ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಥಾಗುಚ್ಛ

ಕಥಾಯಾನ

ಮರಳಿನ ಕಥೆ ರಮೇಶ್ ನೆಲ್ಲಿಸರ ತುಂಗಾನದಿಯ ನೀರನ್ನು ಕುಡಿದೊ ಅಥವಾ ಬೆಳೆಗಳಿಗೆ ಹಾಯಿಸಿ ಬದುಕು ಕಟ್ಟಿಕೊಂಡವರು ಹಲವರಾದರೆ ತುಂಗೆಯ ಒಡಲ ಬಗೆದು ಮರಳು ತೆಗೆಯುವುದರ ಮೂಲಕ ಸಿರಿತನದ ಸುಪ್ಪತ್ತಿಗೆಯನ್ನು ಅನುಭವಿಸುತ್ತಿರುವವರು ಕೆಲವೇ ಕೆಲವರು, ರಾಜಕೀಯದ ವಾಸನೆ ತುಂಗೆಯ ಎಡಬಲದ ಮರಳು ಕ್ವಾರಿಗಳ ಪ್ರತಿ ಮರಳಿನ ಕಣದಲ್ಲಿ ಹಿಂದೆಯೂ ಇತ್ತು ಈಗಲೂ ಇದೆ. ಅಂದ ಹಾಗೆ ನಾನು ಹೇಳ ಹೊರಟಿದ್ದು ಈ ಮರಳು ಮಾಫಿಯಾದ ಕುರಿತು ಅಲ್ಲ!, ಈ ಮರಳು ದಂಧೆಗೆ ಅಂಟಿಕೊಂಡಿರುವ ಕೆಲಸಗಾರರ ಕುರಿತು, ಆಗ 2002-03 ರ ಸಮಯ ತೀರ್ಥಹಳ್ಳಿಯಿಂದ ಗಾಜನೂರು ಡ್ಯಾಮಿನ ಇಕ್ಕೆಲಗಳಲ್ಲಿಯೂ ಮರಳು ಕ್ವಾರಿಗಳ ಗಿಜಿಗಿಜಿ, ಪ್ರತಿ ಮರಳು ಕ್ವಾರಿಗಳಲ್ಲೂ ನೂರಾರು ಲಾರಿಗಳ ಸಾಲು, ಮರಳಿನ ಧೂಳಿಗೆ ಹಸಿರು ಬಿದಿರುಗಳ ಬಣ್ಣ ಮುಚ್ಚಿಹೋಗಿತ್ತು, ಪ್ರತಿ ಕ್ವಾರಿಯಲ್ಲೂ ಒಂದು ಟೀ- ಕಾಫಿ ಹಾಗೂ ಮೀನಿನ ಊಟದ ಹೋಟೆಲ್ಲುಗಳು. ಡ್ರೈವರ್ರುಗಳು ಲಾರಿಗಳನ್ನು ಲೋಡಿಗೆ ಬಿಟ್ಟು ಅರ್ಧರ್ಧ ಎಣ್ಣೆಯನ್ನು ಏರಿಸಿ ನೆರಳಿನ ಮರದ ಕೆಳಗೆ ಇಸ್ಪೀಟು ಎಲೆಗಳ ಆಟದಲ್ಲಿ ಮಗ್ನರಾಗುತ್ತಿದ್ದದ್ದು ಮಾಮೂಲು ನೋಟವಾಗಿತ್ತು, ಆಟದ ಮಧ್ಯಕ್ಕೆ ಜಗಳಗಳು ಎದ್ದು ಮಾರಿಮಾರಿಯಂತು ಸಾಮಾನ್ಯದ ದೃಶ್ಯ, ಮರಳು ಕ್ವಾರಿಯ ಮಾಲಿಕ ಯಾರೋ ಒಂದಿಷ್ಟು ಓದಿರುವ ಇಬ್ಬರು ಹುಡುಗರನ್ನು ಬಿಟ್ಟು ಮರಳಿನ ರಾಯಾಲ್ಟಿ ವಸೂಲಿ ಮಾಡುಸುತ್ತಿದ್ದರು. ಮರಳು ಕ್ವಾರಿಯ ಮಾಲಿಕರಿಗೂ ಲಾರಿಗಳ ಮಾಲಿಕರ ಒಳ ಒಪ್ಪಂದದಿಂದಾಗಿ ಸರ್ಕಾರದ ಪಾಲು ಸರ್ಕಾರಕ್ಕೆ ಮುಟ್ಟುವುದು ಅಷ್ಟಕಷ್ಟೆ!. ರಾತ್ರಿಹಗಲು ಮರಳು ನಗರಗಳ ಹೊಟ್ಟೆಯನ್ನು ಅನಾಮತ್ತಾಗಿ ಸೇರುತ್ತಲೇ ಇತ್ತು. ಮಂಡಗದ್ದೆಯ ನೆಲ್ಲಿಸರದ ಹದ್ದುಬಂಡೆಯ ಬಳಿ ಹೊಳೆಯ ಆಚೆ ಒಂದು ಮರಳು ಕ್ವಾರಿಯಿತ್ತು, ಅದು ಚಿಕ್ಕಮಗಳೂರಿಗೆ ಸೇರುತ್ತದೆಯಾದರೂ ಮರಳು ತುಂಬುವ ಲಾರಿಗಳು ಮತ್ತು ಅದರ ಮರಳು ಮಾತ್ರ ಶಿವಮೊಗ್ಗ ನಗರದ ಹೊಟ್ಟೆಗೆ ದಕ್ಕುತ್ತಿತ್ತು. ನಾವು ನೆಲ್ಲಿಸರದ ಮೀನುಗಾರಿಗೆ ಮರಳುಕ್ವಾರಿಯಿಂದ ಒಂದಿಷ್ಟು ಅನುಕೂಲವೇ ಇತ್ತು, ನಾವು ಹಿಡಿಯುವ ಮೀನಿಗೆ ಅರ್ಧ ನಶೆಯೇರಿದ ಡ್ರೈವರ್ರುಗಳು ಮತ್ತು ಮರಳು ಹೊರುವವರು ಹೆಚ್ಚಿನ ಬೆಲೆಗೆ ಕೊಂಡುಕೊಳ್ಳುತ್ತಿದ್ದರಿಂದ ನಮಗೆ ಊರೂರು ತಿರುಗಿ ಮೀನು ಮಾರುವ ತಾಪತ್ರಯ ತಪ್ಪಿಹೋಗಿತ್ತು. ನಾನಾಗ ಪಿಯುಸಿ ಓದುತ್ತಿದ್ದೆ ಆಗಾಗ ಅಣ್ಣನ ಜೊತೆಗೆ ಕುಲಕಸುಬಾದ ಮೀನುಗಾರಿಕೆಗೆ ಹೋಗುತ್ತಿದ್ದೆ, ಆಗ ಮೀನು ಹಿಡಿದು ತೆಪ್ಪವನ್ನು ಮರಳಿನ ಮೇಲೆ ಎಳೆದು ಅಲ್ಲೆ ಕ್ವಾರಿಯಲ್ಲಿದ್ದ ಹೋಟೆಲ್ ನ ಬಳಿ ಹೋದರೆ ಸಾಕು ಮೀನಿಗಾಗಿ ಜನ ಮುತ್ತಿಕೊಳ್ಳುತ್ತಿದ್ದರು , ಆದರೆ ಮೀನೊ ಒಂದೋ ಎರಡೋ ಕೆಜಿ ಇರುತ್ತಿದ್ದವು,ಹೆಚ್ಚಿನ ಬೆಲೆಗೆ ಅವನು ಕೊಟ್ಟು ಹೋಟೆಲ್ಲಿನಲ್ಲಿ ತಿಂಡಿ ಕಾಫಿ ಮುಗಿಸುತ್ತಿದ್ದೆವು. ಅಣ್ಣ ಕೆಲವೊಮ್ಮೆ ಪರಿಚಯದ ಡ್ರೈವರ್ರುಗಳ ಜೊತೆ ಯಾವುದಾದರೂ ಲಾರಿಯನ್ನು ಹತ್ತಿಕೊಂಡು ಶಿವಮೊಗ್ಗಕ್ಕೆ ಹೋಗುತ್ತಿದ್ದ, ಮರಳು ಅನ್‍ಲೋಡ್ ಮಾಡಿ ಬರುವ ಬಾ ಎಂದು ಅವನನ್ನು ಕರೆಯುತ್ತಿದ್ದರು ನಾನು ಅವನು ಬರುವವರೆಗೆ ಅಲ್ಲೇ ಹೋಟೆಲ್‍ನಲ್ಲಿ ಕೂತಿರುತ್ತಿದ್ದೆ. ಹೀಗೆ ಹೀಗೆ ಕೂತಿರುವಾಗ ಹಲವು ಜನರು ಮಾತನಾಡಿಸುತ್ತಿದ್ದರು, ಅಣ್ಣನ ಪರಿಚಯದ ಡ್ರೈವರ್ರುಗಳು ಏನಾದರು ತಿಂಡಿ ಕೊಡಿಸುತ್ತಿದ್ದರು, ಹೀಗೆ ಬೇಸಿಗೆ ರಜೆಯಲ್ಲಿ ನನಗೂ ಹಲವರು ಪರಿಚಯವಾದರು ಅವರಲ್ಲಿ ರಾಜಣ್ಣ ಕೂಡ ಒಬ್ಬರು ಮಧ್ಯವಯಸ್ಕರಾದ ಅವರು ನನ್ನನ್ನು ಮಗನಂತೆಯೇ ಕಾಣುತ್ತಿದ್ದರು, ನನಗೋ ಅವರಿವರ ಕಥೆಗಳನ್ನು ಕೇಳುವುದು ಎಂದರೆ ಇಷ್ಟ. ಅವರ ಊರಿನ ಬಗ್ಗೆ ಹಾಗೂ ಮನೆಯವರ ಕುರಿತು ಕೇಳುತ್ತಿದ್ದೆ, ಪ್ರಾರಂಭದಲ್ಲಿ ಏನನ್ನೂ ಹೇಳದಿದ್ದರೂ ನಂತರ ಅವರಾಗೆ ಮಾತನಾಡುತ್ತಿದ್ದರು. ರಾಜಣ್ಣನ ಊರು ಗದಗದ ಬಳಿಯ ರೋಣದ ಬಳಿಯ ಯಾವುದೋ ಹಳ್ಳಿ, ಹದಿನಾರು ತುಂಬುವಾಗಲೇ ಅವರಿಗೆ ಮೊದಲನೇ ಮದುವೆಯಾಯ್ತಂತೆ, ಗಂಡ- ಹೆಂಡತಿ ಇಬ್ಬರೂ ಸಣ್ಣವರು ತಾಯಿ ಇರುವವರೆಗೆ ಎಲ್ಲವೂ ಸರಿಯಿತ್ತು , ಅಬ್ಬೇಪಾರಿ ತಿರುಗುತ್ತಿದ್ದ ಇವರು, ತಾಯಿ ಸತ್ತಾಗ ದುಡಿಯಲು ಹೋಗಲೇ ಬೇಕಾಯ್ತು! ಆದರೆ ಹೊಲದಲ್ಲಿ ಗೇಯಲು ಬರದು ಹಲವು ತಿಂಗಳುಗಳು ಹೀಗೆ ಕಳೆದವು ಹೆಂಡತಿಗೆ ಅದೇನು ಅನಿಸಿತೋ ಏನೋ ಗಾರೆ ಕೆಲಸದವನ ಜೊತೆ ಓಡಿ ಹೋದವಳ ಸುಳಿವೇ ಸಿಗಲಿಲ್ಲ, ಮರ್ಯಾದೆಗೆ ಅಂಜಿ ಸಿಕ್ಕಿದ ಲಾರಿಯನ್ನು ಹತ್ತಿ ಶಿವಮೊಗ್ಗಕ್ಕೆ ರಾಜಣ್ಣ ತಲುಪಿದ, ಅದೇ ಲಾರಿಯ ಕ್ಲೀನರ್ ಆಗಿ ಸೇರಿಕೊಂಡ ,ಮಂಡಿಗೆ ಅಡಿಕೆ ಸಾಗಿಸುವ ಲಾರಿ ಅದು ,ಅವನಿಂದಲೇ ರಾಜಣ್ಣ ಡ್ರೈವಿಂಗ್ ಮಾಡುವುದನ್ನೂ ಕಲಿತ. ಲಾರಿಯ ಮಾಲಿಕ ಅಲ್ಲಿಲ್ಲಿ ಸಾಲಮಾಡಿಕೊಂಡು ಫೈನಾನ್ಸ್ ನಿಂದ ಹಣ ಪಡೆದು ಲಾರಿ ಕೊಂಡಿದ್ದ, ಸರಿಯಾಗಿ ಲಾರಿಯ ಸಾಲದ ಕಂತನ್ನೂ ಕಟ್ಟದೆ ತಪ್ಪಿಸಿಕೊಂಡು ಓಡಾಡುತ್ತಿದ್ದ, “ಇಂದು ಒಮ್ಮೆಗೆ ಎಲ್ಲ ಸಾಲವನ್ನು ತೀರಿಸುತ್ತೇನೆ” ಎಂದು ಹೋದವನು ಹೆಣವಾಗಿಯೇ ಹಿಂದಿರುಗಿದ್ದು. ಶಿವಮೊಗ್ಗದ ತುಂಗಾ ಸೇತುವೆಯ ಮೇಲಿಂದು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದ ಪಾಪ ಆತ. ಹೇಗೂ ಲಾರಿಯನ್ನು ಓಡಿಸಿ ಮಾಲಿಕರ ಮನೆಗೆ ಹಣ ಕೂಡಿಸಿಕೊಡುವುದು ಎಂದು ರಾತ್ರಿ – ಹಗಲು ದುಡಿಯುತ್ತಿದ್ದವನಿಗೆ ಮಾಲಿಕನ ಹೆಂಡತಿಯ ಜೊತೆಗೆ ಸಂಬಂಧವೂ ಬೆಳೆದೋಯ್ತು!, ಎಲ್ಲರಿಗೂ ವಿಷಯ ತಿಳಿದು ರಾಜಣ್ಣನನ್ನು ಓಡಿಸಿದರು. ಅದಾಗಲೇ ಶಿವಮೊಗ್ಗ ಬೆಳೆಯುತ್ತಿತ್ತು ಮರಳು ಲಾರಿಗಳು ಎಗ್ಗಿಲ್ಲದೆ ಓಡಾಡುವುದಕ್ಕೆ ಪ್ರಾರಂಭ ಮಾಡಿದವು, ರಾಜಣ್ಣ ಮಂಡ್ಲಿಯ ಹುಸೇನ್ ಸಾಬರ ಬಳಿ ಕೆಲಸಕ್ಕೆಂದು ಸೇರಿದನಂತೆ , ಒಂದೆರಡು ವರ್ಷದ ಬಳಿಕ ಸಾಬರೆ ಒಂದು ಹುಡುಗಿಯನ್ನು ಇವನಿಗೆ ಕಟ್ಟಿ ಸಕ್ರೆಬೈಲಿನಲ್ಲಿ ಒಂದು ಬಾಡಿಗೆ ಮನೆ ಗೊತ್ತುಮಾಡಿ ಬಿಟ್ಟರು, ರಾಜಣ್ಣ ಆಗಲೇ ಕುಡಿತದ ದಾಸನಾಗಿದ್ದ ಹೆಂಡತಿಗೆ ಹೊಡೆಯುವುದು ಬಡಿಯುವುದು ಮಾಡುತ್ತಿದ್ದ ಈ ನಡುವೆ ಒಂದು ಹೆಣ್ಣು ಮಗವೂ ಆಯಿತು, ಆದರೂ ರಾಜಣ್ಣ ಬದಲಾಗಲಿಲ್ಲ, ಈ ವಿಷಯ ಅದು ಹೇಗೋ ಹುಸೇನ್ ಸಾಬರಿಗೆ ತಿಳಿದು ಇವನಿಗೆ ನಾಲ್ಕು ಬಾರಿಸಿ ಬುಧ್ದಿ ಹೇಳಿ ಹೋದರು. ರಾಜಣ್ಣನಿಗೆ ಅವಮರ್ಯಾದೆ ಆದಂತಾಗಿ ಹೆಂಡತಿಗೂ ಮಗುವಿಗೂ ಕೂಡಿ ಹಾಕಿ ಮನಸೊ ಇಚ್ಚೆ ಹೊಡೆದ, ರಾತ್ರಿ ಬೆಳಗಾಗುವ ವರೆಗೆ ಇವನ ಹೆಂಡತಿ ಮಗುವಿನೊಂದಿಗೆ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿದ್ದಳು. ಪೋಲಿಸರು ರಾಜಣ್ಣನಿಗೆ ಒದ್ದು ನಾಲ್ಕಾರು ನಾಲ್ಕಾರು ತಿಂಗಳು ಜೈಲು ಶಿಕ್ಷೆಯನ್ನೂ ಅನುಭವಿಸಿ ಬಂದವನಿಗೆ ಹುಸೇನ್ ಸಾಬರು ಕೈಬಿಡಲಿಲ್ಲ, ಡ್ರೈವರ್‍ಗಳು ಸಿಗುವುದೇ ಅಪರೂಪವಾಗಿದ್ದರಿಂದ ಮತ್ತೆ ಮರಳುಲಾರಿಯ ಪಯಣವೂ ಆರಂಭವಾಯಿತು, ಹೆಂಡತಿ-ಮಗುವನ್ನು ನೆನೆದು ಈಗಲೂ ಕಣ್ಣೀರಾಗುತ್ತಾರೆ. ದುಡಿದ್ದದ್ದು ಏನು ಮಾಡುತ್ತೀರಿ ಕೇಳಿದೆ? ಕುಡಿಯುವುದು, ತಿನ್ನುವುದು ಸಾಯಲೂ ಆಗದೆ ಬದುಕಲೂ ಆಗದೆ ಇದ್ದೇನೆ ಎಂದು ನಿಟ್ಟುಸಿರು ಬಿಟ್ಟರು. ರಾಜಣ್ಣನ ಹಾಗೆ ಕ್ವಾರಿಯ ಪ್ರತಿಯೊಬ್ಬರದು ಒಂದೊಂದು ಕಥೆ ಸಿಗಬಹುದು, ರಾತ್ರಿ- ಹಗಲು ಕೆಲಸ ಹಲವರು ಮನಗೇ ಹೋಗುತ್ತಿರಲಿಲ್ಲ, ಕ್ವಾರಿಯಲಿ ರಾತ್ರಿ ಕೈಬಳೆಗಳ ಸದ್ದು ಸಾಮಾನ್ಯವಾಯಿತು! , ಅಕ್ರಮ ಮರಳುಗಾರಿಕೆ ಆರಂಭವಾಗಿ ನದಿಯ ಒಡಲಿನಿಂದಲೇ ಮೋಟಾರುಗಳ ಮೂಲಕ ಮರಳು ತೆಗೆಯುವುದು ಆರಂಭವಾಯಿತು, ವರುಷಗಳು ಕಳೆದವು ರಾಜಣ್ಣ ಆತ್ಮಹತ್ಯೆ ಮಾಡಿಕೊಂಡ ಎಂದು ಯಾರೋ ಹೇಳಿದರು, ಏಕೆ? ಹೇಗೆ? ಯಾರ ಬಳಿಯೂ ಉತ್ತರವಿರಲಿಲ್ಲ, ಖಿನ್ನತೆಯೆಂಬ ಖಾಯಿಲೆ ರಾಜಣ್ಣನ ಅಂಗಾಂಗವೆಲ್ಲ ವ್ಯಾಪಿಸಿತ್ತು! ಈಗಲೂ ಮರಳು ಮಾಫಿಯಾದ ಸುದ್ಧಿಗಳು ಪೇಪರ್‍ನಲ್ಲಿ ಕಂಡಾಗ ಹಳೆಯ ನೆನಪುಗಳು ಒತ್ತರಿಸಿ ಬರುತ್ತದೆ. ತುಂಗೆಯ ಒಡಲ ಮರಳ ಬಗೆದು ಶ್ರೀಮಂತರಾಗುತ್ತಿರುವ ಜನರ ನಡುವೆ ಅವರಿಗಾಗಿಯೇ ಹಗಲಿರುಳು ದುಡಿದು ಅಳಿದು ಹೋಗುವವರು ಯಾರ ಲೆಕ್ಕಕ್ಕೂ ಸಿಗುತ್ತಿಲ್ಲ, ಅಂದ ಹಾಗೆ ಇವರ ಲೆಕ್ಕ ಯಾರಿಗೂ ಬೇಕಾಗಿಯೂ ಇಲ್ಲ… ************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕಾಲೋ ಜಗದ್ಭಕ್ಷಕಃ ಅನುಪಮಾ ರಾಘವೇಂದ್ರ ‘ಮಕ್ಕಳು ಮೊಮ್ಮಕ್ಕಳು ಜೊತೆಯಲ್ಲಿದ್ದರೆ ಇಳಿ ವಯಸ್ಸಿನಲ್ಲೂ ವಯಸ್ಸು ಇಳಿಯುತ್ತದೆ’ ಎಂದು ಎಲ್ಲೋ ಓದಿದ್ದು ನೆನಪಾಗಿ ನಸು ನಗು ಬಂತು. ಪಕ್ಕದಲ್ಲೇ ಕುಳಿತಿದ್ದ ಮೊಮ್ಮಗ ಕಿಶನ್ “ಏನಜ್ಜೀ….. ನಗ್ತಾ ಇದ್ದೀರಿ. ನಂಗೂ ಹೇಳಿ” ಎಂದ. “ಪುಟ್ಟಾ … ನೀನು ಹುಟ್ಟಿದ ಮೇಲೆ ಮೊದಲ ಸಲ ಇಷ್ಟು ದಿನ ಈ ಅಜ್ಜಿಯ ಮನೆಯಲ್ಲಿ ಉಳಿದುಕೊಂಡದ್ದಲ್ವಾ …… ನೀನಿಲ್ಲಿರಲು ಕೊರೋನಾ ಒಂದು ನೆಪವಾಯ್ತಲ್ಲಾ ಅಂತ ನೆನೆಸಿ ನಗು ಬಂತು” ಎಂದೆ. “ಹೌದಜ್ಜೀ …… ಹಳ್ಳಿ ಮನೆ ಅಂದ್ರೆ ಇಷ್ಟು ಚೆನ್ನಾಗಿರ್ತದಾ……? ತೋಟ, ಗುಡ್ಡೆ , ತೋಡು, ಕಾಡು …. ವಾಹ್ ಮಜವೇ ಮಜ. ಇಷ್ಟು ಸಲ ಬಂದಾಗಲೂ ಇದೆಲ್ಲ ನೋಡೇ ಇರ್ಲಿಲ್ಲ” ಎಂದ. “ಹೌದು ಪುಟ್ಟಾ… ಹಳ್ಳಿ ಎಂದರೆ ಅಮ್ಮನ ಮಡಿಲಿನ ಹಾಗೆ. ಹಚ್ಚ ಹಸಿರು…. ನಿತ್ಯ ನೂತನ…..” ಎಂದು ನಾನು ನನ್ನಷ್ಟಕ್ಕೇ ಬಡಬಡಿಸುತ್ತಲೇ ಇದ್ದೆ. ಕಿಶನ್ ಅಂಗಳದಲ್ಲಿ ಓಡಾಡುತ್ತಿದ್ದ ನವಿಲುಗಳ ಹಿಂಡನ್ನು, ಕಳ್ಳ ಹೆಜ್ಜೆ ಇಟ್ಟು ಹಿಂಬಾಲಿಸುತ್ತಾ ನಡೆದಿದ್ದ. ಹದಿನೆಂಟನೇ ವಯಸ್ಸಿನಲ್ಲಿ ಈ ಮನೆಗೆ ಕಾಲಿಟ್ಟವಳು ನಾನು. ನಮ್ಮ ಹಾಲಿನಂತಹ ಸಂಸಾರಕ್ಕೆ ಜೇನಾಗಿ ಬಂದವರು ಮಿಥುನ್, ಮೈಥಿಲಿ. ಮಗ ವೈದ್ಯನಾದ. ಮಗಳು ತನ್ನಿಚ್ಛೆಯಂತೆಯೇ ಇಂಜಿನಿಯರ್ ಆದಳು. ಮಗನ ಕೈ ಹಿಡಿದ ಶಮಾ ದಂತ ವೈದ್ಯೆ. ಅನಘಾ , ಅಮೋಘ ಮುದ್ದಾದ ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸವಾಗಿದ್ದು , ವಾರಕ್ಕೊಮ್ಮೆ ಬಂದು ಹೋಗುತ್ತಿದ್ದಾರೆ. ಮೈಥಿಲಿಯ ಗಂಡ ಶ್ರೀರಾಮ ಬೆಂಗಳೂರಿನಲ್ಲಿ ಇಂಜಿನಿಯರ್. ಇತ್ತೀಚೆಗಷ್ಟೇ ಅಮೇರಿಕಾದ ಒಂದು ಒಳ್ಳೆಯ ಕಂಪೆನಿಯಲ್ಲಿ ಉದ್ಯೋಗ ಸಿಕ್ಕಿ ಅಲ್ಲಿಗೆ ಹೋಗಿ ಮನೆ ಮಾಡಿದ್ದಾನೆ . ಮೈಥಿಲಿಯೂ, ಮೊಮ್ಮಗ ಕಿಶನ್ ಇನ್ನೇನು ಸದ್ಯದಲ್ಲಿಯೇ ಅಲ್ಲಿಗೆ ಹೋಗುವವರಿದ್ದರು . ಹೋಗುವ ಮೊದಲು ಊರಿಗೆ ಬಂದವರು ಲಾಕ್ ಡೌನ್ ಕಾರಣದಿಂದ ಇಲ್ಲಿ ಉಳಿಯಬೇಕಾಯ್ತು.ಆರು ವರ್ಷ ವಯಸ್ಸಿನ ಕಿಶನ್ ಪ್ರಶ್ನೆಗಳ ಭಂಡಾರ. “ಅಜ್ಜೀ ಇಲ್ಲಿ ಹಾಲು ಯಾಕೆ ಇಷ್ಟು ರುಚಿಯಾಗಿದೆ…?” ಎಂದು ಕೇಳುತ್ತಾ ಚಪ್ಪರಿಸುತ್ತಾ ಹಾಲು ಕುಡಿಯುತ್ತಿರುವ ಮಗನನ್ನು ನೋಡಿ ಮೈಥಿಲಿಗೂ ಆಶ್ಚರ್ಯವಾಯ್ತು. ಬೆಂಗಳೂರಿನಲ್ಲಿ ಅವನಿಗೆ ಒಂದು ಲೋಟ ಹಾಲು ಕುಡಿಸುವುದೆಂದರೆ ಒಂದು ದೊಡ್ಡ ಸಾಧನೆ. “ಪುಟ್ಟಾ … ಇದು ನಮ್ಮ ದನದ ಹಾಲು. ಶುದ್ಧವಾಗಿರ್ತದೆ. ಅಲ್ಲಿ ಪ್ಯಾಕೆಟ್ ಹಾಲಿಗೆ , ಹಾಲು ಕೆಡದಂತೆ ಇಡಲು ಕೆಲವು ರಾಸಾಯನಿಕಗಳನ್ನು ಸೇರಿಸ್ತಾರೆ” ಎಂದೆ. ಕೊರೋನಾದಿಂದಾಗಿ ಹೊರಗಿನ ತರಕಾರಿ ಸಿಗದೆ ಹೋದರೂ ನಮಗೆ ತರಕಾರಿಗಳ ದಾರಿದ್ರ್ಯಬರಲೇ ಇಲ್ಲ. ಕಿಶನ್ ಗೆ ಇದೂ ಆಶ್ಚರ್ಯದ ಸಂಗತಿಯೇ…. “ಪೇಟೆಗೆ ಹೋಗದೇ ಇದ್ದರೂ ಇಷ್ಟೊಂದು ತರಕಾರಿ ಎಲ್ಲಿಂದ….?” ಹಲಸಿನ ಕಾಯಿ , ಹಲಸಿನ ಬೇಳೆ , ಬಾಳೆಕಾಯಿ , ಬಾಳೆದಂಡು , ಬಾಳೆ ಹೂ , ಬಸಳೆ , ನೆಲಬಸಳೆ, ತೊಂಡೆಕಾಯಿ, ಬೆಂಡೆಕಾಯಿ, ಬದನೆ , ಒಂದೆಲಗ , ವಿಟಮಿನ್ ಸೊಪ್ಪು……ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾನು ದಿನಕ್ಕೊಂದು ಸೊಪ್ಪಿನ ತಂಬುಳಿ ಮಾಡುವುದನ್ನು ನೋಡಿದ ಕಿಶನ್ , ಬಹಳ ಅಸ್ಥೆಯಿಂದ ಕಮ್ಯೂನಿಸ್ಟ್ ಸೊಪ್ಪು ಕೊಯ್ದು ತಂದು ನನ್ನ ಬಳಿ ಹಿಡಿದಿದ್ದ. ಅಜ್ಜನೂ , ಮೊಮ್ಮಗನೂ ತೋಟ , ಗುಡ್ಡೆ ಎಂದು ಸುತ್ತೀ ಸುತ್ತಿ ಮಾವಿನ ಹಣ್ಣು , ಗೇರು ಹಣ್ಣು , ಕುಂಟಾಂಗಿಲ , ನೇರಳೆಹಣ್ಣು , ಮುಳ್ಳು ಹಣ್ಣು ಕೊಯ್ದು ತಿಂದು ಈಗ ಕಾಡಿನ ಹಣ್ಣುಗಳೆಲ್ಲ ಮೊಮ್ಮಗನಿಗೂ ಚಿರಪರಿಚಿತ. ಕೆರೆಯ ನೀರಿನಲ್ಲಿ ಆಟವಾಡುವಾಗ ಅವನ ಪುಟ್ಟ ತಲೆಯೊಳಗೆ “ಈ ನೀರು ಯಾಕೆ ಇಷ್ಟು ಚೆನ್ನಾಗಿದೆ…… ಹೇಗೆ ಇಷ್ಟು ತಂಪಾಗಿದೆ …” ನೂರೆಂಟು ಪ್ರಶ್ನೆಗಳು. ಬೆಂಗಳೂರಿನಲ್ಲಿ ದಿನವಿಡೀ ಶಾಲೆ ,ಟ್ಯೂಷನ್ ಎಂದು ಕಳೆದು ಹೋದರೂ ವಾರಂತ್ಯದಲ್ಲಿ ಮೊಬೈಲ್ , ಕಂಪ್ಯೂಟರ್ , ಟಿ.ವಿ. ಕಿಶನ್ ನ ಪ್ರಪಂಚವಾಗಿತ್ತು. ಇಲ್ಲಿ ಬಂದ ಮೇಲೆ ಗೂಡಿನಿಂದ ಹೊರಗೆ ಬಿಟ್ಟ ಹಕ್ಕಿಯಂತಾಗಿದ್ದ. ಟಿ.ವಿ. , ಕಂಪ್ಯೂಟರ್ ಗಳ ನೆನಪೇ ಇಲ್ಲ. ಮೊಬೈಲ್ ನೆನಪಾಗುತ್ತಿದ್ದುದು ವಿಡಿಯೋ ಕರೆ ಮಾಡಿ ಅಪ್ಪನ ಬಳಿ ಮಾತನಾಡಲು ಮಾತ್ರ. ಅಲ್ಲಿ ಪಿಜ್ಜಾ , ಬರ್ಗರ್ ಇಲ್ಲದೇ ವಾರ ಮುಗಿಯುತ್ತಿರಲಿಲ್ಲ. ಇಲ್ಲಿ ಅದ್ಯಾವುದರ ನೆನಪೂ ಅವನಿಗಿಲ್ಲ. ಆಶ್ಚರ್ಯವೆಂದರೆ ಯಾವಾಗಲೂ ಗಂಟು ನೋವೆಂದು ಎಣ್ಣೆ ಉಜ್ಜಿಸಿಕೊಳ್ಳುತ್ತಿದ್ದ ಯಜಮಾನರಿಗೆ ಈಗ ಹದಿನೈದು ದಿನಗಳಿಂದ ತನಗೆ ನೋವಿದೆ ಎಂಬುದೇ ಮರೆತು ಹೋಗಿತ್ತು. ನನ್ನ ಸೊಂಟ ನೋವೂ ಅಷ್ಟೇ……. ನಾವಿಬ್ಬರೂ ಮತ್ತೆ ಚಿಕ್ಕ ವಯಸ್ಸಿಗೆ ಕಾಲಿಡುತ್ತಿರುವ ಅನುಭವ. ಇದು ನಮ್ಮ ಜೀವನದಲ್ಲಿ ಕೊರೋನಾ ಪರಿಣಾಮದ ಒಂದು ಮುಖ .ಮಗ ಮಿಥುನ್ ನಗರದಲ್ಲಿ ಪ್ರಸಿದ್ಧ ವೈದ್ಯ. ಕೊರೋನಾ ಚಿಕಿತ್ಸೆಗಾಗಿ ಸಿದ್ಧರಾಗಿರುವ ವೈದ್ಯರ ತಂಡದಲ್ಲಿ ಅವನೂ ಒಬ್ಬ . ಸೊಸೆಯೂ , ಮೊಮ್ಮಕ್ಕಳೂ ನಗರದಲ್ಲೇ ಇದ್ದರೂ ಅವರಿಗೂ ಮಗನ ಭೇಟಿ ಇಲ್ಲ. ಪ್ರತಿ ದಿನ ಪ್ರತಿ ಕ್ಷಣ ಆತಂಕ. ನನ್ನ ಮನಸ್ಸು , ನಮ್ಮ ದೇಶ ಸೇವೆಗಾಗಿ ನಿಂತ ಸೈನಿಕರನ್ನು ಒಂದು ಕ್ಷಣ ನೆನೆಸಿಕೊಂಡಿತು. ಮಗ ಒಳ್ಳೆಯ ಕೆಲಸ ಮಾಡುತ್ತಿದ್ದಾನೆಂಬ ಸಮಾಧಾನವಿದ್ದರೂ, ಕೊರೋನಾದ ಕರಾಳ ಛಾಯೆಯನ್ನು ನೆನೆಸಿ ಕೈಕಾಲು ನಡುಗುತ್ತಿತ್ತು. ಈ ಸಮಯದಲ್ಲೇ ಹುಚ್ಚು ಮನಸ್ಸಿನ ಹತ್ತು ರೂಪಗಳ ಪರಿಚಯವಾಗಿದ್ದು. ಬೈಲಿನ ಮಾಲಿಂಗ ಬಂದು ಅಂಗಳದ ಬದಿಯಲ್ಲಿ ನಿಂತು “ಅಕ್ಕಾ” ಎಂದು ಕರೆದ. “ಹೋ…ಮಾಲಿಂಗಾ… ಏನು ವಿಶೇಷ….?” “ಎಂತ ಹೇಳುದು ಅಕ್ಕಾ… ಈ ಕೊರೋನಾ ಮಾರಿ ನಮ್ಮನ್ನು ಸರ್ವನಾಶ ಮಾಡಿತು” ಎಂದು ಗೋಳಾಡಿದ. “ಸಮಾಧಾನ ಮಾಡಿಕೋ ಮಾಲಿಂಗಾ…… ಏನಾಯ್ತು ಹೇಳು…..” ಎಂದೆ. “ನಾನು ದಿನಾ ಕೆಲಸಕ್ಕೆ ಹೋದರೆ ಮಾತ್ರ ನಮ್ಮ ಮನೆ ನಡೆಯುವುದು. ಈಗ ಒಂದು ತಿಂಗಳಾಯ್ತು ಕೆಲಸ ಇಲ್ಲದೆ. ರೇಶನ್ ಇಲ್ಲ. ವಯಸ್ಸಾದ ಅಮ್ಮನ ಔಷಧಿ ಮುಗಿದಿದೆ. ಮಗಳು ತುಂಬಿದ ಬಸುರಿ. ಹೆಂಡತಿಗೂ ಪ್ರೆಶರ್ ಹೆಚ್ಚು ಕಮ್ಮಿ ಆಗ್ತಾ ಇರ್ತದೆ. ಎಂತ ಮಾಡ್ಬೇಕು ಅಂತ ಗೊತ್ತಾಗ್ತಾ ಇಲ್ಲ.” ಎಂದು ಕಣ್ಣೀರಿಟ್ಟ. “ಹೌದು ಮಾಲಿಂಗ . ಹೆಚ್ಚಿನವರ ಸ್ಥಿತಿಯೂ ಹೀಗೇ ಇದೆ. ದೊಡ್ಡ ದೊಡ್ಡ ಬಿಸಿನೆಸ್ ನೆಲ ಕಚ್ಚಿದೆ. ವ್ಯಾಪಾರ , ವಹಿವಾಟುಗಳು ಏರುಪೇರಾಗಿವೆ. ಮಕ್ಕಳ ವಿದ್ಯಾಭ್ಯಾಸ ಎಲ್ಲ ಹಾಳಾಯ್ತು. ಕೊರೋನಾ ಯಾರನ್ನೂ ಬಿಟ್ಟಿಲ್ಲ…..” ಎಂದೆ. “ಅದೆಲ್ಲ ಹೋಗ್ಲಿ. ನನ್ನ ಮನೆ ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿದೆ. ಪಂಚಾಯ್ತಿಂದ ಮನೆ ಕಟ್ಟಿಸಿ ಕೊಡ್ತಾರೆ ಅಂತ ಸುದ್ಧಿ ಇತ್ತು . ಇನ್ನು ಅದ್ಯಾವುದೂ ನಡೀಲಿಕ್ಕಿಲ್ಲ” ಎಂದ. ಅವನ ಪರಿಸ್ಥಿತಿ ನೆನೆದು ಸಂಕಟ ಆಯ್ತು. ಒಂದು ಬಾಳೆ ಗೊನೆ , ಸ್ವಲ್ಪ ತರಕಾರಿ, ಸ್ವಲ್ಪ ಅಕ್ಕಿ, ಸ್ವಲ್ಪ ಹಣ ಕೊಟ್ಟು “ಹೆದರ್ಬೇಡ. ಎಲ್ಲ ಒಳ್ಳೆದಾಗ್ತದೆ. ಒಂದು ಮಾತು ನೆನಪಲ್ಲಿಟ್ಟುಕೋ ಈ ಸಮಯ ಕಳೆದು ಹೋಗುವುದು” ಎಂದೆ. ಮಾಲಿಂಗ ಹೊರಟು ಹೋದ. ಇಷ್ಟನ್ನೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ ಕಿಶನ್ ಗೆ ಒಂದು ಮಾತ್ರ ಅರ್ಥ ಆಗಿರಲಿಲ್ಲ. “ಅಜ್ಜೀ…. ಎಲ್ಲ ಗೊತ್ತಾಯ್ತು. ನೀವು ಕೊನೆಯಲ್ಲಿ ಹೇಳಿದ ಒಗಟು ಮಾತ್ರ ಅರ್ಥ ಆಗ್ಲಿಲ್ಲ” ಎಂದ. “ಒಗಟಾ… ನಾನು ಒಗಟು ಹೇಳಿಯೇ ಇಲ್ವಲ್ಲಾ” ಎಂದೆ. “ನೀವು ‘ಈ ಸಮಯ ಕಳೆದು ಹೋಗುವುದು’ ಅಂತ ಹೇಳಿದ್ರಲ್ಲಾ… ಅದೇನು…?” ಎಂದ. “ಹೋ ….. ಅದಾ…. ನೋಡು ಪುಟ್ಟಾ… ಕಾಲ ಎಲ್ಲವನ್ನೂ ಮರೆಸುತ್ತದೆ. ಅಲ್ವಾ……”ಎಂದೆ. “ಅಂದ್ರೇ…..?” ಪುಟ್ಟನ ರಾಗ. “ಈಗ ನೋಡು ನೀನೀಗ ಇಲ್ಲಿ ಎಷ್ಟು ಸಂತೋಷದಲ್ಲಿದ್ದೀಯ ? ಈ ಸಮಯ ಕಳೆದು ಹೋದರೆ……. ಮತ್ತೊಮ್ಮೆ ನಿನ್ನ ಜೀವನ ಯಾಂತ್ರಿಕ ಬದುಕಾಗ್ತದೆ . ಅಲ್ವಾ…..ಈಗ ಎಷ್ಟು ಸಾಧ್ಯವೋ ಅಷ್ಟು ಸಮಯವನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೋ….. ಜೀವನದಲ್ಲಿ ನಿನಗೆ ಬೇಸರವಾದಾಗಲೆಲ್ಲ ಈ ಮಾತನ್ನು ನೆನೆಸಿಕೋ. ಮನಸ್ಸಿಗೆ ಸಮಾಧಾನವಾಗುತ್ತದೆ. ಕಷ್ಟದಲ್ಲಿರುವವರು ಈ ಮಾತನ್ನು ನೆನೆಸಿಕೊಂಡರೆ ‘ಈಗ ಕಷ್ಟ ಕಾಲ. ಈ ಕಾಲ ಕಳೆದು ಹೋದರೆ ಮುಂದೆ ಬರುವ ಕಾಲ ನಮಗೆಲ್ಲರಿಗೂ ಒಳ್ಳೆಯದನ್ನೇ ಮಾಡ್ತದೆ’ ಎಂಬ ಧನಾತ್ಮಕ ಚಿಂತನೆ ಮೂಡ್ತದೆ. ಕಾಲೋ ಜಗದ್ಭಕ್ಷಕಃ .ಅಂದರೆ ‘ಕಾಲ ಜಗತ್ತಿನ ಎಲ್ಲವನ್ನೂ ತಿಂದು ತೇಗುವವ’ ಎಂದರ್ಥ ಕಾಲವು ಎಲ್ಲವನ್ನೂ ಕಬಳಿಸುತ್ತಲೇ ಇರುತ್ತದೆ. ಜೀವನದಲ್ಲಿ ಅದೆಷ್ಟೋ ಸಿಹಿ – ಕಹಿ ಘಟನೆಗಳು ಸಂಭವಿಸಿರುತ್ತವೆ. ನಮ್ಮದು ಸಿಹಿಯನ್ನು ಮರೆಸಲು ಸಿದ್ಧವಿಲ್ಲದ , ಕಹಿಯನ್ನು ಮರೆಯಲು ಸಾಧ್ಯವಾಗದ ಮನಸ್ಥಿತಿ. ಆದರೆ ಸಮಯವು ಯಾವ ಬೇಧವನ್ನೂ ತೋರದೆ ಎಲ್ಲವನ್ನೂ ಮರೆಸುತ್ತದೆ” ಎಂದು ಒದರುತ್ತಲೇ ಇದ್ದೆ. ನನ್ನ ಮಾತು ಆರರ ವಯಸ್ಸಿನ ಕಿಶನ್ ಗೆ ಅರ್ಥವಾಗದ ಹಂತಕ್ಕೆ ತಲುಪಿದ್ದು ನನ್ನರಿವಿಗೆ ಬರುವ ಮೊದಲೇ ಕಿಶನ್ ಹೂವಿನ ಗಿಡದಲ್ಲಿ ಕುಳಿತಿದ್ದ ಪಾತರಗಿತ್ತಿಯ ಬೆನ್ನು ಹತ್ತಿದ್ದ. ಮರುದಿನ ಬೆಳಗ್ಗೆ ಅಪ್ಪನಿಗೆ ಕರೆ ಮಾಡಿ ಮಾತನಾಡುತ್ತಿದ್ದ ಕಿಶನ್ ಇಲ್ಲಿನ ವಿದ್ಯಮಾನಗಳನ್ನು ಬಹಳ ಉತ್ಸಾಹದಲ್ಲಿ ವರ್ಣಿಸುತ್ತಿದ್ದ. ಆಗ ಅಲ್ಲಿಂದ ಶ್ರೀರಾಮ “ಕಿಶೂ …….. ನಿನಗಲ್ಲಿ ಮಜವೋ ಮಜ ಅಲ್ವಾ… ನನಗಿಲ್ಲಿ ಯಾರಿಲ್ಲ. ತುಂಬ ಬೋರಾಗ್ತಿದೆ. ಅಳ್ಬೇಕು ಅನಿಸ್ತಿದೆ” ಎಂದ. ಕಿಶನ್ “ಅಪ್ಪಾ ಬೇಸರ ಮಾಡ್ಕೊಳ್ಬೇಡಿ. ಈ ಸಮಯವು ಕಳೆದು ಹೋಗ್ತದೆ” ಎಂದು ಮುದ್ದು ಮುದ್ದಾಗಿ ಹೇಳಿದಾಗ ನಮಗೆಲ್ಲ ನಗಬೇಕೋ ಅಳಬೇಕೋ ಎಂದರಿವಾಗದ ಪರಿಸ್ಥಿತಿ. ಹೌದಲ್ಲಾ…… ‘ಈ ಸಮಯವು ಕಳೆದು ಹೋಗುತ್ತದೆ’ ಕೊರೋನಾ ಮುಗಿದು ಎಲ್ಲೆಡೆ ಶಾಂತಿ ನೆಲೆಸುತ್ತದೆ. ಮಗಳು , ಮೊಮ್ಮಗ ಅಮೇರಿಕಾ ಹೋಗುತ್ತಾರೆ. ಮತ್ತೆ ಅವರನ್ನು ಕಾಣಲು ಅದೆಷ್ಟು ಕಾಲ ಕಾಯಬೇಕೋ….. ಮತ್ತೆ ಏಕಾಂಗಿತನ……. ಮತ್ತೆ ವಾರಕ್ಕೊಮ್ಮೆ ಬರುವ ಮಗ , ಸೊಸೆ, ಮೊಮ್ಮಕ್ಕಳ ನಿರೀಕ್ಷೆ…….. ಇದುವೇ ಜೀವನ . ಕಾಲಾಯ ತಸ್ಮೈ ನಮಃ ~~~~

ಕಥಾಯಾನ Read Post »

ಕಥಾಗುಚ್ಛ

ಗೂಡು ಅದೊಂದು ಸಾದಾರಣವಾದ ಕೆಂಪು ಹೆಂಚಿನ ಮನೆ. ಇತ್ತ ದೊಡ್ಡದೂ ಅಲ್ಲ,ಅತ್ತ ಚಿಕ್ಕದೂ ಅಲ್ಲ,ಅಂತಹುದು. ಮನೆಯ ಮುಂದೆ ಒಂದಷ್ಟು ದಾಸವಾಳ,ಕಣಗಿಲೆ.ನೀಲಿ ಗೊರಟೆ ಹೂವಿನ ಗಿಡಗಳು. ಪುಟ್ಟ ಕಾಂಪೋಂಡ್,ಹಿತ್ತಲಲಿ ಬಟ್ಟೆ ತೊಳೆಯುವ ಕಲ್ಲು,ಒಂದು ನುಗ್ಗೆ ಮರ,ಬಚ್ಚಲು ನೀರು ಹೋಗುವ ಚರಂಡಿಗೆ ಹೊಂದಿಕೊಂಡಂತೆ ಹರಡಿಕೊಂಡ ಬಸಳೆ ಬಳ್ಳಿ. ಆ ಮನೆಯಲ್ಲಿ ಇದ್ದವರು ಇಬ್ಬರೆ,ಅವನು-ಅವಳು. ಅವರ ಮದುವೆಯಾಗಿ ಎರಡು ವರ್ಷವಾಗಿತ್ತು.ಪ್ರಶಾಂತವಾಗಿ ಹರಿಯುವ ನದಿಯಂತೆ ಬದುಕು ಸಾಗುತ್ತಿತ್ತು.ಅವನು ಬೆಳಿಗ್ಗೆ ಬೇಗಗ ಏಳುತ್ತಿದ್ದ.ತಣ್ಣೀರ ಸ್ನಾನ ಮಾಡಿ ಅಂಗಳದ ಗಿಡಗಳಿಂದ ಹೂ ಬಿಡಿಸಿ ತಂದು ದೇವರ ಗೂಡಿನ ಪಟಗಳಿಗಿಟ್ಟು, ಗಟ್ಟಿಯಾಗಿ ಮಂತ್ರ ಹೇಳುತ್ತ ಪೂಜೆ ಮಾಡುತ್ತಿದ್ದ. ಅಷ್ಟರಲ್ಲವಳು ಬಚ್ಚಲು ಹಂಡೆಗೆ ಉರಿಹಾಕಿ,ಕಾಫಿಗಿಟ್ಟು ಕೆಲಸ ಶುರು ಮಾಡುತ್ತಿದ್ದಳು. ತಿಂಡಿ ತಿಂದವನು ಕ್ಯಾರಿಯರ್ ಹಿಡಿದು ಆಫೀಸಿಗೆ ಹೊರಟರೆ ಅವಳಿಗೆ ನಿರಾಳ. ಕೆಲಸವೆಲ್ಲ ಮುಗಿಸಿ, ಹಿತ್ತಲಿನ ನುಗ್ಗೆಮರದ ಕೆಳಗೆ ಕುಳಿತು ಕತೆ ಪುಸ್ತಕದೊಳಗೊ ಅಥವಾ ತವರಿನ ನೆನಪೊಳಗೊ ಮುಳುಗುತ್ತಿದ್ದಳುಆ ನೆನಪುಗಳೊಳಗೆ ಸುಖವಿತ್ತು.ತವರು ಮನೆಯ ಹಿತ್ತಲಿಗೆ ಆತುಕೊಂಡಂತೆ ಹರಿಯುತ್ತಿದ್ದ ಭದ್ರಾ ನದಿ,ವಿಶಾಲವಾದ ಮನೆಯಂಗಳದಲ್ಲಿನ ಮಾವಿನ ಮರ,ಸಂಪಿಗೆಮರ,ಸೀಬೆಮರ, ತೂಗುಹಲಗೆ ಉಯ್ಯಾಲೆ,ಕಾಡು ಗಿಡಗಳಪೊದೆ,ಮಲ್ಲಿಗೆ ಹಂದರ,ಎಲ್ಲ ಅಂದರೆ ಎಲ್ಲ ನೆನಪಾಗಿ ಕಾಡುತ್ತಿದ್ದವು! ಅವಳಿಗೆ ಮಾತು ಬೇಕಿತ್ತು. ಯಾವಾಗಲೂ ಗಲಗಲ ಅನ್ನುವ ಜನರು ಸುತ್ತ ಇರಬೇಕು ಅನಿಸುತ್ತಿತ್ತು. ಸೃಷ್ಠಿಯ ಪ್ರತಿ ವಸ್ತುವಿನಲ್ಲೂ ಅವಳಿಗೆ ಅಧಮ್ಯ ಕುತೂಹಲ. ಅವಳು ಎಲ್ಲವನ್ನೂ,ಎಲ್ಲರನ್ನೂ ಪ್ರೀತಿಸುತ್ತಿದ್ದಳು.ಅವನು ಆಫೀಸಿಗೆ ಹೋದ ತಕ್ಷಣ ಮನೆಯ ಎಲ್ಲ ಕಿಟಕಿ-ಬಾಗಿಲುಗಳನ್ನು ತೆರೆದು ಒಳಬರುತ್ತಿದ್ದ ಸೂರ್ಯನ ಬೆಳಕಿನಲ್ಲಿ ಮೀಯುತ್ತ,ಹಿತವಾದ ಗಾಳಿಗೆ ಮೈಯೊಡ್ಡಿ ಕನಸು ಕಾಣುತ್ತಿದ್ದಳು.. ಆದರವನು ಇದಕ್ಕೆ ತದ್ವಿರುದ್ದ. ಮೊದಲಿನಿಂದಲೂ ಅವನು ಮಿತಭಾಷಿ. ಆಡಿದರೂ ಅಗತ್ಯವಿದ್ದಷ್ಟು. ತನ್ನ ಆಫೀಸು,ಬೆಳಗಿನ ಪೂಜೆ,ಸಂಜೆಯ ಸಂಧ್ಯಾವಂದನೆಗಳಲ್ಲಿ ಕಳೆದು ಹೋಗುತ್ತಿದ್ದ. ರಜಾದಿನಗಳಲ್ಲಿ ಮನೆಯ ಎಲ್ಲ ಕಿಟಕಿ ಬಾಗಿಲುಗಳನ್ನು ಹಾಕಿಕೊಂಡು ಒಳಗಿನ ಧಗೆಯಲ್ಲಿ ಬೇಯುತ್ತಲೇ ನಿರಾಳವಾಗಿ ರಾಮಕೃಷ್ಣಪರಮಹಂಸರ ಪುಸ್ತಕಗಳನ್ನೊ ಭಗವದ್ಗೀತೆಯ ಸಾರವನ್ನೋ ಓದುತ್ತ ಕೂರುತ್ತಿದ್ದ. ಅವರಿಬ್ಬರೂ ಎರಡು ದೃವಗಳಾಗಿದ್ದರು. ಅವಳಿಗೆ ಅವನ ಬಗ್ಗೆ ವಿಚಿತ್ರ ಕುತೂಹಲ: ಅವನ ದೇವರ ಪೂಜೆ,ಆ ತನ್ಮಯತೆ,ಅಂತರ್ಮುಖತನ,ಪಾಪ-ಪುಣ್ಯಗಳ ಸ್ವರ್ಗ ನರಕಗಳ ಬಗೆಗಿನ ಅಪಾರ ನಂಬಿಕೆಗಳನ್ನು ಕಂಡು ಆಶ್ಚರ್ಯ! ಅವನಿಗೆ ಸಣ್ಣಪುಟ್ಟ ವಿಷಯಗಳಲ್ಲೂ ಅವಳು ಪಡೆಯುತ್ತಿದ್ದ ಸುಖದ ಬಗ್ಗೆ ತಿರಸ್ಕಾರ.ಅವಳ ಅತಿಯೆನಿಸುವಷ್ಟು ಪ್ರೀತಿ,ಜೋರಾಗಿ ಮಾತನಾಡಿದರೆ ಸಾಕು, ಕಣ್ಣು ತುಂಬಿ ಬರುವ ಸೂಕ್ಷ್ಮತೆ ಕಂಡು ಬೇಸರ. ಇಷ್ಟಿದ್ದರೂ ಅವರ ನಡುವೆ ಮಾತುಗಳಿಗೆ ನಿಲುಕದಪ್ರೀತಿಯಿತ್ತು. ಬದುಕು ಹೀಗೇ ಸಾಗುತ್ತಿರುವಾಗ, ಅದೊಂದು ದಿನನ ಆ ಗುಬ್ಬಚ್ಚಿಗಳು ಅವಳನ್ನು ಸೆಳೆದವು.ಅಡುಗೆ ಮನೆಯ ಪಕ್ಕದಲ್ಲಿದ್ದ ಸ್ಟೋರ್ ರೂಮಿನ ಸೂರಿನಲ್ಲಿ ಅವು ಗೂಡು ಕಟ್ಟಲು ಪ್ರಾರಂಬಿಸಿದ್ದವು. ಮೊದಮೊದಲು ಅವಳು ಅವುಗಳನ್ನು ಗಮನಿಸಿರಲಿಲ್ಲ. ಬರುಬರುತ್ತ ಅವುಗಳ ಕಿಚಕಿಚ ಶಬ್ದ ಜಾಸ್ತಿಯಾದಂತೆ ಅವಳ ಕಣ್ಣಿಗವು ಬಿದ್ದವು. ಬಂಗಾರದ ಬಣ್ಣದ ಒಣ ಹುಲ್ಲುಕಡ್ಡಿಗಳನ್ನು ಬಾಯಲ್ಲಿ ಕಚ್ಚಿತಂದು ಸೂರಿನಲ್ಲಿ ಸಿಗಿಸುತ್ತಿದ್ದವು..ಅವು ಕಿಟಕಿಯಲ್ಲಿ ಕೂತು ಅರ್ಥವಾಗದ ಬಾಷೆಯಲ್ಲಿ ಮಾತಾಡುವುದು,ಪುರ್ರನೆ ಹಾರಿಹೋಗಿ ಹುಲ್ಲು ತರುವುದು,ಕೊಕ್ಕಿನಿಂದ ೊಂದೊಂದೇ ಹುಲ್ಲು ಸೇರಿಸಿ ಕಲಾತ್ಮಕವಾಗಿ ಗೂಡು ಕಟ್ಟುವುದು,ಇವನ್ನೆಲ್ಲ ನೋಡುವುದು ಅವಳಿಗೆ ಹೊಸ ರೀತಿಯ ಅನುಭವ ಅನಿಸಿತು.ಆ ಪುಟ್ಟ ಹಕ್ಕಿಗಳ ಬದುಕು ಅದ್ಬುತವಾಗಿ ತೋರತೊಡಗಿತು. ಅವುಗಳ ನಿತ್ಯದ ಚಟುವಟಿಕೆಗಳನ್ನು ನೋಡುವುದರಲ್ಲಿ ಅವಳೆಷ್ಟು ತನ್ಮಯಳಾಗಿ ಬಿಟ್ಟಳೆಂದರೆ,ಅವನು ಆಫೀಸಿಗೆ ಹೋದ ತಕ್ಷಣ ಸ್ಟೋರಿನ ಬಾಗಿಲ ಬಳಿ ಬಂದು ಕೂರುತ್ತಿದ್ದಳು. ಪ್ರತಿನಿತ್ಯ ಅಕ್ಕಿಯ ಕಾಳುಗಳನ್ನುಅವುಗಳಿಗೋಸ್ಕರ ತಂದು ಹಾಕುವುದು,ಅದನ್ನು ತಿನ್ನುವಂತೆ ಹುಶ್ಹುಶ್ ಎಂದು ಸಂಕೇತದಲ್ಲಿ ಮಾತಾಡಿಸುವುದು ಮಾಮೂಲಿಯಾಗುತ್ತಾಹೋಯಿತು. ದಿನಕಳೆದಂತೆ ಗುಬ್ಬಚ್ಚಿಗಳ ಗೂಡು ಪೂರ್ಣವಾಯಿತು. ಸಂಜೆ ಅವು ಬಂದಾಗ ಸ್ಟೋರಿನ ಬಾಗಿಲು ಹಾಕಿದ್ದರೆ ಕೊಕ್ಕಿನಿಂದ ಕುಕ್ಕಿ ಶಬ್ದ ಮಾಡುತ್ತಿದ್ದವು. ಆಗವಳು ಓಡಿಹೋಗಿ ಬಾಗಿಲು ತೆಗೆದ ತಕ್ಷಣ ಗೂಡು ಸೇರುತ್ತಿದ್ದವು. ಬೆಳಿಗ್ಗೆ ಎದ್ದು ಕಿಟಕಿ ತೆಗೆಯುವುದು ಒಂದು ಕ್ಷಣ ತಡವಾದರೆ ಸಾಕು ಕಿಚಕಿಚ ಎಂದು ಹುಯಿಲೆಬ್ಬಿಸುತ್ತಿದ್ದವು. ಹೀಗವಳು ಗುಬ್ಬಚ್ಚಿಗಳ ಪ್ರಪಂಚದಲ್ಲಿಬೆರೆಯುತ್ತಹೋದಳು. ಹೀಗಿರುವಾಗ ಅವಳು ಎರಡು ತಿಂಗಳು ಮುಟ್ಟಾಗಲಿಲ್ಲ. ಆಸ್ಪತ್ರೆಯಲ್ಲಿ ಲೇಡಿ ಡಾಕ್ಕರ್ ನಗುತ್ತಾ ನೀವು ತಂದೆಯಾಗಲಿದ್ದೀರಿ ಅಂದಾಗ ಅವನ ಮುಖ ಅರಳಿತ್ತು. ಅವು ಅಷ್ಟೊಂದು ಸಂತೋಷ ಪಟ್ಟಿದ್ದನ್ನು ಈ ಎರಡು ವರ್ಷಗಳಲ್ಲಿ ಅವಳು ಒಮ್ಮೆಯೂ ನೋಡಿರಲಿಲ್ಲ..ಆಗಿನಿಂದ ಅವನು ಬದಲಾಗತೊಡಗಿದ. ಅವಳೊಡನೆ ಹೆಚ್ಚು ಮಾತಾಡತೊಡಗಿದ. ಕಣ್ಣಲ್ಲಿ ಕಣ್ಣಿಟ್ಟು ಅವಳ ಆರೈಕೆ ಮಾಡತೊಡಗಿದ. ಅವಳ ಆರೋಗ್ಯಕಾಗಿ ಕಂಡಕಂಡ ದೇವರುಗಳಿಗೆ ಅರ್ಚನೆ ಮಾಡಿಸತೊಡಗಿದ. ಅವನ ಪ್ರೀತಿಯ ನಡವಳಿಕೆ,ಗುಬ್ಬಚ್ಚಿಗಳ ಗೂಡು ಅವಳ ಬದುಕನ್ನು ಸುಂದರಗೊಳಿಸತೊಡಗಿದವು. ಒಂದು ಬಾನುವಾರ ಮದ್ಯಾಹ್ನ ಅವನು ಮನೆಯನ್ನು ಸ್ವಚ್ಚಗೊಳಿಸುತ್ತಿದ್ದ. ಒಂದು ಉದ್ದನೆಯ ಬಿದಿರು ಕಡ್ಡಿಗೆ ಪೊರಕೆ ಕಟ್ಟಿ ಸೂರಿನ ಜೇಡರ ಬಲೆಯನ್ನು ತೆಗೆಯಹತ್ತಿದ. ಸ್ಟೋರಿಗೆ ಬಂದಾಗ ಆ ಗುಬ್ಬಚ್ಚಿ ಗೂಡು ಅವನ ಕಣ್ಣಿಗೆ ಬಿತ್ತು. ಮನೆಯೊಳಗಿದಗದ ಗೂಡು ಅವನಿಗೆ ಅಸಹ್ಯವಾಗಿಯೂ ಅಪಶಕುನವಾಗಿಯೂ ಕಂಡಿತು. ಅದನ್ನು ತೆಗೆಯಲು ಪ್ರಯತ್ನಿಸಿದಾಗ ಅವಳು ತಡೆದಳು. ಆ ಗೂಡನ್ನು ಮುಟ್ಟದಂತೆ ಅವನನ್ನು ವಿನಂತಿಸಿದಳು. ಅದೇಕೋ ಅವನು ಅವಳ ಮಾತಿಗೆ ಕಿವಿಗೊಡದೆ ಗೂಡನ್ನು ಕೋಲಿನಿಂದ ತಳ್ಳಿದ. ತಳ್ಳಿದ ರಭಸಕ್ಕೆ ಗೂಡು ನೆಲಕ್ಕೆ ಬಿತ್ತು.ಅದರೊಳಗಿದ್ದ ಬಿಳಿಯ ಬಣ್ಣದ ಪುಟ್ಟಮೊಟ್ಟೆಗಳು ಒಡೆದು ಹೋದದ್ದನ್ನು ನೋಡಿದ ಅವಳು ಬಿಕ್ಕಿಬಿಕ್ಕಿ ಅಳ ತೊಡಗಿದಳು. ಅವನ ಯಾವ ಸಮಾಧಾನವೂ ಅವಳನ್ನು ಸಣತೈಸಲಾಗಲಿಲ್ಲ.಻ವನು ಕಳಚಿ ಬಿದ್ದ ಗೂಡು ,ಒಡೆದ ಮೊಟ್ಟೆಗಳನ್ನು ಹೊರಗೆಸೆದು ಬಂದರೂ ಅವಳ ಻ಳು ನಿಂತಿರಲಿಲ್ಲ.ಬೇಸಿಗೆಯ ಧಗೆಗೆ,ಅತ್ತ ಸುಸ್ತಿಗೆ ತಲೆ ಸುತ್ತಿದಂತಾಗಿ ಕೆಳಗೆ ಬಿದ್ದಳು. ಅವಳನ್ನು ಎತ್ತಿಕೊಂಡುಹೋಗಿ ಹಾಸಿಗೆಯಲ್ಲಿ ಮಲಗಿಸಿ,ಮುಖಕ್ಕೆ ನೀರು ಚುಮುಕಿಸಿದ.ಪ್ರಜ್ಞೆ ಮರಳಿದ ಅವಳ ಕಣ್ಣುಗಳಲ್ಲಿದ್ದ ಭಾವನೆಗಳನ್ನು ಅವನಿಂದ ಓದಲಾಗಲಿಲ್ಲ. ಅವಳ ಸೂಕ್ಷ್ಮ ಮನಸ್ಸಿಗೆ ಒಡೆದ ಮೊಟ್ಟೆಗಳ ಚಿತ್ರವನ್ನು ಮರೆಯಲಾಗಲಿಲ್ಲ. ಒಂದು,ಎರಡು,ಮೂರು..ಹೀಗೆ ದಿನಗಳು ಉರುಳುತ್ತ ಹೋದವು.ಅವಳಿಗ ಮಾತು ಕಡಿಮೆ ಮಾಡಿದ್ದಳು. ಅವನ ಪ್ರಶ್ನೆಗಳಿಗೆ ಮೌನವೊಂದೇ ಉತ್ತರವಾಗ ತೊಡಗಿತ್ತು. ಅವಳ ಶೂನ್ಯದತ್ತ ನೆಟ್ಟದೃಷ್ಠಿ, ಅನ್ಯಮನಸ್ಕತೆಯಿಂದಾಗಿ ಅವನ ಻ಸಹನೆ ಹೆಚ್ಚುತ್ತ ಹೋಯಿತು. ಮನಸ್ಸು ಸ್ಥಿಮಿತದಲಿಟ್ಟುಕೊಳ್ಳಲು ಮತ್ತಷ್ಟು ಪೂಜೆ-ಪುನಸ್ಕಾರಗಳಲ್ಲಿ ಹೊತ್ತು ಕಳೆಯ ತೊಡಗಿದ. ಅವನ ಮೌನಕ್ಕೆ ಅವಳಮೌನವೂ ಸೇರಿ ಆ ಮನೆಯಲ್ಲಿ ಶಬ್ದಗಳು ಕಳೆದುಹೋದವು. ಹೀಗಾಗಲೆ ಅವಳಿಗೆ ನಾಲ್ಕು ತಿಂಗಳು ತುಂಬುತ್ತ ಬಂದಿತ್ತು.ಒಂದು ಸಂಜೆ ಅವನು ಆಫೀಸಿನಿಂದ ಬಂದಾಗವಳು ಸ್ಟೋರ್ ರೂಮಿನ ಬಾಗಿಲಲ್ಲಿ ಬಿದ್ದಿದ್ದಳು. ಅವಳನ್ನು ಎತ್ತಕೊಂಡು ಆಸ್ಪತ್ರೆಗೆ ಓಡಿ ಹೋದ. ಡಾಕ್ಟರ್ ಅವಳಗೆ ಗರ್ಭಪಾತವಾಗಿದೆ, ತಕ್ಷಣಕ್ಕೆ ಮತ್ತೆ ಗರ್ಬಿಣಿಯಾದರೆ ಅಪಾಯವಿದೆ ಹುಶಾರಾಗಿ ನೋಡಿಕೊಳ್ಳಿ ಅಂದರು. ಒಂದಷ್ಟು ದಿನಗಳ ಆಸ್ಪತ್ರೆಯ ವಾಸದ ನಂತರ ಮತ್ತೆ ಮನೆಗೆಬಂದವಳೆಷ್ಟು ಕಂಗೆಟ್ಟಿದ್ದಳೆಂದರೆ ಯಾವಾಗಲೂ ಸೂರು ನಿಟ್ಟಿಸುತ್ತ ಮಲಗಿರುತ್ತಿದ್ದಳು. ಕಣ್ಣು ಬಿಟ್ಟರೆ ಸಾಕು ಅವನು ಗೂಡು ಕಿತ್ತೆಸೆದಂತೆ,ಸಂಜೆ ಗೂಡು ಕಾಣದೆ ತಾರಾಡುತ್ತಿದ್ದ ಗುಬ್ಬಚ್ಚಿಗಳ ದೃಶ್ಯವೇ ಕಾಣುತ್ತಿತ್ತು. ಹಗಲು-ರಾತ್ರಿ ಬಾಗಿಲುಕಿಟಕಿಗಳನ್ನು ಹಾಕಿಕೊಂಡೇ ಮಲಗಿರುತ್ತಿದ್ದಳು. ರಾತ್ರ ಅವನು ದೀಪ ಹಾಕಿದರೆ ಅವಳದನ್ನು ಆರಿಸಿ ಮಾತಾಡದೆ ಮಲಗುತ್ತಿದ್ದಳು. ಅವಳೀಗ ಕತ್ತಲನ್ನು ಆರಿಸಿಕೊಂಡಿದ್ದಳು. ಅವಳ ಪರಿಸ್ಥಿತಿಯನ್ನು ಕಂಡು ಅವನು ದಿಗ್ಬ್ರ್ರಮೆಗೊಳಗಾಗಿದ್ದ. ಻ವಳ ಈ ಸ್ಥಿತಿಗೆ ತಾನೇಕಾರಣವೇ ಎಂಬ ಪ್ರಶ್ನೆ ಅವನನ್ನ ಕಾಡತೊಡಗಿತು. ಪಾಪಪುಣ್ಯಗಳ ಭೀತಿಯಲ್ಲೇ ಬೆಳೆದವನಿಗೆ ತಾನು ಒಡೆದ ಮೊಟ್ಟೆಗಳಿಗೂ,ಅವಳ ಗರ್ಭಪಾತಕ್ಕೂ ಸಂಬಂದವಿರಬಹುದೆನಿಸಿ ಪಾಪಪ್ರಜ್ಞೆಯಲಿ ನರಳತೊಡಗಿದ. ಮಾತಾಡಲು ಪ್ರಾರಂಬಿಸಿದವನು ಮತ್ತೆ ಮೌನಿಯಾದ. ಆ ಪುಟ್ಟ ಮನೆಯೊಳಗೆ ಮಾತುಗಳಿಲ್ಲವಾಗಿ ವಿಷಾದದ ನೆರಳು ಆವರಿಸ ತೊಡಗಿತು. ಅವನೀಗ ಮನೆಯ ಎಲ್ಲ ಕೆಲಸಗಳನ್ನೂ ತಾನೇ ಮಾಡುತ್ತಾನೆ. ಬೆಳಿಗ್ಗೆ ಅವಳಿಗೆ ತಿಂಡಿ ಕೊಟ್ಟು ಆಫೀಸಿಗೆ ಹೋಗುತ್ತಾನೆ. ಹೋಗುವ ಮುಂಚೆ ಸ್ಟೋರಿನ ಕಿಟಕಿ ಬಾಗಿಲುಗಳನ್ನು ತೆರೆದಿಡುತ್ತಾನೆ. ಸಂಜೆ ತಿರುಗಿ ಬಂದವನು ಅವಳಿಗೆ ತಿನ್ನಲು ಏನಾದರು ಕೊಟ್ಟು ಸ್ಟೋರ್ ರೂಮಿಗೆ ಹೋಗುತ್ತಾನೆ,ತಾನೇ ಕಿತ್ತು ಹಾಕಿದ ಗೂಡಿನ ವಾರಸುದಾರ ಗುಬ್ಬಚ್ಚಿಗಳ ಹಾದಿ ಕಾಯುತ್ತಾನೆ. ಪ್ರತಿನಿತ್ಯವೂ ಅವನು ಹಾಕಿಟ್ಟ ಅಕ್ಕಿ ಕಾಳುಗಳು ಹಾಗೆ ಬಿದ್ದಿವೆ.ಓ! ದೇವರೆ ,ಮತ್ತೆ ಆಗುಬ್ಬಚ್ಚಿಗಳು ಬರಲಿ, ಈ ಮನೆಯೊಳಗೆ ಗೂಡು ಕಟ್ಟಲಿ ಎಂದು ಪ್ರಾರ್ಥಿಸುತ್ತಾನೆ.ಆದರೆ, ತೆರೆದ ಕಿಟಕಿಗಳು ತೆರೆದೇ ಇವೆ! ******** ಕು.ಸ.ಮಧುಸೂದನ

Read Post »

ಕಥಾಗುಚ್ಛ

ಕಥಾಯಾನ

ಕಕ್ಷೆ ಡಾ.ಅಜಿತ್ ಹರೀಶಿ [11:59 am, 31/05/2020] AJITH HARISHI: ‘ಹಲೋ, ಡಾಕ್ಟ್ರೇ, ನಮ್ಮನೆ ಕೆಂಪಿಗೆ ಹೆರಿಗೆ ನೋವು ಬಂದದ್ರಾ, ಈಗ್ಲೆ ಬತ್ರ?’ ಫೋನ್ ಎತ್ತಿದೊಡನೆ ಹೇಳಿ, ನನ್ನುತ್ತರಕ್ಕೆ ಕಾಯ್ದಿತ್ತು ಆ ಸ್ವರ. ‘ನಾ ಹೆರಿಗೆ ಡಾಕ್ಟರ್ ಅಲ್ಲ, ಮಾರಾಯ್ರ,’ ಅಂದೆ. ‘ಹೋಯ್, ನೀವು ನಮ್ ದನೀನ ಡಾಕ್ಟರ ಅಲ್ದ? ನಾ ಅವ್ರಿಗೆ ಫೋನು ಮಾಡಿದ್ದಾಗಿತ್ತು’. ಫೋನ್ ಕಟ್ ಆಗಿತ್ತು. ** ಆಗಷ್ಟೇ ಆಸ್ಪತ್ರೆ ಆರಂಭಿಸಿದ್ದ ದಿನಗಳು… ಹುಟ್ಟಿದೂರಿನಲ್ಲೇ ವೈದ್ಯವೃತ್ತಿ ಆರಂಭಿಸಿದ್ದರಿಂದ ಉಳಿದ ತೊಡಕುಗಳೇನೂ ಇರಲಿಲ್ಲ. ಹೊಸ ಉತ್ಸಾಹ, ಅಪರಿಮಿತ ಆತ್ಮವಿಶ್ವಾಸ ಎನ್ನಬಹುದಾಗಿದ್ದ ದಿನಗಳು. ಮನೆ ಬಾಗಿಲಿಗೇ ಸೇವೆ ಕೊಡುವ ಹುಮ್ಮಸ್ಸು ಬೇರೇ..! ಎಲ್ಲಾ ನನ್ನ ಸುತ್ತಲೇ ಸುತ್ತುತ್ತಿದೆ, ಅನಿಸುವಂತೆ ನಡೆಯುತ್ತಿತ್ತು. ಅಂತಹದ್ದೊಂದು ದಿನ… ಬಂತಲ್ಲ ಇನ್ನೊಂದು ಫೋನ್ ಕಾಲ್… “ಹಲೋ..” “ಹಲೋ..ನಾನು ವಾಸುದೇವ ರಾವ್, ಪಂಚಾಯತ್ ಮೆಂಬರ್ರು” “ಗೊತ್ತಾಯ್ತು ಹೇಳಿ ಸರ್” “ಗುಡ್, ಗುಡ್. ಹೊಸದಾಗಿ ಬಂದ್ರೂ ಆಗ್ಲೆ ನನ್ನ ಬಗ್ಗೆನೂ ತಿಳ್ಕೊಂಡು ಬಿಟ್ರಾ..” “ನಿಮಗೆ ನನ್ನ ಬಗ್ಗೆ ಗೊತ್ತಿಲ್ಲದಿರಬಹುದು.. ನಿಮ್ ಬಗ್ಗೆ ನಂಗೊತ್ತು “ ನಾನು ಸಣ್ಣವನಿದ್ದಾಗ ಅವರನ್ನು ನೋಡಿದ್ದೆ. ಅವರೂ ನನ್ನನ್ನು ನೋಡಿದ್ದರು. ಆದರೆ ನಮ್ಮ ಒಡನಾಟ ಕಡಿಮೆ ಇತ್ತು. “ಡಾಕ್ಟರೇ.. ಅರ್ಜೆಂಟ್ ನಿಮ್ಮ ಕಿಟ್ ತಗೊಂಡು ಬನ್ನಿ ಸೀರಿಯಸ್..” ಹಳ್ಳಿಗಳ ಸ್ಥಿರ ದೂರವಾಣಿ ಕರೆ ಕಟ್ಟಾಗೋದು ಹೊಸ ವಿಷಯವೇನಲ್ಲ. ಹಿರಿಯ ವೈದ್ಯರೊಬ್ಬರು ಹಿಡಿಕೆಯಿರುವ, ಆಯತಾಕಾರದ ತಮ್ಮ ಕಿಟ್ ಒಂದನ್ನು ನೀಡಿ ಪ್ರೀತಿಯಿಂದ ಶುಭ ಹಾರೈಸಿದ್ದರು. ಹಾಗಾಗಿ ಹೊಸಕಾಲದ ಬ್ಯಾಗ್ ಖರೀದಿಸದೇ ಅದರಲ್ಲೇ ಔಷಧ ಒಯ್ಯುತ್ತಿದ್ದೆ. ಅದಂತೂ ತಾನು ರೆಡಿ ಅಂತ ತೊಡೆ ಏರಿತ್ತು. ಅವಶ್ಯವಾಗಿ ಇರಬಹುದಾದ ತುರ್ತು ಔಷಧಗಳೆಲ್ಲ ಇದೆಯಾ ಅಂತ ಮತ್ತೊಮ್ಮೆ ಪರೀಕ್ಷಿಸಿ, ನನ್ನ ಮೆಚ್ಚಿನ ಕೆಂಪು ಬಣ್ಣದ ಕ್ಯಾಲಿಬರ್ ಬೈಕ್ ಏರಿದೆ. ಜೊತೆಗೆ ಪೆಟ್ರೋಲ್ ಟ್ಯಾಂಕ್ ನ ಮೇಲೆ, ಆಚೀಚೆ ಅಲ್ಲಾಡುವ ಹಿರಿಯರು ನೀಡಿದ ಔಷಧಗಳ ಪೆಟಾರಿ..! *   * “ಓಹ್ ..! ಬಂದ್ರಾ ಬನ್ನಿ..ಬನ್ನಿ.. ಆಸರಿಗೆ ಸದ್ಯ? , ಕಮಲೀ ನೀರು ಕಾಸೆ..” ಮಹಾಬಲರಂತೂ ಅರಾಮಿದ್ದಾರೆ ಅಂತ ಲೆಕ್ಕ ತೆಗೆದೆ. ಕಮಲ ಬಹುಷಃ ಹೆಂಡತಿಯಿರಬೇಕು ಅಂತ ಯೋಚನೆ ಸಾಗುತ್ತಿತ್ತು. ತಂದೆ ಅಥವಾ ತಾಯಿಗೆ ಆರಾಮಿಲ್ಲವೇನೋ.. ಇಲ್ಲಾ, ಅರ್ಜೆಂಟ್ ಅಂದರು ಎಂದರೆ ಮಗಳಿಗೆ..ಛೇ.! ಓ ಮನಸೇ ವಸಿ ನಿಲ್ಲಪ್ಪ ಅಂದೆ. ಹೆಬ್ಬಾಗಿಲಿಗೆ ಅಖಂಡವಾಗಿ ನಿಂತ ರಾಯರನ್ನು ದಾಟುವ ದಾರಿಯ ಸಾಧ್ಯತೆಯ ಬಗ್ಗೆಯೂ ಮನಸ್ಸು ಹುಡುಕುತ್ತಿತ್ತು. ಹತ್ತಿರವಾಗುತ್ತಿದ್ದಂತೆ ಸ್ವಲ್ಪ ಮನೆಯ ಪಕ್ಕಕ್ಕೆ ಜರುಗಿದರು. ಅವರು ಹಿಂಬಾಲಿಸಿ ಎನ್ನುವ ನೋಟದೊಂದಿಗೆ ಹೆಜ್ಜೆ ಹಾಕಿದರು.  “ನಮ್ಮ ಕಮಲಿಗೂ ಸರಿ ಅರಾಮಿಲ್ಲ .. ಆದರೂ ಮಾಡ್ತಾಳೆ ಪಾಪ. ಹಳ್ಳಿಯಲ್ಲಿ ಎಲ್ಲಾ ಹೀಗೆನೇ. ಸದ್ಯ ನಾವಿಬ್ಬರೇ, ಮಕ್ಕಳು ಪ್ಯಾಟೇಲಿ ಒದ್ತಾ ಇವೆ..!” ಅಲ್ಲಿಗೆ ಕೋಟ್ಯಾಧಿಪತಿ ಕ್ವಿಜ಼್ ನಿಂದ ಹೊರಬೀಳುವ ಸನಿಹಕ್ಕೆ ನಾನು ಬಂದಿದ್ದೆ. ಒಂದೇ ಲೈಫ್ ಲೈನ್ ಉಳಿದದ್ದು. ಆಡಿಯನ್ಸ್ ಪೋಲ್..! ಪಕ್ಕದ ಓರಿಯಲ್ಲಿರುವ ಮನೆಯ ಕೆಲಸದ ಆಳಿಗೆ ಅರಾಮಿಲ್ಲವೇನೋ ಅಂದುಕೊಂಡೆ. ನಿಜಕ್ಕೂ ಜನಸೇವಕ, ಅದಕ್ಕೇ ಇರಬೇಕು ಪದೇ ಪದೇ ಪಂಚಾಯತ್ ಚುನಾವಣೆಯಲ್ಲಿ ಆರಿಸಿ ಬರ್ತಾರೆ. “ಇನ್ನು ನನಗೂ ವಯಸ್ಸಾಯ್ತು, ಈ ಕೂಲಿಯವರ ನಂಬಿ ಏನೂ ಮಾಡ್ವಾಂಗಿಲ್ಲ. ಎರಡು ದಿನ ಕೆಲಸಕ್ಕೆ ಬಂದ್ರೆ ನಾಕು ದಿನ ರಜೆ ಮಾಡ್ತಾರೆ. ಇವತ್ತೂ ನಾನೇ ಒದ್ದಾಡುದೇಯಾ. ಪಂಚಾಯತ್ ಮೆಂಬರ್  ಮೀಟಿಂಗ್ ಬೇರೆ. ಮೊದ್ಲೆಲ್ಲಾ ಈ ಕೆಲಸದವ್ರು ಹತ್ತು ತಾಸು ಕೆಲಸ ಮಾಡ್ತಿದ್ರು. ಈಗ ಎಂಟು ತಾಸು ಅಷ್ಟೇಯಾ. ಮುಂದೆಲ್ಲಾ ಆರೇ ತಾಸೆನಾ?” ‘ಅಪರೂಪಕ್ಕೆ ಆಡಿಯನ್ಸ್ ಕೂಡ ತಪ್ಪಾಗುವುದುಂಟು ಮಾರ್ರೆ’ ಅಂತ ಗೋಳಿಬಜೆಯನ್ನು ಸಕತ್ತಾಗಿ ಮಾಡುವ ಬೈಂದೂರು ಮೂಲದ ಗೋಪಾಲ ಹೇಳಿದ ಮಾತು ನೆನಪಾಯ್ತು. ತರ್ಕವೆಂಬ ತಾಟಗಿತ್ತಿಯ ಹೆಡೆಮುರಿ ಕಟ್ಟಿ ಹಿಡಿದು ಕುಳ್ಳಿರಿಸಿದೆ. ಮನಸ್ಸು ಮುಗ್ಗರಿಸಿದ್ದು ಅವರಿಗೇನು ಗೊತ್ತಾಗಲಿಲ್ವಲ್ಲ ಸದ್ಯ.. * * “ಇಲ್ಲಿ ಬನ್ನಿ … ಕಮಲೀ ಬಿಸಿ ನೀರು, ಸಾಬೂನು ತಂದಿಡೇ..” ಕೊಟ್ಟಿಗೆಯಂತಹ ಮನೆ, ಅಲ್ಲಲ್ಲ ಕೊಟ್ಟಿಗೆಯೇ. ಕಿರಿಕಿರಿ ಕೊಡುವ ರೋಗಿಗೆ ಮಂಪರು ಹತ್ತುವ ಇಂಜೆಕ್ಷನ್ ನೀಡಲು ಹೋಗಿ, ತಾನೇ ಅಕಸ್ಮಾತ್  ಆಗಿ ಚುಚ್ಚಿಕೊಂಡ ವೈದ್ಯನಂತಾಗಿತ್ತು ನನ್ನ ಪರಿಸ್ಥಿತಿ. ಬವಳಿಕೆ ಬಂದಂತಾದರೂ ಸ್ವಲ್ಪ ಸುಧಾರಿಸಿಕೊಂಡೆ. “ನಾನು ದನದ ಡಾಕ್ಟ್ರಲ್ಲ ..!” “ನೀವು  …!” “ನಾನು ಅದೇ ಅಂದ್ಕಂಡೆ, ನಿಮ್ಮ ಮುಖಲಕ್ಷಣ ನೊಡಿಯೇ ಡೌಟ್ ಬಂತು”. ಮುಖದ ಗೆರೆಗಳ ಮೇಲೆ ಅಂದಾಜಿಸಿದ್ದ ರಾಯರು ಬಹು ದೊಡ್ಡ ಮುಜುಗರದಿಂದ ನನ್ನನ್ನು ಪಾರು ಮಾಡಿದ್ದರು. ಬರೀ ಮೆಂಬರ್ ಅಲ್ಲಾ ಇನ್ನೂ ಮೇಲಿನ ಹುದ್ದೆಗೆ ಹೋಗುವ ಪ್ರತಿಭೆ ಇದೆ ಅನ್ನಿಸಿತು. “ಬನ್ನಿ ಒಳಗೆ, ಒಳ್ಳೆದಾಯ್ತು ನೀವು ಬಂದದ್ದು. ದೇವರು ಕರಿಸಿದಾಂಗೆ ಬಂದ್ರಿ. ನಮ್ಮ ಕಮಲೀ ಅದೃಷ್ಟ , ಪ್ಯಾಟೆಗೆ ಹೊಂಟವಳು ಮಜ್ಜಾನ ಮೇಲೆ. ಚೊಲೋ ಆಯ್ತು. ಕೇಳ್ತ್ಯನೇ ಕಮಲೀ, ನಮ್ಮೂರಿಗೆ ಬಂದ ಹೊಸ ಡಾಕ್ಟ್ರು ನಿನ್ನ ನೋಡುಲೆ ಬಂಜ್ರು”. ಒಳಗಿನಿಂದ ಧ್ವನಿ…”ಯನಗೆಂತ ಸುಟ್ಟ ಅರ್ಜೆಂಟ್ ಇತ್ತಿಲ್ಲೆ…ಕಲಗಚ್ಚು ಕುಡಿಯ ಬದಲಿಗೆ ಅಡಿಕೆ ತೊಗರು ಕುಡದ ಎಮ್ಮೆಕರ ಬದಕ್ತ ಇಲ್ಯಾ ಹೇಳದೇ ಚಿಂತೆ. ಸುಮ್ಮನೆ ವಯಸ್ಸಾಗಿದ್ದೆಯಾ, ಯಾವುದು ಮೊದ್ಲು , ಯಾವುದು ಕಡಿಗೆ ಹೇಳ ಬುದ್ಧಿ ಇಲ್ಲೆ “…. ಒಗಟೊಗಟಾದ ವಿಷಯ ಒಡಚಿತಲ್ಲಾ ಅಂತ… ಸದ್ಯ ಕೊಟ್ಟಿಗೆಯಿಂದ ನನ್ನ ಹೊರಗೆ ಬಿಟ್ಟರಲ್ಲ ಅಂತ ನಿಟ್ಟುಸಿರು ಬಿಟ್ಟೆ.. ಕಮಲಮ್ಮನವರಿಗೆ ಕಾಲುನೋವಿಗೆ ಔಷಧೋಪಚಾರ ಹೇಳಿ, ಹೊರಬಂದೆ. ಬಂದ ದಾರಿಗೆ ಒಂದಿಷ್ಟು ಸುಂಕ ಸಿಕ್ಕಿತ್ತಾದರೂ, ಒಂದು ರೀತಿಯ ಅವಮಾನ, ನಾನು ಬೇರೆಯ ಆಡಳಿತ ಪ್ರದೇಶದ ಗೆರೆಯೊಳಗೆ ಬಂದೆನೆಂಬ ಸಂಕೋಚ! ಅವರಿಗೆ ಬೇಕಾದ್ದು ಎಮ್ಮೆಗೆ ಉಪಚಾರ, ಕರೆದದ್ದು ನನ್ನನ್ನು! ನಾನು ಮನುಷ್ಯರ ಡಾಕ್ಟರು, ನನ್ನ ವ್ಯಾಪ್ತಿಯೇನು? ಅಂತೆಲ್ಲಾ… ಲೆಕ್ಕ. * * ಆಮೇಲೊಂದು ದಿನ ನನ್ನ ಅದೇ ಲ್ಯಾಂಡು ಲೈನಿಗೆ ಫೋನು ಬಂತು. “ಹಲೋ..ಡಾಕ್ಟರ್ರಾ..?” ನನ್ನ ಹೆಂಡತಿಯ ಅಣ್ಣನ ಧ್ವನಿ ಅಂತ ಗೊತ್ತಾಗಿ ಹೋಯ್ತು. ಅವನೇ ಬೇಕಂತ ತಮಾಷೆ ಮಾಡ್ತಿದಾನಂತ ನನ್ನ ಊಹೆ. ‘ಹೌದು ಹೇಳಿ’,  ಅಂದೆ. “ನಮ್ಮ ಆಕಳು ಹೀಟಿಗೆ ಬಂದಿದೆ, ದಯವಿಟ್ಟು ಬೇಗ ಬಂದರೆ ಅನುಕೂಲ ಆಗ್ತಿತ್ತು. ಇನ್ಸಮೈನೇಷನ್ ಇವತ್ತಾದ್ರೆ..” ಅಂದ. ಒಂದಿಷ್ಟು ಆಕಳನ್ನು ಕಟ್ಟಿಕೊಂಡು ಡೈರಿಗೆ ಹಾಲು ಕೊಡ್ತಾನೆ. “ಹೀಟಿಗೆ ಬಂದವರನ್ನೆಲ್ಲಾ ಸಂಭಾಳಿಸ ಹೋದರೆ ನಿಮ್ಮ ತಂಗಿ ಬಡಿಗೆ ತಗಳ್ತಾಳೆ” ಅಂದೆ. “ಅಯ್ಯೋ ಬಾವನನಾ..? ಒಂದು ತಾಸು ಹಿಂದೆ ವೆಟರ್ನರಿ ಡಾಕ್ಟರಿಗೆ ಫೋನ್ ಮಾಡಿದ್ದೆ. ಹಾಗಾಗಿ ಮತ್ಯಾರು ಫೋನ್ ಮಾಡಿಲ್ಲ ಅಂತ ಅಂದ್ಕೊಂಡು ರೀಡಯಲ್ ಬಟನ್ ಒತ್ತಿದೆ” ಅಂದ. ಅತ್ತೆಯ ಫೋನು ಬಂದಿತ್ತು.  ಮಗಳೊಂದಿಗೆ ಮಾತಾಡಿ ರಿಸೀವರ್ ಕೆಳಗಿಟ್ಟ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಇವನ ಕರೆ ಬಂದಿತ್ತು, ಹೆಂಡತಿಯ ತೌರುಮನೆಯಿಂದ. ಮನಸ್ಸಿಗೆ ಮತ್ತೆ ಮೊರೆತ. ದನದ ಡಾಕ್ಟರೆಲ್ಲಿ, ನಾನೆಲ್ಲಿ?! * ಈ ಹೊಸದಾಗಿ ಬಂದ ಪಶು ವೈದ್ಯರು ಮತ್ತು ನನ್ನ ನಡುವೆ ನಡೆಯುವ ಸಂದರ್ಭಗಳು ಸರ್ವೇಸಾಮಾನ್ಯವಾಯ್ತು. ದನಕ್ಕೆ, ಎಮ್ಮೆಗೆ, ಕರುಗಳಿಗೆ, ಅವುಗಳ ಹೆರಿಗೆಗೆಲ್ಲಾ ಕರೆಗಳು. ಇತ್ತೀಚೆಗೆ ಮೊದಲೇ ಕೇಳಿ ಬಿಡ್ತೀನಿ, “ಯಾರಿಗೆ?” ಅಂತ. ಈ ವ್ಯವಸ್ಥೆಗೆ, ನಾನು ಒಗ್ಗಿಹೋಗಿರುವಾಗಲೇ ಒಂದು ದಿನ ನಾನು ಪೇಷಂಟ್ ನೋಡುತ್ತಿರುವಾಗ ಬಂತು ಸ್ಥಿರ ದೂರವಾಣಿ ಕರೆ. ಪೇಷಂಟ್ ನೋಡುತ್ತಾ ಇದ್ದುದರಿಂದ ಕರೆ ಹಾಗೇ ಬಡಿದುಕೊಳ್ಳುತ್ತಿತ್ತು. ಸ್ವಲ್ಪ ಉದ್ದದ ಕರೆಯಾದ ಮೇಲೆ ಫೋನ್ ಎತ್ತಿ ನನ್ನ ಹಲೋ ಮುಗಿಯುವುದರೊಳಗೆ, ಒಬ್ಬಾಕೆ ಧ್ವನಿ.. ‘ರೀ, ಬಸ್ಟಾಂಡಿನಲ್ಲಿ ಕಾಯ್ತಾ ಇದ್ದಿ, ಕರಕೊಂಡು ಹೋಗಲೆ ಬನ್ನಿ’ ಫೋನ್ ಕಟ್.. ನನಗೆ ವಿಷಯ ಏನೆಂದು ಅರ್ಥವಾಗುವುದರೊಳಗೆ ಉತ್ತರಕ್ಕೂ ಕಾಯದೆ ಫೋನ್ ಕುಕ್ಕಿದ ಆ ಹೆಣ್ಣಿನ ಧ್ವನಿ ಹೊಸದು. ನಾನು ರಿಸೀವ್ ಮಾಡಿದಾಗಲೇ ನನ್ನ ಹೆಂಡತಿಯೂ ಮನೆಯಲ್ಲೇ ರಿಸೀವ್ ಮಾಡಿದ್ದಾಳೆ. ಮನೆಯೊಳಗೆ ಒಂದು, ಕ್ಲಿನಿಕ್ ನಲ್ಲೊಂದು ರಿಸೀವರ್ ಇಟ್ಟುಕೊಂಡಿದ್ದರಿಂದ ಇದು ಹೊಸತೇನಲ್ಲ. ಯಾವ ಸಮಯಕ್ಕಾದರೂ ಕರೆ ಬರುವ ಸಂಭವನೀಯತೆಗಳು. ಅಚಾನಕ್ ಆ ದೂರವಾಣಿ ಕರೆಯ ಧ್ವನಿ, ವಿವರಗಳನ್ನು ಮನಸ್ಸಿನಲ್ಲಿ ತಾಳೆ ಹಾಕುತ್ತಾ ಪೇಷಂಟ್ ನೋಡಿ ಮುಗಿಯುವುದರೊಳಗೆ ಮತ್ತೊಂದು ಕರೆ ಬಂತು, ಹತ್ತಿರದಲ್ಲೇ ಇದ್ದ ಒಬ್ಬ ರೋಗಿಯ ವಿಸಿಟ್ ಗೆ.  ಕ್ಲಿನಿಕ್ ನ ಪೇಷಂಟ್ ಸರತಿಯೂ  ಮುಗಿದಿದ್ದರಿಂದ ನನ್ನ ರಥವನ್ನೇರಿ ಹೊರಟು ಹೋಗಿದ್ದೆ. ಹತ್ತಿರದ ಕೆಲವು ಪೇಷಂಟ್ ಗಳನ್ನು ಅವರ ಮನೆಗೆ ಹೋಗಿ ವಿಸಿಟ್ ಮಾಡುವ ರೂಢಿಯಿತ್ತು. ಆದ್ದರಿಂದ ಮನೆಯಲ್ಲಿ ಹೇಳುವ ಅಗತ್ಯವೂ ಇರದ ಕಾರಣ, ನಾನು ಸಹಜದಂತೆ ವಿಸಿಟ್  ಮುಗಿಸಿ ಬಂದೆ. ಕ್ಲಿನಿಕ್ ನ ಸಮಯವೂ ಮುಗಿದಿತ್ತು, ಊಟದ ಸಮಯವಾದ್ದರಿಂದ ಮನೆಯೊಳಗೆ ಅಡಿಯಿಡುತ್ತಿದ್ದಂತೆ ಬಾವ ಜಗುಲಿಯಲ್ಲಿ ಸ್ಥಿರಮುದ್ರೆಯಲ್ಲಿ ಕುಳಿತಿದ್ದ. ಅವನ ಆಗಮನ ಅನಿರೀಕ್ಷಿತ. ‘ಹೋ, ಬಾವ ಅರಾಮ… ಯಾವಾಗ ಬಂದೆ?’ ಅಂದವನಿಗೆ ಹೆಂಡತಿ ಪ್ರಧಾನಬಾಗಿಲಿಗೆ ಆತು ಗುಮ್ಮಳಂತೆ ನಿಂತಿದ್ದು ಕಂಡಿತು. ಕೆಂಪುಕಣ್ಣು, ಉರಿಮೂಗು ನೋಡಿದಾಗಲೇ ಗೊತ್ತಾಗಿದ್ದು, ಓಹ್ ಇಂದು ಗಂಗೆ ಧರೆಗಿಳಿದಿದ್ದಾಳೆಂದು. ಅದು ಯಾವ ಕಾರಣಕ್ಕೆಂದು ಮನಸ್ಸಿನ ಮೂಲೆಗಳಲ್ಲೆಲ್ಲಾ ಸರ್ರೆಂದು ಜಾಲಾಡಿದರೂ ಬಗೆಹರಿಯದ ಕಾರಣ ಅವರಿಬ್ಬರ ಮುಖ ನೋಡುವಂತಾಯಿತು. ನನ್ನ ಚಹರೆಯ ಪ್ರಶ್ನೆಯನ್ನು ಓದಿದವನಂತೆ,  ಬಾವ ‘ಸವಾರಿ ಎಲ್ಲಿಂದ ಬಂದಿದ್ದು?’ ಕೋರ್ಟ್‌ ನ ಕಟಕಟೆಯಲ್ಲಿ ನಿಂತ ಅಪರಾಧಿಯ ಸ್ಥಾನ ನನಗಿತ್ತು. ‘ಇಲ್ಲೆಯಾ, ವಿಸಿಟ್ ಗೆ ಹೋಗಿದ್ದೆ,’ ನನ್ನ ಸಹಜ ಉತ್ತರಕ್ಕೆ ಸಮಾಧಾನ‌ವಾಗದ ಮಡದಿಗೆ ದುಃಖ ಉಮ್ಮಳಿಸಿ ಬಂದಿತ್ತು. ವೃತ್ತಿಯಂತೇ ಮದುವೆಯೂ ಹೊಸತು. ದಾಂಪತ್ಯಕ್ಕಿನ್ನೂ ದಮ್ ಇಲ್ಲದ ಎಳಸಿನ ಕಾಲ. ಹಿರಿಯರು ನಿಶ್ಚಯಿಸಿದ ಮದುವೆಯಾದ್ದರಿಂದ ಒಬ್ಬರನ್ನೊಬ್ಬರು ಇನ್ನೂ ಪರಿಚಿತರಾಗುತ್ತಿರುವಾಗಲೇ ನಡೆದಿತ್ತು ಈ ಅಪಸ್ವರದ ಘಟನೆ. ಅವಳಿಗೇನಾಯ್ತು, ಅರ್ಥವಾಗದ ನನಗೆ, ಬಾವನ ಪ್ರಶ್ನೆ. ‘ಬಸ್ಟಾಂಡಿನಲ್ಲಿ ಯಾರು ಕಾಯುತ್ತಿದ್ದರು? ಎಲ್ಲಿಗೆ ಬಿಟ್ಟು ಬಂದದ್ದು? ಯಾರ ಫೋನಾಗಿತ್ತು? ಅದು’ …. ಓಹ್, ಈಗ ಸರಿಯಾಯ್ತು ಲೆಕ್ಕ… ಆ ಅಪರಿಚಿತ ಕರೆ… ಆ ಕರೆಯ ಬಗ್ಗೆ ಹೆಂಡತಿಯ ಮೂಲಕ ಅವನಿಗೆ ತಲುಪಿದ ವಿಷಯ. ಈ ತರಹದ ಗೊಂದಲಗಳಿಗೆ ಕಾರಣವಾದ ಆ ದೂರವಾಣಿಕರೆ! ಮೂಲ ಹೇಗೆ ಹುಡುಕುವುದು? ನನ್ನನ್ನು ಸಮರ್ಥನೆ ಮಾಡಿಕೊಳ್ಳಲು ಏನು ಮಾಡಲಿ?ಮತ್ತೆ ಮನಸ್ಸಿನ ಕಕ್ಷೆಯೊಳಗೆ ಸುತ್ತುತ್ತಿರುವ ಪ್ರಶ್ನೆ, ನಾನ್ಯಾಕೆ ಪದೇ ಪದೇ ಈ ದೂರವಾಣಿ ಕರೆಯೊಳಗೆ ಸಿಕ್ಕಿ ಬೀಳುವುದು? ಅನ್ನುವಾಗಲೇ ಥಟ್ಟನೆ ಒಂದು ವಿಚಾರ ಹೊಳೆದಿತ್ತು. ‘ಬಾವ, ನಂಗೂ ಆ ಫೋನ್ ವಿಷಯ ಬೇಕಿತ್ತು. ಯಾರದ್ದು ಎಂದು… ಒಮ್ಮೆ ಪ್ರಯತ್ನ ಪಡೋಣ… ಅನ್ನುತ್ತಾ ನಮ್ಮ ಗ್ರಾಮದ ಸ್ಥಿರದೂರವಾಣಿ ಕರೆಗಳ ಸಂಖ್ಯೆ ನಮೂದಿಸಿದ ಕೈಪಿಡಿ ಹೊರತೆಗೆದೆ. ನಮ್ಮೂರಿನ ಪಶುವೈದ್ಯರ ಕರೆಗಳು ನನಗೆ ಬರುತ್ತಿದ್ದವಲ್ಲ, ಎಮ್ಮೆ, ಹಸು, ಕರುಗಳ ಚಿಕಿತ್ಸೆಗೆಂದು. ಅವರನ್ನೇ ವಿಚಾರಿಸಲು ಅವರಿಗೇ ಫೋನು ಮಾಡಲು ಅವರ ಸಂಖ್ಯೆ ಹುಡುಕಿದೆ. ಹೆಸರಿನ ಪಟ್ಟಿಯಲ್ಲಿ ಪಶುವೈದ್ಯರ ಹೆಸರು. ಅರೆ! ಸ್ಥಿರ ದೂರವಾಣಿ ಸಂಖ್ಯೆ ನಂದು! ಆಹ್, ನನ್ನ ಹೆಸರು ತೆಗೆದೆ…., ಆ ಸಂಖ್ಯೆ ನನ್ನ ಮನೆಯ ಸ್ಥಿರ ದೂರವಾಣಿ ಸಂಖ್ಯೆಯ ಮೊದಲಿನ ಅಂಕೆಗಳೆ…. ಆದರೆ ಕೊನೆಯ ಅಂಕೆ ಅಲ್ಲ! ಅಂದರೆ ಬೇರೆಯವರ ದೂರವಾಣಿ ಸಂಖ್ಯೆ… ಓಹ್! ಇದೊಂದು ಹೊಸ ಅನ್ವೇಷಣೆಯಾಗಿ, ನನಗೆ ಪತ್ತೆದಾರಿ ಮಾಡುವ ಮನಸ್ಸು ಚುರುಕಾಯಿತು. ‘ನೀವಿಬ್ಬರೂ ಇಲ್ಲೆ ಈ ರಿಸೀವರ್ ಇಂದ ಕೇಳಿ. ನಾನು ವಿಚಾರಿಸುತ್ತೇನೆ.’ ಅನ್ನುತ್ತಾ, ನನ್ನ ಹೆಸರಿನ ಮುಂದೆ ನಮೂದಿಸಿದ್ದ ಸಂಖ್ಯೆಗೆ ಕರೆಯಿತ್ತೆ. ಫೋನ್

ಕಥಾಯಾನ Read Post »

ಅನುವಾದ, ಕಥಾಗುಚ್ಛ

ಕಥಾಯಾನ

ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.         ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು ರಸತಂತ್ರ ಶಾಲೆ, ಎಲ್ಲೆಡೆಯೂ ವಿಷವನ್ನು ಬಿತ್ತರಿಸುವ ಒಂದು ಕಾರ್ಖಾನೆಯಿದೆ.    ಆಕೆಗೆ ಆತನಿಗಿಂತ ದೊಡ್ಡದಾದ ಸ್ನೇಹಿತರ ಬಳಗವೊಂದಿತ್ತು. ಅಲ್ಲಿ ಕವಿಗಳು, ಸಿನಿಮಾ ಹಾಡನ್ನು ಬರೆಯುವವರು,ಪಾಪದ ನಿರ್ಮಾಪಕರು, ನಟರು, ಚಿತ್ರಕಾರರು, ಎಂ.ಪಿ. ಡೆಪ್ಯೂಟಿ ಮಂತ್ರಿಗಳು, ಸೆಕ್ರೆಟರಿ, ಮಂತ್ರಿಗಳು ಹೀಗೆ ಎಲ್ಲ ವರ್ಗದವರೂ ಆಕೆಗೆ ಪರಿಚಿತರಾಗಿದ್ದರು.    ಆದರೂ ಚಂದ್ರಿಕಳಿಗೆ ಚಂದ್ರನ ಮೇಲೆ ಪ್ರೀತಿ. ಹಾಗೆ ಚಂದ್ರ ಅಕೆಯ ಮನೆಗೆ ಬಂದದ್ದು. ಕಾರಿನಿಂದಿಳಿದ ಚಂದ್ರ ಚಂದ್ರಿಕಳನ್ನು ನೋಡಿ ನಕ್ಕ. ಚಂದ್ರಿಕ ಆತನನ್ನು ಮನೆಯೊಳಗೆ ಆಹ್ವಾನಿಸಿದಳು. ಚಂದ್ರ ಮನೆಗೆ ಬಂದ ಸಂತೋಷಷದಲ್ಲಿ ಕ್ಷಣ ಹೊತ್ತು ಏನು ಹೇಳಬೇಕೆಂದೋ ಏನು ಮಾಡಬೇಕೆಂದೋ ಅವಳಿಗೆ ತೋಚದಾಯಿತು. ಆಕೆಯ ಬಹುದಿನಗಳ ಆಸೆಯೊಂದು ಈಡೇರಿದ ದಿನವಲ್ಲವೇ ಇಂದು.       ಕಾಲೇಜಿನಲ್ಲಿ ಕಲಿಯುತ್ತಿರುವಾಗಲೇ  ಚಂದ್ರಿಕಳ ಆರಾಧನಾ ಮೂರ್ತಿಯಾಗಿದ್ದ ಚಂದ್ರ. ಅಕೆಗೆ ಇತರ ಅನೇಕ ಸ್ನೆಹಿತರಿದ್ದರೂ, ವೈಟ್ ಲಿಫ್ಟರಾಗಿ ಮಾತ್ರ ಪ್ರಸಿದ್ಧನಾಗಿದ್ದ ಚಂದ್ರನನ್ನು  ಆರಾಧಿಸುತ್ತಿದ್ದಳು. ಚಂದ್ರನು ಅವಳೆದುರಿಗೆ ಬಂದಾಗಲೆಲ್ಲ ಆಕೆಗೆ ಗ್ರಹಣ ಬಡಿದಂತಾಗುತ್ತಿತ್ತು. ಮೂರು ವರ್ಷದೊಳಗೆ ಕಾಲೇಜಿನಾವರಣದ ವಿವಿಧ ಭಾಗಗಳಲ್ಲಿ ಅವರಿಬ್ಬರೂ ಭೇಟಿಯಾಗುತ್ತಿದ್ದರು. ಆದರೆ ಚಂದ್ರಿಕ ಚಂದ್ರನನ್ನು ನೋಡುತ್ತಿದ್ದಳಲ್ಲದೆ ಚಂದ್ರನು ಆಕೆಯನ್ನು ನೋಡುತ್ತಲೂ ಇರಲಿಲ್ಲ , ಗಮನಿಸುತ್ತಲೂ ಇರಲಿಲ್ಲ.          ಹಲವು ಹುಡುಗರು ಚಂದ್ರಿಕಳಿಗೆ ಪ್ರೇಮ ಪತ್ರ ಬರೆಯುತ್ತಿದ್ದ ಕಾಲ ಅದು. ಆದರೆ, ಚಂದ್ರಿಕ ಚಂದ್ರನ ಪ್ರೇಮ ಪತ್ರಕ್ಕಾಗಿ ಕಾಯುತ್ತಿದ್ದಳು. ಹಾಗೆ ಅವಳು ಚಂದ್ರನಿಗೆ ಅದೆಷ್ಟೋ ಪ್ರೇಮಪತ್ರಗಳನ್ನು ಬರೆದು ಕಳಿಸಿ ಉತ್ತರಕ್ಕಾಗಿ ಕಾದುಕುಳಿತರೂ ಅವನಿಂದ ಒಂದಕ್ಕೂ ಮರುಪತ್ರ ಬರಲೇ ಇಲ್ಲ.          ಕಾಲೇಜು ಜೀವನ ಮುಗಿಸಿ ಅವರಿಬ್ಬರೂ ತಮ್ಮದೇ ದಾರಿಯಲ್ಲಿ ಹೆಜ್ಜೆಹಾಕಿದರು. ಚಂದ್ರಿಕ ತನ್ನ ಕುಲಕಸುಬಿಗೆ ಸೇರಿದರೆ, ಚಂದ್ರ ತಮ್ಮ ಪೂರ್ವಜರು ನಡೆಸಿಕೊಂಡು ಬರುತ್ತಿರುವ ಕಂಪೆನಿಯಲ್ಲಿ ಸೇರಿಕೊಂಡನು.   ಚಂದ್ರನು ಕಂಪೆನಿಯ ಮ್ಯಾನೇಜಿಂಗ್ ಪಾರ್ಟ್ನರಾದಾಗ ಕ್ರಮೇಣ ಶ್ರೀಮಂತರಾದರು. ಬೇಕಾದಷ್ಟು ಆಸ್ತಿ ಪಾಸ್ತಿಗಳು ಕೈಸೇರಿದವು. ಚಂದ್ರಿಕ ಮನೆಗೆ ಬಂದಾಗ ಬಂಧುಬಳಗದವರ ಘನತೆ ಹೆಚ್ಚಿತು. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಲಿತ ಚಂದ್ರಿಕಳಿಗೆ ಎಲ್ಲಾ ರೀತಿಯ ಜವಾಬ್ದಾರಿಗಳನ್ನು ಹೊರಲು ಸಾಮರ್ಥಳಾಗಿದ್ದಳು. ಆದ್ದರಿಂದಲೇ ಆಕೆಯ ಅಮ್ಮ ಎಲ್ಲಾ ಜವಾಬ್ದಾರಿಗಳನ್ನೂ ಚಂದ್ರಿಕಳ ಹೆಗಲ ಮೇಲೆ ಹೊರಿಸಿ ತಾವು ನಿಶ್ಚಿಂತೆಯಿಂದ ವಿಶ್ರಾಂತಿ ಜೀವನಕ್ಕೆ ಕಾಲಿರಿಸಿದರು.    ಆಂಗ್ಲ ಭಾಷೆಯ ಪತ್ರಿಕೆಗಳನ್ನು ಓದುವ ಚಂದ್ರಿಕ ಪ್ರತಿದಿನ ಮೊದಲು ಸ್ಪೋರ್ಟ್ಸ್ ಕಾಲಂ ನೋಡುವಳು. ಕಾರಣ, ವೈಟ್ ಲಿಫ್ಟಿಂಗಲ್ಲಿ ಚಂದ್ರನು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದ ಕಾಲ ಅದಾಗಿತ್ತು.         ಹೀಗಿರುವಾಗ  ಒಂದುದಿನ ಚಂದ್ರನ ಕಾರು ಅಪಘಾತಕ್ಕೊಳಗಾಯಿತು. ಚಂದ್ರನು ಅಪ್ರಜ್ಞಾವಸ್ಥೆಯಲ್ಲಿ ತುಂಬ ದಿನ ಆಸ್ಪತ್ರೆಯಲ್ಲಿದ್ದ. ಪಕ್ಕದ ಕೋಣೆಯಲ್ಲೇ ಚಂದ್ರಿಕಳೂ ಅಪ್ರಜ್ಞಾವಸ್ಥೆಯಲ್ಲಿದ್ದಳು. ಪ್ರಜ್ಞೆ ಬಂದಾಗಷ್ಟೇ ಅವರಿಗೆ ತಿಳಿದದ್ದು ತಮ್ಮದೇ ಕಾರುಗಳು ಪರಸ್ಪರ ಢಿಕ್ಕಿ ಹೊಡೆದದ್ದೆಂದು.    ಮೊದಲು ಆಸ್ಪತ್ರೆ ಬಿಟ್ಟದ್ದು ಚಂದ್ರ. ಆತ ಚಂದ್ರಿಕಳನ್ನು ನೋಡಲು ಬಂದ. ಚಂದ್ರಿಕ ಗುಣಮುಖಳಾಗಿದ್ದರೂ ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ತಿಳಿಸಿದ್ದರು. ಚಂದ್ರ ಅವತ್ತು ಮೊದಲ ಬಾರಿ ಚಂದ್ರಿಕಳನ್ನು ನೋಡಿದ. ಪರಸ್ಪರ ಕ್ಷೇಮಾನ್ವೇಷಣೆಯ ನಂತರ ಚಂದ್ರ ಕೇಳಿದ”ನಿಮಗಾಗಿ ನಾನೇನಾದರೂ ಮಾಡಬೇಕೇ?” ಚಂದ್ರಿಕಳು ಆತನನ್ನು ಮನೆಗೆ ಆಹ್ವಾನಿಸಲು ಆತ ಒಪ್ಪಿಕೊಂಡ.        ಹಾಗೆ ಚಂದ್ರನು ಚಂದ್ರಿಕಳ ಮನೆಗೆ ತಲುಪಿದ್ದು. ಎಲ್ಲವೂ ಒಂದು ಕಾರು ಅಪಘಾತ ತಂದಿಟ್ಟ ಭಾಗ್ಯ.   ಕುಡಿಯಲು ಪಾನೀಯ , ಕಲ್ಲುಸಕ್ಕರೆ ಸೇರಿಸಿದ ಹಾಲು, ಬದಾಮ್, ಮೊಸರು, ಬೇಯಿಸಿದ ಗೋಧಿಕಾಳು, ಕಾಯಿಸಿದ ಜೋಳ, ಸೂಪು, ದೊಡ್ಡ ತಟ್ಪೆಯಲ್ಲಿ ನೂಡಲ್ಸ್, ಎಲ್ಲವೂ ಊಟದ ಮೇಜನ್ನು ಅಲಂಕರಿಸಿದ್ದವು.   ಅಲ್ಲಿ ಗಾಢವಾದ ಮೌನವೊಂದಾವರಿಸಿತ್ತು. ತಲೆ ವಸ್ತ್ರಧರಿಸಿದ ಕೆಲಸದಾಳು ಒಂದು ಮೂಲೆಯಲ್ಲಿ ಅಪರಾಧಿಯಂತೆ ನಿಂತಿದ್ದನು. ಅವರಿಬ್ಬರೂ ಊಟಕ್ಕೆ ಬಂದು ಕುಳಿತರು. ಚಂದ್ರನು ಪಾನೀಯವನ್ನೂ ಚಂದ್ರಿಕ ಬೇಯಿಸಿದ ಗೋಧಿಕಾಳನ್ನೂ ತಿಂದು ಟಿಷ್ಯೂ ಪೇಪರಲ್ಲಿ ಕೈ ಒರೆಸುತ್ತಾ ಇಬ್ಬರೂ ಮಲಗುವ ಕೊಠಡಿಗೆ ಹೋದರು. ಇಬ್ಬರೂ  ಮಂಚದಲ್ಲಿ ಅಕ್ಕ ಪಕ್ಕದಲ್ಲಿ ಕುಳಿತು ಮಾತನಾಡಲು ತೊಡಗಿದರು. ” ನಿನಗೇನು ಬೇಕು” ಚಂದ್ರನು ಕೇಳಲು “ಕೇಳಿದ್ದೆಲ್ಲ ಕೊಡುತ್ತೀಯಾ?” ಎಂದು ಆಕೆ ಮರುಪ್ರಶ್ನೆ ಎಸೆದಳು. ಆತ ಕೊಡುವೆನೆಂದು ಒಪ್ಪಿದಾಗ ಚಂದ್ರಿಕ “ನೀವು ವೈಟ್ ಲಿಫ್ಟರಲ್ಲವೆ ಆದ್ದರಿಂದ ನನ್ನನ್ನು ನೀವು ಎತ್ತಬೇಕು. ನಿಮ್ಮ ಕೈಗಳಲ್ಲಿ ಒಂದು ಪುಟ್ಟ ಹಕ್ಕಿಯಂತೆ ನಾನು ಕುಳಿತುಕೊಳ್ಳಬೇಕೆಂಬ ಆಸೆಯಿದೆ” ಎಂದಳು. ಅದಕ್ಕೆ ಚಂದ್ರನು, “ಆದರೆ, ಇಲ್ಲಿ ಸ್ಥಳ ಸಾಕಾಗುವುದಿಲ್ಲ. ನಾವು ಕಡಲ ತೀರಕ್ಕೆ ಹೋಗುವ , ಅಲ್ಲಿ ನಾನು ನಿನ್ನನ್ನು ಮೇಲಕ್ಕೆತ್ತುತ್ತೇನೆ ಅದಾಗಿರಬಹುದು ನನ್ನ ಕೊನೆಯ ವೈಟ್ ಲಿಫ್ಟಿಂಗ್.” ಎಂದೊಡನೆ ಚಂದ್ರಿಕ ಒಪ್ಪಿದಳು.     ಆಕೆ ಬೇಗ ಬಟ್ಪೆ ಬದಲಾಯಿಸಿದಳು. ಖದರಿನ ಬಟ್ಟೆ, ಪಾದರಕ್ಷೆ ಧರಿಸಿದಳು. ಅಮೇರಿಕದಿಂದ ಗೆಳೆಯ ಕೊಟ್ಟು ಕಳುಹಿಸಿದ ಒಂದು ನೀಳವಾದ ಸ್ಕಾರ್ಫ್ ಇತ್ತು. ಮರಣಿಸಿದ ಆತನ ನೆನಪಿಗಾಗಿ ಅವಳು ಯಾವಾಗಲೂ ಜಾಗ್ರತೆಯಿಂದ ಅದನ್ನು ತೆಗೆದಿರಿಸಿದ್ದಳು.   ಅವರಿಬ್ಬರೂ ಕಾರು ಹತ್ತಿ ಹೊರಟರು. ಕಡಲ ತೀರದಲ್ಲಿ ಜನ ಕಡಿಮೆಯಿದ್ದ ಸ್ಥಳಕ್ಕೆ ಕಾರು ವೇಗವಾಗಿ ಓಡುತ್ತಿತ್ತು. ಚಂದ್ರಿಕ  “ಚಂದ್ರ ಒಂದು ಹಾಡು ಹಾಡುತ್ತೀಯಾ?” ಕೇಳಿದಳು. ಚಂದ್ರನು ಹಾಡಲು ತೊಡಗಿದ. I tried to sleep to kill the pain When I wake it’s still the same Cause am living in this world you left behind I just like a broken piece of glass You have swept me aside to pass Leaving shetterd dreams in my heart to stay I am  just a fool to sit and cry Washing years before I die In this lonely world This world you left behind ಅವಳು ಹಾಡಿನ ಗುಂಗಿನಲ್ಲಿದ್ದಳು. ಓಡುತ್ತಿರುವ ಕಾರಿನಿಂದ ಅವಳ ಸ್ಕಾರ್ಫ್ ನ ತುದಿಯೊಂದು ಹೊರಗೆ ಗಾಳಿಗೆ ಹಾರುತ್ತಿತ್ತು. ಹಾರುತ್ತಾ ಹಾರುತ್ತಾ ಅದು ಹಿಂದಿನ ಚಕ್ರಕ್ಕೆ ಸಿಕ್ಕಿಕೊಂಡರೆ, ಮತ್ತೊಂದು ತುದಿ ಅವಳ ಕುತ್ತಿಗೆಯನ್ನು ಬಂಧಿಸಿತು. ಆಕಗೆ ಉಸಿರುಗಟ್ಟಿದಾಗಲೇ ಪರಿಸರ ಪ್ರಜ್ಞೆ ಬಂದದ್ದು. ಕೈಕಾಲುಗಳನ್ನು ಅಲುಗಾಡಿಸಲು ಅವಳಿಂದ ಸಾಧ್ಯವಾಗಲಿಲ್ಲ. “ಚಂದ್ರಾ… ರಕ್ಷಿಸು” ಎಂದರೂ ಆಕೆಯ ಕಂಠದಿಂದ ಸ್ವರ  ಹೊರಬರಲೇ ಇಲ್ಲ. ಕ್ಷಣದೊಳಗೆ ಆಕೆಯ ಜೀವ ಸಂಗೀತ ಸಾಗರದಲ್ಲಿ ವಿಲೀನವಾಯಿತು. ಇದನ್ನೊಂದೂ ತಿಳಿಯದೆ ಆಗಲೂ ಚಂದ್ರ ಹಾಡುತ್ತಲೇ ಇದ್ದ. I am  just a fool to sit and cry Washing years before I die In this lonely world This world you left behind ……

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

  ಸರಸ್ವತಿ ಜಿ. ಹರೀಶ್ ಬೇದ್ರೆ ಸರಸ್ವತಿ ಮುಂಜಾನೆ ಬೇಗನೇ ಎದ್ದು ಗಂಡ ಮಕ್ಕಳಿಗೆ ಕಾಫಿ ತಿಂಡಿ ಮಾಡಿಕೊಟ್ಟು  ಅಂಗಡಿಯ ಬಳಿ ಬರುವ ಹೊತ್ತಿಗೆ ಎಂಟು ಗಂಟೆಯಾಗಿತ್ತು. ಆಗಲೇ  ಸಾಮಾಜಿಕ ಅಂತರ ಬಳಸಿ ನಿಂತಿದ್ದ ಕ್ಯೂ ಹೆಚ್ಚುಕಮ್ಮಿ ಅರ್ಧ ಕಿ.ಮೀ.ಗಿಂತ ಉದ್ದವಿತ್ತು. ಅಂಗಡಿ ತೆರೆಯಲು ಇನ್ನೂ ಒಂದು ಗಂಟೆ ಬಾಕಿ ಇತ್ತು. ಅಯ್ಯೋ ಏನಪ್ಪಾ ಮಾಡುವುದು ಎಂದು ಗೊಣಗುತ್ತಲೇ ಸರತಿಯಲ್ಲಿ ನಿಂತಳು. ಕ್ಷಣಕ್ಷಣಕ್ಕೂ ಕ್ಯೂ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಜನರನ್ನು ನಿಯಂತ್ರಿಸಲು ಒಂದಿಬ್ಬರು ಪೋಲಿಸರು ಬಂದರು. ಅವರು ಹಿಂದೆ ಮುಂದೆ ಓಡಾಡುವಾಗ ಸರಸ್ವತಿಯನ್ನು ನೋಡಿ,  ಆಶ್ಚರ್ಯವನ್ನು ತಡೆದುಕೊಳ್ಳಲಾರದೆ ನಿಮಗೂ ಬೇಕಾ ಎಂದು ಕೇಳಿದರು. ಇವಳು ಬೇಕು ಎನ್ನುವಂತೆ ತಲೆ ಆಡಿಸಿದಳು. ಸರಿ ಸರಿ ಮೊದಲು ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಿ ಎಂದು, ಇವರಿಗೆ ಯಾವಾಗ ಏನು ಸಿಗುತ್ತೆ ಗೊತ್ತು, ಹೊರಗಡೆ ಹೇಗೆ ಬರಬೇಕು ಗೊತ್ತಿಲ್ಲ ಮುಂತಾಗಿ ಹೇಳುತ್ತಾ ಮುಂದೆ ಸಾಗಿದರು.  ಪೋಲಿಸರಷ್ಟೇ ಅಲ್ಲದೆ ಆ ದಾರಿಯಲ್ಲಿ ಹೋಗಿ ಬರುವವರು ಸರಸ್ವತಿಯನ್ನು ವಿಚಿತ್ರವಾಗಿ ನೋಡುತ್ತಾ, ಅವಳು ಬಗ್ಗೆಯೇ ಹಗುರವಾಗಿ ಮಾತನಾಡುತ್ತಾ ಸಾಗುತ್ತಿದ್ದರು. ಇದನ್ನು ಗಮನಿಸಿದರೂ ಸರಸ್ವತಿ ಕ್ಯೂನಲ್ಲಿ ಅಂಗಡಿ ತೆರೆಯುವುದನ್ನೇ ಕಾಯುತ್ತಾ ನಿಂತಳು. ಒಂಬತ್ತು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಅಂಗಡಿ ಬಾಗಿಲು ತೆರೆಯಿತು. ಅಲ್ಲಿಯವರೆಗೆ ಸಂಯಮದಿಂದ ನಿಂತಿದ್ದ ಜನ ಸಾಮಾಜಿಕ ಅಂತರ ಮರೆತು ನುಗ್ಗಿದರು.  ಅವರಂತೆ ನುಗ್ಗಲು ಸಾಧ್ಯವಾಗದೆ, ಏನು ಮಾಡಬೇಕೆಂದು ತಿಳಿಯದೆ ಅಂಗಡಿ ಹತ್ತಿರದಲ್ಲೇ ಕಾಯುತ್ತಾ ನಿಂತಳು. ಜನರ ನುಗ್ಗಾಟ ಪೋಲಿಸರ ಹಿಡಿತಕ್ಕೂ ಬರಲಿಲ್ಲ.  ಇವಳು ಅಲ್ಲೇ ಹಾಗೆ ಕಾಯುತ್ತಲೇ ಇದ್ದಳು. ಇದನ್ನು ಗಮನಿಸಿದ ಪೋಲಿಸರು, ನೀವು ಇಲ್ಲಿ ನಿಂತಿದ್ದರೆ ನಿಂತೇ ಇರುತ್ತೀರಿ, ಏನು ಬೇಕು ಹೇಳಿ ಹಣಕೊಡಿ ತಂದುಕೊಡುತ್ತೇವೆ ಎಂದರು.  ಸರಸ್ವತಿ ಹೇಳಿ ಹಣ ಕೊಟ್ಟಳು. ಪೋಲಿಸಿನವರು ತಂದುಕೊಟ್ಟಿದ್ದನ್ನು ಹಿಡಿದು ಮನೆಗೆ ಬಂದವಳೇ , ಮನೆಯಲ್ಲೇ ಆಸೆಯಿಂದ ದಾರಿ ಕಾಯುತ್ತಿದ್ದ ಗಂಡನ ಮುಂದೆ ಇಟ್ಟಳು. ಒಂದುವರೆ ತಿಂಗಳಿಂದ ಒಂದು ಹನಿಯೂ ಸಿಗದೆ ಸತ್ತೇ ಹೋಗುವವನಂತೆ ಆಗಿದ್ದ ಅವನ ಮುಖದಲ್ಲಿ ಜೀವಕಳೆ ಮೂಡಿತು. ಇದನ್ನು ಕಂಡ ಸರಸ್ವತಿಗೆ, ಕ್ಯೂನಲ್ಲಿ ನಿಂತಾಗ ಇವಳನ್ನು ಅಸಹ್ಯವಾಗಿ ನೋಡಿ, ಮಾತನಾಡಿದ ಜನರ ಎಲ್ಲಾ ವಿಚಾರಗಳು ಮರೆತು ಹೋಯಿತು. **********

ಕಥಾಯಾನ Read Post »

ಕಥಾಗುಚ್ಛ

ಮಕ್ಕಳ ಕಥೆ

“ಕತ್ತೆಗೊಂದು ಕಾಲ”  ಅದು ಗಿರಿಕಂದರ ಪರ್ವತ ಶ್ರೇಣಿಗಳ ನಾಡು. ಅಲ್ಲಿ ಜಯದೇವ ಅರಸನು ರಾಜ್ಯ ಆಳುತಿದ್ದನು. ಆತ ತನ್ನ ಆಸ್ಥಾನದಲ್ಲಿ ಕುದುರೆಗಳ ಜೊತೆಗೆ ಕತ್ತೆಗಳನ್ನು ಸಾಕಿದ್ದನು. ಎಲ್ಲ ರಾಜರು ಕುದುರೆ ಸಾಕುತಿದ್ದರೆ, ಈತ ಮಾತ್ರ ಎರಡನ್ನು ಸಾಕುತಿದ್ದನು. ಈ ಮಾತು ರಾಜ್ಯದ ಎಲ್ಲ ಜನರಿಗೆ ಅಷ್ಟೆ ಅಲ್ಲ, ಕುದುರೆಗಳಿಗೂ ಆಶ್ಚರ್ಯವಾಗಿತ್ತು.                ಒಂದು ದಿನ ಸೇವಕರು ಕುದುರೆ ಮತ್ತು ಕತ್ತೆ ಒಟ್ಟಿಗೆ ಬಯಲಲ್ಲಿ ಮೈಯಲು ಬಿಟ್ಟರು. ಆಗ ಮೈಯುತ್ತಾ ಕುದುರೆ ಒಮ್ಮೇಲೆ ಹುಂಕರಿಸುತ್ತಾ ಕತ್ತೆಗೆ, “ಏ.. ಕತ್ತೆ, ನಿನ್ನದೇನೆ ಇಲ್ಲಿ ಕೆಲಸ..?” ಎಂದು ತೆಗಳಿ ನಕ್ಕಿತು. ಆಗ ಕತ್ತೆ, “ಕುದುರೆಯಣ್ಣಾ, ನಾವು  ಏನಾದರೂ ರಾಜನಿಗೆ ಉಪಯೋಗ ಬರುತ್ತಿರಬಹುದು, ಆ ಕಾರಣವೇ ಆತ ನಮಗೆ ಸಾಕಿರಬೇಕಲ್ಲ..!” ಎಂದು ಹೇಳಿ  ಸುಮ್ಮನೆ ಹುಲ್ಲು ತಿನ್ನುವದು. ಆದರೆ ಕುದುರೆ ಸುಮ್ಮನಾಗದೆ, “ ಏ.. ಮುರ್ಖ ಕತ್ತೆ, ನಿನಗೆ ತಿನ್ನುವದನ್ನು ಬಿಟ್ಟು ಮತ್ತೇನು ಬರುತ್ತೆ ಹೇಳು. ನೋಡು, ಯುದ್ಧ ಮಾಡಲು ನಾವು ಹೋಗುತ್ತೇವೆ, ಪ್ರಯಾಣ ನಮ್ಮಿಂದಲೆ, ಓಟದ ಸ್ಪರ್ಧೆಯಾಗಲಿ ಹಬ್ಬ ಉತ್ಸವ ಆಗಲಿ ನಮ್ಮನ್ನೆ ಬಳಿಸುವರು. ನಿನ್ನ ಒಂದಾದರೂ ಉಪಯೋಗ ಹೇಳು ನೊಡೋಣ..” ಎಂದು ಮತ್ತೆ ಕೆಣಕಿತು. ಆಗ ಅದು, “ಕುದುರೆಯಣ್ಣಾ ನೀನು ಜಾಣ ಎಂಬುದು ನನಗೆ ಗೊತ್ತು. ಆದರೆ ಪ್ರತಿಯೊಂದು ಪ್ರಾಣಿಗಳು ಹುಟ್ಟಿದ್ದು, ಏನಾದರೂ ಮಾಡಲಿಕ್ಕೆ. ನಮಗೂ ಒಂದು ಕಾಲ ಬರುತ್ತೆ..” ಎಂದು ಹೇಳಿ ಕತ್ತೆ ದೊಡ್ಡಿಗೆ, ಕುದುರೆ ಲಾಯಕ್ಕೆ ಹೋದವು.              ಕೆಲ ದಿನಗಳ ನಂತರ ವೈರಿ ರಾಜನು ಯುದ್ಧ ಸಾರಿ ಹೊರಟಾಗ ಜಯದೇವನು ಪ್ರತಿ ಹಲ್ಲೆಗಾಗಿ ಅಶ್ವದಳದ ಸಿದ್ಧತೆ ಮಾಡಿಕೊಳ್ಳಿ ಎಂದು ಅಪ್ಪಣೆ ಕೊಟ್ಟನು. ಆಗ ಸೇವಕರು ಕುದುರೆಗಳಿಗೆ ಹೆಚ್ಚಿನ ಶಕ್ತಿದಾಯಕ ಆಹಾರ ಕೊಡಲು ಪ್ರಾರಂಭ ಮಾಡುತ್ತಾರೆ. ಕುದುರೆ ಲಾಯ ಮತ್ತು ಕತ್ತೆಯ ದೊಡ್ಡಿಯ ಮಧ್ಯ ತಂತಿಯ ಸಂರಕ್ಷಣೆ ಅಷ್ಟೆ. ಆಗ ಕತ್ತೆಯನ್ನು ನೋಡಿ ಕುದುರೆ, “ನೋಡಿದಿಯಾ ಕತ್ತೆ, ನಾವು ಯುದ್ಧಕ್ಕೆ ಹೊರಟಿದ್ದೇವೆ. ಅದಕ್ಕೆ ನಮಗೆ ಒಳ್ಳೊಳ್ಳೆ ರುಚಿಕರ ಚಂದಿ, ನಿನಗೆ ಬರಿ ಹುಲ್ಲು..” ಎಂದು ಹುಂಕರಿಸಿ ನಗುತ್ತದೆ. ಆಗ ಅದು ಮರು ಏನು ಮಾತನಾಡದೆ, “ಶುಭಾಶಯ ಕುದುರೆಯಣ್ಣಾ, ಗೆಲುವು ನಿನ್ನದಾಗಲಿ..” ಎಂದು ಶುಭ ಕೋರುತ್ತದೆ.          ಕುದುರೆ ರಣರಂಗದಲ್ಲಿ ಭೀಮ ಪರಾಕ್ರಮದಿಂದ ಕಾದಾಡಿ ಯುದ್ಧ ಗೆದ್ದು ಬರುತ್ತದೆ. ಅಲ್ಲಿಂದ ಓಡುತ್ತಾ ಓಡುತ್ತಾ ತನ್ನ ಲಾಯಕ್ಕೆ ಬರುವಾಗ ಮತ್ತೆ ಕತ್ತೆಯನ್ನು ನೋಡಿ, “ಎಲೇ.. ಕತ್ತೆ, ನಾವು ಯುದ್ಧ ಗೆದ್ದು ಬಂದೇವು. ವೈರಿ ಸೈನ್ಯ ಕಾಲಲ್ಲಿ ಹಾಕಿ ತುಳಿದೇವು. ಇದರಿಂದ ಸಂತೋಷನಾದ ರಾಜ, ನಾಳೆ ನಮ್ಮ ಮೆರವಣಿಗೆ ಇಟ್ಟಿದ್ದಾನೆ..” ಎಂದು ಜೋರಾಗಿ ಹೇಳಿತು. ಅದಕ್ಕೆ ಕತ್ತೆ, “ಗೆಲುವಿಗಾಗಿ ಶುಭಾಶಯ, ಕುದುರೆಯಣ್ಣಾ..”ಎಂದು ಹೇಳಿ ಸುಮ್ಮನೆ ಹುಲ್ಲು ತಿನ್ನುತ್ತದೆ. ಆದರೆ ಕುದುರೆ ಮಾತ್ರ ಸುಮ್ಮನಾಗುವದಿಲ್ಲ, “ಇಲ್ಲಾ, ನಮ್ಮ ರಾಜನು ಎಷ್ಟು ಮುರ್ಖನಿರಬಹುದು. ನಿಮ್ಮಂತಹ ಮೂರ್ಖ ಪ್ರಾಣಿಗಳನ್ನು ಕಟ್ಟಿಕೊಂಡು ಸುಮ್ಮನೆ ರಾಜ್ಯದ ವೆಚ್ಚ ಹೆಚ್ಚಿಗೆ ಮಾಡಿಕೊಳ್ಳುತಿದ್ದಾನೆ..” ಎಂದಾಗಲೂ ಕತ್ತೆ ಏನು ಮಾತನಾಡದೆ ಸುಮ್ಮನಿರುತ್ತದೆ.                     ಮರುದಿನ ರಾಜಧಾನಿಯಲ್ಲಿ ರಾಜನ ಮೆರವಣಿಗೆ ಆಗುತ್ತದೆ. ಅಲ್ಲಿ ಕುದುರೆಗಳ ಹೊಗಳಿಕೆ ಆಗುತ್ತದೆ. ಎಲ್ಲ ಜನರು ರಾಜ ಮತ್ತು ಕುದುರೆಗಳ ಮೇಲೆ ಪುಷ್ಪಾರ್ಪಣೆ ಮಾಡುತ್ತಾರೆ. ಅಂದು ರಾಜ ವೈರಿ ಮುಕ್ತನು ಆಗಿರುತ್ತಾನೆ. ಆದರೂ ಆತ ದೂರದ ಶತ್ರುಗಳಿಂದ ಯಾವ ತೊಂದರೆ ಆಗಬಾರದೆಂದು ಸಮೀಪದ ಎತ್ತರ ಪರ್ವತದ ಮೇಲೆ ಕೋಟೆ ಕಟ್ಟುವದಾಗಿ ಘೋಷಣೆ ಮಾಡುತ್ತಾನೆ. ಕೋಟೆ ಕಟ್ಟಬೇಕಾದರೆ ಕಲ್ಲು, ಮಣ್ಣು, ಕಟ್ಟಿಗೆ, ಸಿಮೇಂಟ್‍ಗಳಂತಹ ಭಾರವಾದ ವಸ್ತುಗಳನ್ನು ಮೇಲೆ ತಲುಪಿಸಬೇಕಿತ್ತು. ಕುದುರೆಗಳಿಂದ ಈ ಕಾರ್ಯ ಅಸಾಧ್ಯ ಎಂಬುದು ರಾಜನಿಗೆ ಮಾತ್ರ ಗೊತ್ತಿರುತ್ತದೆ. ಅದಕ್ಕಾಗಿ ಆತ, ‘ಕೋಟೆಯ ಕೆಲಸಕ್ಕೆ ಕತ್ತೆಗಳನ್ನು ಬಳಿಸಿಕೊಳ್ಳಿ..’ಎಂದು ಅಪ್ಪಣೆ ಕೊಡುತ್ತಾನೆ. ಎಲ್ಲ ಜನರಿಗೆ ಇದು ವಿಚಿತ್ರ ಅನಿಸುವದು, ಆದರೂ ಸೇವಕರು ಬಂದು ಕತ್ತೆಗಳನ್ನು ಒಯ್ಯುವಾಗ ಮತ್ತೆ ಕುದುರೆ ಕತ್ತೆಯನ್ನು ನೋಡಿ, “ಹೋಗು ಕತ್ತೆ ಹೋಗು.. ಅದು ನಿಮ್ಮಿಂದ ಆಗದ ಕೆಲಸ. ರಾಜನಿಗೆ ನಾಳೆಯಿಂದ ಮತ್ತೆ ನಮ್ಮನ್ನೆ ಕರೆಸಬೇಕಾಗುತ್ತದೆ..” ಎಂದು ನಸು ನಕ್ಕಿತು.             ಕತ್ತೆಗಳೆಲ್ಲಾ ಹೋಗಿ ಸಂಯಮದಿಂದ ಭಾರ ವಸ್ತುಗಳನ್ನು ಅತ್ಯಂತ ಕಾಳಜಿಯಿಂದ ಒಯ್ದು ಪರ್ವತದ ಮೇಲೆ ಚೆಲ್ಲುತ್ತವೆ. ಆ ದಿನ ಕತ್ತೆಗಳ ಶ್ರಮ ಮತ್ತು ಪ್ರಾಮಾಣಿಕತೆ ನೋಡಿ ರಾಜನಿಗೆ ಬಹಳ ಸಂತೋಷವಾಯಿತು. ಆಗ ಆತ, “ನಮ್ಮ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಗಳ ಆಹಾರ ಕಡಿಮೆ ಮಾಡಿ ಕತ್ತೆಗಳಿಗೆ ಕೊಡಿ..” ಎಂದು ಸೇವಕರಿಗೆ ಅಪ್ಪಣೆ ಮಾಡುತ್ತಾನೆ. ಅಂದು ಕತ್ತೆಗೆ ಬಹಳ ದಣಿವು. ಅದು ಹುಲ್ಲು, ಚಂದಿ ತಿಂದು ಸುಮ್ಮನೆ ಮಲಗಿ ಬಿಟ್ಟಿತು. ಆದರೆ ಕುದುರೆ ಮಾತ್ರ ಅದನ್ನು ನೋಡಿ ಮೂಗು ಮುರಿಯುತ್ತಿತ್ತು. ಪ್ರತಿ ದಿನ ಕುದುರೆ ಕತ್ತೆಯನ್ನು ಏನಿಲ್ಲಾ ಒಂದು ಮಾತು ಹೇಳಿ ಹಿಯಾಳಿಸುತ್ತಿತ್ತು. ಆದರೆ ಅದು ಮಾತ್ರ ಕೋಟೆಯ ಕೆಲಸ ಮುಗಿಯುವ ವರೆಗೆ ಕುದುರೆಯ ಯಾವ ಮಾತಿನತ್ತ ಗಮನ ಕೊಡಲಿಲ್ಲ.              ಕತ್ತೆಗಳ ಪರಿಶ್ರಮದಿಂದ ಬ್ರಹತ್ ಕೋಟೆ ನಿರ್ಮಾಣ ಆಯಿತು. ಇದರಿಂದ ಸಂತೋಷನಾದ ರಾಜನು ಅಲ್ಲಿಯೆ ಪಟ್ಟಾಭಿಷೇಕ ಮಾಡಿಕೊಳ್ಳುವದಾಗಿ ಡಂಗುರು ಸಾರಿದನು. ಸುತ್ತಲಿನ ರಾಜರಿಗೆ ಆಮಂತ್ರಣ ಕಳುಹಿಸಿದನು. ರಾಜನ ಸಿಂಹಾಸನ ಕೂಡ ಕತ್ತೆಗಳೆ ಮೇಲಕ್ಕೆತ್ತಿ ಒಯ್ದವು. ಅಲ್ಲಿ ಬಂದವರೆಲ್ಲಾ ಕೋಟೆಯ ಅದ್ಭುತತೆ ಮಾತನಾಡುತ್ತಿದ್ದರು. ಇಷ್ಟು ಎತ್ತರ ರಾಜ ಭಾರವಸ್ತು ಹೇಗೆ ತಂದನು ಎಂದು ಆಶ್ಚರ್ಯ ಪಟ್ಟರು. ಆಗ ಜಯದೇವನು ಇದರ ಎಲ್ಲ ಶ್ರೇಯ ಕತ್ತೆಗಳಿಗೆ ಕೊಡುತ್ತಾನೆ. ಅಲ್ಲಿ ಬಂದ ರಾಜರು ಸಹ ಕತ್ತೆಗಳ ಕೆಲಸವನ್ನು ಮೆಚ್ಚುತ್ತಾರೆ. ಅಂದು ಮಾತ್ರ ಅಲ್ಲಿಯ ಭವ್ಯ ಕಾರ್ಯಕ್ರಮಕ್ಕೆ ಕತ್ತೆಗಳ ಉಪಸ್ಥಿತಿ ಇತ್ತು ಆದರೆ ಕುದುರೆಗಳನ್ನು ಕೆಳಗಡೆಯ ಮೈದಾನದಲ್ಲಿ ಕಟ್ಟಲಾಗಿತ್ತು.               ಮರುದಿನ ಕತ್ತೆ ಬಂದು ಕುದುರೆಗೆ, “ನೋಡಿದಿಯಾ ಕುದುರೆಯಣ್ಣಾ, ನಾನು ಅಂದು ಹೇಳಿದಂತೆ ಈ ಜಗತ್ತಿನಲ್ಲಿ ಪ್ರತಿಯೊಬ್ಬನಿಗೂ ಒಂದು ಒಳ್ಳೆಯ ಕಾಲ ಬರುತ್ತದೆ. ಅದಕ್ಕೆ ಕಾಯಬೇಕು ಅಷ್ಟೆ. ಆದರೆ ಎಲ್ಲಕ್ಕಿಂತ ಮಹತ್ವದ್ದು ನಮಗೆ ಸಿಕ್ಕ ಅವಕಾಶವನ್ನು ನಾವು ಪರಿಶ್ರಮದಿಂದ ಪ್ರಾಮಾಣಿಕವಾಗಿ ಮಾಡಬೇಕು. ಆವಾಗ ಎಲ್ಲರು ಜಯಕಾರ ಹಾಕುತ್ತಾರೆ..” ಎಂದು ವಿನಯದಿಂದ ಹೇಳಿತು. ಕುದುರೆಗೆ ತನ್ನ ತಪ್ಪಿನ ಅರಿವಾಯಿತು. ಮುಂದೆ ಅದು ತನ್ನ ಅಹಂಕಾರ ಬಿಟ್ಟು ಸ್ನೇಹದಿಂದ ಬಾಳುತ್ತದೆ. ********* ಮಲಿಕಜಾನ ಶೇಖ

ಮಕ್ಕಳ ಕಥೆ Read Post »

ಕಥಾಗುಚ್ಛ

ಕಥಾಯಾನ

ಕೆಪ್ಪ ಅಂಜನಾ ಹೆಗಡೆ ಕೆಪ್ಪನ ಕಥೆ ಶುರುವಾಗುವುದು ನವರಾತ್ರಿಯಿಂದ. ನವರಾತ್ರಿಯೆಂದರೆ ಅದು ಅಂತಿಂಥ ನವರಾತ್ರಿಯಲ್ಲ. ಹಳೇಮನೆ ರಾಮಚಂದ್ರಣ್ಣನ ನವರಾತ್ರಿಯೆಂದರೆ ಯಲ್ಲಾಪುರ ತಾಲೂಕಿನಲ್ಲೆಲ್ಲ ಮನೆಮಾತಾದ ನವರಾತ್ರಿ ಅದು. ಚೌತಿ ಹಬ್ಬ ಮುಗಿದು ಇನ್ನೇನು ಹತ್ತೋ ಹದಿನೈದೋ ದಿನವಾಗುವಷ್ಟರಲ್ಲಿ ರಾಮಚಂದ್ರಣ್ಣನ ನವರಾತ್ರಿಯ ಧಾವಂತ ಶುರುವಾಗುತ್ತಿತ್ತು. ಅಟ್ಟದ ಮೇಲಿನ ಅಡಿಕೆ ಕಂಬಗಳನ್ನು ಒಂದೊಂದಾಗಿ ಕೆಳಗಿಳಿಸಿ ದೇವರಮನೆಯಲ್ಲಿ ನಿಲ್ಲಿಸುವುದರಿಂದ ಶುರುವಾಗುವ ನವರಾತ್ರಿ ಸಂಭ್ರಮ ಹಳೆಮನೆಯಲ್ಲಿ ವಿಜಯದಶಮಿಯವರೆಗೂ ಇರುತ್ತಿತ್ತು. ಅಲ್ಯೂಮಿನಿಯಂ ಬೋಗುಣಿಯೊಂದರಲ್ಲಿ ತಾನೇ ಕೈಯಾರೆ ತಯಾರಿಸಿಕೊಂಡ ಗೋಧಿಅಂಟಿನೊಂದಿಗೆ ಪ್ರತೀರಾತ್ರಿ ರಾಮಚಂದ್ರಣ್ಣ ಶಾರದೆಯ ಮಂಟಪ ರೆಡಿಮಾಡಲು ಕೂತುಬಿಡುತ್ತಿದ್ದ. ‘ಅಚ್ಯುತಂ ಕೇಶವಂ ರಾಮನಾರಾಯಣಂ’ ಎನ್ನುವ ತನ್ನ ಪ್ರೀತಿಯ ಭಜನೆಯೊಂದನ್ನು ಲಯಬದ್ಧವಾಗಿ ಹಾಡುತ್ತಾ ರಾಮಚಂದ್ರಣ್ಣ ಮಂಟಪ ಕಟ್ಟಲು ಕೂತನೆಂದರೆ ಇಡೀ ಹಳೇಮನೆ ಕೇರಿಯೇ ಅಲ್ಲಿ ನೆರೆಯುತ್ತಿತ್ತು. ಯೋಚಿಸಿದರೆ, ಕೆಪ್ಪನಿಗೂ ನನಗೂ ಅಂಥ ವ್ಯತ್ಯಾಸವೇನಿಲ್ಲ. ನಾನು ರಾಮಚಂದ್ರಣ್ಣನ ಮನೆ ಸೇರಿದಾಗ ನನಗೆ ಹನ್ನೊಂದು ವರ್ಷ. ಐದನೆಯ ಕ್ಲಾಸಿನವರೆಗೆ ಮಾತ್ರವೇ ಓದಲು ಅವಕಾಶವಿದ್ದ ಅಂಕೋಲೆಯ ಚಿಕ್ಕ ಹಳ್ಳಿಯೊಂದರಲ್ಲಿ ನಾನು ಹುಟ್ಟಿದ್ದು. ಅಮ್ಮನ ತಂಗಿ ಗಂಗಾಚಿಕ್ಕಿಯನ್ನು ರಾಮಚಂದ್ರಣ್ಣನ ತಮ್ಮನಿಗೆ ಮದುವೆ ಮಾಡಿಕೊಟ್ಟಿದ್ದರು. ರಾಮಚಂದ್ರಣ್ಣ ವಯಸ್ಸಿನಲ್ಲಿ ನನ್ನ ಅಪ್ಪನಿಗಿಂತ ದೊಡ್ಡವನಾಗಿದ್ದರೂ ನಾವೆಲ್ಲ ಅವನನ್ನು ಕರೆಯುತ್ತಿದ್ದದ್ದು ರಾಮಚಂದ್ರಣ್ಣ ಅಂತಲೇ. ರಾಮಚಂದ್ರಣ್ಣನಿಗೆ ಇದ್ದ ಒಬ್ಬನೇ ಮಗ ಹಾವು ಕಚ್ಚಿ ಸತ್ತುಹೋದನೆಂದು ಗಂಗಾಚಿಕ್ಕಿ ಯಾವಾಗಲೋ ಹೇಳಿದ್ದು ಬಿಟ್ಟರೆ, ಆ ವಿಷಯವನ್ನು ಯಾರೂ ಮಾತಾಡುತ್ತಿರಲಿಲ್ಲ. ರಾಮಚಂದ್ರಣ್ಣ ಮಾತ್ರ ಯಾವ ದುಃಖವೂ ಶಾಶ್ವತವಲ್ಲವೆಂಬ ನಿರ್ಲಿಪ್ತತೆಯಲ್ಲಿ ಊರಿನ ಮಕ್ಕಳನ್ನೆಲ್ಲ ವಿಶ್ವಾಸದಿಂದ ನೋಡುತ್ತಾ ತಾನಾಯಿತು ತನ್ನ ನವರಾತ್ರಿಯಾಯಿತು ಎಂಬಂತೆ ಇದ್ದುಬಿಡುತ್ತಿದ್ದ. ನಾನು ಐದನೇ ಕ್ಲಾಸು ಮುಗಿಸಿ ಬೇಸಿಗೆರಜೆಯ ಮಜವನ್ನೆಲ್ಲ ಚಿಕ್ಕಮ್ಮನ ಮನೆಯಲ್ಲಿಯೇ ಅನುಭವಿಸಿ ಮುಗಿದಮೇಲೆ, ಮನೆಗೆ ವಾಪಸ್ಸು ಕರೆದೊಯ್ಯಲು ಅಪ್ಪ ಬಂದಿದ್ದ. ಅಪ್ಪ, ಚಿಕ್ಕಪ್ಪ, ರಾಮಚಂದ್ರಣ್ಣ ಮಧ್ಯಾಹ್ನದ ಮೇಲೆ ಬಾಳೆಕಾಯಿ ಚಿಪ್ಸ್ ತಿನ್ನುತ್ತಾ ಚಾ ಕುಡಿಯುವಾಗ ನನ್ನ ಆರನೇ ಕ್ಲಾಸಿನ ಸಮಸ್ಯೆ ಧುತ್ತೆಂದು ಚಿಪ್ಸ್ ಪ್ಲೇಟಿಗೆ ಬಿತ್ತು. “ಅದೆಂಥ ಸಮಸ್ಯೆ, ಅವಳು ನಮ್ಮನೇಲೇ ಶಾಲೆಗೆ ಹೋಗಲಿ; ನಮ್ಮನೆಲ್ಲೂ ನವರಾತ್ರಿಗೊಂದು ದುರ್ಗೆ ಬೇಕು ಮಾರಾಯ” ಎಂದವನೇ ರಾಮಚಂದ್ರಣ್ಣ ಚಾ ಲೋಟಾ ತೊಳೆಯಲು ಎದ್ದುಹೋದ. ಆವತ್ತಿಂದ ಹಳೇಮನೆ ನವರಾತ್ರಿಯ ಪರ್ಮನೆಂಟ್ ದುರ್ಗೆ ಆದೆ ನಾನು. ನನಗೆ ನೆನಪಿದ್ದಂತೆ ಅದು ನನ್ನ ಏಳನೇ ಕ್ಲಾಸಿನ ನವರಾತ್ರಿಯಿರಬೇಕು. ವಿಜಯದಶಮಿಯ ದಿನ ಶಾರದೆಯನ್ನು ಕಳುಹಿಸಿ, ಕೇರಿಯ ಹೆಂಗಸರೆಲ್ಲ ‘ಹರಸಿದಳೆಲ್ಲರಿಗೂ ಶಾರದೆ ಒಲಿದು’ ಎಂದು ಹಾಡುತ್ತಿದ್ದ ಎಮೋಷನಲ್ ಸನ್ನಿವೇಶದಲ್ಲಿ ಈ ಕೆಪ್ಪ ಕೇರಿಗೆ ಕಾಲಿಟ್ಟಿದ್ದ. ಅವನು ತೊಟ್ಟಿದ್ದ ಬೆಳ್ಳನೆಯ ಬಟ್ಟೆಯಿಂದಲೂ ಇರಬಹುದು ತುಸು ಜಾಸ್ತಿ ಕಪ್ಪಗೆ ಕಾಣಿಸುತ್ತಿದ್ದ. ಹಳೇಮನೆ ಕೇರಿಯ ಮೊದಲ ಮನೆಯಾಗಿದ್ದ ರಾಮಚಂದ್ರಣ್ಣನ ಮನೆಯ ಅಂಗಳದ ಮೆಟ್ಟಿಲಮೇಲೆ ತನ್ನದೇ ಮನೆಯೆಂಬಂತೆ ಬಂದು ಕುಳಿತುಕೊಂಡ. ಬಸ್ ಸ್ಟಾಪಿಗೆ ಹತ್ತಿರದಲ್ಲೇ ಇದ್ದ ಹಳೇಮನೆಗೆ ಬಸ್ಸು ತಪ್ಪಿಸಿಕೊಂಡವರು ನೀರು ಕುಡಿಯಲೆಂದೋ ಅಥವಾ ಮುಂದಿನ ಬಸ್ಸಿನ ಸಮಯ ಕೇಳಲೆಂದೋ ಬರುತ್ತಿದ್ದದ್ದು ಸಾಮಾನ್ಯವಾಗಿತ್ತು. ಹಾಗೇ ಯಾರೋ ಬಂದಿರಬಹುದು ಎಂದುಕೊಂಡ ನಮಗೆಲ್ಲ ಅವನಿಗೆ ಮಾತು ಬರುವುದಿಲ್ಲ ಎನ್ನುವುದು ಅರ್ಥವಾಗಿದ್ದು ಅವನು ಅದೇನನ್ನೋ ಹೇಳಲು ಪ್ರಯತ್ನಿಸಿದಾಗಲೇ. ಅವನು ಪ್ರಯತ್ನಿಸಿದ ಮಾತುಗಳೆಲ್ಲ ವಿಚಿತ್ರ ಶಬ್ದಗಳನ್ನು ಹೊರಡಿಸಿದವಾದರೂ ಯಾವುದೂ ಅರ್ಥವಾಗಲಿಲ್ಲ. ರಾಮಚಂದ್ರಣ್ಣ ಆಗಷ್ಟೇ ಪೂಜೆ ಮುಗಿಸಿ, ಉಟ್ಟಿದ್ದ ಮಡಿ ಬಿಚ್ಚಿ ಲುಂಗಿ ಉಡುತ್ತ “ಯಾರೇ ಅದು, ಬಸ್ಸು ತಪ್ಪಿಸಿಕೊಂಡರಂತಾ ಏನು” ಎಂದು ಹೆಂಡತಿಯನ್ನು ಕೇಳುತ್ತ ಹೊರಬಂದಾಗ ಕೆಪ್ಪ ಅವನ ಮುಖ ನೋಡುತ್ತಾ ಏನೇನೋ ಶಬ್ದಗಳನ್ನು ಹೊರಡಿಸಿದ. ರಾಮಚಂದ್ರಣ್ಣ ಅವನನ್ನು ಮಧ್ಯದಲ್ಲಿ ತಡೆದು ಪ್ರಶ್ನೆ ಕೇಳಲು ಪ್ರಯತ್ನಿಸಿದನಾದರೂ ಯಾವುದಕ್ಕೂ ಸ್ಪಂದಿಸದ ಅವನಿಗೆ ಕಿವಿಯೂ ಕೇಳುವುದಿಲ್ಲ ಎನ್ನುವುದು ನಮಗೆಲ್ಲ ಖಚಿತವಾಯಿತು. ಮಾತೂ ಬರದ ಕಿವಿಯೂ ಕೇಳಿಸದ ಅವನಿಂದ ಯಾವ ವಿವರಗಳನ್ನೂ ಪಡೆದುಕೊಳ್ಳಲಾಗಲೇ ಇಲ್ಲ. ಪೆನ್ನು ಹಾಳೆಗಳನ್ನು ಕೊಟ್ಟರೆ ಅವು ತನಗೆ ಸಂಬಂಧಪಟ್ಟ ವಸ್ತುಗಳೇ ಅಲ್ಲವೆನ್ನುವಂತೆ ಅವುಗಳೆಡೆಗೆ ತಿರುಗಿಯೂ ನೋಡದ ಅವನಿಗೆ ಅಕ್ಷರಜ್ಞಾನ ಇದ್ದಿರಬಹುದಾದ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಅವನಿಗೆ ಹೆಸರೊಂದು ಇದ್ದಿರಬಹುದಾದರೂ ಅದನ್ನು ಕಂಡುಹಿಡಿಯುವ ಯಾವ ಮಾರ್ಗವೂ ಯಾರಿಗೂ ಗೋಚರಿಸಲಿಲ್ಲ. ಗಂಗಾಚಿಕ್ಕಿ ಬಡಿಸಿದ ಹಬ್ಬದೂಟ ಉಂಡವನೇ ತಟ್ಟೆ ಲೋಟಾಗಳನ್ನು ತೊಳೆದು ತನ್ನದೇ ಆಸ್ತಿ ಎಂಬಂತೆ ಜಗಲಿಯ ಮೂಲೆಯಲ್ಲಿಟ್ಟುಕೊಂಡ. ಅದೆಲ್ಲಿಂದ ಬಂದ, ಹಳೇಮನೆ ಕೇರಿಗೇ ಯಾಕೆ ಬಂದ, ಬಂಧುಬಳಗದವರು ಯಾರಾದರೂ ಇದ್ದಾರೋ ಇಲ್ಲವೋ ಎಂಬಿತ್ಯಾದಿ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿರಲಿಲ್ಲ. ನನಗೆ ಯಾವತ್ತಿಗೂ ಬಗೆಹರಿಯದ ಒಂದು ವಿಚಿತ್ರವೆಂದರೆ ಕೇರಿಯ ಯಾರೊಬ್ಬರೂ ಅವನನ್ನು ಸಂಶಯದ ದೃಷ್ಟಿಯಿಂದ ನೋಡಲೇ ಇಲ್ಲ. ರಾಮಚಂದ್ರಣ್ಣನ ಪ್ರೀತಿ ವಿಶ್ವಾಸ ನಂಬಿಕೆಗಳೆಲ್ಲ ಜಾಜಿ ಬಳ್ಳಿಯಂತೆ ಕೇರಿಯನ್ನೆಲ್ಲ ಹಬ್ಬಿದಂತೆ ನನಗೆ ಈಗಲೂ ಅನ್ನಿಸುತ್ತದೆ. ಹೀಗೆ ಕೆಪ್ಪ ಎಂಬ ಹೊಸ ಹೆಸರಿನೊಂದಿಗೆ ಕೆಪ್ಪ ರಾಮಚಂದ್ರಣ್ಣನ ಮನೆಯ ಖಾಯಂ ಸದಸ್ಯನಾದ. ಆದರೆ ಕೆಪ್ಪನ ವಾಸಕ್ಕೆ ತಕ್ಕ ಜಾಗ ಕೇರಿಯ ಯಾವ ಮನೆಯಲ್ಲೂ ಇರಲಿಲ್ಲ. ಹಳೇಮನೆಯ ಯಾವ ಕುಟುಂಬವೂ ಅಂಥ ಸ್ಥಿತಿವಂತ ಕುಟುಂಬವೇನೂ ಆಗಿರಲಿಲ್ಲ. ರಾಮಚಂದ್ರಣ್ಣನ ಅಪ್ಪನ ಕಾಲದಲ್ಲಿ ಖಾಂದಾನಿ ಎನ್ನಬಹುದಾಗಿದ್ದ ಕುಟುಂಬ, ಮಕ್ಕಳ ಕಾಲಕ್ಕೆ ಹೊಂದಾಣಿಕೆಯಾಗದೇ ಎಂಟು ಮನೆಗಳಾಗಿ ಒಡೆದುಹೋಗಿತ್ತು. ಅವರುಗಳ ಮಧ್ಯ ತಲೆಹೋಗುವಂತಹ ಜಗಳಗಳು ಆಗುತ್ತಿರಲಿಲ್ಲವಾದರೂ ಗದ್ದೆಕಾಯುವ ರಾತ್ರಿಪಾಳಿಯ ವಿಷಯಕ್ಕೋ, ಅವರ ಮನೆಯ ಬೆಕ್ಕು ಅರ್ಧತಿಂದುಬಿಟ್ಟ ಇಲಿ ಇವರ ಮನೆ ಅಟ್ಟದ ಮೇಲೆ ಕೊಳೆತು ವಾಸನೆ ಬರುತ್ತಿರುವ ವಿಷಯಕ್ಕೋ ಆಗಾಗ ಚಿಕ್ಕಪುಟ್ಟ ಮನಸ್ತಾಪಗಳಾಗುತ್ತಿದವು. ಈ ಮನಸ್ತಾಪಗಳೇನಾದರೂ ಜಗಳಕ್ಕೆ ತಿರುಗಿದರೆ ರಾಮಚಂದ್ರಣ್ಣ ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೊಂದು ಜಾಣತನದ ಪರಿಹಾರ ಹುಡುಕುತ್ತಿದ್ದ. ಹೆಚ್ಚೇನೂ ಓದಿರದ ರಾಮಚಂದ್ರಣ್ಣ ತನ್ನ ಅಚ್ಚುಕಟ್ಟಾದ ಮಾತಿನಿಂದಲೇ ಕೇರಿಯವರಷ್ಟೇ ಅಲ್ಲದೇ ಊರಿನವರ ಗೌರವವನ್ನೂ ಗಳಿಸಿಕೊಂಡಿದ್ದ. ಯಾವತ್ತೂ ಧ್ವನಿ ಎತ್ತರಿಸಿ ಮಾತನಾಡದ ರಾಮಚಂದ್ರಣ್ಣ, ಏರುಧ್ವನಿಯಲ್ಲಿ ಮೂರೂ ಹೊತ್ತು ಹಲಬುತ್ತಲೇ ಇರುತ್ತಿದ್ದ ಕೆಪ್ಪನೊಂದಿಗೆ ಸೌಹಾರ್ದ ಬೆಳೆಸಿಕೊಳ್ಳಬಹುದಾದ ಯಾವ ನಿರೀಕ್ಷೆಯೂ ಕೇರಿಯವರ್ಯಾರಿಗೂ ಇರಲಿಲ್ಲವಾದರೂ ಕೆಪ್ಪನ ವಾಸಕ್ಕೊಂದು ಜಾಗ ಹುಡುಕುವ ಜವಾಬ್ದಾರಿ ರಾಮಚಂದ್ರಣ್ಣನ ತಲೆಗೇ ಬಂತು. ರಾಮಚಂದ್ರಣ್ಣನ ಮನೆ ಕೇರಿಯ ಮೊದಲ ಮನೆಯಾದದ್ದರಿಂದ ಜಾಗವನ್ನು ಕೊಂಚ ವಿಸ್ತರಿಸಿ ಮನೆಯನ್ನು ನವೀಕರಿಸುವ ಅವಕಾಶ ಮನೆಗಳೆಲ್ಲ ಹಿಸೆಯಾದ ಸಮಯದಲ್ಲೇ ರಾಮಚಂದ್ರಣ್ಣನಿಗೆ ಒದಗಿಬಂದಿತ್ತು. ಅಣ್ಣತಮ್ಮಂದಿರು ಒಟ್ಟಿಗೇ ಇದ್ದಿದ್ದರಿಂದ ಸ್ವಲ್ಪ ಅನುಕೂಲಸ್ಥನಾಗಿದ್ದ ರಾಮಚಂದ್ರಣ್ಣ ಮನೆ ಹಿಂದೆ ಇದ್ದ ಸೊಪ್ಪಿನ ಬೆಟ್ಟದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿಸಿ ವಿಶಾಲವಾದ ಕೊಟ್ಟಿಗೆಯನ್ನು ಕಟ್ಟಿಸಿಕೊಂಡಿದ್ದ. ಆ ಕೊಟ್ಟಿಗೆಯಲ್ಲೇ ಸಣ್ಣದೊಂದು ಭಾಗದಲ್ಲಿ ಮಣ್ಣಿನ ಗೋಡೆಯನ್ನೆಬ್ಬಿಸಿ ಬಾಗಿಲು ಕಿಟಕಿಗಳಿಲ್ಲದ ರೂಮೊಂದನ್ನು ಕಟ್ಟಿಸಿ, ರಾಮಚಂದ್ರಣ್ಣ ಕೆಪ್ಪನ ಪಾಲಿನ ಆಪತ್ಬಾಂಧವನಾದ. ಎರಡೇ ದಿನದಲ್ಲಿ ರಾಮಚಂದ್ರಣ್ಣ ಮಾಡಿಸಿಕೊಟ್ಟ ಹಲಸಿನ ಮಂಚದ ಮೇಲೆ ಆಸೀನನಾದ ಕೆಪ್ಪ ಕೊಟ್ಟಿಗೆಯ ಒಡೆಯನೂ, ಕೇರಿಯ ಕಾವಲುಗಾರನೂ ಆಗಿಹೋದ. ಗಂಗಾಚಿಕ್ಕಿಯ ಕೊಟ್ಟಿಗೆಯ ಜವಾಬ್ದಾರಿಯನ್ನು ತಾನಾಗಿಯೇ ವಹಿಸಿಕೊಂಡ. ದಿನ ಬೆಳಗಾದರೆ ಒಂದು ಎಮ್ಮೆ, ಒಂದು ಹಸುವಿನ ಹಾಲು ಕರೆದು, ಸೊಪ್ಪು ಕಡಿದು ತಂದು, ಸಗಣಿ ತೆಗೆದು, ಹೊಸ ಸೊಪ್ಪು ಹಾಸುವವರೆಗೂ ಅವನಿಗೆ ಸಮಾಧಾನವಿರುತ್ತಿರಲಿಲ್ಲ. ರಾತ್ರಿಗಳಲ್ಲಿ ಗದ್ದೆ ಕಾಯುವ ಕೆಲಸವನ್ನೂ ತಾನೇ ವಹಿಸಿಕೊಂಡು ಕೇರಿಯವರ ನಿದ್ರೆಯನ್ನೂ ಸಲಹತೊಡಗಿದ. ಬೆಕ್ಕು ಕೂಡಾ ಯಾರ ಭಯವೂ ಇಲ್ಲದೇ ತಾನು ಹಿಡಿದ ಇಲಿಗಳನ್ನೆಲ್ಲ ತಂದು ಕೆಪ್ಪನ ರೂಮಿನಲ್ಲೇ ರಾಜಾರೋಷವಾಗಿ ತಿನ್ನತೊಡಗಿತು. ಅರ್ಥವಾಗದ ಭಾಷೆಯಲ್ಲಿ ಬೆಕ್ಕಿಗೋ, ಇಲಿಗೋ ಬಾಯ್ತುಂಬ ಬೈಯುತ್ತ ಅಳೆದುಳಿದ ಇಲಿಯ ಅವಶೇಷಗಳನ್ನು ಬಳಿದು ಗೊಬ್ಬರದ ಗುಂಡಿಗೆ ಎಸೆದು ಬೆಕ್ಕು ಓಡಾಡಿದ ಜಾಗವನ್ನೆಲ್ಲ ಸಗಣಿನೀರು ಹಾಕಿ ತೊಳೆದುಬಿಡುತ್ತಿದ್ದ. ಯಾರ ಮನೆಯ ಅಂಗಳವಾದರೂ ಸರಿಯೇ, ಒಂದು ಹುಲ್ಲುಕಡ್ಡಿ ಬಿದ್ದರೂ ಅದನ್ನೆತ್ತಿ ಬಿಸಾಕುತ್ತಿದ್ದ ಕೆಪ್ಪನ ಚೊಕ್ಕು, ಶಿಸ್ತು ನೆನಪಾದಾಗಲೆಲ್ಲ ನನಗೆ ಬಾಲ್ಯದ ಅದೆಷ್ಟೋ ಪಾಠಗಳನ್ನ ಮಾತೇ ಬರದ ಕೆಪ್ಪ ಕಲಿಸಿಕೊಟ್ಟಂತೆನ್ನಿಸುತ್ತದೆ. ಕಾಲಕಳೆದಂತೆ ಕೆಪ್ಪ ಊರಿನವರ ಬಾಯಲ್ಲಿ ‘ಹಳೇಮನೆ ಕೆಪ್ಪ’ನೇ ಆಗಿಹೋದ. ನಾನು ಏಳನೇ ಕ್ಲಾಸು ಮುಗಿಸಿ, ಹಳೇಮನೆಯಿಂದ ಮೂರು ಕಿಲೋಮೀಟರು ದೂರದ ಗೋಳಿಮಕ್ಕಿ ಹೈಸ್ಕೂಲಿಗೆ ಸೇರಿದೆ. ಬೆಳಿಗ್ಗೆ ನಾನು ಏಳುವಷ್ಟರಲ್ಲಿ ಬಚ್ಚಲ ಒಲೆಗೆ ಬೆಂಕಿ ಹಾಕಿ, ಬಾವಿಯಿಂದ ನೀರು ಸೇದಿ ಹದಮಾಡಿದ ನೀರು ಹಂಡೆ ತುಂಬಾ ಇದೆಯೆಂದು ಖಾತ್ರಿಯಾದ ಮೇಲೆಯೇ ಕೆಪ್ಪ ಕೊಟ್ಟಿಗೆ ಕೆಲಸಕ್ಕೆ ಹೋಗುತ್ತಿದ್ದ. ಈ ಕೆಪ್ಪನಿಗಿದ್ದ ಒಂದೇ ಒಂದು ಚಟವೆಂದರೆ ಬೀಡಿ. ಕೆಪ್ಪ ಹಳೇಮನೆ ಸೇರಿ ಒಂದು ವಾರವಾಗುತ್ತಿದ್ದಂತೆ ಒಂದಿನ ರಾಮಚಂದ್ರಣ್ಣ ಊಟ ಮಾಡಿ ಕೈ ತೊಳೆಯುತ್ತಿದ್ದಾಗ ಅವನ ಪಕ್ಕ ಬಂದು ಅದೇ ಏರುಧ್ವನಿಯಲ್ಲಿ ಮಾತಾಡತೊಡಗಿದನಂತೆ. ಅರ್ಥವಾಗದ ರಾಮಚಂದ್ರಣ್ಣ ಅವನ ಮುಖ ನೋಡಿದ್ದಕ್ಕೆ, ಬೀಡಿಕಟ್ಟು ಹೊರತೆಗೆದು ಕಟ್ಟಿನಲ್ಲಿದ್ದ ಕೊನೆಯ ಬೀಡಿಯನ್ನು ತೋರಿಸುತ್ತಾ ತಂದುಕೊಡುವಂತೆ ಕೈಸನ್ನೆ ಮಾಡಿದನಂತೆ. ಕೈ ಒರೆಸುತ್ತಾ ರಾಮಚಂದ್ರಣ್ಣ “ಇವನಿಗೆ ಬೀಡಿ ಬೇಕಂತೆ, ನಾಳೆ ಯಲ್ಲಾಪುರಕ್ಕೆ ಹೋಗಿಬರ್ತೀನಿ; ಮನೆ ಸಾಮಾನು ಪಟ್ಟಿ ಮಾಡಿಕೊಡು” ಎಂದಿದ್ದು ಯಲ್ಲಾಪುರ ಬಸ್ಸು ನೋಡಿದಾಗೆಲ್ಲ ನೆನಪಾಗುತ್ತದೆ ನನಗೆ. ಆ ಬೀಡಿಕಟ್ಟಿನ ಬಾಂಧವ್ಯ ಅವರಿಬ್ಬರನ್ನೂ ವಿಚಿತ್ರವಾಗಿ ಬೆಸೆದಿತ್ತು. ಬೀಡಿ ಸಿಗರೇಟು ಹಾಗಿರಲಿ, ಕವಳವನ್ನೂ ಹಾಕದ ರಾಮಚಂದ್ರಣ್ಣ ಪ್ರತೀಸಲ ಯಲ್ಲಾಪುರಕ್ಕೆ ಹೋದಾಗಲೂ ಕೆಪ್ಪನಿಗೆಂದು ಬೀಡಿಕಟ್ಟು ತರುತ್ತಿದ್ದ. ಮನೆಯಲ್ಲಿದ್ದ ಮಕ್ಕಳಲ್ಲೇ ದೊಡ್ಡವಳಾಗಿದ್ದ ನನ್ನ ಕೈಯಲ್ಲಿ ಹಳೇ ಪೇಪರಿನಲ್ಲಿ ಸುತ್ತಿದ ಬೀಡಿಪೊಟ್ಟಣವನ್ನು ಕೊಟ್ಟು ಕೆಪ್ಪನಿಗೆ ಕೊಡುವಂತೆ ಹೇಳುತ್ತಿದ್ದ. ಅದರಲ್ಲಿರುವುದು ಬೀಡಿಪೊಟ್ಟಣ ಎನ್ನುವುದು ನನಗಾಗ ಗೊತ್ತಾಗದೇ ಇದ್ದರೂ ಅದನ್ನು ನೋಡಿದ ತಕ್ಷಣ ಕೆಪ್ಪನ ಮುಖ ಅರಳಿದ್ದು ಮಾತ್ರ ಗೊತ್ತಾಗುತ್ತಿತ್ತು. ಕೇರಿಯ ಮಕ್ಕಳಿಗೆ ಕಾಣಿಸದಂತೆ ಬೆಟ್ಟದಮೇಲೋ, ಕೊಟ್ಟಿಗೆಯ ಮೂಲೆಯಲ್ಲೋ ಕುಳಿತು ಬೀಡಿ ಸೇದುತ್ತಿದ್ದ ಕೆಪ್ಪ ಉಳಿದ ಬೀಡಿಮೋಟನ್ನು ಮಾತ್ರ ಗೊಬ್ಬರದ ಗುಂಡಿಗೇ ಬಿಸಾಕುತ್ತಿದ್ದ. ನನಗೆ ಹೈಸ್ಕೂಲು ಮುಗಿಯುತ್ತಿದ್ದ ಸಮಯದಲ್ಲಿ ಕೆಪ್ಪನ ಬೀಡಿಪ್ರೇಮ, ಅವನು ಹಲಬುತ್ತಿದ್ದ ಕೆಲವು ಶಬ್ದಗಳೆಲ್ಲ ಅರ್ಥವಾಗತೊಡಗಿ, ‘ಪಾಪ ಕೆಪ್ಪ!’ ಅನ್ನಿಸುತ್ತಿತ್ತು. ಈಗಲೂ ಯಾರಾದರೂ ಯಾರಿಗಾದರೂ ಪಾಪ ಅಂದಾಗಲೆಲ್ಲ, ಬೀಡಿಕಟ್ಟು ಸಿಕ್ಕಿದಾಗ ಅರಳಿದ ಕೆಪ್ಪನ ಮುಖ ನೆನಪಾಗುತ್ತದೆ. ನಾನು ಹೈಸ್ಕೂಲು ಮುಗಿಸಿ ಕುಮಟಾದಲ್ಲಿ ಪಿಯುಸಿಗೆ ಸೇರಿ ಅಲ್ಲೇ ಡಿಗ್ರಿಯನ್ನೂ ಮುಗಿಸಿ, ಕಾರವಾರದ ರೆಸಾರ್ಟ್ ಒಂದರಲ್ಲಿ ಫ್ರಂಟ್ ಆಫೀಸ್ ಕೆಲಸಕ್ಕೆ ಸೇರಿಕೊಂಡೆ. ಪ್ರತೀವರ್ಷ ನವರಾತ್ರಿಯ ಹತ್ತು ದಿನವೂ ಕೆಲಸಕ್ಕೆ ರಜೆ ಹಾಕುತ್ತಿದ್ದ ನಾನು ರೆಸಾರ್ಟಿನ ಗಿಡಗಳನ್ನು ಮೆಂಟೇನ್ ಮಾಡುತ್ತಿದ್ದ ರಾಜಣ್ಣನ ಬಾಯಲ್ಲೂ ರಾಮಚಂದ್ರಣ್ಣನ ಮನೆಯ ದುರ್ಗೆಯೇ ಆಗಿದ್ದೆ. ಈ ಸಲ ನವರಾತ್ರಿಗೆ ಹಳೇಮನೆಗೆ ಹೋದಾಗ ಗಂಗಾಚಿಕ್ಕಿ, ಕಳೆದ ಮಳೆಗಾಲ ಕೆಪ್ಪ ತೀರಿಕೊಂಡ ಸುದ್ದಿಯನ್ನು ಹೇಳುತ್ತಾ ಕುಡಿಯಲು ಮಜ್ಜಿಗೆ ಬೆರೆಸಿಕೊಟ್ಟಳು. ಹೊಸ ಬಟ್ಟೆ ತಂದುಕೊಟ್ಟರೂ ಅದನ್ನು ಗೋಣೀಚೀಲದಲ್ಲಿ ಕಟ್ಟಿಟ್ಟು ರಾಮಚಂದ್ರಣ್ಣನ ಹಳೆಯ ಬಿಳಿ ಅಂಗಿಯನ್ನೇ ತೊಡುತ್ತಿದ್ದ ಕೆಪ್ಪ, ಸಾಯುವ ದಿನ ರಾಮಚಂದ್ರಣ್ಣ ಕಳೆದವರ್ಷ ನವರಾತ್ರಿಗೆ ತಂದುಕೊಟ್ಟ ಹಸಿರು ಅಂಗಿಯನ್ನು ತೊಟ್ಟಿದ್ದನಂತೆ. ಜೀವಹೋಗುವ ಅರ್ಧಗಂಟೆ ಮೊದಲು ರಾಮಚಂದ್ರಣ್ಣನನ್ನು ಕರೆದು ಹೊಸ ಅಂಗಿ ತೋರಿಸುತ್ತಾ ಅದೇನನ್ನೋ ಹೇಳಲು ಪ್ರಯತ್ನಿಸಿದನಂತೆ. ಮಳೆಗಾಲದ ದಿನಗಳಲ್ಲಿ ನಾವು ಶಾಲೆಯಿಂದ ಬರುವ ಹೊತ್ತಿಗೆ ಬಚ್ಚಲೊಲೆಯ ಬೆಂಕಿಯಲ್ಲಿ ಹಲಸಿನಬೀಜ ಸುಡುತ್ತಾ ನಮಗಾಗಿ ಕಾಯುತ್ತಿದ್ದ ಕೆಪ್ಪ ನೆನಪಾಗಿ, ಬಾಲ್ಯದ ಬೆಚ್ಚನೆಯ ನೆನಪೆಲ್ಲ ಹೇಳದೇಕೇಳದೇ ಕೆಪ್ಪನೊಂದಿಗೇ ಹೊರಟುಹೋದಂತೆನ್ನಿಸಿತು. ಶಾರದೆಗೆ ಸೀರೆ ಉಡಿಸುತ್ತಿದ್ದ ರಾಮಚಂದ್ರಣ್ಣನ ಕೈ ಸ್ವಲ್ಪ ನಡುಗುತ್ತಿರುವಂತೆನ್ನಿಸಿ ಗಂಗಾಚಿಕ್ಕಿಯ ಹತ್ತಿರ ವಿಚಾರಿಸಿದೆ. ರಾಮಚಂದ್ರಣ್ಣನ ಶುಗರ್ ಲೆವಲ್ ಕಡಿಮೆಯಾಗಿದ್ದು, ಈಗ ಕಿವಿಯೂ ಸ್ವಲ್ಪ ಮಂದವಾಗಿರುವುದು, ಕೆಪ್ಪ ಸತ್ತುಹೋದಮೇಲೆ ರಾಮಚಂದ್ರಣ್ಣ ಯಲ್ಲಾಪುರಕ್ಕೆ ಹೋಗುವುದನ್ನೇ ನಿಲ್ಲಿಸಿದ್ದು, ರಾಯ್ಸದ ಡಾಕ್ಟ್ರು ತಿಂಗಳಿಗೊಮ್ಮೆ ಮನೆಗೇ ಬಂದು ಚೆಕಪ್ ಮಾಡುವುದು ಎಲ್ಲವನ್ನೂ ಗಂಗಾಚಿಕ್ಕಿ ನಡುಗುವ ಧ್ವನಿಯಲ್ಲಿ ಹೇಳಿದಳು. ತಾನು ನೆಟ್ಟ ಮೌಲ್ಯಗಳನ್ನು ನೀರು ಗೊಬ್ಬರ ಹಾಕಿ ಪೊರೆಯುತ್ತಿದ್ದ ಕೆಪ್ಪ ಇಲ್ಲದೇ ರಾಮಚಂದ್ರಣ್ಣ ಅನಾಥನಾದಂತೆ ಎನ್ನಿಸಿತು. ಊರಿನ ಹೆಣ್ಣುಮಕ್ಕಳನ್ನೆಲ್ಲ ಸಾಲಾಗಿ ಕೂರಿಸಿ, ಹತ್ತು ರೂಪಾಯಿ

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಕಿರಿ ದೇವರಿಗೆ ಮರದ ಜಾಗಟೆ. ಕೆ.ಎನ್.ಮಹಾಬಲ ಹನ್ನೊಂದು  ಗಂಟೆಗೆ ಬಾಸ್ ನ ಕೋಣೆ ಒಳಗೆ ಹೋಗಿ ಬಂದ ಅಟೆಂಡರ್ ಸಿದ್ದಲಿಂಗು “ಬಾಸ್ ಸಿಟ್ಟಾಗಿದ್ದಾರೆ.’ಏನಯ್ಯ ನನಗೆ ಹುಷಾರಿಲ್ಲ .ನೆಗಡಿ,ತಲೆಭಾರ ಸ್ವಲ್ಪ ಜ್ವರನೂ ಬಂದಂತಿದೆ.ನೀನು ನೋಡಿದ್ರೆ ಇಷ್ಟೊಂದು ಫೈಲ್ ತಂದು ಕುಕ್ಕುತ್ತಿದ್ದೀಯಾ’ಎಂದು ರೇಗಿದರು  ಎನ್ನುತ್ತಾ ಹೊರಗೆ ಬಂದ ಸಿದ್ದಲಿಂಗು “ಈ ಸಾಹೇಬರಿಗೆ ಹುಷಾರಿಲ್ಲ  ಅಂತ ಯಾರಿಗಾದ್ರೂ ಕನಸು  ಬಿದ್ದಿರತ್ತಾ?’ ಎಂದು ಗೊಣಗಿಕೊಂಡ. ಆ ಬಾಸ್ ಗೆ ಹುಷಾರಿಲ್ವ? ಏನಂತೆ ?ಯಾವಾಗಿಂದ?ಡಿಪಾರ್ಟಮೆಂಟಿನಲ್ಲಿದ್ದ ಎಲ್ಲ ಉದ್ಯೋಗಿಗಳು ಒಟ್ಟಿಗೇ ಪ್ರತಿಕ್ರಿಯಿಸಿದರು. “ಬೆಳಿಗ್ಗೆ   ನಾನು ಅವರು ಬರೋ ಹೊತ್ತಲ್ಲಿ ಬೇರೆ ಡಿಪಾರ್ಟ್ ಮೆಂಟಿಗೆ ಹೋಗಿದ್ದೆ.ಅವರು  ಬಂದ ಮೇಲೂ ಅವರ ಕ್ಯಾಬಿನ್ಗೆ ಒಂದುಸಾರಿನೂಹೋಗಿಲ್ಲ .ಅದಕ್ಕೇನನಗೆವಿಷಯ  ಗೊತ್ತಾಗಿಲ್ಲ.”ಎಂದು ಹಲುಬಿದ  ಸೀನ.ಕೆಲಸವಿರಲಿ ಬಿಡಲಿ ಬಾಸ್ ನ ಕೋಣೆಗೆ ದಿನಕ್ಕೆ ಕೊನೇಪಕ್ಷ ನಾಲ್ಕೈದು ಸಾರಿ ಲಾಳಿ ಹೊಡೆಯುತ್ತಿದ್ದ ಅವನಿಗಂತೂ ಇದು ಆಘಾತಕಾರಿ ಸುದ್ಧಿ. ತಡಮಾಡಲೇ ಇಲ್ಲ .ದಢಾರನೆ ಬಾಸ್ ಕೋಣೆಗೆ ನುಗ್ಗಿ “ಏನ್ ಸಾರ್ ಹುಷಾರಿಲ್ವಂತೆ” ಎಂದು ಆರೋಗ್ಯ ವಿಚಾರಿಸಿದ. “ಹೌದ್ರೀ,ಬೆಳಗಿನಿಂದ ಸ್ವಲ್ಪ ನೆಗಡಿ,ಕೆಮ್ಮು ಜ್ವರವೂ ಇದೆಯೇನೋ?.ಕೆಲಸಕ್ಕೇನೂ ತೊಂದರೆಯಿಲ್ಲ” ಎಂದರು . “ಸಾರ್,ಡಾಕ್ಟರು ಏನಾದ್ರೂ ಬೇಕಾದ್ರೆ ಹೇಳಿ ಹಾಗೆಲ್ಲ ಅಲಕ್ಷ ಮಾಡಬಾರದು.””ಎನ್ನುತ್ತ ಹೊರಬಂದ. “ಇರಲಿ ನೋಡೋಣ “ ತಣ್ಣಗೆ ನುಡಿದರು ಬಾಸ್. ಬಾಸ್ ತನ್ನ ಮಾತಿಗೆ ಅವನು ನಿರೀಕ್ಷಿಸಿದ ಮಟ್ಟದಲ್ಲಿ ಪ್ರತಿಕ್ರಿಯೆ ನೀಡದಿದ್ದುದು ಅವನಿಗೆ ನಿರಾಸೆ ತಂದಿತ್ತು. ಸಹೋದ್ಯೋಗಿಗಳಿಗೆ “ಯಾರೂ ಸಧ್ಯಕ್ಕೆ ಒಳಗೆ ಹೋಗಬೇಡಿ ಬಾಸ್ ಸಿಟ್ಟಾಗಿದ್ದಾರೆ”ಎಂದು ಎಚ್ಚರಿಕೆ ನೀಡಿ ಮನಸ್ಸಿನ ದುಗುಡವನ್ನು ಹೊರಹಾಕಿದ. ಉಳಿದವರಿಗೆ ಈಗ ಸಂದಿಗ್ಧ. ಸೀನನ ಮಾತು ಕೇಳಿ ಸುಮ್ಮನಿರೋಣವೇ?ಅಥವಾ ಧೈರ್ಯ ತೊಗೊಂಡು ಒಂದು ಸಾರಿ ಒಳಕ್ಕೆ ಹೋಗೋಣವೇ ?ತಿಳಿಯದಾಯಿತು. ಬಾಸ್ ಎಂಬ ಹುಲಿ ಬೋನಿಗೆ ದಿನಾ ಸಲೀಸಾಗಿ ನುಗ್ಗುತ್ತಿದ್ದ ಸೀನನಿಗೇ ಈ ದುರ್ಗತಿಯಾದರೆ ಇನ್ನು ನಮ್ಮ ಪಾಡೇನು?ಎನ್ನುವುದು ಅವರ ಚಿಂತೆ ಕಛೇರಿಯಲ್ಲಿ ಈಗ ನೀರವ ಮೌನ.ಬಾಸ್ ಹುಷಾರಿಲ್ಲ ಅಂತ ಬೇಗ ಮನೆ ಹೋದರೆ ಹೆಂಡತಿ ಮಕ್ಕಳೊಡನೆ ವಂಡರ್ ಲಾ ಗೆ ಹೋಗಬಹುದೇ? ಸದಾನಂದನ ಚಿಂತೆ.ಹೀಗೆ ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕಾರ್ಯಕ್ರಮದ ಸ್ಕೆಚ್ .ಅವರು ಹೋದದ್ದನ್ನು ನೋಡಿಕೊಂಡು  ಮನೆಗೆ ಹೋಗಿ ಸರ್ ಪ್ರೈಸ್ ಕೊಡೋಣ ಎಂದುಕೊಂಡವರು ಮತ್ತೆ  ಹಲವರು. ”ಸಿದ್ಲಿಂಗು ಮುಂದಿನ ಸಾರಿ ಒಳಗೆ ಯಾವುದಾದ್ರೂ ಫೈಲೋ ಫೋಲ್ಡರೋ ತೊಗೊಂಡು ಹೋಗೊದಿದ್ರೆ ನನ್ನ ಹತ್ರ ಕೊಡು .ನೀನು ಹೋಗಬೇಡ “ಎಂದು ಒಳಗೆ ಹೋಗುವುದನ್ನು ಅಡ್ವಾನ್ಸ್ ಬುಕಿಂಗ್ ಮಾಡಿದ ಮೂರ್ತಿ. “ಬಾಸ್ ಗಳಿಗೆ ಹುಷಾರಿಲ್ಲದಾಗ ಆರೋಗ್ಯ ವಿಚಾರಿಸುವ ಸದವಕಾಶ ತಪ್ಪಿಸಿಕೊಳ್ಳಲು ಯಾರಿಗೂ ಇಷ್ಟವಿರಲ್ಲ “ಅಂತ ಗೊಣಗಿಕೊಂಡ ಸದಾಶಿವ.”ಮೂರ್ತಿ ನೀನು ಹೋದಾಗ ಎಲ್ಲ ನೀನೇ ಮಾತನಾಡಿಬಿಡಬೇಡ.ನನಗೂ ಒಂದೆರಡು ಪಾಯಿಂಟ್ ಉಳಿಸು “ ಎಂದ ಕೋರಿದ. ಹೀಗೇ ಮುಂದುವರೆಯಿತು.”ಎದರುಗಡೆ ಇರುವ ಕ್ಲಿನಿಕ್ ನಿಂದ ಎಲ್ ಎಮ್ ಪಿ ಡಾಕ್ಟರ್ ಕರೆದುಕೊಂಡು  ಬರಲೆ ಎಂದೊಬ್ಬ,ಗೃಹವೈದ್ಯ,ಆಯುರ್ವೇದ,ಯುನಾನಿ,ರೇಖಿ, ಎಲ್ಲ ಪದ್ಧತಿಗಳೂ ಸಲಹೆಯಾದವು . ಜತೆಗೆ ರೋಗದ ಕಾರಣವೂ ಚರ್ಚೆಯಾಯಿತು.”ಸಾರ್ ನೀವು ಮೊನ್ನೆ ಹೆಡ್ ಆಫೀಸ್ ಏ ಸಿ ರೂಮ್ ನಲ್ಲಿ ಬೆಳಗಿನಿಂದ ಸಾಯಂಕಾಲದವರೆಗೆ ನಡೆದ ಮೀಟಿಂಗ್ ನಲ್ಲಿ ಇದ್ದ ಪರಿಣಾಮ ದು ” ಅಂತ ಒಬ್ಬ.”ಆ ಧೂಳಲ್ಲಿ ಅಷ್ಟೊಂದು ಹೊತ್ತು ಹೋಗಬಾರದಿತ್ತು ಇನ್ಸ್ಪೆಕ್ಷನ್  ಸಾರ್ .ಅಲರ್ಜಿಯಾಗಿಬಿಟ್ಟಿದೆ “ಅಂತ ಮತ್ತೊಬ್ಬ.ಅಂತೂ ಕಛೇರಿಯ ಪ್ರತಿಯೊಬ್ಬರೂ ಕಾಳಜಿಯ ಅಕ್ಷಯಪಾತ್ರೆಯನ್ನೇ ಸುರಿಸತೊಡಗಿದರು. ಅತಿಯಾದ ಸಲಹೆಗಳ ಪರಿಣಾಮವೋ ,ಮತ್ತೇನು ಕಾರಣವೋ ಏನೋ ಮಧ್ಯಾಹ್ನದ ಹೊತ್ತಿಗೆ ಬಾಸ್ ಅಸೌಖ್ಯ ಹೆಚ್ಚಾಯಿತು. ಡ್ರೈವರ್ ಶಿವಯ್ಯನನ್ನು ಕರೆತರಲು ಹೊರಟ ಸಿದ್ದಲಿಂಗನಿಂದ ಅವರು ಮನೆಗೆ ಹೋಗುವ ಸೂಚನೆ ಸಿಕ್ಕಿತು. ಲಗುಬಗೆಯಿಂದ ಎಲ್ಲರೂ  ತಂತಮ್ಮ ಯೋಜನೆಗಳ ಬಗ್ಗೆ ಚಿಂತಿಸಿದರು. ಮನೆಗೆ ಹೊರಟ ಬಾಸ್ ಗೆ “ಸಾರ್,ಹುಷಾರು”ಈಗಲೇ ಡಾಕ್ಟರರ ಹತ್ತಿರ ಹೋಗಿ””ರೆಸ್ಟ್ ತೊಗೊಳ್ಳಿ” ಮುಂತಾದ ಮಾತುಗಳ ಪುನರುಕ್ತಿಯಾಯಿತು. “‘ಮನೆ ತನಕ ಬರೋಣವೇ ಸಾರ್ “ ಎಂದು ಸೀನ ಕೇಳಿದಾಗ . “ಬೇಢ ನಿಮ್ಮ ಕೆಲಸ ಗಮನಿಸಿಕೊಳ್ಳಿ,ಸಾಧ್ಯವಾದರೆ ನಾಳೆ ವಾಪಸು ಬರ್ತೇನೇ” ಎನ್ನುತ್ತಾ  ಹೊರಟರು . “ಅರ್ಜೆಂಟ್ ಬೇಡ ಎರಡು  ದಿನ ರೆಸ್ಟ್ ತೊಗೊಂಡೇ ಬನ್ನಿ”ಸೀನ ತೀರ್ಪು ನೀಡುವಂತೆ ಹೇಳಿದ. ಬ್ರಹ್ಮಚಾರಿ ರಾಘವೇಶನಿಗೆ ತಾವೆಲ್ಲ ಹೋದಮೇಲೂ ಸ್ವಲ್ಪ ಹೊತ್ತು ಇರುವಂತೆ ಉಳಿದವರು ಕೇಳಿಕೊಂಡರು.ಪಾಪ!ಮದುವೆಯಾಗದೆ ಇದ್ದವರಿಗೆ ಇದೇ ಹಣೇಬರಹ. ಎಲ್ಲರೂ ತಾವು ಬೇಗ ಮನೆಗೆ ಬರುವ ವಿಷಯವನ್ನು ತಿಳಿಸಲು ಉತ್ಸುಕರಾದರು. —- ಬಾಸ್ ಹೋದದ್ದನ್ನು ನೋಡಿಕೊಂಡು ಪಕ್ಕದ ವಿಭಾಗದ ಅಟೆಂಡರ್  ಕೃಷ್ಣಪ್ಪ ಬಂದು ಸಿದ್ದಲಿಂಗುವಿನೊಡನೆ ಲೋಕಾಭಿರಾಮವಾಗಿ  ಮಾತಿಗೆ ನಿಂತ. “ಇವತ್ತು ನಿನಗೆ ಆರಾಮ ಬಿಡು ಸಿದ್ದಲಿಂಗು ಬೆಲ್ ಹೊಡೆದ್ರೆ ಹೋಗೋ ತೊಂದರೆಯಿಲ್ಲ” ಎಂದ. “ಹೌದು ಬಿಡಪ್ಪ ,ಹೋದ ವಾರ ನನಗೂ ಹುಷಾರಿರಲಿಲ್ಲ.ಜ್ವರ ,ಶೀತ ನಿದ್ದೆಯಿಲ್ದೆ ಕಣ್ಣು ಕೆಂಪಗಾಗಿತ್ತು.ಯಾರೂ ಕನಿಕರ  ತೋರ್ಸೋರು ಇಲ್ಲಿರಲಿಲ್ಲ.ಕಣ್ಣು ನೋಡಿ ಯಾಕೋ ನಿನ್ನೆ ಎಣ್ಣೆ ಪಾರ್ಟಿ ಜೋರಾ ?ಅಂತ ಲೇವಡಿ ಮಾತು ಬೇರೆ”. ಸಿದ್ದಲಿಂಗು ಬೇಸರದ ದನಿಯಲ್ಲಿ ಹೇಳಿದ. ಕೃಷ್ಣಪ್ಪ “ನಿಜ,ನಿಜ ಗಾದೆ ಕೇಳಿಲ್ವಾ ‘ಕಿರಿ ದೇವರಿಗೆ ಮರದ ಜಾಗಟೆ  ಅಂತ ;ಕಂಚಿನ ಜಾಗಟೆ ಬಾರಿಸೋದಕ್ಕೆ ನಾವೇನು ಹಿರೇದೇವ್ರು ಕೆಟ್ಟೋದ್ವಾ ?” ಎನ್ನುತ್ತ ಅಲ್ಲಿಂದ ಹೊರಟ. *********************

ಕಥಾಯಾನ Read Post »

ಕಥಾಗುಚ್ಛ

ಕಥಾಯಾನ

ಮನಸು ಮಂಜುಗಡ್ಡೆಯಲ್ಲ. ಜ್ಯೋತಿ ಗಾಂವಕರ್ “ಈಗೀಗ ಏನೂ ನಿರೀಕ್ಷೆಗಳೇ ಇಲ್ಲ ನೋಡು ಭಾವನಾತ್ಮಕ ಅವಲಂಬನೆಯೂ ಇಲ್ಲ ಆಪ್ತವಾಗಿ  ಏನೋ ಹೇಳ್ಕೊಬೇಕು ಅನ್ಸೋದೇ ಇಲ್ಲ ಎದೆ ಬಂಡೆಯಾಗ್ತಿದೆ ಅನ್ನಿಸ್ತಿದೆ “ ಅಂತ ಗೆಳತಿಯೊಬ್ಬಳು ನಿರ್ಭಾವುಕವಾಗಿ ಹೇಳಿಕೊಳ್ಳುತ್ತಿದ್ದರೆ ….. ” ಹಾಗಾದರೆ ಬಂಡೆಯ ಮೇಲಿಂದ ಇಳಿಯುವ ಜಲಪಾತದಂತಹ ಭೋರ್ಗರೆತವೇನು ? ಭಾವುಕತೆಗೆ ಹುಟ್ಟಿದ ಕಣ್ಣೀರಲ್ಲವಾ” ಅಂತ  ಹೇಳಿ ಅವಳನ್ನು ಆ ನಿರ್ಲಿಪ್ತ ಭಾವದಿಂದ ಹೊರತರುವದಕ್ಕೆ ಪ್ರಯತ್ನಿಸುತ್ತಿದ್ದೆ… “ನಿಜ ಬಿಡು ಎಷ್ಟೇ ಕಲ್ಲಾಗಿದ್ದೇವೆಂದರೂ ಈ ಹೆಣ್ಣುಮಕ್ಕಳಿಗೆ ಕರಗೋದು ಅಭ್ಯಾಸ ….ಅತಿ ಭಾವುಕತೆ ಅನ್ನೋದು ಶಾಪ ನೋಡು” …ಅನ್ನುತ್ತ  ಕಣ್ಣಂಚಲಿ ಜಿನುಗುತ್ತಿರುವ ನೀರನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕುತ್ತಿದ್ದಳು … “ಇತ್ತೀಚೆಗೆ ತುಂಬಾ ಬದಲಾಗಿಬಿಟ್ಟೆ ನೀನು. ಭಾವನೆಗಳೇ ಇಲ್ಲ. ಎಲ್ಲಾ  ಯಾಂತ್ರಿಕ ಅನ್ನಿಸ್ತಿದೆ ನಂಗೆ ಸರಿಯಾಗಿ ಮಾತೇ ಆಡಲ್ಲ ಎಲ್ಲದಕ್ಕೂ ಸಣ್ಣ ಉತ್ತರ ಕೊಡ್ತಿ. ಊಟ ಮಾಡಿದ್ಯಾ ಅಂತನೂ ಕೇಳಲ್ಲ , ಬೇಜಾರಲ್ಲಿದ್ರೆ ಏನಾಯ್ತು ಅಂತನೂ ಕೇಳಲ್ಲ ಹೊಗ್ಲಿ ನೀನೂ ಏನೂ ಹೇಳ್ಕೊಳಲ್ಲ ನನ್ನತ್ರ. ನಾನೇ ಕೇಳ್ಕೊಂಡು ಬಂದಾಗ್ಲೂ ಅವಾಯ್ಡ್ ಮಾಡ್ತಿ ಎಲ್ಲಾ ಹೇಳ್ತಾ ಕೂರೋಕೆ ಟೈಮ್ ಇಲ್ಲ ಅಂತೀಯ  “ ಎನ್ನುತ್ತ ಅಳು ಮೋರೆ ಹಾಕಿಕೊಂಡು ಆಗಾಗ  ತಕರಾರು ತೆಗೆಯುತ್ತಿದ್ದ  ಅವಳಿಗೆ …”ಈ ಹೆಂಗಸರದ್ದು ಇದೇ ಆಯ್ತು ಕಿರಿಕಿರಿ  ..ಮಾಡೋಕೆ ಬೇರೆ ಕೆಲಸ ಇಲ್ವಾ?  ಮೂರೊತ್ತೂ ಇಂತದ್ದೇ ಆಯ್ತು  ಕೆಲಸಕ್ಕೆ ಬಾರದ ಭಾವನೆಗಳಂತೆ, ಅದಂತೆ ಇದಂತೆ ..ಹೇಳ್ಬೇಕಂತೆ ಕೇಳ್ಬೇಕಂತೆ , ಇವಳದ್ದೊಂದೇ ಪ್ರೀತಿ ಅಂತೆ ನಮಗಿಲ್ಲಿ ಸಾವ್ರ ಟೆನ್ಷನ್ನು. ಹುಷಾರಿಲ್ದಿದ್ರೆ ಟ್ಯಾಬ್ಲೆಟ್ ತಗೊಬೇಕು ಹಸಿವೆ ಆದ್ರೆ ಊಟ ಮಾಡ್ಬೇಕು ಏನು ಕಡಿಮೆ ಆಗಿದೆ  ನಿಂಗೆ ?  ಸರಿ ..ನನಗ್ಯಾವ ಭಾವನೆಯೂ ಇಲ್ಲ. ಒಪ್ಕೊತೀನಿ  ನಿನಗಿದೆಯಲ್ಲ ಏನು ಮಾಡ್ದೆ ? ಏನು ಸಾಧಿಸಿದೆ ಇಷ್ಟು ದಿನ ..? ಬೇಜಾರು ಮಾಡ್ಕೊಂಡು ಕೂತೆ , ಗಂಡ ಸತ್ತವರಂಗೆ ಮುಖ ಮಾಡ್ಕೊಂಡೆ. ನನಗೊಂದಿಷ್ಟು ಕಿರಿಕಿರಿ ಮಾಡ್ದೆ ಇಷ್ಟೇ ತಾನೇ …ಇನ್ನೇನಾದ್ರೂ ಆಯ್ತಾ .? ಹೋಗ್ಲಿ ಅಷ್ಟೊಂದು ಭಾವನೆ ಇರೊ ನೀನಾದ್ರೂ ಖುಷಿಯಿಂದ ಇದ್ಯಾ ? “ ಅಂತ ಮುಖಕ್ಕೆ ಹೊಡೆದಂತೆ ಹೇಳಿ ಹೋಗುವ ಅವನನ್ನು ನಿರ್ಭಾವುಕವಾಗಿ ಸಹಿಸದೇ ಅವಳಿಗೆ ಬೇರೆ ದಾರಿಯಿರಲಿಲ್ಲ ಮತ್ತದೇ ವಾಸ್ತವವೂ ಕೂಡಾ  ಆಗಿರುತ್ತದಲ್ಲ …!! “ಅರೇ ಹೌದಲ್ವಾ ..? ಅವನಂದಿದ್ದೇ ಸರಿ ಏನುಪಯೋಗವಿದೆ ಅದರಿಂದ ? ನನಗೇನು ಕಮ್ಮಿ ಆಗಿದೆ? ನಾನೇ ಸರಿ ಇಲ್ಲ ನನ್ ಮನಸ್ಸೇ ಸರಿ ಇಲ್ಲ ಸಣ್ಣಪುಟ್ಟದಕ್ಕೂ ಕೊರಗ್ತೀನಿ. ಅತಿಯಾಗಿ ನಿರೀಕ್ಷೆ ಮಾಡ್ತೀನಿ ನಾಳೆಯಿಂದ ಬದಲಾಗ್ಬೇಕು ನಾನೂ” ಎಂದುಕೊಳ್ಳುತ್ತ ಕಣ್ಣೊರೆಸಿಕೊಂಡು , ಮುಖ ತೊಳೆದು ಮತ್ತೆ ತನ್ನ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾಳೆ ಅವಳು .. ಹೌದು  ಭಾವುಕತೆ ಅನ್ನೋದು ಹೆಣ್ಣಿಗೆ ಶಾಪ..ಭಾವುಕ ಮನಸ್ಸಿಗೆ ತನ್ನ ಸುತ್ತಲಿನ ಸಂಭಂದಗಳಲ್ಲಿ  ವಿನಾಕಾರಣ ನಿರೀಕ್ಷೆಗಳು, ಪುಟ್ಟ ಪುಟ್ಟ ಆಸೆಗಳು .. ಪ್ರೀತಿಸಿದ ಜೀವಗಳ ಅನುನಯಿಸಿ ಅನುಸರಿಸಿ, ಕೇಳಿ, ಹೇಳಿ, ಕಾಳಜಿ ಮಾಡಿ, ಸಮಯ ಕೊಡುತ್ತಾಳೆ. ಎಲ್ಲರ ನೋವಿಗೂ ಮಡಿಲಾಗುತ್ತಾಳೆ, ಹೆಗಲಾಗುತ್ತಾಳೆ, ಸುಮ್ಮನೇ ಕಿವಿಯಾಗುತ್ತಾಳೆ. ಭರವಸೆಯಾಗುತ್ತಾಳೆ .  ಆಮೇಲೆ ತನಗೂ ಒಂದಿಷ್ಟು ಅದೆಲ್ಲವೂ ಅನಾಯಾಸವಾಗಿ ಸಿಕ್ಕಲಿ ಅನ್ನೋ ಸಣ್ಣ ನಿರುಪದ್ರವಿ ಸ್ವಾರ್ಥ ಅವಳದ್ದು ..ನಿಸ್ವಾರ್ಥಿಯಾಗಿರೋಕೆ ಅವಳೇನೂ ದೇವರಲ್ವಲ್ಲ..!ಸಾಮಾನ್ಯ ಮನುಷ್ಯಳೇ ತಾನೆ ..? ಯಾವುದೂ ಪ್ರತಿಯಾಗಿ ಸಿಗುತ್ತಿಲ್ಲ ಕೊಟ್ಟಿದ್ದಷ್ಟೇ ಬಂತು ಅಂದಾಗ ಸಣ್ಣಗೆ ಅಡರಿಕೊಳ್ಳುವ ನಿರಾಸೆ… ಬದುಕು ಇಷ್ಟೇ ಬಿಡು ಅನ್ನೊ ನಿರ್ಲಿಪ್ತತೆ.  “ಸರಿ ನಾಳೆಯಿಂದ ಪಕ್ಕಾ ಪ್ರಾಕ್ಟಿಕಲ್ ಆಗೋಣ. ಇವೆಲ್ಲ ಕೆಲಸಕ್ಕೆ ಬಾರದ ಭಾವಗಳು ನಿರೀಕ್ಷೆಗಳನ್ನು ಮೀರಬೇಕು. ಇಲ್ದಿದ್ರೆ ಖುಷಿಯಿಂದ ಇರೋಕೆ  ಆಗಲ್ಲ ನನ್ನಿಂದ ಎಲ್ರಿಗೂ ಬೇಜಾರು ”  ಅಂದುಕೊಳ್ಳುತ್ತ  ಒಳಗೊಳಗೇ ನಿರ್ಧರಿಸಿ ಮತ್ತೊಂದು ಹೊಸ ಮುಂಜಾವಿಗೆ ತರೆದುಕೊಳ್ಳುವ ಹೊತ್ತಿಗೆ ನಿರೀಕ್ಷಿಸದೇ, ಕೇಳದೇ, ಒಂದು ಪ್ರೀತಿಯ ಭಾವನಾತ್ಮಕ ಸ್ಪಂದನೆ ,ಮಾತು,  ಸಿಕ್ಕಿಬಿಟ್ಟಿರುತ್ತದೆ .. ಆವತ್ತಿನ ಮಟ್ಟಿಗೆ ಅವಳು ಆಕಾಶದಲ್ಲಿನ ಹಕ್ಕಿ ‌…. ಮತ್ತೆ ಕರಗಿಬಿಡುತ್ತಾಳೆ .. ಖುಷಿ ಪಡದೇ ಇರೋಕೆ ಅವಳಿನ್ನೂ ಕಲ್ಲಾಗಿರುವದೇ ಇಲ್ಲವಲ್ಲ …! ಎಲ್ಲವೂ ಅಂದುಕೊಂಡಿರುತ್ತಾಳೆ ಅಷ್ಟೇ ಅವತ್ತೇ ಹೊಸದಾಗಿ ಬದುಕುತ್ತಿದ್ದೇನೆ ಅನ್ನೊ ಭಾವ . ನಿನ್ನೆ ಅಂದುಕೊಂಡಿದ್ದೆಲ್ಲ ಸುಳ್ಳು ಇವತ್ತಿನದೇ ಖುಷಿ ಅವಳ ಪಾಲಿಗೆ .. ನಿಜ..ಅಪ್ಪಟ ಭಾವುಕ ಮನಸ್ಸು ಅದು ಮನಸ್ಸು ಕಲ್ಲಾಗುವದೆಂದರೆ ಕರಗಿದಷ್ಟು ಸಲೀಸಲ್ಲ ನಿರ್ಭಾವವೆನ್ನುವದು ಸುಖಾಸುಮ್ಮನೇ ಮೆತ್ತಿಕೊಳ್ಳುವದಿಲ್ಲ. ಸ್ಮಶಾನದಂತಹ ಮೌನವು ವಿನಾಕಾರಣ ಅಡರಿಕೊಳ್ಳುವದೂ ಇಲ್ಲ ಆದರೂ ಅವಳು ಆಗಾಗ  ಮನಸ್ಸು  ಕಲ್ಲಾಗಿಸಿ ಏನನ್ನೂ ನಿರೀಕ್ಷಿಸದೇ ನಮ್ಮವರಿಗೆ , ಪ್ರೀತಿಪಾತ್ರರಿಗೆ  ನಗುವನ್ನಷ್ಟೇ ಹಂಚುವ ಸಾಹಸಕ್ಕೆ ಇಳಿಯುತ್ತಾಳೆ . ಆದರೆ … ಅವಳ ನಿರ್ಧಾರದ  ಹಿಂದೆ ಎಷ್ಟೊಂದು  ನಿರಾಸೆಗಳ ಪಟ್ಟಿಯಿರುತ್ತದೆ. ಗೊತ್ತಾ? ಪುಟ್ಟ ಪುಟ್ಟ ಭಾವಗಳ ಒರತೆಯೆಲ್ಲ ದಿವ್ಯ ನಿರ್ಲಕ್ಷ್ಯದಲಿ ಇಂಗಿ ಹೋದದ್ದಿರುತ್ತೆ . ಸಣ್ಣ ವಂಚನೆಯಿಂದ ಬೀಸಿ ಬಡಿದದ್ದಿರುತ್ತೆ ಉಡಾಫೆಯ ಉತ್ತರದಲ್ಲಿ ಮಾತೆಲ್ಲ  ಅರ್ಧಕ್ಕೇ ಮುಗಿಸಿದ ಅಸಹನೀಯ ಮೌನವಿರುತ್ತೆ ಅನಾದರವೆಂಬ ಅಗ್ಗಿಷ್ಟಿಕೆಯ ಬಿಸಿ ಇರುತ್ತೆ. ಪ್ರತೀ ಕೊಡುವಿಕೆಯಲ್ಲೂ ..ಬರೀ ಪಡೆದುಕೊಂಡಷ್ಟೇ ಸುಮ್ಮನಾಗಿಬಿಡುವ  ಸುತ್ತಲಿನ ಅದೆಷ್ಟೋ ಮನಸುಗಳ  ನಿರಾಕರಣೆ ಇರುತ್ತೆ. “ಭಾವುಕತೆಗಳೆಲ್ಲ ಬಂಡೆಯಂತಾಗುವದು ಹೀಗೇ ನೋಡು  ಗೆಳತೀ  ಎಲ್ಲ ಭಾವಗಳ ಭೋರ್ಗರೆತವನ್ನೂ   ಮೀರಿ ಅರ್ಥಮಾಡಿಸಿ, ನಾವೂ ಅರ್ಥೈಸಿಕೊಂಡು,  ಬದಲಾಗುವ ಹೊತ್ತಿಗೆ  ನಮಗೇ ಯಾವುದೂ ಬೇಡವನ್ನುವ ಪ್ರಭುದ್ದತೆ ಬಂದುಬಿಡುತ್ತದೆ. ಎಲ್ಲಾ ಮೀರಿ ತುಂಬಾ ಮುಂದೆ ಬಂದಿರ್ತೀವಿ  ನೊಡು” ಎಂದು  ನಿಟ್ಟುಸಿರುಬಿಟ್ಟ ಅವಳಿಗೆ ಉತ್ತರ ಕೊಡಲಾಗದೇ ಸೋತೆ… ಅವಳಿಗೊಂದಿಷ್ಟು ವಿನಾಕಾರಣ ಪ್ರೀತಿ ಬೇಕು, ಸುಮ್ಮನೆ ಕಾಳಜಿ ಬೇಕು,  ಸಣ್ಣಪುಟ್ಟ ಭಾವನಾತ್ಮಕ ಸಂಭಂದಗಳೇ ಅವಳನ್ನು ದಿನನಿತ್ಯ ಜೀವಂತವಾಗಿಡುವುದು. ಯಾವುದೇ ಸಂಭಂದವಿರಲೀ ಹಣ, ಆಸ್ತಿ ಏನನ್ನೂ  ಖರ್ಚು ಮಾಡದೆಯೇ ,  ಎಲ್ಲಿಯೋ  ದೂರ ಹೋಗಿ  ಕರೀದಿಸದೆಯೇ , ಯಾರಲ್ಲಿಯೂ ಕೈ ಚಾಚದೆಯೇ, ತುಂಬಾ ಸಮಯ ವ್ಯರ್ಥ ಮಾಡದೆಯೇ  ನಮ್ಮೊಳಗೇ ಸಿಗುವ ಇಂತಹ ಸಣ್ಣಪುಟ್ಟ ಪ್ರೀತಿಯನ್ನು ಪ್ರೀತಿಸಿದ ಜೀವಗಳಿಗೆ  ನಿರ್ಲಕ್ಷ್ಯ ಮಾಡದೇ  ಪ್ರಾಂಜಲವಾಗಿ ಕೊಟ್ಟುಬಿಟ್ಟರೆ , ಅವಳೂ ಖುಷಿಯಾಗಿ ನಿಮಗೂ ಖುಷಿಯನ್ನೇ ಹಂಚುತ್ತಾಳೆ . “ಏಕೆಂದರೆ  ಒಂದು ಭಾವುಕ ಮನಸ್ಸಿಗೆ ಪಡೆದದ್ದಕ್ಕೆ ದುಪ್ಪಟ್ಟು ಕೊಡುವದು ಕರಗತ” ..

ಕಥಾಯಾನ Read Post »

You cannot copy content of this page

Scroll to Top