ದಿಕ್ಸೂಚಿ
ಸೋಲಿನ ಸುಳಿಯಲ್ಲೇ ಗೆಲುವಿನ ತುದಿಯಿದೆ! ಎಷ್ಟೆಲ್ಲ ಅನುಭವಗಳ ಮೂಟೆಯನ್ನು ಬೆನ್ನಿಗೆ ಕಟ್ಟಿಕೊಂಡು ತಿರುಗಿದರೂ ಗೆಲುವು ಮಿಂಚಿನಂತೆ ಅರೆಗಳಿಗೆ ಮಿಂಚಿ ಮಾಯವಾಗುತ್ತದೆ.ಇಲ್ಲಿ ಎಲ್ಲದರಲ್ಲೂ ಒತ್ತಡ. ಯಾವುದೂ ಸರಳ ರೇಖೆಯಲ್ಲಿ ಸಿಗುವುದಿಲ್ಲ. ಎಲ್ಲವನ್ನೂ ವಕ್ರ ರೇಖೆಯ ಕಾಣದ ತಿರುವುಗಳಲ್ಲಿ ಶ್ರಮ ಹಾಕಿಯೇ ಪಡೆಯಬೇಕು.ಕೆಲವೊಮ್ಮೆ ಶ್ರಮ ಹಾಕಿದರೂ ಮುಖ ಎತ್ತಿಯೂ ನೋಡದೇ, ಬೆನ್ನು ತೋರಿಸಿ ನಗುತ್ತದೆ. ಕೈಗೆ ಸಿಗದೇ ಓಡಿ ಬಿಡುತ್ತದೆ ಗೆಲುವು! ಒಮ್ಮೊಮ್ಮೆ ನನಗೇ ತಿಳಿಯದಂತೆ ಮೇಲಕ್ಕೆತ್ತರಿಸಿ ಕೂರಿಸುತ್ತದೆ. ಮತ್ತೊಮ್ಮೆ ನಿರೀಕ್ಷಿಸಿದರೂ ಕೈಗೆ ಸಿಗದೇ ಕೆಳಕ್ಕೆ ಎಸೆದು ಬಿಡುತ್ತದೆ. ಹೆದರಿಸಿ ಬೆನ್ನಲ್ಲಿ ಬೆವರಿಳಿಸಿದ ಸೋಲಿನ ಘಟನೆಗಳನ್ನು ನೆನದಾಗಲೊಮ್ಮೆ ಗೆಲುವಿನ ರುಚಿಯ ಆಸೆಯೇ ಬೇಡ ಎಂದೆನಿಸಿ ಬಿಡುತ್ತದೆ.ಸೋಲಿನ ಸಹವಾಸ ಸಾಕಾಗಿ ಒಮ್ಮೆ ಸರಿದು ನಿಂತು ಬದುಕಿನ ಕಪಾಳಕ್ಕೆ ಬಾರಿಸಲೇ ಎನಿಸುವಷ್ಟು ಕೋಪ ನೆತ್ತಿಗೇರುತ್ತದೆ. ಆದರೆ, ಎಷ್ಟೇ ಆಗಲಿ ಬದುಕು ನನ್ನದೇ ಅಲ್ಲವೇ? ಅದಕ್ಕೆ ನೋವಾದರೆ ಮರಳಿ ನನಗೂ ನೋವಾಗುವುದಲ್ಲವೇ? ಎನ್ನುತ್ತ ಹಲ್ಲು ಕಿತ್ತ ಹಾವಿನಂತೆ ಬಲಹೀನನಾಗಿ ಬಿಡುತ್ತೇನೆ. ಸೋಲಿನ ಮಡುವಿನಲ್ಲಿ ಬಿದ್ದು ಒದ್ದಾಡುವಾಗ ಈ ಕ್ಷಣವೇ ನನ್ನನ್ನು ನನ್ನ ಬಂಧು ಬಾಂಧವರು ಶವ ಪೆಟ್ಟಿಗೆಯಲ್ಲಿಟ್ಟು ಕೈ ತೊಳೆದುಕೊಳ್ಳಬಾರದೇ ಎಂದೆನಿಸದೇ ಇರದು. ಸೋಲು ಕಂಡಾಗ ಜೊತೆಗಿದ್ದವರು ದೂರವಾಗುವರು.ಕೆಲಸಕ್ಕೆ ಬಾರದವನು, ಕೈಲಾಗದವನು,ಎಂದು ಚುಚ್ಚು ಮಾತುಗಳಲ್ಲೇ ಚುಚ್ಚುವರು. ಇದೆಲ್ಲ ಏನು ಅಂತಿರೇನು? ಸಾಲು ಸಾಲು ಸೋಲುಂಡ ಜೀವಿಗಳ ಸ್ವಗತ. ಅಷ್ಟಕ್ಕೂ ಗೆಲುವು ಎಂದರೇನು? ಸೋಲಿನ ಸುಳಿಯಲ್ಲೇ ಇರುವ ಗೆಲುವಿನ ತುದಿ ಹಿಡಿಯಲು ಕುತೂಹಲ ಅಲ್ಲವೇ? ಹಾಗಾದರೆ ಮುಂದಿನ ಸಾಲುಗಳಿಗೆ ಕಣ್ಣು ಹಾಯಿಸಿ. ಗೆಲುವು ಎಂದರೇನು? ಗೆಲುವನ್ನು ವ್ಯಾಖ್ಯಾನಿಸುವುದು ಜೀವನವನ್ನು ಪುಟವೊಂದರಲ್ಲಿ ಹಿಡಿದಿಟ್ಟಷ್ಟೇ ಕಠಿಣ. ಹಾಗೆ ನೋಡಿದರೆ ಗೆಲುವು ಅನ್ನೋದು ಅವರವರ ಭಾವಕ್ಕೆ ಬಿಟ್ಟದ್ದು. ಕೆಲವರಿಗೆ ಹಣದೊಡೆಯರಾಗುವುದು ಗೆಲುವಾದರೆ, ಇನ್ನೂ ಕೆಲವರಿಗೆ ಆಟೋಟಗಳಲ್ಲಿ ಚಾಂಪಿಯನ್ ಆಗುವುದು. ತಾವು ದಾಖಲಿಸಿದ ದಾಖಲೆಗಳನ್ನು ತಾವೇ ಮುರಿಯುವುದು. ಇತರರ ಹೆಸರಲ್ಲಿರುವ ದಾಖಲೆಯನ್ನು ಸರಿಗಟ್ಟುವುದು.ಉದ್ಯಮಿಯಾಗುವುದು, ಸ್ವ ಉದ್ಯೋಗ, ಸರಕಾರಿ ನೌಕರಿ ಇನ್ನೂ ಹತ್ತು ಹಲವು.ಈಗ ನಮ್ಮ ಹತ್ತಿರ ಏನಿದೆಯೋ [ಮನೆ, ಶಿಕ್ಷಣ, ಹಣ, ಉದ್ಯೋಗ] ಅಷ್ಟನ್ನು ಪಡೆಯುವ ಕನಸು ಕಾಣುತ್ತಿರುವವರಿಗೆ ಅವುಗಳನ್ನೆಲ್ಲ ಪಡೆಯುವುದೇ ಗೆಲುವು.ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಗೆಲುವು ಎಲ್ಲ ಕಾಲಕ್ಕೂ ಎಲ್ಲರಿಗೂ ಸಾಮಾನ್ಯವಾಗಿರುವುದಲ್ಲ. ವಯೋಮಾನ ಸ್ಥಿತಿ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುವಂಥದು. ಅರ್ಲ್ ನೈಟಿಂಗೇಲ್‌ರ ಪ್ರಕಾರ ‘ಅರ್ಹ ಅಥವಾ ಯೋಗ್ಯವಾದ ಗುರಿಯನ್ನು ಪ್ರಗತಿಪೂರ್ವಕವಾಗಿ ಸಾಧಿಸುವ ಪರಿಯೇ ಯಶಸ್ಸು’ ನೂರಾರು ಚಿಂತೆ ಕೋಟಲೆಗಳ ಮೀರಿ ಎದ್ದು ನಿಲ್ಲುವುದು ಯಶಸ್ಸು. ದೊಡ್ಡ ದೊಡ್ಡ ಕನಸು ಕಾಣುವುದು ಗೆಲುವಲ್ಲ. ಅವುಗಳು ನನಸಾಗುವವರೆಗೆ ಬೆನ್ನು ಹತ್ತುವುದು ಗೆಲುವು. ಅಂದ ಹಾಗೆ ಸೋಲಿನ ಸುಳಿಯಲ್ಲೇ ಗೆಲುವಿದೆ. ಅದ್ಹೇಗೆ ಅಂತಿರೇನು? ಸೋಲಿನ ಸಹವಾಸವೇ ಸಾಕಪ್ಪಾ ಎಂದು ಸೋಲನ್ನಪ್ಪಿಕೊಳ್ಳುವಾಗ ಎರಡು ಹೆಜ್ಜೆ ಮುಂದಿಟ್ಟರೆ ಸಾಕು ಗೆಲುವು ತಾನಾಗಿಯೇ ನಮ್ಮ ಕೈ ಹಿಡಿಯುತ್ತದೆ. ಬನ್ನಿ ಸೋಲಿನ ಸುಳಿಯಲ್ಲಿ ಗೆಲುವು ಹೇಗೆ ಅಡಗಿದೆ ನೋಡೋಣ. ಬೇರು ಕಿತ್ತೊಗೆಯಿರಿ ಸೋಲನ್ನು, ಬೇಡ ಬೇಡವೆಂದರೂ ಕಾಲಿಗೆ ತೊಡರಿಸಿಕೊಳ್ಳುವ ಕಸದ ಬಳ್ಳಿಯೆಂದು ತಿಳಿಯುವುದು ತಪ್ಪು. ಉಪಾಯವಿಲ್ಲದೇ ತಂತ್ರಗಳಿಲ್ಲದೇ ಕೈ ಹಾಕಿದರೆ, ಕೈ ಹಾಕಿದ ಕೆಲಸ ಕೈಗೂಡುವುದಿಲ್ಲ.ಸೋಲಿನ ಎದೆಯೊಳಗೆ ಇಣುಕಿ ನೋಡಬೇಕು. ಆಗ ಅದು ತನ್ನ ಅಂತರಾಳದ ನೋವನ್ನು ಬಿಚ್ಚಿಡುತ್ತದೆ.ಇತರರ ಗೆಲುವು ಕಂಡು ಹೊಟ್ಟೆ ಕಿಚ್ಚು ಹೆಚ್ಚಾಯಿತೇ ಹೊರತು ನಿನ್ನ ಗುರಿಯ ಕಿಚ್ಚು ಹೆಚ್ಚಾಗಲಿಲ್ಲ ಎಂದು ಅಳುತ್ತದೆ. ಸೋತೆನೆಂದು ನಿರಾಸೆಯಿಂದ ಕೈ ಚೆಲ್ಲಿ ಕುಳಿತಿಯೇ ಹೊರತು ನಾ ಹೊತ್ತು ತಂದ ಪಾಠವನ್ನು ಆಸೆಯಿಂದ ಸ್ವೀಕರಿಸಲೇ ಇಲ್ಲ. ಕೊರತೆ ಇರುವುದು ನಿನ್ನಲ್ಲಿಯೇ ಹೊರತು ನನ್ನಲ್ಲಲ್ಲ ಎಂದು ಬಿಕ್ಕುತ್ತದೆ. ಹಾಗಾದರೆ ನಾವು ಸೋಲು ತನ್ನ ಬೆನ್ನ ಮೇಲೆ ಹೊತ್ತು ತಂದಿರುವ ಪಾಠವನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು ಎಂದಂತಾಯಿತು. ಸೋಲಿನ ಕುರಿತಾಗಿರುವ ಹತಾಶೆ ನಿರಾಶೆಯ ಬೇರುಗಳನ್ನು ಹುಡುಕಿ ಅವುಗಳನ್ನು ಬೇರು ಸಮೇತ ಕಿತ್ತೊಗೆಯಬೇಕು. ಸೋಲೇ ಗೆಲುವಿನ ಸೋಪಾನವೆಂದು ಯಾವ ಅಂಶಗಳ ಕೊರತೆಯಿಂದ ಸೋತೆ ಎಂದು ಆತ್ಮಾವಲೋಕನ ಮಾಡಿಕೊಂಡು ಮುನ್ನುಗ್ಗಬೇಕು.ಆಗ ಗೆಲುವು ಒಂದು ಹೆಜ್ಜೆ ಸನಿಹ ಬರುವುದು. ತಪ್ಪುಗಳ ಪಟ್ಟಿ ಮಾಡಿ ‘ಮಾನವ ಯಶಸ್ಸಿನಿಂದ ಕಡಿಮೆ ಕಲಿಯುತ್ತಾನೆ. ವೈಫಲ್ಯತೆಯಿಂದ ಹೆಚ್ಚು ಕಲಿಯುತ್ತಾನೆ.’ಎನ್ನುತ್ತಾರೆ ಪ್ರಾಜ್ಞರು. ಕಂಡ ಸೋಲಿನಲ್ಲಿ ಮಾಡಿದ ಮುಖ್ಯ ತಪ್ಪುಗಳನ್ನು ಪಟ್ಟಿ ಮಾಡಿ ಒಂದು ವರದಿಯನ್ನು ಹೆಣೆಯಬೇಕು. ಅದನ್ನು ಸ್ಪಷ್ಟವಾಗಿ ಒಂದೆಡೆ ಬರೆದು ಮುಂದಿನ ಸಲ ಈ ತಪ್ಪುಗಳಾಗದಂತೆ ಜಾಗರೂಕತೆ ವಹಿಸಬೇಕು. ಹೊಸ ತಪ್ಪುಗಳಾದರೆ ಗಾಬರಿಯಿಂದ ಪ್ರಯತ್ನಿಸುವುದನ್ನು ಅರ್ಧಕ್ಕೆ ನಿಲ್ಲಿಸುವಂತಿಲ್ಲ. ಇನ್ನೂ ಚೆನ್ನಾಗಿ ಮಾಡುವುದಾದರೆ ಹೇಗೆ ಮಾಡಬಹುದು ಎನ್ನುವ ಯೋಜನೆ ಹಾಕಿಕೊಂಡು ಮುನ್ನುಗ್ಗಬೇಕು. ಸಣ್ಣ ತೊರೆಗಳು ಮಹಾನ ಸಮುದ್ರಗಳಾಗುತ್ತವೆ. ತಪ್ಪುಗಳನ್ನು ಮರುಕಳಿಸದಂತೆ ಮಾಡುವ ಅಭ್ಯಾಸವನ್ನು ರೂಢಿಸಿಕೊಂಡರೆ ಗೆಲುವಿನ ಇತಿಹಾಸ ನಿರ್ಮಾಣವಾಗುತ್ತದೆ. ಗುರಿಗೆ ಗುರಿ ಇಡಿ ಮಂಡಿಯೂರಿ ಕುಳಿತು ದೇವರನ್ನು ಬೇಡಿದರೆ ಸಿಗುವುದಿಲ್ಲ ಗೆಲುವು.ಯಾರ‍್ಯಾರನ್ನೋ ಒಲಿಸಿಕೊಳ್ಳಲು ಹೋಗುವುದರಲ್ಲಿಲ್ಲ. ಎಲ್ಲರಿಗೂ ಬೇಕಾದ ವ್ಯಕ್ತಿ ನಾ ಆದರೆ ಅದೇ ಗೆಲುವೆಂದು ಎಲ್ಲರನ್ನೂ ತೃಪ್ತಿ ಪಡಿಸಲು ನೋಡಿದರೆ ಸೋಲಿನ ಸುಳಿಯಿಂದ ಹೊರ ಬರಲಾಗುವುದಿಲ್ಲ. ಇದನ್ನೇ ಬಿಲ್ ಕಾಸ್ಟಿ ಹೀಗೆ ಹೇಳಿದ್ದಾನೆ.”ಯಶಸ್ಸಿನ ಕೀಲಿ ಕೈ ಯಾವುದೋ ನನಗೆ ತಿಳಿಯದು. ಆದರೆ ಎಲ್ಲರನ್ನೂ ತೃಪ್ತಿ ಪಡಿಸಲು ಯತ್ನಿಸುವುದು ವಿಫಲತೆಯ ಕೀಲಿಕೈ ಎಂಬುದನ್ನು ಮಾತ್ರ ನಾನು ಚೆನ್ನಾಗಿ ಬಲ್ಲೆ.” ಇಟ್ಟುಕೊಂಡ ಗುರಿಗೆ ಗುರಿ ಇಟ್ಟು ಹೊಡೆದರೆ, ಸೋಲು ನಿಮ್ಮನ್ನು ಬಿಟ್ಟು ಹೋಗಲು ಬೇಸರಿಸಿಕೊಳ್ಳುವುದಿಲ್ಲ. ಗುರಿಗೆ ಬೇಕಾದ ಕೆಲಸ ಕಾರ್ಯಗಳ ಯೋಜನೆ ರೂಪಿಸಿ ಮಾಡಲೇ ಬೇಕೆಂದು ಮನಸ್ಸಿಗೆ ಹಟ ಹಿಡಿಯುವಂತೆ ಮಾಡಿ.ಇಲ್ಲದಿದ್ದರೆ ಮನಸ್ಸು ಅನಗತ್ಯ ಕೆಲಸಗಳ ಸುತ್ತುವರೆದು ಅಗತ್ಯವಾದುದನ್ನು ಮಾಡಲು ಅಡಚಣೆ ಉಂಟು ಮಾಡುತ್ತದೆ. ಮನದ ತುಡಿತವು ಇಲಿಯನ್ನೂ ಹುಲಿಯಾಗಿಸಬಲ್ಲದು. ನಿರಂತರ ಪ್ರಯತ್ನಿಸಿ ಸೋತಾಗ ಹಗಲು ರಾತ್ರಿ ಸಾಲು ಸಾಲು ಸೋಲುಗಳನ್ನು ಅವುಚಿ ಹಿಡಿದುಕೊಂಡು ಕಣ್ಣೀರಿಡುವಾಗ ಗೆಲುವಿನ ಮೇಲೆ ನಂಬಿಕೆ ಹೊರಟು ಹೋಗುತ್ತದೆ. ಮೃತ ಮೀನುಗಳು ಮಾತ್ರ ನೀರು ಹರಿಯುವ ದಿಕ್ಕಿನಲ್ಲಿ ಚಲಿಸುತ್ತವೆ ಎನ್ನುವುದನ್ನು ಮರೆಯಬಾರದು.ಹೇಳದಿದ್ದರೂ ಮಾಡುವವರು ಹೆಚ್ಚಿನ ಸಂಬಳ ಪಡೆಯುತ್ತಾರೆ ಎಂಬುವುದನ್ನು ನೆನಪಿಡಬೇಕು. ಪ್ರಯತ್ನಕ್ಕೆ ಸರಿಯಾದ ಪ್ರತಿಫಲ ಸಿಕ್ಕೇ ಸಿಗುತ್ತದೆ. ಸಿಗುವ ಸಮಯ ಹೆಚ್ಚು ಕಡಿಮೆ ತಡವಾಗಬಹದು. ಒಂದೊಂದು ಸೋಲಿನಿಂದಲೂ ಮಾರಕವಾದ ಅಂಶಗಳನ್ನು ತ್ಯಜಿಸಬೇಕು. ಪೂರಕ ಅಂಶಗಳತ್ತ ಚಿತ್ತ ದೃಢವಾಗಿಸಿ, ಬಿಡದೇ ಪ್ರಯತ್ನಿಸಬೇಕು. ಆಕಾಶದೆತ್ತರಕ್ಕೆ ಬೆಳೆದು ನಿಂತ ಹೆಮ್ಮರಗಳನ್ನು ಸಹ ಅನೇಕ ಹೊಡೆತಗಳಿಂದ ನೆಲಕ್ಕೆ ಉರಳಿಸಬಹುದು.ಅಂದರೆ ಯಶಸ್ಸಿಗೆ ಒಂದರ ಮೇಲೊಂದರಂತೆ ಪ್ರಯತ್ನಗಳು ಬೇಕಾಗುತ್ತವೆ. “ಬಹುತೇಕ ಜನರು ಯಶಸ್ಸಿನ ಬಾಗಿಲವರೆಗೆ ಬಂದು, ತಮ್ಮ ಪ್ರಯತ್ನ ಬಿಟ್ಟು ಬಿಡುತ್ತಾರೆ. ಹೌದು, ವಿಜಯದ ಗುರಿ ಒಂದು ಗಜ ದೂರವಿರುವಾಗ, ಕೇವಲ ಒಂದು ಅಡಿ ಇರುವಾಗ ಯತ್ನ ಬಿಟ್ಟು ಬಿಡುತ್ತಾರೆ.’ಎನ್ನುತ್ತಾರೆ ಎಚ್. ರಾಸ್. ಪೆರಾಟ್. ಕೊನೆಯ ಹೆಜ್ಜೆಯವರೆಗೂ ಪ್ರಯತ್ನಿಸಿ ಸೋಲಿನ ಸುಳಿಯಲ್ಲೇ ಅಡಗಿದ ಗೆಲುವು ತಂತಾನೇ ಹರಿದು ಬರುತ್ತದೆ. ************************************ ಲೇಖಕರ ಬಗ್ಗೆ ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು








