ವ್ಯಾಲಂಟೈನ್ಸ್ ಡೇ ಸ್ಪೆಶಲ್

ಒಲವು-ಗೆಲುವು ದೀಪಾಜಿ ಒಂದು ಕಾಲು ಕೆಜಿಯಷ್ಟು ತೂಗುವ ಗ್ರೀಟಂಗೂ ಕವರಿನಿಂದಾಚೆ ತೆಗೆದೊಡನೆ ಎರಡು ಪುಟದ ಮೇಲೊಂದಂದು ಬಿಳಿ ಪಾರಿವಾಳಗಳು ಪುಟಿದು ಕುಳತದ್ದು ನೋಡುತ್ತಿದ್ದಂತೆ ಮದ್ಯದಲ್ಲಿನ ಅಂಗೈ ಅಗಲದ ಕಡುಗೆಂಪು ಹೃದಯ ಅದರಾಳದೊಳಗಿಂತ ವಾದ್ಯಸಂಗೀತ ಕಿವಿ ದಾಟಿ ಎದೆ ತಾಕುತ್ತದೆ. ಪುಟ ತಿರುಗಿಸಿದರೆ ಜೋಡಿ ಗುಲಾಬಿ ಹೂ ಗಳು ಅದರ ಕೆಳಗೆ ಮೂರು ಸಾಲಿನ ಹನಿಗವನ.    ಮೂರು ಬಾರಿ ಉಸಿರೆ…. ಉಸಿರೆ.. ಉಸಿರೆ… ಉಸಿರಾಗಿ ಬಾ ಹೆಸರಾಗಿ ಬಾ ಈ ಬರಡು ಬದುಕಿಗೆ ಹಸಿರಾಗಿ ಬಾ..   ಅಬ್ಬಾ..!!   ಗ್ರೀಟಿಂಗ್ ಕಾರ್ಡಿನ ಎನ್ವಲಪ್ ಕವರಿನೊಳಗಡೆ ಇನ್ನೂ ಭಾರ ಉಳಿದಿದೆ ಕೈ ಹಾಕಿದರೆ ಒಂದು ಡಾರ್ಕ್ ಚಾಕಲೇಟ್ ಮತ್ತೊಂದು ಒರಟು ಒರಟಾದ ನಾಲ್ಕು ಮಡಿಕೆಯ ಹಾಳೆ.     ಎರಡನ್ನು ಹೊರ ತೆಗೆದು ಹಾಳೆಯ ಮಡಿಕೆಗೆಳನ್ನ ಬಿಚ್ಚಿದರೆ ಬಿಳಿ ಹಾಳೆಯ ತುಂಬ ರಕ್ತದೋಕುಳಿ ..!   “I LOVE YOU MY LOVE ❤“ ಎಂಬ ಪದಗಳು ಒಂದು ಹೃದಯದ ಚಿತ್ರ, ರಕ್ತ ಮರಗಟ್ಟಿದ ಹಾಳೆ ಮುಖಕ್ಹಿಡಿದು ಓದುತ್ತಿದ್ದಂತೆ ಅರೆಕ್ಷಣ ತಲೆ ಗಿರ್ರನೆ ತಿರುಗಿ ನಿಂತಂತಾಯಿತು, ಭಯ ಉದ್ವೇಗ ಒಂದಾಗಿ ಎದುರಿಗಿದ್ದ ಪ್ರೇಮ ನಿವೇದಕನ ಕೈ ಗಮನಿಸಿದರೆ ಬಲಗೈ ಮದ್ಯದ ಮೂರು ಬೆರಳುಗಳು ಶ್ವೇತ ವರ್ಣದ ಬ್ಯಾಂಡೇಜಿನೊಳಗಡೆ ಮುಲುಗಿ ಮಲಗಿದ್ದವು. ಪ್ರೀಯತಮನ ಈ ವಿಕಾರವನ್ನ ಕಂಡ  ಹೂವಿನಂತ ಹುಡುಗಿ ಕೈಲಿದ್ದ ಗ್ರೀಟಿಂಗು ಚಾಕಲೆಟ್ ಅವನ ರಕ್ತ ಸಿಕ್ತ ಪತ್ರ ಎಲ್ಲ ಅಲ್ಲೆ ಕೈ ಬಿಟ್ಟುಬಿಟ್ಟಳು..     ಮತ್ತೆಂದೂ ಅವನ ದೃಷ್ಟಿ ಎದುರಿಸಲೇ ಇಲ್ಲ.                           *      ರಕ್ತದಲ್ಲದ್ದಿ ಬರೆದ ಪ್ರೇಮ ಪತ್ರಗಳು, ದುಬಾರಿ ಉಡುಗೊರೆಗಳು, ಪ್ರೀತಿಯ ಮಾನದಂಡಗಳಾ? ಪ್ರೀತಿಯ ತೂಕವನ್ನು ಹೆಚ್ಚಿಸಿ ಬಿಡಬಲ್ಲವಾ? ಪ್ರೀತಿಗೆ ಅಳತೆಗೋಲು ಯಾವುದು? ಪ್ರೇಮ ನಿವೇದನೆಯ ಪ್ರಕ್ರಿಯೆ ಹೇಗಿರಬೇಕು? ಪ್ರೀತಿಗಿಂತಲೂ ಹೆಚ್ಚು ಇಂತ ವಿಷಯಗಳೆ ಯುವ ಪ್ರೇಮಿಗಳನ್ನು ಹಾಳುಗೆಡುವುತ್ತಿವೆ.    ಈ ಮೇಲಿನ ಯಾವ ಪ್ರಶ್ನೆಗೂ ನನ್ನ ಬಳಿಯು ಉತ್ತರವಿಲ್ಲ. ನನ್ನ ಬಳಿ ಅಷ್ಟೆ ಅಲ್ಲ ಬೇರಾರ ಬಳಿಯು ಈ ಪ್ರಶ್ನೊತ್ತರ ಮಾಲಿಕೆಗೆ ಸಿದ್ಧ ಉತ್ತರಪಟ್ಟಿಯೊಂದು ಸಿಗಲಾರದು. ಕಾರಣ ಇದು ಪ್ರೀತಿಯ ವಿಷಯ.     ಪ್ರೀತಿ ಮನುಷ್ಯ ಪ್ರಾಣಿಯಲ್ಲಡಗಿರುವ ಅಷ್ಟು ಭಾವನೆಗಳಲ್ಲೆ ಅತ್ಯಂತ ಶ್ರೀಮಂತ ಭಾವನೆ,  ಅದಕ್ಕೆ ಆಕರ್ಷಣೆ,ಕಾಮ,‌ಮೋಹ, ಉನ್ಮಾದ, ಅತಿರೇಖಗಳನ್ನ ಲೇಪಿಸಿ ದಿನೆ ದಿನೆ ಪ್ರೀತಿಯ ವ್ಯಾಖ್ಯಾನವನ್ನು ಸಂಕುಚಿತಗೊಳಿಸುವ ಪ್ರಯತ್ನ ಎಗ್ಗಿಲ್ಲದೆ ನಡೆದಿದೆ.    ಈ ಪ್ರೀತಿ, ಒಲವು, ಮಮಕಾರ, ಅಂತಃಕರಣ, ಬಾಂಧವ್ಯ ಇಂತವಕ್ಕೆಲ್ಲ ಯಾವ ಚೌಕಟ್ಟುಗಳು ಇಲ್ಲ ಪದಪುಂಜಗಳ ಬಂಧನದೊಳಗೆ ಇವು ನಿಲ್ಲಲಾರವು, ಅಸಲು ಪ್ರೀತಿಗೆ ಇಂತದ್ದೆ ಎಂಬ ಬಂಧನ ನಿರ್ಬಂಧಗಳಿಲ್ಲವಾದ್ದರಿಂದ ಪ್ರೀತಿಯನ್ನ ಒಂದು ಪದದಲ್ಲಿ ಹೇಳಿದರೂ ಮುಗಿದೀತು ಇಲ್ಲವೆ ನಾಲ್ಕಾರು ಪುಟ ಪ್ರಬಂಧ ಬರೆದರೂ ಹೇಳುವುದಿನ್ನೂ ಉಳಿದೀತು.       ಅದು ಹೂವಿನಂತೆ, ನಾವೇ ಬೆಳೆಸಿದ ಕುಂಡಲದಲ್ಲು ಅರಳಿಬಿಡಬಹುದು ಇಲ್ಲವೇ ಸ್ಮಶಾನದ ಬೇಲಿಯಲ್ಲು ಅರಳಿ ನಿಂತುಬಿಡಬಹುದು.ಪ್ರೀತಿಸ ಹೊರಟವರು ಮಾತ್ರ ಅಂತದೆ ಹೂ-ಮನಸ್ಸೊಂದನ್ನು ಕಾಯ್ದುಕೊಳ್ಳುವುದು ಮಾತ್ರ ಬಹುಮುಖ್ಯ. ನಾನವರನ್ನು ಪ್ರೀತಿಸುತ್ತೇನೆ ಅದಕ್ಕಾಗೆ ಎದುರಿನ ಆಕೆ/ಅವನು ನನ್ನನ್ನು ಪ್ರೀತಿಸಬೇಕೆಂಬುದು ಮಹಾ ದಡ್ಡ ಪ್ರೇಮಿಯ ನಿರೀಕ್ಷೆ. ಪ್ರೀತಿ ಕೊಡುವ ಸರಕೆ ಹೊರತು, ಇಸಿದುಕೊಳ್ಳುವ, ಪಡೆಯುವ, ನಿರೀಕ್ಷಿಸಿ ನಿಂತು ಹೊತ್ತು ತರುವ ಮಾಲಲ್ಲ.  ಪ್ರೀತಿ, ಅಕ್ಕ- ಚೆನ್ನಮಲ್ಲಿಕಾರ್ಜುನನ ಪ್ರೇಮಿಸಿದ ಪರಿಯಂತದ್ದು, ಪ್ರೀತಿ ಮೀರೆಯು ಕೃಷ್ಣನಿಗೆ ನುಡಿಸಿದ ತಂಬುರಿ ನಾದದಂತದ್ದು, ಅದಕ್ಕೆ ಆಕಾರವಿಲ್ಲ ಅನುಭವ-ಅನುಭಾವವಿದೆ ಅಷ್ಟೆ.     ಅಂಚೆ,ತಂತಿ,ಮೊಬೈಲ್, ವಾಟ್ಸಾಪ್, ಇದ್ಯಾವುದು ಇಲ್ಲದ ಕಾಲದಲ್ಲೂ ಭುಮಿಯ ಮೇಲೆ ಅತ್ಯಂತ ಶ್ರೇಷ್ಠ ಪ್ರೇಮಿಗಳು ಬದುಕಿ ಹೋಗಿದ್ದಾರೆ. ಸಂವಹನ ಸಂಪರ್ಕದ ಗಾಳಿಗೆ ಸಿಕ್ಕು ಮಧುರ ಪ್ರೇಮ ಒಂದು ಸೋಂಕು ತಗಲಿ ಗಾಸಿಯಾಗದಿರಲಿ, ಸಣ್ಣ ಪುಟ್ಟ ಅಹಂಕಾರ ಜಂಭಗಳಿಗೆ ಜೋತು ಬಿದ್ದು ಪವಿತ್ರ ಪ್ರೇಮಿಗಳು ಬೆನ್ನು ಮಾಡಿ ಹೊರಟು ನಿಲ್ಲದಿರಲಿ.     ನಿವೇದಿಸಿದ ಪ್ರೀತಿ ದಕ್ಕಲಿಲ್ಲವೇ..? ಅದು ಸಿದ್ಧಿಸದಷ್ಟು ಕಾಲ ನೀವು ಉತ್ಖಟ ಪ್ರೇಮದ ತುತ್ತತುದಿಯ ತಂಗಾಳಿಗೆ ಎದೆಒಡ್ಡಿ ನಿಂತು ಆಸ್ವಾದಿಸಬಲ್ಲಿರಿ. ನಿಮ್ಮ ಮನದ ಕಣ್ಣಿಗೆ ಬಣ್ಣಬಣ್ಣದ ಕನಸುಗಳ ಹಾರ ತೊಡಿಸಬಲ್ಲಿರಿ.    ದೈಹಿಕ ವಾಂಛೆಗಳಿಗೂ ನಿರ್ಮಲ ಪ್ರೀತಿಗೂ ಅಜಗಜಾಂತರ ಅಂತರವಿದೆ. ವಯೋ ಸಹಜ ದೈಹಿಕ ವಾಂಛೆಗೆ ಪ್ರೀತಿ ಎಂಬ ಹೆಸರಿಟ್ಟು ನಿಮ್ಮ‌ pure infatuation ನ್ನ ಹರಿಬಿಡದಿರಿ..   ‌   ಪ್ರೀತಿ ಪಾತ್ರರೂ ಎಲ್ಲೆ ಇರಲಿ ಅವರ    ನೆಮ್ಮದಿಗಾಗಿ ನಿಮ್ಮದೊಂದು ಶುದ್ಧ ಪ್ರಾರ್ಥನೆ, ಮತ್ತೆನನ್ನೋ ಮಾಡುತ್ತೇನೆಂದು ಹೊರಟಾಗ ಒಂದೊಳ್ಳೆ ಶುಭ್ರ ಅಭಿನಂದನೆ, ಸಂಕಷ್ಟ ಎಂದು ಬಳಿಸುಳಿದಾಗ ಅಪ್ಪಿ ಬೆನ್ನು ಸವರಿ ನಾನಿದ್ದೇನೆ ಎಂಬ  ಸಣ್ಣ  ಭರವಸೆಯ ಬಿಗಿತ, ದುಃಖ ಎಂದು ಕಣ್ಣಪಸೆ ತೋರಿದಾಗ ಹಣೆಗೊಂದು ಮೃದು ಮುತ್ತಿನ ನವಿರು ಸ್ಪರ್ಶ‌ ಇಷ್ಟೇ ಶ್ರೀಮಂತ ಪ್ರೀತಿಯ ಪ್ರತೀಕಗಳು ಇದ್ಯಾವುದು ಸಾಧ್ಯವಿಲ್ಲದ ಸ್ಥಿತಿ  ನಿಮ್ಮದಾಗಿದ್ದರೆ ಒಂದು ಹಾರೈಕೆಯು ಸಾಕು ನಿಮ್ಮ ಪ್ರೇಮಿ ಗೆದ್ದು ಬರಲು.     ಎಲ್ಲಾ ಪ್ರೇಮಗಳು ಮಧುವೆಯಲ್ಲೆ ಅಂತ್ಯವಾಗಬೇಕೆಂಬ ಹಂಬಲ ಬೇಡ ಪರಸ್ಪರರೆಡಿನ ಗೌರವದ ನೋಟವು ಜೀವನದುದ್ದಕ್ಕೂ ಆ ಪ್ರೀತಿಯನ್ನ ಜೀವಂತ ಉಳಿಸಿ ಗೆಲ್ಲಿಸಿ ಬಿಡುತ್ತದೆ..  ‌‌   ಒಲವೆ ನಮ್ಮ ಬದುಕು  ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು..    ಬೇಂದ್ರೆ ಅಜ್ಜ ಹೇಳುವಂತೆ, ಈ ಒಲವೆ ಬದುಕಲು ಸಾಕಷ್ಟಾಯಿತು. ************************

ವ್ಯಾಲಂಟೈನ್ ಸ್ಪೆಶಲ್

ಗಝಲ್ ಮಾಲತಿ ಹೆಗಡೆ ಗಜಲ್ ಅವನ ಕಣ್ಣಲ್ಲಿ ‌ನನ್ನ ಬಿಂಬ ಕಂಡಾಗ ಮೂಡಿತ್ತು ಪ್ರೀತಿ ಮನಸೆಳೆವ ಮಾತಿಗೆ ಮರುಳಾದಾಗ ಮೂಡಿತ್ತು ಪ್ರೀತಿ ಪ್ರತಿದಿನವೂ ಕನಸಲ್ಲೂ ನನಸಲ್ಲೂ ಕಾಡಿದ್ದೇನೂ ಸುಳ್ಳಲ್ಲ ಕಾಯಾ ವಾಚಾ ಮನಸಾ ನಿನ್ನವನೆಂದಾಗ ಮೂಡಿತ್ತು ಪ್ರೀತಿ ನಮ್ಮಿಚ್ಛೆಯಂತೆ ಮದುವೆಯಾಗುವುದು ಏನು ಹುಡುಗಾಟವೇ? ನಾನೆಲ್ಲ ನೋಡಿಕೊಳುವೆ ಭಯಬೇಡವೆಂದಾಗ ಮೂಡಿತ್ತು ಪ್ರೀತಿ ದೇವರು ಗುರುಹಿರಿಯರು ಅಗ್ನಿ ಸಾಕ್ಷಿಯಾಗಿ ಕಟ್ಟಿದ ಮಾಂಗಲ್ಯ ಉರುಳಾಗದಂತೆ ಬಲು ಕಾಳಜಿ ಮಾಡಿದಾಗ ಮೂಡಿತ್ತು ಪ್ರೀತಿ ಈ ‘ಮಾಲಿ”ಗೆ ಒಲಿದವನೊಂದಿಗೆ ಬದುಕುವ ಸುಯೋಗ ಸುಖ ದುಃಖದಲಿ ಜೊತೆಗೂಡಿದಾಗ ಮೂಡಿತ್ತು ಪ್ರೀತಿ *********

ವ್ಯಾಲಂಟೈನ್ಸ್ ಡೇ ಸ್ಪೆಶಲ್

ಪ್ರೀತಿಯೆಂದರೆ ಹೀಗೇ ಏನೋ!!?? ಸೌಜನ್ಯ ದತ್ತರಾಜ ಪ್ರೀತಿಯೆಂದರೆ ಹೀಗೇ ಏನೋ!!?? ಮೊದಮೊದಲು ನಿದ್ದೆ ಕೆಡಿಸಿ, ನೆಮ್ಮದಿ ಕಳೆದು ಸಾವಿರ ಪ್ರಶ್ನೆಗಳ ಸುಳಿಯೊಳಗೆ ಸಿಲುಕಿಸಿ ಅವಗಣನೆಯೋ, ಅವಮಾನವೋ ಎಂದೆಲ್ಲಾ ಅನುಮಾನಗಳ ಹುಟ್ಟಿಸಿ ಸ್ವಾಭಿಮಾನ, ಸ್ವಾರ್ಥಗಳೆಲ್ಲವ ಮಧ್ಯೆ ತೂರಿಸಿ ನಂಬದ ದೇವರನ್ನೂ ಮತ್ತೆ ಮತ್ತೆ ನೆನೆಸಿ ನಿರ್ಧಾರಗಳೆಲ್ಲವ ಏರುಪೇರಾಗಿಸಿ ಭೂಮಿ ಬಾನುಗಳ ತಲೆಕೆಳಗಾಗಿಸಿ ಅಬ್ಬಬ್ಬಬ್ಬಾ……. ಅವೆಷ್ಟೆಲ್ಲಾ ಚಿತ್ರ ವಿಚಿತ್ರ ಭಾವನೆಗಳು ಒಮ್ಮೆ ಪ್ರೀತಿ ನಮ್ಮೆಡೆ ತಿರುಗಿ ನಕ್ಕರೆ ಆಯ್ತು ಒಪ್ಪಿಕೊಂಡರಂತೂ ಸರ್ವಸ್ವವೂ ಸುಂದರ ಅರಳುವ ಮನ, ನೆಮ್ಮದಿಯ ನಿದ್ದೆ ಪ್ರಶ್ನೆಗಳಿಗೆಲ್ಲಾ ಪೂರ್ಣ ವಿರಾಮ ಅನುಮಾನ, ಸ್ವಾಭಿಮಾನಗಳ ಜಾಗದಲ್ಲಿ ಮನದ ತುಂಬಾ ಕನಸುಗಳದ್ದೇ ರಾಜ್ಯಭಾರ ಜೊತೆ ಜಾರದಂತೆ ದೇವನೊಲಿಯಲೆಂಬ ಸ್ವಾರ್ಥ ನಿರ್ಧಾರಗಳಿಗೆಲ್ಲ ಮತ್ತೊಂದು ಹೆಗಲ ಖಾತ್ರಿ ದಿನದಿನಕ್ಕೂ ಅರಳುವ ಜೀವನ ಪ್ರೀತಿ ಇದೇ ಅಲ್ಲವೇ ಸತ್ಯ ಸುಂದರ ಪ್ರೇಮದ ರೀತಿ…… **********

ಕಾವ್ಯಯಾನ

ಗಝಲ್ ಸುಜಾತಾ ಲಕ್ಮನೆ ಗಜಲ್ ಕದ್ದು ಕದ್ದು ನೋಡುತ್ತ ಎಗ್ಗಿಲ್ಲದೇ ಕಿರುನಗೆ ತೂರಿದ್ದು ಅವನೇನಾ ಕದಪು ಕೆಂಪಾಗಿಸಿ, ಊರ ತೇರಲ್ಲಿ ಹಿಂದ್ಹಿಂದೆ ಬಂದಿದ್ದು ಅವನೇನಾ ಚುಮು ಚುಮು ಚಳಿಯ ಮುಂಜಾನೆಗೂ ಬೆಚ್ಚನೆಯ ಕನಸು ಮೈಯೆಲ್ಲ ಚುಂಗೇರುವಂತೆ ಕಣ್ ಮಿಟುಕಿಸಿ ನಕ್ಕಿದ್ದು ಅವನೇನಾ ಒರತೆ ಕಾಣದ ಒಡಲಾಳವೆಲ್ಲ ನೀರು ನೀರಾದ ಅನುಭಾವವೆನಗೆ ಒಸರುವ ಜೀವ-ಭಾವಗಳಿಗೆ ಸುಖದಮಲು ತುಂಬಿದ್ದು ಅವನೇನಾ ಹಿಡಿತ ತಪ್ಪಿ, ತೇಲಾಡಿ ಎಲ್ಲೆಂದರಲ್ಲಿ ಮನ ಬೀಡುಬಿಟ್ಟ ಕ್ಷಣಗಳೆಷ್ಟೋ ಎನ್ನೆಲ್ಲ ತುಮುಲಗಳಿಗೆ ದಿಕ್ಕು ದಿಕ್ಕಾಗಿ ಒಡ್ಡು ಕಟ್ಟಿದ್ದು ಅವನೇನಾ ಬೆಳಗೇರಿದಂತೆ ಇಬ್ಬನಿಯ ಮೈಯೊಳಗೆ ಹನಿ-ಹನಿಯಾಗುವ ಭಯ ಬೆಡಗು ಬೆರಗನೆ ಬೆರೆಸಿ ಬರಸೆಳೆದು ಬೆಳಕನ್ನೆ ಬೀರಿದ್ದು ಅವನೇನಾ ವರುಷಕ್ಕೊಂದೇ ದಿನ ಸಾಕೆ ಪ್ರೇಮಿಗಳ ದಿನದ ಸಂಭ್ರಮಾಚರಣೆಗೆ ಹರುಷವನೆ ತೂಗುತ್ತ ದಿನನಿತ್ಯ ಸುರಚಾಪ ತೋರಿದ್ದು ಅವನೇನಾ “ಸುಜೂ” ಕಟ್ಟಿ ಹಾರಿಸಿದ ಗಾಳಿಪಟದ ಬಾಲಕ್ಕೂ ಸೊಕ್ಕೇರಿದೆ ಇಂದು ಸೊಗ ಸುರಿ ಸುರಿದು ಬಣ್ಣ ಬಣ್ಣದ ಬಯಕೆಗಳ ಬಿತ್ತಿದ್ದು ಅವನೇನಾ **********

ಮಾಸದ ನೆನಪು

ನಾನು ಕಂಡ ಹಿರಿಯರು ಅರ್ಥವಿದ:ಎಚ್ಚೆಸ್ಕೆ ಡಾ.ಗೋವಿಂದ ಹೆಗಡೆ ಅರ್ಥವಿದ:ಎಚ್ಚೆಸ್ಕೆ (೧೯೨೦-೨೦೦೮) ಮೈಸೂರಿನಲ್ಲಿ ಎಂ ಬಿ ಬಿ ಎಸ್ ಓದುತ್ತಿದ್ದೆ.೧೯೮೭ರಲ್ಲಿ ಇರಬಹುದು,’ಗ್ರಾಮಾಂತರ ಬುದ್ಧಿಜೀವಿಗಳ ಯುವ ಬಳಗ,ಭೇರ್ಯ’ ಎಂಬ ಸಂಘಟನೆ ಕವಿಗೋಷ್ಠಿಯನ್ನು ಏರ್ಪಡಿಸಿತ್ತು.’ಕವನ ತನ್ನಿ,ಓದಿ!”ಎಂಬ ಕೋರಿಕೆಯೂ ಇತ್ತು.ಸರಿ,ನಾನೂ ಭಾಗವಹಿಸಿದೆ. ಹಿರಿಯ ಬರಹಗಾರರಾದ ಸಿ.ಭೈರವಮೂರ್ತಿ ಸಭೆಯಲ್ಲಿ ಇದ್ದ ನೆನಪು. ಮರು ತಿಂಗಳ ಕಾರ್ಯಕ್ರಮಕ್ಕೆ ಪತ್ರ ಮೂಲಕ ಆಹ್ವಾನ ಬಂತು. ಹಿರಿಯ ಲೇಖಕ ಎಚ್ಚೆಸ್ಕೆ ಇರುತ್ತಾರೆ ಎಂಬ ಮಾತಿತ್ತು. ಸರಿ, ನಾನು ಹೋದೆ. ಹಳೆಯ ಕಾಲದ ಮನೆ. ಈಗ ಶಿಶುವಿಹಾರವೋ ಏನೋ ಆಗಿತ್ತು. ಸುಮಾರು ೨೫ × ೨೫ ಅಡಿ ವಿಶಾಲವಾದ ಹಾಲ್. ಹೆಚ್ಚು ಎತ್ತರವಿರದ ಛಾವಣಿ.ಸೆಖೆ. ಒಂದೆಡೆ ನಾಲ್ಕು ಕುರ್ಚಿ ಮೇಜು ಇಟ್ಟು ವೇದಿಕೆಯನ್ನು ಕಲ್ಪಿಸಿದ್ದರು. ಎದುರಿಗೆ ಇಪ್ಪತ್ತೈದು  ಮೂವತ್ತು ಜನ  ಕವಿಗಳು – ಕಿವಿಗಳು ! ಮೊದಲಲ್ಲೇ ನನಗೆ ಕವನ ವಾಚನದ ಅವಕಾಶ ಸಿಕ್ಕಿತೆಂದು ನೆನಪು. ಓದುತ್ತಿದ್ದವನು ಹಾಗೆಯೇ ಎಚ್ಚೆಸ್ಕೆ ಅವರತ್ತ ಕಣ್ಣು ಹಾಯಿಸಿದೆ. ನನ್ನತ್ತಲೇ ತಿರುಗಿ ತುಂಬಾ ಆಸ್ಥೆಯಿಂದ ಆಲಿಸುತ್ತಿದ್ದರು! ಬರೆದದ್ದು ಸಾರ್ಥಕವಾಯಿತು ಅಂದುಕೊಂಡೆ. ಅಂದು ನಾನು ಓದಿದ ಕವಿತೆ”ದಾರಿಯೊಂದರ ಇತಿ-ವೃತ್ತ”. ಅಂದು ಎಚ್ಚೆಸ್ಕೆ ಏನು ಮಾತನಾಡಿದರೋ ನೆನಪಿಲ್ಲ ಆದರೆ ಹಿರಿಯರ ಎದುರು ಕವಿತೆ ಓದಿದ ಧನ್ಯತೆ ನನ್ನದಾಗಿತ್ತು. ಅದಾಗಿ ಒಂದೆರಡು ವರ್ಷಗಳಲ್ಲಿ ಅವರ ‘ದವನದ ಕೊನೆ’ ಕವನ ಸಂಕಲನ ಓದಲು ಸಿಕ್ಕಿತು. ಅವರೊಬ್ಬ ಗಮನಾರ್ಹ ಕವಿ ಎಂದು ನನಗೆ ತಿಳಿದದ್ದು ಆಗ. ಅದೇ ಸುಮಾರಿನಲ್ಲಿ ಗೆಳೆಯ ಸುದರ್ಶನ ಅವರ ‘ಎತ್ತರದ ವ್ಯಕ್ತಿಗಳು’ ಸಂಕಲನವನ್ನು ಕೊಟ್ಟು  ವ್ಯಕ್ತಿಚಿತ್ರಗಳನ್ನು ಓದಲು ಹಚ್ಚಿದ. ಎಲ್ಲಾ ನುಡಿಚಿತ್ರಗಳನ್ನು ಓದದಿದ್ದರೂ ಅಪೂರ್ವ ಕನ್ನಡ ಪ್ರೇಮಿ ‘ಅನಂತಪದ್ಮನಾಭ ಸೋಗಾಲ’ರ ಬಗ್ಗೆ ನಾನು ತಿಳಿದದ್ದು ಅಲ್ಲಿ.ಅಲ್ಲಿ ಮಾತ್ರ. ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ, ಕನ್ನಡ ವಿಶ್ವಕೋಶದ ಸಂಪಾದಕರಾಗಿ, ತಮಗೆ ವಿಶಿಷ್ಟವಾದ ಶೈಲಿಯ ಅಂಕಣ ಬರಹಗಳಿಗಾಗಿ ಎಚ್ಚೆಸ್ಕೆ ಸದಾ ಸ್ಮರಣೀಯರು. ದೇಶಬಂಧು, ವಿಶ್ವಕರ್ನಾಟಕ, ಛಾಯಾ, ಕನ್ನಡನುಡಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಐದಾರು ದಶಕಗಳ ಕಾಲ ಅಂಕಣ ವ್ಯವಸಾಯ ಮಾಡಿದವರು ಅವರು. ವಾರದಿಂದ ವಾರಕ್ಕೆ, ವಾರದ ವ್ಯಕ್ತಿ, ವ್ಯಕ್ತಿ, ವಿಷಯ, ಆರ್ಥಿಕ ನೋಟ, ದುರ್ಬೀನು ತರಂಗ, ಮುಂತಾದವು ಇವರ ಅಂಕಣ ಶೀರ್ಷಿಕೆಗಳು.ಸ್ಟಾರ್ ಆಫ್ ಮೈಸೂರು ಇಂಗ್ಲೀಷ್ ಪತ್ರಿಕೆಯಲ್ಲಿ ಅವರು ಇಂಗ್ಲಿಷ್ ನಲ್ಲಿ ಅಂಕಣ ಬರೆಯುತ್ತಿದ್ದರು ಎಂದು ಕೇಳಿದ್ದೇನೆ. ‘ಸಮದರ್ಶಿ’,’ವಿಚಾರ ಪ್ರಿಯ’ ಅವರ ಲೇಖನ ನಾಮಗಳು. ಅರವತ್ತು ವರ್ಷಗಳಿಗೂ ಮಿಕ್ಕಿದ ಲೇಖನ ವ್ಯವಸಾಯ ಅವರದು. ಬ್ಯಾಂಕಿಂಗ್ ಸೇವೆಯಲ್ಲಿ ಕನ್ನಡ ಬಳಕೆಗೆ ಭದ್ರ ಬುನಾದಿ ಹಾಕಿದ ಆಚಾರ್ಯ ಪುರುಷರು ಅವರು. ಬ್ಯಾಂಕ್ ಉದ್ಯೋಗಿಗಳಿಗಾಗಿ 25ಕ್ಕೂ ಹೆಚ್ಚು ಕನ್ನಡ ಕಮ್ಮಟಗಳನ್ನು ನಡೆಸಿಕೊಟ್ಟವರು. ವಾಣಿಜ್ಯ ಕನ್ನಡ,ಆಡಳಿತ ಕನ್ನಡ,ಕಾನೂನು ಕನ್ನಡ, ವ್ಯವಹಾರಿಕ ಕನ್ನಡ, ಕನ್ನಡ ಬಳಕೆ, ಸಿದ್ಧರು ಪ್ರಸಿದ್ಧರು,ಹೊಂಗನಸು ಕಂಡವರು,ಮಿಂಚಿನ ಹುಡಿ,ವಿಚಾರ ವಿಹಾರ, ಬಿ ಆರ್ ಅಂಬೇಡ್ಕರ್, ರಾಮಾನುಜ:ಜೀವನ ಚರಿತ್ರೆ ಮೊದಲಾದವು ಅವರ ಗ್ರಂಥಗಳು. ಅವರ ಸಮಗ್ರ ಪ್ರಬಂಧಗಳ ಸಂಕಲನ ಪ್ರಕಟವಾಗಿದೆ. ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದವರು ಕನ್ನಡ ವಿಶ್ವಕೋಶದ ಸಂಪಾದನೆಯ ಕಾರ್ಯಕ್ಕಾಗಿ ವಿಶ್ವವಿದ್ಯಾಲಯಕ್ಕೆ ಎರವಲು ಸೇವೆಗೆ ತೆರಳಿ ಅಲ್ಲಿಯೇ ನಿವೃತ್ತಿ ಹೊಂದಿದರು. ಪಿಂಚಣಿಯನ್ನು ಯಾರು ನೀಡಬೇಕು ಎಂಬ ವಿಷಯ ಮೂರು ದಶಕಗಳಾದರೂ ತೀರ್ಮಾನವಾಗದೇ ಎಚ್ಚೆಸ್ಕೆ ಅವರಿಗೆ ಅನ್ಯಾಯವಾಯಿತು ಎಂದು ಕೇಳಿದ್ದೇನೆ. ವಾರದ ವ್ಯಕ್ತಿ, ವ್ಯಕ್ತಿ ವಿಷಯಗಳ ಮೂಲಕ ಸಾವಿರಾರು ವ್ಯಕ್ತಿಗಳ ಬಗ್ಗೆ ಬರೆದ ಎಚ್ಚೆಸ್ಕೆ ಅವರ ಬಗ್ಗೆ ಅಂತರ್ಜಾಲದಲ್ಲಿ,ವಿಕಿಪೀಡಿಯಾದಲ್ಲಿ ಒಂದು ಸರಿಯಾದ ಪರಿಚಯಾತ್ಮಕ ಲೇಖನ ಇಲ್ಲದಿರುವುದು ವಿಷಾದನೀಯ. ಇದು ಎಚ್ಚೆಸ್ಕೆ ಅವರ ಜನ್ಮ ಶತಮಾನೋತ್ಸವ ವರ್ಷ. ಈ ಸಂದರ್ಭದಲ್ಲಿ ಅವರ ಕೊಡುಗೆಯನ್ನು ಸ್ಮರಿಸುವಂತಹ ಕೆಲಸಗಳು ಆಗಬೇಕಾಗಿವೆ. ತಮ್ಮ ವೈವಿಧ್ಯಮಯ ಬರಹಗಳಿಂದ ಕನ್ನಡವನ್ನು ಶ್ರೀಮಂತಗೊಳಿಸಿದ ಧೀಮಂತ ಎಚ್ಚೆಸ್ಕೆ ಅವರಿಗೆ ನಮನ. ————– ಪೂರಕ ಮಾಹಿತಿ– (ಎಚ್ಚೆಸ್ಕೆ ಬೆಳಕು )   ಐದನೆಯ ಸಂಚಿಕೆ  ಎಚ್ಚೆಸ್ಕೆ ಜನ್ಮ ಶತಮಾನೋತ್ಸವ ವರ್ಷ ಎಚ್ಚೆಸ್ಕೆ ಎಂದೇ ಪ್ರಸಿದ್ಧರಾದ ಡಾ ಎಚ್ ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್ ( ೧೯೨೦-೨೦೦೮) ಅವರು ಭಾರತೀಯ ಸ್ಟೇಟ್ ಬ್ಯಾಂಕ್ ಕನ್ನಡ ಸಂಘಗಳ ಸಮನ್ವಯ ಸಮಿತಿಗೆ ಆಚಾರ್ಯ ಸ್ವರೂಪರು. ೧೯೮೦ ರಿಂದ ಸಮಿತಿ, ಎಲ್ಲ ಬ್ಯಾಂಕುಗಳ ಕನ್ನಡ ಸಂಘಗಳು ಹಾಗೂ ಕನ್ನಡ ಕಾರ್ಯಕರ್ತರುಗಳಿಗೆ ಅರಿವು ಮತ್ತು ಸ್ಪೂರ್ತಿಯ ನಿರಂತರ ಚಿಲುಮೆಯಾಗಿದ್ದಾರೆ. ಬ್ಯಾಂಕಿಂಗ್ ಅನ್ನು ಕನ್ನಡದಲ್ಲಿ ಅಭಿವ್ಯಕ್ತಿಸಬೇಕೆಂಬ ನಮ್ಮ ಆಸೆಯನ್ನು ಪೋಷಣೆ ಮಾಡಿದವರು ಎಚ್ಚೆಸ್ಕೆ. ೧೯೮೦ ರಲ್ಲಿ ಸಮನ್ವಯ ಸಮಿತಿ ಪ್ರಕಾಶಿಸಲು ಆರಂಭಿಸಿದ ಬ್ಯಾಂಕಿಂಗ್ ಪ್ರಪಂಚ ಅರ್ಧವಾರ್ಷಿಕ, ನಂತರ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಬ್ಯಾಂಕನ್ನಡ ವಾಙ್ಮಯಕ್ಕೆ , ಹಣ ಮತ್ತು ಬ್ಯಾಂಕಿಂಗ್ ಶಾಸ್ತ್ರ ಕ್ಕೆ ಅಪಾರ ಕೊಡುಗೆಯನ್ನು ನೀಡಿದರು. ಹೊರಗಿನ ಲೇಖಕರ ಮೇಲೆ ಬ್ಯಾಂಕಿಂಗ್ ಪ್ರಪಂಚ ಅಲಂಬಿತವಾಬಾರದು ಎಂದು ಕನ್ನಡದಲ್ಲಿ ಬ್ಯಾಂಕಿಂಗ್ ಬರಹಗಾರರ ಪಡೆಯನ್ನು ನಿರ್ಮಾಣ ಮಾಡಲು ಸಮನ್ವಯ ಸಮಿತಿಯು  ಪ್ರತಿ ಆರು ತಿಂಗಳಿಗೊಮ್ಮೆ ಸಂಘಟಿಸಿದ ೨೭ ಬ್ಯಾಂಕಿಂಗ್ ಕಮ್ಮಟ ಗಳ ನಿರ್ದೇಶಕರಾಗಿ ಕನ್ನಡ ಕಟ್ಟಿದರು . ೧೯೮೫ ರಲ್ಲಿ  ಅವರ ಸಂಪಾದಕತ್ವದಲ್ಲಿ ಬ್ಯಾಂಕಿಂಗ್ ನಿಘಂಟು ಅನ್ನು ಬಿಡುಗಡೆ ಮಾಡಲಾಯಿತು. ಹಲವಾರು ವಿಚಾರ ಸಂಕಿರಣಗಳು, ಭಾಷಣಗಳು, ಬ್ಯಾಂಕಿಂಗ್ ಪ್ರತಿಷ್ಠಾನ, ಪ್ರಕಟಣೆಗಳು ಎಲ್ಲವೂ ಅವರ ನಿರ್ದೇಶನದಲ್ಲಿ ನಡೆಯಿತು. ಕನ್ನಡ, ಬ್ಯಾಂಕಿಂಗ್, ಬದುಕು, ಸೃಜನಾತ್ಮಕ ಬರಹ, ಸಂಘಟನೆ,  ಮಾತುಗಾರಿಕೆ ಎಲ್ಲದರಲ್ಲೂ ಎಚ್ಚೆಸ್ಕೆ ನಮ್ಮನ್ನು ಪಳಗಿಸಿದರು. ಈಗ ಸಮನ್ವಯ ಸಮಿತಿಯ ಕಾರ್ಯಕರ್ತರಿಂದ ನಡೆಯುತ್ತಿರುವ ಸಾಹಿತ್ಯ ದಾಸೋಹ ,” ಸಮನ್ವಯ ಸಮಿತಿ# ಕನ್ನಡವೇ ಸತ್ಯ  ವಾಟ್ಸಪ್ ವೇದಿಕೆಗಳಿಗೆ ಶ್ರೀ ಎಚ್ಚೆಸ್ಕೆ ಅವರೇ ಸ್ಪೂರ್ತಿ. ೨೦೧೬ ರಿಂದ ವೇದಿಕೆಯ ಮೂಲಕ ಸಮನ್ವಯ ಸಮಿತಿಯು ಎಚ್ಚೆಸ್ಕೆ ಬೆಳಕು ಎಂಬ ಒಂದು ದಿನದ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಬ್ಯಾಂಕಿಂಗ್, ಸಾಹಿತ್ಯ ಮತ್ತು ಸಂಸ್ಕೃತಿಗಳ ರಸದೌತಣವದು. ೨೦೨೦ ರ ಎಚ್ಚೆಸ್ಕೆ ಬೆಳಕು ಕಾರ್ಯಕ್ರಮವನ್ನು ಫೆಬ್ರುವರಿ ೧೬ ರಂದು ಆಯೋಜಿಸಲಾಗಿದೆ. ಬೆಳಗ್ಗೆ ೧೦.೩೦ ರಿಂದ ಸಂಜೆ ೫.೦೦ ಗಂಟೆಯವರೆಗೆ. ಕಾರ್ಯಕ್ರಮ ದಲ್ಲಿ ಮುಖ್ಯವಾಗಿ ನಾಲ್ಕು‌ಗೋಷ್ಠಿಗಳು ಇರುತ್ತದೆ. ಸಾಹಿತ್ಯ, ಬ್ಯಾಂಕಿಂಗ್ , ಸಾಂಸ್ಕೃತಿಕ ಮತ್ತು ಕವಿಗೋಷ್ಠಿ. ಕವಿಗೋಷ್ಠಿಯು ಫೆ ೧೬ ರ ಮಧ್ಯಾನ್ಹ ೩ ಗಂಟೆಗೆ ಇರುತ್ತದೆ. ‘ಎಚ್ಚೆಸ್ಕೆ ಬೆಳಕು’ ಕಾರ್ಯಕ್ರಮದ ಕವಿಗೋಷ್ಠಿ ಯ ಅಧ್ಯಕ್ಷತೆಯನ್ನು ಡಾ. ಗೋವಿಂದ ಹೆಗಡೆ ಇವರು ವಹಿಸಲಿದ್ದಾರೆ ಎಂದು ಸಂಚಾಲಕ ಬೆಂ ಶ್ರೀ ರವೀಂದ್ರ ತಿಳಿಸಿದ್ದಾರೆ.) ***************

ಅನುವಾದ ಸಂಗಾತಿ

ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್‌.. ಇಂಗ್ಲಿಷ್ ಮೂಲ : ವಿಲಿಯಂ ಶೇಕ್ಸ್‌ಪಿಯರ್‌ ಅನುವಾದ : ಚಂದ್ರಪ್ರಭಾ ಪ್ರೀತಿ..ಪ್ರೇಮ..ಶೇಕ್ಸ್‌ಪಿಯರ್‌…   ಕೆಲವು ಸಂಗತಿಗಳೇ ಹಾಗೆ. ಭಾವಕ್ಕೆ ನಿಲುಕಿದಂತೆ ಭಾಷೆಗೆ ನಿಲುಕುವುದೇ ಇಲ್ಲ. ಅದನೆಲ್ಲ ನೀವು ಆಸ್ವಾದಿಸಬಲ್ಲಿರಿ ಆದರೆ ಬಣ್ಣಿಸಲಾರಿರಿ. ಅಂಥ ಒಂದು ಸಂಗತಿ ಪ್ರೀತಿ. ಈ ಸೃಷ್ಟಿಯ ಸಕಲವನ್ನೂ ಒಂದೆಳೆಯಲ್ಲಿ ಬಂಧಿಸಿಟ್ಟಿರುವುದು ಪ್ರೀತಿಯೊಂದೇ.‌ ಬಳ್ಳಿಗೆ ಆಸರೆಯಾದ ಮರ.. ದುಂಬಿಗೆ ಮಕರಂದವನೀವ ಹೂವು.. ಎದೆಯಮೃತ ಉಣಿಸಿ ಜೀವನವನ್ನೇ ಧಾರೆಯೆರೆವ ತಾಯಿ.. ಬೆರಳು ಹಿಡಿದು ನಡೆಯಿಸಿ ನಡಿಗೆ ಕಲಿಸುವ ಅಪ್ಪ.. ದಣಿವಿಗೆ ಆಸರೆಯಾಗುವ ಇರುಳು.. ದುಡಿಮೆಗೆ ಮುನ್ನುಡಿ ಬರೆವ ಹಗಲು.. ಓಡೋಡಿ ಬಂದ ನದಿಗೆ ಒಡಲಾಗುವ ಕಡಲು.. ಕಾರ್ಮುಗಿಲ ಅಂಚಿನಲ್ಲೂ ಹೊಳೆವ ಬೆಳ್ಳಿ ಗೆರೆ.. ಗಗನ,ತಾರೆ,ಚಂದ್ರ,ಚಂದ್ರಿಕೆ.. ಅಳು, ನಗು, ಒಲವು,ಚೆಲುವು, ರಾಗ ದ್ವೇಷ… ಎಲ್ಲದರಾಚೆ ನಿಂತು ಮುಗುಳ್ನಗುವ ಅನಂತ ಒರತೆ ಪ್ರೀತಿ. ಪ್ರೀತಿ ಬೀಜ.. ದ್ವೇಷ ಕಳೆ ಕಸ. ಬೆಳೆಯುವಾಗ ಬಿರಬಿರನೆ ಬೆಳೆದು ಬಿಡುವಾಗಲೂ ಹಸಿವೆಗೆ ಅನ್ನವಾಗುವುದು ಬೀಜ ಮಾತ್ರ. ಈ ಪ್ರೀತಿಯ ಕುರಿತು ವ್ಯಾಖ್ಯಾನ ಬರೆದವರು ಅದೆಷ್ಟೋ ಜನ. ಆದರೆ ಇಂಗ್ಲಿಷ್ ಸಾಹಿತ್ಯದ ಮೇರು ಎನಿಸಿದ ಶೇಕ್ಸ್‌ಪಿಯರ್‌ ತನ್ನ ಸಾನೆಟ್ಟುಗಳಲ್ಲಿ ಪ್ರೀತಿಯ ಕುರಿತು ಹೇಳುವ ಖಚಿತ ಮಾತು ಎಲ್ಲ ಕಾಲದಲ್ಲೂ ಎಲ್ಲರಿಗೂ ಆಪ್ಯಾಯಮಾನವೆನಿಸಿವೆ. ತನ್ನ ಬಹುತೇಕ ಸಾನೆಟ್ಟುಗಳಲ್ಲಿ ಆತ ಪ್ರೀತಿಯ ಚಿರಂತನತೆ, ಘನತೆ, ಹಿರಿಮೆಯನ್ನು ಕುರಿತು ಬಣ್ಣಿಸುವನಾದರೂ ೧೧೬, ೧೩೦, ೧೪೭ ನೇ ಸಾನೆಟ್ಟುಗಳಲ್ಲಿ ಈ ಭಾವ ಹರಳುಗಟ್ಟಿ ನಿಂತಂತೆ ತೋರುತ್ತದೆ. ಕಾಲವನ್ನೂ ಮೀರಿದ ಅಮರತ್ವದ ಅಸ್ಮಿತೆಯನ್ನು ಕವಿ ಇಲ್ಲಿ ಪ್ರೀತಿಗೆ ಕೊಡುವುದನ್ನು ಓದಿ ಅನುಭವಿಸಿ ಆನಂದಿಸುವುದೇ ಸೊಗಸು. ಕಾಲವನ್ನು ಮೀರುವುದು ಮಾತ್ರವಲ್ಲ ಕಾಲದ ಪರಿಣಾಮಕ್ಕೆ ಅಧೀನವಾಗುವ ಚೆಲುವು, ತಾರುಣ್ಯಗಳಂಥ ಕ್ಷಣಿಕತೆಯನ್ನು ಮೀರಿದ ಅಂತರಂಗದ ನೈಜ ಪ್ರಭೆಯನ್ನಾಗಿ ಕವಿ ಪ್ರೀತಿಯನ್ನು ನಿರೂಪಿಸುವುದು ಆ ಕುರಿತು ಆತನಿನನ್ನ ವ ವಿಶಾಲ, ಸುಸ್ಪಷ್ಟ, ನಿಖರ ನಿಲುವಿನ ದ್ಯೋತಕವಾಗಿ ಕಂಡು ಬರುತ್ತದೆ. ತೆರೆದ ಮನಸ್ಸಿನ ಇಂಥ ವಸ್ತುನಿಷ್ಠ ನಿರೀಕ್ಷಣೆಗಳೇ ಆತನನ್ನು ಆರಾಧಿಸುವಂತೆ ಪ್ರೇರೇಪಿಸುತ್ತವೆ. ೧೧೬ ನೇ ಸಾನೆಟ್ಟಿನ ಕೆಲ ಸಾಲುಗಳಂತೂ ಗಾದೆ ಮಾತಿನಂತೆ ಬಳಕೆಯಾಗುವುದಿದೆ. ಶೇಕ್ಸ್‌ಪಿಯರ್‌ ನನ್ನು ಅನುವಾದಿಸಲು ತೊಡಗುವುದು ಹುಡುಗಾಟವಲ್ಲ.. ಆದರೂ ಒಂದು ಪ್ರಯತ್ನವಾಗಿ ಈ ನನ್ನ ಅನುವಾದ.. ಸುನೀತ-116 ನಿಜವಾದ ಹೃದಯಗಳ ಮಿಲನದಲ್ಲಿ ಅಡೆತಡೆ ನುಸುಳುವುದನ್ನು ನಾನು ನಿರಾಕರಿಸುತ್ತೇನೆ ಹೊರಳುವ ಹೊತ್ತಿನೊಂದಿಗೆ ಬಣ್ಣ ಬದಲಿಸುತ್ತ ಸಾಗಿದ್ದು ಉಳಿ ತಾಕಿದೊಡನೆ ಬಾಗಿದ್ದು ಪ್ರೀತಿಯೇ ಅಲ್ಲ; ಹೌದು, ಅದೊಂದು ಶಾಶ್ವತ ಗುರುತು ಮತ್ತದು ಅಚಲವಾಗಿ ನಿಂತು ಬಿರುಗಾಳಿಯನ್ನೂ ದಿಟ್ಟಿಸುವುದು ದಿಕ್ಕೆಟ್ಟ ದೋಣಿಗಳಿಗೆ ದಿಕ್ಕು ತೋರಿದುವ ದೀಪಸ್ತಂಭವದು ಅದರ ಮೌಲ್ಯವನ್ನು ಅಳೆಯಲಾಗದು ನಿಜ ಆದರೆ, ಖಂಡಿತ ಸಾಧ್ಯವಿದೆ ಆ ಎತ್ತರವನ್ನು ತಲುಪುವುದು ಗುಲಾಬಿ ಕೆನ್ನೆ ಹವಳದ ತುಟಿ ಕಾಲನ ಕುಡುಗೋಲ ಪರಿಧಿಗೆ ಸಿಲುಕುವುದು ನಿಶ್ಚಿತ ಆದರೆ ಕಾಲ ಹೊಸಕಬಹುದಾದ ಹೂವಲ್ಲ ಪ್ರೀತಿ ನನ್ನ ಈ ನಿಲುವು ನಿಮಗೆ ಮಿಥ್ಯೆ ಎಂದು ತೋರಿದರೆ ಈ ಸಾಲುಗಳ ನಾ ಬರೆಯುತ್ತಲೂ ಇರಲಿಲ್ಲ, ಮನುಷ್ಯನೆಂದೂ ಪ್ರೀತಿ ಮಾಡುವ ಸಾಹಸಕ್ಕೆ ಇಳಿಯುತ್ತಲೂ ಇರಲಿಲ್ಲ *************

ವ್ಯಾಲಂಟೈನ್ಸ್ ಡೇ ವಿಶೇಷ

ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ. ಪ್ರಮಿಳಾ ಎಸ್.ಪಿ. ಈಗ್ಗೆ ಹನ್ನೆರೆಡು ವರ್ಷಗಳ ಕೆಳಗೆ ಕಾಲೇಜಿನ ಗೆಳತಿಯರೆಲ್ಲ ಗುಂಪು ಸೇರಿ ಒಂದು ತೀರ್ಮಾನ ಕ್ಕೆ ಬಂದರು.ಯಾರಿಗೆಲ್ಲಾ ಪ್ರೇಮಿ ಇದ್ದಾನೋ ಅವರು ಹಸಿರು ಬಟ್ಟೆ ತೊಡುವುದು…ಯಾರಿಗೆ ಪ್ರಿಯತಮ ಇಲ್ಲವೋ ಅವರು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬರುವುದು ಎಂದು.ನಾಳೆ ಪ್ರೇಮಿಗಳ ದಿನ ಹೀಗೆ ಆಚರಿಸೋಣ ಎಂದರು.ಹಳ್ಳಿ ಹುಡುಗಿ ನಾನು.ಅದರ ಕಲ್ಪನೆ ಇಲ್ಲದ ನಾನು ಕೆಂಪು ಬಟ್ಟೆ ಧರಿಸಿ ಕಾಲೇಜಿಗೆ ಬಂದೆ.ಇಡೀ ದಿನ ಹಾಡು ಆಟ ಪಾಠ ಮುಗಿಸಿ ಹೊರ ಬರುವ ವೇಳೆಗೆ ಎದುರಿಗಿದ್ದ ಕಾರ್ ಶೋ ರೂಮಿನ ಯುವಕ ಕೈ ನೀಡಿ ಕೆಂಪು ಗುಲಾಬಿ ಚಾಚಿದ. ನಗುತ್ತಾ ತೆಗೆದುಕೊಂಡೆ.ಗುಲಾಬಿ ಸ್ವೀಕರಿಸಿ ದರೆ ಅವನ ಪ್ರೀತಿಯನ್ನು ಸ್ವೀಕರಿಸಿದಂತೆ ಎಂಬ ಕನಿಷ್ಠ ಆಲೋಚನೆ ನನಗೆ ಬರಲಿಲ್ಲ. ಕೆಂಪು ಗುಲಾಬಿಯ ಇವನೊಂದಿಗೆ ಮಾತು,ಸ್ನೇಹ,ಪ್ರೇಮ ,ಸುತ್ತಾಟ ಪ್ರಾರಂಭವಾಯಿತು.ಜಗತ್ತಿನ ಕಣ್ಣಿಗೆ ನಾವು ಕಾಣಿಸಿದರೂ ನಮ್ಮ ಕಣ್ಣಿಗೆ ಜಗತ್ತು ಕಾಣಲಿಲ್ಲ. ಅಪ್ಪನ ಸಾವಿನಿಂದಾಗಿ ಅಮ್ಮ ಸಂಸಾರದ ನೊಗ ಹೊತ್ತಿದ್ದಳು.ಇಬ್ಬರು ಅಕ್ಕಂದಿರ ಮದುವೆ ಮುಗಿದಿತ್ತು.ಅಕ್ಕ ಭಾವ ಸೇರಿ ಬೇರೆ ಕಡೆಗೆ ನನ್ನ ಮದುವೆ ಒಪ್ಪಂದ ಮಾಡಿಕೊಂಡರು.ನಾನು ಇವನೇ ಪ್ರೇಮ…ಪ್ರೇಮವೇ ಇವನು ಎಂದು ಭಾವಿಸಿ ಈಗ್ಗೆ ಹನ್ನೊಂದು ವರ್ಷದ ಕೆಳಗೆ “ಪ್ರೇಮಿಗಳ ದಿನ”ವೇ ಉಟ್ಟ ಬಟ್ಟೆಯಲ್ಲಿ ಹೊರಟು ಬಂದೆ.ಅಂದಿಗೆ ಅಮ್ಮನ ಮತ್ತು ಅಮ್ಮನ ಕಡೆಯ ಎಲ್ಲರೂ ಹರಿದ ಚಪ್ಪಲಿ ಎಸೆದಂತೆ ಮನಸ್ಸಿನಿಂದ ತೆಗೆದುಬಿಟ್ಟರು. ಇವನ ನಂಬಿ ಹಿಂದೆ ಬಂದೆ.ಕಾಫಿ ತೋಟದ ಬೆಟ್ಟದ ಮೇಲೊಂದು ಒಂಟಿಯಾದ ಪುಟ್ಟ ಮನೆ.ಮುಖ್ಯ ರಸ್ತೆಗೆ ಐದು ಕಿಲೋಮೀಟರ್ ದೂರ.ಅಕ್ಕ ಪಕ್ಕದಲ್ಲಿ ಮನೆಗಳ ಸುಳಿವೂ ಇಲ್ಲ.ಅತ್ತೆ ಮಾವ ಅತ್ತಿಗೆ ಮನೆ ತುಂಬಿಸಿಕೊಂಡರು.ಇವನ ಹೆಜ್ಜೆಗೆ ಗೆಜ್ಜೆಯ ನಾದವಾದೆ. ಉಸಿರಿಗೆ ದ್ವನಿಯಾದೆ.ನನ್ನೊಳಗೆ ನಾನೇ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದೆ.ಹೊಸತನ… ಹೊಸಬಾಳು ಖುಷಿ ನೀಡಿತು.ಎರೆಡು ಮುದ್ದಾದ ಗಂಡು ಮಕ್ಕಳು ಹುಟ್ಟಿದವು.ತಾಯ್ತನ ತೃಪ್ತಿ ತಂದಿತ್ತು. ದಿನ ಕಳೆದಂತೆ ಅತ್ತೆ ಅತ್ತಿಗೆ ನಾನು ಕಾರಣ ಎಂದು ತೋರಿಸುತ್ತಾ ಕುಡಿಯಲು ಶುರುವಿಟ್ಟು ಕೊಂಡ.ಸಿಗರೇಟು ಹೊಗೆ ಆವರಿಸಿತು.ಕುಟುಂಬ ಕಲಹ ಹೆಚ್ಚಾಗಿ… ನನ್ನ ಬೆನ್ನು ಬಾಸುಂಡೆಗಳಿಗೆ ಜಾಗ ನೀಡಿತು.ತಲೆ ಕೂದಲು ತೆಳ್ಳಗಾದವು.ಕೆನ್ನೆಗಳ ಮೇಲೆ ಕಪ್ಪು ಮಚ್ಚೆಗಳು ದೊಡ್ಡವಾದವು.ಈಗ ನನ್ನ ಪಾಲಿಗೆ ಜಗತ್ತು ಕತ್ತಲಾಯಿತು. ಕಾಡಿನ ಹಸಿರು ಬೇಡವಾಯಿತು.ದಿನೇ ದಿನೇ ಹಕ್ಕಿಗಳ ಹಾಡು ಬೋರೆನಿಸಿತು. ಕುಡಿದವನು ವಾಪಸ್ಸು ಮನೆಗೆ ಬರುವುದನ್ನು ಮರೆತುಹೋದ.ನಾನು ಒಂಟಿಯಾದೆ.ಅತ್ತೆ ಅತ್ತಿಗೆ ಮಾವ ಸೇರಿ ನನ್ನನ್ನು ಇಲ್ಲಿಂದಲೂ ಎಸೆದರು. ಈಗ ನಾನು ಬೀಳುವುದಾದರೂ ಎಲ್ಲಿಗೆ…? ಎರೆಡು ಮಕ್ಕಳನ್ನು ಏನು ಮಾಡಲಿ…? ಉದ್ಯೋಗ ಕ್ಕೆ ಎಲ್ಲಿಗೆ ಹೋಗಲಿ…? ಅರ್ಧಕ್ಕೆ ನಿಂತ ಓದಿಗೆ ಯಾವ ಕೆಲಸ ಸಿಕ್ಕೀತು…? ನನ್ನ ಪಾಲಿಗೆ ಯಾರಿದ್ದಾರೆ…? ಯಾರ ಪ್ರೇಮಕ್ಕೆ ನಾನು ಕಾಯಲಿ..? ಮುದ್ದಾದ ಮಕ್ಕಳನ್ನು ಅವನ ಮನೆಯಲ್ಲೇ ಬಿಟ್ಟು ದೂರ ಹೊರಟು ಬಂದು ಹಾಸ್ಟೆಲ್ ಸೇರಿದ್ದೇನೆ.ಗಾರ್ಮೆಂಟ್ಸ್ ಗೆ ಕಾಲಿಟ್ಟು ಕೆಲಸ ಮಾಡಲು ನಿಂತಿದ್ದೇನೆ. ರಾತ್ರಿಗೂ…ಹಗಲಿಗೂ ವ್ಯತ್ಯಾಸ ಇಲ್ಲವಾಗಿದೆ.ಇವನ ಪ್ರೇಮವೂ ಇಲ್ಲ.ಮಕ್ಕಳಿಗೆ ವಾತ್ಸಲ್ಯ ನೀಡಲೂ ಆಗುತ್ತಿಲ್ಲ. ಅಮ್ಮನ ಮನೆಯ ಮೆಟ್ಟಿಲೂ ತುಳಿಯಲಾಗುತ್ತಿಲ್ಲ. ಹಾಸ್ಟೆಲ್ ಹಾಸಿಗೆಯ ಮೇಲೆ ಜೀವಂತ ಶವದಂತೆ ಮಲಗಿದ್ದೇನೆ. ನಾಳೆ ಮತ್ತೊಂದು “ಪ್ರೇಮಿಗಳ ದಿನ” ಬಂದು ನಿಂತಿದೆ.ಹಸಿರು ಬಟ್ಟೆ,ಕೆಂಪು ಗುಲಾಬಿ ಕಾಣದಷ್ಟು ನೀರು ತುಂಬಿದೆ ನನ್ನ ಕಣ್ಣಿನೊಳಗೆ.ಕನಸಿನ ಮೂಟೆಗೆ ನೋವಿನ ದಾರ ಬಿಗಿದು ಆ ಮೂಟೆಯ ಮೇಲೆ ನಿಂತು ಹೇಳಲೇ…. “ವಿಶ್ ಯೂ ಹ್ಯಾಪಿ ವ್ಯಾಲೆಂಟೈನ್ಸ್ ಡೇ”…ಎಂದು…!!? *************************

ವ್ಯಾಲಂಟೈನ್ಸ್ ಡೇ ವಿಶೇಷ

ವ್ಯಾಲಂಟೈನ್ಸ್ ಡೇ ಗಝಲ್ ಎ.ಹೇಮಗಂಗಾ ಗಝಲ್ ಬೆಳದಿಂಗಳ ರಾತ್ರಿಯೊಂದನು ನಿನ್ನ ಜೊತೆಯಲಿ ಕಳೆಯಬೇಕಿದೆ ತಿಂಗಳ ತಿಳಿಬೆಳಕ ತಂಪಲಿ ಹರವಾದ ನಿನ್ನೆದೆಗೆ ಒರಗಬೇಕಿದೆ ಕಣ್ಣ ಸನ್ನೆಯಲೇ ಪ್ರೀತಿ ನಿವೇದಿಸಿ ಒಲಿಸಿ ಒಲಿದು ನಲಿವ ತಂದೆ ಸಂವೇದಿಸುವ ನಿನ್ನೆದುರು ಹೂತ ಭಾವಗಳ ತೆರೆದು ಇಡಬೇಕಿದೆ ಒಡ್ಡನ್ನೊಂದನು ಕಟ್ಟಿದ್ದೇನೆ ಅಂತರಾಳದ ನೂರು ನೋವ ತೊರೆಗೆ ಜಗದ ಜಂಜಡವನ್ನೆಲ್ಲಾ ನಿನ್ನ ತೋಳ್ಸೆರೆಯಲಿ ಮರೆಯಬೇಕಿದೆ ಬಲವೆಲ್ಲಿದೆ ತನುವಲಿ ವಿರಹಾಗ್ನಿ ಅಣುಅಣುವನೂ ಸುಡುತಿರಲು ? ಅಧರ ಮಧುಪಾನದಿ ಪ್ರಾಣಕೆ ತ್ರಾಣವನು ತುಂಬಿಕೊಳ್ಳಬೇಕಿದೆ ಬದುಕ ಹಾದಿಯಲಿ ನಿನ್ನೊಲವ ಹಸಿರೊಂದಿರೆ ನಿತ್ಯೋತ್ಸವವೆನಗೆ ಕಲ್ಲು ಮುಳ್ಳುಗಳ ಬದಿಗೊತ್ತಿ ಕೈಗೆ ಕೈ ಬೆಸೆದು ನಡೆಯಬೇಕಿದೆ ಮರಣ ಬರುವುದೇ ಆದರೆ ಬರಲಿಬಿಡು ನಿನ್ನ ಅಕ್ಕರೆ ಉಡಿಯಲಿ ‘ಕಾಲ ನನಗಾಗಿ ನಿಂತಲ್ಲೇ ನಿಲ್ಲಲೆಂ’ದು ದೈವದಿ ಪ್ರಾರ್ಥಿಸಬೇಕಿದೆ ತಿಳಿಯದು ‘ ಹೇಮ’ಳಿಗೆ ವಿಧಿಲಿಖಿತ ಏನೆಂದು ಭವಿತವ್ಯದಲಿ ಪ್ರೇಮ ಸಂಯೋಗದಿ ನಿನ್ನಲ್ಲೇ ಶಾಶ್ವತವಾಗಿ ಲೀನವಾಗಬೇಕಿದೆ *********

ಮಕ್ಕಳ ಕಥೆ

ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ. ವಿಜಯಶ್ರೀ ಹಾಲಾಡಿ ಬೆಳ್ಳಿಬೆಕ್ಕು ಮತ್ತು ಸಿ.ಸಿ ಕ್ಯಾಮರಾ……(ಮಕ್ಕಳ ಕತೆ) ಅವತ್ತು ಬೆಳಗ್ಗೆ ಚಳಿ. ಇಬ್ಬನಿ ಹನಿ ಕೂತ ನಾಚಿಕೆ ಮುಳ್ಳಿನ ಗಿಡ ಮತ್ತಷ್ಟು ನಾಚಿ ಮಣ್ಣ ಹೆಗಲಿಗೆ ತಲೆ ಇಟ್ಟಿತ್ತು. ಸುತ್ತ ಕಣ್ಣರಳಿಸಿ ನೋಡಿದ ಬೆಳ್ಳಿಬೆಕ್ಕು ಬಾಳೆಗಿಡದ ಬುಡದಲ್ಲಿ ಶ್ರದ್ಧೆಯಿಂದ ಗುಂಡಿ ತೋಡತೊಡಗಿತ್ತು. ನಿನ್ನೆ ಪುಟ್ಟ ಹೇಳುತ್ತಿದ್ದ ‘ಬೆಳ್ಳಿಯ ಬಾಲ ಟಿಶ್ಯೂ ಪೇಪರ್, ಸುಸ್ಸು ಮಾಡಿ ಅದರಲ್ಲೇ ಒರೆಸಿಕೊಳ್ಳೋದು.’ ಅಂತ! ಬೆಳ್ಳಿಗೆ ನಗು ಬಂತು. ಹಾಗೆ ಒಂದು ಹಾಡು ಗುನುಗತೊಡಗಿತು. ‘ಅದ್ಸರಿ ಪ್ರತಿ ದಿನ ನೋಡ್ತೀನಿ ಈ ಬಾಗಾಳು ಮರ ಬೆಳ್‌ಬೆಳಗ್ಗೆ ಒಂದಷ್ಟು ಹೂ ತಯಾರಿಸಿ ಎಸೆದಿರುತ್ತಲ್ಲ, ಏನು ಸೊಕ್ಕು ಅಂತೀನಿ’ !! ಬೆಳ್ಳಿಬೆಕ್ಕಿಗೆ ಒಬ್ಬೊಬ್ನೆ ಮಾತಾಡೋ ಚಟ! ‘ನಮ್ಮ ಪುಟ್ಟನ ಶಾಲೆಯಲ್ಲಿ ಸಿ.ಸಿ. ಕ್ಯಾಮರಾ ಅಂತೆ.. ಕಥೆ ಪಡ್ಚ ಆಯ್ತು. ಆ ಕ್ಯಾಮರಾದಡಿ ಓದುವುದು ಹೇಗಪ್ಪ, ಹರಟೆ ಹೊಡೆಯುವುದು ಹೇಗೆ, ಹುಣಸೇಬೀಜ ತಿನ್ನೋದು ಹೇಗೆ, ಕದ್ದು ಆಡೋವಾಗ ಕ್ಯಾಮರಾ ಆಫ್ ಮಾಡ್ತಾನಾ ಹೇಗೆ, ” ” “’ ನಗು ಬಂದು ಉರುಳಿ ಉರುಳಿ ನಕ್ಕು ಬಿಟ್ಟಿತ್ತು.‘ಹೂ ಗುಂಡಿ ಸರಿ ಹೋಗಿಲ್ಲ ಇನ್ನು’ ತನ್ನ ತಲೆಗೆ ತಾನೇ ಹೊಡೆದುಕೊಂಡು ಮಿದು ಪಂಜದಲ್ಲಿ ಮಣ್ಣು ಹೊರ ಹಾಕತೊಡಗಿತು. ‘ಹೂಂ ಬೆಳ್ಳಿ ಶಹಭಾಷ್ ಈಗ ಸರಿ ಹೋಯ್ತು’ ಪಟಪಟ ಬಾಲ ಬಡಿದು ಗುಂಡಿ ಮೇಲೆ ಕೂರಬೇಕೆನ್ನುವಾಗ..‘ಇದೆಂತದಪ್ಪ ಆ ಹಲಸಿನ ಮರದ ಮೇಲೆ?’ ಥಟ್ಟ ಎದ್ದು ಹಲಸಿನ ಮರದ ಕಡೆಗೆ ನೆಗೆಯಿತು. ನೋಡುವುದೆಂತ !! ಅಲ್ಲೂ ಒಂದು ಸಿ.ಸಿ. ಕ್ಯಾಮರಾ! ‘ಹಾಂ ಇದೆಂತ ಕಥೆಯಪ್ಪ ಪುಟ್ಟನ ಅಪ್ಪ ಹಾಕಿಸಿದ್ದ ಅಂತ’. ಬೆಳ್ಳಿ ಮೂಗಿನ ಮೇಲೆ ಬೆರಳಿಟ್ಟು ಬಾಲದ ಮಣ್ಣನ್ನು ಕೊಡವಿತು. ‘ಅಯ್ಯೋ ಕ್ಯಾಮರಾ ನಾನು ತೋಡಿದ ಗುಂಡಿಯನ್ನೇ ನೋಡುತ್ತಿದೆ ಥೂ. ಕಕ್ಕ ಮಾಡೋದು ಹೇಗೆ ಈಗ?’ ಯೋಚಿಸುತ್ತಾ ಬೆಳ್ಳಿಗೆ ಸಿಟ್ಟು ಬಂದು ಬಿಳಿಯ ಮುಖ ಕೆಂಪಾಯಿತು.ಧಪಧಪ ಕಾಲು ಬಡಿಯುತ್ತಾ ಮನೆಯೊಳಗೆ ಓಡಿ ಕಂಪ್ಯೂಟರ್ ಹತ್ತಿ ಹೊದಿಕೆಯೊಳಗೆ ತಲೆ ಹಾಕಿ ಮಲಗಿತು. ‘ಎಲ್ಲರೂ ಕೇಳಿಸಿಕೊಳ್ಳಿ ಇನ್ನು ನಾಲ್ಕು ದಿನ ಕಕ್ಕ ಮಾಡೋಲ್ಲ, ಐದನೇ ದಿನ ಆ ಸಿ.ಸಿ. ಕ್ಯಾಮರಾ ಅಲ್ಲಿಂದ ಹೋದರೆ ಸರಿ ಇಲ್ಲಾ ಅಂದ್ರೆ ಅಷ್ಟೆ! ಪುಟ್ಟ ನನ್ನನ್ನು ಕಳಕೋಬೇಕಾಗುತ್ತೆ, ನಂಗೇನೂ ಬೇರೆ ಮನೆ ಸಿಗಲ್ವ..’ !?ತಿರುತಿರುಗಿ ಗೊಣಗಿತು. ಹೆದರಿಕೆ ಏನೀಗ ಜೋರಾಗೇ ಅರಚಿತು. ಪುಟ್ಟನ ಅಮ್ಮ ಬಂದು ‘ಈ ಬೆಕ್ಕಿಗೆ ಏನಾಯ್ತಪ್ಪ ಪೋಕಾಲ’ ಎಂದು ತಲೆಗೆ ಮೊಟಕಿದರು. ಬೆಳ್ಳಿ ಸುಯ್ಯನೆ ಬಾಲ ಮಡಚಿ ಚಳಿ ಚಳಿ ಎನ್ನುತ್ತ ನಿದ್ದೆಯ ನಾಟಕ ಮಾಡಹತ್ತಿತು!*****************************

ಅನುವಾದ ಸಂಗಾತಿ

ಅಂಚು ಮೂಲ: ಸಿಲ್ವಿಯಾ ಪ್ಲಾತ್(ಅಮೇರಿಕಾ) ಕನ್ನಡಕ್ಕೆ: ಕಮಲಾಕರ ಕಡವೆ “ಅಂಚು” ಪರಿಪೂರ್ಣಗೊಂಡಿರುವ ಹೆಣ್ಣು.ಅವಳ ಸತ್ತ ದೇಹ ಧರಿಸಿದೆ ಸಾಧನೆಯ ನಸುನಗುವ,ಗ್ರೀಕರ ಭ್ರಮೆಯೊಂದು ಹರಿದಿದೆ ಅವಳ ಮೇಲುಡಿಪಿನ ಪದರುಗಳಲ್ಲಿ.ಅವಳ ನಗ್ನ ಪಾದಗಳು ಹೇಳುವಂತಿದೆನಾವು ಇಷ್ಟು ದೂರ ಬಂದಿದ್ದೇವೆ, ಇನ್ನು ಮುಗಿಯಿತು. ಸತ್ತ ಪ್ರತಿ ಮಗುವನ್ನೂ ಸುತ್ತಿಟ್ಟುಕೊಂಡು, ಬಿಳಿ ಸರ್ಪದಂತೆ,ಒಂದೊಂದೂ ಈಗ ಖಾಲಿಯಾದ ಚಿಕ್ಕ ಹಾಲಿನ ಕೊಡಕ್ಕೆ ತಾಗಿ,ಅವಳು ಮಡಿಚಿ ಕೊಂಡಿದ್ದಾಳೆ ಅವರನ್ನು ತನ್ನ ದೇಹದೊಳಕ್ಕೆ, ಮುಚ್ಚಿಕೊಂಡ ಗುಲಾಬಿಯಪಕಳೆಗಳಂತೆ, ಸೆಟೆದುಕೊಂಡ ಹೂದೋಟದಲ್ಲಿ, ರಾತ್ರಿ ಹೂವಿನಆಳ ಗಂಟಲಿನಿಂದ ಸಿಹಿ ಕಂಪು ಸ್ರಾವಿಸಿದೆ. ತನ್ನ ಎಲುಬಿನ ಹೆಡೆಯಡಿಯಿಂದ ಬಿರುನೋಟ ಬೀರುತ್ತಚಂದ್ರನಿಗೆ ಇದರಲ್ಲಿ ದುಃಖ ಪಡುವಂತದೇನೂ ಕಾಣುತ್ತಿಲ್ಲ ಅವನಿಗೆ ಇವುಗಳೆಲ್ಲ ಗೊತ್ತಿದ್ದದ್ದೇಅವನ ಕಲೆಗಳು ಕಟಕಟಿಸಿ ಸೆಳೆಯುತ್ತವೆ. “EDGE” The woman is perfected.Her deadBody wears the smile of accomplishment,The illusion of a Greek necessityFlows in the scrolls of her toga,Her bareFeet seem to be saying:We have come so far, it is over.Each dead child coiled, a white serpent,One at each littlePitcher of milk, now empty.She has foldedThem back into her body as petalsOf a rose close when the gardenStiffens and odors bleedFrom the sweet, deep throats of the night flower.The moon has nothing to be sad about,Staring from her hood of bone.She is used to this sort of thing.Her blacks crackle and drag. *********

Back To Top