ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ಲೇಖನ ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ ವಿಜಯಶ್ರೀ ಹಾಲಾಡಿ ಕರ್ನಾಟಕದ ಸಾಹಿತ್ಯ ಜಗತ್ತಿನಲ್ಲಿ `ಮಕ್ಕಳ ಸಾಹಿತ್ಯ’ ಎಂಬೊಂದು ಪ್ರಕಾರ ಹೇಗಿದೆ ಎನ್ನುವ ಕಡೆಗೆ ಯೋಚನೆ ಹರಿಸಿದರೆ ಬಹಳ ಖೇದವೂ, ಆಶ್ಚರ್ಯವೂ ಉಂಟಾಗುತ್ತದೆ. ಖೇದ ಏಕೆಂದರೆ ಏಕಕಾಲದಲ್ಲಿ ನಮ್ಮ ವರ್ತಮಾನವೂ, ಭವಿಷ್ಯವೂ ಆಗಿರುವ ಮಕ್ಕಳಿಗಾಗಿ ಇರುವ ಸಾಹಿತ್ಯ ಅಲಕ್ಷ್ಯವಾಗಿರುವುದಕ್ಕೆ. ಆಶ್ಚರ್ಯವೇಕೆಂದರೆ ಇಂತಹ ತಿರುಳನ್ನೇ ನಿರ್ಲಕ್ಷಿಸಿ ಇಡೀ ಸಾಹಿತ್ಯಲೋಕ ನಿಶ್ಚಿಂತೆಯಿಂದ ಇದ್ದು ಬಿಟ್ಟಿರುವುದಕ್ಕೆ! ಸಾಹಿತ್ಯ ವಲಯದ ಹಲವರೂ, ಸಂಸ್ಥೆ-ಅಂಗಸಂಸ್ಥೆಗಳೂ, ಸ್ವತಃ ಬರಹಗಾರರೂ, ಓದುಗರು ಎಲ್ಲರೂ ಸೇರಿ ಪಕ್ಕಕ್ಕೆ ಎತ್ತಿಟ್ಟು ಮರೆತುಬಿಟ್ಟ ಒಂದು ಸೃಜನಶೀಲ ಮಾಧ್ಯಮವಿದು. ಆದರೆ ಈ ಸಾಹಿತ್ಯ ಪ್ರಕಾರವನ್ನು ಅಲಕ್ಷಿಸಿದರೆ ನಮ್ಮ ಬದುಕಿನ ಆಶಾವಾದವಾದ ಮಕ್ಕಳನ್ನು, ಅವರ ಕನಸುಗಳನ್ನು ತುಳಿದಂತೆ ಎನ್ನುವುದಂತೂ ಸತ್ಯ!  ಶಿಶುಸಾಹಿತ್ಯದ ಕುರಿತು ಚಿಂತಿಸುವಾಗ ಏಳುವ ಬಹುಮುಖ್ಯ ಪ್ರಶ್ನೆಗಳೆಂದರೆ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೇ? ಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೆ? ಈ ಸಾಹಿತ್ಯವನ್ನು ಓದುವವರು ಕಡಿಮೆಯೆ ಅಥವಾ ಗಾಂಭೀರ್ಯದ ಹೆಸರಲ್ಲಿ ಮಕ್ಕಳ ಸಾಹಿತ್ಯವನ್ನು ಮೂಲೆಗುಂಪಾಗಿಸಲಾಗಿದೆಯೆ? ಇಷ್ಟಕ್ಕೂ `ಮಕ್ಕಳ ಸಾಹಿತ್ಯ’ ಎನ್ನುವುದಕ್ಕೆ ವ್ಯಾಖ್ಯೆ ಏನು? ಮುಂತಾದವು. ಇಂತಹ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಯೋಚಿಸುತ್ತ ಹೊರಟರೆ ಕನಿಷ್ಟ ಉತ್ತರದ ಹಾದಿಗಾದರೂ ತಲುಪಿಕೊಳ್ಳಬಹುದು ಎಂಬ ಆಶಯ ನನ್ನದು.    `ಮಕ್ಕಳ ಸಾಹಿತ್ಯ’ ಎಂದರೆ ಪ್ರೌಢ ಬರಹಗಾರರು ಮಕ್ಕಳಿಗಾಗಿಯೇ ಬರೆದ ಸಾಹಿತ್ಯ. ನಮ್ಮ ಮಕ್ಕಳಿಗೆ ಏನನ್ನು ಕೊಡಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಅವರಿಗೆ ಇಷ್ಟವಾಗುವಂತೆ ಹಿರಿಯರು ಬರೆಯುವ ಕವಿತೆ, ಕತೆ ಇನ್ನಿತರ ಗದ್ಯ ಪ್ರಕಾರವೇ ಮಕ್ಕಳ ಸಾಹಿತ್ಯ. ಹಾಗಾದರೆ ಮಕ್ಕಳೇ ಬರೆದ ರಚನೆಗಳಿವೆಯಲ್ಲ; ಅವು ಏನು ಎನ್ನುವುದಕ್ಕೆ ಉತ್ತರ – ಅದು `ಸಾಹಿತ್ಯ’. ಮಗುವೊಂದು ಬರೆದದ್ದು ಇತರ ಮಕ್ಕಳಿಗಾಗಿ ಬರೆದ ಸಾಹಿತ್ಯವಾಗಿರಬಹುದು ಅಥವಾ ಅಲ್ಲದೆಯೂ ಇರಬಹುದು. ಈ ವಿಷಯದ ಕುರಿತು ಈಗಾಗಲೇ ಚರ್ಚೆಗಳಾಗಿವೆ ಮತ್ತು ಸಂವಾದಗಳು ನಡೆಯುತ್ತಲೂ ಇವೆ. ಏನೇ ಆದರೂ `ಮಕ್ಕಳಿಗಾಗಿ ಹಿರಿಯರು ಬರೆದದ್ದು’ ಮತ್ತು `ಮಕ್ಕಳೇ ಬರೆದದ್ದು’ ಈ ಎರಡು ಬಗೆಯ ಬರಹಗಳನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಒಳ್ಳೆಯದು.   ಮುಖ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಮಕ್ಕಳು ಅಲಕ್ಷಿತರು. ಪ್ರಸ್ತುತ ದಿನಗಳಲ್ಲಿ ಅವರವರ ಒಂದೋ, ಎರಡೋ ಮಕ್ಕಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದು ನಮಗನ್ನಿಸಿದರೂ ಹೀಗಿಲ್ಲದ ಪೋಷಕರೂ ಬಹು ಸಂಖ್ಯೆಯಲ್ಲಿದ್ದಾರೆ. ಅದಲ್ಲದೇ ಊಟ, ವಸತಿ, ಪ್ರೀತಿ ಎಲ್ಲದರಿಂದ ವಂಚಿತರಾಗಿ ಅಕ್ಷರಶಃ ತಬ್ಬಲಿಗಳಾದ ಮಕ್ಕಳ ಸಂಖ್ಯೆಯೂ ನಾವು ಗಾಬರಿಬೀಳುವ ಪ್ರಮಾಣದಲ್ಲಿದೆ! ಪ್ರಾಮುಖ್ಯತೆ ಕೊಡುತ್ತಿರುವ ಪಾಲಕರಾದರೂ ತಮ್ಮ ಮಕ್ಕಳ ಬೇಕು-ಬೇಡಗಳನ್ನು ಗಮನಿಸುತ್ತಾರೋ ಅಥವಾ ತಮ್ಮ ಇಷ್ಟ ಅನಿಷ್ಟಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೋ ಎಂದು ಗಮನಿಸಿದರೆ ಎರಡನೆಯ ಅಂಶವೇ ಉತ್ತರವೆಂಬುದು ಕಣ್ಣಿಗೆ ರಾಚುತ್ತದೆ. ತಮ್ಮ ಆಸೆಯಂತೆ ತಮ್ಮ ಮಕ್ಕಳನ್ನು `ತಿದ್ದುವುದೇ’ ಹೆಚ್ಚಿನ `ಪ್ರಜ್ಞಾವಂತ’ರ ಕಾಳಜಿ! ಈ ಕಾಳಜಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಕೂಡ ಭವಿಷ್ಯದ ದೊಡ್ಡ ಹುದ್ದೆ, ದೊಡ್ಡ ಹಣದ ಮೇಲೆ ಅವಲಂಬಿತವಾಗಿದೆ ಎಂದಾಗ ಮಕ್ಕಳ ಹವ್ಯಾಸ, ಆಸಕ್ತಿಯ ಕುರಿತಾದ ಜಾಗ್ರತೆ ಬಹುತೇಕ ಶೂನ್ಯ! ತಮ್ಮ ಮಕ್ಕಳು ಅವರಿಷ್ಟದ ಸೃಜನಶೀಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ; ಕತೆ, ಕವಿತೆ, ಕಾದಂಬರಿಗಳನ್ನು ಓದಲಿ ಎನ್ನುವವರು ಪ್ರಜ್ಞಾವಂತರಲ್ಲೂ ವಿರಳ. ಪರಿಸ್ಥಿತಿ ಹೀಗಿರುವಾಗ ಇನ್ನುಳಿದ ಮಂದಿ ಇಂಥವರ ಅನುಕರಣೆಯನ್ನು ಮಾತ್ರ ಮಾಡುವುದು ತಪ್ಪೆನ್ನಲಾಗದು! ಇದಕ್ಕೆ ಹೊರತಾಗಿ ಪೋಷಕರ ಆಸರೆಯೇ ಇಲ್ಲದೆ ಬದುಕುತ್ತಿರುವ ದೊಡ್ಡ ಸಂಖ್ಯೆಯ ಮಕ್ಕಳ ಅಭಿರುಚಿ, ಭಾವನೆಗಳನ್ನು ಕೇಳುವವರಾರು? ಹೀಗಾಗಿ ಮಕ್ಕಳ ಸಾಹಿತ್ಯ ಅಲಕ್ಷಿತವಾಗುವುದಕ್ಕೂ ಮಕ್ಕಳು ಅಲಕ್ಷಿತರಾಗಿರುವುದಕ್ಕೂ ಬಹು ಮುಖ್ಯ ಸಂಬಂಧವಿದೆ. ಇನ್ನು, ಮಕ್ಕಳ ಸಾಹಿತ್ಯವೇ ಕಡಿಮೆಯಾಗುತ್ತಿದೆಯೇ ಅಥವಾ ಗುಣಮಟ್ಟದ ಬರಹಗಳು ಕಡಿಮೆಯಾಗುತ್ತಿದೆಯೆ? ಎಂಬ ಎಳೆಯನ್ನಿಟ್ಟುಕೊಂಡು ಹೊರಟರೆ ಎರಡಕ್ಕೂ ‘ಹೌದು’ ಎನ್ನುವ ಉತ್ತರವೇ ದೊರಕುತ್ತದೆ. ಇದಕ್ಕೆ ಕಾರಣ, ಪರಿಸ್ಥಿತಿ, ಸಂದರ್ಭಗಳು ಹಲವು. ಈ ಕುರಿತುಅಧ್ಯಯನ ಮಾಡಿದ ವಿದ್ವಾಂಸರ ಪ್ರಕಾರ ನಮ್ಮರಾಜ್ಯದಲ್ಲಿ ಮಾತ್ರವಲ್ಲದೆ ಇತರ ಕಡೆಯೂ ಮಕ್ಕಳ ಸಾಹಿತ್ಯದ ಸ್ಥಿತಿ ಹೀಗೆಯೇ ಇದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಬೇರೆಲ್ಲ ಭಾಷೆಗಿಂತ `ಅಡ್ಡಿಲ್ಲ’ ಎನ್ನುವ ವಾತಾವರಣಇದೆ ಅಷ್ಟೇ. ಅಮೇರಿಕಾದಂತಹ ದೇಶದಲ್ಲಿ ಮಕ್ಕಳ ಸಾಹಿತ್ಯಕ್ಕೆ ಬಹು ಬೇಡಿಕೆ, ಜನಪ್ರಿಯತೆ ಇರುವುದು ಹೌದಾದರೂ ಪ್ರೌಢ ಸಾಹಿತ್ಯಕ್ಕೆ ಹೋಲಿಸಿಕೊಂಡರೆ ಅಲ್ಲೂ ಮಕ್ಕಳ  ಸಾಹಿತ್ಯ ಒಂದು ಹೆಜ್ಜೆ ಹಿಂದೆಯೇ! ನಮ್ಮಲ್ಲಿ ಶಿಶು ಸಾಹಿತ್ಯದ ಪ್ರಮಾಣ ಪ್ರೌಢ ಸಾಹಿತ್ಯಕ್ಕಿಂತ ಕಮ್ಮಿ ಹೌದು. ಆದರೆ ಬರವಣಿಗೆ ಕಡಿಮೆ ಎನ್ನುವುದಕ್ಕಿಂತ ಗುಣಮಟ್ಟದ ಬರಹಗಳು ಕಮ್ಮಿ ಎಂಬ ಮಾತು ಮತ್ತಷ್ಟು ಸರಿಯೆನಿಸುತ್ತದೆ. ಮಕ್ಕಳ ಸಾಹಿತ್ಯವೆಂದರೆ `ಲಘು ಸಾಹಿತ್ಯ, ಯಾರೂ ಬರೆಯಬಹುದಾದದ್ದು, ಪಾಂಡಿತ್ಯ ತಿಳುವಳಿಕೆ ಬೇಡದಿರುವುದು’ ಎಂಬ ಅಭಿಪ್ರಾಯ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ಹೊಸತನವೇ ಇಲ್ಲದ, ಅದೇ ಹಳೆಯ ಪ್ರಾಸಗಳಿಗೆ ಜೋತುಬಿದ್ದ, ಸಾಂಪ್ರಾದಾಯಿಕ ವಸ್ತು- ನಿರೂಪಣೆಗೆ ನಿಷ್ಠವಾದ ಶಿಶುಸಾಹಿತ್ಯ ಧಂಡಿಯಾಗಿ ರಚನೆಯಾಗುತ್ತಿದೆ. ಇಂತಹ ಸವಕಲು ಸರಕೇ ಈಚೆ ಯಾರೂ ಕಣ್ಣೆತ್ತಿ ನೋಡದಿರುವುದಕ್ಕೆ ಒಂದು ದೊಡ್ಡ ಕಾರಣವೂ ಆಗಿದೆ! `ಮಕ್ಕಳಿಗಾಗಿ ಪ್ರಕಟಿಸಿದ ಪುಸ್ತಕಗಳು ಮಾರಾಟವಾಗುವುದಿಲ್ಲ’  ಎಂದು ಪ್ರಕಾಶಕರು ಚಿಂತೆ ವ್ಯಕ್ತಪಡಿಸುವುದಕ್ಕೂ ಇದೊಂದು ಪ್ರಮುಖ ಕಾರಣ. ಆದರೆ ಈ ಹೊತ್ತಲ್ಲೇ ಹೇಳಬೇಕಾದ ಮಾತೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಬದಲಾವಣೆಗೆ ತೆರೆದುಕೊಳ್ಳುತ್ತಿದೆ; ಅನೇಕ ಹೊಸಬರ, ಸೃಜನಶೀಲ ಬರಹಗಾರರ ಕಲ್ಪನೆಯ ಮೂಸೆಯಲ್ಲಿ ರೂಪು ಪಡೆಯುತ್ತಾ ಸಾಗಿದೆ ಎಂಬುದು. ಮಕ್ಕಳಿಗಾಗಿ ಫ್ರೆಶ್‌ ಆದ ಗದ್ಯ, ಪದ್ಯಗಳನ್ನು ಕೊಡಬೇಕೆಂಬ ತುಡಿತದಲ್ಲಿ ಇಂತವರು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ನವೋದಯದ ಕಾಲದಲ್ಲಿ ಪಂಜೇ ಮಂಗೇಶರಾಯರು, ಕುವೆಂಪು, ಶಿವರಾಮ ಕಾರಂತ, ಹೊಯ್ಸಳ, ಜಿ.ಪಿ ರಾಜರತ್ನಂ, ಸಿದ್ದಯ್ಯ ಪುರಾಣಿಕರು ಮೊದಲಾದ ಹಿರಿಯರನೇಕರು ಬಹಳ ಆಸ್ಥೆಯಿಂದ ಮಕ್ಕಳಿಗಾಗಿ ಬರೆದಿದ್ದರು. ಅದರ ನಂತರ ಸುದೀರ್ಘಕಾಲದ ಬಳಿಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಮತ್ತೊಮ್ಮೆ ಮಕ್ಕಳ ಸಾಹಿತ್ಯ ಚಿಗುರಿತು. ಈಗ ಪುನಃ ಅಂತಹ ದಿನಗಳು ಬರಲಾರಂಭಿಸಿವೆ ಎಂಬ ಆಶಾವಾದವನ್ನು ಮಕ್ಕಳ ಕ್ಷೇತ್ರದಲ್ಲಿ ತೊಡಗಿಕೊಂಡ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕಾಗಿದೆ.    ಮಕ್ಕಳ ಸಾಹಿತ್ಯಕ್ಷೇತ್ರದ ವಿಕಾಸಕ್ಕೆ ತಡೆಯಾಗಿರುವ ಇನ್ನೊಂದು ಮುಖ್ಯ ಸಮಸ್ಯೆ `ಶ್ರೇಷ್ತ್ರತೆಯ ವ್ಯಸನ’! ಬಹಳ ಓದಿಕೊಂಡವರು, ಚಿಂತಕರು, ಗಂಭೀರ ಸಾಹಿತ್ಯ ಬರೆಯುವವರು ಮಕ್ಕಳ ಸಾಹಿತ್ಯಕೃಷಿ ಮಾಡಿದರೆ ಬೆಲೆ ಕಮ್ಮಿ ಎಂಬ ಒಂದು ಮನಸ್ಥಿತಿ ಪ್ರಚಲಿತದಲ್ಲಿದೆ. ಇದರಿಂದಾಗಿ ಮಕ್ಕಳ ಸಾಹಿತ್ಯಕ್ಕೆ ನಷ್ಟವಾಗಿದೆ ಎಂದೇ ಹೇಳಬಹುದು. ಅಂತಹ ಬರಹಗಾರರ ಸೃಜನಶೀಲತೆ, ಯೋಚನೆಗಳು ನಮ್ಮ ಮಕ್ಕಳಿಗೆ ದೊರಕಲಿಲ್ಲ. ನವೋದಯಕಾಲದ ಹಿರಿಯ ಕವಿಗಳನ್ನು ನೆನಪಿಸಿಕೊಂಡು ಈ ವಿಷಯದಲ್ಲಿ ಇನ್ನಾದರೂ ನಾವು ಬದಲಾಗಬೇಕಾದ ತುರ್ತಿದೆ. ಮಕ್ಕಳಿಗಾಗಿ ಬರೆಯುವುದು, ಮಕ್ಕಳ ಸಾಹಿತ್ಯ ಓದುವುದು ಇವೆರಡೂ ಬದುಕಿನ ಪ್ರೀತಿ, ಸರಳ ಖುಷಿ ಎಂದು ಪರಿಗಣಿಸಬೇಕಾಗಿದೆ. “ಮಕ್ಕಳಿಗಾಗಿ ಬರೆಯಬೇಕೆಂದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು” ಎನ್ನುತ್ತಾರೆ. ಏರುವುದೋ, ಇಳಿಯುವುದೋ ಒಟ್ಟಿನಲ್ಲಿ ಬರಹಗಾರನೇ/ಳೇ ಮಗುವಾಗಬೇಕಾದದ್ದು ಮೊದಲ ಅಗತ್ಯ. ಮಗುವಿನ ಮುಗ್ಧತೆ, ಕುತೂಹಲ, ಪ್ರಾಮಾಣಿಕತೆ ಮೊದಲಾದವು ಈ ಬರಹಗಾರರಲ್ಲಿ ಹುದುಗಿರಬೇಕಾದ ಬಹು ಮುಖ್ಯ ಅಂಶ. ಹೀಗೆ ಮಗುವೇ ಆಗಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಒಂದೊಳ್ಳೆ ಪದ್ಯವೋ, ಕತೆಯೋ ಬರೆಯಲು ಸಾಧ್ಯ. ದಿನನಿತ್ಯದ ದಂದುಗದಲ್ಲಿ ಏಗಿ ಸೂಕ್ಷ್ಮತೆಯನ್ನು, ಮಗುತನವನ್ನು ಕಳೆದುಕೊಂಡು ಜಡ್ಡುಬಿದ್ದಿರುವ ನಮ್ಮಂತಹ ದೊಡ್ಡವರಿಗೆ ಇದು ಕಷ್ಟವೆ! ಈ ಕಾರಣಕ್ಕಾಗಿಯೂಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗಿರಬಹುದು. ಇಲ್ಲಿಯೇ ಚರ್ಚಿಸಬೇಕಾದ ಮತ್ತೊಂದು ಅಂಶವೆಂದರೆ ಮಕ್ಕಳ ಸಾಹಿತ್ಯಎಂದೊಡನೆ ಅದು `ಸರಳ’ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದುಬಿಡುವುದು! ಕೇಳಿ ಕೇಳಿ ಬೇಸರ ತರಿಸಿರುವ ಮಾದರಿಯನ್ನೇ ಆಯ್ದುಕೊಂಡು ಸರಳತೆಯ ಹೆಸರಲ್ಲಿ ಏನೋ ಬರೆದು ಬಿಡುವುದು! ಪುಟಾಣಿ ಮಗುವಿನಿಂದ ಹಿಡಿದು ಹದಿನೈದು-ಹದಿನಾರು ವರ್ಷದವರೆಗಿನ ಮಕ್ಕಳೂ ಈ ಸಾಹಿತ್ಯದ ವ್ಯಾಪ್ತಿಯಲ್ಲಿ ಪರಿಗಣಿತವಾಗುವುದರಿಂದ ರಚನೆಗಳಲ್ಲೂ ವೈವಿಧ್ಯತೆ ಇರಬೇಕಾದದ್ದು ಸಹಜ. ಆದರೆ ಯಾವ ವಯಸ್ಸಿನ ಮಕ್ಕಳಿಗೆ ಬರೆದದ್ದೇ ಇರಲಿ; ಗುಣಮಟ್ಟದ್ದಾಗಿದ್ದರೆ ಅದು ದೊಡ್ಡವರೂ ಓದಿ ಖುಷಿಪಡುವಂತಿರುತ್ತದೆ! ಹೀಗಾಗಿ ಮಕ್ಕಳ ಸಾಹಿತ್ಯ ಎಂದು ಪ್ರತ್ಯೇಕಿಸುವುದು ಸಾಹಿತ್ಯದ `ಪ್ರಕಾರ’ ಗುರುತಿಸುವುದಕ್ಕಾಗಿ, ವಿಮರ್ಶೆಯ ಸವಲತ್ತಿಗಾಗಿ ಮತ್ತೂ ಹೆಚ್ಚೆಂದರೆ ಪ್ರಶಸ್ತಿಗಳ ಪ್ರವೇಶಾತಿಗಾಗಿ ಅಷ್ಟೇ. ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ದೇಶ-ವಿದೇಶ ಸರಣಿಯ ಪುಸ್ತಕಗಳು, ಅಮೇರಿಕಾದ ಲಾರಇಂಗಲ್ಸ್ ವೈಲ್ಡರ್ ಬರೆದ ಕಾದಂಬರಿ ಸರಣಿ ಇಂತಹ ಸಾಹಿತ್ಯವನ್ನು ಗಮನಿಸಿದರೆ ದೊಡ್ಡವರು-ಮಕ್ಕಳು ಎಂಬ ಭೇದವಿಲ್ಲದೆ ಓದುವಿಕೆ ಇರುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಮಕ್ಕಳ ಸಾಹಿತ್ಯವೆಂದರೆ ಬರೀ ಪಂಚತಂತ್ರದ ಕತೆಗಳು, ಪ್ರಾಸಪದ್ಯಗಳು, ಕಥನಕವನಗಳು, ರಾಜರಾಣಿಯ ಕತೆಗಳು, ಪೌರಾಣಿಕ ವಿಷಯಗಳು ಅಲ್ಲ; ಇದರಾಚೆಗೆ ಅನೇಕ ವಸ್ತು-ವಿಷಯ-ನಿರೂಪಣೆಯ ಮಾಧ್ಯಮವಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಳಿಲು, ಬೆಕ್ಕು, ನಾಯಿ, ಇರುವೆ, ಗೂಬೆ, ಬಸವನ ಹುಳು, ಇಲಿ, ಹೂವು, ಗಿಡಮರಗಳು, ಬದಲಾದ ಈ ಕಾಲದ ಮಗುವೊಂದರ ಖುಷಿ-ಸಂಕಷ್ಟಗಳು ಹೀಗೆ… ವಿಫುಲ ವಿಷಯಗಳಿವೆ. ಲಲಿತ ಪ್ರಬಂಧ, ಕಾದಂಬರಿ, ಪುಟಾಣಿಕತೆ, ಅನುಭವಕಥನ, ಫ್ಯಾಂಟಸಿಗಳು ಹೀಗೆ ವಿವಿಧ ಅಭಿವ್ಯಕ್ತಿಯ ಪ್ರಕಾರಗಳಿವೆ…..  ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ಎತ್ತಿ ಈ ಬರಹವನ್ನು ಮುಗಿಸುತ್ತೇನೆ. `ಮಕ್ಕಳ ಸಾಹಿತ್ಯ’ ಒಂದು ಸಾಹಿತ್ಯ ಪ್ರಕಾರವಲ್ಲವೆ? ಸಣ್ಣಕತೆ, ಕವಿತೆ, ನಾಟಕ, ಕಾದಂಬರಿ, ಆತ್ಮಕಥೆ, ಜೀವನಚರಿತ್ರೆ, ವಿಚಾರಸಾಹಿತ್ಯ, ಪ್ರಬಂಧ ಹೀಗೆ ಇವೆಲ್ಲವೂ ವಿಮರ್ಶೆಗೆ, ಓದಿಗೆ, ಮರುಓದಿಗೆ ಒಳಪಡುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸಾಹಿತ್ಯವನ್ನೇಕೆ ಮೂಲೆಗುಂಪಾಗಿಸಲಾಗಿದೆ? ಕನಿಷ್ಠ ಒಂದು ಓದು, ವಿಮರ್ಶೆ, ಒಂದು ಗಮನಿಸುವಿಕೆಯನ್ನಾದರೂ ಈ ಸಾಹಿತ್ಯ ಕೃತಿಗಳು ಬಯಸಬಾರದೇ? ಕನಿಷ್ಠ ಒಂದು ಮೆಚ್ಚುಗೆಯ ಮಾತಾದರೂ ಮಕ್ಕಳ ಸಾಹಿತಿಗೆ ದೊರಕಬಾರದೆ? ಪ್ರೌಢ ಸಾಹಿತ್ಯದ ಮನ್ನಣೆಯ ಅಬ್ಬರದಲ್ಲಿ ನಿರ್ಲಕ್ಷಿತ ಮಕ್ಕಳ ಸಾಹಿತ್ಯ ಕೊಚ್ಚಿಹೋಗಬೇಕೆ? ಇದು ಖಂಡಿತಾ ಸರಿಯಲ್ಲ. ಪ್ರಜ್ಞಾವಂತ ಓದುಗರು, ವಿಮರ್ಶಕರು ಈ ಕುರಿತು ಗಮನ ಹರಿಸಲೇಬೇಕು. (ಪ್ರೋತ್ಸಾಹದದೃಷ್ಟಿಯಿಂದ ಸಾಹಿತ್ಯಅಕಾಡಮಿಯಿಂದ ತೊಡಗಿಇತರ ಕೆಲವು ಸಂಸ್ಥೆಗಳು ಕೊಡಮಾಡುವ ಕೆಲ ಪ್ರಶಸ್ತಿ, ಪುರಸ್ಕಾರಗಳು ಮಕ್ಕಳ ಸಾಹಿತ್ಯಕ್ಕಿವೆ ಎಂದು ಇಲ್ಲಿ ನೆನಪಿಸಿಕೊಳ್ಳುವೆ). ಮಕ್ಕಳ ಸಾಹಿತ್ಯ ಅಲಕ್ಷಿತವಾದರೆ ನಮ್ಮ ಮಕ್ಕಳು ಅಲಕ್ಷಿತವಾದಂತೆ, ಅವರು ಮೂಲೆಗುಂಪಾದರೆ ಇಡೀ ಸಮಾಜವೇ ಮೂಲೆಗುಂಪಾದಂತೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕಾದದ್ದು ಅತ್ಯಗತ್ಯ.  ಪ್ರೌಢ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಎರಡರಲ್ಲೂ ಗಂಭೀರವಾಗಿ ತೊಡಗಿಕೊಂಡು ಉತ್ತಮ ಕೃತಿಗಳನ್ನು ನೀಡುತ್ತಿರುವ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತಸದ ಸಂಗತಿ. ಹಾಗೇ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿಯೂ ಬೆಳೆಯಲಿ. ಮಕ್ಕಳ ಸಾಹಿತ್ಯ ಕೃತಿಗಳನ್ನು ಮಕ್ಕಳು, ದೊಡ್ಡವರು ಸಮಾನವಾಗಿ ಓದಬಲ್ಲ ಪೂರಕ ವಾತಾವರಣ ಸೃಷ್ಟಿಯಾಗಲಿ ಎನ್ನುವುದು ಪ್ರಜ್ಞಾವಂತರೆಲ್ಲರ ಆಶಯ. **************************************************

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳಿಗೆ ಬದುಕಿನ ಪಾಠ

ಲೇಖನ ಮಕ್ಕಳಿಗೆ ಬದುಕಿನ ಪಾಠ ನಿಖಿಲ ಎಸ್. ಮಕ್ಕಳಿಗೆ ಬೇಕು ಶಿಕ್ಷಣದ ಜೊತೆಗೆ ಜೀವನದ ಪಾಠ.ಒಬ್ಬ ತಂದೆ ತಾನು ಅನುಭವಿಸಿದ ನೋವು ನನ್ನ ಮಕ್ಕಳಿಗೆ ಬರಬಾರದು ಎನ್ನುವಷ್ಟು ಚೆನ್ನಾಗಿ ಓದಿಸಿ,ಒಂದು ಒಳ್ಳೆಯ ನೌಕರಿ ಸೇರಿಸಬೇಕು, ಎಂಬ ಭಾವನೆ ಹೆಚ್ಚಿನ ಪೋಷಕರದ್ದಾಗಿರುತ್ತದೆ. ಇದು ಸಹಜ ಹಾಗೆಯೇ ಇದು ತಪ್ಪಲ್ಲ. ಆದರೆ ಮಕ್ಕಳಿಗೆ ಕಷ್ಟವೇ ಇರಬಾರದು ಎಂದು ಮುದ್ದಿನಿಂದ ಬೆಳೆಸುವುದರಿಂದ ಜೀವನದ ಶಿಕ್ಷಣ ಪಾಠ ಕಲಿಸದೆ ಕೇಳಿದೆಲ್ಲವನ್ನು ತಕ್ಷಣವೇ ಅವರ ಕೈಗೆಟಕುವಂತೆ ನೀಡುವುದರಿಂದ ಮಕ್ಕಳು ಹಣವನ್ನು ಗೆಲ್ಲುತ್ತಾರೆ ವಿನಹ ಜೀವನವನ್ನಲ್ಲ.“ಮಕ್ಕಳಿಗೆ ಆಸ್ತಿಯನ್ನು ಮಾಡುವುದರ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಡಾ. ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. . ”ಬಾಲ್ಯದಿಂದಲೇ ಜೀವನ ಶಿಕ್ಷಣ ಕಲಿಸಬೇಕೆನ್ನುವ ಸತ್ಯ ಈ ಮಾತಿನ ಹಿಂದಿದೆ.ಹಾಗಿದ್ದರೆ ಜೀವನ ಶಿಕ್ಷಣವೆಂದರೇನು ಎಂಬುದು ಸಹಜವಾಗಿ ಏಳುವ ಪ್ರಶ್ನೆ.ಸಂಸ್ಕಾರ, ಆತ್ಮವಿಶ್ವಾಸ, ಸವಾಲುಗಳನ್ನು ಸ್ವೀಕರಿಸುವ ಆತ್ಮಸ್ದೈರ್ಯ, ಕಠಿಣಪರಿಶ್ರಮ, ಮಾನವೀಯತೆ, ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳುವ ಭರವಸೆ, ಸಕರಾತ್ಮಕ ಮನೋಬಾವನೆಯನ್ನ ಬೆಳೆಸಿಕೊಳ್ಳುವುದೇ ಜೀವನ. ಸಂಸ್ಕಾರಕಲಿಸಿ: ಜೀವನದಲ್ಲಿ ಮುಖ್ಯವಾಗಿ ಬೇಕಿರುವುದು“ಸಂಸ್ಕಾರ”ಸುಂದರಬದುಕಿಗೊಂದು ಭದ್ರ ಬುನಾದಿ,ಮನೆಯೇ ಮೊದಲ ಪಾಠಶಾಲೆ. ಮಕ್ಕಳಿಗೆ ವಯಸ್ಸಿಗೆ ಬರುವವರೆಗೂ ತಂದೆ-ತಾಯಿಯೇ ಆದರ್ಶರಾಗಿರುತ್ತಾರೆ.ಅವರ ನಡವಳಿಕೆಗಳನ್ನೆ ಅನುಸರಿಸುತ್ತಾರೆ. “ಬಿತ್ತಿದಂತೆ ಬೆಳೆ” ಎಂಬ ನಾಣ್ಣುಡಿಯಂತೆ ಮಕ್ಕಳಿಗೆ ಮೌಲ್ಯವನ್ನು ತಿಳಿಹೇಳಿದರೆ ಆ ಆದರ್ಶದಂತೆಯೇ ಬೆಳೆಯುತ್ತಾರೆ. ಅವರಲ್ಲಿ ಸಕರಾತ್ಮಕ ಚಿಂತನೆಯನ್ನ ಬೆಳೆಸುವುದು. ಹಿರಿಯರನ್ನ ಗೌರವಿಸುವುದು. ಭಗವಂತನ ಶ್ರದ್ದೆ ಮತ್ತು ನಂಬಿಕೆಯನ್ನಿಡುವುದು. ಕುಟುಂಬ, ಸಂಬಂದಿಕರೊಂದಿಗೆ ಉತ್ತಮ ಬಾಂದವ್ಯವನ್ನ ಹೊಂದುವುದು. ಜೊತೆಗಿರುವ ಸ್ನೇಹಿತರನ್ನು ಆಧರಿಸಿ ಜೀವನದ ದಿಕ್ಕು ಸಾಗುವುದಿದೆ. ಅವಲಂಬನೆ ತಗ್ಗಿಸಿ: ಹೆತ್ತವರು ಮಕ್ಕಳಿಗೆ ಬದುಕಿನ ಅನುಭವಗಳನ್ನು ಕಲಿಸಬೇಕು. ಮಗು ಎಡವಿಬಿದ್ದಾಗ ಅಳುತ್ತಾರೆ. ಆ ನೋವಿನ ಅನುಭವದಿಂದ ಮುಂದೆ ಎಚ್ಚರಿಕೆಯಿಂದ ಹೆಜ್ಜೆಯನ್ನು ಹಾಕಿ ಮುಂದೆ ಸಾಗಬೇಕು.ಮಕ್ಕಳು ಕೇಳಿದನ್ನೆಲ್ಲಾ ತಂದು ಕೊಡುವ ಬದಲು ಆ ವಸ್ತುವನ್ನು ಖರೀದಿಸುವ ಶ್ರಮವನ್ನ ತಿಳಿಸಿಕೊಡಬೇಕು. ಮಕ್ಕಳು ಪ್ರತಿಯೊಂದು ವಿಷಯದಲ್ಲೊ ಪೋಷಕರನ್ನೇ ಅವಲಂಬಿಸಿದರೆ ಕಲಿಕೆ ಮುಗಿದ ನಂತರ ನೀರಿನಿಂದ ಹೊರ ತೆಗೆದ ಮೀನಿನಂತಾಗುತ್ತದೆ. ಯಾವುದಾದರೂ ಸಣ್ಣಪುಟ್ಟ ವಿಷಯದಲ್ಲಿ ಮಕ್ಕಳೇ ನಿರ್ದಾರ ತೆಗೆದುಕೊಳ್ಳುವಂತಾಗಬೇಕು. ಒತ್ತಡ ಬೇಡ: ನನ್ನ ಮಗ ನಾನು ಹೇಳಿದ ಹಾಗೆ ಕೇಳಬೇಕು, ಹೇಳಿದ್ದನ್ನೆ ಓದಬೇಕು, ನಾನು ಹಾಕಿದ ಗೆರೆ ದಾಟಬಾರದು ಎಂಬ ಭಾವನೆ ಬೆಳೆಸಿಕೊಳ್ಳದೆ ಅವರ ಮನಸ್ಸನ್ನು ಅರಿತು ಅವರು ಬಯಸಿದ ಕ್ಷೇತ್ರದಲ್ಲಿ ಅವರಿಗೆ ಇಷ್ಟವಾದ ವಿಷಯವನ್ನು ಆಯ್ದುಕೊಳ್ಳಲು ಅವಕಾಶ ನೀಡಬೇಕು. ಸ್ನೇಹಬಾವದಿಂದಿರಿ: ಮಕ್ಕಳ ಪ್ರತಿಯೊಂದು ಚಟುವಟಿಕೆಗಳಲ್ಲಿ ಹಸ್ತಕ್ಷೇಪ ಮಾಡದೇ ಕೆಲವವೊಂದು ನಿರ್ದಾರವನ್ನು ಅವರೇ ತೆಗೆದುಕೊಳ್ಳುವ ಹಾಗೆ ಸ್ವಾತಂತ್ರ್ಯ ನೀಡಬೇಕು.ಮಕ್ಕಳಿಗೆ ಜೀವನಶಿಕ್ಷಣದ ಪಾಟವನ್ನು ಕೊಡುವವರು ಬೆಳೆಯುವ ಪರಿಸರ, ತಂದೆ-ತಾಯಿ, ಗುರು-ಹಿರಿಯರು ಅವರ ಮಾರ್ಗದರ್ಶನಲ್ಲಿ ಮಕ್ಕಳು ಉತ್ತಮವಾಗಿ ಬೆಳೆಯಲು ಸಾದ್ಯ… ***************************************************************

ಮಕ್ಕಳಿಗೆ ಬದುಕಿನ ಪಾಠ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ಕವಿತೆ

ಧೂರ್ತ ಆಮೆ ನೀ.ಶ್ರೀಶೈಲ ಹುಲ್ಲೂರು ಹಂಸವೆರಡು ಕೊಳದ ಬಳಿನೀರನರಸಿ ಬಂದವುನೀರು ಕುಡಿದು ತಣಿದ ಮೇಲೆಆಮೆ ನೋಡಿ ನಿಂದವು ಹರಟೆ ಮಲ್ಲ ಆಮೆ ತಾನೆಕೊಳದ ರಾಜನೆಂದಿತುಅದನು ಇದನು ಏನೊ ಹೇಳಿಅವುಗಳ ತಲೆ ತಿಂದಿತು ಸರಿ,ನಾವು ಬರುವೆವಿನ್ನುಮತ್ತೆ ಸಿಗುವೆವೆಂದವುಬಿಡದ ಆಮೆ ನಡೆಯ ನೋಡಿಮನದಿ ತಾವೆ ನೊಂದವು ನನಗೆ ಕೊಳದ ಸಂಗ ಸಾಕುನದಿಯಲೀಜಬೇಕುಹಾಡಿ ಜಿಗಿದು ಕುಣಿದು ತಣಿದುಜಲದಿ ತೇಲಬೇಕು ದಮ್ಮಯ್ಯ ಎನುವೆ ನಾನುಮಾಡಿ ನೀವ್ ಉಪಾಯವಏನೆ ಬಂದರೂ ಸರಿಯೆಗೆಲುವೆ ನಾ ಅಪಾಯವ ಹಂಸವೆರಡು ಬಡಿಗೆ ತಂದುಆಚೆ ಈಚೆ ಹಿಡಿದವುನಡುವೆ ಆಮೆ ಬಡಿಗೆ ಕಚ್ಚಲೆರಡು ಹಾರಿ ನಡೆದವು ತುಸು ದೂರ ಸಾಗಿದೊಡನೆಕಂಡಿತೊಂದು ಊರುಮಕ್ಕಳೆಲ್ಲ ಆಮೆ ಕಂಡುಕೂಗಿದರು ಜೋರು ಕಲ್ಲನೆಸೆದು ಗೇಲಿ ಮಾಡೆಆಮೆ ಕೋಪ ಸಿಡಿಯಿತುಬೈಯ್ಯಲೆಂದು ಬಾಯಿ ತೆರೆಯೆಕೆಳಗೆ ಬಿದ್ದು ಮಡಿಯಿತು ಹಮ್ಮು ಬಿಮ್ಮು ಬೇಡ ನಮಗೆಬೇಡ ಕೋಪ ತಾಪಮನಗಾಣಿರಿ ಮಕ್ಕಳೆಲ್ಲಅವುಗಳೆಮಗೆ ಶಾಪ ******************

ಮಕ್ಕಳ ಕವಿತೆ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ಕವಿತೆ

ಇರುವೆ-ಆನೆ ಗಣಪ ಮತ್ತು ಪುಟ್ಟಿ ವಿಜಯಶ್ರೀ ಹಾಲಾಡಿ ಗಣಪನ ತಿಂಡಿ ಇರುವೆ ತಿಂದರೆತಪ್ಪು ಏನಮ್ಮಆನೆಮರಿಯೇ ಗಣಪ ಎಂದುಅಜ್ಜಿ ಅಂದಿಲ್ವ? ಆನೆಗೆ ಇರುವೆ ಗೆಳೆಯನು ತಾನೇನಾನೇ ನೋಡಿಲ್ವಕಾಡಿನ ಬಿಲದಲಿ ಹುಲ್ಲಿನ ಬೀಜಕೂಡಿ ಹಾಕಿಲ್ವ? ಹುಲ್ಲು ಮೊಳೆತು ಮಳೆಯ ಬೆರೆತುಆನೆಯು ತಿಂದಿಲ್ವಆನೆಗು ಇರುವೆಗು ಭೇದವೆ ಇಲ್ಲಬೆಲ್ಲ ಕದ್ದಿಲ್ವ? ಪುಟ್ಟಿಯ ಮಾತು ಸಿಡಿಯೋ ಅರಳುತಲೆಯು ಕೆಟ್ಟಿಲ್ವ!!ಅಮ್ಮ ಅಪ್ಪ ಅಜ್ಜಿ ಅಜ್ಜಬಿದ್ದು ನಕ್ಕಿಲ್ವ? ******************************

ಮಕ್ಕಳ ಕವಿತೆ Read Post »

ಇತರೆ, ಮಕ್ಕಳ ವಿಭಾಗ

ಮಕ್ಕಳ ವಿಭಾಗ

ಬಾವುಟ ಪದ್ಯ ಮಲಿಕಜಾನ ಶೇಖ ಅತ್ತ ನೋಡು ಇತ್ತ ನೋಡು ಸುತ್ತ ನೋಡು ಎತ್ತ ನೋಡುಬೀದಿ ನೋಡು ಕೇರಿ ನೋಡುನೋಡು ನೀನು ಬಾವುಟ ಮಾಡು ನೀನು ಸೆಲ್ಯೂಟ್… ಕೆಸರಿ ಬಿಳಿ ಹಸಿರು ಮೂರು ಬಣ್ಣ ನಡುವೆ ಚಕ್ರ ಒಂದು ನೀಲಿ ನೋಡು ಸತ್ಯ ಶಾಂತಿ ನ್ಯಾಯ ಪ್ರೀತಿತ್ಯಾಗ ಶೌರ್ಯ ನೀತಿ ಮೌಲ್ಯಐಕ್ಯ ಒಂದು ಪ್ರತೀಕ ನೋಡು  ಪರತಂತ್ರವ ಕಳಚಿ ಬಿಟ್ಟುಸ್ವಾತಂತ್ರವ ಮೆರೆಸಿ ಕೊಟ್ಟುದೇಶದೊಂದು ಪ್ರತೀಕ ನೋಡು ಮೆಡಂ ಕಾಮಾ ಹಾರಿಸಿದಭಗತ ಗುರು ಪ್ರೇಮಿಸಿದಗಾಂಧೀನೆಹರು ಪ್ರೀತಿಸಿದ ಪ್ರತೀಕ ನೋಡು ಹಲವು ಭಾವ ಹಲವು ಭಾಷೆಹಲವು ಬಣ್ಣ ಹಲವು ವೇಷಎಲ್ಲರೊಂದು ಪ್ರತೀಕ ನೋಡು 

ಮಕ್ಕಳ ವಿಭಾಗ Read Post »

ಇತರೆ, ಮಕ್ಕಳ ವಿಭಾಗ

ಬೆಕ್ಕು -ನಾಯಿಗಳ ಹುಲ್ಲಿನೌಷಧ!

ಅನುಭವ ಕಥನ(ಮಕ್ಕಳಿಗಾಗಿ) ವಿಜಯಶ್ರೀ ಹಾಲಾಡಿ   ‘ಮುದೂರಿ’ ಒಂದು ಸಣ್ಣ ಹಳ್ಳಿ.   ಅಲ್ಲಿ ವಿಜಿಯ ಮನೆ . ಅವರ ಊರಿನಲ್ಲಿ ಫರ್ಲಾಂಗು ದೂರಕ್ಕೊಂದೊಂದು ಮನೆಗಳು. ಆ ಊರು ಕಾಡು-ಗುಡ್ಡಗಳ ನಡುವೆ ಅವಿತುಕೊಂಡಿತ್ತು. ಜನರ ಸಂಖ್ಯೆಯೂ ಕಡಿಮೆ. ಅಲ್ಲಿಂದ ವಾಹನ ಓಡಾಡುವ ರಸ್ತೆ ತಲುಪಲು ಎರಡೂವರೆ ಮೈಲು ನಡೆದುಹೋಗಬೇಕಿತ್ತು. ಹಾಗೆ ಹೋದಾಗ ಸಿಗುವುದೇ ಹಾಲಾಡಿ. ಅಲ್ಲಿ ಕೆಲವು ಅಂಗಡಿಗಳು, ಪೋಸ್ಟ್ ಆಫೀಸ್, ಶಾಲೆ, ಹಾಲಿನ ಡೈರಿ, ಬ್ಯಾಂಕು ಇದ್ದವು . ಬಸ್ಸುಗಳು ಓಡಾಡುತ್ತಿದ್ದವು. ಡಾಕ್ಟರರನ್ನು ಕಾಣಬೇಕಾದರೆ ಅಲ್ಲಿಂದ ಬಸ್ಸು ಹತ್ತಿ ‘ಶಂಕರನಾರಾಯಣ’ ಎಂಬ ಪಕ್ಕದೂರಿಗೆ ಹೋಗಬೇಕಿತ್ತು. ಅಥವಾ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ತಾಲೂಕು ಕೇಂದ್ರವಾದ ಕುಂದಾಪುರಕ್ಕೆ ಧಾವಿಸಬೇಕಿತ್ತು. ಮುದೂರಿಯಲ್ಲಿ ಒಂದು ಬೆಂಕಿಪೊಟ್ಟಣ ಕೂಡಾ ಸಿಗಲು ಸಾಧ್ಯವಿರಲಿಲ್ಲ. ಅಗತ್ಯ ಬೇಕಾದ ವಸ್ತುಗಳನ್ನು ಹಾಲಾಡಿಯಿಂದ ತಂದು ಇಟ್ಟುಕೊಳ್ಳಬೇಕಿತ್ತು. ಹಾಗಾಗಿ ಅವರ ಊರಿನ ಜನ ತಮ್ಮಲ್ಲಿ ಇದ್ದುದರಲ್ಲೇ ಅಲ್ಪಸ್ವಲ್ಪ ಹೊಂದಿಸಿಕೊಂಡು ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಳ್ಳುತ್ತಿದ್ದರು. ತೀರಾ ಅನಿವಾರ್ಯವಾದಾಗ ಮಾತ್ರ ದೂರದ ಪೇಟೆಪಟ್ಟಣಗಳಿಗೆ ಭೇಟಿಕೊಡುತ್ತಿದ್ದರು . ಆಹಾರಕ್ಕೆ ಬೇಕಾಗುವ ಅಕ್ಕಿ ,ಕಾಳು ,ತರಕಾರಿ ,ಸೊಪ್ಪು ಹಣ್ಣು ಮುಂತಾದುವನ್ನು ಬೆಳೆದುಕೊಳ್ಳುತ್ತಿದ್ದರು. ಜೊತೆಗೆ ಅಕ್ಕಪಕ್ಕದ ಕಾಡು ,ಬಯಲುಗಳಲ್ಲಿ ಬೆಳೆದ ತಿನ್ನಲಿಕ್ಕಾಗುವ ಹಣ್ಣು, ಕಾಯಿ ಗಡ್ಡೆ, ಎಲೆಗಳನ್ನು ಕೊಯ್ದು ಬಳಸುತ್ತಿದ್ದರು. ಆರೋಗ್ಯ ಸರಿಯಿಲ್ಲದಾಗ ಮನೆಯಲ್ಲೇ ಸಣ್ಣಪುಟ್ಟ ಮದ್ದು ಮಾಡಿಕೊಂಡು ಮತ್ತೂ ಗುಣವಾಗದಿದ್ದರೆ ವೈದ್ಯರನ್ನು ಕಾಣುತ್ತಿದ್ದರು. ದನಕರುಗಳಿಗೆ ಹಳ್ಳಿಯ ಪಂಡಿತರಲ್ಲಿ ಔಷದ ತಂದು ಕುಡಿಸುತ್ತಿದ್ದರು. ಇಂತಹ ವಿಷಯಗಳಿಗೆ ಸಂಬಂಧಿಸಿದ ಕೆಲ ನೆನಪುಗಳು ವಿಜಿಯ ಮನಸ್ಸಿನಲ್ಲಿ ಆಗಾಗ ಹಣಕಿಹಾಕುತ್ತಿರುತ್ತವೆ.  ಕಾಲಿಗೆ ಗರ್ಚ (ಕರಂಡೆ ,ಕವಳಿ )ನ ಗಿಡದ ಮುಳ್ಳು ಹೆಟ್ಟಿ ಅದೇ ಒಂದು ದೊಡ್ಡ ನೋವಾಗಿ ನಡೆದಾಡಲು ಆಗದೆ ಪುಟ್ಟ ವಿಜಿ ಹಾಸಿಗೆ ಹಿಡಿದ ಪ್ರಸಂಗ ಮೊದಲ ಪುಸ್ತಕದಲ್ಲಿ ಬಂದಿದೆ. ಆಗ ನೋವಿನ ತೀವ್ರತೆಗೆ ಜೋರು ಜ್ವರ ಕೂಡಾ  ಬಂದಿತ್ತು. ಅಮ್ಮ ಪ್ರತಿರಾತ್ರಿ ಮುಳ್ಳಿನ ಗಾಯಕ್ಕೆ ಸುಣ್ಣ ಹಚ್ಚಿ ಬಿಸಿಯಾದ ಒಲೆದಂಡೆಯ ಮೇಲೆ ಇಡಲು ಹೇಳುತ್ತಿದ್ದರು. ವಿಜಿ ಹಾಗೇ ಮಾಡುತ್ತಿದ್ದಳು. ಇದರಿಂದ ಗಾಯ ಬೇಗನೇ ಮಾಗಿ ಮೆದುಗೊಂಡು ಒಳಗಿರುವ ಮುಳ್ಳು ಹೊರಬರಲು ಸಹಾಯವಾಗುತ್ತದೆ ಎನ್ನುತ್ತಿದ್ದರು. ಇದಲ್ಲದೆ ತೋಟದಲ್ಲಿ ತಾನೇತಾನಾಗಿ ಬೆಳೆದು ಹಳದಿ ಹೂ ಬಿಡುವ ಕಡ್ಲಂಗಡ್ಲೆ  ಗಿಡದ ಎಲೆ ತಂದು ರಸ ಮಾಡಿ ಹಚ್ಚುತ್ತಿದ್ದರು . ಕೊನೆಗೊಂದು ದಿನ ಸೂಜಿಯಲ್ಲಿ ಕುತ್ತಿ ದೊಡ್ಡದಾದ ಮುಳ್ಳನ್ನು ಹೊರತೆಗೆದಾಗ ಒಂದು ಲೋಟದಷ್ಟು ರಶಿಗೆ (ಕೀವು) ಹೊರಬಂದು ಅಂಗಾಲಿನಲ್ಲಿ ದೊಡ್ಡ ಗಾಯವಾಗಿತ್ತು. ನೋವೆಂದು ಕಿರುಚಿ ಕುಣಿಯುತ್ತಿದ್ದ ವಿಜಿಗೆ ಸಮಾಧಾನವಾಗುವಂತೆ ಬಸಳೆಸೊಪ್ಪನ್ನು ಬಾಡಿಸಿ ಅದರ ರಸವನ್ನು ಹಚ್ಚಿದ್ದರು. ಆಗ ಸ್ವಲ್ಪ ತಣ್ಣ ತಣ್ಣಗೆ ಆಗಿ ಅವಳು ಅಳುವುದನ್ನು ನಿಲ್ಲಿಸಿದಳು. “ಬಸಳೆ ರಸ ಭಾರೀ ತಂಪು “ಎಂದು ಮುಳ್ಳು ತೆಗೆಯಲು ಬಂದಿದ್ದ ಶೇಷಿಬಾಯಿ, ರುಕ್ಮಿಣಿಬಾಯಿ ಹೇಳಿದ್ದರು.  ಜಿರಾಪತಿ ಸುರಿಯುವ ಮಳೆಗಾಲದ ನಾಲ್ಕು ತಿಂಗಳಲ್ಲಂತೂ ಅವರೂರಿನಲ್ಲಿ ಶೀತ, ಜ್ವರ ಮಾಮೂಲಿ ವಿಚಾರವಾಗಿತ್ತು. ಸೀನಿ ಸಾಕಾಗಿ ಮೂಗಿನಲ್ಲಿ ನೀರಿಳಿದು ಮೈಕೈ ನೋವು, ತಲೆಭಾರ ಆಗಿ ಮೈಯೆಲ್ಲಾ ಕೆಂಡದಂತೆ ಸುಡುತ್ತಾ ಸ್ವಸ್ಥ ನಿದ್ದೆ ಮಾಡಲೂ ಬಿಡದೆ ಜ್ವರ ಕಾಡುವಾಗ ಆರಂಭದಲ್ಲಿ ಜನರು ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ. ಆಮೇಲೆ ಕಾಳು ಮೆಣಸಿನ ಕಷಾಯ ಮಾಡುತ್ತಿದ್ದರು. ಕಾಳುಮೆಣಸು ಬೆಳೆಯುವುದು ತೋಟದ ಅಡಕೆ, ತೆಂಗಿನ ಮರಕ್ಕೆ ಹಬ್ಬುವ ಬಳ್ಳಿಯಲ್ಲಿ. ಆರಂಭದಲ್ಲಿ ಹಸಿರಾಗಿದ್ದು ಹಣ್ಣಾದ ಮೇಲೆ ಕೆಂಪಾಗಿ, ಕೊಯ್ದು ಒಣಗಿಸಿದ ನಂತರ ಕಪ್ಪಾಗುತ್ತದೆ.  ಇದು ಚಿಕ್ಕ ಚಿಕ್ಕ ಕಾಳಿನಂತಹಾ ಮೆಣಸು. ಇದನ್ನು ಡಬ್ಬಗಳಲ್ಲಿ ಸಂಗ್ರಹಿಸಿಡುತ್ತಿದ್ದರು. ಕಷಾಯ ಮಾಡುವಾಗ ಒಂದರ್ಧ ಮುಷ್ಟಿ ತೆಗೆದುಕೊಂಡು ಚೆನ್ನಾಗಿ ಕುಟ್ಟಿ ನೀರು -ಬೆಲ್ಲ ಬೆರೆಸಿ ಕುದಿಸುತ್ತಿದ್ದರು. ಒಂದ್ಹತ್ತು ನಿಮಿಷ ಕುದಿದ ಮೇಲೆ ಕಷಾಯ ತಯಾರಾಗುತ್ತದೆ. ಇದನ್ನು ಸೋಸಿ ಕುಡಿದರೆ ಜೋರು ಖಾರ!  ವಿಜಿಗೆ ಖಾರ ಇಷ್ಟವಿಲ್ಲದಿದ್ದರೂ ಕುಡಿಯಲೇಬೇಕು. ಅವಳಿಗೆ ಆಗಾಗ ಜ್ವರ ಬರುತ್ತಿತ್ತು. ಸಪೂರಕ್ಕಿದ್ದ ವಿಜಿಗೆ ಏನೂ ತಿನ್ನದೇ ನಿಶ್ಶಕ್ತಿಯಿಂದಲೇ ಜ್ವರ ಬರುವುದೆಂದು ಅಮ್ಮ ದೂರುತ್ತಿದ್ದರು. ಅವರ ಮನೆಯಲ್ಲಿ ಶೋಲಾಪುರ (ಸೊಲ್ಲಾಪುರ) ಹೊದಿಕೆಗಳಿದ್ದವು. ಅಪ್ಪಯ್ಯ ಯಾವಾಗಲೂ ಅವುಗಳನ್ನೇ ತರುತ್ತಿದ್ದುದು. ವಿಜಿ ನೋಡಿದ ಹೊದಿಕೆಗಳಲ್ಲೆಲ್ಲ ಇವೇ ಅತ್ಯುತ್ತಮವಾದವು. ಉದ್ದ- ಅಗಲ ಹೆಚ್ಚು ಇರುವುದರ ಜೊತೆಗೆ ದಪ್ಪ ಇರುತ್ತವೆ. ಆದರೆ ದಿನಗಳಲ್ಲೂ ಹೊದ್ದುಕೊಳ್ಳಬಹುದು. ಸೆಕೆಗೆ ತಣ್ಣಗೆ ಇರುತ್ತವೆ. ಚಳಿ ಬಂದಾಗ ಎರಡೆರಡು ಹೊದಿಕೆ ಹೊದ್ದು ಮೇಲೊಂದು ರಗ್ಗು ಹಾಕಿಕೊಳ್ಳಬೇಕು. ಶೋಲಾಪುರ ಹೊದಿಕೆಯ ಡಿಸೈನ್ಗಳೂ ಚಂದ . ಈ ಎಲ್ಲ ಕಾರಣಕ್ಕಾಗಿ ಅವಳಿಗೆ ಶೋಲಾಪುರ ಹೊದಿಕೆಗಳೆಂದರೆ ಬಹಳ ಇಷ್ಟ. ಆದರೆ ಜ್ವರ ಬಂದ ರಾತ್ರಿಗಳಲ್ಲಿ ಆಗುತ್ತಿದ್ದುದೇ ಬೇರೆ. ಆಗ ಜ್ವರ ತಲೆಗೇರಿ ಹೊದಿಕೆಯ ಬಣ್ಣದ ಚಿತ್ತಾರಗಳು ರಾಕ್ಷಸಾಕಾರ ತಾಳಿ ಬಂದು ಹೆದರಿಸುತ್ತಿದ್ದವು. ಅರೆನಿದ್ದೆಯಲ್ಲಿರುತ್ತಿದ್ದ ವಿಜಿ ಹಲ್ಲುಮಟ್ಟೆ ಕಚ್ಚಿ ಕೈ ಮುಷ್ಟಿ ಬಿಗಿದುಕೊಂಡು ರಾಕ್ಷಸಾಕಾರಗಳನ್ನು ನೋಡುತ್ತಿದ್ದುದು ಮರೆತೇ ಹೋಗುವುದಿಲ್ಲ .ಹೀಗಾಗಿ ಜ್ವರವೆಂದರೆ ಕೆಟ್ಟ ಕನಸಿನಂತೆ ಅವಳಿಗೆ. ಇಂತಹ ಸಂದರ್ಭದಲ್ಲಿ ಕಾಳು ಮೆಣಸಿನ ಕಷಾಯ ಕುಡಿಯದಿದ್ದರೆ ಅಜ್ಜಿ ಹೊಡೆಯುತ್ತಾರೆಂಬ ಕಾರಣಕ್ಕಾದರೂ ಕುಡಿದೇ ಕುಡಿಯುತ್ತಿದ್ದಳು. ಸುಮಾರು ಏಳೆಂಟು ದಿನವಾದರೂ ಜ್ವರ ಬಿಡದಿದ್ದರೆ ಆಸ್ಪತ್ರೆಗೆ ಹೋಗಬೇಕಿತ್ತು. ಆಚೆಮನೆ ದೊಡ್ಡಮ್ಮ ಜ್ವರ, ಗಂಟಲುನೋವು ಬಂದರೆ ಈರುಳ್ಳಿ, ಶುಂಠಿ, ಕಾಳುಮೆಣಸು ಎಲ್ಲಾ ಸೇರಿಸಿ ಕಷಾಯ ಮಾಡಿ ಕುಡಿಯುತ್ತಿದ್ದರು.” ನಂಗೆ ಗಂಟ್ಲ್ ನೋವ್. ನೀರುಳ್ಳಿ ಸುಟ್ಕಂಡ್, ಬೆಲ್ಲ ಹಾಯ್ಕಂಡ್ ತಿಂದೆ” ಅಂತ ಆಗಾಗ ಹೇಳುತ್ತಿದ್ದರು. ಅಜ್ಜಿಗೆ ಜ್ವರ ಬರುತ್ತಿದ್ದುದು ಕಮ್ಮಿ. ಬಂದರೆ ಮಾತ್ರ ಜೋರಾಗಿಬಿಡುತ್ತಿತ್ತು. ಅವರಿಗೆ ಜ್ವರ ಬಂದಾಗ ನಾಲಗೆ ರುಚಿ ಇರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಅಡುಗೆ ಚೆನ್ನಾಗಿಲ್ಲವೆಂದು ಅಮ್ಮನಿಗೆ ಬಯ್ಯುತ್ತಿದ್ದುದೂ ಇದೆ! ಕಟ್ಟಗಿನ ಮಿಡಿ ಉಪ್ಪಿನಕಾಯಿ ರಸವನ್ನು ನಾಲಗೆಗೆ ತಾಗಿಸಿಕೊಂಡು ಒಂದೆರಡು ತುತ್ತು ತಿಂದು ಬೇಡವೆಂದು ಎದ್ದುಹೋಗುತ್ತಿದ್ದರು. ಆಮೇಲೆ ಕಷಾಯ ಕುಡಿದು ಕಂಬಳಿ ಹೊದ್ದು ಮಲಗುತ್ತಿದ್ದರು. ಆದರೆ ಅಮ್ಮ ಹಾಗಲ್ಲ, ಜ್ವರ ಬಂದಾಗಲೂ ಸ್ವಲ್ಪ ಊಟ ಮಾಡಿ ಆಗಾಗ ಕಷಾಯ ಕುಡಿದು ಬೇಗನೆ ಗುಣ ಮಾಡಿಕೊಳ್ಳುತ್ತಿದ್ದರು.  ಮುದೂರಿ ಮತ್ತು ಆಸುಪಾಸಿನಲ್ಲಿ ನರ್ಸಿಹಾಂಡ್ತಿ, ಅಕ್ಕಣಿಬಾಯಿ ಮುಂತಾದ ಸೂಲಗಿತ್ತಿಯರಿದ್ದರು. ಪೈಕನಾಯ್,ಕ ಸುಬ್ಬನಾಯ್ಕ ಎಂಬ ನಾಟಿ ವೈದ್ಯರಿದ್ದರು.  ಜನರಿಗೆ ಮತ್ತು ದನಕರುಗಳಿಗೂ ಇವರುಮದ್ದು ಕೊಡುತ್ತಿದ್ದರು. ಗಂಟಿ (ದನಕರು)ಗಳಿಗೆ ಹುಷಾರಿಲ್ಲದಾಗ ದೊಡ್ಡ ದೊಡ್ಡ ಬಾಟಲಿಗಳಲ್ಲಿ ಪೈಕ ನಾಯ್ಕ ಕೊಡುವ ಕಪ್ಪು ದ್ರವವನ್ನು ತಂದು ನೆಳಾಲಿಗೆ ಹಾಕಿ ಕುಡಿಸುತ್ತಿದ್ದರು. ಅವು ಹೆದರಿಕೆಯಲ್ಲಿ ಕುಣಿದಾಡುತ್ತಾ, ಅರ್ಧ ಉಗಿದು ಸೀನುತ್ತಾ ಹೇಗೋ ಸ್ವಲ್ಪ-ಸ್ವಲ್ಪ ನುಂಗಿ ಆರೋಗ್ಯರಕ್ಷಣೆ ಮಾಡಿಕೊಳ್ಳುತ್ತಿದ್ದವು!  ಬೆಕ್ಕುಗಳಾದರೆ ಹೀಗಲ್ಲ ; ತಮ್ಮಆರೋಗ್ಯದ ಬಗ್ಗೆ ತಾವೇ ಆದಷ್ಟು ಜಾಗ್ರತೆ ವಹಿಸುತ್ತಿದ್ದವು!!  ತಿಂಗಳಿಗೆರಡು ಸಲವಾದರೂ ಎಳೆಹುಲ್ಲನ್ನು ತಿಂದು ವಾಂತಿ ಮಾಡಿಕೊಳ್ಳುತ್ತಿದ್ದವು. ಹಾಗೆ ಮಾಡಿದಾಗ ಅವುಗಳ ಹೊಟ್ಟೆಯಲ್ಲಿ ಅಜೀರ್ಣದ ಅಂಶ ಇದ್ದರೆ ಹೋಗಿಬಿಡುತ್ತದಂತೆ. ಬೆಕ್ಕುಗಳನ್ನು ನೋಡಿ ನಾಯಿಗಳೂ ಇದನ್ನು ಕಲಿತು ಅಳವಡಿಸಿಕೊಂಡಿದ್ದವು!  ಹುಲ್ಲು ತಿನ್ನುವುದು; ವಾಂತಿ ಮಾಡುವುದು!  ಇನ್ನು ಬೆಕ್ಕುಗಳು ಇಡೀ ದಿನ ಒಲೆಯ ಹತ್ತಿರ ಅಥವಾ ಅಕ್ಕಿಮುಡಿ, ಅಟ್ಟ ಹೀಗೆ ಮನೆಯ ಬೆಚ್ಚಗಿನ ಜಾಗದಲ್ಲೇ ಮಲಗುತ್ತಿದ್ದುದರಿಂದ ಜ್ವರ ಗಿರ ಬಾಧಿಸುವ ಚಾನ್ಸೇ ಇರಲಿಲ್ಲ !ಅದೇನೇ ಇರಲಿ, ಅಮ್ಮ ಬೆಕ್ಕುಗಳಿಗೆ ಆಗಾಗ ಅನ್ನಕ್ಕೆ ತೆಂಗಿನೆಣ್ಣೆ ಹಾಕುತ್ತಿದ್ದರು. “ಅದಕ್ಕೆ ಅದೇ ಔಷಧ ಯಾವುದೇ ಕಾಯಿಲೆ ಬರುವುದಿಲ್ಲ” ಎನ್ನುತ್ತಿದ್ದರು. ದಿನಾಲೂ ಕಾಯಿ ಹೆರೆಯುವಾಗ ತುರಿಯನ್ನು ಹಾಕುತ್ತಿದ್ದರು. ನಾಯಿಗಳಿಗೆ ಟೀ ಕಣ್ಣ್ (ಟೀ ಡಿಕಾಕ್ಷನ್) ಮಾಡಿ ಹಾಕುತ್ತಿದ್ದರು . ಅದನ್ನು ಕುಡಿದರೆ ಅವುಗಳಿಗೆ ಹುಳದ ಉಪದ್ರ ಇರುವುದಿಲ್ಲ ಎಂಬುದಾಗಿ ಜನರ ಅಭಿಪ್ರಾಯ. ಇನ್ನು ಬೆಕ್ಕು ,ನಾಯಿಗಳು ವಿಷದ ವಸ್ತು ತಿಂದದ್ದು ಗೊತ್ತಾದರೆ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಿ ಪ್ರಥಮ ಚಿಕಿತ್ಸೆ ಮಾಡುತ್ತಿದ್ದರು. ಬಿಸಿಲು- ಚಳಿ -ಮಳೆಯೆನ್ನದೆ ಗದ್ದೆಗಳಲ್ಲಿ ಕಷ್ಟದ ಕೆಲಸ ಮಾಡುವ ಹೋರಿಗಳಿಗೆ ವರ್ಷದ ಕೊನೆಯಲ್ಲಿ ಹದ್ನದ ದಿನ ಹಂಗಾರ್ ಕೆತ್ತೆಯ ಗಂಜಿ ಮಾಡಿ ಬಡಿಸುತ್ತಿದ್ದರು. ಅದು ಕಹಿಯಿರುತ್ತದೆಂದು  ಅದಕ್ಕೆ ಬೆಲ್ಲ ಕೂಡ ಹಾಕುತ್ತಿದ್ದರು. ಆ ದಿನ ಅವುಗಳಿಗೆ ಸ್ನಾನ ಮಾಡಿಸಿ ಮೈಗೆಲ್ಲಾ ಎಣ್ಣೆ ಹಚ್ಚುತ್ತಿದ್ದರು. ವರ್ಷವಿಡೀ ದುಡಿದ ಎಲ್ಲರಿಗೂ ಹದ್ನದ ದಿನ ಪಾಯಸದ ಊಟ ಇರುತ್ತಿತ್ತು. ಇದಾದ ನಂತರ ಹೋರಿಗಳಿಗೆ, ಶ್ರಮಿಕರಿಗೆ ಗದ್ದೆಯಲ್ಲಿ ಮಾಡುವ ಕಷ್ಟದ ಕೆಲಸದಿಂದ ಸ್ವಲ್ಪ ಸಮಯ ಬಿಡುವು.  ಹಲ್ಲು ನೋವು, ತಲೆನೋವು ,ಬೆನ್ನುನೋವು, ಕಾಲು ನೋವು, ಹಾವು ಕಚ್ಚಿದ್ದು , ಚೇಳು ಕಚ್ಚಿದ್ದು ಹೀಗೆ ಪ್ರತಿಯೊಂದಕ್ಕೂ ಹಳ್ಳಿಗರಲ್ಲಿ ಏನಾದರೊಂದು ಔಷಧದ ಮಾಹಿತಿ ಇರುತ್ತಿತ್ತು. ಕೆಲವರಂತೂ ಬಾಯಿ ತೆಗೆದರೆ ಆ ಸೊಪ್ಪು, ಈ ಬಳ್ಳಿ ,ಇನ್ಯಾವುದೋ ಬೇರು ಎಂದು ಮದ್ದುಗಳನ್ನು ಸೂಚಿಸುತ್ತಿದ್ದರು. ಇವುಗಳಲ್ಲಿ ಕೆಲವಂತೂ ಒಳ್ಳೇ ಪ್ರಭಾವ ಬೀರುತ್ತಿದ್ದವು. ‘ದಶಮೂಲಾರಿಷ್ಟ’ ಎಂಬ ಗಿಡಮೂಲಿಕೆಗಳ ಔಷಧವೊಂದು ಆಗ ಅಲ್ಲಿನ ಜನರ ಸರ್ವರೋಗ ನಿವಾರಕ ಎಂಬಂತಿತ್ತು!  ಅಜೀರ್ಣ ಅಥವಾ ಥಂಡಿ ಆದಾಗ ಮೊದಲು ಅದನ್ನೇ ಕುಡಿಯಲು ಕೊಡುತ್ತಿದ್ದರು. ಮನುಷ್ಯರಿಗಷ್ಟೇ ಅಲ್ಲದೆ ಜಾನುವಾರುಗಳಿಗೂ, ಬೆಕ್ಕು -ನಾಯಿಗೂ ಸುಮಾರು ಕಾಯಿಲೆಗೆ ಇದೇ ಮದ್ದಾಗಿತ್ತು! ಇನ್ನು; ಹುಟ್ಟಿದ ಮಕ್ಕಳ ಎಳೆನಾಲಿಗೆಗೆ ‘ಬಜೆ’ ಹಾಕುತ್ತಿದ್ದರು . ಅಂದರೆ ಬಜೆ, ಹಿಪ್ಪಲಿ, ಜಾಯಿಕಾಯಿ ಎಂಬ ಮೂಲಿಕೆಗಳನ್ನು ತೇಯ್ದು ಚೂರು ಜೇನುತುಪ್ಪದೊಂದಿಗೆ ಸೇರಿಸಿ ನೆಕ್ಕಿಸುತ್ತಿದ್ದರು. ಇದನ್ನು ದಿನವೂ ಸಂಜೆ ಹೊತ್ತಿಗೆ ತಪ್ಪದೇ ಮಾಡುತ್ತಿದ್ದರು. ಮಗುವಿಗೆ ಹೊಟ್ಟೆ ನೋವು ಬಾರದೆ  ಚೆನ್ನಾಗಿ ನಿದ್ದೆ ಮಾಡುತ್ತದೆ ಮತ್ತು ಸ್ಪಷ್ಟವಾಗಿ ಮಾತು ಕಲಿಯುತ್ತದೆ ಎನ್ನುತ್ತಿದ್ದರು. ಸಣ್ಣ ಮಕ್ಕಳಿಗೆ ಜ್ವರ ಬಂದಾಗ ಸಂಬಾರ್ ಬಳ್ಳಿ ಸೊಪ್ಪನ್ನು (ದೊಡ್ಡಪತ್ರೆ ) ಬಾಡಿಸಿ ರಸ ತೆಗೆದು ಕುಡಿಸುತ್ತಿದ್ದರು . ಇನ್ನೂ ಕೆಲವು ಸಂಬಾರ ಪದಾರ್ಥಗಳನ್ನು ದಿನನಿತ್ಯದ ಊಟದಲ್ಲಿ ಬಳಕೆ ಮಾಡುತ್ತಾ ಅವುಗಳಿಂದ  ಔಷಧೀಯ ಅಂಶಗಳನ್ನು ಪಡೆಯುತ್ತಿದ್ದರು. ಕೊತ್ತಂಬರಿ, ಜೀರಿಗೆ, ಮೆಂತ್ಯೆ, ಸಾಸಿವೆ, ಅರಿಶಿನ ಹಾಕದೆ ಸಾಂಬಾರು ಆಗುವುದಿಲ್ಲ. ಬೆಳ್ಳುಳ್ಳಿ, ಶುಂಠಿ ಕಾಳುಮೆಣಸು, ಜೀರಿಗೆ, ಓಮ, ಏಲಕ್ಕಿ, ಲವಂಗ ,ಚಕ್ಕೆ ,ಜಾಯಿಕಾಯಿ ಆಗಾಗ ಬಳಸುತ್ತಲೇ ಇರುತ್ತಿದ್ದರು. ತ್ರಾಣಿ ಮೊದಲಾದ ಸೊಪ್ಪಿನ ಕಷಾಯಗಳನ್ನು ಮಾಡಿ ಕುಡಿಯುತ್ತಿದ್ದರು.  ಆಸ್ಪತ್ರೆಗಳಾಗಲಿ, ವೈದ್ಯರ ಸಹಾಯವಾಗಲಿ ಸುಲಭಕ್ಕೆ ದೊರಕದ ಆ ಕಾಲದಲ್ಲಿ ಜನರಿಗೆ ಆದಷ್ಟು ಕಾಯಿಲೆಗಳೇ ಬರದಂತೆ ಆರೋಗ್ಯ ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿತ್ತು. ಅನಾರೋಗ್ಯವಾದಾಗ ಆಗುವ ಅನಾಹುತಗಳ ಬಗ್ಗೆ ಭಯವಿತ್ತು. ನಿಸರ್ಗಸಹಜ ಆಹಾರ  ಬಳಸುತ್ತಾ ಹುಷಾರಿಲ್ಲದಾಗ ಹಳ್ಳಿಯ ಮದ್ದು ಮಾಡುತ್ತಾ ಸುಧಾರಿಸಿಕೊಳ್ಳುತ್ತಿದ್ದರು. ಶುದ್ಧ ನೀರು ,ಗಾಳಿ ,ಆಹಾರ ಸೇವಿಸುತ್ತಿದ್ದುದರಿಂದ ಕಾಯಿಲೆ ಕಸಾಲೆಗಳೂ ಕಮ್ಮಿಯಿದ್ದವು . **************************

ಬೆಕ್ಕು -ನಾಯಿಗಳ ಹುಲ್ಲಿನೌಷಧ! Read Post »

You cannot copy content of this page

Scroll to Top