ಅನುಭವ ಸಂಪಾದನೆ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—50 ಯಕ್ಷರಂಗದ ಮಾನಾಪಮಾನಗಳು ೧೯೭೦-೮೦ ದಶಕವೆಂದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನದ ಸುಗ್ಗಿಕಾಲ. ಅಪರೂಪಕ್ಕೆ ಕಾಣಲು ಸಿಗುವ ಸಿನೇಮಾ ಹೊರತು ಪಡಿಸಿದರೆ ಹಳ್ಳಿ-ಹಳ್ಳಿಗಳಲ್ಲಿ ನಡೆಯುವ ಯಕ್ಷಗಾನ ಬಯಲಾಟ, ನಾಟಕ ಪ್ರದರ್ಶನಗಳೇ ಜನಸಾಮಾನ್ಯರಿಗೆ ಮನರಂಜನೆಯ ಪ್ರಮುಖ ಮಾದ್ಯಮಗಳಾಗಿದ್ದವು. ಎಲ್ಲ ಆಟ-ನಾಟಕಗಳಿಗೂ ಸಮೃದ್ಧವಾದ ಪ್ರೇಕ್ಷಕ ಸಮುದಾಯದ ಹಾಜರಿ ಇರುತ್ತಿತ್ತು. ಜಿಲ್ಲೆಯ ಕೆರೆಮನೆ, ಕರ್ಕಿ, ಬಚ್ಚಗಾರು ಇತ್ಯಾದಿ ವೃತ್ತಿಮೇಳಗಳ ತಿರುಗಾಟವಲ್ಲದೆ ದಕ್ಷಿಣದ ಕಡೆಯಿಂದಲೂ ಸೂರತ್ಕಲ್, ಧರ್ಮಸ್ಥಳ, ಮೂಲ್ಕಿ, ಮಂಗಳೂರು, ಕೋಟ ಮುಂತಾದ ಮೇಳಗಳು ಕನಿಷ್ಟ ವರ್ಷಕ್ಕೊಂದು ತಿರುಗಾಟವನ್ನಾದರೂ ಪೂರೈಸಿ ಜಿಲ್ಲೆಯ ಜನರ ಮನರಂಜನೆಯ ಹಸಿವು ಹಿಂಗಿಸುವಲ್ಲಿ ಸಹಕರಿಸುತ್ತಿದ್ದವು! ಆಯಾ ಊರಿನ ಕೆಲವರು ತಿರುಗಾಟದ ವೃತ್ತಿ ಮೇಳದಾಟಗಳನ್ನು ಕಂಟ್ರಾಕ್ಟು ಹಿಡಿದು ಕಾಸು ಮಾಡಿಕೊಳ್ಳುವ ಯೋಜನೆಯನ್ನೂ ಹಾಕಿಕೊಳ್ಳುತ್ತಿದ್ದರು. ಕೆಲವು ಬಾರಿ ನಿರೀಕ್ಷಿತ ಲಾಭವಾಗದೆ ನಷ್ಟ ಹೊಂದಿದ್ದರೂ ಮೇಳದಾಟಗಳನ್ನು ಗುತ್ತಿಗೆ ಹಿಡಿಯುವ ಪರಂಪರೆ ಮಾತ್ರ ಇಂದಿಗೂ ಮುಂದುವರಿದಿರುವುದು ಜಿಲ್ಲೆಯ ಜನರ ಯಕ್ಷ ಪ್ರೀತಿಯ ದ್ಯೋತಕವೇ ಆಗಿದೆ. ೧೯೮೦ ರ ಸಮಯ. ಅಂಕೋಲೆಯಲ್ಲಿ “ಅಮೃತೇಶ್ವರಿ” ಮೇಳದ ಆಟ. ಆ ದಿನಗಳಲ್ಲಿ ಅಂಕೋಲೆಯ ಸೃದಯರಿಗೆ ಅಮೃತೇಶ್ವರಿ ಮೇಳವು ಅತ್ಯಂತ ಪ್ರಿಯವಾದ ತಿರುಗಾಟದ ಮೇಳವಾಗಿತ್ತು. ಇಲ್ಲಿಯ “ಗುಂಡಬಾಳಾ ಶೆಟ್ಟಿ” ಎಂಬ ದಿನಸಿ ವ್ಯಾಪಾರಿಯೊಬ್ಬರು ಬಹುತೇಕ ಮೇಳದಾಟಗಳನ್ನು ಕರೆಸಿ ಆಟವಾಡಿಸುತ್ತಿದ್ದರು. ಯಕ್ಷಗಾನವನ್ನು ಕಲಾವಿದರನ್ನು ತುಂಬಾ ಪ್ರೀತಿಸುವ ಶೆಟ್ಟರು ಇಲ್ಲಿನ ಹವ್ಯಾಸಿ ಕಲಾವಿದರನ್ನೂ ಸಂಘಟಿಸಿ ಆಗಾಗ ಆಟ ಆಡಿಸಿ ಪ್ರೋತ್ಸಾಹಿಸುತ್ತಿದ್ದರು. ನನ್ನ ಪಾತ್ರ ನಿರ್ವಹಣೆಯ ಕುರಿತಾಗಿಯೂ ತುಂಬ ಅಭಿಮಾನ ಪಡುತ್ತಿದ್ದರು. ಅವರಿಗೆ ನನ್ನನ್ನು ವೃತ್ತಿ ಮೇಳದ ಆಟದಲ್ಲಿ ಅತಿಥಿ ಕಲಾವಿದನನ್ನಾಗಿ ಪರಿಚಯಿಸಬೇಕೆಂಬ ಬಹುದೊಡ್ಡ ಆಸೆಯಿತ್ತು. ಇದೇ ಕಾರಣದಿಂದ ಅಮೃತೇಶ್ವರಿ ಮೇಳದಲ್ಲಿ ನನ್ನ ಪಾತ್ರವೊಂದನ್ನು ನಿಶ್ಚಯಿಸಿ ಆಟದ ಸಿದ್ಧತೆ ಮಾಡಿದರು. ರಾಮಚಂದ್ರ ಹೆಗಡೆ ಚಿಟ್ಟಾಣಿ, ಗೋಡೆ ನಾರಾಯಣ ಹೆಗಡೆ ಮುಂತಾದ ಅತಿರಥ ಮಹಾರಥರು ಈ ಮೇಳದಲ್ಲಿ ಮುಖ್ಯ ಕಲಾವಿದರಾಗಿದ್ದರು. ಉಪ್ಪೂರರು ಮುಖ್ಯ ಭಾಗವತರಾಗಿದ್ದರೆ ಕಾಳಿಂಗ ನಾವುಡರು ಅದೇ ಆಗ ಭಾಗವತಿಕೆಗೆ ಆರಂಭಿಸಿ ಸಭಾಲಕ್ಷಣ ಭಾಗವನ್ನಷ್ಟೆ ಪೂರೈಸುತ್ತಿದ್ದರು. ರಾತ್ರಿಯ ಮೊದಲ ಪ್ರಸಂಗ “ಬಬ್ರುಸೇನ ವಧೆ” ಗೋಡೆಯವರ ಅರ್ಜುನ, ಯಲ್ಲಾಪುರದ ಕಡೆಯ ಹೆಗಡೆಯೋರ್ವರ ಭೀಮ, ನನ್ನದು ಕೃಷ್ಣ. ಚಿಟ್ಟ್ಟಾಣಿಯವರು ನನ್ನ ಮೇಲಿನ ಪ್ರೀತಿಯಿಂದ ನನ್ನನ್ನು ಭಾಗವತ ಉಪ್ಪೂರವರಿಗೆ ಪರಿಚಯಿಸಿದರು. ಎರಡನೆಯ ವೇಷಧಾರಿಯಾಗಿ ತಾವು ಕುಳಿತುಕೊಳ್ಳುವ ಚೌಕಿಮನೆಯ ಸ್ಥಳದಲ್ಲಿ ನನ್ನನ್ನು ಕುಳ್ಳಿರಿಸಿ ಮೇಳದ ಮೇಕಪ್ ಕಲಾವಿದರಿಂದ ನನಗೆ ಬಣ್ಣ ಮಾಡಿಸಿ ವೇಷವನ್ನು ಸಿದ್ಧಗೊಳಿಸಿ ನನಗೆ ತುಂಬ ಸಹಕಾರ ನೀಡಿದರು. ಪ್ರಚಂಡ ಜನದಟ್ಟಣೆಯ ಪ್ರದರ್ಶನವಾಯಿತು! ನಾನು ವೇಷ ಕಳಚಿದ ಬಳಿಕ ತರುಣ ಭಾಗವತರಾದ ಕಾಳಿಂಗ ನಾವುಡರನ್ನು ಪರಿಚಯಿಸಿಕೊಂಡೆ. ಸ್ನೇಹದಿಂದ ಹೊರಗೆ ತಿರುಗಾಡುತ್ತ ಆಟದ ದೆಸೆಯಿಂದ ಬಂದ ಚಹಾದಂಗಡಿಯಲ್ಲಿ ಚಹಾ ಕುಡಿದು ಯಕ್ಷಗಾನ ಕಲೆಯ ಕುರಿತು ಮಾತನಾಡಿದೆವು. ಮಾತಿನ ಮಧ್ಯೆ ನಾನು ಯಕ್ಷಗಾನ ಪ್ರಸಂಗ ರಚಿಸಿದ ಸಂಗತಿ ಕೇಳಿ ತಿಳಿದ ನಾವುಡರು ಅದನ್ನು ನೋಡುವ ಕುತೂಹಲದಿಂದ ನಮ್ಮ ಮನೆಗೆ ಬರಲು ಇಚ್ಛಿಸಿದರು. ರಾತ್ರಿಯ ಎರಡನೆಯ ಪ್ರಸಂಗ ಆರಂಭವಾದ ಹೊತ್ತಿನಲ್ಲಿ ನಾನು ನಾವುಡರನ್ನು ನನ್ನ ಬೈಕಿನಲ್ಲಿ ಕರೆದುಕೊಂಡು ಆಗ ನಾನು ವಾಸಿಸುತ್ತಿದ್ದ “ಮುಲ್ಲಾ ಬಾಡಾ” ಭಾಗದ ನನ್ನ ಮನೆಗೆ ಕರೆದೊಯ್ದೆ. ನಾನು ಬರೆದ “ವೀರ ವಾಲಿ” ಪ್ರಸಂಗದ ಹಸ್ತಪ್ರತಿಯನ್ನು ಪರಿಶೀಲಿಸಲು ಅವರಿಗೆ ನೀಡಿದೆ. ಬೆಳಕು ಹರಿಯುವವರೆಗೆ ಮಾತನಾಡಿ ನಸುಕಿನಲ್ಲಿ ಅವರನ್ನು ಮೇಳದ ವಾಹನಕ್ಕೆ ತಲುಪಿಸಲು ನಾನು ನಾವುಡರನ್ನು ಮತ್ತೆ ಆಟ ನಡೆಯುತ್ತಿದ್ದ ಜೈಹಿಂದ್ ಮೈದಾನಕ್ಕೆ ಕರೆದು ತಂದೆ. ಆಟ ಮುಗಿದು ಮೇಳವು ಮುಂದಿನ ಊರಿಗೆ ಹೊರಡುವ ಸನ್ನಾಹದಲ್ಲಿತ್ತು. ಆಗಲೇ ತೀರ ಅಪ್ರಿಯವಾದ ಒಂದು ಸಂಗತಿ ನನ್ನ ಗಮನಕ್ಕೆ ಬಂದಿತು. ನಾನು ದಲಿತನೆಂಬ ಕಾರಣದಿಂದ ಮೇಳಕ್ಕೆ ಮೈಲಿಗೆಯಾಗಿದೆ ಎಂಬ ಸಂಗತಿ ಚೌಕಿ ಮನೆಯಲ್ಲಿ ರಾತ್ರಿಯೆಲ್ಲ ಚರ್ಚೆಯಾಯಿತೆಂದೂ ಮೇಳದ ಕಂಟ್ರಾಕ್ಟು ಹಿಡಿದ ಶೆಟ್ಟರು ತಪ್ಪು ಕಾಣಿಕೆ ನೀಡಿ ಪರಿಹಾರ ಮಾಡಿಕೊಡುವಂತೆ ಮೇಳದ ವ್ಯವಸ್ಥಾಪಕರು ಗುಂಡಬಾಳಾ ಶೆಟ್ಟರನ್ನು ಒತ್ತಾಯಿಸಿ ತಪ್ಪು ಕಾಣಿಕೆ ಸ್ವೀಕರಿಸಿದರೆಂದೂ ಕೆಲವು ನನ್ನ ಪರಿಚಿತ ಜನರು ನನಗೆ ತಿಳಿಸಿದಾಗ ನನಗೆ ತುಂಬಾ ಸಂಕಟವಾಯಿತು. ನಾನು ವೃತ್ತಿ ಮೇಳದಲ್ಲಿ ಅತಿಥಿ ಕಲಾವಿದನಾಗಿ ಪಾತ್ರವಹಿಸುವುದರಿಂದಲೇ ನನಗೆ ವಿಶೇಷ ಗೌರವ ಪ್ರಾಪ್ತವಾಗುವ ನಂಬಿಕೆಯಾಗಲೀ ಹಂಬಲವಾಗಲೀ ನನಗಿರಲಿಲ್ಲ. ಜನರ ಒತ್ತಾಸೆಗೆ ಮಣಿದು ಸಹಜವಾಗಿ ಒಪ್ಪಿಕೊಂಡು ಭಾಗವಹಿಸಿದ್ದೆ. ಅದು ಇಂಥ ಅವಮಾನಕ್ಕೆ ಕಾರಣವಾದದ್ದು ನನ್ನ ಯಕ್ಷರಂಗದ ಬದುಕಿನಲ್ಲಿ ಬಹುದೊಡ್ಡ ಗಾಯವಾಗಿ ಉಳಿದು ಹೋಯಿತು! ನಂತರದ ವರ್ಷಗಳಲ್ಲಿ ಹಲವು ಭಾರಿ ಹಲವಾರು ವೃತ್ತಿ ಮೇಳಗಳಲ್ಲಿ ಅತಿಥಿ ಕಲಾವಿದನಾಗಿ ಭಾಗವಹಿಸಿದೆನಾದರೂ ಆ ಎಲ್ಲ ಕ್ಷಣಗಳ ಸಂತೋಷದ ನಡುವೆಯೂ ಅಂದಿನ ಕಹಿ ನೆನಪು ಮರೆಯಲಾಗದಂತೆ ಉಳಿದಿದೆ. ಯಕ್ಷಗಾನ ಹವ್ಯಾಸಿ ತಂಡದೊಡನೆ ಪಾತ್ರ ನಿರ್ವಹಿಸುವಾಗ ಹಲವು ವಿಧದಲ್ಲಿ ಹೊಂದಾಣಿಕೆಗೆ ನಮ್ಮನ್ನು ನಾವು ಅಣಿಗೊಳಿಸುವುದು ಅನಿವಾರ್ಯ. ಭಿನ್ನ ಅಭಿರುಚಿಯ ಆಚಾರ ವಿಚಾರಗಳ ಹಿನ್ನೆಲೆಯಿಂದ ಬಂದ ಕಲಾವಿದರುಗಳಲ್ಲಿ ಹೊಂದಾಣಿಕೆ ಕಷ್ಟವೇ ಆದರೂ ಹೊಂದಾಣಿಕೆಯಿಲ್ಲದೆ ಕಲಾತಂಡಗಳನ್ನು ಮುನ್ನಡೆಸುವುದು ಕಷ್ಟವೇ ಆಗುತ್ತದೆ. ಇದು ನಾವು ನೀಡುವ ಪ್ರದರ್ಶನದ ಮೇಲೂ ಪರಿಣಾಮ ಬೀರಬಹುದು. ಕಲಾವಿದರ ನಂಬಿಕೆ, ಅಪನಂಬಿಕೆಗಳೂ ಒಟ್ಟಾರೆಯಾಗಿ ತಂಡವನ್ನು ಪ್ರಭಾವಿಸುವ ಸಂದರ್ಭಗಳೂ ಇಲ್ಲದಿಲ್ಲ. ಶಿರ್ಶಿ ತಾಲೂಕಿನ ಮತ್ತಿಘಟ್ಟ ಎಂಬ ಕಾಡಿನಿಂದ ಆವೃತವಾದ ಹಳ್ಳಿಯಲ್ಲಿ ಒಂದು ಆಟ. ಅಂಕೋಲೆಯ ನಮ್ಮ ಕಲಾತಂಡವು ಅಲ್ಲಿಯ ಜಮೀನ್ದಾರರೊಬ್ಬರ ವಿನಂತಿಯ ಮೇರೆಗೆ ‘ಗದಾಯುದ್ಧ’ ಪ್ರಸಂಗವನ್ನು ಪ್ರದರ್ಶಿಸಬೇಕಿತ್ತು. ಸಂಜೆಯ ಹೊತ್ತಿಗೆ ಮತ್ತಿಘಟ್ಟ ತಲುಪಿದ ತಂಡದ ಸದಸ್ಯರೆಲ್ಲ ಆಟ ನಡೆಯುವ ಸ್ಥಳವನ್ನು ಸೇರಿದ ಬಳಿಕ ಕೊಂಚ ವಿಶ್ರಾಂತಿ ಪಡೆದು ಕತ್ತಲಾಗುವ ಹೊತ್ತಿಗೆ ಊಟಕ್ಕೆ ಹೊರಟೆವು. ನಮಗೆ ಆಹ್ವಾನ ನೀಡಿದ ಹೆಗಡೆಯವರ ಮನೆಯಲ್ಲಿಯೇ ನಮಗೆ ಊಟಕ್ಕೆ ವ್ಯವಸ್ಥೆಯಾಗಿತ್ತು. ಹತ್ತಾರು ಎಕರೆ ಅಡಿಕೆ ತೆಂಗುಗಳ ತೋಟದ ಒಡೆಯರಾಗಿದ್ದ ಹೆಗಡೆಯವರು ಊರಿನಲ್ಲಿಯೇ ಬಹು ಜನಪ್ರಿಯ ವ್ಯಕ್ತಿಯೆಂಬುದು ತಿಳಿಯಿತು. ಮನೆಯಲ್ಲಿ ಯಾವುದೋ ದೇವತಾಕಾರ್ಯ ನೆರವೇರಿಸಿದ ಹೆಗಡೆ ರಾತ್ರಿಯ ಜಾಗರಣೆಗಾಗಿ ಯಕ್ಷಗಾನ ಪ್ರದರ್ಶನದ ಏರ್ಪಾಡು ಮಾಡಿ ನಮ್ಮನ್ನು ಆಹ್ವಾನಿಸಿದ್ದರು. ಯಕ್ಷಗಾನ ನಡೆಯುವ ರಂಗ ವೇದಿಕೆಯಿಂದ ಕೂಗಳತೆ ದೂರದಲ್ಲಿದ್ದ ಹೆಗಡೆಯವರ ಮನೆಗೆ ಹೋಗುವಾಗ ವಿಶಾಲವಾದೊಂದು ಗದ್ದೆ ಬಯಲನ್ನು ದಾಟಬೇಕಿತ್ತು. ಕಲಾ ತಂಡದ ಸದಸ್ಯರೆಲ್ಲ ಆಟದ ಕುರಿತು ಚರ್ಚಿಸುತ್ತ ಗದ್ದೆ ಹಾಳೆಯ ಮೇಲೆ ಸಾಲಾಗಿ ಹೊರಟಾಗ ದಾರಿಯ ಮಧ್ಯೆ ಗುಂಪಿನಲ್ಲಿ ಯಾರೋ ಒಬ್ಬರು “ಹೌದು……. ಈ ಮತ್ತಿಘಟ್ಟದಲ್ಲಿ ಮದ್ದು ಹಾಕುವ ರೂಢಿ ಇದೆಯಂತಲ್ಲ?” ಎಂದು ಒಂದು ಸಂದೇಹದ ಪಟಾಕಿ ಸಿಡಿಸಿದರು. ಮತ್ತೊಬ್ಬ “ಹೌದು……….. ಹೌದು ನಾನೂ ಕೇಳಿದ್ದೇನೆ….. ಈ ಊರೇ ಅದಕ್ಕೆ ಪ್ರಸಿದ್ಧವಾಗಿದೆ………..” ಎಂದು ತನ್ನದೂ ಒಂದನ್ನು ಎಸೆದ. ನಡೆಯುತ್ತಿದ್ದ ಗುಂಪು ನಡಿಗೆಯನ್ನು ನಿಲ್ಲಿಸಿ ಚರ್ಚೆಯನ್ನೇ ಮುಂದುವರಿಸಿತು. ತಂಡದಲ್ಲಿ ಹಿರಿಯರಾದ ವಿಠೋಬ ನಾಯಕ ವಂದಿಗೆ, ಮಂಗೇಶ ಗೌಡ, ಅನಂತ ಹಾವಗೋಡಿ, ಹಾಸ್ಯಗಾರ ವೆಂಕಟ್ರಮಣ ನಾಯ್ಕ ಮುಂತಾದ ಕಲಾವಿದರೂ ಹಿಮ್ಮೇಳದವರೂ ಇದ್ದಾರೆ. ಎಲ್ಲರಿಗೂ ಒಂದು ಅವ್ಯಕ್ತ ಭಯ ಶುರುವಾಯಿತಲ್ಲದೇ ಗೊತ್ತಿದ್ದ ಕೆಲವರು “ಮದ್ದು” ಹಾಕುವುದರಿಂದ ಆಗುವ ದುಷ್ಪರಿಣಾಮದ ಕುರಿತು ದೀರ್ಘವಾದ ವಿವರಣೆಯನ್ನೇ ನೀಡಲು ಆರಂಭಿಸಿದರು. ತಾವು ಕಣ್ಣಾರೆ ಕಂಡ ಅನುಭವಗಳನ್ನೇ ಕೆಲವರು ಭಯಾನಕವಾಗಿ ಬಣ್ಣಿಸಿದ ಪರಿಣಾಮ ತಂಡದ ಎಲ್ಲರಲ್ಲಿಯೂ ಅವ್ಯಕ್ತ ಭಯವೇ ಶುರುವಾಯಿತು. ಅಂತಿಮವಾಗಿ ನಡುದಾರಿಯಿಂದಲೇ ಎಲ್ಲರೂ ಮರಳಿ ರಂಗವೇದಿಕೆಯತ್ತ ಹೊರಡಲು ಸಿದ್ಧರಾದರು. ಹೆಗಡೆಯವರು ನಮಗಾಗಿ ಸಿದ್ಧಪಡಿಸಿದ ಅಡಿಗೆ ವ್ಯರ್ಥವಾಗುವುದರೊಂದಿಗೆ ಅವರ ಮನಸ್ಸಿಗೆ ನೋವಾಗಬಹುದೆಂಬ ಕಾಳಜಿಯೂ ಇಲ್ಲದೆ ನಾವೆಲ್ಲರೂ ಮರಳಿ ಬಂದೆವು. ಸಂಘಟಕರಿಗೆ ಸಂದೇಶ ತಲುಪಿಸಿ ರಂಗವೇದಿಕೆಯ ಸನಿಹವೇ ಒಲೆ ಹೂಡಿ ಒಂದಿಷ್ಟು ಅಕ್ಕಿ ಬೇಳೆ ಇತ್ಯಾದಿ ತರಿಸಿಕೊಂಡು ಎಂಥದೋ ಒಂದು ಅಡಿಗೆ ಮಾಡಿ ಊಟದ ಶಾಸ್ತ್ರ ಮುಗಿಸಿ ನಿರಾಳರಾದೆವು. ಮರುದಿನ ಮುಂಜಾನೆ ಆಟ ಮುಗಿಸಿ ಊರಿಗೆ ಹೊರಡಬೇಕೆನ್ನುವಾಗ ನನಗೊಂದು ಒತ್ತಾಯದ ಆಮಂತ್ರಣ ಬಂದಿತು. ನಮ್ಮ ಕಾಲೇಜಿನಲ್ಲಿ ನಮ್ಮ ಸಹೋದ್ಯೋಗಿಯಾಗಿದ್ದ ಹಿಂದಿ ಭಾಷಾ ಉಪನ್ಯಾಸಕ ಭಾಸ್ಕರ ಹೆಗಡೆ ಎಂಬುವವರ ಪತ್ನಿ ಜಯಲಕ್ಷ್ಮಿ ಹೆಗಡೆ ಎಂಬುವವರ ತವರೂರು ಇದು. ಕಳೆದ ತಿಂಗಳಷ್ಟೇ ಹೆರಿಗೆಯಾಗಿ ವಿಶ್ರಾಂತಿ ಪಡೆಯುತ್ತ ಇದ್ದವರು ಪರಿಚಿತನಾದ ನನಗೆ ಮುಂಜಾನೆಯ ಉಪಹಾರಕ್ಕೆ ಬರುವಂತೆ ಆಹ್ವಾನ ನೀಡಿ ಅವರ ತಂದೆಯ ಮೂಲಕ ಸಂದೇಶ ಕಳುಹಿಸಿದ್ದರು. ನಾನು ನಿರಾಕರಿಸಲಾಗದೆ ಸನಿಹದಲ್ಲೇ ಇದ್ದ ಅವರ ಮನೆಗೆ ಹೋಗಿ ಆತಿಥ್ಯ ಸ್ವೀಕರಿಸಿ ಅವರ ಯೋಗಕ್ಷೇಮ ವಿಚಾರಿಸಿಕೊಂಡೆ. ಜಯಲಕ್ಷ್ಮಿ ಹೆಗಡೆಯವರು ನಿನ್ನೆಯ ರಾತ್ರಿ ನಾವು ಹೆಗಡೆಯವರ ಮನೆಯ ಊಟ ನಿರಾಕರಿಸಿದ್ದಕ್ಕೆ ತುಂಬಾ ನೋವಿನಿಂದ ಮಾತನ್ನಾಡಿದರು. ಮತ್ತಿಘಟ್ಟದಲ್ಲಿ ‘ಮದ್ದು ಹಾಕುವ’ ಪದ್ಧತಿ ಬಹಳ ಹಿಂದಿನ ಕಾಲದಲ್ಲಿ ರೂಢಿಯಲ್ಲಿ ಇದ್ದುದು ನಿಜ. ಈಗ ಸಂಪೂರ್ಣವಾಗಿ ಅಂಥ ಪದ್ಧತಿ ನಿಂತು ಹೋಗಿದೆ. ಯಕ್ಷಗಾನ ಸಂಘಟಿಸಿದ ಹೆಗಡೆಯವರು ಆಟದ ಮೇಳದವರಿಗಾಗಿ ವಿಶೇಷವಾದ ಸಿಹಿ ಭೋಜನ ಸಿದ್ಧಪಡಿಸಿ ಕಾಯ್ದಿದ್ದರಂತೆ. ಕಲಾವಿದರೆಲ್ಲ ಹೀಗೆ ಸಂದೇಹಪಟ್ಟು ಊಟವನ್ನು ನಿರಾಕರಿಸಿದ್ದು ಅವರಿಗೆ ತುಂಬಾ ನೋವನ್ನು ಅವಮಾನವನ್ನುಂಟುಮಾಡಿದೆ. ಕೋಪದಿಂದ ಕಲಾವಿರಿಗಾಗಿ ಸಿದ್ಧಪಡಿಸಿದ ವಿಶೇಷ ಅಡಿಗೆಯನ್ನು ಅಡಿಕೆ ಮರದ ಬುಡಕ್ಕೆ ಚೆಲ್ಲಿಸಿದರಂತೆ………. ಇತ್ಯಾದಿ ವಿವರಿಸಿದ ಜಯಲಕ್ಷ್ಮಿಯವರು “ನಿಮ್ಮ ಕಲಾವಿದರೆಲ್ಲ ದೊಡ್ಡ ತಪ್ಪು ಮಾಡಿದರು ಸರ್….” ಎಂದು ನೊಂದು ನುಡಿದರು. ವಿದ್ಯಾವಂತರಾದ ನಾವೆಲ್ಲ ತಂಡದಲ್ಲಿದ್ದು ಇಂಥದೊಂದು ಅಪನಂಬಿಕೆಗೆ ಅವಕಾಶ ನೀಡಿ ಹಿರಿಯರ ಮನ ನೋಯಿಸಿದ್ದು ಆಕ್ಷೇಪಾರ್ಹವೇ ಎಂಬ ದಾಟಿಯಲ್ಲಿ ಜಯಲಕ್ಷ್ಮಿಯವರು ಮಾತನಾಡಿದಾಗ ನನಗೆ ಒಂದು ಬಗೆಯಲ್ಲಿ ನಮ್ಮ ಕೃತ್ಯಕ್ಕೆ ನಾವೇ ನಾಚಿಕೆ ಪಡುವಂತಾಯಿತು. ನಿರುಪಾಯನಾದ ನಾನು ನಮ್ಮ ಮೌಢ್ಯಕ್ಕೆ ವಿಷಾದ ವ್ಯಕ್ತಪಡಿಸಿ ಅಲ್ಲಿಂದ ಹೊರಟು ಬಂದೆ. ಮತ್ತೆ ನನಗೆ ಊಟಕ್ಕೆ ಆಮಂತ್ರಿಸಿದ ಹೆಗಡೆಯವರನ್ನು ಕಂಡು ಮಾತಾಡಿಸುವಷ್ಟು ನೈತಿಕ ಸ್ಥೆರ್ಯ ಇರಲಿಲ್ಲ. ರಾತ್ರಿಯ “ಗದಾಯುದ್ಧ” ಪ್ರದರ್ಶನ ಮತ್ತಿಘಟ್ಟದ ಪ್ರೇಕ್ಷಕರ ಮನಸೂರೆಗೊಂಡಿದ್ದು ಅವರ ಶ್ಲಾಘನೇಯ ಮಾತುಗಳಿಂದ ಉಲ್ಲಿಸಿತರಾಗಬೇಕಾದ ನಾವೆಲ್ಲ ನಾವೇ ಮಾಡಿದ ಪ್ರಮಾದಕ್ಕೆ ಪಶ್ಚಾತ್ತಾಪ ಪಡುತ್ತಲೇ ಊರಿಗೆ ಮರಳಿದ್ದೆವು. ರಾಮಕೃಷ್ಣ ಗುಂದಿ
ಅಂಕಣ ಸಂಗಾತಿ ನೆನಪಿನದೋಣಿಯಲಿ–02 ಕಾಲನ ಸುಳಿಗಾಳಿಯಲ್ಲಿ ಸಿಕ್ಕಿದ ತರಗೆಲೆಗಳು ನಾವು. ಆದರೂ ಸಿಗುವ ಒಂದಿಷ್ಟು ವಿರಾಮದಲ್ಲೇ ಸ್ಮರಣೆಗಳ ಜಾಡನ್ನು ಹಿಡಿದು ಹೋದಾಗ………. ನೆನಪಿನ ದೋಣಿಯಲಿ ~೨ ಪರಿಪರಿಯ ರೂಪಿನಲಿ ಕಾಂತಿಯಲಿ ರಾಗದಲಿ ನೆರಯಿಸುತ ಪರಿಪರಿಯ ರಸಗಳಂ ಪ್ರಕೃತಿ ಕೆರಳಿಸುತ ಹಸಿವುಗಳ ಸವಿಗಳನು ಕಲಿಸುವಳು ಗುರು ರುಚಿಗೆ ಸೃಷ್ಟಿಯಲ _ ಮಂಕುತಿಮ್ಮ ಪ್ರಕೃತಿ ಅನೇಕ ಬಗೆಯ ರಸಗಳನ್ನು ತನ್ನ ಅಗಾಧವಾದ ಸೃಷ್ಟಿಯ ರೂಪಿನಲ್ಲಿ ಕಾಂತಿಯಲ್ಲಿ ಬಣ್ಣದಲ್ಲಿ ತುಂಬಿ ಜೀವದ ಹಸಿವುಗಳನ್ನು ಕೆರಳಿಸುತ್ತಾಳೆ. ಅದನ್ನು ರುಚಿ ನೋಡಿದರೆ ಆನಂದ ಎಂಬುದನ್ನು ಕಲಿಸುತ್ತಾಳೆ . ಹೀಗೆ ನಮ್ಮ ಎಲ್ಲ ರುಚಿಗಳಿಗೂ ಸೃಷ್ಟಿಯೇ ಪ್ರಕೃತಿಯೇ ಗುರು . ಹಾಗೆಯೇ ನಮ್ಮ ಆಹಾರಕ್ರಮ, ಅಭ್ಯಾಸ ,ಪಾಕವಿಧಾನಗಳು ಬಾಲ್ಯದಲ್ಲಿ ನಾವು ಏನನ್ನು ತಿಂದಿರುತ್ತೇವೆಯೋ ಅದರ ಮೇಲೆ ನಿರ್ಭರ. ಅಮ್ಮನ ಅಡಿಗೆ, ಅಮ್ಮನ ಪಾಕ, ಅಜ್ಜಿಯ ಕೈ ತುತ್ತಿನ ರುಚಿ ಇವೆಲ್ಲಾ ನಾವಿರುವವರೆಗೂ ಮನ ಮಂಜೂಷದಲ್ಲಿ ಜತನದಲಿ ಕಾಪಿಟ್ಟ ನವಿಲುಗರಿ. ಮುಟ್ಟಿ ತಡವಿದಾಗಲೆಲ್ಲ ಸ್ಮೃತಿಯಲೆಯ ಪುಳಕದ ನವಿರು. ಇವತ್ತು ತುಂಬಾ ನೆನಪಿಗೆ ಬರುತ್ತಿರುವುದು ಪಿಡಿಚೆಯನ್ನ. ದೊಡ್ಡ ದೊಡ್ಡ ಪಂಚತಾರಾ ಹೋಟೆಲುಗಳಲ್ಲಿ ಈಗ ನಾಲ್ಕು ಕೋರ್ಸ್, ೫ ಕೋರ್ಸ್ ಮೀಲ್ಸ್ ಅಂತಾರಲ್ಲ ಹಾಗೆ, ಮೂವತ್ತು ನಲವತ್ತು ವರ್ಷಗಳ ಹಿಂದೆ ಸಾಮಾನ್ಯ ಮಧ್ಯಮ ವರ್ಗದ ಮನೆಗಳಲ್ಲಿ ದಿನದ ಊಟ ಹೀಗೆ 4 ಕೋರ್ಸಿನದು. ಹೇಗೆ ಅಂತೀರಾ? ಎಲೆಯ ತುದಿಯ ನೆಂಚಿಕೆಗಳು ಉಪ್ಪಿನಕಾಯಿ, ಚಟ್ನಿ, ತೊಕ್ಕು, ವಿವಿಧ ಪುಡಿಗಳು ಅವುಗಳೊಂದಿಗೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಕಲಿಸಿಕೊಳ್ಳುವುದು ಇದೇ ಪಿಡಚೆ ಅನ್ನ ಮೊದಲ ಸುತ್ತು. ಹುಳಿ ಕೂಟು ಇತ್ಯಾದಿಗಳದು ಎರಡನೆಯ ಸುತ್ತು . ತಿಳಿಸಾರಿನ ಮೂರನೇ ಸುತ್ತು ಮತ್ತು ಕಡೆಯ ಮಜ್ಜಿಗೆ ಅನ್ನದ ನಾಲ್ಕನೆ ಸುತ್ತು . ಆಯ್ತಲ್ಲ ಫೋರ್ ಕೋರ್ಸ್ ಮೀಲ್ಸ್. ಆಗೆಲ್ಲಾ ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಊಟದ ಅಭ್ಯಾಸವೇ ..ಹೀಗಾಗಿ ಪುಷ್ಕಳ ಭೋಜನ. ಪಿಡಿಚೆ ಅಂದರೆ ನಿಘಂಟಿನ ಪ್ರಕಾರ ಒಂದು ಹಿಡಿಯಷ್ಟು ಪ್ರಮಾಣದ ಮುದ್ದೆ ಅಥವಾ ಉಂಡೆ . ಹುಳಿ ಸಾರುಗಳಂತೆ ದ್ರವ ರೂಪದಲ್ಲಿರದ ಕಾರಣ ಕಲಸಿದ ಮೇಲೆ ಅಂಗೈಯಲ್ಲಿ ಒತ್ತಿ ಉಂಡೆ ಮಾಡುತ್ತಿದ್ದುದರಿಂದ ಪಿಡಿಚೆ ಅನ್ನ ಎನ್ನುವುದು ವಾಡಿಕೆ. ಮಿಡಿಕೆ ಅನ್ನ ಎಂತಲೂ ಅನ್ನುತ್ತಿದ್ದರು. ಆದರೆ ಅದು ಅಷ್ಟೊಂದು ರೂಢಿಯಲ್ಲಿರದ ಪದ. ಇನ್ನು ಈ ಪಿಡಚೆ ಅನ್ನದ ವಿಧಗಳು ಹೇಳುತ್ತಾ ಹೋದರೆ ಹನುಮಂತನ ಬಾಲದುದ್ದದ ಪಟ್ಟಿ . ತರಹ ತರಹದ ಉಪ್ಪಿನಕಾಯಿಗಳು, ಹುಣಸೆ ಮಾವು ಅಮಟೆ ನೆಲ್ಲಿ ಕಾಯಿ ಮೊದಲಾದ ತೊಕ್ಕುಗಳು, ಪುಡಿಗಳ ವಿಷಯಕ್ಕೆ ಬಂದರೆ ವಿಧವಿಧದ ಚಟ್ನಿಪುಡಿಗಳು, ಅನ್ನದಪುಡಿ, ಮೆಂತೆ ಹಿಟ್ಟಿನ ಪುಡಿಗಳು, ತರಕಾರಿಯ ಸಿಹಿ ಪಲ್ಯಗಳು, ಪುಡಿ ಕುಟ್ಟಿಹಾಕಿದ ಖಾರದ ಪಲ್ಯಗಳು, ಗೊಜ್ಜುಗಳು, ತಂಬುಳಿ, ಹಸಿಮಜ್ಜಿಗೆ ಒಂದೇ ಎರಡೇ ? ವಿಶಿಷ್ಟವಾದದ್ದು ಇನ್ನೊಂದೆಂದರೆ ತಿಳಿಸಾರಿನ (ರಸಂ) ಪುಡಿ ಮಾಡಿದ ಹೊಸದರಲ್ಲಿ ತಾಜಾ ಇರುವಾಗ ಬಿಸಿ ಅನ್ನಕ್ಕೆ ಉಪ್ಪು ಎಣ್ಣೆ ಹಾಕಿ ಇದನ್ನು ಕಲಿಸಿ ತಿಂದರೆ…..! ಆಹಾ ವರ್ಣಿಸಲು ಪದಗಳಿಲ್ಲ ಬಿಡಿ.ಇವುಗಳೊಂದಿಗೆ ಬೇಳೆ ಮತ್ತುಮೆಂತೆಸೊಪ್ಪು/ಗೋರಿಕಾಯಿ ಹಾಕಿದ ಮಾಟೋಡಿ ಪಲ್ಯ ಪಿಡಿಚೆಯನ್ನಗಳ ರಾಜ . ನುಚ್ಚಿನುಂಡೆಯನ್ನು ಪುಡಿಮಾಡಿ ಚೂರು ಉಪ್ಪು ಜಾಸ್ತಿ ಎಣ್ಣೆ ಹಾಕಿ ಅನ್ನದೊಂದಿಗೆ ಕಲಸಿ ತಿಂದರೆ ತುಂಬಾ ಸ್ವಾದ . ಮೆಂತ್ಯ ಹಿಟ್ಟನ್ನು ಹುಣಸೆ ರಸದಲ್ಲಿ ಕಲಸಿ ಮೆಣಸಿನಕಾಯಿ ಒಗ್ಗರಿಸಿ ಮಾಡುತ್ತಿದ್ದ ಮೆಂತೆ ಹಿಟ್ಟಿನ ಗೊಜ್ಜು, ತೊಗರಿಬೇಳೆಯ ಅನ್ನದ ಪುಡಿ …..ಪಟ್ಟಿ ಅನಂತ _ಪ್ರಕಾರ ಅಪರಿಮಿತ . ಆರೋಗ್ಯದ ದೃಷ್ಟಿಯಿಂದಲೂ ಕೆಲವು ಈ ರೀತಿಯ ಪಿಡಚೆ ಮೊದಲ ಮಗಳು ತುಂಬಾ ಉತ್ತಮ ಎಂದು ಪರಿಗಣಿಸಲ್ಪಟ್ಟಿವೆ ಮೊದಲ ಅನ್ನಕ್ಕೆ ತುಪ್ಪ ಹಾಕಿ ಕಲಿಸುವ ದೊಡ್ಡಿ ಪತ್ರೆ ತಂಬುಳಿ , ಹೇರಳೆಕಾಯಿ ಉಪ್ಪಿನಕಾಯಿ ರಸದ ಅನ್ನ ಇವು ಪಿತ್ತಹಾರಿಗಳು. ಇನ್ನು ಬಾಣಂತಿಯರಿಗೆ ಕೊಡುವ ಬೆಳ್ಳುಳ್ಳಿ ಹಾಗೂ ಮೆಣಸು ಸೇರಿಸಿದ ಪುಡಿಯ ಅನ್ನ ಹೇರಳೆಕಾಯಿ ಹೋಳಿನ ಮೇಲೆ ಉಪ್ಪು ಮೆಣಸು ಪುಡಿ ಉದುರಿಸಿ ಸ್ಟವ್ ಮೇಲೆ ಸ್ವಲ್ಪ ಕಂದಿಸಿ ಹಿಂಡುವ ರಸ ಇವುಗಳನ್ನು ಮರೆಯಲಾದೀತೆ ? ಈ ಪಿಡಿಚೆ ಅನ್ನಗಳನ್ನು ನಂಚಿಕೆ ಮಾತ್ರ ಹಾಕಿ ಕಲೆಸಿದರೆ ಹೊಂದುವುದಿಲ್ಲ . ಎಣ್ಣೆಯೋ ತುಪ್ಪವೋ ಅಂತೂ ಜಿಡ್ಡಿನ ಮಾಧ್ಯಮ ಬೇಕು .ರುಚಿಗೆ ಅನುಸಾರ ಒಂಚೂರು ಲವಣ ಸೇರಿಸಿದರೆ ಸ್ವರ್ಗಸಮಾನಂ. ಎಣ್ಣೆಗಳಲ್ಲೂ ಹಸಿ ಕಡಲೆಕಾಯಿ ಎಣ್ಣೆ 1 ಭಾಗದವರಿಗೆ ಇಷ್ಟವಾದರೆ ಕರಾವಳಿ ಕಡೆಯವರಿಗೆ ಕೊಬರಿಎಣ್ಣೆ ಪ್ರಿಯ.ಆದರೆ ಉತ್ಕೃಷ್ಟ ರುಚಿಯ ಇರುತ್ತಿದ್ದುದು ಖಾದ್ಯಗಳನ್ನು ಕರಿದು ಉಳಿದ ಕರಿದ ಎಣ್ಣೆಯಲ್ಲಿ. ಕರಿದ ಪದಾರ್ಥಗಳ ರುಚಿ ವಾಸನೆಯನ್ನು ಇಲ್ಲಿಗೆ ವರ್ಗಾಯಿಸಿ ಬೇರೆಯದೇ ವಿಶಿಷ್ಟವಾದ ಸ್ವಾದ. ಚಕ್ಕುಲಿ ಕರೆದೆಣ್ಣೆಯದು ಒಂದು ಘಮ ಕೋಡುಬಳೆ ಕರೆದೆಣ್ನಮೆ ಕೆಂಪಗೆ ಖಾರ, ಸಿಹಿ ಕರಿದ ಎಣ್ಣೆ ಸೂಸುತ್ತಿದ್ದ ಬೆಲ್ಲದ ಘಮಲು ನಾಲಿಗೆಯಂಚಿನ ಸಿಹಿ. ಆಗೆಲ್ಲಾ ಕರೆದ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ ನಮಗೆಲ್ಲ ತಿಳಿದೇ ಇರಲಿಲ್ಲ . ರುಚಿಗೆ ಪರ್ಯಾಯ ಅಷ್ಟೇ ಅಲ್ಲ ಗೃಹಿಣಿಯರ ಆಪತ್ಕಾಲಕ್ಕೆ ಒದಗಿ ಬರುತ್ತಿದ್ದ ಮಿತ್ರನೂ ಹೌದು. ಹುಳಿ/ಸಾರು ಮಾಡಿಯಾದ ಮೇಲೆ ಅತಿಥಿಗಳು ಬಂದರೆ ಈಗಿನ ಹಾಗೆ ಕ್ಷಣಾರ್ಧದಲ್ಲಿ ಕೆಲಸ ಮುಗಿಸುವ ಗ್ಯಾಸ್ ಕುಕ್ಕರ್ ಮಿಕ್ಸಿ ಇರದಿದ್ದಾಗ ಇರುವುದರಲ್ಲಿಯೇ ಸವರಿಸಬೇಕಾದ ಅನಿವಾರ್ಯ ಸಮಯದಲ್ಲಿ ಈ ಎಲ್ಲಾ ಪಿಡಿಚೆ ಯನ್ನದ ಪರಿಕರಗಳು ಸಾರು/ಹುಳಿ ಯ ಕೊರತೆ ಸರಿದೂಗಿಸುತ್ತಿದ್ದವು. ರಾತ್ರಿ ಊಟದಲ್ಲೂ ಅಷ್ಟೇ ಬೆಳಗಿನ ವ್ಯಂಜನಗಳಲ್ಲೇ ಅಡ್ಜಸ್ಟ್ ಮಾಡಲು ಇದೇ ಸಹಾಯಕ್ಕೆ ಬರುತ್ತಿದ್ದುದು . ಮನೆಯಲ್ಲಿ ತುಂಬಾ ಜನರಿದ್ದು ಲೋಕೋ ಭಿನ್ನರುಚಿಃ ಅಂದಾಗ ಮಾಡಿದ ತರಕಾರಿಯನ್ನು ಇಷ್ಟಪಡದವರು ಇನ್ನೊಂದು ಸುತ್ತು ಇವುಗಳಲ್ಲೇ ಊಟ ಮುಗಿಸಿ ಬಿಡಬಹುದಿತ್ತು . ಈಗಿನಂತೆ ಒಬ್ಬೊಬ್ಬರಿಗೆ ಒಂದೊಂದು ತರಹ ಮಾಡುವ ಅಭ್ಯಾಸ, ವ್ಯವಧಾನ, ಮುಚ್ಚಟೆ ಆಗಿನ ಕಾಲದಲ್ಲಿರಲಿಲ್ಲ . ಇನ್ನು ಬ್ರಹ್ಮಚಾರಿಗಳು, ಹೆಂಡತಿ ಮನೆಯಲ್ಲಿರದ ಟೆಂಪರರಿ ಬ್ರಹ್ಮಚಾರಿಗಳು ಬಿಸಿಯನ್ನ ಒಂದು ಮಾಡಿಕೊಂಡು ಇವು ಮತ್ತು ಮೊಸರಿನಲ್ಲಿ ಊಟ ಮುಗಿಸಿ ಬಿಡುತ್ತಿದ್ದರು .ಆಗಲೂ ಈಗಲೂ ಯಾವಾಗಲೂ “ಅವರಿಲ್ಲದ ಊಟ”ದ ಮುಖ್ಯ ಭಾಗ ಪಿಡಚೆ ಅನ್ನ ಅಂದರೆ ನೀವೆಲ್ಲಾ ಒಪ್ಪೇ ಒಪ್ತೀರಿ ಅಲ್ವಾ? ಹಾಗೆ ಮಕ್ಕಳ ಅಕಾಲದ ಹಸಿವಿಗೆ ಆ ಕಾಲದಲ್ಲಿ ಅಮ್ಮಂದಿರು ಉತ್ತರ ಕಂಡುಕೊಳ್ಳುತ್ತಿದ್ದುದು ಇದರಲ್ಲೇ. ಪಿಡಚೆ ಅನ್ನಗಳ ಒಂದು ಕೈತುತ್ತು ಆ ಸಣ್ಣ ಹಸಿವನ್ನು ನೀಗಿಸಿ ಬಿಡುತ್ತಿತ್ತು. ದೂರದೂರಿನ ಪ್ರವಾಸಗಳು ಕೈಗೊಂಡ ಸಮಯದಲ್ಲೂ ಇವು ಆ ಹೊತ್ತಿನ ಊಟಕ್ಕೆ ಒದಗಿಬರುತ್ತಿದ್ದವು .ಗೃಹಿಣಿಯ ನಾಜೂಕುತನ, ಸಮಯಸ್ಫೂರ್ತಿ, ವಿಶಿಷ್ಟ ಕೈರುಚಿಗೆ ಒಳ್ಳೆಯ ಸಾಕ್ಷ್ಯ ಬರೆಯುತ್ತಿದ್ದವು ಇವುಗಳು. ಇನ್ನು ನಮ್ಮ ಮನೆಯಲ್ಲಿ ಚಿಕ್ಕವರಿದ್ದಾಗ ನಮಗೆಲ್ಲ ಈ ಪಿಡಚೆ ಅನ್ನ ಕಲಿಸಿಕೊಡುತ್ತಿದ್ದದು ಅಣ್ಣನೇ (ನಮ್ಮ ತಂದೆ) ಅವರು ತಿನ್ನಲು ಶುರುಮಾಡುವ ಮೊದಲು ಯಾವುದನ್ನು ಎಲೆಯ ತುದಿಗೆ ಬಡಿಸಿರುತ್ತಾರೋ ಅದರಲ್ಲಿ ಜಾಸ್ತಿ ಅನ್ನ ಕಲೆಸಿ 3 ಜನಕ್ಕೂ ಕೈ ತುತ್ತು ಮಾಡಿ ನಮ್ಮ ತಟ್ಟೆಗಳಿಗೆ ಹಾಕಿದ ನಂತರವೇ ಅವರು ಊಟ ಆರಂಭಿಸುತ್ತಿದ್ದದ್ದು. ಹದವಾಗಿ ಮೇಲುಪ್ಪು ಸೇರಿಸಿ ಚಟ್ನಿಪುಡಿ, ಮೆಂತೆ ಹಿಟ್ಟು, ಸಿಹಿ ಪಲ್ಯ, ಉಪ್ಪಿನಕಾಯಿ ರಸಗಳಿಗಾದರೆ ಕರಗಿಸಿದ ತುಪ್ಪ, ಅನ್ನದ ಪುಡಿ ತೊಕ್ಕು ಬೇರೆ ಪಲ್ಯ ಗೊಜ್ಜುಗಳಿಗಾದರೆ ಕರಿದ ಎಣ್ಣೆಯೋ ಹಸಿ ಕಡಲೆಕಾಯಿ ಎಣ್ಣೆಯೋ ಹಾಕಿ ಕಲಸಿ ಕೊಡುತ್ತಿದ್ದ ಆ ಘಳಿಗೆಗಳು ಬಾಲ್ಯದ ನೆನಪಿನ ಅನರ್ಘ್ಯ ರತ್ನಗಳು. ನಾವು ಎಷ್ಟೇ ಕಲಸಿ ತಿಂದರೂ ಅಣ್ಣ ಕೊಡುತ್ತಿದ್ದ ಆ ರುಚಿ ಬರುವುದೇ ಇಲ್ಲ. ಒಟ್ಟಿಗೆ ಊಟಕ್ಕೆ ಕುಳಿತಾಗಲೆಲ್ಲಾ ಎಷ್ಟೇ ದೊಡ್ಡವರಾದ ಮೇಲೂ “ಅಣ್ಣಾ” ಅಂದರೆ ಸಾಕು 3 ಜನಕ್ಕೂ ಆಮೇಲೆ ಅಳಿಯಂದಿರಿಗೂ ಅವರೇ ಕಲಿಸಿಕೊಡುತ್ತಿದ್ದುದು. ತಟ್ಟೆಯ ಬದಲು ದೊಡ್ಡ ಪಾತ್ರೆ ಇರುತ್ತಿತ್ತು ಅಷ್ಟೇ ವ್ಯತ್ಯಾಸ . ನಮ್ಮ ತಂದೆಯ ಚಿಕ್ಕಪ್ಪ ಅಂದರೆ ನಮ್ಮ ಚಿಕ್ಕ ತಾತನವರು ಅನ್ನ ಕಲಿಸಲು ಎಣ್ಣೆ ಅಥವಾ ತುಪ್ಪ ಹಾಕಿ ಅನ್ನುವ ಬದಲು “ಜಿಡ್ಡು ಬಿಡಿ” ಅಂತಿದ್ರು . ಅದನ್ನು ನೆನೆಸಿಕೊಂಡು ನಗುತ್ತಿದ್ದೆವು. ಈರುಳ್ಳಿ ಬಜ್ಜಿ ಅಥವಾ ಪಕೋಡಾ ಈರುಳ್ಳಿ ಸಂಡಿಗೆ ಅಂತಹವುಗಳನ್ನು ಕರೆದು ಮಿಕ್ಕಿದ ಎಣ್ಣೆ ಎಂದರೆ ಮೇಲೆ ಕಲಿಸಲು ತುಂಬಾ ರುಚಿ ಅಂತಿದ್ರು ನಮ್ಮಣ್ಣ . ಭೌತಿಕವಾಗಿ ಅಣ್ಣಾ ದೂರವಾಗುವ ಸ್ವಲ್ಪ ದಿನಕ್ಕೆ ಮೊದಲು ಅಂದೇ ಮಾಡಿದ ಹುಣಸೆ ತೊಕ್ಕಿನ ಅನ್ನ ಕಲಿಸುತ್ತಿದ್ದರು . ಒಬ್ಬಳೇ ಇದ್ದದ್ದು ಆವತ್ತು. ಅಣ್ಣನ ಕೈ ತುತ್ತು ತಿನ್ನಬೇಕೆನಿಸಿತ್ತು. ಎಣ್ಣೆ ಒಳಗಿಟ್ಟು ಬರುವುದರಲ್ಲಿ ಅಣ್ಣ ನನಗಾಗಿ ಒಂದು ದೊಡ್ಡ ತುತ್ತು ಮಾಡಿದ್ದರು “ಆಮೇಲೆ ಊಟ ಮಾಡುವೆಯಂತೆ . ಇದೊಂದು ತುತ್ತು ತಿನ್ನು ಎಷ್ಟು ದಿನ ಆಗಿತ್ತು ಹೀಗೆ ತುತ್ತು ಕೊಟ್ಟು” ಎಂದರು. ಅಂದಿನ ಆ ತುತ್ತೇ ಅವರ ಕಡೆಯ ಕೈತುತ್ತಾಗಿ ಬಿಟ್ಟಿತು. ಈಗಲೂ ಪಿಡಿಚೆ ಅನ್ನ ತಿನ್ನುವಾಗಲೆಲ್ಲಾ ಅಣ್ಣನ ನೆನಪು . ಅಮ್ಮ ಇಲ್ಲವಾದಾಗ ಅಣ್ಣ ಹೇಳ್ತಿದ್ರು ಅಮ್ಮನಿಗೆ ಇಷ್ಟವಾದದ್ದು ಮಾಡಿ ನಾವು ತಿಂದರೆ ಅವರ ಆತ್ಮಕ್ಕೆ ಶಾಂತಿ ಅಂತ. ಹಾಗಾಗಿ ಅಣ್ಣನಿಗೆ ಇಷ್ಟವಾದದ್ದನ್ನೆಲ್ಲಾ ನಾನು ಬಿಟ್ಟಿಲ್ಲ . ಬಾಳ ಪುಸ್ತಕದ ಪುಟ ಪುಟಗಳಲ್ಲಿ ನೆನಪುಗಳ ಬುತ್ತಿ ಆಗಾಗ ತೆಗೆದು ಮೆಲುಕು ಹಾಕುವ ಭಾಗ್ಯವಷ್ಟೇ ಈಗ ಉಳಿದಿರುವುದು. ಪ್ರತಿಯೊಂದು ಮನೆಯಲ್ಲೂ ಹೀಗೆ ಏನಾದರೂ 1 ವಿಶಿಷ್ಟ ವಿಶೇಷ ಅಭ್ಯಾಸ ಸಂಪ್ರದಾಯ ರೂಢಿಯಾಗಿರುತ್ತದೆ . ಒಟ್ಟಿಗಿನ ಒಡನಾಟದಲ್ಲಿ, ಸಂಸರ್ಗದಲ್ಲಿ ಅಚ್ಚಳಿಯದ ನೆನಪುಗಳು ಸರಪಳಿಯಾಗಿ ಬೆಸೆದುಕೊಂಡಿರುತ್ತದೆ . ಪರಸ್ಪರರ ಬಗೆಗಿನ ಮಮತೆ ವಾತ್ಸಲ್ಯಗಳು ಅಲ್ಲಿ ಪ್ರತಿಬಿಂಬಿತ. ಅಪ್ಪ ಅಣ್ಣ ಅಜ್ಜ ಅಜ್ಜಿ ಅತ್ತೆ ಮಾವ ಚಿಕ್ಕಪ್ಪ ದೊಡ್ಡಪ್ಪ ಸೋದರ ಸೋದರಿಯರು ಕೆಲವೊಮ್ಮೆ ಕಸಿನ್ ಗಳು ಎಲ್ಲಾ ಸೇರಿ ಒಟ್ಟಿಗಿನ ಸಹಭೋಜನಗಳು ಒಂದಾಗಿ ಕಳೆದ ಘಟನೆಗಳು ಎಲ್ಲವೂ ಸ್ಮೃತಿಪಟಲದ ಹಸಿಗೋಡೆಯ ಮೇಲೆ ಅಂಟಿ ನಿಂತ ಹರಳುಗಳು . ಅವರಿಗೆ ಅದು ಇಷ್ಟ ಇವರಿಗೆ ಇದು ಇಷ್ಟ ಎಂದೆಲ್ಲಾ ಎಷ್ಟು ಚೆನ್ನಾಗಿ ಅರಿತಿದ್ದೆವಲ್ಲ. ಸಹವಾಸ ಸಹಭೋಜನ ಸಹಅನುಭೂತಿ ಗಳಿಂದಲೇ ನಿಜವಾದ ಸಾಹಚರ್ಯ. ಈಗ ಸಹಭೋಜನದ ಪರಿಕಲ್ಪನೆಯೇ ಮಾಸಿಹೋಗಿದೆ. ಬೆಳಗಿನ ಅವಸರದ ತಿಂಡಿ, ಮಧ್ಯಾಹ್ನದ ಡಬ್ಬಿಯೂಟ .ರಾತ್ರಿಯಾದರೂ ಒಟ್ಟಿಗೆ ಕುಳಿತು ಊಟ ಮಾಡುವ ಅಭ್ಯಾಸ ಕಾಲನ ಮಯಕದ ಮಬ್ಬಿನಲ್ಲಿ ಮಾಯವಾಗುತ್ತಿದೆ. ಒಂದಿಷ್ಟು ತಟ್ಟೆಯಲ್ಲಿ ಕಲಸಿ ತಂದು ದೂರದರ್ಶನದ ಮುಂದೆಯೋ ಲ್ಯಾಪ್ ಟಾಪ್, ಮೊಬೈಲ್ ಮೇಲೆ ಕೈಯಾಡಿಸುತ್ತಲೋ ಊಟದ ಶಾಸ್ತ್ರ ಮುಗಿಸುವುದೇ ಹೆಚ್ಚು. ಪಿಜ್ಜಾ ಬರ್ಗರ್ ನೂಡಲ್ಸ್ ಗಳ ಮುಂದೆ ಪಿಡಚೆಯನ್ನ ಬಿಡಿ, ಮಾಮೂಲಿನ ಹುಳಿ/ಸಾರಿನ ಊಟಗಳೇ ಇಂದಿನ ತಲೆಮಾರಿನವರಿಗೆ ರುಚಿಸುವುದಿಲ್ಲ . ಪುಟ್ಟ ಕುಟುಂಬದ ಮುಷ್ಟಿಯಿಂದ ವಸುದೈವ ಕುಟುಂಬಕಂ ಎಂಬ ಸಮಷ್ಟಿಯವರೆಗಿನ ಪಯಣಕ್ಕೆ ಸಂಸಾರದ ಮಮತೆ ಪ್ರೀತಿಗಳೆಂಬ ಪ್ರಥಮ ಹೆಜ್ಜೆಗಳಿಂದ ಶ್ರೀಕಾರ . ಇಂದಿನ ದಿನಗಳಲ್ಲಿ ಅಪರೂಪವಾಗಿರುವ ಭಾವನೆಗಳು, ಮಾರ್ದವತೆಯ ಬರಗಾಲದಲ್ಲಿ ಮಮತೆಯ ಸಿಂಚನಗಳು ಇಂತಹ ಚಿಕ್ಕ ವಿಷಯಗಳಿಂದಲೇ ಆರಂಭವಾದರೆ ಒಳಿತು . ಈಗಲಾದರೂ ಎಚ್ಚೆತ್ತುಕೊಳ್ಳೋಣ, ಹಳೆಯ ಸಾಂಪ್ರದಾಯಿಕ ಅಡುಗೆ ಊಟದ ವಿಧಾನಗಳನ್ನು ಅನುಕರಿಸೋಣ, ಅನುಸರಿಸೋಣ . ಪದ್ಧತಿಗಳನ್ನು ಮುಂದುವರೆಸಿಕೊಂಡು ಹೋಗೋಣ. ಏನಂತೀರಿ ? ಸುಜಾತಾ ರವೀಶ್ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು”
ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ
“ನಾವು ನಿಟ್ಟುಸಿರು ಬಿಟ್ಟರು ಕುಖ್ಯಾತರಾಗುತ್ತೇವೆ
ಅವರು ಕೊಂದರೂ ಸಹ ಚರ್ಚೆಯೂ ಆಗುವುದಿಲ್ಲ”
-ಅಕ್ಬರ್ ಇಲಾಹಾಬಾದಿ
ಅಂಕಣ ಬರಹ ರಾಮಕೃಷ್ಣ ಗುಂದಿ ಅವರ ಆತ್ಮಕಥೆ—49 ಯಕ್ಷಗಾನ-ನಾಟಕ ರಂಗಭೂಮಿಯಲ್ಲಿ. ನನ್ನ ಕಾಲೇಜು ಅಧ್ಯಾಪಕರ ವೃತ್ತಿಯೊಡನೆ ನಾನು ಪ್ರೀತಿಯಿಂದ ಎದೆಗೆ ಹಚ್ಚಿಕೊಂಡ ಯಕ್ಷಗಾನ ಮತ್ತು ನಾಟಕ ರಂಗಭೂಮಿಯ ಹವ್ಯಾಸಗಳು ನನ್ನ ವ್ಯಕ್ತಿತ್ವದ ಇನ್ನೊಂದು ಮುಖದ ಬೆಳವಣಿಗೆಗೆ ಕಾರಣವಾದವು. ಈ ನಂಟಿನಿಂದಲೇ ಕಾಲೇಜು ಕ್ಯಾಂಪಸ್ಸಿನ ಆಚೆಯೂ ನನಗೊಂದು ಜನಪ್ರಿಯ ವಲಯ ಸೃಷ್ಟಿಯಾಯಿತು. ಹಾಗೆಂದು ನಾನು ಕ್ರಮಿಸಿದ ಯಕ್ಷಗಾನ ಮತ್ತು ರಂಗಭೂಮಿಯ ದಾರಿ ಕೇವಲ ಸುಗಂಧಯುಕ್ತ ಹೂವಿನ ಹಾಸಿಗೆಯಷ್ಟೇ ಆಗಿರಲಿಲ್ಲ. ಅಲ್ಲಿ ಶ್ಲಾಘನೆಯ ಪರಿಮಳದೊಡನೆ ವಿಮರ್ಶೆಯ ಟೀಕೆ ಟಿಪ್ಪಣಿಗಳ ಕಲ್ಲು ಮುಳ್ಳುಗಳನ್ನು ತುಳಿಯುವುದೂ ಅನಿವಾರ್ಯವೇ ಆಗಿತ್ತು….! ಅಂಕೋಲೆಯ ಸುತ್ತಮುತ್ತಲಿನ ಹಲವಾರು ಹಳ್ಳಿಗಳಲ್ಲಿ ನಮ್ಮ ಆಗೇರ ಜನಾಂಗದ ನೆಲೆಗಳಿವೆ. ಎಲ್ಲ ನೆಲೆಗಳಲ್ಲಿಯೂ ಸಾಂಪ್ರದಾಯಿಕ ಭಜನೆ ಉತ್ಸವ ಪ್ರತಿ ವರುಷವೂ ನಡೆಯುತ್ತದೆ. ಸಪ್ತಾಹದ ಕಾಲಾವಧಿ ನಡೆಯುವ ಭಜನಾ ಉತ್ಸವದ ಕೊನೆಯ ರಾತ್ರಿ ಜಾಗರಣೆಗಾಗಿ ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ಏರ್ಪಡಿಸುವ ಪದ್ಧತಿ ತೀರ ಹಿಂದಿನಿಂದಲೂ ರೂಢಿಯಲ್ಲಿದೆ. ಆರಂಭದ ಕೆಲವರ್ಷಗಳಲ್ಲಿ ಆಯಾ ಊರಿನ ಯುವಕರೂ, ವೃದ್ಧರೂ ಸೇರಿ ಬಲ್ಲವರಿಂದ ಮಾರ್ಗದರ್ಶನ ಪಡೆದು ಮೇಳ ಕಟ್ಟಿಕೊಂಡು ಕಲಿತು ಆಡುವ ಕ್ರಮವಿತ್ತು. ಕಾಲಕ್ರಮೇಣ ಯಕ್ಷಗಾನ ವೃತ್ತಿ ಮೇಳಗಳ, ಹವ್ಯಾಸಿ ತಂಡಗಳ ಪ್ರಭಾವದಿಂದ ಬೇರೆ ಬೇರೆ ಕಡೆಯಿಂದ ಅತಿಥಿ ಕಲಾವಿದರನ್ನು ಕರೆಸಿ ಆಟ ಆಡಿಸುವ ಕ್ರಮ ರೂಢಿಯಾಯಿತು. ಪ್ರತಿಯೊಂದು ಊರಿನಲ್ಲೂ ಆಟ ಉತ್ತಮವಾಗಬೇಕೆಂಬ ಆಕಾಂಕ್ಷೆ ಯಿಂದ ಪರಿಣಿತ ಕಲಾವಿದರನ್ನು ಕರೆಸಿಕೊಂಡು ಪ್ರದರ್ಶನ ಏರ್ಪಡಿಸುವ ಸ್ಪರ್ಧಾ ಮನೋಭಾವವೂ ಬೆಳೆಯತೊಡಗಿತು. ತಮ್ಮ ಊರಿನ ಪ್ರದರ್ಶನವೇ ಉತ್ತಮವಾಗಬೇಕೆಂಬ ಆಕಾಂಕ್ಷೆ ಯಿಂದ ಕಲಾವಿದರು ಬೇಡಿದ ಬೆಲೆಕೊಟ್ಟು ಕರೆಸಿಕೊಳ್ಳುವ ಪದ್ಧತಿಯು ಹೆಚ್ಚತೊಡಗಿತು. ಸರಿಸುಮಾರು ಇದೇ ಕಾಲಾವಧಿಯಲ್ಲಿ ನಾನು (ಎಪ್ಪತ್ತು-ಎಂಭತ್ತರ ದಶಕದಲ್ಲಿ) ಹವ್ಯಾಸಿ ಯಕ್ಷ ಕಲಾವಿದನಾಗಿ ರಂಗ ಪ್ರವೇಶ ಮಾಡಿದೆ. ಕುಮಟಾ, ಅಂಕೋಲಾ, ಕಾರವಾರ ಇತ್ಯಾದಿ ತಾಲೂಕುಗಳ ಎಲ್ಲ ಹಳ್ಳಿಗಳಲ್ಲಿ ನಮ್ಮ ಆಗೇರ ಸಮುದಾಯದವರು ಆಟ ಆಡಿಸುವಾಗ ನನ್ನನ್ನು ತಪ್ಪದೇ ಆಹ್ವಾನಿಸುತ್ತಿದ್ದರು. ಕಥಾನಕದ ಮುಖ್ಯ ಪಾತ್ರವನ್ನೇ ನೀಡಿ ಪ್ರೋತ್ಸಾಹಿಸತೊಡಗಿದರು. ವೃತ್ತಿಯಿಂದ ಅಧ್ಯಾಪಕನಾಗಿರುವ ನನಗೆ ಯಕ್ಷಗಾನ ಪ್ರದರ್ಶನದಲ್ಲಿ ರಾತ್ರಿ ಕಳೆದರೆ ಮರುದಿನ ನಿದ್ದೆ ವಿಶ್ರಾಂತಿಗಾಗಿ ರಜೆಯ ಅವಶ್ಯಕತೆಯಿತ್ತು. ರವಿವಾರದ ರಜೆಯ ಮುನ್ನಾ ದಿನದ ಶನಿವಾರ ರಾತ್ರಿಯಲ್ಲಿ ನಾನು ಪಾತ್ರಕ್ಕೆ ಒಪ್ಪಿಕೊಳ್ಳುತ್ತಿದ್ದೆ. ನನ್ನ ಸಮಾಜ ಬಾಂಧವರು ನನ್ನ ಮೇಲಿನ ಅಭಿಮಾನದಿಂದ ರಜೆಯ ಮುನ್ನಾ ದಿನಗಳನ್ನೇ ಆಯ್ದು ತಮ್ಮೂರಿನ ಆಟ ನಿಗದಿಪಡಿಸತೊಡಗಿದರು. ಅದು ಇನ್ನಿತರ ಹವ್ಯಾಸಿ ಕಲಾವಿದರಿಗೂ ತುಂಬಾ ಅನುಕೂಲವಾಗಿ ಇದು ಒಂದು ಸಂಪ್ರದಾಯವೇ ಎಂಬಂತೆ ಇಂದಿಗೂ ಮುಂದುವರೆದಿದೆ. ಹೀಗೆ ಎರಡು ದಶಕಗಳಿಗೂ ಅಧಿಕ ಕಾಲ ನನ್ನ ಸ್ವಜಾತಿ ಬಾಂಧವರೂ, ಇತರ ಸಮಾಜದವರೂ ನನ್ನನ್ನು ತಮ್ಮೂರಿನ ಯಕ್ಷಗಾನ ಪ್ರದರ್ಶನಕ್ಕೆ ಅಭಿಮಾನದಿಂದ ಆಮಂತ್ರಿಸುತ್ತಲೇ ನಾನು ಒಬ್ಬ ಸಮರ್ಥ ಕಲಾವಿದನಾಗಿ ರೂಪುಗೊಳ್ಳುವಂತೆ ಪ್ರೇರಣೆ ನೀಡಿದರು. ಈ ನಡುವೆ ನನಗೆ ಹಲವಾರು ಹಿರಿ-ಕಿರಿಯ ಹವ್ಯಾಸಿ ಮತ್ತು ಮೇಳದ ಕಲಾವಿದರ ಒಡನಾಟದ ಅವಕಾಶ ದೊರೆಯಿತು. ಯಕ್ಷಗಾನ ವೇಷಭೂಷಣ, ಮುಖ ವರ್ಣಿಕೆಗಳ ಔಚಿತ್ಯವನ್ನು ಅರಿತುಕೊಳ್ಳಲು, ಪಾತ್ರ ಪೋಷಣೆ, ಪ್ರಸಂಗದ ನಡೆ, ನೃತ್ಯ ವಿನ್ಯಾಸಗಳ ಸೂಕ್ಷö್ಮಗಳನ್ನು ತಿಳಿದುಕೊಳ್ಳಲು ವಿಫುಲ ಅವಕಾಶ ದೊರೆಯಿತು. ಚಿಕ್ಕಂದಿನಲ್ಲಿ ನಮ್ಮ ತಂದೆ ಗಣಪು ಮಾಸ್ತರರು ಕಲಿಸಿಕೊಟ್ಟ ನೃತ್ಯ ಕ್ರಮದೊಂದಿಗೆ ನಾನು ನೋಡುತ್ತ ಕಲಿತ ನೃತ್ಯ ವಿನ್ಯಾಸಗಳನ್ನು ನನ್ನ ಪಾತ್ರ ಪೋಷಣೆಯಲ್ಲಿ ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದೆನಾದರೂ ಇತ್ತಿಚಿನ ನವನವೀನವಾದ ತಿಟ್ಟು ಮಟ್ಟುಗಳು ಪರಿಪೂರ್ಣವಾಗಿ ನನಗೆ ಅಭ್ಯಾಸವಾಗಿರಲಿಲ್ಲ. ಈ ಸನ್ನಿವೇಶದಲ್ಲಿ ನನಗೆ ಗುರುವಾಗಿ ದೊರೆತವರು ನನ್ನ ಪ್ರೀತಿಯ ಯಕ್ಷ ಗುರು ರಾಮದಾಸ ಬಂಢಾರಿ! ಕುಮಟಾ ತಾಲೂಕಿನ ಮೂರೂರು ಎಂಬ ಗ್ರಾಮದ ತರುಣ ರಾಮದಾಸ ಬಂಢಾರಿ ಉತ್ತಮ ಯಕ್ಷ ನೃತ್ಯ ಪಟುವಾಗಿದ್ದರಲ್ಲದೆ, ಅದ್ವೀತಿಯೆನ್ನಿಸುವ ಮದ್ದಳೆ ವಾದಕರಾಗಿದ್ದರು. ಅವರ ಸಹೋದರಿ ಅಂಕೋಲೆಯ ಸರಕಾರಿ ಆಸ್ಪತ್ರೆಯಲ್ಲಿ “ನರ್ಸ್” ಆಗಿ ಸೇವೆ ಸಲ್ಲಿಸುತ್ತಿದ್ದರು. ಸಹೋದರಿಯೊಡನೆ ತಾಯಿ, ಪತ್ನಿ, ಪುಟ್ಟ ಮಗು ಮತ್ತು ಅಣ್ಣನ ಮಗ ರಮೇಶ ಎಂಬ ಹತ್ತು ವರ್ಷದ ಬಾಲಕನೊಡನೆ ಇಡಿಯ ಸಂಸಾರವೂ ಕಿತ್ತೂರು ಚೆನ್ನಮ್ಮ ರಸ್ತೆಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನೆಲೆಸಿತ್ತು. ರಾಮದಾಸ ಬಂಢಾರಿ ಜೀವನದ ನಿರ್ವಹಣೆಗಾಗಿ ಯಕ್ಷಗಾನ ತರಬೇತಿ ನೀಡುವ, ಯಕ್ಷಗಾನ ಪ್ರದರ್ಶನದಲ್ಲಿ ಮದ್ದಳೆ ನುಡಿಸುವ ಕಾಯಕ ಮಾಡಿಕೊಂಡಿದ್ದ. ಅವರ ಅಣ್ಣನ ಮಗ ರಮೇಶ ಅಂದು ಅಂಕೋಲೆಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ಸೇರಿಕೊಂಡಿದ್ದ. ಚಿಕ್ಕಪ್ಪ ಆಸಕ್ತರಿಗೆ ಯಕ್ಷಗಾನ ನೃತ್ಯ ಕಲಿಸುವಾಗ ತಾನೂ ಆಸಕ್ತಿಯಿಂದ ನೃತ್ಯಾಭ್ಯಾಸ ಮಾಡುತ್ತಿದ್ದ. ಇದೇ ರಮೇಶನೆಂಬ ಬಾಲಕ ಮುಂದೆ ಯಕ್ಷರಂಗದ ಅಪ್ರತಿಮ ಹಾಸ್ಯಕಲಾವಿದನಾಗಿ ಬೆಳೆದನಲ್ಲದೇ ಅಮೃತೇಶ್ವರಿ, ಪೆರ್ಡೂರು, ಸಾಲಿಗ್ರಾಮ ಇತ್ಯಾದಿ ವೃತ್ತಿಮೇಳಗಳಲ್ಲಿ ಮುಖ್ಯ ವಿದೂಷಕನಾಗಿ ಸೇವೆ ಸಲ್ಲಿಸಿ, ಈಗಲೂ ಯಕ್ಷರಂಗದ ಅತ್ಯಂತ ಜನಪ್ರಿಯ ಹಾಸ್ಯ ಕಲಾವಿದನಾಗಿ ವಿಜೃಂಭಿಸುತ್ತಿದ್ದಾನೆ! ರಾಮದಾಸ ಬಂಢಾರಿ ಅಂಕೋಲೆಯ ಆಸುಪಾಸಿನ ಹಳ್ಳಿಗಳಲ್ಲಿ ಯುವಕರ ತಂಡಕಟ್ಟಿ ತರಬೇತಿ ನೀಡಿ ಉತ್ತಮ ಕಲಾವಿದರನ್ನಾಗಿ ರೂಪುಗೊಳಿಸಿದ್ದಾನೆ. ನಾನು ಪಾತ್ರ ನಿರ್ವಹಿಸಿದ ಅನೇಕ ಯಕ್ಷಗಾನ ಪ್ರದರ್ಶನದಲ್ಲಿ ಹಿಮ್ಮೇಳದ ಮದ್ದಳೆ ವಾದಕನಾಗಿ ಕೆಲಸ ಮಾಡಿದ ರಾಮದಾಸ ಬಂಢಾರಿ ಕ್ರಮೇಣ ನನ್ನ ಪ್ರೀತಿಯ ಅಭಿಮಾನಿಯಾದನಲ್ಲದೇ ನಾನು ‘ಮುಲ್ಲಾಬಾಡಾ’ ಏರಿಯಾದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುವಾಗ ದಿನವೂ ಮದ್ದಳೆಯೊಂದಿಗೆ ಮನೆಗೇ ಬಂದು ಯಕ್ಷನೃತ್ಯದ ವಿನೂತನ ವಿನ್ಯಾಸಗಳನ್ನು ನನಗೆ ಹೇಳಿಕೊಟ್ಟು ನನ್ನನ್ನು ತಿದ್ದಿ ಪರಿಷ್ಕರಿಸಿದ. ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ಸ್ವ ಇಚ್ಛೆಯಿಂದ ತಿಂಗಳುಗಳ ಕಾಲ ಮದ್ದಳೆಯೊಂದಿಗೆ ಮನೆಗೆ ಬಂದು ಯಕ್ಷಗಾನ ಕುಣಿತ ಕಲಿಸಿದ ರಾಮದಾಸ ಬಂಢಾರಿಯವರನ್ನು ನಾನು ಎಂದಿಗೂ ಮರೆಯಲಾಗದ, ಮರೆಯ ಬಾರದ ನನ್ನ ‘ಯಕ್ಷಗುರು’ ಎಂದೇ ನಾನು ಭಾವಿಸಿದ್ದೇನೆ. ಅಂದು ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಯಕ್ಷರಂಗದ ಉತ್ತುಂಗದಲ್ಲಿ ವಿಜೃಂಭಿಸುತ್ತಿದ್ದ ಕಾಲ. ಪ್ರತಿ ವರ್ಷದ ತಿರುಗಾಟದಲ್ಲಿಯೂ ವಿನೂತನ ನೃತ್ಯ ವಿನ್ಯಾಸವೊಂದನ್ನು ತಂದು ಜನಪ್ರಿಯಗೊಳಿಸುವುದು ಚಿಟ್ಟಾಣಿಯವರ ಕ್ರಮವೇ ಆಗಿತ್ತು….! ನನ್ನ ಗುರು ರಾಮದಾಸ ಬಂಢಾರಿ ಕೂಡ ಉತ್ತಮ ಕುಣಿತಗಾರನಾಗಿದ್ದು, ಚಿಟ್ಟಾಣಿಯವರ ಎಲ್ಲ ಬಗೆಯ ನೃತ್ಯಗಳನ್ನು ಲಯಬದ್ಧವಾಗಿ ಕುಣಿದು ತೋರಬಲ್ಲ ಸಮರ್ಥನಾಗಿದ್ದ. ಇದೇ ಕಾರಣದಿಂದ ಆತ ಚಿಟ್ಟಾಣಿಯವರಿಗೆ ಅತ್ಯಂತ ಪ್ರೀತಿ ಪಾತ್ರನೂ ಆಗಿದ್ದ. ಈ ಸ್ನೇಹದ ನಂಟು ವಿಸ್ತçತವಾಗುತ್ತಲೇ ನನಗೂ ಚಿಟ್ಟಾಣಿಯವರಿಗೂ ಸಹೋದರ ಭಾವದ ಅತ್ಯಂತ ಆಪ್ತವಾದ ಸ್ನೇಹ ಸಂಬಂಧಕ್ಕೆ ಕಾರಣವಾಯಿತೆಂಬುದು ನನ್ನ ಬದುಕಿನ ಬಹುದೊಡ್ಡ ಭಾಗ್ಯ! ಹವ್ಯಾಸಿ ಕಲಾ ತಂಡಗಳ ತಿರುಗಾಟದ ಆರಂಭದ ದಿನಗಳಲ್ಲಿ ಹಿಮ್ಮೇಳದ ಭಾಗವತರಾಗಿ ದೊರೆತ ಗಜಾನನ ಮಾಸ್ಟರ್ ಕಲ್ಲಬ್ಬೆ, ಆರ್.ಬಿ.ನಾಯ್ಕ ಅಂಕೋಲಾ, ಸಿದ್ದಾಪುರ ಸತೀಶ ಹೆಗಡೆ ದಂಟಕಲ್, ಹಿಲ್ಲೂರಿನ ಹೆಗಡೆ ಭಾಗವತರು ಮುಂತಾದವರು ನನ್ನ ಪಾತ್ರ ಘೋಷಣೆಗೆ ಬೆನ್ನೆಲುಬಾಗಿ ನಿಂತು ನನ್ನನ್ನು ರಂಗದಲ್ಲಿ ಮೆರೆಯಿಸಿದ ಪರಿಣಾಮ ನಾನು ಬಹುಜನ ಪ್ರೀತಿಯ ಕಲಾವಿದನಾಗಿ ಬೆಳೆಯಲು ಕಾರಣವಾಯಿತು. ಜೊತೆಯಲ್ಲಿ ಸಹಕಲಾವಿದರಾಗಿ ದೊರೆತ ಗೋಕರ್ಣದ ಅನಂತ ಹಾವಗೋಡಿ, ಎಕ್ಟರ್ ಜೋಷಿ, ಶಿವಾನಂದ ಬಂಢಾರಿ, ಬೀರಣ್ಣ ಮಾಸ್ತರ ಅಡಿಗೋಣ, ವಿಠೋಬ ನಾಯಕ ವಂದಿಗೆ, ವಾಸುದೇವ ಶಾನಭಾಗ ಶಿರ್ಶಿ, ಪಾಲನಕರ ಮಾಸ್ತರ ಅಂಕೋಲಾ, ನಾರಾಯಣ ಗಾಂವಕರ ಪಡುವಣಿ, ಜಿ.ಎನ್. ಹೆಗಡೆ ಶಿರ್ಶಿ, ಮಾಧವ ಪಟಗಾರ ಕುಮಟಾ, ಗೋವಿಂದ ನಾಯ್ಕ ಕುಮಟಾ, ಧಾರೇಶ್ವರ ಮಾಸ್ತರರು ಮೊದಲಾದ ಹಿರಿಯರೆಲ್ಲ ಒಂದಲ್ಲ ಒಂದು ಬಗೆಯಿಂದ ನನ್ನನ್ನು ಪ್ರಭಾವಿಸದರಲ್ಲದೆ ನನ್ನ ಕಲಾವಿದ ವ್ಯಕ್ತಿತ್ವಕ್ಕೆ ಸಾಣಿ ಹಿಡಿದು ಬೆಳಗಿಸಿದವರು. ನಿರಂತರ ನಾಲ್ಕು ದಶಕಗಳ ಕಾಲದ ನನ್ನ ಯಕ್ಷಗಾನ ರಂಗದ ಪಯಣದಲ್ಲಿ ಹಲವು ಏಳು ಬೀಳುಗಳಿವೆ. ಆದರೂ ಈ ಯಕ್ಷರಂಗದ ಸುಂದರ ಅನುಭವ ಮತ್ತು ಒಡನಾಟಗಳನ್ನು ನಾನು ಪ್ರೀತಿಯಿಂದ ನನ್ನ ಸ್ಮರಣೆಯ ಭಾಗವಾಗಿಯೇ ಉಳಿಸಿಕೊಂಡಿದ್ದೇನೆ. ನೆನಪಿಸಿ ಉಲ್ಲೇಖಿಸಲೇಬೇಕಾದ ಕೆಲವು ಅವಿಸ್ಮರಣೀಯ ಸನ್ನಿವೇಶಗಳನ್ನು ಮುಂದೆ ನಿರೂಪಿಸುವೆ….. ರಾಮಕೃಷ್ಣ ಗುಂದಿ
“ಒಣರೊಟ್ಟಿ ತಿಂದು
ತಣ್ಣೀರ ಕುಡಿ, ಫರೀದ್
ಇತರರ ತುಪ್ಪ ರೊಟ್ಟಿಯ ಕಡೆ
ನೋಡದಿರು ಹಂಬಲಿಸಿ”
-ಬಾಬಾ ಷೇಖ್ ಫರೀದ್
ಕಾಲವೆಂಬ ಗಿರಿಯ ಏರುತ್ತಾ ಏರುತ್ತಾ ಹಿಂತಿರುಗಿ ನೋಡಿದಾಗ ಅದೆಷ್ಟೋ ಅಂದಿನ ಸಾಮಾನ್ಯ ಸಂಗತಿಗಳು ಇಂದು ವಿಶಿಷ್ಟವೆನಿಸ ತೊಡಗುತ್ತವೆ. ಕಾಡುವ ನೆನಪುಗಳಾಗಿ ಹಂಚಿಕೊಳ್ಳಲೇಬೇಕೆಂಬ ತಹತಹ ಮೂಡಿಸುತ್ತವೆ. ಅಂತಹ ನೆನಪುಗಳ ಮಾಲಿಕೆ ಈ ಅಂಕಣ. ಬನ್ನಿ ನೆನಪಿನ ದೋಣಿಯನ್ನೇರಿ ಗತ ವೆಂಬ ಸಾಗರದ ಪರ್ಯಟನೆ ಮಾಡಿ ಬರೋಣ.
ಅಂಕಣ ಸಂಗಾತಿ ತೊರೆಯ ಹರಿವು ‘ಸಾವಿಗೊಂದು ಘನತೆ ಕೊಡುವ…’ ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ! ‘ಹುಟ್ಟಿದ ಮೇಲೆ ಸಾವು ಸಹಜ’ ಎಂದರೂ ಬಾಳಿ ಬದುಕಬೇಕಾದ ಒಂದು ಒಳಿತಿನ ಜೀವಕ್ಕೆ ಇಂಥದ್ದೊಂದು ಸಾವು ಬಂದುದನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೊಂದು ಎಂದಿಗೂ ಮಾಯದ ಗಾಯ. ಪುನೀತ್ ಕೇವಲ ನಟನಾಗಿದ್ದರೆ ಸಿನಿಪ್ರಿಯರಿಗೆ, ಅಭಿಮಾನಿಗಳಿಗೆ ಹೆಚ್ಚು ದುಃಖವಾಗುತ್ತಿದ್ದಿರಬಹುದು. ಆದರೆ ಜನಾನುರಾಗಿಯೂ ಹೃದಯವಂತನೂ ಆದ ಚೆಂದದ ವ್ಯಕ್ತಿಯೊಬ್ಬರ ಈ ಸಾವು ಎಲ್ಲಾ ವಯೋಮಾನದವರನ್ನೂ ಕಾಡಿದೆ. ಇಂಥಾ ದಿಢೀರ್ ಸಾವಿಗೆ ಕಾರಣವನ್ನು ಹುಡುಕುತ್ತಿದೆ. ಸಾವು ಸಹಜ ಎಂದ ಮೇಲೆ ಅದು ಬಂದಂತೆ ಸಹಜವಾಗಿ ಸ್ವೀಕರಿಸಬೇಕು ಎಂದು ಹೇಳುವುದು ಸುಲಭ. ಆದರೆ ಅಕಾಲದ ಸಾವನ್ನು ಸ್ವೀಕರಿಸುವುದು ಹೇಗೆ? ಅಕಾಲದ ಸಾವೆಂದರೆ ಏನು? ಸಾವಿಗೆ ಕಾಲ ಎನ್ನುವುದಿದೆಯೇ? ಎಂಬೆಲ್ಲಾ ಜಿಜ್ಞಾಸೆಗೆ ಮನ ತುಡಿಸುತ್ತದೆ. ನಮ್ಮ ಹಿರಿಯರು ಹೇಳುವಂತೆ ಅಥವಾ ನಾವು ಬೆಳೆದು ಬಂದ ರೂಢಿಯಲ್ಲಿ ತುಂಬು ಬಾಳನ್ನು ಅಪೇಕ್ಷಣೀಯ ಎನ್ನಲಾಗುತ್ತದೆ. ಇಲ್ಲಿ ‘ತುಂಬು ಬಾಳು ತುಂಬಿರುವ ತನಕ ತುಂಬಿ ತುಂಬಿ ಕುಡಿಯಬೇಕು’ ಎನ್ನುವ ಹಿರಿಮನಸ್ಸಿನ ಹಾರೈಕೆಯಿರುತ್ತದೆ. ‘ ಶತಮಾನಂ ಭವತಿ ಶತಾಯುಹ್ ಪುರುಷಃ ಶತೇಂದ್ರಿಯಃ ಆಯುಶ್ಯೇವೇಂದ್ರಿಯೇ ಪ್ರತಿತಿಷ್ಠತಿ’ ಎಂಬುದು ದೀರ್ಘಾಯುಶ್ಯ ಹಾಗೂ ಉತ್ತಮ ಆರೋಗ್ಯ ಹೊಂದಿರಿ ಎಂಬ ಸದಾಶಯ ಹೊಂದಿರುವ ಆಶೀರ್ವಾದ ಸ್ವರೂಪದ ಮಂತ್ರವನ್ನು ಆಗಾಗ್ಗೆ ಕೇಳುವ ಆಚರಣೆಗಳ ಜೊತೆ ಜೊತೆಗೆ ಬೆಳೆದು ಬಂದಿರುತ್ತೇವೆ. ಕೊನೆಗೆ ‘ನೂರು ವರ್ಷ ಸುಖವಾಗಿ ಬಾಳಿದರು’ ಎಂಬ ಸುಖಾಂತ್ಯವೇ ಆಗಿರಬೇಕೆನ್ನುವ ಅಪೇಕ್ಷೆಯಲ್ಲೇ ಎಲ್ಲಾ ಕತೆಗಳನ್ನು ಹೆಣೆಯುತ್ತೇವೆ. ಪುರಾಣಗಳಲ್ಲಿ ‘ಚಿರಂಜೀವಿ’ಗಳನ್ನು ಹುಟ್ಟಿಸಿ ವಿಚಿತ್ರ ಸಮಾಧಾನಪಡುವವರು ನಾವು. ‘ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ | ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ‘ ಎಂದು ಅವರನ್ನು ಹೆಸರಿಸುವ ಸಂಸ್ಕೃತ ಶ್ಲೋಕವಿದೆ. ಚಿರಂಜೀವಿಗಳಾಗಿರಿ, ಆಯುಶ್ಮಾನ್ಭವ ಎಂದು ಆಶೀರ್ವದಿಸುವ ರೂಢಿ ನಮ್ಮಲ್ಲಿದೆ. ಹೀಗಿರುವಾಗ, ಅಪಘಾತದ ಸಾವುಗಳು, ಅನಾರೋಗ್ಯದ ಕಾರಣಕ್ಕೆ ಬರುವ ಸಾವುಗಳನ್ನು ಸ್ವೀಕರಿಸುವ ಬಗೆ ಹೇಗೆ? ಮನಸ್ಸು ಯಾವಾಗಲೂ ದೀರ್ಘಾಯುಷ್ಯಕ್ಕೆ ಸಿದ್ಧವಾಗಿರುವಾಗ ಅಪಘಾತ, ಅನಾರೋಗ್ಯದ ಕಾರಣ ಅಕಾಲಿಕ ಸಾವು ಬಂದರೆ?! ಅಂಥ ಸಂದರ್ಭಗಳಲ್ಲಿ ನಮ್ಮ ಕೈ ಮೀರಿದ ವಿಷಯಕ್ಕೆ ಅತೀವ ದುಃಖವಾಗುವುದು ಸುಳ್ಳಲ್ಲ. ದೇಶಗಳ ಆಂತರಿಕ ರಾಜಕೀಯ ಕಲಹಕ್ಕೆ ಬಲಿಯಾಗಿ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿ ಸತ್ತ ಪುಟ್ಟ ಸಿರಿಯನ್ ಬಾಲಕ ‘ಅಲಾನ್ ಕುರ್ದಿ’ ಆಗಲಿ, ಭಾರತ ಯುದ್ಧದಲ್ಲಿ ವೀರ ಮರಣಕ್ಕೆ ಒಳಗಾದ ಪದೇ ಪದೇ ನೆನಪಿಗೆ ಬರುವ ‘ವೀರ ಅಭಿಮನ್ಯು’ವಾಗಲೀ, ಕೆವಿನ್ ಕಾರ್ಟರನ ಪುಲಿಟ್ಚರ್ ಪ್ರಶಸ್ತಿಯ ಚಿತ್ರದೊಳಗಿನ ಅಪೌಷ್ಠಿಕಾಂಶದ ‘ಆಫ್ರಿಕಾದ ಮಗು’ ವಾಗಲಿ, ಮಹಾಯುದ್ಧದ ಕ್ರೂರ ನೆನಪಾಗಿ ಕಾಡುವ ಅಣುಬಾಂಬಿನ ದಾಳಿಗೆ ಸಿಲುಕಿದ ಆ ಎರಡು ನಗರಗಳ ಕಂದಮ್ಮಗಳಾಗಲಿ.. ಅಕಾಲದ ಸಾವಿಗೆ ವಿನಾಕಾರಣ ಬಲಿಯಾದವರು. ಇಂಖಾ ಸಾವುಗಳು ಇಡೀ ಮನುಕುಲವನ್ನು ಕಾಡುತ್ತವೆ. ಹಾಗೆ ಕಾಡುವ ದೂರ ದೇಶಗಳ, ಇತಿಹಾಸ ಪುರಾಣಗಳ ಸಾವುಗಳ ನಡುನಡುವೆ ನಮ್ಮ ಸುತ್ತಳತೆಯಲ್ಲಿ ಘಟಿಸಿಬಿಡುವ ಪುನೀತರಂತಹ ಅದಮ್ಯ ಚೇತನಗಳ ಸಾವು ಕಂಗೆಡಿಸಿ ತಲ್ಲಣಗೊಳಿಸುತ್ತವೆ. ಹುಟ್ಟಿದ ಜೀವಿಗಳಿಗೆ ಸಾವು ಅನಿವಾರ್ಯವೇ. ಆದರೆ ಅದನ್ನು ನಿರೀಕ್ಷಿಸುತ್ತಾ ಯಾರೂ ಕುಳಿತಿರಲಾರರು. ಸಾವಿನಂತಹ ಅಂತಿಮ ಸತ್ಯವನ್ನು ಅರಿತಿದ್ದರೂ ಅದರ ರೀತಿ ರಿವಾಜುಗಳನ್ನು ನಮ್ಮ ಬಾಲಿಶ ಮನಸ್ಸು ಸ್ವೀಕರಿಸಲು ತಯಾರಿರುವುದಿಲ್ಲ. ವಾರ ಕಳೆದರೂ ಗರ ಬಡಿದಂತಿರುವ ಮನಸ್ಸಿಗೆ ದಿಕ್ಕು ತೋಚದಂತಾಗಿ ಬಿಡುವುದು ಸತ್ಯವೇ. ಆದರೂ ಈ ಅನಿರೀಕ್ಷಿತ ಆಘಾತದ ಸಂದರ್ಭದಲ್ಲಿ ದುಡುಕಿನ ಕೈಗೆ ಮತಿಕೊಟ್ಟು ಮಂಕಾದ ಮನಸ್ಥಿತಿಯಲ್ಲಿ ನಮ್ಮ ಸಾವಿಗೆ ನಾವೇ ಆಹ್ವಾನ ಕೊಡುವುದಿದೆಯಲ್ಲ ಅದೊಂದು ಪರಮ ಮೂರ್ಖತನದ ಕೆಲಸ. ಈಗಾಗಲೇ ಹಲವಾರು ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಇದು ನಿಜಕ್ಕೂ ಬೇಸರದ ವಿಚಾರ. ಯಾವ ನೋವುಗಳೂ ಶಾಶ್ವತವಾಗಿರುವುದಿಲ್ಲ. ಸುಖ ದುಃಖಗಳು ಬಾಳಿನೆರಡು ಮುಖಗಳು. ಇದೊಂದು ಗಳಿಗೆ ಇದ್ದರೆ ಅದೊಂದು ಗಳಿಗೆ ಇರುತ್ತದೆ. ಇಂಗ್ಞೀಶಿನಲ್ಲಿ ಒಂದು ಪದವಿದೆ passing clouds ಎಂದು. ಇದನ್ನು ಯಾವುದಕ್ಕೂ ಹೋಲಿಸಬಹುದು. ಸುಖವಾಗಲಿ ದುಃಖವಾಗಲಿ ಸ್ಥಿರವಲ್ಲ. ಬೇಸರ ಭಾವ ಯಾವತ್ತಿಗೂ ಸ್ಥಿರವಲ್ಲ. ಹಾಗೆಯೇ ಸುಖವೂ ಶಾಶ್ವತವಲ್ಲ. ಇದನ್ನು ತಿಳಿದ ನಮ್ಮ ಹಿರಿಯರು ಬದುಕನ್ನು ಚಕ್ರಕ್ಕೆ ಹೋಲಿಸಿದ್ದರು. ಗಾಲಿ ಸುತ್ತುತ್ತಿರುವಾಗ ಬಂಡಿಯು ಚಲಿಸುವಂತೆ, ಜೀವನ ಚಕ್ರವು ಚಲಿಸಲು ಸುಖವೊಮ್ಮೆ ದುಃಖವೊಮ್ಮೆ ಮೇಲಾಟವಾಡಬಹುದು. ನಿರಂತರವಾಗಿ ಯಾವ ಅಡೆತಡೆಯೂ ಇಲ್ಲದೆ ಗುರಿಯನ್ನು ಮುಟ್ಟುವಂತೆ ಬದುಕಿನ ಬಂಡಿ ಚಲಿಸುವುದು ಅಸಾಧ್ಯ. ಸರ್ವ ಜೀವಿಗಳಿಗೂ ಅದರದ್ದೇ ಆದ ಕಷ್ಟಸುಖಗಳಿರುತ್ತವೆ. ಯಾವಾಗಲೂ ಒಂದೇ ರೀತಿಯ ಜಡಭಾವದಲ್ಲಿ ಬದುಕಲಾಗದು. ಚಲಿಸುವ ಗಾಲಿಯಂತೆ ನಮ್ಮ ಜೀವನ ಚಕ್ರವೂ ಚಲಿಸುತ್ತಿರಬೇಕು. ಬೆಳಕಿನಂಥ ಬುದ್ಧಿಯನ್ನಾವರಿಸುವ ಕತ್ತಲೆಯಂತಹ ಕ್ರೋಧ, ಮಂಕುತನವನ್ನು ನಿವಾರಿಸಿಕೊಳ್ಳಬೇಕು. ಮಬ್ಬು ಹಿಡಿಸುವ ಆಲೋಚನೆಗಳಿಂದ ಕಷ್ಟಪಟ್ಟಾದರೂ ಹೊರಬರಬೇಕು. ವಿಚಾರದ ಯೋಗ್ಯ ನಿರ್ಣಯಕ್ಕೆ ಮನಸ್ಸನ್ನು ತಾಲೀಮುಗೊಳಿಸಬೇಕು. ಈಗೀಗಂತೂ ಆತ್ಮಹತ್ಯೆಗಳು, ಕೊಲೆಗಳು ತೀರಾ ಸಾಮಾನ್ಯ ಎನ್ನುವಂತಾಗಿಬಿಟ್ಟಿವೆ. ‘ಕೊಂದರೆ ತೀರಿತೆ ಮಂದಿಯ ದುಃಖ!’ ‘ಆತ್ಮಹತ್ಯೆಯಿಂದ ಸಿಗುವುದೇ ನೋವಿಗೆ ಅಂತ್ಯ!’ ಎಂದು ಯಾರು ಯಾರನ್ನೋ ಕೇಳಬೇಕಾಗಿಲ್ಲ. ನಮ್ಮ ಮನಗಳನ್ನು ಸಂತೈಸಿಕೊಳ್ಳಬೇಕಾದ ಕಾಲವಿದು. ನಮ್ಮೊಡನೆ ಇರುವ ಕುಟುಂಬಕ್ಕೆ, ನಾವು ಬದುಕುತ್ತಿರುವ ಸಮಾಜಕ್ಕೆ ಜವಾಬ್ದಾರರಾಗಿರುವ ಬದ್ಧತೆ ನಮಗಿರಬೇಕು. ಕಳೆದುಕೊಂಡವರ ನೋವನ್ನು ಇತರರು ಹಂಚಿಕೊಳ್ಳಲಾಗದು. ‘ದುಃಖ ಭರಿಸುವ ಶಕ್ತಿ ಸಿಗಲಿ’ ಎಂಬ ನಾಲ್ಕು ಸಮಾಧಾನದ ಮಾತನಾಡುವ ಸಂದರ್ಭದಲ್ಲಿ ನಮ್ಮ ದುಡುಕಿನ ನಿರ್ಧಾರಗಳು ನೊಂದವರ ಹೃದಯವನ್ನು ಮತ್ತಷ್ಟು ಭಾರಗೊಳಿಸಬಾರದು. ಸಾವು ಬಂದಾಗ ಬರಲಿ. ಬಂದೇ ತೀರುವ ಅತಿಥಿಯನ್ನು ಇಂದೇ ಕರೆಯುವ ಹಠ ಯಾರಿಗೂ ಬೇಡ. ತಾನಾಗಿ ಬರಲಿರುನ ಸಾವಿಗೊಂದು ಘನತೆಯ ಬದುಕನ್ನು ಕಟ್ಟಿ ಕೊಡುವ… – ವಸುಂಧರಾ ಕದಲೂರು . ೨೦೦೪ ರ ಬ್ಯಾಚಿನ ಕೆ. ಎ. ಎಸ್. ಅಧಿಕಾರಿಯಾಗಿ ಆಯ್ಕೆಯಾಗಿ, ಕೃಷಿ ಮಾರಾಟ ಇಲಾಖೆಯಲ್ಲಿ ಸಹಾಯಕ ಹಾಗೂ ಉಪ ನಿರ್ದೇಶಕರು ಆಗಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಪ್ರವಾಸೋದ್ಯಮ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಆಡಳಿತ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುತ್ತಾರೆಓದು ಬರವಣಿಗೆ ಪರಮಾಪ್ತ ಹವ್ಯಾಸಗಳು. ೧. ‘ಮರೆತು ಬಿಟ್ಟದ್ದು’ ಮೊದಲ ಕವನ ಸಂಕಲನ.೨. ‘ ಕನ್ನಡ ಕವಿಕಾವ್ಯ ಕುಸುಮ-೪೦’ ಸರಣಿಯಲ್ಲಿ ಹಿರಿಯ ಕವಿಗಳೊಡನೆ ನನ್ನ ಹೆಲವು ಕವನಗಳು ಪ್ರಕಟವಾಗಿವೆ. ಕಥಾ ಸಂಕಲನ ಹಾಗೂ ಕವನ ಸಂಕಲನ ಹೊರತರುವ ಪ್ರಯತ್ನದಲ್ಲಿದ್ದಾರೆ


