ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಲಹರಿ

ಪ್ರೀತಿಯ ಆಸುಪಾಸು… ಚಂದ್ರಪ್ರಭ ಪ್ರೀತಿಯ ಆಸುಪಾಸು… ಒಮ್ಮೊಮ್ಮೆ ಹೇಳುತ್ತೇವೆ, ” ನಿನ್ನ ನಾ ಪ್ರೀತಿಸುತ್ತೇನೆ, ಆದರೆ..” ಈ ‘ಆದರೆ’ ಪ್ರೀತಿಸುತ್ತೇನೆ ಎನ್ನುವ ಸತ್ಯವನ್ನೇ ಹೊಡೆದುರುಳಿಸುತ್ತದೆ. ಪ್ರೀತಿಯಲ್ಲಿ ಹಾಗಿದ್ದಲ್ಲಿ, ಹೀಗಿದ್ದಲ್ಲಿ,ಆದರೆ ಗಳಿಗೆ ಜಾಗವಿಲ್ಲ. ಅಲ್ಲಿ ಆರಂಭ ಅಂತ್ಯವೂ ಇಲ್ಲ. ಅಲ್ಲಿ ಪ್ರೀತಿ ಇದೆ ಅಷ್ಟೇ.. ಎಂದೆಂದಿಗೂ. ಭಾವನೆಗಳ ಕಲಸುಮೇಲೋಗರದಲ್ಲಿ ಹೀಗೆ ಬಂದು ಹಾಗೆ ಹೋಗುವ ಕ್ಷಣದ ಚಂಚಲತೆ, ಉತ್ಕಟತೆ ಅದಲ್ಲ. ಆರಂಭ ಅಂತ್ಯಗಳಿಲ್ಲದ ಷರತ್ತುಗಳಿಲ್ಲದ ಎದೆಯ ತುಡಿತ ಪ್ರೀತಿ. ಎದೆಯೆ ಅದರ ಮನೆ.. ದೇವರ ಗುಡಿ ಅದಕ್ಕೆ. ಎದೆಯ ಒಂದು ಭಾಗವೇ ಅದು. ಕಾಲ ಕಾಲಕ್ಕೆ ತನ್ನಷ್ಟಕ್ಕೆ ತಾನೇ ಜೀವಕೋಶಗಳಿಗೆ ರೂಪು ಕೊಡುತ್ತ.. ಅವಯವಗಳನ್ನು ಕಸಿ ಮಾಡುತ್ತ ಅದು ಚಿಗುರುತ್ತಲೇ ಇರುತ್ತದೆ ಅನುಗಾಲ. ನಮ್ಮ ಬುದ್ಧಿಯನ್ನು, ಭಾವವನ್ನು ಪರಿವರ್ತಿಸುವ, ನಾವು ಸಾಗಬೇಕಾದ ದಾರಿಯನ್ನು ನಿರ್ದೇಶಿಸುವ ತಾಕತ್ತು ಪ್ರೀತಿಗಿದೆ. ನಮ್ಮ ಆತ್ಮ ಚೈತನ್ಯದಲ್ಲಿ ನೆಲೆ ನಿಂತು ಬದುಕಿನುದ್ದಕ್ಕೂ ಅನುಕ್ಷಣವೂ ನಮ್ಮನ್ನು ಮುನ್ನಡೆಸುವ ದೀಪ್ತಿ ಪ್ರೀತಿ. “ನಾ ನಿನ್ನ ಪ್ರೀತಿಸುವೆ, ಆದರೆ…” ಎಂದರೆ ‘ಪ್ರೀತಿಸುವುದೇ ಇಲ್ಲ’ ಎಂತಲೇ ಅರ್ಥ. ಆದ್ದರಿಂದ ನಾ ನಿನಗೆ ಹೇಳುವುದಿಷ್ಟೇ : ನಾ ನಿನ್ನ ಪ್ರೀತಿಸುತ್ತೇನೆ ಕೊನೆ ಮೊದಲುಗಳೇ ಇಲ್ಲದೆ. ನಿನ್ನ ಪ್ರೀತಿಸ ತೊಡಗಿದ ಕ್ಷಣದಿಂದ ನೀ ನನ್ನ ದೇಹದ ಬೇರ್ಪಡಿಸಲಾಗದ ಅಂಗವಾಗಿರುವೆ. ಹುಡುಗಿಯೊಬ್ಬಳು ಓರ್ವ ಹುಡುಗನನ್ನು ಹೇಗೆ ಪ್ರೀತಿಸಬಹುದೊ ಹಾಗೇ ನಾ ನಿನ್ನ ಪ್ರೀತಿಸುವೆ..ನಿರ್ಭಯವಾಗಿ.. ಯಾವ ನಿರೀಕ್ಷೆಗಳೂ ಇಲ್ಲದೆ. ಪ್ರತಿಯಾಗಿ ಏನನ್ನೂ ಬಯಸೆನು.. ಅನಂತ ಕಾಲವೂ ನೀ ನನ್ನೆದೆಯಲ್ಲಿಯೇ ನೆಲೆಯಾಗಿರಬೇಕು ಎಂಬುದರ ಹೊರತು. ನಿನ್ನ ಬಲ, ನಿನ್ನ ಆತ್ಮ ಪ್ರತ್ಯಯ, ನಿನ್ನ ಕಣ್ಣಬೆಳಕು ನನಗೆ ನೀಡುವ ಸ್ವಾತಂತ್ರ್ಯವೊಂದೇ ಸಾಕು.. ನಾನು ಮೇಲೆ ಮೇಲಕ್ಕೆ ಹಾರುವೆ. ಇಂಗ್ಲಿಷ್ ಮೂಲ : ಕೊಕೊ ಜೆ ಜಿಂಜರ್ Sometimes you want to say, “I love you, but…” Yet the “but” takes away the ‘I love you’. In love their are no ‘buts’ or ‘if’s’ or ‘when’. It’s just there, and always. No beginning, no end. It’s the condition-less state of the heart. Not a feeling that comes and goes at the whim of the emotions. It is there in our heart, a part of our heart…eventually grafting itself into each limb and cell of our bodies. Love changes our brain, the way we move and talk. Love lives in our spirit and graces us with its presence each day, until death. To say “I love you, but….” is to say, “I did not love you at all”. I say this to you now: I love you, with no beginning, no end. I love you as you have become an extra necessary organ in my body. I love you as only a girl could love a boy. Without fear. Without expectations. Wanting nothing in return, except that you allow me to keep you here in my heart, that I may always know your strength, your eyes, and your spirit that gave me freedom and let me fly.” ― Coco J. Ginger ************

ಲಹರಿ Read Post »

ಇತರೆ

ಪ್ರಸ್ತುತ

ಕೇಂದ್ರದ ಬಜೆಟ್ ಗಣೇಶ್ ಭಟ್ ಶಿರಸಿ ಕೇಂದ್ರ ಬಜೆಟ್ 2020 ಬಜೆಟ್ ಒಂದರಿಂದಲೇ ಇಡೀ ಅರ್ಥವ್ಯವಸ್ಥೆ ಬದಲಾಗಿ ಬಿಡುತ್ತದೆ ಎಂದು ಭಾವಿಸುವದು ಮೂರ್ಖತನ. ಆದರೆ, ಬಜೆಟ್‍ನಲ್ಲಿ ಮಂಡಿಸುವ ವಿಚಾರಗಳು, ಆದಾಯದ ಮೂಲಗಳು ಮತ್ತು ಖರ್ಚುವೆಚ್ಚಗಳನ್ನು ನಿಭಾಯಿಸುವ ವಿವರಗಳಿಂದ ಅರ್ಥವ್ಯವಸ್ಥೆ ಸಾಗುತ್ತಿರುವ ದಿಸೆಯನ್ನು ಸುಲಭದಲ್ಲಿ ಗುರ್ತಿಸಲು ಸಾಧ್ಯ. ಹಲವು ಕ್ಷೇತ್ರಗಳಿಗೆ ಬಜೆಟ್‍ನಲ್ಲಿ ಮೀಸಲಾಗಿಟ್ಟಿರುವ ಮೊತ್ತವನ್ನು ಗಮನಿಸಿದಾಗ ಸರ್ಕಾರದ ನಿಲುವುಗಳನ್ನು ಗ್ರಹಿಸುವುದು ಸುಲಭ ಸಾಧ್ಯ. ವರ್ಷ ವರ್ಷವೂ ಹಿಗ್ಗುತ್ತಿರುವ ಬಜೆಟ್ ಗಾತ್ರದ ಜೊತೆಗೆ ಏರುತ್ತಿರುವ ಬೆಲೆಗಳು, ಹೆಚ್ಚುತ್ತಿರುವ ಖರ್ಚುಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿದಾಗ ಮಾತ್ರ ದೇಶದ ಆರ್ಥಿಕತೆಯ ಆರೋಗ್ಯದ ಕಲ್ಪನೆ ಬರುತ್ತದೆ. ಉದಾಹರಣೆಗಾಗಿ ಈ ಬಾರಿಯ ಬಜೆಟ್‍ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಮೊತ್ತ ಮೀಸಲಾಗಿಡಲಾಗಿದೆಯೆಂದು ಹೊಗಳುವವರಿದ್ದಾರೆ. ಆದರೆ ಈ ಮೊತ್ತದಲ್ಲಿ ಶಿಕ್ಷಕರು, ಉಪನ್ಯಾಸಕರುಗಳಿಗೆ ನೀಡುವ ಸಂಬಳ ಪಿಂಚಣಿ, ಸವಲತ್ತುಗಳೇ ಹೆಚ್ಚಿನ ಭಾಗವನ್ನು ನುಂಗುತ್ತವೆಂಬುದು ವಿಷಾದನೀಯ ಅಂಶ. ಯು.ಜಿ.ಸಿ ಯೋಜನೆಯಡಿ ಸಂಬಳ ಪಡೆಯುವವರು ಮಾಸಿಕ ಒಂದುವರೆ ಲಕ್ಷಕ್ಕೂ ಹೆಚ್ಚಿಗೆ ವೇತನ ಪಡೆಯುತ್ತಾರೆ. ಅಂಥವರ ಪಿಂಚಣಿ ಐವತ್ತರಿಂದ ಅರವತ್ತು ಸಾವಿರ ರೂಪಾಯಿಗಳಿಗೂ ಮಿಕ್ಕಿರುತ್ತದೆ. ಸರ್ಕಾರದ ಖರ್ಚಿನ ದೊಡ್ಡ ಪಾಲನ್ನು ಪಡೆಯುವ ನೌಕರರ ಸಂಬಳ , ಸವಲತ್ತುಗಳು ಹಾಗೂ ಪಡೆದ ಸಾಲದ ಮೇಲೆ ನೀಡಬೇಕಾದ ಬಡ್ಡಿ. ಯಾವುದೋ ಸಮಯ, ಸಂದರ್ಭದಲ್ಲಿ ನಿಗದಿಯಾದ ನೌಕರರ ಸಂಬಳ ಸದಾ ಏರುತ್ತಲೇ ಇರಬೇಕೆಂದು ಬಯಸುತ್ತಾರೆ. ಸರ್ಕಾರವೂ ಇದನ್ನು ಅನುಮೋದಿಸುತ್ತದೆ. ಶೇಕಡಾ 4 ಕ್ಕಿಂತ ಕಡಿಮೆ ಇರುವ ಈ ವರ್ಗಕ್ಕೆ ನೀಡುವ ವೇತನ, ಸವಲತ್ತುಗಳು ಏರುತ್ತಿರುವಾಗ ಬಹುಸಂಖ್ಯಾತರಾದ, ಕೃಷಿಕರು, ಕಾರ್ಮಿಕರ ಆದಾಯವೂ ಹೆಚ್ಚುತ್ತಲೇ ಇರಬೇಕೆಂಬ ಕುರಿತು ಪ್ರಾಮಾಣಿಕ ಚಿಂತನೆ , ಪ್ರಯತ್ನಗಳು ನಡೆಯುತ್ತಿಲ್ಲ. ಬಜೆಟ್‍ನಲ್ಲಿ ಘೋಷಣೆಯಾಗುವ ರಿಯಾಯಿತಿ, ಅನುದಾನಗಳ ಪ್ರಮಾಣವನ್ನು ಗಮನಿಸಿ, ಆ ಕ್ಷೇತ್ರ ಉದ್ಧಾರವಾಯಿತೆಂದು ಚಪ್ಪಾಳೆ ಬಾರಿಸುವವರು ಇಡೀ ಅರ್ಥವ್ಯವಸ್ಥೆಯ ಸಮಗ್ರತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಉದಾಹರಣೆಗಾಗಿ ಕೃಷಿ ಕ್ಷೇತ್ರಕ್ಕೆ ನೀಡಬೇಕಾದ ಸಾಲ, ಸಬ್ಸಿಡಿಗಳ ಮೊತ್ತವನ್ನು ಹೆಚ್ಚಿಸಿದಾಕ್ಷಣ, ಕೃಷಿಗೆ ಭಾರೀ ಬೆಂಬಲ ಎನ್ನುವ ಮಾತು ಕೇಳಿ ಬರುತ್ತದೆ. ಕೃಷಿ ರಗದ ಸಮಸ್ಯೆಗಳ ಉಳಿದ ಆಯಾಮಗಳನ್ನು , ಮೂಲಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಏನಾದರೂ ಕಾರ್ಯಕ್ರಮಗಳಿವೆಯೇ ಎಂದು ಗಮನಿಸುವುದೇ ಇಲ್ಲ. ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವುದು ಬರೀ ಘೋಷಣೆಗಳಿಂದ ಸಾಧ್ಯವಿಲ್ಲ. ಸಮಗ್ರ ಭೂ ಬಳಕೆ ನೀತಿ, ಅದಕ್ಕೆ ಪೂರಕವಾಗಿ ಬೇಡಿಕೆ ಆಧಾರಿತ ಬೆಳೆ ಸಂಯೋಜನೆ ಮಾರುಕಟ್ಟೆ ವ್ಯವಸ್ಥೆ ಮುಂತಾದ ಹಲವು ಸಂಗತಿಗಳನ್ನು ಒಳಗೊಂಡಾಗ ಮಾತ್ರ ಕೃಷಿ ಕ್ಷೇತ್ರ ಲಾಭದಾಯಕವಾಗಬಲ್ಲದು. ಪ್ರಸ್ತುತ ಬಜೆಟ್ ಈ ದಿಸೆಯಲ್ಲಿ ಆಶಾದಾಯಕ ಹೆಜ್ಜೆಯನ್ನೇ ಹಾಕಿಲ್ಲ. ಒಂದು ಜಿಲ್ಲೆ- ಒಂದು ಬೆಳೆ ಮುಂತಾದ ಅತಾರ್ಕಿಕ, ಅವೈಜ್ಞಾನಿಕ ಘೋಷಣೆಗಳು ಅಂಧಾಭಿಮಾನಿಗಳ ಕರತಾಡನ ಗಿಟ್ಟಿಸಲಷ್ಟೇ ಯೋಗ್ಯ. ಪ್ರಸಕ್ತ ಬಜೆಟ್ ಬಿಜೆಪಿ ಸರ್ಕಾರದ ಚಿಂತನೆಗಳ ಮುಂದುವರಿಕೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ತೊಂಬತ್ತರ ದಶಕದ ಪ್ರಾರಂಭದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ ಖಾಸಗೀಕರಣ, ಉದಾರೀಕರಣ, ಜಾಗತೀಕರಣ ನೀತಿಯನ್ನು ಆ ಪಕ್ಷವು ಸಣ್ಣ ಸಣ್ಣ ದೋಸ್‍ಗಳ ಮೂಲಕ ಅನುಷ್ಠಾನಗೊಳಿಸಲು ಪ್ರಯತ್ನಿಸಿತ್ತು. ಆದರೆ ಬಿಜೆಪಿ, ಕಳೆದ ಆರು ವರ್ಷಗಳಿಂದಲೂ ಇವೇ ನೀತಿಗಳನ್ನು ರಾಜಾರೋಷಾಗಿ ವೈಭವೋಪೇತವಾಗಿ ಕಾಂಗ್ರೆಸ್ ನಾಚಿಕೊಳ್ಳುವ ರೀತಿಯಲ್ಲಿ ಅನುಷ್ಟಾನಗೊಳಿಸುತ್ತಿದೆ. ಆರ್ಥಿಕವಾಗಿ ಲಾಭದಾಯಕವಾಗಿದ್ದ ಜೀವ ವಿಮಾ ನಿಗಮದ ಶೇರುಗಳ ಮಾರಾಟ ಮಾಡಲು ಮುಂದಾಗಿರುವುದು, ಬಿಜೆಪಿಯ ಖಾಸಗೀಕರಣದ ಪ್ರೇಮಕ್ಕೆ ಉದಾಹರಣೆ. ದೇಶದ ಜನರಿಗಾಗಿ ಜೀವವಿಮಾ ನಿಗಮದ ಶೇರುಗಳನ್ನು ಬಿಡುಗಡೆ ಮಾಡಲಾಗುತ್ತದೆಯೆಂಬುದು ಘೋಷಣೆ. ಆದರೆ ಈ ಶೇರುಗಳು ಸೇರುವುದು ಬೆರಳೆಣಿಕೆಯ ಶ್ರೀಮಂತರ ಕೈಗೆ. ಐವತ್ತು ಸಾವಿರ ಕೋಟಿಗೂ ಹೆಚ್ಚು ಆದಾಯ ಸಂಗ್ರಹಿಸುವ ಉದ್ದೇಶ ಹೊಂದಿರುವ ಈ ಪ್ರಸ್ತಾಪ, ಸಾಲ ತೀರುವಳಿಗಾಗಿ ತನ್ನ ಉತ್ಪನ್ನ ಬರುತ್ತಿರುವ ತೋಟದ ಒಂದೊಂದೇ ಭಾಗವನ್ನು ಮಾರಾಟ ಮಾಡುವ ರೀತಿಯಂತಿದೆ. ಎಲ್‍ಐಸಿಯ ನೌಕರರು, ಏಜೆಂಟರು ನೀಡುತ್ತಿರುವ ಸೇವೆಯಲ್ಲಿ ಸಾಕಷ್ಟು ಕುಂದುಗಳಿವೆ. ಆದರೂ ಎಲ್‍ಐಸಿಯೆಂಬ ಸಾರ್ವಜನಿಕ ವಲಯದ ಸಂಸ್ಥೆಯಿಂದಾಗಿಯೇ ಖಾಸಗಿ ವಿಮಾ ಸಂಸ್ಥೆಗಳು ಬಾಲ ಮುದುರಿಕೊಂಡು ವ್ಯವಹರಿಸುತ್ತಿವೆ. ಎಲ್‍ಐಸಿ ದುರ್ಬಲಗೊಳ್ಳತೊಡಗಿದಂತೆ ಖಾಸಗಿ ರಂಗದ ವಿಮಾ ಸಂಸ್ಥೆಗಳ ಶೋಷಣೆಯೂ ಹೆಚ್ಚಲಿದೆ. ಕಳೆದೆರಡು ವರ್ಷಗಳಿಂದಲೂ ಎಲ್‍ಐಸಿಯನ್ನು ದುರ್ಬಲಗೊಳಿಸುವ ಪ್ರಕ್ರಿಯೆ ನಡೆಯುತ್ತಲೇ ಇದೆ. ನಷ್ಟದಲ್ಲಿರುವ ಬ್ಯಾಂಕ್‍ಗಳ ಶರನ್ನು ಎಲ್‍ಐಸಿ ಖರೀದಿಸುವಂತೆ ಮಾಡಿರುವುದು ಒಂದು ಉದಾಹರಣೆ ಮಾತ್ರ. ಖಾಸಗಿ ರಂಗದ ಕೃಷಿ ವಿಮಾ ಸಂಸ್ಥೆಗಳು ರೈತರಿಗೆ ಮಾಡುತ್ತಿರುವ ವಂಚನೆಗಳನ್ನು ಗಮನಿಸಿದಾಗ ವಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀರಂಗಕ್ಕೆ ನೀಡಿದರೆ ಆಗುವ ಅಪಾಯಗಳನ್ನು ಊಹಿಸುವುದು ಸುಲಭ. ವಿದೇಶೀ ಬಂಡವಾಳದ ನೇರ ಹೂಡಿಕೆಗೆ ಅವಕಾಶಗಳನ್ನು ಹೆಚ್ಚಿಸಿರುವುದು ಕೂಡಾ ಅಪಾಯಕಾರಿ ಕ್ರಮ. ಭಾರತದ ಅರ್ಥವ್ಯವಸ್ಥೆ ಬಂಡವಾಳದ ಕೊರತೆಯಿಂದ ಬಳಲುತ್ತಿಲ್ಲ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುವ ಸಂಗತಿ. ದೇಶದ ಆರ್ಥಿಕ ಸ್ವಾಯತ್ತತೆಗೆ ಅಪಾಯವೊಡ್ಡುವ ಕ್ರಮಗಳ ಕುರಿತು ಕುರುಡು ನಂಬಿಕೆ ಹೊಂದಿರುವ ಬಂಡವಾಳವಾದಿ ಆರ್ಥಿಕ ತಜ್ಞರ ಸಲಹೆಗಳನ್ನು ಮಾನ್ಯ ಮಾಡುವ ಆಡಳಿತ ನಡೆಸುವವರು. ಜಾಗತಿಕ ಆರ್ಥಿಕ ವಿದ್ಯಮಾನಗಳನ್ನು ಸ್ವಾರ್ಥಕ್ಕಾಗಿ, ಉದ್ದೇಶ ಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆನ್ನುವುದು ಸ್ಪಷ್ಟ. ತನ್ನ ಆರ್ಥಿಕ ಸ್ವಾಯತ್ತತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಯುರೋಪಿಯನ್ ಆರ್ಥಿಕ ಒಕ್ಕೂಟದಿಂದ ಬ್ರಿಟನ್ ಹೊರ ಬಂದಿರುವುದು ನಮಗೆ ಪಾಠವಾಗಬೇಕಿತ್ತು. ಹೂಡಿಕೆದಾರರು ದೇಶೋದ್ಧಾರಕರು ಎಂದು ನಂಬುವವರು, ನಂಬಿಸುವವರನ್ನು ಸ್ವಾರ್ಥಿಗಳು ಮತ್ತು ಕಪಟಿಗಳು ಎನ್ನಲೇಬೇಕಾಗುತ್ತದೆ. ಯಾಕೆಂದರೆ ಹೂಡಿಕೆದಾರರಿಗೆ ತಮ್ಮ ಲಾಭ ಗಳಿಕೆಯೇ ಪ್ರಮುಖ ಗುರಿಯಾಗುತ್ತದೆಯೇ ಹೊರತು ಸಮುದಾಯದ ಉದ್ಧಾರವಲ್ಲ. ಶಿಕ್ಷಣ ಕ್ಷೇತ್ರದಲ್ಲಿಯೂ ವಿದೇಶಿ ನೇರ ಹೂಡಿಕೆಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಅತ್ಯಂತ ಅಪಾಯಕಾರಿ. ಭಾರತೀಯ ಚಿಂತನೆ ಆಧಾರಿತ ವ್ಯಕ್ತಿತ್ವ ನಿರ್ಮಾಣದ ಶಿಕ್ಷಣ ನೀತಿಗೆ ತಿಲಾಂಜಲಿ ನೀಡಿ ಶತಮಾನಗಳೇ ಕಳೆದವು. ಬಂಡವಾಳಶಾಹಿಗಳ ಅಗತ್ಯಕ್ಕನುಗುಣವಾಗಿ ಗುಲಾಮರನ್ನು ಸೃಷ್ಟಿಸುವ ಶಿಕ್ಷಣ ನೀತಿಯನ್ನು ಹಲವು ದಶಕಗಳಿಂದ ಅನುಷ್ಟಾನಗೊಳಿಸುತ್ತಾ, ಯಾವ ಜನತೆಯಲ್ಲಿ ಆತ್ಮವಿಶ್ವಾಸ ಬೆಳೆಯದಂತೆ ಮಾಡಿರುವ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹಣವಂತರ ಕೈಗೆ ನೀಡುವುದರಿಂದ ಆಗುವ ಸಾಂಸ್ಕøತಿಕ ಆಘಾತಗಳು, ಕುಂಠಿತಗೊಳ್ಳುವ ವ್ಯಕ್ತಿತ್ವ ನಿರ್ಮಾಣದ ಕುರಿತು ಸರ್ಕಾರ ಅಸಡ್ಡೆ ತೋರಿರುವುದು ಸ್ಪಷ್ಟ. ದೇಶಾಭಿಮಾನ, ಭಾರತೀಯತೆ ರಾಷ್ಟ್ರೀಯತೆ ಮುಂತಾದ ಇವರ ಘೋಷಣೆಗಳ ಟೊಳ್ಳುತನ ಇದರಿಂದಲೇ ಸ್ಪಷ್ಟವಾಗುತ್ತದೆ. ಸಂಪತ್ತು ಸೃಷ್ಟಿಸುವವರನ್ನು ಗೌರವಿಸುವದಾಗಿ ಹೇಳಲಾಗಿದೆ. ಸಂಪತ್ತು ಸೃಷ್ಟಿಸುವವರು ಯಾರಿಗಾಗಿ ಆ ಕಾರ್ಯ ಮಾಡುತ್ತಾರೆಂಬುದನ್ನೂ ಸರ್ಕಾರದ ಅಂಕಿಅಂಶಗಳಿಂದಲೂ ಕಾಣಬಹುದು. ಬೆರಳೆಣಿಕೆಯ ಶ್ರೀಮಂತರ ಹಾಗೂ ಅವರ ಕಂಪನಿಗಳ ವಹಿವಾಟು ದೇಶದ ಬಜೆಟ್‍ನ್ನೂ ಮೀರಿದೆ ಎಂಬ ವಿಷಯವೇ, ದೇಶದ ಆಡಳಿತವನ್ನು ನಿಯಂತ್ರಿಸುತ್ತಿರುವವರು ಶ್ರೀಮಂತರೇ ಹೊರತು ರಾಜಕೀಯ ನೇತಾರರಲ್ಲ ಎಂಬುದನ್ನು ಎತ್ತಿ ಹೇಳುತ್ತದೆ. ಭಾರತದ 63 ಅತಿ ಶ್ರೀಮಂತರ ಸಂಪತ್ತು, ದೇಶದ ಮುಕ್ಕಾಲು ಪಾಲು ಜನರ ಸಂಪತ್ತಿಗೂ ಹೆಚ್ಚು ಎನ್ನುವ ವಿಷಯ ಅಧಿಕಾರಸ್ಥರ ಗಮನ ಸೆಳೆದಿಲ್ಲವೆಂಬುದು ಆಶ್ಚರ್ಯದ ಸಂಗತಿ. ಭಾರತದ ಜನಸಂಖ್ಯೆಯ ಶೇಕಡಾ ಒಂದರಷ್ಟಿರುವ ಅತಿ ಶ್ರೀಮಂತರ ಸಂಪತ್ತು ಪ್ರತಿವರ್ಷವೂ ಹೆಚ್ಚುತ್ತಲೇ ಇದ್ದು, ದೇಶದ ಸಂಪತ್ತಿನ 58% ನಷ್ಟು ಇವರ ಹತೋಟಿಯಲ್ಲೇ ಇದೆ. ಈ ಅಪಾಯಕಾರಿ ಪ್ರವೃತ್ತಿಯನ್ನು ತಡೆಗಟ್ಟುವ ಅಥವಾ ನಿಯಂತ್ರಿಸುವ ಯಾವ ಪ್ರಸ್ತಾಪವೂ ಬಜೆಟ್‍ನಲ್ಲಿ ಇಲ್ಲ. ಬದಲಿಗೆ ಸಂಪತ್ತಿನ ಕೇಂದ್ರೀಕರಣಕ್ಕೆ ಇನ್ನಷ್ಟು ಒಲವು ತೋರಿಸುವ ಬಜೆಟ್ ಮಂಡಿಸಿರುವ ಸರ್ಕಾರ , ಸಾಮಾಜಿಕ ನ್ಯಾಯದ ಕುರಿತು ಮಾತನಾಡುವ ನೈತಿಕ ಹಕ್ಕನ್ನೇ ಕಳೆದುಕೊಂಡಿದೆ. ನಗರಗಳ ಅಭಿವೃದ್ಧಿ, ವಿಮಾನ ನಿಲ್ದಾಣಗಳ ಹೆಚ್ಚಳ, ಹೈಸ್ಪೀಡ್ ರೈಲುಗಳನ್ನು ಹೆಚ್ಚಿಸಿ ಉದ್ಯೋಗ ಸೃಷ್ಟಿಸುತ್ತೇವೆಂಬ ಭ್ರಮೆಯನ್ನು ಸೃಷ್ಟಿಸಲಾಗುತ್ತಿದೆ. ರಾಜ್ಯದ ಯಾವುದೋ ಒಂದು ನಗರದಲ್ಲಿ ಫುಡ್‍ಪಾರ್ಕ್ ಅಥವಾ ಇನ್ಯಾವುದೋ ಉದ್ಯಮ ಪ್ರಾರಂಭಿಸುವ ಬದಲಿಗೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಆಧಾರಿತ ಮತ್ತು ಕೃಷಿ ಪೂರಕ ಉದ್ಯಮಗಳ ಸ್ಥಾಪನೆಗೆ ಒತ್ತು ನೀಡುವ ಕ್ರಮಗಳಿಂದ ಉದ್ಯೋಗ ಸೃಷ್ಟಿ, ನಗರಾಭಿಮುಖ ವಲಸೆಯನ್ನು ತಡೆಗಟ್ಟಲು ಸಾಧ್ಯವಿದೆ. ಹಳ್ಳಿಗಳನ್ನು ಉದ್ಯೋಗ ಸೃಷ್ಟಿಯ ಕೇಂದ್ರಗಳನ್ನಾಗಿಸುವುದರಿಂದ ಕ್ಷಿಪ್ರ ಆರ್ಥಿಕ ಪ್ರಗತಿ ಸಾಧ್ಯ. ಜನರ ಕೈಗೆ ಖರೀದಿ ಶಕ್ತಿ ನೀಡುವ ಕುರಿತು ಘೋಷಣೆ ಮಾತ್ರ ಇದೆಯೇ ಹೊರತು, ಅನುಷ್ಠಾನ ಯೋಗ್ಯ ಕ್ರಮಗಳ ಪ್ರಸ್ತಾಪವೇ ಇಲ್ಲ. ಆರ್ಥಿಕ ಪುನಶ್ಚೇತನಕ್ಕೆ ಬೇಕಾದ ಸೂಕ್ತ ಪ್ರಸ್ತಾಪಗಳಲ್ಲದೇ ಬಳಲಿರುವ ಈ ವರ್ಷದ ಬಜೆಟ್‍ನಿಂದ ಧನಾತ್ಮಕ ಬದಲಾವಣೆಯ ನಿರೀಕ್ಷೆ ಮಾಡಲಾಗದು. ದೇಶದ ಆರ್ಥಿಕ ಸ್ವಾಯತ್ತತೆಯನ್ನು ಹಾಳುಗೆಡವಿ, ಜನಸಾಮಾನ್ಯರಿಂದ ಆರ್ಥಿಕ ಸ್ವಾವಲಂಬನೆಯನ್ನು ಕಸಿಯುವ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಯಶಸ್ವಿಯಾಗುವುದು ನಿಶ್ಚಿತ. ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿಸುವ ಪ್ರಕ್ರಿಯೆಯ ಮುಂದುವರಿಕೆಯ ಪರಿಣಾಮ ಬಹುಬೇಗ ಪ್ರಕಟಗೊಳ್ಳಲಿದೆ. ಅರ್ಥವ್ಯವಸ್ಥೆಯ ಪುನಶ್ಚೇತನವಾಗಬೇಕೆಂದರೆ ಜನಸಾಮಾನ್ಯರಿಗೆ ಸರ್ಕಾರದ ರೀತಿ- ನೀತಿಗಳಲ್ಲಿ ನಂಬಿಕೆ, ವಿಶ್ವಾಸ ಮೂಡಬೇಕು. ಈ ದಿಸೆಯಲ್ಲಿ ಭರವಸೆ ಮೂಡಿಸಲು ಪ್ರಸ್ತುತ ಬಜೆಟ್ ವಿಫಲವಾಗಿದೆ.

ಪ್ರಸ್ತುತ Read Post »

ಇತರೆ

ಲಹರಿ

ಗುಬ್ಬಿಯ ಅಳಲು ತಾರಾ ಸತ್ಯನಾರಾಯಣ “ಗುಬ್ಬಿಯ ಅಳಲು”                ನನ್ನ ಸಂಸಾರದ ಹೊಟ್ಟೆ ತುಂಬಿಸಲು ನಾನು ದೂರ ಬಹುದೂರ ಬಂದರೂ ……ಎಲ್ಲಿಯೂ ನನಗೆ ಹಣ್ಣುಗಳಿರುವ ಮರಗಳೇ ಕಾಣುತ್ತಿಲ್ಲ.ಎಲ್ಲಿ ನೋಡಿದರೂ ಬರೀ ಕಟ್ಟಡ ಕೆಲವಂತೂ ಗಗನಚುಂಬಿ ಕಟ್ಟಡಗಳು ಕೆಳಗಡೆ ನೋಡಿದರೆ ಟಾರಿನ ರಸ್ತೆಗಳು ಹೋಗಲಿ ಮನೆಗಳಿರುವ ಕಡೆಯೇ ಹೋಗೋಣವೆಂದರೆ ಅಲ್ಲೂ ಕೂಡ ಮನೆಯ ಸುತ್ತ ಮುತ್ತ ಸಿಮೆಂಟಿನಿಂದ ಕೂಡಿದ ನೆಲ. ಮನೆಯ ಮುಂಭಾಗದಲ್ಲಿ ಮನೆಯ ಹಿಂಭಾಗದಲ್ಲಿ ಗಿಡಮರಗಳಿಲ್ಲ. ಎರಡು  ಮೂರು ಅಂತಸ್ತಿನ ಮನೆಗಳು. ಮರ,ಗಿಡ,ಮಣ್ಣಿನ ನೆಲ-ಜಲ ಎಲ್ಲಾ ಮಂಗಮಾಯ               ಹಿಂದೆ ನನ್ನಮುತ್ತಾತ ಮುತ್ತಜ್ಜಿ ಅವರೊಡನೆ ನಿಧಾನಕ್ಕೆ ಹಾರುತ್ತ( ಆಗ ನಾನು ತುಂಬಾ ತುಂಬಾ ಚಿಕ್ಕ ಮರಿ )ನಾನು ಅವರ ಜೊತೆ ಬರ್ತಾಇದೆ. ಆಗ ನಮ್ಮ ಗೂಡು ಬಿಟ್ಟು ತುಂಬಾ ದೂರ ಬರ್ತಿರ್ಲಿಲ್ಲ ನಮ್ಮ ಗೂಡಿನ ಆಜು-ಬಾಜಿನಲ್ಲಿ ಅನೇಕ ತರದ ಹಣ್ಣುಗಳಿಂದ ಕೂಡಿದ ಗಿಡಮರಗಳು ಇರುತ್ತಿದ್ದವು ಗಿಡ-ಮರಗಳಲ್ಲಿ ತರಹೇವಾರಿ ಹುಳ ಹುಪ್ಪಟೆಗಳು ಸಿಕ್ಕರೆ, ಹಣ್ಣು ಕಾಯಿಗಳು ಬೇಕಾದಷ್ಟು ಸಿಗುತ್ತಿತ್ತು. ಅಲ್ಲದೆ ಅಕ್ಕ -ಪಕ್ಕದ ಮನೆಗಳ  ಮುಂದೆ ಹೋದರೆ, ಅಕ್ಕಿ ಆಯ್ದ ಭತ್ತಗಳು, ಹುಳ-ಹುಪ್ಪಟೆಗಳು ಸಿಕ್ಕರೆ,ಧವಸ-ಧಾನ್ಯವನ್ನು ಮೊರದಲ್ಲಿ ಮಾಡುತ್ತಿದ್ದರಿಂದ,ಅದರಲ್ಲಿದ್ದ ಕಸ-ಕಡ್ಡಿಗಳ ಜತೆ ಬರುತ್ತಿದ್ದ ಧಾನ್ಯವನ್ನು ಎಸೆಯುತ್ತಿದ್ದರು.   ಅದೇ ನಮಗೆ ಬೇಕಾದಷ್ಟು ಸಿಗುತ್ತಿತ್ತು. ಮನೆ ಹಿಂದೆ,ಹಿತ್ತಲಿಗೆ ಹೋದರೆ ಮುಸುರೆ ಯಲ್ಲಿರುತ್ತಿದ್ದ ಅನ್ನ, ಬೆಂದ ಬೇಳೆಕಾಳುಗಳು ನೀರು,ಯಥೇಚ್ಛವಾಗಿ ಸಿಗುತ್ತಿತ್ತು. ನಾವು ಮನೆ ಒಳಗೆ ಹೋಗಿ ಅಕ್ಕಿ ಕಾಳು ಬೇಳೆಗಳನ್ನು ತಿಂದರೂ….ನಮ್ಮನ್ನು ಯಾರು ಓಡಿಸುತ್ತಿರಲಿಲ್ಲ. ಅವರ ಮನೆಯಲ್ಲಿದ್ದ ಕನ್ನಡಿಯಲ್ಲಿ ನಮ್ಮನ್ನೆ ನೋಡಿಕೊಂಡು ಕುಕ್ಕಿ, ಚಿಲಿಪಿಲಿ ಗುಟ್ಟಿದಾಗ ಅವರಿಗೆಲ್ಲ ಅದೇನೋ ಸಂಭ್ರಮ. ಮನೆಯಲ್ಲಿ ಎಲ್ಲರೂ ನಮ್ಮನ್ನ ಇಷ್ಟಪಡುತ್ತಿದ್ದರು. ಅಲ್ಲದೆ ನಮ್ಮನ್ನು ನೋಡುತ್ತಾ ನಮ್ಮ ಮೇಲೆ ಹಾಡು ಹೇಳುತ್ತಿದ್ದರು. ಹಾ! ಯಾವ ಹಾಡು! ಗೊತ್ತಾಯ್ತು; ಬಾಬಾ ಗುಬ್ಬಿ ಮರಿ ತಂದಿರುವೆ ಕಡ್ಲೆಪುರಿ ನಾವೆಲ್ಲ ತಿನ್ನೋಣ ಬಾ ಬಾ ಬಾ :ಅಂತ ಹೇಳ್ತಿದ್ದರು ಎಷ್ಟು ಚೆನ್ನಾಗಿತ್ತು.           ಹಕ್ಕಿಯಾ ದ ನಮಗೆ ಹಾರಲು ವಿಶೇಷ ಗುಣಗಳಿರಬೇಕು ಅವು ಯಾವುವೆಂದರೆ,ದೇಹಕ್ಕೆ ಬಳುಕುವ ಬಲ ಇರಬೇಕು. ಅಧಿಕ ಪ್ರಮಾಣದಲ್ಲಿ ಗಾಳಿ ಒದಗಬೇಕು ಅತಿವೇಗದಲ್ಲಿ ರಕ್ತ ಪರಿಚಲನೆ ನಡೆಯಬೇಕು. ಹಗುರ ಶರೀರ, ಬಲಿಷ್ಟ ಹೃದಯ, ತೀಕ್ಷ್ಣ ದೃಷ್ಟಿ ವಿಶಿಷ್ಟ ಉಸಿರಾಟ ಕ್ರಮ ಹೆಚ್ಚಿನ ಆಹಾರ ಪೂರೈಕೆ ಆಗಬೇಕು. ಈ ಎಲ್ಲದರ ಜೊತೆಗೆ ಬಲಿಷ್ಟ ರೆಕ್ಕೆಗಳಿರಬೇಕು. ಈ ಎಲ್ಲಾ ಗುಣಗಳಿಂದ ನಾವು ಮೇಲೆ ಹಾರಾಡಬಹುದು. ಮೇಲೆ ಹಾರಲು ಸಾಕಷ್ಟು ಶಕ್ತಿ ಬೇಕು ಶಕ್ತಿ ಪಡೆಯಲು ನಮ್ಮ ದೇಹದ ತೂಕದ ಅರ್ಧದಷ್ಟಾದರೂ ಶಕ್ತಿಯುತವಾದ ಆಹಾರ ತಿನ್ನಬೇಕು ನಾವು ಬೇಳೆಕಾಳುಗಳು, ಹುಳ ಹುಪ್ಪಟೆಗಳು ನೆರೆ-ತೊರೆಯಲ್ಲಿರುವ ಮೀನುಗಳು, ಅಲ್ಲದೆ ಬೆಳೆಯುತ್ತಿದ್ದ ಪೈರಿಗೆ ಹತ್ತುತ್ತಿದ್ದ ಹುಳ ಹುಪ್ಪಟೆಗಳನ್ನು ತಿನ್ನುತ್ತಿದ್ದೆವು.ಆಗ ನಮ್ಮನ್ನು ರೈತನ ಮಿತ್ರ ಎಂದೇ ಹೇಳುತ್ತಿದ್ದರು.             ಚಲನೆಯ ವಿಧದಲ್ಲಿ ಹಾರಾಟ ತುಂಬಾ ಶ್ರಮ ವಾದದ್ದು ಆದ್ದರಿಂದ ನಮ್ಮ ಹೃದಯದ ಬಡಿತ ಮನುಷ್ಯರಿಗಿಂತ ಜಾಸ್ತಿ ನಮ್ಮ (ಹಕ್ಕಿಗಳ)ಉಷ್ಣತೆ 107 ‘ಡಿಗ್ರಿ ಮೀರುತ್ತದೆ ಈ ಎಲ್ಲ ಜೈವಿಕ ಕ್ರಿಯೆಗಳು ಸುಸೂತ್ರವಾಗಿ ನಡೆಯಬೇಕಾದರೆ ನಾವು ತಿನ್ನುತ್ತಲೇ ಇರಬೇಕು ತಿನ್ನುವುದರಿಂದ ಇಂಜಿನ್ ನಂತೆ ಇರುವ ನಮ್ಮ ರೆಕ್ಕೆಗಳಿಗೆ ಶಕ್ತಿ ಬರುವುದು !ಆಗ ನಾವು ಎಲ್ಲೆಂದರಲ್ಲಿ ಹಾರಬಹುದು. ಈಗ ನಂಗೆ ಮುತ್ತಜ್ಜಿ, ಮುತ್ತಾತ,ಅಜ್ಜಿ-ತಾತನೂ ಇಲ್ಲ.ಅದು ಹೋಗಲಿ ಅಪ್ಪ ಅಮ್ಮನೂ ಇಲ್ಲ. ನನಗೆ ಹೆಂಡತಿ, ಇನ್ನೂ ಗುಟುಕುಣಿಸುವ ಮಕ್ಕಳಿದ್ದಾರೆ. ಅವರನ್ನ ಸಾಕುವ ಹೊಣೆ ನನ್ನದು.ಈಗ ನಮಗೆ ಬೇಕಾದಂತಹ ಗಿಡಮರಗಳು ಕಡಿಮೆ. ಯಾರ ಮನೆ ಮುಂದೆಯೂ ಭತ್ತವಾಗಲಿ,ಕಾಳಾಗಲೀ…. ಹುಳಹುಪ್ಪಟೆ ಗಳಾಗಲಿ ಸಿಗುತ್ತಿಲ್ಲ. ಅಲ್ಲದೆ ಹಿತ್ತಲಲ್ಲಿ ಪಾತ್ರೆ ತೊಳೆಯುವುದು ತುಂಬಾ ಕಡಿಮೆ. ಕೆಲವರ ಮನೆಯಲ್ಲಿ ಹಿತ್ತಲೇ ಇರುವುದಿಲ್ಲ ಈಗ ಎಲ್ಲರೂ ಅಂಗಡಿಯಿಂದ ಕ್ಲೀನಾಗಿರೋ ಆಹಾರ ಪದಾರ್ಥವನ್ನೇ ತರುತ್ತಾರೆ.ಇನ್ನು ಹೇಳಬೇಕೆಂದರೆ ಕೆಲವರು ready-to-eat ಪ್ಯಾಕೆಟ್ ತಂದು ಅದನ್ನು ಬಿಸಿ ಮಾಡಿ ತಿನ್ನುತ್ತಾರೆ. ಆದರೂ ಕೆಲವರು ಮನೆಗಳಲ್ಲಿ ಏನಾದರೂ ಸಿಕ್ಕೇ ಸಿಗುತ್ತದೆ ಎಂದು ಅಲ್ಲಿಗೆ ಹೋಗೋಣವೆಂದರೆ ಈಗ ಮೊಬೈಲ್ ಎಂಬ ಸಲಕರಣೆ ಬಂದು, ಬಹುತೇಕ ಎಲ್ಲರ ಮನೆಯಲ್ಲೂ ಇರುವುದರಿಂದ ಅದರಿಂದ ಬರುವ ಕ್ಷ- ಕಿರಣಗಳು ನಮ್ಮ ಉಸಿರಾಟಕ್ಕೆ(ಭಯವಾಗಿ) ತೊಂದರೆಯನ್ನುಂಟು ಮಾಡುತ್ತದೆ. ಹಾಗಾಗಿ ನಾವು ಮನೆಗಳ, ಅಂಗಡಿಗಳ ಮುಂದೆ ಹೆದರಿ  ಬರುವುದೇ ಇಲ್ಲ.              ನಗರದ ಸಹವಾಸ ಬೇಡ ಹಳ್ಳಿಗೆ ಹೋಗೋಣವೆಂದರೆ ಅಲ್ಲಿಯೂ ಸುಖವಿಲ್ಲ.ರೈತ ಬೆಳೆಯುವ ಆಹಾರ ಧಾನ್ಯಗಳಿಗೆ, ಹುಳುಗಳು ಹತ್ತಬಾರದೆಂದು  ಕ್ರಿಮಿನಾಶಕ ಸಿಂಪಡಿಸುತ್ತಾರೆ. ಅವುಗಳನ್ನು ತಿಂದು,ನನ್ನ ಬಳಗದ ಅನೇಕರಿಗೆ ಆರೋಗ್ಯವೇ ಹಾಳಾಗಿದೆ. ಗಿಡ,ಮರ ಬಳ್ಳಿಗಳಲ್ಲಿ ಬಿಡುವ ಹಣ್ಣನ್ನಾ ದರೂ ತಿನ್ನೋಣ ವೆಂದರೆ,ಹಣ್ಣುಗಳು ಚೆನ್ನಾಗಿ ಬರಲೆಂದು ಬಣ್ಣವಾಗಿಕಾಣಲೆಂದು ಇಂಜಕ್ಷನ್ ಹಾಕುತ್ತಾರಂತೆ.ಅವುಗಳನ್ನು ತಿನ್ನ ಬಾರದೆಂದು ನಮಗೆ ತಿಳಿಯುವುದಿಲ್ಲ.ಮನುಷ್ಯರು ಗಳಾದರೆ ಅವುಗಳನ್ನು ಚೆನ್ನಾಗಿ ತೊಳೆದು ತಿನ್ನುತ್ತಾರೆ ನಮಗೆ ಆ ಭಾಗ್ಯ ಇಲ್ಲವಲ್ಲ !ಮೀನು ಹಿಡಿದು ತಿನ್ನೋಣವೆಂದರೆ, ನೀರು ಕಲುಷಿತಗೊಂಡಿದೆ. ಕಲುಷಿತಗೊಂಡ ನೀರಿಗೆ ಸೊಳ್ಳೆಗಳು ಬರುತ್ತದೆಂದು ನೀರಿಗೆ ಕ್ರಿಮಿನಾಶಕ ಸಿಂಪಡಿಸುತ್ತಾರೆ. ಹಾಗಾಗಿ ನಮಗೆ ಹಳ್ಳಿಯಲ್ಲೂ ಸುಖವಿಲ್ಲ. ನಗರದಲ್ಲಿ ಕಾರ್ಖಾನೆ ಅಲ್ಲದೆ ಸಣ್ಣ ಕೈಗಾರಿಕೋದ್ಯಮದ ವರು ಕೂಡ ಅದರಲ್ಲಿ ಬರುವ ಕಲುಷಿತ ನೀರನ್ನು ನದಿಗೆ ಬಿಟ್ಟು ನೀರನ್ನು ಹಾಳು ಮಾಡುವುದರಿಂದ ಅದರಲ್ಲಿರುವ ಮೀನುಗಳು ಸಾವನ್ನಪ್ಪಿವೆ.ಹಾಗಾಗಿ ನಾವು ಸಣ್ಣ ಪುಟ್ಟ ಮೀನುಗಳನ್ನು ಅರಸಿ ಹೋಗುವುದು ಕಷ್ಟದ ಕೆಲಸವಾಗಿದೆ. ಈ ಎಲ್ಲಾ ಕಾರಣದಿಂದ ನಮ್ಮ ಸಂತತಿ ಅಳಿವಿನ ಅಂಚಿನಲ್ಲಿದೆ.ಏನೋ ನನ್ನ ಅದೃಷ್ಟಕ್ಕೆ ನನಗೆ ಗೂಡು ಕಟ್ಟಿಕೊಳ್ಳಲು ಒಂದು ದೊಡ್ಡ ಮರ ಸಿಕ್ಕಿದೆ. ಆ ಮರದ ಮೇಲೆ ಗೂಡು ಕಟ್ಟಿದ್ದೇನೆ. ನನ್ನ ಹೆಂಡತಿ ಮಕ್ಕಳು ಅಲ್ಲೇ ಇದ್ದಾರೆ ಈಗ ಮೆಟ್ರೋ ಬಂದು ಅರ್ಧದಷ್ಟು ಮರಗಳನ್ನು ಕಳೆದು ಹಾಕಿದ್ದಾರೆ ಆಗಾಗ ಉಕ್ಕಿನ ಸೇತುವೆ ಪ್ರಸ್ತಾಪವಿದೆ ಮತ್ತೆ ಪರಿಸರ !!?ಪರಿಸರ ನಾಶವಾಗುತ್ತಿದೆ.ನಾವು ಎಲ್ಲಿ ಹೋಗುವುದು? ಏನು ಮಾಡುವುದು ?ಅಯ್ಯೋನಾನು ದೂರ ಬಂದುಬಿಟ್ಟೆ. ಹೊಟ್ಟೆಗೆ ಏನು ಸಿಕ್ಕಿಲ್ಲ ನನಗೆ ತುಂಬಾ ಸುಸ್ತಾಗಿದೆ. ಈಗ ನಾನು ಹೇಗೆ ಹೋಗಲಿ?ಗೂಡು ಬಿಟ್ಟು ತುಂಬಾ ದೂರ ಬಂದು ಬಿಟ್ಟಿದ್ದೇನೆ. ನಾನು ನನ್ನ ಗೂಡಿಗೆ ಹೇಗೆ ಹೋಗಲಿ? ಕಾಗೆಯಿಂದ ಹೇಗೆ ತಪ್ಪಿಸಿಕೊಳ್ಳಲಿ? ನಾನು ಹೇಗಾದರು ತಪ್ಪಿಸಿಕೊಂಡು ನಿಧಾನವಾಗಿ ಹೋಗಲೇಬೇಕು ಹೋಗುತ್ತೇನೆ. ಆದರೆ ನಾನು ಹೋಗುವವರೆಗೂ ನಾವಿದ್ದ ಮರ ಕಡಿಯದೇ ಇರಲಿ. ಬೀಳದೆ ಇರಲಿ.ನಮ್ಮ ಸಂತತಿ ಅಳಿಯಬಾರದು! ಉಳಿಯಬೇಕು. ಓ !ದೇವರೇ; ಓ ದೇವರೇ ನಮ್ಮನ್ನು ರಕ್ಷಿಸು!!. *********

ಲಹರಿ Read Post »

ಇತರೆ

ಹಾಸ್ಯಲೋಕ

ನಾಯಿ ಬೇಕಾ ನಾಯಿ! ತಾರಾ ಸತ್ಯನಾರಾಯಣ ನಾಯಿ ಬೇಕಾ ನಾಯಿ! ನನ್ನ ನಾಲ್ಕು ವರ್ಷದ ಮಗಳು ಸೋನುಗೆ ನಾಯಿ ಕಂಡರೆ ತುಂಬಾ ಇಷ್ಟ.ಎಲ್ಲೇ ಹೋಗ್ತಾ ಇದ್ದರೂ……… ಬೀದಿ ನಲ್ಲಿ ಯಾವ ನಾಯಿ ನೋಡಿದರೂ……. .ನೋಡುತ್ತಾ ನಿಂತುಬಿಡುತ್ತಿದ್ದಳು.ಆ ಸ್ಥಳದಲ್ಲೇ ನಂಗೂ ನಾಯಿಮರಿಬೇಕು ತಂದುಕೊಡು ಅಂತ ಹಠ ಮಾಡುತ್ತಿದ್ದಳು. ಇವಳ ಜೊತೆ ನನ್ನ ಹೆಂಡತಿ ಬೇರೆ, “ನೋಡಿ ಮಗು ನಾಯಿಮರಿ ಬೇಕು ಅಂತ ಎಷ್ಟು ಹಠ ಮಾಡುತ್ತಾಳೆ ಅವಳ ಜೊತೆಗೆ ಒಂದು ನಾಯಿಮರಿ ಇದ್ದರೆ ಅವಳ ಪಾಡಿಗೆ ಅವಳು ಆಟ ಆಡಿಕೊಂಡಿರುತ್ತಾಳೆ. ಇಲ್ಲ ಅಂದ್ರೆ ನನಗೆ ಒಂದು ಕೆಲಸ ಮಾಡೋಕೆ ಬಿಡಲ್ಲ” ಇದು ನನ್ನ ಹೆಂಡತಿಯ ಊವಾಚ ವಾಗಿತ್ತು.ಮಲಗಲು ಹೋದರೆ ಸಾಕು ಮಗಳು ಸೋನು, “ಪಪ್ಫಾ ನೀನು ಯಾವಾಗ ನಾಯಿ ತಂದುಕೊಡುವುದು? ನೀನು ನಾಯಿ ತಂದು ಕೊಡಲ್ವಾ?” ರಾತ್ರಿಯೆಲ್ಲ ಬರಿಇದೇ ಮಾತು. ಇವಳು ಮಗಳ ಮಾತೆಗೆ ಅನುಮೋದನೆ ಬೇರೆ. “ನೋಡಿ,ಈ ಅಪಾರ್ಟ್ಮೆಂಟ್ ನಲ್ಲಿ ಯಾವ ಮಕ್ಕಳು ಇಲ್ಲ. ಕೆಲವರಿದ್ದಾರೆ ಅವರ ಜೊತೆ ನಮ್ಮ ಸೋನುನಾ ಆಟಕ್ಕೆ ಕಳಸಕ್ಕೆ ಇಷ್ಟನೇ ಆಗಲ್ಲ. ಒಟ್ಟಿನಲ್ಲಿ ಅವಳಿಗೆಆಡೋಕೆ ಒಂದು ನಾಯಿಮರಿ ಬೇಕೇ ಬೇಕು”ಅಂದ್ಲು ಇವರ ಕಾಟ ತಡೆಯಲಾರದೆ ;ನಾಯಿ ತರುವುದಾಗಿ ಒಪ್ಪಿಕೊಂಡೆ.ಒಳ್ಳೆ ನಾಯಿ ನೋಡೋಣ ಎಂದು ನೋಡಿದರೆ ಒಂದು ನಾಯಿ ಮರಿಗೆ ಹತ್ತು ಹನ್ನೆರಡು ಸಾವಿರ ಯಾಕೋ ಜಾಸ್ತಿ ಆಯ್ತು ಅನ್ನಿಸ್ತು. ಇದರ ಬದಲು ಸರ್ಕಾರದವರು ನಾಯಿಯನ್ನು ದತ್ತು ಸ್ವೀಕಾರ ಪದ್ಧತಿ ಮಾಡಿದ್ದಾರಲ್ಲ ನೋಡೋಣ ಅಂತ ಅಂದುಕೊಂಡೆ. ‌ ಒಂದು ದಿನ ನಾಯಿಯನ್ನು ದತ್ತು ಸ್ವೀಕಾರ ಮಾಡಿಕೊಳ್ಳಲು ಮಗಳನ್ನು ಕರೆದುಕೊಂಡು ಹೋದೆ. ಇಪ್ಪತ್ತು ದಿನದ ಒಂದು ಹೆಣ್ಣು ನಾಯಿಮರಿಯನ್ನು ಸೋನು ತುಂಬಾ ಇಷ್ಟಪಟ್ಟಳು. ಅವಳ ಇಷ್ಟದಂತೆ ಆ ನಾಯಿಮರಿಯನ್ನು ದತ್ತು ತೆಗೆದುಕೊಂಡೆ. ನಂತರ ಅವರು ಆ ನಾಯಿಮರಿಗೆ ಏನೇನು ಉಪಚಾರ ಮಾಡಬೇಕೆಂದು ತಿಳಿಸಿದರು. ನಾಯಿಗೆ ಎರಡು ತಿಂಗಳು ಆಗುತ್ತಿದ್ದಂತೆಯೇ ತಿಂಗಳಿಗೊಮ್ಮೆ ಸಿರಪ್ಪು, ಎರಡು ತಿಂಗಳು ತುಂಬಿದ ಮೇಲೆ ಅದಕ್ಕೆ ಪಪ್ಪಿ ಡೇಪಿ ವ್ಯಾಕ್ಸಿನೇಷನ್ ಹದಿನೈದು ದಿನಕ್ಕೊಮ್ಮೆ ಶಾಂಪು ಅಥವಾ ಅದರದೇ ಆದ ಸೋಪಿನಿಂದ ಸ್ನಾನ ಮಾಡಿಸಬೇಕು ನಾಲ್ಕು ತಿಂಗಳಿಗೆ ರೇಬಿಸ್ ವ್ಯಾಕ್ಸಿನೇಷನ್ ಕೊಡಿಸಬೇಕು. ಆರು ತಿಂಗಳು ತುಂಬಿದ ಮೇಲೆ ಅದರ ತೂಕಕ್ಕೆ ಅನುಸಾರವಾಗಿ ಮಾತ್ರೆ ಹಾಕಬೇಕು. ವರ್ಷ ತುಂಬಿದ ಮೇಲೆ ವರ್ಷವರ್ಷಕ್ಕೂ ವ್ಯಾಕ್ಸಿನೇಷನ್ ಕೊಡಿಸಬೇಕು. ಇಷ್ಟು ಲಸಿಕೆಯ ವಿಚಾರವಾದರೆ, ಅದರ ಊಟದ ಬಗ್ಗೆ ಈ ರೀತಿ ಹೇಳಿದರು. ಎರಡು ತಿಂಗಳ ಮಜ್ಜಿಗೆ ಅನ್ನ ಕೊಡಬೇಕು ಮಜ್ಜಿಗೆ ಹುಳಿಇರಬಾರದು. ಪ್ಯಾಕೆಟ್ ಫುಡ್ ತಂದು ಕೊಟ್ಟರೆ ಒಳ್ಳೆಯದು.ಇಲ್ಲಾಮನೆಯಲ್ಲಿ ನೀವೇ ತಯಾರಿಸಿ ಕೊಡುವುದಾದರೆ, ಉಪ್ಪು ಹುಳಿ ಖಾರ ಇರಬಾರದು. ಬೀಜಗಳು ಇರೋ ತರಕಾರಿ ಹಾಕಬಾರದು. ಪ್ರೋಟಿನ್ ಇರೋ ಅಡುಗೆ ಮಾಡಿ ಬಿಸಿಬಿಸಿಯಾಗಿ ಹಾಕಬೇಕು. ಆಮೇಲೆ ಜಾಯಿಂಟ್ ಪೈನ್ ಮಸಲ್ಸ್ ಪೈನ್ ಬರದ ಹಾಗೆ ದಿನಕ್ಕೆರಡು ಬಾರಿ ಮೂರು ಕಿಲೋಮೀಟರ್ ನಾಯಿಯನ್ನ ಓಡಿಸಬೇಕು. ಮಲಗಲು ಹಾಸಿಗೆ ಅದಕ್ಕಾಗಿಯೇ ಇರಬೇಕು. ಅದನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು. ಎಂದು ಹೇಳಿ, ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡು, ನಾಯಿಮರಿಯನ್ನು ನನ್ನ ಜೊತೆ ಕಳುಹಿಸಿದರು. ಮನೆಗೆ ತಂದ ಕೂಡಲೇ ಹೆಂಡತಿ ಆರತಿಯೆತ್ತಿದ ನಂತರ ನಾಯಿಮರಿಯ ಪ್ರವೇಶವಾಯಿತು. ಮಗಳು ಅದಕ್ಕೆ ಟೀನು ಎಂದು ಹೆಸರಿಟ್ಟಳು. ಮುದ್ದು ಮುದ್ದಾದ ನಾಯಿ ಮರಿ, ಹೆಂಡತಿಗೆ ಮಗಳಿಗೆ ಅಂತೂ ತುಂಬಾ ಇಷ್ಟ ಆಯ್ತು. ಅದು ಗಲೀಜು ಮಾಡಿದಾಗ ಅದನ್ನು ತೆಗೆಯುವುದು ನನ್ನ ಕೆಲಸವಾಯಿತು. ನಾನಿಲ್ಲದಾಗ ಮಾತ್ರ ಕೆಲಸದವಳ ಕೆಲಸವಾಗಿತ್ತು. ‌ ನಮ್ಮ ಟೀನುಗೆ ಮನೆಯಲ್ಲಿ ಅದಕ್ಕೆತಕ್ಕಂತೆ ಅಡುಗೆ ಮಾಡಿ ಹಾಕುವುದು ಕಷ್ಟವಾಗಿ ಪ್ಯಾಕೆಟ್ ಡ್ರೈ ಫುಡ್ ನ್ನೇ ಅವಲಂಬಿಸಿದೆವು. ದಿನಕಳೆದಂತೆ ಬೆಳೆದು ಬೊಗಳುವುದು ಜಾಸ್ತಿ ಆಯ್ತು. ಅಕ್ಕ ಪಕ್ಕದ ಮನೆಯವರು” ಸ್ವಾಮಿ, ನಾಳೆ ಬೆಳಗ್ಗೆ ನಾವು ಆಫೀಸಿಗೆ ಹೋಗಬೇಕು ನಿಮ್ಮ ನಾಯಿಗೆ ಸ್ವಲ್ಪ ಸುಮ್ಮನಿರಕ್ಕೆ ಹೇಳ್ತೀರಾ!” ಅಂತ ದೂರುಗಳು ಬರೋಕೆ ಶುರುವಾಯ್ತು. ನಾವು ಮೇಲ್ಗಡೆ ರೂಮಿನಲ್ಲಿ ಒಂದು ಗೂಡು ಮಾಡಿಸಿ ಹಾಸಿಗೆ ರೆಡಿ ಮಾಡಿ ಬಿಟ್ಟಿದ್ದೂ ಆಯಿತು. ಆದರೂ ಒಮ್ಮೊಮ್ಮೆ ಏನಾದರೂ ಶಬ್ದ ವಾದರೆ ಸಾಕು ಎಲ್ಲರನ್ನೂ ಬೊಗಳಿ ಎಬ್ಬಿಸುತ್ತಿತ್ತು. ಮತ್ತೆ ಅಕ್ಕಪಕ್ಕದವರ ಗೊಣಗಾಟ ನಡೆಯುತ್ತಿತ್ತು. ಇದು ಹೋಗಲಿ ಅಂದರೆ ಬೆಳಗ್ಗೆ ವಾಕಿಂಗ್ ಕರ್ಕೊಂಡು ಹೊರಟರೆ ಅಲ್ಲಿಯೂ ನಮ್ಮ ಟೀನು ಸಲುವಾಗಿ ಬೈಸಿ ಕೊಳ್ಳ ಬೇಕಿತ್ತು ಏಕೆಂದರೆ ಕಾರು ಬೈಕು ಎತ್ತರವಾಗಿ ಏನು ಕಂಡರೂ ಸರಿ ನಮ್ಮ ಟೀನು ಅಲ್ಲಿ ಕಾಲೆತ್ತಿ ಗಲೀಜು ಮಾಡತ್ತಿತ್ತು. ಅವರು ನನ್ನ ಬಯ್ಯೋರು. ಒಟ್ಟಿನಲ್ಲಿ ಮುದ್ದಾಡುವುದು ಆಟ ಆಡೋದು ಎಲ್ಲ ಹೆಂಡತಿ-ಮಕ್ಕಳಿಗೆ ಮೀಸಲು. ನಾಯಿಗೋಸ್ಕರ ಕಷ್ಟಪಡುವುದು ಬೇರೆಯವರ ಹತ್ತಿರ ಅನ್ನಿಸಿಕೊಳ್ಳುವುದು ಅದು ನನಗೆ ಮೀಸಲಾಗಿತ್ತು. ಅವರೆಲ್ಲ ಸಾರಿಸಿ ರಂಗೋಲಿ ಹಾಕುತ್ತಿದ್ದರೆ ನಮ್ಮ ಟೀನು ಹೋಗಿ ಗಲೀಜು ಮಾಡುತ್ತೆ ಅನ್ನೋವಷ್ಟರಲ್ಲಿ ನಾನು ಬೇಗ ಅದನ್ನ ಕರ್ಕೊಂಡು ಹೋಗುತ್ತಿದದ್ದೆ ಅನ್ನಿ.ಒಟ್ಟಿನಲ್ಲಿ ನಮ್ಮ ಟೀನು ದೆಸೆಯಿಂದ ನಾನು ಸ್ಲಿಂಆದೆ. ನೋಡಿದೋರೆಲ್ಲ ನನ್ನ ವಯಸ್ಸಿಗಿಂತ ಚಿಕ್ಕೋನಾಗಿ ಕಾಣ್ತೀಯಾ ಅನ್ನುತಿದ್ರು. ಇದು ನನ್ನಾಕೆಗೆ ಇಷ್ಟ ಆಗ್ತಿರಲಿಲ್ಲ. ‌ ಯಾರದಾದರೂ ಮನೆಯಲ್ಲಿ ಮದುವೆ ಮುಂಜಿ ಏನೇ ಆಗಲಿ ಅಮ್ಮ-ಮಗಳು ಹೊರಟು ಬಿಡುತ್ತಿದ್ದರು.ನನಗೆ ನಾಯಿ ನೋಡಿಕೊಂಡು ಕಾಯುವ ಕೆಲಸ ನನ್ನದಾಗಿತ್ತು. ಅದನ್ನು ನೋಡಿಕೊಳ್ಳುತ್ತಾ ನೋಡಿಕೊಳ್ಳುತ್ತಾ ಕ್ರಮೇಣ ನನ್ನ ಮಗಳು ಸೋನು, ಹೆಂಡತಿ ಗಿಂತಲೂ ನಾಯಿನೇ ಹೆಚ್ಚಾಯಿತೇನೋ ಅನ್ನೋವಷ್ಟರ ಮಟ್ಟಿಗೆ ನನಗಾಗಿತ್ತು. ಹೆಂಡತಿ ನೀವು ನನಗಿಂತ ನನ್ನ ಮಗಳಿಗಿಂತ ನಿಮಗೆ ನಾಯಿಯೇ ಹೆಚ್ಚಾಯ್ತು ಅಂತ ಎರಡೆರಡು ದಿನ ನನ್ನ ಜೊತೆ ಮಾತೇ ಬಿಟ್ಟು ಬಿಡೋದಕ್ಕೆ ಶುರುಮಾಡಿದ್ಲು. ಈಗ ಮಗಳು ಸೋನು “ಪಪ್ಪಾ ನಾಯಿಮರಿ ದೊಡ್ಡದಾಯಿತು ಅದಕ್ಕೆ ನೀನು ಬೇಕು. ನಿಂಗೆ ನಾಯಿನೇ ಬೇಕು. ಎಲ್ಲಾದರೂ ಬಿಟ್ಟು ಬಾಪ್ಪ ನಾಯಿನ!” ಅಂತ ಮಗಳು ಕೂಡ ಹೇಳೋಕೆ ಶುರು ಮಾಡಿದ್ಲು. ಹೀಗೆ ದಿನಗಳು ಉರುಳುತ್ತಿತ್ತು ನಾನು ಟೀನು ತುಂಬಾ ಹತ್ತಿರವಾದೆವು. ‌ ಟೀನು ದೊಡ್ಡದಾಗಿ ನಾಲ್ಕುಮರಿಯನ್ನು ಹಾಕುವುದರಮೂಲಕ ತಾಯಿ ಆಯಿತು. ಆ ಮರಿಗಳನ್ನು ಏನು ಮಾಡೋದು? ಒಪ್ಪಂದದ ಪ್ರಕಾರ ನಾಯಿ ಮರಿಯನ್ನು ಅಲ್ಲಿ ಇಲ್ಲಿ ಎಲ್ಲೂ ಬಿಡುವ ಹಾಗಿಲ್ಲ. ನಾವು ಕೂಡ ಬೇರೆಯವರಿಗೆ ದತ್ತುನೇ ಕೊಡಬೇಕಿತ್ತು. ಒಂದು ನಾಯಿಗೆ ವಿಪರೀತ ಖರ್ಚು ಬರುತ್ತಿತ್ತು. ಇನ್ನು ನಾಲ್ಕು ಮರಿಗಳನ್ನ ಹೇಗೆ ಸಾಕೋದು? ಏನು ಮಾಡುವುದು! ಅಂದುಕೊಂಡು ಮಕ್ಕಳಿರುವ ಮನೆ ಗಳಿಗೆ ಹೋಗಿ ನಾಯಿಮರಿ ಬೇಕಾ ?ನಾಯಿ ಮರಿ ಬೇಕಾ?ಅಂತ ಕೇಳಿದ್ದೇ ಆಯ್ತು. ಆದರೆ ಯಾರೂ ನಾಯಿಬೇಕು ಅಂತ ಹೇಳಲಿಲ್ಲ. ಬಲವಂತ ಮಾಡಿದೆ. ಪರಿಪರಿಯಾಗಿ ಕೇಳಿದಾಗ, ನಮ್ಮ ಮಕ್ಕಳಿಗೆ ಮೊಬೈಲ್ ಇದೆ ಕಂಪ್ಯೂಟರ್ ಇದೆ. ನಾಯಿಮರಿ ಜತೆ ಆಟ ಆಡೋಕೆ ಟೈಮಿಲ್ಲ. ನಮಗೇ ಅಡುಗೆ ಮಾಡಿಕೊಳ್ಳುವುದೇ ಕಷ್ಟ; ಇನ್ನಾ ನಾಯಿಗಾಗಿ ಹೇಗೆ ಅಡುಗೆ ಮಾಡಿ ಹಾಕೋಣ ?ಎಂದು ಎಲ್ಲರೂ ಬೇಡ ಅಂತಾನೆ ಹೇಳಿ. ಈಗ ನನ್ನ ಪರಿಸ್ಥಿತಿ ಹೇಗಿದೆ ಎಂದರೆ ಮನೆಯಲ್ಲಿ ಮಗಳು ಹೆಂಡತಿ ನನ್ನ ಜೊತೆ ಮಾತಾಡಲ್ಲ ನಾಯಿಮರಿ ವಿಚಾರ ತಲೆಯಲ್ಲಾ ತುಂಬಿ ಬಿಟ್ಟಿದೆ. ನಾನು ಎಲ್ಲೇ ಹೋಗಲಿ ಯಾರಾದ್ರೂ ಸಿಗಲಿ ನಿಮಗೆ ನಾಯಿ ಬೇಕಾ? ಅನ್ನುವ ಸ್ಥಿತಿ ನನ್ನದಾಗಿದೆ ಈಗ ಇದಕ್ಕೆಏನು ಪರಿಹಾರ ಅಂತ ನೀವು ಹೇಳ್ತೀರಾ!! **********

ಹಾಸ್ಯಲೋಕ Read Post »

ಇತರೆ

ಪ್ರಸ್ತುತ

ನಿರುದ್ಯೋಗದ ವಿರುದ್ದ ಹೋರಾಟ ಗಣೇಶಭಟ್ ಶಿರಸಿ ನಿರುದ್ಯೋಗದ ವಿರುದ್ಧ ಹೋರಾಟ….. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚುತ್ತಿದೆ, ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ, ಉದ್ಯಮಗಳು ಮುಚ್ಚುತ್ತಿರುವುದರಿಂದ ಉದ್ಯೋಗ ಕಳೆದುಕೊಳ್ಳುವವರ ಸಂಖ್ಯೆ ಏರುತ್ತಿದೆಯೆಂಬುದನ್ನು ಹಲವು ವರದಿಗಳು ಹೇಳುತ್ತಿವೆ. ಆರ್ಥಿಕ ಹಿಂಜರಿತ ಉಂಟಾಗಿರುವುದೇ ಇದಕ್ಕೆ ಕಾರಣವೆಂದು ತಜ್ಞರು ಹೇಳುತ್ತಾರೆ. ನಿರುದ್ಯೋಗ ಸಮಸ್ಯೆಗೆ ಸೂಕ್ತ ಪರಿಹಾರ ಹುಡುಕುವ ಬದಲಿಗೆ, ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರಚಾಟ ನಡೆದಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ನಿರುದ್ಯೋಗದ ವಿರುದ್ಧ ಹೋರಾಟ ಮಾಡುವುದಾಗಿ ಘೋಷಣೆ ಮಾಡಿ ನಿರ್ದಿಷ್ಟ ಮೊಬೈಲ್ ಸಂಖ್ಯೆಗೆ ಕರೆಮಾಡಿ ಬೆಂಬಲ ಸೂಚಿಸಲು ಕೋರಿದ್ದಾರೆ. ನಿರುದ್ಯೋಗ ನಿವಾರಣೆಗೆ ಇಷ್ಟೊಂದು ಸುಲಭದಲ್ಲಿ ಪರಿಹಾರ ಕಂಡುಕೊಳ್ಳುವ ಹಾಗಿದ್ದಿದ್ದರೆ ಸಮಸ್ಯೆಯೇ ಉದ್ಭವವಾಗುತ್ತಿರಲಿಲ್ಲ. ಸರ್ಕಾರದ ವಿರುದ್ಧದ ಘೋಷಣೆಗಳು, ಮೆರವಣಿಗೆಗಳು, ಬಂದ್ ಆಚರಣೆಗಳು ಈ ಸಮಸ್ಯೆಗೆ ಪರಿಹಾರ ಸೃಷ್ಟಿಸಲಾರದು ಎಂಬ ಅರಿವು ರಾಜಕೀಯ ಮುಖಂಡರಿಗೆ ಇದ್ದೇ ಇದೆ. ಆದರೆ ಜನ ಸಾಮಾನ್ಯರೆದುರು ತಮ್ಮ ಕಳಕಳಿಯನ್ನು ಪ್ರದರ್ಶಿಸಿ ರಾಜಕೀಯ ಲಾಭ ಗಳಿಸುವ, ಪ್ರಚಲಿತದಲ್ಲಿರುವುದೇ ಇಂಥವರ ಉದ್ದೇಶ. ನಿರುದ್ಯೋಗ ಸಮಸ್ಯೆಯ ಮೂಲ ಇರುವುದು ನಮ್ಮ ಸಾಮಾಜಿಕ- ಆರ್ಥಿಕ ವ್ಯವಸ್ಥೆಯಲ್ಲಿ. ಎಲ್ಲಿಯವರೆಗೆ ಬಂಡವಾಳವಾದದ ಚೌಕಟ್ಟಿನಲ್ಲೇ ವ್ಯವಹರಿಸುತ್ತಿರುತ್ತೇವೋ ಅಲ್ಲಿಯವರೆಗೂ ನಿರುದ್ಯೋಗ ಇದ್ದೇ ಇರುತ್ತದೆ. ಯಾಕೆಂದರೆ 100% ಉದ್ಯೋಗ ಎಂದರೆ ದುಡಿಯುವ ಸಾಮಥ್ರ್ಯವುಳ್ಳ ಎಲ್ಲರಿಗೂ ಉದ್ಯೋಗಾವಕಾಶ ಎಂಬ ತತ್ವವನ್ನು ಬಂಡವಾಳವಾದ ಒಪ್ಪುವುದಿಲ್ಲ. ಉದ್ಯಮ , ಉದ್ಯಮಿಗಳು ಹಾಗೂ ಆರ್ಥಿಕ ಚಟುವಟಿಕೆ ನಡೆಸುವವರ ಅಗತ್ಯಕ್ಕೆ ತಕ್ಕಂತೆ ಮಾನವ ಸಂಪನ್ಮೂಲ ತರಬೇತಿ ಹೊಂದಿರದಿದ್ದರೆ , ಅಂಥವರಿಗೆ ಉದ್ಯೋಗ ನೀಡುವುದು ಸಾಧ್ಯವಾಗದು ಎಂಬುದು ಬಂಡವಾಳವಾದಿ ಚಿಂತನೆ. ಹೂಡಿಕೆದಾರರ ಉದ್ದೇಶ ಲಾಭ ಗಳಿಕೆ ಮತ್ತು ಲಾಭದಲ್ಲಿ ಸಾಧ್ಯವಾದಷ್ಟೂ ಹೆಚ್ಚಳ ಮಾಡುವುದು. ಅದಕ್ಕಾಗಿ ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳು ಆದಷ್ಟು ಕಡಿಮೆ ವೆಚ್ಚದಲ್ಲಿ ಲಭ್ಯವಾಗಬೇಕೆಂದು ಅವರು ಬಯಸುತ್ತಾರೆ. ಉದಾಹರಣೆಗಾಗಿ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೃಷಿ, ಉದ್ದಿಮೆ ಇತ್ಯಾದಿಗಳಿಗೆ ಕಾರ್ಮಿಕರು ಕಡಿಮೆ ಸಂಬಳದಲ್ಲಿ ದುಡಿಯಲು ಬೇರೆ ರಾಜ್ಯಗಳಿಂದ ಬರುತ್ತಿರುವಾಗ ಹೆಚ್ಚಿನ ಸಂಬಳ ಕೇಳುವ ಸ್ಥಳೀಯರಿಗೆ ಉದ್ಯೋಗ ಸಿಗಲಾರದು. ಆಗ ಸ್ಥಳೀಯರು ನಿರುದ್ಯೋಗಿಗಳಾಗಬೇಕಾಗುವ ಪರಿಸ್ಥಿತಿ ಎದುರಾಗುವುದು ಬಂಡವಾಳ ವ್ಯವಸ್ಥೆಯ ಪರಿಣಾಮ. ಸ್ಥಳೀಯವಾಗಿ ಸಾಕಷ್ಟು ಸಂಪನ್ಮೂಲಗಳು ಲಭ್ಯವಿದ್ದರೂ ಅವುಗಳನ್ನು ಗುರ್ತಿಸುವ, ಬಳಸುವ ಯೋಜನೆ, ಯೋಚನೆಗಳು ಇಲ್ಲದಾಗ ನಿರುದ್ಯೋಗ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದಕ್ಕೆ ಆಡಳಿತದ ವೈಫಲ್ಯವೇ ಕಾರಣ. ಕೇಂದ್ರೀಕೃತ ಅರ್ಥವ್ಯವಸ್ಥೆಯಲ್ಲಿ (ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿರುವ ಪದ್ಧತಿ) ತಳಮಟ್ಟದಿಂದ ಯೋಜನಾ ನಿರೂಪಣೆಯಾಗುವ ಬದಲಿಗೆ ರಾಜ್ಯ ಅಥವಾ ದೇಶಮಟ್ಟದಲ್ಲಿ ರೂಪಗೊಂಡ ಯೋಜನೆಗಳು ಮೇಲಿನಿಂದ ಕೆಳಕ್ಕೆ ಹೇರಲ್ಪಡುತ್ತವೆÉ. ಭೌಗೋಳಿಕ, ನೈಸರ್ಗಿಕ, ಸಾಮಾಜಿಕ, ಸಾಂಸ್ಕøತಿಕ ವೈವಿದ್ಯತೆಯನ್ನು ಹೊಂದಿರುವ ಭಾರತದಲ್ಲಿ ಇಡೀ ದೇಶಕ್ಕೆ ಏಕರೂಪದ ಯೋಜನೆಯನ್ನು ಅನ್ವಯಿಸಲು ಸಾಧ್ಯವಾಗದು. ಸ್ಥಳೀಯರಿಗೆ ಶತಪ್ರತಿಶತ ಉದ್ಯೋಗಾವಕಾಶ ಸೃಷ್ಟಿಸಬೇಕೆಂಬ ಉದ್ದೇಶದಿಂದ ಯಾವ ಅಭಿವೃದ್ಧಿ ಯೋಜನೆಯೂ ರೂಪುಗೊಳ್ಳುತ್ತಿಲ್ಲ. ಸಂಪನ್ಮೂಲಗಳ ಬಳಕೆಯಿಂದ ಲಾಭ ಹೆಚ್ಚಿಸುವ (ಖಾಸಗಿ ಅಥವಾ ಸರ್ಕಾರಿ ರಂಗಕ್ಕೆ) ಉದ್ದೇಶದಿಂದ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಜನರಿಗೆ ಉದ್ಯೋಗ ನೀಡಬೇಕೆಂದು ರೂಪುಗೊಂಡಿರುವ ಯೋಜನೆಗಳು ದುಡಿಮೆಯ ಅವಕಾಶವೆಂದು ಪರಿಗಣಿಸಲ್ಪಡುವ ಬದಲಿಗೆ , ಸರ್ಕಾರದ ಸೌಲಭ್ಯವನ್ನು ಹಂಚುವ ಅಥವಾ ದೋಚಿಕೊಳ್ಳುವ ಅವಕಾಶವೆಂದು ಭಾವಿಸುವ ರೀತಿಯಲ್ಲಿ ರಚಿತವಾಗಿವೆ, ಅನುಷ್ಠಾನಗೊಳ್ಳುತ್ತಿವೆ. ದುಡಿಯುವ ಸಾಮಥ್ರ್ಯವುಳ್ಳ ಪ್ರತಿಯೋರ್ವ ವ್ಯಕ್ತಿಗೂ ಫಲಪ್ರದವಾದ ದುಡಿಮೆಯ ಅವಕಾಶ (ಅಂದರೆ ದುಡಿಯುವ ವ್ಯಕ್ತಿ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಕೊಂಡುಕೊಳ್ಳುವ ಸಾಮಥ್ರ್ಯವುಳ್ಳ ಪ್ರತಿಫಲ ನೀಡುವ ದುಡಿಮೆ) ಅಂದರೆ 100% ಉದ್ಯೋಗಾವಕಾಶ ಸೃಷ್ಟಿಸಲು ಖಂಡಿತಕ್ಕೂ ಸಾಧ್ಯವಿದೆ. ಇದಕ್ಕಾಗಿ ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಯಾಗಬೇಕಿದೆ. ಪರಿವರ್ತನೆ ಪ್ರಾರಂಭವಾಗಬೇಕಾದುದು ಯೋಜನಾ ನಿರೂಪಣೆಯ ವಿಧಾನವನ್ನು ಬದಲಿಸುವ ಮೂಲಕ. ಭೂಮಿಯ ಎಲ್ಲೆಡೆ ಒಂದಿಲ್ಲೊಂದು ವಿಧದ ಸಂಪನ್ಮೂಲವನ್ನು ಪ್ರಕೃತಿ ನೀಡಿದೆ. ಅದನ್ನು ಬಳಸುವ ಬುದ್ದಿಮತ್ತೆಯನ್ನೂ ಮಾನವನಿಗೆ ಕೊಟ್ಟಿದೆ. ಸಂಪನ್ಮೂಲ ಲಭ್ಯತೆ, ಆರ್ಥಿಕ ಅವಕಾಶಗಳನ್ವಯ ಪ್ರತಿ ಬ್ಲಾಕ್‍ನಲ್ಲಿ ಅಲ್ಲಿಯ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ರೀತಿಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ, ಈ ಯೋಜನೆಯನ್ನು ಜಿಲ್ಲಾಮಟ್ಟದಲ್ಲಿ ಕ್ರೋಢೀಕೃತಗೊಂಡು, ರಾಜ್ಯಮಟ್ಟದಲ್ಲಿ ಅಂತಿಮಗೊಳ್ಳಬೇಕು. ಇಂದಿನ ವ್ಯವಸ್ಥೆಯಲ್ಲಿ ಯಾರು, ಯಾವ ಉದ್ಯೋಗವನ್ನು ಬೇಕಾದರೂ ಮಾಡಬಹುದಾಗಿದೆ. ಯಾವ ಕ್ಷೇತ್ರದ ಮೇಲೆ ಎಷ್ಟು ಜನ ಅವಲಂಬಿತರಾಗಿರಬೇಕೆಂಬ ಕುರಿತು ನಿರ್ದಿಷ್ಟ ಪ್ರಮಾಣವನ್ನು ನಿಗದಿಪಡಿಸಿಲ್ಲ.ಇದರಿಂದಾಗಿ ಅರ್ಥವ್ಯವಸ್ಥೆಯ ಯಾವುದೋ ಒಂದು ವಿಭಾಗದ ಮೇಲೆ ಅತಿಹೆಚ್ಚು ಜನರು ಅವಲಂಬಿತರಾಗುತ್ತಾರೆ. ಉದಾಹರಣೆಗಾಗಿ ಕೃಷಿ ಕ್ಷೇತ್ತದ ಮೇಲೆ ಕೆಲವೇ ವರ್ಷಗಳ ಹಿಂದೆ ಶೇಕಡಾ 75 ಕ್ಕೂ ಹೆಚ್ಚು ಜನರು ಅವಲಂಬಿತರಾಗಿದ್ದರು. ಸರ್ಕಾರಿ ನೌಕರಿಯ ಮೇಲೆ ಶೇಕಡಾ 6 ರಿಂದ 8 ರಷ್ಟು ಜನರು ಈಗಾಗಲೇ ಅವಲಂಬಿತರಾಗಿದ್ದು, ಈ ಪ್ರಮಾಣವನ್ನು ಹೆಚ್ಚಿಸಬೇಕೆಂಬ ಒತ್ತಡ ತರಲಾಗುತ್ತಿದೆ. ಕೃಷಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆ ಇರುವ ದೇಶಗಳಲ್ಲಿ ಬಡತನ ಹೆಚ್ಚು ಎಂಬುದು ಎದ್ದು ಕಾಣುವ ವಾಸ್ತವ. ಉದ್ದಿಮೆ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆಯುಳ್ಳ ದೇಶಗಳು, ಆಹಾರ ಮತ್ತು ಕಚ್ಚಾವಸ್ತುಗಳ ಪೂರೈಕೆಗಾಗಿ ಇತರ ದೇಶಗಳನ್ನು ಅವಲಂಬಿಸಬೇಕಾಗುತ್ತದೆ. ಜಾಗತಿಕ ನಿಯಂತ್ರಣಕ್ಕಾಗಿ ಅಮೇರಿಕಾ ಸೆಣಸಾಡುತ್ತಿರುವುದು ವಿವಿಧ ದೇಶಗಳ ಸಂಪನ್ಮೂಲಗಳ ಮೇಲೆ ಹತೋಟಿ ಹೊಂದಬೇಕೆಂಬ ಕಾರಣಕ್ಕೆ ಎನ್ನುವುದು ಜಗಜ್ಜಾಹೀರಾಗಿದೆ. ಅತಿಯಾದ ಔದ್ಯಮೀಕರಣದಿಂದ ಆರ್ಥಿಕ ಹಿಂಜರಿತ, ಕುಸಿತಗಳಂತಹ ತಾಪತ್ರಯಗಳ ಜೊತೆಗೆ , ನಗರೀಕರಣದ ಸಮಸ್ಯೆಗಳು, ಸಾಂಸ್ಕøತಿಕ ಆಘಾತ, ನೈತಿಕ ಅಧಃಪತನ, ಅಮಾನವೀಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಲಾಭ ಹೆಚ್ಚಳದ ಗುರಿಯನ್ನೇ ಹೊಂದಿರುವ ಔದ್ಯಮಿಕ , ವ್ಯವಹಾರಿಕ ಪರಿಸ್ಥಿತಿಯ ಪರಿಣಾಮದಿಂದ ನೈಸರ್ಗಿಕ ವಿಕೋಪಗಳನ್ನೆದುರಿಸುವ ಆತಂಕ ತಪ್ಪಿಸಲಾಗುತ್ತಿಲ್ಲ. ಇದಕ್ಕೆಲ್ಲಾ ಪರಿಹಾರವೆಂದರೆ ಸಮತೋಲಿತ ಅರ್ಥವ್ಯವಸ್ಥೆ. ಅಂದರೆ ಯಾವ ಆರ್ಥಿಕ ಕ್ಷೇತ್ರದ ಮೇಲೆ ಜನಸಂಖ್ಯೆಯ ಎಷ್ಟು ಭಾಗ ಅವಲಂಬಿತವಾಗಬೇಕೆಂಬುದರ ದಿಕ್ಸೂಚಿ ಇರಬೇಕು. ಅರ್ಥಶಾಸ್ತ್ರಜ್ಞ ಶ್ರೀ ಪ್ರಭಾತ ರಂಜನ್ ಸರ್ಕಾರರ ಅಭಿಪ್ರಾಯದಂತೆ ಕೃಷಿರಂಗದ ಮೇಲೆ 30 ರಿಂದ 40% ಜನರು ಅವಲಂಬಿತರಾಗಿರುವದು ಸೂಕ್ತ. ಕೃಷಿ ಪೂರಕ ಮತ್ತು ಕೃಷಿ ಆಧಾರಿತ ಉದ್ಯಮಗಳ ಮೇಲೆ ತಲಾ 10 ರಿಂದ 20%, ಇತರ ಉದ್ಯಮಗಳ ಮೇಲೆ 10 ರಿಂದ 20%, ವ್ಯಾಪಾರ- ವಹಿವಾಟುಗಳ ಮೇಲೆ ಸುಮಾರು 10%, ಸೇವಾ ಕ್ಷೇತ್ರದ ಮೇಲೆ ಸುಮಾರು 10% ನಷ್ಟು ಜನರು ಅವಲಂಬಿತರಾಗಿರುವ ಪರಿಸ್ಥಿತಿ ಇರುವಾಗ 100% ಉದ್ಯೋಗವಕಾಶ ಸಾಧ್ಯವಾಗುತ್ತದೆ ಹಾಗೂ ಜನರ ಆರ್ಥಿಕ ಸ್ಥಿತಿಯಲ್ಲಿ ಬಹಳಷ್ಟು ಏರುಪೇರು ಇರುವುದಿಲ್ಲವೆಂದು ಅವರು ಹೇಳುತ್ತಾರೆ. ಯಾವ ಅನುಪಾತವೂ ಇಲ್ಲದ ಇಂದಿನ ವ್ಯವಸ್ಥೆಗೆ ಹೋಲಿಸಿದರೆ, ಸೂಚಿತ ಸಮತೋಲಿತ ವ್ಯವಸ್ಥೆಯು ನಿಯಂತ್ರಿತ ವ್ಯವಸ್ಥೆಯಂತೆ ತೋರಬಹುದು. ಆದರೆ ಉದ್ಯೋಗ ಸೃಷ್ಟಿಯ ಹೊಣೆಗಾರಿಕೆ ಸರ್ಕಾರದ್ದು ಎಂದು ಒಪ್ಪಿಕೊಂಡಾಗ ಕೆಲಮಟ್ಟಿನ ನಿಯಂತ್ರಣ ಅಗತ್ಯ. ಇದರಿಂದಾಗಿ ಪ್ರತಿ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉದ್ಭವಿಸಬಹುದಾದ ದುಡಿಮೆಯ ಅವಕಾಶಗಳ ಸ್ಪಷ್ಟತೆ ಆಡಳಿತಕ್ಕೆ ಸಿಗುತ್ತದೆ. ಅದಕ್ಕೆ ಅನುಗುಣವಾಗಿ ಕೌಶಲ್ಯ ಶಿಕ್ಷಣದ ವ್ಯವಸ್ಥೆಯನ್ನು ಮಾಡಲು ಸಾಧ್ಯವಾಗುತ್ತದೆ. ಯುವಕರಿಗೆ ಕೌಶಲ್ಯ ಶಿಕ್ಷಣವನ್ನು ನೀಡಲು ಇಂದು ಕೂಡಾ ಸರ್ಕಾರಗಳು ಸಾಕಷ್ಟು ಹಣ ವಿನಿಯೋಗಿಸುತ್ತವೆ. ಆದರೆ ಉದ್ಯೋಗ ಹುಡುಕಿಕೊಳ್ಳುವುದು ಶಿಕ್ಷಣ ಪಡೆದವರ ಹೊಣೆಗಾರಿಕೆಯಾಗಿರುವುದರಿಂದ, ಯಾವ ವೃತ್ತಿಗೆ ಸಂಬಂಧಿಸಿ ಕೌಶಲ್ಯ ಪಡೆಯಬೇಕೆಂದು ನಿರ್ಧರಿಸುವುದು ಕಠಿಣ. ವಿವಿಧ ಆರ್ಥಿಕ ಕ್ಷೇತ್ರಗಳ ಮೇಲೆ ಅವಲಂಬಿತರಾಗಬೇಕಾದ ಜನಸಂಖ್ಯೆಯ ಸ್ಥೂಲ ಪ್ರಮಾಣವನ್ನು ನಿರ್ಧರಿಸಿದ ನಂತರ ಹಂತಹಂತವಾಗಿ ಅದರ ಮೇಲಿನ ಅವಲಂಬಿತರ ಸಂಖ್ಯೆಯನ್ನು ಹೆಚ್ಚು ಅಥವಾ ಕಡಿಮೆ ಮಾಡಬೇಕು. ಉದಾಹರಣೆಗಾಗಿ ಕೃಷಿ ಕ್ಷೇತ್ರದ ಮೇಲೆ ಅತಿಯಾದ ಅವಲಂಬನೆ ಇರುವಾಗ, ಅಲ್ಲಿಯವರನ್ನು ಇತರ ಕ್ಷೇತ್ರಗಳಾದ ಕೃಷಿ ಆಧಾರಿತ ಅಥವಾ ಕೃಷಿ ಪೂರಕÀ ಉದ್ಯಮಗಳನ್ನು ಸ್ಥಾಪಿಸಲು ಪ್ರೋತ್ಸಾಹ ನೀಡುವ, ಅವರಿಗೆ ಉದ್ಯೋಗದ ನಿಶ್ಚಿತತೆ ಕಲ್ಪಿಸುವ ಮುಖೇನ ಆಕರ್ಷಿಸಬೇಕು. ಇದು ಭಾಷಣ ಅಥವಾ ಕೂಗಾಟ, ಹೋರಾಟಗಳಿಂದ ಸಾಧ್ಯವಾಗದು. ಆದರೆ ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರುವುದರಿಂದ ಇದು ಕಾರ್ಯ ಸಾಧ್ಯ. ಪ್ರತಿಯೋರ್ವ ವ್ಯಕ್ತಿಗೂ ಕೃಷಿ ಭೂಮಿ ಸಿಗಬೇಕು ಎಂಬ ಕಮ್ಯುನಿಸ್ಟರ ಹೋರಾಟಕ್ಕೆ ಆರ್ಥಿಕ ಚಿಂತನೆಯ ಬೆಂಬಲವಿಲ್ಲ. ಯಾಕೆಂದರೆ ವೈಯಕ್ತಿಕವಾಗಿ ಕೈಗೊಳ್ಳುವ ಕೃಷಿಗೆ ಆರ್ಥಿಕವಾಗಿ ಲಾಭದಾಯಕವಾಗಬಲ್ಲ ಪ್ರಮಾಣದ ಹಿಡುವಳಿ ಇರಲೇಬೇಕು. (ಭೂಮಿಯ ಫಲವತ್ತತೆ ನೀರಾವರಿ ಸೌಲಭ್ಯ ಇತ್ಯಾದಿ ಹಲವು ಅಂಶಗಳನ್ನು ಆಧರಿಸಿ ಕ್ಷೇತ್ರದ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ) ಜನರಿಗೆ ಆಸೆ ಹುಟ್ಟಿಸಿ ರಾಜಕೀಯ ಲಾಭ ಗಳಿಸುವ, ದಾಳವಾಗಿಯಷ್ಟೇ ಬಳಸುವ ಘೋಷಣೆಯಿದು. 100% ಉದ್ಯೋಗವಕಾಶ ಸೃಷ್ಟಿಸುವುದು ಬಂಡವಾಳವಾದಿ ವ್ಯವಸ್ಥೆಯಲ್ಲಿ ಸಾಧ್ಯವಾಗದು. ಉದ್ದಿಮೆ ಘಟಕದ ವ್ಯವಹಾರದಲ್ಲಿ ಕಡಿತವಾದಾಗ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತದೆ. ಯಾಕೆಂದರೆ ಆ ಘಟಕ ತನ್ನ ಲಾಭದ ಪ್ರಮಾಣವನ್ನು ಕಡಿತಗೊಳಿಸಲು ಅಥವಾ ನಷ್ಟವನ್ನು ಅನುಭವಿಸಲು ಸಿದ್ಧವಿರುವುದಿಲ್ಲ. ಯಾಂತ್ರೀಕರಣ ಅನುಷ್ಠಾನವಾದಾಗ ಕೂಡಾ ಇದೇ ರೀತಿಯ ಸಮಸ್ಯೆ ಎದುರಾಗುತ್ತದೆ. ಸಹಕಾರಿ ಅರ್ಥವ್ಯವಸ್ಥೆಯೇ ಇದಕ್ಕೆ ಪರಿಹಾರ. ಯಾವುದೇ ಆರ್ಥಿಕ ಚಟುವಟಿಕೆಯನ್ನು ಸರ್ಕಾರಿ, ಖಾಸಗಿ ಅಥವಾ ಸಹಕಾರಿ ರಂಗದಲ್ಲಿ ಕೈಗೊಳ್ಳುವ ಅವಕಾಶ ಪ್ರಸಕ್ತÀದಲ್ಲಿದೆ. ಇದರಿಂದಾಗಿ ಸರ್ಕಾರಿ ಉದ್ಯಮಗಳು ನಷ್ಟವನ್ನನುಭವಿಸುವುದು, ಖಾಸಗಿ ಮತ್ತು ಸಹಕಾರಿ ರಂಗದ ನಡುವಿನ ಅನಾರೋಗ್ಯಕರ ಪೈಪೋಟಿಯನ್ನು ಕಾಣುತ್ತೇವೆ. ಇದನ್ನು ಸರಿಪಡಿಸುವ ವಿಧಾನವೆಂದರೆ ಈ ಮೂರೂ ರಂಗಗಳು ಕೈಗೊಳ್ಳಬಹುದಾದ ಆರ್ಥಿಕ ಚಟುವಟಿಕೆಗಳನ್ನು ನಿರ್ದಿಷ್ಟಪಡಿಸುವುದು. ಇಡೀ ಅರ್ಥವ್ಯವಸ್ಥೆಗೆ ಆಧಾರ ಪ್ರಾಯವಾಗಿರುವ ಉದ್ದಿಮೆಗಳನ್ನು ಸರ್ಕಾರಿರಂಗಕ್ಕೆ, ಚಿಕ್ಕಪುಟ್ಟ ಉದ್ಯಮಗಳನ್ನು, ಸಹಕಾರಿ ರಂಗ ಕಾರ್ಯನಿರ್ವಹಿಸಲು ಸಾಧ್ಯವಾಗದಷ್ಟು ಸಣ್ಣ ವ್ಯವಹಾರಗಳನ್ನು ಖಾಸಗಿ ರಂಗಕ್ಕೆ ಸೀಮಿತಗೊಳಿಸಬೇಕು. ಉಳಿದಂತೆ ಎಲ್ಲಾ ವಿಧದ ಉತ್ಪಾದನೆ, ವಿತರಣೆಗಳು ಸಹಕಾರಿ ರಂಗಕ್ಕೇ ಸೀಮಿತವಾಗಿರಬೇಕು. ಇದರರ್ಥ ಸ್ಪರ್ಧೆಯೇ ಇರಬಾರದು ಎಂಬುದಲ್ಲ. ಸಮಾನ ನೆಲೆಯಲ್ಲಿ ಇರುವವರ ನಡುವೆ ಅಂದರೆ ಖಾಸಗಿ ರಂಗದ ಸ್ಪರ್ಧೆ ಖಾಸಗಿಗಳ ನಡುವೆ, ಸಹಕಾರಿಯ ಸ್ಪರ್ಧೆ ಸಹಕಾರಿಯೊಡನೆ ಇರುವಂತಾಗಬೇಕು. ಸಹಕಾರಿ ಸಂಸ್ಥೆಗಳು ಲಾಭಗಳ ಹೆಚ್ಚಳ ಮಾಡುವ ಘಟಕಗಳಾಗದೇ, ತಮ್ಮ ಸದಸ್ಯರ ಕಷ್ಟ -ಸುಖಗಳನ್ನು ಮಾನವೀಯ ನೆಲೆಯಲ್ಲಿ ಹಂಚಿಕೊಳ್ಳುವ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವ ಅವಕಾಶ ಹೊಂದಿವೆ. ಸಹಕಾರಿ ಅರ್ಥವ್ಯವಸ್ಥೆಯಲ್ಲಿ ಉದ್ಯೋಗ ನಷ್ಟದ ಬದಲು ಕೆಲಸದ ಅವಧಿಯನ್ನೇ ಕಡಿತಗೊಳಿಸಿ, ಸಂಕಷ್ಟದ ಸಮಯವನ್ನು ಎದುರಿಸಬಹುದಾಗಿದೆ. ನಿರುದ್ಯೋಗದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಮುಂದಾಗಿರುವುದು ರಾಜಕೀಯ ಹೋರಾಟ ಮಾತ್ರ. ಇಷ್ಟು ವರ್ಷ ಆಡಳಿತ ನಡೆಸಿದ ರಾಜಕೀಯ ಪಕ್ಷಗಳಿಗೆ ಕಣ್ಣಿಗೆ ಕಾಣದ ನಿರುದ್ಯೋಗ ಸಮಸ್ಯೆ ಅಧಿಕಾರ ಕಳೆದುಕೊಂಡ ತಕ್ಷಣ ಕಣ್ಣಿಗೆ ಕಾಣತೊಡಗಿದೆ. ಬಿಜೆಪಿ ಮತ್ತು ಕಾಂಗ್ರೆಸ್‍ನ ಆರ್ಥಿಕ ಚಿಂತನೆಗಳ ನಡುವೆ ಯಾವುದೇ ಪ್ರಮುಖ ವ್ಯತ್ಯಾಸವಿಲ್ಲ. ಎಲ್ಲಾ ಪಕ್ಷಗಳ ಆರ್ಥಿಕ ಚಿಂತನೆಗಳೂ ಬಂಡವಾಳವಾದದ ಚೌಕಟ್ಟಿಗೇ ಸೀಮಿತವಾಗಿವೆ. ಎಲ್ಲಿಯವರೆಗೆ ವಿಕೇಂದ್ರೀಕೃತ ಆರ್ಥಿಕ ನೀತಿಯನ್ನು ಅನುಷ್ಠಾನಗೊಳಿಸುವುದಿಲ್ಲವೋ ಅಂದರೆ ಜನಾಧಿಕಾರದ ಸಹಕಾರಿ ಅರ್ಥವ್ಯವಸ್ಥೆ ಜಾರಿಗೆ ಬರುವುದಿಲ್ಲವೋ, ಅಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಕಾಂಗ್ರೆಸ್, ಕಾಂಗ್ರೆಸ್ ಇರುವಲ್ಲಿ ಬಿಜೆಪಿ ಅಥವಾ ಇನ್ಯಾವುದೋ ಪಕ್ಷದ ರಾಜಕೀಯ ಡೊಂಬರಾಟದಿಂದ ನಿರುದ್ಯೋಗಿಗಳ ಕಣ್ಣಿಗೆ ಮಣ್ಣೆರಚುತ್ತಲೇ ಇರುತ್ತಾರೆ.

ಪ್ರಸ್ತುತ Read Post »

ಇತರೆ

ಇತರೆ

“ಕಲ್ಲಂಗಡಿ ಹಣ್ಣಿನ ಪೂಜೆ” ತಾರಾ ಸತ್ಯನಾರಾಯಣ ನನ್ನ ಮದುವೆಯಾಗಿದ್ದ ಹೊಸದು ಮದುವೆಯಾಗಿ ಹದಿನೈದು ದಿನಕ್ಕೆ ಯುಗಾದಿ ಹಬ್ಬ ಬಂತು ಹಬ್ಬಕ್ಕೆ ನಮ್ಮಿಬ್ಬರನ್ನು ಕರೆದುಕೊಂಡು ಹೋಗಲು ನನ್ನ ಅಣ್ಣ ಬಂದ ಇವರಿಗೆ ಆಫೀಸಿನ ಕೆಲಸದ ನಿಮಿತ್ತ ಚೆನ್ನೈಗೆ ಹೋಗಬೇಕಾದ್ದರಿಂದ ಇವರು “ನಾನು ಬರಲು ಸಾಧ್ಯವಿಲ್ಲ ನೀನು ಹೋಗಿ ಬಾ “ಎಂದು ಹೇಳಿದರು. ನಾನು ಅಣ್ಣನ ಜೊತೆ ತವರಿಗೆ ಹೋದೆ.ಹಬ್ಬ ಮುಗಿಸಿಕೊಂಡು ಅಣ್ಣನ ಜೊತೆ ಗಂಡನ ಮನೆಗೆ ಹೊರಟೆ .ನಾನು ಹೋಗುವ ಹಿಂದಿನ ದಿನ ಅವನ ಫ್ರೆಂಡ್  ತೋಟದಿಂದ ಒಂದೆರಡು ಕಲ್ಲಂಗಡಿ ಹಣ್ಣು ತಂದ. ತುಂಬ ದೊಡ್ಡದಿತ್ತು ಒಂದನ್ನು ಹೆಚ್ಚಿ ತಿಂದೆವು” ಅಣ್ಣ ಹಣ್ಣು ತುಂಬಾ ಚೆನ್ನಾಗಿದೆ ನಾಳೆ ನೀನೊಂದು ಹಣ್ಣು ತಗೊಂಡು ಹೋಗು ಅಲ್ಲಿ ಎಷ್ಟು ದುಡ್ಡು ಕೊಟ್ಟರೂ ಬೆಂಗಳೂರಲ್ಲಿ ಇಂಥ ಹಣ್ಣು ಸಿಗಲ್ಲ” ಅಂದ  ನಾನು ಸರಿ ಎಂದು ದಪ್ಪಗಿದ್ದ ಹಣ್ಣನ್ನು ಎತ್ತಿಟ್ಟುಕೊಂಡು ಮರುದಿನ ಅಣ್ಣನ ಜೊತೆ ಬೆಂಗಳೂರಿಗೆ ಬಂದೆ .ಅಣ್ಣ, “ಗೀತಾ ನಂಗೆ ಇಲ್ಲೇ ಸ್ವಲ್ಪ ಕೆಲಸ ಇದೆ ಮುಗಿಸಿಕೊಂಡು ರಾತ್ರಿ ಮನೆಗೆ ಬರ್ತೀನಿ ಈಗ ನಿನ್ನನ್ನು ಆಟೋ ಹತ್ತಿಸುತ್ತೇನೆ” ಎಂದು ಹೇಳಿದ.ನಾನು ಆಟೋ ಹತ್ತಿ ಮನೆಗೆ ಬಂದೆ ಪುಟ್ಟ ಲಗೇಜ್ಹಿಡಿದು ಕಲ್ಲಂಗಡಿ ಹಣ್ಣನ್ನು ಕೊಂಕಳಲ್ಲಿ  ಇಟ್ಟುಕೊಂಡು ಮನೆಗೆ ಬಂದೆ ಅಲ್ಲೇ ಇದ್ದ ಅಲ್ಲೇ ನನ್ನ ಮೈದುನ “ಏನತ್ತಿಗೆ ಇಷ್ಟು ದೊಡ್ಡ ಕಲ್ಲಂಗಡಿ ಹಣ್ಣು!! ಎಂದು ಆಶ್ಚರ್ಯ ಪಟ್ಟ. ಆಗ ತಾನೆ ಚೆನ್ನೈಯಿಂದ ಬಂದಿದ್ದ ಇವರು “ಏನು !ಗೀತಾ ಕಲ್ಲಂಗಡಿ ಹಣ್ಣು  ಒಳಗೆ ತಂದ್ ಬಿಟ್ಲಾ?””  ಗೀತ ಏನ್ಮಾಡ್ತಿದಿಯಾ?” ಅಂದುಕೊಂಡು ರೂಮಿನಿಂದ ಆಚೆ ಬಂದರು. “ಹಣ್ಣು ತಗೊಂಡು ಆಚೆ ನಡಿ” ಅಂದಾಗ ನಾನು ಹೆದರಿಕೊಂಡು ಹಣ್ಣು ತಗೊಂಡು ಆಚೆ ಬಂದೆ.  ಇವರು ತಮ್ಮ ನಿಗೆ “ಏನು ನೀನು ಸುಮ್ನೆ ನೋಡ್ತಾ ಇದೀಯಾ? ಅಪ್ಪ ಅಮ್ಮ  ಆಚೆ ಹೋಗಿದ್ದಾರೆ ಇಲ್ಲದಿದ್ದರೆ ಕಲ್ಲಂಗಡಿ ಹಣ್ಣನ್ನು ಪೂಜೆ ಮಾಡದೆ ಒಳಗೆ ತಂದಿದ್ದು ನೋಡಿದ್ರೆ ಎಲ್ಲರಿಗೂ ಗ್ರಹಚಾರ ಬಿಡಿಸೋರು. ಗೀತಾಳಿಗೆ ನಮ್ಮನೆ ಪದ್ಧತಿ ಗೊತ್ತಿಲ್ಲ ನಾವು ಕಲ್ಲಂಗಡಿ ಹಣ್ಣು ತಂದಾಗ ಅದಕ್ಕೆ ಪೂಜೆ ಮಾಡಿ ಅಲ್ವೇ ಒಳಕ್ಕೆ ತರೋದು! ಅಂದ್ರು ತಕ್ಷಣ ಮೈದುನ “ಹೌದೌದು  ನಾನು ಇಷ್ಟು ದಿನ ಅಮೇರಿಕದಲ್ಲಿ ಇದ್ದು ಇಲ್ಲಿಯ ಪದ್ಧತಿ ಮರ್ತೆ ಬಿಟ್ಟಿದ್ದೆ “ಅಂದು, “ಅತ್ತಿಗೆ ಹಣ್ಣನ್ನು ಆಚೆ ಇಟ್ಟು ಪೂಜೆ ಮಾಡಿ “ಅಷ್ಟೊತ್ತಿಗೆ ಒಳಗಡೆಯಿಂದ ನಾದಿನಿ ಬಂದಳು ಕಲ್ಲಂಗಡಿ ಹಣ್ಣು ತಂದ್ರಾ??” ಅತ್ತಿಗೆ ಚೂಡಿದಾರದಲ್ಲಿ ಪೂಜೆ ಮಾಡ್ಬೇಡಿ  ಬನ್ನಿ ಬೇಗ ಹೋಗಿ ಸೀರೆ ಉಟ್ಟುಕೊಂಡು ಬನ್ನಿ “ಅಂದಾಗ,ನಾನು ತಕ್ಷಣ ರೂಮಿಗೆ ಹೋಗಿ ಸೀರೆ ಉಟ್ಕೊಂಡು ಬಂದೆ ನಾದಿನಿ ಅರಿಶಿನ ಕುಂಕುಮ ತಟ್ಟೆ ಕೊಟ್ಲು ಆಮೇಲೆ ದೇವರ ಮುಂದೆ ಇದ್ದ ಹೂವನ್ನು ಕೊಟ್ಲು. ನಾನು ಕಲ್ಲಂಗಡಿ ಹಣ್ಣಿಗೆ ನೀರು ಹಾಕಿ ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂವು ಹಾಕಿ ಪೂಜೆ ಮಾಡಿದೆ.ಮೈದುನ ಕರ್ಪೂರ ಹೊತ್ತಿಸಿ ಕೊಟ್ಟ ಆಮೇಲೆ ಇವರು ತೆಂಗಿನಕಾಯಿ ಒಡೆದು ಕೊಟ್ಟರು ಅದನ್ನು ಒಡೆದು,ಆರತಿ ಬೆಳಗಿ,ನಮಸ್ಕಾರ ಮಾಡಿದೆ.  ಅಷ್ಟು ಹೊತ್ತಿಗೆ ಆಚೆ ಹೋಗಿದ್ದ ಅತ್ತೆ ಮಾವ ಬಂದರು ಇದನ್ನೆಲ್ಲ ನೋಡಿ “ಏನ್ರೋ ಇದು?  ಅದೇ ಅಮ್ಮಾ, ಕಲ್ಲಂಗಡಿ ಹಣ್ಣು ತಂದರೆ ಅದನ್ನು ಹೇಗೆ ಒಳಗೆ ತಗೊಂಡು ಬರಬೇಕು ಅಂತಹೇಳ್ತಿದ್ವಿ” ಗೀತಾಳಿಗೆ ನಮ್ಮ ಪದ್ಧತಿ ಗೊತ್ತಿರಲಿಲ್ಲ ಅದಕ್ಕೆ ನಾವೆಲ್ಲರೂ ಸೇರಿ ಪೂಜೆ ಮಾಡಿಸಿದ್ದೇವೆ ನೋಡು” ಅಂದ್ರು “ನಿಮ್ಮ ಪೂಜೆಗೆ ಏನು ಹೇಳಲಿ !ನೀವು ಹೇಳಿದ್ರಿ ಪಾಪ ಅವಳು ಮಾಡಿದಳು” ಅಂತ ಅತ್ತೆ ಅಂದಾಗ ಇವರೆಲ್ಲರೂ ಸೇರಿ ನನ್ನನ್ನು ಮೂರ್ಖರನ್ನಾಗಿ ಮಾಡಿದ್ದಾರೆ ಎಂದು ಗೊತ್ತಾದಾಗ ಎಲ್ಲರ ಮೇಲೆ ಸಿಕ್ಕಾಪಟ್ಟೆ ಕೋಪ ಬಂತು.  ಎಲ್ಲರೂ ಸೇರಿ “ಏಪ್ರಿಲ್ ಫೂಲ್” ಅಂದಾಗ ವಿಪರೀತ ಅವಮಾನವಾಗಿ ಕೈಯಲ್ಲಿದ್ದ ಹಣ್ಣನ್ನು ಅಲ್ಲೇ ಎತ್ತಿಹಾಕಿ ರೂಮ್ ಗೆ ಹೋಗಿ ಬಾಗಿಲು ಹಾಕಿಕೊಂಡೆ ಎಲ್ಲರೂ ಬಂದು ನನ್ನನ್ನು ಕರೆಯೋಕೆ ಶುರು ಮಾಡಿದರು ಪ್ಲೀಸ್ ಅಂದರು ಸಾರಿನು ಕೇಳಿದರೂ ನನ್ನ ರೂಮಿನಿಂದ ಯಾವು ದೆ ಶಬ್ದವು ಬರದಿದ್ದಾಗ ಒಂದು ಗಳಿಗೆ ಎಲ್ಲಾ ಹೆದರಿ ಬಾಗಿಲು ಬಡಿಯೋಕೆ ಶುರು ಮಾಡಿದ್ರು.ಎಲ್ಲಾರು ತುಂಬಾನೆ ಹೆದರಿದ್ರು.ನಾನು ಐದು ನಿಮಿಪ ಸುಮ್ಮನಿದ್ದು, ಆಮೇಲೆ ನಾನು ನಕ್ಕೊಂಡು ಇನ್ನೊಂದು ಬಾಗಿಲಿಂದ ಆಚೆ ಬಂದೆ. ಆಗ ಅವರುಗಳ ಮುಖ ಇಂಗು ತಿಂದ ಮಂಗನಂತಾಗಿತ್ತು. *************************

ಇತರೆ Read Post »

ಇತರೆ

ಇತರೆ

ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಬಿದಲೋಟಿ ರಂಗನಾಥ್ ಎಲ್ಲಿ ಕಳೆದು ಹೋಯಿತು ಆ ಜಾತ್ರೆಯ ಸೊಬಗು ಅದು ಎಂಬತ್ತರ ದಶಕ ಬಂದ ಫಸಲನ್ನು ಕೂಡಿಟ್ಟು ಮನೆಗೊಯ್ದು ಅವರೆ ಸೊಗಡನು ಬಿಡಿಸುವ ಕಾಲ, ಇನ್ನೂ ಕ್ಯಾಮೇನಹಳ್ಳಿ ಜಾತ್ರೆ ತಿಂಗಳಿರುವಾಗಲೇ , ಕೂಲಿ ನಾಲಿ ಮಾಡಿ ಬಂದ ಸಣ್ಣ ಕಾಸಿನಲ್ಲೇ ಮಕ್ಕಳಿಗೆ ಬಟ್ಟೆ ತರುವ ಅಪ್ಪನ ಇರಾದೆ. ವಾರದ ಮುಂಚೆಯೇ ಸಂತೆ ಬಟ್ಟೆ ತಂದು ಪೆಟಾರಿಯಲ್ಲಿ ಬಚ್ಚಿಡುವ ಪ್ರೀತಿ.ಅದರಲ್ಲು ಮೂವರು ಮಕ್ಕಳಿಗೂ ಒಂದೆ ತರಹದ ಬಣ್ಣ ಬಣ್ಣದ ಚಡ್ಡಿ ನಿಕ್ಕರುಗಳು.ಇದ್ಯಾಲ್ಲ ಒಂದು ರೀತಿಯಾದರೆ,ತಾತ ಅಜ್ಜ ಜಾತ್ರೆಗೆ ಬರುತ್ತಾರೆ ಐದೋ ಹತ್ತೋ ರೂಪಾಯಿ ಕೊಡುತ್ತಾರೆ ಎಂಬ ಖುಷಿ ಮನದೊಳಗೆ ಖುಷಿಯನ್ನು ಇಮ್ಮಡಿ ಮಾಡುತಿತ್ತು. ಬೊಮ್ಮಲ ದೇವಿಪುರದಿಂದ ನಡೆದೇ ಕ್ಯಾಮೆನಹಳ್ಳಿ ಜಾತ್ರೆ ತಲುಪುತ್ತಿದ್ದೆವು.ಆಗ ಬಲಿಷ್ಠರು ಮಾತ್ರ ಎತ್ತಿನ ಗಾಡಿಕಟ್ಟಿಕೊಂಡು ಹೋಗುತ್ತಿದ್ದರು.ನಮಗೆ ನಟರಾಜ ಎಕ್ಸ್ ಪ್ರೆಸ್ಸೇ ಗತಿ.ಎಲ್ಲರೂ ಕಣ್ಣಿಗೆ ಬೇಕಾದ್ದು ತಿಂದು ಖರೀದಿಸಿದರೆ,ಅಪ್ಪ ಕೊಟ್ಟಿದ್ದ ತಲಾ ಎರಡು ರುಪಾಯಿ ಕೇವಲ ಕನ್ನಡಕ್ಕೇ ಸರಿ ಹೋಗುತ್ತಿತ್ತು.ಊರಿನಿಂದ ತಾತ ಅಜ್ಜಿ ಬರುವವರೆಗೂ ನಾವು ಮಿಕ ಮಿಕ ಕಣ್ಣು ಬಿಡುತ್ತ ಗುಟುಕು ನೀರು ಕುಡಿಯುತ್ತಾ ಅವರಿವರನ್ನು ನೋಡುತ್ತಾ ಅಲ್ಲೊಂದು ಮರದಡಿ ನಿಂತಿರುತ್ತಿದ್ದೆವು. ಯಾರೋ ಒಬ್ಬರು ಮೊಳ ಹೂ ಖರೀದಿಸಿ ಇಷ್ಟಿಷ್ಟೇ ಎಲ್ಲರ ತಲೆಗೂ ಮುಡಿಸುತ್ತಿದ್ದರು. ಅದೆಂತಹ ಐಕ್ಯತಾ ಭಾವ. ತಾತ ಅಜ್ಜಿಯನ್ನು ಕಾದು ಕಾದು ಕಣ್ಣುಗಳು ಸೋತೆ ಹೋಗುತ್ತಿದ್ದವು.ಅಮ್ಮನ ಮುಖವಂತೂ ನೋಡಲಿಕ್ಕೇ ಆಗದ ಭಾವವೊಂದು ಸುಳಿದಾಡುತ್ತಿತ್ತು.ಅಪ್ಪನಿಗೆ ಹೇಗೂ ತೇರು ಹರಿವಾಗಲೇ ಬಂದ್ವಿ ನಡಿರಿ ಹೋಗೋನ.ದನ ಕರ ಮಂತಾಗೆ ಅವೆ.ಅಂತ ಪದೆ ಪದೇ ಅವಲತ್ತುಕೊಳ್ಳುತ್ತಾ ಮುಖ ಗಂಟಿಕ್ಕಿ ಕೊಳ್ಳುತ್ತಿದ್ದ ದೃಶ್ಯ ಇರಸು ಮುರಸಾಗುತ್ತಿತ್ತು.ಅಮ್ಮಳ ಕಣ್ಣುಗಳ ನೀರು ಕೆನ್ನೆ ಮೇಲೆ ಸೋರುವ ಹೊತ್ತಿಗೆ ತಾತ ಅಜ್ಜಿ ಕಾಣಿಸಿಕೊಳ್ಳುತ್ತಿದ್ದರು.ನಮಗಂತೂ ಖುಷಿಗೆ ಪಾರವೇ ಇರಲಿಲ್ಲ.ಬಂದು ಅಜ್ಜಿ ತಾತ ತಲಾ ಐದು ರೂಪಾಯಿ ಕೊಟ್ಟು.ಅಮ್ಮನಿಗೆ ಬಳೆ ತೊಡಿಸಿ ,ತಲೆಗೆ ಹೂ ಮುಡಿಸಿದ ಮೇಲೆಯೇ ಅಮ್ಮನ ಮುಖದಲ್ಲಿ ತವರಿನ ಕಳೆ ನವಿಲಾಗಿ ಗರಿಬಿಚ್ಚಿ ನಾಟ್ಯವಾಡುತ್ತಿತ್ತು.ಐದು ರೂಪಾಯಿಯಲ್ಲಿ ಕೈಗೊಂದು ವಾಚು ಪೀಪಿ ತಗೊಂಡು ಊರಿನ ದಾರಿ ಹಿಡಿಯುತ್ತಿದ್ದೆವು.ಕಲರ್ ಕನ್ನಡಕದಲ್ಲಿ ನಡೆದು ಹೋಗುತ್ತಿದ್ದರೇ ದಾರಿಯ ಮೇಲಿನ ಗುದ್ದರಗಳು ಲೆಕ್ಕಕ್ಕೇ ಇರಲಿಲ್ಲ.ಇಡೀ ವಿಶ್ವವೇ ಕಲರ್ಸ್ ಕನ್ನಡಕದ ಅಡಿಯಲ್ಲಿ ಕಾಣುತ್ತಾ ದಾರಿ ಸಾಗುವುದೇ ಗೊತ್ತಾಗುತ್ತಿರಲಿಲ್ಲ. ಅಂತಹ ಜಾತ್ರೆ ಸಂಭ್ರಮ ಇತ್ತಿಚೆಗೆ ನಾನು ಕಾಣಲೇ ಇಲ್ಲ.ತಾತ ಅಜ್ಜಿಯೂ ಇಲ್ಲ.! *******

ಇತರೆ Read Post »

ಇತರೆ

ಪ್ರಸ್ತುತ

ಅಕ್ಷರಸಂತ ಹಾಜಬ್ಬ ಕೆ.ಶಿವು ಲಕ್ಕಣ್ಣವರ ಸ್ವಂತ ದುಡುಮೆಯಿಂದ ಶಾಲೆ ಕಟ್ಟಿಸಿದ ಹರೆಕಳ ಹಾಜಬ್ಬರು ಪದ್ಮಶ್ರೀ ಪಡೆದ ಸಾಹಸಗಾಥೆ..! ಆ ವ್ಯಕ್ತಿ ಕೋಟ್ಯಾಧಿಪತಿಯಲ್ಲ. ಸ್ವಂತಮನೆಯೂ ಅವನಿಗೆ ಇರಲಿಲ್ಲ. ಉನ್ನತ ವಿದ್ಯಾಭ್ಯಾಸವಂತೂ ದೂರದ ಬೆಟ್ಟವಾದರೂ ಅಕ್ಷರ ಸ್ನೇಹಿ. ಮಂಗಳೂರಿನ ರಸ್ತೆ ಬದಿಗಳಲ್ಲಿ ಕಿತ್ತಳೆ ಹಣ್ಣು ಮಾರಿಕೊಂಡು ನಿತ್ಯ ಜೀವನ ಸಾಗಿಸುತ್ತಿರುವ ಹರೆಕಳ ಹಾಜಬ್ಬನವರು ತಮ್ಮ ಜೀವನ ಸುಃಖಗಿಂತಲೂ ಬೇರೆಯವರ ನೋವಿಗೆ ಸ್ಪಂದಿಸುವವರು… ಹಾಜಬ್ಬನವರು ಕಿತ್ತಳೆ ವ್ಯಾಪಾರದಿಂದ ಅವರಿಗೆ ದಿನಕ್ಕೆ ಲಭಿಸುವುದು ಕೇವಲ 100 ರಿಂದ 120ರೂಪಾಯಿ. ಮಂಗಳೂರು ನಗರದಲ್ಲಿ ಕಿತ್ತಳೆ ಹಣ್ಣು ಮಾರುವ ಮೂಲಕ ಅಕ್ಷರದ ಕನಸುಗರು. ಹಾಜಬ್ಬ ಅವರು ಬೆಳಗಾಗುತ್ತಲೇ ಬಿಳಿ ಆಂಗಿ ಬಿಳಿ ಪಂಚೆ ಧರಿಸಿ ಮಂಗಳೂರಿನ ಬಸ್‌ ನಿಲ್ದಾಣಗಳಲ್ಲಿ ಬುಟ್ಟಿ ಹಿಡಿದು ಕಿತ್ತಳೆ ಹಣ್ಣು ಮಾರುವ ಕಾಯಕ ಮುಂದುವರಿಸಿದ್ದಾರೆ… ಮಂಗಳೂರು ತಾಲೂಕಿನ ಕೊಣಾಜೆ ಸಮೀಪದ ಹರೇಕಳ ಇವರ ಊರು… ಹಾಜಬ್ಬ ಅವರಿಗೆ ಪತ್ನಿ, ಇಬ್ಬರು ಪುತ್ರಿಯರಿದ್ದು, ಪುತ್ರ ಪೈಂಟಿಂಗ್ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ… ಹೀಗೆ ಹಣ್ಣು ಮಾರುವಾಗ ವಿದೇಶಿ ವ್ಯಾಪಾರಿಯೊಬ್ಬರು ಇಂಗ್ಲೀಷ್ ನಲ್ಲಿ ಹಣ್ಣಿನ ಬೆಲೆ ಕೇಳುತ್ತಾರೆ. ಶಿಕ್ಷಣ ಇಲ್ಲದ ಹಾಜಬ್ಬರಿಗೆ ಬೆಲೆ ಹೇಳಲು ಗೊತ್ತಾಗುವುದಿಲ್ಲ. ಇದರಿಂದ ಮನನೊಂದ ಹಾಜಬ್ಬ ಅವರಿಗೆ ಶಿಕ್ಷಣ ಎಷ್ಟು ಮುಖ್ಯ ಅನ್ನೋದು ಮನದಟ್ಟು ಆಗುತ್ತದೆ. ತನ್ನದೇ ಊರಿನಲ್ಲಿದ್ದ ಮಕ್ಕಳಿಗೆ ಹತ್ತಿರದಲ್ಲೇ ಇದ್ದ ಖಾಸಗಿ ಶಾಲೆಗೆ ಸೇರಿಸಲು ಊರಿನ ಜನರು ಪರದಾಡುವುದನ್ನ ನೋಡಿ ಹಾಜಬ್ಬ ನಮ್ಮ ಊರಿಗೆ ಉಚಿತ ಶಿಕ್ಷಣ ಸಿಗೋ ಶಾಲೆ ಬೇಕು ಅನ್ನೋ ನಿರ್ಧಾರಕ್ಕೆ ಬರುತ್ತಾರೆ. ಹೇಗಾದರೂ ಮಾಡಿ ಶಾಲೆ ಕಟ್ಟಲೇ ಬೇಕು ಅಂತ ನಿರ್ಧಾರ ಮಾಡಿ ಶಾಲೆ ಕಟ್ಟಲು, ಜಾಗಕ್ಕಾಗಿ ಸರ್ಕಾರಿ ಕಛೇರಿಗಳನ್ನು ಅಲೆಯೋದಕ್ಕೆ ಶುರು ಮಾಡಿದರು. ಮೂರು ದಿನಗಳ ನಂತರ ಹಾಜಬ್ಬರ ಆಸೆಯಂತೆ ಸರ್ಕಾರದಿಂದ ಸ್ವಲ್ಪ ಜಾಗ ಸಿಕ್ಕುತ್ತದೆ. ಜಾಗ ಸಿಕ್ಕ ನಂತರ ಅಧಿಕಾರಿಗಳು ಸ್ಥಳ ಕೊಟ್ಟು ಕೈ ತೊಳೆದು ಕೊಳ್ಳುತ್ತಾರೆ. ಆದರೆ ಹಾಜಬ್ಬ ಸುಮ್ಮನಾಗೋದಿಲ್ಲ. ಹಾಜಬ್ಬ ಅಂದಿನಿಂದ ಹೆಚ್ಚಿನ ಸಮಯ ಕಿತ್ತಳೆ ಹಣ್ಣು ಮಾರೋದಕ್ಕೇ ಶುರು ಮಾಡುತ್ತಾರೆ. ಯಾಕೆಂದರೆ ಕಿತ್ತಳೆ ಹಣ್ಣನ್ನು ಮಾರಿ ಬಂದ ಹಣದಿಂದ ಹಾಜಬ್ಬ ತನ್ನ ಹೆಂಡತಿ ಮಕ್ಕಳನ್ನ ಸಾಕಬೇಕಿತ್ತು. ಇನ್ನು ಹಣ್ಣು ಮಾರಿ ಬಂದ ನಂತರ ಹಳೆ ಬಟ್ಟೆ ತೊಟ್ಟು ಹಾಜಬ್ಬ ಶಾಲೆಗೆ ಕೊಟ್ಟ ಜಾಗವನ್ನು ಸಮತಟ್ಟು ಮಾಡೋ ಕೆಲಸ ಪ್ರಾರಂಭ ಮಾಡ್ತಾರೆ. ಇದಾದ ನಂತ್ರ ಹೆಚ್ಚುಹೊತ್ತು ಹಣ್ಣು ಮಾರಿ ಕೊಡಿಟ್ಟ ಹಣದಲ್ಲಿ ಶಾಲೆ ಕಟ್ಟಲು ಜಲ್ಲಿ ಸೀಮೆಂಟ್ ಇಟ್ಟಿಗೆಯನ್ನು ತರಿಸಿ ಶಾಲೆ ಕಟ್ಟಡ ಕಟ್ಟಲು ಶುರು ಮಾಡುತ್ತಾರೆ… 1995ರಿಂದ ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುತ್ತಾರೆ. 1999-2000ರ ಸಾಲಿಗೆ ನ್ಯೂಪಡುಗೆ ಪ್ರಾಥಮಿಕ ಶಾಲೆ ಮಂಜೂರಾಗುತ್ತದೆ. ಆದರೆ ಮೂಲ ಸೌಕರ್ಯದ ವ್ಯವಸ್ಥೆ ಮಾಡುವುದು ಕಷ್ಟಕರವಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಹಾಜಬ್ಬ ಸರಕಾರಿ ಇಲಾಖೆ ಸೇರಿದಂತೆ ದಾನಿಗಳ ಸಹಕಾರದಿಂದ ಶಾಲಾ ಕಟ್ಟಡ ಸೇರಿದಂತೆ, ಮೈದಾನ ನಿರ್ಮಿಸಿಕೊಡುತ್ತಾರೆ. 1999ರಲ್ಲಿ ಹರೇಕಳದಲ್ಲಿ ದಕ್ಷಿಣ ಕನ್ನಡ ಕಿರಿಯ ಪ್ರಾಥಮಿಕ ಪಾಠ ಶಾಲೆ ಶುರುವಾಗುತ್ತದೆ. ಶಾಲೆ ಕಟ್ಟಿ ಸುಮ್ಮನಾಗದ ಹಾಜಬ್ಬ ಶಾಲೆಯ ಕಸ ಗುಡಿಸೋದು ,ತೊಳೆಯೋ ಕೆಲಸವನ್ನು ತಾವೇ ಮಾಡುತ್ತಾರೆ… ಕಿತ್ತಲೆ ವ್ಯಾಪಾರ ಮುಗಿಸಿ ಮನೆಗೆ ಹೋದವರೇ ಹಳೆ ಬಟ್ಟೆ ತೊಟ್ಟುಕೊಂಡು ಜಾಗ ಸಮತಟ್ಟು ಮಾಡಲು ಶುರುವಿಟ್ಟುಕೊಳ್ಳುತ್ತಾರೆ. ಅದೆಷ್ಟೋ ದಿನದ ನಂತರ ಜಾಗ ಸಮತಟ್ಟುಗೊಳ್ಳತದೆ. ನಂತರ ಕಿತ್ತಳೆ ಹಣ್ಣಿನ ವ್ಯಾಪಾರದಲ್ಲಿ ಶಾಲೆಗಾಗಿ ಉಳಿಸಿದ ಹಣದಲ್ಲಿ ಜಲ್ಲಿ, ಕಲ್ಲು, ಸಿಮೆಂಟು ತಂದು ರಾಶಿ ಹಾಕುತ್ತಾರೆ. ಹಣ ಇದ್ದಷ್ಟು ಕೆಲಸದವರನ್ನು ನೇಮಿಸಿ ಕಟ್ಟಡ ಕೆಲಸ ಶುರುವಿಟ್ಟುಕೊಳ್ಳುತ್ತಾರೆ. ಹಣ ಖಾಲಿಯಾದರೆ ತಾನೇ ಮೇಸ್ತ್ರಿಯಾಗಿ ಕೆಲಸ ಮಾಡುತ್ತಾರೆ. ಅಂತೂ, ಹಾಜಬ್ಬರ ಸಂತೋಷಕ್ಕೆ ಪಾರವೇ ಇರುದಿಲ್ಲ. ಚಿಕ್ಕ ಮಗುವಿನಂತೆ ಕುಣಿತ್ತಾರೆ. ದಿನಾ ಶಾಲೆಯಲ್ಲಿ ನೆಲ ಒರೆಸುವುದರಿಂದ ಹಿಡಿದು, ಅಂಗಳ ಗುಡಿಸುವುದನ್ನೂ ತಾನೇ ನಿರ್ವಹಿಸಿ ಕಿತ್ತಳೆ ವ್ಯಾಪಾರಕ್ಕೆ ತೆರಳುತ್ತಾರೆ. ಅಷ್ಟರಲ್ಲಿ ಹಾಜಬ್ಬರ ಪತ್ನಿ ಮೈಮುನಾ ಆರೋಗ್ಯ ಕೈಕೊಡುತ್ತದೆ. ಆದರೆ ಮಗುವಿನ ಮನಸ್ಸಿನ ಹರೆಕಳ ಹಾಜಬ್ಬರಿಗೆ ಹೊಸತೊಂದು ಆಶೆ ಹುಟ್ಟಿಕೊಳ್ಳುತ್ತದೆ. ಅದು ಐದನೇ ತರಗತಿಯವರೆಗೆ ಇದ್ದ ಶಾಲೆಯನ್ನು ಏಳನೇ ತರಗತಿಯವರೆಗೆ ವಿಸ್ತರಿಸುವುದು… ಒಂದು ಸರ್ಕಾರ ಮಾಡಬೇಕಾದ ಎಲ್ಲಾ ಕೆಲಸವನ್ನು ಕೇವಲ ಕಿತ್ತಳೆ ಹಣ್ಣು ಮಾರಾಟ ಮಾಡಿದ ದುಡ್ಡಿನಲ್ಲಿ ಹಾಜಬ್ಬ ಮಾಡುತ್ತಿರುವುದನ್ನು ಗಮನಿಸಿದ ಹಲವಾರು ಸಂಘ ಸಂಸ್ಥೆಗಳು ಹಾಜಬ್ಬರನ್ನು ಕರೆದು ಸನ್ಮಾನಿಸುತ್ತವೆ. ಆ ಸನ್ಮಾನದ ಪತ್ರದ ಜೊತೆ ನೀಡುವ ಕವರಿನಲ್ಲಿ ಐನೂರು ರೂಪಾಯಿಯೋ, ಒಂದು ಸಾವಿರ ರೂಪಾಯಿಯೋ ಇರುತ್ತಿದ್ದವು. ಅದೆಲ್ಲವೂ ಬಳಕೆಯಾಗುತ್ತಿದ್ದುದು ಶಾಲೆಯ ಕಲ್ಲು,ಜಲ್ಲಿ, ಮರಳು, ಸಿಮೆಂಟಿಗೆ. ಹಾಜಬ್ಬರ ಶಾಲೆ ಪ್ರಚಾರಕ್ಕೆ ಬಂದ ನಂತರ ಮಂಗಳೂರಿನಲ್ಲಿರುವ ಕೆಲವೊಂದು ಪ್ರತಿಷ್ಠಿತ ಕಂಪನಿಗಳೂ ಹಾಜಬ್ಬರ ಸಾಧನೆ ಕಂಡು ಹರೆಕಳ ಗ್ರಾಮಕ್ಕೆ ಬಂದು ಶಾಲೆ ವೀಕ್ಷಿಸಿ ಒಂದಷ್ಟು ದಾನ ಮಾಡಿದ್ದಾರೆ. ಒಂದೆರಡು ಲಕ್ಷ ರೂಪಾಯಿ ದಾನ ಮಾಡಿ ಗೊಡೆಯಲ್ಲಿ ಹೆಸರು ಕೆತ್ತಿಸಿಕೊಳ್ಳುತ್ತಾರೆ. ಆದರೆ ಶಾಲೆಯ ಎಲ್ಲೂ ಹಾಜಬ್ಬರ ಹೆಸರಾಗಲೀ, ಫೋಟೋ ಆಗಲಿ ಕಾಣ ಸಿಗುವುದಿಲ್ಲ… ಒಮ್ಮೆ ಕಟ್ಟಡದ ಕಾಂಕ್ರೀಟ್ ಕೆಲಸ ನಡೆಯುತ್ತಿದ್ದಾಗ ಸಿಮೆಂಟಿಗೆ ನೀರು ಹಾಕಲು ಕಟ್ಟಡದ ಮೇಲೆ ಹೋದ ಹಾಜಬ್ಬ ಆಯ ತಪ್ಪಿ ಮೇಲಿಂದ ಕೆಳಗೆ ಬಿದ್ದು ಬಿಟ್ಟರು. ತನ್ನ ಕೈಗೆ ಬಂದ ಸನ್ಮಾನದ ದುಡ್ಡುಗಳೆಲ್ಲಾ ಕಟ್ಟಡದ ಪಾಲಾಗಿತ್ತು. ಖಾಸಗಿ ಆಸ್ಪತ್ರೆಗೆ ಸೇರಿದರೆ ಬಿಲ್ಲು ತೆರಲು ದುಡ್ಡಿಲ್ಲ. ಅದಕ್ಕಾಗಿ ಸರಕಾರಿ ಆಸ್ಪತ್ರೆಯಲ್ಲಿ ತುಂಬಾ ಸಮಯ ಚಿಕಿತ್ಸೆ ಪಡೆಯಬೇಕಾಯಿತು. ಇದರಿಂದಾಗಿ ಹಾಜಬ್ಬರ ಹೈಸ್ಕೂಲ್ ಕಟ್ಟಡ ನೆನೆಗುದಿಗೆ ಬಿತ್ತು. ಅಂತೂ ಇಂತೂ ಸಾವರಿಸಿಕೊಂಡ ಹಾಜಬ್ಬ ಆಸ್ಪತ್ರೆಯಿಂದ ಬಿಡುಗಡೆ ಆದವರೇ ಮತ್ತೆ ಕಟ್ಟಡ ನಿರ್ಮಾಣಕ್ಕೆ ತೊಡಗಿಕೊಳ್ಳುತ್ತಾರೆ. ಕೊನೆಗೂ ಹೈಸ್ಕೂಲ್ ಕಟ್ಟಡ ಪೂರ್ಣಗೊಳ್ಳುತ್ತದೆ… ಹಾಜಬ್ಬ ಇಷ್ಟೆಲ್ಲಾ ಮಾಡಿದ್ದು ಸರಕಾರಿ ಶಾಲೆಯೊಂದರ ನಿರ್ಮಾಣಕ್ಕೆ. ಅಲ್ಲಿರುವುದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ. ಇಡೀ ಶಾಲೆಗೆ ಸರಕಾರಿ ಜಮೀನೊಂದು ಹೊರತುಪಡಿಸಿ ಉಳಿದೆಲ್ಲಾ ಹಣ ಬಳಕೆಯಾಗಿದ್ದು ಹಾಜಬ್ಬರದ್ದು ಮತ್ತು ದಾನಿಗಳದ್ದು. ಕನ್ನಡಪ್ರಭ ಮತ್ತು ಸಿಎನ್ಎನ್-ಐಬಿಎನ್ ಸನ್ಮಾನ ಸೇರಿದಂತೆ ಸಂಘ ಸಂಸ್ಥೆಗಳು ಮಾಡಿದ ಸನ್ಮಾನದ ದುಡ್ಡು ಮತ್ತು ಕಿತ್ತಳೆ ಹಣ್ಣಿನ ವ್ಯಾಪಾರದಿಂದಲೇ ಒಂದು ಪೂರ್ಣ ಪ್ರಮಾಣದ ಸರಕಾರಿ ಶಾಲೆಯನ್ನು ನಿರ್ಮಿಸಿದರು. ಹಾಜಬ್ಬರ ಮಗ ಹಾಜಬ್ಬರೇ ನಿರ್ಮಿಸಿದ ಶಾಲೆಯಲ್ಲಿ ಓದುತ್ತಿದ್ದ ಸಂದರ್ಭದವರೆಗೆ ಹಾಜಬ್ಬರೇ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿದ್ದರು. ಕಳೆದ ಜೂನ್‌ನಿಂದ ಹಾಜಬ್ಬರ ಮಕ್ಕಳ ಹೈಸ್ಕೂಲ್ ವಿದ್ಯಾಬ್ಯಾಸ ಪೂರ್ಣಗೊಂಡಿದೆ. ಈಗ ಹಾಜಬ್ಬರಿಗೂ ಹೈಸ್ಕೂಲ್‌ಗೂ ಸಂಬಂಧವೇ ಇಲ್ಲ. ತಾನೇ ಕಟ್ಟಿದ ಶಾಲೆಗೆ ತಾನೊಬ್ಬ ‘ಸಾರ್ವಜನಿಕ’ಮಾತ್ರ. ಆದರೆ ಹಾಜಬ್ಬ ಈಗಲೂ ಬೆಳಿಗ್ಗೆ ಶಾಲೆಗೆ ಹೋಗಿ ಸ್ವಚ್ಚತೆ ನಿರ್ವಹಿಸಿ ಬರುತ್ತಾರೆ… ರಾಜ್ಯೋತ್ಸವ ಪ್ರಶಸ್ತಿ, 2004 ರಲ್ಲಿ ಕನ್ನಡಪ್ರಭ ಪತ್ರಿಕೆ ಹಾಜಬ್ಬರನ್ನು “ವರ್ಷದ ವ್ಯಕ್ತಿ” ಎಂದು ಪ್ರಶಸ್ತಿ ನೀಡುತ್ತದೆ. ಸಿಎನ್ಎನ್-ಐಬಿಎನ್ ಪ್ರಶಸ್ತಿ ಕೂಡ ದಕ್ಕುತ್ತದೆ. ಪದ್ಮಶ್ರೀ ಪ್ರಶಸ್ತಿ ಈಗ ಸಿಗುತ್ತದೆ… ಇಂತಹ ಸಾಧಕ ಹರೇಕಳ ಹಾಜಬ್ಬ ಎಂತಹವಿರಿಗಾದರೂ‌ ಮಾದರಿಯಾಗುತ್ತಾರೆ… ‌‌‌‌‌‌‌ ‌‌‌‌ *************************

ಪ್ರಸ್ತುತ Read Post »

ಇತರೆ

ಪ್ರಸ್ತುತ

ವಿವೇಕಾನಂದರ ಆಶಯ ಗಣೇಶಭಟ್ ಶಿರಸಿ ಸ್ವಾಮಿ ವಿವೇಕಾನಂದರ ಆಶಯಗಳು ವಾಸ್ತವವಾಗುವ ಬಗೆ…… ಪ್ರತಿವರ್ಷದಂತೆ ಈ ವರ್ಷವೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಅವರ ಫೋಟೊ ಇಟ್ಟು, ಹೂ ಹಾಕಿ, ಅವರ ಆದರ್ಶಗಳನ್ನು ಪಾಲಿಸಿ ಎಂದು ಭಾಷಣಗಳ ಸುರಿಮಳೆಯೂ ಆಯಿತು. ಆದರೆ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಾಸ್ತವವಾಗಿಸುವ ಬಗೆ ಹೇಗೆಂದು ಯಾವೊಬ್ಬ ಭಾಷಣಕಾರರೂ ಹೇಳಲಿಲ್ಲ. ಅವರ ಹೆಸರಿನಲ್ಲಿ ತಮ್ಮ ಸಂಘಟನೆಗಳನ್ನು ಬಲಪಡಿಸಿಕೊಳ್ಳುತ್ತಿರುವವರೂ ಸಹ ಸ್ವಾಮೀಜಿಯ ಉನ್ನತ ಆದರ್ಶಗಳನ್ನು ಭೂಮಿಗಿಳಿಸುವ ವ್ಯವಹಾರಿಕ ಚಿಂತನೆಯ ಕುರಿತಾಗಿ ಎಂದೂ ಹೇಳುವುದಿಲ್ಲ. ಯಾಕೆಂದರೆ, ವಿವೇಕಾನಂದರ ವಿಶ್ವೈಕ್ಯ ದೃಷ್ಟಿಕೋನವನ್ನು ಸಂಕುಚಿತ ರೂಪದಲ್ಲಿ ಪ್ರಸ್ತುತಪಡಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಹೆಚ್ಚು. ಸ್ವಾಮಿ ವಿವೇಕಾನಂದ ಆಶಯಗಳು ಆಧ್ಯಾತ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವ್ಯಕ್ತಿ ಮತ್ತು ಸಮಷ್ಠಿಯ ಸರ್ವತೋಮುಖ ಅಭಿವೃದ್ಧಿಯ ಕುರಿತು ಅವರು ಹೇಳುತ್ತಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ ‘ನಾವು ಬೇಕಾದಷ್ಟು ಅತ್ತಿರುವೆವು, ಇನ್ನು ಸಾಕು. ನಿಮ್ಮಕಾಲಿನ ಮೇಲೆ ನಿಂತು ಪುರುಷ ಸಿಂಹರಾಗಿ. ಪುರುಷ ಸಿಂಹರನ್ನು ಮಾಡುವ ಧರ್ಮ, ಅಂತಹ ಸಿದ್ಧಾಂತ ನಮಗಿಂದು ಬೇಕಾಗಿದೆ. ಸರ್ವತೋಮುಖವಾದ ಪುರುಷ ಸಿಂಹರನ್ನು ಮಾಡುವ ವಿದ್ಯಾಭ್ಯಾಸ ಇಂದಿನ ಅಗತ್ಯತೆ’. ಮುಂದುವರಿದು ಸ್ವಾಮೀಜಿ ಹೇಳುತ್ತಾರೆ. ‘ಗಿಳಿಯಂತೆ ಮಾತನಾಡುವುದೊಂದು ನಮ್ಮ ಬಾಳಿನ ಚಾಳಿಯಾಗಿದೆ. ಏನನ್ನೂ ಅನುಷ್ಠಾನಕ್ಕೆ ತರುವುದಿಲ್ಲ. ಶಾರೀರಿಕ ದುರ್ಬಲತೆಯೇ ಇದಕ್ಕೆ ಕಾರಣ. ಇಂತಹ ದುರ್ಬಲ ಮಿದುಳು ಏನನ್ನೂ ಸಾಧಿಸಲಾರದು. ನಾವು ಅದನ್ನು ಪುಷ್ಟಿಗೊಳಿಸಬೇಕು. ಮೊದಲು ನಮ್ಮ ಯುವಕರು ಬಲಿಷ್ಠರಾಗಬೇಕು. ಅನಂತರ ಧರ್ಮ. ನಿಮ್ಮಬಾಹುಗಳ ಮಾಂಸಖಂಡದಲ್ಲಿ ಸ್ವಲ್ಪ ಶಕ್ತಿಯಿದ್ದರೆ ನೀವು ಗೀತೆಯನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ’. ಹಸಿದ ಹೊಟ್ಟೆಗೆ ಧರ್ಮೋಪದೇಶ ಮಾಡುವುದನ್ನು ವಿವೇಕಾನಂದರು ಒಪ್ಪುವುದಿಲ್ಲ. ಭಾರತದ ಉದ್ದಗಲಕ್ಕೂ ಓಡಾಡಿದ, ಪ್ರಪಂಚದ ಹಲವು ದೇಶಗಳನ್ನು ನೋಡಿದ ಸ್ವಾಮೀಜಿಯವರು ಹೇಳುತ್ತಿದ್ದುದು, ‘ಶಕ್ತಿಯೇ ಪ್ರಪಂಚದ ಮಹಾ ವ್ಯಾಧಿಗೆ ದಿವ್ಯೌಷಧ. ಶ್ರೀಮಂತರ ದಬ್ಬಾಳಿಗೆಗ ತುತ್ತಾದಾಗ ದೀನರಿಗೆ ಬೇಕಾಗಿರುವುದೇ ಶಕ್ತಿ ಸಂಜೀವಿನಿ. ಜ್ಞಾನಿಗಳ ಉಪಟಳಕ್ಕೆ ತುತ್ತಾದಾಗ ಅಜ್ಞಾನಿಗಳಿಗೆ ಬೇಕಾಗಿರುವುದು ಶಕ್ತಿ ಸಂಜೀವಿನಿ’. ವಿವೇಕಾನಂದರು ಹೇಳುತ್ತಾರೆ ‘ಬಡವರ ಗೋಳಿಗೆ ಯಾರ ಹೃದಯ ರಕ್ತಸುರಿಸುವುದೋ ಅವನನ್ನು ಮಹಾತ್ಮನೆಂದು ಕರೆಯುತ್ತೇನೆ. ಇಲ್ಲದೇ ಇದ್ದರೆ ಅವನು ದುರಾತ್ಮ. ಎಲ್ಲಿಯವರೆಗೆ ಉಪವಾಸದಲ್ಲಿ, ಅಜ್ಞಾನದಲ್ಲಿ ಕೊಟ್ಯಾನುಕೋಟಿ ಭಾರತೀಯರು ನರಳುತ್ತಿರುತ್ತಾರೋ ಅಲ್ಲಿಯವರೆಗೂ , ದೀನದ ದುಡಿತದಿಂದ ಕೃತವಿದ್ಯನಾದ ಪ್ರತಿಯೊಬ್ಬ ಭಾರತೀಯನೂ ಕುಲಘಾತುಕನೆಂದು ಹೇಳುತ್ತೇನೆ’ ಸ್ವಾಮೀಜಿಯವರ ಈ ಮಾತನ್ನು ಇಂದಿನ ನೇತಾರರು, ಮಠಾಧೀಶರು, ಉದ್ಯಮಪತಿಗಳು ಗಮನಿಸಬೇಕಿದೆ. ಸಮಾಜದಲ್ಲಿ ನಡೆಯುತ್ತಿರುವ ಆರ್ಥಿಕ ಶೋಷಣೆಗೆ ನಾವು ಅನುಸರಿಸುತ್ತಿರುವ ಬಂಡವಾಳವಾದಿ ವ್ಯವಸ್ಥೆಯೇ ಕಾರಣ. ಬಂಡವಾಳಶಾಹಿಗಳಿಗೇ ಅನುಕೂಲವಾಗುವ ರೀತಿಯಲ್ಲಿ ಕಾನೂನು ರೂಪಿಸುತ್ತಿರುವ, ಹೂಡಿಕೆದಾರರಿಂದಲೇ ದೇಶದ ಉದ್ದಾರವೆಂಬಂತೆ ವರ್ತಿಸುವ ನೇತಾರರಿಗೆ ಈ ವಿಷಯ ಅರ್ಥವಾದರೂ, ಅವರ ಸ್ವಾರ್ಥ ಮನೋಭಾವದಿಂದಾಗಿ ಜನಪರ ನಿರ್ಣಯಗಳನ್ನು ಕೈಗೊಳ್ಳಲಿಲ್ಲ. ಹಿಂದಿನ ಜನ್ಮದ ಪಾಪ, ಪುಣ್ಯಗಳಿಂದಲೇ ಬಡವ, ಶ್ರೀಮಂತರಾಗುತ್ತಾರೆಂಬ ತಪ್ಪು ಕಲ್ಪನೆಯನ್ನು ಮಠಾಧೀಶರು, ಪುರೋಹಿತಶಾಹಿಗಳು ಪ್ರಚಾರ ಮಾಡಿ ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತಿದ್ದಾರೆ. ದೇಶದ ಭೌಗೋಳಿಕ ಗಡಿಯ ಕುರಿತಾದ ಘೋಷಣೆಗಳೇ ದೇಶಭಕ್ತಿಯೆಂದು ಪ್ರಚಾರಮಾಡುವ ಹುಸಿ ರಾಷ್ಟ್ರಾಭಿಮಾನಿಗಳು ದೇಶವಾಸಿಗಳನ್ನು ಪ್ರೀತಿಸಲಾರದೇ ಜಾತಿ, ಮತ, ಪಂಥಗಳ ಆಧಾರದಲ್ಲಿ ದ್ವೇಷ ಹಬ್ಬಿಸಿ, ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ವಿವೇಕಾನಂದರ ಉಪನ್ಯಾಸಗಳನ್ನು ಓದಿ, ಸರಿಯಾಗಿ ಅರ್ಥ ಮಾಡಿಕೊಳ್ಳುವುದರಿಂದ ಹುಸಿ ದೇಶ ಭಕ್ತರ ಅಂದಾಭಿಮಾನಿಗಳ ಕಣ್ತೆರೆಯಬಲ್ಲದು. ಸ್ವಾಮೀಜಿ ಹೇಳುತ್ತಾರೆ, ‘ಮಗು ! ಯಾವ ದೇಶವಾಗಲಿ, ವ್ಯಕ್ತಿಯಾಗಲಿ ಮತ್ತೊಬ್ಬನನ್ನು ದ್ವೇಷಿಸಿ ಬಾಳಲಾರದು. ಮ್ಲೇಚ್ಛರೆಂಬ ಪದವನ್ನು ಕಂಡು ಹಿಡಿದು ಹೊರಗಿನವರೊಂದಿಗೆ ಸಂಪರ್ಕವನ್ನು ನಿಲ್ಲಿಸಿದ ದಿನದಿಂದಲೇ ಭಾರತದ ಭಾಗ್ಯ ಅವನತಿಗೆ ಇಳಿಯಿತು’. ಮತೀಯ ದ್ವೇಷದ ಭಾವೋನ್ಮಾದದಲ್ಲಿ ನರಳುತ್ತಿರುವವರು ಗಮನಿಸಲೇಬೇಕಾದ ಹೇಳಿಕೆ ಇದು. ಆಧ್ಯಾತ್ಮವೆಂದರೆ ವಿಕಾಸವೆಂದು ಸ್ವಾಮೀಜಿ ಹೇಳುತ್ತಿದ್ದರು. ಗುಡಿ, ಮಸೀದಿ, ಚರ್ಚುಗಳಲ್ಲೇ ಭಗವಂತನನ್ನು ಹುಡುಕುವವರಿಗಾಗಿ ಅವರು ಎಚ್ಚರಿಸಿದ ಪರಿ, ‘ಮನುಷ್ಯನು ಒಂದು ಚೈತನ್ಯ ಎಂದು ತಿಳಿಯುವ, ಅನುಭವಿಸುವ ಧೈರ್ಯ ನಮಗೆ ಬೇಕು… ನಾವೇ ಜಗದೀಶ್ವರ ಸ್ವರೂಪಿಗಳೆಂದು ತಿಳಿದು ದೇವರಿಗಾಗಿ ಅಲ್ಲಿ, ಇಲ್ಲಿ ಹುಚ್ಚರÀಂತೆ ಹುಡುಕಾಡುವುದನ್ನು ಬಿಟ್ಟು ಬಿಡುವುದು ಒಳ್ಳೆಯದು…ಹುಚ್ಚು ಹುಡುಕಾಟಗಳನ್ನು ಕೈ ಬಿಟ್ಟು ನಾಟಕದ ಪಾತ್ರಧಾರಿಯಂತೆ ಈ ವಿಶ್ವ ನಾಟಕದಲ್ಲಿ ನಿಮ್ಮ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿರಿ’. ‘ಎಲ್ಲವನ್ನೂ ಭಗವಂತನೆಂದೇ ತಿಳಿದು, ಎಲ್ಲರಲ್ಲೂ ಭಗವಂತನನ್ನೇ ಕಾಣುತ್ತಾ ನಿಮ್ಮ ಕರ್ತವ್ಯಗಳನ್ನು ಮಾಡಬೇಕು.. ಎಲ್ಲದರಲ್ಲೂ ಭಗವಂತನೇ ತುಂಬಿರುವಾಗ ಆತನನ್ನು ಪ್ರತ್ಯೇಕವಾಗಿ ಕಾಣಲು ನಾವೆಲ್ಲಿಗೆ ಹೋಗಬೇಕು?… ಪ್ರತಿಯೊಬ್ಬ ಜೀವಿಯಲ್ಲೂ ದೇವನಿದ್ದಾನೆ.. ಈ ಜೀವ ಸೇವೆಯೇ ದೇವ ಸೇವೆ.” ಆಧ್ಯಾತ್ಮದ ಬದುಕೇ ಮಾನವ ಧರ್ಮವೆಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು. ಅವರ ಉಪನ್ಯಾಸಗಳಲ್ಲಿ ಅವರು ಬಳಸುತ್ತಿದ್ದ ಧರ್ಮ ಶಬ್ದದ ಅರ್ಥವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಆದರೆ, ಸ್ವಾರ್ಥಿಗಳು, ಧರ್ಮ ಶಬ್ದವನ್ನು ಮತ ಅರ್ಥಾತ್ ನಂಬಿಕೆ, ಆಚರಣೆಗಳಿಗೇ ಸೀಮಿತಗೊಳಿಸಿ ವ್ಯಾಖ್ಯಾನಿಸುತ್ತಿದ್ದಾರೆ. ಬದುಕಿನ ಸರ್ವಸ್ತರಗಳನ್ನು, ದೃಷ್ಟಿಕೋನವನ್ನು ಆಧ್ಯಾತ್ಮೀಕರಣಗೊಳಿಸಬೇಕೆಂದು ಸ್ವಾಮೀಜಿ ಬಯಸಿದ್ದರು. ‘ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಂದ ಭರತಖಂಡವನ್ನು ತುಂಬುವುದಕ್ಕಿಂತ ಮುಂಚೆ ಆಧ್ಯಾತ್ಮಿಕ ಭಾವನೆಯ ಮಳೆಗರೆಯಿರಿ.. ಮಠಗಳಿಂದ , ಕಾನನಗಳಿಂದ, ತಮಗೆ ಮೀಸಲಾಗಿವೆ ಎಂದು ಭಾವಿಸಿದ ಕೆಲವು ಜನರಿಂದ ಆಧ್ಯಾತ್ಮ ಜ್ಞಾನವನ್ನು ಹೊರಗೆ ತಂದು ಎಲ್ಲರಿಗೂ ಪ್ರಚಾರ ಮಾಡಬೇಕು ಎಂಬುದು ಅವರ ಹೇಳಿಕೆ. ಆರ್ಥಿಕ ಕ್ಷೇತ್ರವೇ ಇರಲಿ, ಸಾಮಾಜಿಕ ಕ್ಷೇತ್ರವೇ ಆಗಿರಲಿ. ಎಲ್ಲವೂ ಆಧ್ಯಾತ್ಮೀಕರಣಗೊಳ್ಳಬೇಕೆಂಬುದು ಅಂದರೆ ಎಲ್ಲವೂ ಪರಮಾತ್ಮನ ಅಭಿವ್ಯಕ್ತಿ ಎಂಬ ಭಾವನೆ ಮೂಡುವಂತಾಗಬೇಕು. ಸ್ವಾಮಿ ವಿವೇಕಾನಂದರ ಆಶಯ. ಸಮಾಜ ಸುಧಾರಣೆ ರಾಜಕೀಯವನ್ನೂ ಅವುಗಳ ಮೂಲಕ ಹೇಗೆ ನಮ್ಮ ಆಧ್ಯಾತ್ಮಿಕ ಸಂಪತ್ತನ್ನು ಹೆಚ್ಚಿಸಬೇಕೆಂಬುದನ್ನು ಲಕ್ಷದಲ್ಲಿಟ್ಟುಕೊಂಡು ಬೋಧಿಸಬೇಕೆಂದು ಅವರು ಹೇಳುತ್ತಿದ್ದರು. ‘ಸಮಾಜದ ಸರ್ವ ಸದಸ್ಯರಿಗೂ ಸಂಪತ್ತು, ವಿದ್ಯಾಭ್ಯಾಸ ಅಥವಾ ಜ್ಞಾನ ಸಂಪಾದನೆಗೆ ಏಕ ಪ್ರಕಾರದ ಅವಕಾಶಗಳಿರಬೇಕು. ಎಲ್ಲ ವಿಷಯಗಳಲ್ಲಿ ಸ್ವಾತಂತ್ರ್ಯವಿರಬೇಕು. ಎಲ್ಲರೂ ಮೋಕ್ಷದ ಕಡೆಗೆ ನಡೆಯುವಂತಾಗಬೇಕು’ ಎನ್ನುತ್ತಿದ್ದರು ಸ್ವಾಮೀಜಿ. ‘ಮನುಷ್ಯರಿಗೆ ದೈಹಿಕವಾಗಿ ಮತ್ತು ವಸ್ತು ಮೂಲಕವಾಗಿ ನೆರವು ನೀಡಿ ಅವರ ಭೌತಿಕ ಅವಶ್ಯಕತೆಗಳನ್ನು ಪರಿಹರಿಸುವುದು ನಿಜವಾಗಿಯೂ ದೊಡ್ಡ ಕೆಲಸ’À.. ನಮ್ಮ ಎಲ್ಲಾ ರೀತಿಯ ಕ್ರಿಯೆಗಳಿಗೂ ಆಧ್ಯಾತ್ಮಿಕತೆಯೇ ಭದ್ರವಾದ ನೈಜ ತಳಪಾಯ…ಆಧ್ಯಾತ್ಮಿಕ ಶಕ್ತಿಯಿಲ್ಲದ ಮನುಷ್ಯನ ಭೌತಿಕ ಅವಶ್ಯಕತೆಗಳು ಸರಿಯಾಗಿ ಪೂರೈಸಲ್ಪಡಲಾರವು’ ಎಂಬುದು ಸ್ವಾಮೀಜಿಯವರ ಸ್ಪಷ್ಟ ಅಭಿಪ್ರಾಯ. ವಿವೇಕಾನಂದರು ವೇದಾಂತದ ಒಣ ಉಪದೇಶವನ್ನು ನೀಡುತ್ತಿರಲಿಲ್ಲ. ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದರು. ‘ಮೋಕ್ಷವನ್ನು ಪಡೆಯುವುದು ಪ್ರತಿಯೋರ್ವ ಮನುಷ್ಯನ ಹಕ್ಕು. ಈ ವಿಕಾಸ ಪಥದ ಸ್ವಾತಂತ್ರ್ಯವನ್ನು ತಡೆಯುವ ಎಲ್ಲ ರೀತಿಯ ಸಾಮಾಜಿಕ ಕಟ್ಟುಪಾಡುಗಳು ಹಾನಿಕಾರಕ. ಅಂತಹ ಕಟ್ಟುಪಾಡುಗಳನ್ನು ಆದಷ್ಟು ಬೇಗ ಕಿತ್ತೆಸೆಯಬೇಕು. ವಿಕಾಸ ಪಥದಲ್ಲಿ ಮುನ್ನಡೆಯಲು ಸಹಕಾರಿಯಾದ ಎಲ್ಲ ರೀತಿಯ ಸಾಮಾಜಿಕ ವ್ಯವಸ್ಥೆಗಳನ್ನೂ, ಸಂಸ್ಥೆಗಳನ್ನೂ ಬಲಪಡಿಸಬೇಕು’ ಎನ್ನುವುದು ಅವರ ವಿಚಾರಧಾರೆ. ವಿವೇಕಾನಂದರು ಯಾವುದೇ ನಿರ್ದಿಷ್ಟವಾದ ಆರ್ಥಿಕ ಸಿದ್ಧಾಂತವನ್ನು ಅಥವಾ ಆರ್ಥಿಕ ನೀತಿಯನ್ನು ನೀಡಲಿಲ್ಲವಾದರೂ ಅವರ ಆಶಯಗಳನ್ನು ಆಧ್ಯಾತ್ಮಿಕ ಸಮಾಜವಾದವೆಂದು ಹೇಳುತ್ತಾರೆ. ಇಂದು ಪ್ರಚಲಿತವಿರುವ ಆರ್ಥಿಕ ಚಿಂತನೆಗಳು ಮತ್ತು ವಾದಗಳು ವಿವೇಕಾನಂದರ ಆಶಯಗಳನ್ನು ಪೂರ್ತಿಗೊಳಿಸುವ ಸಾಮಥ್ರ್ಯ ಹೊಂದಿವೆಯೇ ಎಂದು ಗಮನಿಸಬೇಕಿದೆ. ಕಮ್ಯುನಿಸಂ ವಿಚಾರಧಾರೆಯಲ್ಲಿ ಆಧ್ಯಾತ್ಮಿಕತೆಗೆ ಸ್ಥಾನವೇ ಇಲ್ಲ. ಮಾನವನನ್ನು ಹೆಚ್ಚು ಕಡಿಮೆ ಆರ್ಥಿಕ ಪಶುವೆಂಬ ಗ್ರಹಿಕೆಯ ಆಧಾರದ ಮೇಲೆ ರೂಪಿತವಾದ ಸಿದ್ಧಾಂತವದು. ಮಾನವನ ಭೌತಿಕ ಅಸ್ತಿತ್ವವನ್ನೇ ಸರ್ವಸ್ವವೆಂದು ಪರಿಗಣಿಸಿದ ಕಮ್ಯುನಿಸಂ , ಮಾನವರ ಕನಿಷ್ಠ ಅಗತ್ಯತೆಗಳನ್ನೂ ಪೂರೈಸಲಾರದೇ ವಿಫಲಗೊಂಡು, ತಿರಸ್ಕøತಗೊಂಡಿರುವುದು ಇತಿಹಾಸ. ಬಂಡವಾಳವಾದಿ ಚಿಂತನೆಗಳ ಆಧಾರವೇ ಮಾನವನ ಸ್ವಾರ್ಥ ಮತ್ತು ಲಾಭಗಳಿಕೆಯ ಹೆಚ್ಚಳ. ಆಧ್ಯಾತ್ಮವನ್ನು ಮತ, ಪಂಥಗಳ ಚೌಕಟ್ಟಿಗೆ ಬಂಧಿಸಿ, ಸ್ವಾರ್ಥ ಸಾಧನೆಯಲ್ಲಿ ಬೆಂಬಲಿಸುವ ವಿಚಾರಧಾರೆಯಿದು. ಮಾನವನ ಸೃಷ್ಟಿಯಲ್ಲದ, ಎಲ್ಲರಿಗೂ ಸಲ್ಲಬೇಕಾದ ಭೌತಿಕ ಸಂಪತ್ತನ್ನು ಕೆಲವರದೇ ಹಕ್ಕು ಎಂದು ಸಾಧಿಸುವ ಚಿಂತನೆಯ ಬಂಡವಾಳವಾದ ಆಧ್ಯಾತ್ಮಿಕ ಬದುಕಿಗೆ ಬಹುದೂರ. ಜನರಲ್ಲಿ ಸುಖಲೋಲುಪತೆಯನ್ನು ಹೆಚ್ಚಿಸಿ ಉನ್ನತ ಆದರ್ಶಗಳಿಂದ ವಿಮುಖರನ್ನಾಗಿಸಿ, ಪ್ರತಿಭಟನೆ ಮನೋಭಾವವನ್ನೇ ಚಿವುಟಿ ಹಾಕುವ, ಬಂಡವಾಳವಾದೀ ವ್ಯವಸ್ಥೆಯಿಂದ ಆಧ್ಯಾತ್ಮಿಕ ಸ್ವಾತಂತ್ರ್ಯದ ಹರಣವಾಗುತ್ತಿರುವುದು ಜನಸಾಮಾನ್ಯರ ಗಮನಕ್ಕೂ ಬರುತ್ತಿಲ್ಲ. ಸಂಪತ್ತಿನ ಗಳಿಕೆ ಮತ್ತು ಸಂಗ್ರಹಣೆಯೇ ಬದುಕಿನ ಪರಮ ಧ್ಯೇಯವೆಂಬ ಮಿಥ್ಯೆಯನ್ನೇ ಪ್ರಚಾರ ಮಾಡಿ ನಂಬಿಸಿ, ಮಾನವರ ಸೂಕ್ಷ್ಮ ಅಸ್ತಿತ್ವದ ಅಭಿವ್ಯಕ್ತಿಗಳಿಗೆ ಅವಕಾಶ ನೀಡದ ಬಂಡವಾಳವಾದ ವಾಸ್ತವದಲ್ಲಿ ಮಾನವ ವಿರೋಧಿ. ಬಂಡವಾಳಶಾಹಿಗಳು ನಡೆಸುವ ಮತೀಯ ಆಚರಣೆ, ನೀಡುವ ಧನ, ದೇಣಿಗೆಗಳು ತಾವು ಮಾಡುತ್ತಿರುವ ಶೋಷಣೆಯನ್ನು ಮುಚ್ಚಿಕೊಂಡು, ಜನರನ್ನು ದಾರಿ ತಪ್ಪಿಸುವ ಕುತಂತ್ರಗಳು ಜನರನ್ನು ಮತೀಯ ಉನ್ಮಾದಕ್ಕೊಳಪಡಿಸಿ ಪರಸ್ಪರರು ಹೊಡೆದಾಡಿಕೊಂಡಿರುವಂತೆ ಮಾಡಲು ರಾಜಕಾರಣಿಗಳಿಗೆ ಧನ ಬೆಂಬಲ ನೀಡುತ್ತಿರುವವರೂ ಇದೇ ಬಂಡವಾಳಶಾಹಿಗಳು. ಬುದ್ಧಿಜೀವಿಗಳನ್ನು ಹಣದಿಂದ ಖರೀದಿಸಿ, ತಮ್ಮ ಕಾರ್ಯವೈಖರಿಗೆ, ಬೌದ್ಧಿಕ ಸಮರ್ಥನೆ ಪಡೆದು ಜನರು ತಾವು ಒಳಗಾಗಿರುವ ಶೋಷಣೆಯ ಅರಿವಾಗದಂತೆ ಮಾಡುತ್ತಿರುವ ಬಂಡವಾಳವಾದದಿಂದ ಸಮಾಜದ ಆಧ್ಯಾತ್ಮಿಕ ಪ್ರಗತಿಗೆ ಮಾರಕವಾಗುತ್ತಿದೆ. ಇನ್ನುಳಿದಂತೆ ಸಮಾಜವಾದ, ಮಿಶ್ರ ಆರ್ಥಿಕನೀತಿ ಮುಂತಾದವು ಎಡಬಿಡಂಗಿ ಚಿಂತನೆಗಳು. ಇವೆಲ್ಲವೂ ಬಂಡವಾಳವಾದಿ ಚಿಂತನೆಯ ವಿವಿಧ ರೂಪಗಳು ಮಾತ್ರ. ಈ ಎಲ್ಲಾ ಸಿದ್ಧಾಂತಗಳು ಪ್ರತಿಪಾದಿಸುವದು ಜನಾಧಿಕಾರ ಮೊಟಕುಗೊಳಿಸುವ ಕೇಂದ್ರೀಕೃತ ಅರ್ಥವ್ಯವಸ್ಥೆಯನ್ನು. ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶವಿರಬೇಕು. ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಪೂರೈಸಿಕೊಳ್ಳುವ ಅವಕಾಶವಿರಲೇಬೇಕು. ಇದು ಸಾಧ್ಯವಾಗುವುದು ಸಹಕಾರಿ ರಂಗದ ಜನಾಧಿಕಾರದ ವಿಕೇಂದ್ರೀಕೃತ ಅರ್ಥನೀತಿಯಿಂದ ಮಾತ್ರ. ಅಂತಹ ಆರ್ಥಿಕ ಸಿದ್ಧಾಂತವೇ ಶ್ರೀ ಪ್ರಭಾತ್ ರಂಜನ್ ಸರ್ಕಾರರಿಂದ 1959ರಲ್ಲಿ ಪ್ರತಿಪಾದಿಸಲ್ಪಟ್ಟ ಪ್ರಗತಿಶೀಲ ಉಪಯೋಗ ತತ್ವ – ಸಂಕ್ಷಿಪ್ತದಲ್ಲಿ ಪ್ರಉತ. ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯನ್ನು ಖರೀದಿ ಶಕ್ತಿಯ ಮೂಲಕ ನೀಡಲೇಬೇಕೆಂಬ ಉದ್ದೇಶವೆಂದರೆ ಪ್ರತಿಯೋರ್ವನೂ/ಳೂ ತನ್ನ ಜೀವನದ ಗುರಿಯಾದ ಪೂರ್ಣತ್ವವನ್ನು ಪಡೆಯಲು ಅವಕಾಶ ನೀಡುವದಾಗಿದೆÀಯೆಂದು ಪ್ರಉತ ಹೇಳುತ್ತಿದೆ. ಪ್ರಉತದ ಆಧಾರವೇ ಆಧ್ಯಾತ್ಮಿಕತೆ. ಪ್ರಉತವೆಂದರೆ ಬರೀ ವಿಚಾರಧಾರೆ ಅಥವಾ ಒಣ ಸಿದ್ಧಾಂತವಲ್ಲ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಸ್ಪಷ್ಟ ಚಿತ್ರಣದೊಂದಿಗೆ ಅದನ್ನು ಕಾರ್ಯಾನುಷ್ಠಾನಗೊಳಿಸುವ ವಿಧಿ, ವಿಧಾನಗಳನ್ನು ಅದು ಒಳಗೊಂಡಿದೆ. ‘ಪವಿತ್ರ ಭಾವನೆಯಿಂದ ಜ್ವಲಿಸುತ್ತಾ, ಜಗದೀಶ್ವರನಲ್ಲಿ ಅಚಲ ಶೃದ್ಧೆಯಿಂದ, ಕಲ್ಲಿನ ಕೋಟೆಯಂತೆ ದೃಢರಾಗಿ, ಶೋಷಿತರ , ಪತಿತರ, ದೀನದರಿದ್ರರ ಬಗೆಗೆ ದಯಾ ಭಾವನೆಯಿಂದ , ಸಿಂಹದಂತೆ ಧೈರ್ಯಸ್ಥರಾಗಿ ಸಾವಿರಾರು ಮಂದಿ ಸ್ತ್ರೀ ಪುರುಷರು ಸರ್ವಮೋಕ್ಷದ, ಸರ್ವ ಸಹಾಯದ ಸಿದ್ಧಾಂತವನ್ನು, ಸರ್ವೋಧ್ಧಾರದ, ಸರ್ವಸಮಾನತೆಯ ವಿಚಾರಗಳನ್ನು ಸಾರುತ್ತಾ ಈ ದೇಶದ ಉದ್ದಗಲಗಳಲ್ಲಿ ಸಂಚಾರ ಮಾಡಲಿದ್ದಾರೆ’ ಎಂಬ ವಿವೇಕಾನಂದರ ಆಶಯವನ್ನು ಸಾಕಾರಗೊಳಿಸುವ ಶಕ್ತಿ ಪ್ರಉತ ಸಿದ್ಧಾಂತಕ್ಕಿರುವುದನ್ನು ನಾನು ಮನಗೊಂಡಿದ್ದೇನೆ. ***********

ಪ್ರಸ್ತುತ Read Post »

ಇತರೆ

ಅಲೆಮಾರಿ ಬದುಕು

ಇಲ್ಲಗಳ ನಡುವಿನ ಅಲೆಮಾರಿ ಬದುಕು ಕೆ.ಶಿವು ಲಕ್ಕಣ್ಣವರ ಸ್ವಾತಂತ್ರ ‌ಭಾರತದಲ್ಲಿ ಇಲ್ಲಗಳ ನಡುವೆಯೇ ಅಲೆಮಾರಿ ಬದುಕು ಬದುಕುತ್ತಿರುವ ಬಸವಳಿದ ಜನ..! ವಾಸಿಸಲು ಮನೆ ಇಲ್ಲ, ವಿದ್ಯುತ್‌ ಇಲ್ಲ, ಕುಡಿಯಲು ನೀರಿಲ್ಲ, ಓಡಾಡಲು ರಸ್ತೆ ಇಲ್ಲ, ಇತರೆ ಸರ್ಕಾರದ ಸೌಲಭ್ಯಗಳು ಇಲ್ಲವೇ ಇಲ್ಲ. ಹೀಗೆ ಇಲ್ಲಗಳ ನಡುವೆಯೇ ಅಲೆಮಾರಿ ಕುಟುಂಬಗಳು ಬದುಕು ಸಾಗಿಸುತ್ತಿವೆ… ಊರಿನ ಹೊರ ವಲಯದಲ್ಲಿ ಬದುಕು ಸಾಗಿಸುವ ನೂರಾರು ಅಲೆಮಾರಿ ಕುಟುಂಬಗಳು ಸೇರಿದಂತೆ ಇತರೆ ಕುಟುಂಬಗಳು ವಾಸಿಸುತ್ತವೆ. ಊರೂರು ಅಲೆಯುವ ಈ ಕುಟುಂಬಗಳು ಅಲೆಮಾರಿ ಜೀವನ‌ ನಡೆಸುತ್ತವೆ… ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಹಕ್ಕಿಪಿಕ್ಕಿ, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ ಕುಟುಂಬಗಳು, ಹಾಗೂ ನಗರದಲ್ಲಿ ರಸ್ತೆ ಅಗಲಿಕರಣದ ವೇಳೆ ನಿರಾಶ್ರಿತರಾದ ದಲಿತರು, ಅಲ್ಪಸಂಖ್ಯಾತ ಸಮುದಾಯದ ಹೀಗೆಯೇ ನೂರಾರು ಕುಟುಂಬಗಳು ಈಗ ಎದುರಿಸುತ್ತಿರುವ ಸಮಸ್ಯೆಗಳು ಅವರಿಗಲ್ಲದೇ ಮತ್ಯಾರಿಗೂ ಅರ್ಥವಾಗುತ್ತಿಲ್ಲ… ದೇವರೇ ಭೂಮಿಗಿಳಿದು ಬಂದು ಸರಿ ಮಾಡಿದರೂ ಸರಿಯಾಗದಷ್ಟು ಘೋರ ಸಮಸ್ಯೆಗಳನ್ನು ಈ ಅಲೆಮಾರಿಗಳು ಎದುರಿಸುತ್ತಿದ್ದಾರೆ. ಯಾವೂರಿಂದ ಬಂದಿದ್ದಾರೋ ಇವರಿಗೂ ಗೊತ್ತಿಲ್ಲ. ಹೊಟ್ಟೆ ಪಾಡಿಗಾಗಿ ಅಲೆಯುತ್ತಾ, ಅಲೆಯುತ್ತಾ ನಗರ, ಹೀಗೆಯೇ ಗ್ರಾಮಗಳಿಗೆ ಬಂದು ನೆಲೆ ನಿಂತಿದ್ದೇವೆ ನೆಲೆ ನಿಂತಿದ್ದೇವೆ ಅನ್ನುವ ಈ ಕಡುಬಡವ ಬದುಕು ಬಾಳುತ್ತಿರುವ ಈ ಜನಾಂಗಗಳು ಬಂದಲ್ಲಿ, ಹೋದಲ್ಲಿ ಹರಕು-ಮುರುಕು ಟೆಂಟ್‌ ಹಾಕಿಕೊಂಡು ಭಯದ ವಾತಾವರಣದಲ್ಲಿ ವಾಸಿಸುತ್ತಿದ್ದೇವೆ ಎನ್ನುವುದೇ ಇವರ ಸಮುದಾಯದ ಹಿರಿಯರ‌ ಪರಿಪಾಟವಾಗಿದೆ… ಹೀಗೆಯೇ ಬದುಕುವ ಈ ಕುಟುಂಬಗಳಿಗೆ ಅವರ ಹೆಸರಿನ ಪಟ್ಟಾ ಇದೆ. ಇನ್ನೂ ಕೆಲವು ಕುಟುಂಬಗಳಿಗೆ ವಾಸಿಸುವ ನೆಲದ ಪಟ್ಟಾ ಇಲ್ಲವೇ ಇಲ್ಲಾ. ನಗರಗಳಲ್ಲಿ ವಾಸಿಸುವ ಕೆಲವರಿಗೆ ನಗರಸಭೆಯಿಂದ ವಿವಿಧ ವಸತಿ ಯೋಜನೆಯಡಿ ಮನೆಗಳು ದೊರೆತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿ ‌ವಾಸಿಸುವ ಜನರೂ ಸೇರಿದಂತೆ ಈ ಎಲ್ಲ ಸಮುದಾಯಕ್ಕೆ ಇನ್ನೂ ಸೂರಿನಭಾಗ್ಯ ಇಲ್ಲದಂತಾಗಿದೆ… ಊರೂರು ಅಲೆಯುತ್ತ ಬಂದಿರುವ ಇವರ ಪೂರ್ವಜರಾಗಲಿ ಈಗಿರುವ ಸಮುದಾಯದ ಜನರಾಗಲಿ ಯಾರೂ ಶಾಲೆಗೆ ಹೋಗಿಲ್ಲ! ಎಲ್ಲರೂ ಅವಿದ್ಯಾವಂತರೇ. ಕೆಲವೇ ಆಶ್ರಯ ಕಾಲೋನಿಯಲ್ಲಿ ತಾತ್ಕಾಲಿವಾಗಿ ನಿರ್ಮಿಸಿರುವ ಸರ್ಕಾರಿ ಟೆಂಟ್‌ ಶಾಲೆಗೆ ಹೋಗುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಶಾಲೆಯಿಂದ ದೂರವೇ ಉಳಿದಿದ್ದಾರೆ… 310 ಕುಟುಂಬಗಳು: ಸುಡುಗಾಡಸಿದ್ಧರು, ಬುಡ್ಗಜಂಗಮ್ಮ, ಸಿಂದೋಳು, ಸಿಳ್ಳೆಕ್ಯಾತ ಸೇರಿದಂತೆ ಕೊರಚರು ಸಮಾಜದ 180 ಕುಟುಂಬಗಳು ಸೇರಿದಂತೆ ದಲಿತರು, ಅಲ್ಪಸಂಖ್ಯಾತ ಸಮುದಾಯದ ಸುಮಾರು 130 ಕುಟುಂಬಗಳು ಕುಟುಂಬಗಳು ಟೆಂಟ್‌ಗಳಲ್ಲಿ ವಾಸವಾಗಿವೆ. ನಗರದ ಗುಡಿಗುಂಡಾರಗಳಲ್ಲಿ ಇರುವ ಈ ಕುಟುಂಬಗಳಿಗೆ 8 ವರ್ಷಗಳ ಹಿಂದೆ ಕೆಲವಂದಿಷ್ಟು ಅನ್ನುವುದಿಕ್ಕಿಂತ ಯಾವ ಕುಟುಂಬಗಳಿಗೂ ಪಟ್ಟಾ ದೊರೆತಿದೆ. ಇನ್ನು ಸುಮಾರು 214 ಕುಟುಂಬಗಳಿಗೆ ಪಟ್ಟಾ ದೊರೆತಿರುವುದು ಕನಸಿನ ಮಾತಾಗಿದೆ. ಪಟ್ಟಾ ದೊರೆತಿರುವ ಕೆಲ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಳ್ಳುವ ಭಾಗ್ಯವೇ ಇದುವರೆಗೂ ದೊರೆತಿಲ್ಲ… ಕೆಲವರಿಗೆ ಮನೆ ಬಂದರೂ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿವೆ ಆಶ್ರಯ ಮನೆಗಳು. ನಿಮಗೆ ಮನೆ ಬಂದಿವೆ ಎಂದು ಯಾರೋ ಹೇಳಿದ್ದರಿಂದ ಕೆಲವೇ ಈ ಜನರು ಮನೆ ಕಟ್ಟಲು ಬೇಕಾಗುವ ಹೆಂಚು, ಇಟ್ಟಿಗೆಗಳನ್ನು ತಂದಿಟ್ಟುಕೊಂಡಿದ್ದರು. ಐದು ವರ್ಷಗಳಾದರೂ ನಿವೇಶನ ಮಂಜೂರಾಗದೇ ಮನೆ ಕಟ್ಟುವ ಸಾಮಗ್ರಿಗಳು ಹಾಳಾಗಿ ಹೋದವು ಎನ್ನುತ್ತಾರೆ ಕುಟುಂಬದ ಹಿರಿಯರು… ಇದೀಗ ವಾಸಿಸುವ ಜಾಗದಲ್ಲಿ ಹಾವು, ಚೇಳು ಓಡಾಡುತ್ತವೆ. ರಸ್ತೆ, ಚರಂಡಿಗಳಿಲ್ಲ. ಯಾರೂ ಇವರಿಗೆ ಸೌಲಭ್ಯ ಒದಗಿಸಲು ಮುಂದಾಗಿಲ್ಲ. ಮುಂದಾಗುವುದೂ ಇಲ್ಲ… ಆಶ್ರಯ ಕಾಲೋನಿಯು ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕಗಳಲ್ಲಿ ವಾಸಿಸುವ ಈ ಜನರು ಹೊಸಪೇಟೆ ಹಾಗೂ ಬಳ್ಳಾರಿಗೆ ಸಂರ್ಪಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಮೈನಿಂಗ್‌ ಲಾರಿಗಳು ಹಾಗೂ ಭಾರಿ ವಾಹನದಿಂದ ಕಾಲೋನಿಯಲ್ಲಿ ಸುಮಾರು ಕೆಲವಾರು ಜನರಿಗೆ ಆಸ್ತಮ ಕಾಯಿಲೆಯಿಂದ ಬಳಲಿದರೆ, ಕೆಲವರು ಮೃತಪಟ್ಟಿದ್ದಾರೆ… ನಗರ ಸಭೆ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಈ ಜನರು ಜನ ಪ್ರತಿನಿಧಿಗಳಿಗೆ ಹೇಳಿದರೆ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಚುನಾವಣೆಯಲ್ಲಿ ಭರವಸೆ ನೀಡಿ, ನಂತರ ನಮ್ಮ ಪಾಡು ಕೇಳುವರು ಇರಲ್ಲ ಎಂದು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಈ ಜನ ಹಿಡಿಶಾಪ ಹಾಕುತ್ತಿದ್ದಾರೆ… ಅಲೆಮಾರಿಗಳ ಸ್ವತಂತ್ರ ಭಾರತದ ಬದುಕು– ಹೀಗೆಯೇ ಅಲೆಮಾರಿಗಳ ಜೀವನ ಸ್ವತಂತ್ರ ಭಾರತದ 76ಕ್ಕೂ ಹೆಚ್ಚು ವರ್ಷಗಳು ಕಳೆದರೂ, ದೇಶದಲ್ಲಿ ಇನ್ನೂ ವರೆಗೂ ಹಲವಾರು ಜಾತಿಗಳು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಶ್ಯೆಕ್ಷಣಿಕವಾಗಿ ತೀರಾ ಹಿಂದುಳಿದಿವೆ! ಅಭಿವೃದ್ಧಿ ವಂಚಿತ ಸಮಾಜದವರಿಗೆ ಮೀಸಲಾತಿ ಏನ್ನುವುದು ಕೇವಲ ಮೂಗಿನ ಮೇಲೆ ತುಪ್ಪ ಸವರಿದಂತಾಗಿದೆ… ಈ ಕಾಲಘಟ್ಟದಲ್ಲಿ ವಂಚಿತ ಸಮಾಜದ ಪರ ದ್ವನಿ ಎತ್ತುವವರನ್ನು ಗೇಲಿಮಾಡುವ ಜನರೇ ಹೆಚ್ಚು! ವಾಸ್ತವಂಶವೆಂದರೆ ನಮ್ಮ ದೇಶದಲ್ಲಿ ಇಂದಿಗೂ ಯಾರ ಲೆಕ್ಕಕ್ಕೂ ಸಿಗದ ನೂರಾರು ಅಲೆಮಾರಿ, ಬುಡಕಟ್ಟು, ಪಶುಪಾಲಕ ಈ ಸಮುದಾಯಗಳಿವೆ. ಅವರ ಪಾಲಿಗೆ ನ್ಯಾಯ, ಸರ್ಕಾರಿ ಸೌಲಭ್ಯಗಳು ಮರೀಚಿಕೆಯಾಗಿಯೇ ಉಳಿದಿವೆ… ಜಗತ್ತಿನಾದ್ಯಂತ 90 ದೇಶಗಳಲ್ಲಿ 37 ಕೋಟಿ ಮೂಲನಿವಾಸಿ, ಅಲೆಮಾರಿಗಳು ವಾಸಿಸುತ್ತಿದ್ದಾರೆ. ಸುಮಾರು 7,000 ಭಾಷೆಗಳಲ್ಲಿ ಮಾತನಾಡುವ ಇವರು, 5,000 ವಿಭಿನ್ನ, ಅನನ್ಯ ಸಂಸ್ಕೃತಿಗಳನ್ನು ಪ್ರತಿನಿಧಿಸುತ್ತಾರೆ. ನಮ್ಮರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ 51, ಪರಿಶಿಷ್ಟ ಪಂಗಡದಲ್ಲಿ 23, ಒಬಿಸಿ ಪಟ್ಟಿಯಲ್ಲಿ 46 ಅಲೆಮಾರಿ ಸಮುದಾಯಗಳಿವೆ… ಇದರಲ್ಲಿ ಸೂಕ್ಷ್ಮ ಜಾತಿಗಳು, ಅತಿಸೂಕ್ಷ್ಮ ಮೂಲ ನಿವಾಸಿಗಳು ಹಾಗೂ ಅಸ್ಮಿತೆಯೇ ಇಲ್ಲದ ಈ ಜನ ಸಮುದಾಯಗಳೂ ಸಹ ಸೇರಿವೆ… ಅಲೆಮಾರಿಗಳ ಶೋಚನಿಯ ಸ್ಥಿತಿ ನೋಡಿದಾಗ ವೈವಿಧ್ಯಮಯ ಭಾರತದ ಶ್ರೀಮಂತ ಸಂಸ್ಕೃತಿಯ ಬೇರುಗಳು ಬುಡಸಮೇತ ಕಳಚಿ ಹೋಗುತ್ತಿವೆಯೇ ಎನಿಸುತ್ತದೆ. ಗೋಂಧಳಿ, ಬುಡಬುಡಕಿ, ಗೌಳಿ, ಕಾಡುಗೊಲ್ಲ, ಶಿಕ್ಕಲಿಗಾರನಂತಹ ಅಲೆಮಾರಿಗಳು, ಕೊರಗ, ಜೇನುಕುರುಬ, ಆದಿಮ ಬುಡಕಟ್ಟುಗಳ ದುಸ್ತರ ಬದುಕೇ ಇದಕ್ಕೆ ಸಾಕ್ಷಿಯಾಗಿದೆ… ಮಾಂಗ್ ಗಾರುಡಿ, ಫಾರ್ದಿ, ಚಪ್ಪರ್‌ಬಂದ್, ಗಂಟಿಚೋರ್, ಡುಂಗ್ರಿ ಗರಾಸಿಯಾ, ಹಕ್ಕಿಪಿಕ್ಕಿ ಮುಂತಾದ ಬುಡಕಟ್ಟುಗಳು ಚಿಂತಾಜನಕ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿವೆ. ಅಲೆಮಾರಿಗಳ ಜಗತ್ತಿನ ಒಳಹೊಕ್ಕು ನೋಡದ ಹೊರತು ಈ ಸಮುದಾಯದವರ ಬವಣೆ ಅರ್ಥವಾಗದು… ಪ್ರಾದೇಶಿಕ ಮಿತಿ ಹೊಂದಿರುವ ಕಮ್ಮಾರ, ಕಣಿಯನ್, ಸಿದ್ಧಿಯಂಥ ಪರಿಶಿಷ್ಟ ಪಂಗಡಗಳು ಅಭದ್ರತೆಯ ಬದುಕು ಸವೆಸುತ್ತಿವೆ. ಉತ್ತರ ಕನ್ನಡ ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಾಸವಿರುವ ಈ ಸಿದ್ಧಿಗಳು ಎಸ್‍ಟಿ ಪಟ್ಟಿಯಲ್ಲಿದ್ದಾರೆ. ಪಕ್ಕದ ಧಾರವಾಡ, ಬೆಳಗಾವಿಯಲ್ಲಿನ ಸಿದ್ಧಿ ಕುಟುಂಬಗಳಿಗೆ ಎಸ್‍ಟಿ ಸೌಲಭ್ಯ ಸಿಗುವುದಿಲ್ಲ. ಪ್ರತ್ಯೇಕ ಜಾತಿ ಅಸ್ಮಿತೆ ಹಾಗೂ ಸಂವಿಧಾನಬದ್ಧವಾದ ವರ್ಗೀಕೃತ ಸ್ಥಾನಮಾನ ಪಡೆಯಲಾಗದ ಧನಗರ ಗೌಳಿ, ಶಿಕ್ಕಲಿಗಾರ, ಕಾಡುಗೊಲ್ಲದಂತಹ ಅತಂತ್ರ ಸಮುದಾಯಗಳೂ ಇವೆ… ಇನ್ನೂ ಗೋಂಧಳಿ, ಜೋಷಿ, ಬುಡಬುಡಕಿ ಮತ್ತು ವಾಸುದೇವ ಜಾತಿಗಳ ಜನರ ಸಮಸ್ಯೆ ಕೇಳತೀರದು! ಮೂಲತಃ ಶಿವಾಜಿ ಮಹಾರಾಜರ ಆಸ್ಥಾನದಲ್ಲಿ ಗುಪ್ತಚರರಾಗಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಈ ಸಮಾಜ, ವ್ಯೆರಿ ರಾಜರೂಗಳ ರಾಜ್ಯದಲ್ಲಿ ನಡೆಯುವ ಪ್ರತಿಯೊಂದು ಮಾಹಿತಿಯನ್ನು ಕಲೆ ಹಾಕಿ ನೇರವಾಗಿ ಶಿವಾಜಿ ಮಹಾರಾಜರಿಗೆ ಹೇಳುತ್ತಿದ್ದರು. ವ್ಯೆರಿ ರಾಜ್ಯದ ಸ್ಯೆನಿಕರಿಗೆ ಸಂಶಯ ಬರಬಾರದು ಎನ್ನುವ ಅಲೋಚನೆಯಿಂದ ದೇವರ ಹಾಡುಗಳನ್ನು ಹಾಡುತ್ತ ಅಲೆಯುತ್ತಿದ್ದರು… ಶಿವಾಜಿ ಮಹಾರಾಜರ ಸಂಸ್ಥಾನದ ಅವನತಿ ನಂತರ ಈ ಸಮಾಜದ ಜನರು ಅನಾಥರಾದರು. ಆಗಲೇ ತಮ್ಮ ಮೂಲ ಸ್ಥಾನ ಬಿಟ್ಟು ಬೇರೆ ಬೇರೆ ರಾಜ್ಯಗಳಲ್ಲಿ ಗುಡಚರ್ಯೆ ಮಾಡುತ್ತಿದ್ದವರು, ಮರಾಠಾ ಸಾಮ್ರಾಜ್ಯ ಅವನತಿ ನಂತರ ಅಲೆಮಾರಿಗಳಾಗಿ ತಮ್ಮ ಹೊಟ್ಟೆ ಪಾಡಿಗಾಗಿ ದೇವಿಯ ಆರಾಧನೆ ಮಾಡಿ ಗೋಂಧಳ ಹಾಕುವುದು, ಜ್ಯೋತಿಷ್ಯ ವೃತ್ತಿ, ಪಾತ್ರೆ ವ್ಯಾಪಾರ, ಮತ್ತು ಕೌದಿ ಹೋಲೇವುದನ್ನು ತಮ್ಮ ಕಾಯಕನ್ನಾಗಿಸಿಕೊಂಡರು… ಮಹಾರಾಷ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಸಮುದಾಯಕ್ಕೆ ಕರ್ನಾಟಕದಲ್ಲಿ ಪ್ರವರ್ಗ -1 ರ ಮೀಸಲಾತಿಯನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ನಿಜ ಅರ್ಥದಲ್ಲಿ ಅಲೆಮಾರಿಯಾದ ಈ ಸಮುದಾಯವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಅನೇಕ ಆಯೋಗಗಳು ಸರ್ಕಾರಕ್ಕೆ ತಮ್ಮ ವರದಿಗಳನ್ನು ಸಲ್ಲಿಸಿದ್ದಾರಾದರೂ ಇನ್ನೂ ಪ್ರಯೋಜನವಾಗಿಲ್ಲ… ಪಶುಪಾಲನೆ ಕಸುಬಿನ ಧನಗರ ಗೌಳಿ ಸಮುದಾಯವು ರಾಜ್ಯದಲ್ಲಿ ಗೌಳಿ, ಹಿಂದೂ ಧನಗರ, ಧನಕರ ಗೌಳಿ, ಕಾಡು ಗೌಳಿ, ಧನಗರ ಮರಾಠಿ, ಕೃಷ್ಣ ಮರಾಠಿ, ಕಚ್ಚೆ ಗೌಳಿ ಮುಂತಾದ ಹಲವು ಹೆಸರುಗಳಲ್ಲಿ ಜಾತಿ ಪ್ರಮಾಣ ಪತ್ರಗಳನ್ನು ಪಡೆಯುತ್ತಿವೆ. ಅಲ್ಲದೇ ಪ್ರವರ್ಗ 1, ಪ್ರವರ್ಗ 2, ಪ್ರವರ್ಗ 3ಬಿ ಇತ್ಯಾದಿ ಕೆಟಗರಿಗಳಲ್ಲಿ ಗುರುತಿಸಿಕೊಂಡಿವೆ. ಈ ವರ್ಗಕ್ಕೆ ಸಂವಿಧಾನಬದ್ಧವಾದ ವರ್ಗಿಕೃತ ಸ್ಥಾನಮಾನವು ಇನ್ನೂ ಇಲ್ಲದಂತಾಗಿದೆ… ಶಿಕ್ಕಲಿಗಾರ ಕೂಡ ಶಿಕ್ಕಲಿಗ, ಶಿಕ್ಲಿಗ, ಶಿಕ್ಕಲಿಗರ, ಚಿಕ್ಕಲಿಗೆರ್ ಹೆಸರುಗಳೊಂದಿಗೆ ಅಸ್ಮಿತೆಗಾಗಿ ತಡಕಾಡುತ್ತಿವೆ. ಹೀಗೆ ಹಲವಾರು ಅಲೆಮಾರಿಗಳನ್ನು ಹತ್ತಾರು ಹೆಸರುಗಳಲ್ಲಿ ಗುರುತಿಸುವುದರಿಂದ ಜಾತಿ ಪ್ರಮಾಣಪತ್ರ ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆಯುವುದೇ ಸವಾಲಾಗಿದೆ. ಇಂಥ ಸಮುದಾಯಗಳಿಗೆ ಪ್ರಬಲ ಜಾತಿಯವರೊಂದಿಗೆ ಹೋರಾಡುವ ಶಕ್ತಿಯೂ ಇಲ್ಲ. ವೋಟ್ ಬ್ಯಾಂಕ್ ಲೆಕ್ಕಾಚಾರ ಮಾಡುವ ರಾಜಕಾರಣಿಗಳಿಗೆ ಇಂಥ ಸಣ್ಣಸಮುದಾಯಗಳು ಮುಖ್ಯ ಎನಿಸುವೂದು ಇಲ್ಲ… ಹೀಗಿರುವಾಗ ಈ ಡಿಜಿಟಲ್ ಕಾಲಘಟ್ಟದಲ್ಲಿ ಭಾರತವು ನಿಜವಾಗಿಯೂ ಪ್ರಗತಿ ಕಂಡಿವೆಯೇ ಈ‌ ಜನ ಸಮುದಾಯ ಎಂಬ ಪ್ರಶ್ನೆ ಕಾಡದಿರದು… ಪ್ರಕೃತಿ ಸಹಜ ಜೀವನ ನಡೆಸುವ ಅಲೆಮಾರಿಗಳು ಮೂಲತಃ ಕಾಡಿನ ಮಕ್ಕಳು. ಆಧುನಿಕತೆಯ ಕೆನ್ನಾಲಗೆ, ಜಾಗತೀಕರಣದ ಹೊಟ್ಟೆಬಾಕತನದಲ್ಲೂ ದೇಶೀಯ ಗಟ್ಟಿತನ, ತಮ್ಮತನ ಸಾರುವ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಉಳಿಸಿಕೊಂಡಿದ್ದಾರೆ. ಪ್ರಾದೇಶಿಕ ಅಸ್ಮಿತೆಗೆಕೊಡಲಿ ಪೆಟ್ಟು ಬಿದ್ದರೆ ಅಲೆಮಾರಿಗಳಿಗೆ ಉಳಿಗಾಲವಿಲ್ಲ. ದೇಶದ ಉದ್ದಗಲಕ್ಕೂ ತಿರುಗಾಡಿ ಭಾರತದ ನಾಡಿಮಿಡಿತ ಅರಿತಿದ್ದ ಗಾಂಧೀಜಿ ಇವೆಲ್ಲವನ್ನೂ ಗಮನಿಸಿಯೇ ‘ಗ್ರಾಮ ಸ್ವರಾಜ್ಯ’ದ ಚಿಂತನೆ ಬಿತ್ತಿರಬಹುದು… ಸೆಟ್ಲಮೆಂಟ್ (ವಸಾಹತು) ಕುರಿತು ಹೇಳದಿದ್ದರೆ ಕರ್ನಾಟಕದ ಅಲೆಮಾರಿಗಳ ಚರಿತ್ರೆ ಅಪೂರ್ಣವಾಗುದು. ಇಲ್ಲಿ ಪ್ರತಿನಿತ್ಯ ಬದುಕಿ ಸಾಯುತ್ತಿರುವ ನೂರಾರು, ಸಾವಿರಾರು ಜೀವಗಳ ಬದುಕು-ಬವಣೆಗಳ ಬಂಧನವಿದೆ. ಸೆಟ್ಲಮೆಂಟ್ ಎಂಬುದು ಬ್ರಿಟಿಷರ ಒಡೆದು ಆಳುವ ನೀತಿಯ ಫಲ. ಈ ಸಮುದಾಯದವರನ್ನು ಸಮಾಜಘಾತುಕರು, ಕಳ್ಳರು, ಅಪರಾಧಿಗಳು, ದೇಶದ್ರೋಹಿಗಳು ಎಂಬ ಹಣೆಪಟ್ಟಿ ಕಟ್ಟಿ ತಂತಿಬೇಲಿಯೊಳಗೆ ಒಂದು ವ್ಯವಸ್ಥೆ ಸೃಷ್ಟಿಸಿ ಅದರೊಳಗೆ ಬ್ರಿಟಿಷರು ಬಂಧಿಸಿದರು. 1871ರಲ್ಲಿ ಹುಟ್ಟುಪಡೆದ ‘ಕ್ರಿಮಿನಲ್ ಟ್ರೈಬ್ಸ್’ ಚರಿತ್ರೆ, ಸ್ವತಂತ್ರ ಭಾರತದಲ್ಲಿ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ! ಬ್ರಿಟಿಷರು ಕೊಟ್ಟ ‘ಕ್ರಿಮಿನಲ್ಸ್’ ಎಂಬ ಲೇಬಲ್‍ನಿಂದಾಗಿ ಈ ಸಮುದಾಯದವರು ಇಂದಿಗೂ ನಮ್ಮ ನಡುವೆ ಕಳಂಕಿತರಾಗಿಯೇ ಬದುಕುತ್ತಿದ್ದಾರೆ… ಕರ್ನಾಟಕದಲ್ಲಿರುವ ಸೆಟ್ಲಮೆಂಟ್‍ಗಳಲ್ಲಿ ಹುಬ್ಬಳ್ಳಿ ಸೆಟ್ಲಮೆಂಟ್ ದೊಡ್ಡದು. ಈ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಭೋವಿ, ಹರಣ್ ಪಾದ್ರಿ, ಕಂಜರಭಾಟ್‌, ಚಪ್ಪರಬಂದ್ ಸಮುದಾಯದವರು ನೆಲೆಸಿದ್ದಾರೆ… ಗದಗ-ಬೆಟಗೇರಿಯ ಸೆಟ್ಲಮೆಂಟ್, ಈ ಸೆಟ್ಲಮೆಂಟ್‌ನಲ್ಲಿ ಕೊರಮ, ,ಚಪ್ಪರಬಂದ್, ಕಂಜರಭಾಟ್, ಪಾರ್ಧಿ ಸಮುದಾಯದವರು ಇದ್ದಾರೆ… ವಿಜಯಪುರದ ಸೆಟ್ಲಮೆಂಟ್‌ನಲ್ಲಿ ಹರಣಶಿಕಾರಿ, ಗಂಟಿಚೋರ, ಚಪ್ಪರಬಂದ್‌ ಸಮುದಾಯಗಳು ಕಂಡುಬರುತ್ತವೆ. ಕಂಜರಭಾಟ್‌, ಕೊರಮ ಮತ್ತು ಮಾಂಗ್ಗಾರುಡಿಗಳು ಮೊದಲಿಗೆ ಇಲ್ಲಿದ್ದು, ತರುವಾಯ ಬೇರೆ ಕಡೆ ಹೋಗಿ ನೆಲೆಸಿದರು… ಬಾಗಲಕೋಟೆಯ ಸೆಟ್ಲಮೆಂಟ್‌ನಲ್ಲಿ ಕೊರಮ, ಗಂಟಿಚೋರ್, ಚಪ್ಪರಬಂದ್, ಪಾರ್ಧಿಗಳು ಕಂಡುಬರುತ್ತಾರೆ… ಗೋಕಾಕ್ ಫಾಲ್ಸ್ ಸೆಟ್ಲಮೆಂಟ್‌ನಲ್ಲಿ ಕೊರಮ ಮತ್ತು ಗಂಟಿಚೋರ್ ಸಮುದಾಯಗಳಿವೆ… ದಾಂಡೇಲಿಯಲ್ಲಿ ಗಂಟಿಚೋರ್ ಸಮುದಾಯವಿದೆ. ಹಿಂದೆ ಕಂಜರಭಾಟ್ ಇದ್ದಿತ್ತೆನ್ನಲಾದರೂ, ಅವರು ಇಂದು ಸೆಟ್ಲಮೆಂಟ್ ಹೊರಗೆ ಹಳೆ ದಾಂಡೇಲಿಯಲ್ಲಿ ಕಂಜರ್ ಭಾಟ್ ಕಾಲೊನಿಯಲ್ಲಿ ನೆಲೆ ನಿಂತಿದ್ದಾರೆ… 2021ರ ವೇಳೆಗೆ ಎಲ್ಲರಿಗೂ ಸ್ವಂತ ಸೂರು ಕಲ್ಪಿಸುವುದು ಸರ್ಕಾರಗಳ ಗುರಿ. ಈ ಅಲೆಮಾರಿಗಳು ಸರ್ಕಾರದ ಲೆಕ್ಕದಲ್ಲಿದ್ದಾರೆಯೇ? ಇವರ ಬಳಿ ಯಾವುದೇ ದಾಖಲಾತಿಗಳಿಲ್ಲ, ಸ್ವಂತ ನೆಲೆಯಿಲ್ಲ, ಅಧಿಕೃತ ಪಟ್ಟಿಯಲ್ಲಿ ಸ್ಥಾನವಿಲ್ಲ, ರಾಜ್ಯದಲ್ಲಿ ನೆಲೆಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಹೀಗೆಯೇ ‘ಇಲ್ಲ’ಗಳ ನಡುವೆಯೇ ಇವರ ಬಾಳು ಕರಗುತ್ತಿದೆ. ಹೀಗಿರುವಾಗ ಎಲ್ಲಿಯ ಮನೆ? ಎಲ್ಲಿಯ ಸೌಕರ್ಯ? ಎಲ್ಲಿದೆ ಆರೋಗ್ಯ ಸೌಲಭ್ಯ? ಎಲ್ಲಿದೆ ಶಿಕ್ಷಣ…?! ಒಬ್ಬ ಅಲೆಮಾರಿ ಹಿರಿಯಜ್ಜ

ಅಲೆಮಾರಿ ಬದುಕು Read Post »

You cannot copy content of this page

Scroll to Top