ್ನೆ.ಬಿದ್ದ ತಕ್ಷಣಕ್ಕೆ ಜೀವ ಅಲ್ಲೇ ಹೋಗ್ಬಿಟ್ಟೆöÊತೆ.ಇದನ್ನು ನೋಡಿ ಗಾಬರಿಯಾದ ಸೊಸೆ ಗಂಡನ ಅವಸ್ಥೆ ನೋಡಿ ಯಾರನ್ನಾದ್ರೂ ರ‍್ಕೊಂಡು ಬರೋಣ ಅಂತ ಓಡೋಡಿ ಬಂದ್ಳೆ ಕತ್ಲಾಗೆ ಗೊತ್ತಾಗ್ದೆ ತೋಟದ ಬಾವಿಯಾಗೆ ಬಿದ್ದವ್ಳೆ.ಅವ್ಳೂ ಅಲ್ಲೇ ಶಿವನ ಪಾದ ಸೇರವ್ಳೆ…ಅಯ್ಯೋ ವಿಧಿಯೇ..?!ಅಂತ ಅಳುತ್ತಾ ತಲೆ ಮೇಲೆ ಕೈಹೊತ್ತು ಕೂತು ಬಿಟ್ಟ ರಂಗಪ್ಪ. ವಿಷಯ ಕೇಳಿ ನನಗೆ ಗರ ಬಡಿದಂತಾಯ್ತು.ಒAದು ಕ್ಷಣ ಮನದಲ್ಲಿ ಏನೇನೋ ಯೋಚನೆಗಳು ರಂಗಪ್ಪನ ಮನೆಯ ಚಿತ್ರಣ ಮಗ ಸೊಸೆ ಎಲ್ಲಾ ದೃಶ್ಯದಂತೆ ಹಾದುಹೋದವು.ಯಾರು ರಂಗಪ್ಪ ಸಾಯಲಿ ಅಂತ ದಿನಾ ಕಾಯ್ತಾ ಇದ್ರೋ ಅವರೇ ಸತ್ತು ಹೆಣವಾಗಿ ಮಲಗಿದ್ರು.ಅವರು ಕೊಡೋ ಕಾಟಾನ ತಡೀಲರ‍್ದೆ ಎಂದೋ ಶಿವನ ಪಾದಕ್ಕೆ ಸೇರಬೇಕಿದ್ದ ರಂಗಪ್ಪ ಅವರ ಹೆಣದ ಮುಂದೆನೇ ಜೀವಂತ ಕೂತಿದ್ದ.ಆ ದೇವ್ರು ಯರ‍್ಯಾರ ಹಣೆಬರಹದಲ್ಲಿ ಏನೇನು ಬರೆದವ್ನೋ..ದೇವ್ರೇ ಏನಪ್ಪಾ ನಿನ್ನ ಲೀಲೆ ಅಂದು ಮನಸ್ಸಿನಲ್ಲೇ ಗೊಣಗಿಕೊಳ್ಳುತ್ತಾ ರಂಗಪ್ಪನಿಗೆ ಸಮಾಧಾನ ಪಡಿಸಿ ಮುಂದಿನ ಕೆಲಸಕ್ಕೆ ಅಣಿಯಾದೆ. ಕಿರುಪರಿಚಯ: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ನೌಕರಿ ಹಾಗೂ ವಾಸ.ಹಲವಾರು ಕಥೆ,ಕವನ,ಲೇಖನ ಬರೆದಿರುವ ಇವರ ನೆಚ್ಚಿನ ಸಾಹಿತ್ಯ ಪ್ರಕಾರ ಹನಿಗವನ ಹಾಗೂ ಚುಟುಕುಗಳು.

ಕಥಾಗುಚ್ಛ Read Post »

ಕಥಾಗುಚ್ಛ

ಕಥಾಗುಚ್ಛ

ಜೀವನವೆಂದರೆ ಹೀಗೇನೆ ಟಿ.ಎಸ್.ಶ್ರವಣಕುಮಾರಿ ಪುಟ್ಟ ದೀಪೂಗೆ ಇವತ್ತು ಶಾಲೆಯಿಂದ ಬರುವಾಗಲೇ ಎರಡು ರೆಕ್ಕೆ ಹುಟ್ಟಿಕೊಂಡು ಬಿಟ್ಟಿತ್ತು. ಯಾವಾಗಲೂ ತನ್ನನ್ನು ಎರಡನೆಯ ಸ್ಥಾನಕ್ಕೆ ತಳ್ಳುತ್ತಿದ್ದ ಪುನೀತನನ್ನು ಅವನು ಎರಡನೆಯ ಸ್ಥಾನಕ್ಕೆ ಕಳಿಸಿ ತಾನು ಅವನ ಜಾಗದಲ್ಲಿ ಹೆಮ್ಮೆಯಿಂದ ನಿಂತಿದ್ದ. ಟೀಚರ್ ಮಾರ್ಕ್ಸ್ ಕಾರ್ಡ್ ಕೊಡೋವಾಗ ಪುನೀತನ ಮುಖ ನೋಡ್ಬೇಕಿತ್ತು. `ತಾನೇ ಫಸ್ಟ್ ಬರೋದು ಅನ್ನೋ ಜಂಭ… ಬೀಗ್ತಾ ಎಲ್ಲರ ಕಡೆ ನೋಡ್ತಾ ಇದ್ದ. ಆದರೆ ತನ್ನ ಹೆಸರು ಹೇಳಿದ ತಕ್ಷಣ ಅವನ ಮುಖ ಹೇಗಾಗಿ ಹೋಯಿತು…. ಹಾ! ಹಾ! ಹಾಗೇ ಆಗಬೇಕು ಅವನಿಗೆ. ಇನ್ನು ಯಾವತ್ತೂ ನಾನು ಈ ಜಾಗ ಬಿಟ್ಟು ಕೊಡಬಾರದು. ಅಪ್ಪ ಹೇಳಿದ್ದು ನಿಜ.. ಫಸ್ಟ್ ಬರೋದ್ರ ಖುಷೀನೇ ಬೇರೆ…. ಹೀಗೇ ಉತ್ಸಾಹದ ಕುದುರೆಯ ಬೆನ್ನೇರಿ ಗಾಳಿಯಲ್ಲಿ ತೇಲುತ್ತಾ ಬಂದಂತೆ ಮನೆಗೆ ಬಂದ. ಬಾಗಿಲ ಹತ್ತಿರ ಬರುತ್ತಿರುವಾಗಲೇ ಕೂಗಿಕೊಂಡ ಅಮ್ಮಾ ಇವತ್ತು ಏನು ಸ್ಪೆಷಲ್ ಹೇಳು ನೋಡೋಣ’’.ಏನು ಸ್ಪೆಷಲ್ಲೂ? ಯಾರ್ದಾ ದ್ರೂ ಹುಟ್ಟಿದ ಹಬ್ಬ ಇತ್ತಾ? ಕ್ಯಾಡ್ಬರೀಸ್ ಚಾಕಲೇಟ್ ಕೊಟ್ರಾ?’’ ಕೇಳಿದಳು ಸುಮಿತ್ರ. ಹೋಗಮ್ಮ ಅದಲ್ಲ. ಕೇಳಿದ್ರೆ ನೀನೇ ಕೊಡಿಸಲ್ವಾ ಚಾಕಲೇಟ್‌ನ. ಇನ್ನೂ ಬೇರೆ ಏನೋ ಬೇಗ ಹೇಳು’’. ಈಗ ಅವನ ಮುಖವನ್ನು ಸರಿಯಾಗಿ ಗಮನಿಸಿದಳು – ಕಣ್ಣು ಹೊಳೆಯುತ್ತಿದೆ, ಮುಖದಲ್ಲಿ ಸಂತೋಷವನ್ನು ಬಚ್ಚಿಡಲು ಅವನಿಂದ ಸಾಧ್ಯವೇ ಆಗುತ್ತಿಲ್ಲ… ಸರಿ ಹಾಗಾದ್ರೆ. ನೀನು ಯಾವುದೋ ಸ್ಪರ್ಧೇಲಿ ಬಹುಮಾನ ತೊಗೊಂಡಿದೀಯ.. ಎಷ್ಟನೇ ಬಹುಮಾನ’’ ಅವನ ಕೆನ್ನೆ ಹಿಂಡುತ್ತಾ ಕೇಳಿದಳು. ಉತ್ತರ ಅರ್ದ ಸರಿ ಅರ್ದ ಸರಿ ಅಲ್ಲ’’ ಅವನು ಜಾಣತನವಾಗಿ ನುಡಿದ.ಹಾಗಂದರೇನೋ’’ ಅರ್ಥವಾಗದವಳಂತೆ ಅವನ ಮುಖವನ್ನೇ ನೋಡಿದಳು. ಈಗ ಬಾಯ್ಬಿಟ್ಟ ಜಾಣ ಈ ಸಲ ನಾನೇ ಕ್ಲಾಸಿಗೆ ಫಸ್ಟ್ ಗೊತ್ತಾ. ಪುನೀತಂಗೆ ನನಗಿಂತ ಐದು ಮಾರ್ಕು ಕಮ್ಮಿ. ಅಪ್ಪ ಯಾವಾಗ್ಲೂ ಹೇಳ್ತಿದ್ರಲ್ಲಾ `ನೀನು ಫಸ್ಟ್ ಬಂದ್ರೇನೇ ನಾನು ಮಾರ್ಕ್ಸ್ ಕಾರ್ಡ್ಗೆ ಸೈನ್ ಮಾಡೋದು. ಇಲ್ದೇ ಇದ್ರೆ ಅಮ್ಮನ ಕೈಲೇ ಮಾಡಿಸ್ಕೊಂಡು ಹೋಗೂಂತ. ಈ ಸಲ ನೋಡು ನಾನು ಅವರ ಕೈಲೇ ಹಾಕಿಸ್ಕೊಂಡು ಹೋಗ್ತೀನಿ. ಇಲ್ನೋಡು’’ ಏನೋ ರಾಜ್ಯ ಗೆದ್ದು ಬಂದವರ ಹೆಮ್ಮೆಯಿಂದ ಬ್ಯಾಗಿನಿಂದ ಹುಷಾರಾಗಿ ಮಾರ್ಕ್ಸ್ ಕಾರ್ಡನ್ನು ತೆಗೆದು ಅಮ್ಮನಿಗೆ ತೋರಿಸುತ್ತಾ ಫಸ್ಟ್ ಎಂದು ಬರೆದಿದ್ದರ ಮೇಲೆ ಮುದ್ದಾಗಿ ಬೆರಳಿಡುತ್ತಾ ಹೇಳಿದ.ಆಯ್ತಾಯ್ತು. ಈಗ ಷೂ ಬಿಚ್ಚಿ, ಯೂನಿಫಾರಂ ಬದಲಾಯಿಸಿಕೊಂಡು ಕೈಕಾಲು ತೊಳೆದುಕೊಂಡು ಬಾ. ತಿಂಡಿ ತಿಂದು ಹಾಲು ಕುಡೀವಂತೆ. ಅಪ್ಪನಿಗೂ ಇವತ್ತು ತುಂಬಾ ಖುಷಿಯಾಗತ್ತೆ’’ ಎನ್ನುತ್ತಾ ಅವನ ಬ್ಯಾಗನ್ನು ತೆಗೆದುಕೊಂಡು ಒಳಗೆ ಹೋದಳು. ತಿಂಡಿ ತಿನ್ನುವಾಗಲೂ ಅವನಿನ್ನೂ ತನ್ನ ಸಾಧನೆಯ ಗುಂಗಿನಿಂದ ಹೊರಗೆ ಬಂದಿರಲಿಲ್ಲ. ಅಮ್ಮ…, ಅಪ್ಪನಿಗೆ ಇವತ್ತು ತುಂಬಾ ಖುಷಿಯಾಗತ್ತೆ ಅಲ್ವಾ? ನನ್ನ ಅವರ ತೊಡೆ ಮೇಲೆ ಕೂರಿಸಿಕೊಂಡು ಮುದ್ದು ಮಾಡ್ತಾರೆ. ನಾನು ಅವರ ಹತ್ರ ಒಂದು ಟೆಂಪ್ಟೇಷನ್ ಚಾಕೊಲೇಟ್ ತೆಗೆಸಿಕೊಳ್ಳುತ್ತೀನಿ. ಖಂಡಿತಾ ಕೊಡಿಸ್ತಾರೆ ಅಲ್ವಾ’’ ಅವನ ಮಾತಿನ ಪ್ರವಾಹ ನಿಲ್ಲುತ್ತಲೇ ಇಲ್ಲ.ಹ್ಞೂಂ. ಸರಿ. ಅವರು ಬಂದ ಮೇಲೆ ಖಂಡಿತಾ ಕೊಡಿಸ್ತಾರೆ. ಈಗ ನಿನ್ನ ಫ್ರೆಂಡ್ಸ್ ಕಾಯ್ತಿರ್ತಾ ರೆ. ಆಟ ಆಡಕ್ಕೆ ಹೋಗು’’ ಎಂದಳು. ಅಪ್ಪನ ಹತ್ತಿರಾ ಏನೋ ಚಾಕೊಲೇಟ್ ಕೊಡಿಸ್ಕೋತೀನಿ. ನೀನು ನಂಗೆ ಏನು ಮಾಡ್ಕೊಡ್ತೀಯ’’ಹೇಳು ಏನು ಮಾಡ್ಕೊಡ್ಲಿ?’’ ಜಾಮೂನು ಮಾಡ್ತೀಯಾ? ರಾತ್ರಿ ಊಟದ ಜೊತೆ ತಿನ್ನೋಣ’’ಆಯ್ತು ಹಾಗೇ ಮಾಡೋಣ’’ ಇನ್ನೂ ಅವನ ಉತ್ಸಾಹ ಕಮ್ಮಿಯಾಗಿಲ್ಲ ನೋಡು ನಾನೇನ್ಮಾಡ್ತೀನಿ ಗೊತ್ತಾ. ಪ್ರತಿಸಲದ ಹಾಗೆ ಸುಮ್ಮನೆ ಮಾರ್ಕ್ಸ್ ಕಾರ್ಡ್ ಇಟ್ಟುಕೊಂಡು ನಿಂತರ್ತೀ್ನಿ. ಅಪ್ಪ `ಮತ್ತೆ ಅದೇ ತಾನೇ ನಾನು ಸೈನ್ ಮಾಡಲ್ಲ ಹೋಗು; ಅಮ್ಮನ ಹತ್ರ ಮಾಡಿಸ್ಕೋ’ ಅಂತಾರೆ. ಆಗ ನೀನು ಹೇಳ್ಬೇಕು. ಇಲ್ಲಾ ಈಸಲ ಫಸ್ಟ್ ಬಂದಿದಾನೇಂತ. ಆಗ ಅವರಿಗೆ ಎಷ್ಟು ಖುಷಿಯಾಗತ್ತೆ…’’ ಅವನು ರಂಗ ಸಜ್ಜಿಕೆಯನ್ನು ಮಾಡತೊಡಗಿದ.ಹಾಗೇ ಆಗ್ಲಿ. ಈಗ ಆಡಕ್ಕೆ ಹೋಗು. ನಾನೂ ಜಾಮೂನು ಮಾಡಿ ಇಡ್ತೀನಿ. ಫ್ರೆಂಡ್ಸ್ ಕಾಯ್ತಿದಾರೆ’’ ಎನ್ನುತ್ತಾ ಅವನನ್ನು ಕಳಿಸಿ ಜಾಮೂನು ಮಾಡಲು ಒಳಗೆ ಹೋದಳು. ದೀಪು ಇವತ್ತು ಎಷ್ಟು ಖುಷಿಯಾಗಿದಾನೆ. ಸಧ್ಯ ಅವರಪ್ಪನಿಗೆ ಇವತ್ತಾದರೂ ಸಮಾಧಾನವಾಗತ್ತೆ. ಪ್ರತಿಸಲ ಇವನು ಮಾರ್ಕ್ಸ್ ಕಾರ್ಡ್ ತಂದಾಗಲೂ ಇವರದ್ದು ಒಂದೇ ತಕರಾರು. “ಇನ್ನೂ ಒಂದು ನಾಲ್ಕೈದು ಮಾರ್ಕ್ ಹೆಚ್ಚಿಗೆ ತೊಗೊಳ್ಳೋಕೆ ಏನು ಧಾಡಿ. ಏನು ಕಮ್ಮಿ ಮಾಡಿದೀವಿ ನಿಂಗೆ. ಶ್ರದ್ಧೆಯಿಂದ ನೀನು ಓದಿದ್ರೆ ಬರಲೇಬೇಕು. ನೀನು ಶುದ್ಧ ಸೋಂಭೇರಿ. ಹೀಗೇ ಓದ್ತಾ ಇದ್ರೆ ನೀನು ಖಂಡಿತಾ ಉದ್ಧಾರ ಆಗಲ್ಲ…. ನಾನು ಮಾತ್ರ ಇದಕ್ಕೆ ಸೈನ್ ಮಾಡಲ್ಲ. ನೀನು ಯಾವತ್ತು ಕ್ಲಾಸಿಗೆ ಫಸ್ಟ್ ಬರ್ತೀ ಯೋ ಆ ಮಾರ್ಕ್ಸ್ ಕಾರ್ಡ್ಗೇ ನಾನು ಸೈನ್ ಹಾಕೋದು. ಅಲ್ಲಿಯವರೆಗೆ ನಿಮ್ಮಮ್ಮನ ಹತ್ರಾನೇ ಹಾಕಿಸ್ಕೊಂಡು ಹೋಗು’’ ರಾಮ ರಾಮಾ ಅವರ ಕೋಪ ಬೇಗ ತಣ್ಣಗಾಗುತ್ತಲೇ ಇರಲಿಲ್ಲ. ಅವರ ಸಿಟ್ಟಿಗೆ ಇನ್ನೊಂದು ಕಾರಣ ಕ್ಲಾಸಿಗೆ ಫಸ್ಟ್ ಬರುತ್ತಿದ್ದ ಪುನೀತನ ಅಪ್ಪ ದುರಾದೃಷ್ಟವಶಾತ್ ಆಫೀಸಿನಲ್ಲಿ ಇವರ ಕೈಕೆಳಗಿನ ನೌಕರ. ಅವನ ಮುಂದೆ ತನ್ನ ಪ್ರತಿಷ್ಠೆಗೆ ಕುಂದೆಂಬ ಭಾವ ಬೇರೆ. ಅವನಾದರೂ ಸುಮ್ಮನಿರಬಾರದೆ. ಪ್ರತಿಸಲವೂ `ಮಾರ್ಕ್ಸ್ ಕಾರ್ಡ್ ನೋಡಿದ್ರಾ ಸಾರ್’ ಅಂತ ಸಹಜವಾಗೋ, ವ್ಯಂಗ್ಯವಾಗೋ ಅಂತೂ ಕೇಳುತ್ತಾನೆ. ಇವರಿಗೆ ಮೈಯೆಲ್ಲಾ ಉರಿದುಹೋಗುತ್ತೆ. ಮನೆಗೆ ಬಂದ ಮೇಲೆ ಅದರ ಮೊದಲ ಪರಿಣಾಮ ಅವನ ಮೇಲೆ; ಆಮೇಲೆ ನನ್ನ ಮೇಲೆ. “ನಿನ್ನ ಮುದ್ದಿಂದಾನೇ ಅವ್ನು ಹಾಳಾಗಿ ಹೋಗ್ತಿರೋದು. ನೀನು ಅವನಿಗೆ ಶಿಸ್ತು, ಶ್ರದ್ಧೆ ಕಲಿಸಲ್ಲ. ನೀನೇ ಅವನ ಮೊದಲ ಹಿತಶತ್ರು…’’ ಹೀಗೆಲ್ಲಾ ಆಪಾದನೆ. ಎಷ್ಟೋ ಸಲ ಹೇಳಿದ್ದೇನೆ ಅವನ ವಯಸ್ಸೆಷ್ಟು? ಅವನಿಗೆ ಎಷ್ಟು ಸಾಧ್ಯವೋ ಅಷ್ಟು ಓದುತ್ತಾನೆ. ಅವನ ಮೇಲೆ ಯಾವುದನ್ನೂ ಅಷ್ಟೊಂದು ಬಲವಂತವಾಗಿ ಹೇರಬೇಡಿ. ಅವನೇನೂ ಫೇಲಾಗುತ್ತಿಲ್ಲವಲ್ಲ. ಸೆಕೆಂಡ್ ಬರುವುದೂ ಅಷ್ಟೊಂದು ಸುಲುಭವೇನಲ್ಲ. ಅಲ್ಲದೆ ಇಷ್ಟು ಚಿಕ್ಕ ಮಕ್ಕಳಲ್ಲಿ ಅಷ್ಟೊಂದು ಸ್ಪರ್ಧಾ ಮನೋಭಾವ ಬೆಳೆಸುವುದು ಒಳ್ಳೆಯದಲ್ಲ’’ ಈ ಮಾತುಗಳನ್ನು ದೀಪು ಎದುರಿನಲ್ಲಿ ಇಲ್ಲದಾಗ ಪ್ರತಿಸಲವೆನ್ನುವಂತೆ ಹೇಳಿದ್ದೇನೆ. ಅವರಿಗೆ ಇಂತಹ ಮಾತುಗಳನ್ನು ಕೇಳಿದಾಗ ಇನ್ನೂ ಅಷ್ಟು ಕೋಪ ಜಾಸ್ತಿಯಾಗುತ್ತದೆ.ನೀನು ಈ ಮನೋಭಾವ ಇಟ್ಟುಕೊಂಡು ಬೆಳೆಸ್ತಾ ಇರೋದ್ರಿಂದಲೇ ಅವನು ಮೇಲೆ ಬರ್ತಾ ಇಲ್ಲ. ನೀನೇ ಅವನ ಓದಿಗೆ ಮೊದಲ ಶತ್ರು. ಪುನೀತನಿಗೆ ಸಾಧ್ಯವಾಗೋದು ಇವನಿಗ್ಯಾಕೆ ಆಗ್ತಿಲ್ಲ? ಅಲ್ಲಿಯವರೆಗೆ ಹೋದವನು ಒಂದು ನಾಲ್ಕೈದು ಮಾರ್ಕಿನಲ್ಲಿ ಎಡವುತ್ತಾನೆಂದರೆ ಅವನಲ್ಲಿ ಮುಂದೆ ಬರಬೇಕೆಂಬ ಹಟವಿಲ್ಲ. ಅಥವಾ ಅದನ್ನು ಪಡೆದುಕೊಳ್ಳುವ ನೈಪುಣ್ಯತೆ, ಚಾಕಚಕ್ಯತೆ, ಛಲ ಇಲ್ಲ. ಈಗಿನಿಂದ ಅದನ್ನು ಸರಿಪಡಿಸಿಕೊಳ್ಳದೇ ಹೋದರೆ, ಜೀವನದಲ್ಲಿ ಹೇಗೆ ಮುಂದೆ ಬರ್ತಾನೆ?’’ ಅವರು ಹೇಳುವುದೇನೋ ಸರಿ. ಆದರೆ ಇವನು ಇನ್ನೂ ಚಿಕ್ಕವನು ಎನ್ನುವ ಭಾವನೆ ನನ್ನಲ್ಲಿ. ತಂದೆಯಾಗಿ ನನ್ನ ಮಗ ಮುಂದಿರಬೇಕೆಂದು ನನಗೆ ಆಸೆ ಇರೋಲ್ವೆ ಎನ್ನುವ ಧೋರಣೆ ಇವರಲ್ಲಿ. ಸರಿ ಎಷ್ಟು ಮಾತಾಡಿದರೂ ಇದು ಮುಗಿಯದ ಚರ್ಚೆ ಎನ್ನುವುದು ನನಗರ್ಥವಾಗಿ ಹೋಗಿದೆ. ಆದರೂ ಪ್ರತಿಸಲ ಅವನ ಮಾರ್ಕ್ಸ್ ಕಾರ್ಡ್ ಬಂದಾಗ ಇದರ ಪುನರಾವರ್ತನೆಯೇ. ಸಧ್ಯ ಈಸಲ ಅದಕ್ಕೆ ಅವಕಾಶವಿಲ್ಲವಲ್ಲ ದೇವರೇ ಎಂದುಕೊಳ್ಳುತ್ತಾ ಸುಮಿತ್ರ ಮನದಲ್ಲಿಯೇ ದೇವರಿಗೆ ಕೈಮುಗಿದು ಜಾಮೂನನ್ನು ಮಾಡತೊಡಗಿದಳು. ಅಮ್ಮ ಅಪ್ಪ ಇನ್ನೂ ಬರಲಿಲ್ವಾ’’ ಆರೂವರೆಗೆ ಎರಡೆರಡು ಮೆಟ್ಟಿಲನ್ನು ಒಟ್ಟೊಟ್ಟಿಗೆ ಹಾರುತ್ತಾ ಬಂದ ದೀಪು ಕೇಳಿದ.ಇಷ್ಟು ಬೇಗ ಯಾವತ್ತು ಬಂದರ್ತಾನರೆ. ಅವರು ಬರೋದು ಏಳೂವರೆಯಾಗುತ್ತೆ. ಅಲ್ಲಿಯವರೆಗೆ ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ನಮಸ್ಕಾರ ಮಾಡಿ ಓದ್ತಾ ಕೂತುಕೋ ಹೋಗು’’ ಎನ್ನುತ್ತಾ ಕೈಲಿದ್ದ ಕೆಲಸವನ್ನು ಮುಂದುವರಿಸಿದಳು. `ಇವತ್ತು ಒಂದರ್ಧ ಘಂಟೆ ಕಂಪ್ಯೂಟರ್ ಆಡ್ಕೋತೀನಿ. ಅಪ್ಪ ಹೇಳಿದ್ರಲ್ವಾ ಕ್ಲಾಸಿಗೆ ಫಸ್ಟ್ ಬಂದ್ರೆ ಆಮೇಲೆ ಕಂಪ್ಯೂಟರಿನಲ್ಲಿ ಆಡಕ್ಕೆ ಬಿಡ್ತೀನಿ ಅಂತ. ಇವತ್ತು ಬಂದಿದೀನಲ್ಲ’’ ಆಸೆಯ ಕಂಗಳಿಂದ ನೋಡಿದ. ಅವನ ಮಾತು ಕೇಳಿ ನಗು ಬಂತುಸರಿ ಆಡ್ಕೋ ಹೋಗು ತುಂಬಾ ಹೊತ್ತು ಬೇಡ. ಒಂದರ್ಧ ಘಂಟೆ ಆಡಿ ಆಮೇಲೆ ಓದ್ಕೋ ಬೇಕು’ ಎನ್ನುತ್ತಾ ಪಾಸ್ ವರ್ಡ್ ಹಾಕಿ ಬಂದಳು. `ಸರಿ ಸರಿ’ ಅನ್ನುತ್ತಾ ಅವನು ಆಡಲು ಶುರುಮಾಡಿ ಅದರಲ್ಲೇ ಮುಳುಗಿ ಹೋದ. ಸುಮಿತ್ರೆಯೂ ಅಡುಗೆಮನೆಯ ಕೆಲಸದಲ್ಲೇ ಮಗ್ನಳಾಗಿ ಹೋದಳು. ಕಾಲಿಂಗ್ ಬೆಲ್ ಸದ್ದಿನಿಂದಲೇ ಅದು ರಮೇಶನದೆಂದು ಅರ್ಥವಾಗಿ ಹೋಯಿತು ಸುಮಿತ್ರೆಗೆ. ಓ! ಆಗಲೇ ಕತ್ತಲಾಗಿ ಹೋಗಿದೆ ಅಂದುಕೊಂಡು ಪಡಸಾಲೆ, ವರಾಂಡದ ದೀಪವನ್ನು ಹಾಕಿ ಬಾಗಿಲು ತೆರೆದಳು. ಬರುವಾಗಲೇ `ಎಲ್ಲಿ ಅವನು? ಏನ್ಮಾಡ್ತಾ ಇದಾನೆ?’ ಬುಸುಗುಡುತ್ತಲೇ ಬಂದ ರಮೇಶ. ಅಪ್ಪನ ದನಿ ಕೇಳುತ್ತಲೇ ಬ್ಯಾಗಿನಿಂದ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ದೀಪು ಹೊರಗೆಬಂದ. ಅಷ್ಟರಲ್ಲಿ ಅವನು ಕಂಪ್ಯೂಟರ್‌ನಲ್ಲಿ ಆಡ್ತಾ ಇದಾನೆ’’ ಸುಮಿತ್ರೆ ಮೆತ್ತಗೆ ಹೇಳುತ್ತಿದ್ದಳು. ಅವನ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿದಂತಾಯಿತು.ಯಾರವನಿಗೆ ಕಂಪ್ಯೂಟರ್ ಪಾಸ್ ವರ್ಡ್ ಹಾಕಿ ಕೊಟ್ಟೋರು. ಒಂದು ಶಿಸ್ತು ಇಲ್ಲ, ಶ್ರದ್ಧೆ ಇಲ್ಲ. ಯಾವಾಗ ನೋಡಿದರೂ ಆಟ, ಆಟ, ಆಟ. ನೀನೂ ಅವನಿಗೆ ತಕ್ಕ ಹಾಗೆ ಕುಣೀತೀಯಾ.’’ ಕಿರುಚಿದ ಸಿಟ್ಟಿನಿಂದ. ದೀಪುವಿಗೆ ಹಿಂದೆ ಮುಂದೆ ಅರ್ಥವಾಗದೇ ಬೆಪ್ಪಾಗಿ ನಿಂತಿದ್ದ. ಅವನನ್ನು ನೋಡುತ್ತಲೇ ಮತ್ತಷ್ಟು ಕೆರಳಿದ ರಮೇಶ ಬೆನ್ನಿಗೊಂದು ಗುದ್ದಿದ. ಎಷ್ಟು ಸಲ ಹೇಳಿದೀನಿ ನಿಂಗೆ. ಸಾಯಂಕಾಲ ಏಳು ಘಂಟೆ ಆಗತ್ಲೂವೆ ಮನೆ ಮುಂದಿನ ದೀಪ ಹಾಕಬೇಕು. ನಾನು ಬರುವ ಹೊತ್ತಿಗೆ ಓದ್ತಾ ಕೂತಿರಬೇಕು ಅಂತ. ನೀನೇನ್ಮಾಡಿದೀಯ. ಆಟ ಆಡಿಕೊಂಡು ಬಂದು ಬ್ಯಾಟು ಬಾಲನ್ನು ಎಸೆದಿದೀಯ. ವರಾಂಡ ತುಂಬ ಬೂಟಿನ ಮಣ್ಣು… ಹಾಕಿದೀಯ ದೀಪ ಇವತ್ತು? ಹೇಳಿದ ಮಾತಿಗೆ ಒಂದಿಷ್ಟಾದರೂ ಬೆಲೆಯಿದೆಯಾ? ಜೀವನದಲ್ಲಿ ಶ್ರದ್ಧೆ ಇರಬೇಕು, ಶಿಸ್ತು ಇರಬೇಕು. ಇಲ್ದಿದ್ರೆ ಹಾಳಾಗಿ ಹೋಗ್ತೀಯ. ನಮ್ಮ ನಮ್ಮ ಕೆಲಸಾನ ಅಚ್ಚುಕಟ್ಟಾಗಿ ಮಾಡಿಕೊಂಡ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಸಾಧ್ಯ. ಇಲ್ದಿದ್ರೆ ಎಲ್ಲಾದರೂ ತಾಪೇದಾರಿ ಮಾಡ್ಕೊಂಡು ಜೀವನ ಮಾಡ್ಬೇಕು…’’ ಅವನ ಮಾತನ್ನು ತಡೆಯುತ್ತಾ ಸುಮಿತ್ರ ಹೇಳಿದಳುಸ್ವಲ್ಪ ಇಲ್ಲಿ ಕೇಳಿ ಇವತ್ತು ಏನಾಯ್ತೂಂದ್ರೆ….’’ ನೀನು ಬಾಯ್ಮುಚ್ಚು. ನಿನ್ನಿಂದಾನೇ ಅವನು ಕೆಟ್ಟು ಕುಲಗೆಟ್ಟು ಕೆರ ಹಿಡಿದು ಹೋಗಿರೋದು. ನಿನ್ನ ಪ್ರತಿಯೊಂದು ತಪ್ಪಿಗೂ ನಿನ್ನ ಹತ್ರ ಒಂದೊಂದು ಕಾರಣ ಇರತ್ತೆ; ಹಾಗೇ ಅವನ ತಪ್ಪಿಗೂ. ತಪ್ಪಿಗೆ ಕಾರಣ ಕೊಡೋದನ್ನ ಅವನಿಗೆ ಕಲಿಸಬೇಡ. ಅದನ್ನ ತಿದ್ದುಕೊಂಡು ಮುಂದೆ ಬರೋದಕ್ಕೆ ಅವನಿಗೆ ಅವಕಾಶ ಕೊಡು. ಮೊದಲು ನೀನು ಶಿಸ್ತು ಕಲಿ. ಆಗ ನಿನ್ನ ಮಗ ತಾನೇ ಕಲೀತಾನೆ.’’ಹಾಗಲ್ಲ ನಾನು ಹೇಳೋ ಒಂದು ಮಾತನ್ನ ನೀವು ಕೇಳಿ. ಅಮೇಲೆ ಕೂಗಾಡ್ತೀರಂತೆ’’ ಅವನಿಗೆ ಇನ್ನಷ್ಟು ರೇಗಿ ಹೋಯಿತು. “ಏನು? ಏನದು ಅಂತ ಮಾತು. ನಾನು ಎಷ್ಟು ಸಲ ನಿಂಗೆ ಹೇಳಿಲ್ಲ. ಅವನು ಕ್ಲಾಸಿನಲ್ಲಿ ಫಸ್ಟ್ ಬರೋತಂಕ ಕಂಪ್ಯೂಟರ್ ಮುಟ್ಟಕೂಡದು ಅಂತ. ನೀನು ಯಾಕೆ ಅವನಿಗೆ ಆಡಕ್ಕೆ ಹಾಕಿಕೊಟ್ಟಿದ್ದು? ತಾಯಿ, ಮಗ ಇಬ್ಬರೂ ಒಂದೇ. ನಿಮ್ಮಿಬ್ಬರ ದೃಷ್ಠೀಲಿ ನಾನೊಬ್ಬ ವಿಲನ್. ಈಗ ನಿಮಗೆ ನಾನು ಹೇಳೋದು ಅರ್ಥ ಆಗಲ್ಲ. ಬೈಯೋವ್ರು ಒಳಿತಿಗೆ ಬೈತಾರೆ ಅಂತ’’. ಸಿಡಿಮಿಡಿಗುಟ್ಟುತ್ತಲೇ ಬಟ್ಟೆ ಬದಲಾಯಿಸಲು ರೂಮಿಗೆ ಹೋದ ಮಾತನ್ನು ಅಲ್ಲಿಗೆ ಮುಗಿಸುವಂತೆ. ದೀಪೂ ಆಡಬೇಕೆಂದಿದ್ದ ನಾಟಕ ನಿಜರೂಪದಲ್ಲೇ ನಡೆದು ಹೋಗಿತ್ತು. ಆದರೆ ಅಂತ್ಯ ಮಾತ್ರ ಬದಲಾಗಿತ್ತು. ಬೆನ್ನಿಗೆ ಗುದ್ದಿದಾಗ ಕೈಯಲ್ಲಿದ್ದ ಮಾರ್ಕ್ಸ್ ಕಾರ್ಡ್ ಮೂಲೆಗೆ ಹೋಗಿ ಬಿದ್ದಿತ್ತು. ಕಟ್ಟಿಕೊಂಡಿದ್ದ ರೆಕ್ಕೆಗಳು ಅವನ ಕಣ್ಣ ಮುಂದೆಯೇ ಮುರಿದು ಬಿದ್ದಿದ್ದವು.

ಕಥಾಗುಚ್ಛ Read Post »

ಕಥಾಗುಚ್ಛ

ಲಹರಿ

ಖಾಸಗಿ ಬಸ್ ಪಯಣ ಜಿ.ಹರೀಶ್ ಬೇದ್ರೆ ಇದು ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ. ಇದನ್ನು ಓದಿದ ಮೇಲಾದರೂ ಗಮನಿಸಿ, ನಾನು ಹೇಳಿದ್ದು ನಿಜವೆನಿಸಿ ನೀವು ನಗದಿದ್ದರೆ ಹೇಳಿ. ಅಂಥಹ ವಿಚಾರ ಏನೂ ಅಂತೀರಾ, ಅದೇ ಬಸ್ಸಗಳು ಹಾಗೂ ಅದರಲ್ಲಿನ ಸಂಚಾರ. ಅದರಲ್ಲಿ ಸಿಗುವ ವಿವಿಧ ರೀತಿಯ ಅನುಭವಗಳು. ನೋಡಿ ಸರ್ಕಾರಿ ಬಸ್ಸುಗಳು ತುಂಬಾ ಗೌರವಸ್ಥ ಹೆಣ್ಣಿನಂತೆ ನಿಲ್ದಾಣಕ್ಕೆ ಬಂದು ಊರಿಂದ ಊರಿಗೆ ಹೋದರೆ, ಖಾಸಗಿ ಬಸ್ಸುಗಳು ಆಗ ತಾನೇ ಪ್ರಾಯಕ್ಕೆ ಬಂದ ಹುಡುಗಿ ಎಲ್ಲರೂ ತನ್ನನೇ ನೋಡಲೆಂದು ವೈಯರ ಮಾಡುವಂತೆ, ನಿಲ್ದಾಣಕ್ಕೆ ಬರುವಾಗ ಅತೀ ವೇಗವಾಗಿ ಬರುತ್ತಾ, ಜೋರಾಗಿ ಹಾರನ್ ಮಾಡುತ್ತಾ, ಪ್ರತಿಯೊಬ್ಬರೂ ಗಮನಿಸುವಂತೆ ಬರುತ್ತವೆ. ನಾವೇನಾದರೂ ಅವು ಒಳಬಂದ ವೇಗವನ್ನು ಗಮನಿಸಿ, ಹೋಗಬೇಕಾದ ಸ್ಥಳಕ್ಕೆ ಬೇಗ ಸೇರುತ್ತೇವೆ ಅಂದುಕೊಂಡರೆ, ಅದು ನಮ್ಮ ಭ್ರಮೆ ಮಾತ್ರ. ನಂತರ ತಾನು ಸಾಗುವ ಮಾರ್ಗವಾಗಿ ಬರುವವರನ್ನು ಹತ್ತಿಸಿಕೊಂಡು, ಬಸ್ಸ್ ನಿಲ್ದಾಣದಿಂದ ಊರ ಹೊರಗಿನವರೆಗೂ ಹೊಸದಾಗಿ ಮದುವೆಯಾದ ಹುಡುಗಿ ಮದುವೆಯಾದ ನಂತರ ಮೊದಲಬಾರಿ ತವರು ಮನೆಗೆ ಬಂದು ಹೊರಹೊರಟಾಗ ಹೇಗೆ ನಿಧಾನವಾಗಿ ಹೆಜ್ಜೆ ಹಾಕುತ್ತಾ, ದಾರಿಯಲ್ಲಿ ಸಿಕ್ಕ ಪರಿಚಯದವರಿಗೆ ಮಾತನಾಡಿಸುತ್ತ ಸಾಗಿದಂತೆ, ಪ್ರಯಾಣಿಕರು ಕೈತೋರಿಸಿದ ಜಾಗದಲ್ಲೆಲ್ಲಾ ನಿಲ್ಲಿಸಿ, ಅವರನ್ನು ಹತ್ತಿಸಿಕೊಂಡು ಸಾಗುತ್ತವೆ. ತಾನು ಸಾಗುವ ಮಾರ್ಗ ಮಧ್ಯದಲ್ಲಿ ಸಿಗುವ ಊರುಗಳಲ್ಲಿ ಇಳಿಯುವ ಜನರನ್ನು ಇಳಿಸಿ, ಬರುವವರನ್ನು ಹತ್ತಿಸಿಕೊಂಡು ಮುಂದೆ ಸಾಗುತ್ತವೆ. ನಿಜ ಹೇಳಬೇಕೆಂದರೆ, ತಮ್ಮ ಗಮ್ಯವನ್ನು ತಲುಪುವ ಹೊತ್ತಿಗೆ ಬಸ್ಸಿನೊಳಗೆ ಹೆಜ್ಜೆ ಇಡಲು ಸಾಧ್ಯವಾಗದಷ್ಟು ಪ್ರಯಾಣಿಕರು ತುಂಬಿರುತ್ತಾರೆ. ಆಗ ತಾನೇತಾನಾಗಿ ಬಸ್ಸಿನ ವೇಗವೂ ಕಡಿಮೆಯಾಗಿರುತ್ತದೆ. ಇದನ್ನು ನೋಡಿದಾಗ ತುಂಬಿದ ಬಸುರಿ ಹೆಜ್ಜೆ ಹಾಕಲು ಸಾಧ್ಯವಾಗದೆ ನಿಧಾನವಾಗಿ ನಡೆದಂತೆ ಅನಿಸುತ್ತದೆ. ಬಸ್ಸಿನ ಒಳಗೆ ಜಾಗವಿಲ್ಲವೆಂದು ಯಾರನ್ನೂ ಬಿಟ್ಟು ಹೋಗುವಂತಿಲ್ಲ. ಹಾಗೇನಾದರು ಮಾಡಿದರೆ ಡ್ರೈವರ್, ಕಂಡಕ್ಟರ್ ಜೊತೆಗೆ ಬಸ್ಸಿಗೂ ಕಲ್ಲಿನ ಏಟು ಬೀಳಬಹುದು. ಅದಕ್ಕಾಗಿ ಕಂಡಕ್ಟರ್ ಯಾರನ್ನು ಬಿಟ್ಟು ಹೋಗುವ ಮನಸ್ಸು ಮಾಡುವುದಿಲ್ಲ. ಅಲ್ಲದೆ ತುಂಬಿದ ಬಸ್ಸಿನಲ್ಲಿ ಜಾಗ ಇರದಿದ್ದರೂ, ಮತ್ತೆ ಮತ್ತೆ ಪ್ರಯಾಣಿಕರನ್ನು ಒಳಗೆ ಹತ್ತಿಸಿಕೊಳ್ಳುವುದನ್ನು ನೋಡುವುದೇ ಚೆನ್ನ. ಅವನಿಗೆ ಗೊತ್ತಿರುತ್ತದೆ ಒಳಗಡೆ ಜಾಗವಿಲ್ಲವೆಂದೂ, ಹಾಗಿದ್ದೂ ಯಾರ್ರೀ ಅದೂ ಸ್ವಲ್ಪ ಒಳಗೆ ದಾಟಿ, ಪಾಪ ವಯಸ್ಸಾದ ಅಜ್ಜಿ ಜಾಗ ಬಿಡಿ, ಹೇ ಸಣ್ಣ ಮಕ್ಕಳು ಮಹಾರಾಯ ಹೆಚ್ಚುಕಮ್ಮಿಯಾದರೆ ಕಷ್ಟ ಒಳಗೆ ಕರೆದುಕೊಳ್ಳಿ ಮುಂತಾಗಿ ಹೇಳುತ್ತಾ ಇರದ ಜಾಗದೊಳಗೆ ಜಾಗ ಮಾಡುತ್ತಾನೆ. ಬಸ್ಸು ಹೊರಟಾಗ ಪ್ರಯಾಣಿಕರು ಎಲ್ಲಿಬೇಕೊ, ಹೇಗೆ ಬೇಕೋ ಹಾಗೆ ಕುಳಿತಿರಬಹುದು. ಪ್ರಯಾಣ ಸಾಗಿದಂತೆ ಮೊದಲು ಎಲ್ಲಾ ಅಸನಗಳು ರಾತ್ರಿಯಾಗುತ್ತದೆ. ಆಗ ಹತ್ತುವ ಜನರು ತಮಗೆ ಸರಿ ಎನಿಸಿದ ಅಸನವನ್ನೋ, ಕಂಬಿಯನ್ನೋ ಹಿಡಿದು ನಿಲ್ಲುತ್ತಾರೆ. ಅದು ತಾತ್ಕಾಲಿಕ, ಬರಬರುತ್ತ ನಿಂತವರು ಹಿಂದೆಮುಂದೆ ಸರಿಯಬೇಕಾಗುತ್ತದೆ. ಆಗ ಕುಳಿತವರಿಗೂ ನಿಂತವರಿಗೂ ಜಗಳವಾಗುವ ಸಾಧ್ಯತೆ ಇರುತ್ತದೆ. ಕುಳಿತವರು ಸರಿಯಾಗಿ ನಿಲ್ಲಿ ಎಂದರೆ, ನಿಂತವರು ಹೇಗೆ ನಿಲ್ಲಬೇಕು ಬನ್ನಿ ತೋರಿಸಿ, ನಮ್ಮ ಕಷ್ಟ ನಿಮಗೇನು ಗೊತ್ತು ಎಂದೊ, ಮುಂತಾಗಿ ಮಾತುಗಳಾಗುತ್ತವೆ. ಕೆಲವೊಮ್ಮೆ ಕಿಡಿಗೇಡಿಗಳು ಬೇಕೆಂದೇ ತೊಂದರೆ ಮಾಡಿದಾಗ ಇರದ ಜಾಗದಲ್ಲಿ ನಿಂತು ಪರಸ್ಪರ ಜಗಳವಾಡುವುದು ಅರ್ಜುನ ಮತ್ತು ಬಬ್ರುವಾಹನರ ‘ಯಾರು ತಿಳಿಯರು ನನ್ನ ಭುಜಬಲದ ಪರಕ್ರಾಮ’ ನೆನಪಿಸುತ್ತದೆ. ಇನ್ನೇನು ಇಬ್ಬರೂ ಕೈ ಮೀಲಾಯಿಸುತ್ತಾರೆ ಎಂದು ನಾವು ಕದನ ಕುತೂಹಲಿಗಳಾಗಿ ಕಾಯುವಾಗ ಅವರಿವರ ಮಧ್ಯಸ್ಥಿಕೆಯಿಂದ ತಣ್ಣಗಾಗಿ ಬಿಡುತ್ತದೆ. ಜಗಳವಾಡಿದವರಿಗೂ ಇದೇ ಬೇಕಾಗಿರುತ್ತದೆ ಎಂದು ನನ್ನ ಅನುಮಾನ. ಈ ಜಗಳ ಒಂದು ರೀತಿಯದಾದರೆ, ಹಿಂದೆ ಮುಂದೆ ನಿಂತ ಸ್ನೇಹಿತ, ಸ್ನೇಹಿತೆಯರು ಮಾತನಾಡಲು ಪರದಾಡುವುದು ನೋಡಲು ಬಹಳ ಖುಷಿಯಾಗುತ್ತದೆ. ಇದಕ್ಕಿಂತ ಯುವಕರು ತಮ್ಮ ತಮ್ಮ ಹುಡುಗ, ಹುಡುಗಿಯರನ್ನು ಕದ್ದು ನೋಡುವುದು ಒಂದೆಡೆಯಾದರೆ, ಪ್ರೇಮಿಗಳು ಒಂದೆಕಡೆ ಇದ್ದಾಗ ಸುತ್ತಲಿನ ಜನರನ್ನು ಮರೆತು ತಮ್ಮದೇ ಪ್ರಪಂಚದಲ್ಲಿರುವುದು, ಅಕಸ್ಮಾತ್ ಹಿಂದೆ ಮುಂದೆ ದೂರದಲ್ಲಿದ್ದರೆ ಪರಸ್ಪರ ನೋಡಲು, ಮಾತನಾಡಲು ಪಡುವ ಕಷ್ಟ ನೋಡಲು ಎರಡು ಕಣ್ಣು ಸಾಲದು. ತುಂಬಿದ ಬಸ್ಸಿನಲ್ಲಿ ಸೆಕೆಯಾಗಿ ಕಿಟಕಿ ತೆರೆದು ಕುಳಿತಿರುವಾಗ, ಮುಂದಿನ ಅಸನಗಳಲ್ಲಿ ಕುಳಿತವರು ಬಸ್ಸು ಚಲಿಸುವಾಗ ಎಲೆ ಅಡಿಕೆ, ಗುಟುಕ, ತಂಬಾಕು ಹಾಕಿಕೊಂಡವರು.ಉಗಿದರಂತು, ಹಿಂದೆ ಕುಳಿತವರ ಸ್ಥಿತಿ ದೇವರಿಗೆ ಪ್ರೀತಿ. ಅದೂ ಅವರೇನಾದರೂ ಯಾವುದಾದರೂ ಕಾರ್ಯಕ್ರಮಕ್ಕೊ, ಮುಖ್ಯವಾದ ಕೆಲಸಕ್ಕೂ ತಯಾರಾಗಿ ಹೊರಟಿರಬೇಕು, ಜೊತೆಗೆ ಬೇರೆ ಬಟ್ಟೆಯು ಅವರ ಬಳಿ ಇರಬಾರದು, ಅವರ ಪರಿಸ್ಥಿತಿ ಹೇಗಿರಬಹುದು ಯೋಚಿಸಿ. ವಾಂತಿಯಾದರಂತೂ ಗಲೀಜಿನ ಜೊತೆ ಆ ಕಮಟು ವಾಸನೆ ಹೇಗಿರಬಹುದೆಂದು ನೀವೇ ಊಹಿಸಿಕೊಳ್ಳಿ. ಒಂದೊಮ್ಮೆ ವಾಂತಿ ಬಸ್ಸಿನ ಒಳಗಡೆಯೇ ಮಾಡಿಕೊಂಡರೂ, ಎಷ್ಟೇ ತುಂಬಿದ ಬಸ್ಸಾದರೂ ಜನ ಅಷ್ಟು ಜಾಗ ಬಿಟ್ಟು ನಿಲ್ಲುವುದನ್ನು ನೋಡಿದರೆ, ಆ ಹೊಂದಣಿಕೆ ಸೋಜಿಗವೆನಿಸುತ್ತದೆ. ಇಷ್ಟೆಲ್ಲಾ ಅವಂತರಗಳ ಜೊತೆಗೆ, ನಿಲ್ಲಲೂ ಜಾಗವಿಲ್ಲದಿದ್ದರು ಜನ ಹತ್ತಿದಾಗ, ಕಂಕುಳಲ್ಲಿದ್ದ ಪುಟ್ಟ ಮಕ್ಕಳು ಕುಳಿತವರ ತೊಡೆ ಎರುತ್ತವೆ. ಅನ್ಯರೊಂದಿಗೆ ಮಗು ಕೂರದಿದ್ದಾಗ ಅನಿವಾರ್ಯವಾಗಿ ಕುಳಿತವರು ನಿಂತು ತಾಯಿ ಮತ್ತು ಮಗುವಿಗೆ ಜಾಗ ಬಿಟ್ಟುಕೊಡಬೇಕಾಗುತ್ತದೆ. ನಾವು ಪಯಣಿಸುವ ಸಮಯ ಶಾಲಾ ಕಾಲೇಜುಗಳ ಆರಂಭ ಅಥವಾ ಮುಕ್ತಾಯದ ವೇಳೆ ಆಗಿದ್ದರೆ, ಆ ಮಕ್ಕಳ ಹೆಣ ಭಾರದ ಚೀಲಗಳು ಕುಳಿತವರ ತೊಡೆಯನ್ನು ಅಲಂಕರಿಸುತ್ತವೆ. ಈ ಎಲ್ಲಾ ಅವಾಂತರಗಳ ಜೊತೆ ಮುಂದೆ ಸಾಗಿದ ಬಸ್ಸು ನಿಗದಿತ ಊರಿನ ನಿಲ್ದಾಣ ತಲುಪಿದಾಗ, ಮಗುವನ್ನು ಹೆತ್ತ ತಾಯಿ ನಿಟ್ಟುಸಿರು ಬಿಟ್ಟಂತೆ ಬಿಟ್ಟು ನಿಂತು ತನ್ನ ಒಡಲನ್ನು ಖಾಲಿ ಮಾಡಿಕೊಳ್ಳುತ್ತದೆ. ಅಷ್ಟು ಹೊತ್ತು ಬಸ್ಸಿನೊಳಗೆ ಇದ್ದ ಜನ ಇಳಿದು ತಮ್ಮ ಕಾಯಕದೆಡೆಗೆ ಹೆಜ್ಜೆ ಹಾಕಿದರೆ, ಅದೇ ಬಸ್ಸು ಹೊಸ ಪ್ರಯಾಣಿಕರನ್ನು ಹೊತ್ತು, ಹೊಸ ಅನುಭವ ನೀಡಲು ತನ್ನ ಮಾರ್ಗದಲ್ಲಿ ಸಾಗುತ್ತದೆ. ಇಂತಹ ಸುಂದರ ಅನುಭವ ಪಡೆಯಬೇಕೆಂದರೆ ನಾವು, ಖಾಸಗಿ ಬಸ್ಸುಗಳಲ್ಲಿ ಗ್ರಾಮಂತರ ಪ್ರದೇಶಗಳ ಕಡೆ ಹೋಗಬೇಕು. ……‌

ಲಹರಿ Read Post »

ಕಥಾಗುಚ್ಛ

ಕಥಾಗುಚ್ಛ

ವೃದ್ದಾಶ್ರಮ ಎಂಬ ಬೆಳಕು. ಸುಮಾ ಉಮೇಶ್ ಗೌಡ ಮೊಮ್ಮಕ್ಕಳು  ಶಾಲೆಗೆ ಹೋದ್ರು,  ಮಗ ಸೊಸೆ ಕೆಲಸಕ್ಕೆ ಹೋದ್ರು, ಬಾಗಿಲು ಭದ್ರ  ಪಡಿಸಿದ  ರಾಯರು ಪತ್ನಿಯ ಫೊಟೋ ನೋಡುತ್ತಾ  ಕುಳಿತರು  ಏಕಾಂಗಿ ಆಗಿ…    ಗಂಡು ಎಷ್ಟೆ ದರ್ಪದಿಂದ ಇದ್ರು ಪತ್ನಿ  ಮರಣಿಸಿದ ಮೇಲೆ ಹಲ್ಲು ಕಿತ್ತ ಹಾವಿನಂತೆ,  ಯಾರಿಗೆ ಬುಸುಗುಡಿದ್ರು  ಹೇದರಿಕೊಳ್ಳೊರು ಯಾರು..? ರಾಯರ ಬದುಕು ಇದಕ್ಕೆ ಹೊರತಾಗಿರಲಿಲ್ಲ…    ಸದಾ ಚಟುವಟಿಕೆ  ಇಂದ ಇರುವ ರಾಯರಿಗೆ, ನಿವೃತ್ತಿ ಅನ್ನೋದೇ  ಶಾಪವಾದ್ರು,  ಪತ್ನಿಯ ನಗು ಮುಖ,  ಹುಸಿ ಮುನಿಸು,  ಅವರ ಜೊತೆಯಾಗಿ ಲವಲವಿಕೆ ಇಂದ ಇರಲು ಕಾರಣ ಆಗಿತ್ತು,  ಆದರೆ ಆರು ತಿಂಗಳ ಹಿಂದೆ  ಪತ್ನಿ  ಅಗಲಿದ ಮೇಲೆ, ತನ್ನ ಮನೆಯಲ್ಲೇ ತಾನೊಬ್ಬ ಪರಕಿಯ ಅಂತಾಗಿ ಬಿಟ್ಟಿದ್ದರು…     ಪತ್ನಿ ಪದ್ಮಾನ ಫೋಟೋ ನೋಡ್ತಾ,  ಅದು ಯಾವ ದೇವರಿಗೆ ಮುತೈದೆ ಸಾವು  ಬರಲಿ ಅಂತಾ ಬೇಡಿಕೊಂಡೆ  ನೀನು,  ನಿನಗೆ  ಮುತೈದೆ ಸಾವು ಸಿಕ್ಕು,  ನಾನು  ಒಂಟಿಯಾಗಿ ಕೊರಗ್ತಾ ಇದೆನೆ. ನೀನು ನನ್ನ  ಜಾಗದಲ್ಲಿ ಇದ್ದಿದ್ರೆ,  ಅತ್ತು ಮನಸ್ಸು ಹಗುರ ಮಾಡಿಕೊಂಡು,   ಅಕ್ಕ ಪಕ್ಕದ ಮನೆಯವರ  ಜೊತೆ  ಮಾತಾಡ್ತಾ  ಹೇಗೋ ಒಂಟಿತನ  ದೂರ ಮಾಡಿಕೊಳ್ಳತಾ  ಇದ್ದೆ,  ಈಗ ನನ್ನ ಪರಿಸ್ಥಿತಿ ನೋಡು,  ಒಂಟಿಯಾಗಿ ನಾಲ್ಕು ಗೊಡೆಯ ಮಧ್ಯೆ ಇರಬೇಕಾಗಿದೆ,  ಸಂಜೆ ವಾಕಿಂಗ್ ಹೋದರೆ ಒಂಚೂರು ವೇಳೆ ಕಳಿತಿವಿ ಅಷ್ಟೆ…     ಹಾಗಂತ ನಿನ್ನ ಮಗ ಸೊಸೆ ಏನು ದ್ವೇಷಿಸ್ತಾ ಇಲ್ಲ,  ಚನ್ನಾಗಿ ನೋಡ್ಕೊತಾರೆ ನಿನಗೂ ಗೊತ್ತು ಅದು,  ಆದ್ರೆ ಮಮ್ಮಕ್ಕಳಿಗೆ  ಸ್ಕೂಲ್ ಹೊಂ ವರ್ಕ್  ಮಾಡೊಕೆ ವೇಳೆ ಸಾಲಲ್ಲಾ,  ಇನ್ನೂ ನನ್ನ ಜೊತೆ ಕಳೆಯೊಕೆ ಎಲ್ಲಿ ವೇಳೆ ಸಿಗಬೇಕು,  ಮಗ ಸೊಸೆ ಅವರವರ ಕೆಲಸದಲ್ಲಿ ಬ್ಯುಸಿ,  ಸರಿಯಾದ ಟೈಮ್ ಗೆ ಊಟ ತಿಂಡಿ ಮಾಡಿಕೊಟ್ರೆ ಮುಗಿತು,  ಮಗನ ಜೊತೆ ನಾಲ್ಕು ಮಾತು  ಮಾತಾಡೊಕು  ಟೈಮ್ ಇರಲ್ಲ…    ಇದು ನನ್ನೊಬ್ಬನ ಗೋಳಲ್ಲ  ಪದ್ಮಾ,  ಪತ್ನಿಯನ್ನು ಕಳೆದುಕೊಂಡ  ನನ್ನಂತಹ ವಯಸ್ಸಾದವರ ಗೋಳು,  ನಲವತ್ತು ವರುಷ ಸಂಸಾರ ಮಾಡಿ, ಹೀಗೆ ದಿಡಿರ್ ಅಂತಾ ಹೋಗಿಬಿಟ್ರೆ,  ಎಲ್ಲದಕ್ಕೂ  ಪತ್ನಿ ನೆ  ಅವಲಂಬಿಸಿ, ಪತ್ನಿ ಎಷ್ಟೆ  ಚನ್ನಾಗಿ ಬದುಕು ಸಂಬಾಳಿಸಿದರು, ಮತ್ತು ಅವಳ ಮೇಲೆ ರೇಗಾಡೊ ಅಂತಾ ನಮ್ಮ  ಗಂಡಸರ ಸ್ಥಿತಿ ಹೀಗೆ  ಪತ್ನಿ ಹೋದಮೇಲೆ…     ಹಿಂದಿನ ಮನೆ ರಾಮಣ್ಣನ ಪತ್ನಿ ನಾಲ್ಕು ತಿಂಗಳ ಹಿಂದೆ ತೀರಿಕೊಂಡಳು,  ಅವನ ಜೀವನ ಕೂಡಾ ಹೀಗೆ,  ಆಚೆ ಮನೆ ಭೀಮ,  ನನ್ನ ಕ್ಲಾಸ್ ಮೇಟ್  ಸದಾನಂದಾ ಎಲ್ಲರು  ಹೀಗೆ,  ಕೆಲವರಿಗೆ  ಅಂತು ಮಗ ಸೊಸೆ  ಅಂತು  ಸರಿಯಾಗಿ ನೋಡಿಕೊಳ್ಳೊದೆ ಇಲ್ಲ ಪಾಪ,     ನಮ್ಮ ಬಾಸ್  ಶಂಕರ್ ಅವರ ಪತ್ನಿ ಕೂಡಾ  ಹೋದ್ರಂತೆ,  ಹುಲಿ ಅಂತೆ ಇದ್ದವರು ಈಗ  ಇಲಿ ಅಂತೆ ಆಗಿಬಿಟ್ಟಿದಾರೆ,  ಇನ್ನೂ ನಿವೃತ್ತಿ ಆಗಿಲ್ಲ,  ಸದಾ ಕೆಲಸದಲ್ಲೆ  ಮುಳುಗಿರ್ತಾರೆ  ಒಂಟಿತನ  ಮರೆಯಲು,  ಆದ್ರು  ಇಷ್ಟು ವರ್ಷ ಸಂಸಾರ ಮಾಡಿದ  ಸಂಗಾತಿ  ಇಲ್ಲದ ಏಕಾಂತ ಅನುಭವಿಸೋದು  ಹೆಣ್ಣಿಗಿಂತ ಗಂಡಿಗೆ  ಕಷ್ಟ. ಪತ್ನಿಯ ಪಟದ ಎದುರು ಮಾತಾಡ್ತಾ,  ಮನಸ್ಸು ಹಗುರ ಮಾಡಿಕೊಳ್ಳುತ್ತಿದ್ದ  ರಾಯರ ಫೋನ್ ಗೆ ಕರೆ ಬಂತು,  ಜಾರಿದ ಕಣ್ಣೀರು ಒರೆಸಿಕೊಂಡು  ಫೋನ್ ರಿಸೀವ್ ಮಾಡಿದರು …     ಅರೆ,  ನಮ್ಮ ಬಾಸ್ ಶಂಕರ್ ಅವರ ನಂಬರ್,  ಅವರು ತುಂಬಾ ಕುಗ್ಗಿಹೋಗಿದ್ರು ಅವರಿಗೆ ಏನಾದರೂ ಆಯ್ತಾ,  ಅಯ್ಯೋ ದೇವರೆ ಹಾಗಾಗದೆ ಇರಲಿ ಅಂದು ಫೋನ್ ರಿಸೀವ್ ಮಾಡಿದ…    ರಾಯರೆ ಏನ್ಮಾಡ್ತಿದ್ರಿ..? ಬಾಸ್ ಧ್ವನಿ ಕೇಳಿ ಸಮಾಧಾನ ಆಯ್ತು,  ಇನ್ನೆನಿರುತ್ತೆ ಸರ್,  ಒಂಟಿ ಮನೆಯಲ್ಲಿ ಅಂತರ್ ಪಿಶಾಚಿ ತರ ಇದೆನೆ… ರಾಯರೆ ಹಾಗೆಕಂತಿರಾ..? ಮತ್ತಿನ್ನೇನು  ಸರ್,  ನಮ್ಮ ಕಷ್ಟ ಸುಖ, ನೋವು ನಲಿವು ಕೇಳೊ ಜೀವ ಇಲ್ಲ, ನಿಮಗೂ ಅನುಭವ  ಆಗಿದೆ ಅಲ್ವಾ ಸರ್… ಅದು ನಿಜಾನೆ ರಾಯರೆ, ಎಷ್ಟೆ ಕೋಪ, ಮುನಿಸು ಇದ್ರು,  ನಮ್ಮ ಕಷ್ಟ ಕೇಳೊ  ಪತ್ನಿನ ಇದ್ದಾಗ ಅರ್ಥ ಮಾಡಿಕೊಳ್ಳುವಲ್ಲಿ  ಸೋತಬಿಟ್ಟೆ,  ಈಗ  ಒಂದೊಂದು ಕ್ಷಣ  ಅವಳ  ನೆನಪಿಲ್ಲದೆ  ಬದುಕಲು ಆಗ್ತಾ ಇಲ್ಲ,  ಹಾ ರಾಯರೆ  ನಿಮಗೆ  ಒಂದು ಮುಖ್ಯವಾದ  ವಿಷಯ ತಿಳಿಸಬೇಕಿತ್ತು… ಎನ್ ಸರ್ ಅದು…    ರಾಯರೆ ನಾನು  ಸ್ವಯಂ ನಿವೃತ್ತಿ ಪಡಿತಾ ಇದೆನೆ…    ಸರ್, ಯಾಕೆ ಹಾಗೆ ಮಾಡಿದ್ರಿ,  ಕೆಲಸ ಇಲ್ಲದೇ  ಒಂಟಿಯಾಗಿ ವೇಳೆ ಕಳಿಯೋದು ತುಂಬಾ ಕಷ್ಟ…    ನಿಜಾ  ರಾಯರೆ, ನಾನೊಂದು ನಿರ್ಧಾರಕ್ಕೆ ಬಂದಿದೆನೆ, ಉಳಿದಿರೊ ಜೀವನ ಸಂತೋಷ ವಾಗಿ  ಕಳೆಯಬೇಕು,   ಮಕ್ಕಳು ಸೊಸೆ, ಅಳಿಯ  ಯಾರ ಹಂಗು ಇಲ್ಲದೇ,  ವೃದ್ದಾಶ್ರಮದಲ್ಲಿ  ಇರಬೇಕು ಅಂತಾ ಮಾಡಿದೆನೆ,  ಅಲ್ಲಿ ನಮ್ಮಂತಹ ಹಿರಿಯ ಜೀವಗಳು ಇರ್ತಾರೆ,  ಸಮಾನ ವಯಸ್ಕರ ಜೊತೆ  ಇಡೀ ದಿನ ಕಳೆದು,  ಮನಸ್ಸು  ಉಲ್ಲಾಸಿತ ಆಗಿರಬೇಕು ಅಂದ್ರೆ ಅದೆ ಸರಿ ಅನ್ನಿಸಿತು,  ನನ್ನ ಗೆಳೆಯ ಒಬ್ಬನು ಈಗ ವರ್ಷದಿಂದ ಇದಾನೆ,  ಅವನು  ಅಲ್ಲಿ   ಖುಷಿ ಇಂದ ಇದಾನೆ, ನೀವು ಬನ್ನಿ, ಆದರೆ  ನಾನಲ್ಲಿ  ನಿಮ್ಮ  ಬಾಸ್ ಅಲ್ಲ  ಗೆಳೆಯ, ನಾವು ಸಮಾನ ದುಃಖಿಗಳು…     ರಾಯರು  ತುಂಬಾ ಯೋಚನೆ ಮಾಡಿ  ತಮ್ಮ  ವಾಕಿಂಗ್ ಗೆಳೆಯರ  ಜೊತೆ ಚರ್ಚಿಸಿದಾಗ, ಒಂದು ರೀತಿಯಲ್ಲಿ ಅದೆ  ಸರಿ ಅನ್ನಿಸಿತು,  ಸಮಾನ ವಯಸ್ಕರು,  ಸಮಾನ ದುಃಖಿಗಳು ಇರುವೆಡೆ,  ಕ್ರಿಯಾಶಿಲರಾಗಿ  ವೃದ್ದಾಶ್ರಮದಲ್ಲಿ  ಇರೋದೇ  ಸರಿ ಅನ್ನಿಸಿತು…    ಮಗನಿಗೆ ನಿರ್ಧಾರ ತಿಳಿಸಿದಾಗ,  ನಾವೆಲ್ಲ ಇದ್ದು ವೃದ್ದಾಶ್ರಮ ಯಾಕೆ ಅಪ್ಪಾ ,  ನೋಡಿದವರು  ತಂದೆಯನ್ನು ಮಗ ಸೊಸೆ  ಚನ್ನಾಗಿ ನೋಡಿಕೊಳ್ಳಲಿಲ್ಲ  ಅಂತಾ ಆಡಿಕೊಳ್ಳುತಾರೆ,  ನಾವೇನು ಕಡಿಮೆ ಮಾಡಿದೆವೆ…. ಮಾವ   ನಿಮ್ಮ ಆರೋಗ್ಯಕ್ಕೆ  ಹೊಂದುವಂತ  ಊಟ, ಸರಿಯಾದ ವೇಳೆಗೆ ಮಾತ್ರೆ,  ತಿಂಗಳಿಗೊಮ್ಮೆ ಆಸ್ಪತ್ರೆಗೆ ಕರೆದುಕೊಂಡು ಹೋದ್ರು ಯಾಕೆ ಮಾವ ಇಂತಹ ನಿರ್ಧಾರ ತಗೆದುಕೊಂಡ್ರಿ   ಅಂದು ಮಗ ಸೊಸೆ  ಒಪ್ಪಲಿಲ್ಲ… ಮಕ್ಕಳು ಚನ್ನಾಗಿ ನೋಡಿಕೊಳ್ಳಲಿಲ್ಲಾ ಅಂತಾ ವೃದ್ದಾಶ್ರಮ ಕ್ಕೆ  ಹೋಗ್ತಾ ಇಲ್ಲ, ನನ್ನ ಏಕಾಂತತೆ  ದೂರ ಮಾಡಿಕೊಳ್ಳಲು ಅಂದು ರಾಯರು ಅರ್ಥ ಮಾಡಿಸಿ, ಬಿಡಿಸಿ,  ಸಮಾಧಾನ ದಿಂದ   ಹೇಳಿದಾಗ ತಂದೆಯ ಮಾತಲ್ಲೂ  ಸತ್ಯ ಇದೆ ಅಂದು ಒಪ್ಪಿದ,  ಮಗ ಸೊಸೆ  ಸಂತೋಷಕ್ಕೆ  ಮೊಮ್ಮಕ್ಕಳೊಂದಿಗೆ  ದೀಪಾವಳಿ ಆಚರಿಸಿ  ವೃದ್ದಾಶ್ರಮ ಕಡೆ  ನಡೆದರು ರಾಯರು …    ವೃದ್ದಾಶ್ರಮ ಕ್ಕೆ  ಹೋದ ರಾಯರಿಗೆ ಹೊಸ ಲೋಕ ತೇರೆದಂತಾಯಿತು,  ತಮ್ಮ ಬಾಸ್ ಜೊತೆ ಆದ್ರು,  ತಮ್ಮಂತಹ ಅನೇಕರು  ಸಿಕ್ಕರು,  ರಾಯರಿಗೆ  ನಿಜವಾದ ದೀಪಾವಳಿ  ವೃದ್ದಾಶ್ರಮದ  ಸ್ನೇಹಿತರ, ಸಂಗಡಿಗರ, ಮೇಲ್ವಿಚಾರಕರ   ಸ್ನೇಹ,  ಪ್ರೀತಿ ಆತ್ಮೀಯತೆಯಲ್ಲಿ  ಸಿಕ್ಕಿತು,  ವೃದ್ದಾಶ್ರಮ ಒಂಟಿ  ಬಾಳಿಗೆ ಬೇಳಕಾಯ್ತು…. ================================= ಪರಿಚಯ: ಗೃಹಿಣಿ,ಹವ್ಯಾಸಿ ಲೇಖಕಿ,ಇವರ ಹಲವು ಬರಹಗಳು ವಿವಿಧ ಪತ್ರಿಕೆಗಳಲ್ಲಿಬಂದಿವೆ.ಇನ್ನೂ ಪುಸ್ತಕ ಹೊರತಂದಿಲ್ಲ

ಕಥಾಗುಚ್ಛ Read Post »

ಕಥಾಗುಚ್ಛ

ಸಣ್ಣಕಥೆ

ಪ್ರೀತಿ ಆನಂದ್ ಕೊರಟಿ ಆಫೀಸಿಗೆÉ ತಡವಾಗುತ್ತಿದೆ, ಬೇಗ ಹೋಗಬೇಕು…’ ಅವನು ತನ್ನ ಕೋಟನ್ನು ಭುಜದ ಮೇಲೆ ಹಾಕಿಕೊಳ್ಳುತ್ತಾ ಜೋರಾಗಿ ಹೇಳಿದ. ಮೆಟ್ಟಿಲುಗಳನ್ನು ಇಳಿದು ಮನೆಯಿಂದ ಹೊರಗೆ ಓಡುತ್ತಾ ಹೊರಟ. ಅವನು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಂತೆ, ಅವಳು ಓಡುತ್ತಾ ಮೆಟ್ಟಿಲಿಳಿದು ಬಂದಳು. ‘ತಡಿ, ತಡಿ….’ ಎಂದು ಕೂಗಿದಳು, ಆದರೆ ಅಷ್ಟರಲ್ಲಿ ಅವನು ಹೊರಟು ಹೋಗಿದ್ದ. ಅವಳ ಮುಖ ಮುದುರಿದ ಕಾಗದದಂತೆ ಆಯಿತು. ‘ಅವನು ಹೋಗುವಾಗ ನನಗೆ ಮುತ್ತಿಕ್ಕುವುದನ್ನು ಮರೆತ’ ತನಗೆ ಆದ ನೋವಿನಿಂದ ನಡುಗುವ ಧ್ವನಿಯಲ್ಲಿ ಪಿಸುಗುಟ್ಟಿದಳು. ಅವಳು ಅವನಿಗೆ ಕರೆ ಮಾಡಿ, ‘ನೀನು ನನಗೆ ಮುತ್ತಿಡದೇ ಹೋದೆ’ ಆರೋಪ ಮಾಡುವವಳಂತೆ ಹೇಳಿದಳು. ‘ನನ್ನನ್ನು ಕ್ಷಮಿಸು, ನನ್ನ ಮುದ್ದಿನ ಮಗಳೆ’ ಅವನು ಪರಿತಪಿಸುವ ಧ್ವನಿಯಲ್ಲಿ ಹೇಳಿದ. ಅವಳು ದೊಡ್ಡ ಹೆಂಗಸಿನಂತೆ ‘ಸರಿ ಬಿಡು’ ಎಂದು ಕರೆಯನ್ನು ಕಡಿತಗೊಳಿಸುತ್ತಾ ಹೇಳಿದಳು. ನಂತರ ಸಿಡುಕಿನಿಂದ ತಿಂಡಿ ನುಂಗಿದಳು, ತನ್ನ ಶೂಗಳನ್ನು ಧರಿಸಿದಳು, ತನ್ನ ಶಾಲೆಯ ಬ್ಯಾಗ್ ತೆಗೆದುಕೊಂಡು ಬಾಗಿಲಿನಿಂದ ಹೊರಗೆ ನಡೆದಳು. ಮನಸ್ಸಿನ ಭಾರಕ್ಕೆ ಅವಳ ಭುಜಗಳು ಕುಸಿದವು. ಅವಳು ಮೆಟ್ಟಿಲುಗಳನ್ನು ಇಳಿಯುತ್ತಿದ್ದಂತೆ ಕಾರು ಮನೆಯ ಹೊರಗಿನ ಪೆÇರ್ಟಿಕೋಗೆ ಬಂತು. ಅವನು ಕಾರ್‌ನಿಂದ ಹೊರಗೆ ಬಂದ. ಅವಳು ಅವನೆಡೆಗೆ ಓಡಿದಳು. ಅವಳ ಮುಖವು ಕ್ರಿಸಮಸ್ ಟ್ರೀಯಂತೆ ಬೆಳಗಿತು. ‘ನನ್ನನ್ನು ಕ್ಷಮಿಸು ಕಂದಾ, ನಾನು ಮರೆತೆ’ ಅವನು ಅವಳನ್ನು ಮೇಲಕ್ಕೆತ್ತುತ್ತಾ ಹೇಳಿದ. ಪ್ರೀತಿಯ ಮುತ್ತಿನ ಮಳೆಗೈದ. ಅವಳು ಏನೂ ಹೇಳಲಿಲ್ಲ. ಮಂದಹಾಸದ ಮುಗುಳ್ನಗೆ ಬೀರಿದಳು. ಹದಿನೈದು ವರ್ಷಗಳ ನಂತರ- ಆ ದಿನ ಆತ ಆಫೀಸಿಗೆ ತಡವಾಗಿ ಬಂದಿದ್ದ ಎಂದು ಯಾರೂ ನೆನಪಿಸಿಕೊಳ್ಳುತ್ತಿಲ್ಲ. ಆದರೆ ಆ ಚಿಕ್ಕ ಬಾಲಕಿ ತನ್ನ ತಂದೆ ಕೇವಲ ತನಗೆ ಪ್ರೀತಿಯ ಮುತ್ತಿಡುವುದಕ್ಕಾಗಿಯೇ ಬಹಳ ದೂರದ ಆಫೀಸಿನಿಂದ ಮರಳಿ ಕಾರನ್ನು ಚಲಾಯಿಸಿಕೊಂಡು ಹಿಂತಿರುಗಿ ಬಂದಿದ್ದನೆಂದು ಇನ್ನೂ ಮರೆತಿಲ್ಲ. ==================================================== ಪರಿಚಯ: ವೃತ್ತಿಯಲ್ಲಿ ಪುಸ್ತಕ ಪ್ರಕಾಶಕ, ಷೇರು ಮಾರುಕಟ್ಟೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ. ಆಗಾಗ್ಗೆ ತೋಚಿದ್ದು ಗೀಚುತ್ತೆÃನೆ. ಉಳಿದಂತೆ ಎಲ್ಲರೊಳಗೊಂದಾದ ಮಂಕುತಿಮ್ಮ.

ಸಣ್ಣಕಥೆ Read Post »

ಕಥಾಗುಚ್ಛ

ಕಥಾಗುಚ್ಛ

ಜಿ.ಹರೀಶ್ ಬೇದ್ರೆ ಯಾಣ ಬಿಸಿಲು ಬೆವರಿಗೆ ಹೊಂದಿಕೊಂಡು ಬೆಳೆದಿದ್ದ ಮೈಮನಗಳಿಗೆ ಮೊದಲ ಬಾರಿಗೆ ಥರಗುಟ್ಟುವ ಚಳಿಯಲ್ಲಿ ಹೊದೆಯಲು ಏನೂ ಇಲ್ಲದೆ ರಾತ್ರಿಯೆಲ್ಲಾ ಮುದುಡಿಕೊಂಡೇ ಮಲಗಿ, ಪುಣ್ಯಾತ್ಮರ ಮನೆಯೊಂದರಲ್ಲಿ ತಾಮ್ರದ ಹಂಡೆಯಲ್ಲಿ ಹದವಾಗಿ ಕಾಯಿಸಿದ ನೀರನ್ನು  ಸ್ನಾನ ಮಾಡುವ ಅವಕಾಶ ಸಿಕ್ಕಿತು.  ಒಮ್ಮೆ ಹಬೆಯಾಡುವ ಬಿಸಿನೀರು ಮೈಮೇಲೆ ಬಿದ್ದೊಡನೆ ಹಿಂದಿನ ದಿನ ನಡೆದೂ ನಡೆದು ಸುಸ್ತಾಗಿದ್ದ ನೋವೆಲ್ಲಾ ಅರ್ಧ ಮಾಯವಾದಂತಾಗಿತ್ತು. ಬಚ್ಚಲು ಮನೆಯೂ ಹಿಂಭಾಗದಲ್ಲಿ ಇದದ್ದರಿಂದ ಎಲ್ಲರೂ ಸ್ನಾನ ಆಗುವ ತನಕ ಅಲ್ಲೇ ಹಿಂದೆ ಗಿಡಮರಗಳನ್ನು ನೋಡುತ್ತಾ, ಮಾತನಾಡುತ್ತಾ ನಿಂತಿದ್ದೆವು. ನಮ್ಮೆಲ್ಲರ ಸ್ನಾನ ಆದದ್ದನ್ನು ಗಮನಿಸಿ ಒಳಗಿನಿಂದ ತಿಂಡಿ ತಿನ್ನಲು ಕರೆ ಬಂತು. ನಾವು ಮನೆಯ ಒಳ ಹೋಗಿ ಹಾಲಿನಲ್ಲಿ ಕೂರುವ ಮೊದಲೇ ಬಾಳೆ ಎಲೆಯಲ್ಲಿ ಬಿಸಿಬಿಸಿ ಉಪ್ಪಿಟ್ಟು, ಅದರ ಮೇಲೆ ಗಟ್ಟಿಯಾದ ತುಪ್ಪ, ಜೊತೆಗೆ ಮಜ್ಜಿಗೆ ಮೆಣಸು ಮತ್ತು ಒಂದೆರಡು ಬಗೆಯ ಸಂಡಿಗೆಗಳು  ಅಲಂಕರಿಸಿದ್ದರು.  ಅದನ್ನು ನೋಡಿದೊಡನೆ ಹೆಚ್ಚುಕಮ್ಮಿ ನಿನ್ನೆ ಮಧ್ಯಾಹ್ನದಿಂದಲೇ ಖಾಲಿ ಇದ್ದ ಹೊಟ್ಟೆಗಳು ಬೇಗ ಬೇಗ ಎಂದು ಅವಸರಿಸತೊಡಗಿದವು. ಆಶ್ಚರ್ಯ ಎಂದರೆ ಇಲ್ಲಿಯವರೆಗೆ ಉಪ್ಪಿಟ್ಟು ಬೇಡವೇ ಬೇಡ ಎನ್ನುತ್ತಿದ್ದ ಇಬ್ಬರೂ ಎಲ್ಲರಿಗಿಂತ ಮೊದಲು ಎಲೆಯ ಮುಂದೆ ಕುಳಿತಿದ್ದರು. ಹಸಿದವನಿಗೆ ಹಳಸಿದ ಅನ್ನವೇ ಮೃಷ್ಟಾನ್ನ ಆಗುವಾಗ ಬಿಸಿಬಿಸಿ ಉಪ್ಪಿಟ್ಟು ಗಂಟಲಲ್ಲಿ ಇಳಿಯದೆ ಇರಲು ಸಾಧ್ಯವೇ.  ಎಲ್ಲರೂ ಗಂಟಲು ಬಿರಿಯುವಂತೆ ತಿಂದೆವು. ತಿಂಡಿ ತಿಂದು ಸ್ವಲ್ಪ ಹೊತ್ತಿನ ನಂತರ ಹೊರಡುತ್ತೇವೆ ಎಂದು ಎದ್ದಾಗ ಮನೆಯವರು ಕಾಫಿ ಕುಡಿದು ಹೊರಡುವಂತೆ ಹೇಳಿದರು. ನಮಗೂ ಇದು ಬೇಕೆನಿಸಿದ್ದರಿಂದ ದೂಸ್ರಾ ಮಾತನಾಡದೆ ಮತ್ತೆ ಕುಳಿತೆವು. ಅಡುಗೆಮನೆಯಿಂದ ನಾವು ಕುಳಿತಿದ್ದ ಹಾಲಿಗೆ ಕಾಫಿ ಬರುವ ಮುನ್ನವೇ ಅದರ ಘಮ ನಮ್ಮನ್ನು ಸುತ್ತುವರೆದಿತ್ತು.   ನಾವು ದಿನಕ್ಕೆ ನಾಲ್ಕೈದು ಬಾರಿ ಕುಡಿಯಬಹುದಾದಷ್ಟು ಕಾಫಿಯನ್ನು ಒಂದೇ ಲೋಟದಲ್ಲಿ ಕೊಟ್ಟಿದ್ದರು. ಈಗಾಗಲೇ ಅದರ ಪರಿಮಳಕ್ಕೆ ಸೋತು ಶರಣಾಗಿದ್ದರಿಂದ ಯಾರೊಬ್ಬರೂ ಬೇಡವೆನ್ನದೆ ಖುಷಿಯಿಂದ ಗುಟುಕರಿಸುವಾಗ ರಾಘು ತೋರು ಬೆರಳಿಂದ ಎದುರಿಗೆ ತೋರಿಸುತ್ತಾ ಏಯ್… ಏಯ್… ಎಂದು ವಿಚಿತ್ರವಾಗಿ ಧ್ವನಿ  ಮಾಡುತ್ತಾ ಜೋರಾಗಿ ನಡುಗತೊಡಗಿದ. ನಾವು ಇವನಿಗೆ ಏನಾಯ್ತು ಎಂದು ನೋಡುವಾಗಲೇ ಕೈಯಲ್ಲಿದ್ದ ಕಾಫಿಯನ್ನು ಮೈಮೇಲೆ ಚೆಲ್ಲಿಕೊಂಡ. ನಾವೆಲ್ಲ ತಕ್ಷಣ ಎದ್ದು ಅವನ ಬಳಿಬಂದು ಏನೂ ಎಂದು ಕೇಳಿದರೆ, ಏನೊಂದೂ ಮಾತನಾಡದೆ ಎದುರಿನ ಗೋಡೆಯನ್ನೇ ನೋಡುತ್ತಿದ್ದ. ನಾವುಗಳು ಅವನು ನೋಡುತ್ತಿದ್ದ ಕಡೆ ನೋಡಿದಾಗ ನಮ್ಮೆಲ್ಲರ ಹೃದಯಗಳ ಬಡಿತವೂ ಬುಲೆಟ್ ಟ್ರೈನ್  ವೇಗಕ್ಕಿಂತ ಜೋರಾಗಿ ಬಡಿದುಕೊಳ್ಳಲಾರಂಭಿಸಿದವು.ಸುರೇಶ್ ಹೆಬ್ಳೀಕರ್, ದೇವರಾಜ್ ಮುಂತಾದವರು ನಟಿಸಿದ್ದ ಚಿತ್ರವೊಂದು ಬಿಡುಗಡೆಯಾಗಿತ್ತು. ಅದರಲ್ಲಿ ಯಾಣವನ್ನು ಬಹಳ ಚೆನ್ನಾಗಿ ತೋರಿಸಿದ್ದರು. ಆ ಸಿನಿಮಾ ನೋಡಿದ ಮೇಲೆ ನಾವು ಒಮ್ಮೆ ಅಲ್ಲಿಗೆ ಹೋಗಿ ಬರಬೇಕು ಎಂದುಕೊಂಡಿದ್ದೆವು. ಅದೇ ಸಂದರ್ಭದಲ್ಲಿ  ನಮ್ಮ ಪರಿಚಯದ ಪದ್ಮಕುಮಾರಿಯವರು ತಮ್ಮವರೊಂದಿಗೆ ಅದೇ ತಾಣಕ್ಕೆ ಹೋಗಿ ಬಂದು ವಾರಪತ್ರಿಕೆಯೊಂದರಲ್ಲಿ ಸಚಿತ್ರ ಚಾರಣ ಬರಹವನ್ನು ಬರೆದಿದ್ದರು. ಅದನ್ನು ಓದಿದ ಮೇಲಂತೂ ಹೋಗಿಬರಲೇ ಬೇಕೆಂದು ಸಮಾನ ಮನಸ್ಕರಾದ ಎಂಟು ಜನ ಗೆಳೆಯರು ಆಗಿನ ಮೆಟಡೋರನ್ನು ಎರಡು ದಿನದ ಬಾಡಿಗೆಗೆ ಗೊತ್ತುಮಾಡಿಕೊಂಡು ಹೊರಟೆವು. ಹೊರಡುವ ಮೊದಲು ಈಗಾಗಲೇ ಅಲ್ಲಿಗೆ ಹೋಗಿಬಂದಿದ್ದ ಪರಿಚಯದ ಲೇಖಕಿಯನ್ನು ಭೇಟಿಮಾಡಿ ನಾವೂ ಹೋಗಿಬರಲು ಬೇಕಾದ ಮಾಹಿತಿಯನ್ನು ಪಡೆದಿದ್ದೆವು.ಅವರ ಮಾರ್ಗದರ್ಶನದಂತೆ ಮೊದಲ ದಿನ ಹರಿಹರದಲ್ಲಿ ಹರಿ ಮತ್ತು ಹರನನ್ನು ಒಂದೇ ಶಿಲೆಯಲ್ಲಿ ಕೆತ್ತಿರುವ ಹರಿಹರೇಶ್ವರ ದೇವಾಲಯವನ್ನು ನೋಡಿ, ಬನವಾಸಿಯಲ್ಲಿ ಮಧುಕೇಶ್ವರ ಮತ್ತು  ಮಂಜುಗುಣಿಯಲ್ಲಿ ವೆಂಕಟರಮಣನ ದರ್ಶನ ಮಾಡಿಕೊಂಡು ಶಿರಸಿ ಬಂದಾಗ ಸಂಜೆಯಾಗಿತ್ತು. ಅಲ್ಲೇ  ದೇವಸ್ಥಾನದ ಛತ್ರದಲ್ಲಿ ಉಳಿದುಕೊಂಡು, ಆ ದಿನ ಸಂಜೆಯೇ ಶಿರಸಿ ಮಾರಿಕಾಂಬೆಯ ದರ್ಶನ ಮಾಡಿ, ಪೂಜೆಯನ್ನು ಮಾಡಿಸಿದೆವು.  ಮಾರನೇ ದಿನ ಬೆಳಿಗ್ಗೆ ಬೇಗನೇ ಹೊರಟು ಯಾಣ ನೋಡಬೇಕಾದ್ದರಿಂದ ಮತ್ತು ಮುಂಜಾನೆಯಿಂದ ಚೆನ್ನಾಗಿ ಸುತ್ತಿದ್ದರಿಂದ ರಾತ್ರಿ ಬೇಗನೆ ಮಲಗಿದೆವು.ಮುಂಜಾನೆ ಆರುವರೆಗೆಲ್ಲಾ ಎಲ್ಲರೂ ಸಿದ್ದರಾಗಿ  ಹೋಟೆಲಿಗೆ ಬಂದು ಕಾಫಿ ಕುಡಿದು ಎಲ್ಲರಿಗೂ ಸಾಕಾಗುವಷ್ಟು ಇಡ್ಲಿಯನ್ನು ಕಟ್ಟಿಸಿಕೊಂಡು ಕುಮಟಾ ಮಾರ್ಗವಾಗಿ ಯಾಣದತ್ತ ಪಯಣ ಬೆಳೆಸಿದೆವು. ಸುಮಾರು ನಲವತ್ತು ಕಿ.ಮೀ. ದೂರ ಬಂದ ಮೇಲೆ ಪದ್ಮಕುಮಾರಿಯವರು ಹೇಳಿದಂತೆ ಬಲಭಾಗದಲ್ಲಿ ಯಾಣಕ್ಕೆ ದಾರಿ ಎಂಬ ಫಲಕ ಕಾಣಿಸಿತು.  ಅದು ರಸ್ತೆಯಿಂದ ಅಷ್ಟು ದೂರಕ್ಕೆ ಮಾತ್ರ ವಿಶಾಲವಾದ ದಾರಿಯಿದ್ದು, ಅಲ್ಲೇ ಎಣಿಸಿದಂತೆ ನಾಲ್ಕು ಚಿಕ್ಕಚಿಕ್ಕ ಮನೆಗಳಿದ್ದವು.  ಅಲ್ಲಿಂದ ಮುಂದೆ ಕಾಲು ದಾರಿ ಮಾತ್ರವಿದ್ದು ನಡೆದುಕೊಂಡೇ ಮುಂದೆ ಸಾಗಬೇಕಿತ್ತು.  ಲೇಖಕಿ ಇದನ್ನು ಮೊದಲೇ ತಿಳಿಸಿದ್ದರೂ, ನಾವು ಮತ್ತೊಮ್ಮೆ ಅಲ್ಲೇ ಮನೆಯ ಬಳಿಯಿದ್ದ ವಯಸ್ಕರೊಬ್ಬರನ್ನು ಯಾಣಕ್ಕೆ ಹೋಗುವ ದಾರಿ ಇದೇನಾ ಎಂದು ಕೇಳಿ ಖಾತ್ರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಹಾಕಿದ್ದೇವು.  ಅವರ ಅನುಮತಿಯೊಂದಿಗೆ ನಮ್ಮ ಮೆಟಡೋರನ್ನು ಅಲ್ಲೇ ನಿಲ್ಲಿಸಿ, ಕಟ್ಟಿಸಿಕೊಂಡಿದ್ದ ತಿಂಡಿ ಪೊಟ್ಟಣಗಳೊಂದಿಗೆ ಹೊರಟೆವು.ನಮ್ಮಲ್ಲಿ ಸುತ್ತಮುತ್ತ ಎತ್ತಾ ನೋಡಿದರೂ, ಬೆಟ್ಟ ಗುಡ್ಡಗಳ ಸಾಲು, ಅಲ್ಲಿ ಚಿತ್ರವಿಚಿತ್ರವಾದ  ಕಲ್ಲು, ಬಂಡೆಗಳನ್ನು ನೋಡಿದ್ದ ನಮಗೆ, ಇಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಹಚ್ಚಹಸಿರಿನ ಗಿಡ ಮರಗಳು. ಜೊತೆಗೆ ಅದರಲ್ಲಿ ಕುಳಿತೋ ಅಥವಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಚ್ಛಂದವಾಗಿ ಹಾರುತ್ತಾ ಉಲಿವ ಹಕ್ಕಿಗಳ ಇಂಚರ.  ಇದರೊಂದಿಗೆ ನಾನೇನೂ ಕಮ್ಮಿ ಎನ್ನುವಂತೆ ಎಲ್ಲೆಲ್ಲಿಂದಲೋ ಜುಳುಜುಳು ಹರಿಯುವ ನೀರಿನ ನಿನಾದ.  ಇದನ್ನೆಲ್ಲ ನೋಡುತ್ತ, ಕೇಳುತ್ತಾ ಸಾಗುತ್ತಿದ್ದರೆ, ಸ್ವರ್ಗವೇ ಭೂಮಿಗಿಳಿದು ಬಂದಂತೆ ಭಾಸವಾಗುತ್ತಿತ್ತು. ಹಾಗೇ ಖುಷಿಯಿಂದ ಕೂಗುತ್ತ, ಕುಣಿಯುತ್ತಾ ಐದಾರು  ಕಿ.ಮೀ. ನಡೆದು ಸಾಗಬೇಕಾದ  ದಾರಿಯಲ್ಲಿ  ಮೂರು ಕಿ.ಮಿ. ಬಂದಾಗ ಅಡ್ಡವಾಗಿ ನದಿಯೊಂದು ಸಿಕ್ಕಿತು. ಆಗಲೇ ಸಮಯ ಹತ್ತು ಗಂಟೆಯಾಗಿತ್ತು ಜೊತೆಗೆ ಹೊಟ್ಟೆ ಚುರುಗುಡಲಾರಂಭಿಸಿತ್ತು. ಹಾಗಾಗಿ ಅಲ್ಲೇ ಕುಳಿತು ಕಟ್ಟಿಸಿಕೊಂಡು ಬಂದಿದ್ದ ತಿಂಡಿಯನ್ನು ತಿಂದು ನದಿಯ ನೀರನ್ನೇ ಕುಡಿದೆವು. ನಡೆದು ಉರಿ ಎದಿದ್ದ ಕಾಲುಗಳನ್ನು ನದಿಯ ತಣ್ಣನೇ ನೀರಲ್ಲಿ ಬಿಟ್ಟುಕೊಂಡು ಕುಳಿತ್ತಿದ್ದರಿಂದ ಮನಸಿಗೆ ಹಿತ ನೀಡುತ್ತಿತ್ತು.  ನಾವು ನೋಡಲು ಬಂದಿದ್ದ ಜಾಗ ತಲುಪಲು ಇನ್ನೂ ಎರಡರಿಂದ ಮೂರು ಕಿ.ಮಿ. ನಡೆಯಬೇಕಿತ್ತು.  ಹಾಗಾಗಿ ಅಲ್ಲಿ ತಡಮಾಡದೆ ಹೊರಟೆವು. ನದಿ ದಾಟಿ ಸ್ವಲ್ಪ ಮುಂದೆ ಬಂದನಂತರ ಕಾಲುದಾರಿಯಲ್ಲಿ ಹುಲ್ಲು, ಗಿಡಗಂಟಿಗಳು ಬೆಳೆದು ದಾರಿ ಕಾಣದಂತಾಗಿತ್ತು. ನಾವು ಹೋಗುತ್ತಿರುವ ದಾರಿ ಸರಿಯಿದೆಯೇ ಎಂದು ಕೇಳಲು ಅಲ್ಲಿ ಯಾರೆಂದರೇ ಯಾರು ಇರಲಿಲ್ಲ. ಲೇಖಕಿಯವರು ಕಾಲುದಾರಿಯಲ್ಲಿ ಸೀದಾ ನಡೆಯುತ್ತಾ ಹೋದರೆ ಆಯಿತು ಎಲ್ಲಿಯೂ ತಿರುವುಗಳು ಬರುವುದಿಲ್ಲ ಎಂದು ಹೇಳಿದ್ದರಿಂದ ಅದೇ ದಾರಿಯಲ್ಲಿ ನಡೆಯತೊಡಗಿದೆವು. ನಡೆಯುತ್ತಾ ಮೂರು ಕಿ.ಮಿ.ಗಿಂತ ಮುಂದೆ ಬಂದರು ಅಘೋರೇಶ್ವರ ದೇವಾಲಯವಾಗಲಿ, ಅದರ ಬಳಿ ಇರುವ ಶಿಖರಗಳಾಗಲ್ಲಿ ಕಾಣಲೇ ಇಲ್ಲ. ಏನು ಮಾಡುವುದೆಂದು ಯೋಚಿಸುತ್ತಾ ಹೆಜ್ಜೆ ಹಾಕುವಾಗಲೇ ಇದ್ದಕ್ಕಿದ್ದಂತೆ ಬಿಂದು ಮತ್ತು ಲೋಕು ಜೋರಾಗಿ, ವೆಂಕಣ್ಣ ಹಿಂದೆ ನಿನ್ನ ಪ್ಯಾಂಟ್ ನೋಡಿಕೋ ಎಂದರು. ನೋಡಿದರೆ, ಮಂಡಿಯಿಂದ ಕೆಳಭಾಗದಲ್ಲಿ ರಕ್ತ ಮಾಯವಾಗಿತ್ತು. ನಾವು ಏನಪ್ಪಾ ಎಂದುಕೊಳ್ಳುವಾಗಲೇ ವಾಹಿದ್, ಹೆದರಬೇಡ ವೆಂಕಣ್ಣ ಪ್ಯಾಂಟನ್ನು ಸ್ವಲ್ಪ ಮಾಡಿಸು ಎಂದವನು, ತಾನೇ ಹತ್ತಿರ ಬಂದು ಆ ಕೆಲಸಮಾಡಿ ಯಾವಾಗಲೋ ಅವನ ಮಂಡಿಯವರೆಗೆ ಹತ್ತಿ ರಕ್ತ ಹೀರುತ್ತಿದ್ದ ಜಿಗಣೆಯನ್ನು ತೋರಿಸಿ, ಅದನ್ನು ಬೆರಳಿನಿಂದ ಕೀಳಲು ನೋಡಿದ. ಅದು ಸಾಧ್ಯವಾಗದಾಗ, ತನ್ನ ಜೇಬಿನಿಂದ ಲೈಟರ್ ತೆಗೆದು ಅದರ ಬುಡಕ್ಕೆ ಉರಿ ಹಿಡಿದ.  ಆಗ ತಕ್ಷಣವೇ ಜಿಗಣೆ ಕೆಳಗೆ ಬಿತ್ತು. ಆದರೆ ವೆಂಕಟೇಶ್ ಕಾಲಿನಿಂದ ರಕ್ತ ಜಿನುಗುತ್ತಿತ್ತು. ಅದಕ್ಕೆ ಅರವಿಂದ್ ಅಲ್ಲೇ ಬೆಳೆದ ಗಿಡಗಳಲ್ಲಿ ಹುಡುಕಾಡಿ ಯಾವುದೋ ಸೋಪನ್ನು ತಂದು ಜಜ್ಜಿ ಗಾಯವಾದ ಜಾಗಕ್ಕೆ ಸವರಿದ. ಏನಾಶ್ಚರ್ಯ, ಸುರಿಯುತ್ತಿದ್ದ ರಕ್ತ ಎರಡೇ ನಿಮಿಷದಲ್ಲಿ ನಿಂತಿತು. ಆಗ ಅವನು ಮುಖದಲ್ಲಿ ಕಾಣುತ್ತಿದ್ದ ಹೆಮ್ಮೆ ನಿಜಕ್ಕೂ ನೋಡುವಂತ್ತಿತ್ತು. ಇದೆಲ್ಲಾ ಆದ ನಂತರ ಮತ್ತೆ ಮುಂದಕ್ಕೆ ಹೆಜ್ಜೆ ಹಾಕಿದೆವು. ಹೀಗೇ ನಡೆಯುತ್ತಾ ಮತ್ತೆ ಎರಡು ಕಿ.ಮಿ. ಬಂದರು, ಅಂದುಕೊಂಡ ಸ್ಥಳದ ಸುಳಿವೇ ಕಾಣಲಿಲ್ಲ. ಆಗ ಸಮಯ ಮೂರು ಗಂಟೆ. ಹೊಟ್ಟೆ ಹಸಿಯಲಾರಂಭಿಸಿತ್ತು. ಜೊತೆಗೆ ನಾವು ದಾರಿ ತಪ್ಪಿದ್ದು ಖಚಿತವಾಗಿತ್ತು. ಏಕೆಂದರೆ ಲೇಖಕಿ ಹೇಳಿದಂತೆ ಮತ್ತು ಸ್ಥಳೀಯ ಮನೆಯಾತ ಹೇಳಿದಂತೆ ನಾವು ಸರಿಯಾದ ದಾರಿಯಲ್ಲಿ ಬಂದಿದ್ದಾರೆ ಹನ್ನೊಂದುವರೆಗೆಲ್ಲಾ ಯಾಣ ತಲುಪಿ ಸಾಕೆನಿಸುವಷ್ಟು ನೋಡಿ ಊಟದ ಸಮಯಕ್ಕೆ ಶಿರಸಿಯಲ್ಲಿ ಇರಬೇಕಾಗಿತ್ತು. ಆದರೆ ಈಗ ಗಂಟೆ  ಮೂರದರೂ ನಮಗೆ ತಿಳಿಯದ ಜಾಗದಲ್ಲಿ ನಿಂತಿದ್ದೆವು.  ಮುಂದೆ ಹೋಗಬೇಕೋ, ಹಿಂದೆ ಹೋಗಬೇಕೋ ತಿಳಿಯದಂತ ಪರಿಸ್ಥಿತಿ.  ಎಲ್ಲರಿಗೂ ಇದೇ ಚಿಂತೆಯಾಗಿ ಪರಸ್ಪರ ಮಾತುಕತೆ ನಿಂತುಹೋಗಿತ್ತು. ಯಾಂತ್ರಿಕವಾಗಿ ನಿಧಾನವಾಗಿ ನಡೆಯುತ್ತಿದ್ದೆವೆ  ಹೊರತು ಯಾಣ ತಲುಪುವ ಭರವಸೆ ಇರಲಿಲ್ಲ. ಯಾವುದೋ ಚಿಂತೆಯಲ್ಲಿ ನಡೆಯುತ್ತಿದ್ದ ಜ್ಯೋತಿ ಮರದ ಬುಡವನ್ನು ಗಮನಿಸದೆ ಎಡವಿಬಿದ್ದ. ಬಿದ್ದವರನ್ನು ಎತ್ತಲು ವೆಂಕಟೇಶ್ ಮತ್ತು ಮೂಸಮಿಲ್ ಮುಂದಾದರು. ಆದರೆ ಅವರ ಸಹಾಯ ಪಡೆಯದೆ ಮೇಲೆದ್ದ ಜ್ಯೋತಿ, ಬೋಳಿ ಮಕ್ಕಳ ಯಾರ ಪ್ರಾಣ ತೆಗಿಬೇಕಂತ ನಮ್ಮನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ. ದಾರಿ ಗೊತ್ತಿಲ್ಲ ಅಂದ್ರು ಮುಂದೆ ಹೋಗ್ತಾನೆ ಇದೀರಾ. ಇನ್ನೂ ನನಾಂತೂ ಬರೋಲ್ಲ. ಬೇಕಿದ್ದರೆ ನೀವೇ ಹೋಗಿ ಎಂದು ಬಾಯಿಗೆ ಬಂದಂತೆ ನಮಗೆಲ್ಲಾ ಬೈಯತೊಡಗಿದ. ಸಾಮಾನ್ಯವಾಗಿ ಜ್ಯೋತಿ ಎಂದಿಗೂ ಈ ರೀತಿ ಆಡಿದವನಲ್ಲ. ಆದರೆ ಮುಂದೇನು ಎಂಬ ಚಿಂತೆ, ಜೊತೆಗೆ ಹೊಟ್ಟೆ ಹಸಿವು ಅವನನ್ನು ಕೆರಳುವಂತೆ ಮಾಡಿತ್ತು. ಅವನು ಹಾಗೆ ಮಾತನಾಡಿದೊಡನೇ ಲೋಕು ಸಿಟ್ಟಿನಿಂದ, ನಾವೇನೂ ನಿನ್ನ ಮನೆಗೆ ಬಂದು, ನೀನು ಬರಲೇ ಬೇಕೆಂದು ಆಮಂತ್ರಣ ಕೊಟ್ಟು ಕರೆದಿಲ್ಲ. ನಿಜ ಹೇಳಬೇಕೆಂದರೆ ನೀನೇ ನಮ್ಮನ್ನು ಹೊರಡಿಸಿದ್ದು ಎಂದು ಜೋರು ಮಾಡಿದ. ಇದು ಜಗಳ ಆಡುವ ಸಮಯವಲ್ಲವೆಂದು, ನಾನು, ರಾಘು, ವಾಹಿದ್, ಬಿಂದು ಎಲ್ಲಾ ಸೇರಿ ಇಬ್ಬರಿಗೂ ಸಮಾಧಾನ ಮಾಡಿದೆವು. ಅವರಿಬ್ಬರೂ ಸಮಾಧಾನವಾಗಿ, ನಾವು ಮುಂದೆ ಹೋಗುವುದೋ ಅಥವಾ ಬಂದು ದಾರಿಯಲ್ಲಿ ಹಿಂದಿರುಗುವುದೋ ಎಂದು ತೀರ್ಮಾನಿಸುವ ವೇಳೆಗೆ ಗಂಟೆ ನಾಲ್ಕಾಗಿತ್ತು. ಆಗಲೇ ಸೂರ್ಯನೂ ತನ್ನ ಅಂದಿನ ಕೆಲಸ ಮುಗಿಸಿ ಮುಳುಗುವ ಆತುರದಲ್ಲಿದ್ದಂತೆ ಕಂಡಿತು. ಏಕೆಂದರೆ ಇದು ಡಿಸೆಂಬರ್ ತಿಂಗಳಾಗಿತ್ತು ಹಾಗಾಗಿ ಬೆಳಕು ಕಮ್ಮಿಯಾಗುತ್ತಾ ಬಂದಿತ್ತು.  ಇದರಿಂದ ಎಲ್ಲರೂ ಬಂದ ದಾರಿಯಲ್ಲಿ ಹಿಂದಿರುಗುವ ನಿರ್ಧಾರಕ್ಕೆ ಬಂದೆವು. ಹಿಂದಿರುಗುವ ನಿರ್ಧಾರವಾದೊಡನೇ, ಅರವಿಂದ್ ಮತ್ತು ವೆಂಕಟೇಶ್ ಬೇಗ ಹೆಜ್ಜೆ ಹಾಕಿ ಇಲ್ಲ ಕತ್ತಲಾಗಿ ಬಿಡುತ್ತದೆ ಎಂದು ವೇಗವಾಗಿ ನಡೆಯತೊಡಗಿದರು. ಉಳಿದವರು ಅವರ ವೇಗಕ್ಕೆ ಹೆಜ್ಜೆ ಹಾಕಲು ಕಷ್ಟವಾಗುತ್ತಿತ್ತು. ಅರ್ಧ ದಾರಿಯೂ ಬಂದಿರಲಿಲ್ಲ, ರಾಘು ಬುಡಕಡಿದ ಬಾಳೆಗಿಡದಂತೆ ದಬ್ಬನೇ ಬಿದ್ದ. ಮತ್ತೆ ಎಲ್ಲರೂ ಅಲ್ಲಿ ನಿಲ್ಲಬೇಕಾಯಿತು. ಏನೆಂದು ಕೇಳಿದರೆ ತಲೆ ಸುತ್ತುತ್ತಿದೆ ಎಂದು. ಬಹುಶಃ ಹಸಿವಿನಿಂದ ಇದಾಗಿತ್ತು. ಅವನು ಸುಧಾರಿಸಿಕೊಳ್ಳುವರೆಗೂ ಉಳಿದವರು ಏನು ಮಾಡುವಂತಿರಲಿಲ್ಲ. ಹಾಗಾಗಿ ಅವನ ಸುತ್ತಲೇ ಕುಳಿತೆವು. ಪಾಪ ಬಿಂದು, ಅವನ ಕರವಸ್ತ್ರದಿಂದ  ರಾಘು ಮುಖಕ್ಕೆ ಗಾಳಿ ಹಾಕುತ್ತಿದ್ದ.  ಅಲ್ಲೇ ಹತ್ತಿರದಲ್ಲಿ ನೀರು ಹರಿವ ಸದ್ದು ಕೇಳಿ ನಾನು, ಮುಜಾ ಬಾಟಲಿ ತೆಗೆದುಕೊಂಡು ಹೋಗಿ ನೀರು ತಂದು, ರಾಘುಗೆ ಕುಡಿಸಿ ಅವನ ಮುಖವನ್ನು ತೊಳೆದೆವು. ಒಂದರ್ಧ ಗಂಟೆಯಾದಮೇಲೆ ಸ್ವಲ್ಪ ಸುಧಾರಿಸಿಕೊಂಡು ಎದ್ದುನಿಂತು ಹೋಗುವ ಎಂದ.  ಆಗಲೇ ಸೂರ್ಯ ಮರೆಯಾಗಿ ಮಸುಕು ಬೆಳಕು ಮಾತ್ರ ಉಳಿದಿತ್ತು. ಆದರೆ ಈಗ ವೇಗವಾಗಿ ನಡೆಯುವಂತಿರಲಿಲ್ಲ.ಯಾರೊಬ್ಬರ ಮುಖದಲ್ಲೂ ನಗೆ ಇರಲಿಲ್ಲ, ಮಾತುಕತೆಯೂ ನಿಂತುಹೋಗಿ, ಸುಮ್ಮನೆ ಮುಂದೆ ನಡೆಯುತ್ತಿದ್ದ ವಾಹಿದನನ್ನೇ ಎಲ್ಲರೂ ಹಿಂಬಾಲಿಸುತ್ತಿದೆವು. ಬೆಳಕು ಮಾಯವಾಗಿ ದಟ್ಟ ಕತ್ತಲಾವರಿಸಿ  ಮುಂದೆ ಹೆಜ್ಜೆ ಇಡಲು ದಾರಿ ಕಾಣದಾಯಿತು. ನೂರಕ್ಕೆ ನೂರು ಕಾಡಿನ ಕತ್ತಲಲ್ಲಿ ಬಂಧಿಯಾದದ್ದು ಖಾತ್ರಿಯಾಯಿತು.  ಎಲ್ಲಿದ್ದೇವೆ, ಅಕ್ಕಪಕ್ಕ

ಕಥಾಗುಚ್ಛ Read Post »

ಕಥಾಗುಚ್ಛ

ನ್ಯಾನೊ ಕಥೆಗಳು

ಅಂಬ್ರೀಶ್ ಎಸ್ ಹೈಯ್ಯಾಳ್… ಒಂದು– ಬರಗಾಲದಿಂದ ತತ್ತರಿಸಿದ ಜನ ದೇವರ ಮೊರೆ ಹೋದರು. ಮಳೆ ಬರಲೆಂದು ಪ್ರಾರ್ಥಿಸಿದರು. ಆದರೆ ದೇವಸ್ಥಾನದಲ್ಲಿ ಪೂಜಾರಿಯಿಂದ ಪ್ರತಿದಿನವೂ ದೇವರನ್ನು ನೀರಿನಿಂದ ತೊಳೆದು ಹಾಲು ತುಪ್ಪದ ಅಬಿಷೇಕ ಜರಗುತಿತ್ತು. ಎರಡು– ಅದು ಬೇಸಿಗೆ ಸಮಯ.ಅಲ್ಲೊಂದು ಉದ್ಯಾನವನದಲ್ಲಿ. ನೀರಿನ ಕಾರಂಜಿಯಾಟದ ಕಾರ್ಯಕ್ರಮ ಏರ್ಪಾಡಾಗಿತ್ತು. ಹೊಮ್ಮಿಸುವ ಸಂಗೀತಕ್ಕೆ ಬಣ್ಣ ಬಣ್ಣದ ನೀರಿನ ಕಾರಂಜಿ ನೃತ್ಯವಾಡುತಿತ್ತು. ಆದರೆ ಅಲ್ಲಿ ನೋಡುತ್ತಾ ಕುಳಿತ ಪ್ರೇಕ್ಷಕರು ಬಾಯಾರಿಕೆಯಾಗಿ ನೀರಿಲ್ಲದೆ ಪರದಾಡುತಿದ್ದರು. ಮೂರು– ಅಲ್ಲೊಂದು ಕಾಡು. ಕಾಡಿನ ಮದ್ಯೆ ಹರಿಯುವ ನದಿಯೊಂದು ವರ್ಷಪೂರ್ತಿ ತುಂಬಿ ತುಳುಕುತಿತ್ತು. ನದಿಗೆ ಅಡ್ಡಲಾಗಿ ನೀರನ್ನು ಶೇಖರಿಸಲು ಅಲ್ಲೊಂದು ಆಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಕೈಗೊಂಡರು.ಅದಕ್ಕಾಗಿ ಸಾವಿರಾರು ಮರಗಳನ್ನು ಕಡಿದರು. ಈಗ ಅಲ್ಲಿ ನೀರಿನ ಸಂಗ್ರಹಣೆಯಿಲ್ಲದೆ ನದಿ ಬರಿದಾಗಿದೆ.. ನಾಲ್ಕು– ಜನ ಅವನನ್ನು ಹಿಯಾಳಿಸುತಿದ್ದರು. ನೀರೂಪದ್ರವಿ ಎಂದು ಟೀಕಿಸುತಿದ್ದರು. ಸತ್ತರೆ ವಾಸಿ ಎನ್ನುತಿದ್ದರು. ಆದರೆ ಆ ವ್ಯಕ್ತಿ ಸಾಯುವಾಗ ಕಣ್ಣು,ಕಿಡ್ನಿಗಳನ್ನು ದಾನ ಮಾಡಿ ಪ್ರಾಣ ಬಿಟ್ಟ ಐದು– ಅವರಿಬ್ಬರು ಶಿಕ್ಷಣದಲ್ಲಿ ಮ್ಯಾನೆಜ್ಮೆಂಟ್ ಪದವಿ ಪಡೆದಿದ್ದರು. ಹಾಗಾಗಿ ಅವರು ಸಂಸಾರದಲ್ಲಿ ಹೊಂದಿಕೊಳ್ಳುತ್ತಾರೆಂದು ಮದುವೆ ಮಾಡಲಾಗಿತ್ತು.ಆದರೆ ದಾಂಪಥ್ಯಜೀವನ ನಿರ್ವಹಣೆಯಲ್ಲಿ ಅವರು ಸೋತು ವಿಚ್ಛೇದನ ಪಡೆದು ದೂರವಾದರು.

ನ್ಯಾನೊ ಕಥೆಗಳು Read Post »

ಕಥಾಗುಚ್ಛ

ಕಥಾಗುಚ್ಛ

ಹಬ್ಬ ಪ್ರೀತಿಯನ್ನು ಹಬ್ಬಿದರೆ ಸುಮಂಗಳ ಮೂರ್ತಿ ಬಾನುಮತಿ ಈ ಸಾರಿ ವಿಜಯದಶಮಿಯನ್ನು ವಿಶೇಷವಾಗಿ ಆಚರಿಸಬೇಕು, ಅದು ನಮ್ಮ ಕುಟುಂಬದವರಿಗೆ ಮತ್ತು ಬಂದ ಬಂಧು ಬಳಗದವರಿಗೆ ಖುಷಿ ಕೊಡುವ ಹಾಗೆ ಇರಬೇಕು,ಎಂದು ಯೋಚಿಸುತ್ತಿದ್ದ ಅವಳು,ಖರ್ಚಿನ ಬಗ್ಗೆಯೂ ನಿಗಾವಹಿಸಬೇಕಿತ್ತು. ಅವಳು ಒಂದು ಮಧ್ಯಮವರ್ಗದ ಕುಟುಂಬಸ್ಥೆ ಎನ್ನುವುದು ಮರಿಯೋ ಆಗಿಲ್ಲ .          ಬಾನುಮತಿಗೆ ಮದುವೆಯಾದ ನಂತರದ ಮೊದಲನೇ ವಿಜಯದಶಮಿ, ಹಾಗಾಗಿ ಗಂಡನ ಮನೆಯ ಪದ್ಧತಿಗಳು ಅವಳಿಗೆ ಅಷ್ಟಾಗಿ ಏನು ತಿಳಿದಿರಲಿಲ್ಲ. ಆ ಕಾರಣದಿಂದ ಅವಳ ಅತ್ತೆಯ ಸಲಹೆ ಕೇಳಿ ಅವರ ಸಲಹೆಗಳನ್ನು ಪಾಲಿಸಿದರೆ ಮತ್ತಷ್ಟು ಚಂದ ಎಂದು ಯೋಚಿಸುತ್ತಾ,ಸಂಜೆಯ ಕಾಫಿ ತಯಾರಿಸಿ, ಯಾವುದೋ ನ್ಯೂಸ್ ಚಾನಲ್ ನೋಡುತ್ತಿದ್ದ ಮಾವನವರಿಗೆ,ಮೊಬೈಲ್ ನೋಡುತ್ತಿದ್ದ ಗಂಡನಿಗೆ,ಪೂಜೆಗೆಂದು ಹೂ ಕಟ್ಟುತಿದ್ದ ಅತ್ತೆಯವರಿಗೆ ಕೊಟ್ಟು,ತಾನು ಕುಡಿಯುತ್ತಾ ಅತ್ತೆಯ ಬಳಿ ಕೂತಳು.           ಬಾನುಮತಿಯ ಕೆಲಸದ ವೈಖರಿ,ಅವಳ ಅತ್ತೆಗೆ ಬಹಳ ಇಷ್ಟವಾಗಿತ್ತು.ಬಾನುಮತಿ ಮನೆಗೆ ಬಂದ ಸ್ವಲ್ಪ ದಿನಗಳಲ್ಲಿಯೇ ಮನೆಯವರನ್ನೆಲ್ಲ ಬಹಳ ಚೆನ್ನಾಗಿ ಅರ್ಥಮಾಡಿಕೊಂಡು,ಹೊಂದಿಕೊಂಡಿದ್ದಳು. ಸಮಯ ಸಿಕ್ಕಾಗೆಲ್ಲ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದ ಅವಳಿಗೆ, ಪುಸ್ತಕಗಳೆಂದರೆ ಎಲ್ಲಿಲ್ಲದ ಪ್ರೀತಿ. ಅವಳು ಮೊದಲಿನಿಂದಲೂ ಯಾರಿಗಾದರೂ ಉಡುಗೊರೆ ಕೊಡಬೇಕಾದರೆ ಪುಸ್ತಕವನ್ನೇ ಕೊಡುವುದು ಅವಳ ರೂಢಿಯಾಗಿತ್ತು.ಈ ಬಾರಿ ಹಬ್ಬಕ್ಕೆ ತಾಂಬೂಲದೊಂದಿಗೆ ಪುಸ್ತಕಗಳನ್ನ ಕೊಡಬೇಕು,ಆದರೆ ಅತ್ತೆಯವರು ಏನೇಳುತ್ತಾರೋ ಎಂಬ ಯೋಚನೆಯಿಂದ,ಈ ಕುರಿತು ಅತ್ತೆಯ ಜೊತೆ ಮಾತನಾಡಬೇಕೆಂದು ಅವಳ ಮನಸ್ಸಿನಲ್ಲೇ ಆಲೋಚಿಸುತ್ತಿರುತ್ತಾಳೆ.ಅಷ್ಟರಲ್ಲಿಯೇ, ಬಾನು ನಿನ್ನ ತವರಲ್ಲಿ ವಿಜಯದಶಮಿ ಹಬ್ಬವನ್ನ ಹೇಗೆ ಆಚರಿಸುತ್ತಿದ್ದರು? ಎಂದ ಅತ್ತೆಯ ಪ್ರಶ್ನೆಗೆ ಬಾನುಮತಿ,ಹೀಗೆ ಇಲ್ಲಿಯ ರೀತಿಯೇ ಅತ್ತೆ ಶರನ್ನವರಾತ್ರಾರಂಭ ದಿಂದ ವಿಜಯದಶಮಿಯ ವರೆಗೆ ಒಂದೊಂದು ಶಕ್ತಿ ದೇವತೆಯ ಆರಾಧನೆ,ಮುತ್ತೈದೆಯರಿಗೆ ಕುಂಕುಮ ಪ್ರಸಾದ ಕೊಡುವುದು, ನಾನು ಪ್ರತೀ ಬಾರಿ ಕುಂಕುಮದೊಂದಿಗೆ ಕನ್ನಡ ಪುಸ್ತಕಗಳನ್ನು ಕೊಡುತ್ತಿದ್ದೆ.ಅತ್ತೆ ನೀವು ಒಪ್ಪುವುದಾದರೆ ಪುಸ್ತಕಕೊಡುವ ನನ್ನ ಅಭ್ಯಾಸವನ್ನ ಮುಂದುವರಿಸಲೇ ?ಎಂದ ಬಾನುಮತಿಯ ಮಾತಿಗೆ ಖಂಡಿತ ಬಾನು ಇದು ತುಂಬ ಒಳ್ಳೆಯ ಅಭ್ಯಾಸ ಮುಂದುವರೆಸು ಎನ್ನುತ್ತಾ ಮುಗುಳ್ನಗೆ ಬೀರಿದರು.           ಅತ್ತೆಯ ಸಮ್ಮತಿಗೆ ಖುಷಿಯಾದ ಬಾನುಮತಿ,ಮನದಲ್ಲೇ ಅತ್ತೆಯೂ ಅಮ್ಮನಂತೆಯೇ ನೋಡು ಇದಕ್ಕೆ ಹೇಳುವುದು, “ಪ್ರೀತಿ ಹಂಚಬೇಕು ಯಾವುದೇ ನಿರೀಕ್ಷೆ ಇಲ್ಲದೆ,ಆಗ ಹಂಚಿದಕ್ಕಿಂತ ಹೆಚ್ಚಿನ ಪ್ರೀತಿಯೇ ದಕ್ಕುತದೆ ” ನನ್ನ ಈ ಹೊಸ ಬದುಕಿನಲ್ಲೂ ಅಮ್ಮ ಜೊತೆಗಿದ್ದಾಳೆ,ಹೀಗೆ ಮನಸ್ಸಿನಲ್ಲೇ ಖುಷಿಪಡುತ್ತಿದ್ದ ಬಾನುಮತಿಯ ಅರಳಿದ ಮುಖ  ಹೊಳೆಯುವ ಚಂದ್ರನೂ ನಾಚುವಂತೆ ಕಂಗೊಳಿಸುತ್ತಿತ್ತು.              ಬಾಂಧವ್ಯ ಅಂದರೆ ಇದೇ ಅಲ್ಲವೇ,ಪರಸ್ಪರ ಹೊಂದಾಣಿಕೆ. ಬಾನುಮತಿಯ ಉತ್ತಮ ನಡುವಳಿಕೆ ಕನ್ನಡ ಸಾಹಿತ್ಯ ಓದುವುದರಿಂದ ಬಂದಿದೆ ಎಂದರೆ ತಪ್ಪಾಗಲಾರದು.           ಸಾಮಾನ್ಯವಾಗಿ ಒಂದಿಬ್ಬರು ಮೂರು ಹೆಂಗಸರು ಮಾತನಾಡಲು ಶುರುಮಾಡಿದ್ರೆ,ಇಡೀ ಒಂದು ಬಡಾವಣೆಯ ವಿಚಾರಗಳು ಬಿತ್ತರಿಕೆಯಾಗುವುದನ್ನ ಕಾಣಬಹುದು,ಅದರಲ್ಲಿ ಬೇರೊಬ್ಬರ ಕಾಲೆಳೆಯೊ ವಿಷಯಗಳೇ ಹೆಚ್ಚಾನ್ಹೆಚ್ಚು.ಇಂತಹ ಮಾತುಗಳಿಗೆ ಅವಕಾಶ ನೀಡದಂತ ಸ್ವಭಾವದವಳು ಬಾನುಮತಿ.ಹಬ್ಬ ಪ್ರೀತಿಯನ್ನ ಹಬ್ಬಿಸಬೇಕು,ಮನಗಳನ್ನ ತಣಿಸಬೇಕು,ಎನ್ನುವುದಷ್ಟೆ ಇವಳ ಹರಿಕೆ.        ಓ…ಹಬ್ಬದ ತಯಾರಿಯಲ್ಲಿ  ಮಗ್ನಳಾದ ಬಾನು,ಎಲ್ಲವನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿದ್ದಾಳೆ,ಆದರೆ ಚಾಪೆ ಇದ್ದಷ್ಟು ಕಾಲುಚಾಚು ಎಂಬ ಗಾದೆ ಮಾತಿಗೆ ವಿರುದ್ಧವೇನೂ ಅಲ್ಲ. ಮತ್ತು ಅತ್ತೆ ಸೊಸೆ ಇಬ್ಬರು ಹಬ್ಬಕ್ಕೆ ದೂರದ ಬಂಧು ಮಿತ್ರರನ್ನ,ಫೋನ್ ಮೂಲಕ ಕರೆಯುತ್ತಾರೆ,ಮನೆಯ ಅಕ್ಕಪಕ್ಕದವರನ್ನೆಲ್ಲ ಖುದ್ದಾಗಿ ಹೋಗಿ ಕರೆಯುತ್ತಾರೆ.ಇವರ ಪ್ರೀತಿಯ ಕರೆಗೆ ಯಾರು ಬಾರದೆ ಉಳಿಯಲಿಲ್ಲ.           ಬಾನುಮತಿಯ ಮನೆ ಸಂಮೀಪಿಸುತ್ತಿದ್ದಂತೆ, ಅವಳ ಮನೆಯಂಗಳದ ಪುಟ್ಟ ಹಣತೆಗಳ ಬೆಳಗು ನಕ್ಷತ್ರಗಳ ಮಿಂಚಿನಂತೆ ಜಗಮಗಿಸುತ್ತಿರುವುದು ಕಣ್ಣಿಗೆ ದೇವಾಲಯದಂತೆ ಕಾಣುತ್ತದೆ.ಹಾಗೇ ಮನೆಯಂಗಳದ ಹೂವುಗಳರಳಿದ ಹಸಿರು ಕಾಶಿಗೆ ಇಬ್ಬನಿ ಮುತ್ತಿಕ್ಕಿದೆ, ಹಣತೆಗಳ ಬೆಳಗಿಗೆ,ಹೊಂಬಣ್ಣದ ಹನಿಗಳು ಪನ್ನೀರಿನಂತೆ ಜಿನುಗಿ ಮೈಮನ ಪುಳಕಗೊಂಡಂತೆ ಭಾಸವಾಯ್ತು.           ಬಂದವರನ್ನ ಪ್ರೀತಿಯಿಂದ ಮಾತನಾಡಿಸಿ,  ‘ಬನ್ನಿ’ ಬೆಳಕಾಗಲಿ,ಪ್ರೀತಿ ಬದುಕಾಗಲಿ. ಎಂದು ನುಡಿಯುತ್ತಾ ,ಕುಂಕುಮ ಹಚ್ಚಿ, ಪ್ರಸಾದದ ಜೊತೆ ಕನ್ನಡ ಪುಸ್ತಕ ಕೊಟ್ಟು,ಬಿಡುವಿನ ಸಮಯದಲ್ಲಿ ಓದಿ ಎಂದು ಅಕ್ಕರೆ ಹರಿಸಿದ ಬಾನುಮತಿಯ ಮಾತು,ಮತ್ತಷ್ಟು ಹಿತವೆಸಿತ್ತು.     ==================================== ಪರಿಚಯ: Spoken English faculty ಆಗಿ 12 ವರ್ಷಗಳಿಂದ ಕೆಲಸಮಾಡುತ್ತಿದ್ದಾರೆ.ಬಾಲ್ಯದಿಂದಲೇ ಕನ್ನಡ ಸಾಹಿತ್ಯವನ್ನ ಬರೆಯುವ ಮತ್ತು ಓದುವುದು ಹವ್ಯಾಸ. ಕಥೆ, ಕವಿತೆ,ಗಜಲ್,ವಚನ,ಲೇಖನ ಬರಹಗಳನ್ನು ಬರೆಯುತ್ತಿರುತ್ತಾರೆ.2013 ರಲ್ಲಿ Kannada to English dictionary ಬರೆದಿರುವ ಇವರ ಕವನ ಸಂಕಲನ “ಖಾಲಿಹಾಳೆ”ಬಿಡುಗಡೆಗೆ ಸಿದ್ಧವಾಗಿದೆ

ಕಥಾಗುಚ್ಛ Read Post »

You cannot copy content of this page

Scroll to Top