ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ಸಜೀವ ಡಾ.ಗೋವಿಂದ ಹೆಗಡೆ ಕವಿತೆ ನನ್ನ ಲೋಕಕ್ಕೆ ಬಂದಾಗಿನಿಂದ ಜೊತೆಗಿದೆ ಕಿಸೆಯ ಕನ್ನಡಕ ಪೆನ್ನು ಪರ್ಸುಗಳಂತೆ ನನ್ನದಾಗಿ ಅಷ್ಟೇ ಅಲ್ಲ ಎದೆಯ ಲಬ್ ಡಬ್ ಗಳಗುಂಟ ನಾಡಿಗಳಲ್ಲಿ ಹರಿದಿದೆ ಉಸಿರ ತಿದಿಯಲ್ಲಿ ಯಾತಾಯಾತ ಆಡಿದೆ ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ ನರಮಂಡಲದಲ್ಲಿ ಗ್ರಹಿಸಿ ಸ್ಪಂದಿಸಿ ನನ್ನ ಭಾಗವೇ ಬೇಲಿಸಾಲಿನ ಹೂಗಳಿಗೆ ಕೈ ಆಡಿಸಿ ನಕ್ಕು ಹಕ್ಕಿಗಳ ಪಕ್ಕ ಹಾರಿ ತಾರೆಗಳಿಗೆ ಕಣ್ಮಿಟುಕಿಸಿ ಅಲೆ-ದಂಡೆಗಳಗುಂಟ ಅಲೆದು ಮರುಳು ಮನೆ ಕಟ್ಟಿ ಕುಣಿದು ಮೈಪಡೆದ ಕವಿತೆ ಹಾಗಲ್ಲದೆ ಕವಿತೆ ಕವಿತೆ ಹೇಗೆ ನಾನು ಜೀವಂತ ಹೇಗೆ **********

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ಅರಳು ಹುರಿದಂತೆ ನುಡಿವವರೆದುರು ನಾನಾಗಿರುವೆ ಉಗ್ಗ ಅಣಕಿಸಿದರು ಅವರೆಲ್ಲ ನನ್ನನ್ನೀಗ ನಾನಾಗಿರುವೆ ಮೂಕ ಸ್ತುತಿ-ನಿಂದೆಗಳ ಮೀರಿ ಮುಂದೆ ಹೋಗಬೇಕು ಬದುಕಲು ಒಳದನಿಯ ಹೊರತೆಲ್ಲ ಸ್ವರಗಳಿಗೆ ನಾನಾಗಿರುವೆ ಬಧಿರ ಕತ್ತಲನ್ನೇ ಬೆಳೆದರು ಅವರು ನಡುವೆ ನೀನೊಂದು ಹಣತೆ ಒಳಿತಾಯಿತು ಜಡ ಜಂಜಡಗಳಿಗೆ ನಾನಾಗಿರುವೆ ಕುರುಡ ತಮ್ಮ ದಾರಿಯಲ್ಲೇ ಎಲ್ಲರೂ ಸಾಗಬೇಕೆಂಬ ವರಾತವೇಕೆ ದಾರಿ ಕಡಿಯುವೆ ನಾನೇ, ಉಳಿದಂತೆ ನಾನಾಗಿರುವೆ ಹೆಳವ ನನ್ನ ಕತ್ತಿನ ಪಟ್ಟಿ ಹಿಡಿದರೇನು ಒಲ್ಲದುದ ಮಾಡೆಂದು ‘ಜಂಗಮ’ ಸಾಕ್ಷಿ,ಅಹಿತವೆಸಗದಂತೆ ನಾನಾಗಿರುವೆ ಚೊಂಚ *********

ಕಾವ್ಯಯಾನ

ಗಝಲ್ ಶಂಕರಾನಂದ ಹೆಬ್ಬಾಳ ಬಡತನದ ಬವಣೆ ನೋವು ನಲಿವುಗಳಲಿ ಕಂಡೆ ಒಳಿತು ಕೆಡಕುಗಳ ನಿತ್ಯಸತ್ಯವ ಆಂತರ್ಯದಲಿ ಕಂಡೆ….!!! ಬಣ್ಣನೆಗೆ ನಿಲುಕದ ಮಾರ್ಮಿಕ ಕಟುಸತ್ಯಗಳ ಜೊತೆ ಜೀವಂತ ಹೆಣದಂತೆ ಬದುಕಿ ಇರುವವರಲಿ ಕಂಡೆ…!!! ಸೋತು ಸೊರಗಿ ಮೂಕವಾದ ಬದುಕಿನಲಿ ಸುಕ್ಕುಗಟ್ಟಿದ ಚರ್ಮ ಬತ್ತಿದ ಬೆವರಿನಲಿ ಕಂಡೆ…!!! ಹರಿದ ಚಿಂದಿ ಬಟ್ಟೆಗಳ ನಡುವೆ ನಾಳೆ ಶ್ರೀಮಂತನಾಗುವೆ ಎನ್ನುವ ಕನಸ ಹೊತ್ತುಕೊಂಡಿರುವ ಬಡವರಲಿ ಕಂಡೆ…!!! ಕೊನೆತನಕ ದುಡಿದರು ಬಡತನ ದೂರಾಗಲಿಲ್ಲ ಎಂಬ ಅಭಿನವನ ಮಾತು ಸುಳ್ಳಲ್ಲ ಎನ್ನುವರ ಮನದಲಿ ಕಂಡೆ…!!! ************

ಕಾವ್ಯಯಾನ

ನನ್ನೊಳಗೆ ನೀನಿರುವಾಗ… ಬಿದಲೋಟಿ ರಂಗನಾಥ್ ನನ್ನೊಳಗೆ ನೀನಿರುವಾಗ ಭಯದ ಬೆಂಕಿಯನ್ನು ಹಾರುವುದು ಕಷ್ಟವೇನಲ್ಲ ಸುಡುವ ನೆಲದ ತಂಪಿಗೆ ನೀನೆ ಬರೆದ ಪ್ರೇಮ ಪತ್ರವಿರುವಾಗ ಕಾಮನ ಬಿಲ್ಲು ಮಾತಾಡುವುದು ಕಷ್ಟವೇ ಅಲ್ಲ ಪರಿಷೆಯಲ್ಲು ಧ್ಯಾನ ನೇರಗೆರೆಯ ಮೇಲೆ ನಿಂತಿರುವಾಗ ಮನಸು ಯಾವ ಮೂಲೆಯಿಂದ ಪಲ್ಲಟಗೊಳ್ಳುವುದು ಹೇಳು ? ನಗುವ ಚಂದಿರನ ಮುದ್ದಿಸಿದ ನೀನು ಪ್ರೇಮದ ಹೂವಿನ ಸುಗಂಧವ ಮೂಸದೇ ಹೋದೆ ನಿನ್ನೊಳಗಿನ ದಾರಿಯ ಮೇಲೆ ಬೆಳೆದ ಮುಳ್ಳುಗಳು ಚುಚ್ಚುವಾಗ ಜಾತಿಯ ಬಣ್ಣಕೆ ಕಣ್ಣು ಮಂಜಾಗಿದ್ದು ಹೃದಯದ ಕಣಿವೆಗಳಲ್ಲಿ ಕಂದರ ತೋಡಿದ ನೀನು ನನ್ನೆಲ್ಲವನ್ನೂ ಬೀಳಿಸಿಯೇ ಹೋದೆ ನಡೆದ ಅಷ್ಟೂ ದೂರ ತಲೆಯೆತ್ತಿ ನಿಂತ ಭಾವ ಮುರುಟಿ ನೆಲ ನೋಡುವುದ ಕಂಡೆ ನಿನ್ನ ನಗುವಿನ ಅಲೆಗಳು ನನ್ನ ಹೃದಯವೆಂಬ ಸಾಗರದಲ್ಲಿ ಎದ್ದಿರುವಾಗ ನೆಲದ ಕಣ್ಣಲ್ಲಿ ನೀರಾದರೂ ಎಲ್ಲಿ ಬತ್ತೀತು ಹೇಳು. ನಿನ್ನದೇ ಚಿತ್ರ ಗಾಳಿಯಲ್ಲಿ ಬರೆದು ನೋಡುತ್ತಲೇ ಇರುವೆ ಅದು ಬಣ್ಣ ಬಣ್ಣದ ಕನಸುಗಳನ್ನು ಬಿಡಿಸುತ್ತಲೇ ಇದೆ. ***********************

ಕಾವ್ಯಯಾನ

ಅವರು ಒಪ್ಪುವುದಿಲ್ಲ. ! ವಿಜಯಶ್ರೀ ಹಾಲಾಡಿ ಕಾಫಿಯಲ್ಲಿ ಕಹಿ ಇರಬೇಕುಬದುಕಿನ ಹಾಗೆ ಮುತ್ತುಗದ ಹೂ ರಸಕುಡಿವ ಮಳೆಹಕ್ಕಿರೆಕ್ಕೆ ಸುಟ್ಟುಕೊಳ್ಳುತ್ತದೆ ಬೂದಿಯಾದ ದಿನಗಳಆಲಾಪಿಸುವ ಇರುಳಹಕ್ಕಿನಿರಾಳ ಕಂಡುಕೊಳ್ಳುತ್ತದೆ ದಟ್ಟ ನೋವು ಒಸರುವಅಂಟಿನ ಮರ ಯಾರಸಾಂತ್ವನಕ್ಕೂ ಕಾಯುವುದಿಲ್ಲ ಬೋರಲು ಬಿದ್ದ ಆಕಾಶಬುವಿಯ ಕಣ್ಣೀರಿಗೇನೂಕರಗಿದ್ದು ಕಂಡಿಲ್ಲ ನದಿಯಲ್ಲಿ ತೇಲಿಬಂದಹಸಿಮರ -ನಾಗರಿಕತೆಯಹೆಣವೆಂದು ಅವರು ಒಪ್ಪುವುದಿಲ್ಲ.  *********

ಕಾವ್ಯಯಾನ

ಸೂತಕ ಶಾಂತಾ ಜೆ ಅಳದಂಗಡಿ ಹುಚ್ಚು ತುರಗ ಈ ಮನ ದಿಕ್ಕೆಟ್ಟು ಓಡುತಿದೆ ಕಾಣಲು ಹೂ ಬನ ಪ್ರೀತಿ ಎಂದರೆ ನೀರ್ಗುಳ್ಳೆ ಒಲವ ನುಡಿಯಲಿರುವುದೆಲ್ಲ ಸುಳ್ಳೆ ಹೂವ ಮಧುವ ಹೀರುವ ವರೆಗು ಮೋಹದ ಮಾತುಗಳ ಬೆರಗು ದಾಹ ತೀರಿದಮೇಲೆ ನದಿಯ ಹಂಗಿಲ್ಲ ವಶವಾದನಂತರ ಅವಳು ನಲ್ಲೆಯಲ್ಲ ಪ್ರೇಮ ಸಾಯುತ್ತೆ ನರಳಿ ನರಳಿ ಬಾರದೆಂದಿಗೂ ಅದು ಮರಳಿ ಮರುದಿನವೂ ರವಿ ಉದಯಿಸುತ್ತಾನೆ ಹೊಂಗಿರಣಗಳ ಭುವಿಗೆಲ್ಲ ಚೆಲ್ಲುತ್ತಾನೆ ಸತ್ತಪ್ರೀತಿಯ ಸೂತಕ ಆನಂದಿಸಲಾಗದು ಸುಂದರ ಬೆಳಕ ಮೈ ಮರೆತರೆ ಒಂದು ಕ್ಷಣ ಬದುಕಾದೀತು ಜೀವಂತ ಹೆಣ *********

ಕಾವ್ಯಯಾನ

ನೀನೀಗ ಇದ್ದಿದ್ದರೆ ಚೈತ್ರಾ ಶಿವಯೋಗಿಮಠ “ನೀನೀಗ ಇದ್ದಿದ್ದರೆ” ಆ ಕಲ್ಪನೆಯೇ ಚಂದ ಬಹುಶಃ ಹೋಗುತ್ತಿದ್ದೆವು ಗಿರಿ-ಕಣಿವೆಗಳ ಮೇಲೆ ಹತ್ತಿಳಿಯಲು!, ಹೂವಿಂದ ಹೂವಿಗೆ ಹಾರುವ ಬಣ್ಣದ ಚಿಟ್ಟೆಗಳ ಹಿಡಿಯಲು, ಓಡುವ ನದಿಯ ಬೆನ್ನುಹತ್ತಲು, ಹಿಮ ಪರ್ವತಗಳ ಮೇಲೇರಿ ಹಿಮದ ಬೊಂಬೆಯ ಮಾಡಿ ನಲಿಯಲು.. ನೀನೀಗ ಇದ್ದಿದ್ದರೆ ಬಹುಶಃ ನನ್ನೆಲ್ಲ ಕ್ಷಣಗಳು ಅಪ್ಪನೆಂಬ ಮಂತ್ರ ಪಠಣವೇ! ಹೊಸ ಪುಸ್ತಕಗಳೋದುವ ನನ್ನ ನೆಚ್ಚಿನ ಸಹಪಾಠಿಯಾಗುತ್ತಿದ್ದೆ ಬಂದ ಹೊಸ ಸಿನಿಮಾಗಳ ನನ್ನ ಖಾಸಗಿ ವಿಮರ್ಶಕನಾಗುತ್ತಿದ್ದೆ! ಎಲ್ಲ ಪ್ರಚಲಿತ ವಿಷಯಗಳ ಮೆಚ್ಚಿನ ವಿಶ್ಲೇಷಕನಾಗುತ್ತಿದ್ದೆ! ನೀನೀಗ ಇದ್ದಿದ್ದರೆ ಬಹುಶಃ ಪ್ರತಿ ಸಂದೇಹಗಳಿಗೂ ನನ್ನ ನಡೆದಾಡುವ ಶಬ್ದಕೋಶ, ನುಡಿ ಕೋಶ, ಜ್ಞಾನ ಭಂಡಾರವೇ, ಗೂಗಲ್ ಗಿಂತ ಆಪ್ತ ಶೋಧಕ ನೀನೇ ಆಗಿರುತ್ತಿದ್ದೆ ಅಪ್ಪ! ನೀನೀಗ ಇದ್ದಿದ್ದರೆ ಬಹುಶಃ ನನ್ನ ಮಗುವಿಗೆ ಅತ್ಯುತ್ತಮ ಸ್ನೇಹಿತನಾಗಿರುತ್ತಿದ್ದೆ ಅದರೆಲ್ಲ ಆಟಪಾಠಗಳ ಅಚ್ಚುಮೆಚ್ಚಿನ ಸಹವರ್ತಿ ನೀನೇ ಆಗಿರುತ್ತಿದ್ದಿ ಅಪ್ಪ! ಅಮ್ಮನ ಪ್ರೀತಿಯ ಲಾಲನೆಯೊಂದಿಗೆ ನಿನ್ನ ವಾತ್ಸಲ್ಯದ ಪಾಲನೆ! ನೀನೀಗ ಇದ್ದಿದ್ದರೆ “ನೀನೀಗ ಇದ್ದಿದ್ದರೆ” ಎಂದು ಹೇಳುವ ಪ್ರಮೇಯವೇ ಇರುತ್ತಿರಲಿಲ್ಲ ಅಪ್ಪ!! ***********

ಕಾವ್ಯಯಾನ

ಮಕ್ಕಳಪದ್ಯ ಅಪ್ಪನೇ ಪ್ರೀತಿ ನಾಗರೇಖಾ ಗಾಂವಕರ ಅಪ್ಪನದೇಕೆ ಕಂಚಿನಕಂಠ ನಿನ್ನಂತಿಲ್ಲಲ್ಲಾ ಕಣ್ಣುಗಳಂತೂ ಕೆಂಡದ ಉಂಡೆ ನೋಡಲು ಆಗೊಲ್ಲ ಅಮ್ಮ ಪುಕ್ಕಲು ನಾನಲ್ಲ. ಆದರೂಅಮ್ಮ ಅಪ್ಪನೇ ಪ್ರೀತಿ ಎದೆಯೊಳಗೊಂದು ಮೀಟುವ ತಂತಿ ಕಾರಣ ಹೇಳಮ್ಮ ಕೈಗಳ ಹಿಡಿದು ವಠಾರ ನಡೆದು ನಡೆಯಲು ಕಲಿಸಿದನು ದಾರಿಯ ಮಧ್ಯೆ ಸಿಕ್ಕವರಲ್ಲಿ’ ಮಗಳೆಂದು ಹೊಗಳಿದನು ಬೈಕಲಿ ಕೂರಿಸಿ, ಮರಗಿಡ ತೋರಿಸಿ, ಮನವನು ತಣಿಸುವನು ಅಪ್ಪನು ನಿನಗಿಂತ ಪ್ರಿಯನವನು. ಆಗೀಗೊಮ್ಮೆ ಉಪ್ಪಿನಮೂಟೆ ಮಾಡುತ ಮುದ್ದಿಸುವ ಮರುಕ್ಷಣ ನನ್ನ ಹಠವನು ಕಂಡು ಕೋಲನು ತೋರಿಸುವ ಅಮ್ಮಾ, ಕೋಲನು ತೋರಿಸುವ ಆದರೂ ಅಮ್ಮ ಅಪ್ಪನೇ ಪ್ರೀತಿ ಅಂಗಡಿಯೊಳಗಣ ಜೀಲೇಬಿ ರೀತಿ ಸಿಹಿಸಿಹಿ ಮನದವನು ಸೊಗಸಿನ ಮೊಗದವನು ಕೇಳೆ ಅಮ್ಮ, ಮುದ್ದಿನ ಅಮ್ಮ ಅಪ್ಪನ ಕೂಡ ನೀನಿರಬೇಕು ನಿಮ್ಮಿಬ್ಬರ ನಡುವೆ ನಾನೀರಬೇಕು ನಿನ್ನ ದಮ್ಮಯ್ಯ. ನನ್ನ ಮುದ್ದು ಅಮ್ಮಯ್ಯ. ****************

ಗಝಲ್

ಗಝಲ್ ಸ್ಮಿತಾ ರಾಘವೇಂದ್ರ ನಟನೆಯೋ ನಿಜವೋ ನಂಟನ್ನು ಹುಸಿಯಾಗಿಸಬೇಡ ಬಳ್ಳಿಯ ಬೇರು ಚಿವುಟಿ ಚಿಗುರೆಲೆ ಹುಡುಕಬೇಡ ತುಪ್ಪದಂಥ ಒಲವಲ್ಲಿ ಉಪ್ಪು ಬೆರೆಸುವುದು ಸುಲಭ ಒಪ್ಪು ತಪ್ಪುಗಳ ಬರಿದೆ ಕೆದಕೆದಕಿ ಕೆಡಿಸಬೇಡ ಹೊಟ್ಟೆಯೊಳಗಿನ ಕಿಚ್ಚು ಉರಿದು ಸುಟ್ಟಿದೆ ಸೆರಗನ್ನು ಸಿಹಿ ಕೊಡುವ ನೆಪದಿ ಸವಿಯ ಸೂರೆ ಮಾಡಬೇಡ ಹಸಿರೆಲೆಯಾಗೇ ಬಹುದಿನ ಇರಲಾಗದು ನಿಜ ಹಣ್ಣಾಗುವ ಮೊದಲೇ ಹಿಸಿದು ಉದುರಿಸಬೇಡ ಹುತ್ತವ ಬಡಿಬಡಿದು ಹಾವು ಸಾಯಿಸುವ ಭ್ರಮೆಬೇಡ ಯಾವ ಹುತ್ತದಲಿ ಯಾವ ಹಾವೋ ಕೈಹಾಕಬೇಡ ಎಷ್ಟು ಅರಿತರೇನು ಸೋಗಿನ ಸ್ನೇಹಗಳ “ಸ್ಮಿತ”ವೇ ಪರಿವೆಯೇ ಇಲ್ಲದೇ ಕೈ ಕೊಡವಿ ನಡೆದಾಗ ಕೊರಗಬೇಡ *******************************************

ಲಹರಿ

ಇಂದು ಬಾನಿಗೆಲ್ಲ ಹಬ್ಬ ಚಂದ್ರಪ್ರಭ ಬಿ. ಇಂದು ಬಾನಿಗೆಲ್ಲ ಹಬ್ಬ… ಕಳೆದ ದಶಕದ ಸಿನಿಮಾ ಹಾಡೊಂದರ ಈ ಸಾಲು ಮುಂದುವರಿದಂತೆ ಗಾಳಿ ಗಂಧ, ಭೂಮಿ, ಪುಷ್ಪ ಕುಲ, ಸುಮ್ಮನಿರದ ಮನಸು, ಓಡುತಿರುವ ವಯಸು, ಉಸಿರಿಗೆ ಉಕ್ಕುವ ಎದೆ,ಮರಳು..ಕಡಲು..ಅಪ್ಪುವಲೆ – ಎಲ್ಲಕ್ಕೂ ಇಂದು ಹಬ್ಬ ಎಂದು ಬಣ್ಣಿಸುತ್ತದೆ. ತನ್ನ fast beat (ದೃತ್ ಲಯ) ನಿಂದಾಗಿ ಇಡೀ ಗೀತೆಯೇ ಕಿವಿಗೆ ಹಬ್ಬವಾಗುವ ವಿಶಿಷ್ಟ ಹಾಡು ಇದು. ಒಂದರ್ಥಲ್ಲಿ ಹೀಗೆ ಮನಸ್ಸು ಖುಷಿಯಿಂದ ಕುಪ್ಪಳಿಸಿ ತನ್ನಷ್ಟಕ್ಕೆ ತಾನೇ ಸಾಲೊಂದನ್ನು ಗುನುಗತೊಡಗುವ ಗಳಿಗೆಯೇ ಅವರವರ ಪಾಲಿನ ಹಬ್ಬ. ಇನ್ನು ಕಾಲಕಾಲಕ್ಕೆ ಆಗಮಿಸುವ ಹಬ್ಬಗಳದೂ ಒಂದು ಸೊಬಗು, ಸೊಗಸು. ಬಹುತ್ವ ಪ್ರಧಾನವಾಗಿರುವ ಭಾರತದ ನೆಲದಲ್ಲಿ ಹೆಜ್ಜೆ ಹೆಜ್ಜೆಗೆ ಭಾಷೆ, ವೇಷ, ಉಡುಪು,ಆಹಾರ – ಪದ್ಧತಿ ಇತ್ಯಾದಿ ಎಲ್ಲದರಲ್ಲಿ ಅಭೂತಪೂರ್ವ ಬದಲಾವಣೆ ಕಂಡು ಬರುತ್ತದೆ. ಅಂತೆಯೇ ಈ ನೆಲದ ಮಕ್ಕಳು ಆಚರಿಸುವ ಹಬ್ಬಗಳಲ್ಲೂ ವೈವಿಧ್ಯತೆಯದೇ ಕಾರುಬಾರು. ಬಹುತೇಕ ಹಬ್ಬಗಳು ಋತುಮಾನಕ್ಕೆ ಅನುಗುಣವಾಗಿ ಬರುವಂಥವುಗಳಾಗಿವೆ. ಬಿರು ಬಿಸಿಲ ಬೇಸಗೆ ಕರಗಿ ಮೋಡ ಮಳೆಯಾಗುವ ಹೊತ್ತಲ್ಲಿ ಆಗಮಿಸುವುದು ಶ್ರಾವಣ. ಅಂಬಿಕಾತನಯದತ್ತರ “ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಬಂತು ಕಾಡಿಗೆ…” ಗೀತೆಯನ್ನು ಕೇಳತೊಡಗಿದರೆ ಮುಗಿಲ ಸೆರೆಯಿಂದ ಮುಕ್ತವಾದ ಮಳೆ ಧಾರೆ ಧಾರೆಯಾಗಿ ಇಳೆಯನ್ನೆಲ್ಲ ತೋಯಿಸುತ್ತಿರುವಂತೆ ಭಾಸವಾಗುತ್ತದೆ. ವೈಶಾಖದ ಧಗೆಯಲ್ಲಿ ಬಿರುಕು ಬಿಟ್ಟ ಭುವಿ ವರ್ಷ ಧಾರೆಗೆ ಮೈತೆರೆದು ಬೆಟ್ಟ, ಬಯಲು,ನದಿ,ಕಣಿವೆ,ಗಿಡ ಮರ, ಪ್ರಾಣಿ ಪಕ್ಷಿ – ಎಲ್ಲವೆಂದರೆ ಎಲ್ಲರಿಗೂ ತೊಯ್ದು ತೊಪ್ಪೆಯಾಗುವ ಸಂಭ್ರಮ. ಹದಗೊಳಿಸಿದ ತನ್ನ ಭೂಮಿಯನ್ನು ಉತ್ತಿ ಬಿತ್ತಲು ಅಣಿಯಾಗುವ ರೈತ ಬಂಧು. ಸಾಲು ಸಾಲಾಗಿ ಬರುವ ಹಬ್ಬಗಳನ್ನು ಆಚರಿಸುವ ಸಡಗರದಲ್ಲಿ ಅವ್ವಂದಿರು.. ಗುಡಿ ಗುಂಡಾರಗಳಲ್ಲಿ ವಿಶೇಷ ಪೂಜೆ, ಅಲಂಕಾರ, ತೇರೆಳೆವ ಸಂಭ್ರಮ. ನಾಡಿಗೆ ದೊಡ್ಡದೆಂಬ ಹೆಗ್ಗಳಿಕೆಯ ನಾಗರ ಪಂಚಮಿ. ಜೀಕುವ ಜೋಕಾಲಿ, ಬಗೆ ಬಗೆಯ ಉಂಡಿ ತಂಬಿಟ್ಟು, ಹೋಳಿಗೆ. ಪಂಚಮಿಯನ್ನು ಹಿಂಬಾಲಿಸಿ ಬರುವ ಗಣೇಶ ಚತುರ್ಥಿ. ಅಬಾಲ ವೃದ್ಧರಾದಿ ಎಲ್ಲರಿಗೂ ಬೆನಕನನ್ನು ಅತಿಥಿಯಾಗಿ ಕರೆತಂದು ಕೂಡ್ರಿಸುವ, ಪೂಜಿಸುವ, ಮರಳಿ ಮತ್ತೆ ಕಳಿಸಿಕೊಡುವ ಸಂಭ್ರಮ. ಹೋಳಿಗೆ, ಕಡುಬು, ಮೋದಕಗಳ ಜತೆಗೆ ಪಟಾಕಿ ಸುಡುವ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಮೋದ ಪ್ರಮೋದ. ತಕ್ಕ ಮಟ್ಟಿಗೆ ಮಳೆ ಸುರಿದಿದ್ದಾದರೆ ರೈತನ ಮೊಗದಲ್ಲೂ ಒಂದು ಹೊಸ ಕಳೆ, ಭರವಸೆ. ಕಾಳು ಕಡಿ ತಕ್ಕೊಂಡು ಗೋಧಿ, ಜೋಳ ಬಿತ್ತಲು ಕಾಯುವ ಸಮಯದಲ್ಲಿ ನವರಾತ್ರಿ ಸಡಗರ. ದೇವಿ ಆರಾಧನೆ, ಪುರಾಣ ಪುಣ್ಯ ಕಥಾ ಶ್ರವಣ..ಮಹಾನವಮಿ, ವಿಜಯದಶಮಿ. ಗೋಧಿ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊತ್ತಲ್ಲಿ ಸಾಲು ದೀಪಗಳ ಹೊತ್ತು ತರುವ ದೀಪಾವಳಿ. ಶ್ರಾವಣದ ಮೋಡಗಳೆಲ್ಲ ಚದುರಿ ಕಾರ್ತೀಕದ ಬೆಳಕಿನ ಗೂಡುಗಳ ಹಾವಳಿ. ಹೊಸ ಬಟ್ಟೆ ಖರೀಸುವ, ಸುಣ್ಣ ಬಣ್ಣ ಬಳಿದು ಮನೆ ಸಿಂಗರಿಸುವ, ಬಗೆ ಬಗೆ ಭಕ್ಷ್ಯ ಭೋಜ್ಯ ತಯಾರಿಸುವ, ಆ ಪೂಜೆ ಈ ಪೂಜೆ, ಅಂಗಡಿಗಳ ಹೊಸ ಖಾತೆಯ ಲೆಕ್ಕ, ಮಿತ್ರರು, ಬಂಧುಗಳನ್ನು ಭೇಟಿ ಮಾಡುವ, ಆನಂದಿಸುವ ರಸ ಗಳಿಗೆ. ಗೌರಿ ಹುಣ್ಣಿಮೆ, ಎಳ್ಳಮಾವಾಸ್ಯೆ, ಸಂಕ್ರಾಂತಿಯ ಸುಗ್ಗಿ ವೈಭವ. ‌ಚರಗ ಚೆಲ್ಲುವ ವಿಶಿಷ್ಟ ಆಚರಣೆ. ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ರೈತ ಬಂಧುಗಳ ಅಪರೂಪದ ನಡೆ. ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಕಾರೆಳ್ಳು ಚಟ್ನಿ, ತರಾವರಿ ಪಲ್ಯಗಳನ್ನು ಬುತ್ತಿ ಕಟ್ಟಿಕೊಂಡು ಬೆಳೆಯ ನಡುವೆ ಕುಳಿತು ಉಣ್ಣುವ, ತೆನೆಗಟ್ಟಿದ ಕಾಳುಗಳನ್ನು ಸುಟ್ಟು ಸಿಹಿ ತೆನೆ ಸವಿಯುವ ಅನನ್ಯ ಕಾಲ. ಪ್ರಕೃತಿಯಲ್ಲೂ ಬದುಕಿನಲ್ಲೂ ಸಂಕ್ರಮಣವನ್ನು ಅರಸುವ ಮನುಜ ಸಹಜ ಹುಡುಕಾಟ. ಹಿಂಬಾಲಿಸುವ ತೆನೆ ಕಟ್ಟುವ ಹಬ್ಬ, ಕಾಮ ದಹನದ ಹೋಳೀ ಹುಣ್ಣಿಮೆ, ಪೂಜೆ ಉಪವಾಸದ ಶಿವರಾತ್ರಿ.. ಚೈತ್ರಾಗಮನ. ಎಲೆ ಉದುರಿ ಹೊಸ ಚಿಗುರು, ಮುಗುಳು ನಗುವಾಗ ಕೋಗಿಲೆಯ ಗಾನವೂ ಮಾವಿನ ಸವಿಯೂ ಬೆರೆತು ಹಿತವಾಗುವ ಬೇಸಗೆ. ಯುಗಾದಿಯ ಸಂದರ್ಭದಲ್ಲಿ ಬಾಳ್ವೆಯಲ್ಲಿ ಸಿಹಿ ಕಹಿ ಸಮ್ಮಿಲನದ ಸಂಕೇತವಾಗಿ ಬೇವು ಬೆಲ್ಲದ ಸವಿಯುಣ್ಣುವ ಸಡಗರ.‌ ಉರುಳುತ್ತ ಉರುಳುತ್ತ ಋತು ಚಕ್ರವೊಂದು ಪೂರ್ಣಗೊಂಡು ಮತ್ತೆ ಹೊಸ ನಿರೀಕ್ಷೆಗಳೊಂದಿಗೆ ಬದುಕಿನ ಬಂಡಿ ಎಳೆವ ಜೀವಗಳು. ಪ್ರತಿಯೊಂದು ಹಬ್ಬಕ್ಕೂ ಒಂದು ವೃತ್ತಾಂತ, ಕತೆಯ ಹಿನ್ನಲೆ, ಅಧ್ಯಾತ್ಮಿಕತೆಯ ಲೇಪನ. ಅದೆಂತೇ ಇರಲಿ. ಈ ಹಬ್ಬಗಳು ಇರಲೇಬೇಕೆ? ಕಾಸಿಗೆ ಕಾಸು ಕೂಡಿಸಿ ಸಾಲ ಮಾಡಿ ಹಬ್ಬ ಆಚರಿಸುವುದು ತರವೆ? ಇದ್ದವರದು ಒಂದು ಕತೆಯಾದರೆ ಇಲ್ಲದವರ ಪಾಡು ಏನು? ಇತ್ಯಾದಿ ಪ್ರಶ್ನೆ ಸಾಲು ಕಾಡುವುದು ನಿಜ. ಇರುವವರು ಇಲ್ಲದವರು, ಮಿತ್ರರು ಶತ್ರುಗಳು, ಬೇಕಾದವರು ಬೇಡದವರು – ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಕೊಟ್ಟು ತೆಗೆದುಕೊಂಡು ಜೀವನ ಸಹ್ಯವಾಗುವಂತೆ ಮಾಡುವ ಅವಕಾಶ ಒದಗಿಸುವುದು ಹಬ್ಬಗಳು. ತನ್ನಂತೆ ಪರರ ಬಗೆವ ಹೃದಯಗಳಿಗೆ ಕೈಯೆತ್ತಿ ಕೊಡಲು ಹಬ್ಬದ ನೆಪ ಬೇಕಿಲ್ಲ. ಆದರೆ ಪ್ರೇರಣೆಯಿರದೇ ಹಂಚಿಕೊಳ್ಳಲು ಒಪ್ಪದ ಜೀವಗಳಿಗೆ ಹಬ್ಬಗಳೇ ಬರಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ ಯಾವ ಆಯಾಮದಲ್ಲಿದ್ದರೂ ಬದುಕಿನ ಏಕತಾನತೆಯನ್ನು ನೀಗಲು ಹಬ್ಬಗಳು ಬರಬೇಕು. ಬದುಕಿಗೆ ಬಣ್ಣ ತುಂಬಿ ಬದುಕು ಹೆಚ್ಚೆಚ್ಚು ಸಹ್ಯ ಆಗುವಂತೆ ಮಾಡಲು ಹಬ್ಬಗಳು ಬೇಕು. ನಮ್ಮ ನಮ್ಮ ನಡುವಿನ ಗೋಡೆಗಳ ದಾಟಿ, ಅಹಮ್ಮಿನ ಕೋಟೆ ಒಡೆದು ಸೇತುವೆ ಕಟ್ಟಲು ಹಬ್ಬಗಳೇ ಬರಬೇಕು. ಮತ್ತೆ ಮತ್ತೆ ಬರುವ ಯುಗದ ಆದಿ ಎಲ್ಲ ಜೀವಿಗಳಿಗೂ ಚೈತನ್ಯದಾಯಿನಿ. ಹಳತನ್ನು ಕಳಚಿಕೊಂಡು ಹೊಸತಿಗೆ ತೆರೆದುಕೊಳ್ಳಲು ಹಪಾಪಿಸುವ ಜೀವಗಳ ಒಳ ತುಡಿತ. ಮತ್ತೊಂದು ಬೇಸಗೆ..ಮತ್ತೆ ಮಳೆಗಾಲ..ಉಕ್ಕುವ ನದಿ, ಕೆರೆ ತೊರೆಗಳು.. ಬರಗಾಲದ ಬವಣೆ.. ಜಲ ಪ್ರಳಯ, ಹನಿ ನೀರಿಗೆ ಹಾಹಾಕಾರ – ಎಲ್ಲವುಗಳನ್ನು ದಾಟುತ್ತ ದಾಟುತ್ತ ಮತ್ತೆ ಮತ್ತೆ ಬಂದು ಬದುಕಿಗೆ ಬಣ್ಣ ತುಂಬುವ, ಜೀವಸೆಲೆಯಾಗುವ ಹಬ್ಬಗಳದೇ ಒಂದು ಬಗೆ. ತನ್ನೊಳಗಿನ ಒಲವು ನಲಿವು, ಮಿಡಿತ ತುಡಿತಗಳಿಗೆ ಸಾಕ್ಷಿಯಾಗುವ ಜೀವ ಕಡು ತಾಪದಲ್ಲಿ ರೋಧಿಸುವಂತೆಯೇ ನಲಿವಿನಲ್ಲಿ ಹಾಡಲು ತೊಡಗುವುದು ಕೂಡ ಹಬ್ಬದ ಮಾದರಿಯೇ. ಈ ಬರಹದ ಆರಂಭದಲ್ಲಿ ನಿರೂಪಿಸಿರುವಂತೆ ಜೀವ ಕುಣಿದು ಕುಪ್ಪಳಿಸಲು ತೊಡಗಿದೆಯೆಂದರೆ ಹೃದಯದಲ್ಲಿ ನೂರು ವೀಣೆಗಳ ಸ್ವರ ಮೀಟಿದೆ ಎಂತಲೇ ಅರ್ಥ. ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ|| ನಕ್ಕು ಹಗುರಾಗದೇ ಸಾಗದ ಬದುಕನ್ನು ಸಹನೀಯವಾಗಿಸಿಕೊಳ್ಳಲು ಮಂದಹಾಸವನ್ನು ಧರಿಸುವುದೇ ಇರುವ ಒಂದೇ ದಾರಿ.. ಹೆಜ್ಜೆ ಹೆಜ್ಜೆಯಲ್ಲಿ ಜತೆಯಾಗುವ ಕವಿ ಸಾಲುಗಳೊಂದಿಗೆ ಸಾಗುವಾಗ ಮತ್ತೆ ಮತ್ತೆ ನೆನಪಾಗುವವು ಇಂಥವೇ ಸಾಲು.. ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ನಾ ನಕ್ಕು ಜಗವಳಲು ನೋಡಬಹುದೆ? ನಾನಳಲು ಜಗವೆನ್ನನೆತ್ತಿಕೊಳದೆ? (ಈಶ್ವರ ಸಣಕಲ್) ನಿಮ್ಮ ತುಟಿಯ ಮೇಲೊಂದು ನಗು ಮೂಡಿದ ಕ್ಷಣ ನಿಮಗೂ ಹಬ್ಬ..ನಿಮ್ಮ ಸುತ್ತಲೂ ಇರುವವರಿಗೂ ಹಬ್ಬ.. **********

Back To Top