ಪ್ರಸ್ತುತ
‘ಜಾಲ’ತಾಣ ಸ್ಮಿತಾ ರಾಘವೇಂದ್ರ ಹೆಸರೇ ಹೇಳುವಂತೆ ಇದೊಂದು “ಜಾಲ” ಮತ್ತೆ ನಾವೆಲ್ಲ ಅಲ್ಲಿ “ತಾಣ” ಪಡೆದವರು ಜಾಲದೊಳಗೆ ಸಿಲುಕಿಕೊಂಡ ಕೀಟದಂತಾಗಿದ್ದೇವೆ.. ಆದರೂ ನಾವಿಲ್ಲಿ ತಂಗಿದ್ದೇವೇ ತಂಗುತ್ತೇವೆ ಇಂದೂ ಮುಂದೂ ಸದಾ ತಂಗಲೇ ಬೇಕಾದ ಜಾಲದಲ್ಲಿ ಒಂದಿಷ್ಟು ಜಾಗೃತೆಯೂ ಮುಖ್ಯ ಅಂಶವಾಗುತ್ತದೆ. ಹೌದು.. ಸಾಮಾಜಿಕ ಜಾಲತಾಣವು ಸಂಬಂಧಗಳನ್ನು ಕಸಿಯುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಎಂಬುದು ಜನ ಜನಿತವಾದ ಮಾತು ಮತ್ತು ಸತ್ಯದ ಮಾತುಕೂಡಾ.. ಯಾಕೆ!? ಎಂದು ಸ್ವಲ್ಪವೇ ಸ್ವಲ್ಪ ವಿಚಾರಮಾಡುವದಕ್ಕೂ ನಮಗಿಂದು ಸಮಯವಿಲ್ಲ.. ಯಾಕೆಂದರೆ ನಮ್ಮ ಅಳಿದುಳಿದ ಸಮಯವನ್ನು ಜಾಲತಾಣ ನುಂಗಿಹಾಕಿದೆ. ಚಕ್ರವ್ಯೂಹದಲಿ ಸಿಕ್ಕಿಕೊಂಡ ಅಭಿಮನ್ಯುವಿನಂತಾಗಿದ್ದೇವೆ. ಯಾಕೆ ಎಂದು ಯೋಚಿಸಿದರೆ ಹಲವಾರು ವಿಷಯಗಳು ಅನಾವರಣವಾಗುತ್ತಲೇ ಹೋಗುತ್ತದೆ. ಈ ಜಾಲತಾಣ ನಮ್ಮ ವಯಕ್ತಿಕ ವಿಷಯಗಳಿಗೆ, ಸಂಬಧಗಳಿಗೆ ಅವಕಾಶ ಮಾಡಿಕೊಡುವುದಿಲ್ಲ. ನಿರಂತರವಾಗಿ ಹೆಚ್ಚು ಸಮಯಗಳಕಾಲ ಜಾಲತಾಣದಲ್ಲಿ ತೊಡಗುವುದು ಸ್ಥಿರ ಸಂಬಂಧಗಳಿಗೆ ಅಂದರೆ ಅಣ್ಣ- ತಮ್ಮ, ಗಂಡ- ಹೆಂಡತಿ, ಅಪ್ಪ -ಅಮ್ಮ, ಅಕ್ಕ -ತಂಗಿ, ಹೀಗೇ ಹಲವು ಸಬಂಧಗಳಿಗೆ ಸಮಸ್ಯೆಯನ್ನು ಉಂಟುಮಾಡುತ್ತಿದೆ.ಅವರೊಂದಿಗಿನ ಸಂವಹನ ಕಡಿಮೆಯಾಗುತ್ತಿದೆ. ಬೇಕಾದ,ಮತ್ತು ಬೇಡದ ಎಲ್ಲ ಸಂಗತಿಗಳೂ ಇಲ್ಲಿ ಅಡಕವಾಗಿರುವಕಾರಣ,ಹೆಚ್ಚು ಹೆಚ್ಚು ಸಮಯ ಜಾಲತಾಣದಲ್ಲಿ ಮುಳುಗುವದರಿಂದ ಅವಶ್ಯಕತೆ ಗಿಂತ ಹೆಚ್ಚು ವಿಷಯ ಸಂಗ್ರಹಣೆ ಹವ್ಯಾಸವಾಗಿ ಹೋಗುತ್ತದೆ. ಬಿಟ್ಟೆನೆಂದರೂ ಬಿಡದ ಮಾಯೆ ಇದು. ಸಂಬಂಧಗಳ ಮೂಲಭೂತ ಅಂಶ ನಂಬಿಕೆ. ಜಾಲತಾಣದ ಕಾರಣದಿಂದ ನಂಬಿಕೆ ಎನ್ನುವದು ಗೋಡೆಯ ತುದಿಯಲ್ಲಿ ಇಟ್ಟ ತಕ್ಕಡಿಯಂತಾಗಿದೆ ಸಾಮಾಜಿಕ ಜಾಲತಾಣದಲ್ಲಿ ವಯಕ್ತಿಕ ಅಭಿಪ್ರಾಯಗಳು ಮತ್ತು ಮಾಹಿತಿ ಹಂಚಿಕೆ ಹೆಚ್ಚು ದುರ್ಬಲವಾಗಿರುತ್ತದೆ. ಅದು ಯಾವಕಾರಣಕ್ಕೂ ಸೇಪ್ ಕೂಡ ಅಲ್ಲ. ನಮ್ಮ ಇಡೀ ವ್ಯಕ್ತಿತ್ವವನ್ನೇ ಸೆರೆಹಿಡಿದು ಅಳೆದು ತೂಗಿಬಿಡುತ್ತದೆ ಈ ಜಾಲತಾಣ ಈಗೀಗ ಹ್ಯಾಕರ್‌ಗಳ ಹಾವಳಿಯಿಂದಾಗಿ ನಮ್ಮ ಎಲ್ಲಾ ಮಾಹಿತಿಗಳು ಸೋರಿಕೆಯಾಗುವ ಸಂಭವವು ಜಾಸ್ತಿಯಾಗಿರುತ್ತದೆ ಮತ್ತು ಮೊಬೈಲ್‌ನಲ್ಲಿ ನಾವು ಬ್ರೌಸ್ ಮಾಡುವಾಗ ಕೊಡುವ ನಮ್ಮ ಮಾಹಿತಿಗಳೇ ಆಗಲಿ, ಫೋಟೋಗಳೇ ಅಗಲಿ ದುರ್ಬಳಕೆಯಾಗುತ್ತಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಅಲ್ಲದೇ ನಮ್ಮ ಮೊಬೈಲ್‌ಗಳಲ್ಲಿರುವ ಮಾಹಿತಿಯನ್ನು ಸುಲಭವಾಗಿ ಕದಿಯುವಂತ ಇತರ ಸ್ವಾಫ್ಟವೇರ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ಕಾರಣ ಯಾವುದಕ್ಕೂ ಮೊಬೈಲ್‌ಗಳಲ್ಲಿ ನಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸದಿರುವುದು ತೀರಾ ಸೂಕ್ತ. ಪ್ರತಿಯೊಂದನ್ನೂ ಹಂಚಿಕೊಳ್ಳುತ್ತಾ ಬೇಡದ ನೊವುಗಳಿಗೆ ದುರ್ಘಟನೆಗಳಿಗೆ ನಾವೇ ಎಡೆಮಾಡಿಕೊಳ್ಳುತ್ತಿದ್ದೇವೆ.. We all went to Goa with the family” ಅಂತ ಯುವತಿಯೊಬ್ಬಳು ಕುಟುಂಬದ ಜೊತೆಗಿನ ಫೋಟೋ ಶೇರ್ ಮಾಡಿದ್ದಳು ಅದನ್ನು ನೋಡಿದ ಯಾರೊ ಒಬ್ಬ ಅಸಾಮಿ ತಿರುಗಿ ಬರುವದರೊಳಗೆ ಮನೆ ದರೋಡೆಮಾಡಿ ಹೋಗಿದ್ದ. ಎಲ್ಲೇ ಹೋದರೂ ಏನೇ ತಿಂದರೂ ಎಲ್ಲವನ್ನೂ ಜಾಲತಾಣದಲ್ಲಿ ಅಪ್ಡೇಟ್ ಮಾಡುವ ನಾವು ಎಷ್ಟು ಅಜಾರೂಕರಾಗುತ್ತಿದ್ದೇವೆ. ಅವಶ್ಯಕತೆಗಿಂತ ಹೆಚ್ಚಾಗಿ ಬಳಸಿದಾಗಲೇ ಇವೆಲ್ಲ ಅವಾಂತರಗಳು ಆಗೋದು. ” ಯಾರಾದರೂ ಏನನ್ನಾದರೂ ಹಂಚಿಕೊಂಡಾಗ ಫೋಟೋಗಳನ್ನು ಲೈಕ್ ಮಾಡಿದಾಗ ನಂತರ, ಅವರು ಯಾರು , ಎಲ್ಲಿಂದ, ಎಂಬಿತ್ಯಾದಿ ವಯಕ್ತಿಕ ಚಾಟ್ ನಡೆಯುತ್ತದೆ. ಅದು ಅಲ್ಲಿಗೇ ಮುಗಿಯದೇ ಇನ್ಬಾಕ್ಸನಲ್ಲಿ ಇಣುಕಿ ಸಂಪರ್ಕ ಸಾಧಿಸಲು ಹಾತೊರೆಯುತ್ತಾರೆ. ಸಹಜ ಮಾತಾದರೆ ಎಲ್ಲವೂ ಓಕೆ ಕೆಲವರಿರುತ್ತಾರೆ ಜೊಲ್ಲು ಪಂಡಿತರು, ಅಂತವರು ಹಿಂದೆ ಮುಂದೆ ನೋಡುವದಿಲ್ಲ ನೀನು ನನಗೆ ಬಹಳ ಇಷ್ಟ, ಸಕತ್ ಆಗಿ ಕಣ್ತೀಯಾ, ನಾನು ನಿನ್ನ ಲವ್ ಮಾಡ್ತೀನಿ, ಅಂತೆಲ್ಲ ಒಂದೇ ಸಮನೇ ಮಾತೊಗೆದು ಬಿಡುತ್ತಾರೆ.. ಅದರ ವಿವರಣೆ ಕೇಳುವ ಸಂಯಮ ಇಲ್ಲದ ಸಂಬಂಧಗಳಿಗೆ ಇಷ್ಟು ಸಾಕಲ್ಲವಾ? ಅದೆಷ್ಟೋ ಸುಂದರ ಸಂಬಂಧಗಳು ಸಂಸಾರಗಳು ಇದರಿಂದ ಘಾಸಿಗೊಳಗಾಗಿರುವದು ಎಲ್ಲರಿಗೂ ತಿಳಿದ ವಿಚಾರ. ತಪ್ಪುಗಳೇ ನಮ್ಮಿಂದ ಘಟಿಸಬೇಕೆಂದೇನೂ ಇಲ್ಲ. ಬಳಕೆಯ ಅಜ್ಙಾನದಿಂದಲೇ ಹೆಚ್ಚು ತೊಂದರೆಗಳು ಆಗುವದು. ಹಳ್ಳಿಗಳಲ್ಲಿ ಹೆಚ್ಚೆಚ್ಚು ಘಟನೆಗಳು ಹೇಗೆ ಜರುಗುತ್ತವೆ ಗೊತ್ತಾ?!ಸ್ವಲ್ಪ ವಯಸ್ಸಾದವರು, ಹೆಣ್ಮಕ್ಕಳು,ಪ್ರಪಂಚಕ್ಕೆ ತೆರೆದುಕೊಳ್ಳದ ಹಲವು ಮನಸುಗಳು ಇರುತ್ತವೆ. ಅವರು ಯಾವತ್ತೂ ಜಗತ್ತೇ ನಮ್ಮ ಕೈಯೊಳಗೆ ಎಂಬ ಮಾಯೆಯನ್ನು ಕೈಯಲ್ಲಿ ಹಿಡಿದು ನೋಡುರುವದಿಲ್ಲ. ಏನೋ ಸಮಯ ಕಳೆಯಲಿ ಎಂದೋ ಎಲ್ಲರ ಹತ್ತಿರವೂ ಇದೆ ಎಂದೋ ಒಂದು ಹೊಸ ಮೊಬೈಲ್ ಕೈಗೆ ಬಂದಿರುತ್ತದೆ.. ಅದರ ತಂತ್ರಜ್ಞಾನದ ಅರಿವಿನ ಕೊರತೆ ಸಾಕಷ್ಟು ಇರುವಕಾರಣ,ಯಾರೋ ಒಬ್ಬರು ಪೇಸ್ಬುಕ್ ವಾಟ್ಸಪ್ ಅಕೌಂಟ್ ಒಂದನ್ನು ಮಾಡಿಕೊಟ್ಟು ಬಿಡುತ್ತಾರೆ. ಅದರ ಉಪಯೋಗದ ಬಗ್ಗೆ ಮಾಹಿತಿ ನೀಡುವದಿಲ್ಲ. ಜಾಲತಾಣವೆಂದರೆ ಹಂಚಿಕೊಳ್ಳುವದು ಅಂತಷ್ಟೇ ಅವರಿಗೆ ತಿಳಿದಿರುವ ವಿಚಾರ.. ಶೆರ್ ಮಾಡಲು ಹೋಗಿ ಟ್ಯಾಗ್ ಮಾಡುವದು..ಕಂಡಿದ್ದಕ್ಕೆಲ್ಲ ಕಮೆಂಟ್ ಮಾಡುವದು. ಎಲ್ಲರೊಂದಿಗೆ ಸಂವಹನ ನಡೆಸುವದು. ಎಲ್ಲರೂ ಮಾಡಿದಂತೆಯೇ ತಾವೂ ಮಾಡಬೇಕೆಂಬ ತುಡಿತಕ್ಕೆ ಬೀಳುತ್ತಾರೆ. ಇವುಗಳಿಂದ ಅವರಿಗೆ ಅರಿಯದಂತೆ ಎದುರಿಗಿನ ವ್ಯಕ್ತಿ ಇಂತವರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುತ್ತಾನೆ. ಕ್ರಮೇಣ ಇವರೇ ಅರಿಯದ ಜಾಲದೊಳಗೆ ಬಿದ್ದು ಒದ್ದಾಡುತ್ತಾರೆ.. ನಿಭಾಯುಸುವ ಜಾಣತನವಿಲ್ಲದೇ ಸಂಸಾರವನ್ನು ತೊರೆದು ಹೋಗುವದು,ಆತ್ಮಹತ್ಯೆ ಮಾಡಿಕೊಳ್ಳುವದು, ಇಂತಹ ಕಠಿಣ ನಿರ್ಧಾರಕ್ಕೆ ಬರುತ್ತಾರೆ.. ಇಡೀ ಸಂಸಾರದ ನೆಮ್ಮದಿಯೇ ನಾಶವಾಗುವ ಹಂತಕ್ಕೆ ಒಂದು ಮುಗ್ಧ ಸಂಸಾರವೊಂದು ಬಂದು ನಿಲ್ಲುತ್ತದೆ. ಇದಕ್ಕೆಲ್ಲ ತಿಳುವಳಿಕೆಯ ಕೊರತೆಯೇ ಕಾರಣ. ಕೆಲವರು ಗೊತ್ತಿದ್ದು ಇನ್ನು ಕೆಲವರು ಗೊತ್ತಿಲ್ಲದೇ ಹಗಲು ಕಂಡ ಬಾವಿಗೆ ರಾತ್ರಿ ಬಂದು ಬೀಳುತ್ತಿದ್ದಾರೆ.. ಕಣ್ಣಿಗೆ ಕಾಣದ ಎಂದೂ ನೋಡದ ಸ್ನೇಹಿತರಿಗೆ ಹುಟ್ಟಿದ ದಿನದ ಶುಭಾಶಯ ತಪ್ಪದೇ ಕೋರುವ ನಾವು, ಮನೆಯೊಳಗಿನ ಸಂಬಂಧ ಮರೆತೇ ಬಿಡುತ್ತೇವೆ. ಅತಿಯಾದ ಸಾಮಾಜಿಕ ಜಾಲತಾಣವು ನಮ್ಮ ಸ್ವಭಾವವನ್ನೇ ಬದಲಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಾತೇ ಮರೆತುಹೋಗಿದೆ. ಒಬ್ಬರೇ ನಗುವ ಹುಚ್ಚರಂತಾಗಿದ್ದೇವೆ.. ಕಿವಿಯೊಳಗಿನ ಇಯರ್ ಪೋನ್ ಯಾರು ಕಿವುಡರು ಎನ್ನುವದು ತಿಳಿಯದಾಗಿದೆ. ಸೋಶಿಯಲ್ ಮಿಡಿಯಾ ಬಳಕೆಯಿಂದ ತಮ್ಮನ್ನು ತಾವು ಸ್ವಭಾವದಲ್ಲಿ ಹೇಗೆ ನಿಯಂತ್ರಿಸಿಕೊಳ್ಳಬೇಕು ಎಂದು ಎಚ್ಚರವಹಿಸಿಕೊಳ್ಳಬೇಕಾದುದು ಸದ್ಯದ ತುರ್ತಿನ ಪರಿಸ್ಥಿತಿ. ಕೇವಲ ಜಾಲತಾಣದಲ್ಲಿಯೇ ಎಲ್ಲವನ್ನೂ ಸೃಷ್ಟಿಸಿ ಕೊಳ್ಳುವ ಹಂಬಲ ಹಪಾಹಪಿತನ ತೋರುತ್ತಿದ್ದೇವೆ. ಈ ಗ್ಯಾಜೆಟ್ ಲೋಕ ಎಲ್ಲವನ್ನೂ ಕೊಡಲು ಎಂದಿಗೂ ಸಾದ್ಯವಿಲ್ಲ. ಮದರ್ಸ ಡೇ ಪೋಷ್ಟ ಹಾಕಲು ಒಬ್ಬಾತ ಅಮ್ಮನ ಪೋಟೋ ಹುಡುಕುತ್ತಿದ್ದ ಅವನ ಹತ್ತಿರ ಒಂದೇ ಒಂದು ಫೋಟೋ ಕೂಡ ಇರಲಿಲ್ಲ. ಅಮ್ಮ ಅನಾಥಾಶ್ರಮದಲ್ಲಿ ಇದ್ದಳು. ಏನಂತ ಹೇಳೋದು ಈ ನಡತೆಗೆ??! ನಮ್ಮೊಳಗಿನ ಸಂಬಂಧಗಳನ್ನು ಮರೆತು ಇನ್ನೆಲ್ಲೋ ಆಪ್ತತೆಯನ್ನು ಹುಡುಕುತ್ತೇವೆ.. ಮುಖಕ್ಕೆ ಮುಖತೀಡಿಕೊಂಡು ಹಾಕುವ ಪೋಟೊಗಳೆಲ್ಲ ರಾತ್ರಿ ಮುಖತಿರುಗುಸಿ ಮಲಗುತ್ತವೆ ಎನ್ನುವದು ಅರಿವಾಗಬೇಕಿದೆ. ತೋರಿಕೆಯ,ಪ್ರದರ್ಶನದ ಬದುಕು ಪರಿತಪ್ಪಿಸುವತ್ತ ಸಾಗುತ್ತಿದೆ. ಮಕ್ಕಳಿಗೆ ಹೇಳಬೇಕಾದ ದೊಡ್ಡವರೇ ಮೊಬೈಲ್ ಎಂಬ ಲೋಕದಲ್ಲಿ ಮುಳುಗಿ ಹೋಗಿದ್ದಾರೆ.. ತಂದೆ ತಾಯಿಯರೇ ಮಗು ನಮ್ಮ ಮೊಬೈಲ್ ಅನ್ನು ಪದೇ ತೆಗೆದುಕೊಳ್ಳುತ್ತದೆ ನಮಗೆ ಸಿಗುವದೇ ಇಲ್ಲ ಎಂದು,ಅವರಿಗಾಗಿಯೇ ಬೇರೆ ಮೊಬೈಲ್ ಕೊಡಿಸುವಷ್ಟು ಬುದ್ಧಿವಂತರಾಗಿದ್ದಾರೆ. ಕೇವಲ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಜಾಲತಾಣಗಳು ಅಷ್ಟೇ ಅಹಿತಕರ ಎಂದು ಅರಿವಾಗಬೇಕಿದೆ. ಎಲ್ಲ ಅರಿತ ದೊಡ್ಡವರೇ ಮೊಬೈಲ್ ಎಂಬ ಮಾಯೆಯ ದಾಸರಾದರೆ ಚಿಕ್ಕಮಕ್ಕಳು ಆಗದೇ ಇರುತ್ತಾರೆಯೇ.. ಎಲ್ಲಿ ನೋಡಿದರೂ ಮಕ್ಕಳನ್ನು ಮೊಬೈಲ್ ಇಂದ ದೂರವಿಡಿ ಎಂಬ ಮಾತು ಕೇಳಿಬರುತ್ತದೆ. ಕೇವಲ ಹೇಳುವದರಿಂದ ಮಕ್ಕಳು ಕಲಿಯಲಾರು ನಮ್ಮ ನಡೆಯನ್ನು ಅನುಸರಿಸುತ್ತಾರೆ. , ರಸ್ತೆಬದಿಯಲ್ಲಿ ಭಿಕ್ಷೆ ಬೇಡುವವರು,ಅಂಗವಿಕಲರು,ಅಪಘಾತಕ್ಕೆ ಒಳಗಾದವರು,ಇಂತಹ ಹತ್ತು ಹಲವು ಫೋಟೋ ಗಳನ್ನು ನೋಡಿ ಮರುಗುವ ಕಣ್ಣೀರ ದಾರೆಯೇ ಇಮೊಜಿಗಳಲ್ಲಿ ಉಕ್ಕಿಸುವ ನಾವು. ನಿಜವಾಗಿ ಇಂತವರು ನಮ್ಮ ಎದುರು ಬಂದಾಗ ಕಂಡೂ ಕಾಣದಂತೆ ಹೋಗುತ್ತೇವೆ. ಇಲ್ಲ ಮತ್ತೊಂದು ಫೋಟೋವನ್ನು ತೆಗೆದು ಹಂಚಿ ಲೈಕು ಕಮೆಂಟ್ ಗಿಟ್ಟಿಸಿಕೊಳ್ಳುವತ್ತ ಚಿತ್ತ ಹರಿಸುತ್ತೇವೆ. ಎಷ್ಟೊಂದು ಕಠಿಣ ಅಜಾಗರೂಕ ಬುದ್ಧಿಹೀನರಾಗುತ್ತಿದ್ದೇವೆ ನಾವುಗಳು. ಒಮ್ಮೆ ಚಿಂತನೆ ಮಾಡಿ ಮೊಬೈಲ್ ಕೆಳಗಿಟ್ಟು ಪ್ರಪಂಚ ನೋಡಿ. ಸಾಕಷ್ಟು ಸಂಗತಿಗಳು ನಮ್ಮ ಕಣ್ಣು ತೆರೆಸುತ್ತವೆ. ತೀರಾ ವಯಕ್ತಿಕ ಬದುಕಿನ ಒಳಮನೆಗೆ ಮೊಬೈಲ್ ಎಂಬ ಮಾಯೆ ತನ್ನ ಆಟಾಟೋಪ ಮೆರೆಯದಂತೆ ಜಾಗ್ರತೆ ವಹಿಸುವದು ಇಂದಿನ ದಿನಗಳಲ್ಲಿ ತುಂಬಾ ಅವಶ್ಯ.ಸಂಬಂಧಗಳು ಮುರಿಯುತ್ತಿರುವದೇ ಮೊಬೈಲ್ ಗಳಿಂದ. ತಲೆ ತಗ್ಗಿಸಿ ನನ್ನ ನೋಡು, ತಲೆ ಎತ್ತಿ ನಿಲ್ಲುವಂತೆ ಮಾಡುತ್ತೇನೆ” ಎಂದು ಪುಸ್ತಕ ಹೇಳಿದರೆ, “ತಲೆ ತಗ್ಗಿಸಿ ನನ್ನ ನೋಡು, ಮತ್ತೆ ತಲೆ ಎತ್ತದಂತೆ ಮಾಡುತ್ತೇನೆ” ಎಂದು ಮೊಬೈಲ್ ಹೇಳಿತಂತೆ. ಈ ಎಲ್ಲಾ ಮಾತುಗಳು ನಮಗೆ ನಗುತರಿಸುತ್ತದೆ ಎನ್ನುವುದು ಎಷ್ಟು ಸತ್ಯವೋ ಇದೇ ನಿಜವಾದ ವಾಸ್ತವ ಸತ್ಯ ಎನ್ನುವುದು ಈಗಲಾದರೂ ನಾವು ಒಪ್ಪಿ ಕೊಳ್ಳದೇ ಹೋದರೆ ನಾವು ತೆಗೆದ ಗುಂಡಿಯಲ್ಲಿ ನಾವು ಬೀಳುವದಲ್ಲದೇ ನಮ್ಮ ಎಲ್ಲ ಸಂಬಂಧಗಳನ್ನು ಎಳೆದು ಮಣ್ಣು ಮುಚ್ಚಲೇಬೇಕಾಗುತ್ತದೆ. ಅದರ ಬದಲು ಹೀಗೂ ಮಾಡಿನೋಡಬಹುದು. *ಇಂತಿಷ್ಟು ಸಮಯ ಅಂತ ನಿಗದಿ ಮಾಡಿಕೊಂಡು ಆ ಸಮಯದಲ್ಲಿ ಮಾತ್ರ ಜಾಲತಾಣ ತರೆಯಿರಿ *ಗಂಡ ಹೆಂಡತಿಯ ನಡುವೆ ಪಾಸ್ವರ್ಡಿನ ಬೀಗದ ಕೀಲಿ ಇಬ್ಬರಲ್ಲಿಯೂ ಇರಲಿ. *ಮಲಗುವ ಮನೆಗೆ ಮೊಬೈಲ್ ಒಯ್ಯಬೇಡಿ *ಬೆಳಿಗ್ಗೆ ಏಳುತ್ತಲೇ ಜಾಲತಾಣದ ಒಳಹೊಕ್ಕುವದನ್ನು ನಿಷೇಧಿಸಿ. *ಮನೆಯವರು ಮಾತನಾಡುವಾಗ ಮೊಬೈಲ್ ಮುಟ್ಟಬೇಡಿಮೊಬೈಲ್ ಗೆ ಮೀಸಲಿಟ್ಟ ಸಮಯವನ್ನು ಪ್ರೀತಿ ಪಾತ್ರರಿಗೊಂದಿಷ್ಟು ಅವಷ್ಯವಾಗಿ ಕೊಡಿ. *ಮಕ್ಕಳ ಎದುರು ಮೊಬೈಲ್ ಹಿಡಿಯಲೇಬೇಡಿ. *ಆಗಾಗ ಡಾಟಾ ಹಾಕಿಸುವದನ್ನೇ ನಿಲ್ಲಿಸಿ ಉಳಿತಾಯದ ಜೊತೆಗೆ, ನೆಮ್ಮದಿ ಮತ್ತು ಬೇರೆ ವಿಚಾರಗಳಿಗೆ ತರೆದುಕೊಳ್ಳಲು ಸಮಯವೂ ಸಿಗುತ್ತದೆ.ಅಲ್ಲವೇ!? ***********
ಚಳಿ ಮತ್ತು ಅಗ್ಗಿಷ್ಠಿಕೆ
ಚಳಿ ಮತ್ತು ಅಗ್ಗಿಷ್ಠಿಕೆ ಮಳೆಗಾಲದ ಒಂದು ಸಂಜೆ ಕಪ್ಪುಗಟ್ಟಿದ್ದ ಹಡಗಿನಂತ ಮೋಡಗಳುಸ್ಪೋಟಗೊಂಡು ಸುರಿದ ಜಡಿ ಮಳೆಗೆಸಿಕಿ ತೊಯ್ದು ತೊಪ್ಪೆಯಾದವಳ ಬಟ್ಟೆ ಒಣಗಿಸಲುನನ್ನ ಪುಟ್ಟ ಹಿತ್ತಲಿತ್ತು ಗಡಗಡ ನಡುಗಿಸುವ ಚಳಿಗೆಅಗ್ಗಿಷ್ಠಿಕೆಯಾಗಿ ನಾನಿದ್ದೆ. ಮಳೆ ಸುರಿದು ಸರಿದು ಹೋಯಿತುಹಿಂಬಾಲಿಸಿಕೊಂಡು ಬಂದ ಬಿಸಿಲುಬಂದ ಮಳೆಯ ಮರೆಸಿತು ಮತ್ತೆಂದೂ ಇಲ್ಲಿ ಅಂತ ಘನಮೋಡ ಕಟ್ಟಲಿಲ್ಲಮಳೆಯಾಗಲಿಲ್ಲಬಿಸಿಲ ಝಳಕ್ಕೆ ಬರಬಿದ್ದ ಊರಿಗವಳೆಂದೂ ಬರಲೇ ಇಲ್ಲ ಮತ್ತೀಗ ಅಲ್ಲಿ ಮಳೆಯಾಗುತ್ತಿರ ಬಹುದುಅವಳಲ್ಲಿ ನೆನೆಯುತ್ತಲೂ ಇರಬಹುದು ಆ ಊರಲ್ಲೂ ಹಿತ್ತಲುಗಳಿವೆಜೊತೆಗೆ ಅಗ್ಗಿಷ್ಠಿಕೆಗಳೂ!******** ಕು.ಸ.ಮಧುಸೂದನ ಕು.ಸ.ಮಧುಸೂದನ
ಪುಸ್ತಕ ವಿಮರ್ಶೆ
ಸಿರ್ವಂತೆ ಕ್ರಾಸ್ ದಿನೇಶ ಹುಲಿಮನೆ ಮಲೆನಾಡಿನ ಬದುಕಿನ ಆಗುಹೋಗುಗಳ ಹಂದರವೇ ಆಗಿದೆ ದಿನೇಶ ಹುಲಿಮನೆಯವರ ‘ಸಿರ್ವಂತೆ ಕ್ರಾಸ್’ ಕಥೆಗಳ ಸಂಕಲನ..! ದಿನೇಶ ಹುಲಿಮನೆಯವರು ಮಲೆನಾಡು ಆದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಲಿಮನೆಯವರು. ಹಾಗಾಗಿ ಇಲ್ಲಿ ಬರುವ ಎಲ್ಲಾ ಕಥೆಗಳೂ ದಿನೇಶ ಹಲಿಮನೆಯವರ ಮಲೆನಾಡಿನ ಕಲರವವಿದ್ದಂತೆ ಭಾಸವಾಗುತ್ತವೆ. ಭಾಸವಾಗುವುದೇನು ಬಂತು ಇದು ನಿಜವೂ ಆಗಿದೆ. ಏಕೆಂದರೆ ಈ ದಿನೇಶ ಹುಲಿಮನೆಯವರ ಈ ‘ಸಿರ್ವಂತೆ ಕ್ರಾಸ್’ ಈ ಕಥೆಗಳ ಸಂಕಲನವು ‘ಸಿರ್ವಂತೆ ಕ್ರಾಸ್’ ಕಥೆಯೂ ಸೇರಿದಂತೆ ಒಟ್ಟು ೧೮ ಸಣ್ಣ ಸಣ್ಣ ಕಥೆಗಳನ್ನು ಒಳಗೊಂಡಿದೆ ಮತ್ತು ಮಲೆನಾಡಿನಲ್ಲಿ ನಡೆಯುವ ವಿದ್ಯಮಾನಗಳಾಗಿವೆ ಇಲ್ಲಿಯ ಕಥೆಗಳು. ದಿನೇಶ ಹಲಿಮನೆಯವರು ಮಲೆನಾಡನ್ನು ಬಿಟ್ಟು ಇರಲಾರರು. ಹಾಗಾಗಿಯೇ ಇವರ ಕಥೆಗಳು ಮಲೆನಾಡಿನ ಬದುಕು-ಬವಣೆಗಳನ್ನು ತೆರೆದಿಡುತ್ತವೆ ಇಲ್ಲಿನ ಕಥೆಗಳು. ದಿನೇಶ ಹುಲಿಮನೆಯವರೇ ಹೇಳುವಂತೆ ‘ನನ್ನ ಬದುಕು-ಬರಹ ಮಲೆನಾಡನ್ನು ಬಿಟ್ಟು ಇರಲಾರವು. ಹಾಗಾಗಿಯೇ ಇಲ್ಲಿಯ ಕಥೆಗಳೆಲ್ಲಾ ಮಲೆನಾಡಿನ ಆಗು-ಹೋಗಗಳಾವೆ’ ಎಂದು. ಈ ಕಥೆಗಳ ಸಂಕಲನದಲ್ಲಿಯ ‘ಸಿರ್ವಂತೆ ಕ್ರಾಸ್’ ‘ಮಧ್ಯ ರಾತ್ರಿಯ ಮಾತು’ನಂತಹ ಕಥೆಗಳು ಮಲೆನಾಡಿನ ಬೆಟ್ಟಗುಡ್ಡಗಳನ್ನು ಹತ್ತಿಳಿದು, ಅಂಕು-ಡೊಂಕಾದ ಮಣ್ಣು ರಸ್ತೆಗಳಲ್ಲಿ ಸಂಚರಿಸಿದರೆ ‘ಸ್ಮಾರ್ಟ್ ಜಗತ್ತು’ ‘ಕನ್ನಡದ ಕಂದ’ದಂತಹ ಕೆಲ ಚುಟುಕು ಕಥೆಗಳು ಬೆಂಗಳೂರು ಕಾಂಕ್ರೀಟ್ ಹಾದಿಯಲ್ಲಿ ನುಸುಳುವಂತೆ ಭಾಷವಾಗುತ್ತವೆ. ‘ಅರ್ಧ ಸತ್ಯ!’, ‘ಎಡ-ಬಲಗಳ ನಡುವೆ’, ‘ತಳವಾರ ತಿಮ್ಮ’, ‘ಪ್ರಜಾ ಸಮಾಧಿ’, ‘ಕೃಷ್ಣನ ಪ್ರಣಯ ಪ್ರಸಂಗ’, ‘ಕಿಲಾರ’ದ ಹುಡುಗರು’ ಒಟ್ಟಾರೆ ಎಲ್ಲಾ ಕಥೆಗಳೂ ಓದಿಸಿಕ್ಕೊಂಡು ಹೋಗುವ ಕಥೆಗಳಷ್ಟೇ ಅಲ್ಲ, ವಾಸ್ತವ ಬದುಕಿನ ಪಯಣವೇ ಆಗಿವೆ ಎಂದು ನನ್ನ ಅನಿಸಿಕೆ. ‘ಕಡಲ ಮುತ್ತು’ ‘ಕುಮಟಾದ ಹಳೇ ಬಸ್ ನಿಲ್ದಾಣ’ದಂತಹ ಕಥೆಗಳು ಕರಾವಳಿಯ ಬದುಕನ್ನು ಪರಿಚಯಿಸುತ್ತವೆ. ಇನ್ನುಳಿದ ಕಥೆಗಳು ಮನುಷ್ಯ ಸಹಜವಾದ ಪ್ರಾಕೃತಿಕ ಆಶೆ-ಅತಿಯಾಶೆ, ಪ್ರೀತಿ-ಪ್ರಣಯ, ಜೀವನ-ಜಂಜಾಟ, ಹಲವಾರು ಬಗೆಯ ಎಡರು-ತೊಡರುಗಳ ಮೇಲೆ ಇಲ್ಲಿಯ ಕಥೆಗಳನ್ನು ಹೆಣದಿದ್ದಾರೆ ದಿನೇಶ ಹಲಿಮನೆಯವರು. ನಂಬಿಕೆಯೇ ಜೀವನಾಧಾರ, ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡುವುದೇ ಜೀವನ’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ವಾಣಿಯಂತೆ ಜೀವನದಲ್ಲಿ ಬರುವ ಕೆಲವು ಸಣ್ಣಪುಟ್ಟ ವಿಚಾರಗಳೇ ಇಲ್ಲಿಯ ಕಥಾವಸ್ತು ಅಲ್ಲದೇ ಇಲ್ಲಿಯ ಕಥೆಗಳು ನನ್ನ ದೃಷ್ಟಿಯಲ್ಲಿ ಕೇವಲ ಕಾಲ್ಪನಿಕವಲ್ಲ. ವಾಸ್ತವವೂ ಆದ ಬದುಕಿನ ಹಲವಾರು ಮಜಲುಗಳು. ಕಥೆಗಳಲ್ಲಿ ಹೆಚ್ಚು, ಹೆಚ್ಚು ವಿಷಯಗಳನ್ನು ತರಲಾಗದಿದ್ದರೂ ದಿನನಿತ್ಯ ನಡೆಯುವ ಬದುಕಿನ ಘಟಕಗಳ ಹಂದರವೇ ಆಗಿದೆ ಇಲ್ಲಿಯ ಕಥೆಗಳ ವಸ್ತು. ಹೀಗೆಯೇ ಬರುವ ಇಲ್ಲಿನ ಕಥೆಗಳು ವಿಶಿಷ್ಟ ಶೈಲಿಯದ್ದಾಗಿವೆ. ಇಲ್ಲಿಯ ಎಲ್ಲಾ ಕಥೆಗಳು ಓದುಗರನ್ನು ಹಿಡಿದಿಡುತ್ತವೆ. ದಿನೇಶ ಹಲಿಮನೆಯವರು ಹವ್ಯಾಸಿ ಲೇಖಕರಾಗಿ ಕಳೆದ ನಾಲ್ಕೈದು ವರ್ಷಗಳಲ್ಲಿ ಬರೆದ ಕಥೆಗಳು ಇವು. ಒಂದೆರಡು ನೀಳ್ಗತೆಯೂ ಸೇರಿದಂತೆ ಸಣ್ಣ-ಪುಟ್ಟ ಕಥೆಗಳೂ ಸೇರಿದಂತೆ ಒಟ್ಟು ಹದಿನೆಂಟು ಕಥೆಗಳು ಇಲ್ಲಿವೆ. ಇದು ಈ ದಿನೇಶ ಹಲಿಮನೆಯವರ ಮೊದಲ ಕಥೆಗಳ ಸಂಕಲನವಾಗಿದೆ. ಮೊದಲ ಕಥಾ ಸಂಕಲನ ಮೂಲಕವೇ ಇವರು ಒಬ್ಬ ಉತ್ತಮ ಕಥೆಗಾರರಾಗಿ ಹೊರಹೊಮ್ಮಿದ್ದಾರೆ. ಇವರಿಂದ ಇನ್ನೂ ಇಂತಹ ಕಥಾ ಬರಹವನ್ನು ನಿರೀಕ್ಷಿಸಬಹುದು. ಅಂಕೋಲಾದ ಶಿಕ್ಷಕಿಯಾದ ಶುಭಾ ಪಟಗಾರರವರ ಬೆನ್ನುಡಿ ಇದೆ. ********* —ಕೆ.ಶಿವು.ಲಕ್ಕಣ್ಣವರ
ಸ್ವಾತ್ಮಗತ
ಕವಿ ಹೋರಾಟಗಾರ ಗವಿಸಿದ್ದ ಎನ್ ಬಳ್ಳಾರಿ ಕೆ.ಶಿವು ಲಕ್ಕಣ್ಣವರ ಹೈದರಾಬಾದ್ ಕರ್ನಾಟಕದ ಜನಧ್ವನಿ ಸಾಹಿತಿ, ಹೋರಾಟಗಾರ ಗವಿಸಿದ್ಧ ಎನ್. ಬಳ್ಳಾರಿ..! ಕೊಪ್ಪಳವನ್ನು ಕೇಂದ್ರವನ್ನಾಗಿಟ್ಟುಕೊಂಡೇ ರಾಜ್ಯಮಟ್ಟದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದವರು ಗವಿಸಿದ್ಧ ಎನ್. ಬಳ್ಳಾರಿ.ಯವರು. ಹುಟ್ಟಿದ್ದು ಜೂನ್ ೧೭, ೧೯೫೦ ರಂದು. ಮಾರ್ಚ್ ೧೪, ೨೦೦೪ ರಂದು ೫೪ ನೇ ವಯಸ್ಸಿನಲ್ಲೇ ನಿಧನರಾದರು… ಸಾಹಿತ್ಯ ಕ್ಷೇತ್ರದಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ಯನ್ನು ಪಡೆದವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದವರು… ಬಿ.ಎಸ್ಸಿ., ಎಂ.ಎ ಪದವೀಧರರು. ಪ್ರೌಢಶಿಕ್ಷಣದವರೆಗೆ ಕೊಪ್ಪಳದ ಗವಿಸಿದ್ಧೇಶ್ವರ ಸಂಸ್ಥೆಯಲ್ಲಿಯೇ ಓದಿ, ಬಿ.ಎಸ್ಸಿ. ಪದವಿಯನ್ನು ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಮುಗಿಸಿದರು. ಅಲ್ಲಿನ ಕ್ರಾಂತಿಕಾರಿ ಕವಿಗಳ ಇಡೀ ದಂಡಿನಲ್ಲಿ ಸರಳ, ಸಜ್ಜನಿಕೆ ಮತ್ತು ಹರಿತ ಕಾವ್ಯದ ಮೂಲಕ ಆಗಲೇ ಹೆಸರಾಗಿದ್ದವರು… ಕರ್ನಾಟವ ವಿಶ್ವ ವಿದ್ಯಾಲಯ ಧಾರವಾಡದಲ್ಲಿ ಎಂ.ಎ. ಕನ್ನಡ ಸ್ನಾತಕ ಪದವಿಯನ್ನು ಪಡೆದರು. ತುರ್ತುಪರಿಸ್ಥಿತಿಯ ಕಾಲಘಟ್ಟದಲ್ಲಿ ‘ಕತ್ತಲು ದೇಶದ ಪದ್ಯಗಳು’ ಎನ್ನುವ ಮೊದಲ ಸಂಕಲನವನ್ನು ೧೯೭೭ ರಲ್ಲಿ ಪ್ರಕಟಿಸಿದರು. ನಂತರ ೧೯೮೪ ರಲ್ಲಿ ‘ಕಪ್ಪುಸೂರ್ಯ’ ಎಂಬ ಎರಡನೆಯ ಕವನ ಸಂಕಲನದ ಮೂಲಕ ರಾಜ್ಯದ ಸಾಹಿತ್ಯ ವಲಯದಲ್ಲಿ ಮಿಂಚು ಹರಿಸಿದವರು. ಈ ಕೃತಿಗೆ ಗುಲಬರ್ಗಾ ವಿಶ್ವ ವಿದ್ಯಾಲಯದ ೫,೦೦೦ ರೂ. ಗಳ ಬಹುಮಾನ ದೊರೆಯಿತು. ೨೦೦೪, ಮಾರ್ಚ್ ೧೪ ರಂದು ಬಳ್ಳಾರಿಯ ಲೋಹಿಯಾ ಪ್ರಕಾಶನ ಪ್ರಕಟಿಸಿದ ‘ಈ ಮಣ್ಣು ಅಪ್ಪಿಕೊಳ್ಳುವ ಮುನ್ನ’ ಕವನ ಸಂಕಲನ ಬಿಡುಗಡೆಯಾಯಿತು. ವಿಪರ್ಯಾಸವೆಂಬಂತೆ ಅದೇ ಸಮಯದಲ್ಲಿ ಅವರು ನಿಧನ ಹೊಂದಿದರು. ಈ ಕೃತಿಗೆ ‘ಕಣವಿ ಕಾವ್ಯ ಪ್ರಶಸ್ತಿ’ ದೊರೆತಿದೆ… ಡಾ. ಜಿ.ಎಸ್. ಶಿವರುದ್ರಪ್ಪನವರು ಒಮ್ಮೆ ಕೊಪ್ಪಳಕ್ಕೆ ಬಂದಾಗ ‘ನಾನು ಗವಿಸಿದ್ಧ ಅವರನ್ನು ಭೇಟಿಯಾಗಿಯೇ ಹೋಗಬೇಕು, ಅವರನ್ನು ಕರೆಸಿರಿ’ ಎಂದು ಹೇಳಿದ್ದು ಗವಿಸಿದ್ಧ ಬಳ್ಳಾರಿಯವರ ಕಾವ್ಯದ ಗಟ್ಟಿತನ ತೋರಿಸುತ್ತದೆ… ಮೂಲತಃ ಇವರದು ವ್ಯಾಪಾರಿ ಮನೆತನ. ಹವ್ಯಾಸದಲ್ಲಿ ಪತ್ರಿಕೋದ್ಯಮದಲ್ಲಿಯೂ ಕೆಲಸ ಮಾಡಿದರು. ಇಂಡಿಯನ್ ಎಕ್ಸಪ್ರೆಸ್ ವರದಿಗಾರರಾಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿಯೂ ಕೆಲಸ ಮಾಡಿದ್ದಾರೆ. ೧೯೯೯ ರಲ್ಲಿ ‘ತಳಮಳ’ ಎನ್ನುವ ವಾರಪತ್ರಿಕೆ ಆರಂಭಿಸಿ ಇಡೀ ಹೈದರಾಬಾದ್ ಕನಾಟಕದ ಜನಧ್ವನಿಯಾಗಿ ಅನೇಕ ಕವಿಗಳ, ಕಲಾವಿದರ, ಎಲೆ ಮರೆಯ ಕಾಯಿಯಂತಿದ್ದ ಹಲವರನ್ನು ಪರಿಚಯಿಸಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಕಲಬುರ್ಗಿಯ ಶ್ರೀ ಶರಣ ಬಸವೇಶ್ವರ ಸಂಸ್ಥಾನದಿಂದ ಬಂಗಾರದ ಪದಕವನ್ನು ಪಡೆದ ಪ್ರತಿಭಾವಂತರಾಗಿದ್ದರು. ಬಾಲ್ಯದಲ್ಲಿಯೇ ಕವಿತೆಗಳ ಮೂಲಕ ಶಾಲೆಯಲ್ಲಿ ಗುರುತಿಸಿಕೊಂಡಿದ್ದರು. ಮುಂದೆ ಪಿ.ಸಿ. ಜಾಬಿನ್ ಕಾಲೇಜು ಇವರ ಸಾಹಿತ್ಯದ ಹರವು ವಿಸ್ತಾರಗೊಳಿಸಿತು. ಮೈಸೂರು ದಸರಾ, ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಬಂಡಾಯ ಸಮ್ಮೇಳನಗಳು, ಹಂಪಿ ಉತ್ಸವ ಮೊದಲಾದ ರಾಜ್ಯ, ಅಂತಾರಾಜ್ಯ ಮಟ್ಟದ ಹೊರ ರಾಜ್ಯದ ಸಮ್ಮೇಳನಗಳಲ್ಲಿ ಕಾವ್ಯ ವಾಚನ ಮಾಡಿ ಗಮನ ಸೆಳೆಯುತ್ತಿದ್ದರು… ಇವರ ಕವನಗಳು ಪದವಿಗೆ ಪಠ್ಯವಾಗಿಯೂ ಪ್ರಕಟವಾಗಿವೆ. ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಬೆಂಗಳೂರು, ಧಾರವಾಡ, ಭದ್ರಾವತಿ, ಗುಲಬರ್ಗಾ ಆಕಾಶವಾಣಿಗಳಲ್ಲಿ ಅಷ್ಟೇ ಅಲ್ಲದೇ ಚಂದನ, ಡಿ.ಡಿ. ಬೆಂಗಳೂರು ದೂರದರ್ಶನದಲ್ಲಿ ಇವರ ಕವನಗಳು ಪ್ರಕಟಗೊಂಡಿವೆ… ಕೊಪ್ಪಳದಲ್ಲಿ ನಡೆದ ೬೨ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿನ ಹಿಂದೆ ಇವರ ಪಾತ್ರ ಬಹಳಷ್ಟಿದೆ. ಗೌರವ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಸಮ್ಮೇಳನದ ನೆನಪಿನ ಸಂಚಿಕೆ ‘ತಿರುಳ್ಗನ್ನಡ’ದ ಸಂಪಾದಕರಾಗಿ ಕೆಲಸ ನಿರ್ವಹಿಸಿದ್ದಾರೆ… ಇವರನ್ನು ಪ್ರೀತಿಯಿಂದ ಜನತೆ ‘ನಾಡಕವಿ’ ಎಂದೇ ಸಾಹಿತಿಗಳು, ಸಾಹಿತ್ಯಾಸಾಕ್ತರು ಕರೆಯುತ್ತಿದ್ದರು. ನಾಡಿನ ಪ್ರಮುಖ ಚಳುವಳಿಯಾದ ಗೋಕಾಕ್ ಚಳುವಳಿ, ಹೈದರಾಬಾದ್ ಕರ್ನಾಟಕದ ವಿಶೇಷ ಸ್ಥಾನಮಾನಕ್ಕಾಗಿ ಹೋರಾಟ, ಕೊಪ್ಪಳ ಜಿಲ್ಲಾ ಹೋರಾಟದ ಮುಂಚೂಣಿಯಲ್ಲಿದ್ದವರು… ೧೯೮೬ ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿಯ ವತಿಯಿಂದ ಆಂಧ್ರಪ್ರದೇಶಕ್ಕೆ ಸಾಹಿತ್ಯದ ಪ್ರವಾಸ ಕೈಗೊಂಡು ಅಧ್ಯಯನ ಮಾಡಿದ್ದಾರೆ ಇವರು… ಇವರ ಇನ್ನಿತರ ಪ್ರಕಟಣೆಗಳೆಂದರೆ — ಕಾವ್ಯಮೇಳ (೧೦೯೪) (ಸಂ. ಹಾ.ಮಾ.ನಾ.), ದಶವಾರ್ಷಿಕ ಕವಿತೆಗಳು (ಸಂ. : ಗೋ.ಕೃ. ಅಡಿಗ), ೧೯೭೪-೮೪ : ರತ್ನ ಸಂಪುಟ ೧೯೮೫ (ಮೈಸೂರು ವಿ.ವಿ.), ಗಾಂಧೀ ಗಾಂಧೀ (ಚಂಪಾ), ಬಂಡಾಯ ಕಾವ್ಯ : ೧೯೯೦ (ಸಂ. ಬರಗೂರು ರಾಮಚಂದ್ರಪ್ಪ), ರತ್ನ ಸಂಪುಟ ಕಾವ್ಯ (ಸಂ. ಮೈಸೂರು ವಿ.ವಿ)… ಹೀಗೆಯೇ ನಾನಾ ಕೃತಿಗಳನ್ನು ರಚಿಸಿದರು ಮತ್ತು ಅನೇಕಾನೇಕ ಕೃತಿಗಳನ್ನು ಸಂಪಾದಿಸಿದ್ದಾರೆ ಗವಿಸಿದ್ಧ.ಎನ್. ಬಳ್ಳಾರಿಯವರು. ಹೀಗೆ ಸಾಗಿತ್ತು ಗವಿಸಿದ್ಧ.ಎನ್. ಬಳ್ಳಾರಿಯವರ ಬದುಕು-ಬರಹದ ಪಯಣ….!
ಶರೀಫ್ ಜಯಂತಿ
ಶರೀಫ್ ಜಯಂತಿ ನೀವೂ ಬನ್ನಿ
ಲಂಕೇಶರನ್ನು ಏಕೆ ಓದಬೇಕು?
ರಾಜೇಶ್ವರಿ ಬೋಗಯ್ಯ ಜಾಣ ಜಾಣೆಯರೆ , ಎನ್ನುತ್ತಾ ದಿಕ್ಕು ,ದೆಸೆಯಿಲ್ಲದೆ ಓದುವುದಕ್ಕೂ ,ಬರೆಯುವುದಕ್ಕೂ ಒಂದು ಗುರಿ ಇಲ್ಲದೆ ಸಿಕ್ಕಿದ್ದೇ ಓದುತ್ತಾ ಅಲೆಯುತ್ತಿದ್ದ ಅತ್ರಪ್ತ ಬ್ಯೂಟಿಫುಲ್ ಮನಸ್ಸುಗಳನ್ನು ಸೆಳೆದು ಕೂರಿಸಿದ್ದೇ ನಮ್ಮ ಜಾಣರಲ್ಲಿ ಜಾಣರು ಲಂಕೇಶರು. ಲಂಕೇಶರನ್ನು ನಾನ್ಯಾಕೆ ಓದಬೇಕು ? ಅಥವಾ ನಾನೇಕೆ ಲಂಕೇಶರನ್ನು ಓದುತ್ತೇನೆ ? ಎರಡೂ ಪ್ರಶ್ನೆಗಳು ಬೇರೆ ಬೇರೆ ಅನ್ನಿಸಿದರೂ ಉತ್ತರ ಮಾತ್ರ ಒಂದೇ. ಲಂಕೇಶರನ್ನಲ್ಲದೆ ಇನ್ಯಾರನ್ನು ಓದಬೇಕು ? ಇದು ನನ್ನ ಮರು ಪ್ರಶ್ನೆ. ಲಂಕೇಶರಿಗಿಂತ ಮೊದಲು ಯಾರ್ ಯಾರನ್ನೋ ಓದಿ ,ಅರಿವೆಗೆಟ್ಟು ,ಬುದ್ದಿಗೆಟ್ಟು ಅವರು ಬರೆದದ್ದೇ ನಿಜವೆಂದು ನಂಬಿ ಅವುಗಳನ್ನೇ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಆ ದಿಕ್ಕಿನಲ್ಲಿ ಹೆಜ್ಜೆ ಇಟ್ಟಾಗಿತ್ತು. ಕುಳಿತು ತೂಕಡಿಸುವಾಗ ಕತ್ತು ಬಲಪಕ್ಕಕ್ಕೇ ವಾಲುವಂತೆ ,ನಾನೂ ಆ ಕಡೆಯೇ ವಾಲುತ್ತಿದ್ದಾಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಬಲಕ್ಕೆ ವಾಲಿದ್ದ ಕತ್ತನ್ನು ಸರಿಯಾಗಿಸಿ ಎಚ್ಚರಗೊಳ್ಳುವಂತೆ ಮಾಡಿದವರು ಲಂಕೇಶರು.ಆಗ ಎಚ್ಚರಗೊಂಡ ಮಿದುಳು ಮತ್ತೆ ತೂಕಡಿಸಲಿಲ್ಲ. ಗಿಡವಾಗಿದ್ದಾಗಲೇ ಬಗ್ಗಿಸಬೇಕು ಎಂಬಂತೆ ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲೇ ಎಚ್ಚರಗೊಳ್ಳಬೇಕೆಂದರೆ ಲಂಕೇಶರನ್ನು ಓದಬೇಕು. ಆ ವಿಶ್ವವಿದ್ಯಾಲಯದಲ್ಲಿ ಏನುಂಟು , ಏನಿಲ್ಲ ? ಸಾಣೆ ಹಿಡಿಯುವ ಚಕ್ರಕ್ಕೆ ಸಿಕ್ಕಿದ ಏನೇ ಆಗಲಿ ಹೊಳೆಯುವಂತೆ ತನ್ನ ತನ್ನ ಮಡಿಲಿಗೆ ಬಂದು ಬೀಳುವ ಎಲ್ಲರನ್ನೂ ತನ್ನ ಅರಿವಿನ ಸ್ನಾನ ಮಾಡಿಸಿ ಹೊಳೆಹೊಳೆಯುವಂತೆ ಮಾಡುವ ಶಕ್ತಿ ಲಂಕೇಶರ ಬರವಣಿಗೆಯಲ್ಲಿತ್ತು. ಏನುಂಟು , ಏನಿರಲಿಲ್ಲ ಲಂಕೇಶರಲ್ಲಿ. ಪೂಜಿಸಲು ಹರಿವಾಣದಲ್ಲಿರುವ ಎಲ್ಲಾ ಹಣ್ಣುಗಳಿರುವಂತೆ ಅವರ ಅರಿವಿನ ಹರಿವಾಣದಲ್ಲಿ ಇಲ್ಲದಿರುವ ವಿಷಯಗಳೇ ಇರಲಿಲ್ಲಿ. ಸಣ್ಣ ಹುಡುಗರಿಂದ ಹಿಡಿದು ವಯೋವೃದ್ಧರಿಗೂ ಏನಾದರೊಂದು ತಿಳುವಳಿಕೆ ನೀಡುವ ಪ್ರತಿಯೊಂದು ಹಾಳೆಯೂ ಬೆಲೆಬಾಳುವಂತಾದ್ದು. ಏನಾದರೊಂದು ಸಂದೇಶ ಇರುತ್ತಿದ್ದ ನೀಲು ,ಇರುತ್ತಿದ್ದ ಎಂಟತ್ತು ಪದಗಳಲ್ಲೇ ಓದುಗರಲ್ಲಿ ಕಚಗುಳಿ ಮೂಡಿಸುವ ,ಗಾಢ ಚಂತನೆಗಚ್ಚುವ ,ಅಬ್ಬಾ ನಮಗ್ಯಾಕೆ ಇದೆಲ್ಲಾ ಕಾಣಿಸುವುದಿಲ್ಲ ಎಂದೆನ್ನಿಸುವಂತೆ ಕಾಡಿಸುತ್ತಿದ್ದ ನೀಲು ಇವತ್ತಿಗೂ ಎಲ್ಲರ ಡಾರ್ಲಿಂಗ್. ಇನ್ನು ಮರೆಯುವ ಮುನ್ನ , ನನ್ನ ಅಚ್ಚುಮೆಚ್ಚಿನದು.ಯಾಕೆಂದರೆ ಅದರಲ್ಲಿ ಲಂಕೇಶರ ವೈಯಕ್ತಿಕ ಬರಹ ಸಾಕಷ್ಟು ಇರುತ್ತಿದ್ದರಿಂದ. ಯಾವೊಂದು ಚಿತ್ರ ನಟರ ವಿಷಯಕ್ಕಾಗಿ ಅತ್ಯಂತ ಕುತೂಹಲದಿಂದ ಪೇಪರ್ ಮತ್ತು ಮ್ಯಾಗಜಿನ್ಗಳನ್ನು ಓದುತ್ತಿದ್ದೆವೋ ಹಾಗೆಯೇ ಲಂಕೇಶರ , ಆ ವಾರದಲ್ಲಿ ಆಫೀಸಿಗೆ ಬಂದವರ ,ಹೋದವರ ,ಬೈದವರ ,ಸಣ್ಣತನವ ಕಂಡುಹಿಡಿದಿದ್ದರ , ಇಸ್ಪೀಟ್ ಆಡಿದ್ದರ ,ಕುಡಿದಿದ್ದರ ,ರೇಸಿಗೆ ಹೋಗಿ ದುಡ್ಡು ಕಳೆದಿದ್ದರಾ , ಹಾಗೇ ದುಡ್ಡಿನ ಬಗ್ಗೆ ಎಚ್ಚರವಿರಲಿ ಎಂದು ಹೇಳಿದ್ದರ , ಮುನಿಸಿಕೊಂಡಿದ್ದರ ,ನಕ್ಕರಾ ,ಬರೆದರಾ ಎಂಬ ಎಲ್ಲಾದರ ವಿವರಗಳು ಅಲ್ಲಿರುತ್ತಿದ್ದರಿಂದ ,ಅದನ್ನೆಲ್ಲ ಓದಿ ಆತ್ಮ ತ್ರಪ್ತಿಗೊಳ್ಳುತ್ತಿತ್ತು.ಹಾಗೇ ಅವರನ್ನು ಅನುಕರಿಸಿ ಒಳಗೊಳಗೇ ಹೆಮ್ಮೆ ಪಡುತ್ತಿದ್ದುದೂ ಉಂಟು. ಇನ್ನು ರಾಜಕೀಯವೋ , ಅವರ ರಕ್ತದಲ್ಲೇ ಸದಾ ಹರಿದಾಡುತ್ತಾ ಬಿಸಿಯಾಗಿಸುತ್ತಿದ್ದ ವಿಷಯವಾಗಿತ್ತು.ಅವರ ತೀಕ್ಷ್ಣ ಬರವಣಿಗೆಯಿಂದಲೇ ಕರ್ನಾಟಕ ರಾಜಕೀಯ ಏನೆಲ್ಲಾ ತಿರುವು ಪಡೆದಿತ್ತೆಂಬುದು ಎಲ್ಲರಿಗೂ ತಿಳಿದಿದೆ.ಎಲ್ಲಾ ಮಂತ್ರಿ,ಕಂತ್ರಿಗಳನ್ನು ಹದ್ದುಬಸ್ತಿನಲ್ಲಿಟ್ಟು ಗಡಗಡ ನಡುಗಿಸಿದ್ದರಲ್ಲ.ಭ್ರಷ್ಟರು ಲಂಚಮುಟ್ಟುವಾಗ ದೇವರನ್ನು ನೆನೆಯದೆ (ದೇವರು ಯಾವಾಗ ಹೇಗೆ ಕಾಪಾಡುತ್ತಿದ್ದನೋ ಗೊತ್ತಿಲ್ಲ ) ಲಂಕೇಶರನ್ನು ನೆನೆದು ಹೆದರುತ್ತಿದ್ದರಲ್ಲ.ಚಾಟಿ ಏಟಿನಂತಿರುತ್ತಿದ್ದ ಅವರ ಬರಹಗಳಿಂದಲೇ ಚುರುಕು ಮುಟ್ಟಿಸಿಕೊಂಡು ಸುಮಾರಾಗಿ ಕೆಲಸ ಮಾಡಿದವರಿದ್ದಾರೆ.ಲಂಕೇಶರೆಂದರೆ ಕನಸಲ್ಲೂ ಬೆಚ್ಚಿಬೀಳುತ್ತ , ಅವರು ತೀರಿದಾಗ ಬೆಳಿಗ್ಗೆದ್ದು ಹಾಲು ಕುಡಿದವರಿದ್ದಾರೆ.ಒಬ್ಬ ಲೇಖಕನೆಂದರೆ ಹಾಗೇ ಇರಬೇಕಲ್ಲವೇ .ತಿದ್ದುತ್ತಾ ,ತೀಡುತ್ತಾ ,ಚಾಟಿಬೀಸುತ್ತಾ , ಕರ್ನಾಟಕದ ಜನರಿಗೆ ಒಂದಷ್ಟು ವರ್ಷಗಳ ಕಾಲ ನೆಮ್ಮದಿ ಕಾಣಿಸಿದ ಲಂಕೇಶ್ ಅವರು ಈಗ ಇರಬೇಕಿತ್ತು. ಈಗ ಇಡೀ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯ , ದೌರ್ಜನ್ಯ ನೋಡಿ ಏನೇನು ಬರೆಯುತ್ತಿದ್ದರೋ , ಹೇಗೆಲ್ಲಾ ಎಚ್ಚರಿಸುತ್ತಿದ್ದರೋ , ಎಷ್ಟೆಲ್ಲಾ ಸಿಡುಕುತ್ತಿದ್ದರೋ , ಜೊತೆಯಲ್ಲಿ ಬೀದಿಗಿಳಿಯುತ್ತಿದ್ದರೋ ,ಕಣ್ಣೊರೆಸಿ ಸಮಾಧಾನ ಮಾಡುತ್ತಿದ್ದರೋ… ಸಿನಿಮಾದ ಮೋಹವನ್ನು ಮೀರಿದವರಾರಿದ್ದಾರೆ.ತಮ್ಮ ಬಿಡುವಿರದ ಸಮಯದಲ್ಲೂ ಸಿನಿಮಾದ ಮಾಯಾಲೋಕದೊಳಗೆ ಹೊಕ್ಕು ,ನಟಿಸಿ , ಸಾಹಿತ್ಯ ರಚಿಸಿ, ನಿರ್ದೇಶಿಸಿ,ಏನೂ ಪೆಟ್ಟುತಿನ್ನದೆ ಈಚೆಬಂದವರು ಲಂಕೇಶ್ ಅವರು.ಅದರಲ್ಲಿರುವ ಕಷ್ಟ, ನಷ್ಟ ಸಣ್ಣತನ ,ಮೋಹ ಎಲ್ಲವನ್ನೂ ವಿವರಿಸಿ ಬರೆದು ಹಾಗೇ ಎಚ್ಚರಿಕೆಯನ್ನೂ ಕೊಟ್ಟರು.ಸಿನಿಮಾ ಎಂದರೆ ಸಿನಿಕತನವೇ ಎಂದು ವಿವರಿಸಿದರು .ಯಾರನ್ನೂ ಬಿಡದ ಸಿನಿಮಾ ಮೋಹ ,ಯಾಕೆ ಬಿಡಬೇಕೆಂದು ಕೇಳಿದರು.ನಾವಂದುಕೊಂಡಿರುವ ಸಿನಿಮಾ ಎಂದರೆ ರಂಗು,ರಂಗಿನ ಲೋಕ ಎನ್ನುವ ಮಿಥ್ಯವನ್ನು ತೆಗೆದರು.ರಂಗೂ ಇದೆ ಆದರೆ ಮಂಗನಾಗಬೇಡಿ ಎಂದು ಹೇಳುತ್ತಲೇ , ದೇಶ ವಿದೇಶದ ನಟನಟಿಯರನ್ನು ಕರೆತಂದು ಪರಿಚಯಿಸಿದರು.ಕತೆಗಳನ್ನು ಹೇಳಿ ಹೇಗೆ ಅದರೊಳಗೆ ಹೊಕ್ಕುವುದು , ಚಕಿತಗೊಳ್ಳುವುದು ಮುಂತಾದವನ್ನು ಬರೆದು ಚಲನಚಿತ್ರ ಪ್ರಿಯರಿಗೆ ಸಮಾಧಾನ ನೀಡಿದರು.ಬರೆದಿದ್ದ ಕಾಲಂಗಳೆಲ್ಲ ಸೇರಿ ಒಂದು ಪುಸ್ತಕದ ಸಂಗ್ರಹವಾಗಿದೆ ಈ ನರಕ ,ಈ ಪುಲಕ ಎಂದು.ಯಾವುದೂ ಬರೀ ಒಣಬರಹವಾಗಿರದೆ ರಸಭರಿತವಾಗಿ ,ಕೊಂಕು ,ಗಿಂಕು ಸೇರಿಸಿ ಚಪ್ಪರಿಸಿ ಓದುವಂತಿರುತ್ತಿತ್ತು.ಸಿನಿಮಾದ ಓದು ಓದಿದ ಮೇಲೆ ಒಂದು ಮಧುರವಾದ ರೋಮಾಂಚನ ,ಕಚಗುಳಿಯ ಸವಿಯಿಲ್ಲದೆ ಇರದೇ ಇರಲಿಲ್ಲ. ಸಿನಿಮಾದವರ ಜೀವನ ಶೈಲಿಯ ಬಗ್ಗೆ ಹೇಳುತ್ತಾ ಒಂದು ಕಡೆ ಬರೆಯುತ್ತಾ , ಹಿಂದಿ ನಟಿಯರಾದ ,ಅಕ್ಕ ತಂಗಿಯರಾದ ತನುಜಾ ಮತ್ತು ನೂತನ್ , ಅವರಿಬ್ಬರೂ ಹೇಗೆ ವಿಭಿನ್ನ ಎಂದು , ನೂತನ್ ಅವರು ಬಹಳ ಮಡಿವಂತಿಕೆಯಿಂದ ಬದುಕಿದ್ದು ,ಬಹಳ ಬೇಗ ಸಾವನ್ನಪ್ಪಿದ್ದು ,ಆದರೆ ತನುಜಾರು ಜೀವನದ ಎಲ್ಲಾ ಜೀವಂತಿಕೆಯನ್ನು ,ಚಂದದ ಕ್ಷಣಗಳನ್ನು ಅನುಭವಿಸಿ ಈಗಲೂ ಎಷ್ಟು ಲವಲವಿಕೆಯಿಂದಿದ್ದಾರೆ ಎಂದಿದ್ದಾರೆ. ಎಂತಹ ಗೂಢಾರ್ಥ ಇದೆ ಇದರಲ್ಲಿ. ಯುವಜನರು ನಟನಟಿಯರನ್ನು ಆರಾಧಿಸುವುದನ್ನು ಬಿಟ್ಟು ಲಂಕೇಶರನ್ನು ಆರಾಧಿಸಲಿ, ಆಗ ನೋಡಲಿ ಅವರಲ್ಲಾಗುವ ಬದಲಾವಣೆ. ಬದುಕುವ ದಾರಿ ಸಿಗದೇನು ಅಲ್ಲಿ ? ಒಂದು ಆದರ್ಶ ರೂಪುಗೊಳ್ಳದಿದ್ದರೆ ಕೇಳಿ ಅಲ್ಲಿ ?ಸಿನಿಕತನದಿಂದ ಹೊರಬರದಿದ್ದರೆ ನೋಡಿ. ಮೋಹಿಸುವುದಿದ್ದರೆ ಲಂಕೇಶರನ್ನೇ ಮೋಹಿಸಲಿ, ನಂತರ ಅವರೇ ಒಂದು ರೂಪಕವಾಗುವುದಿಲ್ಲವೇನು ಪರೀಕ್ಷಿಸಲಿ !! ಯಾರೊಬ್ಬರ ಮೇಲಾದರೂ ಹುಚ್ಚು ಬೆಳೆಸಿಕೊಳ್ಳುವುದಿದ್ದರೆ ಲಂಕೇಶರ ಪುಸ್ತಕದ ಮೇಲೆ ಬೆಳೆಸಿಕೊಳ್ಳಲಿ.ರೂಪಾಂತರಗೊಳ್ಳಲಿ. ನಂದಿ ನೋಡದವರು ಹಂದಿಗೆ ಸಮವಂತೆ ಎನ್ನುವಂತೆ , ಲಂಕೇಶ್ರನ್ನು ಓದದವರು ….. ಏನು ಹೇಳುವುದು ಅವರ ದುರಾದೃಷ್ಟಕ್ಕೆ… ಈಗಿನ ವಿದ್ಯಾರ್ಥಿಗಳೋ, ಹೊಸದಾಗಿ ಓದುವುದಕ್ಕೆ ಸಾಹಿತಿಯನ್ನು ಹುಡುಕುತ್ತಿರುವವರೋ ಸುಮ್ಮನೆ ಲಂಕೇಶರನ್ನು ಹಿಡಿಯಲಿ ,ಆ ಹಿಡಿದ ಬೆರಳನ್ನು ತನ್ನ ಮುಷ್ಟಿಯಲ್ಲಿ ಇಟ್ಟು ಬೆಚ್ಚಿಗಿನ ಅನುಭವವನ್ನು ನೀಡುವುದು ಲಂಕೇಶರ ಮಮತಾಮಯಿ ಬರವಣಿಗೆಯಲ್ಲಿದೆ. ಅವರ ಕಾದಂಬರಿ ಮುಸ್ಸಂಜೆ ಕಥಾ ಪ್ರಸಂಗದಲ್ಲಿ ಬರುವ ಆಣೆಬಡ್ಡಿ ರಂಗಮ್ಮನ ಪಾತ್ರ ಎಷ್ಟು ಜೀವನ್ಮುಖಿಯದ್ದು.ಆಕೆ ಎಲ್ಲಾ ಸೋಗಲಾಡಿಗಳ ಒಳಹೊಕ್ಕು ಹಿಂದೂ ಮುಂದೂ ನೋಡದೆ ಮುಖವಾಡ ಕಳಚುವ ರೀತಿ ಇದೆಯಲ್ಲ … ಅದರಲ್ಲೂ ಮೇಟ್ರ ಎಂದು ಕೂಗಿ ಅವರಿಗೆ ಬೈಯ್ಯುವುದು ,ಅಣಕಿಸುವುದು ,ಮಾಡಿದರೆ ಮೇಷ್ಟ್ರು ಎಂದರೆ ದೇವರೆಂದೇ ಭಾವಿಸಿರುವ , ಭಯಭಕ್ತಿಯ ಭಾವ ಉದಯಿಸುವವರನ್ನು ,ಪೂಜಿಸುವಂತವರಿಗೂ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ನಾವೂ ಅಲ್ಲಿಂದ ಕಾಲು ಕೀಳಬೇಕೆನಿಸುವಂತೆ ಕಟ್ಟಿದ್ದಾರೆ. ನಾಗರಹಾವು ಕಥೆಯ ಮೇಷ್ಟೇ ಎಂದು ಹೇಳಿ ಅವರನ್ನು ಉಪ್ಪರಿಗೆಯ ಮೇಲೆ ಕೂರಿಸಿದ್ದನ್ನೂ ನೋಡಿದಾಗ ,ಅವೆರಡೂ ಪಾತ್ರಗಳು ಹೇಗೆ ವಿರುದ್ಧವಾದ ಪಾತ್ರ ಪೋಷಣೆಯಿದ್ದರೂ ಮನಸ್ಸಿನಲ್ಲುಳಿಯುತ್ತವೆ. ಆಣೆಬಡ್ಡಿ ರಂಗಮ್ಮನಂತ ಹೆಣ್ಣು ಮಗಳು ಕೊನೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ತೀರಾ ಅನಿರೀಕ್ಷಿತ.ಆದರೆ ಬಹಳ ಅವಶ್ಯ.ಊರಿನ ಜನರನ್ನು ಎದುರಿಸಿ ನಿಂತ ರೀತಿ …. ನಾವೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯುವಂತಾದ್ದು.ಈಗಿನ ಪ್ರತಿ ಊರಿಗೂ , ಒಂದೊಂದು ಮನೆಯಲ್ಲೂ ಇರಬೇಕಾಗಿರುವ ಸುಂದರ ಮನಸ್ಸು. ಎಲ್ಲಿ ನೋಡಿದರಲ್ಲಿ ಮಿತಿ ಮೀರಿ ನಡೆಯುತ್ತಿರುವ ದೌರ್ಜನ್ಯ ,ಮೋಸ , ಅಂತರ್ಜಾತೀಯ ಮದುವೆಗಳ ನಂತರದ ಕೊಲೆಗಳಿಗೆ ಉತ್ತರವೆಂಬಂತಿದೆ. ಹಾಗೆಯೇ ಅಕ್ಕ ಕಾದಂಬರಿಯಲ್ಲಿ ಅನಾಥ ಅಕ್ಕತಮ್ಮನ ಅನುಬಂಧ ಹೇಗಿರುತ್ತದೆ ಎಂಬುದನ್ನು ಕರುಳು ಕಿವುಚುವಂತೆ ಬರೆದಿದ್ದಾರೆ.ಒಬ್ಬರಿಗೊಬ್ಬರು ಹೇಗೆ ಆತುಕೊಂಡು , ಆವರಿಸಿಕೊಂಡು ಬೈದುಕೊಂಡು ,ತಳಮಳಿಸಿಕೊಂಡು ,ಹಂಬಲಿಸಿಕೊಂಡು ….. ಅಬ್ಬಾ ಬಡವರಾದರೇನು ಭಾವನೆಗಳಿಗೆ ಬಡತನವೇ ? ಪುಸ್ತಕದ ಕೊನೆಯಲ್ಲಿ ಬರೀತಾರೆ , ಸುತ್ತಲಿನ ಪ್ರಪಂಚವನ್ನು ಹಾಗೇ ನೋಡಿದರೆ ಎಲ್ಲವೂ ಕಾಣುವುದು.ಅದನ್ನೆಲ್ಲಾ ಗ್ರಹಿಸುವ ಸೂಕ್ಷ್ಮತೆ ಬೆಳೆಸಿಕೊಳ್ಳಬೇಕು. ದಾರಿಹೋಕ ನೋಡುವ, ಚಿಂತಿಸುವ ,ಸ್ವವಿಮರ್ಶೆ ಮಾಡಿಕೊಳ್ಳುವ ತರಹದವನಾಗಿದ್ದರೆ ಅವನಿಗೆ ಒಂದಲ್ಲ ಒಂದು ದಿನ ಈ ಅಕ್ಕ ತಮ್ಮ ಸಿಗುತ್ತಾರೆ.ಕ್ಯಾತನ ಹಟ್ಟಿ ,ಅವನ ಅಕ್ಕ , ಅವರಿಬ್ಬರನ್ನು ಸುತ್ತುವರಿದ ರಾಜಕೀಯ ಎಲ್ಲವೂ ಆ ದಾರಿಹೋಕನಲ್ಲಿ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ… ರಾಜಕೀಯ ಹೇಗೆ ಒಂದಕ್ಕೊಂದು ತಕ್ಕೆ ಹಾಕಿ ಬದುಕನ್ನು ಛಿದ್ರ ಮಾಡುತ್ತದೆ ಎಂದು ಬಹಳ ಸಂಕ್ಷಿಪ್ತವಾಗಿ ಹೆಣೆದಿದ್ದಾರೆ. ಮೇಲಿನೆರಡು ಉದಾಹರಣೆಗಳೇ ಸಾಕು ಜಗತ್ತಿನ ಅತೀ ಹೆಚ್ಚು ಬಾಧಿಸಲ್ಪಡುತ್ತಿರುವ ಸಮಸ್ಯೆಗಳ ಆಳಹೊಕ್ಕು ನೋಡುವುದಕ್ಕೆ ಮತ್ತು ಪರಿಹಾರವಿದೆ ಎಂದು ಹೇಳುವುದಕ್ಕೆ.ಒಂದು ಒಳಕಣ್ಣನ್ನು ಯಾವಾಗಲೂ ತೆರೆದಿಟ್ಟುಕೊಂಡಿರಿ ಎಂದು ,ಮನಸ್ಸಿನಾಳದಿಂದ ಮಿಡಿಯಿರಿ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅಯ್ಯೋ ಅವರು ಈಗ ಇರಬೇಕಿತ್ತು ಎಂದು ಹಳಹಳಿಸುವುದು ಬಹುಶಃ ಲಂಕೇಶ್ ಎಂಬ ಸಾಹಿತಿಯೊಬ್ಬರಿಗೆ ಮಾತ್ರವೇ ಇರಬಹುದು.ಈಗಲಂತೂ ಅವರ ಕೊರತೆ ಬಹುವಾಗಿ ಕಾಡಿಸುತ್ತಿದೆ.ಈ ದುಷ್ಟ ಜಗತ್ತಿನಲ್ಲಿ ನಡೆಯುತ್ತಿರುವ ಕ್ರೌರ್ಯ ನೋಡಿ ಏನೇನೆಲ್ಲಾ ಬರೆಯುತ್ತಿದ್ದರೋ , ಹೇಗೆಲ್ಲಾ ಧೈರ್ಯ ತುಂಬುತ್ತಿದ್ದರೋ.ತೂಕಡಿಸುವವರು ಎಚ್ಚರಗೊಳ್ಳುವಂತೆ ಮಾಡುತ್ತಿದ್ದರೋ. ಇದುವರೆಗೂ ಲಂಕೇಶರನ್ನು ಓದದವರು ಒಮ್ಮೆ ಓದಲಿ ,ಮುಂದೆ ಬರೆಯಬೇಕೆಂದುಕೊಂಡವರು ವಾಸ್ತವವಾಗಿ ಬರೆಯುವುದು ಹೇಗೆಂಬುದನ್ನು ತಿಳಿಯಲಿ. ಇಷ್ಟಕ್ಕೇ ಮುಗಿಯದು ಲಂಕೇಶರ ದೈತ್ಯಾಕಾರದ ಫ್ರತಿಭೆಯ ಅವಲೋಕನ.ಹೇಳಲು ಇನ್ನೂ ನೂರಾರು ವಿಷಯಗಳಿವೆ. ಆದರೆ ನನಗೆ ದಕ್ಕಿರುವುದು ಇಷ್ಟು. ಅವರು ನಮ್ಮನ್ನು ಪೊರೆದ ರೀತಿ ,ಎಚ್ಚರಗೊಳಿಸಿದ ವೇಳೆ ,ತಿದ್ದಿದ ಪರಿ … ಒಂದು ತಂದೆ ,ಗೆಳೆಯ ,ಅಧ್ಯಾಪಕ ,ಪ್ರೇಮಿ ,ಎಲ್ಲಾ ಪಾತ್ರವನ್ನೂ ಜವಾಬ್ದಾರಿಯಿಂದ ನಿರ್ವಹಿಸಿ ಹೆಮ್ಮೆಯಿಂದ ನಿರ್ಗಮಿಸಿದರು. ಒಂದು ವಿಧದಲ್ಲಿ ದಂತಕಥೆಯಾಗಿದ್ದ ಲಂಕೇಶರನ್ನು ನೆನೆದರೆ ಅವರ ಜೀವಿತ ಕಾಲದಲ್ಲೇ ನಾನೂ ಇದ್ದೆನಾ ಎಂದು ರೋಮಾಂಚನಗೊಳ್ಳುವೆ.ಬಹುಶಃ ಈಗಿನ ಜನಾಂಗ ಅದರ ರೋಚಕತೆಯನ್ನನುಭವಿಸದೆ ಬಹಳ ನಷ್ಟವನ್ನುಭವಿಸಿದ್ದಾರೆ.ಬದುಕಿದ್ದಾಗ ದಂತಕಥೆಯಾಗಿದ್ದ ಲಂಕೇಶರು ಈಗ ಪ್ರತಿಪುಟದಲ್ಲೂ ,ಒಂದೊಂದು ಓದಿನಲ್ಲೂ ಜೀವಂತವಿದ್ದಾರೆ.ಮನೆಯ ಎಲ್ಲಾ ಕೋಣೆಗಳಲ್ಲೂ ಒಂದೊಂದು ಅವರ ಪುಸ್ತಕವನ್ನಿಟ್ಟು ಐದು ನಿಮಿಷ ಸಮಯ ಸಿಕ್ಕಿದರೂ ಸಾಕು ,ನಾಲ್ಕು ಹಾಳೆ ಓದಿದರೂ ಸಾಕು ಅಲ್ಲೇನೋ ತಿಳುವಳಿಕೆ ,ಒಂದು ಸಮಾಧಾನ ಸಿಕ್ಕಿರುತ್ತದೆ. ಯಾವ ಲೇಖಕ ಎಲ್ಲಾ ರಂಗದಲ್ಲೂ ಕೈ ಆಡಿಸಿದ್ದಾರೆ ? ಬರೆದ ಒಂದೊಂದು ಪದವೂ ಪ್ರಾಮಾಣಿಕವಾಗಿ ಬರೆದದ್ದರಿಂದಲೇ ,ಆತಂಕವಾದಾಗ ಈಗಲೂ ದಿನಕ್ಕೊಮ್ಮೆ ಯಾದರೂ ಲಂಕೇಶ್ ಕೈಗೆ ಬರಲೇಬೇಕು. ಮಾರ್ಚ್ ಎಂಟು , ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಲಂಕೇಶ್ ಅವರ ಹುಟ್ಟಿದ ದಿನ ಒಂದೇ ಆದದ್ದು ಕಾಕತಾಳೀಯವೇ ಇರಬಹುದು.ಆದರೆ ಒಂದಕ್ಕೊಂದು ಪೂರಕವಾಗಿ ಬೆಸೆದಿದೆ. ಮಹಿಳೆಯರ ಶಕ್ತಿಯ ಬಗ್ಗೆ ಅವರಿಗಿದ್ದ ನಂಬಿಕೆಯನ್ನು ಯಾವ ಮಹಿಳೆಯೂ ಹುಸಿಗೊಳಿಸಲಿಲ್ಲ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ ಮೇಲೆ ಯಾವ ಮಹಿಳೆಯೂ ಬೆನ್ನು ತಿರುಗಿಸಿ ಹೋಗಿದ್ದಿಲ್ಲ. ಮಹಿಳೆಯರನ್ನು ಹುರುಪು ಗೊಳಿಸಿದ ರೀತಿಯಿಂದ ಎಲ್ಲಾ ಮಹಿಳೆಯರು ಲಂಕೇಶ್ ಪತ್ರಿಕೆ ಎಂಬ ನಿರಂತರ ಇಪ್ಪತ್ತೈದು ವರ್ಷಗಳ ಕಾಲ ನಡೆದ ಜಾತ್ರೆಯಲ್ಲಿ ಅತೀ ಉತ್ಸಾಹದಿಂದ ಪಾಲ್ಗೊಂಡರು. ಅದರಲ್ಲೂ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಲಂಕೇಶ್ ಅವರ ವಿಶೇಷ ಪ್ರೀತಿಗೆ ಕಾರಣರಾಗಿ ಎಷ್ಟೆಲ್ಲಾ ಅದ್ಭುತ ಕಥೆಗಳನ್ನು ಬರೆದ ಸಾರಾ ಅಬೂಬಕ್ಕರ್ ಅವರನ್ನು ಯಾವ ಓದುಗರೂ ಮರೆಯಲು ಸಾಧ್ಯವಿಲ್ಲ.ಅವರ ಧರ್ಮದವರಿಂದಲೇ ಬಹಿಕ್ಷಾರದ ಬೆದರಿಕೆ , ನಿರಂತರ ಅವಹೇಳನಕಾರಿ ಮಾತುಗಳು ಬಂದಾಗಲೂ ಈಗಲೂ ಗಟ್ಟಿಯಾಗಿ ತನ್ನ ನಿಲುವನ್ನು ಪ್ರಕಟಿಸುತ್ತಿದ್ದಾರೆ. ನಾವೆಲ್ಲ ಹಿಂದೆ ಸಾಮಾಜಿಕ ,ಪ್ರಣಯ , ಪತ್ತೇದಾರಿ ಕಾದಂಬರಿಗಳಲ್ಲೇ ಮುಳುಗೇಳುತ್ತಿದ್ದ ಸಮಯದಲ್ಲಿ ಮುಸ್ಲಿಂ ಸಮುದಾಯದ ಕಥೆ ಮತ್ತು ಅವರಲ್ಲಿರುವ ನಾನಾ ತರಹದ ,ನಮಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿರದ ಪ್ರಪಂಚಕ್ಕೆ ಎಳೆದೊಯ್ದರು.ಆ ಮೂಲಕ ಆ ಧರ್ಮದವರ
ಕಾವ್ಯಯಾನ
ಅಡುಗೆ ಮನೆಯೆಂದರೆ ಸ್ಮಿತಾ ರಾಘವೇಂದ್ರ ಅಡುಗೆ ಮನೆಯೆಂದರೆ ಯುದ್ಧಕ್ಕೆ ಮೊದಲು ಎಲ್ಲವೂ ಶಾಂತವೇ ಯುದ್ದ ಮುಗಿದ ಮೆಲೂ… ಅನಿವಾರ್ಯ ಮತ್ತು ಅವಶ್ಯಕತೆ- ಸಂಭವಿಸುವ ಮುಂಚಿನ ಸಮಜಾಯಿಶಿ. ಅಣಿಗೊಳ್ಳಲು ಹೆಚ್ಚಿನ ತಯಾರಿ ಏನಿಲ್ಲ ಅತ್ತಿಂದಿತ್ತ ತಿರುಗಾಡುತ್ತಲೇ ಮಾತು ಒಗೆದಂತೆ- -ಅಣಿಮಾಡುವ ರಣರಂಗ. ನುಗ್ಗೆಕಾಯಿ ಸಪೂರ ದಂತವರು, ಹೊಟ್ಟೆ ಭಾರದ ದೊಣ್ಣ ಮೆಣಸಿನಂತವರು ಕೆಂಪು ಗಲ್ಲದ ಟೊಮೆಟೊ ಅಂತವರು, ಸೊಪ್ಪಿನಂತೆ ಉದ್ದ ಕೂದಲಿನವರು, ನಾ ನಾ ವಿಧದ ಸೈನಿಕರ ಗುಂಪು, ರಾಜನ ಆಗಮನವನ್ನೇ ಎದುರು ನೋಡುತ್ತ.. ಯಾರು ಮೊದಲು ಮಡಿಯಬಹುದು!? ಇಂದು ನಿನ್ನದೇ ಪಾಳಿ ಮೂಲೆಯಲ್ಲಿ ಕೂತ ಈರುಳ್ಳಿ. ಬಿಡುವೆನೇ ಕಣ್ಣ ಹನಿ ಉದುರಿಸದೇ ಸಣ್ಣ ಹೊಟ್ಟೆ ಉರಿ- ಇವಳು ಇಷ್ಟಾದರೂ ಘಟ್ಟಿ; ಅಡಗಿ ಕೂತವರನ್ನೆಲ್ಲ ಎಳೆದು ತಂದು ಸಿಪ್ಪೆ ಸುಲಿದು. ಕಚ ಕಚನೇ ಕೊಚ್ಚಿ ಬೇಯಿಸಿ ಬಾಡಿಸಿ, ಉಪ್ಪು ಹುಳಿ ಖಾರ, ಉರಿ ಉರಿ ಕೂಗಿದರೂ ಬಿಡದ ಘೋರ ಹಳೆಯ ದ್ವೇಶವೆಲ್ಲ ತೀರಿಸಿಕೊಂಡ ಹಗುರ ಅಮರಿಕೊಂಡ ಅಸಹಾಯಕತೆಯ ಅಸಹನೆ ಕೊಡವಿಕೊಂಡ ನಿರಾಳ ಎಲ್ಲ ಮುಗಿದ ಮೇಲೂ ಏನೂ ಆಗದಂತೆ ಕಣ್ತುದಿಯ ಹನಿಯೊಂದು ಇಂಗಿದಂತೆ ಅಗಲ ನಗೆಯಲಿ ಎಲ್ಲವೂ ಖಾಲಿ ಖಾಲಿ ಕುರುಹೂ ಇಲ್ಲದ ರಣರಂಗದಲಿ ಖಿಲ ಕಿಲನೇ ನಗುವ ಅವಳ ಖಯಾಲಿ.. ******
ಕಾವ್ಯಯಾನ
ಗೆಳತಿ ನಕ್ಕುಬಿಡು ಮೂಗಪ್ಪ ಗಾಳೇರ ನಾನು ನೋಡಿದ ಹುಡುಗಿಯರೆಲ್ಲಾ….. ಪ್ರೇಯಸಿಯರಾಗಿದ್ದರೆ ನಾನು ಗೀಚಿದ ಸಾಲುಗಳೆಲ್ಲಾ ಕವಿತೆಗಳಾಗಬೇಕಿತ್ತಲ್ಲ! ದಡ್ಡಿ….. ನಿನಗಿನ್ನೂ ಹಗಲು ಮತ್ತು ರಾತ್ರಿಯ ವ್ಯತ್ಯಾಸ ಗೊತ್ತಿದ್ದಂತೆ ಕಾಣುತ್ತಿಲ್ಲ! ಕತ್ತಲನ್ನು ನುಂಗಿ ಬೆಳಕಾಯಿತೋ…! ಬೆಳಕನ್ನು ನುಂಗಿ ಕತ್ತಲಾಯಿತೋ…! ನೀನು ನನ್ನ ಜೊತೆ ಇಟ್ಟ ಒಂದೊಂದು ಹೆಜ್ಜೆಯೂ ಹಳೆ ಸಿನಿಮಾದ ಹಾಡುಗಳಂತೆ ನನ್ನೆದೆಯಲ್ಲಿ ಯಾವಾಗಲೂ ಗುನುಗುತ್ತಿರುತ್ತವೆ ಒಮ್ಮೊಮ್ಮೆ ಎದೆಭಾರ ಆದಾಗ ಕವಿತೆಯ ಸಾಲು ಬೇರೆಯಾಗಬಹುದು ಕವಿತೆ ಮಾತ್ರ ಎಂದೆಂದೂ ನೀನೆ ಒಂದೊಮ್ಮೆ ನನ್ನ ಕವಿತೆಯ ಸಾಲುಗಳನ್ನು ಯಾರೋ ಓದುತ್ತಿದ್ದಾರೆಂದರೆ ಅದು ನಮ್ಮಿಬ್ಬರ ನಡುವಿನ ಪ್ರೀತಿಯ ಪಲ್ಲವಟವೆಂದೆ ಕರೆಯಬಹುದು ಹಾಗೆ ಪಲ್ಲಟ ವಾದ ಈ ಪ್ರೀತಿಗೆ ಯಾವ ಪ್ರೇಮಿಗಳು ಸಾಟಿ ಹೇಳು ಗೆಳತಿ ಒಮ್ಮೆ ನಕ್ಕು ಬಿಡು ಮಲ್ಲಿಗೆಯ ದಳದಲ್ಲಿಯೂ ನಿನ್ನ ಮನಸ್ಸಿನ ಯವ್ವನವ ಗೀಚಿರುವೆ ಕಡಲ ಮುತ್ತಿನಲ್ಲಿಯೂ ಪ್ರೀತಿಯ ಒಡಲ ಕಟ್ಟಿರುವೆ| ************************************
ಪುಸ್ತಕ ಸಂಭ್ರಮ
ಕತ್ತಲೆಯೊಳಗಿನ ಮಹಾಬೆಳಗು ಲೇಖಕರು : ಡಾ. ಡಿ.ಎ.ಬಾಗಲಕೋಟ ಪ್ರಕಾಶಕರು : ಅಜಬ್ ಪ್ರಕಾಶನ, ನಿಪ್ಪಾಣಿ
ಕಾವ್ಯಯಾನ
ದೇವರ ದೇವ ಅಂಜನಾ ಹೆಗಡೆ ಕಾಲ ಎಲ್ಲವನ್ನೂ ಮರೆಸುತ್ತದೆ ಎಂದವ ಕಾಲಕ್ಕೆ ಕಿವುಡಾಗಿ ಕಣ್ಣುಮುಚ್ಚಿ ಉಟ್ಟಬಟ್ಟೆಯಲ್ಲೇ ಧ್ಯಾನಕ್ಕೆ ಕುಳಿತಿದ್ದಾನೆ ತಂಬೂರಿ ಹಿಡಿದು ತಂತಿಗಳ ಮೇಲೆ ಬೆರಳಾಡಿಸುತ್ತ ಶ್ರುತಿ ಹಿಡಿಯುತ್ತಾನೆ ಬೆರಳಲ್ಲಿ ಹುಟ್ಟಿದ ಬೆಳಕಿನ ಕಿರಣವೊಂದು ನರಗಳಗುಂಟ ಹರಿದು ಬೆಂಕಿಯಾಗಿ ಮೈಗೇರಿದೆ ಉಸಿರೆಳೆದುಕೊಳ್ಳುತ್ತಾನೆ ದೇವರ ಗೆಟಪ್ಪಿನಲ್ಲಿ ಕಾಲಮೇಲೆ ಕೈಯೂರಿದ್ದಾನೆ ಕಪ್ಪು ಫ್ರೆಮಿನ ದಪ್ಪಗಾಜಿನ ಕನ್ನಡಕ ರೂಪಕವಾಗಿ ಮುಚ್ಚಿದ ಕಿವಿಯ ಮೇಲೆ ಬೆಚ್ಚಗೆ ಕೂತಿದೆ ಕೈಗೆ ಸಿಗದ ಕಣ್ಣಿಗೆ ಕಾಣಿಸದ ಶಬ್ದ ಹಿಡಿಯಲು ಕುಳಿತವನ ಮೈಯೆಲ್ಲ ಕಣ್ಣು…. ಮುಚ್ಚಿದ ಕಣ್ಣೊಳಗೊಂದು ರಾಗ ತೆರೆದರೆ ಇನ್ಯಾವುದೋ ತಾಳ ಮೈಮರೆಯುತ್ತಾನೆ ರೆಪ್ಪೆಗೊತ್ತಿದ ತುಟಿಗಳನ್ನು ಧಿಕ್ಕರಿಸಿದವನ ಹಣೆಮೇಲಿಂದ ಬೆವರಹನಿಯೊಂದು ಲಯತಪ್ಪದಂತೆ ಮುತ್ತಾಗಿ ತುಟಿಗಿಳಿದಿದೆ ಕಾಲವನ್ನೇ ಮರೆಯುತ್ತಾನೆ ಕಾಲವನ್ನು ಮರೆಸುವವ ಕಳಚಿಕೊಂಡ ಕಣ್ಣರೆಪ್ಪೆಯೊಂದು ಧ್ಯಾನ ಮರೆತಿದೆ ********************************
