ಕಾವ್ಯಯಾನ

ಚಂದ ಕಣೆ ನೀನು ಅವ್ಯಕ್ತ ಕಣ್ಣಿನಲ್ಲೇ ಅರ್ಥವಾಗಿಯೂ ಆಗದಂತೆ  ಆಡುವ ಮಾತುಗಳ ಸವಿ ಚೆಂದ.. ತುಟಿಯಂಚಿನಲಿ ಹಿಡಿದಿಟ್ಟಿರುವ ಒಲವಿನ  ರಸಗವಳದ ಕೆನ್ನೀರ ಪರಿ ಚೆಂದ.. ಕೇಳಿಯೂ ಕೇಳದಂತೆ ಆಡುವ  ಹೆಜ್ಜೆ ಗೆಜ್ಜೆಗಳ ನಲಿವು ಚೆಂದ,. ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಸೊಂಟದ ಬಳುಕಿನಲ್ಲಿ ಲೋಕವನ್ನೇ ಆಡಿಸುತ ತಾನೇ ಆಡುವ ಪರಿ ಚೆಂದ.. ಏರಿಳಿತಗಳ ಲೆಕ್ಕವಿಡದೆ ,ರಸಿಕತೆಯ ಸವಿಯುಣಿಸಿ ನಾನಲ್ಲ ನನ್ನದಲ್ಲ ಎಂಬ ಸುಳ್ಳೇ ಚೆಂದ.. ಪ್ರೀತಿಯ ತುಂತುರು ಮಳೆಯಲಿ ನೀರಾಗಿ  ಸಮುದ್ರದಾಳದ ಮುತ್ತಾಗ ಬಯಕೆಯೇ ಚೆಂದ… ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ಮೋಹದ ಮಿಶ್ರಪಾಕದಲಿ ಶೀತಲದುರಿಯ ಮೋಸ ಬೀಸಿರುವ ಸಾತ್ವಿಕತೆಯೇ ಚೆಂದ.. ಪ್ರೇಮಾಂಕುರಕೆ ಅಂಕುಶ ಹಾಕಿದಂತೆ ಮಾಡಿ ಶಿಲೆಯ ಮಿಡಿತವ ಕದರುವುದೇ ಚೆಂದ.. ಕಾಮಾಂಕುಷಗಳ ಹೂವು ಎಳೆಯಂತೆ ಹಿಡಿದು ಸರಿಸಿ  ಗಾಳಿ ಸೋಕದಂತೆ ತೇಲಿಯ ಹೋಗುವ ಗರಿಯೇ ಚೆಂದ ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ನಿಂದಿಸಲಿ, ಛೇಡಿಸಲಿ, ನಗಲಿ ಯಾರೇನೇ ಹೇಳಲಿ ಇರಲಿ ಬಿಡು, ಅಷ್ಟೇ.. XX ವರ್ಣತಂತು ಇರುವ ಸಾಮಾನ್ಯ ಜೀವಿಯೆಂದರೆ ಇರಲಿ ಬಿಡು, ಅಷ್ಟೇ.. ಕಾಲ್ಗೆಜ್ಜೆ ಕೈಬಳೆ ಬೊಟ್ಟು ಸೀರೆ ಹಳೆಕಾಲ ಎಂದರೆ ಇರಲಿ ಬಿಡು, ಅಷ್ಟೇ.. ಬಿಗಿದ ಬಟ್ಟೆ ಎತ್ತರದ ಸ್ಯಾಂಡಲ್ ದಾರಿತಪ್ಪಿದಳೆಂದರೆ ಇರಲಿ ಬಿಡು, ಅಷ್ಟೇ.. ಮೋಹಗಾರ್ತಿ ಮೋಜುಗಾರ್ತಿ ಜಂಬಗಾರ್ತಿ ಎಂದರೆ ಇರಲಿ ಬಿಡು, ಅಷ್ಟೇ.. ಅಮ್ಮ ಅಕ್ಕ ತಂಗಿ ಮಗಳು ಅಜ್ಜಿ ಗೆಳತಿ ಒಡತಿ ಪ್ರೇಯಸಿ ಮನದರಸಿ ಎಲ್ಲಾ ನೀನೆ….  ನಿನ್ನೊಳಗಿನ ಭಾವ ಅದರ ಮರ್ಮ ಆರಿತವಳು ನೀನೊಬ್ಬಳೇ ಸಖಿ… ಚಂದ ಕಣೆ ನೀನು ಹೇಗಿದಿಯೋ ಹಾಗೆ ಚಂದ… ***********************************

ಅನುವಾದ ಸಂಗಾತಿ

ಹೆಣ್ಣಿನ ದುಡಿಮೆ ಮೂಲ:ಮಾಯಾ ಏಂಜೆಲೋ ಕನ್ನಡಕ್ಕೆ ಡಾ.ಗೋವಿಂದ ಹೆಗಡೆ ನನಗೆ ಮಕ್ಕಳ ಕಾಳಜಿ ಮಾಡಲಿದೆ ಅರಿವೆಗಳನ್ನು ಒಗೆಯಲಿದೆ ನೆಲ ಸಾರಿಸುವುದು ಆಹಾರ ಖರೀದಿಸುವುದು ಕೋಳಿಯನ್ನು ಹುರಿಯುವುದು ಮಗುವನ್ನು ಚೊಕ್ಕ ಮಾಡುವುದು ಬಂದವರಿಗೆ ಊಟ ನೀಡಬೇಕಿದೆ ತೋಟದ ಕಳೆ ತೆಗೆಯಬೇಕಿದೆ ಅಂಗಿಗಳಿಗೆ ಇಸ್ತ್ರಿ ಮಾಡಲಿದೆ ಪುಟಾಣಿಗಳಿಗೆ ಬಟ್ಟೆ ತೊಡಿಸಲಿದೆ ಕಬ್ಬು ಕತ್ತರಿಸಲಿಕ್ಕಿದೆ ಈ ಗುಡಿಸಲನ್ನು ಶುಚಿಗೊಳಿಸಲಿದೆ ರೋಗಿಗಳ ಉಪಚರಿಸಲಿದೆ ಹತ್ತಿಯನ್ನು ಬಿಡಿಸುವುದಿದೆ ಬೆಳಗು ನನ್ನಮೇಲೆ, ಬಿಸಿಲೇ ಸುರಿ ನನ್ನ ಮೇಲೆ, ಮಳೆಯೇ ಮೃದುವಾಗಿ ಇಳಿ, ಇಬ್ಬನಿಯೇ ನನ್ನ ಹಣೆಯನ್ನು ತಂಪಾಗಿಸು- ಮತ್ತೆ ಬಿರುಗಾಳಿ, ನನ್ನ ಇಲ್ಲಿಂದ ಹಾರಿಸು ನಿನ್ನ ಜೋರಾದ ಅಲೆಯಲ್ಲಿ ನಾನು ಬಾನುದ್ದ ತೇಲುವಂತಾಗಲಿ ಮತ್ತೆ ವಿರಮಿಸುವವರೆಗೆ ಹಿಮದ ತುಣುಕುಗಳೇ, ಮೆತ್ತಗೆ ಬೀಳಿರಿ ನನ್ನನ್ನು ಮುಚ್ಚಿ- ಬಿಳಿಯ ತಣ್ಣಗಿನ ಮಂಜಿನ ಚುಂಬನಗಳಿಂದ, ಈ ರಾತ್ರಿ ನಾನು ಮಲಗುವಂತಾಗಲಿ ನೇಸರ, ಮಳೆ, ಬಾಗಿದ ಆಗಸ ಬೆಟ್ಟ ಕಡಲು ಎಲೆ ಶಿಲೆ ತಾರೆಗಳ ಮಿನುಗು ಚಂದಿರನ ಹೊಳಪು ನಿಮ್ಮನ್ನು ಮಾತ್ರ ನಾನು ‘ನನ್ನವ’ರೆನ್ನಬಹುದು *********

ಕಾವ್ಯಯಾನ

ಕವಿತೆ ರಾಮಸ್ನಾಮಿ ಡಿ.ಎಸ್ ಸಂಗೀತಕಛೇರಿಯತಂಬೂರಿಶೃತಿಹೆಣ್ಣು. ಬಿಗಿತ ಹೆಚ್ಚಾದರೆತುಂಡಾಗುವ ತಂತಿಸಡಿಲಾದರೆ ಹೊಮ್ಮದು ನಾದ ತನ್ನ ಕಂಠಸಿರಿಗೆತಕ್ಕಂತೆ ಶೃತಿಹೊಂದಿಸಿಕೊಳ್ಳುವುದುಗಾಯಕನ ಜವಾಬ್ದಾರಿ. ವೀಣೆ ಸಿತಾರು ಸರೋದುಗಳನ್ನುಬೆರಳಿನಿಂದಲೇ ನುಡಿಸಬಹುದಾದರೂರಕ್ಷಣೆಗೆ ಕವಚ ಇರುವಂತೆಯೇಪಿಟೀಲು ನುಡಿಯುವುದು ಕಮಾನಿಗೆ ಶೃತಿ ತಪ್ಪದೇ ಇದ್ದರೆಕಛೇರಿ ಕಳೆಗಟ್ಟುವುದಕ್ಕೆಇದ್ದೇ ಇವೆ ಪಕ್ಕ ವಾದ್ಯದಸಹಕಾರ, ತನಿ ಆವರ್ತನ. ಸಂಸಾರದ ಕಛೇರಿಯೂಥೇಟು ಸಂಗೀತದ ಹಾಗೇ ಶೃತಿ ತಪ್ಪದ ಹಾಗೆತಾಳ ಮರೆಯದ ಹಾಗೆಪರಸ್ಪರರ ಗೌರವಕ್ಕೆ ಹಾನಿ ಮಾಡದ ಹಾಗೆ ಬದುಕ ಹಾಡು ಹಾಡಬೇಕುಇಹದ ಇರವ ಮರೆಯಬೇಕು. *******

ಕಾವ್ಯಯಾನ

ಗಝಲ್ ಶಶಿಕಾಂತೆ ಇಂದು ನಿನ್ನೆಯದಲ್ಲ ನನ್ನ ನಿನ್ನ ಪ್ರೇಮ ಯಾವ ಜನ್ಮದ ಮೈತ್ರಿಯೋ ನಾಕಾಣೆ.. ಇನ್ನೆಂದಿಗೂ ನನ್ನನು ಬಿಟ್ಟು ದೂರ ಹೋಗಬೇಡಾ,ನಮ್ಮ ಪ್ರೀತಿ ಮೇಲಾಣೆ.. ತಿಳಿನೀರ ಕೊಳದಂತಿದ್ದ ಮನಸಲಿ ಒಲವೆಂಬ ಕಲ್ಲೆಸೆದು ಹೋದೆಯಲ್ಲಾ.. ಕೂತರೂ ನಿಂತರೂ ,ಮಲಗಿದರೂ ನಿನ್ನದೇ ಧ್ಯಾನ ,ತಾಳಲಾರೆ ಈ ಭವಣೆ.. ಕುಡಿನೋಟ ನೀ ಬೀರಿದಾಗಿ ನಾಚಿನಾಚಿ ಕೆಂಪುಕೆಂಪು ಸೇಬಾಯ್ತು ನನ್ನ ಕೆನ್ನೆ.. ಯಾರನ್ನೂ ಒಪ್ಪದ ಮನಸು ನಿನಗೊಲಿ ಯಲು ಕಾರಣ ನಿನ್ನ ಸ್ನೇಹ ಸಂಭಾಷಣೆ.. ಕಣ್ಣಿಗೆ ಕಾಣ್ಣದ್ದು ಹೃದಯಕ್ಕೆ ತಿಳಿಯಲು ತಡವಿಲ್ಲ. ನಿನ್ನ ಪ್ರೀತಿ ನನಗರಿವಾಯ್ತು.. ನಿನ್ನ ನೆನಪಲ್ಲಿ ,ಭವಿಷ್ಯದ ನೆಪದಲ್ಲಿ ನನಗಾಯ್ತು ರಾತ್ರಿಯೆಲ್ಲಾ ಜಾಗರಣೆ.. ಹೆದರುವಂತಹುದೇನೂ ಇಲ್ಲ ನಿನ್ನ ಬೆಂಬಲ ಸದಾ ನನ್ನ ಜೊತೆಗಿರುವಾಗ.. ನನ್ನ ಕಂಡರೆ ನಗುವ ಆ ಶಶಿಗೆ ನಾನೇಕೆ ಕೊಡಬೇಕು ನಮ್ಮ ಪ್ರೀತಿಯ ವಿವರಣೆ.. ********

ಮಹಿಳಾದಿನದ ವಿಶೇಷ

ದ್ವೇಷ.. ಶ್ವೇತಾ. ಎಂ.ಯು. ದ್ವೇಷವಿಲ್ಲ ಸುಡಲು ಬೆಂಕಿ ಮಾತ್ರ ಇದೆ ನಿಮ್ಮ ಊರಿನ ಉಲ್ಕಾಪಾತಗಳ ಉಸಿರುಗಟ್ಟಿಸೋಣವೆಂದರೆ ಪ್ರಾಣವಾಯು ಹೊರತು ಮತ್ತೇನೂ ಉಳಿದಿಲ್ಲ; ಆಸೆಗಣ್ಣುಗಳಲಿ ನೀವು ತುಂಬಿಕೊಂಡರೆ ನನ್ನ ನಗಬೇಕು ಎನಿಸುತ್ತದೆ, ಸುಮ್ಮನಾಗುತ್ತೇನೆ ರಂಜಕ ಹಾಕಿ ಸುಡುವ ಮನಸಾದರು ಕಣ್ಣುಗಳು ನೋಡಿಕೊಳ್ಳಲಿ ಒಮ್ಮೆ ನಿಮ್ಮನ್ನೇ ಎಂಬ ಆಸೆಯಿಂದ.. ಬಾಯಾರಿದರೆ ಕುಡಿಯ ಬೇಕು ನೀರು; ಕೊಳದಲ್ಲಿ ಈಜುವುದು ಕೊಳಕಾದವರು ಮಾತ್ರವೇ ? ಇಲ್ಲದಿರಬಹುದು ನಾಲಗೆಗೆ ಎಲುಬು ಹೃದಯಕ್ಕೆ ದಾರಿಗಳಿವೆ ಸಂಯಮವೇ ಸಂಬಂಧ ಗುಣಗಳೇ ಬೆಳಕು ನಗುವಿಗೆ ಹಲವು ಮುಖ ಬದಲಿ ಇಲ್ಲ ಜೀವಕ್ಕೆ ಕತ್ತರಿಸಿದರೆ ಕರುಳ ಬಳ್ಳಿ ಬಳ್ಳಿಯೊಳಗಣ ಬಳ್ಳಿ ನಿನ್ನ ಹೂ ಬಳ್ಳಿ ನೀನೂ ಹಾಗೆ ನಾನು ಎಲ್ಲರೊಳಗೊಂದು ಜೀವ ಅದಕೆ ಹೆಸರು ಬೇರೆ ಬೇರೆ ಒಂದೇ ಅರ್ಥ ಅದು ಹೆಣ್ಣು ! *******

ಮಹಿಳಾದಿನದ ವಿಶೇಷ

ಒಂದು ಹೆಣ್ಣಿನ ಸ್ವಗತ. ಜ್ಯೋತಿ ಡಿ.ಬೊಮ್ಮಾ ನನಗಾರ ಭಯ..! ನಾನು ಜನ್ಮ ಕೊಡುವ ಹೆಣ್ಣು ಮಗುವನ್ನು ಈ ಲೋಕದಿ ತರಲು ನನಗಾರ ಭಯ.. ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು.. ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವ ಧೈರ್ಯ ನನಗಿಲ್ಲದಿರುವದು.. ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..! ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ.. ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ.. ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವ ನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳು ಅವಳು ಅನುಭವಿಸುವದು ಬೇಡವೆಂದೇ… ಕೆಟ್ಟ ಕಾಮುಕರಿಗೆ ಬಲಿಯಾದೀತೆಂದು ದಿಗಿಲುಗೊಂಡೇ… ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದು ಭಯಗೊಂಡೆ… ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರ ದುರುಳುತನಕ್ಕಂಜಿಯೇ… ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು.. ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು. ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..! ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ.. ಹೆದರದಿರು ಮನವೇ.. ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದು ತಿಳಿದಿರು.. ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟ ದಾರಿ ಇದೆ.. ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ.. ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ.. ಹೆಣ್ಣು ಹೆಣ್ಣೆಂದು ಜರೆಯಬೇಡ.. ಹೆಣ್ಣು ಹೇರಲು ಅಂಜಬೇಡ.. ಹೆಣ್ಣು ‌ಬಾಳಿನ ಕಣ್ಣೆಂಬುದು ಮರೆಯಬೇಡ. ************

ಮಹಿಳಾದಿನದ ವಿಶೇಷ

ಅಹಂಕಾರ ಅಣ್ಣೇಶಿ ದೇವನಗರಿ ಹೆಣ್ಣೆಂದು ಜರಿದರು ಹಣ್ಣಂತೆ ಹರಿದು ಮುಕ್ಕಿದರು, ಭುವಿಗೆ ಹೋಲಿಸಿದರು ಒಡಲ ಬಗೆದರು , ಪ್ರಕೃತಿ ಎಂದರು ವಿಕೃತಿ ಮೆರೆದರು , ಭುವಿಗೆ ಹೋಲಿಸಿದ್ದೂ ಪ್ರಕೃತಿಯೆಂದು ವರ್ಣಿಸಿದ್ದು ಮುಂದೊಂದು ದಿನ ತಾನು ಗೈಯ್ಯಲಿರುವ ಕ್ರೌರ್ಯ ಕಾರ್ಯವ ಮೂಕಳಾಗಿ ಸಹಿಸಿಕೊಳ್ಳಲೆಂಬ ದೂ(ಧು)ರಾಲೋಚನೆಯಿದೆಂಬಂತೆ ನಿರಂತರ ಸುಲಿಗೆ ಮಾಡಿದರೂ , ಅವಳದು ಮೌನ ಆಕ್ರಂದನ , ಅರಣ್ಯರೋದನ . ಈ ಅತ್ಯಾಚಾರ ತಡೆಯಲು ಮತ್ತೆ ಅವಳೇ ಎತ್ತಬೇಕಿದೆ ದುರ್ಗೆಯ ಅವತಾರ , ಮುರಿಯ ಬೇಕಿದೆ ಅತ್ಯಾಚಾರಿಗಳ ಅಹಂಕಾರ..! **************************

ಮಹಿಳಾದಿನದ ವಿಶೇಷ

ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ತ್ರಿವೇಣಿ ಜಿ.ಹೆಚ್ ಮತ್ತೊಂದು ಮಹಿಳಾ ದಿನ, ಮತ್ತದೇ ವಿಷಾದ ಮಹಿಳಾ ಸಂಘಗಳಲ್ಲಿ ಮಹಿಳೆಯರ ಹಕ್ಕು ಕುರಿತು ಭಾಷಣ, ಸದಸ್ಯರಿಗೆ ಹೂವು, ಸೀರೆ, ಒಡವೆ, ವಸ್ತ್ರ ವೇಷ ಭೂಷಣಗಳ ಸ್ಪರ್ಧೆ, “ನಿಮಗೆ ವರ್ಷದಲ್ಲಿ ಒಂದು ದಿನವಾದರೂ ಇದೆ. ನಮಗೆ ಇಲ್ಲವೇ ಇಲ್ಲ” ಎಂಬ ಪುರುಷ ಸಹೋದ್ಯೋಗಿಗಳ ಕೂರಂಬು, ಇಷ್ಟೇ ತಾನೆ ಇಷ್ಟೂ ವರ್ಷ ಮಹಿಳಾ ದಿನಾಚರಣೆ ನಡೆದ ಪರಿ? ಒಂದು ಮಹಿಳಾ ಸಂಘದಲ್ಲಿ ಕಾರ್ಯಕ್ರಮಕ್ಕೆ ವಿಶಿಷ್ಠ ಕೇಶಾಲಂಕಾರ ಮಾಡಿಕೊಂಡು ಬರಲು ಸದಸ್ಯರಿಗೆ ಹೇಳಿದರೆ ಇನ್ನೊಂದು ಕಡೆ ಯಾವ ಬಣ್ಣದ ಸೀರೆ ಉಟ್ಟು ಬರಬೇಕು ಎಂಬುದು ಕಾರ್ಯಕ್ರಮದ ಹೈಲೈಟ್ಸ್! ಸೆಲೆಬ್ರೇಷನ್ಸ್, ಸಾಧಕ ಮಹಿಳೆಯರಿಗೆ ಸನ್ಮಾನ, ಸೀರೆ, ಒಡವೆ, ಪರ್ಸು, ಅಂಗಡಿಗಳಲ್ಲಿ ಮಹಿಳೆಯರಿಗೆ ಡಿಸ್ಕೌಂಟ್..! ಮಹಿಳೆಯ ಸೇವೆ, ತ್ಯಾಗಗಳ ಕುರಿತು ಕವನ, ಲೇಖನ. ಎಲ್ಲಾ ಚಾನೆಲ್ಲುಗಳಲ್ಲಿ ಮಹಿಳೆಯರ ಕುರಿತು ಚರ್ಚೆ, ಮಾತು ಕಥೆ. ಅಲ್ಲಿಗೆ ಮತ್ತೊಂದು ವರ್ಷದವರೆಗೂ ಕಾಯಬೇಕು! ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹುಟ್ಟು ಹಾಗೂ ಅದು ನಡೆದು ಬಂದ ದಾರಿಯ ಬಗ್ಗೆ ತಿಳಿಯದೆಯೂ ಗಂಟೆಗಟ್ಟಲೆ ಕೊರೆಯುವರಿದ್ದಾರೆ. ಅದು ಶುರುವಾಗಿದ್ದು ಸಮಾನ ವೇತನದ ಬೇಡಿಕೆಯೊಂದಿಗೆ. ರಷ್ಯಾ ಹಾಗೂ ಡೆನ್ಮಾರ್ಕಿನ ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ. ‘ಇಂಟರ್ ನ್ಯಾಷನಲ್ ಗಾರ್ಮೆಂಟ್ ವುಮೆನ್ಸ್ ವರ್ಕರ್ಸ್ ಯುನಿಯನ್’ ಎಂಬ ಅಸೋಸಿಯೇಷನ್ ಅಡಿ. ಸಮಾನ ಅವಕಾಶ, ಸಮಾನ ವೇತನ.. ಶತಮಾನದ ಹಿಂದಿನ ಬೇಡಿಕೆಯೂ ಅದೇ.. ಇಂದಿನ ಬೇಡಿಕೆಯೂ ಅದೇ.. ಬೇಡಿಕೆ ಆಗಿರುವುದರಿಂದ ನೆರವೇರಿಯೇ ಇಲ್ಲವೇನೋ.. ಬೇಡಿಕೆ ಎಂದು ವರ್ಷವಿಡೀ ಕೆಲಸ ಮಾಡದೇ ಕೂರಲು ಆಗುವುದಿಲ್ಲ.. ವರ್ಷದಲ್ಲಿ ಒಂದು ದಿನ ಪ್ರಪಂಚದ ಗಮನ ತಮ್ಮೆಡೆಗೆ, ತಮಗಾಗಿರುವ ಅನ್ಯಾಯದೆಡೆಗೆ ಸೆಳೆಯಲು ಶುರುವಾಗಿದ್ದು ಮಹಿಳಾ ದಿನಾಚರಣೆ. ಗೆದ್ದದ್ದು ಕೆಲವು, ಹೋರಾಟ ಮುಂದುವರಿದಿರುವುದು ಹಲವು ವಿಚಾರಗಳಿಗೆ. ಗಮನ ಇತ್ತ ಹರಿದಿದೆ, ಪ್ರಪಂಚ ನಿಂತು, ತಿರುಗಿ ನೋಡಿದೆ, ಗಮನಿಸಿದೆ, ವಿಷಯ ಹರಡಿದೆ ಎಂಬುದೇ ಒಂದು ದೃಷ್ಠಿಯಲ್ಲಿ ಗೆಲುವು. ಹಲವು ರಂಗಗಳಲ್ಲಿ ಸಮಾನ ಅವಕಾಶ ಮಹಿಳೆಗೆ ಇನ್ನೂ ಕನಸು. ಕೆಲವು ಕಡೆ ಸಮಾನ ವೇತನ ಸಿಕ್ಕರೂ ಅದರಿಂದ ಬೇರೆ ಹಲವು ಸಮಸ್ಯೆಗಳು ಹುಟ್ಟಿಕೊಂಡಿವೆ . ಅತ್ಯಾಚಾರ ನಿಲ್ಲಬೇಕು, ಹೆಣ್ಣು ಭ್ರೂಣಹತ್ಯೆ ನಿಲ್ಲಬೇಕು, ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಬೇಕು, ಆರ್ಥಿಕ ಸ್ವಾತಂತ್ರ್ಯ ಸಿಗಬೇಕು, ರಾಜಕೀಯದಲ್ಲಿ ಪ್ರಾಶಸ್ತ್ಯ ಸಿಗಬೇಕು, ಅಧಿಕಾರ ಅವರಿಗೆ ಸಿಗಬೇಕು – ಇವೆಲ್ಲಾ, ರಸ್ತೆಗಿಳಿದು ಹೋರಾಟ ಮಾಡಿ ದಕ್ಕಿಸಿಕೊಳ್ಳುವುದಲ್ಲ. ರಸ್ತೆಗಿಳಿದು ವಿಚಾರವನ್ನು ಪ್ರಚಲಿತಗೊಳಿಸಬಹುದು. ಆದರೆ ದಕ್ಕಿಸಿಕೊಳ್ಳಲು ವಿದ್ಯಾಭ್ಯಾಸ ಕೊಡಬೇಕು. ತಿಳವಳಿಕೆ ಮೂಡಬೇಕು ಹಾಗೂ ಮನೋಭಾವದಲ್ಲಿ ಬದಲಾವಣೆ ಆಗಬೇಕು. ವಿದ್ಯಾಭ್ಯಾಸ, ಉದ್ಯೋಗ ಹಾಗೂ ಆರ್ಥಿಕ ಸ್ವಾತಂತ್ರ್ಯ ತಂದುಕೊಡಬಹುದು. ಕ್ಷಮಿಸಿ.. ಸ್ವಾತಂತ್ರ್ಯ ಅಲ್ಲ, ಆರ್ಥಿಕ ಸಬಲತೆ ಎನ್ನಬಹುದು. ಏಕೆಂದರೆ ತಾನು ದುಡಿದ ಹಣದ ಮೇಲೆ ಆ ಮಹಿಳೆಗೆ ಹಕ್ಕಿರುವುದಿಲ್ಲ. ವಿದ್ಯಾಭ್ಯಾಸ ದೊರಕಿಸಿಕೊಟ್ಟ ಉದ್ಯೋಗದಿಂದ ಬಂದ ಸಂಬಳವನ್ನು ತಂದು ಮನೆಯ ಗಂಡಸಿಗೆ (ಅಪ್ಪ ಅಥವಾ ಗಂಡ) ಕೊಟ್ಟು, ತನ್ನ ಖರ್ಚಿಗೆ ಹಣ ಕೇಳುವ ಉದ್ಯೋಗಸ್ಥ ಮಹಿಳೆಯರೇ ಹೆಚ್ಚು. ಮಹಿಳೆಗೆ ಮೀಸಲಿಟ್ಟ ಕ್ಷೇತ್ರದಲ್ಲಿ ಗಂಡ ಅಥವಾ ಅಪ್ಪ ನಿಲ್ಲಲು ಸಾಧ್ಯವಿಲ್ಲವಾದ್ದರಿಂದ ಚುನಾವಣೆಗೆ ನಿಂತು ಗೆಲ್ಲುವ ಮಹಿಳೆ ಅಧಿಕಾರ ನಡೆಸುವುದಿಲ್ಲ. ಆ ಅಧಿಕಾರ ಮತ್ತೆ ಗಂಡ ಅಥವಾ ತಂದೆಯ ಹಕ್ಕು. ತನ್ನ ಒಡಲಿನಲ್ಲಿ ಮೂಡುವ ಹೆಣ್ಣು ಭ್ರೂಣದ ಸಂರಕ್ಷಣೆಯನ್ನು ಮಾಡಲಾರಳು ಆಧುನಿಕ ಕಾಲದ ಹೆಣ್ಣು. ವಿದ್ಯಾಭ್ಯಾಸ, ಉದ್ಯೋಗ, ಆರ್ಥಿಕ ಸಬಲತೆಗಳ ಜೊತೆಗೆ ಮನೋಭಾವದ ಬದಲಾವಣೆ ಆಗಬೇಕಾಗಿರುವುದು ಇಂದಿನ ಪ್ರಧಾನ ಅವಶ್ಯಕತೆ. ಹೆಣ್ಣು ಮಕ್ಕಳ ಹಾಗೂ ಗಂಡು ಮಕ್ಕಳ ಇಬ್ಬರ ಮನೋಭಾವದಲ್ಲೂ ಬದಲಾವಣೆ ಆಗಬೇಕಾಗಿದೆ. ಸಮಾಜದ ಚಿಕ್ಕ unit ಆಗಿರುವ ಸಂಸಾರ ಅಂದರೆ ಫ್ಯಾಮಿಲಿಯ ಜವಾಬ್ದಾರಿ ಇಲ್ಲಿ ಅಖಂಡವಾಗಿದೆ. ಮಕ್ಕಳನ್ನು ಬೆಳೆಸುವ ತಂದೆತಾಯಂದಿರು ತುಂಬಾ ಜವಾಬ್ದಾರಿಯುತವಾಗಿ, ಸಮಾನವಾಗಿ ಮಕ್ಕಳನ್ನು ಬೆಳೆಸಬೇಕು. ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು, ಗಂಡು ಮಕ್ಕಳಲ್ಲಿ ಹೆಣ್ಣು ಮಕ್ಕಳನ್ನು ಸಮಾನವಾಗಿ ನೋಡುವ ಮನೋಭಾವ ಬೆಳೆಸಬೇಕು. ಬರೀ ಮಾತಲ್ಲಿ, ಕಥೆಯಲ್ಲಿ ಅಲ್ಲ.. ತಂದೆ ತನ್ನ ಹೆಂಡತಿಯನ್ನು ಗೌರವಿಸುವುದರ ಮೂಲಕ, ತಾಯಿ ಆತ್ಮವಿಶ್ವಾಸದಿಂದ ಇರುವ ಮೂಲಕ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ‘lead by example’ ಮಂತ್ರವಾಗಬೇಕು. ನಿರ್ಲಕ್ಷಿತವಾಗಿರುವ ಪ್ರೈಮರಿ ಶಾಲೆಯ ವಿದ್ಯಾಭ್ಯಾಸವನ್ನು ಸಬಲಗೊಳಿಸಬೇಕು. ಮೊಳಕೆಯಾಗಿ ಮನೆಯಲ್ಲಿ ಚಿಗುರೊಡೆದ ಪೈರಿಗೆ ನೀರೆರೆಯುವ ಕಾಯಕ ಆಗುವುದು ಪ್ರಾಥಮಿಕ ಶಾಲೆಯಲ್ಲಿ. ಸೂಕ್ತ ಪಾಠ, ದಕ್ಷ ಅಧ್ಯಾಪಕರು ವಿಜ್ಞಾನ, ಲೆಕ್ಕ, ಇತಿಹಾಸ, ಭಾಷೆಯ ಜೊತೆಗೆ ಸದೃಢ ಸಮಾಜಮುಖಿ, ಸಮಾನತೆಯ ಮನೋಭಾವ ಮಕ್ಕಳಲ್ಲಿ ಮೂಡುವಂತೆ, ಮೂಡಿದ್ದು ಬೆಳೆಯುವಂತೆ ಮಾಡಬೇಕು. ನಮಗೆ ಏನಿದ್ದರೂ celebrate ಮಾಡುವ ಹುಮ್ಮಸ್ಸು.. ಅದನ್ನೂ ಮಾಡುವ. Let us celebrate womanhood. ನಾವು ಹೆಣ್ಣು ಎಂದು ಹೆಮ್ಮೆಪಡುವ. ಸಮಾನತೆ ಬೇಕು ಅಂದರೆ ಗಂಡಿನಂತೆ ಆಗಬೇಕು ಎಂದಲ್ಲ.. ನಮಗೆ ಬೇಕಾದಂತೆ ಇರಬೇಕು.. ಯಾರಿಗೂ ಅಡಿಯಾಳಾಗಿ ಅಲ್ಲ. (ಯು.ಸುಮಾ ಅವರ ಲೇಖನದಿಂದ ಸ್ಪೂರ್ಥಿ) ****************

ಮಹಿಳಾದಿನದ ವಿಶೇಷ

ನಿಲ್ಲದ ಅಮಾವಾಸ್ಯೆ ಚಂದ್ರಪ್ರಭ ನಿಲ್ಲದ ಅಮಾವಾಸ್ಯೆ…. ಈ ಸೃಷ್ಟಿ ನಿರಂತರ.. ಇಲ್ಲಿ ಯಾವ ಕಾರಣಕ್ಕೂ ಯಾವುದೂ ನಿಲ್ಲಲಾರದು ಅಂತ ಹೇಳೋಕೆ ನಮ್ಮಲ್ಲಿ ಪ್ರಚಲಿತ ಮಾತೊಂದಿದೆ.. ‘ಅಕ್ಕ ಸತ್ತರ ಅಮಾಸಿ ನಿಂದರೂದಿಲ್ಲ’ ಅಂತ. ಹೌದು, ಯಾವುದೂ ನಿಲ್ಲೂದಿಲ್ಲ. ಆದರೆ ಅದನ್ನು ನಡೆಯಿಸಿಕೊಂಡು ಹೋಗುವ ವ್ಯವಸ್ಥೆಯೊಂದು ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರ್ತದೆ ಅನ್ನೊ ಸತ್ಯ ಯಾರ ಗಮನಕ್ಕೂ ಬಾರದೆ ಹೋಗ್ತದೆ ಅನ್ನೋದೇ ವಿಸ್ಮಯ. ಗಾಳಿ, ನೀರು, ಮಳೆ, ಬಿಸಿಲು.. ನಲ್ಲಿ ನೀರು, ದಿನಪತ್ರಿಕೆ, ತರಕಾರಿ, ಅಕ್ಕಿ,ಬೇಳೆ..ಪೆಟ್ರೋಲು,ಸೀಮೆ ಎಣ್ಣೆ, ಗ್ಯಾಸ್ ಒಲೆ.. ಯಾವುದಾದರೂ ಅಷ್ಟೇ. ಅದರಲ್ಲಿ ವ್ಯತ್ಯಯ ಆಗುವ ವರೆಗೆ ನಮ್ಮ ಗಮನ ಅತ್ತ ಹರಿಯುವುದೇ ಇಲ್ಲ. ಆದರೆ ಕವಿ ಕಣ್ಣಿಗೆ ಈ ಸಂಗತಿ ಬಿದ್ದಾಗ ಮೂಡಿದ ಸಾಲುಗಳು ಅದೆಷ್ಟು ಆಪ್ತ, ಸುಂದರ!! “ರಾಜ್ಯಗಳಳಿಯಲಿ ರಾಜ್ಯಗಳುರುಳಲಿ| ಹಾರಲಿ ಗದ್ದುಗೆ ಮುಕುಟಗಳು| ಮುತ್ತಿಗೆ ಹಾಕಲಿ ಸೈನಿಕರೆಲ್ಲ| ಬಿತ್ತುಳುವುದನವ ಬಿಡುವುದೇ ಇಲ್ಲ||” ಅಬ್ಬಾ…! ಎಂಥ ಸೂಕ್ಷ್ಮ ಗ್ರಹಿಕೆ, ಸಂವೇದನೆ!! ಇದೆಲ್ಲ ಯಾಕೀಗ ಅಂತೀರಾ? ಹ್ಞೂಂ… ಅದೆಂಥದೊ ವೈರಸ್‌ ಬಂದು ದೇಶಕ್ಕೆ ದೇಶವನ್ನೇ ಅಲ್ಲಾಡಿಸ್ತಿದೆ.. ಜಗತ್ತಿನ ಜನಗಳಲ್ಲಿ ಭಯ ಹುಟ್ಟಿಸಿದೆ. ಯಾರಾರಿಗೊ ಇನ್ನೂ ಯಾರಾರೊ ಹಿಂಬಾಲಕರು ಮುಂಬಾಲಕರು ಆಗಿ ದೇವರು.. ಭಕ್ತರು ಅಂತೆಲ್ಲ ಸೃಷ್ಟಿ ಆಗವ್ರೆ.. ಇನ್ನು ಕೆಲವರೊ.. ಗೆದ್ದು ಬೀಗುವ ತನಕ ಒಂದು ಬಣ್ಣ..! ಗೆದ್ದ ಬಳಿಕ ಇವರು ಆಶ್ರಯಿಸುವ ಛತ್ರ ಚಾಮರಗಳ ಬಣ್ಣವೇ ಬೇರೆ..!! ಮನುಷ್ಯರನ್ನು ತಮಗೆ ಹೋಲಿಸುವವರನ್ನು ಕಂಡು ಊಸರವಳ್ಳಿಗಳೂ ಆಕ್ರೋಶಗೊಂಡಿವೆ. ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ.. ಎಲ್ಲದರಲ್ಲಿ ಏನೆಲ್ಲ ಸ್ಥಿತ್ಯಂತರ ಕ್ಷಣ ಕ್ಷಣಕ್ಕೂ ಘಟಿಸುತ್ತಿವೆ. ಯುದ್ಧವಂತೆ.. ಕೊರೊನಾ, ಕೋವಿಡ್ ಅಂತೆ.. ದೇಶವಂತೆ..ಪ್ರೇಮವಂತೆ.. ಇದನ್ನೆಲ್ಲ ಬದಿಗೆ ತಳ್ಳಿ ಪರೀಕ್ಷಾ ತಿಂಗಳು ಬಂದೇ ಬಿಟ್ಟಿದೆ. ಪರೀಕ್ಷೆಗಳ ಹಬ್ಬ.. ಹಾವಳಿ. ಮೂಲಭೂತ ಸೌಕರ್ಯಗಳಿರುವ ಖಾಸಗಿ ಸಂಸ್ಥೆಗಳ ರೀತಿ ಒಂದು ಬಗೆಯದಾದರೆ ಎಲ್ಲ ಕೊರತೆಗಳನ್ನೂ ಕೊಡವಿ ಎದ್ದು ನಿಲ್ಲುವ ಸರಕಾರಿ ಸಂಸ್ಥೆಗಳದು ಮತ್ತೊಂದು ರೀತಿ. ಪರೀಕ್ಷೆ ನಡೆದಿದೆಯೆ ಇಲ್ಲಿ? ಎಂದು ಕೇಳುವಷ್ಟು ಸದ್ದಡಗಿದ ವಾತಾವರಣದಲ್ಲಿ ಪರೀಕ್ಷೆ ನಡೆದಿವೆ ಎಂದಿನಂತೆ. ಮೌಲ್ಯಮಾಪನ ನಡಪ್ರತಿಷ್ಠಾಪನೆಗಾಗಿ ಅವಸರ.. ಸಿಇಟಿ..ಇನ್ನೊಂದು ಮತ್ತೊಂದು ಬಂದೇ ಬಿಡ್ತವೆ. ಕವಲು ದಾರಿಯಲ್ಲಿ ನಿಂತ ಮಕ್ಕಳಿಗೆ ಆಯ್ಕೆಯ ಗೊಂದಲ. ದಿನಗಳು ಓಡುತ್ತಿವೆಯೆ..ಉರುಳುತ್ತಿವೆಯೆ.. ಒಂದೂ ಅರ್ಥವಾಗದ ಸನ್ನಿವೇಶದಲ್ಲಿ ಶಾಲೆಗಳು ಪುನಃ ಆರಂಭ ಆಗ್ತವೆ. ಸಮವಸ್ತ್ರ ತೊಡಿಸಿ ಮಗುವನ್ನು ಶಾಲೆಗೆ ಕಳಿಸಿ ಆಕೆ ತಾನೂ ಅಣಿಯಾಗುತ್ತಾಳೆ.. ಯಾವುದೊ ಸಂಕಿರಣದ ಆಶಯ ನುಡಿ.. ಇನ್ನಾವುದೊ ಚರ್ಚಾ ಕೂಟದ ಪ್ರಧಾನ ಭಾಷಣ.. ಅಮ್ಮನ ಮನೆಗೊಂದು ಭೇಟಿ.. ಮಿತ್ರರೊಂದಿಗೊಂದು ವಿಹಾರ.. ಎಲ್ಲವನ್ನೂ ತನ್ನೊಂದಿಗೆ ಕರೆದೊಯ್ಯುತ್ತಾಳೆ.. ಜೊತೆಗೆ ಬಸಿರು,ಬಾಣಂತನ,ಮುಟ್ಟು, ಸ್ರಾವಗಳೆಂಬ ಸಂಗಾತಿಗಳನ್ನೂ… ಓಟದ ನಡುವೆ ಪತ್ರಿಕೆ ಮೇಲೆ ಒಮ್ಮೆ ಕಣ್ಣಾಡಿಸುತ್ತಾಳೆ. ನೋಟು, ಜಿ ಎಸ್ ಟಿ, ರಾಜಕೀಯ, ಸಾಹಿತ್ಯ ಎಲ್ಲವನ್ನೂ ಒಮ್ಮೆ ನಿರುಕಿಸುತ್ತಾಳೆ.. ತನ್ನ ನಿಲುವನ್ನು ತಾ ಕಾಪಿಟ್ಟುಕೊಂಡು. ಕೂಸು,ಬಾಲೆ,ಯುವತಿ,ವೃದ್ಧೆ ಭೇದವಿಲ್ಲದೆ ನಡೆಯುವ ಅನಾಚಾರವನ್ನು ಮೆಟ್ಟುತ್ತ ಸಾಗುವ ಸಂಕಲ್ಪವನ್ನು ದೃಢಗೊಳಿಸಿಕೊಂಡು ಹೊಸ ದಾರಿಗಳನ್ನು ಅರಸುತ್ತಾಳೆ. ತನ್ನ ಅಸ್ಮಿತೆ, ಹಕ್ಕುಗಳ ಮರು ಪ್ರತಿಷ್ಠಾಪನೆಗಾಗಿ ದಿನವೊಂದರ ಆಚರಣೆ!! ಅಲ್ಲಿಯೂ ನಸು ನಕ್ಕು ಸಂಭ್ರಮಿಸುತ್ತಾಳೆ. ಎಲ್ಲ ಇಲ್ಲಗಳ ನಡುವೆಯೂ ಈ ಜಗತ್ತಿನ್ನೂ ಸುಂದರ ತಾಣವಾಗಿ ಉಳಿದಿರುವುದು ಹೇಗೆಂದು ಅಚ್ಚರಿ ಪಡುವವರಿಗೆ ಉತ್ತರ ಸಿಕ್ಕಿರಬಹುದು… *******

ಮಹಿಳಾದಿನದ ವಿಶೇಷ

ಇಲ್ಲಿ ಕೇಳಿ… ದಾಕ್ಷಾಯಿಣಿ ವಿ ಹುಡೇದ. ಅದಾಗಲೇ ಒಂದು ದೋಣಿಯನೇರಿ ಹರಿವ ನದಿಯ ಮುಕ್ಕಾಲು ದೂರ ದಾಟಿ ದಡ ಮುಟ್ಟಲಿರುವವನನ್ನು ಹಚ್ಚಿಕೊಳ್ಳುವುದೂ ನೆಚ್ಚಿಕೊಳ್ಳುವುದೂ ಸಣ್ಣ ಮಾತೇ? ಇಲ್ಲಿ ಹೇಳುವೆ ಕೇಳಿ ; ಹಾಗೆ ಹೊರಟವನ ಮೊಗ ನೋಡಿ ಮುಗುಳ್ನಗೆ ಬೀರಿ ನನಗೆ ನಾನೇ ಭರವಸೆಯ ಚಿಮಣಿ ದೀಪ ಕಡ ತಂದುಕೊಳ್ಳುವುದು ಸಣ್ಣ ಮಾತೇ? ವಾರದಲ್ಲೆರಡು ಸಲ ಒಮ್ಮೊಮ್ಮೆ ತಿಂಗಳಿಗೊಂದು ಸಲ ಹುಡುಕಿಕೊಂಡು ಬಂದು ಮೊಳ ಮಲ್ಲಿಗೆ ತುಂಡು ಬ್ರೆಡ್ಡು ತಂದು “ನಾ ನಿನ್ನವನೇ” ಎಂದುಲಿವವನ ನಂಬುವುದು ಸಣ್ಣ ಮಾತೇ? ಇಲ್ಲಿ ಹೇಳುವೆ ಕೇಳಿ ; ನೀತಿ ಅನೀತಿಯ ಖಾತೆ ಕಿರ್ದಿಯಲ್ಲಿ ಗುಣಾಕಾರ ಭಾಗಾಕಾರ ಮಾಡಿ ಎದುರಿನವರೆದೆಗೆ ಬಾಣ ಹೂಡುವವರ ಮಾತುಗಳಿಗೆ ಉತ್ತರ ನನ್ನಲ್ಲೂ ಇವೆ. ಆದರೆ.. ಆದರೆ… ಇದ್ದುದನ್ನು ಇದ್ದಂತೆ ಹೇಳಿ ನಿಮ್ಮ ಮನಸು ಮುರಿವ ಇರಾದೆ ನನ್ನೆದೆಯಲ್ಲಿ ಹುಟ್ಟಲಿಲ್ಲ, ಪ್ರೀತಿ ಬಯಸಿ ಬಂದವನ ಎದೆಗೆ ಮಳೆ ಸುರಿಸಿದ ಒಂಟಿ ಹೆಣ್ಣು ನಾನು, ನೀವಾಡಿದ ಮಾತುಗಳು ನನ್ನ ಸೆರಗ ಚುಂಗಿನಲ್ಲಿ ಹಾಕಿಕೊಂಡಿರುವೆ ಗಂಟು, ಬಿಡುವಾದಾಗ ಬಿಚ್ಚಿ ನೋಡಿ ನಿಮಗೂ ಅಲ್ಲಿ ಪ್ರೀತಿ ಉಂಟು. ಒಡೆದ ಮನೆಯ ಬಿದ್ದ ಗೋಡೆಯ ಮುಗಿದ ಯುದ್ಧದ ಸೂತಕ ಏನೆಂದು ಬಲ್ಲವಳು ನಾನು, ನನ್ನೊಲವ ಪ್ರಶ್ನಿಸುವ ಮೊದಲೊಮ್ಮೆ ನಿಮ್ಮನ್ನು ನೀವು ಓದಿ, ಉತ್ತರ ಸಿಕ್ಕ ದಿನ ಪಂಚಾಯ್ತಿಗೆ ಚಂದ್ರನನ್ನು ಕರೆಯೋಣ. **********

Back To Top