ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-18 ಶಂಕರನ ಭಾಗೀವನದಲ್ಲಿ ಗೋಪಾಲನ ಮನೆಯನ್ನು ಸೇರಿಸಿ ಒಟ್ಟು ಮೂವತ್ತೊಂದು ಮನೆಗಳಿವೆ. ಮುಸ್ಲೀಮರು ಮತ್ತು ಕ್ರೈಸ್ತರನ್ನು ಹೊರತುಪಡಿಸಿ ಉಳಿದ ಬಹುತೇಕ ಜಾತಿಯವರು ಭಾಗಿವನದಲ್ಲಿ ಐದು, ಆರು, ಏಳು, ಹತ್ತು ಮತ್ತು ಇಪ್ಪತ್ತು ಸೆಂಟ್ಸ್‍ಗಳ ಜಾಗದ ಮಾಲಕರಾಗಿ ಹೊಸ ಮನೆಗಳ ಒಡೆಯರಾಗಿ ನೆಮ್ಮದಿಯಿಂದ ಬಾಳುತ್ತಿದ್ದಾರೆ. ಗೋಪಾಲನ ಮನೆಯ ಪಕ್ಕದ ಮನೆ ಬ್ಯಾಂಕರ್ ನಾರಾಯಣರದ್ದು. ಅವರ ಒತ್ತಿನಲ್ಲಿ ಮರದ ವ್ಯಾಪಾರಿ ಸುಂದರಯ್ಯನವರಿದ್ದಾರೆ. ಅವರಾಚೆಗಿನದ್ದು ಜೀವವಿಮಾ ಕಂಪನಿಯ ನಿವೃತ್ತ ಉದ್ಯೋಗಿ ಲಕ್ಷ್ಮಣಯ್ಯ, ಸುಮಿತ್ರಮ್ಮ ದಂಪತಿಯದ್ದು. ಅವರ ಬಳಿಕದ್ದು ಉಮೇಶಯ್ಯನದ್ದು ಅದರ ನಂತರದ್ದು, ಪ್ರಸಿದ್ಧ ‘ನವರತ್ನ’ ಚಿನ್ನಾಭರಣ ಮಳಿಗೆಯ ಉದ್ಯೋಗಿ ರಮೇಶನದ್ದು. ಆ ನಂತರದವು ರಾಜೇಶ್ ಕುಮಾರ್ ಮತ್ತು ಜಗದೀಶ್ ಕುಮಾರ್ ಹಾಗೂ ಕೇಶವನದ್ದು. ಇನ್ನೂ ಮುಂದಕ್ಕೆ ಹೋದರೆ ಮೊಗವೀರರದ್ದೂ ಮತ್ತು ಸರಕಾರದ ವಿವಿಧ ಅಂಗಸಂಸ್ಥೆಗಳ ನೌಕರರದ್ದೂ ಕೆಲವು ಮನೆಗಳಿವೆ.    ಭಾಗೀವನದ ಮುಖ್ಯ ದ್ವಾರದ ಬಲಮುಗ್ಗಲಿನ ಸುಮಾರು ಇಪ್ಪತ್ತು ಸೆಂಟ್ಸ್ ಜಾಗದಲ್ಲಿ ವಿವಿಧ ಮರಮಟ್ಟುಗಳಿಂದ ತುಂಬಿ ಹಚ್ಚಹಸುರಿನಿಂದ ಕಂಗೊಳಿಸುತ್ತ ಭಾಗೀವನಕ್ಕೆ ವಿಶೇಷ ಶೋಭೆಯನ್ನು ನೀಡುವಂಥದ್ದೊಂದು ಚಂದದ ತೋಟವಿದೆ. ಅದರ ನಡುವೆ ಪ್ರಾಚೀನ ವಿನ್ಯಾಸದಿಂದ ನಿರ್ಮಿಸಿದ ಸುಂದರವಾದ ಹೆಂಚಿನ ಮನೆಯೊಂದಿದೆ. ಅದು ಆಯುರ್ವೇದ ವೈದ್ಯ ಡಾಕ್ಟರ್ ನರಹರಿಯ ಮನೆ. ಅವನು ಅಪ್ಪಟ ನಿಸರ್ಗಪ್ರೇಮಿ ಮತ್ತು ಮೇಲಾಗಿ ಬ್ರಹ್ಮಾಚಾರಿ ಕೂಡಾ. ಮಧ್ಯಮವರ್ಗದ ಸುಸಂಸ್ಕೃತ ಕುಟುಂಬವೊಂದರಲ್ಲಿ ಜನಿಸಿದ ಇವನು ಸುಮಾರು ಮೂವತ್ತೆರಡರ ಹರೆಯದ ಎಣ್ಣೆಗೆಂಪಿನ ಸ್ಫುರದ್ರೂಪಿ ತರುಣ. ನರಹರಿಯ ಹೈಸ್ಕೂಲ್ ವಿದ್ಯಾಭ್ಯಾಸದ ಹಂತದಲ್ಲಿ ಬಲಾಯಿ ಪಾದೆಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಬಸ್ಸು ಅಪಘಾತವೊಂದರಲ್ಲಿ ಅವನ ತಂದೆ ತಾಯಿ ಇಬ್ಬರೂ ಗತಿಸಿದರು. ಹಾಗಾಗಿ ಮಾವಂದಿರ, ಅಂದರೆ ತಾಯಿಯ ಅಣ್ಣ ತಮ್ಮಂದಿರ ಆಸರೆಯಲ್ಲಿ ಬೆಳೆಯುತ್ತ ವಿದ್ಯೆಯನ್ನು ಮುಂದುವರೆಸಿದವನು ಹೆತ್ತವರ ಮತ್ತು ತನ್ನಾಸೆಯಂತೆ ಆಯುರ್ವೇದ ವೈದ್ಯಕೀಯವನ್ನು ಕಲಿತ. ಪದವಿ ಶಿಕ್ಷಣ ಮುಗಿಯುತ್ತಲೇ ಈಶ್ವರಪುರದ, ‘ಆಯುರ್ ಕೇರ್ ಹೆಲ್ತ್ ಸೆಂಟರ್’ ಆಸ್ಪತ್ರೆಯಲ್ಲಿ ಉದ್ಯೋಗ ದೊರಕಿತು. ಕೆಲವು ವರ್ಷಗಳ ಕಾಲ ಅವಿರತವಾಗಿ ರೋಗಿಗಳ ಸೇವೆ ಮಾಡಿದವನು ಭಾಗೀವನದಲ್ಲಿ ಜಾಗವೊಂದನ್ನು ಖರೀದಿಸಿ ಪುಟ್ಟ ಮನೆಯೊಂದನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾನೆ. ನರಹರಿಯು ಬಾಲ್ಯದಿಂದಲೇ ಹಸಿರು ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತು ಅಪಾರ ಪ್ರೀತಿಯನ್ನು ಬೆಳೆಸಿಕೊಂಡವನು. ಹಾಗಾಗಿ ತನ್ನ ಬಿಡುವಿನಲ್ಲಿ ದೇಶದಾದ್ಯಂತ ಹಬ್ಬಿರುವ ಪಶ್ಚಿಮಘಟ್ಟಗಳಲ್ಲೂ ಅವುಗಳ ತಪ್ಪಲಿನ ವಿವಿಧ ಅಭಯಾರಣ್ಯಗಳಲ್ಲೂ ದಣಿವರಿಯದೆ ಸಂಚರಿಸುವಂಥ ನೆಚ್ಚಿನ ಹವ್ಯಾಸವನ್ನು ರೂಢಿಸಿಕೊಂಡಿದ್ದ. ಅದರ ಫಲವಾಗಿ ಹಸಿರು ಪರಿಸರ ಮತ್ತು ಮೂಕ ಜೀವಜಾಲಗಳ ಕುರಿತು ವಿಶೇಷ ಜ್ಞಾನವೂ ಹಾಗೂ ನಿಸರ್ಗದೊಂದಿಗೆ ಅನ್ಯೋನ್ಯವಾಗಿ ಬೆರೆತು ಬಾಳುವ ಸಹಜ ಕಲೆಯೂ ಅವನಿಗೊಲಿದಿತ್ತು.    ಭಾಗೀವನದ ಬಡಾವಣೆಯ ಕುಟುಂಬಗಳಲ್ಲಿ ಮೇಲ್ಮಮಧ್ಯಮವರ್ಗ ಮತ್ತು ಶ್ರೀಮಂತರೇ ಹೆಚ್ಚಾಗಿರುವುದು. ಬಹುತೇಕರು ಸರಕಾರಿ ಉದ್ಯೋಗ ಮತ್ತಿತರ ಉನ್ನತ ನೌಕರಿಯಲ್ಲಿದ್ದಾರೆ. ಆದರೆ ಇವರೆಲ್ಲರ ನಡುವೆ ಗೋಪಾಲನದೊಬ್ಬನದೇ ಸಣ್ಣ ಹಂಚಿನ ಮನೆಯ, ಕಡು ಬಡತನದ ಕುಟುಂಬವಿರುವುದು. ಭಾಗೀವನದ ಎಡ ಮಗ್ಗುಲಿನ ಸುಮಾರು ಐವತ್ತು ಗಜ ದೂರದಲ್ಲಿ ಒಂದು ಎಕರೆಗಳಷ್ಟು ವಿಸ್ತಾರವಾದ ಮದಗವೊಂದಿದೆ. ಅದು ವರ್ಷವಿಡೀ ತುಂಬಿ ಹರಿಯುತ್ತದೆ. ಅದನ್ನು ನೋಡಿಯೇ ಶಂಕರ ಭಾಗೀವನದ ಭೂಮಿಯನ್ನು ಖರೀದಿಸಿದ್ದು. ಆ ಸಮೃದ್ಧ ಸರೋವರದಿಂದಾಗಿ ಬುಕ್ಕಿಗುಡ್ಡೆ ಗ್ರಾಮದ ನೂರಾರು ಮನೆಗಳ ಬಾವಿಗಳು ವರ್ಷವಿಡೀ ತುಂಬಿರುತ್ತವೆ. ಕೃಷಿಭೂಮಿಗಳು, ತೋಟಗಾರಿಕೆಗಳು ಉತ್ತಮ ಫಸಲು ನೀಡುತ್ತವೆ. ಭಾಗೀವನದ ಮನೆಗಳ ಬಾವಿಗಳಲ್ಲೂ ಹದಿನೈದರಿಂದ ಇಪ್ಪತ್ತು ಅಡಿಗಳೊಳಗೆ ಶುದ್ಧ ನೀರು ಸಿಕ್ಕಿದೆ. ಆದ್ದರಿಂದ ಈ ಬಡಾವಣೆಗೆ ನೀರಿನ ಸಮಸ್ಯೆ ಎಂದೂ ಕಾಡಿದ್ದಿಲ್ಲ.    ಈ ಸರೋವರವು ಸದಾ ತುಂಬಿರಲು ಮುಖ್ಯ ಕಾರಣವೂ ಇದೆ. ಮದಗದ ಸುತ್ತಲಿನ ಮುಕ್ಕಾಲು ಪ್ರದೇಶವನ್ನು ಪುರಾತನವಾದ ದೊಡ್ಡ ಅಡವಿಯೊಂದು ಆವರಿಸಿಕೊಂಡಿದೆ. ಈ ಪರಿಸರವು ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದು ಎಂದು ಊರ ಜನರು ಹೇಳುತ್ತಾರೆ. ಈ ಕಾಡಿನಲ್ಲಿ ಮೂರು ನಾಲ್ಕು ಶತಮಾನಗಳಷ್ಟು ಪ್ರಾಚೀನವಾದ ಮರಗಳು, ಅನೇಕ ಬಗೆಯ ಬಳ್ಳಿಗಳು, ಬಗೆಬಗೆಯ ಔಷಧೀಯ ಸಸ್ಯಸಂಪತ್ತುಗಳು ಮತ್ತು ವಿವಿಧ ಜಾತಿಯ ಕಾಡುಪ್ರಾಣಿಗಳು ವಾಸಿಸುತ್ತಿದ್ದವು. ಅಲ್ಲದೇ ಆ ಮಲೆಯು ನಾಗ, ಪರಿವಾರ ದೈವಗಳ ವಾಸಾಸ್ಥಾನವೆಂದೂ ಹೇಳಲಾಗುತ್ತಿತ್ತು. ಆದ್ದರಿಂದ ಊರವರು ಆ ಹಾಡಿಯೊಳಗೆ ಹೋಗಲು ಹೆದರುತ್ತಿದ್ದರು. ದೇಶವನ್ನು ಸಂರಕ್ಷಿಸುವ ಬಲಿಷ್ಠ ಯೋಧರ ಪಡೆಯಂತಿದ್ದ ಆ ಅರಣ್ಯದ ಅಸಂಖ್ಯಾತ ಮರಗಳು ಪ್ರತೀವರ್ಷ ಮಳೆ ಮೋಡಗಳನ್ನು ತಡೆದು ನಿಲ್ಲಿಸಿ, ಮಳೆಯನ್ನು ಭೂವಿಗಿಳಿಸಿ ಮದಗವನ್ನು ತುಂಬಿಸುತ್ತ ಸುತ್ತಮುತ್ತಲಿನ ಚರಾಚರ ಜೀವರಾಶಿಗಳಿಗೂ ಜೀವನಾಡಿಯಾಗಿವೆ. ಹಾಗಾಗಿ ಮಳೆಗಾಲ ಸಮೀಪಿಸುತ್ತಿದ್ದಂತೆಯೇ ವಿವಿಧ ದೇಶಗಳಿಂದ ವಲಸೆ ಹೊರಡುವ ಪಕ್ಷಿಸಂಕುಲವು ಇಲ್ಲಿಗೆ ಬಂದು ಮದಗದ ದಡದ ಮರಗಳಲ್ಲೂ ಮತ್ತು ಹಾಡಿಯೊಳಗೂ ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತ ಬದುಕುವುದನ್ನು ನೋಡುವುದೇ ಒಂದು ಮಧುರಾನಂದ!    ಭಾಗೀವನದಲ್ಲಿ ಜಾಗಕೊಳ್ಳಲು ಮತ್ತು ಮನೆಗಳನ್ನು ಖರೀದಿಸಲು ಬಂದವರಲ್ಲಿ ಹೆಚ್ಚಿನವರು ಅದರ ಸುತ್ತಮುತ್ತಲಿನ ಹಸಿರು ಸೌಂದರ್ಯಕ್ಕೆ ಮಾರುಹೋಗಿಯೇ ಶಂಕರನ ದುಬಾರಿ ಬೆಲೆಯನ್ನೂ ಲೆಕ್ಕಿಸದೆ ಕೊಂಡಿದ್ದರು. ಶಂಕರ ಭಾಗೀವನದ ಜಮೀನನ್ನು ಲೇಔಟ್ ಮಾಡಿಸಿ, ಮನೆಗಳನ್ನು ಕಟ್ಟಿಸಿ ಮಾರಾಟವನ್ನೇನೋ ಮಾಡಿದ್ದ. ಆದರೆ ಆ ಬಡಾವಣೆಯ ಸುತ್ತಲೂ ಆವರಣವೊಂದನ್ನು ಕಟ್ಟಿಸಿಕೊಡಲು ಅವನ ಜಿಪುಣತನ ಬಿಟ್ಟಿರಲಿಲ್ಲ. ಇತ್ತೀಚೆಗೆ ಬಾಕುಡಗುಡ್ಡೆಯ ಜಾಗಕ್ಕೆ ದೊಡ್ಡ ಮೊತ್ತವನ್ನು ಸುರಿದಿದ್ದುದರಿಂದಲೂ ಅದರಲ್ಲಿ ಹುಟ್ಟಿಕೊಂಡಿದ್ದ ನಾಗನ ಸಮಸ್ಯೆಯಿಂದಲೂ ಭಾಗೀವನದ ಆವರಣದ ಕಥೆಯನ್ನು ಮರೆತುಬಿಟ್ಟಂತಿದ್ದ. ಆದರೆ “ತಮ್ಮ ಬಡಾವಣೆಯ ಸುತ್ತಮುತ್ತ ಹೊಲಗದ್ದೆಗಳು ಮತ್ತು ದಟ್ಟ ಕುರುಚಲು ಹಾಡಿಗಳು ಇದ್ದುದರಿಂದ ಕಾಡುಪ್ರಾಣಿಗಳು, ಹಾವು, ಅರಣೆ, ಚೇಳು ಮತ್ತು ಕ್ರಿಮಿಕೀಟಗಳು ತಮ್ಮ ವಠಾರದೊಳಗೂ, ಮನೆಗಳೊಳಗೂ ಬಂದು ತೊಂದರೆ ಕೊಡುತ್ತವೆ. ಆದ್ದರಿಂದ ಆದಷ್ಟು ಬೇಗ ಪಾಗರ ನಿರ್ಮಿಸಿಕೊಡಬೇಕು!” ಎಂದು ವಠಾರದವರು ಶಂಕರನನ್ನು ಒತ್ತಾಯಿಸುತ್ತಿದ್ದರು.    ಆದರೆ ಅವನು, ‘ಆಯ್ತು, ಆಯ್ತು. ಸದ್ಯದಲ್ಲೇ ಮಾಡಿಸಿ ಕೊಡುವ. ಮೊನ್ನೆಯವರೆಗೆ ಶಿಲೆಕಲ್ಲಿನ ತಾಪತ್ರಯ ಇತ್ತು. ಈಗ ಮರಳು ಮತ್ತು ಸಿಮೆಂಟಿನ ಕೊರತೆ ಶುರುವಾಗಿದೆ. ಹಾಗಾಗಿ ಇನ್ನೂ ಸ್ವಲ್ಪ ಕಾಲ ಹೋಗಲಿ!’ ಎನ್ನುತ್ತ ಕಾಲಾಹರಣ ಮಾಡುತ್ತಿದ್ದ. ಹೀಗಿದ್ದವನಿಗೆ ಈಚೆಗೆ ಹೊಸದೊಂದು ಉಪಾಯವೂ ಹೊಳೆದಿದ್ದುದರಿಂದ, ‘ಅಲ್ಲಾ, ನಿಮ್ಮ ನಿಮ್ಮ ಜಾಗಗಳಿಗೆ ನೀವು ನೀವೇ ಕಂಪೌಂಡ್ ವಾಲ್ ಹಾಕಿಕೊಂಡಿದ್ದೀರಿ. ಹೀಗಿರುವಾಗ ಮತ್ತೆಂಥ ಭಯ ನಿಮಗೆ?’ ಎಂದು ನಗುತ್ತ ಜಾರಿಕೊಳ್ಳುತ್ತಿದ್ದಾನೆ. ಇನ್ನು ಹತ್ತು ಹದಿನೈದು ಮನೆಗಳವರೂ ತಂತಮ್ಮ ಜಾಗಗಳಿಗೆ ಪಾಗರ ಕಟ್ಟಿಕೊಂಡರೆ ಇಡೀ ಬಡಾವಣೆಯ ಆವರಣಕ್ಕೆ ತಗಲುವ ದೊಡ್ಡ ಖರ್ಚುವೆಚ್ಚ ಉಳಿದಂತೆಯೇ ಎಂಬುದು ಅವನ ಯೋಚನೆ. ಆದರೆ ಅವನ ಈ ಲೆಕ್ಕಾಚಾರದಿಂದ ಮುಂದೊಂದು ದಿನ ಇಡೀ ಭಾಗೀವನದ ನಿವಾಸಿಗಳಿಗೆ ದೊಡ್ಡ ತಾಪತ್ರಯಗಳು ಬಂದು ಬಡಿಯಲಿವೆ ಎಂಬುದು ಅವನಿಗಾಗಲಿ ಅಥವಾ ಭಾಗೀವನದ ನಿವಾಸಿಗಳಿಗಾಗಲಿ ತಿಳಿದಿರಲಿಲ್ಲ!                                                                                                *** ರಾಧಾ, ಕೃಷಿಕ ಕುಟುಂಬದಿಂದ ಬಂದ ಹೆಣ್ಣು. ಹಾಗಾಗಿ ಬಾಲ್ಯದಿಂದಲೂ ಅವಳಿಗೆ ಹಸು, ಕೋಳಿ, ನಾಯಿ, ಬೆಕ್ಕುಗಳೆಲ್ಲ ಹತ್ತಿರದ ಬಂಧುಗಳಂತಿದ್ದವು. ಆದರೆ ಅಲೆಮಾರಿಯಂಥ ಗಂಡನನ್ನು ಕಟ್ಟಿಕೊಂಡ ಮೇಲೆ ಅವಳಿಗೆ ಆ ಪ್ರಾಣಿಗಳೊಂದಿಗಿನ ಸಂಬಂಧವು ಕಡಿದುಹೋಗಿತ್ತು. ತನಗೊಂದು ಸ್ವಂತ ಮನೆಯಾದ ಮೇಲಾದರೂ ತನ್ನಿಷ್ಟದ ಪ್ರಾಣಿಪಕ್ಷಿಗಳನ್ನು ಸಾಕಬೇಕು ಎಂದು ಅವಳು ಆಗಾಗ ಅಂದುಕೊಳ್ಳುತ್ತಿದ್ದಳು. ಹಾಗಾಗಿ ಈಗ ಸ್ವಂತ ಮನೆಯೇನೋ ಆಗಿದೆ. ಆದರೆ ಕೇವಲ ನಾಲ್ಕು ಸೆಂಟ್ಸಿನಷ್ಟಗಲದ ಜಾಗದಲ್ಲಿ ಸಣ್ಣ ಮನೆಯಾಗಿ ಒಂದು ತುಂಡು ಅಂಗಳ ಮಿಕ್ಕಿರುವುದೇ ಹೆಚ್ಚು. ಅಂಥದ್ದರಲ್ಲಿ ಸಾಕುಪ್ರಾಣಿಗಳಿಗೆಲ್ಲಿಯ ನೆಲೆ! ಎಂದುಕೊಳ್ಳುತ್ತ ನಿರಾಶಳಾಗುತ್ತಿದ್ದಳು. ಆದರೂ ಅವಳು ತನ್ನ ಆಸೆಯನ್ನು ಬಿಟ್ಟಿರಲಿಲ್ಲ. ವಠಾರದವರಿಗೆ ತೊಂದರೆಯಾಗದಂತೆ ಕೋಳಿ, ನಾಯಿ ಮತ್ತು ಗಬ್ಬದ ಹಸುವೊಂದನ್ನು ತಂದು ಇದ್ದ ಜಾಗದೊಳಗೆಯೇ ಸುಧಾರಿಸಿಕೊಂಡು ಸಾಕಿದರೆ ಒಂದಿಷ್ಟು ಮೇಲ್ಸಂಪಾದನೆಯಾದರೂ ಆದೀತು ಎಂದು ಆಲೋಚಿಸುತ್ತಿದ್ದಳು. ಹೀಗಾಗಿ ಆ ಸಂಗತಿಯನ್ನು ಒಮ್ಮೆ ಗಂಡನಿಗೂ ಹೇಳಿ ಚರ್ಚಿಸಿದಳು. ಗೋಪಾಲನ ಅಜ್ಜಿ, ಅಜ್ಜಂದಿರೂ ಕೃಷಿಕರಾಗಿದ್ದವರು. ಅವನ ಬಾಲ್ಯವೂ ಕೆಲವು ಕಾಲ ಅವರೊಂದಿಗೆ ಕಳೆದಿತ್ತು. ಶಾಲಾ ರಜಾ ದಿನಗಳಲ್ಲಿ ಅಜ್ಜಿಯ ಮನೆಗೆ ಹೋದಾಗಲೆಲ್ಲ ಅವನೂ ಹೆಚ್ಚಾಗಿ ದನಕರು, ನಾಯಿ ಮತ್ತು ಕೋಳಿಗಳೊಂದಿಗೆ ಆಟವಾಡಿಕೊಂಡೇ ಬೆಳೆದವನು. ಆದ್ದರಿಂದ ಮಡದಿಯ ಯೋಚನೆ ಅವನಿಗೂ ಇಷ್ಟವಾಯಿತು. ‘ಆಯ್ತು ಮಾರಾಯ್ತಿ ಸಾಕುವ. ಆದರೆ ನಮ್ಮ ವಠಾರದಲ್ಲಿ ಹೆಚ್ಚಾಗಿ ಮಡಿಮೈಲಿಗೆಯವರೇ ಇರುವುದಲ್ಲವಾ. ಅವರ್ಯಾರೀಗೂ ತೊಂದರೆಯಾಗದಂತೆ ಸಾಕಬೇಕು ನೋಡು!’ ಎಂದ ಗಂಭೀರವಾಗಿ. ‘ಹೌದು ಮಾರಾಯ್ರೇ, ನನಗೂ ಆ ಯೋಚನೆ ಬಂದಿತ್ತು. ಆದರೂ ನೀವು ಹೇಳಿದ ಹಾಗೆ ಅವುಗಳು ಇನ್ನೊಬ್ಬರ ವಠಾರದತ್ತ ಹೋಗದಂತೆ ನೋಡಿಕೊಂಡರಾಯ್ತು!’ ಎಂದಳು ತಾನೂ ಕಾಳಜಿಯಿಂದ. ಗೋಪಾಲ ಮರುದಿನವೇ ಗರಡಿಗುಡ್ಡೆಯ ವನಜಕ್ಕನ ಮನೆಗೆ ಹೋಗಿ ಒಂದು ಜೊತೆ ಊರ ಕೋಳಿಯನ್ನು ಕೊಂಡು ತಂದು ಹೆಂಡತಿಗೊಪ್ಪಿಸಿದ. ಅವು ಬಹಳಬೇಗನೇ ಮನೆಮಂದಿಯ ಆರೈಕೆಯಿಂದಲೂ, ಪಕ್ಕದ ಹಾಡಿಗುಡ್ಡೆಗಳಲ್ಲಿ ಸಿಗುವ ಕ್ರಿಮಿಕೀಟಗಳ ಸೇವನೆಯಿಂದಲೂ ತಮ್ಮ ವಂಶೋತ್ಪತ್ತಿಯನ್ನು ಹುಲುಸಾಗಿ ಬೆಳೆಸತೊಡಗಿದವು. ಪರಿಣಾಮ ಕೆಲವೇ ಕಾಲದೊಳಗೆ ನಾಲ್ಕೈದು ಹುಂಜಗಳು ಅಂಕದ ಹೋರಾಟಕ್ಕೂ ಹುರಿಗೊಂಡು ನಿಂತವು. ಇದರಿಂದ ಹುರುಪುಗೊಂಡ ಗೋಪಾಲ ಅವುಗಳನ್ನು ಮಸಣದಗುಡ್ಡೆ, ಪುತ್ತೂರು, ಗರಡಿಗುಡ್ಡೆ ಮತ್ತು ಕೆಂಪ್ತೂರಿನಲ್ಲಿ ನಡೆಯುವ ಕೋಳಿ ಅಂಕಗಳಿಗೆ ಕೊಂಡುಹೋಗಿ ಮಾರುತ್ತ ಸಾವಿರ ಸಾವಿರ ಗಳಿಸತೊಡಗಿದ. ಅದೇ ಹಣದಿಂದ ಒಂದು ಗಬ್ಬದ ಹಸುವೂ ರಾಧಾಳ ಮನೆಯನ್ನು ಪ್ರವೇಶಿಸಿತು. ಅಷ್ಟಾಗುತ್ತಲೇ ನೆರ್ಗಿಹಿತ್ತಲಿನ ಕರಿಮಾರು ಹಾಡಿಯೊಂದರ ಪಕ್ಕದ ಕಸದ ತೊಟ್ಟಿಯಲ್ಲಿ ಯಾರೋ ಎಸೆದು ಹೋಗಿದ್ದ ಮತ್ತು ಇನ್ನೂ ಕಣ್ಣು ಬಿಟ್ಟಿರದ ಮೂರು ನಾಯಿ ಮರಿಗಳಲ್ಲಿ ದಷ್ಟಪುಷ್ಟವಾದ ಚೆಂದದ ಹೆಣ್ಣು ಮರಿಯೊಂದನ್ನು ಗೋಪಾಲ ಮನೆಗೆ ತಂದು ಸಾಕತೊಡಗಿದ. ರಾಧಾ ಅದಕ್ಕೆ ‘ಮೋತಿ’ ಎಂದು ಹೆಸರಿಟ್ಟಳು. ಆ ಕುನ್ನಿಯು ಅವನ ಮಕ್ಕಳ ಪ್ರೀತಿಯ ಆರೈಕೆಯಿಂದ ಎಲ್ಲರೊಡನೆ ಅನ್ಯೋನ್ಯವಾಗಿ ಬೆರೆತು ತನ್ನ ನಾಲ್ಕು ಸೆಂಟ್ಸಿನ ಪ್ರದೇಶದೊಳಗೆ ಅಪರಿಚಿತವಾದ ಸಣ್ಣದೊಂದು ಕೀಟವನ್ನೂ ನುಸುಳಲು ಬಿಡದೆ ಕಾವಲು ಕಾಯುತ್ತ ಬೆಳೆಯುತ್ತಿತ್ತು. ಹೀಗೆ ಗೋಪಾಲನ ಸಂಸಾರ ಸ್ವಂತ ಜಾಗದಲ್ಲಿ ಪ್ರಕೃತಿಗೆ ಅತೀ ಆಪ್ತವಾಗಿ ಜೀವನ ಸಾಗಿಸತೊಡಗಿತು.    ಗೋಪಾಲ ಹೊಸದಾಗಿ ಕೊಂಡು ತಂದಿದ್ದ ‘ಫೈಟರ್’ ಜಾತಿಯ ಹೇಟೆಯೊಂದು ಒಮ್ಮೆ ಹದಿನಾರು ಮೊಟ್ಟೆಗಳನ್ನಿಟ್ಟು ಇಪ್ಪತ್ತೊಂದು ದಿನಗಳ ಕಾಲ ಅವುಗಳಿಗೆ ಕಾವು ನೀಡಿ ಮರಿ ಮಾಡಿತು. ಆ ಹೇಟೆಯು ತನ್ನ ಮರಿಗಳೊಂದಿಗೆ ಹೊರಗೆ ಹೋದೀತೆಂದುಕೊಂಡು ರಾಧಾ ದಿನಾಲು ಅದನ್ನು ತನ್ನ ಇಳಿ ಮಾಡಿನ ಕಂಬಕ್ಕೆ ಕಟ್ಟಿ ಹಾಕಿ ಸಾಕುತ್ತಿದ್ದಳು. ಹಾಗಾಗಿ ಮರಿಗಳು ಮನೆಯ ವಠಾರದೊಳಗೆಯೇ ಓಡಾಡುತ್ತ ಬಲಿಯುತ್ತಿದ್ದವು. ಆದರೆ ಕ್ರಮೇಣ ಬೆಳೆದ ಮರಿಗಳು ತಾಯಿಯನ್ನು ಬಿಟ್ಟು ಹೊರಗೆ ಇಣುಕಲು ಮತ್ತು ಓಡಲು ಹವಣಿಸತೊಡಗಿದವು. ಅದನ್ನು ಕಂಡ ರಾಧಾ ಒಂದು ದಿನ ಹೇಟೆಯನ್ನು ಮರಿಗಳೊಂದಿಗೆ ಸುಮಾರು ದೂರದ ಮದಗದತ್ತ ಅಟ್ಟಿಕೊಂಡು ಹೋಗಿ ಮೇಯಲು ಬಿಟ್ಟು ಬಂದಳು. ಆದರೆ ಚುರುಕು ಬುದ್ಧಿಯ ಆ ಹೇಟೆಯು ಯಜಮಾನ್ತಿ ಗಮನಿಸುವವರೆಗೆ ಮಾತ್ರವೇ, ‘ಕೊಟ, ಕೊಟಾ…ಕೊಟ, ಕೊಟಾ…!’ ಎಂದು ತನ್ನ ಮರಿಗಳನ್ನು ಕರೆಯುತ್ತ ಮದಗದತ್ತ ಹೋಯಿತು. ಅವಳು ಯಾವಾಗ ಹಿಂದಿರುಗಿ ಹೋದಳೋ ಹೇಟೆಯೂ ತಟ್ಟನೆ ತನ್ನ ದಿಕ್ಕು ಬದಲಿಸಿಬಿಟ್ಟಿತು. ತನ್ನ ಮರಿಗಳ ಮೇಲೆ ಅತೀವ ಕಾಳಜಿಯಿದ್ದ ಅದು ಮದಗದ ಆಸುಪಾಸು ಹದ್ದು, ಗಿಡುಗ, ಕಾಗೆ, ನರಿ, ಮುಂಗುಸಿ ಮತ್ತು ಕಾಡುಬೆಕ್ಕುಗಳಂಥ ಅಪಾಯದ ಪ್ರಾಣಿಗಳಿರುವುದನ್ನು ತಿಳಿದಿತ್ತು. ಹಾಗಾಗಿ ಅವುಗಳಿಂದ ತನ್ನ ಮರಿಗಳಿಗೆ ಅಪಾಯವೆಂದೂ ಮತ್ತು ಇಲ್ಲಿನ ಕ್ರಿಮಿಕೀಟಗಳಿಗಿಂತಲೂ ಮೇಲ್ಮಟ್ಟದ ಮೇವು ತನ್ನ ಬಡಾವಣೆಯೊಳಗಿನ ಮನೆಗಳಲ್ಲಿಯೇ ದೊರಕುತ್ತದೆ ಎಂಬುದನ್ನೂ ಅರಿತಿತ್ತು. ಆದ್ದರಿಂದ ಹೇಟೆಯು ತನ್ನ ವಠಾರದ ಮನೆಗಳತ್ತಲೇ ಮುಖ ಮಾಡಿದ್ದು ಮೊದಲಿಗೆ ಬ್ಯಾಂಕರ್ ನಾರಾಯಣರ ಮನೆಯ ಗೇಟು ನುಸುಳಿ ಅಂಗಳವನ್ನು ಹೊಕ್ಕಿತು. (ಮುಂದುವರೆಯುವುದು)  *************************** ಗುರುರಾಜ್ ಸನಿಲ್ ಗುರುರಾಜ್ ಸನಿಲ್

Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅಧ್ಯಾಯ: 17 ಏಕನಾಥರು, ಶಂಕರನ ಜಮೀನು ನೋಡಲು ಅವನೊಂದಿಗೆ ಹೊರಟಿದ್ದರು. ಶಂಕರ ತನ್ನ ಜಾಗದಲ್ಲಿ ಉದ್ಭವಿಸಿದ ನಾಗನ ಸಮಸ್ಯೆಗೆ ಪರಿಹಾರ ಮಾರ್ಗೋಪಾಯದ ಕುರಿತು ದಾರಿಯುದ್ದಕ್ಕೂ ಏಕನಾಥರೊಡನೆ ಕೆದಕಿ ಕೆದಕಿ ಪ್ರಶ್ನಿಸುತ್ತ ತನ್ನ ಭಯವನ್ನು ನಿವಾರಿಸಿಕೊಳ್ಳಲು ಹೆಣಗುತ್ತ ಕಾರು ಚಲಾಯಿಸುತ್ತಿದ್ದ. ಆದರೆ ಏಕನಾಥರು ಅತೀವ ಚಾಣಾಕ್ಷರು. ಅವರು, ಅವನ ಒಂದೊಂದು ಪ್ರಶ್ನೆಗೂ ಬಹಳವೇ ಯೋಚಿಸಿ ಪರಿಹಾರ ಸೂತ್ರವನ್ನು ಮರೆಮಾಚಿಯೇ ಉತ್ತರಿಸುತ್ತ, ಏನನ್ನೋ ಗಂಭೀರವಾಗಿ ಯೋಚಿಸುತ್ತ ಸಾಗುತ್ತಿದ್ದರು. ಕಾರಣ, ಅವರ ತಲೆಯೊಳಗೆ ಹೊಸ ಯೋಜನೆಯೊಂದು ರೂಪಗೊಳ್ಳುತ್ತಿತ್ತು.    ‘ಬಹುಶಃ ಇಷ್ಟರವರೆಗಿನ ತಮ್ಮ ಗುಲಾಮಗಿರಿಯ ಬದುಕು ಇಂದಿಗೆ ಮುಕ್ತಾಯಗೊಂಡು ಸ್ವತಂತ್ರ ಜೀವನದ ಹೆಬ್ಬಾಗಿಲು ತೆರೆಯುತ್ತಿದೆ. ಆ ಅವಕಾಶವು ಇವನ ಮೂಲಕವೇ ತಮ್ಮನ್ನು ಹುಡುಕಿ ಬಂದಿರುವುದು ಖಚಿತವಾಗಿದೆ. ಈ ಒಂದು ಕಾರ್ಯವನ್ನು ತಾವು ಯಶಸ್ವಿಯಾಗಿ ನಡೆಸಿಕೊಟ್ಟೆವೆಂದರೆ ಆಮೇಲೆ ತಮ್ಮ ಅದೃಷ್ಟ ಕುಲಾಯಿಸಿದಂತೆಯೇ ಸರಿ! ಮುಂದಿನ ನಾಲ್ಕೈದು ವರ್ಷದೊಳಗೆ ಒಳ್ಳೆಯ ಸಂಪಾದನೆ ಕುದುರುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಇವತ್ತು ತಾವು ಇವನ ಸಮಸ್ಯೆಯ ಎಳೆಎಳೆಯನ್ನೂ ಸೂಕ್ಷ್ಮವಾಗಿ ಅವಲೋಕಿಸಿ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕು. ಇವನೂ ಒಳ್ಳೆಯ ಮನುಷ್ಯನೇನೂ ಅಲ್ಲ. ಎಷ್ಟೋ ಬಡವರ, ಅಮಾಯಕರ ಮಂಡೆ ಹೊಡೆದೇ ಮೇಲೆ ಬಂದವನು. ಇಂಥವರೊಂದಿಗೆ ವ್ಯವಹರಿಸುವಾಗ ಸ್ವಲ್ಪ ವ್ಯಾಪಾರದ ನಾಟಕವಾಡುವುದರಲ್ಲಿ ತಪ್ಪೇನಿಲ್ಲ. ಯಾಕೆಂದರೆ ನಮಗೂ ಸಂಸಾರವಿದೆ ಮತ್ತೆ ಅದಕ್ಕೊಂದು ಭವಿಷ್ಯವೂ ಇದೆಯಲ್ಲವಾ! ಅದಕ್ಕಾಗಿಯಾದರೂ ತಾವು ಬುದ್ಧಿವಂತಿಕೆಯಿಂದ ಮುಂದುವರೆಯಬೇಕು. ‘ಒಂದು ಶುಭಕಾರ್ಯಕ್ಕೆ ನೂರೆಂಟು ವಿಘ್ನಗಳಂತೆ. ಅವನ್ನೆಲ್ಲ ಮೀರಿ ಕಾರ್ಯಸಿದ್ಧಿಗೆ ಹೊರಟಾಗ ಸಣ್ಣಪುಟ್ಟ ತಪ್ಪು ಒಪ್ಪುಗಳು ನಡೆಯುವುದೂ ಸಹಜವೇ!’ ಎಂದು ಪೆದುಮಾಳರು ಹೇಳುತ್ತಿದ್ದುದು ನೆನಪಿದೆ. ಆದರೂ ತಮ್ಮ ಕಾಯಕದಲ್ಲಿ ತಾವು ವಿವೇಕದಿಂದ ವರ್ತಿಸಬೇಕು. ಎಂದಿಗೂ ಇವನಂಥ ದುರಾಸೆಯ ಮನುಷ್ಯನಾಗಬಾರದು. ತಾವು ನಂಬಿದ ದೈವ ದೇವರುಗಳು ಮೆಚ್ಚುವಂತೆಯೇ ನಡೆದುಕೊಳ್ಳಬೇಕು. ತಮ್ಮನ್ನು ನಂಬಿ ಬಂದವರಿಗೆ ಒಳ್ಳೆಯದಾಗುವಂತೆಯೇ ವ್ಯವಹರಿಸಬೇಕು. ಹಾಗೆ ಬದುಕಿದರೆ ಯಾವ ದೋಷವೂ ತಟ್ಟುವುದಿಲ್ಲ! ಎಂದು ನಿರ್ಧರಿಸಿದ ಏಕನಾಥರು ತಮ್ಮ ಚಿಂತನೆಗೆ ಮಂಗಳ ಹಾಡುವಷ್ಟರಲ್ಲಿ ಶಂಕರನ ಕಾರು ಶೀಂಬ್ರಗುಡ್ಡೆಯನ್ನು ದಾಟಿ ಸಣ್ಣ ಬೆಟ್ಟವೊಂದನ್ನೇರಿ ಬಾಕುಡಗುಡ್ಡೆಯನ್ನು ತಲುಪಿತು. ಅಲ್ಲಿನ ಕೊರಕಲು ಮಣ್ಣಿನ ರಸ್ತೆಯನ್ನು ಹಿಡಿದು ಮತ್ತಷ್ಟು ದೂರ ಸಾಗಿದ ನಂತರ ಒಂದು ಕಡೆ ಬಲಕ್ಕೆ ತಿರುಗಿ ವಿಶಾಲವಾದೊಂದು ಕುರುಚಲು ಕಾಡಿನ ಸಮೀಪ ಹೋಗಿ ನಿಂತಿತು. ಏಕನಾಥರು ಕಾರಿನಿಂದ ಇಳಿದವರು ಎದುರಿನ ಪ್ರದೇಶದ ಮೇಲೊಂದು ಪಕ್ಷಿನೋಟವನ್ನು ಬೀರುತ್ತ ನಿಂತರು. ಆ ವಿಶಾಲವಾದ ಜಮೀನಿನ ಮುಕ್ಕಾಲು ಭಾಗದ ಕಾಡುಗುಡ್ಡಗಳನ್ನು ಕಡಿದು ಜರಿದು ನಿನಾರ್ಮಗೊಳಿಸಲಾಗಿತ್ತು. ಕೆಲವೇ ತಿಂಗಳುಗಳ ಹಿಂದಷ್ಟೇ ಪಶ್ಚಿಮಘಟ್ಟದ ಒಂದು ಬೃಹತ್ ತುಣುಕಿನಂತೆ ಹಚ್ಚಹಸುರಾಗಿ ನಳನಳಿಸುತ್ತಿದ್ದ ಆ ಅರಣ್ಯವನ್ನೂ ಅಲ್ಲಿನ ಅಸಂಖ್ಯಾತ ಸ್ಥೂಲ ಮತ್ತು ಸೂಕ್ಷ್ಮ ಜೀವರಾಶಿಗಳನ್ನೂ ಜೆಸಿಬಿ, ಹಿಟಾಚಿ ಹಾಗೂ ಬುಲ್‍ಡೋಜರ್‍ಗಳಂಥ ರಾಕ್ಷಸ ಯಂತ್ರಗಳೂ, ಜನರೂ ಕೂಡಿ ಧ್ವಂಸಗೊಳಿಸಿಬಿಟ್ಟಿದ್ದರು. ಅಷ್ಟಲ್ಲದೇ ಆ ಕೆಲಸವಿನ್ನೂ ಚಾಲ್ತಿಯಲ್ಲಿತ್ತು! ಹಾಗಾಗಿ ಆ ಪರಿಸರವೂ ಅಲ್ಲಿನ ವಾತಾವರಣವೂ ಸುಡುಗಾಡಿನಂತೆ ಬಣಗುಟ್ಟುತ್ತಿತ್ತು. ಸಂಜೆಯ ಹೊಂಬಣ್ಣದ ಸೂರ್ಯನ ತಂಪಾದ ಕಿರಣಗಳ ನಡುವೆಯೂ ಆ ಭೂಮಿಯು ಬಿಸಿಯೇರಿ ನರಳುತ್ತಿತ್ತು. ರಭಸದಿಂದ ಏಳುತ್ತಿದ್ದ ಒಣಹವೆಯು ಆಕಾಶದೆತ್ತರಕ್ಕೆ ಕೆಂಧೂಳನ್ನೆಬ್ಬಿಸುತ್ತ ಅಲ್ಲಿನ ವಾತಾವರಣವನ್ನು ತೀವ್ರ ಕಲುಷಿತಗೊಳಿಸಿತ್ತು. ಆ ದೃಶ್ಯವನ್ನು ಗಮನಿಸಿದರೆ, ಮುಂದೊಂದು ದಿನ ಆ ಪ್ರದೇಶದಲ್ಲಿ ಉಂಟಾಗಬಹುದಾದ ವಿವಿಧ ರೂಪದ ಪ್ರಕೃತಿ ವಿಕೋಪದ ಸ್ಪಷ್ಟ ಮುನ್ಸೂಚನೆಯಂತಿತ್ತು.    ಶತಮಾನಗಳಿಂದಲೂ ತಮ್ಮ ಸಂತತಿಯನ್ನು ಆ ಮಳೆಕಾಡಿನೊಳಗೆಯೇ ಸೃಷ್ಟಿಸಿ ಬೆಳೆಸುತ್ತ ಪರಿಸರಸ್ನೇಹಿಗಳಾಗಿ, ಸಮೃದ್ಧವಾಗಿ ಬಾಳಿ ಬದುಕಿದ ನೂರಾರು ಪಕ್ಷಿಸಂಕುಲಗಳಿಂದು ಶಂಕರನ ಅಭಿವೃದ್ಧಿ ಮತ್ತು ನಗರೀಕರಣದ ಧಾವಂತಕ್ಕೆ ಬಲಿಯಾಗಿ ತಮ್ಮ ನೆಲೆಗಳನ್ನು ಶಾಶ್ವತವಾಗಿ ಕಳೆದುಕೊಂಡು ಅನಾಥವಾಗಿಬಿಟ್ಟಿದ್ದವು. ಆದರೂ ಆ ಕಹಿ ಸತ್ಯವನ್ನು ತಿಳಿಯಲಾರದ ಅವುಗಳು ಸಂಜೆಯಾಗುತ್ತಲೇ ಅಳಿದುಳಿದ ಮರಗಿಡಗಳಲ್ಲಿ ವಿಶ್ರಮಿಸಿ ರಾತ್ರಿ ಕಳೆಯಲು ಹೆಣಗುತ್ತಿದ್ದವು. ಅಲ್ಲೂ ಸ್ಥಳಾವಕಾಶ ಸಾಲದೆ ಸೋತು ಆಕಾಶದ ತುಂಬೆಲ್ಲಾ ಹಾರಾಡುತ್ತ ಅತೀವ ವಿಚಲಿತತೆಯಿಂದ ಅರಚುತ್ತ ತಮ್ಮ ತಮ್ಮೊಳಗೇ ಕಚ್ಚಾಡಿಕೊಂಡು ಬಳಲುತ್ತಿದ್ದ ದೃಶ್ಯವು ಅಲ್ಲಿನ ಯಾವ ಮನುಷ್ಯರಲ್ಲೂ ಕನಿಕರ ಅನುಕಂಪವನ್ನು ಮೂಡಿಸದಿದ್ದುದು ಆ ಮನುಷ್ಯರೊಳಗಿನ ಅಮಾನವೀಯತೆಯನ್ನು ಬಿಂಬಿಸುತ್ತಿತ್ತು.    ಅನಾದಿಕಾಲದಿಂದಲೂ ತಮ್ಮನ್ನಾಶ್ರಯಿಸಿದ ಮೂಕ ಜೀವರಾಶಿಗಳಿಗೂ, ಮೇಲಾಗಿ ಮನುಷ್ಯರಿಗೂ ಮಮತೆಯ ತೊಟ್ಟಿಲಿನಂತಿದ್ದ ದೈತ್ಯ ಮರಗಿಡಗಳು ಮತ್ತು ಅವುಗಳನ್ನು ಪ್ರೀತಿ, ವಿಶ್ವಾಸದಿಂದ ಅಪ್ಪಿಕೊಂಡು ಬೆಳೆದಿದ್ದ ವಿವಿಧ ಔಷಧಿಯ ಬಳ್ಳಿಗಳು ತಂತಮ್ಮ ಅವಯವಗಳನ್ನು ಕ್ರೂರವಾಗಿ ಕತ್ತರಿಸಲ್ಪಟ್ಟು, ಎಳೆದು ಸೀಳಲ್ಪಟ್ಟು, ಬುಡ ಸಮೇತ ಕೀಳಲ್ಪಟ್ಟು, ಅಪಘಾತಕ್ಕೀಡಾಗಿ ರಸ್ತೆಯ ನಟ್ಟನಡುವೆ ನರಳಿ ಸತ್ತ ಮೂಕ ನಾಯಿ, ನರಿ, ಬೆಕ್ಕುಗಳಂತೆಯೂ ಹಾಗೂ ಇನ್ನು ಕೆಲವು ಅರೆಜೀವಾವಸ್ಥೆಯಲ್ಲಿ ಒದ್ದಾಡುತ್ತಿರುವಂತೆಯೂ ಭಾಸವಾಗುತ್ತಿದ್ದವು. ನಿಸರ್ಗದ ನಡುವೆ ಸರಳವಾಗಿ ಬಾಳಿ ಬದುಕುವ ಯಾವ ಜೀವರಾಶಿಗಳೇ ಆಗಲಿ ಅತ್ತ ಸುಳಿಯಲಾರದಷ್ಟು ಆ ಪ್ರದೇಶವು ಶುಷ್ಕ, ರಣಭೂಮಿಯಂತೆ ಕಾಣುತ್ತಿತ್ತು.    ಏಕನಾಥರು ಆ ದೃಶ್ಯವನ್ನೆಲ್ಲ ದೀರ್ಘವಾಗಿ ಮತ್ತು ಸೂಕ್ಷ್ಮವಾಗಿ ಗಮನಿಸುತ್ತ ಮುನ್ನಡೆದರು. ಆದರೆ ಆ ಭೀಕರತೆಯನ್ನು ಕಾಣುತ್ತ ಹೋದವರಿಗೆ ನಿಧಾನವಾಗಿ ತಮ್ಮ ದೇಹದೊಳಗೆ ಯಾರೋ ಒರಟು ಕೈಗಳನ್ನು ತೂರಿಸಿ ಹೃದಯವನ್ನು ಬಲವಾಗಿ ಹಿಂಡಿದಂಥ ವೇದನೆ, ವಿಷಾದ ಹುಟ್ಟಿತು. ಜೊತೆಗೆ ತಮ್ಮ ತೀಕ್ಷ್ಣ ಬುದ್ಧಿಗೂ ನಿಲುಕದಂಥ ಹತಾಶಾಭಾವವೊಂದು ಮೊಳೆತು ಮೈಯಿಡೀ ತಣ್ಣನೆ ಬೆವರುತ್ತ ಉಸಿರುಗಟ್ಟಿದಂತಾಯಿತು. ಮರುಕ್ಷಣ ‘ಛೇ, ಛೇ! ಎಂಥ ಭಯಂಕರ ದೃಶ್ಯವಿದು! ಪ್ರಕೃತಿಯ ಮೇಲೆ ಮನುಷ್ಯನೊಬ್ಬ ಈ ಮಟ್ಟಕ್ಕೆ ಅತ್ಯಾಚಾರ ಎಸಗುವುದೆಂದರೇನು…? ಇಂಥ ಕೆಟ್ಟ ಕರ್ಮದಲ್ಲಿ ತಾವೂ ಭಾಗಿಯಾಗುವುದು ಸರಿಯೇ…?’ ಎಂದು ಅವರ ಅಂತರಾತ್ಮವು ಚೀರಿ ಕೇಳಿದಂತಾಯಿತು. ಮುಂದೇನೂ ಹೊಳೆಯದೆ ಅಶಾಂತರಾಗಿಬಿಟ್ಟರು. ಆದರೆ ಅಷ್ಟರಲ್ಲಿ ಅವರ ಸಂಸಾರವು ಅನುಭವಿಸುತ್ತಿದ್ದ ದಟ್ಟದಾರಿದ್ರ್ಯವೂ ಅದನ್ನು ನಿವಾರಿಸಲಾಗದ ಅವರ ದೌರ್ಬಲ್ಯವೂ ಕಣ್ಣೆದುರು ಬಂದು ಕುಣಿಯಿತು. ಆಗ ಅವರಲ್ಲಿ ಈ ಮೊದಲು ಉದ್ಭವಿಸಿದ್ದ ಆರ್ಧ್ರ ಭಾವನೆಯು ತಟ್ಟನೆ ಮುದುಡಿ ಮನಸ್ಸಿನಾಳಕ್ಕಿಳಿದು ಮರೆಯಾಯಿತು. ಹಾಗಾಗಿ ಅಂಥ ಯೋಚನೆಗಳು ತಮ್ಮ ಮನೋದೌರ್ಬಲ್ಯದ ಸೂಚನೆಯೆಂದು ಭಾವಿಸಿದ ಅವರು ಕೂಡಲೇ ತಮ್ಮ ವ್ಯಾವಹಾರಿಕ ಬುದ್ಧಿಯನ್ನು ಚುರುಕುಗೊಳಿಸಿ ಬಂದ ಕೆಲಸದತ್ತ ಗಮನ ಹರಿಸಿದರು.    ಏಕನಾಥರಂತೆ ಶಂಕರನೂ ತನ್ನ ಜಮೀನನ್ನು ನೋಡುತ್ತ ನಡೆಯುತ್ತಿದ್ದ. ಆದರೆ ಅವನಿಗೆ ಅಲ್ಲಿ ತನ್ನಿಂದಾಗಿಯೇ ಕಲುಷಿತಗೊಂಡ ವಾತಾವರಣವಾಗಲಿ, ಅತಂತ್ರಗೊಂಡ ಜೀವರಾಶಿಗಳಾಗಲಿ ಅಥವಾ ತಮ್ಮ ಅವಯವಗಳನ್ನು ಸೀಳಿಸಿಕೊಂಡು ಕುರೂಪವಾಗಿ ಬಿದ್ದಿದ್ದ ಮರಗಿಡ ಬಳ್ಳಿಗಳಾಗಲಿ ಕಾಣುತ್ತಿರಲಿಲ್ಲ. ಬದಲಿಗೆ ಅವನ ಮನಸ್ಸು, ಮುಂದೆ ಅಲ್ಲಿ ತನ್ನಿಂದ ನಿರ್ಮಾಣಗೊಳ್ಳಲಿರುವ ಬಹುಮಹಡಿ ಕಟ್ಟಡಗಳು ಮತ್ತು ಶ್ರೀಮಂತ ಬಂಗಲೆಗಳು ಬೃಹದಾಕಾರವಾಗಿ ತಲೆಯೆತ್ತಿ ನಿಲ್ಲುತ್ತಿರುವಂತೆಯೂ ಆ ಮೂಲಕ ತಾನು ಹಾಗೂ ತನ್ನ ಮುಂದಿನ ಹಲವಾರು ತಲೆಮಾರುಗಳು ಆಗರ್ಭ ಸಿರಿವಂತಿಕೆಯಿಂದ ಮೆರೆದಾಡುವಂತೆಯೂ ಕಲ್ಪಿಸಿಕೊಳ್ಳುತ್ತ ಪುಳಕಿತಗೊಳ್ಳುತ್ತಿತ್ತು. ಅದೇ ಹೆಮ್ಮೆಯಿಂದ ನಡೆಯುತ್ತಿದ್ದವನು, ‘ನೋಡಿ ಗುರೂಜೀ, ಇದೇ ನನ್ನ ಜೀವಮಾನದ ದೊಡ್ಡ ಸಾಧನೆ!’ ಎಂದ ಗರ್ವದಿಂದ.    ‘ಹ್ಞೂಂ, ಹ್ಞೂಂ, ಪರ್ವಾಗಿಲ್ಲ ಮಾರಾಯಾ ನೀನೂ ಸಣ್ಣ ಕುಳವೇನಲ್ಲ! ಈ ವ್ಯವಹಾರದಲ್ಲಿ ನೀನು ಇಷ್ಟೊಂದು ಹುಷಾರಿನವನೂ ಮತ್ತು ದೂರಾಲೋಚನೆ ಇರುವವನೂ ಎಂದರೆ ನಮಗೆ ನಂಬಲಿಕ್ಕೇ ಆಗುವುದಿಲ್ಲ! ನಮ್ಮ ಚೆನ್ನಮಣೆ ಆಟ ಗೊತ್ತುಂಟಲ್ಲವಾ ನಿಂಗೆ? ಅದರ ಮಾತಿನಂತೆ, ‘ಹೊಡೆದರೆ ಪೆರ್ಗವನ್ನೇ ಹೊಡೆಯಬೇಕು!’ ಅನ್ನುವುದನ್ನು ನೀನು ನಿಜ ಮಾಡಿಬಿಟ್ಟಿದ್ದಿ ನೋಡು!’ ಎಂದು ಏಕನಾಥರು ಅವನನ್ನು ಅಟ್ಟಕೇರಿಸಿದರು. ಅದರಿಂದ ಶಂಕರ ಮತ್ತಷ್ಟು ಉಬ್ಬಿದವನು ನಗುತ್ತ ಮುಂದೆ ಸಾಗಿದ. ಆದರೂ ಆ ಪ್ರದೇಶದೊಳಗಿನ ಪುರಾತನ ನಾಗಬನವನ್ನೂ ತುಳುನಾಡಿನ ದೈವಗಳ ನೆಲೆಗಳನ್ನೂ ತಾನು ಧ್ವಂಸ ಮಾಡಿದ್ದುದರ ತೀವ್ರ ಭಯವೊಂದು ಅವನನ್ನು ಅಡಿಗಡಿಗೂ ಕಾಡುತ್ತ ಹಿಂಸಿಸುತ್ತಿತ್ತು. ಅದನ್ನು ಹತ್ತಿಕ್ಕಿಕೊಳ್ಳುತ್ತ ಒಂದಷ್ಟು ದೂರ ದಾಪುಗಾಲು ಹಾಕಿದವನು ಅಲ್ಲೊಂದು ಕಡೆ ಇನ್ನೂ ಉಳಿದಿದ್ದ ಸಣ್ಣದೊಂದು ಹಾಡಿಯತ್ತ ಏಕನಾಥರನ್ನು ಕರೆದೊಯ್ದ. ಅಲ್ಲಿ ಕೆಲವು ಜೆಸಿಬಿ ಯಂತ್ರಗಳು ರೋಷಗೊಂಡ ಘೇಂಡಾಮೃಗಗಳಂತೆ ಆಕ್ರಮಣಕ್ಕೆ ಸಿದ್ಧವಾಗಿ ನಿಂತಿದ್ದವು. ಆದರೆ ಅವು ತಮ್ಮನ್ನು ಚಲಾಯಿಸುವವರಲ್ಲಿ ಹುಟ್ಟಿದ ನಾಗದೋಷದ ಭೀತಿಗೆ ತಾವೂ ಮಣಿದು ತಮ್ಮ ಹುಟ್ಟುಗುಣವನ್ನು ಹತ್ತಿಕ್ಕಿಕೊಂಡು ಮರಳಿ ಯಾವಾಗ ತಮ್ಮ ವಿಧ್ವಂಸಕ ಕೃತ್ಯಕ್ಕೆ ಚಾಲನೆ ದೊರಕೀತೋ…? ಎಂದು ಕಾಯುತ್ತಿದ್ದುದು ಅಲ್ಲಿನ ಒಂದಷ್ಟು ಜಾಗದಲ್ಲಿ ಅಳಿದುಳಿದಿದ್ದ ಜೀವರಾಶಿಗಳಿಗೂ ಮರಗಿಡ ಬಳ್ಳಿಗಳಿಗೂ ಸೂಕ್ಷ್ಮವಾಗಿ ತಿಳಿಯುತ್ತಿತ್ತು. ಆದ್ದರಿಂದ ಅವು ತಮ್ಮ ಅಂತ್ಯಕಾಲವನ್ನು ದುಃಖದಿಂದ ಎದುರು ನೋಡುತ್ತ ಕ್ಷೀಣವಾಗಿ ಉಸಿರಾಡಿಕೊಂಡಿದ್ದವು.    ಶಂಕರ ತಾನು ಕಡಿದುರುಳಿಸಿದ್ದ ಹತ್ತಾರು ಮರಗಳನ್ನು ಹಾರಿ ನೆಗೆದು ದಾಟುತ್ತ ಒಂದು ಕಡೆ ಧೂಪ, ರೆಂಜೆ, ಸುರಗಿ, ಹೊನ್ನೆ ಮತ್ತು ಹಾಲೆಮರಗಳಿದ್ದ ಜಾಗಕ್ಕೆ ಏಕನಾಥರನ್ನು ಕರೆದೊಯ್ದ. ಆ ಮರಗಳ ನಾಲ್ಕು ಸುತ್ತಲೂ ಮುರಗಲ್ಲಿನಿಂದ ಕಟ್ಟಿದ ಸುಮಾರು ಎರಡಡಿಯಷ್ಟು ಎತ್ತರದ ಹಳೆಯ ಆವರಣವಿತ್ತು. ಅದರೊಳಗೊಂದು ವಿಶಾಲವಾದ ಚಚ್ಚೌಕದ ಮತ್ತು ಸ್ವಲ್ಪ ಎತ್ತರದ ಪೀಠವಿತ್ತು. ಆ ಪೀಠದ ಮೇಲೆ ಮತ್ತು ಅದರ ಸುತ್ತಮುತ್ತಲೂ ಅನೇಕ ಜಾತಿಯ ಮರಗಳು ಅವುಗಳ ಬೇರುಗಳು ಹಾಗೂ ಗಿಡಗಂಟಿ, ಪೊದೆಗಳು ಬೆಳೆದು ನಿಂತಿದ್ದವು. ಅದರಿಂದ ಆ ಪೀಠವು ಅಲ್ಲಲ್ಲಿ ಬಿರುಕು ಬಿಟ್ಟಿತ್ತು. ಆ ಬಿರುಕಿನೆಡೆಗಳಲ್ಲೂ ಅನೇಕ ಕುಬ್ಜವೃಕ್ಷಗಳು ಹುಟ್ಟಿ ಬೆಳೆದು ಜೀವಂತಿಕೆಯಿಂದ ನಳನಳಿಸುತ್ತಿದ್ದವು. ಆದರೆ ಜೆಸಿಬಿಯಿಂದ ಬಗೆದ ರಭಸಕ್ಕೆ ಪೀಠದ ಒಂದು ಭಾಗವು ಒಡೆದು ಪುಡಿಪುಡಿಯಾಗಿತ್ತು. ಅದರಲ್ಲಿ ದೈವದ ಕುರುಹುಗಳಾಗಿ ಸ್ಥಾಪಸಿಲಾಗಿದ್ದ ಸುಮಾರು ಮೂರು ನಾಲ್ಕು ಶತಮಾನಗಳಷ್ಟು ಪುರಾತನವಾದ ಕೆಲವು ಮುರಕಲ್ಲುಗಳು ಮತ್ತು ನಾಗನಕಲ್ಲುಗಳು ಸ್ವಸ್ಥಾನದಿಂದ ಕಿತ್ತು ಹೊರಗೆ ಎಸೆಯಲ್ಪಟ್ಟು ಅನಾಥವಾಗಿ ಬಿದ್ದಿದ್ದವು. ಆ ಕೆಲವು ಶಿಲೆಗಳ ಮೇಲೆ ಹೆಡೆ ಬಿಚ್ಚಿ ಬಾಲದ ತುದಿಯಲ್ಲಿ ನಿಂತ ನಾಗಿಣಿಯ ಚಿತ್ತಾರದ ಕೆತ್ತನೆಯೂ ಅದರ ಬಾಲದಿಂದ ನಡು ಶರೀರದವರೆಗೆ ದುಂಡಗಿನ ಮೊಟ್ಟೆಗಳ ಚಿತ್ತಾರಗಳೂ ಇದ್ದವು. ಇನ್ನು ಹಲವದರಲ್ಲಿ ಜೋಡಿ ನಾಗರಗಳ ಮಿಥುನ ಶಿಲ್ಪಗಳನ್ನೂ ಕೆಲವದರಲ್ಲಿ ಗಂಭೀರ ಹೆಡೆಯುಳ್ಳ ನಾಗರಾಜನನ್ನೂ ಮತ್ತು ‘ಪವಿತ್ರ ಗಂಟು’ ಹೆಣೆದ ನಾಗರ ಚಿತ್ತಾರಗಳನ್ನೂ ಕಲಾತ್ಮಕವಾಗಿ ಕೆತ್ತಲಾಗಿತ್ತು. ಅಂಥ ಕೆಲವು ಕಲ್ಲುಗಳು ಯಂತ್ರಗಳ ಹೊಡೆತಕ್ಕೆ ಸಿಲುಕಿ ಒಡೆದು ಪುಡಿಯಾಗಿದ್ದವು. ಏಕನಾಥರು ಅವನ್ನೆಲ್ಲ ಯೋಚನಾಗ್ರಸ್ತರಾಗಿ ಪರೀಕ್ಷಿಸತೊಡಗಿದವರು ಪದೇಪದೇ ತಮ್ಮ ಮುಖದಲ್ಲಿ ಭಯ ಮತ್ತು ವಿಷಾದವನ್ನು ಪ್ರಕಟಿಸುತ್ತ ಆ ಸ್ಥಳಕ್ಕೊಂದು ದೊಡ್ಡ ಸುತ್ತು ಹೊಡೆದರು. ಅವರ ಆಗಿನ ಮುಖಭಾವವನ್ನೂ ಅದಕ್ಕೆ ತಕ್ಕಂತೆ ಬದಲಾಗುತ್ತಿದ್ದ ಅವರ ವರ್ತನೆಯನ್ನೂ ನೋಡುತ್ತಿದ್ದ ಶಂಕರನೊಳಗಿನ ಆತಂಕವೂ ಇಮ್ಮಡಿಯಾಗುತ್ತಿತ್ತು. ಅದೇ ಚಡಪಡಿಕೆಯಿಂದ ಅವನು ಪದೇಪದೇ ಉಗುರುಕಚ್ಚಿ ಉಗಿಯುತ್ತಿದ್ದವನು, ಅಯ್ಯೋ ದೇವರೇ…! ಈ ದರ್ವೇಶಿ ಏಕನಾಥ ನಾನು ಸೂಚಿಸಿದ ಕೆಲಸ ಮಾಡುವುದನ್ನು ಬಿಟ್ಟು ನನ್ನ ಮನೆಮಠ ಲಗಾಡಿ ತೆಗೆಯುವ ಉಪಾಯವನ್ನೇ ಹೂಡುತ್ತಿದ್ದಾನೋ ಏನೋ…?’ ಎಂದು ತಳಮಳಿಸುತ್ತಿದ್ದ. ಆದರೆ ಅತ್ತ ಏಕನಾಥರೂ ಶಂಕರನ ಅಶಾಂತಿಯನ್ನು ಗಮನಿಸುತ್ತಲೇ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು.    ಸುಮಾರು ಹೊತ್ತಿನವರೆಗೆ ಆ ಪ್ರದೇಶವನ್ನೂ ಅಲ್ಲಿ ಹಾನಿಗೊಂಡಿದ್ದ ನಾಗ, ಪರಿವಾರ ದೈವಗಳ ಪೀಠವನ್ನೂ ಬೇರೆ ಬೇರೆ ದೃಷ್ಟಿಕೋನಗಳಿಂದ ವಿಶ್ಲೇಷಿಸಿದ ಏಕನಾಥರು, ಕೊನೆಯಲ್ಲಿ ತಮ್ಮೊಳಗಿನ ಲೆಕ್ಕಾಚಾರಕ್ಕೂ ಒಂದು ಸ್ಪಷ್ಟರೂಪವನ್ನು ಕೊಟ್ಟುಕೊಂಡರು. ಬಳಿಕ ಆ ಜಾಗದಿಂದ ತಟ್ಟನೆ ಹೊರಗೆ ಬಂದುಬಿಟ್ಟರು. ಒಮ್ಮೆ ನಾಲ್ಕು ದಿಕ್ಕುಗಳನ್ನೂ ಮತ್ತು ಸಂಜೆಯ ಧೂಳಿನ ಓಕುಳಿ ಹರಡಿದ್ದ ಆಕಾಶವನ್ನೂ ಗಂಭೀರವಾಗಿ ದಿಟ್ಟಿಸುತ್ತ ಕಣ್ಣುಮುಚ್ಚಿದವರು ದೀರ್ಘ ಉಸಿರೆಳೆದುಕೊಂಡು ಕೆಲವು ಕ್ಷಣ ಧ್ಯಾನಸ್ಥರಾದರು. ನಂತರ ಕಣ್ಣು ತೆರೆದು ಶಂಕರನತ್ತ ದೃಷ್ಟಿ ಹೊರಳಿಸಿದರು. ಅವನು ಒಳಗೊಳಗೇ ಪರಿತಪಿಸುತ್ತಿದ್ದವನು ಬಾರದ ನಗು ಬರಿಸಿಕೊಂಡು ಅವರನ್ನು ದಿಟ್ಟಿಸಿದ.    ಆಗ ಏಕನಾಥರು, ‘ಎಲ್ಲವನ್ನೂ ನೋಡಿಯಾಯಿತು ಶಂಕರ. ಇನ್ನು ಹೊರಡೋಣವಾ…?’ ಎಂದು ಗಂಭೀರವಾಗಿ ಅಂದರು. ಆದರೆ ಅಷ್ಟು ಕೇಳಿದ ಶಂಕರ ಅಶಾಂತನಾದ. ‘ಅಂದರೇ ಗುರೂಜೀ…? ತುಂಡಾದ ನಾಗನ ಕಲ್ಲುಗಳನ್ನು ಏನು ಮಾಡುವ

Read Post »

ಇತರೆ, ದಾರಾವಾಹಿ

ದಾರಾವಾಹಿ ಆವರ್ತನ ಅದ್ಯಾಯ-16 ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆದ ಗೋಪಾಲ ಸೀದಾ ಶಂಕರನ ಸೈಟಿಗೆ ಬಂದು ನಿಂತ. ಶಂಕರ ತನ್ನ ಮೇಸ್ತ್ರಿ ಸುಬ್ರಾಯನೊಡನೆ ಕಟ್ಟಡ ಕಾಮಗಾರಿಯ ಮಾತುಕತೆಯಲ್ಲಿದ್ದ. ಸ್ವಲ್ಪಹೊತ್ತಿನಲ್ಲಿ ಮೇಸ್ತ್ರಿಯನ್ನೂ ಕೂಲಿಯಾಳುಗಳನ್ನೂ ಕೆಲಸಕ್ಕೆ ತೊಡಗಿಸಿ ಗೋಪಾಲನತ್ತ ಬಂದ. ಗೋಪಾಲ, ಶಂಕರ ಹೇಳಿದ್ದಷ್ಟು ಹಣವನ್ನು ಕೊಟ್ಟು ಗುಜಿರಿಯನ್ನು ಕೊಂಡ. ಬಳಿಕ ತಾನು ಹೇಳಿದ ಜಾಗದ ವಿಷಯವಾಗಿ ಅವನೇನಾದರೂ ಮಾತಾಡುತ್ತಾನೋ ಎಂದು ಕಾದ. ಆದರೆ ಶಂಕರ ಬೇಕೆಂದೇ ಆ ವಿಷಯವನ್ನು ಮರೆತಂತೆ ನಟಿಸಿದ. ಆದ್ದರಿಂದ ಗೋಪಾಲನೇ ಮಾತೆತ್ತಿದ. ‘ಶಂಕರಣ್ಣ, ನಿನ್ನೆ ನೀವು ನನಗೊಂದು ಜಾಗ ತೋರಿಸುತ್ತೇನೆ ಅಂದಿದ್ದಿರಿ ನೆನಪುಂಟಾ…?’ ಎಂದ ವಿನಯದಿಂದ. ‘ಓಹೋ, ಹೌದಲ್ಲವಾ ಮಾರಾಯ. ನೀನು ನಿನ್ನೆ ಆ ಬಗ್ಗೆ ಮಾತಾಡಿ ಹೋಗಿದ್ದಿ. ಆದರೆ ಈ ನನ್ನ ಸಾವಿರ ವ್ಯವಹಾರ ತಾಪತ್ರಯವಿದೆಯಲ್ಲ ಅದೆಲ್ಲವನ್ನೂ ಮರೆಸಿ ಬಿಡುತ್ತದೆ ನೋಡು!’ ಎಂದ ಶಂಕರ ಗತ್ತಿನಿಂದ.  ‘ಪರ್ವಾಗಿಲ್ಲ ಶಂಕರಣ್ಣ, ನಿಮ್ಮ ವ್ಯವಹಾರ ನಮ್ಮ ಹಾಗೆ ಸಣ್ಣದಾ…!’ ಎಂದು ಗೋಪಾಲನೂ ಅವನ ಹುಸಿ ಮರೆವನ್ನು ಸಮರ್ಥಿಸಿದ. ‘ಹ್ಞೂಂ ಹೌದು. ಅದಿರಲಿ, ನಿನ್ನೆ ನಾನು ಜಾಗದ ವಿಷಯ ಹೇಳಿದ್ದೆನಲ್ಲ ಅದು ಇಲ್ಲೇ ಬುಕ್ಕಿಗುಡ್ಡೆಯಲ್ಲಿದೆ. ಕೆಲವು ವರ್ಷಗಳ ಹಿಂದೆ ಅಲ್ಲೊಂದು ದೊಡ್ಡ ಮದಗದ ಪಕ್ಕದ ಗುಡ್ಡೆಯೊಂದನ್ನು ಪರ್ಚೆಸ್ ಮಾಡಿ ಐದಾರು ಸೆಂಟ್ಸ್‍ಗಳ ಲೇಔಟ್ ಮಾಡಿಸಿದ್ದೆ. ಅದರ ಒಂದು ಕೊನೆಯಲ್ಲಿ ನಾಲ್ಕು ಸೆಂಟ್ಸಿನಷ್ಟಗಲದ ಸೈಟೊಂದು ಉಳಿದುಬಿಟ್ಟದೆ ನೋಡು. ಒಳ್ಳೆಯ ಜಾಗ ಮಾರಾಯ ಅದು. ಆ ವಠಾರಕ್ಕೆ ‘ಭಾಗೀವನ’ ಅಂತ ನನ್ನ ಅಮ್ಮನ ಹೆಸರಿಟ್ಟಿದ್ದೇನೆ. ಅದರ ಪಕ್ಕದಲ್ಲಿ ಒಂದು ಚಂದದ ಹಾಡಿಯೂ ಇದೆ. ಯಾರಾದರೂ ನಿನ್ನಂಥ ಬಡವರಿಗೋ ಅಥವಾ ನನ್ನ ಕೂಲಿಯಾಳುಗಳಿಗೋ ಆದಷ್ಟು ಕಡಿಮೆ ಬೆಲೆಗೆ ಕೊಟ್ಟರಾಯ್ತೆಂದುಕೊಂಡಿದ್ದೆ. ನೀನು ಕೇಳಿದ್ದು ಒಳ್ಳೆಯದಾಯ್ತು. ಆ ಮದಗವೂ ವರ್ಷವಿಡೀ ತುಂಬಿರುತ್ತದೆ. ಹಾಗಾಗಿ ಬರೇ ಎಂಟು, ಹತ್ತು ಅಡಿಯಷ್ಟು ಆಳದ ಬಾವಿ ತೋಡಿದರೂ ಬೊಂಡದಂಥ ನೀರು ಸಿಗುತ್ತದೆ. ಈಗ ಅಲ್ಲಿ ಸೆಂಟ್ಸ್‍ಗೆ ಮೂರು ಲಕ್ಷ ನಡಿತಾ ಇದೆ!’ ಎಂದ ಶಂಕರ ಎತ್ತಲೋ ನೋಡುತ್ತ. ಶಂಕರ, ‘ಜಾಗ ಇದೆ ಮಾರಾಯಾ!’ ಎಂದಾಕ್ಷಣ ಗೋಪಾಲನಿಗೆ ಕುಣಿದಾಡಿ ಬಿಡುವಷ್ಟು ಸಂತೋಷವಾಯಿತು. ಆದರೆ ಅವನ ಬೆಲೆ ಕೇಳಿದಾಕ್ಷಣ ಎದೆಯೊಮ್ಮೆ ಧಸಕ್ ಎಂದಿತು. ಗೋಪಾಲನ ಮುಖ ಒಮ್ಮೆಲೇ ಕಳೆಗುಂದಿದ್ದನ್ನು ಓರೆಗಣ್ಣಿನಿಂದ ಗ್ರಹಿಸಿದ ಶಂಕರ, ‘ಅರೆರೇ, ಬೆಲೆ ಕೇಳಿ ಹೆದರಿ ಬಿಟ್ಟಿಯಾ ಮಾರಾಯಾ…? ಅಲ್ಲಿ ಸೆಂಟ್ಸಿಗೆ ಅದೆಷ್ಟು ಲಕ್ಷ ನಡೀತಾ ಇದ್ದರೂ ನೀನು ಅಷ್ಟೆಲ್ಲ ಕೊಡಬೇಕಾಗಿಲ್ಲವನಾ…!’ ಎಂದು ನಗುತ್ತ ಸಮಾಧಾನಿಸಿದ. ಆಗ ಗೋಪಾಲ ಮರಳಿ ಯಥಾಸ್ಥಿತಿಗೆ ಬಂದ. ‘ಹೌದಾ ಶಂಕರಣ್ಣ. ಹಾಗಾದರೆ ಸರಿ. ನಿಮ್ಮನ್ನು ನನ್ನ ಪಾಲಿನ ದೇವರು ಅಂತಲೇ ಭಾವಿಸಿದ್ದೇನೆ. ನನ್ನ ಕುಟುಂಬಕ್ಕೊಂದು ಸಣ್ಣ ಗೂಡು ಕಟ್ಟಲು ನೀವು ಜಾಗ ತೋರಿಸಿದ್ದು ಅಮೃತ ಕುಡಿದಷ್ಟು ನೆಮ್ಮದಿಯಾಯ್ತು. ಹಾಗೆಯೇ ಒಂದು ಸರಿಯಾದ ರೇಟನ್ನೂ ಹೇಳಿಬಿಡಿ. ಎಷ್ಟು ಕೊಡಬೇಕು ನಾನು…?’ ‘ನೋಡು ಗೋಪಾಲ, ನೀನಾಗಿರುವುದರಿಂದ ಸೆಂಟ್ಸಿಗೆ ಬರೇ ಒಂದು ಲಕ್ಷ ಕೊಟ್ಟರೆ ಸಾಕು. ನಾಲ್ಕು ಸೆಂಟ್ಸಿಗೆ ನಾಲ್ಕು ಲಕ್ಷ ಅಷ್ಟೇ! ಯಾವಾಗ ದುಡ್ಡು ರೆಡಿ ಮಾಡುತ್ತೀಯೋ ಆವಾಗ ನಿನ್ನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಡುತ್ತೇನೆ’ ಎಂದು ಶಂಕರ ಸಲೀಸಾಗಿ ಹೇಳಿಬಿಟ್ಟ. ಆದರೆ ಗೋಪಾಲ ಮತ್ತೆ ಆತಂಕಕ್ಕೆ ಬಿದ್ದ. ಹಾಗಾಗಿ ತನ್ನ ಕಷ್ಟಕಾರ್ಪಣ್ಯಗಳನ್ನೂ ಮತ್ತು ಮುತ್ತಯ್ಯನ ಕಿರಿಕಿರಿಯನ್ನೂ ಬಗೆಬಗೆಯಿಂದ ಶಂಕರನಿಗೆ ವಿವರಿಸಿದ. ಆದ್ದರಿಂದ ಶಂಕರ ಕರುಣೆ ಉಕ್ಕಿದವನಂತೆ ನಟಿಸುತ್ತ ಸೆಂಟ್ಸಿಗೆ ಮತ್ತೂ ಹತ್ತು ಸಾವಿರ ರೂಪಾಯಿ ಕಡಿಮೆ ಮಾಡಿದ. ಅದರಿಂದ ಗೆಲುವಾದ ಗೋಪಾಲ, ಒಂದು ವಾರದೊಳಗೆ ಹಣ ಹೊಂದಿಸಿಕೊಂಡು ಬರುವುದಾಗಿ ಅವನಿಗೆ ಮಾತುಕೊಟ್ಟು ಗುಜರಿಯನ್ನು ರಿಕ್ಷಾ ಟೆಂಪೊವೊಂದಲ್ಲಿ ತುಂಬಿಸಿಕೊಂಡು ಹಿಂದಿರುಗಿದ.    ಈಶ್ವರಪುರದ ಪೇಟೆಯ ದೊಡ್ಡ ಅಂಗಡಿಯೊಂದಕ್ಕೆ ಗುಜರಿಯನ್ನು ಮಾರಿ ಒಂದಷ್ಟು ಲಾಭಾಂಶ ಗಳಿಸಿ, ಆತುರದಿಂದ ಮನೆಗೆ ಧಾವಿಸಿದ. ಆಹೊತ್ತಿನಲ್ಲಿ ರಾಧಾ ತೋಟದಲ್ಲಿ ಮಡಲು, ತಪ್ಪರಿಕೆ ಹೆಕ್ಕಿ ರಾಶಿ ಹಾಕುತ್ತಾ ಇದ್ದವಳು ಗಂಡನನ್ನು ಕಂಡು, ಏನೀವತ್ತು ಇಷ್ಟು ಬೇಗ ಬಂದುಬಿಟ್ಟರು…? ಎಂದು ಯೋಚಿಸಿದಳು. ಅಷ್ಟರಲ್ಲಿ ಗೋಪಾಲ ಅಂಗಳದಲ್ಲಿ ಸೈಕಲ್ ನಿಲ್ಲಿಸಿ, ಹೆಂಡತಿ ತೋಟದಲ್ಲಿ ದುಡಿಯುತ್ತಿರುವುದನ್ನು ಕಂಡ. ಮರುಕ್ಷಣ ಅವನ ಮನಸ್ಸು ಹಿಂಡಿತು. ಛೇ! ಇವಳೊಬ್ಬಳು ಪಾಪದ ಹೆಣ್ಣು, ದಿನನಿತ್ಯ ಮನೆಯಲ್ಲೂ ಹೊರಗೂ ಎಷ್ಟೊಂದು ದುಡಿಯುತ್ತಾಳೆ! ಆದರೆ ನನ್ನನ್ನು ಮದುವೆಯಾಗಿ ಬಂದ ನಂತರ ಒಂದು ದಿನವೂ ಇವಳನ್ನು ಸುಖವಾಗಿಡಲು ನನ್ನಿಂದ ಸಾಧ್ಯವಾಗಿಲ್ಲ. ಇನ್ನು ಮುಂದೆ ಸ್ವಂತ ಮನೆಯಾದ ಮೇಲಾದರೂ ಚೆನ್ನಾಗಿ ನೋಡಿಕೊಳ್ಳಬೇಕು!-ಎಂದು ಯೋಚಿಸಿ ಸಮಾಧಾನ ತಂದುಕೊಂಡ. ‘ಹೇ, ರಾಧಾ ಕೆಲಸ ಮಾಡಿದ್ದು ಸಾಕು ಮಾರಾಯ್ತೀ… ಸ್ವಲ್ಪ ಇಲ್ಲಿ ಬಾ!’ ಎಂದು ಅಕ್ಕರೆಯಿಂದ ಕರೆದ.  ಅಷ್ಟು ಕೇಳಿದ ಅವಳು, ‘ಹ್ಞೂಂ ಬಂದೆ ಮಾರಾಯ್ರೇ…!’ ಎಂದುತ್ತರಿಸಿ ಸೆರಗಿನಿಂದ ಬೆವರೊಸಿಕೊಳ್ಳುತ್ತ ಬಂದಳು. ಗೋಪಾಲ ಕೈಕಾಲು ಮುಖಕ್ಕೆ ನೀರೆರೆದುಕೊಂಡು ಒಳಗೆ ಹೋಗಿ ಗೋಡೆಗೊರಗಿ ಕುಳಿತ. ರಾಧಾಳೂ ಬಂದು ಗಂಡನೆದುರು ಕುಳಿತುಕೊಂಡಳು. ‘ನಿನಗೊಂದು ಸಂತೋಷದ ಸುದ್ದಿ ಉಂಟು ಮಾರಾಯ್ತೀ…!’ ‘ಹೌದಾ, ಎಂಥದದು…?’ ‘ಕೊನೆಗೂ ನಿನ್ನ ಹಠಕ್ಕೂ, ದಿನಾ ನಾವು ದೇವರೊಡನೆ ಪ್ರಾರ್ಥಿಸಿಕೊಂಡದ್ದಕ್ಕೂ ಪ್ರತಿಫಲವೆಂಬಂತೆ ಜಾಗವೊಂದು ಸಿಕ್ಕಿದ ಹಾಗಾಯ್ತು ಮಾರಾಯ್ತಿ!’ ಎಂದ ಉತ್ಸಾಹದಿಂದ. ಅಷ್ಟು ಕೇಳಿದ ರಾಧಾಳಿಗೆ ನಿಂತ ನಿಲುವಿನಲ್ಲೇ ಕೊಪ್ಪರಿಗೆ ಸಿಕ್ಕಷ್ಟು ಸಂತೋಷವಾಯಿತು. ‘ಹೌದಾ ಮಾರಾಯ್ರೇ…ಯಾವ ಊರಲ್ಲಿ? ನಾವದನ್ನು ನೋಡಲು ಹೋಗುವುದು ಯಾವಾಗ…?’ ಎಂದಳು ಆತುರದಿಂದ. ‘ಸದ್ಯದಲ್ಲೇ ಹೋಗುವ. ಆದರೆ ಅದಕ್ಕಿಂತ ಮೊದಲು ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಆಗಬೇಕು. ಎಲ್ಲಿಂದ ಹೊಂದಿಸುವುದು ಮಾರಾಯ್ತೀ?’ ಎಂದ ದುಗುಡದಿಂದ. ‘ಅಷ್ಟೇ ತಾನೇ ಆಗುತ್ತದೆ ಬಿಡಿ!’ ಎಂದು ರಾಧಾ ನಿಶ್ಚಿಂತೆಯಿಂದ ಅಂದಾಗ ಗೋಪಾಲನಿಗೆ ಅಚ್ಚರಿಯಾಯಿತು. ‘ಆಗುತ್ತದೆ ಎಂದರೆ ಏನರ್ಥ…! ನೀನು ಕೂಡಿಟ್ಟಿದ್ದೀಯಾ…?’ ಎಂದ ಒರಟಾಗಿ. ‘ಅಯ್ಯೋ ಅಷ್ಟೊಂದು ಹಣ ಕೂಡಿಡಲು ನಮ್ಮಿಂದ ಸಾಧ್ಯವಿದೆಯಾ ಮಾರಾಯ್ರೇ…?’ ಎಂದಳವಳು ನಗುತ್ತ. ಅವಳ ನಗು ಕಂಡ ಗೋಪಾಲನಿಗೆ ತನ್ನ ಆತಂಕವನ್ನವಳು ಗೇಲಿ ಮಾಡುತ್ತಿದ್ದಾಳೆಂದೆನ್ನಿಸಿ ರೇಗಿಬಿಟ್ಟಿತು. ‘ಹಾಗಾದರೆ ಯಾರು ನಿನ್ನಪ್ಪ ಕೊಡುತ್ತಾರಾ…?’ ಎಂದ ಉಡಾಫೆಯಿಂದ. ‘ಅರೆರೇ, ಅಪ್ಪ ಯಾಕೆ ಕೊಡಬೇಕು ಮಾರಾಯ್ರೇ? ಜಾಗವನ್ನು ನೀವು ಅವರ ಹೆಸರಿಗೆ ಬರಿತೀರಾ? ನಮಗೆ ಬೇಕಿದ್ದರೆ ನಾವೇ ಮಾಡಿಕೊಳ್ಳಬೇಕಪ್ಪಾ!’ ಎಂದು ಮತ್ತೂ ತುಂಟ ನಗುತ್ತ ಬೀರುತ್ತ ಅಂದವಳು, ‘ಇಷ್ಟಕ್ಕೆಲ್ಲಾ ಕೋಪಿಸಿಕೊಂಡರೆ ಹೇಗೆ ಮಾರಾಯ್ರೇ? ಮೊನ್ನೆ ತಾನೇ ನಾವಿಬ್ಬರು ಅದರ ಬಗ್ಗೆ ಮಾತಾಡಿ ನಿರ್ಧರಿಸಿದ್ದನ್ನು ಇಷ್ಟು ಬೇಗ ಮರೆತು ಬಿಟ್ರಾ…?’ ಎಂದು ಹುಸಿ ಮುನಿಸಿನಿಂದ ಕೇಳಿದಳು. ಆಗ ಗೋಪಾಲನಿಗೆ ಅಂದಿನ ಮಾತುಕತೆಯೆಲ್ಲ ನೆನಪಾಯಿತು. ‘ಓಹೋ… ಹೌದಲ್ಲವ ಮಾರಾಯ್ತೀ!’ ಎಂದು ಪೆಚ್ಚಾಗಿ ನಕ್ಕ.    ಹೀಗೆ ಸಂಕಷ್ಟವನ್ನೂ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಎದುರಿಸುತ್ತ ಬಾಳುತ್ತಿದ್ದ ಗೋಪಾಲ ದಂಪತಿ ಶಂಕರನ ಜಾಗ ಕೊಳ್ಳುವ ವಿಚಾರದಲ್ಲಿ ಮರುದಿನವೇ ಕಾರ್ಯಪ್ರವೃತ್ತರಾದರು. ಗೋಪಾಲ, ತನ್ನ ಮದುವೆಯಲ್ಲಿ ಹೆಣ್ಣಿನ ಕಡೆಯವರು ಉಡುಗೊರೆಯಾಗಿ ನೀಡಿದ್ದ ಚಿನ್ನ ಚೈನನ್ನೂ ಮತ್ತು ತಾನು ಚಿನ್ನದಂಗಡಿಯ ‘ಲಕ್ಕಿ ಡ್ರಾ’ಕ್ಕೆ ತಿಂಗಳು ತಿಂಗಳು ಕಟ್ಟುತ್ತ ಹೆಂಡತಿಗೂ ಮಗಳಿಗೂ ಮಾಡಿಸಿ ಹಾಕಿದ್ದ ಆಭರಣಗಳನ್ನೂ ಕೂಡಿಸಿ ಅದರ ಮೊತ್ತವನ್ನು ಲೆಕ್ಕ ಹಾಕಿದ. ಆದರೂ ಸಾಲುವುದಿಲ್ಲ ಎಂದೆನ್ನಿಸಿತು. ಕೊನೆಯದಾಗಿ ಮಗಳ ಕಿವಿಯಲ್ಲಿ ಉಳಿದಿದ್ದ ಸಣ್ಣ ಓಲೆಗಳನ್ನೂ ಬಿಚ್ಚಿಕೊಂಡು ಹೋಗಿ ಮಾರಿ ಒಂದಷ್ಟು ಹಣ ಹೊಂದಿಸಿದ. ಇತ್ತ ರಾಧಾ ಒಂದೂವರೆ ಲಕ್ಷ ರೂಪಾಯಿಯನ್ನು ತನ್ನ ‘ಸ್ತ್ರೀಶಕ್ತಿ’ ಸಂಘದಿಂದ ಸಾಲ ಪಡೆದು ಗಂಡನ ಕೈಯಲ್ಲಿಟ್ಟಳು. ಆದ್ದರಿಂದ ಗೋಪಾಲ, ಇನ್ನು ಹೆಂಡತಿಯೊಂದಿಗೆ ಜಾಗ ನೋಡಲು ಹೋಗಿ ಅವಳಿಗೆ ಹಿಡಿಸಿದ ಮೇಲೆ ಅದನ್ನು ಕೊಳ್ಳುವುದೆಂದು ನಿರ್ಧರಿಸಿದ. ಆವತ್ತು ಮಕ್ಕಳು ಶಾಲೆಗೆ ಹೋದ ಕೂಡಲೇ ಶಂಕರನಿಂದ ಅನುಮತಿ ಪಡೆದು ರಾಧಾಳನ್ನು ಸೈಕಲ್ಲಿನಲ್ಲಿ ಕುಳ್ಳಿರಿಸಿಕೊಂಡು ಜಾಗ ನೋಡಲು ಬುಕ್ಕಿಗುಡ್ಡೆಯತ್ತ ಹೊರಟ. ಅಂಬಾಗಿಲಿಗೆ ಬಂದು ವೆಂಕಟ್ರಾಯರ ಸಣ್ಣ ದಿನಸಿ ಅಂಗಡಿಯಲ್ಲಿ ರಾಧಾಳಿಗೆ ಕೋಲ್ಡ್‍ಡ್ರಿಂಕ್ಸ್ ಕುಡಿಸಲು ಸೈಕಲ್ ನಿಲ್ಲಿಸಿದ. ಗೋಪಾಲ ದಂಪತಿ ಅಪರೂಪಕ್ಕೆ ಒಟ್ಟಿಗೆ ಸವಾರಿ ಹೊರಟಿರುವುದನ್ನು ಕಂಡ ತಮಾಷೆ ಸ್ವಭಾವದ ವೆಂಕಟ್ರಾಯರು, ‘ಓಹೋ ಏನು ಗೋಪಾಲ ಅರ್ಧಾಂಗಿಯ ಸಮೇತ ಚಕ್ರದ ಕುದುರೆ ಹತ್ತಿದ್ದಿಯಾ! ಎಲ್ಲಿಗೆ ಪ್ರಯಾಣ…?’ ಎಂದು ಹಾಸ್ಯ ಮಾಡಿ ನಕ್ಕರು. ಅವರ ಮಾತಿಗೆ ರಾಧಾ ನಾಚಿಕೊಂಡಳು. ಗೋಪಾಲ ನಗುತ್ತ, ‘ಒಂದೊಳ್ಳೆಯ ಕೆಲಸಕ್ಕೆ ಹೊರಟಿದ್ದೇವೆ ವೆಂಕಟ್ರಾಯರೇ, ನಿಮ್ಮ ಆಶೀರ್ವಾದ ಬೇಕು!’ ಎಂದ ನಮ್ರನಾಗಿ. ‘ಓಹೋ, ಹೌದಾ…! ಹಾಗಾದರೆ ಎಲ್ಲಿಗೆ ಅಂಥ ಕೇಳಿದ್ದು ತಾಪ್ಪಾಯ್ತು ನೋಡು. ಆಗಲಿ, ನೀವು ಹೊರಟಿರುವ ಕಾರ್ಯವು ಹದವಾದ ಹಣ್ಣಾಗಲಿ ಅಂತ ಹರಸುತ್ತೇನೆ. ಹೋಗಿಬನ್ನಿ!’ ಎಂದು ಕೈಯೆತ್ತಿ ಹಾರೈಸಿದರು. ‘ಅಷ್ಟಾದರೆ ಸಾಕು ವೆಂಕಟ್ರಾಯರೇ…!’ ಎಂದು ಕೈಮುಗಿದ ಗೋಪಾಲ, ‘ಎರಡು ಕೋಲ್ಡ್ ಕೊಡಿ’ ಎಂದ ನಗುತ್ತ. ಅವರು ಯಾವುದೋ ಎರಡು ಬಾಟಲಿಗಳನ್ನು ಫ್ರೀಡ್ಜ್‍ನಿಂದ ತೆಗೆದುಕೊಟ್ಟರು. ರಾಧಾ, ವೆಂಕಟ್ರಾಯರಿಗೆ ಬೆನ್ನುಮಾಡಿ ನಿಂತುಕೊಂಡು ಪಾನೀಯ ಕುಡಿದು ಬಾಟಲಿಯನ್ನು ಗಂಡನ ಕೈಗಿಟ್ಟಳು. ಗೋಪಾಲನೂ ಕುಡಿದು ಬಾಟಲಿಗಳನ್ನು ಮೇಜಿನ ಮೇಲಿಟ್ಟು ದುಡ್ಡುಕೊಟ್ಟು ವೆಂಕಟ್ರಾಯರಿಗೆ ನಮಸ್ಕರಿಸಿ ಮತ್ತೆ ಹೆಂಡತಿಯನ್ನು ಕೂರಿಸಿಕೊಂಡು ಹೊರಟವನು ಕಾಲು ಗಂಟೆಯಲ್ಲಿ ಬುಕ್ಕಿಗುಡ್ಡೆಗೆ ಬಂದು ತಲುಪಿದ. ಸುಮಾರು ದೂರದಿಂದಲೇ ಭಾಗೀವನ ಬಡಾವಣೆಯು ಎದ್ದು ಕಾಣುತ್ತಿತ್ತು. ಆ ವಠಾರದ ತುಂಬಾ ವಿವಿಧ ಮಾದರಿಯ ತಾರಸಿ ಸೌಧಗಳೂ, ಎರಡಂತಸ್ತಿನ ಸುಂದರ ಬಂಗಲೆಗಳೂ ತಲೆಯೆತ್ತಿ ನಿಂತಿದ್ದವು. ರಾಧಾ ಗೋಪಾಲರು, ಆ ವಿಶಾಲ ಪ್ರದೇಶದಲ್ಲಿ ತಮ್ಮದೆಂಬ ಜಾಗವೊಂದು ಎಲ್ಲಿದೆ? ಎಂದು ಹುಡುಕುತ್ತ ಸಮೀಪ ಹೋದರು. ಶಂಕರ ಹೇಳಿದಂತೆ ಬಡಾವಣೆಯ ಪೂರ್ವದಿಕ್ಕಿನ ಮೂಲೆಯೊಂದರಲ್ಲಿ ಸಣ್ಣ ಜಾಗವೊಂದು ಖಾಲಿಯಿತ್ತು. ಇಬ್ಬರೂ ಅತ್ತ ಹೋಗಿ ಜಾಗವನ್ನೂ ಅದರ ಸುತ್ತಲಿನ ಪರಿಸರವನ್ನೂ ತವಕದಿಂದ ಪರೀಕ್ಷಿಸಿದರು. ರಾಧಾಳಿಗೆ ಜಾಗವು ತುಂಬಾ ಹಿಡಿಸಿತು. ಇಷ್ಟೊಂದು ಶ್ರೀಮಂತ ವಠಾರದಲ್ಲಿ ಯಾರ ತಂಟೆ ತಕರಾರೂ ಇಲ್ಲದ ಮತ್ತು ಸಮತಟ್ಟಾದ ಜಮೀನೊಂದು ದೊರಕಿದ್ದು ತಮ್ಮ ಅದೃಷ್ಟವೇ ಸರಿ! ಎಂದುಕೊಂಡ ಅವಳು ಖುಷಿಪಟ್ಟಳು. ಸೆಂಟ್ಸಿಗೆ ಕಡಿಮೆಯೆಂದರೂ ಎರಡು ಲಕ್ಷ ಬೆಲೆ ಬಾಳುವ ಇಂಥ ಸೈಟನ್ನು ಅಷ್ಟು ಕಡಿಮೆ ಬೆಲೆಗೆ ನೀಡಿದ ಶಂಕರನಲ್ಲಿ ಬಡ ರಾಧಾ ಗೋಪಾಲರಿಗೆ ನಿರಾಕಾರ ಬ್ರಹ್ಮನೇ ಕಾಣಿಸಿದ್ದ! ಗಂಡಹೆಂಡತಿ ಗೆಲುವಿನಿಂದ ಮನೆಗೆ ಹಿಂದಿರುಗಿದರು. ಜಾಗವನ್ನು ಕೊಂಡರಾಯಿತೇ? ಅದರಲ್ಲಿ ವಾಸಿಸಲು ಸಣ್ಣದೊಂದು ಗುಡಿಸಲು ಮತ್ತು ನೀರಿಗೊಂದು ಬಾವಿಯೂ ಬೇಡವೇ? ಅಷ್ಟನ್ನು ಮಾಡಲು ಇನ್ನೊಂದಷ್ಟು ರೂಪಾಯಿಗಳೂ ಬೇಕು! ಆದರೆ ಅದನ್ನು ಹೇಗೆ, ಎಲ್ಲಿಂದ ಹೊಂದಿಸುವುದಪ್ಪಾ…?’ ಎಂಬ ಮತ್ತೊಂದು ಚಿಂತೆಯಲ್ಲಿ ಮುಳುಗಿದ್ದ ಗೋಪಾಲನ ಕೈಗೆ ಅದೇ ಹೊತ್ತಲ್ಲಿ ರಾಧಾ ಕಾಗದದ ಸಣ್ಣದೊಂದು ಪೊಟ್ಟಣವನ್ನು ತುರುಕಿಸಿದಳು. ಅವನು ಅಚ್ಚರಿಯಿಂದ ಅವಳನ್ನು ದಿಟ್ಟಿಸುತ್ತ ಪೊಟ್ಟಣವನ್ನು ಬಿಚ್ಚಿದ. ಆದರೆ ಆ ವಸ್ತುವನ್ನು ಕಂಡವನ ಮನಸ್ಸು ನೋವಿನಿಂದ ಹಿಂಡಿತು. ಮದುವೆಯ ನಿಯಮದಂತೆ ತಾನು ಅಭಿಮಾನದಿಂದ ಮಾಡಿಸಿ ತನ್ನವಳ ಕೊರಳಿಗೆ ಕಟ್ಟಿದ್ದ ಎರಡು ಪವನಿನ ಕರಿಮಣಿ ಸರವಾಗಿತ್ತದು. ಹೆಂಡತಿಯನ್ನು ವಿಷಾದದಿಂದ ನೋಡಿದವನು, ‘ಏನಿದು ರಾಧಾ…?’ ಎಂದ ಆತಂಕದಿಂದ. ‘ಕಾಣುವುದಿಲ್ಲವಾ? ನೀವು ಕಟ್ಟಿದ ಕರಿಮಣಿ ಮಾರಾಯ್ರೇ! ಕೊಂಡು ಹೋಗಿ ಅಡವಿಟ್ಟು ಅಥವಾ ಮಾರಿ ಬಂದ ಹಣದಿಂದ ಕೆಲಸ ಆರಂಭಿಸಿ. ಮನೆಯೊಂದು ಆದ ಮೇಲೆ ಕರಗಿ ಹೋದ ಚಿನ್ನಾಭರಣವನ್ನೆಲ್ಲ ಮತ್ತೆ ಮಾಡಿಸಿಕೊಂಡರಾಯ್ತು!’ ಎಂದು ಹಗುರವಾಗಿ ಅಂದಳು. ಆದರೂ ಅದನ್ನು ತೆಗೆದುಕೊಳ್ಳಲು ಗೋಪಾಲನ ಮನಸ್ಸು ಒಪ್ಪಲಿಲ್ಲ. ಆದರೆ ಅದನ್ನು ಬಿಟ್ಟು ಅವನಿಗೆ ಬೇರೆ ದಾರಿಯೂ ಕಾಣಲಿಲ್ಲ. ಆದ್ದರಿಂದ ಮರುಮಾತಾಡದೆ ತೆಗೆದುಕೊಂಡು ಹೋಗಿ ಅಡವಿಟ್ಟು ಹಣಪಡೆದ. ದುಡ್ಡು

Read Post »

ಇತರೆ, ದಾರಾವಾಹಿ

ದಾರಾವಾಹಿ ಅದ್ಯಾಯ-15 ಏಕನಾಥರ ಪತ್ನಿ ನೀಡಿದ ಬೆಲ್ಲದ ಕಾಫಿ ಕುಡಿದ ಶಂಕರನಿಗೆ ಕಥೆ ಹೇಳುವ ಹುಮ್ಮಸ್ಸು ಇನ್ನಷ್ಟು ಹೆಚ್ಚಿದ್ದರಿಂದ ಮತ್ತೇನೋ ನೆನಪಾಯಿತು. ‘ಅಂದಹಾಗೆ ಗುರೂಜೀ, ಪುರಂದರಣ್ಣನಿಗೆ ಆ ಕಾಡು ಜನರು ಎಲ್ಲಿ ಸಿಕ್ಕಿದರು ಅಂತ ಕೇಳಿದಿರಿಲ್ಲಾ, ಹೇಳುತ್ತೇನೆ ಕೇಳಿ. ಇಲ್ಲೆ ಸಮೀಪದ ನೆರ್ಗಿಹಿತ್ತಲು ಗ್ರಾಮದ ತಮ್ಮ ಮೂಲದ ಮನೆಯಲ್ಲಿ ಪುರಂದರಣ್ಣನಿಗೆ ಎಕರೆಗಟ್ಟಲೆ ಪಿತ್ರಾರ್ಜಿತ ಆಸ್ತಿ ಉಂಟಲ್ಲವಾ. ಆ ಹೊಲಗದ್ದೆಗಳಲ್ಲಿ ಅವರೇ ನಿಂತು ಬೇಸಾಯ ಮಾಡಿಸುತ್ತಾರೆ. ಆ ಭೂಮಿಯ ಸುತ್ತಮುತ್ತ ದಟ್ಟ ಹಾಡಿಗಳಿವೆ. ಅವುಗಳಲ್ಲಿರುವ ನೂರಾರು ಕಾಡುಹಂದಿಗಳು ಯಾವಾಗಲೂ ಅವರ ಹೊಲಗದ್ದೆಗಳಿಗೆ ನುಗ್ಗಿ ಬೆಳೆಗಳನ್ನೆಲ್ಲ ಹಾಳು ಮಾಡುತ್ತಿದ್ದುದನ್ನು ನೋಡುತ್ತ ಬಂದವರಿಗೆ ತಲೆಕೆಟ್ಟು ಹೋಯ್ತಂತೆ. ಅದೇ ಸಂದರ್ಭದಲ್ಲಿ ಯಾರೋ ಸ್ನೇಹಿತರು ಅವರಿಗೆ ಈ ಜನರ ಪರಿಚಯ ಮಾಡಿಸಿದರಂತೆ. ಹಾಗಾಗಿ ಇವರು ಆಗಾಗ ಆ ಜನರನ್ನು ಕರೆಯಿಸಿಕೊಂಡು ಹಂದಿಗಳನ್ನು ಹಿಡಿಸುತ್ತಿದ್ದವರು ಒಂದೆರಡು ಹಂದಿಗಳನ್ನೂ ಮತ್ತು ಐದಾರು ಸಾವಿರ ರೂಪಾಯಿಗಳನ್ನೂ ಅವರಿಗೆ ಕೊಟ್ಟು ಖುಷಿಪಡಿಸುತ್ತಿದ್ದರು. ಉಳಿದ ಹಂದಿಗಳನ್ನು ಅವರಿಂದಲೇ ಕೊಲ್ಲಿಸಿ ಮಾಂಸ ಮಾಡಿಸುತ್ತಿದ್ದರು. ಈಶ್ವರಪುರದ ಪೇಟೆಯಲ್ಲಿ, ‘ಹೊಟೇಲ್ ಮೇನಕಾ’ ಅಂತ ದೊಡ್ಡ ತ್ರೀಸ್ಟಾರ್ ಹೋಟೆಲೊಂದಿದೆ ಗೊಂತ್ತುಂಟಾ ನಿಮಗೆ?’ ‘ಹೌದು ಮಾರಾಯಾ…ಬಹಳ ಫೇಮಸ್ ಹೊಟೇಲ್ ಅಲ್ಲವಾ ಅದು!’ ‘ಹೌದು ಗುರೂಜಿ ಅದು ಪುರಂದರಣ್ಣನದ್ದಲ್ಲವಾ…!’ ‘ಓಹೋ, ಹೌದಾ ಮಾರಾಯಾ…ಅವರೀಗ ಅಷ್ಟು ದೊಡ್ಡ ಕುಳವಾ…?’ ‘ಮತ್ತೆಂಥದು ಗುರೂಜಿ…ನೀವು ನನ್ನನ್ನು ಏನೆಂದುಕೊಂಡಿದ್ದೀರಿ! ಅಂತಿಂಥವರೊಡನೆಯೆಲ್ಲ ಬೆರೆಯುವವನಲ್ಲ ನಾನು. ಅವರೂ ನಾನೂ ತುಂಬಾ ಹಳೆಯ ದೋಸ್ತಿಗಳು. ಹಾಗಾಗಿ ಯಾವಾಗಲೂ ಒಟ್ಟಿಗಿರುತ್ತೇವೆ. ಅದಿರಲಿ. ಮುಂದೆ ಕೇಳಿ. ಕಾಡುಹಂದಿಯ ಮಾಂಸದಿಂದ ತಮ್ಮ ಹೊಟೇಲಿನಲ್ಲಿ ಅವರು ಎಷ್ಟೊಂದು ಬಗೆಯ ಚೈನೀಶ್ ಫುಡ್ ತಯಾರಿಸುತ್ತಾರೆ ಗೊತ್ತುಂಟಾ? ಹಾಗಾಗಿಯೇ ಅವರ ಹೊಟೇಲಿಗೆ ಕಂಡಾಬಟ್ಟೆ ಗಿರಾಕಿ!’ ಎಂದ ಶಂಕರ ನಗುತ್ತ. ‘ಅಯ್ಯೋ ದೇವರೇ, ಹೀಗೂ ಉಂಟಾ? ಇದೆಲ್ಲ ಅರಣ್ಯ ಇಲಾಖೆಗೆ ಗೊತ್ತಾದರೆ ಕೇಸು ಗೀಸು ಆಗಿ ಅವರ ಕಥೆ ಕೋಚಾ ಆಗಲಿಕ್ಕಿಲ್ಲವಾ ಮಾರಾಯಾ?’ ಎಂದು ಏಕನಾಥರು ಅಚ್ಚರಿಯಿಂದ ಪ್ರಶ್ನಿಸಿದರು. ‘ಎಂಥದು ಕೋಚಾ ಆಗುವುದು ಗುರೂಜೀ? ಅದಕ್ಕೆಲ್ಲ ಅವರು ತಕ್ಕ ವ್ಯವಸ್ಥೆ ಮಾಡಿಕೊಂಡೇ ವ್ಯಾಪಾರಕ್ಕಿಳಿದಿರುವುದು. ಕೇಸು ಮತ್ತು ಕೋರ್ಟು ಕಛೇರಿಗಳೆಲ್ಲ ನಮ್ಮಂಥವರಿಗೆ ಅಲ್ಲ ಗುರೂಜಿ. ಅದಕ್ಕೆಂದು ಬೇರೆಯೇ ವರ್ಗದ ಜನರಿದ್ದಾರೆ!’ ಎಂದು ಶಂಕರ ಗರ್ವದಿಂದ. ‘ಅಂದರೇ, ಈಗ ನಮ್ಮೂರಿನಲ್ಲಿ ಇಷ್ಟೆಲ್ಲ ಸಂಗತಿಗಳು ನಡೆಯುತ್ತಿದ್ದಾವಾ ಮಾರಾಯಾ…? ಇದೆಲ್ಲ ನಮಗೇ ಗೊತ್ತೇ ಇರಲಿಲ್ಲ ನೋಡು!’ ಎಂದು ಗುರೂಜಿ ವಿಸ್ಮಯ ತೋರಿಸಿದರು. ‘ಅದು ಬಿಡಿ ಗುರೂಜಿ, ಇನ್ನೊಂದು ಕೊನೆಯ ವಿಷಯವನ್ನು ಹೇಳಿ ಕಥೆ ಮುಗಿಸುತ್ತೇನೆ’ ಎಂದು ನಗುತ್ತ ಅಂದ ಶಂಕರ, ‘ನನ್ನ ಆ ಜಾಗದೊಳಗೆ ಒಂದು ಕೆರೆಯಿತ್ತು. ಅದು ಎಷ್ಟು ದೊಡ್ಡದಿತ್ತೆಂದರೆ ಸುಮಾರು ಎರಡು ಎಕರೆಯಷ್ಟು ವಿಶಾಲವಿತ್ತು. ಅದರ ಸುತ್ತಮುತ್ತ ಮರಮಟ್ಟುಗಳೆಲ್ಲ ಆಕಾಶದೆತ್ತರಕ್ಕೆ ಬೆಳೆದು ನಿಂತಿದ್ದವು. ಅವುಗಳ ಮೇಲೆ ದೊಡ್ಡ ದೊಡ್ಡ ಗಾತ್ರದ ಕೊರುಂಗ್ ಪಕ್ಷಿ(ವಲಸೆ ಕೊಕ್ಕರೆಗಳು)ಗಳಿದ್ದವು. ಅವು ನಮ್ಮೂರಿನ ಸಾಮಾನ್ಯ ಕೊರುಂಗುಗಳಂತೆ ಇರಲಿಲ್ಲ ಗುರೂಜಿ. ನಮ್ಮೂರಿನ ನಾಯಿಗಳಷ್ಟು ಎತ್ತರವಿದ್ದವು! ಅಲ್ಲಿನ ಮರಗಳನ್ನೆಲ್ಲ ಕಡಿದುರುಳಿಸುವಾಗ ಆ ಹಕ್ಕಿಗಳ ಐನೂರಕ್ಕೂ ಹೆಚ್ಚು ಮರಿಗಳು ಮತ್ತು ಅವುಗಳ ರಾಶಿರಾಶಿ ಮೊಟ್ಟೆಗಳೂ ಆ ಕಾಡು ಜನರಿಗೆ ಸಿಕ್ಕಿದವು. ಒಂದೊಂದು ಹಕ್ಕಿಮರಿಗಳು ಒಂದೊಂದು ಕಿಲೋದಷ್ಟು ತೂಕವಿದ್ದವು. ಅವೆಲ್ಲ ಪ್ರತೀವರ್ಷ ಸಾವಿರಾರು ಕಿಲೋಮೀಟರ್ ದೂರದ ಯಾವ್ಯಾವುದೋ ಹೊರ ದೇಶಗಳಿಂದೆಲ್ಲ ನಮ್ಮಲ್ಲಿಗೆ ವಲಸೆ ಬರುವ ಹಕ್ಕಿಗಳೆಂದು ಪುರಂದರಣ್ಣ ಹೇಳುತ್ತಿದ್ದರು. ಆದರೆ ಅವುಗಳ ಈ ವರ್ಷದ ಫಾರಿನ್ ಟೂರನ್ನು ನಾವು ಇಲ್ಲಿಯೇ ಮುಕ್ತಾಯಗೊಳಿಸಿ ಅವುಗಳ ಆತ್ಮಕ್ಕೆ ಸಾಮೂಹಿಕವಾಗಿ ಶಾಂತಿ ಕೋರಿದೆವು ಗುರೂಜಿ!’ ಎಂದು ಶಂಕರ ಒಮ್ಮೆ ಜೋರಾಗಿ ನಕ್ಕ. ಆಗ ಗುರೂಜಿಯ ಮುಖದಲ್ಲಿ ವಿಷಾದ ಮೂಡಿತು. ಆದರೆ ಅದನ್ನು ಗಮನಿಸದ ಶಂಕರ ಮತ್ತೆ ಕಥೆ ಮುಂದುವರೆಸಿದ. ‘ನಮ್ಮ ಕಾಡು ಜನರು ಆ ಪಕ್ಷಿಗಳನ್ನೆಲ್ಲ ಹಿಡಿದ್ಹಿಡಿದು ಅವುಗಳ ಕೊರಳು ಹಿಸುಕಿ ಕೊಂದು ಗೋಣಿ ಚೀಲಕ್ಕೆ ತುಂಬಿಸಿಕೊಂಡು ಕುಣಿದಾಡುತ್ತಿದ್ದರು. ಸುಮಾರಾಗಿ ರೆಕ್ಕೆ ಬಲಿತ ಮೂವತ್ತು, ನಲ್ವತ್ತು ದೊಡ್ಡ ಮರಿಗಳು ಪುರಂದರಣ್ಣನ ಹೊಟೇಲಿಗೂ ರವಾನೆಯಾದವು. ಹೀಗೆ ಆ ಜಾಗವನ್ನು ಸಮತಟ್ಟು ಮಾಡುವ ಸುಮಾರು ಎರಡು ತಿಂಗಳ ಕಾಲ ಆ ಮನುಷ್ಯರ ದೆಸೆಯಿಂದಾಗಿ ನಮ್ಮವರ ತಂಡವೂ ಬೇಕಾಬಿಟ್ಟಿ ಮಾಂಸದೂಟ ಮಾಡುತ್ತ ತೇಗುತ್ತಿತ್ತು. ಹಾಗಾಗಿ ಸತ್ಯ ಹೇಳುತ್ತೇನೆ ಗುರೂಜಿ, ಈಗ ‘ಮಾಂಸ’ ಎಂಬ ಶಬ್ದ ಕಿವಿಗೆ ಬಿದ್ದರೆ ಸಾಕು ವಾಕರಿಕೆ ಬಂದಂತಾಗುತ್ತದೆ!’ ಎಂದು ಶಂಕರ ಮುಖವನ್ನು ವಿಲಕ್ಷಣವಾಗಿ ಕಂಪಿಸುತ್ತ ತನ್ನ ವಿಕೃತ ಕಾಯಕವನ್ನು ವರ್ಣಿಸಿದ. ಅಷ್ಟು ಕೇಳಿದ ಏಕನಾಥರಿಗೆ ಮತ್ತೊಮ್ಮೆ ಹೇಸಿಗೆ ಒತ್ತರಿಸಿ ಬಂತು. ‘ಅಲ್ಲಾ ಮಾರಾಯಾ, ನೀವೆಲ್ಲ ಮನುಷ್ಯರೋ, ಮೃಗಗಳೋ ಆ ದೇವರಿಗೆ ಗೊತ್ತು. ಥು, ಥೂ…!’ ಎಂದು ಈ ಸಲ ಬಾಯಿಬಿಟ್ಟೇ ಉಗಿದುಬಿಟ್ಟರು. ಆದರೆ ಶಂಕರ ಅವರ ಮಾತಿಗೆ ಪಕಪಕಾ ನಗುತ್ತ ಮರಳಿ ಮಾತು ಮುಂದುವರೆಸಲಿದ್ದ. ಅಷ್ಟರಲ್ಲಿ ಏಕನಾಥರ ಮನೆಯೆದುರು ಒಂದಷ್ಟು ದೈತ್ಯ ಮರಗಳಿದ್ದ ತೋಟದೊಳಗಿಂದ ತಂಪಾದ ಗಾಳಿಯೆದ್ದು ವಠಾರದೊಳಗೆಲ್ಲ ಸುಳಿಯುತ್ತ ಬಂದುದು ಇವರನ್ನು ಹದವಾಗಿ ಸೋಕುತ್ತ ಒಳಗೆ ಹೋಗಿ ಮನೆಯೊಳಗೊಂದು ಸುತ್ತು ಹೊಡೆದು ಕಿಟಕಿ, ಬಾಗಿಲುಗಳ ಮೂಲಕ ಹಿತ್ತಲಿಗೆ ಹೊರಟು ಹೋಯಿತು. ಅದು ನಡು ಬೇಸಿಗೆಯ ಕಾಲ. ಹಾಗಾಗಿ ಏಕನಾಥರೂ, ಶಂಕರನೂ ವಿಪರೀತ ಸೆಕೆಯಿಂದ ಬೆವರುತ್ತಿದ್ದರಾದರೂ ಸಹಿಸಿಕೊಂಡು ಮಾತುಕತೆಯಲ್ಲಿ ಮುಳುಗಿದ್ದರು. ಈಗ ತಂಗಾಳಿ ಬೀಸಿದ್ದು ಶಂಕರನಲ್ಲಿ ಉಲ್ಲಾಸವನ್ನು ತರಿಸಿತು. ಆದ್ದರಿಂದ ಅವನು, ‘ಆಹ್ಹಾಯ್ ಗುರೂಜೀ…! ನಿಮ್ಮ ವಠಾರದಲ್ಲಿ ಭಾರೀ ಒಳ್ಳೆಯ ಗಾಳಿ ಉಂಟಲ್ಲವಾ ಅಬ್ಬಾ…! ಒಮ್ಮೆ ಜೀವ ಬಂದ ಹಾಗಾಯ್ತು ನೋಡಿ!’ ಎಂದು ಉದ್ಗರಿಸಿ, ತನ್ನ ಅಂಗಿಯ ನಾಲ್ಕು ಗುಂಡಿಗಳನ್ನು ಬಿಚ್ಚಿ ಎದೆಯ ಭಾಗವನ್ನು ಪೂರ್ತಿ ಗಾಳಿಗೊಡ್ಡುತ್ತ, ‘ಅದಕ್ಕೇ ಹೇಳುವುದು  ನೋಡಿ, ಒಂದು ಮನೆ ಎಂದ ಮೇಲೆ ಅದರ ಸುತ್ತಮುತ್ತ ಹತ್ತಾರು ಗಿಡಮರಗಳು ಇರಲೇಬೇಕು ಅಂತ!’ ಎಂದು ದೊಡ್ಡ ಪರಿಸರ ಜ್ಞಾನಿಯಂತೆ ಅಂದ. ‘ಹೌದು ಹೌದು ಮಾರಾಯಾ. ನಮ್ಮ ತೋಟದಲ್ಲೂ ಬಹಳಷ್ಟು ಮರಮಟ್ಟುಗಳುಂಟು. ನನ್ನ ಅಜ್ಜ ಮತ್ತು ಅಪ್ಪ ಅವನ್ನೆಲ್ಲ ನೆಟ್ಟು ಬೆಳೆಸಿದ್ದಂತೆ. ‘ಮನೆಯೆಂದ ಮೇಲೆ ನಾಲ್ಕಾರು ಮರಗಳಿರಬೇಕು. ಇಲ್ಲದಿದ್ದರೆ ಅದು ಮನುಷ್ಯರ ವಾಸಸ್ಥಾನವೇ ಅಲ್ಲ ಅಂತ ಅವರು ಹೇಳುತ್ತಿದ್ದರು. ಆ ಮಾತು ಸತ್ಯ ನೋಡು. ಅವರಿಂದಾಗಿ ಇಂದು ನಮ್ಮ ವಠಾರದ ವಾತಾವರಣವು ಬಹಳ ಉತ್ತಮವಾಗಿದೆ. ನಮ್ಮ ಹಿರಿಯರು ನಮಗೆ ಆಸ್ತಿಪಾಸ್ತಿಯನ್ನೇನೂ ಮಾಡಿಟ್ಟು ಹೋಗದಿದ್ದರೂ ಇಂಥದ್ದೊಂದು ಜಾಗವನ್ನು ನಮಗೆ ಬಿಟ್ಟು ಹೋದದ್ದು ನಮ್ಮ ಪೂರ್ವಜನ್ಮದ ಪುಣ್ಯವೆಂದೇ ಹೇಳಬೇಕು ಮಾರಾಯಾ!’ ಎಂದರು ಏಕನಾಥರೂ ಹೆಮ್ಮೆಯಿಂದ. ‘ಹೌದು ಗುರೂಜಿ, ಆ ವಿಷಯದಲ್ಲಿ ನೀವು ಅದೃಷ್ಟವಂತರು!’ ಎಂದ ಶಂಕರ ಮರಳಿ ಮಾತು ಮುಂದುವರೆಸಿದ. ‘ಪುರಂದರಣ್ಣನ ಕಾಡು ಜನರು ಆ ಪಕ್ಷಿಗಳ ಕಥೆಯನ್ನೆಲ್ಲ ಮುಗಿಸಿದ ಮೇಲೆ ನಮಗೆ ಅವರ ಇನ್ನೊಂದು ಕಾರನಾಮೆಯೂ ತಿಳಿಯಿತು ಗುರೂಜೀ. ಆ ಮನುಷ್ಯರು ಬರೇ ಪ್ರಾಣಿಗಳನ್ನು ಮಾತ್ರ ತಿನ್ನುವುದಲ್ಲ ಅರಣೆ, ಓತಿಕೇತ, ಕ್ರಿಮಿಕೀಟ ಮತ್ತು ಸಿಕ್ಕಿಸಿಕ್ಕಿದ ಹಾವುಗಳನ್ನೆಲ್ಲ ಹಿಡಿದು ತಿನ್ನುತ್ತಾರೆ ಬಿಕನಾಸಿಗಳು!’ ಎಂದು ಅಸಹ್ಯದಿಂದ ಮೈಯನ್ನು ಹಿಂಡಿ ನಕ್ಕ. ಅಷ್ಟು ಕೇಳಿದ ಏಕನಾಥರಿಗೆ ಹೊಟ್ಟೆ ತೊಳಸಿದಂತಾಯಿತು. ‘ಥೂ! ಸಾಕು, ಸಾಕು ಮಾರಾಯ ನಿಲ್ಲಿಸು. ಆ ರಕ್ಕಸ ವಂಶದವರು ಸಾಯಲಿ ಅತ್ಲಾಗೆ! ನೀನು ಬಂದ ವಿಷಯವನ್ನು ಇನ್ನೂ ಹೇಳಲಿಲ್ಲ. ಅದನ್ನು ಹೇಳು!’ ಎಂದು ಮುಖ ಕಹಿ ಮಾಡಿಕೊಂಡು ಅಂದರು. ಏಕನಾಥರ ಮುಖ ಚಿರುಟಿದ್ದನ್ನು ಕಂಡ ಶಂಕರನಿಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕ. ಆಗ ಏಕನಾಥರಿಗೂ ನಗು ಬಂತು. ‘ಆಯ್ತು ಗುರೂಜೀ ಇಲ್ಲಿ ಕೇಳಿ, ಇನ್ನೊಂದು ಸ್ವಲ್ಪ ಉಂಟು ಅದನ್ನೂ ಹೇಳಿ ಬಿಡುತ್ತೇನೆ. ಒಮ್ಮೆ ನಮ್ಮ ಜೆಸಿಬಿ ಚಾಲಕನೊಬ್ಬ ಒಂದು ದಟ್ಟವಾದ ಬಲ್ಲೆಯನ್ನು ತೆಗೆಯುತ್ತಿದ್ದವನು ‘ಹಾವು ಹಾವೂ…! ಎಂದು ಬೊಬ್ಬೆ ಹೊಡೆದು ತಟ್ಟನೆ ಕೆಲಸ ನಿಲ್ಲಿಸಿಬಿಟ್ಟ. ಅಷ್ಟೊತ್ತಿಗೆ ಸುತ್ತಮುತ್ತಲಿದ್ದ ಕೆಲಸಗಾರರೆಲ್ಲ ಹೆದರಿ ದಿಕ್ಕಾಪಾಲಾಗಿ ಓಡಿ ಹೋದರು. ಯಾವ ಹಾವೆಂದು ತಿಳಿಯದ ನಮಗೂ ಭಯವಾಗಿ ದೂರ ಓಡಿದೆವು. ಆದರೆ ಆ ಕಾಡು ಜನರು ಒಮ್ಮೆಲೇ ಆ ಪೊದರಿನತ್ತ ನುಗ್ಗಿದರು. ಆಗ ನಮಗೆಲ್ಲ ಸ್ವಲ್ಪ ಧೈರ್ಯ ಬಂತು. ಮೆಲ್ಲನೇ ಸಮೀಪ ಹೋದೆವು. ಅಷ್ಟರಲ್ಲಿ ಅವರ ಐವರು ಯುವಕರು ಆ ಪೊದೆಯಿಂದ ದೊಡ್ಡ ದೊಡ್ಡ ಐದು ಹೆಬ್ಬಾವುಗಳ ಬಾಲಗಳನ್ನು ಹಿಡಿದು ದರದರನೇ ಹೊರಗೆಳೆದು ತಂದು ಮೈದಾನದಲ್ಲಿ ಹಾಕಿದರು. ಮತ್ತೊಬ್ಬ ಯುವಕ ಸುತ್ತಿಗೆಯೊಂದನ್ನು ತಂದ. ನಮ್ಮ ಕಂಕಣಬೆಟ್ಟಿನ ಉಮೇಶಾಚಾರಿ ಇದ್ದಾನಲ್ಲ ಅವನು ಕಾದ ಪಿಕ್ಕಾಸಿನ ತುದಿಯನ್ನು ಹೇಗೆ ಬಡಿಬಡಿದು ಹದ ಮಾಡುತ್ತಾನೆ ಎಂದು ನೀವು ನೋಡಿದ್ದೀರೋ ಇಲ್ಲವೋ ಗೊತ್ತಿಲ್ಲ, ಈ ಹುಡುಗನೂ ಒಂದೊಂದು ಪೆರ್ಮಾರಿಯ ತಲೆಗೂ ಲೆಕ್ಕದ ಎರಡೆರಡು ಪೆಟ್ಟು ಬೀಸಿ ಬೀಸಿ ಬಡಿದ ನೋಡಿ ಅವುಗಳ ತಲೆ ಒಡೆದು ಅಪ್ಪಚ್ಚಿಯಾಯಿತು. ಮರುಕ್ಷಣ ಅವು ಅಲ್ಲಲ್ಲೇ ನರಳಾಡಿ ಪ್ರಾಣಬಿಟ್ಟವು. ಬಳಿಕ ಅವರು ಅವುಗಳನ್ನು ಚೀಲಕ್ಕೆ ತುಂಬಿಸಿಕೊಂಡು ಗುಡಿಸಲಿನತ್ತ ಹೋದರು. ಅದನ್ನೂ ಪದಾರ್ಥ ಮಾಡಿ ತಿನ್ನುತ್ತಾರಂತೆ ಅವರು!’ ‘ಅಯ್ಯೋ ದೇವರೇ, ನೀವೆಲ್ಲ ಮಹಾಪಾಪಿಗಳು ಮಾರಾಯಾ!’ ಎಂದು ವಿಷಾದದಿಂದ ನಕ್ಕ ಗುರೂಜಿ, ‘ಅದೆಲ್ಲ ಹಾಗಿರಲಿ ಶಂಕರ. ನೀನು ಹೇಳಬೇಕೆಂದಿದ್ದ ವಿಷಯವನ್ನು ಕೊನೆಗೂ ಹೇಳಲೇ ಇಲ್ಲವಲ್ಲ? ನಮಗೂ ಪೂಜೆಗೆ ಹೊತ್ತಾಯಿತು ಮಾರಾಯಾ…!’ ಎಂದು ಅವನ ಮೂಕ ಜೀವರಾಶಿಯ ಮಾರಣಹೋಮದ ಕಥೆಗೆ ಮುಕ್ತಾಯ ಹಾಡಿದರು. ಆಗ ಶಂಕರ ಪೆಚ್ಚಾದ. ಆದರೂ ಸಂಭಾಳಿಸಿಕೊಂಡು, ‘ಓಹೋ, ಹೌದಲ್ಲವಾ ಗುರೂಜಿ. ನಮ್ಮ ಕಥೆ ಎಲ್ಲೆಲ್ಲಿಗೋ ಹೋಯಿತು. ಸರಿ, ಈಗ ಹೇಳುತ್ತೇನೆ ಕೇಳಿ’ ಎಂದವನು ಮುಖ್ಯ ವಿಷಯಕ್ಕೆ ಬಂದ. ‘ನನ್ನ ಜಾಗದ ಕಥೆ ಹೇಳಿದೆನಲ್ಲ ಅದರ ಮೂಲ ವಾರಸುದಾರರು ಅಮೆರಿಕದಲ್ಲೆಲ್ಲೋ ಇದ್ದಾರಂತೆ ಗುರೂಜಿ. ಅವರ ಪರವಾಗಿ ನನ್ನ ಜೊತೆ ಅದರ ವ್ಯವಹಾರ ಮಾಡಿದವನು ಅಬ್ದುಲ್ ರಜಾಕ್ ಅಂತ. ಅವನೂ ನನಗೆ ಒಳ್ಳೆಯ ಪರಿಚಯಸ್ಥ. ಅವನ ಕುಟುಂಬಕ್ಕೂ ಜಾಗದವರ ಕುಟುಂಬಕ್ಕೂ ಹಿಂದಿನಿಂದಲೂ ಬಹಳ ಹತ್ತಿರವಂತೆ. ಹಾಗಾಗಿ ನಾನು ಆ ಜಾಗದ ರೆಕಾರ್ಡ್ ಪರೀಕ್ಷಿಸಿ ಎಲ್ಲವೂ ಸರಿಯಾಗಿದೆ ಅಂತ ತಿಳಿದ ಮೇಲೆ ಅಡ್ವಾನ್ಸ್ ಕೊಟ್ಟು ಕಾಡು ಕಡಿಯಲಾರಂಭಿಸಿದೆ. ಆದರೆ ಅದು ಮುಗಿಯುವಷ್ಟರಲ್ಲಿ ಒಂದು ದೊಡ್ಡ ತಾಪತ್ರಯ ಬಂದು ವಕ್ಕರಿಸಿತು ನೋಡಿ! ಆ ಜಾಗವು ಶೆಟ್ಟರೊಬ್ಬರ ಮನೆತನಕ್ಕೆ ಸೇರಿದ್ದಂತೆ. ಅದರೊಳಗಿನ ಕಾಡು ಅವರ ಮೂಲದ ದೈವಭೂತಗಳ ಸ್ಥಾನವಂತೆ. ಆ ಕಾಡಿನೊಳಗೆ ನಾಗ, ಪಂಜುರ್ಲಿ, ನಂದಿಗೋಣ, ಲೆಕ್ಕೆಸಿರಿ, ಕ್ಷೇತ್ರಪಾಲ ಮತ್ತು ಗುಳಿಗ ದೈವಗಳ ಗುಂಡಗಳಿದ್ದವಂತೆ! ನಮ್ಮ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳು ಕೆಲಸ ಮಾಡುವಾಗ ಒಂದು ಕಡೆ ವಿಶಾಲ ಜಾಗದಲ್ಲಿ ತರಗೆಲೆಯ ರಾಶಿಯ ಮಧ್ಯೆ ಬಹಳ ಹಿಂದಿನ ಕಾಲದ ಸವೆದು ಹೋದ ಹತ್ತಾರು ಮುರಕಲ್ಲುಗಳು ಸಿಕ್ಕಿದ್ದವು ಗುರೂಜಿ. ಆದರೆ ನನಗೇನು ಗೊತ್ತಿತ್ತು ಅವು ಭೂತದ ಕಲ್ಲುಗಳು ಅಂತ? ಹಾಗಾಗಿ ಅಲ್ಲಿನ ಮಣ್ಣು ಲೋಡು ಮಾಡುವಾಗ ಆ ಕಲ್ಲುಗಳು ಮಣ್ಣಿನೊಳಗೆಲ್ಲೋ ಸೇರಿಕೊಂಡು ಈಗ ಯಾರ ಮನೆಯ ಅಡಿಪಾಯದೊಳಗೋ ಅಥವಾ ಪೊಟ್ಟು ಬಾವಿಯೊಳಗೋ ಬಿದ್ದು ಮುಚ್ಚಿ ಹೋಗಿವೆಯೋ ಯಾರಿಗೆ ಗೊತ್ತು?’ ಎಂದು ಶಂಕರ ಮಾತು ನಿಲ್ಲಿಸಿ ಯಾವುದೋ ಚಿಂತೆಗೆ ಬಿದ್ದ. ಆಗ ಏಕನಾಥರಿಗೆ ಸಂಗತಿ ಮೆಲ್ಲನೆ ಮನವರಿಕೆಯಾಗತೊಡಗಿತು. ಆದ್ದರಿಂದ ಅವರು, ‘ಬೇರೇನು ತೊಂದರೆಯಾಗಿದೆ ಮಾರಾಯಾ, ಅದನ್ನೂ ಹೇಳು…?’ ಎಂದರು ಮೃದುವಾಗಿ.    ಆಗ ಶಂಕರ ತನ್ನ ಹಿಂತಲೆಯನ್ನೊಮ್ಮೆ ಅಸಹನೆಯಿಂದ ಕೆರೆದುಕೊಂಡವನು, ‘ಈಗ ಒಂದು ದೊಡ್ಡ ಫಜೀತಿಯಾಗಿದೆ ಗುರೂಜಿ.

Read Post »

ಇತರೆ, ದಾರಾವಾಹಿ

ದಾರಾವಾಹಿ ಅಧ್ಯಾಯ: 14 ಶಂಕರನ ರೋಚಕ ಪ್ರಹಸನವನ್ನು ಏಕನಾಥರು ತಮ್ಮ ಕಣ್ಣು ಕಿವಿಗಳೆರಡನ್ನೂ ಒಂದು ಮಾಡಿ ಅರೆಬಾಯಿ ಬಿಟ್ಟುಕೊಂಡು ಕೇಳುತ್ತಿದ್ದರೆ ಅತ್ತ ದೇವಕಿ ಒಳಕೋಣೆಯ ದಾರಂದಕ್ಕೊರಗಿ ಕುತೂಹಲದಿಂದ ಆಲಿಸುತ್ತಿದ್ದಳು. ಆದರೆ ಅವಳನ್ನು ಗಮನಿಸಿದ ಮೇಲೆಯೇ ಶಂಕರನ ಕಥೆಯಲ್ಲಿ ದುಪ್ಪಟ್ಟು ನವರಸಗಳು ತುಂಬಿ ತುಳುಕತೊಡಗಿದವು ಎಂಬುದು ಏಕನಾಥರಿಗೆ ತಿಳಿಯಲಿಲ್ಲ. ಆದ್ದರಿಂದ ಕಥೆ ಕೇಳುವ ಆತುರದಲ್ಲಿದ್ದ ಅವರು, ‘ಮತ್ತೇನಾಯಿತು ಮಾರಾಯಾ…? ಆ ಹಂದಿ ನಿನ್ನ ಪುರಂದರಣ್ಣನ ಕುಂಡೆಗೆ ತಿವಿದೇ ಬಿಟ್ಟಿತಾ ಹೇಗೇ…!’ ಎಂದು ಹಾಸ್ಯ ಮಾಡಿ ನಕ್ಕರು. ಆಗ ಶಂಕರ ಮರಳಿ ಕಥೆ ಮುಂದುವರೆಸಿದ. ‘ಇಲ್ಲ ಗುರೂಜಿ, ಅದು ಇನ್ನೇನು ತಿವಿದೇ ಬಿಟ್ಟಿತು ಎಂಬಷ್ಟರಲ್ಲಿ ಆ ಕಾಡು ಜನರ ತಂಡದ ಸಪೂರ ಓಟೆಯಂತಿದ್ದ ಯುವಕನೊಬ್ಬ ಎಲ್ಲಿದ್ದನೋ ರಪ್ಪನೆ ಧಾವಿಸಿ ಬಂದು ಹಂದಿಯೆದುರು ನೆಗೆದು ನಿಂತುಬಿಟ್ಟ! ಅವನ ಕೈಯಲ್ಲೊಂದು ದೊಣ್ಣೆಯಿತ್ತು. ಆ ಹುಡುಗನನ್ನು ಕಂಡ ಹಂದಿಯು ಯಮದರ್ಶನವಾದಂತೆ ಬೆಚ್ಚಿ ಬಿದ್ದದ್ದು, ಅವನನ್ನೇ ಹಿಡಿದು ತಿವಿಯುವುದನ್ನು ಬಿಟ್ಟು ಸರಕ್ಕನೆ ಹಿಂದಿರುಗಿ ಕರ್ಕಶವಾಗಿ ಘೀಳಿಡುತ್ತ ಉಳಿದ ಹಂದಿಗಳತ್ತ ಧಾವಿಸಿ ಹೋಗಿ ತಾನೂ ಬಲೆಗೆ ಬಿದ್ದುಬಿಟ್ಟಿತು! ಆಗ ನಮಗೆಲ್ಲ ಹೋದ ಜೀವ ಬಂದಂತಾಯಿತು ನೋಡಿ. ನಂತರ ನಾನು ಹೇಗೋ ಕಷ್ಟಪಟ್ಟು ಆ ದಪ್ಪ ಮರದಿಂದ ಇಳಿದೆ. ಅಷ್ಟರಲ್ಲಿ ತುಂಬಾ ದೂರ ಓಡಿ ಹೋಗಿದ್ದ ಪುರಂದರಣ್ಣನೂ ಕುಂಟುತ್ತ ತೇಕುತ್ತ ಹಿಂದಿರುಗಿದರು. ಆದರೆ ಪಾಪ ಅವರು ಮರ ಹತ್ತಲು ಪ್ರಯತ್ನಿಸಿದ್ದ ರಭಸಕ್ಕೆ ಅವರ ಹೊಟ್ಟೆಯ ಒಂದೆರಡು ಕಡೆ ಚರ್ಮವೇ ಕಿತ್ತು ಹೋಗಿ ರಕ್ತ ಸುರಿಯುತ್ತಿತ್ತು.   ರಫೀಕ್ ಮಾತ್ರ ಎಲ್ಲಿದ್ದನೋ? ಸುಮಾರು ಹೊತ್ತಿನ ಮೇಲೆ ಅಷ್ಟು ದೂರದಿಂದ ಅವನ ತಲೆ ಕಾಣಿಸಿತು. ಹೆದರಿ ಕಂಗಾಲಾಗಿದ್ದ ಅವನು ತನ್ನ ಸುತ್ತಮುತ್ತ ಬಹಳ ಜಾಗ್ರತೆಯಿಂದ ದಿಟ್ಟಿಸುತ್ತ, ಹಂದಿಗಳೆಲ್ಲ ಬಲೆಗೆ ಬಿದ್ದಿವೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಬೆಲ್ಚಪ್ಪನಂತೆ ಬಂದು ನಮ್ಮ ಹತ್ತಿರ ನಿಂತುಕೊಂಡ. ಆದರೆ ಇಷ್ಟೆಲ್ಲ ನಡೆಯುವಾಗ ಅಲ್ಲಿ ಇನ್ನೊಂದು ಗಮ್ಮತ್ತೂ ನಡೆಯುತ್ತಿತ್ತು ಗುರೂಜೀ! ಏನು ಗೊತ್ತುಂಟಾ, ಆ ಮುದುಕ ಕಾಡು ಮನುಷ್ಯನಿದ್ದನಲ್ಲ ಅವನು ಮತ್ತು ಅವನ ಸಂಗಡಿಗರೆಲ್ಲ ಸೇರಿ ಸುಮಾರು ದೂರದಲ್ಲಿ ನಿಂತುಕೊಂಡು ನಮ್ಮ ಬೊಬ್ಬೆ ಮತ್ತು ಪ್ರಾಣಸಂಕಟದ ಒದ್ದಾಟವನ್ನೆಲ್ಲ ನೋಡುತ್ತ ಬಿದ್ದು ಬಿದ್ದು ನಗುತ್ತಿದ್ದರು ಕಳ್ಳ ಬಡ್ಡಿಮಕ್ಕಳು! ಆ ಹೊತ್ತು ನನಗವರ ಮೇಲೆ ಬಂದ ಸಿಟ್ಟು ಅಷ್ಟಿಷ್ಟಲ್ಲ ನೋಡಿ! ರಪ್ಪನೆ ಮುದುಕನನ್ನು ಕರೆದು, ‘ನೀನೆಂಥದು ಮಾರಾಯಾ… ಆ ಮೃಗಗಳನ್ನು ಓಡಿಸಿಕೊಂಡು ಬರುವ ಮೊದಲು ನಮಗೆ ಸೂಚನೆ ಕೊಡುವುದಲ್ಲವಾ…? ಅವುಗಳಿಂದ ನಮ್ಮನ್ನು ಕೊಲ್ಲಿಸಬೇಕೆಂದಿದ್ದಿಯಾ ಹೇಗೇ…?’ ಎಂದು ಜೋರಾಗಿ ಗದರಿಸಿ ಬಿಟ್ಟೆ. ಅದಕ್ಕಾತ ‘ಹ್ಹೆಹ್ಹೆಹ್ಹೆ, ಇಲ್ಲಿಲ್ಲ ಧಣೇರಾ, ನಮ್ ಬೇಟೆಯಾಗ ಅಂಥದ್ದೆಲ್ಲಾ ನಡೆಯಾಕಿಲ್ರೀ. ನೀವೆಲ್ಲ ಸುಖಾಸುಮ್ಮನೆ ಹೆದರಿ ಎಗರಾಡಿಬಿಟ್ಟಿರಷ್ಟೇ!’ ಎಂದು ಇನ್ನಷ್ಟು ನಗುತ್ತ ಹೇಳಿದ. ಇಂಥ ಕೆಲಸದಲ್ಲಿ ಪಳಗಿದ್ದ ಅವರೆಲ್ಲ ಬೇಕೆಂದೇ ನಮ್ಮನ್ನು ಹೆದರಿಸಿ ಮಜಾ ತೆಗೆದುಕೊಳ್ಳುತ್ತಿದ್ದರು ಅಂತ ನಮಗೆ ಆಮೇಲೆ ಅರ್ಥವಾಗಿ ಮುದುಕನನ್ನು ಹಿಡಿದು ಎರಡು ಬಾರಿಸುವ ಅಂತ ತೋರಿತು. ಆದರೂ ಸುಮ್ಮನಾದೆ’ ಎಂದ ಶಂಕರ ಆ ಘಟನೆಯನ್ನು ನೆನೆದು ಜೋರಾಗಿ ನಗತೊಡಗಿದ. ಏಕನಾಥರಿಗೂ ನಗು ಉಕ್ಕಿ ಬಂತು. ಅತ್ತ ದಾರಂದದೆಡೆಯಲ್ಲಿ ದೇವಕಿಯೂ ನಗುತ್ತಿದ್ದಳು. ಆದರೆ ಅವಳನ್ನು ಗಮನಿಸದ ಏಕನಾಥರು, ‘ಲೇ, ಇವಳೇ…ಎರಡು ಕಪ್ಪು ಕಾಫಿ ಮಾಡಿಕೊಂಡು ಬಾರೇ… ಹಾಗೇ ತಿನ್ನಲೇನಾದರೂ ತಾ…!’ ಎಂದು ಗಟ್ಟಿ ಸ್ವರದಲ್ಲಿ ಕೂಗಿದಾಗ ಅವಳು ಬೆಚ್ಚಿಬಿದ್ದು, ‘ಆಯ್ತೂರೀ…!’ ಎಂದು ಒಳಗೆ ಓಡಿದಳು. ಗುರೂಜಿಯ ಪತ್ನಿ ಹೊರಟು ಹೋದುದನ್ನು ಕಂಡ ಶಂಕರನಿಗೆ ಮುಂದಿನ ಕಥೆ ಹೇಳುವ ಹುರುಪು ಸ್ವಲ್ಪ ತಗ್ಗಿತು. ಆದರೂ ಮುಂದುವರೆಸಿದ. ‘ಅಲ್ಲಾ ಗುರೂಜಿ, ಆ ಕಾಡು ಜನರು ಎಂಥ ಭಯಂಕರ ಮನುಷ್ಯರು ಅಂತೀರೀ! ಸುಮಾರು ಹದಿನೆಂಟು ಇಪ್ಪತ್ತರ ವಯಸ್ಸಿನ ಮೂವರು ಹುಡುಗರು, ಬಲೆಗೆ ಬಿದ್ದು ಆಕಾಶ ಸಿಡಿಯುವಂತೆ ಹೂಳಿಡುತ್ತಿದ್ದ ಆ ಮೃಗಗಳತ್ತ ಹೆಬ್ಬುಲಿಗಳಂತೆ ನೆಗೆದರು. ಯಾವ ಮಾಯಕದಿಂದಲೋ ಅವುಗಳ ಹಿಂಗಾಲುಗಳನ್ನು ಸಟಕ್ಕನೆ ಹಿಡಿದು ಮೇಲೆತ್ತಿ ಅದೇ ವೇಗದಲ್ಲಿ ನೆಲಕ್ಕೆ ಕೆಡಹಿ ಬಿಗಿಯಾಗಿ ತುಳಿದು ಹಿಡಿದುಕೊಂಡು ಕ್ಷಣದಲ್ಲಿ ಅವುಗಳ ಹೆಡೆಮುರಿ ಕಟ್ಟಿದರು. ಅವು ಕಚ್ಚದಂತೆ ಮೂತಿಗೂ ಹಗ್ಗ ಬಿಗಿದರು! ಅದನ್ನೆಲ್ಲ ನೋಡುತ್ತಿದ್ದ ಆ ಮುದುಕ ಅವರಿಗೇನೋ ಸಂಜ್ಞೆ ಮಾಡಿದ. ಆದರೆ ಅಷ್ಟರಲ್ಲಿ ನಮಗೆ ಮತ್ತೊಂದು ಮಂಡೆಬಿಸಿ ಎದುರಾಯಿತು ನೋಡಿ!’ ಎಂದು ಶಂಕರ ಕೆಲವುಕ್ಷಣ ಮಾತು ನಿಲ್ಲಿಸಿದ. ‘ಹೌದಾ…ಮತ್ತೇನಾಯಿತು ಮಾರಾಯಾ, ಮತ್ತೆ ಅಲ್ಲಿಗೆ ಕಾಡುಕೋಣಗಳೇನಾದರೂ ನುಗ್ಗಿದವಾ ಹೇಗೆ?’ ಎಂದು ಗುರೂಜಿ ಮರಳಿ ಹಾಸ್ಯ ಮಾಡಿದರು. ‘ಅಯ್ಯೋ, ಅದಲ್ಲ ಗುರೂಜಿ. ಸುಮಾರು ದೂರದಲ್ಲಿ ಯಾವನೋ ಒಬ್ಬ ಯುವಕ ನಿಂತುಕೊಂಡು ನಮ್ಮ ಕೆಲಸದ ಫೋಟೋಗಳನ್ನು ತೆಗೆಯುತ್ತಿದ್ದ! ನಮ್ಮ ತಂಡದ ಹುಡುಗ ಅದನ್ನು ನೋಡಿದವನು ಪುರಂದರಣ್ಣನಿಗೆ ತಿಳಿಸಿದ. ಅವರಿಗೆ ಆತಂಕವಾಯ್ತು. ಯಾಕೆಂದರೆ ಈಗ ಕಾಡುಪ್ರಾಣಿಗಳನ್ನು ಹಿಡಿಯುವುದು ದೊಡ್ಡ ಅಪರಾಧವಂತಲ್ಲ? ಅವನನ್ನು ಹೇಗೆ ತಡೆಯುವುದೆಂದು ತೋಚದೆ, ಎಲ್ಲರೂ ಕೈಗೆ ಸಿಕ್ಕಿದ ಬಡಿಗೆಗಳನ್ನೆತ್ತಿಕೊಂಡು ಅವನತ್ತ ಓಡಿದೆವು. ಆದರೆ ಅವನು ಭಯಂಕರ ಆಸಾಮಿ ಗುರೂಜಿ. ನಾವು ಅಷ್ಟು ಜನ ಅವನ ಮೇಲೆ ನುಗ್ಗಿ ಹೋದರೂ ಅವನು ಸ್ವಲ್ಪವೂ ಹೆದರದೆ, ನಾವೆಲ್ಲ ಓಡಿ ಬರುವುದನ್ನೂ ಚಕಚಕಾಂತ ಫೋಟೋ ತೆಗೆಯುತ್ತಲೇ ಇದ್ದ. ಹಾಗಾಗಿ ಅವನನ್ನು ಹೆದರಿಸಬೇಕೆಂದಿದ್ದ ಪುರಂದರಣ್ಣನೇ ಅಳುಕಿದರು. ಆದರೆ ನಾವೆಲ್ಲ ಅವರ ಸುತ್ತ ಇದ್ದುದನ್ನು ಕಂಡು ಧೈರ್ಯ ತಂದುಕೊಂಡವರು, ‘ಹೇ, ಹೇ… ಯಾರು ಮಾರಾಯಾ ನೀನು? ಫೋಟೋ ಗೀಟೋ ತೆಗೀಬಾರ್ದು. ಹೋಗ್ ಹೋಗ್!’ ಎಂದು ಗದರಿಸಿದರು. ಅವನು ಆಗಲೂ ನಮ್ಮನ್ನು ಕ್ಯಾರೇ ಅನ್ನದೆ ದಿಟ್ಟಿಸಿದವನು, ‘ನೋಡೀ, ನಾನೊಬ್ಬ ಪ್ರೆಸ್ ರಿಪೋರ್ಟರ್. ಆ ಪ್ರಾಣಿಗಳನ್ನು ಯಾಕೆ ಹಿಡಿಯುತ್ತಿದ್ದೀರಿ? ವನ್ಯಜೀವಿಗಳನ್ನು ಬೇಟೆಯಾಡೋದು ಆಫೆನ್ಸ್ ಅಂತ ಗೊತ್ತಿಲ್ವಾ ನಿಮ್ಗೇ? ಈಗಲೇ ಅವುಗಳನ್ನು ರಿಲೀಸ್ ಮಾಡಿ. ಇಲ್ಲದಿದ್ದರೆ ಎಲ್ಲರ ಮೇಲೆ ಕೇಸು ಹಾಕಬೇಕಾಗುತ್ತದೆ ಹುಷಾರ್!’ ಎಂದು ನಮಗೇ ಧಮಕಿ ಹಾಕುವುದಾ…? ಅವ ಪೇಪರಿನವನೆಂದ ಕೂಡಲೇ ಪುರಂದರಣ್ಣ ಸಮಾ ತಣ್ಣಗಾದರು. ಆದರೂ ತಪ್ಪಿಸಿಕೊಳ್ಳುವ ಉಪಾಯ ಅವರ ನಾಲಿಗೆಯ ತುದಿಯಲ್ಲೇ ಇತ್ತು ನೋಡಿ, ‘ನೀವು ಯಾರಾದರೂ ನಮಗೇನ್ರೀ? ಆ ಹಂದಿಗಳು ನಮ್ಮ ಬೇಸಾಯವನ್ನೆಲ್ಲ ತಿಂದು ಲಗಾಡಿ ತೆಗಿತಾ ಇರ್ತಾವೆ. ಅದಕ್ಕೆ ಕೆಲವನ್ನು ಹಿಡಿದು ಬೇರೆ ಕಾಡಿಗೆ ಬಿಡುತ್ತೇವೆ ಅಂತ ಅರಣ್ಯ ಇಲಾಖೆಯ ಪರ್ಮೀಷನ್ ತೆಗೆದುಕೊಂಡೇ ಹಿಡಿಸುತ್ತಿರುವುದು!’ ಎಂದು ತಾವೂ ರೂಬಾಬಿನಿಂದ ಉತ್ತರಿಸಿದರು. ‘ಹೌದಾ! ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟಿದೆಯಾ? ಹಾಗಾದರೆ ಅವರೆಲ್ಲಿ? ಒಬ್ಬರಾದರೂ ಇರಬೇಕಿತ್ತಲ್ಲಾ? ಅಥವಾ ಅವರ ಅನುಮತಿ ಪತ್ರವಾದರೂ ನಿಮ್ಮಲ್ಲಿರಬೇಕು, ಎಲ್ಲಿದೆ ತೋರಿಸಿ…?’ ಎಂದು ಅವನೂ ಜೋರಿನಿಂದ ಪ್ರಶ್ನಿಸಿದ.     ಆಗ ಪುರಂದರಣ್ಣನ ದಮ್ಮು ಖಾಲಿಯಾಯ್ತು. ‘ಅದೂ, ಏನಾಯ್ತೆಂದರೇ…?’ ಎಂದು ಬ್ಬೆ…ಬ್ಬೆ…ಬ್ಬೇ…! ಅಂದವರು ತಕ್ಷಣ ಸಂಭಾಳಿಸಿಕೊಂಡು, ‘ಅದು ಹಾಗಲ್ಲ ಇವ್ರೇ, ಇಲ್ಲಿನ ಕೆಲಸ ಮುಗಿದ ನಂತರ ಆ ಹಂದಿಗಳನ್ನು ಕೊಂಡೊಯ್ದು ಇಲಾಖೆಗೆ ಒಪ್ಪಿಸುತ್ತೇವೆ. ನಿಮಗೆ ನಂಬಿಕೆಯಿಲ್ಲದಿದ್ದರೆ ಒಂದು ನಂಬರ್ ಕೊಡುತ್ತೇನೆ. ಫೋನ್ ಮಾಡಿ ತಿಳಿದುಕೊಳ್ಳಿ. ನಮ್ಮ ಹಿರಿಯರ ಕಾಲದಿಂದಲೂ ನಾವು ಬೇಸಾಯವನ್ನೇ ನಂಬಿಕೊಂಡು ಬದುಕುತ್ತಿರುವವರು ಮಾರಾಯ್ರೇ! ಆದರೇನು ಮಾಡುವುದು? ಈಗೀಗ ಈ ದರಿದ್ರ ಪ್ರಾಣಿಗಳು ಒಂದು ಮುಡಿ ಭತ್ತ ಬೆಳೆಯಲೂ ಬಿಡುತ್ತಿಲ್ಲ. ಹೀಗಾದರೆ ನಮ್ಮಂಥ ಬಡ ರೈತರು ಬದುಕುವುದಾದರೂ ಹೇಗೆ ಹೇಳಿ? ಜನರ ಕಷ್ಟಸುಖಗಳನ್ನು ತಿಳಿದು ವ್ಯವಹರಿಸುವ, ಸಹಾಯ ಮಾಡುವ ನಿಮ್ಮಂಥವರೇ ನಮಗೆ ತೊಂದರೆ ಕೊಟ್ಟರೆ ಹೇಗೆ…?’ ಎಂದು ಅವನೊಡನೆ ದೈನ್ಯದಿಂದ ಮಾತಾಡಿದರು. ಆದರೆ ಅವನು ಅದಕ್ಕೆ ಉತ್ತರಿಸಲಿಲ್ಲ. ಹಾಗಾಗಿ ಅವರೂ ಮತ್ತೇನೂ ಮಾತಾಡದೆ ಹಿಂದಿರುಗಿದಾಗ ನಾವೂ ಅವರನ್ನು ಹಿಂಬಾಲಿಸಬೇಕಾಯ್ತು.    ಒಂದು ವೇಳೆ ಪುರಂದರಣ್ಣ ಆವಾಗ, ‘ಏಯ್, ಏನ್ ನೋಡ್ತಿದ್ದೀರಾ? ಆ ಮಗನನ್ನು ಹಿಡ್ಕೊಂಡು ನಾಲ್ಕು ಬಡಿಯಿರನಾ…!’ ಅಂತ ಒಂದೇ ಒಂದು ಮಾತು ಅನ್ನುತ್ತಿದ್ದರು ಅಂತಿಟ್ಟುಕೊಳ್ಳಿ ಗುರೂಜೀ, ಆ ಬಡ್ಡೀಮಗನ ಕ್ಯಾಮರಾವನ್ನಲ್ಲೇ ಕಲ್ಲಿಗೆ ಬಡಿದು ಪುಡಿ ಮಾಡಿ ಅವನಿಗೆ ನಾಲ್ಕು ಒದ್ದು ಓಡಿಸಲು ನಮ್ಮ ಕಾಡು ಹುಡುಗರೆಲ್ಲ ತುದಿಗಾಲಿನಲ್ಲಿ ನಿಂತಿದ್ದರು ಗೊತ್ತುಂಟಾ! ಆದರೆ ನಮ್ಮವರೇ ಠುಸ್ಸಾದ ಮೇಲೆ ಏನು ಮಾಡುವುದು ಹೇಳಿ? ಅವನೂ ಮತ್ತೇನೂ ಹೇಳದೆ ಹೊರಟು ಹೋದ. ಅಷ್ಟಾದ ನಂತರ ಇನ್ನೊಂದು ಸಮಸ್ಯೆಯಾಯ್ತು. ಸ್ವಲ್ಪಹೊತ್ತಿನಲ್ಲಿ ಪುರಂದರಣ್ಣನ ಪರಿಚಯದ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಒಬ್ಬ ಕರೆ ಮಾಡಿದವನು, ‘ನಿಮ್ಮ ಮೇಲೆ ಪೇಪರ್ ರಿಪೋರ್ಟರ್ ಒಬ್ಬ ನಮ್ಮ ಹೈಯರ್ ಆಫೀಸರ್‍ಗೆ ಕಂಪ್ಲೇಂಟ್ ಮಾಡಿದ್ದಾನೆ. ಹಾಗಾಗಿ ನಾವು ಯಾವ ಕ್ಷಣದಲ್ಲಾದರೂ ಸ್ಪಾಟಿಗೆ ಬರಬಹುದು. ಆದಷ್ಟು ಬೇಗ ಹಂದಿಗಳನ್ನು ಅಲ್ಲಿಂದ ಸಾಗಿಸಿಬಿಟ್ಟು ಬೇಟೆಯಾಡಿದ ಯಾವ ಗುರುತೂ ಸಿಗದಂತೆ ನೋಡಿಕೊಳ್ಳಿ!’ ಅಂತ ಸೂಚನೆ ಕೊಟ್ಟ. ಅಷ್ಟು ತಿಳಿದ ನಾವೆಲ್ಲ ಕಂಗಾಲಾಗಿ ಕೆಲಸವನ್ನು ನಿಲ್ಲಿಸಿದೆವು. ಆ ಬುಡಕಟ್ಟಿನ ಜನರು ಕೂಡಲೇ ಹಂದಿಗಳನ್ನೂ, ಬೇಟೆಯ ಸಾಮಾನುಗಳನ್ನೂ ಹೊತ್ತುಕೊಂಡು ಹೊರಟರು. ನಾವೂ ಅವರನ್ನು ಹಿಂಬಾಲಿಸಿದೆವು. ಆದರೆ ಪುರಂದರಣ್ಣನಿಗೆ ಆ ಪೇಪರಿನವನ ಮೇಲೆ ವಿಪರೀತ ಸಿಟ್ಟು ಬಂತು. ‘ಆ ಬಡ್ಡೀಮಗನ ಸೊಕ್ಕು ಮುರಿಯಲೇಬೇಕು!’ ಎಂದು ಕುದಿದರು. ಆದರೆ ಅದಕ್ಕಿಂತ ಮೊದಲು ಅವನ ಪೂರ್ವಾಪರ ವಿಚಾರಿಸಲು ತಮ್ಮ ಅಳಿಯ ರವಿಪ್ರಕಾಶನಿಗೆ ಫೋನ್ ಮಾಡಿದರು. ರವಿಪ್ರಕಾಶನಿಂದ ಅವನು ಈಶ್ವರಪುರದ ಸ್ಥಳೀಯ ಪತ್ರಿಕೆಯೊಂದರ ಮುಖ್ಯ ವರದಿಗಾರನಲ್ಲದೇ ಬೆಂಗಳೂರಿನ ಪ್ರಸಿದ್ಧ ಪ್ರಾಣಿ ದಯಾ ಸಂಸ್ಥೆಯೊಂದರ ಸದಸ್ಯನೂ ಆಗಿದ್ದಾನೆ ಎಂಬ ಸಂಗತಿ ತಿಳಿಯಿತು.    ಪ್ರಾಣಿ ದಯಾ ಸಂಘ ಎಂದ ಕೂಡಲೇ ನನಗೂ ಹೆದರಿಕೆಯಾಯ್ತು ಗುರೂಜಿ! ಅವರು ಹಾಕುವ ಕೇಸು ಯಾರಿಗೆ ಬೇಕು ಮಾರಾಯ್ರೇ. ಜೀವನಪರ್ಯಂತ ಬಂಜರವಾಗುತ್ತದೆ! ಹಾಗೇನಾದರೂ ಆದರೆ ನನ್ನ ಅಷ್ಟು ದೊಡ್ಡ ಜಮೀನಿನ ಕೆಲಸ ನಿಂತು, ನಾನು ಅಲಕ್ಕ ಲಗಾಡಿ ಹೋಗುವುದಂತು ಗ್ಯಾರಂಟಿ!’ ಎಂದು ಶಂಕರ ಸೋಲೆಪ್ಪಿಕೊಂಡ. ಅದಕ್ಕೆ ಏಕನಾಥರೂ, ‘ಹೌದು ಹೌದು ಮಾರಾಯಾ. ಯಾರ ತಂಟೆಯಾದರೂ ಬೇಕು. ಈ ಪ್ರಾಣಿ ದಯಾ ಸಂಘ ಮತ್ತು ಅರಣ್ಯ ಇಲಾಖೆಯವರ ಸಹವಾಸವಲ್ಲ. ವಿಶ್ವ ಪರಿಸರ ಸಂಸ್ಥೆಯೂ ಈಚೆಗೆ ಪರಿಸರ ಸಂರಕ್ಷಣಾ ಚಟುವಟಿಕೆಯನ್ನು ಕಟ್ಟುನಿಟ್ಟಾಗಿ ಆರಂಭಿಸಿರುವುದು ಪೇಪರಿನಲ್ಲಿ ಆಗಾಗ ಬರುತ್ತಲೇ ಇರುತ್ತದೆ. ಹಾಗಾಗಿ ಅರಣ್ಯ ಮತ್ತು ವನ್ಯಜೀವಿ ಕಾಯ್ದೆಯೂ ಬಹಳ ಬಿಗುಗೊಂಡಿದೆ!’ ಎಂದು ಶಂಕರನ ಭಯವನ್ನು ತಾವೂ ಸಮರ್ಥಿಸಿಕೊಂಡರು. ಶಂಕರ ಮತ್ತೆ ಮಾತು ಮುಂದುವರೆಸಿದ. ‘ಹೌದಂತೆ ಗುರೂಜಿ, ಪುರಂದರಣ್ಣನೂ ಅದಕ್ಕೇ ಸುಮ್ಮನಾದರು. ಆದರೆ ಅವರು ಆ ಸಮಸ್ಯೆಯನ್ನು ಎಂಥ ಉಪಾಯದಿಂದ ನಿವಾರಿಸಿಕೊಂಡರು ಗೊತ್ತುಂಟಾ?’ ಎಂದು ಶಂಕರ ತಾವೊಂದು ಅದ್ಭುತ ಸಾಧಿಸಿದಂತೆ ನಗುತ್ತ ಅಂದ. ‘ಅಂಥದ್ದೇನು ಮಾಡಿದರು ಮಾರಾಯಾ..!’ ‘ಪುರಂದರಣ್ಣ ಕೂಡಲೇ ರಫೀಕನೊಡನೆ ಒಂದಿಷ್ಟು ‘ಸಮ್‍ಥಿಂಗ್’ ಅನ್ನು ಅರಣ್ಯ ಇಲಾಖೆಗೆ ಕಳುಹಿಸಿಕೊಟ್ಟು ಅವರ ಬಾಯಿ ಮುಚ್ಚಿಸಿದರು. ಅದರ ಬೆನ್ನಿಗೆ ಆ ಪತ್ರಕರ್ತನ ಹತ್ತಿರದ ಗೆಳೆಯನೊಬ್ಬನನ್ನೂ ಹಿಡಿದರು. ಅವನು ಇವರ ಅಳಿಯನ ದೋಸ್ತಿಯಂತೆ. ಅವನ ಹತ್ತಿರ, ‘ತಮ್ಮಿಂದ ಆಗಿರುವ ತಪ್ಪನ್ನು ಕ್ಷಮಿಸಿ, ಅರಣ್ಯ ಇಲಾಖೆಗೆ ನೀಡಿರುವ ದೂರನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ನಮ್ಮ ಪರವಾಗಿ ನೀನೇ ಅವನೊಡನೆ ವಿನಂತಿಸಿಕೊಂಡು ಅವನನ್ನು ಒಪ್ಪಿಸಬೇಕು ಮಾರಾಯಾ!’ ಎಂದು ಅವನ ಮಂಡೆ ಗಿರ್ಮಿಟ್ ಆಗುವಂತೆ ಮಾತಾಡಿ ಬೇಡಿಕೊಂಡರು. ಅವನು ಪುರಂದರಣ್ಣನಿಗೆ ಭಾರಿ ಮರ್ಯಾದೆ ಕೊಡುವವನು. ಆದ್ದರಿಂದ ಅವರ ಮಾತಿಗೆ ಕಟ್ಟುಬಿದ್ದು ಹೇಗೋ ಪತ್ರಕರ್ತನ ಮನವೊಲಿಸಿ ಕೇಸು ವಾಪಾಸ್ ಪಡೆಯುವಂತೆ ಮಾಡಿದ. ಇಲ್ಲದಿದ್ದರೆ ನನ್ನ ಜಾಗಕ್ಕೆ ಇಷ್ಟೊತ್ತಿಗೆ ದೊಡ್ಡ ‘ಸ್ಟೇ’ ಬಿದ್ದು ನಾನು ಊರುಬಿಟ್ಟೇ ಓಡಿ ಹೋಗಬೇಕಿತ್ತೋ

Read Post »

ಇತರೆ, ದಾರಾವಾಹಿ

‘ಅಲ್ಲಾ ಗುರೂಜಿ, ಇದೇನಿದು..? ಇಷ್ಟು ವರ್ಷಗಳ ಕಾಲ ಬೊಂಬೈಯಲ್ಲಿದ್ದು ಬಂದವರು ನೀವು ಏನೂ ಮಾಡಲಿಲ್ಲವಾ!?’ ಎಂದು ಬಾಯಿ ತಪ್ಪಿ ಅಂದವನು ತಕ್ಷಣ ನಾಲಗೆ ಕಚ್ಚಿಕೊಂಡ. ಆದರೆ ಬಳಿಕ ಅದನ್ನೇ ಸಮರ್ಥಿಸಿಕೊಂಡಂತೆ ಅವರನ್ನು ದಿಟ್ಟಿಸಿದ. ಅಷ್ಟು ಕೇಳಿದ ಏಕನಾಥರಿಗೆ ಅಲ್ಲೇ ಸತ್ತವಷ್ಟು ಹಿಂಸೆಯಾಯಿತು.

Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-12 ತನ್ನ ಕುತಂತ್ರಕ್ಕೆ ಬಲಿಯಾಗಿ ಬೀದಿ ಬಿಕಾರಿಯಾದ ಸಂತಾನಪ್ಪ, ಇಂದಲ್ಲ ನಾಳೆ ರಾತ್ರೋರಾತ್ರಿ ಊರು ಬಿಟ್ಟೇ ಓಡಿ ಹೋಗುತ್ತಾನೆ ಅಥವಾ ಮುಂಚಿನಂತೆಯೇ ಬಾಲ ಮುದುರಿ ಕೂಲಿನಾಲಿ ಮಾಡಿಕೊಂಡು ಬದುಕುತ್ತಾನೆ ಎಂದು ಭಾವಿಸಿದ್ದ ಶಂಕರನ ಯೋಚನೆಯು ಪರಮೇಶನ ಬಿಸಿಬಿಸಿ ಸುದ್ದಿಯಿಂದ ಪೂರ್ತಿ ತಲೆಕೆಳಗಾಗಿಬಿಟ್ಟಿತು. ಬಯಲುಸೀಮೆಯ ಒಣಹವೆಯನ್ನೂ ಖಡಕ್ ಜೋಳದ ರೊಟ್ಟಿಯೊಂದಿಗೆ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯಂಥ ವ್ಯಂಜನವನ್ನು ಜಜ್ಜಿ ಜಗಿದುಣ್ಣುತ್ತ ಒರಟು ಮಂದಿಯ ನಡುವೆ ಹುಟ್ಟಿ ಬೆಳೆದ, ಆರಡಿ ಎತ್ತರದ ಆಜಾನುಬಾಹು ಸಂತಾನಪ್ಪ ಬಡತನದ ಬೇಗೆಯಿಂದ ಮುಗ್ಧ ಪ್ರಾಣಿಯಂತೆ ವಿನಯದ ಮುಖವಾಡ ತೊಟ್ಟು ಬದುಕುತ್ತಿದ್ದನೇ ಹೊರತು ಅಸಾಮಾನ್ಯ ಧೈರ್ಯ ಕ್ರೌರ್ಯಗಳು ಅವನ ರಕ್ತದಲ್ಲೇ ಮಡುಗಟ್ಟಿದ್ದವು ಎಂಬ ಸಂಗತಿಯನ್ನು ತಿಳಿಯುವ ಚಾತುರ್ಯ ಶಂಕರನಲ್ಲಿರಲಿಲ್ಲ. ಒಬ್ಬಿಬ್ಬರು ಗಟ್ಟಿಯಾಳುಗಳಿಂದ ಸದೆಬಡಿಯಲಾಗದಷ್ಟು ಬಲಿಷ್ಠ ಆಸಾಮಿಯಾಗಿದ್ದ ಸಂತಾನಪ್ಪನಿಗೆ ತನ್ನ ಶಕ್ತಿ ಸಾಮಥ್ರ್ಯದ ಮೇಲೆ ಸಂಪೂರ್ಣ ವಿಶ್ವಾಸವಿತ್ತು. ಹಾಗಾಗಿಯೇ ಇಂದು ಒಬ್ಬಂಟಿಯಾಗಿ ಶಂಕರನ ಹುಟ್ಟಡಗಿಸಲು ಹೊರಟಿದ್ದ. ಅದಕ್ಕೆ ಸರಿಯಾಗಿ ಅಂದು ರಾತ್ರಿ ಹತ್ತು ಗಂಟೆಯ ಹೊತ್ತಿಗೆ ತನ್ನಿಬ್ಬರು ಆಳುಗಳಿಂದ, ‘ಶಂಕರಣ್ಣ, ಅವನ ಒಬ್ಬ ಸ್ನೇಹಿತನೊಂದಿಗೆ ಸಿಟಿ ಬಸ್ಸು ನಿಲ್ದಾಣ ಸಮೀಪದ ಪಾಳು ಬಿಲ್ಡಿಂಗ್‍ನ ಅಡ್ಡಾವೊಂದರಲ್ಲಿ ಕುಳಿತು ಸಾರಾಯಿ ಕುಡಿಯುತ್ತಿದ್ದಾನೆ!’ ಎಂಬ ಸಿಹಿ ಸುದ್ದಿಯೂ ಸಿಕ್ಕಿದ್ದರಿಂದ ಅವನು ತಟ್ಟನೆ ಚುರುಕಾದ. ‘ಅವ್ನೊಂದಿಗೆ ಒಟ್ಟು ಎಷ್ಟು ಮಂದಿ ಅದಾರಾ ಅಂತ ಸರಿಯಾಗಿ ನೋಡಿದ್ರಲಾ…?’ ಎಂದು ಆಳುಗಳನ್ನು ಗದರಿಸಿಯೇ ವಿಚಾರಿಸಿದ. ‘ಹೌದು ಧಣೇರಾ, ಅವ್ನ್ ಕೋಣೆಯಾಗ ಅವ್ನ್ ಕೂಡಿ ನಮಗಾ ಇಬ್ರೇ ಕಂಡವ್ರೀ…!’ ಎಂದರು ಅವರು. ಸಂತಾನಪ್ಪ ಮತ್ತೆ ತಡಮಾಡಲಿಲ್ಲ. ಕೂಡಲೇ ಶಂಕರನ ಅಡ್ಡಾಕ್ಕೆ ಧಾವಿಸಿದ. ಆ ಹೊತ್ತು ಬಸ್ಸು ನಿಲ್ದಾಣದಲ್ಲಿ ಒಂದೆರಡು ಸಿಟಿ ಬಸ್ಸುಗಳು ಕೊನೆಯ ಟ್ರಿಪ್ಪಿನ ಪ್ರಯಾಣಿಕರನ್ನು ಕಾಯುತ್ತ ನಿಂತಿದ್ದವು. ವಿದ್ಯುತ್ ಕಂಬಗಳ ಅಡಿಯಲ್ಲಿ ಅಲ್ಲೊಂದು ಇಲ್ಲೊಂದು ಗೂಡಂಗಡಿಗಳು ಆಮ್ಲೇಟ್, ಬ್ರೆಡ್ ಮಸಾಲೆಗಳಂಥ ತಿಂಡಿ ತಿನಿಸುಗಳನ್ನು ತಯಾರಿಸಲು ಮೊಟ್ಟೆ ಕಲಕುವ ಮತ್ತು ಬಾಣಲಿಯ ಠಣಠಣ ಸದ್ದು, ಗದ್ದಲಗಳು ಹಗಲಿಡೀ ಕರ್ಕಶ ಶಬ್ದ ಮಾಲಿನ್ಯದಿಂದಲೂ, ವಾಯು ಮಾಲಿನ್ಯದಿಂದಲೂ ಬೆಂದು ಬಸವಳಿದು ಈಗಷ್ಟೇ ವಿರಮಿಸಲು ಹವಣಿಸುತ್ತಿದ್ದ ಆ ಇಡೀ ಪ್ರದೇಶದ ನೀರವ ಮೌನವನ್ನು ಕದಡುತ್ತಿದ್ದವು. ಸಂತಾನಪ್ಪ ಬಸ್ಸು ನಿಲ್ದಾಣದ ಮೇಲೆ ಎಡಭಾಗದಲ್ಲಿರುವ ಪ್ರೇಮ ಬೇಕರಿಯ ಎದುರು ಬಂದು ಕಾರು ನಿಲ್ಲಿಸಿದ. ಥಳಥಳ ಹೊಳೆಯುವ ಅಗಲವಾದ ಮಚ್ಚನ್ನು ಪೇಪರಿನಿಂದ ಸುತ್ತಿ ಬೆನ್ನ ಹಿಂದೆ ಪ್ಯಾಂಟಿನೊಳಗೆ ತುರುಕಿಸಿ ಮರೆಮಾಚಿದ. ಶಂಕರನ ರಹಸ್ಯ ತಾಣಕ್ಕೆ ತಾನು ಸಾಕಷ್ಟು ಬಾರಿ ಬಂದು ಕೆಲಸಕಾರ್ಯಗಳ ಬಗ್ಗೆ ಚರ್ಚಿಸುತ್ತ ಪೆಗ್ಗು ಹೀರುತ್ತ ಕುಳಿತಿರುತ್ತಿದ್ದವನಿಗೆ ಆ ಜಾಗವು ಚಿರಪರಿಚಿತವಿತ್ತು . ಹಾಗಾಗಿ ಧೈರ್ಯದಿಂದ ಅಡ್ಡಾದ ಹತ್ತಿರ ಹೋದ. ಶಂಕರನ ಕೋಣೆಯ ಬಾಗಿಲು ಮುಚ್ಚಿತ್ತು. ನಿಶ್ಶಬ್ದವಾಗಿ ನಿಂತು ಒಳಗಿನ ಶಬ್ದವನ್ನು ಆಲಿಸಿದ. ಯಾರದೋ ಗುಸುಗುಸು ಮೆಲುಧ್ವನಿ ಅಸ್ಪಷ್ಟವಾಗಿ ಕೇಳುತ್ತಿತ್ತು. ಹೌದು, ತನ್ನ ಕಡೆಯವರು ಹೇಳಿದ್ದು ನಿಜ. ಒಳಗೆ ಇಬ್ಬರೇ ಇರುವುದು ಎಂದುಕೊಂಡು ಬಾಗಿಲು ತಟ್ಟಿದ. ಕೆಲಕ್ಷಣದಲ್ಲಿ ಚಿಲಕ ತೆಗೆದ ಸದ್ದಾಯಿತು. ಶಂಕರನೇ ಬಾಗಿಲು ತೆರೆದ. ಆದರೆ ಸಂತಾನಪ್ಪ ಅವಕ್ಕಾದ. ಏಕೆಂದರೆ ಶಂಕರ ಇನ್ನೂ ಮತ್ತನಾಗಿರಲಿಲ್ಲ ಮಾತ್ರವಲ್ಲದೇ ಒಳಗೆ ಇನ್ನಿಬ್ಬರು ವಿಲಕ್ಷಣ ಗಡ್ಡಾಧಾರಿಗಳೂ ಇದ್ದುದು ಅವನಿಗೆ ಕಾಣಿಸಿತು. ಕೋಣೆಯ ಮಂದ ಬೆಳಕಿನಲ್ಲಿ ಆ ಆಗಂತುಕರು ತನ್ನನ್ನು ಕ್ರೂರವಾಗಿ ದಿಟ್ಟಿಸುತ್ತಿರುವಂತೆ ಅವನಿಗೆ ಭಾಸವಾಯಿತು. ಕೆಲವುಕ್ಷಣ ಏನೂ ತೋಚದೆ ನಿಂತುಬಿಟ್ಟ. ಆದರೆ ಶಂಕರ ಏನೂ ನಡೆದಿಲ್ಲವೆಂಬಂತೆ ನಗುತ್ತ, ‘ಓಹೋ…ಏನೋ ಸಂತಾನಪ್ಪ ಇಷ್ಟೊತ್ನಲ್ಲಿ…?’ ಎನ್ನುತ್ತ ಸ್ನೇಹದಿಂದ ಆಹ್ವಾನಿಸಿದ. ಅಷ್ಟೊತ್ತಿಗೆ ಸಂತಾನಪ್ಪನೂ ಹತೋಟಿಗೆ ಬಂದಿದ್ದವನು ಶಂಕರನ ಕುಟಿಲ ಆತ್ಮೀಯತೆಯನ್ನು ಕಂಡು ಕೋಪದಿಂದ ಕುದಿದ. ‘ನೋಡ್ ಶಂಕರಣ್ಣ, ನನ್ನ ಜೊತೆ ಹುಡುಗಾಟ ಆಡ್ ಬ್ಯಾಡ. ನೀನೆಣಿಸಿದಷ್ಟು ಛಲೋ ಮನ್ಷ ನಾನಲ್ಲ ತಿಳ್ಕೋ!’ ಎಂದ ಒರಟಾಗಿ. ‘ಅದು ನನಗೂ ಗೊತ್ತಿದೆ ಮಾರಾಯಾ. ಅದಿರಲಿ ನೀನೀಗ ಇಷ್ಟೊಂದು ಸಿಟ್ಟಾಗುವಂಥದ್ದು ಏನಾಯ್ತು ಅಂತ ಹೇಳಬೇಕಲ್ವಾ…?’ ಎಂದು ಶಂಕರ ವ್ಯಂಗ್ಯವಾಗಿ ನಗುತ್ತ ಪ್ರಶ್ನಿಸಿದ. ಸಂತಾನಪ್ಪನಿಗೆ ಉರಿದು ಹೋಯಿತು. ‘ಏನಲೇ ಹೈವಾನ್! ಮೊನ್ನೆ ನನ್ನಿಂದ ಹೆಬ್ಬೆಟ್ ಒತ್ತುಸ್ಕೊಂಡು ಓಡ್ ಬಂದಿಯಲ್ಲ ಆ ಪತ್ರಗಳು ಎಲ್ಲದಾವಂತ ತೋರ್ಸಲೇ…?’ ಎಂದು ಗುಡುಗಿದ. ‘ಯಾಕೆ ಮಾರಾಯಾ, ಅದರಿಂದೇನಾಯ್ತು? ಅಚ್ಚಡಪಾಡಿಯಲ್ಲಿ ಖರೀದಿಸಿದ ಜಮೀನಿನ ಪತ್ರಗಳೆಂದು ಹೇಳಿದ್ದೆನಲ್ಲಾ!’ ಎಂದ ಶಂಕರ ಅಸಡ್ಡೆಯಿಂದ. ಆದರೀಗ ಸಂತಾನಪ್ಪ ಅದನ್ನು ನಂಬುವಷ್ಟು ಮೂರ್ಖನಾಗಲಿಲ್ಲ. ‘ಓಹೋ, ಹೌದಾ? ಸರಿ ಹಂಗಾದ್ರೆ ನಾನೂ ಅದ್ನ ನೋಡಬೇಕಲೇ?’  ‘ಅರೇ, ಅದೀಗ ಇಲ್ಲೆಲ್ಲಿದೆ ಮಾರಾಯಾ! ಕನ್ವರ್ಶನ್‍ಗೆ ಕೊಟ್ಟಾಯಿತು. ಬೇಕಿದ್ದರೆ ನಾಳೆ ಬೆಳಿಗ್ಗೆ ಫ್ಲಾಟ್‍ಗೆ ಬಾ ಝೆರಾಕ್ಸ್ ಕಾಪಿಗಳಿವೆ, ತೋರಿಸುತ್ತೇನೆ’ ಎಂದ ಶಂಕರ ಉಡಾಫೆಯಿಂದ.    ಆಗ ಸಂತಾನಪ್ಪನಿಗೆ ಚಿಂತೆಗಿಟ್ಟುಕೊಂಡಿತು. ಆ ಸಂಪತ್ತು ತಾನು ಬೆವರು ಸುರಿಸಿ ಸಂಪಾದಿಸಿದ್ದಲ್ಲವಾದರೂ ತನ್ನ ಅದೃಷ್ಟದಿಂದಲೇ ತನಗೆ ದಕ್ಕಿದ್ದು. ತನ್ನ ಎರಡು ಸಂಸಾರಗಳೂ ಅದನ್ನೇ ನಂಬಿಕೊಂಡಿವೆ ಮತ್ತು ಅದರಿಂದಾಗಿಯೇ ತನ್ನ ಊರಲ್ಲೂ ತಾನು ಭಾರಿದೊಡ್ಡ ಕುಳವೆಂಬ ಹೆಗ್ಗಳಿಕೆಗೆ ಪಾತ್ರನಾಗಿರುವುದು. ಹೀಗಿರುವಾಗ ಅಂಥ ಆಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಎಂಥ ಎಡವಟ್ಟು ಮಾಡಿಕೊಂಡೆನಲ್ಲ! ಈ ಹಾದರಕ್ ಹುಟ್ಟಿದ ನನ್ಮಗ ಖಂಡಿತವಾಗಿಯೂ ಅವೇ ಪತ್ರಗಳಿಗೆ ತನ್ನಿಂದ ರುಜು ಹಾಕಿಸಿಕೊಂಡು ಮಸಲತ್ತು ಮಾಡ್ತಿದ್ದಾನೆ ಎಂದು ಯೋಚಿಸಿದವನ ಆತಂಕ ಇಮ್ಮಡಿಯಾಯಿತು. ‘ನಾಳೆಯವರೆಗೆ ಕಾಯಲು ಸಾಧ್ಯವಿಲ್ಲ ಶಂಕರಣ್ಣಾ. ನಡೆ, ಈಗಲೇ ಫ್ಲಾಟಿಗೆ ಹೋಗೋಣ!’ ಎಂದ ಸಿಡುಕಿನಿಂದ. ಅದಕ್ಕೆ ಶಂಕರ ವ್ಯಂಗ್ಯವಾಗಿ ನಗುತ್ತ ತನ್ನ ಗೆಳೆಯರತ್ತ ದಿಟ್ಟಿಸಿದವನು ಅವರಿಗೇನೋ ಕಣ್ಸನ್ನೆ ಮಾಡಿದ. ಆ ಮುಖಗಳು ಕೂಡಲೇ ಕಠೋರವಾದವು. ‘ಆಯ್ತು ಮಾರಾಯಾ ನಡೆ. ಯಾರೋ ದರವೇಶಿಗಳು ನನ್ನ ಬಗ್ಗೆ ನಿನ್ನಲ್ಲಿ ಸಂಶಯ ಹುಟ್ಟಿಸಿದ್ದಾರೆಂದು ಕಾಣುತ್ತದೆ. ಪರ್ವಾಗಿಲ್ಲ ನಿನ್ನ ಅನುಮಾನ ನಿವಾರಿಸುವ!’ ಎಂದು ಅದೇ ವ್ಯಂಗ್ಯ ನಗುವಿನೊಂದಿಗೆ ಹೇಳಿದವನು ಗೆಳೆಯರತ್ತ ತಿರುಗಿ, ‘ಇವರು ನನ್ನ ಸ್ನೇಹಿತರು. ಅಪರೂಪಕ್ಕೆ ಬಂದಿದ್ದಾರೆ ಮಾರಾಯಾ. ಅವರೊಂದಿಗೆ ಸ್ವಲ್ಪ ಡ್ರಿಂಕ್ಸ್ ಮಾಡುತ್ತ ಮಾತಾಡುವುದಿದೆ. ಬೇಕಿದ್ದರೆ ನಮ್ಮೊಂದಿಗೆ ನೀನೂ ಸೇರಿಕೋ. ನಂತರ ಹೊರಡುವ’ ಎಂದ ಶಂಕರ ನಯವಾಗಿ. ಸಂತಾನಪ್ಪನಿಗೆ ಅವನ ಮಾತು ನಂಬಬೇಕೋ ಬಿಡಬೇಕೋ ಎಂದು ಗೊಂದಲವಾಯಿತು. ಹಾಗಾಗಿ ಶಂಕರ ತೋರಿಸಿದ ಕುರ್ಚಿಯಲ್ಲಿ ಕುಳಿತುಕೊಂಡ. ಶಂಕರನೂ ಗಂಭೀರವಾಗಿ ಸಾರಾಯಿ ಸುರಿದು ಸ್ನೇಹಿತರೊಂದಿಗೆ ಇವನಿಗೂ ಕೊಟ್ಟ. ಸಂತಾನಪ್ಪ ಒಲ್ಲದ ಮನಸ್ಸಿನಿಂದ ಕುಡಿಯತೊಡಗಿದ. ಎರಡು ಪೆಗ್ಗು ಹೊಟ್ಟೆಗಿಳಿಯುವ ಹೊತ್ತಿಗೆ ಅವನ ದೇಹ, ಮನಸ್ಸುಗಳೆರಡೂ ಹುಗುರವಾಗಿ ಬಿಗುಮಾನ ಮಾಯವಾಯಿತು. ಆದರೂ ಯಾರೊಡನೆಯೂ ಮಾತಾಡದೆ ಮೌನವಾಗಿ ಸಾರಾಯಿ ಹೀರತೊಡಗಿದ. ಶಂಕರ ಮಾತ್ರ ಬೇಕೆಂದೇ ಇವನ ಇರುವನ್ನು ಕಡೆಗಣಿಸಿ ಇವನಿಗೆ ಅರ್ಥವಾಗದ ವಿಷಯಗಳನ್ನೆತ್ತಿ ಸ್ನೇಹಿತರೊಂದಿಗೆ ಚರ್ಚಿಸುತ್ತ, ಸೂರು ಕಿತ್ತು ಹೋಗುವಂತೆ ನಗುತ್ತ ಬಾಟಲಿ ಖಾಲಿ ಮಾಡುತ್ತಿದ್ದ. ಇತ್ತ ಸ್ವಲ್ಪಹೊತ್ತಿನಲ್ಲಿ ಐದನೆಯ ಪೆಗ್ಗು ಸಂತಾನಪ್ಪನ ಹೊಟ್ಟೆ ಸೇರುತ್ತಲೇ ಶಂಕರನ ಮೇಲಿನ ಶಂಕೆ ಮತ್ತೆ ಅವನಲ್ಲಿ ಹೆಡೆಯೆತ್ತಿತು. ಜೊತೆಗೆ ತಾನು ಮೊನ್ನೆಯೂ ಇವನ ಇಂಥ ಮೋಡಿಯ ಮಾತುಗಳಿಗೆ ಮೋಸ ಹೋಗಿ ಅನಾಹುತ ಮಾಡಿಕೊಂಡಿದ್ದು ಎಂದನ್ನಿಸುತ್ತಲೇ ಮರಳಿ ಅವನ ತಾಳ್ಮೆ ಕುಸಿಯಿತು. ‘ನಡೆ ಶಂಕರಣ್ಣ ಹೋಗೋಣ. ನನಗೀಗಲೇ ಆ ಪತ್ರಗಳನ್ನು ನೋಡಬೇಕು!’ ಎಂದು ಎದ್ದು ನಿಂತ. ಶಂಕರ ಆಗಲೂ ಅವನ್ನು ಕುಳ್ಳಿರಿಸಿಕೊಳ್ಳಲು ಪ್ರಯತ್ನಿಸಿದ. ಆದರೆ ಆಗ ಮಾತ್ರ ಸಂತಾನಪ್ಪನ ಕೋಪ ನೆತ್ತಿಗೇರಿತು. ‘ಲೇ, ಹಡಿ ಸೂಳೀಮಗನಾ…ನಿನ್ ದಗಲ್ಬಾಜಿನೆಲ್ಲ ನನ್ ಹತ್ರ ಬಿಚ್ಬೇಡಲೇ…! ಪತ್ರಗಳ್ನ ಈಗ್ಲೇ ತಂದೊಪ್ಪಿಸಿದ್ದಿಯೋ ಬಚಾವಾದಿ ಮಗನಾ! ಇಲ್ಲಾ, ನಿನ್ನನ್ ಕಂಬಿ ಎಣಿಸುವಂತೆ ಮಾಡದೆ ಬಿಡಕ್ಕಿಲ್ವೋ ಹೈವಾನ್!’ ಎಂದು ಗುಡುಗಿದ. ಆದರೆ ಆಗ ಶಂಕರನೂ ಹದವಾದ ಮತ್ತಿನಲ್ಲಿದ್ದ. ಅವನ ಮುಖದಲ್ಲೂ ತೀಕ್ಷ್ಣ ಕೋಪ ವಿಜೃಂಭಿಸಿತು. ‘ಓಹೋ ಹೌದಾ ಮಗನೇ…! ಪರ್ವಾಗಿಲ್ಲವಾ ನೀನೂ ಭಾರೀ ಅರ್ಜೆಂಟಿನಲ್ಲಿದ್ದಿ. ಹಾಗಾಗಿ ಇನ್ನು ಟೈಮ್‍ವೇಸ್ಟ್ ಮಾಡುವುದು ನನಗೂ ಸರಿ ಕಾಣುವುದಿಲ್ಲ. ಆಯ್ತು ಹೋಗುವ!’ ಎಂದು ದಢಕ್ಕನೆದ್ದವನು ಗೆಳೆಯರತ್ತ ತಿರುಗಿ ಮತ್ತೇನೋ ಸಂಜ್ಞೆ ಮಾಡಿ ಧುರಧುರನೇ ಹೊರಗೆ ನಡೆದ. ಸಂತಾನಪ್ಪನೂ ಬಿರುಸಿನಿಂದ ಅವನನ್ನು ಹಿಂಬಾಲಿಸಿದ. ಆದರೆ ತನ್ನ ಸೊಂಟದಲ್ಲಿದ್ದ ಕತ್ತಿಯನ್ನೊಮ್ಮೆ ಮೆಲ್ಲನೆ ಸ್ಪರ್ಶಿಸಿ ನೋಡಿ ಸೆಟೆದುಕೊಂಡು ಮುನ್ನಡೆದ. ಶಂಕರ, ಸಂತಾನಪ್ಪನಿಗೆ ಏನೂ ಹೇಳದೆ ಮೂತ್ರ ವಿಸರ್ಜಿಸಲೆಂಬಂತೆ ಸಮೀಪದ ಸಾರ್ವಜನಿಕ ಶೌಚಾಲಯದತ್ತ ಹೊರಟ. ಸಂತಾನಪ್ಪನಿಗೆ ಅನುಮಾನವಾಯಿತು. ‘ಆ ಕಡೆ ಎಲ್ಲಿಗೇ…?’ ಎಂದ ಜೋರಿನಿಂದ.   ‘ಮೂತ್ರ ಹುಯ್ಯಬೇಕು ಮಾರಾಯಾ…!’  ಎಂದ ಶಂಕರ ನಗುತ್ತ.  ‘ನಾನೂ ಬರುತ್ತೇನೆ!’ ಎಂದ ಸಂತಾನಪ್ಪ ಅವನ ಬೆನ್ನು ಹತ್ತಿದ. ಶಂಕರನೂ ಅದನ್ನೇ ನಿರೀಕ್ಷಿಸಿದ್ದವನು ಸಂತಾನಪ್ಪನ ಹುಂಬತನವನ್ನು ನೆನೆದು ಕತ್ತಲಲ್ಲಿ ಭುಜ ಕುಣಿಸಿ ನಗುತ್ತ ನಡೆದ. ಆದರೆ ಶೌಚಾಲಯಕ್ಕೆ ಹೋಗದೆ ಕಟ್ಟಡದ ಹಿಂದೆ ಕುರುಚಲು ಪೊದೆಗಳು ತುಂಬಿದ್ದ ಪಾಳು ಜಾಗವೊಂದಕ್ಕೆ ಹೋದ. ಸಂತಾನಪ್ಪ ಅಲ್ಲಿಗೂ ಹಿಂಬಾಲಿಸಿದ. ಆ ಪ್ರದೇಶದಲ್ಲಿ ದಟ್ಟ ಕತ್ತಲೆ ಗೌವ್ವ್ ಗುಡುತ್ತಿತ್ತು. ಸಂತಾನಪ್ಪನ ಹಿಂದುಗಡೆ ಮತ್ತೆರಡು ಆಕೃತಿಗಳು ಮೆತ್ತಗೆ ಬಂದು ನಿಂತಿದ್ದನ್ನು ಅವನ ಸಾರಾಯಿ ಪ್ರಜ್ಞೆಯು ಗ್ರಹಿಸಲಿಲ್ಲ. ಅತ್ತ ಶಂಕರ ಮೂತ್ರ ಹುಯ್ಯಲು ನಿಂತಂತೆ ನಟಿಸಿದ. ಅಷ್ಟರಲ್ಲಿ ಸಂತಾನಪ್ಪನ ಹಿಂದಿದ್ದವನೊಬ್ಬ ಅವನ ಕೊರಳಿಗೆ ಬಲವಾಗಿ ಹೊಡೆದ. ಸಂತಾನಪ್ಪ, ‘ಯಾವ್ವಾ…!’ ಎಂದು ಚೀರಿ ಧೊಪ್ಪನೆ ಕುಸಿದ. ‘ಏನಲೇ ಬೇವರ್ಸಿ… ನಮ್ಮೂರಿಗೆ ಕೂಲಿಗೆ ಬಂದಂಥ ನಾಯಿ ನೀನು! ನಮ್ಮವರ ಆಸ್ತಿಯನ್ನೇ ಲಪಟಾಯಿಸಿ ಮಜಾ ಉಡಾಯಿಸಬೇಕೆಂದಿದ್ದಿಯೇನೋ…? ಅದನ್ನು ನೋಡಿಯೂ ನನ್ನಂಥವನು ಸುಮ್ಮನಿರುತ್ತಾನೆಂದು ಅದ್ಹೇಗೆ ಭಾವಿಸಿದೆಯೋ? ಮರ್ಯಾದೆಯಿಂದ ನಾಳೆ ಬೆಳಗಾಗುವುದರೊಳಗೆ ನಿನ್ನ ಎರಡು ಸಂಸಾರಗಳನ್ನು ಕಟ್ಟಿಕೊಂಡು ಇಲ್ಲಿಂದ ಜಾಗ ಖಾಲಿ ಮಾಡಿದೆಯೋ ಬಚಾವಾದೆ. ಇಲ್ಲಾ, ನಿನ್ನ ಹೆಣ ಮಸಣದ ಗುಡ್ಡೆಯಲ್ಲೇ ಸುಟ್ಟು ಬೂದಿಯಾಗುವುದು ಗ್ಯಾರಂಟಿ ಬೋಳಿಮಗನೇ!’ ಎಂದು ಕೋಪದಿಂದ ಗುಡುಗಿದ ಶಂಕರ, ಸಂತಾನಪ್ಪನಿಗೆ ಬೀಸಿ ಬೀಸಿ ಒದೆಯತೊಡಗಿದ. ಆದರೆ ಒಂದೆರಡು ಒದೆತಗಳು ಬೀಳುತ್ತಿದ್ದಂತೆಯೇ ಸಂತಾನಪ್ಪನೂ ಗೂಳಿಯಂತೆ ಉಸಿರುದಬ್ಬುತ್ತ ಎದ್ದು ನಿಂತ.    ಅವನ ಬಲಗೈ ರಪ್ಪನೆ ಬೆನ್ನ ಹಿಂದೆ ಸರಿದು ಮಚ್ಚನ್ನು ಎಳೆದುಕೊಂಡಿತು. ಸಂತಾನಪ್ಪನ ರೌದ್ರಾವತಾರವನ್ನೂ ಮತ್ತು ಆ ಕತ್ತಲನ್ನೂ ಮೀರಿ ಮಿರಮಿರನೇ ಮಿಂಚುತ್ತಿದ್ದ ಮಚ್ಚನ್ನೂ ಕಂಡ ಶಂಕರ ದಿಗ್ಭ್ರಾಂತನಾದ. ಅದೇ ಹೊತ್ತಿಗೆ ಸಂತಾನಪ್ಪ ಶಂಕರನ ಕೊರಳಿಗೆ ಗುರಿಯಿಟ್ಟು ಮಚ್ಚು ಬೀಸಿದ. ಆದರೆ ಶಂಕರ ನೂಲಿನೆಳೆಯಷ್ಟು ಅಂತರದಲ್ಲಿ ತಪ್ಪಿಸಿಕೊಂಡ. ಅದರ ಬೆನ್ನಿಗೆ ಸಂತಾನಪ್ಪ ಅವನ ಕಿಬ್ಬೊಟ್ಟೆಗೆ ಜಾಡಿಸಿ ಒದ್ದ. ಶಂಕರ, ‘ಅಯ್ಯಮ್ಮಾ…!’ ಎಂದು ಕಿರುಚುತ್ತ ಅಷ್ಟು ದೂರಕ್ಕೆ ಎಗರಿ ಬಿದ್ದ. ಮರುಕ್ಷಣ ಸಂತಾನಪ್ಪ ಮಿಂಚಿನವೇಗದಲ್ಲಿ ಅತ್ತ ನೆಗೆದವನು ಶಂಕರನ ಕೊರಳನ್ನು ಕಡಿದೇ ಹಾಕುತ್ತಾನೆ ಎಂಬಷ್ಟರಲ್ಲಿ ಶಂಕರನ ಬಾಡಿಗೆ ಗೂಂಡಾಗಳು ಕ್ಷಣದಲ್ಲಿ ಮುನ್ನುಗ್ಗಿ ಸಂತಾನಪ್ಪನನ್ನು ಮಿಸುಕಾಡದಂತೆ ಬಲವಾಗಿ ಹಿಡಿದುಕೊಂಡರು. ಶಂಕರ ತನ್ನ ಜೀವವಮಾನದಲ್ಲಿ ಅಂಥದ್ದೊಂದು ಒದೆತವನ್ನು ಯಾರಿಂದಲೂ ತಿಂದವನಲ್ಲ. ಆದರೆ ಇಂದು ತನ್ನ ಕೂಲಿಯಾಳಿನಿಂದಲೇ ಅಂಥ ದುರ್ದುಸೆ ತನಗೆ ಬಂದುದನ್ನು ನೆನೆದವನಿಗೆ ಅವಮಾನದಿಂದ ಸತ್ತಂತಾಯಿತು. ಎದ್ದು ನಿಲ್ಲಲಾಗದಷ್ಟು ನೋವಿದ್ದರೂ ಕಷ್ಟಪಟ್ಟು ಎದ್ದು ನಿಂತ. ಅವನ ರಕ್ತದ ಕಣಕಣದಲ್ಲೂ ಕ್ರೋಧವು ಪ್ರಜ್ವಲಿಸಿತು. ಸಂತಾನಪ್ಪನ ಕತ್ತಿನ ಪಟ್ಟಿಯನ್ನು ಒರಟಾಗಿ ಎಳೆದು ಹಿಡಿದವನು, ‘ಹಲ್ಕಟ್ ನನ್ಮಗನೇ… ನನ್ನ ಮೇಲೆಯೇ ಕೈಮಾಡುವಷ್ಟು ಸೊಕ್ಕಾ ನಿಂಗೆ…!?’ ಎಂದು ಕ್ಯಾಕರಿಸಿ ಅವನ ಮುಖಕ್ಕೆ ಉಗಿದವನು, ಕಾಲ ಮೊಣಗಂಟಿನಿಂದ ಅವನ ಮರ್ಮಾಂಗಕ್ಕೆ ಬೀಸಿ ಬೀಸಿ ನಾಲ್ಕೈದೇಟು ಜಾಡಿಸಿ ಒದ್ದುಬಿಟ್ಟ. ‘ಯಾವ್ವಾ ಸತ್ತೆನವ್ವಾ…!’ ಎಂದು ಉಸಿರುಗಟ್ಟಿ ಅರಚಿದ ಸಂತಾನಪ್ಪ ಕಡಿದ ಬಾಳೆಯಂತೆ ನೆಲಕ್ಕುರುಳಿದ. ಅವನ ಕೈಯಿಂದ ಮಚ್ಚು ತನ್ನಿಂದ ತಾನೇ ಕಳಚಿಬಿತ್ತು.                                                       *** ಮರುದಿನ ಮುಂಜಾನೆ, ‘ಈಶ್ವರಪುರದ ಸಾರ್ವಜನಿಕ ಶೌಚಾಲಯದಲ್ಲಿ ಉತ್ತರ

Read Post »

ಇತರೆ, ದಾರಾವಾಹಿ

ದಾರಾವಾಹಿ- ಅದ್ಯಾಯ-11 ಅದೃಷ್ಟದಿಂದಲೋ, ದೈವಕೃಪೆಯಿಂದಲೋ ಮನುಷ್ಯನಿಗೆ ದೊರಕುವ ಸುಖ ಸಂಪತ್ತು ಕೆಲವೊಮ್ಮೆ ಅವನನ್ನು ಎಂಥ ಕಾರ್ಯಕ್ಕಾದರೂ ಪ್ರೇರೇಪಿಸಬಲ್ಲದು ಎಂಬುದಕ್ಕೆ ಸಂತಾನಪ್ಪ ಕಿಲ್ಲೆಯೇ ಸಾಕ್ಷಿಯಾಗುತ್ತಾನೆ. ಅವನು ತನ್ನ ದಿಢೀರ್ ಶ್ರೀಮಂತಿಕೆಯಿಂದಲೂ, ಗಂಡಸುತನದ ಕೊಬ್ಬಿನಿಂದಲೂ ಮಸಣದ ಗುಡ್ಡೆಯ, ತನಗಿಂತ ಇಪ್ಪತ್ತು ವರ್ಷ ಕಿರಿಯಳಾದ ದ್ಯಾವಮ್ಮ ಎಂಬ ಹುಡುಗಿಯನ್ನು ಒಲಿಸಿ ತನ್ನವಳನ್ನಾಗಿಸಿಕೊಂಡ ವಿಷಯವು ಅವಳ ಪ್ರಿಯಕರ ಪರಮೇಶನಿಗೆ ತಿಳಿದುಬಿಟ್ಟಿತು. ಪರಮೇಶ ದ್ಯಾವಮ್ಮಳನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದವನು ಕಂಗಾಲಾಗಿಬಿಟ್ಟ. ಸಂತಾನಪ್ಪ ತನ್ನ ಹುಡುಗಿಯನ್ನು ಯಾವತ್ತು ಮರುಳು ಮಾಡಿ ಬಗಲಿಗೆಳೆದುಕೊಂಡನೋ ಆವತ್ತಿನಿಂದ ಪರಮೇಶನಿಗೆ ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಜೊತೆಗೆ ಸಂತಾನಪ್ಪನ ಮೇಲೆ ತೀವ್ರ ದ್ವೇಷವೂ ಬೆಳೆದುಬಿಟ್ಟಿತು. ಆದ್ದರಿಂದ ಅವನು ತಾನು ಸಂತಾನಪ್ಪನಂಥ ನೀಚನ ಮೇಲೆ ಸೇಡು ತೀರಿಸಿಕೊಳ್ಳದಿದ್ದರೆ ತನ್ನ ಪುರುಷತ್ವಕ್ಕೇ ಅವಮಾನ! ಎಂದು ಯೋಚಿಸುತ್ತ ಕುದಿಯತೊಡಗಿದ. ಆದರೆ ಸಂತಾನಪ್ಪನೆದುರು ತಾನು ಉಸಿರೆತ್ತಲಾಗದ ದೈನೇಸಿ ಸ್ಥಿತಿಯಲ್ಲಿದ್ದೇನೆಂಬುದನ್ನೂ ತಿಳಿದಿದ್ದವನು ಅದೇ ಕೊರಗಿನಿಂದ ಮಹಾ ಕುಡುಕನಾಗಿಬಿಟ್ಟಿದ್ದ. ಆದರೂ ಸರಿಯಾದ ಸಮಯಕ್ಕಾಗಿ ಹೊಂಚು ಹಾಕುತ್ತಲೇ ಇದ್ದ. ಹಾಗಾಗಿ ಇಂದು ಅದೇ ಸಂತಾನಪ್ಪ ಈಶ್ವರಪುರದ ಪ್ರತಿಷ್ಠಿತ ಬಿಲ್ಡರ್‍ಗಳಲ್ಲೊಬ್ಬನಾದ ಶಂಕರನ ಮೇಲೆ ಮಚ್ಚು ಹರಿಸಲು ಹವಣಿಸುತ್ತ ತಿರುಗಾಡುತ್ತಿದ್ದ ಸಂಗತಿಯು ಪರಮೇಶನಿಗೆ ತಿಳಿದು ಅವನ ದ್ವೇಷದ ಜ್ವಾಲೆಗೆ ತುಪ್ಪ ಸುರಿದಂತಾಯಿತು. ಅವನು ತನ್ನ ಸೇಡು ತೀರಿಸಿಕೊಳ್ಳುವ ಸಮಯ ಹತ್ತಿರವಾದ ಖುಷಿಯಿಂದ ಸಾರಾಯಿ ಶೀಶೆಯನ್ನು ನೆತ್ತಿಯ ಮೇಲಿಟ್ಟುಕೊಂಡು ಕುಣಿದಾಡಿಬಿಟ್ಟ!    ಉತ್ತರ ಕರ್ನಾಟಕದ ರುದ್ರೇನಾಹಳ್ಳಿ ಎಂಬ ಕುಗ್ರಾಮವೊಂದರಲ್ಲಿ ಹುಟ್ಟಿ ಬೆಳೆದ ಪರಮೇಶ ಮತ್ತು ದ್ಯಾವಮ್ಮ ನೆರೆಕರೆಯಲ್ಲೇ ವಾಸಿಸುತ್ತಿದ್ದವರು.  ಅವನಿಗೆ ಕುಡಿಮೀಸೆ ಚಿಗುರುತ್ತಲೂ ಇವಳಿಗೆ ಹದಿಹರೆಯ ಇಣುಕುತ್ತಲೂ ಇಬ್ಬರ ನಡುವೆ ದೈಹಿಕಾಕರ್ಷಣೆಯ ಪ್ರೇಮಾಂಕುರವಾಗಿತ್ತು. ಆದರೆ ಆ ಪ್ರೀತಿಯ ಮಧುರ ಸವಿಯನ್ನು ಹೆಚ್ಚು ಕಾಲ ಅನುಭವಿಸಲು ಇಬ್ಬರ ಮನೆಯ ಪರಿಸ್ಥಿತಿಯೂ ಅವಕಾಶ ಕೊಡಲಿಲ್ಲ. ಒಂದೆಡೆ ಅತಿಯಾದ ಬಡತನ, ಇನ್ನೊಂದೆಡೆ ಮಳೆ ಬೆಳೆಯೂ ಚೆನ್ನಾಗಿ ಆಗದೆ ದ್ಯಾವಮ್ಮನ ಅಪ್ಪ ಮಲ್ಲೇಶ ತಾನು ಮಾಡಿದ ಕೃಷಿ ಸಾಲ ತೀರಿಸಲಾಗದೆ ಊರುಬಿಟ್ಟು ಹೋಗುವುದೇ ಸಮಸ್ಯೆಗೆ ಪರಿಹಾರವೆಂದು ನಿರ್ಧರಿಸಿದ. ಅತ್ತ ಪರಮೇಶನ ಕುಟುಂಬವೂ ಅದೇ ಕಾರಣಕ್ಕೆ ಮಲ್ಲೇಶನ ಕುಟುಂಬದೊಂದಿಗೆ ಸೇರಿ ವಲಸೆ ಹೊರಟು ಕಟ್ಟಡ ಕಾಮಗಾರಿ ಬಿಲ್ಡರ್‍ಗಳ ‘ಅಧಿಕ ಸಂಬಳ’ ದ ಆಸೆಗೊಳಗಾಗಿ ಈಶ್ವರಪುರಕ್ಕೆ ಬಂದು ನೆಲೆಸಿತ್ತು. ದ್ಯಾವಮ್ಮ ಪರಮೇಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದ್ದರಿಂದ ಪರವೂರಿಗೆ ಬಂದ ನಂತರ ಕೆಲವು ಕಾಲ ಅವನ ಸಾಂಗತ್ಯವನ್ನು ಮತ್ತಷ್ಟು ಬಯಸುತ್ತಿದ್ದಳು. ಪರಮೇಶನಿಗೂ ಅವಳು ಸರ್ವಸ್ವವಾಗಿದ್ದಳು. ಊರಲ್ಲಿದ್ದಾಗಲೂ ಅವನು ಸದಾ ಅವಳ ಹಿಂದೆಯೇ ಸುತ್ತುತ್ತಿದ್ದ. ಇಬ್ಬರೂ ತಂತಮ್ಮ ಹೊಲಗದ್ದೆಗಳ ಕೆಲಸ ಕಾರ್ಯಗಳಲ್ಲೂ ಜೊತೆಯಾಗಿ ದುಡಿಯುತ್ತ ಮಾವು ಮತ್ತು ದಾಳಿಂಬೆ ತೋಪುಗಳ ಮರೆಯಲ್ಲಿ ಕುಳಿತು ಪ್ರೇಮಸಲ್ಲಾಪವಾಡುತ್ತ ಪ್ರಪಂಚವನ್ನೇ ಮರೆಯುತ್ತಿದ್ದರು. ಆದರೆ ಅಂದು ತನ್ನ ಜನುಮದ ಗೆಳೆಯನನ್ನು ಒಂದು ಕ್ಷಣವೂ ಬಿಟ್ಟಿರಲಾಗದೆ ಒಡನಾಡುತ್ತಿದ್ದ ದ್ಯಾವಮ್ಮ ಈಶ್ವರಪುರಕ್ಕೆ ಬಂದ ಕೆಲವೇ ಕಾಲದೊಳಗೆ ಬದಲಾಗಿಬಿಟ್ಟಳು. ಅದಕ್ಕೆ ಕಾರಣವೂ ಇತ್ತು. ಈಶ್ವರಪುರದ ಜನರ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರ, ಅವರ ಶಿಸ್ತುಬದ್ಧ ಜೀವನಶೈಲಿ, ಸುಸಂಸ್ಕೃತ ನಡೆ ನುಡಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿನ ತನ್ನ ಓರಗೆಯ ಹೆಣ್ಣು ಮಕ್ಕಳ ಸ್ನಿಗ್ಧ ಚೊಕ್ಕ ಸೌಂದರ್ಯ ಹಾಗೂ ಅದಕ್ಕೊಪ್ಪುವಂಥ ಆಧುನಿಕ ಶೈಲಿಯ ವೇಷ ಭೂಷಣಗಳನ್ನು ಅವರೆಲ್ಲ ತೊಡುತ್ತ ವನಪು ವಯ್ಯಾರದಿಂದ ಮಿಂಚುತ್ತಿದ್ದುದನ್ನು ಕಾಣುತ್ತ ಬಂದ ಬಯಲುಸೀಮೆಯ ಹಳ್ಳಿಯ ಹುಡುಗಿ ದ್ಯಾವಮ್ಮನಿಗೆ ತನ್ನೂರಿನ ಜೀವನವೇಕೋ ಶುಷ್ಕ ನೀರಸವಾಗಿ ಕಾಣತೊಡಗಿತು. ಹಾಗಾಗಿ ತಾನೂ ಇಲ್ಲಿನವರಂತೆ ಸುಂದರವಾಗಿ ಬದುಕಬೇಕು ಎಂದು ಅವಳು ಇಚ್ಛಿಸಿದಳು. ಅಪ್ಪನೊಂದಿಗೆ ಕೂಲಿಗೆ ಹೋಗಿ ದುಡಿಮೆಯಾರಂಭಿಸಿದ ಮೇಲೆ ಕೆಲವೇ ಕಾಲದೊಳಗೆ ಲಂಗ ದಾವಣಿ ಮತ್ತು ಅರ್ಧ ಸೀರೆಯಂಥ ಹಳ್ಳಿಯ ಉಡುಗೆ ತೊಡುಗೆಗಳನ್ನು ಕಿತ್ತೊಗೆದು ಚೂಡಿದಾರ್, ಸ್ಕರ್ಟ್‍ಗಳನ್ನು ತೊಟ್ಟುಕೊಂಡು ವಿಹರಿಸಲಾರಂಭಿಸಿದಳು. ಬರಬರುತ್ತ ಅದರಿಂದಲೂ ತೃಪ್ತಳಾಗದೆ ಜೀನ್ಸ್ ಪ್ಯಾಂಟ್, ಟೀಶರ್ಟ್ ಧರಿಸುವವರೆಗೂ ಮುಂದುವರೆದು ಹದಿನೆಂಟರ ಹರೆಯ ತನ್ನ ಕೋಮಲ ಸೌಂದರ್ಯವನ್ನು ಮಾಟವಾಗಿ ಪ್ರದರ್ಶಿಸುತ್ತ ಖುಷಿಪಡಲಾರಂಭಿಸಿದಳು. ಆದ್ದರಿಂದ ದಿನವಿಡೀ ಎಲೆಯಡಿಕೆ, ಮಾವಾ ಮತ್ತು ಪಾನ್‍ಪರಾಗ್‍ನಂಥ ಮಾದಕವಸ್ತುಗಳನ್ನು ಜಗಿಯುತ್ತ ಅದರದೇ ನಶೆಯಲ್ಲಿದ್ದು ಅಡ್ಡ ವಾಸನೆ ಹೊಡೆಯುತ್ತಿದ್ದ ಪರಮೇಶನ ಒಣಕಲು ಮೂತಿಯೂ, ಬಡಕಲು ದೇಹವೂ ಅವಳಿಗೆ ಸಹಜವಾಗಿಯೇ ಅಸಹ್ಯವೆನಿಸತೊಡಗಿತು. ಅದರಿಂದ ನಿಧಾನಕ್ಕೆ ಅವನ ಮೇಲಿನ ಪ್ರೀತಿಯೂ ಅವಳಲ್ಲಿ ಆರಿಹೋಯಿತು.    ಮೂರುಕಾಸಿಗೆ ಬೆಲೆಯಿಲ್ಲದಂಥ ಈ ಪ್ರೀತಿ ಪ್ರೇಮಕ್ಕೆಲ್ಲ ತಾನಿನ್ನು ಮರುಳಾಗುವ ಅವಿವೇಕಿಯಾಬಾರದು. ಪರಮೇಶನನ್ನು ಮದುವೆಯಾದೆನೆಂದರೆ ಸಾಯುವತನಕವೂ ತಾನು ಕೂಲಿನಾಲಿ ಮಾಡುತ್ತ ಗುಡಿಸಲಲ್ಲೇ ಬದುಕಿ ಸಾಯಬೇಕಾದೀತು! ಹಾಗೆ ಬದುಕಲು ತನ್ನಿಂದಿನ್ನು ಸಾಧ್ಯವೇ ಇಲ್ಲ. ಈ ಬಡತನದಿಂದ ಆದಷ್ಟು ಬೇಗ ಹೊರಗೆ ಬಂದು ಇಲ್ಲಿನ ಜನರಂತೆ ತಾನೂ ಸ್ಥಿತಿವಂತಳಾಗುವ ದಾರಿಯನ್ನು ಕಂಡುಕೊಳ್ಳಬೇಕು ಎಂದೆಲ್ಲ ಯೋಚಿಸುತ್ತಿದ್ದ ದ್ಯಾವಮ್ಮ ತನ್ನಿಚ್ಛೆ ನೆರವೇರಿಸುವಂಥ ಗಂಡೊಬ್ಬನ ಅನ್ವೇಷಣೆಗಿಳಿದಳು. ಅದೇ ಸಮಯದಲ್ಲಿ ದಿಢೀರ್ ಶ್ರೀಮಂತನೂ, ಶಂಕರನಂಥ ಸ್ಥಳೀಯ ಶ್ರೀಮಂತರ ಸಂಘ ಬೆಳೆಸಿ ಇಲ್ಲಿನವನಾಗಿಯೇ ರಾಜಾರೋಷದಿಂದ ಬದುಕುತ್ತಿದ್ದ ಸಂತಾನಪ್ಪ ಕಿಲ್ಲೆಯ ಕಟ್ಟಡವೊಂದಕ್ಕೆ ಅವನ ಮೇಸ್ತ್ರಿಯೊಡನೆ ಕೂಲಿಯಾಳಾಗಿ ಹೋದಳು. ಆವತ್ತು ಸಂತಾನಪ್ಪನೂ ತನ್ನ ಕಟ್ಟಡದ ಕೆಲಸಕಾರ್ಯಗಳನ್ನು ಗಮನಿಸಲು ಬಂದಿದ್ದ. ಆಹೊತ್ತು ಆಕಸ್ಮತ್ತಾಗಿ ಅವನ ವಕ್ರದೃಷ್ಟಿಯು ದ್ಯಾವಮ್ಮನ ಮೇಲೆ ಬಿದ್ದುಬಿಟ್ಟಿತು. ಅವಳ ತೆಳ್ಳನೆ ನಸುಗೆಂಪಿನ, ಬಾಗಿ ಬಳುಕುವಂಥ ದೇಹಸಿರಿಯನ್ನು ಕಂಡವನು ಆಕ್ಷಣವೇ ಅವಳನ್ನು ಮೋಹಿಸಿಬಿಟ್ಟ.    ದ್ಯಾವಮ್ಮಳೂ ಸಂತಾನಪ್ಪನನ್ನು ಕೆಲವು ಕ್ಷಣ ಅಡಿಗಣ್ಣಿನಿಂದ ದಿಟ್ಟಿಸಿ ನೋಡಿದಳು. ಮೂವತ್ತೈದರ ಯುವಕನಂತೆ ಕಾಣುತ್ತಿದ್ದ ಅವನ ಕಟ್ಟುಮಸ್ತುತನಕ್ಕಿಂತಲೂ ತನ್ನಪ್ಪನಿಂದಲೇ ಅವನ ಸಿರಿವಂತಿಕೆಯ ಕಥೆಯನ್ನು ಕೇಳಿದ್ದವಳು ಅಂದೇ ಅವನಿಗೆ ಆರ್ಕಷಿತಳಾಗಿ ತನ್ನಾಸೆಯನ್ನು ಪೂರೈಸಿಕೊಳ್ಳಬೇಕೆಂಬ ಕನಸು ಕಾಣತೊಡಗಿದಳು. ಹೀಗಿದ್ದವಳನ್ನು ಆವತ್ತೊಂದು ದಿನ ಮೇಸ್ತ್ರಿಯು ಸಂತಾನಪ್ಪನ ಆಜ್ಞೆಯ ಮೇರೆಗೆ ಅವನ ಕೋಣೆಗೆ ಕಳುಹಿಸಿಕೊಟ್ಟ. ದ್ಯಾವಮ್ಮನಿಗೂ ಅದೇ ಬೇಕಿತ್ತು. ಆದರೆ ಸ್ತ್ರೀ ಸಹಜ ನಾಚಿಕೆ ಅಳುಕು ಅವಳನ್ನು ಕಾಡುತ್ತಿತ್ತು. ಮೇಸ್ತ್ರಿ ಮತ್ತು ಜೊತೆ ಕೆಲಸಗಾರರಿಂದ ಸಂತಾನಪ್ಪನ ಗುಣಗಾನವನ್ನೂ, ಅವನ ಉದಾರತೆಯನ್ನೂ ಕೇಳುತ್ತಿದ್ದವಳಿಗೆ ಅವನು ತಮ್ಮೂರಿನ ಕಡೆಯವನೇ ಎಂಬ ಧೈರ್ಯವೂ ಅವಳನ್ನು ಅವನ ಕೋಣೆ ಹೆಜ್ಜೆಯಿಡುವಂತೆ ಪ್ರೇರೇಪಿಸಿತು. ಕೋಣೆ ಹೊಕ್ಕವಳು ಒಂದು ಮೂಲೆಗೆ ಸರಿದು, ಸಿಮೆಂಟು ಮೆತ್ತಿದ್ದ ತನ್ನ ಪಾದಗಳನ್ನು ಮುಜುಗರದಿಂದ ಮರೆಮಾಚುತ್ತ, ಹೆಬ್ಬೆರಳುಗಳಿಂದ ಅಲ್ಲಲ್ಲೇ ಅದನ್ನು ತೊಡೆದು ಹಾಕುತ್ತ ನಿಂತಳು. ಅವಳ ನಾಚಿಕೆಯನ್ನು ಕಂಡ ಸಂತಾನಪ್ಪ ರೋಮಾಂಚಿತನಾಗಿ ಮಾತಾಡಿಸಿದ. ಅವಳೂ ವಯ್ಯಾರದಿಂದ ನುಲಿಯುತ್ತ ಒಂದಿಷ್ಟು ಮಾತಾಡಿದಳು. ಮಾತಿನ ಮಧ್ಯೆ ಅವಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಂತಾನಪ್ಪನ ಮನಸ್ಸು ಈ ಪುಟ್ಟ ರಾಜಕುಮಾರಿ ತನ್ನವಳಾಗಲೇಬೇಕೆಂದು ಹಠ ಹಿಡಿದುಬಿಟ್ಟಿತು. ಆದ್ದರಿಂದ ಅವನು ಮತ್ತೆ ತಡಮಾಡಲಿಲ್ಲ. ‘ಹೇ, ಹುಡಿಗಿ, ಬ್ಯಾಸರ ಮಾಡ್ಕೊಳ್ಳೊದಿಲ್ಲ ಅಂದ್ರ ಒಂದ್ ಮಾತ್ ಕೇಳೇನು…?’ ಎಂದ ಮೃದುವಾಗಿ.‘ಹ್ಞೂಂ ಹೇಳಿ, ಏನಾ…?’ ಎಂದಳು ಅವಳು ತಲೆತಗ್ಗನನ್ನ ಮದಿವಿ ಆಗ್ತಿ ಏನಾ…?’ ಎಂದು ಸಂತಾನಪ್ಪ ತುಟಿಯಂಚಿನಲ್ಲಿ ನಗುತ್ತ ಕೇಳಿದ. ದ್ಯಾವಮ್ಮ ಬೆಚ್ಚಿ ಬಿದ್ದವಳಂತೆ ನಟಿಸಿದಳು. ನಂತರ ಲಜ್ಜೆಯಿಂದ, ‘ಅಯ್ಯಯ್ಯಾ…ಅದೆಲ್ಲ ನಂಗೊತ್ತಿಲ್ಲಪ್ಪಾ! ಅಪ್ಪಯ್ಯನ್ ಕೇಳಿ. ಅಂವ ಹ್ಞೂಂ ಅಂದ್ರಾ ನಾನೂ ಹ್ಞೂಂ…!’ ಎಂದವಳು ಒಂದೇ ಉಸಿರಿಗೆ ಹೊರಗ್ಹೋಡಿ ಬಂದಳು.    ಅಷ್ಟು ಸಣ್ಣ ಪ್ರಾಯದ ಹುಡುಗಿಯೊಬ್ಬಳು ಪ್ರಥಮ ನೋಟದಲ್ಲೇ ಮತ್ತು ಮೊದಲ ಮಾತುಕತೆಯಲ್ಲೇ ತನ್ನನ್ನು ಮೆಚ್ಚಿದ್ದು ಸಂತಾನಪ್ಪನಲ್ಲಿ ಮೊದಲಿಗೆ ವಿಸ್ಮಯವನ್ನೂ ಅನುಮಾನವನ್ನೂ ಮೂಡಿಸಿತಾದರೂ ಅದನ್ನು ಬದಿಗೊತ್ತಿದವನು, ತಾನು ಈ ವಯಸ್ಸಿನಲ್ಲೂ ಸಣ್ಣ ಹುಡುಗಿಯರು ಇಷ್ಟಪಡುವಂತೆ ಇದ್ದೇನೆಯೇ? ಎಂದು ಯೋಚಿಸಿ ಪುಳಕಿತನಾದ. ಏಕೆಂದರೆ ಅವನು ತನ್ನ ಮೊದಲ ಮಡದಿ ಮುನಿಯಮ್ಮನ ಜೊತೆಗಿನ ಸಂಸಾರದಲ್ಲಿ ಬಹಳವೇ ನೀರಸಗೊಂಡಿದ್ದ. ಹಾಗಾಗಿ ಈಗಿನ ಶ್ರೀಮಂತ ಬದುಕಿಗೆ ಹೊಸದೊಂದು ಸಂಗಾತಿಯ ಬಯಕೆಯು ಅವನನ್ನು ಸದಾ ಕಾಡುತ್ತಿತ್ತು. ಆದ್ದರಿಂದ ಮರುದಿನವೇ ದ್ವಾವಮ್ಮಳ ಅಪ್ಪ ಮಲ್ಲೇಶಪ್ಪನನ್ನು ಕಟ್ಟಡಕ್ಕೆ ಕರೆದು ಕುಳ್ಳಿರಿಸಿಕೊಂಡು ಮಾತುಕತೆಗಿಳಿದ. ಮಲ್ಲೇಶಪ್ಪನಿಗೆ ಸಂತಾನಪ್ಪನ ಕಥೆಯೆಲ್ಲ ಗೊತ್ತಿತ್ತು. ಆದರೂ ತಾನವನ ಅಡಿಯಾಳಾಗಿ ದುಡಿಯುವವನೆಂಬ ಗೌರವಕ್ಕೆ ಮಣಿದು ಅವನೆದುರು ವಿನಮ್ರವಾಗಿ ಕುಳಿತುಕೊಂಡ. ‘ಮಲ್ಲೇಶಪ್ಪಾ ನಾನು ಸುತ್ತಿ ಬಳಸಿ ಮಾತಾಡೋನಲ್ಲ. ನಂಗ್ ಈಗಾಗಲೇ ಸಂಸಾರ ಐತಿ ಅಂತ ನಿಂಗೂ ಗೊತ್ತೈತಿ. ಆದರೆ ನನ್ನಾಕಿ ವಿದ್ಯಾಬುದ್ಧಿ ಕಲ್ತವಳಲ್ಲ. ಮಕ್ಕಳಿನ್ನೂ ಸಣ್ಣವು. ನಂಗಿರುವ ದೊಡ್ಡ ಆಸ್ತಿಯನ್ನು ಸಂಭಾಳಿಸಲು ಅವ್ರಿಂದ ಸಾಧ್ಯ ಆಗಕಿಲ್ಲ. ನಿನ್ ಮಗ್ಳು ಶಾಲೆ ಓದಿರೋಳು. ಭಾಳ ಶಾಣೆಯೂ ಅದಾಳ. ಹಂಗಾಗಿ ನಂಗೆ ಆಕಿ ಹಿಡಿಸಿಯಾಳ. ಆಕಿಗೂ ನಾ ಒಪ್ಪಿಗೆಯಾಗಿವುನಿ. ಆಕಿ ನಿನ್ನ ಒಪ್ಪಿಗಿ ಕೇಳು ಅಂದಾಳ. ನೀನು ಆಕೀನ ನಂಗಾ ಕೊಟ್ಟು ಮದಿವಿ ಮಾಡಿದಿಯಂದ್ರಾ ಆಕೀನ ರಾಣಿ ಹಂಗೆ ನೋಡ್ಕೊಂತೀನಿ ಮಾತ್ರವಲ್ಲ, ನಿನ್ನೆಲ್ಲ ಉದ್ರೀನ (ಸಾಲ) ತೀರ್ಸಿ, ನನ್ ಹಿರಿಯನಂಗೆ ಜೋಪಾನ ಮಾಡ್ತೀನಿ, ಏನಂತೀ…?’ ಎಂದು ಗಂಭೀರವಾಗಿ ಕೇಳಿದ.    ಸ್ತ್ರೀಯರ ವಿಷಯದಲ್ಲಿ ಸಂತಾನಪ್ಪ ಸ್ವಲ್ಪ ದುರ್ಬಲ ಬುದ್ಧಿಯವನು ಹೌದಾದರೂ ಇತರ ವಿಷಯಗಳಲ್ಲಿ ಅವನು ಯಾರಿಗೂ ಮೋಸ, ಕೇಡು ಬಗೆದ ಮನುಷ್ಯನಲ್ಲ. ತಮ್ಮೂರಿನ ಜನರಿಗೆ ಅವನು ಬಹಳ ಕರುಣೆ ಅನುಕಂಪ ತೋರಿಸುತ್ತ ಉಪಕಾರ ಮಾಡುತ್ತ ಬರುತ್ತಿರುವವನು ಎಂಬುದನ್ನೆಲ್ಲ ಮಲ್ಲೇಶಪ್ಪನೂ ಗಮನಿಸುತ್ತ ಬಂದಿದ್ದ. ಹೀಗಿರುವಾಗ ಈಗ ತನ್ನ ಒಪ್ಪಿಗೆಯಿಂದ ಮಗಳ ಬಾಳು ಹಸನಾಗುವುದಲ್ಲದೇ ತನ್ನ ತಲೆಯ ಮೇಲಿರುವ ದೊಡ್ಡ ಮೊತ್ತದ ಉದಾರಿಯೂ ಕಳಚಿಕೊಳ್ಳುತ್ತದೆ ಎಂದೂ ಯೋಚಿಸಿದ. ಹಾಗಾಗಿ ಈ ಸನ್ನಿವೇಶವು ಅವನಿಗೆ ದಿಢೀರ್ರನೇ ದೇವರು ಪ್ರತ್ಯಕ್ಷನಾಗಿ, ‘ಭಕ್ತಾ, ನಿನಗೇನು ವರ ಬೇಕೋ ಕೇಳುವಂತವನಾಗು…?’ ಎಂಬಂತಾಯಿತು. ಮುಂದೇನೂ ಯೋಚಿಸದೆ ಮಗಳನ್ನು ಅವನಿಗೆ ಧಾರೆಯೆರೆದುಬಿಟ್ಟ. ಅಂದಿನಿಂದ ದ್ಯಾವಮ್ಮ ಸಂತಾನಪ್ಪನ ಎರಡನೆಯ ಹೆಂಡತಿಯಾಗಿ ತಾನು ಅಂದುಕೊಂಡಂತೆಯೇ ತಗಟು ಶೀಟಿನ ಜೋಪಡಿಯನ್ನು ತೊರೆದು ಮಸಣದಗುಡ್ಡೆಯ ರಾಮತೀರ್ಥ ಕಾಮತರ ಬಾಡಿಗೆಯ ತಾರಸಿ ಮನೆಯ ಸಿರಿವಂತ ಬದುಕಿಗೆ ಪಾದಾರ್ಪಣೆ ಮಾಡಿದಳು.   ಆದರೆ ಆವತ್ತು ಮಧುಚಂದ್ರದ ರಾತ್ರಿ ಗಂಡನ ಕೋಣೆ ಪ್ರವೇಶಿಸಿದ ದ್ಯಾವಮ್ಮನಿಗೆ ತನ್ನ ಹಳೆಯ ಪ್ರೇಮಿ ಪರಮೇಶನ ನೆನಪು ಇನ್ನಿಲ್ಲದಂತೆ ಕಾಡಿತು. ಅವನ ಮುಗ್ಧ, ನಿಶ್ಕಲ್ಮಶ ಪ್ರೀತಿಯನ್ನು ನೆನೆದವಳ ಕರುಳು ಹಿಂಡಿದಂತಾಗಿ ಕಣ್ಣೀರುಕ್ಕಿ ಬಂತು. ಆ ಅಮಾಯಕನಿಗೆ ದ್ರೋಹ ಮಾಡಿಬಿಟ್ಟೆನೇನೋ…? ಎಂಬ ಪಾಪಪ್ರಜ್ಞೆ ಹುಟ್ಟಿತು. ಸುಮಾರು ಹೊತ್ತು ಅಳುತ್ತ ಕುಳಿತಳು. ಅದೇ ಹೊತ್ತಿಗೆ ಸುಗಂಧದ್ರವ್ಯದ ಪರಿಮಳವೂ ಮಲ್ಲಿಗೆ ಹೂವಿನ ಕಂಪೂ ಅವಳ ಕೋಣೆಯತ್ತ ಇಂಪಾಗಿ ಹರಿದು ಬಂತು. ಆಗ ಅಳು ನಿಲ್ಲಿಸಿ ಅತ್ತ ಗಮನ ಹರಿಸಿದಳು. ಸಂತಾನಪ್ಪ ಬಾಗಿಲು ತಳ್ಳಿಕೊಂಡು ಒಳಗಡಿಯಿಟ್ಟ. ಅವನು ತನ್ನ ಭುಜ, ಕತ್ತು ಮತ್ತು ಕೈಗಳಿಗೆ ಮಲ್ಲೆಹೂವಿನ ದಂಡೆಯನ್ನು ಸುತ್ತಿಕೊಂಡು ದ್ಯಾವಮ್ಮಳತ್ತ ತುಂಟ ನಗುತ್ತ ಬೀರುತ್ತ ಬಂದ. ದ್ವಾವಮ್ಮ ಅವನಿಗೆ ತಿಳಿಯದಂತೆ ಕಣ್ಣೊರೆಸಿಕೊಂಡಳು. ಭಯದಿಂದ ಅವಳೆದೆ ಜೋರಾಗಿ ಬಡಿದುಕೊಂಡಿತು. ವಿಪರೀತ ಲಜ್ಜೆಯೂ ಮೂಡಿ ಎದ್ದು ತಲೆತಗ್ಗಿಸಿ ನಿಂತಳು. ಸಂತಾನಪ್ಪ ಡೇಸಾರ ಅಪಾರ ಸಂಪತ್ತಿನ ಒಡೆತನಕ್ಕೆ ಇವಳಿಂದಲೂ ಸಮರ್ಥ ಪುತ್ರನೊಬ್ಬನನ್ನು ಪಡೆಯುವ ಇಚ್ಛೆಯಿಂದ ಸಮೀಪಿಸಿದ. ದ್ಯಾವಮ್ಮ ಅವನನ್ನು ಎದುರುಗೊಂಡಳು. ತುಸುಹೊತ್ತಲ್ಲಿ ಶ್ರೀಮಂತ ಗಂಡನ ತೋಳತೆಕ್ಕೆಯಲ್ಲಿ ಮೃದುವಾಗಿ ನಲುಗುತ್ತ ತೃಪ್ತಿಯ ಪರಾಕಷ್ಠೆ ತಲುಪಿದ ಮರುಕ್ಷಣ ಅವಳು ತನ್ನ ಕೊರಳನ್ನು ವಿನಾಕಾರಣ ನೋಯಿಸುತ್ತಿದ್ದ ಮುತ್ತಿನ ಹಾರವನ್ನು ಸರ್ರನೆ ಕಿತ್ತೆಸೆಯುವಂತೆ ಪರಮೇಶನ ಪ್ರೀತಿಯ ನೆನಪುಗಳನ್ನೂ ಮನಸ್ಸಿನಿಂದ ಹರಿದು ಚೆಲ್ಲಿಬಿಟ್ಟಳು.                                                          *** ಅತ್ತ ದ್ಯಾವಮ್ಮಳ ಮೊದಲ ರಾತ್ರಿಯ ಹೊತ್ತು ಪರಮೇಶ ತೀರಾ ವಿಚಲಿತನಾಗಿದ್ದ. ಅವಳ ಅಗಲಿಕೆಯ ನೋವನ್ನು ತಾಳಲಾಗದೆ ಮೂಗಿನ ಮಟ್ಟ ಕುಡಿದು ಮಸಣದ ಗುಡ್ಡೆಯ ಪಕ್ಕದ ಮೈದಾನದಲ್ಲಿ ಅಂಗಾತ ಬಿದ್ದುಕೊಂಡು ದಟ್ಟ ಕತ್ತಲಾಗಸವನ್ನು ದಿಟ್ಟಿಸುತ್ತ ರೋಧಿಸುತ್ತಿದ್ದ. ತನ್ನ ಸಂಗಾತಿಯಾಗಿ ತನ್ನ ವಂಶದ ಕುಡಿಗಳನ್ನು ಹೆತ್ತು ಹೊತ್ತು ಜೀವನ ಹಸನಾಗಿಸಲೆಂದೇ

Read Post »

ಇತರೆ, ದಾರಾವಾಹಿ

ದಾರಾವಾಹಿ ಅದ್ಯಾಯ-10 ಸಂತಾನಪ್ಪನ ಶ್ರೀಮಂತಿಕೆಯನ್ನು ಕಂಡು ಶಂಕರ ಬೆಕ್ಕಸ ಬೆರಗಾಗಿದ್ದ! ಹಿಂದೊಮ್ಮೆ ತನ್ನೊಂದಿಗೆ ಮೂರುಕಾಸಿಗೆ ದುಡಿಯುತ್ತಿದ್ದಂಥ ಆ ಗಂಡ, ಹೆಂಡತಿ ಒಮ್ಮೆ ಹೇಳದೆ ಕೇಳದೆ ಓಡಿ ಹೋಗಿದ್ದು ಮಾತ್ರವಲ್ಲದೇ ತನ್ನ ಬದ್ಧ ವೈರಿ ರಘುಪತಿಯೊಂದಿಗೆ ಸೇರಿಕೊಂಡಿದ್ದನ್ನು ತಿಳಿದು ಅವರ ಮೇಲೆ ವಿಪರೀತ ಕುಪಿತನಾಗಿದ್ದ. ಆದರೆ ರಘುಪತಿಯೊಂದಿಗೆ ಮರಳಿ ಜಗಳವಾಡಲು ಅವನಿಗೆ ಧೈರ್ಯವಿರಲಿಲ್ಲ. ಆದ್ದರಿಂದ ತಾನು ಮನಸ್ಸು ಮಾಡಿದರೆ ಸಂತಾನಪ್ಪನಂಥ ಸಾವಿರ ಕೂಲಿಯಾಳುಗಳನ್ನು ಉತ್ತರ ಕರ್ನಾಟಕದಿಂದಲ್ಲದೇ ಉತ್ತರ ಭಾರತದಿಂದಲೂ ತರಿಸಿಕೊಳ್ಳಬಲ್ಲೆ! ಎಂದು ತನ್ನನ್ನು ತಾನೇ ಸಮಾಧಾನಿಸಿಕೊಂಡವನು ತನ್ನನ್ನು ತೊರೆದು ಹೋಗುತ್ತಿದ್ದ ಇತರ ಕೂಲಿಯಾಳುಗಳಂತೆಯೇ ಸಂತಾನಪ್ಪ ದಂಪತಿಯನ್ನೂ ಕಡೆಗಣಿಸಿದ್ದ.    ಆದರೆ ಅದೇ ಸಂತಾನಪ್ಪ, ಡೇಸಾರ ಮನೆ ಸೇರಿಕೊಂಡಿದ್ದನ್ನೂ ಅವರ ಐಶ್ವರ್ಯವೆಲ್ಲ ಅವನ ಪಾಲಾದುದನ್ನೂ ಮತ್ತು ಆನಂತರ ಅವನು ತನ್ನೆದುರಿಗೇ ಆಗರ್ಭ ಶ್ರೀಮಂತನಂತೆ ಮೆರೆಯತೊಡಗಿದ್ದನ್ನೂ ಕಾಣುತ್ತ ಬಂದ ಶಂಕರ ಯದ್ವಾತದ್ವ ಹೊಟ್ಟೆ ಉರಿಸಿಕೊಂಡ. ಅಷ್ಟಲ್ಲದೇ ಅವನೂ ತನ್ನಂತೆ ಮನೆ, ಕಟ್ಟಡ ಕಾಮಗಾರಿಯ ಗುತ್ತಿಗೆ ವಹಿಸಿಕೊಳ್ಳಲಾರಂಭಿಸಿದ್ದಂತೂ ಶಂಕರನನ್ನು ರೊಚ್ಚಿಗೆಬ್ಬಿಸಿಬಿಟ್ಟಿತು. ಆದ್ದರಿಂದ, ಒಂದೆರಡು ವರ್ಷಗಳ ಹಿಂದಷ್ಟೇ ಯಾವನೋ ಭಿಕಾರಿಯೊಬ್ಬ ತನ್ನಲ್ಲಿಗೆ ಕೂಲಿನಾಲಿಗೆ ಬಂದು, ತನಗೆ ಸಲಾಂ ಹೊಡೆಯುತ್ತಿದ್ದಂಥವನು ಇವತ್ತು ತನಗೇ ಪ್ರತಿಸ್ಪರ್ಧಿಯಾಗಿ ನಿಂತಿದ್ದಾನೆ ಮಾತ್ರವಲ್ಲದೇ ನಮ್ಮೂರಿವರ ಆಸ್ತಿಪಾಸ್ತಿಯನ್ನೇ ಲಪಟಾಯಿಸಿ ತನ್ನ ಕಣ್ಣಮುಂದೆಯೇ ಮೆರೆದಾಡುತ್ತಿದ್ದಾನೆಂದರೆ ಅವನಿಗೆಷ್ಟು ಅಹಂಕಾರವಿರಬೇಕು! ಅಂಥವನನ್ನು ಸುಮ್ಮನೆ ಬಿಡಲಿಕ್ಕುಂಟಾ? ಈಶ್ವರಪುರದ ಜನರು ನಾವೆಲ್ಲ ಅಷ್ಟೊಂದು ಮೂರ್ಖರೆಂದು ಭಾವಿಸಿದನೇ ಆ ಬೋಳಿಮಗ! ಈ ಊರಲ್ಲೇ ಹುಟ್ಟಿ ಬೆಳೆದವನು ನಾನು. ನನ್ನ ಈಗಿನ ಹಂತಕ್ಕೆ ತಲುಪಬೇಕಾದರೆ ಅದೆಷ್ಟು ಕಷ್ಟಪಟ್ಟಿದ್ದೇನೆ! ಆದರೂ ಒಂದೊಳ್ಳೆಯ ತೃಪ್ತಿಯ ಮಟ್ಟಕ್ಕಿನ್ನೂ ಬೆಳೆಯಲಾಗಲಿಲ್ಲ. ಅಂಥದ್ದರಲ್ಲಿ ಯಾವನೋ ಒಬ್ಬ ಲಾಟರಿ ಹೊಡೆದಂತೆ ತನ್ನ ಕಣ್ಣೆದುರೇ ಇನ್ನೊಬ್ಬರ ಸಂಪತ್ತನ್ನು ಅನುಭವಿಸಲು ಬಿಟ್ಟೇನೇ…? ಅದೂ ತನ್ನ ಶತ್ರುವಿನ ಸಂಗ ಮಾಡಿದಂಥವನಿಗೆ! ಖಂಡಿತಾ ಇಲ್ಲ. ಹೇಗಾದರೂ ಮಾಡಿ ಅವನಿಂದ ಡೇಸಾರ ಆಸ್ತಿಯ ಸಣ್ಣ ಕವಡೆಯನ್ನೂ ಬಿಡದೆ ಕಿತ್ತುಕೊಳ್ಳಬೇಕು! ಎಂದು ಶಂಕರ ಒಮ್ಮೆ ಉದ್ರಿಕ್ತನಾಗಿ ಯೋಚಿಸಿದವನು ಸಂತಾನಪ್ಪನನ್ನು ಹೊಸಕಿ ಹಾಕಲು ವ್ಯವಸ್ಥಿತ ಸಂಚೊಂದನ್ನು ರೂಪಿಸಿದ. ಸಂತಾನಪ್ಪನಂತೆಯೇ ತನ್ನ ಕೈಕೆಳಗೆ ನೂರಾ ಒಂದನೆಯ ಆಳಾಗಿ ದುಡಿಯುತ್ತ ಕಾರಣವಿಲ್ಲದೆ ತನ್ನಿಂದ ಒದೆಸಿಕೊಳ್ಳುತ್ತ ಕೊನೆಗೊಮ್ಮೆ ರೋಸಿ ಓಡಿ ಹೋಗಿದ್ದಂಥ ಹನುಮಪ್ಪ ಎಂಬವನಿಂದ ತನ್ನ ಕಾರ್ಯ ಸಾಧಿಸಿಕೊಳ್ಳಲು ಮುಂದಾದ. ಆದ್ದರಿಂದ ಒಬ್ಬ ಕೂಲಿಯಾಳಿನೊಂದಿಗೆ, ಹನುಮಪ್ಪ ಕೂಡಲೇ ತನ್ನನ್ನು ಕಾಣಲು ಬರುವಂತೆ ಹೇಳಿ ಕಳುಹಿಸಿದ.    ಆದರೆ ಶಂಕರನ ಕಿಡಿಗೇಡಿತನದ ಅರಿವಿದ್ದ ಹನುಮಪ್ಪನಿಗೆ ಅವನ ಹೆಸರೆತ್ತುತ್ತಲೇ ಚೇಳು ಕುಟುಕಿದಂತಾಯಿತು. ಅವನು ಹೇಳಿಕೆ ತಂದವನನ್ನು ಕೋಪದಿಂದ ಧುರುಗುಟ್ಟುತ್ತ, ‘ಹೇ, ಹೋಗಲೇ ಅವನೌವ್ವನಾ! ಸತ್ತರೂ ಇನ್ನೊಂದ್ ದಪಾ ಆ ಹಡೀ ಸೂಳೀಮಗನ ಮಖಾ ನೋಡಕ್ಕಿಲ್ಲಂತ ಓಗೇಳು ಅವ್ನುಗೇ…!’ ಎಂದು ಗದರಿಸಿಬಿಟ್ಟ. ಕೆಲಸದಾಳು ಹಾಗೆಯೇ ಹಿಂದಿರುಗಿದ. ಆದರೆ ಹನುಮಪ್ಪ ಬೈದುದನ್ನು ಶಂಕರನಿಗೆ ಹೇಳಲಿಲ್ಲ. ಬದಲಿಗೆ, ‘ಅವ್ನು ಬರಾಕಿಲ್ಲಾಂದ ಧಣೇರಾ…!’ ಎಂದಷ್ಟೆ ಹೇಳಿದ. ತನ್ನ ಆದೇಶವನ್ನು ತಿರಸ್ಕರಿಸಿದ ಹನುಮಪ್ಪನ ಕೊಬ್ಬನ್ನು ನೆನೆದ ಶಂಕರನಿಗೆ, ಈ ಕ್ಷಣವೇ ಹೋಗಿ ಆ ಬೇವರ್ಸಿಯನ್ನು ಹೊತ್ತು ತಂದು ತುಳಿದು ಹಾಕಲಾ…? ಎಂದೆನ್ನಿಸಿತು. ಆದರೂ ‘ಕಾರ್ಯವಾಸಿ ಕತ್ತೆ ಕಾಲು!’ ಎಂದುಕೊಂಡು ಅವುಡುಗಚ್ಚಿದ. ಆವತ್ತೊಂದು ಭಾನುವಾರ ಸಂಜೆ ತಾನೇ ಖುದ್ದಾಗಿ ಮಸಣದಗುಡ್ಡೆಯ ಹನುಮಪ್ಪನ ಗುಡಿಸಲಿನತ್ತ ಹೊರಟ. ಹನುಮಪ್ಪ ಆಹೊತ್ತು ಕುಡಿದು ಮತ್ತನಾಗಿ ತನ್ನ ಕಾಲೋನಿಯ ಅಶ್ವತ್ಥಮರದ ಕಟ್ಟೆಯಲ್ಲಿ ಕುಳಿತುಕೊಂಡು ನೆರೆಕರೆಯವರೊಡನೆ ಪಟ್ಟಾಂಗ ಹೊಡೆಯುತ್ತಿದ್ದ. ಶಂಕರನ ಕಾರು ಬಂದು ಮರದ ಹತ್ತಿರ ನಿಲ್ಲುತ್ತಲೇ ಬೆಚ್ಚಿಬಿದ್ದು ಎದ್ದು ನಿಂತ. ‘ಮೊನ್ನೆ ತಾನು ಸಿಟ್ಟಿನ್ ಬರದಾಗ ಈ ದುಷ್ಟನಿಗೆ ಬೈದಿದ್ದನ್ನು ಇವನ ಎಂಚಿಲು ನೆಕ್ಕುವ ಆ ನಾಯಿ ಹಾಗೆಯೇ ಒದರಿಬಿಟ್ನೇನೋ! ಇವ ಮೊದಲೇ ತಲೆಕೆಟ್ಟ ಮುಳ್ಳುಹಂದಿ. ಈಗ ನೆರೆಕರೆಯವರ ಮುಂದೆ ಅದೇನ್ ಮಾಡ್ತಾನೋ…?’ ಎಂದು ಯೋಚಿಸಿ ತಣ್ಣಗೆ ಬೆವರಿದ.    ಶಂಕರ ಗಂಭೀರವಾಗಿ ಕಾರಿನಿಂದಿಳಿದವನು ಹನುಮಪ್ಪನನ್ನೊಮ್ಮೆ ದುರುಗುಟ್ಟಿ ನೋಡಿದ. ಆಗ ಇನ್ನಷ್ಟು ಕುಗ್ಗಿದ ಅವನ ದೃಷ್ಟಿಯು ತಟ್ಟನೆ ನೆಲಕಚ್ಚಿತು. ‘ಲೇ, ಮಗನಾ ಲಘೂನ ಓಡಿ ಹೋಗಲೇ ಇಲ್ಲಿಂದ…!’ ಎಂದು ಅವನೊಳಗೆ ಯಾರೋ ಕೂಗಿ ಹೇಳಿದಂತಾಯಿತು. ಪಟ್ಟನೇ ತಲೆ ಎತ್ತಿ ಶಂಕರನತ್ತ ನೋಡಿದ. ಆದರೆ ಅವನಾಗಲೇ ಇವನೆದುರು ಬಂದು ನಿಂತಿದ್ದ. ಹನುಮಪ್ಪ ದೆವ್ವ ದರ್ಶನವಾದಂತೆ ಬೆದರಿ ಕುಸಿದು ಬೀಳುವುದೊಂದೇ ಬಾಕಿಯಿತ್ತು! ಅದೇ ಹೊತ್ತಿಗೆ ಅವನೊಂದಿಗೆ ಕುಳಿತಿದ್ದ ನೆರೆಕರೆಯವರು, ‘ಈಗೇನೋ ಗಮ್ಮತ್ತು ನಡೆಯಕೈತಿ!’ ಎಂದು ಕುತೂಹಲ, ಭಯದಿಂದ ರಪ್ಪನೆದ್ದವರು ಶಂಕರನತ್ತ ಹಲ್ಲು ಗಿಂಜುತ್ತ ಹಿಂದೆ ಸರಿದು ನಿಂತು ಅವನಾಟಕ್ಕೆ ಅನುವು ಮಾಡಿಕೊಟ್ಟರು. ‘ಯಾಕಾ ಹನುಮಪ್ಪಾ ಆವತ್ತು ಹೇಳದೆ ಕೇಳದೆ ಕೆಲಸ ಬಿಟ್ಟು ಹೋದವನದ್ದು ಆಮೇಲೆ ಪತ್ತೇನೇ ಇಲ್ಲವಲ್ಲಾ ಮಾರಾಯಾ?’ ಎಂದು ಶಂಕರ ಮುಗುಳ್ನಗುತ್ತ ಪ್ರಶ್ನಿಸಿದ. ಆಗ ಹನುಮಪ್ಪನಿಗೆ ಜೀವ ಬಂದಂತಾಯಿತು. ಆದರೂ ವಿಪರೀತ ಭಯಪಟ್ಟಿದ್ದರಿಂದಲೋ ಏನೋ ಅವನ ಯೋಚನೆಯೇ ನಿಂತುಹೋಗಿತ್ತು. ಶಂಕರನ ಮಾತಿಗೆ ಪಕ್ಕನೇ ಏನುತ್ತರಿಸಬೇಕೆಂದು ತಿಳಿಯದೆ, ‘ಹ್ಞಾಂ… ಅದೂ, ಹಾಗೇನಿಲ್ರೀ ಧಣೇರಾ…!’ ಎಂದು ಹಲ್ಲು ಗಿಂಜಿದ. ‘ಎಂಥದು ಹಾಗೇನಿಲ್ಲ? ನನ್ನೊಂದಿಗೆ ನೀನು ಎಷ್ಟು ವರ್ಷಗಳಿಂದ ದುಡಿಯುತ್ತಿದ್ದಿ ಮಾರಾಯಾ? ಆದರೂ ನನ್ನ ಸ್ವಭಾವ ಎಂಥದ್ದು ಅಂತ ಅರ್ಥವಾಗಲಿಲ್ಲವಲ್ಲಾ ನಿಂಗೆ…? ಆವತ್ತೇನೋ ಕೋಪದ ಭರದಲ್ಲಿ ಎರಡೇಟು ಹೊಡೆದುಬಿಟ್ಟೆ. ಅಷ್ಟಕ್ಕೇ ಎದ್ದು ಹೋಗಿಬಿಡುವುದಾ! ಆನಂತರ ನಾನೆಷ್ಟು ಸಂಕಟಪಟ್ಟೆ ಅಂತ ನಿನಗೇನಾದರೂ ಗೊತ್ತುಂಟಾ?’ ಎಂದು ವಿಷಾದ ವ್ಯಕ್ತಪಡಿಸಿದ. ಶಂಕರನ ಕುತಂತ್ರ ಅರಿಯದ ಅಮಾಯಕ ಹನುಮಪ್ಪ ಅವನ ಶರಣಾಗತಿಯನ್ನು ಕಂಡು ವಿಸ್ಮಯಗೊಂಡ. ಬಳಿಕ, ‘ಎಷ್ಟಾದರೂ ಕಷ್ಟಕಾಲದಲ್ಲಿ ಕೆಲ್ಸ ಕೊಟ್ಟು ಕಾಪಾಡ್ದ ಧಣಿ ಇವ್ರು. ಅಷ್ಟಲ್ಲದೇ ಸ್ವತಃ ತಾವೇ ಹುಡುಕೊಂಬಂದು ತಪ್ಪೊಪ್ಕೊಂಡಿದ್ದಾರೆ. ಇಂಥವರನ್ನು ಬೈದ್ ಬಿಟ್ನಲ್ಲ!’ ಎಂದು ಕೊರಗಿ, ಸಂಕೋಚದಿಂದ ಹಿಡಿಯಾಗಿ ಏನೋ ಹೇಳಲು ಬಾಯಿ ತೆರೆದ. ಅಷ್ಟರಲ್ಲಿ, ‘ನೋಡು ಹನುಮಪ್ಪ, ಇನ್ನೇನೂ ಮಾತಾಡಬೇಡ. ನನಗೆ ನಿನ್ನ ಅವಶ್ಯಕತೆ ತುಂಬಾ ಇದೆ. ನಾಳೆಯಿಂದ ಮರುಮಾತಾಡದೆ ಕೆಲಸಕ್ಕೆ ಬಂದುಬಿಡು. ಹ್ಞಾಂ, ಇನ್ನೊಂದು ಮಾತು. ಇಷ್ಟು ವರ್ಷ ನನ್ನೊಂದಿಗೆ ಕೂಲಿಯವನಾಗಿ ದುಡಿದೆ. ಆದರೆ ನಾಳೆಯಿಂದ ಮೇಸ್ತ್ರಿಯಾಗಿ ದುಡಿಯಬೇಕು. ಅದು ನಿನ್ನಿಂದ ಸಾಧ್ಯವಾ?’ ಎಂದು ಹಸಿದ ನಾಯಿಯ ಮುಂದೆ ಮಾಂಸದ ಚೂರನ್ನೆಸೆದಂತೆ ಆಸೆ ತೋರಿಸಿದ. ಮೇಸ್ತ್ರಿ ಎಂದ ಕೂಡಲೇ ಹನುಮಪ್ಪ ಖುಷಿಯಿಂದ ಆಕಾಶಕ್ಕೆ ನೆಗೆದುಬಿಟ್ಟ. ಏಕೆಂದರೆ ಅವನು ಈಶ್ವರಪುರಕ್ಕೆ ಕಾರ್ಮಿಕನಾಗಿ ಬಂದು ದುಡಿಯಲಾಂಭಿಸಿ ಹದಿನೈದು ವರ್ಷಗಳು ಕಳೆದಿದ್ದವು. ಮನೆ, ಕಟ್ಟಡ ಕಟ್ಟುವ ಕೆಲಸವೆಲ್ಲವನ್ನೂ ಕಲಿತಿದ್ದ. ಇಂದಲ್ಲ ನಾಳೆ ದೊಡ್ಡ ಮೇಸ್ತ್ರಿಯಾಗಬೇಕು ಎಂಬ ಕನಸನ್ನೂ ಕಾಣುತ್ತಿದ್ದ. ಅದಕ್ಕಾಗಿ ಹಲವು ಗುತ್ತಿಗೆದಾರರೊಡನೆ ಆಗಾಗ ಅಂಗಲಾಚುತ್ತಲೂ ಇದ್ದ. ಆದರೆ ಅವರು ಯಾರೂ ಇವನ ಕೆಲಸದ ಮೇಲೆ ವಿಶ್ವಾಸಬಾರದೆ ನಿರಾಕರಿಸುತ್ತಿದ್ದರು. ಹಾಗಾಗಿ ಹೊಟ್ಟೆಪಾಡಿಗೆ ಮಾತ್ರವೇ ಎಂಬಂತೆ ದುಡಿಯಲು ಹೋಗುತ್ತಿದ್ದ. ಇಂದು ಶಂಕರನಂಥ ದೊಡ್ಡ ಗುತ್ತಿಗೆದಾರನೊಬ್ಬ, ‘ನನ್ನ ಮೇಸ್ತ್ರಿಯಾಗುತ್ತೀಯಾ?’ ಎನ್ನುತ್ತಿದ್ದಾನೆ! ಎಂದು ಯೋಚಿಸಿದವನು ಆನಂದದಿಂದ ಉಬ್ಬಿ ಹೋದ.    ನಿಜ ಹೇಳಬೇಕೆಂದರೆ ಆಗ ಶಂಕರನಿಗೂ ಮೇಸ್ತ್ರೀಗಳ ಜರೂರತ್ತಿತ್ತು. ಆದ್ದರಿಂದಲೇ ಅವನು ಒಂದೇ ಹೊಡೆತಕ್ಕೆ ಎರಡು ಮಿಕಗಳನ್ನು ಹೊಡೆಯುವ ಹುನ್ನಾರದಿಂದ ಬಂದಿದ್ದ. ಆದರೆ ಕುಕ್ಕುಟಗಳಂತೆ ತಂತಮ್ಮ ಕಾಲ ಬುಡಕ್ಕೇ ಕೆದಕಿಕೊಳ್ಳುವಂಥ ಬಂಡವಾಳಶಾಹಿಗಳ ಸ್ವಾರ್ಥ, ಕುತ್ಸಿತ ಬುದ್ಧಿಯನ್ನು ಒಂದಷ್ಟು ಬಡವರ್ಗವು ಎಂದೂ ತಿಳಿಯುವ ಗೋಜಿಗೆ ಹೋಗುವುದಿಲ್ಲ ಅಥವಾ ತಿಳಿದರೂ ತಲೆಕೆಡಿಸಿಕೊಳ್ಳುವುದಿಲ್ಲ ಎಂಬಂತೆ ಹನುಮಪ್ಪನೂ ಹಿಂದುಮುಂದು ಯೋಚಿಸದೆ, ‘ಇಲ್ಲ ಧಣೇರಾ, ಆವತ್ತು ನೀವೊಂದೇಟು ಬಡ್ದದ್ದು ನನ್ನ ಒಳ್ಳೆಯದಕ್ಕಾತು ಅಂತ ತಿಳಕೊಂಡಿನ್ರೀ. ಆತ್ರಿಯಪ್ಪಾ, ನಾಳಿಂದ ನಾ ಮೇಸ್ತ್ರೀಯಾಗೇ ನಿಮ್ಮ ಕೂಡೆ ಕೆಲಸಕ್ಕ ಬರ್ತೀನ್ರೀ. ನೀವೀಗ ಲಘೂನ ಮನಿ ಕಡೀ ಹೊಂಡ್ರೀ ಧಣೇರಾ…!’ ಎಂದು ಸೌಜನ್ಯದಿಂದ ಕೈಮುಗಿಯುತ್ತ ಅಂದ. ‘ಹಾಗೆ ಹೇಳು ಮತ್ತೆ…! ಸರಿ ಹಾಗಾದರೆ, ನಾಳೆ ಬೆಳಿಗ್ಗೆ ಮನೆಯ ಕಡೆ ಬಂದುಬಿಡು. ಕೆಲಸ ಎಲ್ಲೀಂತ ಹೇಳುತ್ತೇನೆ’ ಎಂದ ಶಂಕರ ನೂರರ ನೋಟೊಂದನ್ನು ತೆಗೆದು ಅವನ ಕೈಗೆ ತುರುಕಿಸಿ ನಗುತ್ತ ಹಿಂದಿರುಗಿದ. ತಾನು ಅಂದಂತೆಯೇ ಮರುದಿನ ಅವನಿಗೆ ಮೇಸ್ತ್ರಿ ಕೆಲಸವನ್ನು ಕೊಟ್ಟವನು, ಕೆಲವೇ ದಿನದೊಳಗೆ ಅವನ ಆಪ್ತತೆಯನ್ನೂ ಗಳಿಸಿಕೊಂಡ. ಕಾರಣ ಹನುಮಪ್ಪ, ಸಂತಾನಪ್ಪನ ಸಮೀಪದ ಬಂಧುವೂ ಮೇಲಾಗಿ ಆತ್ಮೀಯ ಮಿತ್ರನೂ ಆಗಿದ್ದ. ಆದ್ದರಿಂದ ಶಂಕರ ಹನುಮಪ್ಪನ ಸಹಾಯದಿಂದಲೇ ಸಂತಾನಪ್ಪನ ವಿಶ್ವಾಸವನ್ನು ಮರಳಿ ಗಳಿಸಿ, ತನ್ನ ಕಾರ್ಯ ಸಾಧಿಸಿಕೊಳ್ಳಲು ನಿರ್ಧರಿಸಿದ. ಹಾಗಾಗಿ ಸಂತಾನಪ್ಪನ ವೃತ್ತಿನಿಷ್ಠೆಯನ್ನೂ ಪ್ರಾಮಾಣಿಕತೆಯನ್ನೂ ಹನುಮಪ್ಪನೊಡನೆ ಮಿತಿಮೀರಿ ಹೊಗಳುತ್ತ ತನ್ನ ಸಾರಾಯಿ ಪಾರ್ಟಿಗಳಿಗೆ ಅವನನ್ನು ಉಪಾಯವಾಗಿ ಆಹ್ವಾನಿಸತೊಡಗಿದ. ಆದರೆ ಶಂಕರ ಹೇಗೆ ಹೇಗೆ ಪ್ರಯತ್ನಿಸಿದರೂ ಸಂತಾನಪ್ಪ ಅವನನ್ನು ನಂಬಲು ತಯಾರಿರಲಿಲ್ಲ. ಕಾರಣ ಶಂಕರ ಮಹಾದುಷ್ಟನೆಂಬ ಭಯವೊಂದು ಕಡೆಯಾದರೆ ಹಿಂದೆ ಒಂದಷ್ಟು ಕಾಲವಾದರೂ ತನಗೂ, ತನ್ನ ಸಂಸಾರಕ್ಕೂ ಅನ್ನ ನೀಡಿದ ಧಣಿಯೆಂಬ ಗೌರವಕ್ಕೋ ಏನೋ ಅವನು ಶಂಕರನ ಸ್ನೇಹದ ಹಸ್ತವನ್ನು ಪುರಸ್ಕರಿಸಲು ಇಷ್ಟಪಡಲಿಲ್ಲ. ಆದರೂ ಹನುಮಪ್ಪನ ಮೂಲಕ ಶಂಕರನ ನಿರಂತರ ಪ್ರಯತ್ನವು ಕೊನೆಗೂ ಒಮ್ಮೆ ಸಂತಾನಪ್ಪನ ಬುದ್ಧಿಯನ್ನು ಮಂಕು ಬಡಿಸಿಬಿಟ್ಟಿತು. ಅದೇ ಸಮಯಕ್ಕೆ ಸರಿಯಾಗಿ ಶಂಕರನೂ ಕೊನೆಯ ಪ್ರಯತ್ನವೆಂಬಂತೆ ಆವತ್ತು ಕಡೆಪಾಡಿಬೆಟ್ಟಿನ ತನ್ನ ಹೊಸ ಫ್ಲ್ಯಾಟ್‍ನಲ್ಲಿ ಸಂತಾನಪ್ಪನಿಗಾಗಿಯೇ ಸಣ್ಣದೊಂದು ಔತಣ ಕೂಟವನ್ನು ಆಯೋಜಿಸಿ ಅವನನ್ನು ವಿಶೇಷ ಆದರದಿಂದ ಆಹ್ವಾನಿಸಿದ.    ಸಂತಾನಪ್ಪ ಒಲ್ಲದ ಮನಸ್ಸಿನಿಂದ ಹನುಮಪ್ಪನೊಂದಿಗೆ ಶಂಕರನ ಫ್ಲ್ಯಾಟ್‍ಗೆ ಆಗಮಿಸಿದ. ಶಂಕರನ ಊರ ಐವರು ಆಪ್ತ ಸ್ನೇಹಿತರೊಂದಿಗೆ ಬರೇ ಎಂಟು ಜನರಿಂದ ಕೂಡಿದ ಸಣ್ಣ ಔತಣಕೂಟ ಅದಾಗಿದ್ದರಿಂದ ಸಂತಾನಪ್ಪನೂ ಮುಜುಗರ ಬಿಟ್ಟು ಅವರೊಂದಿಗೆ ಬೆರೆತ. ವಿದೇಶಿ ಮದ್ಯದ ಬಾಟಲಿಗಳು ಮತ್ತು ಆಡು, ಕೋಳಿಯ ಹುರಿದ ಮಾಂಸದ ಖಾದ್ಯಗಳು ಕೋಣೆಯೊಳಗೆಲ್ಲ ಘಮಘಮಿಸುತ್ತ ಹಭೆಯಾಡುತ್ತಿದ್ದವು. ಶಂಕರ ಎಲ್ಲರೊಂದಿಗೆ ಸಂತಾನಪ್ಪನಿಗೂ ಸಾರಾಯಿ ಕೊಟ್ಟ. ಸಂತಾನಪ್ಪ ಸಂಕೋಚದಿಂದ ಒಂದು ಪೆಗ್ಗು ಹೊಟ್ಟೆಗಿಳಿಸಿದ. ತುಸು ಮತ್ತೇರುತ್ತಲೇ ನಿರ್ಭಿಡೆಯಿಂದ ಕೈಕಾಲು ಚಾಚಿ ಕುಳಿತು ಶಂಕರ ಬಗ್ಗಿಬಗ್ಗಿಸಿ ಕೊಡುತ್ತಿದ್ದ ಪೆಗ್ಗನ್ನು ಅಡಿಗಡಿಗೆ ಹೀರುತ್ತ ಗತ್ತಿನಿಂದ ಎಲ್ಲರೊಂದಿಗೆ ಹರಟತೊಡಗಿದ. ಶಂಕರ, ಸಂತಾನಪ್ಪನನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಕಾದ ಕಬ್ಬಿಣ ಬಡಿಯಲು ಇದೇ ಸರಿಯಾದ ಸಮಯ ಎಂದು ಖಚಿತವಾಗುತ್ತಲೇ, ‘ಏನೋ ಸಂತಾನಪ್ಪಾ ನನ್ನ ಮೇಲೆ ನಿನಗಿನ್ನೂ ಹಿಂದಿನ ಬೇಸರ ಹೋಗಲಿಲ್ಲವಾ ಮಾರಾಯ? ನನ್ನ ಸ್ನೇಹ ಮಾಡಲೇ ಹೆದರುವಂಥ ದ್ರೋಹವನ್ನು ನಿನಗೆ ನಾನು ಮಾಡಿದ್ದಾದರೂ ಏನು ಹೇಳು…?’ಎಂದು ಬೇಸರದ ಧ್ವನಿಯಿಂದ ಕೇಳಿದ. ಶಂಕರನ ಆ ಬಗೆಯ ಆತ್ಮೀಯತೆಯ ಮಾತನ್ನು ಕೇಳಿದ ಸಂತಾನಪ್ಪನಿಗೆ ರಪ್ಪನೆ ಉತ್ತರಿಸಲು ತುಸು ಸಂಕೋಚವಾಯಿತು. ಆದರೆ ಈಗ ತಾನೂ ಶಂಕರನಷ್ಟೇ ಶ್ರೀಮಂತನಲ್ಲವೇ! ಎಂದುಕೊಂಡವನು ಅದೇ ವರ್ಚಸ್ಸಿನಿಂದ, ‘ಹೇ, ಹಾಗೇನಿಲ್ರೀ ಶಂಕ್ರಣ್ಣಾ, ನಿಮ್ಮ್ ಮ್ಯಾಲೆ ಈವಾಗ ನಂಗೇನೂ ಬ್ಯಾಸರ ಇಲ್ಲ ಬಿಡ್ರೀ…!’ ಎಂದ ನಗುತ್ತ. ‘ಹಾಗಾದರೆ ಮತ್ಯಾಕೆ ಆವತ್ತು ಹನುಮಪ್ಪನೊಡನೆ ನಾನು ಎಷ್ಟೊಂದು ಬಾರಿ ಹೇಳಿ ಕಳುಹಿಸಿದರೂ ನೀನು ಬರಲಿಲ್ಲ ಯಾಕೆ ಮಾರಾಯಾ? ಅದರರ್ಥ ನನ್ನ ಮೇಲೆ ನಿನಗಿನ್ನೂ ವಿಶ್ವಾಸ ಬಂದಿಲ್ಲ ಎಂದೇ ಅಲ್ಲವಾ?’ ‘ಯಪ್ಪಾ ವಿಶ್ವಾಸ ಅದೇರೀ… ಆದ್ರಾ ಒಂದ್ಕಾಲದಾಗ ನೀವ್ ನಮ್ ಧಣಿಯಾಗಿದ್ರಲ್ರೀ, ಅದಕ್ಕಾ ಸ್ವಲ್ಪ ಮುಜುಗರ ಆಗ್ತಿತ್ತ್ ಅಷ್ಟೇರೀ!’ ‘ಓಹೋ ಅಷ್ಟೇನಾ ವಿಷ್ಯಾ. ನೋಡು ಸಂತಾನಪ್ಪ ಈ ಹಿಂದೆ ನೀನು ನನ್ನೊಂದಿಗೆ ಕೂಲಿಯವನಾಗಿ ದುಡಿದಿದ್ದಿ ಅಂತ ನಿನ್ನ ಮನಸ್ಸಿನಲ್ಲಿದ್ದರೆ ಅದನ್ನೀಗಲೇ ತೆಗೆದು ಹಾಕು ಮಾರಾಯಾ. ಯಾಕೆಂದರೆ ನೀನೂ ನನ್ನ ಮಟ್ಟಕ್ಕೆ ಬೆಳೆಯಲು ಕಷ್ಟಪಟ್ಟಿದ್ದಿಯೋ ಇಲ್ಲವೋ ಗೊತ್ತಿಲ್ಲ. ಆದರೂ ಬೆಳೆದುಬಿಟ್ಟಿದ್ದಿ ನೋಡು. ಹೀಗಿರುವಾಗ ಆವತ್ತಿನ ಭೇದಭಾವವನ್ನು ಇನ್ನೂ ಇಟ್ಟುಕೊಳ್ಳುವುದರಲ್ಲಿ ಅರ್ಥ ಉಂಟಾ ಹೇಳು?

Read Post »

ಇತರೆ, ದಾರಾವಾಹಿ

ಹಾಗಾಗಿ ತನ್ನ ಹೆಸರಿಗೆ ತಕ್ಕಂತೆ ಮಸಣದಗುಡ್ಡೆಯ ಕೂಲಿ ಕಾರ್ಮಿಕರ ಕಾಲೋನಿಯ, ತನ್ನದೇ ಜಾತಿಯ ಹರೆಯದ ಹುಡುಗಿಯೊಬ್ಬಳನ್ನು ಮೋಹಿಸಿ ಬಲೆಗೆ ಬೀಳಿಸಿಕೊಂಡು, ‘ಮೇಲ್ಸಂಸಾರ’ ಹೂಡಲು ಮನಸ್ಸು ಮಾಡಿದ

Read Post »

You cannot copy content of this page

Scroll to Top