ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನುಡಿ ನಮನ

ನುಡಿ ನಮನ ಹೊರಗಣ್ಣ ಮುಚ್ಚಿದರೆ ಒಳಗಣ್ಣು ತೆರೆಯುವುದು ಕಾಣುವುದು ಎಲ್ಲೆಲ್ಲು ವಿಶ್ವರೂಪ_ _ಕೆ.ಎಸ್.ನಿಸ್ಸಾರ ಒಬ್ಬ ಕವಿಯಾಗಿ,ಭಾವ ಜೀವಿಯಾಗಿ,ನಾನೆಂಬ ಪರಕೀಯರೊಳು ಒಂದಾಗಿ,ಪ್ರೇಮ ಕವಿಯಾಗಿ, ನಿತ್ಯೋತ್ಸವದ ಜೀವವಾದ ಕವಿ,ಲೇಖಕನ ಸೇವೆ ಅಗಣಿತವಾದ ಪರಿಧಿಯೋಳು ನೆಲೆನಿಲ್ಲಲು ಇವರ ಕವಿತೆಗಳೇ ಸಾಕ್ಷಿ..! ನಾಡು ನುಡಿಗೆ ಕಹಳೆಯುದಿದ ನಿಷ್ಠಾವಂತ ಯೋಧ… ** “ಕನ್ನಡವೆಂದರೆ ಬರಿ ನುಡಿಯಲ್ಲ ಹಿರಿದಿದೆ ಅದರರ್ಥ ನೀರೆಂದರೆ ಬರಿ ಜಲವಲ್ಲ ಅದು ಪಾವನತೀರ್ಥ”…. ಇಡೀ ಕರುನಾಡ ಸೊಗಡನ್ನು ಕನ್ನಡಿಗರಿಗೆ ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.ಕನ್ನಡ ನಾಡಲ್ಲಿ ಹುಟ್ಟುವುದೇ ಪುಣ್ಯ.ಇದು ಬರಿ ಗಡಿನಾಡಲ್ಲಿ ಗುರುತಿಸಿದ ನಾಡಲ್ಲ..ಕನ್ನಡಿಗರ ಉಸಿರು‌ ಬೆರೆತ ನಾಡು..ಎಂದು ನುಡಿವಲ್ಲಿ ಅವರ ಆಂತರ್ಯದ ಅಭಿಮಾನಕ್ಕೆ ಹಿಡಿದ ಕನ್ನಡಿಯಾಗಿದೆ. ನಿತ್ಯೋತ್ಸವ * *೧೯೭೮ *ರಲ್ಲಿ ಇಡೀ ನಾಡಿನಾದ್ಯಂತ ಕನ್ನಡಿಗರ ತನು ಮನದಲ್ಲಿ ಚಿರಸ್ಥಾಯಿಯಾದ ಕವಿತೆಗಳ ಗುಚ್ಛ. “ಜೋಗದ ಸಿರಿ ಬೆಳಕಿನಲ್ಲಿ,ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ,ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ”… ಈ ‌ಕವಿತೆಯ ಸಾಲುಗಳು ನಾವ್ ಪ್ರೀತಿಸುವ ಕನ್ನಡಾಂಬೆಯ ಉಸಿರು ಪ್ರತಿಯೊಬ್ಬ ಕನ್ನಡಿಗನ ನಾಡಿ ಮಿಡಿತವೆಂದರೆ ತಪ್ಪಾಗಲಾದು. ಪ್ರೇಮಕವಿಯ ಅಂತರಂಗದಾ ಸೆಳೆತಗಳು* ನೆನೆದೆ ನೆನೆಯುವೆ. “ಕಂಡ ಸಾವಿರ ಅನ್ಯ ಮೊಗದ ಭಂಗಿಗಳಲ್ಲಿ ನನ್ನ ದೈನ್ಯವ ನೊಂದು ಹೋಲಿಸಿದಾಗ ಕಣ್ಣಂಚ ಹೆದೆಯಲ್ಲಿಬಿಗಿಗೊಂಡ ನೋವೊಂದು ನೇರ ನಿನ್ನೆದೆಯತ್ತ ತೂರಿದಾಗ”. ಎಂಬ ಭಾವ ಕವಿಯ ಮನಸ್ಸಿಗಾದ ಗಾಯವನ್ನು ಸುಲಭವಾಗಿ ಅರ್ಥೈಸುವಂತೆ ನನ್ನ ನೆನಪು ಛಾಯೆಯಂತೆ ನಿನ್ನೆದುರಿಗೆ ನಿಲ್ಲುವಾಗ ನೆನೆಯದೆ ಇರಲಾರೆಯೆಂಬ ಸತ್ಯ ಪ್ರೇಮದ ಸ್ವರೂಪವಾಗಿದೆ. ** ನಾ ನಿನ್ನ ಕಂಡಾಗ… ನಾ ನಿನ್ನ ಕಂಡಾಗ ಎಷ್ಟೊಂದು ನಲಿವಿತ್ತು ಎಷ್ಟೊಂದು ಗೆಲುವಿತ್ತು,ಅಷ್ಟೊಂದು ನಗುವಿತ್ತು ಹಗಲೆಲ್ಲ ನಿನ್ನ ಧ್ಯಾನ,ಇರುಳೆಲ್ಲ ನಿನ್ನ ಸ್ವಪ್ನ ನೀ ನಡೆವ ದಾರಿಯಲ್ಲಿ ಅನುದಿನವು ನನ್ನ ಪಯಣ ನೀ ಸುಳಿದರೆನ್ನ ಬಳಿಗೆ ನೆರೆ ಬಂದ ಹಾಗೆ ಹೊಳೆಗೆ ನನ್ನೆದೆಯ ತೋಟದಲ್ಲಿ ಆಡಾಡು ಓ ನವಿಲೇ.. ನೆನೆದಾಗ ನಿನ್ನ ರೂಪ ಎದೆಗತ್ತಲಲ್ಲಿ ದೀಪ…! ” ಕವಿಯ ಸುಕೋಮಲ ಹೃದಯ ಪ್ರೇಮವೆಂಬ ಆಕಾಶದಲ್ಲಿ ಪ್ರೇಯಸಿಯ ನೆನೆದು ಅಗೋಚರ ಪ್ರೀತಿಯ ಸುಧೆಯ ಹರಿಸಿ ಆರಾಧಿಸುವ ಕಲೆ ಒಬ್ಬ ಪ್ರೇಮಿಗೆ ಮಾತ್ರ ದೇವರು ಕೊಟ್ಟ ವರವೆಂದರೆ ವಿಶೇಷವೆನಿಲ್ಲ..ಆ ಪ್ರೇಮಿ ಕವಿ ನಿಸ್ಸಾರರು. ** ನೆನಪು ಕವಿತೆ ನಿನ್ನ ನಗೆಗಳ ಜಾಹಿರಾತಿಗೊಲವಿನ ಅರ್ಜಿ ಗುಜರಾಯಿಸುತ ಪ್ರತಿಸಲವು ಉತ್ತರಕೆ ತತ್ತರಿಸಿ ಮುಖಭಂಗವಾಗಿರುವ ಹಣೆಬರಹ ಚಿತ್ತದ ‘ನಿರ್ಭಾಗ್ಯ’ ನಿನ್ನಾಸೆಗೆಳ್ಳುನೀರನು ಬಿಟ್ಡು ವರ್ಷಗಳ ಕಳೆದಿವೆ ಚಿಹ್ನೆಗಳು ಉಳಿದಿವೆ ನನ್ನೆದೆಯ ಹಸುರಲ್ಲಿ… ” ಹಿಂದಿನಪಘಾತಕ್ಕೆ ಎಚ್ಚರಿಕೆ ಕೆತ್ತಿಹುದು ನಿನ್ನತ್ತ ಧಾವಿಸುವ ಭಾವಗಳು ಸತ್ತಿಹವು…….. ಪ್ರೇಮದ ಕರಿನೆರಳಿಗೆ ಆಘಾತವಾದ ಮನಸು ಚೇತರಿಸಿಕೊಂಡು ಬದುಕ ಕಟ್ಡಿದರು,ಪ್ರೇಮದ ಅಲೆಯಲಿ ನೋವ ಮರೆತು,ಮತ್ತೆ ಮರಳಲಾರದ ಸ್ಥಿತಿ ಪ್ರತಿಯೊಬ್ಬನದೆಂಬಂತೆ ನೆನಪ ಹಂಚಿರುವುದು.ನೊಂದವರಿಗೆ ಮಾದರಿ. ** ಬೇಸರವಾಗಿದೆ ಮಾತು ಕವಿತೆಯಂತು…… ಭಾರವಾಗಿದೆ ಮೌನ ನೋವು ಕರಗಿದ ಕಣ್ಣಲಿ ಅಡಿಗೆ ಚುಚ್ಚಿದ ಮುಳ್ಳು ಒಳಗಡೆ ಮುರಿದಂತೆ ಭಾವ ಕುಟಿಕಿದೆ ಮನದಲಿ ಮುರಿದ ಪ್ರೀತಿಯ ಮರೆಯೇ ಬಾಳಿನೊಳ ಹೊಕ್ಕಿರಲು ಸಾವ…ಭಯ ತಾನೆರಗಿತೋ ಯಾವ ಗವಿ ಗತ್ತಲಿನಲಿ ಮೌನಭಾರವ ಕನಸಿ‌ ಇದ್ದ ಹಕ್ಕೆಯ ಬಿಟ್ಟಿತೋ…. ಹೃದಯದಲಡಗಿದ ಪ್ರೀತಿ ಕಮರಿ ಕಣ್ಮರೆಯಾದ ಗಳಿಗೆಗಳು ಪುನಃ ಬೇರುರದೇ.ನಶಿಸುವ ಕ್ಷಣಗಳ ಕವಿಯು ಅನುಭವಿಸದೇ ಹೇಳಲಾರನೆಂಬುದಕೆ ಸಾಕ್ಷಿ… ನಿನ್ನ ಮೈತ್ರಿ..ಕವನದ ಸಾಲುಗಳು ಅತ್ಯದ್ಭುತ. ನಿನ್ನೆದೆಯ ಗೆದ್ದಿರುವ ಹೆಮ್ಮೆಯಿಂದೆಷ್ಟೋಸಲ ಎನಿಸುವುದು,ನನಗಿಂತ ಇಲ್ಲ ಧನ್ಯ.ನನಾ ಪಾತ್ರನೋ ಏನೋ ನಿನ್ನಮಲ ಪ್ರೇಮಕ್ಕೆ,ನನಗಂತೂ ದಕ್ಕಿಹುದು ಜೀವದಾನ. ಬಾಳ ದುರ್ಗಮ ಪಥದ ಪಾದಯಾತ್ರೆ ಚಿರರಕ್ಷೆಯಾಗಿರಲಿ ನಿನ್ನ ಮೈತ್ರಿ…… ಕವಿ ನಿಸ್ಸಾರರ ಅಭೂತಪೂರ್ವ ಕವಿತೆಗಳಲ್ಲಿ ಒಂದಾದ ಕವಿತೆ… ಎಲ್ಲ ಮರೆತಿರುವಾಗ ಇಲ್ಲಸಲ್ಲದ ನೆವವ ಹೂಡಿ ಬರದಿರು ಮತ್ತೆ ಹಳೆಯ ನೆನಪೆ…..ಕವಿಯೆಯಂತೂ ಇಹಪರ ಚಿಂತನೆಗೆ ಒರೆಹಚ್ಚದಿರಲಾರದು. ** ಇನ್ನೊಂದು ಕವನ “ಮತ್ತದೇ ಬೇಸರ”… ಕವಿತೆ ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ ಆಸೆಗಳ ಹಿಂಡಿನ ತುಳಿತಕ್ಕೆ ಹೋಲನನ್ನೀದೇಹ ಬರುವೆಯೇ,ಬಾರೆಯೇ ನೀ ನೆನಿಸುತಿದೆ ಹಾ.ಸಂದೇಹ.. *ಕವಿ ಬರೆದ ಕವಿತೆ…. ಕವಿ ಬರೆದ ಲೆಕ್ಕಣಿಕೆಯಲ್ಲಿ ತನ್ನ ಎದೆಯನ್ನೆ ಇರಿದಿರಿದು ಆಂತರ್ಯ ಸಂಚಯಿತ ಬಾಧೆಯನೇ ಸುರಿದೆರೆದು.. ಬರೆದಾಗ ಪ್ರೇಮದ ಕುಣಿಕೆ ಆಂತರ್ಯದಲಿ ಚಿಗುರೊಡೆದಿದ್ದು ಆಶ್ಚರ್ಯವೇ… ** ರೂಪ ಕವಿತೆ….ಅಮೂರ್ತದಿಂದ ಮೂರ್ತದೆಡೆಗೆ… ಕವಿತೆಯಲ್ಲಂತೂ ಕವಿಯ ತುಮುಲಗಳು,ತುಡಿತಗಳು, ಮೇಳೈಸಿದಂತೆ ” ಮತ್ತೆ ಆ ರೂಪ ಎದೆಗೆ ಹಾಯುತಿದೆ ಚಿತ್ತ ಸಂತಾಪದಲ್ಲಿ ಬೇಯುತಿದೆ. ಎಂದೋ ಹುಗಿದಂಥ ನೆನಹ ಕೆದಕುತಿದೆ ಮೌನದುತ್ತಾಪದಲ್ಲಿ ಹೊಗೆಯಿತಿದೆ ಇದ್ದಕ್ಕಿದ್ದಂತೆ ಹೃದಯ ಹೌಹಾರಿ ಸದ್ದೆ ಇರದಂತೆ ರೋಧಿಸಿದೆ ಬೇಲಿ ಇಲ್ಲಮೆಯ ಭಾವ ಮುಸುಕಿ ಮಿಡುಕುತಿದೆ ಜೀವ ಏನನ್ನೋ ಬೇಡಿ ದುಡುಕುತಿದೆ ….ಮತ್ತೆ ಆ ರೂಪ.! ಹೇಳುತ್ತಾ ಹೊರಟರೆ ಕವಿಯ ಮನವರಳುತ್ತಾ ಸಾಗುವುದು.ಕಾರಣ ಕನ್ನಡ ನಾಡಿನ ಅಪರೂಪದ ರತ್ನ..ಜಾತಿ ಮತ ಧರ್ಮ ಭೇದಗಳ ಮೆಟ್ಟಿನಿಂತು. ಸಾಗಿದ ಬದುಕು ದಿಗಂತದಂತೆ ಅನಂತ. ಕವಿಯೇ ಹೇಳುವಂತೆ… ಸಂಜೆ ಐದರಮಳೆ ಕವನ ಸಂಕಲನದೊಂದು ಕವಿತೆ… “ನಿಮ್ಮೊಡನಿದ್ದೂ ನಿಮ್ಮಂತಾಗದ ಜಗ್ಗಿದ ಕಡೆ ಬಾಗದೇ ನಾನು ನಾನೆ ಆಗಿ ಈ ನೆಲದಲ್ಲೆ ಬೇರೂತ್ತಿದ್ದರು ಬೀಗಿ ಪರಕೀಯವಾಗಿ ತಲೆಯೆತ್ತುವುದೆದೆ ನೋಡಿ ಅದು ಬಲು ಕಷ್ಟದ ಕೆಲಸ………..ವೆಂದು ನುಡಿಯುವಾಗ ಕವಿಯ ಅಂತರಾತ್ಮ ಎಷ್ಟೊಂದು ಮರುಗಿರಬಹುದು.. ಕವಿಯೆಲ್ಲವನ್ನು ಮೀರಿ ತನ್ನಾತ್ಮದೊಳು ನೆಲೆನಿಂತು ಸಾಗಿ ಮನೆಮನಗಳಲ್ಲಿ ಮನೆಮಾತಾಗಿರುವ ಅಚ್ಚ ಕನ್ನಡಿಗ ನಮ್ಮ ಮೆಚ್ಚಿನ ಕವಿ ನಿತ್ಯೋತ್ಸವದ ಹರಿಕಾರ….ಕೆ.ಎಸ್.ಎನ್…….ಇಂದು ನೆನಪಿನ ಬಿತ್ತಿಯೋಳು ಮಿನುಗುವ ನಕ್ಷತ್ರ. “ನಾದವಿರದ ಬದುಕು ಇದ್ದು ಸತ್ತಂತೆ ಎಂದು ಸಾರುತ್ತಾ”……ಬದುಕಿರುವಷ್ಟು ಗಳಿಗೆ ನಾಡು.ನುಡಿಗೆ ಮಿಸಲಿಟ್ಟು………..” ಬಿಸುಸುಯ್ಯುವ ಹಂಬಲವೋ ಶುಭ ಸಮ್ಮಿಲನದ ಕಾತರವೋ ಬಾ ಇನಿಯ,ಕರೆವ ನೊಂದು ಬರದೆ ಹೋದೆ ನೀನು,ಮರೆತು ಹೋದೆ ನೀನು.” ನೋವಿನಧಾರೆಯ ನಮ್ಮೊಡಲಿಗಿಟ್ಟು ಮತ್ತದೇ ಬೇಸರದ ನಾದವಾಗಿ ಮರೆಯಾದ ಪ್ರೇಮ ಕವಿಗೆ ಕೋಟಿಕೋಟಿ ನಮನಗಳು. ************************** ಶಿವಲೀಲಾ ಹುಣಸಗಿ

ನುಡಿ ನಮನ Read Post »

ಇತರೆ

ನಿತ್ಯೋತ್ಸವದ ಕವಿಗೆ ನಮನ

ನಿತ್ಯೋತ್ಸವದ ಕವಿಗೆ ನಮನ ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣವನದ ತೇಗ ಗಂಧ ತರುಗಳಲ್ಲಿ ನಿತ್ಯೋತ್ಸವ ತಾಯಿ ನಿತ್ಯೋತ್ಸವ ನಿನಗೆ ನಿತ್ಯೋತ್ಸವ ತಾಯಿ ನಿತ್ಯೋತ್ಸವ…. ಈ ಹಾಡು ಕೇಳದವರಾರು, ಈ ಹಾಡು ಹಾಡದವರಾರು.ಕನ್ನಡಮ್ಮನಿಗೆ ನಿತ್ಯೋತ್ಸವದ ಹಾಡು ಬರೆದು ಕನ್ನಡದ ಹಿರಿಮೆ ಹೆಚ್ಚಿಸಿದ ಕವಿ ನಿಸಾರ್ ಅಹಮದ್ ಅವರು ನಮ್ಮನ್ನು ಅಗಲಿದ್ದು ಸಾರಸ್ವತ ಲೋಕಕ್ಕೆ ಅಪಾರ ನಷ್ಟವಾಗಿದೆ. ಪ್ರೊ. ನಿಸಾರ್ ಅಹಮದ್ ಎಂದೇ ಖ್ಯಾತರಾದ ಕೊಕ್ಕೆರೆ ಹೊಸಳ್ಳಿ ಹೈದರ ನಿಸಾರ್ ಅಹಮದ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯಲ್ಲಿ ಫೆಬ್ರವರಿ 5, 1936ರಂದು ಜನಿಸಿದರು. 1959ರಲ್ಲಿ ಭೂ ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರು. ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತ ಸಾಹಿತ್ಯ ಕೃಷಿ ಆರಂಭಿಸಿದರು. ನಿಸಾರ್ ಅಹಮದ್ ಸುಮಾರು 25 ಕೃತಿಗಳನ್ನು ರಚಿಸಿದ್ದು, ನಿತ್ಯೋತ್ಸವ ಹಾಗೂ ಗಾಂಧಿ ಬಜಾರ್ ಇವರ ಪ್ರಸಿದ್ಧ ಕವನ ಸಂಕಲನಗಳು. ಅಲ್ಲದೇ ಕನ್ನಡದಲ್ಲಿ ಪ್ರಥಮ ಬಾರಿಗೆ ಭಾವಗೀತೆ ಕ್ಯಾಸೆಟ್ ತಂದ ಕೀರ್ತಿ ಕೂಡಾ ಇವರಿಗೆ ಸಲ್ಲುತ್ತದೆ. ರಾಜಕಾರಣಿಗಳನ್ನು ಕುರಿತು ಬರೆದ ಕವಿತೆ ಕುರಿಗಳು ಸಾರ್ ಕುರಿಗಳು ವಿಡಂಬನಾತ್ಮಕ ಗೀತೆಯಾಗಿ ಪ್ರಸಿದ್ಧಿಯಾಗಿ ನಿಸಾರ್ ಅಹಮದ್ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಕವಿತೆ. “ಕೃಷ್ಣನ ತುಂಟತನವನ್ನು ವರ್ಣಿಸುವ ಬೆಣ್ಣೆ ಕದ್ದ ನಮ್ಮ ಕೃಷ್ಣ ಬೆಣ್ಣೆ ಕದ್ದ ನಮ್ಮ, ಬೆಣ್ಣೆ ಕದ್ದು ಜಾರುತ ಬಿದ್ದು “ಈ ಹಾಡಿಗೆ ಮರುಳಾಗದವರಾರು. “ನಾಡದೇವಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ, ಒಂದೆದೆಯ ಹಾಲ ಕುಡಿದವರ ನಡುವೆ ಎಷ್ಟೊಂದು ಭೇದ ತಾಯಿ “ಎಂದು ಅಸಮಾನತೆ ವಿರುದ್ದ ಬರೆದ, ಕುರಿಗಳು ಸಾರ್ ಎಂದು ವ್ಯವಸ್ಥೆಯ ಬಗ್ಗೆ ವ್ಯಂಗ್ಯವಾಡಿದ ಜೋಗದ ಸಿರಿಯ ಕವಿ ಕೆ ಎಸ್ ನಿಸಾರ್ ಅಹಮದ್ ಈ ನಾಡಿನ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿರುವ ಕವಿ. ಕನ್ನಡಾಂಬೆಯ ತೇರು ಎಳೆದಿರುವ, ಎಳೆಯುತ್ತಾ ಇರುವ ನನ್ನ ಅಚ್ಚುಮೆಚ್ಚಿನ ಅನೇಕ ಕವಿಗಳಲ್ಲಿ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಕೂಡ ಒಬ್ಬರು. “ಎಲ್ಲಾ ಮರೆತಿರುವಾಗ ಇಲ್ಲಾ ಸಲ್ಲದ ನೆವವಾ ಹೂಡಿ ಬರದಿರು ಮತ್ತೆ ಹಳೆಯ ನೆನಪೇ “ಈ ಕವಿತೆ ನಾನು ಸದಾ ಗುನುಗುನಿಸುತ್ತಿದ್ದ ಅಚ್ಚುಮೆಚ್ಚಿನ ಭಾವಗೀತೆ ಯಾಗಿತ್ತು. ಗಾಂಧಿಬಜಾರು ಮತ್ತು ನಿತ್ಯೋತ್ಸವ ನಿಸಾರ್ ಅಹಮದ್ ಅವರಿಗೆ ಅತಿ ದೊಡ್ಡ ಹೆಸರು ತಂದುಕೊಟ್ಟವು. ನಿತ್ಯೋತ್ಸವ ಗೀತೆ ಕನ್ನಡ ನಾಡಿನಲ್ಲಿ ತನ್ನದೆ ಹೊಸ ಸಂಗೀತ ಮತ್ತು ಸಾಹಿತ್ಯ ಲೋಕ ಸೃಷ್ಟಿಗೆ ಕಾರಣವಾಯಿತು.ಅದರಲ್ಲಿದ್ದ ಅಷ್ಟೂ ಹಾಡುಗಳೂ ಜನರಿಗೆ ಅತ್ಯಂತ ಇಷ್ಟವಾದ ಹಾಡುಗಳಾಗಿದ್ದವು.ಇವತ್ತಿಗೂ ಅಷ್ಟೇ ಜನಪ್ರಿಯತೆ ಉಳಿಸಿಕೊಂಡಿವೆ.ಸುಗಮ ಕ್ಷೇತ್ರದಲ್ಲಿ ಇವತ್ತಿಗೂ ಜನ ಆಸಕ್ತಿ ಮತ್ತು ಇಷ್ಟ ಪಟ್ಟು ಕೇಳುವ ಬಹುಪಾಲು ಗೀತೆಗಳಲ್ಲಿ ನಿಸಾರ್ ಅಹಮದ್ ಅವರ ಕವನಗಳ ಪಾಲು ಬಹುದೊಡ್ಡದು . ಇವರಿಗೂ ಸುಗಮ ಸಂಗೀತ ಕ್ಷೇತ್ರಕ್ಕೂ ಬಿಡಸಲಾರದ ನಂಟು.  ನಿಸಾರ್ ಕವನಗಳನ್ನು ಆಧರಿಸಿದ ಅನೇಕ ಆಲ್ಬಂಗಳು ಸದಭಿರುಚಿಯ ಹೊಸ ಕೇಳುಗ ಲೋಕ ಸೃಷ್ಟಿಗೆ ಕಾರಣವಾಯಿತು . ಸಂವೇದನೆ, ವಿಡಂಬನೆ, ತಿಳಿಹಾಸ್ಯ ನಿಸಾರ್ ಅಹಮದ್ ಅವರ ವಿಶೇಷತೆ. ಚಿಂತನೆ, ಜಾಗೃತಿ, ಮತ್ತು ವೈಚಾರಿಕತೆ ಇವರ ರಚನೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ರಾಮನ್ ಸತ್ತ ಸುದ್ದಿ’. ಇದು ಕವಿ ಕೆ.ಎಸ್.ನಿಸಾರ್ ಅಹಮದ್ ಅವರ ಅತ್ಯಂತ ಪ್ರಸಿದ್ಧ ಕವನಗಳಲ್ಲೊಂದು. ತಾವು ಬರೆದ ಕವನಗಳ ಪೈಕಿ ತಮಗೆ ಎಲ್ಲಕ್ಕಿಂತ ಹೆಚ್ಚು ಇಷ್ಟವಾದ ಕವನ ಇದೆಂದು ಸ್ವಯಂ ನಿಸಾರರೇ ಹೇಳಿದ್ದಾರೆ. . ನಿತ್ಯೋತ್ಸವ ಕವಿಯೆಂದೇ ಮನೆಮಾತಾಗಿದ್ದ, ನಿಸಾರ್ ಅಹಮದ್ ಅವರು, ಸಾಹಿತ್ಯೋತ್ಸವ ನಿಲ್ಲಿಸಿದರು ಅನ್ನೋ ಸುದ್ದಿ ನಿಜಕ್ಕೂ ಆಘಾತಕಾರಿ ವಿಷಯ.ನಾಡು ನುಡಿಯ ಪ್ರಿಯರಾದ ನಿಸಾರ್ ಅಹಮದ್ ಎಂದರೆ ಎಲ್ಲರಿಗೂಅಚ್ಚುಮೆಚ್ಚು. ಅದ್ಬುತ ವ್ಯಕ್ತಿತ್ವದ ಅಪರೂಪದ ಕವಿ ಶ್ರೀ ನಿಸಾರ್ ಅಹಮದ್ ರವರು.ಅವರ ಅಗಲುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ . ನಿತ್ಯೋತ್ಸವದ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ ********** ಶೈಲಜ ಹಾಸನ

ನಿತ್ಯೋತ್ಸವದ ಕವಿಗೆ ನಮನ Read Post »

ಇತರೆ

ಹೆಣ್ಣು ಬದುಕಿನ ಘನತೆ

  ಹೆಣ್ಣು ಬದುಕಿನ ಘನತೆ ವಸುಂಧರಾ ಕದಲೂರು. ವಸುಂಧರಾ ಕದಲೂರು. ಒಪ್ಪಿಗೆ ಇಲ್ಲದೇ ಮಹಿಳೆ ಮೈ ಮುಟ್ಟುವಂತಿಲ್ಲ ( ದೆಹಲಿ ನ್ಯಾಯಾಲಯ ತೀರ್ಪು 22-1-2018) ‘ಅರೆ.., ಹೆಣ್ಣಿನ ಮೈ ಮುಟ್ಟಲು, ಆಕೆಯ ಒಪ್ಪಿಗೆಯ ಅಗತ್ಯವಿದೆಯಾ’ ಎಂದು ಕುಹಕವಾಡುವ ಮಂದಿಯ ನಡುವಲ್ಲೇ ‘ಇದನ್ನೂ ಸಹ ನ್ಯಾಯಾಲಯವೇ ಹೇಳಿಕೊಡಬೇಕೆ ಅಷ್ಟೂ ಸೂಕ್ಷ್ಮ ಅರ್ಥವಾಗದೇ’ ಎಂದು ನೊಂದುಕೊಳ್ಳುವ ಮನಸ್ಸುಗಳು ಎಷ್ಟಿವೆಯೋ..      ಏನೆಲ್ಲಾ ಸಾಧಸಿ ಸೈ ಎನಿಸಿಕೊಂಡರೂ ಈ ಕ್ಷಣಕ್ಕೂ  ಹೆಣ್ಣುಮಗುವಾಗಿ  ಹುಟ್ಟುವ ಹಕ್ಕಿನಿಂದ ವಂಚಿತವಾಗಿ ಗರ್ಭ ಸೀಳಿಸಿಕೊಂಡು ಹೊರಬಂದು ಮಣ್ಣಾಗುತ್ತಿರುವ ಹೆಣ್ಣು ಭ್ರೂಣಗಳೆಷ್ಟೋ! ಸರ್ವೆ ಮಾಡಿ ಒಂದಷ್ಟು ಮಾಹಿತಿ ಕಲೆ ಹಾಕಬಹುದು. ಆದರೆ ಅದು ನಿಖರ ಸತ್ಯವಾಗಿರದು. ಬೆಳಕಿಗೆ ಬಾರದ, ವರದಿಯಾಗದ ಅದೆಷ್ಟು ಹೆಣ್ಣು ಭ್ರೂಣ ಹತ್ಯೆ ದಿನಂಪ್ರತಿ ನಡೆಯುತ್ತಿಲ್ಲ? ಹಾಗೋ ಹೀಗೋ ಹೆಣ್ಣಾಗಿ ಹುಟ್ಟಿದ ಮೇಲೂ ವಿದ್ಯೆ, ಉದ್ಯೋಗದ ಅವಕಾಶ ನಿರಾಕರಣೆಯಾಗಿಲ್ಲ? ಮದುವೆ, ಬಸಿರು, ಹೆರುವುದು ಮೊದಲಾದವು ಇಂದಿಗೂ ಆಕೆಯ ಆಯ್ಕೆಯ ಪರಿಧಿಯೊಳಗೆ ಬರುವುದಿಲ್ಲ ಎಂಬುದು ಗುಟ್ಟೇನಲ್ಲಾ.      ಭ್ರೂಣ ಹತ್ಯೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಲೈಂಗಿಕ ಶೋಷಣೆ ಮೊದಲಾದವು ಯಾರೋ ನಿರಕ್ಷರಿಗಳ ಮನೆಯಲ್ಲೋ, ಬಡಕುಟುಂಬಗಳಲ್ಲೋ ನಡೆದುಬಿಡುವ ಸಾಮಾನ್ಯ ವಿದ್ಯಮಾನಗಳೆನ್ನುವುದು ಖಂಡಿತಾ ತಪ್ಪು. ಸ್ತ್ರೀ ಸಮಸ್ಯೆಗಳು ಲಿಂಗಾಧಾರಿತವಷ್ಟೇ. ಇದರಲ್ಲಿ ಜಾತಿ, ಕುಲ, ಶ್ರೀಮಂತಿಕೆ, ಸ್ಥರ, ಅಧಿಕಾರಸ್ಥಾನ ಎಲ್ಲವೂ ನಗಣ್ಯವಾಗುತ್ತವೆ.        ಮರ್ಯಾದಾ ಹತ್ಯೆಗಳು, ಸಣ್ಣ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ಬಹಳ ಬೇಗ ಮದುವೆ, ಓದನ್ನು ನಿರಾಕರಿಸುವುದು ಅಥವಾ ಮೊಟಕುಗೊಳಿಸುವುದು, ಉದ್ಯೋಗದ ನಿರಾಕರಣೆ, ಭ್ರೂಣಲಿಂಗಪತ್ತೆ ಮಾಡಿಸುವುದು, ಗಂಡು ಸಂತಾನಕ್ಕಾಗಿಯೇ ಮೂರೋ ನಾಕೋ ಹಡೆಯುವಂತೆ ಮಾಡುವುದು, ವೇಶ್ಯಾವಾಟಿಕೆ, ಆಸ್ತಿ ಹಕ್ಕಿನ ನಿರಾಕರಣೆ…. ಹೇಳುತ್ತಾ ಹೊರಟರೆ ಶೋಷಣೆಯ ಹಲವು ರೂಪಗಳು ಅನಾವರಣಗೊಳ್ಳುತ್ತಲೇ ಹೋಗುತ್ತವೆ.      ನಿಜಕ್ಕೂ ತನ್ನ  ಕೆಲಸದ ಸ್ಥಳದಲ್ಲಿ, ಅಕ್ಷರಿಗಳ ಎಡೆಯಲ್ಲಿ, ಬಡತನದ ನರಳಾಟವೋ, ಶ್ರೀಮಂತಿಕೆಯ ಡೌಲಿನ ನೆರಳೋ ಒಟ್ಟಿನಲ್ಲಿ ಸ್ತ್ರೀ ಮುಜುಗರಕ್ಕೆ ಒಳಗಾಗಿ ಅಭದ್ರತೆಯಿಂದ ನಲುಗುತ್ತಿರುವುದು ಇಂದು ಹೆಚ್ಚುಹೆಚ್ಚು ಬೆಳಕಿಗೆ ಬರುತ್ತಿದೆ. ಎಲ್ಲಾ ಪ್ರಕರಣಗಳು ಅಲ್ಲದಿದ್ದರೂ ಬಹಳಷ್ಟು ಹೊರಜಗತ್ತಿಗೆ ಗೊತ್ತಾಗುತ್ತಿವೆ. .   ಇನ್ನು ಸ್ತ್ರೀ ಶೋಷಣೆಯ ವಿರುದ್ಧ ದನಿ ಎತ್ತಿದರೆ ಸಾಕು ಅವಳಿಗೆ ‘ಮಹಿಳಾವಾದಿ’ ಎಂಬ ಪಟ್ಟ ಕಟ್ಟಲಾಗುತ್ತದೆ ಅಥವಾ ಆಕೆ ‘ಪುರುಷದ್ವೇಷಿ’ ಎಂದು ಬಿಂಬಿಸಲಾಗುತ್ತದೆ. ಹಾಗಾದರೆ  ಮಹಿಳೆಯಾಗಿ ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ? ಹಾಗೇನಾದರು ಆಕೆ ನಿರಂತರವಾಗಿ ಸ್ತ್ರೀ ಶೋಷಣೆಯ ವಿರುದ್ಧ ಮಾತನಾಡಿದರೆ ಆಕೆಗೆ ಬೇರೆ ವಿಚಾರಗಳ ಬಗ್ಗೆ ಮಾತನಾಡಲು ಬರುವುದಿಲ್ಲ. ಆಕೆ ನಾಲಾಯಕ್ ಎಂದು ನಿರ್ಧರಿಸಿಬಿಡುವ ಸ್ಥಬ್ಧ ಮನಸ್ಥಿತಿಯವರಿದ  ಹಾಗೆಯೇ ಸ್ತ್ರೀಯೊಬ್ಬಳು ತನ್ನ ಪರಿಸರದಲ್ಲಾಗುತ್ತಿರುವ  ಅನ್ಯಾಯಗಳ ವಿರುದ್ಧ ಕಿಂಚಿತ್ ಪ್ರತಿಭಟನೆ ತೋರಿದರೆ ಅಥವಾ ತನ್ನ ನಿಲವುಗಳನ್ನು ಖಚಿತವಾಗಿ ಸ್ಪಷ್ಟಪಡಿಸಿದರೆ, ನಾಳಿನ ಔದ್ಯೋಗಿಕ ಸವಾಲುಗಳನ್ನು ನಿಭಾಯಿಸಲು ಆಕೆಗೆ ಅವಕಾಶಗಳನ್ನು ನಿರಾಕರಿಸುವ ಹುನ್ನಾರಗಳನ್ನು ಮಾಡಲಾಗುತ್ತದೆ. ಷಡ್ಯಂತ್ರ ರಚಿಸಿ ಆಕೆಯ ವ್ಯಕ್ತಿತ್ವಕ್ಕೆ ಚ್ಯುತಿತರುವ ಕೆಲಸ ಮಾಡುತ್ತಾರೆ. ಆಕೆ ಧೈರ್ಯವಂತೆಯೂ ಗಟ್ಟಿಗಿತ್ತಿಯೂ ಆಗಿದ್ದರೆ, ಆಕೆಯ  ಕೌಟುಂಬಿಕ ಸಾಮರಸ್ಯ  ಹದಗೆಡಿಸುವ ಮಸಲತ್ತುಗಳನ್ನು ಹೊಸೆಯಲಾಗುತ್ತದೆ.       ಹಾಗಾದರೆ ಮಹಿಳೆಯರ ಕುರಿತು  ಮಾತನಾಡುವುದು ತಪ್ಪೇ?      ಮಹಿಳೆಯರ ಕುರಿತು ಮಾತನಾಡುವುದು ತಪ್ಪೇ..? ಈ ಪ್ರಶ್ನೆ ಉತ್ತರ ಸಿಗುವುದಿರಲಿ, ಇಷ್ಟಕ್ಕೂ ಮಹಿಳೆ ಏಕೆ ಮಾತನಾಡಬೇಕು.!? ಹೇಳಿದಷ್ಟು ಮಾಡಿಕೊಂಡಿದ್ದರೆ ಸಾಕು ಎನ್ನುವ ಅಭಿಪ್ರಾಯಕ್ಕೇ ಹೆಚ್ಚು ಓಟು ಹಾಕುತ್ತಾರೆ.          ಈ ನೆಲದ ಸಂಸ್ಕೃತಿ ಹಾಗೂ ಆಚರಣೆಗಳು ಬಹಳ ವಿಭಿನ್ನವಾಗಿವೆ. ವಿವಿಧ ಕಾಲಘಟ್ಟಗಳಲ್ಲಿ ಹರಿದು ಬಂದಿರುವ ಹಲವು ಬದಲಾವಣೆಗಳಿಗೆ ಒಗ್ಗಿಕೊಂಡೂ, ತನ್ನ  ಅಸ್ಮಿತೆ ಸಾರುತ್ತಿರುವ ಹೆಣ್ಣಿಗೆ ಸಾಮಾಜಿಕವಾಗಿ ಇಂದಿಗೂ ಸಮಾನಸ್ಥಾನದ ನಿರಾಕರಣೆಯಾಗುತ್ತಿದೆ. ಕೆಳಸ್ತರದಲ್ಲೇ ಇಟ್ಟು ನೋಡುವ, ಹಿರಿತನ ( seniority)ದಲ್ಲಿ ಮುಂಚೂಣಿಯಲ್ಲಿದ್ದರೂ ಅತ್ಯುನ್ನತ ಹುದ್ದೆಗಳನ್ನು, ಅವಕಾಶಗಳನ್ನು ನೇರವಾಗಿಯೇ ನಿರಾಕರಿಸಿರುವ/ ನಿರಾಕರಿಸುತ್ತಿರುವ ಉದಾಹರಣೆಗಳು ನಮ್ಮ ಕಣ್ಣಮುಂದೆಯೇ ಇವೆ.      ಇದರ ನಡುವಲ್ಲೂ ಹಲವು ಸ್ಥಾನಮಾನಗಳು ಹೆಣ್ಣಿನ ಪ್ರತಿಭೆಯ ಕಾರಣಕ್ಕೇ ದಕ್ಕುತ್ತಿರುವುದನ್ನೂ ಕಾಣಬಹುದು. ಹಾಗೆಂದು, ಮಹಿಳೆಯ ಮೇಲಾಗುತ್ತಿರುವ ದೈಹಿಕ ದಾಳಿಗಳ ವರದಿಗಳೇನೂ ಕಡಿಮೆಯಾಗಿಲ್ಲ. ವರದಿಮಾಡಲಾಗದ ಮಾನಸಿಕ ಹಿಂಸೆಗಳದೆಷ್ಟೋ…        ಮಹಿಳೆಯರ ಪ್ರಶ್ನೆ ಇಷ್ಟೇ…, ದೇಹ ಮನಸ್ಸು ತನ್ನದು ಅಲ್ಲವೇ ಅಲ್ಲ ಎಂದು ನಿರ್ಲಿಪ್ತವಾಗಿ ಬದುಕಬೇಕಾಗಿರುವ ತಮ್ಮ ಪರಿಸ್ಥಿತಿ ಎಂದಾದರು ಕೊನೆಗೊಂಡೀತೆ ? ಹೆಣ್ಣುಜೀವ ಒಂದು ಘನತೆಯ ಬದುಕನ್ನು ಕಂಡೀತೆ..?

ಹೆಣ್ಣು ಬದುಕಿನ ಘನತೆ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಬರಹ

ಮೇ 1 ಚಿಂತನೆ- ಚಿಂತೆಗಳು ಪೂರ್ಣಿಮಾ ಸುರೇಶ್ ಮೇ 1 ಚಿಂತನೆ- ಚಿಂತೆಗಳು ಮೇ ದಿನ ಅಂದರೆ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, (ಅಂತರರಾಷ್ಟ್ರೀಯ ಶೃಮಿಕ ದಿನಾಚರಣೆಯೂ ಹೌದು )ವರ್ಗ ಹೋರಾಟಗಳ ವಾರ್ಷಿಕ ದಿನಾಚರಣೆಯಾಗಿ ಕಾರ್ಮಿಕ ವರ್ಗ ಆಚರಿಸುತ್ತಿದ್ದಾರೆ. ಕಾರ್ಮಿಕರ ಸಭೆ, ವಿಚಾರಗೋಷ್ಠಿ,ಪ್ರದರ್ಶನ, ಹಕ್ಕುಗಳನ್ನು ಸಾಧಿಸಲು ಮೆರವಣಿಗೆ ಮುಂತಾದವುಗಳನ್ನು ಹಮ್ಮಿಕೊಳ್ಳುವ ಕಾರ್ಮಿಕರ ಉತ್ಸವದ ದಿನ . ಸಾರ್ವಜನಿಕ ರಜಾ ದಿನವಾಗಿಯೂ ಘೋಷಿತವಾಗಿದೆ .ದೇಶವೊಂದರ ಜೀವನಾಡಿಯಂತಿರುವ ಕಾರ್ಮಿಕರ ಬದುಕಿನ ಸಮಾನತೆಗಾಗಿ ಅವರ ಹೋರಾಟದ ಬದುಕನ್ನು ನೆನಪಿಸುವ ದಿನದ ಆಚರಣೆಯ ಹಿಂದೆ ಒಂದು ಇತಿಹಾಸವಿದೆ.         1886ರ ಮೇ 4 ರಂದು ಚಿಕಾಗೋದ ಇಲಿನಾಯ್ಸ ಪ್ರದೇಶದ ‘ಹೇ ಮಾರ್ಕಟ್’ ಎಂಬಲ್ಲಿ ಕಾರ್ಮಿಕರ ಮೇಲೆ ನಡೆದ ದಮನಕಾರಿ ಘಟನೆಯು ಕಾರ್ಮಿಕ ಪ್ರಭುತ್ವ ಉದಯದ ಶುಭಗಳಿಗೆಯ ಕುರುಹಾಗಿ ಮೇ1 ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿ ಆಚರಣೆ ಆರಂಭಗೊಂಡಿತು. ಬಂಡವಾಳಶಾಹಿ ಪ್ರಭುತ್ವದ ಶೋಷಣೆ ಹಾಗೂ ದಬ್ಬಾಳಿಕೆಯನ್ನು ಕೊನೆಗಾಣಿಸಿ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಕಾರ್ಮಿಕರೆಲ್ಲರೂ ಒಂದಾಗಿ ಈ ದಿನವನ್ನು ಆಚರಣೆ ಮಾಡಬೇಕೆಂಬುದು ಈ ದಿನದ ಕರೆ .  ಕಾರ್ಮಿಕರ ಶ್ರೇಯಾಭಿವೃದ್ದಿಗಾಗಿ    ಕಾರ್ಮಿಕ ಸಂಘಟನೆಗಳೂ ರೂಪುಗೊಂಡವು. ಮೇ ದಿನ ಉತ್ಸವವಾಗಿಸಿತು..        ತಮ್ಮದೇ ಆದ ಸಂಘಟನೆಗಳನ್ನು  ಕಾರ್ಮಿಕರು ಕಟ್ಟಿಕೊಂಡಿರುವುದರಿಂದ ಸಂಘಟನೆಗಳು ಅವರ ಹೋರಾಟಕ್ಕೆ ಶಕ್ತಿ ನೀಡಿವೆ. ಇದರಿಂದಾಗಿ ಕಾರ್ಮಿಕ ವಲಯ ಇಂದು ಸಮಾಜದಲ್ಲಿ ಪ್ರಭಾವಶಾಲಿಯಾಗಿದೆ. ತಮ್ಮನ್ನು ತಾವು ನಾಯಕತ್ವದ ಹಾದಿಯಲ್ಲಿ ಗುರುತಿಸಿ ಕೊಂಡಿದ್ದಾರೆ. ಇವರು ಸಂಘಟಿತ ವಲಯದ ಕಾರ್ಮಿಕರು. ಇವರಲ್ಲಿ ಹಲವಾರು ಮಂದಿ ಕಾರ್ಮಿಕ ನಾಯಕರು ಸಮಾಜದ ನಾಯಕರಾಗಿ ಹಲವಾರು ಕ್ಷೇತ್ರಗಳಲ್ಲಿ ಮೂಡಿ ಬಂದಿದ್ದಾರೆ ಜಗತ್ತಿನಾದ್ಯಂತ ಇವರು ಮಹತ್ತರ ಹುದ್ದೆಗಳನ್ನು ಅಲಂಕರಿಸಿದ ಉದಾಹರಣೆಗಳೂ ಸಾಕಷ್ಟಿವೆ.  ಉದಾ:  ಮುಂಬೈಯ ಅತೀ ದೊಡ್ಡ ಕಾರ್ಮಿಕ ನಾಯರೆನಿಕೊಂಡಿದ್ದ ದಿವಂಗತ ಜಾರ್ಜ್ ಫರ್ನಾಂಡೀಸ್ ಕೂಡ ಒಬ್ಬರು        ಕಾರ್ಮಿಕ ದಿನಾಚರಣೆಯೆಂದರೆ ಸಮಾನ ಬದುಕಿನ ಹಕ್ಕೊತ್ತಾಯ, ಬಂಡವಾಳ ಶಾಹಿ ವ್ಯವಸ್ಥೆ, ಮೇಲ್ವರ್ಗದ ದಬ್ಬಾಳಿಕೆಯ ವಿರುದ್ದ ಶ್ರಮಿಕ ವರ್ಗದ ಹೋರಾಟದ ದಿನವೆಂದೇ ಪರಿಗಣಿಸಲ್ಪಟ್ಟಿದೆ. ಆದರೆ ಇಂದಿನ ಕಾರ್ಮಿಕ ದಿನಾಚರಣೆ ಹೊಸ ದೃಷ್ಟಿಯಿಂದ ನೋಡಿ ಅರ್ಥಯಿಸಬೇಕಾದ ಅನಿವಾರ್ಯ ಪರಿಸ್ಥಿತಿ ಬಂದೊದಗಿದೆ. ಇನ್ನು ಮುಂದೆ ಕಾರ್ಮಿಕರ ಹಕ್ಕುಗಳ ಜೊತೆಜೊತೆಗೆ ಕಾರ್ಮಿಕರ ಬದುಕಿನ ಬಗ್ಗೆಯೂ ಯೋಚಿಸಬೇಕಾದ ಅತ್ಯಂತ ಸಂಕೀರ್ಣ ಸ್ಥಿತಿಯಲ್ಲಿ ಜಗತ್ತಿದೆ. ಕರೋನ ಎಂಬ ಮಾಹಾಮಾರಿ ಜಗತ್ತನ್ನೇ ಕಬಳಿಸಲು ಹೊರಟಂತೆ ವ್ಯಾಪಿಸಿ ಕೊಂಡಿದೆ. ಈ ಸಮರ ಯಾವುದೇ ಜಾಗತಿಕ ಸಮರಕ್ಕಿಂತ ಕಡಿಮೆಯಲ್ಲ. ಲಾಕ್ ಡೌನ್ ಎಂಬ  ಸೂತಕದ ಛಾಯೆಯಲ್ಲಿ ಜನರು ಮನೆಯೊಳಗೆ ಬಂಧಿಗಳಾಗಿದ್ದಾರೆ. ಇದರ ಪರಿಣಾಮ  ಶ್ರೀಮಂತ ವರ್ಗದಿಂದ ಕಟ್ಟಕಡೆಯ ಶ್ರಮಿಕನ ಮೇಲೂ ಅತ್ಯಂತ ಗಾಢ ಫಲಿತಾಂಶ ತಂದಿದೆ . ಅಂದರೆ ಕಾರ್ಮಿಕ ವರ್ಗದ ಮೇಲೆ ನಡೆದಿರುವ , ಮುಂದಿನ ದಿನಗಳಲ್ಲಿ ನಡೆಯಬಹುದಾದ ಪರಿಣಾಮಗಳು ಬಲು ಘೋರ ಹಾಗೂ ಭೀಕರ . ಈ ಹಿನ್ನಲೆಯಲ್ಲಿ ನಾವಿಂದು ಕಾರ್ಮಿಕ ದಿನಾಚರಣೆಯ  ಅಗತ್ಯ ಅನುಸರಿಸಬೇಕಾದ , ಕ್ರಮಗಳ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು.   ಕಾರ್ಮಿಕರೆಂದರೆ ಸಂಘಟಿತ ವಲಯದ ಕಾರ್ಮಿಕರು ಹಾಗೂ ಅಸಂಘಟಿತ ವಲಯದ ಕಾರ್ಮಿಕರು.     ಸಂಘಟಿತ ವಲಯದ ಕಾರ್ಮಿಕರು  ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ದಕ್ಕಿಸಿಕೊಳ್ಳುವ ಶಕ್ತಿ ಹೊಂದಿರುವರು. ಇವರಿಗೆ ತಮ್ಮದೇ ಆದ ಸಂಘಟನೆಗಳು ಇರುವುದರಿಂದ ಈ ಸಂಘಟನೆಗಳು ಅವರ ಹೋರಾಟಕ್ಕೆ ನೈತಿಕ ಶಕ್ತಿ ನೀಡಿವೆ. ಇದರಿಂದ  ಈ ಕಾರ್ಮಿಕ ವಲಯ ಪ್ರಭಾವಶಾಲಿ ವಲಯವಾಗಿದೆ.  ಅಸಂಘಟಿತ ವಲಯದ ಕಾರ್ಮಿಕರು. ಇವರು ನಮಗೆ ಸಮಾಜದ ಮದ್ಯೆ ಎದ್ದು ತೋರುವುದಿಲ್ಲ. ಇವರಿಗೆ ತಮ್ಮ ಹಕ್ಕೊತ್ತಾಯ ನಡೆಸುವ ಸಂಘಟನಾ ಶಕ್ತಿಯೂ ಇರುವುದಿಲ್ಲ. ಯಾವೊಬ್ಬ ನಾಯಕರು ಇವರ ಪರವಾಗಿ ಧ್ವನಿ ಎತ್ತುವುದಿಲ್ಲ. ಅಂದಿನ ದುಡಿಮೆಯನ್ನು ಅಂದಿಗೆ ಖರ್ಚು ಮಾಡಿ ಬದುಕು ನಡೆಸುವ ದುರ್ಬಲ ವರ್ಗದವರೇ ಇವರಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವುದು.ಹೋರಾಟದ ಮನೋಭಾವವೂ ಇವರಲ್ಲಿ ಬಹಳ ಕಡಿಮೆ. ಈ ಅಸಂಘಟಿತ ವಲಯದ ಕಾರ್ಮಿಕರಲ್ಲೂ ಒಂದೇ ಕಡೆ ನೆಲೆನಿಂತ ಕಾರ್ಮಿಕರು ಒಂದು ಕಡೆಯಾದರೆ ವಲಸೆ ಬಂದ ಕಾರ್ಮಿಕರದ್ದು ಮತ್ತೊಂದು ಬಗೆಯ ಭವಣೆಯ  ಬದುಕು . ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ವಲಸೆಹೋಗುವ ಈ  ಅಸಂಘಟಿತ ಕಾರ್ಮಿಕ ವರ್ಗ ನಗರಪ್ರದೇಶಗಳಲ್ಲಿ ಕೊಳೆಗೇರಿ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.        ಭಾರತದ ಇತಿಹಾಸವನ್ನೇ ತೆಗೆದರೆ ಮುಂಬಾಯಿಯ ಧಾರಾವಿಯ ಬ್ರಹತ್ ಕೊಳೆಗೇರಿ,ನವದೆಹಲಿ, ಕೊಲ್ಕತ್ತಾ, ಚೆನ್ನೈ ಯಂತಹ ಮಹಾನಗರಗಳ ಕೊಳೆಗೇರಿಗಳಲ್ಲಿ ಲಕ್ಷಾಂತರ ಕಾರ್ಮಿಕರು ವಾಸವಾಗಿದ್ದಾರೆ. ಇವರ ದುಡಿಮೆಯ ಹೆಚ್ಚಿನ ಪಾಲು ದುಶ್ಚಟಗಳಿಗೆ ಹೋಗುವುದೂ ಸತ್ಯ. ಇವರಲ್ಲಿ ದೊಡ್ಡ ಪ್ರಮಾಣದ ಹೋರಾಟದ ಮನೋಭಾವವೂ ಇಲ್ಲ. ಈ ಕಾರ್ಮಿಕರ ಸಾಮಾಜಿಕ ಹಾಗೂ ಸಾಂಸಾರಿಕ ಜೀವನ ಅತ್ಯಂತ ಬರ್ಬರ .ಇವರು ಅಂದಂದಿನ ದುಡಿಮೆ ಅಂದಿಗೆ ಉಣ್ಣುವುದರಿಂದ ಇವರಲ್ಲಿ ಉಳಿತಾಯವೂ ಬಹಳ ಕಡಿಮೆ. ಯಾವುದೇ ಕಾನೂನು ಹಾಗೂ ನಿಯಮಾವಳಿಯ ಹಿಡಿತದಿಂದ ಇವರನ್ನು ಹಿಡಿದಿಡುವುದೂ ಸಾಧ್ಯವಿಲ್ಲ. ಕಾನೂನಿನ ದೊಡ್ಡ ಸಹಕಾರವೂ ಇವರಿಗಿಲ್ಲ. ಇಂತಹ ಕಾರ್ಮಿಕರು ಬಲು ದೊಡ್ಡ ಸಂಖ್ಯೆಯಲ್ಲಿ ನಮ್ಮಲ್ಲಿ ಮಾತ್ರವಲ್ಲ ಹೆಚ್ಚಿನ ದೇಶಗಳಲ್ಲಿ ಇದ್ದಾರೆ ಕೃಷಿ,ಕೂಲಿ,ಕೈಗಾರಿಕೆ,ಮೀನುಗಾರಿಕಾ ಉದ್ಯಮಗಳಲ್ಲು ತೊಡಗಿಸಿಕೊಂಡ ದಿನಗೂಲಿ ನೌಕರಿವರು .ಸಾಂಪ್ರದಾಯಿಕ ವೃತ್ತಿ ಮಾಡುವ ಶೃಮಿಕರಿವರು.     ಕೋವಿಡ್-19 ದಾಳಿಯ ನಂತರ ಇಂತಹ ಕಾರ್ಮಿಕ ವರ್ಗ ಬಲುದೊಡ್ಡ ಘಾತಕ್ಕೆ ಒಳಗಾಗಿದೆ .  ಇವರು ಆರ್ಥಿಕವಾಗಿ ನೆಲಕಚ್ಚಿರುವ ಶೃಮಿಕ ವರ್ಗ. ಅದರಲ್ಲೂ ಅಸಂಘಟಿತ  ಕಾರ್ಮಿಕರಲ್ಲಿ  ಯಾವುದೇ ನಿರ್ಧಿಷ್ಟ ಹೆಸರಲ್ಲಿ ಗುರುತಿಸಲ್ಪಡದ ಕಾರ್ಮಿಕರ ಗೋಳು ಅತೀ ದುಸ್ತರ ಎನ್ನಬಹುದು.     ‌‌‌ ಲಾಕ್ ಡೌನ್ ನಿಂದಾಗಿ ಸದ್ಯ  ಈ ಕಾರ್ಮಿಕರು ದುಡಿಮೆಗೆ ಹೊರಹೋಗುವಂತಿಲ್ಲ. ಒಳಗಡೆ ಕೊಳೆಗೇರಿಗಳಲ್ಲಿ, ಬೆಂಕಿಪೊಟ್ಟಣದಂತಹ ಜಾಗದಲ್ಲಿ  10 ಕ್ಕಿಂತಲೂ ಹೆಚ್ಚು ಜನರು ಇರಬೇಕಾದ ಅನಿವಾರ್ಯತೆ. ಇಲ್ಲಿ ರೋಗ ಒಬ್ಬರಿಗೆ ತಗುಲಿದರೆ ಉಳಿದವರೂ ಇದರ ಪರಿಣಾಮ ಎದುರಿಸಲೇಬೇಕು . ಆದ್ದರಿಂದ ಈ ಸಮಯದಲ್ಲಿ ಇಂತಹ ಜನರ ಬಗ್ಗೆ ಹೆಚ್ಚು ಯೋಚಿಸಬೇಕಾದ ಅನಿವಾರ್ಯತೆ  ನಮ್ಮ ಮುಂದಿದೆ      ಇವರಲ್ಲದೆ ಬೆಲೂನ್ ನಂತಹ ಪುಟ್ಟ ಸರಕುಗಳನ್ನು ಮಾರುವಂತವರು, ಭಿಕ್ಷಾಟಣೆ ಮಾಡಿ ಹೊಟ್ಟೆ ಹೊರೆಯುವ ಮಂದಿ,ದೇವದಾಸಿಯರು,ಯಕ್ಷಗಾನ ಕಲಾವಿದರು, ವೃತ್ತಿ ರಂಗಭೂಮಿಯಲ್ಲಿ ತೊಡಗಿಸಿಕೊಂಡವರು, ವಲಸೆ ಬಂದು ಟೆಂಟ್ ಕಟ್ಟಿ ವಾಸ ಮಾಡುವ, ಊರೂರು ತಿರುಗಿ  ಮಣ್ಣಿನ ಗೊಂಬೆ, ಅಲಂಕಾರಿಕ ವಸ್ತುಗಳಂತಹ ಸರಕುಗಳನ್ನು  ಮಾರಿ ಬದುಕು ಕಟ್ಟಿಕೊಂಡ ಜನರನ್ನು ಕಾರ್ಮಿಕರ ಯಾದಿಯಲ್ಲಿ ಸೇರ್ಪಡೆಗೊಳಿಸದಿರಲು ಸಾಧ್ಯವೇ? ಸದ್ಯ ಇಂತಹ ಕಾರ್ಮಿಕರ ಆರೋಗ್ಯ, ಖರ್ಚುವೆಚ್ಚಗಳ ಪಾಡೇನು? ಇವುಗಳ ಬಗ್ಗೆ ಯಾರು ತಲೆಕೆಡಿಸಿಕೊಳ್ಳುತ್ತಿದ್ದಾರೆ?  ಕಾರ್ಮಿಕರ ಬಗ್ಗೆ ಇದುವರೆಗೂ ಇರುವ  ಸಿದ್ದ ಆಲೋಚನೆಯ ಮಾದರಿಯನ್ನು ಬದಲಿಸಲೇಬೇಕಾದ  ಅನಿವಾರ್ಯತೆ ಯನ್ನು ಕರೋನ ಎಂಬ ವೈರಸ್ ತಂದಿಟ್ಟಿದೆ ಕಾರ್ಮಿಕರು ತಮ್ಮ ಸ್ಥಳವನ್ನು ಬಿಟ್ಟು ವಲಸೆ ಹೋದಾಗ ಒಳಗಾಗುವ ಸಂಕಷ್ಟ ಅದರ ಪರಿಹಾರ ಹೇಗೆ ಎಂಬುದನ್ನು ಸರಕಾರ ಹಾಗೂ ಸಮಾಜ ಗಂಭೀರವಾಗಿ ಚಿಂತಿಸಿ ಪರಿಹಾರ ಕಂಡುಕೊಳ್ಳಬೇಕಾದ ಕಾಲವಿದು . ಯಾವ ಪ್ರದೇಶಗಳು ದೊಡ್ಡ ಕೈಗಾರಿಕಾ ಪ್ರದೇಶವಾಗಿರುವುದೋ ಅಲ್ಲಿ ಕೋವಿಡ್ ಹೆಚ್ಚು ಪ್ರಸಾರವಾಗಿದೆ. ಇಲ್ಲಿ ಅಸಂಘಟಿತ ಕಾರ್ಮಿಕರು ಹೆಚ್ಚಾಗಿರುತ್ತಾರೆ ಅವರಿಗೆ ನಿರ್ಧಿಷ್ಟ ಉತ್ತಮ ವಾಸ್ತವ್ಯ ಇರುವುದೂ ಕಷ್ಟ . ಭವಿಷ್ಯದ ದಿನಗಳಲ್ಲಿ ಕಾರ್ಮಿಕರ ಮೂಲಭೂತ ಸೌಕರ್ಯದ ಬಗ್ಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.  ಕಾರ್ಮಿಕರು ಬಲು ದೂರ ವಲಸೆ ಹೋಗದಂತೆ ವ್ಯವಸ್ಥೆ ಕಲ್ಪಿಸುವ, ಕ್ರಮ ತೆಗೆದುಕೊಳ್ಳಬೇಕಾದ ಗಂಭೀರ ಚಿಂತನೆಯನ್ನೂ ಮಾಡಬೇಕಾಗಿದೆ. ಇವರ ಸಂಬಳ ಮಾತ್ರವಲ್ಲ ಬದುಕು ಯಾವ ಬಗೆಯಲ್ಲಿ ಹಸಿರಾಗಿಡಬಹುದು ಎಂಬ ಬಗ್ಗೆಯೂ ಯೋಚಿಸಬೇಕು.    ಬದುಕು ಇದ್ದಾಗಷ್ಟೆ ದುಡಿಮೆ. ದುಡಿದಾಗ ತಕ್ಕ ಪ್ರತಿಫಲ ಸಿಗಬೇಕು ನಿಜ.  ಈ ನಿಟ್ಟಿನಲ್ಲಿ ಕಾರ್ಮಿಕರ ಹೋರಾಟ. ಆದರೆ ಈಗ ಬದುಕು ಉಳಿಸಿಕೊಳ್ಳುವುದೇ ದುಸ್ತರ ಎಂಬಂತಾಗಿದೆ. ಬದುಕುವ ಅವಕಾಶವೇ ಮಸುಕಾದರೆ..? ಜೀವ ಉಳಿಸಿಕೊಳ್ಖುವ ಪೇಚಾಟದಲ್ಲಿ ಅದೆಷ್ಟೋ ಶ್ರಮಿಕ ವರ್ಗ ಹೋರಾಟ ನಡೆಸುತ್ತಿದೆ. ಇವರಿಗೆ ಸಾವು ಹಾಗೂ ಬದುಕಿನ ನಡುವಿನ ಗೆರೆ ಮಾಯವಾದಂತಿದೆ. ಇವರ ನೋವು, ಸಂಕಟ ಅರ್ಥಮಾಡಿಕೊಳ್ಳುವವರು ಯಾರು? ಇವರ ಅಸ್ತಿತ್ವವೇ ಪ್ರಶ್ನಾರ್ಥಕವಲ್ಲವೇ ?ಇವರಿಗೆ ಉಂಟಾಗಿರುವ ಮಾನಸಿಕ ಅಘಾತ,ಮತ್ತೆ ಇವರು ಮೊದಲಿನಂತೆ ಕೆಲಸಕ್ಕೆ ಹೋಗಲು ಸಾಧ್ಯವೇ? ಈ ನಿಟ್ಟಿನಲ್ಲಿ ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆ ಸರಕಾರ ಮತ್ತು ಸರಕಾರೇತರ ಸಂಸ್ಥೆಗಳು ಈ ಕಾರ್ಮಿಕ ದಿನದಂದು ಹೆಚ್ಚು ಪ್ರಜ್ಞಾಪೂರ್ವಕ ಹೃದಯದಿಂದ ಚಿಂತಿಸಬೇಕಾದ ಅಗತ್ಯದಲ್ಲಿ ನಾವಿದ್ದೇವೆ . *************************

ಕಾರ್ಮಿಕ ದಿನದ ವಿಶೇಷ-ಬರಹ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಬರಹ

ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ರಾಮಸ್ವಾಮಿ ಡಿ.ಎಸ್. ಕಾರ್ಮಿಕ ದಿನಾಚರಣೆಯೂ ವರ್ತಮಾನದ ಆತಂಕವೂ ಮೇ ಒಂದನೇ ತಾರೀಖು ಬರುವ ವಾರ ಮೊದಲೇ ಬಂಟಿಂಗ್ಸ್, ಬ್ಯಾನರ್, ಪ್ಲಕಾರ್ಡುಗಳನ್ನು ಸಿದ್ಧಪಡಿಸಿ ಎಲ್ಲ ಕಛೇರಿಗಳ ಕಾರ್ಮಿಕ ಸಂಘಟನೆಗಳಿಗೆ ಮನವಿ ಪತ್ರ ಕಳಿಸಿ ಒಂದನೇ ತಾರೀಖಿನ ಬಹಿರಂಗ ಸಭೆ ಮತ್ತು ಮತಪ್ರದರ್ಶನಕ್ಕೆ ಬರಲು ಒತ್ತಾಯಿಸುತ್ತಿದ್ದ ದಿನಗಳು ನೆನಪಿಗೆ ಬಂದವು. ನಾನಿರುವ ಊರಿನಲ್ಲಿ ದೊಡ್ಡ ಕಾರ್ಖಾನೆಗಳೇನೂ ಇಲ್ಲ. ಹಾಗಾಗಿ ನಮ್ಮ ಮೇ ದಿನದ ಸಭೆಗೆ ಬ್ಯಾಂಕ್, ಎಲ್ಲೈಸಿ, ಟೆಲಿಫೋನ್, ಅಂಚೆ ಕಛೇರಿಗಳ ನೌಕರರನ್ನು ಸೇರಿಸುತ್ತಿದ್ದೆವಾದರೂ ಉಳಿದ ಸರ್ಕಾರಿ ಕಛೇರಿಗಳ ಯಾವ ವರ್ಗವೂ ನಮ್ಮೊಂದಿಗೆ ಬರುತ್ತಿರಲಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧೀನ ನೌಕರರು ಯಾವತ್ತೂ ನಮ್ಮ ಚಳವಳಿಗಳಲ್ಲಿ ಭಾಗವಹಿಸಿದ್ದೂ ಇಲ್ಲ. ಆದರೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಕ್ಷರ ದಾಸೋಹದ ನೌಕರರು ನಮ್ಮ ಜೊತೆ ಇರುತ್ತಾರೆ ಮತ್ತು ಅವರ ಸಂಖ್ಯೆಯೇ ನಮ್ಮ ಸಾರ್ವಜನಿಕ ಸಭೆಗಳಿಗೆ, ಮೆರವಣಿಗೆಗೆ ಶೋಭೆ ತರುವುದು. ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರ ಶ್ರಮ ಸಂಸ್ಥೆಯ ಲಾಭಕ್ಕೆ ಕಾರಣವಾದುದರಿಂದ ದುಡಿಯುವ ವರ್ಗಕ್ಕೆ ಸವಲತ್ತುಗಳಿಗಾಗಿ ಹಕ್ಕೊತ್ತಾಯ ಮಾಡುವುದು ವಿಹಿತ. ಸರ್ಕಾರಿ, ನಿಗಮ, ಮಂಡಲಿಗಳ ನೌಕರರಿಗೆ ಸಿಬ್ಬಂದಿ ಕಾಯ್ದೆ ಅನ್ವಯ ವಿವಿಧ ಸವಲತ್ತು ಇದ್ದರೂ ಅವರೆಲ್ಲ ತಮ್ಮ ಸಂಬಳ ಮತ್ತು ಇತರೆ ಸೌಲಭ್ಯಗಳಿಗಾಗಿ ಕಾಲಾನುಕಾಲದ ದ್ವಿಪಕ್ಷೀಯ ಸಂಧಾನದ ಮೂಲಕ ಸಾಧಿಸಿಕೊಳ್ಳುತ್ತಾರೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರ ವೇತನ ಪರಿಷ್ಕರಣೆ ಆಯೋಗಗಳ ವರದಿಗೆ ತಕ್ಕಂತೆ ಕಾಲಕ್ಕೆ ತಕ್ಕನಾಗಿ ಆಗುತ್ತಲೇ ಇರುತ್ತವೆ. ಆದರೆ ಯಾವತ್ತೂ ಅಸಂಘಟಿತ ವಲಯದ ನೌಕರರು ಮಾತ್ರ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಮತ್ತು ಉದ್ಯೋಗ ಖಾತ್ರಿಯೂ ಇಲ್ಲದೆ ಪರಿತಪಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು, ಅಕ್ಷರ ದಾಸೋಹದ ನೌಕರರು ಮತ್ತು ಬೀಡಿ ಕಾರ್ಮಿಕರು ಬೆಂಗಳೂರಲ್ಲಿ ಆಗಾಗ ಧರಣಿ ಸತ್ಯಾಗ್ರಹಗಳ ಮೂಲಕ ಸುದ್ದಿಗೆ ಬರುತ್ತಾರಾದರೂ ಅವರ ಬೇಡಿಕೆ ಈಡೇರಿತೆ ಅಂದರೆ ಅದು ಯಾವತ್ತೂ ಮರೀಚಿಕೆಯಾಗಿಯೇ ಉಳಿದಿರುತ್ತೆ. ಇನ್ನು ಈ ವರ್ಗಕ್ಕೆ ಅಸಂಖ್ಯಾತ ಗಾರ್ಮೆಂಟ್ ಕೆಲಸಗಾರರು ಮತ್ತು ರಾಜ್ಯ ಸರ್ಕಾರದ ಅಧೀನದ ರಸ್ತೆ ಸಾರಿಗೆ ಸಂಸ್ಥೆಯ ನೌಕರರೂ ಸೇರುತ್ತಿದ್ದಾರೆ. ಈ ಎಲ್ಲ ನೌಕರರಿಗೆ ಕಾಲಾನುಕಾಲಕ್ಕೆ ವೇತನ ಪರಿಷ್ಕರಣೆ ಇತರೆ ಸೌಲಭ್ಯಗಳ ವಿಸ್ತರಣೆ ಆಗುವುದಿರಲಿ, ಕನಿಷ್ಠ ವಾರದ ರಜೆ, ಆರೋಗ್ಯ ಯೋಜನೆ ಇಲ್ಲದೇ ಅವರೆಲ್ಲ ತುಂಬ ಪರಿತಪಿಸುತ್ತಿದ್ದಾರೆ. ಸಂಘಟಿತ ನೌಕರ ವರ್ಗಕ್ಕೆ ಕಾಲಾನುಕಾಲದ ವೇತನ ಮತ್ತು ಇತರೆ ಸೌಲಭ್ಯಗಳು ಅಲ್ಪ ಸ್ವಲ್ಪ ತಗಾದೆ ಮತ್ತು ಹೋರಾಟಗಳಿಂದ ಸಿಕ್ಕುತ್ತವೆಯಾದರೆ ಈ ಅಸಂಘಟಿತ ವಲಯದ ನೌಕರರಿಗೆ ಯಾವ ಅನುಕೂಲಗಳೂ ಇಲ್ಲ. ಇನ್ನು ಅನುಮೋದಿತ ಸಂಸ್ಥೆಗಳ ನೌಕರರಂತೂ ಯಾವ ಹೋರಾಟ ಹಾರಾಟಗಳೂ ಇಲ್ಲದೆ ಸರ್ಕಾರಿ ನೌಕರರ ಎಲ್ಲ ಸೌಲಭ್ಯ ಪಡೆಯುತ್ತಾರೆ. ಹಾಗಾದರೆ ಇವತ್ತಿನ ಮೇ ದಿನದ ಸಂದೇಶ ಮತ್ತು ಈ ದಿನದ ಅಗತ್ಯ ಯಾರಿಗಿದೆ? ನೌಕರರಿಗೆ ಕನಿಷ್ಠ ವೇತನ, ವಾರದ ರಜೆ ಮತ್ತು ಎಂಟು ಗಂಟೆಗೂ ಮೀರದ ದುಡಿಮೆಯ ಅವಧಿ ಮೇ ಚಳವಳಿಯ ಮೂಲ ಧ್ಯೇಯ. ಅದೀಗ ಸಂಘಟಿತ ವಲಯಕ್ಕೆ ಸುಲಭದಲ್ಲಿ ಸಿಗುತ್ತಿದೆ. ಆದರೆ ಅಸಂಘಟಿತ ವಲಯದ ಜೊತೆಗೇ ಈ ನಡುವೆ ಔಟ್ ಸೋರ್ಸ್ಡ್ ಎಂಬ ಕಂಟ್ರಾಕ್ಟ್ ನೌಕರರ ಮೇಲಣ ದಬ್ಬಾಳಿಕೆ ಮಿತಿ ಮೀರಿದೆ. ಕನಿಷ್ಠ ಮೂಲ ಸೌಕರ್ಯಗಳೂ ಇಲ್ಲದ ಯಾವ ಖಾತರಿಯೂ ಇಲ್ಲದ ಮತ್ತು ಕಂಟ್ರಾಕ್ಟರನ ಮೂಗಿನ ನೇರದ ಕಾನೂನಿನಡಿ ಇವರೆಲ್ಲ ನರಳುತ್ತಿದ್ದಾರೆ. ನಮ್ಮ ಬಹುತೇಕ ಕಾರ್ಮಿಕ ಸಂಘಟನೆಗಳು ಒಂದಲ್ಲ ಒಂದು ರಾಜಕೀಯ ಪಕ್ಷಗಳ ಕೂಸುಗಳೇ ಆಗಿರುವುದು ಸುಳ್ಳೇನಲ್ಲ. ಶಾಸನ ಸಭೆಯಲ್ಲಿ ಅನುಮೋದನೆ ಆಗದೆ ಯಾವುದೂ ಕಾನೂನಾಗಿ ಪರಿವರ್ತನೆ ಆಗುವುದಿಲ್ಲ. ಈ ಎಲ್ಲ ರಾಜಕೀಯ ಪಕ್ಷಗಳು ಮತ್ತದರ ಆಶ್ರಿತ ಸಂಘಟನೆಗಳು ಯಾಕಾಗಿ ಈ ಔಟ್ ಸೋರ್ಸಿಂಗ್ ಎನ್ನುವುದನ್ನು ಅನುಮೋದಿಸಿದವು ಎಂದು ಆಲೋಚಿಸಲು ಈ ಮೇ ದಿನದಲ್ಲಾದರೂ ನಾವು ಪ್ರಯತ್ನ ಪಡಬೇಕು. ಔಟ್ ಸೋರ್ಸಿಂಗ್ ಅಥವ ಹೊರ ಗುತ್ತಿಗೆ ಅನ್ನುವುದು ಕೆಳಹಂತದ ನೌಕರಿಗೆ ಮಾತ್ರ ಸೀಮಿತವಾದದ್ದು. ಅಂದರೆ ಕಸಗುಡಿಸುವುದು, ಪ್ಲಂಬಿಂಗ್, ಕ್ಲೀನಿಂಗ್, ಸ್ಯಾನಿಟೈಸಿಂಗ್, ಸೆಕ್ಯೂರಿಟಿ, ಲಿಫ್ಟ್ ಆಪರೇಷನ್ ತರದ ಕೆಲಸಗಳೆಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಛೇರಿಗಳಲ್ಲಿ ಈ ಹೊರ ಗುತ್ತಿಗೆಯಿಂದಲೇ ನಡೆಯುತ್ತಿದೆ. ಈ ನೌಕರರು ಆಯಾ ಕಛೇರಿಗಳಲ್ಲಿ ಕೆಲಸ ಮಾಡುತ್ತಾರಾದರೂ ಅವರ ಕಂಟ್ರಾಕ್ಟರ್ ಕೊಟ್ಟಷ್ಟಕ್ಕೆ ದುಡಿಯುತ್ತಾರೆ. ಆದರೆ ಈ ಕಂಟ್ರಾಕ್ಟರುಗಳು ಕನಿಷ್ಠ ಕೂಲಿಯ ಆಧಾರದಲ್ಲಿ ಬಿಲ್ಲು ಸಲ್ಲಿಸಿ ಸಂಬಂಧಿಸಿದ ಅಧಿಕಾರಿಯನ್ನು ಹಿಡಿದು ತಮ್ಮ ಹಣ ಪಡೆಯುತ್ತವಾದರೂ ನೌಕರರಿಗೆ ಮಾತ್ರ ಸಿಕ್ಕುವುದು ಎಳ್ಳು ಕಾಳು. ಹೊರಗುತ್ತಿಗೆ ಆಧಾರದ ನೌಕರಿಯನ್ನು, ಕಂಟ್ರಾಕ್ಟ್ ಆಧಾರದ ನೌಕರಿಯನ್ನು ಕನಿಷ್ಠ ಕೂಲಿ ಕೊಡದ ಉದ್ಯೋಗದಾತರನ್ನು ನಿವಾರಿಸದ ಹೊರತು ಮೇ ದಿನದ ಚಳವಳಿಗೆ ಯಾವ ಅರ್ಥವೂ ಇರುವುದಿಲ್ಲ. *****

ಕಾರ್ಮಿಕ ದಿನದ ವಿಶೇಷ-ಬರಹ Read Post »

ಇತರೆ

ಕಾವ್ಯಯಾನ

ಮೇ – ಒಂದು ಕಪ್ಪು ಹಾಡು ನೂರುಲ್ಲಾ ತ್ಯಾಮಗೊಂಡ್ಲು ಮೇ – ಒಂದು ಕಪ್ಪು ಹಾಡು ಕಾರ್ಲ್ ಮಾರ್ಕ್ಸ್ ನ ಹೆಣ ಹೊತ್ತ ಕೈಗಳಿನ್ನು  ಬೀದಿ ಬೀದಿ ತರಗೆಲೆಯಂತೆ ತೆವಳುತ್ತಲೇ ಇವೆ  ಸಂಜೆಯ ಸೂರ್ಯ ಸದ್ದಿಲ್ಲದೆ ನೋಡುತ್ತಾನೆ  ಕೈಗಳಿಗಂಟಿದ ಕತ್ತಲನ್ನು  ಶತಮಾನಗಳಿಂದಲೂ ಹೀಗೆ ಬದುಕು  ಸಂಕೇತಗಳಲ್ಲಿ ಹರಿದು ಹೋಗಿದೆ   ಸಂಜೆ ಮಲ್ಲಿಗೆಯ ಕನಸಿನಲ್ಲಿ  ಕಂಪಿನ ಹಿತವಿಲ್ಲ  ಖಾಲಿ ಜೋಬುಗಳ ತುಂಬ  ಸ್ವೇದದ ಕಮಟು   ಹೆಂಡತಿ ಮಕ್ಕಳು ಕೈ ನೀಡಿದಾಗ  ತಬ್ಬಿಕೊಳ್ಳುವ ಕೈಗಳಲ್ಲಿ ನಿತ್ರಾಣವಿಲ್ಲ  ಒಂದು ಹಗಲು ಅಥವಾ  ಒಂದು ಇರುಳು ಸವೆದ ಬದುಕಿನ  ಹಿಸಾಬು ಹಾಕಲು ಕೈಗೆರೆಗಳೇ ಅಳಿಸಿ ಹೋಗಿವೆ  ಬಂಡವಾಳ ಶಾಹಿಗಳ ಬೂಟುಗಳಲಿ  ಬತ್ತಿ ಹೋದ ನಸಿಬು  ಯೌವ್ವನದ ಜೋಲು ಗೆರೆಗಳಲಿ  ತಪ್ತ ನಗೆ-  ಸೌಧಗಳಲಿ ನೇತಾಡುವ ರಕ್ತ ನಾಳಗಳು ;  ಹೆಪ್ಪುಗಟ್ಟಿದ ಮೇದುಳ ತಾರುಗಳಲಿ  ತೊಟ್ಟಿಕ್ಕುವ ಕೀವ್…  ಕರುನಾಳು ಸೂರ್ಯ ತನ್ನ ರೆಕ್ಕೆಗಳನ್ನು ಅವುಚಿಕೊಳ್ಳುವಾಗ, ಮಾನವತೆಯ ಉಸಿರು  ದುಡಿದ ಕೈಗಳ ಹಾಡಾಗುತ್ತದೆ…   ಹ್ಞಾ , ಕರಿ ನೆರಳ ಕಪ್ಪು ಹಾಡಾಗುತ್ತದೆ.  ********                                                        

ಕಾವ್ಯಯಾನ Read Post »

ಇತರೆ

ಕಾರ್ಮಿಕ ದಿನದ ವಿಶೇಷ-ಬರಹ

ಮನೆಯ ಕಾರ್ಮಿಕರು ವಸುಂಧರಾ ಕದಲೂರು.     ‘ಮನೆಯ ಕಾರ್ಮಿಕರು’      ‘ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ ‘ ಎಂದು ಪ್ರಾರಂಭವಾಗುವ ಬಸವಣ್ಣನವರ ಒಂದು ವಚನವಿದೆ.  ‘ಕಾಯಕವೇ ಕೈಲಾಸ’ ವೆಂದು ಜೀವನದ ನಿಜತತ್ವ ಸಾರಿದ ಬಸವಣ್ಣನವರದು ಶರಣ ಸತಿ ಲಿಂಗ ಪತಿಯ ಭಾವ.      ಲಾಕ್ ಡೌನ್ ಸಮಯದಲ್ಲಿ ಮನೆವಾರ್ತೆಗೆ ಎಳಸುತ್ತಿರುವ ಗಂಡಂದಿರು ಅದೆಷ್ಟು ಜನವೋ.. ಬಹುಶಃ ಕೆಲವರಿಗಾದರೂ ಈಗ ಮನೆಕೆಲಸದ ಮಹತ್ವ ಅರಿವಾಗಿರಬಹುದು. ಇಲ್ಲವಾದರೆ, “ನನ್ನ ಹೆಂಡತಿಯೇ..? ಎಲ್ಲೂ ಕೆಲಸಕ್ಕೋಗಲ್ಲ, ಮನೇಲಿರ್ತಾಳೆ” ಎಂದು ಮೂಗು ಮುರಿಯುವ ಮಂದಿಗೆ ಈಗ ಅಲ್ಲವಾದರೆ, ಮತ್ತೆಂದೂ ಮನೆಕೆಲಸದ ಮಹತ್ವ ತಿಳಿಯದೇ ಹೋಗಬಹುದು.      ನಿಜವಾಗಿಯೂ ಅಡುಗೆ ಸುಮ್ಮನೆ ಆಗದು, ಬಟ್ಟೆ ಅದಷ್ಟಕ್ಕೆ ಸಾಪಾಗಿ ಗರಿಗರಿಯಾಗದು, ಪಾತ್ರೆ ಸುಮ್ಮನೆ ನೀರಿಗೆ ಹಿಡಿದರೆ ಫಳಫಳ ಹೊಳೆಯದು, ನೆಲ ತನ್ನಷ್ಟಕ್ಕೆ ಥಳಥಳಿಸದು. ಮಕ್ಕಳ ರಚ್ಚೆ  ಅದರಷ್ಟಕ್ಕೆ ನಿಲ್ಲದು, ಹಿರಿಯರ ಹಾರೈಕೆ ಹೊತ್ತೇರಿ ಇಳಿದಂತೆ ನಡೆದು ಹೋಗದು. ಆದರೆ ಇವೆಲ್ಲಾ ಬೆಳಗಾಗೆ ಎದ್ದು ಶೌಚಾದಿ ಕ್ರಿಯೆ ಮುಗಿಸಿ, ಬಿಸಿ ಬಿಸಿ ಕಾಫಿಯೋ – ಟೀಯೋ ಹೀರುತ್ತಾ ಲೋಕ ವಾರ್ತೆಗೆ ಕಣ್ಣುಕಿವಿ ಮನಸ್ಸುಕೊಟ್ಟು ಕುಳಿತುಕೊಳ್ಳುವ, ಕುಳಿತಲ್ಲಿಗೇ ಬರುವ ತಿಂಡಿಯನ್ನು ತಿಂದು, ಮಧ್ಯಾಹ್ನದ ಬುತ್ತಿ ಹಿಡಿದು ಆಫೀಸಿಗೆ ಹೊರಟು, ರಾತ್ರಿ ಹೊತ್ತಿಗೆ ಸುಸ್ತಾಗಿ ಬಂದು ಧೊಪ್ಪೆಂದು ಕುಕ್ಕರಿಸುತ್ತಿದ್ದ ಗಂಡಂದಿರಿಗೆ ಹೇಗೆ ತಿಳಿಯ ಬೇಕಿತ್ತು ಹೇಳಿ? ಈಗ ಲಾಕ್ ಡೌನಿನ ಸಲುವಾಗಿ ಮನೆಯಲ್ಲಿ ದಿನದೂಡುತ್ತಿರುವವರಿಗೆ ಈಗಲಾದರೂ ಇಷ್ಟೆಲ್ಲಾ ಮನೆವಾರ್ತೆಗಳು ಅರಿವಿಗೆ ಬಂದಿರಬಹುದೇ..?     ಎಲ್ಲರೂ ಹೀಗೆಯೇ ಎಂದು ಶರಾ ಬರೆಯುತ್ತಿಲ್ಲ. ಆದರೆ ಬಹುಪಾಲು ಹೀಗೆಯೇ ಎಂದು ಹೇಳಲು ಯಾವ ಭೀತಿಯೂ ಇಲ್ಲ.                 ಇನ್ನು ಕೆಲವು ಹೆಂಗಸರ ಕತೆ ನೆನೆದುಕೊಂಡರೆ ಹರೋಹರ ಎಂದು ಕೈ ಮುಗಿಯಬೇಕು. ಅವರು ದಿನಂಪ್ರತಿ ಮನೆಯಲ್ಲೂ ಮಾಡಿಟ್ಟು, ಹೊರಗೂ ದುಡಿದು ಹೈರಾಣಾಗುತ್ತಿರುತ್ತಾರೆ. ಇಂತಹ ಹೆಂಗಸರ ಹಣೆಬರಹ ತಿದ್ದುವಂತಾಗಿದ್ದರೇ ಎನಿಸುತ್ತದೆ. ಪಾಪ, ಆಕೆ ಸರಿಯಾಗಿ ಉಂಡಿರುತ್ತಾಳೋ.., ಅರೆ ಹೊಟ್ಟೆ ಹಸಿದಿರುತ್ತಾಳೋ.., ಹಬ್ಬಕ್ಕೋ, ಖುಷಿಗೋ ಹೊಸಬಟ್ಟೆ ಕೊಂಡಿರುತ್ತಾಳೋ.. ಕೇಳುವವರಾರು? ‘ದುಡಿ ನೀ ಹೆಣ್ಣೇ.. ನಿನ್ನ ಹಣೆ ಬರಹವೇ ಇಷ್ಟು‘ ಎನ್ನುವವರೇ ನಮ್ಮಲ್ಲಿ ಬಹುಮಂದಿ.        ಲಾಕ್ ಡೌನ್ ಸಮಯದಲ್ಲಂತೂ ಮುಂಚಿನಂತೆ ಮನೆ ಕೆಲಸದ ಸಹಾಯಕರಿಲ್ಲದೇ, ಮನೆಯವರ ಸಹಕಾರವೂ ಸಿಗದೆ ತಾನೇ ಎಲ್ಲಾ ಕೆಲಸ ಮಾಡಿಟ್ಟು, ಕಚೇರಿಗೂ ಓಡುವ ಮಹಿಳೆಯರ ಸ್ಥಿತಿ ನೆನೆದರೇ ಬೇಜಾರೆನಿಸುತ್ತದೆ. ನಾನೂ ಸಹ ಸರಕಾರಿ ನೌಕರಳೇ ಆಗಿದ್ದರೂ ಮನೆಯಲ್ಲಿ ನನ್ನ ಮಕ್ಕಳನ್ನು ಸಂಭಾಳಿಸಿಕೊಂಡು, ಅಡುಗೆ ಹಾಗೂ ಇತರೆ ಮನೆವಾರ್ತೆಗಳ ಕುರಿತು ನಾನು ತಲೆಕೆಡಿಸಿಕೊಳ್ಳದಂತೆ ನೋಡಿಕೊಳ್ಳುವಲ್ಲಿ ಅಪಾರ ಬೆಂಬಲ ನೀಡುತ್ತಿರುವ ನನ್ನತ್ತೆ ಹಾಗೂ ನಾದಿನಿಯರ ಸಹಕಾರವನ್ನು ಪ್ರತೀಕ್ಷಣವೂ ನೆನೆಯುತ್ತೇನೆ. ಮನೆಯವರ ಹೃತ್ಪೂರ್ವಕ ಸಹಕಾರವೇ ನಿಶ್ಚಿಂತೆಯಿಂದ ಹೊರಗಿನ ಕೆಲಸದಲ್ಲಿ ನಮ್ಮಂತಹ ಮಹಿಳೆಯರು ತೊಡಗಿಕೊಳ್ಳುವಂತೆ ನೋಡಿಕೊಳ್ಳುವುದು. ಅದು ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಆದರೆ ಈ ಬಗೆಯ ಸಹಕಾರ ಎಲ್ಲರಿಗೂ ದಕ್ಕುವುದೇ ಎಂಬುದು ನಿಜವಾದ ಪ್ರಶ್ನೆ. ಹಾಗಾಗಿ, ಮನೆ ಕೆಲಸಕ್ಕೆ, ಅಡುಗೆ ಕೆಲಸಕ್ಕೆ ಎಂದು  ಹೊರಗಿನಿಂದ ಬರುವ ಸಹಾಯಕರಿಗೆ ತಿಂಗಳಿಗೆ ಇಷ್ಟೆಂದು ಸಂಬಳ ನಿಗದಿ ಮಾಡಿ ನಿಗದಿತ ಅವಧಿಗೆ ಕೊಡುವ ನಾವು, ನಮ್ಮದೇ ಮನೆಯಲ್ಲಿ ನಮಗಾಗಿಯೇ ದುಡಿಯುವ ನಮ್ಮವರಿಗೆ ಅದೇನು ಬೆಲೆ ಕೊಡುತ್ತಿದ್ದೇವೆ ಎಂಬುದನ್ನು ಕುರಿತು ಆಲೋಚಿಸಲು ಇದು ಸಕಾಲ.     ‘ಕಾಯಕವೇ ಕೈಲಾಸ’ ಎಂದ ಬಸವಣ್ಣನವರಂತೆ  ದುಡಿಮೆಯನ್ನು ಗೌರವಿಸಬೇಕು ನಾವು. ಅವರ ವಚನದ ವಾಕ್ಯವೊಂದನ್ನು ಈ ಲೇಖನದ ಶುರುವಿಗೆ ಬಳಸಿರುವೆ. ಪೂರ್ಣ ವಚನದ ಸಾರ ಬೇರೆಯಿದೆ. ಆದರೆ, ಲೇಖನದ ಆಶಯವಿಷ್ಟೇ… ಮನೆವಾರ್ತೆಗೆ ಒದಗಿಬಂದು,  ಜೊತೆಗೆ ಕೈ ಜೋಡಿಸುವ ಸುಬುದ್ಧಿ ಲಾಕ್ ಡೌನಿನ ಕಾರಣಕ್ಕೆ ಈಗ ಮನೆಯ ಒಳಗೆ ಬಂಧಿಯಾಗಿರುವ ಎಲ್ಲರಿಗೂ ಬರಲಿ. ಮರೆಮಾಚಲ್ಪಟ್ಟಿರುವ ಮನೆಯ ಕಾರ್ಮಿಕರ ದುಡಿಮೆಯನ್ನು ಗುರುತಿಸಿ ಗೌರವಿಸುವ ಮನಸ್ಥಿತಿ ಎಲ್ಲರಲ್ಲೂ ಮೂಡಲಿ.             ••••••••••••••••••••••••••••••••

ಕಾರ್ಮಿಕ ದಿನದ ವಿಶೇಷ-ಬರಹ Read Post »

ಇತರೆ

ಕಾರ್ಮಿಕ ದಿನದ ವಿಶೇಷ -ಲೇಖನ

ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಶಿವಲೀಲಾ ಹುಣಸಗಿ ಕಾರ್ಮಿಕರ ದಿನಕ್ಕೊಂದು ಬೆಲೆ ಬರಬೇಕಿದೆ ಇಂದು ಸಮಾನತೆ,ಅಸಮಾನತೆಗಳ ನಡುವೆ ತುಟಿಕಚ್ಚಿ ಹಿಡಿದು ಮೌನದೊಳಗೆ ತನ್ನಾತ್ಮವನ್ನು ಬಿಗಿದು ಒಡಲೊಳಗೆ ಅಗ್ನಿಯನ್ನು ಬಚ್ಚಿಟ್ಟು ನಡೆಯುವ ಸಂಸಾರದ ನೋಗವನ್ನು ಎಳೆಯುವ ಜೀವವೆಂದರೆ ಅದು ಹೆಣ್ಣು… ಸಾಧನೆಯ ಮೆಟ್ಟಿಲೇರಿದ ಮಹಿಳೆಯರ ಸಾಲು ಬೆರಳೆನಿಕೆಯಷ್ಟಿದ್ದರೂ,ಅದೇ ಮಹತ್ತರ ಶಿಖರವೆಂಬಂತೆ ಬಿಂಬಿಸಿ, ಮಹಿಳಾ ಸಬಲೀಕರಣವಾಗಿದೆಯೆಂದು ಕಾಣುವ ಪರಂಪರೆ ಭಾರತದ ನಾಗರಿಕ ಸಮಾಜದಲ್ಲಿ ಬೇರೂರಿದೆ..ನಮ್ಮ ದೇಶ ಪುರುಷ ಪ್ರಧಾನ ಸಮಾಜದ ಅಡಿಯಲ್ಲಿ ಮುಂದುವರೆದಿದ್ದಕ್ಕೆ ಇತಿಹಾಸ ಸಾಕ್ಷಿ….ಆದರೆ  ಸಾಧಕರೂ ಇನ್ನೂ ಎಲೆಮರೆಯಕಾಯಿಯಂತೆ ಜೀವನದ ಸಾಗರದಲ್ಲಿ ಬರುವ ಕಷ್ಟಗಳ ನೀಗಿಸುತ್ತ ಹೇಳ ಹೆಸರಿಲ್ಲದೆ ಕಣ್ಮರೆಯಾಗುವ ಸಾವಿರಾರು ಮಹಿಳೆಯರ ಜೀವನ “ಆಟಕ್ಕೂಂಟು ಲೆಕ್ಕಕ್ಕಿಲ್ಲ” ಎಂಬಂತಾಗಿದೆ. ತಮ್ಮ ದಿನನಿತ್ಯದ ಬದುಕಿನ ಹೋರಾಟಕ್ಕೆ ಮೈಲುಗಟ್ಟಲೇ ಉದ್ಯೋಗ ಅರಸಿ ವಲಸೆ ಬರುವ ಅಸಂಖ್ಯಾತ ಮಹಿಳೆಯರ ಬವಣೆಯನ್ನು ನೀಗಿಸುವುದಿರಲಿ, ಗಮನಿಸುವ ಇಚ್ಛಾಶಕ್ತಿಯು ಸರಕಾರ ನಡೆಸುವ ಜನಪ್ರತಿನಿಧಿಗಳಿಗೂ ಕಂಡು ಬಂದಿಲ್ಲ..! ಬದುಕಿನ ಅನಿವಾರ್ಯತೆಗೆ ಕಟ್ಟ ಬಿದ್ದು ಲಕ್ಷಾಂತರ ಮಂದಿ ಮಹಿಳಾ ಕಾರ್ಮಿಕರಾಗಿ ಗಾರ್ಮೆಂಟ್ಸ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗಾರ್ಮೆಂಟ್ಸಯೆಂಬ ನರಕ ನಮ್ಮ ದೇಶದಲ್ಲಿ ಒಂದು ವರದಿ ಪ್ರಕಾರ 28,000 ಸಾವಿರ ಉಡುಪಿನ ಕಾರ್ಖಾನೆಗಳಿವೆ.ಅದರಲ್ಲಿ ಶೇ 70% ರಷ್ಟು ರಫ್ತಿಗಾಗಿ ಉತ್ಪಾದನೆ ಮಾಡುವ ಕಾರ್ಖಾನೆಗಳು. ಬೆಂಗಳೂರಲ್ಲಿ  3800 ಕಾರ್ಖಾನೆಗಳಿವೆ.ಒಟ್ಟಾರೆ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು 8,00,000 ಲಕ್ಷ. ಶ್ರಮದ ಶೋಷಣೆ ತೀವ್ರವಾಗಿದೆ.14 ರಿಂದ 30 ರ ವಯಸ್ಸಿನ ಮಹಿಳೆಯರನ್ನು ಉಡುಪು ಕಾರ್ಖಾನೆಗಳಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವರು. 10 ರಿಂದ 12 ಗಂಟೆ ಕೆಲಸಕ್ಕೆ ಒತ್ತಾಯ. ಮಹಿಳಾ ಕಾರ್ಮಿಕರು ದೈಹಿಕವಾಗಿ ಸದೃಡರಿದ್ದರೂ, ಮನೆಗೆಲಸ ಮುಗಿಸಿ ಕಾರ್ಖಾನೆಗಳಿಗೆ ಬರುವ ಮಹಿಳೆಯರಿಗೆ ನೆಮ್ಮದಿಯಿಲ್ಲ.ಗೇಟಿನಿಂದ ಹಿಡಿದು ಕೆಲಸಕ್ಕೆ ತೊಡಗುವವರೆಗೂ ಸೂಪರ್ ವೈಸರಗಳು,ಪ್ರೊಡಕ್ಷನ್ ಮ್ಯಾನೇಜರ್ ಗಳ ಕಿರುಕುಳವನ್ನು ಸಹಿಸಿಕೊಳ್ಳಲೇಬೇಕು. ಒಂದು ವೇಳೆ ಅವರ ವಿರುದ್ಧ ತಿರುಗಿಬಿದ್ದರೆ ಕೆಲಸ ಕಳೆದುಕೊಳ್ಳುವ ಭಯ ಬೇರೆ.! ಇನ್ನೂ ಕೈಗಾರಿಕಾ ಪ್ರದೇಶದಲ್ಲಿ 500 ರಿಂದ 600 ಗಾರ್ಮೆಂಟ್ಸಗಳಿವೆ ಅಲ್ಲಿ ದುಡಿಯುವ ಮಹಿಳೆಯರಿಗೆ ತಮ್ಮ ಏಳೆಗೂಸಿಗೆ ಹಾಲು ಕುಡಿಸಲು ಸಮಯ ನೀಡುವುದಿಲ್ಲ. ಹಾಲಿಣಿಸಿ ತಡವಾಗಿ ಬಂದರಂತೂ ಅಶ್ಲೀಲ ಮಾತುಗಳಿಂದ ನಿಂದಿಸುವುದು ಎಂಬುದು ನುಂಗಲಾರದ ಅಸಹನೀಯ ಸನ್ನಿವೇಶ. ಒತ್ತಡವೆಂಬ ಸಂಕಟ,ನೋವು ನಮ್ಮ ರಾಜ್ಯದ ಗಾರ್ಮೆಂಟ್ಸನಲ್ಲಿ ಎಂಟು ಲಕ್ಷ ಕಾರ್ಮಿಕರಿದ್ದು.ಅದರಲ್ಲಿ ಮಹಿಳಾ ಕಾರ್ಮಿಕರ ಸಂಖ್ಯೆ ಶೇಕಡಾ 85% ರಷ್ಟು ಅಂದರೆ  6 ಲಕ್ಷ 80 ಸಾವಿರ ಮಹಿಳೆಯರು ಹಗಲು ರಾತ್ರಿ ಕಣ್ಣಿಗೆ ಸರಿಯಾಗಿ ನಿದ್ರಿಸದೇ ದುಡಿಯುತ್ತಿರುವುದು.ಯ್ಯಾರ ಕಣ್ಣಿಗೂ ಕಾಣಿವುದಿಲ್ಲ.ಏಕೆಂದರೆ ಅವರ ಚಿಂತನೆ ಮನೆಯಂಗಳದಿಂದ ಗಾರ್ಮೆಂಟ್ಸ ವರೆಗೆ ಮಾತ್ರ.ಅಲ್ಲಿಗೆ ಅವರ ಬದುಕು ಮುಗಿಯಿತು. ಪ್ರತಿನಿತ್ಯ ಕೆಲಸಕ್ಕೆ ಬೆಳಿಗ್ಗೆ ೯. ರಿಂದ ಸಂಜೆ ೫.೩೦.ಆದರೆ ನಿತ್ಯವು ಅರ್ಧಗಂಟೆ ಹೆಚ್ಚು ಕೆಲಸ ಮಾಡಲೇಬೇಕು. ಅದು ಕಡ್ಡಾಯ.ಸಂಜೆ ಸೈರನ ಮೊಳಗಿದ ಮೇಲೆ ಮನೆಯತ್ತ ಹೋಗಲು ತವಕ ಆಗದು, ಏಕೆಂದರೆ ಮ್ಯಾನೇಜರ್ ಗಳು ಗುರುತಿನ ಚೀಟಿಗಳನ್ನು ತಮ್ಮಲ್ಲಿಟ್ಟಿಕೊಂಡು ಅರ್ಧಗಂಟೆ ಹೆಚ್ಚುವರಿ ಕೆಲಸವಾದ ಮೇಲೆ ಚೀಟಿ ನೀಡಿ ಕಳಿಸುವರು.ಹೆಚ್ಚುವರಿ ಕೆಲಸಕ್ಕೆ ವೇತನವಿಲ್ಲ. ಕಡಿಮೆ ವೇತನ,ಹೆಚ್ಚುಕೆಲಸಕ್ಕೆನೂ ಕೊರತೆಯಿಲ್ಲ. ಒತ್ತಡಗಳ ನಡುವೆ ನಿಂತವರು ಕುಳ್ಳುವಹಾಗಿಲ್ಲ, ಕುಂತವರು ನಿಲ್ಲುವ ಹಾಗಿಲ್ಲ,ಬೆನ್ನಿಗೆ ಆಸರೆಯು ಇಲ್ಲ.ಎಲ್ಲಿ ಶೌಚಾಲಯಕ್ಕೆ ಹೋಗಬೇಕಾಗುತ್ತದೆ ಎಂಬ ಕಾರಣದಿಂದ ಮಹಿಳೆಯರು ನೀರು ಕುಡಿಯುವುದಿಲ್ಲ.ಊಟಕ್ಕೆ ಅರ್ಧಗಂಟೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ…. ಗಾಳಿಯಾಡಲು ಅವಕಾಶವಿಲ್ಲದಿರುವುದರಿಂದ ಬಟ್ಟೆಗಳ ಧೂಳು ಕಾರ್ಮಿಕರ ಶ್ವಾಸಕೋಶ ಸೇರುತ್ತದೆ. ಗಂಟಲು ಕ್ಯಾನ್ಸರ್, ರಕ್ತ ಹೀನತೆ,ನಿದ್ದೆ ಬರದಿರುವುದು.ಕಾಲು ಮತ್ತು ಬೆನ್ನು ನೋವು,ಗರ್ಭಪಾತ ಅತೀ ಸಾಮಾನ್ಯವಾಗಿ ಮಹಿಳಾ ಕಾರ್ಮಿಕರಿಗೆ ಕಂಡುಬರುವಂತಹ ಆತಂಕಗಳು. ನಾವು ಧರಿಸುವ ಬಟ್ಟೆಯ ಹಿಂದಿರುವ ಯಾತನೆ ಮಹಿಳೆಯ ಬದುಕಿನ ಚಿತ್ರಣವೆಂದರು ತಪ್ಪಾಗದು. ಅಸಹನೀಯ ಸನ್ನಿವೇಶಕ್ಕೆ ಮಹಿಳೆ ಬಲಿಯಾಗುವುದು. ವಿಚಿತ್ರವೆಂದರೆ ಕಾರ್ಮಿಕರು ಎಂದರೆ ಯಂತ್ರದಂತೆ ವಿಶ್ರಾಂತಿ ಪಡೆಯದೇ ಗಾಣದೆತ್ತಿನ ಹಾಗೆ ದುಡಿಯುತ್ತಿಬೇಕು.ಮಹಿಳೆಯ ದೇಹದಲ್ಲಿ ಉಂಟಾಗುವ ಜೈವಿಕ ಪ್ರಕ್ರಿಯೆಗಳನ್ನು ಸಂಪ್ರದಾಯ ಮತ್ತು ಆಚರಣೆಗಳಚೌಕಟ್ಟಿನಲ್ಲಿ ನೋಡುವ ಮಟ್ಟಿಗೆ ಭಾರತದ ಪುರುಷ ಸಮಾಜ ಮತ್ತು ಆಡಳಿತ ವ್ಯವಸ್ಥೆ ನೈತಿಕ ಅವನತಿ ಹೊಂದಿರುವುದಂತೂ ಸತ್ಯ… ಮಹಿಳೆ ಮತ್ತು ಯುವತಿಯರಿಗೆ ಸಹಜವಾಗಿ ಕಂಡುಬರುವ ಋತುಚಕ್ರದ (ಮುಟ್ಟಿನ )ಸಂದರ್ಭದಲ್ಲಿ ನೋವನ್ನು ಸಹಿಸಿಕೊಳ್ಳುವಂತೆ ಮಾಡುವುದರೊಂದಿಗೆ ಹೆಚ್ಚು ಕೆಲಸ ಮಾಡಿಸಿಕೊಳ್ಳುವ ಸಲುವಾಗಿ ಕೆಲವು ಗಾರ್ಮೆಂಟ್ಸ ಕಂಪನಿಗಳು ಹೆಸರಿಲ್ಲದ ಅಪಾಯಕಾರಿ ಮಾತ್ರೆಗಳನ್ನು ನೀಡುತ್ತಿರುವ ಆಘಾತಕಾರಿ ಅಂಶ ಚೆನೈನಲ್ಲಿ ಕಂಡುಬಂದಿರುವುದಲ್ಲದೆ..ಕೆಲಸ ಹೆಚ್ಚಿಸಲು ಅನುಸರಿಸುವ ಮಾರ್ಗ, ಪಾಯಕಾರಿಯೆಂದರೆ ತಪ್ಪಿಲ್ಲ. ಈ ಮಾತ್ರೆ..ನೋವು ನಿರೋಧಕವಾದರೂ ನಿರಂತರ ಸೇವನೆಯಿಂದ ಅಡ್ಡ ಪರಿಣಾಮಗಳನ್ನು ಎದುರಿಸುವವುದಂತೂ ಸತ್ಯವೆಂಬ ಮಾತು ವೈದ್ಯರು ದೃಡಪಡಿಸಿದ್ದು, ಇದು ಸಾಧ್ಯವಾಗಿದ್ದು ಥಾಮಸ್ ರಾಯಿಟರ್ಸ್‌‌‌ ಫೌಂಡೇಶನ್ ನಡೆಸಿದ ಅಧ್ಯಯನ ಸಮೀಕ್ಷೆ ಯಿಂದ, ಕಾರ್ಮಿಕ ಕಾನೂನನ್ನು ಉಲ್ಲಂಘಿಸಿವಿತರಿಸಲಾದ ಮಾತ್ರೆಯಿಂದ ಖಿನ್ನತೆ,ಉದ್ವೇಗ,ಮೂತ್ರದ್ವಾರದ ಸೊಂಕು,ಫೈಬ್ರಾಯಿಡ್ ಮತ್ತು ಗರ್ಭಪಾತ ಸಮಸ್ಯೆಗಳು ಉಂಟಾಗಿರುವುದು,ಅದರಿಂದ ಬಳಲುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇನ್ನೂ ಭಾರತದ ಗಾರ್ಮೆಂಟ್ಸ ಪ್ಯಾಕ್ಟರಿಗಳಲ್ಲಿ ಪಾಶ್ಚಾತ್ಯ ಉಡುಪುಗಳಿಗೆ ಇನ್ನಿಲ್ಲದ ಬೇಡಿಕೆ ಹೆಚ್ಚಿರುವುದರಿಂದ ಈ ಬೇಡಿಕೆ ಉತ್ಪಾದನಾ ಪ್ರಮಾಣ ಹೆಚ್ಚಿಸುವ ಸಲುವಾಗಿ ಕೆಲಸ ಮಾಡುವ ಮಹಿಳಾ ಕಾರ್ಮಿಕರನ್ನು ಕಠಿಣವಾದ ನಿಯಂತ್ರಣದಲ್ಲಿಡಲಾಗಿದೆ,ಅದು ಎಷ್ಟೆಂದರೇ ಋತುಚಕ್ರದ ಸಮಯದಲ್ಲೂ ಶೌಚಾಲಯಗಳಿಗೂ ಹೋಗಲಾರದಂತಹ ಹೀನಾಯ ಪರಿಸ್ಥಿತಿ ಎದುರಿಸುತ್ತಿರುವುದು ದುರಂತ..! ಪ್ರೊಡಕ್ಷನ್ಸ್ ಟಾರ್ಗೆಟ್ ನ ಸಂಕಟ ಬೇರೆ..! ಪ್ರತಿ ಕಾರ್ಮಿಕರಿಗೆ ಗಂಟೆಗೆ  140-150 ಪೀಸ್ ಉತ್ಪಾದನಾ ಗುರಿ ನೀಡಲಾಗುತ್ತದೆ.ದಿನದ 8 ಗಂಟೆಯ ಅವಧಿಗೆ   1000-1100 ಪೀಸ್ ಗುರಿ ತಲುಪಲೇ ಬೇಕು.ಒಂದೊಮ್ಮೆ ಗುರಿ ಮುಟ್ಟದಿದ್ದರೆ.ಮೂವರಿಂದ ಬೈಗುಳ ತಪ್ಪಿದ್ದಲ್ಲ. ಅಸಂಘಟಿತ ವಲಯದ ಕಾರ್ಮಿಕರ ನಿತ್ಯ ಗೋಳಾಟ… ಮನುಷ್ಯನೇ ಅನಾರೋಗ್ಯಕ್ಕೆ ಒಳಗಾಗುವಾಗ ಇನ್ನು ಯಂತ್ರಗಳ ಪಾಡೆನು? ಯಂತ್ರಗಳು ಕೆಟ್ಟು ನಿಂತರೆ ಯ್ಯಾರಿಗೂ ಕೆಲಸವಿರುವುದಿಲ್ಲ.ಕೆಲವೊಮ್ಮೆ ಆರ್ಡರ್ ಇರದಿರುವಾಗ ಕಾರ್ಮಿಕರನ್ನು ಮನೆಗೆ ಕಳಿಸುವರು.ಆದರೆ ಕೆಲಸ ಮಾಡದ ಅವಧಿಯನ್ನು ಆಡಳಿತ ಮಂಡಳಿ ದಾಖಲಿಸಿಕೊಂಡು ರಜಾದಿನಗಳಲ್ಲಿ ಬೆಳಿಗ್ಗೆ, ಸಂಜೆ,ಕೆಲಸ ಮಾಡಿ ಬಾಕಿ ಅವಧಿ ತೀರಿಸಲೇ ಬೇಕು.ಇಲ್ಲವಾದರೆ ಬೋನಸ್ ಇಲ್ಲ. ಶ್ರೀಮಂತ ದೇಶಗಳಿಗೆ ರಫ್ತಾಗುವ ಉಡುಪುಗಳಿಗೆ ಇರುವ ಬೆಲೆ,ಬಟ್ಟೆ ತಯಾರಿಸುವ ಮಹಿಳೆಯರಿಗಿಲ್ಲ ಎಂಬುದೇ ಆತಂಕ. ಬಡ ಮಹಿಳಾ ಕಾರ್ಮಿಕರೆಂದರೆ ಎಲ್ಲವನ್ನು ಬಿಟ್ಟವರೆಂಬ ಭಾವನೆ.ಹೇಳೋರು,ಕೇಳೋರುಯಾರಿಲ್ಲವೆಂಬಂತೆ ಗಾರ್ಮೆಂಟ್ಸ ಫ್ಯಾಕ್ಟರಿ ಗಳಲ್ಲಿ ನಡೆದುಕೊಳ್ಳುವ  ರೀತಿಗೆ ನೊಂದು ನುಡಿದು ಮರೆಯಾಗುತ್ತಾರೆ. ಲೈಂಗಿಕ ಕಿರುಕುಳ,  ದೌರ್ಜನ್ಯ ಗಳಿಂದ ಮುಕ್ತರಾಗಿಲ್ಲ.ಮನೆಗೆ ಬರುವ ಸಂದರ್ಭದಲ್ಲಿ ಮೇಲ್ವಿಚಾರಕರು ತಪಾಸಣೆಯ ನೆಪವೊಡ್ಡಿ ಮುಟ್ಟುವುದು‌ ಮಹಿಳೆಯರ ಪಾಲಿಗೆ ಮಾನಸಿಕ ಹಿಂಸೆ. “ಅನುಷ್ಠಾನಕ್ಕೆ ನೂರೆಂಟು ಲೋಪದೋಷಗಳು.” ದೌರ್ಜನ್ಯ, ಲೈಂಗಿಕ ಕಿರುಕುಳ,ಖಿನ್ನತೆಗೆ ಒಳಗಾಗುವುದು. ಗಾರ್ಮೆಂಟ್ಸ ಕಾರ್ಮಿಕರಿಗೆ ಸಾಮಾನ್ಯ ಸಂಗತಿಯಾಗಿದೆ.ಎಕೆಂದರೆ ನೋವಿನ ಜ್ವಾಲೆಯ ಮೇಲೆ ಬೆಂದವರು. ಬರಿ ಬೆಂಗಳೂರಲ್ಲೆ ೧೨೦೦ ಗಾರ್ಮೆಂಟ್ಸ ಗಳಿವೆ.೪.೫ ಲಕ್ಷಕ್ಕೂ ಹೆಚ್ಚು ಕಾರ್ಮಿಕರು. ಬಹುತೇಕವಾಗಿ ಮಹಿಳೆಯರು.ಗ್ರಾಮಿಣಭಾಗದವರು.ಪ್ರತಿ ಐದು ವರ್ಷಗಳಿಗೊಮ್ಮೆ ಗಾರ್ಮೆಂಟ್ಸ ಕಾರ್ಮಿಕರ ವೇತನ ಪರಿಷ್ಕರಣೆಯಾಗಿಲ್ಲವೆನ್ನುವುದು ವಿಷಾದನೀಯ. ಕನಿಷ್ಠ ವೇತನ ೮.೩೦೦ ರೂಪಾಯಿ ಸಿಗುತ್ತಿದ್ದು.ಕನಿಷ್ಠ ವೇತನ ವನ್ನು ಮೂರು ವರ್ಷಕ್ಕೊಮ್ಮೆಯಾದರು ಪರಿಷ್ಕರಣೆ ಮಾಡದಿರುವುದು ಕಾರ್ಮಿಕರ ಬದುಕಲ್ಲಿ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವಾಗಿದೆ. ರಾಜ್ಯ ಸರ್ಕಾರ ೨೦೧೮ ರಲ್ಲಿ ಒಟ್ಟು ೮೨ ಶೆಡ್ಯೂಲ್ಡ್ ಉದ್ಯಮಗಳಲ್ಲಿ ಕನಿಷ್ಠ ಮಾಸಿಕ ವೇತನ ೧೧,೫೦೦ ರೂ.ವೇತನ ನಿಗದಿ ಪಡಿಸಿ ಕರುಡು ಅಧಿಸೂಚನೆ ಪ್ರಕಟಿಸಿತ್ತು. ನಂತರ ಏಕೋ ಗಾರ್ಮೆಂಟ್ಸ ವಲಯವನ್ನು ಹೊರಗಿಡಲಾಯಿತು.ಇದರ ಪರಣಾಮ ಕನಿಷ್ಠ ವೇತನ ೮.೩೦೦/ರೂ.ಗಳಲ್ಲಿಯೇ ಮುಂದುವರೆದಿದೆ ಎಂದರೆ ಗಾರ್ಮೆಂಟ್ಸ ಕಂಪನಿಗಳ ಸ್ವಾರ್ಥ,ಲಾಭಿಯೇ ಇದಕ್ಕೆ ಕಾರಣವೆನ್ನಬಹುದು. “ಪುನಃ ಸಮಾಜದ ಕೆಂಗಣ್ಣಿಗೆ ಗುರಿಯಾದರೆಂಬ ಭಯ“. *ಸವೋಚ್ಛ ನ್ಯಾಯಾಲಯದ ಸೂಚನೆ ಇದ್ದರೂ ದೂರು ಸಲ್ಲಿಸಲು ಸಮಿತಿಗಳನ್ನು ಸ್ಥಾಪಿಸಿರುವುದು ಕೆಲವೇ ಸಂಸ್ಥೆಗಳು ಮಾತ್ರ. *ದೂರು ಸಲ್ಲಿಸಿದ ಮಹಿಳೆಯರು ಕ್ರೂರ ಸಮಾಜವನ್ನು ಎದುರಿಸಬೇಕು.ತಪ್ಪಿತಸ್ಥರಿಗೆ ಛೀಮಾರಿ ಹಾಕುವ ಬದಲು ಮಹಿಳೆಯರ ಮೇಲೆ ಗೂಬೆ ಕೂರಿಸಲಾಗುವುದೆಂಬ ಭಯದಿಂದ ಮಹಿಳೆಯರು ದೂರು ಸಲ್ಲಿಸುವುದಿಲ್ಲ. *ಕೆಲಸ ಕಳೆದು ಕೊಳ್ಳುವ ಭಯ ಮಹಿಳೆಯರನ್ನು ದೂರು ಸಲ್ಲಿಸುವುದರಿಂದ ದೂರವಿಡುತ್ತದೆ. * ನ್ಯಾಯ ತೀರ್ಮಾನಕ್ಕೆ ಸಮಯಾವಕಾಶ ಅಧಿಕ ಬೇಕು. ಅದೊಂದು ಸಂಕಟ ಅನುಭವಿಸಬೇಕು. “ಅಭದ್ರತೆಯನ್ನು ನಿವಾರಿಸುವ ಕ್ರಮಗಳು ಅನಿವಾರ್ಯ. ಕೆಲಸಕ್ಕೆ ಬರುವ ಮಹಿಳೆಯರ ಕೌಟುಂಬಿಕ ಹಿನ್ನೆಲೆ ಸುಖಮಯವಾಗಿರುವುದಿಲ್ಲ.ಯಾವುದೋ ಕಷ್ಟಗಳ ಸುಳಿಗೆ ಸಿಲುಕಿ ಪರಿಹರಿಸಿಕೊಳ್ಳಲು ನೂರಾರು ಕನಸು ಕಂಡು ಸುರಕ್ಷಿತ ಜಾಗದಲ್ಲಿ ನಾವಿದ್ದೇವೆಯೆಂಬ ಭಾವನೆಯಿಂದ ಬಂದಿರುವವರು.ಅವರಿಗೆ ಅಸಹನೀಯ ಸನ್ನಿವೇಶಗಳು,ಲೈಂಗಿಕ ದೌರ್ಜನ್ಯಗಳು,ಕಿರುಕುಳಗಳು,ಮಾನಸಿಕ ಕಿರುಕುಳ ದುಡಿವ ಸ್ಥಳದಲ್ಲಾದರೇ ಎದುರಿಸುವ ಮನೋಬಲವೆಲ್ಲಿ.? ಹೀಗಾಗಿ ಕಾರ್ಮಿಕ ಕಾಯಿದೆ ಮಹಿಳೆಯರಿಗೂ ಅನ್ವಯವಾಗಬೇಕು… * ಪ್ಯಾಕ್ಟರಿಯಿಂದ ಮನೆಗೆ ಹೋಗುವ ಮುನ್ನ ತಪಾಸಣೆ ಮಾಡುವವರು ಮಹಿಳೆಯರಾದರೇ ಸೂಕ್ತ. * ಭಾರತದ ಪ್ಯಾಕ್ಟರಿ ಕಾಯ್ದೆಯನ್ವಯ ವೈದ್ಯಕೀಯ ಔಷಧಿ ಗಳನ್ನು ನುರಿತ ನಸ್೯,ಅಥವಾ ವೈದ್ಯರು ನಿರ್ವಹಿಸಬೇಕು. ಹಾಗೂ ಮಹಿಳಾ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆಗೆ ಅವಕಾಶ ನೀಡಬೇಕು. * ವ್ಯವಸ್ಥಿತ ಶೌಚಾಲಯವಿರಬೇಕು.ಕುಡಿಯೋನೀರು, ಶುದ್ಧಗಾಳಿ,ಅನಾರೋಗ್ಯದವರಿಗೆ ಹಾಗೂ ಬಾಣಂತಿ, ಗರ್ಭಿಣಿಯರಿಗೆ ವಿನಾಯತಿ ನೀಡಬೇಕು. * ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು.ಹಾಗೂ ಪಿ ಎಪ್ ನ್ನು ಮಾಲಿಕರು ಸರಿಯಾದ ವೇಳೆಗೆ ತುಂಬಿ ಸಿಗುವಂತೆ ಮಾಡಬೇಕು.ಓಟಿಗೆ ವೇತನ ನೀಡಬೇಕು.  * ಇಎಸ್ಐ ಮೂಲಕ ರಜೆಗೆ ಅಲಿಯದೇ ಕಂಪನಿಯಲ್ಲೇ ರಜೆ ಪಡೆವ ಸೌಲಭ್ಯ ಪಡೆಯುವಂತಿರಬೇಕು. *ಗಾರ್ಮೆಂಟ್ಸ ಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಗೆ ಅವಕಾಶ ನೀಡಿದರೆ ಸಾಲದು,ಅವರ ಭದ್ರತೆ ಕಡೆಗೂ ಹೆಚ್ಚು ಗಮನವಹಿಸಬೇಕು,ಕ್ಯಾಬ್ನಲ್ಲಿ ಭದ್ರತೆ ನೀಡಬೇಕು. * “ವನಿತಾ ಸಂಗಾತಿ” ಯೋಜನೆಯಡಿ ಗಾರ್ಮೆಂಟ್ಸ ನಲ್ಲಿ ದುಡಿವ ಮಹಿಳಾ ಕಾರ್ಮಿಕರಿಗೆ ಉಚಿತ ಪಾಸ್ ನೀಡುವ ವಿಚಾರ ಜಾರಿಯಲ್ಲಿ ಬರಬೇಕು. ಉಪಸಂಹಾರ. ಹೆಣ್ಣು ಮಕ್ಕಳು ಹೊಸಿಲದಾಟಿ ಪುರುಷರಿಗೆ ಸಮನಾಗಿ ಹೆಗಲು ಕೊಟ್ಟು ದುಡಿಯುವುದು ತಮ್ಮ ಸುಖಕಲ್ಲ..! ಮನೆಯು ನೆಮ್ಮದಿಯಿಂದ ಮುಂದೆ ಸಾಗಲು.ಆದರೆ ಇಂದು ದುಡಿವ ಮಹಿಳೆಯ ಕುರಿತು ಚಿಂತಿಸುವ ವರ್ಗ ಮುಂದೆ ನಿಂತು ಬೆಂಬಲಿಸುತ್ತಿಲ್ಲ..ಮಹಿಳೆ,ದುಡಿದು ತರಬೇಕು, ಹೆರಬೇಕು, ಮಾಡಿಹಾಕಬೇಕು.ಈ ಸ್ಥಿತಿ ಕೂಲಿ ಕಾರ್ಮಿಕರಲ್ಲಿ.ಅದರಲ್ಲೂ ಈ ಗಾರ್ಮೆಂಟ್ಸ ಕಾರ್ಖಾನೆಗಳಲ್ಲಿ ಒಳ ಉಡುಪುಗಳನ್ನು ಹೊಲಿಯುವ, ಅಸಂಖ್ಯಾತರ ಮಹಿಳೆಯರ ಬದುಕು ಬೀದಿ ಪಾಲಾಗುತ್ತಿರುವುದನ್ನು ,ಕಂಡು ಕಾಣದಂತೆ ಕುಳಿತಿರುವ ಪ್ರಭುತ್ವಕ್ಕೆ ಏನು ಹೇಳುವುದು. ಅನಾಹುತವಾದರೆ ಸಾಂತ್ವಾನದ ನುಡಿಯುಯಿಲ್ಲ. ಕೆಲಸವೂಇಲ್ಲ,ಎಲ್ಲ ರೀತಿಯ‌ ದೌರ್ಜನ್ಯ ಗಳನ್ನು  ಮೌನವಾಗಿ ಎದುರಿಸಿ ಅರಳುವ ಮುನ್ನ ಬಾಡಿ ಹೋಗುವ ವೇದನೆಯ ಹೂಗಳು.ಇನ್ನಾದರೂ ಕಾರ್ಮಿಕರೆಂದರೆ ಪುರುಷರಷ್ಟೇಯಲ್ಲ..ಮಹಿಳೆಯರು ಎಂಬುದನ್ನು ಅರಿತು ಸಮಾನತೆ ಕಾಯ್ದುಕೊಳ್ಳಬೇಕಿದೆ…ಅಂದಾಗ ಕಾರ್ಮಿಕ ದಿನಕ್ಕೊಂದು ಬೆಲೆ…..

ಕಾರ್ಮಿಕ ದಿನದ ವಿಶೇಷ -ಲೇಖನ Read Post »

ಇತರೆ

ಕಾರ್ಮಿಕದಿನದ ವಿಶೇಷ-ಲೇಖನ

ಅರ್ಥ ಕಳೆದುಕೊಳ್ಳುವ ಸಮಯ ಪ್ರಮೀಳಾ .ಎಸ್.ಪಿ.ಜಯಾನಂದ್. ಅರ್ಥ ಕಳೆದುಕೊಳ್ಳುವ ಸಮಯ. “ರೈತ ದೇಶದ ಬೆನ್ನೆಲುಬು” ಎನ್ನುವರು.ಹಸಿವು ಇಂಗಿಸುವ ಕಾಯಕ ಮಾಡುವ ರೈತ ದೇಹದ ಮತ್ತು ದೇಶದ ಆಧಾರ  ವಾಗಿರುವುದು ಸತ್ಯ. ಹಾಗಾಗಿಯೇ ದೇಶದ ಹಲವಾರು ಯೋಜನೆಗಳು ರೈತರ ಪರವಾಗಿ ಬಂದು ನಿಲ್ಲುತ್ತವೆ.ಆದರೆ ಕೃಷಿಭೂಮಿ ಇಲ್ಲದವರು,ಕಾರ್ಖಾನೆ ಗಳಲ್ಲಿ ದುಡಿಯುವ ಮಂದಿ,ಕೂಲಿ ಕಾರ್ಮಿಕರು, ಹಲವಾರು ಸ್ತರಗಳಲ್ಲಿ ದುಡಿದು ದೇಶದ ಅಭಿವೃದ್ಧಿಗೆ ಕರಣರಾಗುತ್ತಾರೆ.ಇವರುಗಳಲ್ಲಿ ಎರಡು ವಿಧ. 1-ಸಂಘಟಿತ ಕಾರ್ಮಿಕರು 2-ಅಸಂಘಟಿತ ಕಾರ್ಮಿಕರು. ಈ ದೇಶದ ಕಾರ್ಮಿಕ ಕಾಯ್ದೆಯು ಹಲವು ಸೌಲಭ್ಯಗಳು ಮತ್ತು ಭದ್ರತೆಯನ್ನು ಒದಗಿಸಿದರು ಕೂಡ ಅದು ಕೇವಲ ಬೆರಳೆಣಿಕೆಯಷ್ಟು ಕಾರ್ಮಿಕರನ್ನು ಮಾತ್ರ ತಲುಪುತ್ತಿದೆ. ಕಾರ್ಮಿಕರ ಪರವಾಗಿ ಹುಟ್ಟಿಕೊಂಡ ಅನೇಕ ಸಂಘಗಳು ಕಾರ್ಮಿಕರ ಕಲ್ಯಾಣ ಮರೆತು ಒತ್ತಡ ಗುಂಪುಗಳಾಗಿ ಕೇವಲ ಹಣ ಪೀಕುವ ಕಾರ್ಯ ಮಾಡುತ್ತಿರುವುದು ತಿಳಿಯದ ವಿಷಯವೇನಲ್ಲ. ನಗರ ಪ್ರದೇಶದ ಬಹುರಾಷ್ಟ್ರೀಯ ಕಂಪನಿಗಳ ಲ್ಲಿನ ಕಾರ್ಮಿಕರು ಒಗ್ಗಟ್ಟು ಪ್ರದರ್ಶನ ದಿಂದ ಬಹುಬೇಗನೆ ಸವಲತ್ತು ಪಡೆಯುವಲ್ಲಿ ಯಶಸ್ಸು ಕಾಣುತ್ತಾರೆ.ಆದರೆ ತಳ ಹಂತದಲ್ಲಿ ಕೆಲಸ ಮಾಡುವ  ಕಾರ್ಮಿಕ ರಾದ *ಅಂಗನವಾಡಿ ಕಾರ್ಯಕರ್ತೆ ಯಾರು *ಆಶಾ ಕಾರ್ಯಕರ್ತೆಯರು *ನೀರ್ಗಂಟಿ ಗಳು *ಬಿಸಿಯೂಟದ ನೌಕರರು *ಪೌರಕರ್ಮಿಕರು *ರಸ್ತೆ ,ಚರಂಡಿ ಕೆಲಸಗಾರರು *ಕಟ್ಟಡ ಕಾರ್ಮಿಕರು *ಮಾಲ್ಗಳು,ಆಸ್ಪತ್ರೆ,ಹೋಟೆಲ್, ಅಂಗಡಿಗಳಲ್ಲಿ ದುಡಿಯುವವರು *ದಮನಿತ ಲೈಂಗಿಕ ಕಾರ್ಯಕರ್ತರು *ಮಾರುಕಟ್ಟೆಯಲ್ಲಿ, ರೈಲ್ವೆ ,ಬಸ್ ನಿಲ್ದಾಣದಲ್ಲಿ ದುಡಿಯುವ ಹಮಾಲಿಗಳು. *ವಾಚಮನ್ ಗಳು *ಕಂಪ್ಯೂಟರ್ ಅಪರೇಟರ್ಸ್ * ಹೊರಗುತ್ತಿಗೆ ಕೆಲಸ ಗಾರರು…. ಇನ್ನೂ ಮುಂತಾದ ಕೆಲಸಗಾರರಲ್ಲಿ ಕೆಲವರು ಸಂಘಟಿತರಾಗಿ ದ್ದರೆ ಹಲವರಿಗೆ ಸಂಘಟನೆಯ ಮಹತ್ವವೇ ತಿಳಿದಿಲ್ಲ. ಸಂಘಟನೆ ಮಾಡಿದವನ ನೌಕರಿಗೆ ಕುತ್ತು. ಅನೇಕ ವಲಯಗಳಲ್ಲಿ ಕಾರ್ಮಿಕನೊಬ್ಬ ಸಂಘಟನೆ ಮಾಡಿ ಹೋರಾಟಕ್ಕೆ ಮುಂದೆ ನಿಂತರೆ ಅವನನ್ನು ಕ್ಷುಲ್ಲಕ ಕಾರಣ ನೀಡಿ ಕೆಲಸದಿಂದ ವಜಾ ಗೊಳಿಸುವ ಕಾರ್ಯವನ್ನು ಆಡಳಿತ ಮಂಡಳಿ ಮಾಡುತ್ತದೆ.ಸರ್ಕಾರ ದ ಇಲಾಖೆಯ ಅಧಿಕಾರಿಗಳು ಇದರ ಹೊರತಾಗಿ ಕಾರ್ಯನಿರ್ವಹಿಸಿಲ್ಲ. ಕಾರ್ಮಿಕರ ಪರ ನಿಲ್ಲವ ನೌಕರನನ್ನು ಮಟ್ಟ ಹಾಕಲು ಅಧಿಕಾರ ವರ್ಗ ಸದಾ ಹಪಹಪಿಸುತ್ತದೆ.ಈ ಕಾರಣದಿಂದ ಲೇ ಕೆಲವು ಕಾರ್ಮಿಕರು ಭಯದಿಂದ ಹೊರಗಿನ ಕಾರ್ಮಿಕ ಪಕ್ಷ ಮತ್ತು ಸಂಘಟನೆ ಗಳ ಜೊತೆ ಕೈ ಜೋಡಿಸುತ್ತವೆ. ಉದಾಹರಣೆಗೆ… ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಕಾರ್ಮಿಕರು, ನಗರಪಾಲಿಕೆ ವ್ಯಾಪ್ತಿಯ ಗಾರ್ಮೆಂಟ್ಸ್ ಕಾರ್ಮಿಕರು..ಹೊರಗಿನ ಸಂಘಟನೆ ಜೊತೆ ಸೇರಿ ಹೋರಾಟಕ್ಕೆ ಇಳಿಯುತ್ತಾರೆ. ಭ್ರಷ್ಟ ಕಾರ್ಮಿಕ ಮುಖಂಡರು. ಇಂದು ಭಾರತದ ಅನೇಕ ಕಾರ್ಮಿಕ ಸಂಘಟನೆಗಳ ಪರವಾಗಿದ್ದ ಪಕ್ಷದ ಮುಖಂಡ ರು ರಾಜಕೀಯ ಅಧಿಕಾರ ದ ಲಾಲಸೆಗೆ ಬಿದ್ದು ತಮ್ಮತನವನ್ನು ಕಳೆದುಕೊಂಡು ಕೇವಲ ಹೆಸರಿಗಷ್ಟೇ ಉಳಿದಿವೆ. ಒಂದು ದಿನದ ಮುಷ್ಕರ ಕ್ಕೆ ಕಾರ್ಮಿಕರನ್ನು ಪ್ರೇರೇಪಿಸಿ ಅವರಿಂದ ಕಡ್ಡಾಯವಾಗಿ ಹಣ ವಸೂಲಿ ಮಾಡಲಾಗುತ್ತದೆ. ಮೊದಲೇ ಬಡಪಾಯಿ ಸ್ಥಿತಿ ಯಲ್ಲಿನ ಕಾರ್ಮಿಕರು ಸಂಘಟನೆ ನೆಪದಲ್ಲಿ ಹಣ ನೀಡಬೇಕಾದ ಸ್ಥಿತಿಯಿದೆ.ಹೀಗಿರುವಾಗ ಕೆಲವು ಕಾರ್ಮಿಕ ಪರವಾದ ಪಕ್ಷದ ನಾಯಕ ರು ಸರ್ಕಾರದ ಬಂಡವಾಳ ಗಾರರ ಕಾರ್ಮಿಕ ವಿರೋಧಿ ನೀತಿಯನ್ನು ಬೆಂಬಲಿಸಿ ಸ್ವಾಮಿನಿಷ್ಠೆ ವ್ಯಕ್ತಪಡಿಸಿ ಸ್ವಕಾರ್ಯ ಪೂರ್ಣ ಗೊಳಿಸಿಕೊಳ್ಳುವುದನ್ನು ಕಾಣ ಬಹುದಾಗಿದೆ. ಮಹಿಳಾ ಕಾರ್ಮಿಕರ ದುಸ್ಥಿತಿ. ಅನೇಕ ಕಡೆ ತಾವೇ ಕೇಳಿ ಪಡೆದ ಉದ್ಯೋಗ ದಲ್ಲಿರುವ ಮಹಿಳೆಯರ ಸ್ಥಿತಿ ಚಿಂತಾಜನಕವಾಗಿದೆ.ಅದರಲ್ಲಿಯೂ ಗಾರ್ಮೆಂಟ್ಸ್ ಮತ್ತು ವಾಹನಗಳ ಲ್ಲಿ  ನಿಂತು ಕೆಲಸ ಮಾಡುವ ಹೆಣ್ಣುಮಕ್ಕಳು ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವುದು ಆಕೆಯ ಕುಟುಂಬದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತದೆ.ಕೌಟುಂಬಿಕ ಸಾಮರಸ್ಯ ಕುಂಟಿತ ವಾಗಿ ಮಕ್ಕಳು ಅಪರಾಧಿ ಚಟುವಟಿಕೆ ಗಳಲ್ಲಿ ಮುಂದುವರೆಯುವುದನ್ನು ನೋಡಬಹುದಾಗಿದೆ. ಸದಾಕಾಲ ತಮ್ಮ “ನೌಕರಿ ಭದ್ರತೆ” ಯ ಬಗ್ಗೆ ಯೋಚಿಸೋ ಮಹಿಳೆಯರು ಬಹುಬೇಗ ಒತ್ತಡಕ್ಕೆ ಸಿಲುಕುತ್ತಾರೆ. ಕುಟುಂಬ ದೊಳಗಿನ ಸ್ತ್ರೀಯರ ಮಾನಸಿಕ ಮತ್ತು ದೈಹಿಕ ಆರೋಗ್ಯ ವು ತನ್ನ ಕುಟುಂಬದ ಮೇಲಷ್ಟೇ ಅಲ್ಲ ಇಡೀ ದೇಶದ ಮೇಲೂ ಪ್ರಭಾವ ಬೀರುತ್ತದೆ ಎಂಬುದನ್ನು ಮರೆಯಬಾರದು.        ಹಾಗಾಗಿ ಮಹಿಳಾ ಕಾರ್ಮಿಕರ ಬಗ್ಗೆ ಅಸಡ್ಡೆ ತೋರಲೇ ಬಾರದು. ಅಸಂಘಟಿತ ಕಾರ್ಮಿಕರು. ಅಲ್ಲಲ್ಲಿ ಕಡಿಮೆ ಸಂಖ್ಯೆ ಮತ್ತು ಚದುರಿಹೋದ ಕಾರ್ಮಿಕರನ್ನು ಸಂಘಟನೆ ಮಾಡಲು ಯಾರೂ ಮುಂದೆ ಬರುವುದಿಲ್ಲ.ಇಲ್ಲಿ ಅವರನ್ನು ಗುರುತಿಸುವುದೇ ದೊಡ್ಡ ಸವಾಲು. ಒಂದು ದಿನ ತರಕಾರಿ ಮಾರಿದ ವನೊಬ್ಬ ಇನ್ನೊಂದು ದಿನ ಕಟ್ಟಡ ಕರ್ಮಿಕನಾಗಿ ಮಗದೊಂದು ದಿನ ವಾಚಮನ್ ಆಗಿ ಕೆಲಸ ಮಾಡುವ ಬಹುತೇಕ ಮಂದಿ ಇದ್ದಾರೆ.ಹಾಗೆಯೇ ವಲಸೆ ಇವರ ಇನ್ನೊಂದು ಸಮಸ್ಯೆ. ಕ್ರಷರ್ ಗಳ ಕಾರ್ಮಿಕ ವರ್ಗವೂ ಇದಕ್ಕೆ ಹೊರತಾಗಿಲ್ಲ. ನಿಗಧಿತ ಗುರುತಿನ ಚೀಟಿ ನೀಡಿ ಸೌಲಭ್ಯಗಳನ್ನು ಒದಗಿಸಲು ಅಸಂಘಟಿತ ಕಾರ್ಮಿಕರನ್ನು ಗುರುತಿಸಲು ಬೇರು ಮಟ್ಟದಲ್ಲಿ ಕೆಲಸ ಮಾಡುವ ನೌಕರರನ್ನೇ ಇಲ್ಲಿ ಬಳಸಿಕೊಳ್ಳಬೇಕಾಗುತ್ತದೆ. ಕಾರ್ಮಿಕ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವ ಬದಲು ವಂದಿಮಾಗದರಾದರೆ, ಬಂಡವಾಳ ಹೂಡಿಕೆದಾರರ,ಆಡಳಿತ ಮಂಡಳಿ ಅಧಿಕಾರ ವರ್ಗದವರ ಬಾಲ ಹಿಡಿಯುವ ಕಾರ್ಮಿಕ ಪಕ್ಷಗಳಿದ್ದರೆ ದುಡಿಯುವ ಕೈಗಳು ಕೊಳೆಯುತ್ತವೆಯೇ ಹೊರತು ನೆಮ್ಮದಿಯಿಂದ ಅನ್ನ ತಿನ್ನಲು ಸಾಧ್ಯವಿಲ್ಲ. ಈ ದೇಶದ ಅಧಿಕಾರಿಗಳು, ನಾಯಕರು,ಬಡ ಕಾರ್ಮಿಕರ ನೋವು ಅರಿಯದೇ ಕಾರ್ಮಿಕರ ಹೋರಾಟಗಳನ್ನು ಮತ್ತು ಪ್ರಾಮಾಣಿಕ ಮುಂದಾಳುಗಳನ್ನು ದಹಿಸದೇ ಗೌರವ ದಿಂದ ನಡೆಸಿಕೊಳ್ಳಬೇಕಿದೆ. ಆಗ ಮಾತ್ರ ಮೇ-ಒಂದರ ಕಾರ್ಮಿಕ ದಿನಕ್ಕೊಂದು ಅರ್ಥ ಸಿಗಬಹುದೇನೋ. ಕೇವಲ ದಿನ ಒಂದನ್ನು ಸಂಭ್ರಮಿಸುವುದು ಕಣ್ಣೊರೆಸುವ ತಂತ್ರವಾಗುತ್ತದೆಯೇ ಬೇರೇನೂ ಸಾಧ್ಯವಾಗುವುದಿಲ್ಲ. *******

ಕಾರ್ಮಿಕದಿನದ ವಿಶೇಷ-ಲೇಖನ Read Post »

You cannot copy content of this page

Scroll to Top