ಪುಸ್ತಕ ಸಂಗಾತಿ
ಕವಿ ಏಕತ್ವದ ಸಂಕೇತವಾದರೆ, ಕತೆಗಾರ/ಕತೆಗಾರ್ತಿ ಬಹುತ್ವದ ಪ್ರತಿನಿಧಿ ಇವತ್ತು ಕನ್ನಡದ ಕತೆಗಾರ್ತಿ ಡಾ.ವೀಣಾ ಶಾಂತೇಶ್ವರ ಅವರ ಸಮಗ್ರ ಕಥನ ಸಾಹಿತ್ಯ ಓದಲು ತೆಗೆದುಕೊಂಡ ಪುಸ್ತಕ .ಇದರಲ್ಲಿ ನಾ ಓದೊದ ಮೊದಲ ಕತೆ ಕವಲು ಸಂಕಲನದ ” ಹನುಮಾಪುರದಲ್ಲಿ ಹನುಮಂತ ಜಯಂತಿ. ಹಾಗೂ ಹೋಟೆಲ್ ಬ್ಲೂ.ಹನುಮಾಪುರದಲ್ಲಿ ಹನುಮ ಜಯಂತಿ …ಜಾತಿ ಸಂಘರ್ಷದ ಸಣ್ಣ ಝಲಕ್ ಹಿಡಿದಿಡುವ ಕತೆ. ಒಂದು ಗ್ರಾಮದ ಚಲನೆ ಶಿಕ್ಷಣ ಕಲಿತು ಬಂದ ಯುವಕನಿಂದ ಹೇಗೆ ಸಾಧ್ಯವಾಗುತ್ತದೆ ಹಾಗೂ ಸಂಬಂಧಗಳು ಹೇಗಿರುತ್ತವೆ..ಜಾತೀಯ ವ್ಯವಸ್ಥೆ ಆಯಾಮವನ್ನು ಕತೆಗಾರ್ತಿ ತೆರೆದಿಡುವ ರೀತಿ ಅದ್ಭುತವಾದುದು. ೧೯೭೬ ರಲ್ಲಿ ಈ ಸಂಕಲನ ಬಂದಿದೆ.೧೯೬೮ ರಲ್ಲಿ ಅವರ ಮುಳ್ಳುಗಳು ಕತೆ ಪ್ರಕಟವಾದುದು.ಆಗಲೇ ವೀಣಾ ಶಾಂತೇಶ್ವರ ಅವರ ಕತೆಯ ಶೈಲಿ, ದಿಟ್ಟತನ, ಕತೆ ಕಟ್ಟುವ ರೀತಿಯ , ಹೆಣ್ಣಿನ ಅಂತರಂಗವನ್ನು ಪ್ರಾಮಾಣಿಕವಾಗಿ, ಕಲಾತ್ಮಕವಾಗಿ ಕಟ್ಟುವ ವೀಣಾ ಅವರನ್ನು ಶಾಂತಿನಾಥ ದೇಸಾಯಿ, ಪಿ.ಲಂಕೇಶ್, ಆಲನಹಳ್ಳಿ ಕೃಷ್ಣ, ಬರಗೂರು ರಾಮಚಂದ್ರ ಅವರು ಮೆಚ್ಚಿ ಬರೆದಿದ್ದಾರೆ.ಅವರ ಕವಲು ಸಂಕಲನದ ಕತೆಗಳನ್ನು ಓದಲು ಎತ್ತಿಕೊಂಡಾಗ, ಇವತ್ತಿನ ಬರಹಗಾರ್ತಿಯರು ಮುದ್ದಾಂ ಓದಬೇಕು. ಅಬ್ಬಾ ವೀಣಾ ಶಾಂತೇಶ್ವರ ಅವರ ಧೈರ್ಯ ನನಗೆ ಇಷ್ಟವಾಯಿತು. ಇವತ್ತಿನ ಕರ್ನಾಟಕಕ್ಕೆ ಅಂತಹ ಶಕ್ತಿಯುತ, ಸತ್ವಯುತು ಬರಹ ಪ್ರಕಟಿಸುವ ಧೈರ್ಯ ಇದೆಯಾ ಅಂತ ಅನ್ನಿಸಿತು ನನಗೆ. ಪ್ರಶ್ನಿಸುವ ಮನೋಭಾವವೇ ಹೊರಟು ಹೋಗುತ್ತಿದೆ. ಇಲ್ಲಿ ಕಾಯಿಲೆ ನೆಪದಲ್ಲಿ ಒಪ್ಪಿತ ಗುಲಾಮಗಿರಿ ಹೇರುವ ಮತ್ತು ಅದನ್ನು ಒಪ್ಪಿಸುವ ಮನಸ್ಥಿತಿಯ ಕರ್ನಾಟಕದಲ್ಲಿ ನಾವಿದ್ದೇವೆ.ಹನುಮಾಪುರದಲ್ಲಿ ಹನುಮ ಜಯಂತಿ ಇವತ್ತಿಗೂ ಪ್ರಸ್ತುತ ಎನಿಸುವ ಕತೆ.ಇನ್ನೂ ” ಹೋಟೆಲ್ ಬ್ಲೂ ” ೧೯೭೬ ರಲ್ಲಿ ಬಂದ ಸಂಕಲನ.ಎಮರ್ಜನ್ಸಿ ಪ್ರಾರಂಭದ ಕಾಲ.(೧೯೭೬-೭೭). ಬದುಕಿನ ಹತ್ತು ಹಲವು ಆಯಾಮಗಳನ್ನು ಏಕಕಾಲಕ್ಕೆ ಈ ಕತೆ ಹೇಳುತ್ತದೆ. ರಾಜಕೀಯ, ಭ್ರಷ್ಟಾಚಾರ, ಜಾತೀಯತೆ, ಸಾಹಿತ್ಯ, ಪ್ರಶಸ್ತಿಯ ರಾಜಕೀಯ, ಜಾತಿ ಸ್ವಜನ ಪಕ್ಷಪಾತ, ಮದ್ಯ, ಕಳ್ಳಸಾಗಾಟ, ಸೂಳೆಗಾರಿಕೆ ದಂಧೆ, ಗುಂಡು ಪಾರ್ಟಿಗಳು…ಪ್ರತಿಭಟನೆ, ಸ್ತ್ರೀಶೋಷಣೆ ….ಇಷ್ಟೆಲ್ಲಾ ಆಯಾಮಗಳನ್ನು ಒಂದೇ ಕತೆಯಲ್ಲಿ ಹೇಳುವ ಕಲಾತ್ಮಕತೆ ವೀಣಾ ಶಾಂತೇಶ್ವರ ಅವರಿಗೆ ಸಾಧ್ಯವಾಗಿದೆ. ಬದುಕಿನ ಬಹುತ್ವವನ್ನು…ಅನೇಕ ಮನಸ್ಥಿತಿಗಳನ್ನು ಕತೆಗಾರ್ತಿ ಪಾತ್ರಗಳ ಡೈಲಾಗ್ಸ ಮೂಲಕ ಹೇಳಿಬಿಡುತ್ತಾಳೆ.ಕತೆ ಓದುತ್ತಲೇ ಒಂದು ನಾಟಕಕೀಯ ದೃಶ್ಯ ನಮ್ಮ ಕಣ್ಮುಂದೆ ಚಲಿಸುತ್ತದೆ. ಅವರ ಮುಳ್ಳುಗಳು ಕತೆಯನ್ನು ಕನ್ನಡ ಯುವ ಬರಹಗಾರ್ತಿ ಯರು ಹಾಗೂ ಬರಹಗಾರರು ಓದಬೇಕು.ಅದ್ಭುತ ಕತೆ. ಮನದ ಚಲನೆ ಅಲ್ಲಿದೆ. ೨೪ ತಾಸುಗಳಲ್ಲಿ ಚಲಿಸುವ ಕತೆ ಅದು. ಅವಳ ಸ್ವಾತಂತ್ರ್ಯ ಧ್ವನಿಪೂರ್ಣ ಕತೆ.೧೯೯೪ ರಲ್ಲಿ ಬಂದ ಬಿಡುಗಡೆ ಕತೆ ಕನ್ನಡ ಕಥಾ ಸಾಹಿತ್ಯದಲ್ಲಿ ಮೈಲಿಗಲ್ಲು. ಮಹಿಳಾವಾದಿಗಳು, ಸಂಪ್ರದಾಯಸ್ಥ ಪುರುಷರು ಓದಬೇಕು. ಹೆಣ್ಣಿನ ಕನಸು ಮತ್ತು ಪುರುಷ ದೌರ್ಜನ್ಯದ ಈ ಕತೆ ಹೇಳುವ ಶೈಲಿ, ಕಥನದ ಹೊಸ ಮಾದರಿ ಅಲ್ಲಿದೆ. ಕತೆ ಸಾಗುವ ದಾರಿ ನಿಮ್ಮನ್ನ ಅಚ್ಚರಿ ಗೊಳಿಸುತ್ತದೆ. ಅಂತ್ಯ ಬಂಡಾಯವೇ ಆಗಿದೆ. ಓದುಗನನ್ನು ಚಕಿತಗೊಳಿಸುತ್ತದೆ. ಅವರ ಕತೆಗಳಿಗೆ ಮಾಂತ್ರಿಕ ಶಕ್ತಿ ಇದೆ..ಈ ದೃಷ್ಟಿಯಿಂದ ಕತೆ ,ಕತೆಗಾರ್ತಿ ಬಹುತ್ವದ ಸಂಕೇತ. ಕವಿ ಬಹುತ್ವ ಭಾವನೆಗಳನ್ನು ತನ್ನೊಳಗೆ ಗರ್ಭೀಕರಿಸಿಕೊಂಡು ಸರ್ವಾಧಿಕಾರಿಯಂತೆ, ಶಬ್ದಗಾರುಡಿಗನಂತೆ ಏಕತ್ರನಾಗಿ ಬರೆಯುತ್ತಾ ಸಾಗುತ್ತಾನೆ. ಬಹುತ್ವ ತನ್ನದಾಗಿಸಿಕೊಂಡ ಬೇಂದ್ರೆಯಂತೆ. ಬಹುತ್ವವನ್ನೇ ಮಾತಾಡಲು ಬಿಟ್ಟು ,ತಾನು ಕೃತಿಕಾರನಾಗಿ ಕಾನೂರು ಸುಬ್ಬಮ್ಮ ಹೆಗ್ಗಡಿತಿಯಂತೆ ಬಹುತ್ವವೇ ಆಗುತ್ತಾರೆ ಕುವೆಂಪು. ಹಾಗಾಗಿ ಕುವೆಂಪು ನನಗೆ ಬಹುತ್ವದ ಪ್ರತಿನಿಧಿ. ಬೇಂದ್ರೆ ಏಕತ್ವದ ಪ್ರತಿನಿಧಿ. ನನಗೆ ನನ್ನ ಅಪ್ತರರೊಬ್ಬರು ಹೇಳುತ್ತಿದ್ದರು ; ” ಪ್ರಯತ್ನಿಸಿದರೆ ಎಲ್ಲರೂ ಬರಿಯಬಹುದು.ಕತೆ ಕಷ್ಟ. ನಿನಗೆ ಕತೆ ಬರೆಯುವ ಶಕ್ತಿಯಿದೆ.ನೀ ಕತೆ ಬರೆಯೆಂದುಆ ಮಾತು ನನಗೆ ಈಚೆಗೆ ನಮ್ಮ ಕಥಾ ಪರಂಪರೆಯ ಹಿರಿಯರನ್ನು ಓದುವಾಗ ನಿಜ ಅನ್ನಿಸಿದೆ. ಲಂಕೇಶ್, ದೇವನೂರು, ವೀಣಾ ಶಾಂತೇಶ್ವರ, ಶಾಂತಿನಾಥ ದೇಸಾಯಿ ಅದ್ಭುತ ಕತೆಗಾರರು. ನೀವು ಸಹ ಕತೆ ಓದಿ. ಬಿಡುವಾದಾಗ. ಪ್ರಶ್ನಿಸುವುದ ಈ ಸಮಾಜ ಕಲಿಯುವಂತೆ ಕತೆ ಬರೆಯಿರಿ. ************** ನಾಗರಾಜ ಹರಪನಹಳ್ಳಿ
ಪುಸ್ತಕ ವಿಮರ್ಶೆ
ವಿರಹಿ ದಂಡೆ ವಿರಹಿ ದಂಡೆ ( ಕವನ ಸಂಕಲನ )ಲೇಖಕ: ನಾಗರಾಜ್ ಹರಪನಹಳ್ಳಿನೌಟಂಕಿ ಪ್ರಕಾಶನಬೆಲೆ – 80 ವಿರಹಿ ದಂಡೆಯ ವಿಹಾರವ ಹೊತ್ತು…. ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ ಕವಿ ಅಸಮಾನ್ಯನೇ ಸರಿ. ಆದರೂ ಎಲ್ಲರಿಗೂ ಪ್ರಕೃತಿಯೊಡನೆ ಒಂದಾಗುವುದು, ವರ್ಷಾನುಗಟ್ಟಲೆ ಮಾತಿಗಿಳಿಯುವುದು ಕಷ್ಟಕರವೇ. ಅಂತಹ ಕಷ್ಟಪರರ ಆಚೆ ನಿಂತು ತನ್ನ ಐಚ್ಛಿಕದ ಪ್ರಪಂಚದಲ್ಲಿ ಆಪ್ತ ಭಾವಗಳ ಬಲೆಯೊಳಗೆ ತನ್ನನ್ನೂ, ತನ್ನದನ್ನೂ ಹಾಗೂ ತನ್ನವರನ್ನು ಬರಸೆಳೆದ ಕವಿ ನಾಗರಾಜ ಹರಪನಹಳ್ಳಿಯವರು. ಅವರ ಎರಡನೇ ಕವನ ಸಂಕಲನ ವಾದ “ವಿರಹಿ ದಂಡೆ” ಯೊಂದಿಗೆ ವಿಹಾರದ ವಿವರಗಳ ಹೊತ್ತು ನಲಿದ ಸಂತ್ರಪ್ತ ಕ್ಷಣವಿದು ಚಂದ. ಕವನ ಸಂಕಲನದ ” ವಿರಹಿ ದಂಡೆ” ಶೀರ್ಷಿಕೆಯೇ ಆಕರ್ಷಣೀಯ. ‘ವಿರಹ ನೂರು ತರಹ’ ಎಂಬ ಸಿನಿಮಾದ ಹಾಡಿನ ಸಾಲಿನಂತೆ ಜಗದ ಎಲ್ಲರನ್ನೂ ಬೆಂಬಿಡದೆ ಒಮ್ಮೆಯಾದರೂ ಕಾಡುವ ವಿರಹಿತನದ ಸುಂದರವಾದ ಗುಟುಕನ್ನು ಮೆದುವಾಗಿ ಗಂಟಲಿಗಿಳಿಸಿಕೊಂಡಿದ್ದಾನೆ ಕವಿ. ಪ್ರಕೃತಿಯನ್ನೇ ಹೆಣ್ಣಾಗಿಸಿ, ಹೆಣ್ಣನ್ನೇ ಪ್ರಪಂಚದ ಸುಂದರ ಜೀವರೂಪಿಯಾಗಿ ಆರಾಧಿಸುವ ಕವಿತ್ವಕ್ಕೊಂದು ಸಲಾಂ ಸಲ್ಲಿಸಲೇಬೇಕು. ಆ ಮಗ್ಗಲು ಬದಲಿಸಿ ಪ್ರಕೃತಿಯನ್ನು ಬೊಗಸೆಯಲ್ಲಿ ಹಿಡಿದು ಗಾಳಿ, ಮಳೆ, ಬೆಳಕು, ಸಮುದ್ರದ ದಂಡೆಗಳೆಲ್ಲವನ್ನೂ ಆಟಿಕೆಯಂತೆ ಅನುಭವಿಸುವ ಕವಿಯ ತುಂಟತನ, ಪ್ರೀತಿಯನ್ನು ಬರೀ ಕಣ್ಣುಗಳಿಗೆ ಮಾತ್ರ ಸೀಮಿತವಾಗಿಸದೆ, ಕನಸುಗಳಲ್ಲಿ ಮಾತಾಡುವ ಪ್ರೀತಿ, ಪ್ರಣಯವನ್ನು ಪಕ್ಕಕ್ಕಿಟ್ಟು, ನಿಸರ್ಗ ಸಿದ್ಧವಾದ ಮಿಲನ ಮೈಥುನವನ್ನು ಬರೀ ಹೆಣ್ಣು-ಗಂಡಿಗೆ ಮಾತ್ರ ಸೀಮಿತವಾಗಿಸದೇ ಗಿಡ- ಮರಗಳಿಗೂ, ದಂಡೆ -ಕಡಲಿಗೂ ಕಂಡಲ್ಲಿ ಕಂಡಷ್ಟು ಪ್ರಕೃತಿಗೆ ಮಿಲನದ ಕಾತುರವಾಗುವ ಪುಣ್ಯಕಾಲವನ್ನು ಕವಿ ಎದೆಯೊಳಗೆ ತುಂಬಿಕೊಂಡಿದ್ದಾನೆ. ತನ್ನ ಪ್ರೀತಿಯ ಪರಾಕಾಷ್ಠೆಯನ್ನು ತುಂಬಾ ವಿಸ್ತಾರವಾಗಿ, ಬಾಹ್ಯವಾಗಿ ಅವಲತ್ತು ಕೊಂಡಿದ್ದು ಪ್ರೀತಿಯನ್ನು ಸದಾ ರಸಿಕತೆಯಲ್ಲಿ ಕಂಡ ಕವಿಗೆ ವಿರಹವನ್ನ ಸರಳ ಸುಲಭವಾಗಿ ಅನುಭವಿಸಲಾಗದು. ಸಾನಿಧ್ಯಕ್ಕೆ ಮುದ್ದಾಡಿದ, ಹೊರಳಾಡಿದ ಸುಖದ ತುತ್ತ ತುದಿಯ ಕೂಗಾಟ, ಬಿಸಿಯುಸಿರ ಉನ್ಮಾದದ ಯಾವುದೋ ಸುಖದಲ್ಲಿ ಕಳೆದುಹೋಗುವ ಕವಿಗೆ ವಿರಹ ಎಂಬುದೊಂದು ಮರೀಚಿಕೆಯೇ ಆಗಿರುವಾಗ ಒಮ್ಮೊಮ್ಮೆ ಕ್ಷಣಿಕ ವಿರಹವನ್ನು ಎದುರಿಸುವುದು ಕೂಡಾ ಅಸಾಧ್ಯವಾದ ಮಾತೇ ಆಗಿದೆ. “ಭೂಮಿಯ ಬಿರುಕಿಗೆ ಬೆರಳಿಡುವೆ” ಕವಿತೆ ಸಾಕೆನಿಸುವಷ್ಟು ಶೃಂಗಾರವನ್ನು ತುಂಬಿಕೊಂಡಿದ್ದು, ರಸಿಕತೆಯ ಅನುಭವಿಸಿದ ಅವಕಾಶವಾದಿಗಳಿಗೆ ಏನೇನನ್ನೋ ಒಳಗೊಳಗೆ ಅನಿಸುವಷ್ಟು , ನಿರೀಕ್ಷಿಸುತ್ತಿರುವವರಿಗೆ ಆಸೆ ಹುಟ್ಟಿಸುವಂತಹ ಗಟ್ಟಿತನದ ಕವಿತೆ. ಸೃಷ್ಟಿಯ ಒಂದು ಮಿಲನದ ನೋಟವನ್ನು ಆಪ್ತ ಪದಗಳಿಂದ ಔಚಿತ್ಯ ಪೂರ್ಣವಾಗಿ ಓದುವವರಿಗೆ ಉಣಬಡಿಸುವ ಕಲೆಯೊಂದು ಕವಿಗೆ ಕರಗತವಾದಂತಿದೆ. ಕವಿತೆಯ ಕೊನೆಯಲ್ಲಿ “ಭೂಮಿಯ ಬಿರುಕಿಗೆ ಬೆರಳಿಡುವುದೆಂದರೆಗೆಲ್ಲುವುದು ಸೋಲುವುದು ಶರಣಾಗುವುದು ಒಂದಾಗುವುದುಉಳಿದದ್ದು?ಉಳಿದದ್ದು ಏನು ಇಲ್ಲ…!!ಭೂಮಿಯ ಎದುರು ಮತ್ತೆ ಮತ್ತೆ ಧ್ಯಾನಿಸುವುದು….” ಕವಿಯ ಈ ಕಲ್ಪನೆಯು ತೀರಾ ಆಪ್ತವಾಗಿ ಮನತಟ್ಟುತ್ತದೆ. ದೈನಿಕದಲ್ಲಿ ಬಹುತೇಕರು ರಾತ್ರಿ ಕನಸಿನಲ್ಲಿ ಕಾಣುವ ವಾಸ್ತವವಲ್ಲದಾದರೂ ಕ್ಷಣಿಕ ವಾಸ್ತವ ಎನಿಸುವ, ಆಪ್ತವೂ ದೂರವೂ ಆದಂತಹ ಕನಸು ಮತ್ತು ಮನಸ್ಸಿನ ತೊಯ್ದಾಟಗಳು, ಮಲಗಿದ್ದಾಗ ಕನಸು ಅನಾವರಣವಾಗುವ ಬಗೆ, ಅದರಲ್ಲಿ ದನಿಯೊಂದು, ಮುಖವೊಂದು, ಸ್ಥಳ ಇನ್ನೊಂದು ಆದರೆ ಆ ಕನಸಿನಲ್ಲಿ ನಾವು ಮಾತ್ರ ಪಕ್ಕಾ. ಕನಸೇ ಹೀಗೆ ಎಂಬುದು ನನ್ನ ವಾಸ್ತವಕ್ಕೂ ಬರುವಹಾಗೆ ಕಟ್ಟಿಕೊಟ್ಟ ಕವಿತೆಯು ಸಹ ಆಪ್ತವಾಗಿ ಕೈ ಹಿಡಿದುಬಿಡುತ್ತದೆ. “ಕಣಿವೆ ತೋಳುಗಳಲಿರಭಸದಿ ಹರಿವ ನದಿಗೆಎದೆ ಕೊಟ್ಟ ಪರ್ವತ ಶೃಂಗಾರೋನ್ಮತ್ತಕಾಮೋನ್ಮಾದದಿ ಮಿಂದ ನಗ್ನ ಭೂಮಿನಗುನಗುತ್ತಾ ನಿದ್ದೆ ಹೋಗಿರಲು” ರಾತ್ರಿ ಸುರಿದ ಮಳೆ ಕವಿಯ ಕಾವ್ಯ ಪ್ರಪಂಚಕ್ಕೆ ವಿಶಿಷ್ಟವಾಗಿದೆ. ಮಳೆ ಮತ್ತು ಪ್ರಥ್ವಿಯ ಬರಪೂರಿ ಮಿಲನವನ್ನು ಕವಿ ಕಂಡು ಉಂಡು ತೇಗಿದ್ದಾನೆ ತೇಗುತ್ತಿದ್ದಾನೆ. ಭೂಮಿ ಮತ್ತು ಮಳೆಯ ನಡುವಿನ ನಂಟು ಭೂಮಂಡಲದ ಚರಾಚರ ಜೀವರಾಶಿಗಳಿಗೆ ಅವಶ್ಯಕ. ಅದಕ್ಕೆ ಗಂಡು ಹೆಣ್ಣಿನ ಮಿಲನದಂತೆ ಹೋಲಿಕೆ ನೀಡಿ ಕವಿತೆಯ ಕೊನೆಯಲ್ಲಿ “ಬೆವರುಂಡ ಗದ್ದೆಗಳು ಹಸಿರಾದವು” ಎಂದು ಸತ್ಯವನ್ನೇ ಅರುಹಿದರೂ ಆ ತುಂಟತನದ ಸಾಲುಗೊಂದು ಸೋಜಿಗದ ಚಪ್ಪಾಳೆ ಸೇರಲೇ ಬೇಕು. “ಸುಳಿವ ಗಾಳಿ ಯಲಿಎರಡು ನಿಟ್ಟಿಸಿರುಗಳಿವೆಅವು ಪ್ರೇಮದ ಪಲ್ಲವಿಗಳಾಗಿ ಬದಲಾಗಿ ಬಿಡಲಿ “ ಈ ಸಾಲುಗಳು “ಮೌನ” ಕವಿತೆಯಲ್ಲಿ ಮಿಂದೆಳುವಾಗ ವಿರಹದ ಆಳ ಅನುಭವಕ್ಕೆ ಬರುತ್ತದೆ.” ನಿನ್ನ ದನಿ ಕೇಳದ ಭೂಮಿಗೆ ಆಕಳಿಕೆಯ ಸಮಯ” ಹೀಗೆ ವಿರಹದ ವಾರ್ತೆ ಎದೆಯೊಳಗೆ ಆರಿದ ಕೆಂಡದಲಿ ಹಸಿ ಜೋಳದ ತೆನೆಗಳನಿಟ್ಟು ಬಿಸಿ ಜೋಳದ ತೆನೆಯ ತಿನ್ನಲಾಗದ ನಿರಾಶೆಯಂತೆ ವಿರಹ ಹಾದುಹೋಗುತ್ತದೆ. ಕವನ ಸಂಕಲನದ ಪುಟಗಳಿಗೆ ಮೈಗಂಟಿಕೊಂಡ ರಾಶಿರಾಶಿ ಹನಿಗಳು ಓದುಗನ ಎದೆಯಮೇಲೆ ಇಬ್ಬನಿಯಂತೆ ಭಾಸವಾಗುತ್ತವೆ. ಅವು ಪದಕ್ಕೆ ಪದ ಸೇರಿ ಎದೆ ತಾಕಿಸಿ ಮೆಲ್ಲಗೆ ಮಾಯವಾದರೂ ಮತ್ತೆ ಬೇಕೆನಿಸುವಷ್ಟು ಸಂಜೆಯ ಕಾಂದಾ ಬಜಿಗಳಂತೆ ಅನಿಸುವವು. “ಬಯಲ ಗಾಳಿಮನೆ-ಮನಗಳ ಸುಖ-ದುಃಖ ಮಾತಾಡಿಸಿ ಹೋಯಿತು” ಯಾರದೋ ಮನೆವಾರ್ತೆಗೆ ಸಾಕ್ಷಿಯಾಗುವ ಗಾಳಿ ಕವಿಯೊಳಗೆ ಸಜೀವ ಸಹೃದಯ ವ್ಯಕ್ತಿಯಂತೆ ಭಾಸವಾಗುವ ಪರಿ ಅದ್ಭುತವಾದದ್ದು. ಒಂದು ತುಂಟತನ, ಅವ್ಯಕ್ತ ಭಾವ, ಸೂಕ್ಷ್ಮತೆಯ ಅನಾವರಣಗಳ ಅಭಿವ್ಯಕ್ತತೆಯನ್ನು ಕ್ಷಣದಲ್ಲೇ ಮೈಮನಕ್ಕೆ ಹಾಯಿಸಿ ನಿರಾಳವಾಗುವ ನಾಗರಾಜರವರ ಹನಿಗಳು ಮೋಡಿ ಮಾಡುವಂಥವುಗಳಾಗಿವೆ. “ಚಂದ್ರ ಮೈತುಂಬಿ ಬಳುಕಿದ ನಿನ್ನ ನೆನಪಾಯಿತು” ” ಬಣ್ಣದ ಸೀರೆ ತೊಟ್ಟು ಮಧುಮಗಳಂತೆ ಕಾದದ್ದೇ ಆತು ವಿರಹ ವಿರಹಕ್ಕೆ ಪ್ರೇಮ ಬರೆಯುವುದುಂಟೇ? “ ಪ್ರೇಮದ ಫಲಿತಾಂಶಗಳಲ್ಲಿ ವಿರಹವು ಒಂದು ಭಾಗ. ಕೆಲವೊಮ್ಮೆ ಅದು ಸಂಪೂರ್ಣವಾಗುವುದೂ ಕೂಡ ಇದೆ. ಆದರೆ ಇಂತಹದೇ ವಿರಹಗಳ ಒಳಗೆ ಮತ್ತೆ ಪ್ರೇಮ ವಾಗಬೇಕೆಂದು ಕಾಯುವುದು ಹೊಸತನ. ಹೀಗೆ ‘ವಿರಹಿ ದಂಡೆ’ ಕವನ ಸಂಕಲನದುದ್ದಕ್ಕೂ ಪ್ರಕೃತಿ, ಪ್ರೇಮ, ವಿರಹ, ಕನಸು, ನಿರೀಕ್ಷೆ , ಆಸೆ-ಆಕಾಂಕ್ಷೆ , ಅಮಲು, ತುಮುಲ, ಬಲ,ಸಕಲಗಳನ್ನು ತನ್ನದಾಗಿಸಿಕೊಂಡು ವಿಶೇಷ ಪದಪುಂಜದಲಿ ಅವುಗಳನ್ನು ಅಚ್ಚಾಗಿಸಿ ತನ್ನೆದೆಯ ಒಳಗೆ ವಿಶೇಷ ಇತಿಹಾಸವನ್ನೇ ಸೃಷ್ಟಿ ಮಾಡಿಕೊಂಡು ಜಾಗೃತವಾದ ಸಾಹಿತ್ಯ ಆಸಕ್ತಿಯನ್ನು ಬೆಳೆಕಾಗಿಸಬೇಕೆಂಬ ಕವಿಯ ಪ್ರಯತ್ನ ಸಫಲವಾಗಿದೆ. ತೀರಾ ಗಂಭೀರ ಶೈಲಿಯಲ್ಲಿ ಓದಿದಾಗ ಕವಿತೆಗಳು ಮುಖ ಊದಿಸಿಕೊಂಡು ಸಿಟ್ಟುಗೊಳ್ಳುತ್ತವೆ. ತೀರಾ ಒಳಗಣ್ಣಿನಿಂದ ಬಾಲ್ಯ, ಹರೆಯಗಳ ತುಂಟಾಟಗಳಿಗೆ ಅವಕಾಶವಿತ್ತು ಕವಿತೆಗಳನ್ನು ಆಸ್ವಾದಿಸುವಾಗ ಹೊಸ ತರದ ಪ್ರೇಮ, ವಿರಹ, ಪ್ರಣಯ ಇತ್ಯಾದಿಗಳ ಹಿತವಾದ ಪರಿಧಿಯೊಂದು ಮನಸ್ಸಿನ ಪರದೆ ಸರಿಸಿ ನಸುನಗುತ್ತದೆ. ಒಟ್ಟಾರೆಯಾಗಿ ಕಾವ್ಯ ಪ್ರಪಂಚಕ್ಕೆ ವಿರಹವನ್ನೂ ಸಲಿಗೆಯಾಗಿ ಒಲವಾಗಿ ಉಣಬಡಿಸುವ ಕವಿಯ ಪ್ರಯತ್ನ ಅದ್ಬುತವಾದಂತದ್ದು. ******* ಮೋಹನ್ ಗೌಡ ಹೆಗ್ರೆ
ವಿಮರ್ಶೆ
ದೇವರದೇನು ದೊಡ್ಡಸ್ತಿಕೆ ಬಿಡು ನನ್ನ ಗಂಡನ ಮುಂದ (ಆನಂದ ಕಂದರ ಪದ್ಯವೊಂದರ ಅನ್ವಯಿಕ ವಿಮರ್ಶೆ) ನಲ್ವಾಡುಗಳು ಆನಂದ ಕಂದರ(ಬೆಟಗೇರಿ ಕೃಷ್ಣಶರ್ಮರ) ಕವಿತಾ ಸಂಕಲನ. ಹೊಸಗನ್ನಡದ ಶ್ರೇಷ್ಠ ಸಂಕಲನಗಳಲ್ಲೊಂದು.ಇ ದರಲ್ಲಿ ಇಪ್ಪತ್ತೊಂದು ಗೀತಗಳಿವೆ.ಇವುಗಳನ್ನು ಜನಪದ ಪ್ರೀತಿಗೀತಗಳು ಎಂದು ಅವರೇ ಕರೆದಿದ್ದಾರೆ.ಹೆಸರೇ ಹೇಳುವಂತೆ ಸಂಕಲನದ ತುಂಬ ಇರುವದು ಹಳ್ಳಿಗರ ಪ್ರೀತಿಲೋಕವೇ.ಜಾನಪದ ಮುಗ್ಧ ಗಂಡು ಹೆಣ್ಣುಗಳ ಸಹಜ ಪ್ರೀತಿ,ಅವರ ದಾಂಪತ್ಯ ಅಲ್ಲಿನ ಸಹಜ ಸುಂದರ ಲೋಕ ಈ ಕವಿತೆಗಳ ವಸ್ತು.ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೊಳಗಾಗುವ ಚಿತ್ರದಿಂದ ಹಿಡಿದು ಅವರ ಮದುವೆ, ಸುಂದರ ದಾಂಪತ್ಯ, ಗಂಡನನ್ನು ಬಿಟ್ಟು ತವರಿಗೆ ಬಂದ ಹೆಣ್ಣುಮಗಳ ವಿರಹ,ಗಂಡನ ಪ್ರೀತಿ, ಇನ್ನಿತರ ಹೆಂಗಳೆಯರ ಗಂಡ ಬೆನ್ನು ಹತ್ತಿದಾಗ ಹೆಣ್ಣುಮಗಳು ಪಡುವ ನೋವು,ಹಳ್ಳಿಯ ಹಬ್ಬ ಜಾತ್ರೆಗಳ ಚಿತ್ರ,ತಮ್ಮ ಊರನ್ನು ಜನಪದ ಹೆಣ್ಣುಮಗಳು ಚಿತ್ರಿಸುವ ವೈಭವ ಹೀಗೆ ಅಪ್ಪಟ ಜಾನಪದಿಯ ಲೋಕವೊಂದನ್ನು ಕಟ್ಟಿಕೊಡುವ ಈ ಸಂಕಲನ ಕನ್ನಡದ ಒಂದು ಅಪರೂಪದ ಸಂಕಲನವಾಗಿದೆ.ಈ ಸಂಕಲನದೊಳಗಿನ ಒಂದುಪದ್ಯ ‘ದೇವರ ದೇವರು ‘ ಎಂಬುದು. ದೇವರ ದೇವರು ಎಂದರೆ ದೇವರಿಗೇ ದೇವರು ಎಂದರ್ಥ. ಯಾವುದೇ ಗರತಿ ತನ್ನ ಗಂಡ ತನ್ನ ಪ್ರೀತಿಯನ್ನು ಇನ್ನೊಂದು ಹೆಣ್ಣಿಗೆ ಹಂಚುವದನ್ನು ಸಹಿಸಲಾರಳು.ಗಂಡನ ಅಖಂಡ ಪ್ರೀತಿಯ ಮುಂದೆ ಲೋಕದ ಯಾವ ಸಿರಿವಂತಿಕೆಯೂ ದೊಡ್ಡದಲ್ಲ.ಬಹುಶಃ ‘ನಿನ್ನ ಗಂಡ ಅಲ್ಲೊಬ್ಬಳ ಕೂಡ ನಗತಿದ್ದ ‘ ಎಂಬ ಹಿರಿಯಳೊಬ್ಬಳ ಮಾತಿಗೆ ನಕ್ಕರೆ ನಗಲೆವ್ವ ನಗಿಮುಖದ ಕ್ಯಾದಿಗಿನಾ ಮುಡಿದ ಹೂವು ಅವಳೊಂದುಗಳಿಗಿ ಮುಡಿಯಲಿ ಎಂದಿರುವ ಮಾತು ಗರತಿಯೊಬ್ಬಳ ಮಾತಾಗಿರದೆ ಯಾರೋ ಪುರುಷರೇ ಬರೆದು ಸೇರಿಸಿದ ಪದ್ಯ ವಾಗಿರಬೇಕು. ಏಕೆಂದರೆ ಮದುವೆಯಾದ ಯಾವ ಹೆಣ್ಣು ತನ್ನ ಗಂಡನ ಪ್ರೇಮ ಇನ್ನೊಂದು ಹಂಚಿಕೆಯಾಗುವದನ್ನು ಸಹಿಸಲಾರಳು. ದೇವರ ದೇವರು ಕವಿತೆ ಹೀಗೆ ಆರಂಭವಾಗುತ್ತದೆ. ದೇವರದೆಂತಾ ದೊಡ್ಡಸ್ತಿಕೆ ಬಿಡುನನ್ನ ಗಂಡನ ಮ್ಯಾಲನನ್ನ ಹೊರತು ಇನ್ನೊಂದು ಹೆಣ್ಣ ಮ್ಯಾಲಿಲ್ಲ ಅವಗ ಖ್ಯಾಲ ಹೀಗೆ ತನ್ನಗಂಡನೇ ಶ್ರೇಷ್ಠ ಎನ್ನುವ ಹೆಣ್ಷುಮಗಳು ಆತ ಏಕೆ ಶ್ರೇಷ್ಠ ಎನ್ನುವದನ್ನು ಮುಂದಿನ ಪದ್ಯ ಭಾಗದಲ್ಕಿ ವಿವರಿಸುವದು ಬಹು ಸುಂದರವಾಗಿದೆ. ಬ್ರಹ್ಮ ನಮ್ಮ ಪರಂಪರೆಯ ಕಥೆಗಳ ಪ್ರಕಾರ ಲೋಕದ ಸೃಷ್ಟಿಕರ್ತ.ಆದರೆ ಆತನಿಗೆ ಸರಸ್ವತಿಯೊಬ್ಬಳೇ ಹೆಂಡತಿಯಲ್ಲ,ಮೂವರೊಂದಿಗೆ ತನ್ನ ಪ್ರೀತಿಯನ್ನು ಆತ ಹಂಚಿಕೊಂಡವನೆಂದು ಜನಪದ ಗರತಿಗೆ ಕೋಪ.ಅಂತೆಯೇ ಆಕೆ ಬ್ರಹ್ಮದೇವನು ಬಹಳ ಹಿರಿಯನಂತಬುದ್ದಿ ಐತೆ ಅವಗ?ಮೂರುಜನಾ ಹೆಂಡರು ಬೇಕಾತ್ಯಾಕಪ್ರೀತಿಯ ಬಗಿ ಹ್ಯಾಂಗ? ಮೂರು ಜನರೊಂದಿಗೆ ಹಂಚಿಕೊಂಡ ಪ್ರೀತಿ ಪ್ರೀತಿಯೇ? ಇದು ಅವಳ ಪ್ರಶ್ನೆ.ಹೃದಯದಲ್ಲಿ ಜಾಗ ಇರುವದೇ ಒಬ್ಬಳಿಗೆ. ಹೆಚ್ಚು ಜನ ಹೇಗೆ ನಿಂತಾರು? ಒಬ್ನಳು ಹೃದಯದಲ್ಲಿ ನೆಲೆಸಿದ ಮೇಲೆ ಇನ್ನಿಬ್ಬರು ನಿಟ್ಟುಸಿರು ಹಾಕುತ್ತಾ ಇರಲೇಬೇಕಲ್ಲವೆ? ತುಂಬ ವಾಸ್ತವಿಕ ಪ್ರಶ್ನೆ ಎತ್ತುವ ಗರತಿಯ ಪ್ರಶ್ನೆ ವೈಜ್ಞಾನಿಕವಾಗಿದೆ.ಒಂದೇ ಸಮಯಕ್ಕೆ ಇಬ್ಬಿಬ್ಬರಿಗೆ ಹೃದಯದಲ್ಲಿ ಜಾಗ ಕೊಡುವ ಗಂಡು ಇರಬಹುದೇ? ರಾಮ ರಾಮನಂತ ಹೊಗಳೆ ಹೊಗಳತಾರರಾಮನೇನು ಸುದ್ದಯಾರಮಾತ ಕೇಳಿ ಪ್ರೀತಿಯ ಸತಿಯನಅಡವಿಗೆ ಅಟ್ಟಿದ್ದ ವಾವ್ ! ಗರತಿಯ ಪ್ರಶ್ನೆಗೆ ವಾಲ್ಮಿಕಿಯೂ ನಿರುತ್ತರ! ಹೌದು, ತುಂಬು ಬಸಿರಿ ಸೀತಯನ್ನು ಕಾಡಿಗೆ ಕಳಿಸಿದ್ದು ಎಂಥ ಮಾನವೀಯ ನಡೆ? .ಅದಕ್ಜೆ ಲಕ್ಷ್ಮೀಶ ಕವಿ ” ಕರುಣಾಳು ರಾಘವ ನಲಿ ತಪ್ಪಿಲ್ಲ” ಎಂದು ವ್ಯಂಗ್ಯವಾಡಿದ್ದು! ಆದರೆ ಸೀತೆ ಬಿಸಿಲು ಬಿಸಿಲು ಎಂದು ಕಾಡಲಿ ಬಳಲುವಾಗ ವಾಲ್ಮೀಕಿ ತಂದೆಯಾಗಿ ಕಾಯ್ದಿದ್ದನ್ನು ಸ್ಮರಿಸುತ್ತಾಳೆ. ಕೃಷ್ಣನಂತೂ ಹದಿನಾರು ಸಾವಿರ ಹೆಂಡಿರ ! ಅವನ ಬಗೆಗಂತೂ ಗರತಿಗೆ ಗೌರವ ವಿರಲು ಸಾಧ್ಯವಿಲ್ಲ. ಅಂತೆಯೇ ಕೃಷ್ಣನನ್ನು ಖೊಟ್ಟಿ ಎಂತಲೇ ಆರಂಬಿಸುತ್ತಾಳೆ. ಕೃಷ್ಣನದಂತೂ ಖೊಟ್ಟಿತನವು ನೋಡೆಷ್ಟು ಹೆಂಡರವಗ?ಹೊಟ್ಟಿ ಉರಿದ ನಾರಿಯರು ಸುಮ್ಮನ$ಬಿಟ್ಟಾರೆನು ಹಾಂಗ? ಅವರ ಹೊಟ್ಟೆಯುರಿಯೇ ಅವನ ಸುಖವನ್ನು ಸುಟ್ಟಿರಬೇಕು ಎಂದವಳ ಊಹೆ. ಶಿವನದಂತೂ ಲೋಕವೇ ಬಲ್ಲ ಕಥೆ.ತಲಿ ಮ್ಯಾಲೊ ಬ್ಬಳು,ತೊಡಿಮ್ಯಾಲೊಬ್ಬಳು! ಗೌರಿ ಎಂಥ ಚಲುವಿ! ಆದರೂ ಗಂಗೆಯನ್ನು ಶಿವ ತಂದಿಟ್ಟುಕೊಂಡದ್ದು ಗರತಿಗೆ ಅಕ್ಷಮ್ಯ ಅಪರಾಧ .ಅದಕ್ಜೇ ಆಕೆ- ಹೇಳಬ್ಯಾಡ ಶಿವನೇಳಿಗಿ ಗೌರಿಯಗೋಳು ಗೋಳಿಸಿ ಬಿಟ್ಟಾಹೇಳದೆ ಕೇಳದೇ ತನ್ಬ ಜಡಿಯೊಳಗಗಂಗಿಯ ತಂದಿಟ್ಟಾ ಗೌರಿಯ ದುರ್ದೈವಕ್ಕೆ ಮರುಗುವ ಜನಪದ ಗರತಿ ಅಂತಹ ಹೆಣ್ಣಿಗೂ ಸವತಿಯನ್ನು ತಂದ ಶಿವನನ್ನು ಜಾಲಾಡಿಸುತ್ತಾಳೆ..ಇನ್ನು ಇಂದ್ರ ನಂತೂ ದೇವಲೋಕದ ಸುಂದರಿಯರನೆಕರನ್ನು ಉಪಪತ್ನಿಯಾಗಿಸಿಕೊಂಡಿದ್ದ.ಆತನದು ಗರತಿಯ ಮಾತಿನಲ್ಲಿ “ಸೂಳೆಯರ ಮ್ಯಾಳ” ! ದೇವೆಂದ್ರನ ಲೋಕಕ್ಕೆ ಗರತಿ ಕೊಟ್ಟ ಹೆಸರು! ಚಂದ್ರನ ಹಾದರದಾಟಕ್ಜೆ ಅವನ ಹೆಂಡತಿ ನಿತ್ಯ ಕಣ್ಣಿರಿಡತಿರಬೇಕು !ಎನ್ನುತ್ತಾಳೆ. ಇವರೆಲ್ಲ ದೇವರುಗಳು! ಪಾಪ ಅವರ ಹೆಂಡತಿಉರ ಬವಣೆ ಎಂತಹದು ! ಅವರಿಗಿಂತ ತಾನೇ ಪರಮ ಸುಖಿ! ಏಕೆಂದರೆ ತನ್ನಗಂಡ ಅವರ ಮುಂದೆ ಅಪ್ಪಟ ಚಿನ್ನ. ಗರತಿಯ ಮಾತು ಕೇಳಿ. ದೇವರಂತ ದೇವರ ಹೆಂಡರಿಗೂಯಾವ ಬವಣೆ ಗೆಳತೀಅವರಿಗೆಲ್ಲ ದೊರೆತಿಲ್ಲ ನನ್ಹಾಂಗಪತಿಯ ಪೂರ್ಣ ಪ್ರೀತಿ! ಆದ್ದರಿಂದಲೇ ಆಕೆಯ ಗಂಡ ದೇವರಿಗೂ ಮಿಗಿಲು! ನನ್ನ ರಾಯ ಸರಿ ದೇವರ ದೇವರುನಾನು ಅವನ ಗರತಿ –ನಮ್ಮ ಬಾಳಿನಲಿ ಸ್ವರ್ಗವನ್ನು ಇಳಿಸೇತಿಅವನ ಪ್ರೀತಿ! ದೇವರಂತಹ ರಾಯನಿಗೇ ತಾನುಗರತಿಯಂಬುದು ಅವಳ ಹೆಮ್ಮೆ! ಆಕೆ ಹೆಮ್ನೆ ಪಡುವದರಲ್ಲೂ ತಪ್ಪಿಲ್ಲ. ಅಂತೆಯೇ ಆಕೆ ಪ್ರಶ್ನಿಸುವದು’ ದೇವರದೆಂತಹ ದೊಡಗಡಸ್ತಿಕೆ ಬಿಡು ನನ್ನ ಗಂಡನ ಮುಂದ’ ಎಂದು! ಇಂತಹ ಅಖಂಡ ಪ್ರೀತಿಯನ್ನು ತಾವಿಬ್ಬರೇ ಹಂಚುಣ್ಣುವ ದಂಪತಿ ಜೋಡಿಗಳ ಸಂತತಿ ಸಾವಿರವಾಗಲೆಂಬುದು ಅವಳ. ಆಶಯ! ಹೆಣ್ಣಿನ ನಲಿವಿನ ಜೊತೆಜೊತೆಗೆ ಗಂಡಂದಿರ ಪ್ರೀತಿಯನ್ನು ಮತ್ತೊಂದು ಹೆಣ್ಣಿನೊಂದಿಗೆ ಹಂಚಿಕೊಳ್ಳಬೇಕಾಗಿ ಬಂದ ದುರ್ದೈವಿ ಹೆಣ್ಣುಮಕ್ಕಳ ನೋವನ್ನು ಪದ್ಯ ಸೂಕ್ಷ್ಮವಾಗಿ ವಿವರಿಸಿದೆ. ಮುಂಜಾನೆ ಪ್ರೀತಿಸಿ,ಸಂಜೆ ಮದುವೆಯಾಗಿ,ಮರುದಿನ ಡೈವೊರ್ಸಗೆ ನಿಲ್ಲುವ ,ಇಂದಿನ ಅತ್ಯಾಧುನಿಕ ಮನಸುಗಳು ಇಂಥಹ ಕವಿತೆಯನ್ನು ಓದಬೇಕು.ನಲ್ವಾಡುಗಳಲ್ಲೇ ಇರುವ ಗೌಡರ ಸೊಸೆ ಎಂಬ ಪದ್ಯದಲ್ಲಿ ಹೆಣ್ಣಿಗೆ ಗಂಡನ ಪ್ರೀತಿಯೇ ಹಂಚಿಕೆಯಾದ ಮೇಲೆ ಯಾವ ಸಿರಿವಂತಿಕೆ ಇದ್ದರೇನು ? ಎಂದು ಪ್ರಶ್ನಿಸುವ ಸಾಲುಗಳಿವೆ.ಹೆಣ್ಣಿಗೆಗಂಡಿನ ,ಗಂಡಿಗೆ ಹೆಣ್ಣಿನ ಸಂಪೂರ್ಣ ಪ್ರೀತಿಯೊಂದೇ ಆಸರೆ ಎಂದು ಸಾರುವ ಇಂತಹ ಅಪರೂಪದ ಪದ್ಯ ಮತ್ತೆ ಮತ್ತೆ ಓದಬೇಕಲ್ಲವೇ? ********** ಡಾ ವೈ.ಎಂ.ಯಾಕೊಳ್ಳಿ
ಪರಮೂ ಪ್ರಪಂಚ
ಪರಮೂ ಪ್ರಪಂಚಕಥಾಸಂಕಲನಲೇಖಕರು- ಇಂದ್ರಕುಮಾರ್ ಎಚ್.ಬಿಇಂಪನಾ ಪುಸ್ತಕ ವೃತ್ತಿಯಿಂದ ಶಿಕ್ಷಕರಾಗಿರುವ ಇಂದ್ರಕುಮಾರ್ ಅವರು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಮೊನ್ನೆಯಷ್ಟೇ ಅವರ ಕಥೆಯೊಂದು ‘ ಸೂಜಿದಾರ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿದೆ. ‘ಆ ಮುಖ’, ‘ನನ್ನ ನಿನ್ನ ನೆಂಟತನ’, ‘ಪರಮೂ ಪ್ರಪಂಚ’ ಮತ್ತು ‘ಕಾಣದ ಕಡಲು’ ಅವರ ಕಥಾಸಂಕಲನಗಳು.‘ಮೃದುಲಾ’,’ ಹುಲಿಕಾನು ‘ ಅವರ ಪ್ರಕಟಿತ ಕಾದಂಬರಿಗಳು. ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಗಿಫ್ಟ್ – ಇಪ್ಪತ್ತು ವರ್ಷಗಳ ನಂತರ ಸಂತೆಯಲ್ಲಿ ಸಿಕ್ಕ ಇಬ್ಬರು ಪ್ರೇಮಿಗಳ ಕಥಾನಕ. ಇಲ್ಲಿ ಅವರು ನಮ್ಮನ್ನೂ ಸಂತೆಯಲ್ಲಿ , ತುದಿಗಾಲಲ್ಲಿ ನಿಲ್ಲಿಸಿ ಅವರು ತೀವ್ರ ಭಾವದಿಂದ ಕಥೆ ಹೇಳುತ್ತಾರೆ. ಅವಳ ಸಂಗ- ಇದು ಕಾಟಲಿಂಗೇಶಪ್ಪ ಎಂಬ ವ್ಯಕ್ತಿ, ಅವಳು ಮತ್ತು ಅಲ್ಲಾಭಕ್ಷಿ ಎಂಬ ಟೇಲರರ ಕಥೆ. ಬಹಳ ವಿಭಿನ್ನವಾದ ಕಥಾನಕವಿದು. ಇದರ ಅಂತ್ಯವನ್ನು ಊಹಿಸುವುದು ಕಷ್ಟ. ಇಷ್ಟ ಗಂಧ- ತಡೆಯಲಾರದಷ್ಟು ದುರ್ಗಂಧ ಹೊತ್ತ ಹಾಲೇಶಪ್ಪನ ಕಥೆಯಿದು. ಸದಾ ನೆಗಡಿಯಿಂದ ಮೂಗು ಕಟ್ಟಿಕೊಂಡಿರುವ ಅಮೀರ್ ಜಾನ್ ನ ಸೈಕಲ್ ಶಾಪ್ ಮುಂದೆ ಇವನಿಗೆ ಆಶ್ರಯ ತಾಣವಾಗುತ್ತದೆ. ಇಂತಹ ಹೊತ್ತಿನಲ್ಲಿಯೇ ಅವನ ಬದುಕಿಗೆ ಆಗಮಿಸುವ ಹೆಣ್ಣಿನಿಂದ ಕಥೆ ಅನೂಹ್ಯ ತಿರುವು ಪಡೆಯುತ್ತದೆ. ಹೊರೆ – ರಘುವೀರ ಮತ್ತು ಲಲಿತಾಕ್ಷಿಯ ಪುಟ್ಟ ಕುಟುಂಬಕ್ಕೆ ಆಗಮಿಸುವ ದಿನಕರಜ್ಜ ; ಅವರ ಪುಟ್ಟ ಮಗು ಚಿಂಟೂ ಹಾಗೂ ಕೊನೆಗೆ ಇಡೀ ಮನೆಯನ್ನು ಆವರಿಸಿಕೊಳ್ಳುವ ಪರಿ ಅನನ್ಯ. ಪರಮೂ ಪ್ರಪಂಚ- ಪರಮು ಮತ್ತು ಮೃಣಾಲ ಗೆಳೆಯರು. ಆ ವಿಶ್ವಾಸದಿಂದಲೇ ಮೃಣಾಲನ ಮನೆಯನ್ನು ತನ್ನ ಮನೆ ಎಂದೇ ಭಾವಿಸಿ ಜೀವಿಸುವ ಮನುಷ್ಯ ಪರಮು.ಆದರೆ ಒಂದು ಪ್ರಸಂಗದಲ್ಲಿ ಮೃಣಾಲನ ತಾಯಿ ಇವನನ್ನು‘ ಪಾಪ ಅನಾಥ ಹುಡುಗ, ಮೃಣಾಲನ ಫ್ರೆಂಡ್ ‘ ಎಂದು ಪರಿಚಯಿಸಿ ಮತ್ತೆ ಅವನ ಅನಾಥ ಪ್ರಜ್ಞೆ ಕೆಣಕಿ ನಮ್ಮನ್ನೂ ಕಾಡುವ ಕಥೆಯಿದು. ವಿಸರ್ಜನೆ – ಹೆಣ್ಣೊಬ್ಬಳು ಗಂಡನನ್ನು ಶೋಷಿಸುವ ವಿಭಿನ್ನ ಕಥೆ. ಹೊಟ್ಟೆಯ ಮತ್ತು ಕಾಮದ ಹಸಿವನ್ನು ನಿಯಂತ್ರಿಸಲಾಗದ ಶಿವರಾಜನ ಕಥೆ. ಗ್ರಹಣ ಒಂದು ಥ್ರಿಲ್ಲರ್ ಕಥೆ. ಉತ್ತರದ ಹುಡುಕಾಟದಲ್ಲಿ – ಒಂದು ಸಣ್ಣ ಅವಘಡ ಮಾಡುವ ದೊಡ್ಡ ಹಾನಿಯ ಕಥೆ.ಅಣ್ಣನ ನೆನಪಲ್ಲಿ ಒಂದು ಒಳ್ಳೆಯ, ಸರಳ ಕಥೆ.ಬೇಬಿ ಸಿಟ್ಟಿಂಗ್ – ಒಂದು ಸಮಕಾಲೀನ ಆದರೆ ವಿಶಿಷ್ಟ ನಿರೂಪಣೆಯ ಚೆಂದದ ಕಥೆ.ಒಮ್ಮೆ ಓದಲೇಬೇಕಾದ ವಿಭಿನ್ನ ಕೃತಿ ‘ ಪರಮೂ ಪ್ರಪಂಚ ******** ಡಾ.ಅಜಿತ ಹರೀಶಿ
ಆಖ್ಯಾನ
ಆಖ್ಯಾನ ಆಖ್ಯಾನಲೇಖಕರು- ಮೂರ್ತಿ ಅಂಕೋಲೆಕರಕಥಾಸಂಕಲನಪ್ರಕಾಶಕರು- ಕ್ರೈಸ್ಟ್ ವಿಶ್ವವಿದ್ಯಾಲಯ ಕನ್ನಡ ಸಂಘ ಜೀವ ವಿಮಾ ನಿಗಮದ ಅಧಿಕಾರಿಯಾಗಿ ಈಗ ನಿವೃತ್ತಿ ಜೀವನ ನಡೆಸುತ್ತಿರುವ ಮೂರ್ತಿ ಅವರು ತಮ್ಮ ಇಪ್ಪತ್ತರಿಂದ ಮೂವತ್ನಾಲ್ಕನೇ ವಯಸ್ಸಿನವರೆಗೆ ಬರೆದ ಕಥೆಗಳಲ್ಲಿ ಆಯ್ದ ಹತ್ತು ಕಥೆಗಳು ಇಲ್ಲಿವೆ. ಇದಕ್ಕೆ ಕೆ.ವಿ. ತಿರುಮಲೇಶ್ ಅವರು ಮುನ್ನುಡಿ ಬರೆದಿದ್ದಾರೆ.ನಾನಿಲ್ಲಿ ಉದ್ದೇಶಪೂರ್ವಕವಾಗಿ ಪ್ರತೀ ಕಥೆಯ ಬಗ್ಗೆ ಬರೆಯುವುದಿಲ್ಲ. ಏಕೆಂದರೆ ಇವು ಸಾಕಷ್ಟು ಸಂಕೀರ್ಣವಾಗಿ ಇದ್ದು ಒಂದೇ ಹಿಡಿತಕ್ಕೆ ಸಿಗುವಂಥವಲ್ಲ. ಇವೆಲ್ಲವೂ ಬಹಳ ಪ್ರಬುದ್ಧ ಕಥೆಗಳೆಂದು ಮಾತ್ರ ಹೇಳಬಹುದು. ಕತೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೇಖಕನಿಗೆ ಮಾತ್ರ ಸಾಧ್ಯವಾಗುವ ಕತೆಗಳು. ಬಹುಮುಖ್ಯವಾದ ಕಥಾವಸ್ತುಗಳು, ಗಂಭೀರವಾದ ಶೈಲಿ, ಎಲ್ಲವನ್ನೂ ಗಮನಿಸುವ ಸೂಕ್ಷ್ಮತೆ, ಅವಕ್ಕೆ ಸ್ಪಂದಿಸುವ ಗುಣ, ಅದ್ಭುತವಾದ ವೈಚಾರಿಕತೆ – ಇವೆಲ್ಲವೂ ಈ ಕಥೆಗಳನ್ನು ಬಹಳ ಮೇಲ್ಮಟ್ಟದಲ್ಲಿ ಇರಿಸುತ್ತವೆ. ಅಂಕೋಲೆಕರರು ಚಿತ್ರಿಸುವ ಜಗತ್ತು- ಕರಾವಳಿ ಮತ್ತು ಘಟ್ಟದ ಮೇಲಿನ ಹಳ್ಳಿ , ಪಟ್ಟಣಗಳು. ಅಲ್ಲಿನ ಎಲ್ಲಾ ತಲೆಮಾರಿನ ಜನ, ತೋಟ, ಒಳದಾರಿಗಳು, ಕಾಡು, ತೊರೆ, ಪ್ರಕೃತಿ. ದೇವಸ್ಥಾನ, ಜಾತ್ರೆ ಮತ್ತು ಕಾಲೇಜುಗಳು. ಈ ಜನರ ಸಂಬಂಧ, ವೈಷಮ್ಯ, ಪ್ರೀತಿ ಪ್ರಣಯ, ಹಾದರ, ಅಸೂಯೆ, ಅನುರಾಗ ಇತ್ಯಾದಿ. ಆದರೆ ಅವರ ‘ ಕ್ರಿಟಿಕಲ್ ಇನ್ಸೈಡರ್ ‘ ಈ ಮೇಲಿನವುಗಳನ್ನೇ ವಿಭಿನ್ನವಾದ ದೃಷ್ಟಿಯಿಂದ ಚಿತ್ರಿಸಿದ್ದಾರೆ. ಮಾರುತಿಯವರ ಪಾತ್ರಗಳು ಹೆಚ್ಚು ತೀವ್ರತೆಯಲ್ಲಿ ಚಿಂತನ ಮಂಥನದಲ್ಲಿ ತೊಡಗುತ್ತವೆ. ಕೆಲವು ಗೊಂದಲಗಳಲ್ಲಿ ಉಳಿದರೆ , ಇನ್ನು ಕೆಲವಕ್ಕೆ ಉಪಸಂಹಾರಗಳು ತಾನಾಗಿಯೇ ಒದಗಿ ಬರುತ್ತವೆ. ಮನುಷ್ಯಾವಸ್ಥೆ ಎಂದರೆ ಇದೇನೇ ಎಂದು ಕಥೆಗಳು ತೋರಿಸಿಕೊಡುವಂತೆ ಅನಿಸುತ್ತದೆ. ಈ ಚಿಂತನೆಯ ಸ್ವಭಾವವೇ ಅವರ ಕಥಾಪಾತ್ರಗಳನ್ನು ಬಹು ಆಯಾಮಿಗಳಾಗಿ ಮಾಡುತ್ತವೆ. ಬೆನ್ನುಡಿಯಲ್ಲಿ ಶ್ರೀಧರ ಬಳಗಾರ ಅವರು ಹೇಳಿರುವಂತೆ – ಮೂರ್ತಿ ಅವರ ಕಥನ ಪ್ರಪಂಚದಲ್ಲಿ ಸ್ವಭಾವತಃ ಒಳ್ಳೆಯತನದಲ್ಲಿ ಬದುಕುವ ಅಪೂರ್ವ ಶೋಭೆಯ ಮನುಷ್ಯರಿದ್ದಾರೆ. ಆತ್ಮಶೋಧನೆಗೆ ಹಿಂಜರಿಯದ ಅವರ ಕಥೆಗಳು ನವ್ಯೋತ್ತರ ಕಥನ ಸ್ವರೂಪಕ್ಕೆ ಸೂಚಕವಾಗುವುದರಿಂದ ಕಥನ ಪರಂಪರೆಯ ಅಧ್ಯಯನ ದೃಷ್ಟಿಯಿಂದಲೂ ಮುಖ್ಯವಾಗುತ್ತವೆ. ಇವೆಲ್ಲ ಕಾರಣಗಳಿಂದ ಒಮ್ಮೆ ಓದಲೇಬೇಕಾದ ಕೃತಿ ‘ ಆಖ್ಯಾನ’.********** ಡಾ. ಅಜಿತ ಹರೀಶಿ
ಘಾಚರ್ ಘೋಚರ್
ಘಾಚರ್ ಘೋಚರ್ಕಥಾಸಂಕಲನಲೇಖಕ: ವಿವೇಕ ಶಾನಭಾಗ ಏಕತ್ವ ಮನಸ್ಸಿನ ಗುಣ. ಆದರೆ, ಪ್ರತೀ ಉನ್ಮೇಷ, ನಿಮೇಷದಲ್ಲಿಯೂ ಮಗದೊಂದು ವಿಷಯ ಚಿಂತನೆಗೆ ಜಾರಬಲ್ಲ ಮನಸ್ಸು ಒಂದು ಕ್ರಮಬದ್ಧತೆಗೆ ಒಳಪಡಲು ಅಭ್ಯಾಸ ಬೇಕು. ಬದುಕು ಅದೇ ಮನೋಭ್ಯಾಸದ ಪಡಿಯಚ್ಚು. ಅದರ ಈ ಅಣಿಮ, ಗರಿಮಾದಿ ಗುಣಗಳ ಬಿಚ್ಚಿಡುವ ಈ ಕಥಾಸಂಕಲನ ಈ ವಿಶಿಷ್ಟ ನಿರೂಪಣೆಯಿಂದಾಗಿ ಹೃದಯವನ್ನು ಗೆಲ್ಲುತ್ತದೆ. ಒಂದು ನೀಳ್ಗತೆ, ಐದು ಕಥೆಗಳ ಸಂಗ್ರಹವಿದು. ಘಾಚರ್ ಘೋಚರ್ ನೀಳ್ಗತೆಯ ಮುಂದುವರೆದ ಭಾವವೇ ಉಳಿದ ಕಥೆಗಳು ಎಂಬ ಸುಳಿವು ಕೊನೆಯವರೆಗೂ ಓದುವಾಗ ಅನಿಸುತ್ತದೆ. ಅಬ್ಬಾ ವಿವೇಕರಿಗೊಂದು ಸಲಾಂ. ಕಥೆಯ ನಿರೂಪಣೆ, ಘಟನೆಗಳ ಎಳೆಗಳ ವಿಶ್ಲೇಷಣೆಯಲ್ಲಿ ಗೆಲ್ಲುವ, ಈ ನೀಳ್ಗತೆಯಲ್ಲಿ, ತನ್ನ ಬದುಕಿನ ಸಿಕ್ಕುಗಳ ಬಿಡಿಸಿ ಹೇಳುತ್ತಾ, ಕೊನೆಗೊಂದು ಗಂಟು ಉಳಿಸಿಯೇ ಕಥೆ ಮುಗಿಯುವುದು ಒಂದು ವಿಲಕ್ಷಣ ಯೋಚನೆಗೆ ಹಚ್ಚುತ್ತದೆ. ಓದುಗನಿಗೆ ಮುಂದಿನ ಕಥೆಯ ಆವೇಶವಾಗುವದಕ್ಕೂ ಮೊದಲು ಈ ಕಗ್ಗಂಟು ಕರಗುವುದೇ ಇಲ್ಲ… ಹೇಗೆಂದರೆ ಕಂಡಲ್ಲೆಲ್ಲಾ ಬಡಪಾಯಿ ಇರುವೆಯನ್ನು ಸಾಯಿಸುವ ಒಂದು ವಿಕ್ಷಿಪ್ತ ಮನಸ್ಥಿತಿಯನ್ನೇ ಬೆಳೆಸುತ್ತಾ ‘ಘಾಚರ್ ಘೋಚರ್’ ಎಂಬ ಒಂದು ಜೋಡಿ ಪದಗಳ ಆವಿಷ್ಕಾರವನ್ನು ಹೆಣೆಯುತ್ತಾ ಅದೇ ಅಂತ್ಯ ಎಂಬಲ್ಲಿಗೆ ಕಥನ ಮುಗಿಯುತ್ತದೆ. ಈ ಇಜ್ಜೋಡು ಪದಗಳನ್ನು ಅರಿತಿರುವ ಪ್ರಪಂಚದ ಕೆಲವೇ ಕೆಲವು ಜನರಲ್ಲಿ ನೀವೂ ಒಬ್ಬರಾಗುತ್ತೀರಿ… ಈ ಕಥೆಯ ಮೂಲಕ… ನಿರ್ವಾಣ ಕಥೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ, ಅಪರಿಚಿತ ಸ್ಥಳದಲ್ಲಿ ಒಂದು ಅಸಂಗತ ರೀತಿಯಲ್ಲಿ ಮೂರ್ತನಾಗುವ ಘಟನೆಯಿದೆ… ಇದೊಂದು ವಿಶಿಷ್ಟಪ್ರಯೋಗ. ಕೋಳಿ ಕೇಳಿ ಮಸಾಲೆ? ಕಥೆಯಲ್ಲಿ ನವಿರಾದ ವ್ಯಂಗ್ಯವು ಹಾಸ್ಯ ಎನಿಸುತ್ತಲೇ, ಒಂದು ವ್ಯವಸ್ಥೆಯ ಸೂಕ್ಷ್ಮ ಅವಲೋಕನವಿದೆ. ರಿಸ್ಕ್ ತಗೊಂಡು ಎಂಬ ಪುಟ್ಟ ಕಥೆಯಲ್ಲಿ ಸಹಜವಾದ ಕಥನದ ಹಾದಿಯ ಬದಿಗೊತ್ತಿ, ಗಂಡು- ಹೆಣ್ಣಿನ ಸಂಬಂಧ, ಮನಸ್ಥಿತಿಯ ಅನಾವರಣ ಅನನ್ಯವಾಗಿ ಮೂಡಿದೆ. ಇದೊಂದು ಸೂಜಿ ಮೊನೆಯ ಚುಚ್ಚುಮದ್ದು. ಸುಧೀರನ ತಾಯಿ ಕಥೆಯು ಭಾವನಾತ್ಮಕವಾಗಿ ಕಾಡುವ, ಕದಡುವ ಕಥೆ. ಆದರೆ, ಮನಸ್ಸಿನ ಖೇದಗಳ ಶಬ್ಧ ಕಥೆಯಲ್ಲಿ ವಾಚ್ಯವಾಗಿಲ್ಲ. ಓದುಗನಲ್ಲಿ ಧ್ವನಿಸುತ್ತದೆ. ಈ ಕಥೆಯ ಸಮಯದಲ್ಲಿ ಮನಸ್ಸು ಹದವಾಗಿ, ಕೊನೆಗೆ ಬಂದಾಗ ಒಂದು ಸುಖವಾದ ಉಸಿರು ಆಚೆ ಬರುವುದು ಅನುಭವ! ವಿಚಿತ್ರ ಕಥೆಯು ಒಂದು ವರದಿಯಂತೆ ಕಾಣುವ ಕಥನ. ಆದರೆ, ಈಗಿನ ಜಾಯಮಾನದ ವೈದ್ಯಕೀಯ ವ್ಯವಸ್ಥೆಯ ಅತಿರೇಕ ಮಾಹಿತಿಗಳ ಲೋಕದಲ್ಲಿ, ಕೇವಲ ಮನುಷ್ಯನ ತಪ್ಪು ಕೂಡ ಸಂಬಂಧಗಳ ನಡುವಿನ ರೋಗವನ್ನು ತೆರೆದಿಡುವುದು, ಒಂದು ಸಿನಿಮೀಯ ತಿರುವುಗಳನ್ನು ತರುತ್ತಾ ಸಾಗುವ ಕಥೆ.. ಇದು ಥಟ್ಟನೆ ಮುಗಿದು ಹೋಗುವುದಿಂದ ಒಮ್ಮೆ ಓದುಗ ಮನಸ್ಸಿನ ಓಟಕ್ಕೆ ಬ್ರೇಕ್ ಹಾಕಿಕೊಳ್ಳಬೇಕಾಗುತ್ತದೆ. ಕನ್ನಡದ ಕಥಾ ಪ್ರಪಂಚದಲ್ಲಿ ತಮ್ಮದೇ ಗುರುತು ಛಾಪಿಸಿದವರಲ್ಲಿ ವಿವೇಕ ಶಾನಭಾಗರೂ ಪ್ರಮುಖರು. ಬೇರೆ ಭಾಷೆಗಳಲ್ಲೂ ಅನುವಾದವಾಗಿರುವ ಈ ಕಥೆಯು ನಿರೂಪಣೆ, ವಿನ್ಯಾಸದಿಂದಾಗಿ ಏಕಾಏಕಿ ಮನಸ್ಸಿಗೊಂದು ಸಂಸ್ಕಾರ ತರುವುದು ಖಚಿತ. ಕಥೆ ಕಟ್ಟುವಿಕೆಯ ಅಧ್ಯಯನದ ಪಾಠ ಉಚಿತ. ಒಂದು ಉತ್ತಮ ಓದಿಗೆ ಈ ಕೃತಿ. ******************************** ಡಾ. ಅಜಿತ್ ಹರೀಶಿ ಡಾ. ಅಜಿತ್ ಹರೀಶಿ
ಪರಿಧಾವಿ
ಪುಸ್ತಕ ವಿಮರ್ಶೆ ಪರಿಧಾವಿ ಡಾ. ಅಜಿತ ಹೆಗಡೆಯವರ – ಪರಿಧಾವಿ-ಆಧುನಿಕ ಬದುಕಿನ ಕನ್ನಡಿ. ಎದುರಾದ ಅಡೆತಡೆಗಳಿಗೆ ಮುಖ ಕೊಟ್ಟು ಬದುಕುವ ಆ ಸಂಘರ್ಷವನ್ನೆ ಬದುಕೆಂದು ಸ್ವೀಕರಿಸುವ ಜನರು ಜನಸಾಮಾನ್ಯರು. ಅವರ ಬದುಕಿನಲ್ಲಿ ಸಂಭವಿಸದ ಘರ್ಷಣೆಗಳಿಲ್ಲ, ಉಂಟಾಗದ ವಿಕೋಪಗಳಿಲ್ಲ. ನಡೆಯದ ಕಥೆಗಳಿಲ್ಲ. ಹಾಗಾಗಿ ಹಿಂದಿನ ಕಥೆಗಳಿಗೂ ಇಂದಿನ ಕಥೆಗಳಿಗೂ ಅಂತಹ ವ್ಯತ್ಯಾಸಗಳೇನೂ ಇರುವುದಿಲ್ಲ. ಮಾನವ ಸ್ವಭಾವಗಳು ಎಲ್ಲ ಜನಾಂಗಕ್ಕೂ, ಎಲ್ಲ ಕಾಲಕ್ಕೂ ಒಂದೇ ರೀತಿ ಇದ್ದರೂ ಕಾಲಧರ್ಮಕ್ಕೆ ತಕ್ಕಂತೆ ಈ ಜನಸಾಮಾನ್ಯರ ಜೀವನ ಸಂಘರ್ಷವೂ ಭಿನ್ನ ಪಾತಳಿಯಲ್ಲಿ ಮೈತಾಳಿಬರುವುದು. ಹಾಗಾಗಿ ಇತ್ತೀಚಿನ ಕಥೆಗಳು ಏಡ್ಸ ಎಂಬ ಭೀಕರ ಕಾಯಿಲೆಯ ಕುರಿತೋ, ವಿವಾಹ ವಿಚ್ಛೇದನದ ಕುರಿತೋ, ಇಲ್ಲವೇ ಆತ್ಮರತಿಯ ಕುರಿತೋ ಆಗಿದ್ದರೂ ಅವು ಬದಲಾದ ಕಾಲಘಟ್ಟದ ಮಾನವನ ಬದುಕಿನ ರೀತಿಗಳೇ ಆಗಿವೆ. ಇಂತಹ ಸಂಗತಿಗಳು ನಮ್ಮ ಬದುಕಿನಲ್ಲೋ ಇಲ್ಲವೇ ನಮ್ಮ ಸುತ್ತಲಿನ ಜಗತ್ತಿನಲ್ಲಿ ಕಂಡಾಗ ಸಂವೇದನಾಶೀಲವ್ಯಕ್ತಿ ಅದನ್ನು ಪದಗಳಲ್ಲಿ ಹಿಡಿದಿಡುವ ಪ್ರಯತ್ನ ಮಾಡುತ್ತಾನೆ. ಸ್ಪಂದನೆಯ ಅಥವಾ ಅಭಿವ್ಯಕ್ತಿಯ ಹತ್ತಾರು ಬಗೆಗಳಲ್ಲಿ ಕಥಾ ಲೋಕ ಹೆಚ್ಚು ಪರಿಣಾಮಕಾರಿಯಾಗಿ, ವಿಸ್ತೃತವಾಗಿ ಘಟನೆಯ ಓರೆಕೋರೆಗಳನ್ನು ಸೂಕ್ಷ್ಮ ವಿಚಾರಗಳನ್ನು ಎಳೆಎಳೆಯಾಗಿ ಬಿಡಿಸಿಡಲು ಸಹಾಯಮಾಡುತ್ತದೆ. ಹಾಗಾಗಿ ಸಣ್ಣಕಥೆಗಳು ಇಂದಿಗೂ ಸಹೃದಯ ಓದುಗರ ಅಚ್ಚುಮೆಚ್ಚಿನ ಪ್ರಕಾರ. ಸಂಕಷ್ಟದ ಬದುಕನ್ನು ಸವೆದ ಜೀವನ, ಇಲ್ಲವೇ ಸುತ್ತಮುತ್ತಲಿನ ಜನರ ಪಡಿಪಾಟಲಿಗೆ ತೆರೆದ ಕಣ್ಣಿನಿಂದ ವೀಕ್ಷಿಸುವ ಚಿಕಿತ್ಸಕ ಮನೋಗುಣ ಯಾರಲ್ಲಿ ಇರುವುದೋ ಆ ವ್ಯಕ್ತಿಯ ಜೀವನಾನುಭವ ಗಾಢ ಎಂಬುದನ್ನು ನಮ್ಮ ಹಿರಿಯರು ಒಪ್ಪಿಕೊಂಡಿರುವ ಸಿದ್ಧಾಂತ. ಡಾ.ಅಜಿತ ಹೆಗಡೆಯವರ ಕಥಾ ಸಂಕಲನ ಪರಿಧಾವಿ ಅ ನಿಟ್ಟಿನಲ್ಲಿ ಪ್ರತಿಬಿಂಬಿತವಾಗಿದೆ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಅಜಿತ್ ತಮ್ಮ ಚಿಕಿತ್ಸಕ್ ನೋಟದಿಂದ ಇಲ್ಲಿಯ ಕಥೆಗಳನ್ನು ಹಣೆದಿರುವುದು ವೇದ್ಯವಾಗುತ್ತದೆ. ಸಂಕಲನದಲ್ಲಿ ಮೂರನೇ ಕಥೆ ತಾಯಿ ಆಶಯದಲ್ಲಿ ಬಹು ಮೌಲಿಕವಾಗಿದೆ. ನಮ್ಮ ಸಂಪ್ರದಾಯಸ್ಥ ಸಮಾಜದ ಗೊಡ್ಡು ಆಚರಣೆಗಳಿಂದ ಕಟ್ಟಿದ ಸಂಬಂಧಗಳಿಗಿಂತ ಹೃದಯಗಳೆರಡು ಒಪ್ಪಿಕೊಂಡ ಪರಿಶುದ್ಧ ಸಂಬಂಧದ ದೀಘರ್ಾಯುಷ್ಯವನ್ನು ಪ್ರಶ್ತುತ ಪಡಿಸಿದ ರೀತಿ ಬಹಳ ಆಪ್ತವಾಗುತ್ತದೆ. ತಾಯ್ತನ ಎನ್ನುವುದು ಕೂಡಾ ಕೇವಲ ಹೇರುವುದರಿಂದ ಮಾತ್ತ ಬರುವುದು ಎಂಬುದಕ್ಕೆ ತಾಯಮ್ಮ ಅಪವಾದವಾಗುತ್ತಾರೆ. ಅವರ ತಾಯ್ತನ ಅಂತಃಕರಣದ್ದು. ಅವಿವಾಹಿತರಾದ ಪಂಪಯ್ಯ ಮೇಷ್ಟ್ರ ಜೀವನದ ಅನಿವಾರ್ಯತೆಗೆ ಮನೆಗೆಲಸದ ಹೆಂಗಸಾಗಿ ಬಂದ ತಾಯಮ್ಮ ಮಾಗಿದ ಜೀವನದ ಹಾದಿಯಲ್ಲಿ ಮೇಷ್ಟ್ರ ಜೊತೆಯಾಗಿ, ಆನಂತರ ಅವರಿಬ್ಬರಲ್ಲಿ ಬೆಸೆವ ಬಂಧ ಜಾತಿಯಲ್ಲಿಯೇ ಶಾಸ್ತ್ರೋಕ್ತವಾಗಿ ವಿವಾಹ ಬಂಧನಕ್ಕೆ ಒಳಗಾದ ಸದಾಶಿವ ಮತ್ತು ಆತನ ಪತ್ನಿಯ ವಿಘಟಿತ ಬದುಕಿನ ರೀತಿಯನ್ನು ತುಲನಾತ್ಮಕವಾಗಿ ವಿವೇಚಿಸುವಂತೆ ಮಾಡುತ್ತದೆ. ಮಕ್ಕಳನ್ನು ಹೆಡೆಯದಿದ್ದರೂ ತಾಯಮ್ಮ ತಾಯಿ ಪದಕ್ಕೆ ಅನ್ವರ್ಥಕವಾಗಿ ಕಥೆಯಲ್ಲಿ ಪ್ರತಿಬಿಂಬಿತವಾಗಿರುವುದು ಕೂಡಾ ಗಮನಾರ್ಹ ಸಂಗತಿ. ಗಟ್ಟಿ ಸಂಬಂಧಗಳು ಹುಟ್ಟುವುದು ಹೃದಯಂತರಾಳದಲ್ಲಿ ಹೊರತೂ, ಬಾಹ್ಯ ಚಹರೆ ಅಥವಾ ಒಪ್ಪಂದಗಳ ಮೇಲಲ್ಲ. ಮಾನಸಿಕ ಒಪ್ಪಂದವೇ ನಿಜವಾದ ವಿವಾಹ. ಹಾಗೇ ತಾಯ್ತನವೂ ಕೇವಲ ಶರೀರಜನ್ಯ ಸಾಮಥ್ರ್ಯದಿಂದ ಹುಟ್ಟುವ ಪದವಲ್ಲ ಎಂಬುದನ್ನು ಮನಗಾಣಿಸುತ್ತದೆ ಕಥೆ ಸಂಕಲನ ಮೊದಲ ಕಥೆ ಆಶ್ಲೇಷ ಈಶ ಎಂಬ ಹೆಸರಿನಿಂದಲೇ ಕಥೆಯುದ್ದಕ್ಕೂ ಮೂಡುವ ಪಾತ್ರ. ಆಧುನಿಕ ಜಗತ್ತಿನ ಐಶಾರಾಮಿ ಖಾಯಿಲೆಯಲ್ಲಿ ಒಂದಾದ ಏಡ್ಸಗೆ ಒಳಗಾಗಿ ಬದುಕಿದ್ದೂ ಸತ್ತು, ಸತ್ತರೂ ಎರವಾಗಿ ಹೋಗುವ ಪಾತ್ರ. ಜೀವನದಲ್ಲಿ ಎದುರಾಗುವ ಅದೆಷ್ಟೋ ಬದಲಾವಣೆಗಳು, ಮಾಡುವ ಅಪರಾಧಗಳು ನಮ್ಮ ಸ್ವಯಂಕೃತವಾಗಿರುತ್ತವೆ. ಕೆಲವೊಮ್ಮೆ ಅದೃಷ್ಟ ಕೈ ಹಿಡಿದಂತೆ ಮಾಡಿ ಮಾಯಾಜಾಲದ ಸುಳಿಗೆ ಸಿಕ್ಕಿಸಿ, ಕೊನೆಗೊಮ್ಮೆ ಯಾರಿಗೂ ಬೇಡವಾದ ಜೀವನವನ್ನು ಬಳುವಳಿಯಾಗಿ ನೀಡಿಬಿಡುವುದು. ಹಣದ ಹರಿವು ಅದು ತಂದುಕೊಡುವ ಸವಲತ್ತು ಸುಖದ ಸುಪ್ಪತ್ತಿಗೆ ಜೊತೆಗೆ ಆಪತ್ತು ಮತ್ತು ಚಟ್ಟದ ಹಾಸಿಗೆ ಎಲ್ಲವನ್ನೂ ಮನೋಜ್ಞವಾಗಿ ಚಿತ್ರಿಸಿರುವರು. ಅದೂ ಕೂಡಾ ಆಧುನಿಕ ಈ ಜಗತ್ತಿನ ಮಹಾಮಾರಿ ಏಡ್ಸ್ ಎಂಬ ಭೀಕರ ಕಾಯಿಲೆಯೂ ಆಗಿರಬಹುದು. ವೈದ್ಯ ವೃತ್ತಿಯ ಡಾ. ಅಜಿತರಿಗೆ ಇಂತಹ ನೈಜ ಘಟನೆಗಳು ದಿನದ ಅನುಭವಗಳಾಗಿರುತ್ತವೆ. ಅವುಗಳಿಗೆ ಸಂವೇದನಾಶೀಲ ವೈದ್ಯನೊಬ್ಬನ ಶಬ್ದ ರೂಪದ ಪ್ರತಿಕೃತಿಯಂತಿದೆ ಈ ಕಥೆ. ಶೀರ್ಷಕಾ ಕಥೆ ಪರಿಧಾವಿ ಶುದ್ಧ ನೈಸಗರ್ಿಕ ನೆಲೆಗಳನ್ನು ನಾಶ ಮಾಡುತ್ತಿರುವ ಕಾಪರ್ೋರೆಟ್ ಜಗತ್ತಿನ ಕೈವಾಡವನ್ನು ಬಿಂಬಿಸುತ್ತಾ ಸಾಮಾಜೀಕರಣದ ಹೊಸ ದೃಷ್ಟಿಕೋನವನ್ನು ಪ್ರಸ್ತುತಪಡಿಸುತ್ತದೆ. ಹಳೆಯ ಸಂಪ್ರದಾಯ, ಗೊಡ್ಡು ಆಚಾರಗಳನ್ನು ಕಿತ್ತು ಹಾಕಬೇಕೆಂಬ ಸಂದೇಶವಿದೆ. ಜಾತೀಯತೆಯ ಕರಿನೆರಳಿಂದ ಮುಕ್ತಗೊಂಡ ಸಮಾಜ, ಬಂಡವಾಳಶಾಹಿ ಜಗತ್ತಿನ ಕಪಿಮುಷ್ಟಿಯಿಂದ ದೂರನಿಂತು ಸಹಜ ಬದುಕಿಗೆ ತೆರೆದುಕೊಂಡ ಜೀವನ ಖುಷಿಗೆ ಕಥೆಯಲ್ಲಿ ಸ್ಥಾನವಿದೆ. ಕಥಾ ಅಂತ್ಯ ಅದನ್ನೆ ಸ್ಪಷ್ಟಿಕರಿಸುತ್ತದೆ. ಕಾನೇರಿಯ ನಾರಾಯಣ ಹೆಗಡೆಯವರ ಮೊಮ್ಮಗ ಪವನ ಹೆಸರಿಗೆ ತಕ್ಕಂತೆ ಈ ಎಲ್ಲ ಬದಲಾವಣೆಯ ಗಾಳಿ ಹೊತ್ತು ತರುತ್ತಾನೆ. ಇದು ಸಾಮಾಜಿಕ ವ್ಯವಸ್ಥೆಯ ಪುನನರ್ಿಮಾಣದ ಬಹುದೊಡ್ಡ ಆಶಯ ಹೊಂದಿರುವ ಕಥೆ ಎಂದೆನ್ನಿಸುತ್ತದೆ ಆತ್ಮರತಿ ಕಥೆ ಭಾರತೀಯ ಸಮಾಜ ಇಂದಿಗೂ ಸಹಜವಾಗಿ ಒಪ್ಪಿಕೊಳ್ಳದ, ಅಸಹ್ಯದಿಂದ ಮೂಗುಮುರಿಯುವ ಸಲಿಂಗ ಕಾಮ ಮತ್ತು ಆತ್ಮರತಿಗಳ ಕುರಿತು ಮಾತನಾಡುತ್ತದೆ. ಹೊಸ ಜಗತ್ತಿನ ಬದುಕಿನ ಶೈಲಿಯನ್ನು ಸ್ವಾಗತಿಸುವ ಆಧುನಿಕ ಮನೋಭಾವದ ಕಥೆಗಾರರು ಈ ವಿಷಯದಲ್ಲಿ ಮಾತ್ರ ಕಥೆಯಲ್ಲಿ ನೀಲಾಳನ್ನು ದುರಂತದ ಪಾತ್ರವಾಗಿ ಚಿತ್ರಿಸಿದಂತಿದೆ. ನೈಸಗರ್ಿಕ ಜಗತ್ತು ಒಪ್ಪಿದ ಗಂಡು ಹೆಣ್ಣುಗಳ ಮಿಲನ ನೀಡಿದ ಸುಖಾನುಭೂತಿಗೂ,ತೃಪ್ತಿಯನ್ನು ನೀಡದ ಆತ್ಮರತಿ ಅಥವಾ ಸಲಿಂಗ ಕಾಮ ನೈಸಗರ್ಿಕ ವಿರೋಧಿ ಎಂಬ ತತ್ವವನ್ನು ಕಥೆ ಹೇಳುತ್ತದೆ. ವಿಕ್ಷಿಪ್ತ ಮನಸ್ಥಿತಿಯನ್ನು ಬಹುಚೆನ್ನಾಗಿ ನಿರ್ವಹಿಸಿದ ಕಥೆ. ಟೊಮೆಟೋ ಕೆಚಪ್ ಎಂಬ ಕಥೆಯಂತೂ ವಿವಾಹಕ್ಕೆ ಪರಸ್ಪರ ಸಿದ್ಧವಾದ ಹೃದಯಗಳೆರಡು ನಡೆಸುವ ಸಂಭಾಷಣೆಯಿಂದಲೇ ಸಿದ್ಧಗೊಂಡಿದೆ. ಇದು ಕಥೆಗಾರರ ನೈಜ ಪ್ರತಿಭೆಗೆ ಸಾಕ್ಷಿ. ಹಿಂದಿನ ಕಾಲದಲ್ಲಿ ವಿವಾಹಗಳು ಗುರುಹಿರಿಯರ ಒಪ್ಪಿಗೆಯಿಂದ ವಿವಾಹ ಮಧ್ಯವತರ್ಿಗಳ ನೆರವಿನಿಂದ ನಡೆಯುತ್ತಿದ್ದರೆ ಇಂದು ಆಧುನಿಕ ವೈವಾಹಿಕ ವ್ಯವಸ್ಥೆಯಲ್ಲಿ ಅಂತಜರ್ಾಲದಲ್ಲಿ ಮೆಟ್ರಿಮೋನಿಯಲ್ ಪ್ರೋಫೈಲ್ಗಳ ಮೂಲಕ ಕುದುರುವ ವಿವಾಹಗಳು, ಭವಿಷ್ಯದಲ್ಲಿ ಗಂಡು ಹೆಣ್ಣು ಪರಸ್ಪರ ಹೊಂದಿಕೊಳ್ಳುವ ಸಂದರ್ಭದಲ್ಲಿ ಗಂಡು ಹೆಣ್ಣು ವಿವಾಹಪೂರ್ವ ಒಬ್ಬರನ್ನೊಬ್ಬರು ಅರಿತುಕೊಳ್ಳಲು ನಡೆಸುವ ಏಕಾಂತದ ಭೇಟಿಗಳು, ವ್ಯಕ್ತಿತ್ವವನ್ನು ಟೊಮೆಟೋ ಕೆಚಪ್ ಮೂಲಕ ಅಥರ್ೈಸಲು ಬಳಸುವ ಉಪಮೆಗಳು, ಹೊಟೆಲ್ಲಿನಲ್ಲಿ ಮೆನು ಆಯ್ಕೆಯ ಮೂಲಕ ಹೆಣ್ಣಿನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬಯಸುವ ಗಂಡು ಹೀಗೆ ವಿನೂತನ ರೀತಿಯಲ್ಲಿ ಕಥೆ ಹೆಣೆದಿದ್ದಾರೆ. ಆದರೆ ಹೆಣ್ಣನ್ನು ಆರಿಸುವ ಪೂರ್ಣ ಸ್ವಾತಂತ್ರ್ಯವನ್ನು ಗಂಡಿಗೆ ಮಾತ್ರ ನೀಡಿ ಆಧುನಿಕ ಜಗತ್ತು ಸಮಾನತೆಯ ತಳಹದಿ ಅಲ್ಲ ಎಂದು ಬಿಂಬಿಸುವಂತೆ ಗಂಡಿಗೆ ಮಾತ್ರ ಆ ಆಯ್ಕೆಯ ಸ್ವಾತಂತ್ರ್ಯ ನೀಡಿದ್ದು ಸ್ತ್ರೀ ದೃಷ್ಟಿಕೋನದಿಂದ ನೋಡಿದಾಗ ಕೊಂಚ ನಿರಾಶೆ ಮೂಡಿಸುತ್ತದೆ. ಹನ್ನೆರಡು ಕಥೆಗಳ ಈ ಸಂಕಲನದಲ್ಲಿಯ ಸಂಧಾನ ಆಯ ‘ಸಮೀಕರಣ’ ‘ವ್ಯವಚ್ಛೇದ’ ಮುಂತಾದ ಕಥೆಗಳು ಬದುಕಿನ ವೈರುಧ್ಯಗಳನ್ನು ಸಮರ್ಥವಾಗಿ ಹಿಡಿದಿಟ್ಟ ಕಥೆಗಳೆಂದೇ ಹೇಳಬೇಕು. ವೈವಿಧ್ಯಮಯ ವಿಷಯ ವಸ್ತುಗಳಿಂದ ಗಮನ ಸೆಳೆಯುವ ಇಲ್ಲಿಯ ಕಥೆಗಳು ಕಥನ ಶೈಲಿಯಲ್ಲಿ ಕೊಂಚ ಅತಿಯಾದ ವಿವರಣೆಗಳು ಅನಗತ್ಯ ಎನಿಸಿಕೊಳ್ಳುತ್ತವೆ. ಮುನ್ನುಡಿಯಲ್ಲಿ ಖ್ಯಾತ ಕಥೆಗಾರರಾದ ಶ್ರೀಧರ ಬಳಿಗಾರರ ಅಭಿಪ್ರಾಯದಂತೆ ಪಾತ್ರ ಹಾಗೂ ಕಥಾ ಹಂದರದ ಬೆಳವಣಿಗೆಯಲ್ಲಿ ಆಗಾಗ ಉದ್ದೇಶಪೂರ್ವಕ ಇತಿಮಿತಿಗಳನ್ನು ಹಾಗೂ ಕೆಲವೊಮ್ಮೆ ಅತೀ ಪ್ರಜ್ಞಾಪೂರ್ವಕವಾಗಿ ಪಾತ್ರಗಳ ಬಳಸಿಕೊಳ್ಳುವುದರಿಂದ ಕೆಲವು ಕಥೆಯ ನಿರೂಪಣೆಯಲ್ಲಿ ಒಂದಿಷ್ಟು ಕೃತಕತೆ. ಹೀಗಿದ್ದೂ ಡಾ. ಅಜಿತರ ಕಥೆಗಳು ಆಪ್ತವಾಗಲು ಕಾರಣ ಅವರು ಆದರ್ಶ ಪಾತ್ರಗಳ ಸೃಷ್ಟಿಗಿಂತ ವಾಸ್ತವಿಕ ತಮ್ಮ ಸುತ್ತಮುತ್ತಲಿನ ಪಾತ್ರಗಳನ್ನು ಕಥೆಯಲ್ಲಿ ನಿರ್ವಹಿಸುವ ಪ್ರಯತ್ನ ಮಾಡಿದ್ದು. ಇಲ್ಲಿಯ ಕಥೆಗಳು ಇಂದಿನ ಸಾಮಾಜಿಕ ಲೋಕದ ಮಾನಸಿಕ ವಿಕೃತಿಗಳನ್ನು ಎತ್ತಿ ತೋರಿಸುತ್ತಾ ಕೊನೆಯಲ್ಲಿ ಕನಿಕರದ ಅಂತಃಕರಣಕ್ಕೆ ಸಾಕ್ಷಿಯಾಗುವಂತಹ ಕ್ಲೈಮಾಕ್ಸ ನೀಡುತ್ತವೆ. ********** ನಾಗರೇಖಾ ಗಾಂವಕರ
ಬಿತ್ತಿದ ಬೆಂಕಿ
ಬಿತ್ತಿದ ಬೆಂಕಿ ಇಲ್ಲಿ ಬಿತ್ತಿದ ಬೆಂಕಿ ಸುಡುವುದಿಲ್ಲ, ಪರಿವರ್ತಿಸಿ ಬೆಳೆಸುತ್ತದೆ. ಇತ್ತೀಚೆಗೆ ಕಾದಂಬರಿಕಾರರು ಮತ್ತು ಹಿರಿಯ ಲೇಖಕರು, ಕವಿತೆಗಳನ್ನು ರಚಿಸುವುದರಲ್ಲಿ ತೊಡಗಿರುವುದು ಆಸಕ್ತಿಕರ ಸಂಗತಿ. ನಾನು ಗಮನಿಸಿದಂತೆ ಅವರಲ್ಲಿ ಎಸ್. ದಿವಾಕರ, ಇಂದ್ರಕುಮಾರ್ ಎಚ್.ಬಿ ಜೊತೆಗೆ ಶ್ರೀಧರ ಬನವಾಸಿ ಅವರು ಪ್ರಮುಖರು. ಏಕೆ ಹೀಗೆ ಎಂಬುದು ಕೂಡಾ ಚರ್ಚಾರ್ಹ ಸಂಗತಿಯೇ! ಫಕೀರ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಧರ ಬನವಾಸಿ ಅವರು ಬೇರು (2017) ಕಾದಂಬರಿಯ ಮೂಲಕ ಮನೆಮಾತಾದವರು. ಬೇರು ಒಟ್ಟು ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅವರು ಈ ಮೊದಲೇ ತಿಗರಿಯ ಹೂಗಳು ( 2014) ಎಂಬ ಕವನ ಸಂಕಲನ ರಚಿಸಿದ್ದಾರೆ. ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಅವರ ಕಥಾಸಂಕಲನಗಳು. ತಿಗರಿಯ ಹೂಗಳು ಕವನ ಸಂಕಲನದಲ್ಲಿ ಹೆಣ್ಣು, ನಿಸರ್ಗ, ತಾನು, ಕವಿತೆಗಳ ಬಗ್ಗೆ ಬರೆದಿದ್ದ ಶ್ರೀಧರರು ಈ ಸಂಕಲನದಲ್ಲಿ ಇದೇ ವಿಚಾರಗಳ ಅಂತಃಸತ್ವ, ಆಧ್ಯಾತ್ಮ, ಇಹ- ಪರ ಮತ್ತು ಮನೋವ್ಯಾಪಾರಗಳನ್ನು ಚಿತ್ರಿಸಲು ಯತ್ನಿಸಿದ್ದಾರೆ. ಅಂತಹ ಒಂದು ಪ್ರಯತ್ನದಲ್ಲಿ ಬರುವ ಸಾಲುಗಳು.. ” ಜಗದ ಗಗನ ಕುಸುಮವೆಂಬಂತೆಮುಗಿಲ ಲೋಹದ ಹಕ್ಕಿಯು ಹಾರುತ್ತಿತ್ತು” ಮುನ್ನುಡಿಯಲ್ಲಿ ಡಾ.ಮಲರ್ ವಿಳಿ ಕೆ ಅವರು ಹೇಳಿದಂತೆ ಇಲ್ಲಿ ಕವಿಯ ವರ್ಣನೆಯ ಶಕ್ತಿ ಅನಾವರಣವಾಗಿದೆ. ಸಿಕ್ಕಿದ್ದು ಮತ್ತು ದಕ್ಕಿದ್ದು, ಈ ಎರಡು ತುದಿಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ ಎಂದು ಡಾ.ಎಚ್.ಎಸ್ ಶಿವಪ್ರಕಾಶ್ ಅವರು ಬೆನ್ನುಡಿಯಲ್ಲಿ ಹೇಳಿರುವುದು ತುಂಬಾ ಪ್ರಸ್ತುತವಾಗಿದೆ. ‘ಕೊನೆ ಎಂದಿಗೋ’ ಕವಿತೆಯು ತಪ್ಪುಗಳು ಘಟಿಸುವ ಕುರಿತಾಗಿದೆ, ಆದ ತಪ್ಪುಗಳು ಪುನರಾವರ್ತನೆ ಆಗಬಾರದು ಎಂಬ ಆಸ್ಥೆಯಿದೆ. ಆದರೂ ಅಪರಾಧಗಳಾಗುತ್ತವೆ. ಮತ್ತೆ ಪಶ್ಚಾತ್ತಾಪ, ಕ್ಷಮೆಯಾಚನೆ ಎಲ್ಲಾ! ಹೀಗೆ ಕೊನೆ ಎಂದಿಗೋ? ಎಂಬ ಪ್ರಶ್ನೆಯಲ್ಲಿ ಕವನ ಮುಗಿಯುತ್ತದೆ. ನೀ ಬಂಧಿಯಲ್ಲ! ಎಂಬ ಕವಿತೆಯನ್ನು ನೋಡಿ.. “ ಕಟುಕನ ಕತ್ತಿಗೆ ದೇಹ ಯಾವುದಾದರೇನು?ಎಷ್ಟು ರುಚಿಯಿದ್ದರೇನು! ಕತ್ತಿ ಅನುಭವಿಸಿತೇ?“ “… ಅನಿರೀಕ್ಷಿತ ಆಕರ್ಷಣೆಯ ಬೆಸುಗೆಯೂ ಆಗಿಬಿಡುತ್ತದೆಸುಂದರ ತನುಘಟದ ಮಾಯೆಯ ಬತ್ತಳಿಕೆಯಲ್ಲಿ” ವಾಸ್ತವವಾದ ಜಗತ್ತಿನ ಅನಾವರಣ ಮಾಡಿದ್ದಾರೆ. “ರಕ್ತ ಚಿಮ್ಮುವ ಹೃದಯದಲ್ಲಿಯಾವ ವ್ಯಾಘ್ರವು ಅಡಗಿಹುದೋ?” ಸೂರ್ಯನ ಸುತ್ತಲೂ ಕತ್ತಲು ಕವನದ ಸಾಲುಗಳು ರಾಜಕೀಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತದೆ. “ಹೊಕ್ಕಳ ಬಳ್ಳಿಯ ರಕ್ತಜಿನುಗುತಿದೆ….…….ಕ್ರೌರ್ಯ ತುಂಬಿದ ಧರ್ಮದ ಹೃದಯದಲಿಅದೆಂಥ ರಾಕ್ಷಸನು ಅಡಗಿರುವನೋ ?” ‘ಧರ್ಮದ ಬತ್ತಳಿಕೆಯಲ್ಲಿ ‘ ಕವಿತೆಯಲ್ಲಿ ಧರ್ಮದ ನಕಾರಾತ್ಮಕ ಬಳಕೆಯ ಕುರಿತು ಕವಿ ಮಿಡಿದಿದ್ದಾರೆ. ಕೆಲವು ತರ್ಕಗಳು ಆಧ್ಯಾತ್ಮಿಕ ತುಡಿತ ತುಂಬಿದ ಕವಿತೆ. ” ಹುಟ್ಟಿದ ಪ್ರೀತಿಬಿತ್ತಿದ ಬೆಂಕಿಎರಡೂ ಭಯಾನಕಸುಡುವುದು ಒಂದು ಒಳಗೆಇನ್ನೊಂದು ಹೊರಗೆ” ಸತ್ಯದ ಹುಡುಕಾಟದಲ್ಲಿ ತೊಡಗಿದ ಕವಿಗೆ ಕಾಣುವ ಮತ್ತು ಕಾಡುವ ಸಂಗತಿಯಿದು. ವೃಕ್ಷಮಾತೆ ಪರಿಸರದ ಕುರಿತು, ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಇರುವ ಕವಿತೆ. ಬಡವನ ನೊಗದಾಗ ನೂರೆಂಟು ಭಾರ ಮತ್ತು ಮುತ್ತೈದೆಯ ಮೂಗುತಿ ಜನಪದ ಶೈಲಿಯ ಗಮನಾರ್ಹ ಕವಿತೆಗಳು. ಹೀಗೆ ಭಾಷೆ, ವಿಷಯ ವೈವಿಧ್ಯವನ್ನು ಹೊಂದಿರುವ ಈ ಕವನ ಸಂಕಲನದ ಸೊಗಸನ್ನು ಓದಿಯೇ ಅನುಭವಿಸಬೇಕು. ಒಂದು ಒಳ್ಳೆಯ ಕವನ ಸಂಕಲನ. ಬಿತ್ತಿದ ಬೆಂಕಿ ಕವನ ಸಂಕಲನವನ್ನು ಒಮ್ಮೆ ಓದಿ.************* ಡಾ. ಅಜಿತ್ ಹರೀಶಿ
ಪುಸ್ತಕ ಸಂಗಾತಿ
ಅಲೆಮಾರಿಯ ದಿನದ ಮಾತುಗಳು ಅನುದಿನದ ಅನುಭಾದ ನುಡಿಗಳು(ಗಂಗಾಧರ ಅವಟೇರ ಅವರ “ಅಲೆಮಾರಿಯ ದಿನದ ಮಾತುಗಳು”) ಪ್ರೊ.ಗಂಗಾಧರ ಆವಟೇರ ಬಹುಕಾಲದ ಗೆಳೆಯ.ಬೊಗಸೆ ತುಂಬ ಪ್ರೀತಿ ತುಂಬಿಕೊಂಡೇ ಮಾತನಾಡುವಾತ. ಮನದಲ್ಲಿ, ಮಾತಲ್ಲಿ ಎರಡಿಲ್ಲದ ನೇರ ನುಡಿಯ ತುಂಬ ಹೋರಾಟದ ಬದುಕನ್ನು ಬದುಕುತ್ತ ಬಂದಾತ.ಅದಕ್ಕೆ ಹಿನ್ನೆಲೆಯಾಗಿಯೇ ಬದುಕಿದಾತಸದ್ಯಕ್ಕೆ ಇತಿಹಾಸ ಪ್ರಸಿದ್ಧ ಕುಕನೂರ ತಾಲೂಕಿನ ಮಹಾದೇವ ದೇವಾಲಯ ನೆಲೆಸಿರುವ ಇಟಗಿಯ ಶ್ರೀ ಮಹೇಶ್ವರ ಪಿ.ಯು.ಕಾಲೆಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಮಹಾಲಿಂಗಪೂರದಲ್ಲಿ ಉಪನ್ಯಾಸಕನಾಗಿದ್ದಾಗಿನಿಂದಲೂ ಅವರ ಆತ್ಮೀಯ ಸ್ನೇಹದ ಸವಿ ನನಗೆ ದೊರಕಿದುದುಂಟು.ಅದನ್ನೆಲ್ಲ ಬರೆಯಲು ಇದು ಉಚಿತ ವೇದಿಕೆಯಲ್ಲ.ಸದ್ಯಕ್ಕೆ ‘ಅಲೆಮಾರಿಯ ದಿನದ ಮಾತುಗಳು ‘ಕೃತಿಯನ್ನು ನನ್ನ ಮುಂದಿಟ್ಟುಕೊಂಡು ಆ ಕುರಿತು ನನ್ನ ಅನಿಸಿಕೆ ವ್ಯಕ್ತ ಮಾಡಲು ಹೊರಟಿದ್ದೇನೆ. ಗಂಗಾಧರ ಅವರ ಬಗ್ಗೆ ಬರೆಯುವಾಗ ಬಹುವಚನ ಬಳಸುವದು ಸ್ನೇಹಕ್ಕೆ ಮಾಡಿದ ಅಪಚಾರ ಎಂದು ಞಬಾವಿಸಿ ಏಕವಚನವನ್ನೆ ಬಳಸಿದ್ದೇನೆ. ಅಲೆಮಾರಿ ಎನ್ನುವ ಪದಕ್ಕು ಗಂಗಾಧರನಿಗೂ ಬಿಡದ ನಂಟು.ಅವನು ಮೂಲತಃ ಅಲೆಮಾರಿಯೇ. ಪ್ರಥಮತಃ ಕವಿಯಾದ ಅವನಲ್ಲೊಂದು ಕವಿ ಜೀವವಿದೆ.ಅದು ಬಡವರ ನೋವಿಗೆ ಮಿಡಿಯುವ,ಅನ್ಯಾಯ ಕಂಡಾಗ ಆಕ್ರೋಶಗೊಳ್ಳುವ ಹೃದಯದ ಮಿಡಿತವಿರುವ ಜೀವ .ಹೀಗಾಗಿ ಇಲ್ಲಿರುವ ದಿನದ ಮಾತುಗಳಲ್ಲಿ ವ್ಯಕ್ತಮಾಡುವ. ವಿಚಾರಗಳು ಗದ್ಯಗಂಧಿಯಾದರೂ ಪದ್ಯದ ಭಾವವನ್ಬು ಬಿಟ್ಟಿಲ್ಲ.ಇಂದು ನಮ್ಮಯುವಜನಾಂಗ ಅತಿಯಾಗಿ ಓದುವ ಪುಸ್ತಕ ಯಾವಿದಾದರೂ ಅದು ಪೇಸ್ ಬುಕ್.ಅವರು ಎಲ್ಲಿ ಓದುತ್ತಾರೆಯೋಅಲ್ಲಿಯೆ ಅವರಿಗೆ ಒಳಿತಾಗುವಂಥದನ್ನು,ಉಪಯುಕ್ತವಾಗುವದನ್ನು ನೀಡಬೇಕು.ಮತ್ತೆ ದೀರ್ಘವಾದುದನ್ನು ಬರೆದರೆ ಓದಲು ಯಾರಿಗೆ ಪುರುಸೊತ್ತಿದೆ? ಓದುಗರ ನರನಾಡಿ ಗೊತ್ತಿರುವ ಲೇಖಕ ಇಂತಹುದನ್ನು ಪ್ರಯತ್ನಮಾಡುತ್ತಾನೆ. ಅವಟೇರ ಅದರಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.ದಿನಕ್ಕೊಂದರಂತೆ ತಮ್ಮವ್ಯಾಟ್ಸಪ್ ಮತ್ತುಮುಖಪುಟದಲ್ಲಿ ಬರೆದು ಹಾಕಿದ ಬರಹಗಳನ್ನು ಸಂಗ್ರಹಿಸಿ ಇಲ್ಕಿ ನೀಡಿದ್ದಾರೆ. ಇವು ಕವಿತೆಗಳೇ? ಗದ್ಯದ ತುಣುಕಗಳೇ?ಚಿಂತನೆಗಳೇ? ಹಾಗೆ ನೋಡಿದರೆ ಎಲ್ಲವೂ ಹೌದು.ಆದ್ದರಿಂದ ಬೆನ್ನುಡಿ ಬರೆದ ಹಿರಿಯ ಕವಿಮಿತ್ರ ಡಾ.ಗುಂಡಣ್ಣ ಕಲಬುರ್ಗಿ ಗದ್ಯಗಂಧಿ ಇವುಗಳನ್ನು ಬರಹಗಳು ಎಂದಿದ್ದಾರೆ.ಕನ್ನಡದಲ್ಲಿ ಗಪದ್ಯ ಎಂಬ ಪ್ರಕಾರವೊಂದಿದೆ ಅಂತಹ ಪ್ರಕಾರಕ್ಕೆ ಸೇರಬಹುದಾದ ಲೇಖಗಳಿವು ಎನ್ನಬಹುದು. ಆದರೆ ಇಲ್ಲೊಂದು ಅಪಾರ ಓದಿನ ಅನುಭವದ ಮೂಸೆಯಲ್ಲಿ ಹೃದ್ಯಗೊಂಡ ಮನಸ್ಸಿದೆ. ಕವಿತ್ವದ ಮೂಸೆಯಲ್ಲಿ ಹದಗೊಂಡ ದನಿಯಿದೆ.ಕನ್ನಡದಲ್ಲಿ ಇಂತಹದೊಂದು ಸಂಕಲನ ಬಂದಿದೆಯೇ ? ಅಥವಾ ಇದೇ ಮೊದಲಿನದೆ ?ಪ್ರಾಜ್ಞರು ಹೇಳಬೇಕು.ನಾನು ಬಲ್ಲಂತೆ ಇದು ಪ್ರಥಮ ಪ್ರಯತ್ನವೇ ಇರಬೇಕು. ಅಲೆಮಾರಿ ಮಾತ್ರ ಬದುಕಿನ ಆಳವಾದ ಅನುಭವ ಗಳಿಸಬಲ್ಲ.ನಮ್ಮ ಹಿಂದಿನ ಹಿರಿಯರು ದೇಶ ಸುತ್ತಬೇಕು,ಕೋಶ ಓದಬೇಕು ಎನ್ನುತ್ತಿದ್ದರು.ಗಂಗಾಧರ ಅವರು ಬರೀ ದೇಶ ಸುತ್ತಿಲ್ಲ ಅವರ ಬದುಕುನಿಡಸೂರಿನಿಂದ ಆರಂಭವಾಗಿಅಮೀನಗಡ ಹುನಗುಂದ,ಧಾರಚಾಡ,ಮೂಡಲಗಿ,ತೇರಸದಾಳ,ರಬಕವಿ,ಮಹಾಲಿಂಗಪೂರ,ಕೆಸರಗೊಪ್ಪ,ಈಗ ಸದ್ಯಕ್ಕೆ ಇಟಗಿಯಲ್ಲಿ ನೆಲೆನಿಂತಿದೆ.ಬದುಕಿನ ಅನ್ನಕ್ಕಾಗಿ ಅವರು ಮಾಡಿದ ಸಾಹಸವೂ ಕೂಡ ಒಂದು ದೊಡ್ಡ ಪ್ರಬಂಧದ ವಸ್ತುವಾದೀತು. ದಾರಿಯೆಂದರೆ ಬದುಕಿಗ ಸಂಬಂಧಿಸಿದ್ದು.ಅದು ಚಲನಶೀಲರಿಗೆ ಮಾತ್ರ ದಕ್ಕಿದ್ದು. ಅಲೆದಾಡಬೇಕುನೆಲೆಯಿಲ್ಲದ ಅಲೆಮಾರಿಯಂತೆ ಎನ್ನುವ ವಾಕ್ಯದಂತೆ ಆರಂಭವಾಗುವ ಈ ಅನುಭವೋಕ್ತಿಗಳು ಬದುಕಿನ ಸೂತ್ರಗಳನ್ನು ವಿವರಿಸುತ್ತವೆ.ಸೋಲುಗಳನ್ನು ಎದುರಿಸಿ ,ಎದುರಿಸಿ ಗಟ್ಟಿಗೊಂಡ ಮನಸ್ಸುಕೊನೆಗೆ ಈ ಸ್ಥಿತಿ ಮುಟ್ಟುತ್ತದೆ. ಸೋಲು ಪ್ರತಿಯೊಬ್ಬರನ್ನುಕ್ಷಣ ಕಾಲ ಅಸ್ತಿತ್ವವನ್ನೂ ಅಲುಗಾಡಿಸುತ್ತದೆ ನಿಜ.ಆದರೆ ಅದೇ ಅಂತಿಮವಲ್ಲ ಎಂಬ ತಿಳಿವಳಿಕೆ ಇರಬೇಕು ಹೀಗೆ ಅನುಭವ ಹರಳುಗಟ್ಟಿದಾಗ ಮಾತ್ರ ಇಂತಹ ಸೂಕ್ತಿಗಳು ಬರಲು ಸಾಧ್ಯ.ಮಾಡಿದ ಉಪಕಾರವನ್ನು ಮರೆಯುವದು ಎಷ್ಟು ಕೃತಘ್ನತೆಯರೂಪ ಎನ್ನುವದನ್ನು ವಿವರಿಸಲು ಮತ್ತೊಬ್ಬರು ಮಾಡಿದಉಪಕಾರವನ್ನು ಮರೆತವರುಹೆತ್ತ ತಂದೆ ತಾಯಿಗಳನ್ನುಮರೆತರೆ ಆಶ್ಚರ್ಯ ಪಡಬೇಕಾಗಿಲ್ಲ ಇಂತಹ ಮಾತುಗಳು ಇಂದಿನ ಜನಾಂಗಕ್ಕೆಒಂದಿಷ್ಟಾದರೂ ಯೋಚನೆ ಮಾಡಲು ಹಚ್ಚುತ್ತವೆ.ಮನೆ, ಕುಟುಂಬ,ತಂದೆ, ತಾಯಿ ಇತ್ಯಾದಿ ಮೌಲ್ಯಗಳನ್ನು ಮರೆಯುತ್ತಿರುವ ಜನಕ್ಕೆ ಹಿತವಚನ ನೀಡುತ್ತವೆ. ನಮಗೆ ದ್ವೇಷ ಮಾಡಲುಬಹಳಷ್ಟು ದಿನ ಇಲ್ಲಇರುವಷ್ಟು ದಿನಎಲ್ಲರನ್ನು ಪ್ರೀತಿಸೋಣ ಇಂಥ ಮಾತುಗಳು ಏಲ್ಲೊ ಓದಿದ ಮಾತು ಎನಿಸುತ್ತವೆ.ಆದರೂ ಒಂದು ಸಂದೇಶ ಅಲ್ಕಿ ಇದ್ದೇ ಇದೆ.ಉಪನ್ಯಾಸಕರಾಗಿ ಹತ್ತಾರು ವರುಷ ಕಳೆದಿರುವ ಗಂಗಾಧರ ಅಂಥವರಿಗೆ ಮಾತ್ರ ವಿದ್ಯಾರ್ಥಿ ವಿದ್ಯಾರ್ಥಿನಿಯರ ನಡುವಿನ ಈ ಅಂತರ ಹೊಳೆಯಲು ಸಾಧ್ಯ ವಿದ್ಯಾರ್ಥಿಗಳುಎಂದರೆಸುಂದರವಾದ ಕನಸುಗಳಮೇಲೆ ಸವಾರಿ ಮಾಡುವ ಸರದಾರರುವಿದ್ಯಾರ್ಥಿನಿಯರುಎಂದರೆವಾಸ್ತವವನ್ನು ಅರಗಿಸಿಕೊಂಡು ನೆಲದ ಮೇಲೆಹೂವು ಭಾರವಾದ ಹೆಜ್ಜೆ ಹಾಕುವ ಶ್ರಮಜೀವಿಗಳು ಕಾಲೆಜು ಹಂತದ ಹುಡುಗ ಹುಡುಗಿಯರ ಮನಸ್ಥಿತಿಯನ್ಬು ಅರಿತ ಆವಟೇರ ಅವರು ಹುಡುಗರು ಹೇಗೆ ಕನಸುಗಳಲ್ಲಿ ಕರಗಿ ಹೋಗುತ್ತಾರೆ?ಹುಡುಗಿಯರು ಹೇಗೆ ವಾಸ್ತವ ಅರಿತು ಶ್ರಮಹಾಕಿ ಮುಂದೆ ಬರುತ್ತಾರೆ ಎನ್ನುವದನ್ನು ಸೂಕ್ಷ್ಮವಾಗಿ ಗುರುತಿಸುತ್ತಾರೆ.ಇಂದು ಕಾಲೇಜುಗಳ ಫಲಿತಾಂಶವನ್ನು ನೋಡಿದಾಗ ಈ ಅನಭವೋಕ್ತಿ ನಿಜ ಎನಿಸುತ್ತದೆ.ಬಹಳ ಹಿಂದೆ ಕವಿ ಡುಂಡಿರಾಜ್ ಹುಡುಗಿಯರು ಮುಂದೆ ಮುಂದೆಹುಡುಗರು ಅವರ ಹೊಂದೆ ಹಿಂದೆ ಎಂಬ ಚುಟುಕು ಬರೆದಿದ್ದನ್ನು ನೆನಪಿಸಬಹುದು.ಎಲ್ಲ ಕಲೆಗಳಿಗಿಂತ ಜೀವನ ಎಂಬುದು ಪರಮ ಕಲೆ.ಅದನ್ನು ಹೇಳಿ ಕೊಡಲು ಮಾತ್ರ ಯಾವುದೆ ಶಾಲೆ ಕಾಲೆಜು ಗಳಿಲ್ಲ. ಅದರಲ್ಲಿ ಯಶಸ್ವಿಯಾದವರಿಗೆ ಯಾವುದೆ ವಿಶ್ವ ವಿದ್ಯಾಲಯ ದ ಪ್ರಮಾಣ ಪತ್ರದ ಅಗತ್ಯವಲ್ಲ. ಬದುಕುವ ಕಲೆಕರಗತ ಮಾಡಿಕೊಂಡವರಿಗೆಯಾವುದೆ ವಿಶ್ವ ವಿದ್ಯಾಲಯದಅರ್ಹತೆಯ ಪ್ರಮಾಣ ಪತ್ರದ ಅಗತ್ಯವಿಲ್ಲ ಬದುಕು ಸರಳ ರೇಖೆಯಲ್ಲಅದರಲ್ಲಿಯೂ ಆಗಾಗ ವಕ್ರರೇಖೆಯಪ್ರತಿಪಫಲನಗಳು ಉಂಟಾಗುತ್ತವೆ ಇಂತಹ ಮಾತುಗಳು ಬದುಕಿನ ವ್ಯಾಖ್ಯಾನಮಾಡಲು ಹವನಿಸುತ್ತವೆ.ಯೋಗ ಎಂಬ ಮಾತಿಗೆ ಅರ್ಥ ಹೇಳುತ್ತ ಯೋಗ ವ್ಯಾಯಾಮವಲ್ಲದೇಹ ಮತ್ತು ಮನಸ್ಸುಗಳನಿಯಂತ್ರಣ ಮಾಡುವ ಸಾಧನ ಎಂದು ವಿವರಿಸಿರುವದು ಒಂದು ರೀತಿಯಲ್ಲಿ ಯೋಗ ಚಿತ್ತವೃತ್ತಿ ನಿರೋಧ ಎಂಬ ಪರಂಪರೆಯ ಮಾತನ್ನು ನೆನಪಿಸುತ್ತದೆ.ಮಾತಿನ ಬಗೆಗಿನ ಅವರ ಚಿಂತನೆ ಹೀಗಿದೆ. ನಾವು ಆಡುವ ಮಾತುಉದಯಿಸುವ ಸೂರ್ಯನ ಕಿರಣಗಳಂತೆಹೊಳೆಯುತ್ತಿರಲಿ,ಆದರೆಅವುಗಳು ಯಾರನ್ನು ಸುಡದಿರಲಿ ಎನ್ನುವ ಚಿಂತನೆ ಮಾತು ಸುಡುವ ಬೆಂಕಿಯಾ ಗಬಾರದು, ಬೆಳಗುವ ಹಣತೆಯಾಗಬೇಕು ಎನ್ನುವ ದನ್ನು ನೆನಪಿಸುತ್ತದೆ.ಹೀಗೆ ಇಲ್ಲಿನ ಮಾತುಗಳು ಸಂಕ್ಷಿಪ್ತವಾಗಿದ್ದಂತೆ ಕಾವ್ಯಾತ್ಮಕವಾಗಿವೆ.ಆದರೆ ದೀರ್ಘವಾಗುತ್ತಾ ಹೋದಂತೆ ಜಾಳು ಜಾಳು ಎನಿಸುತ್ತವೆ .ಕವಿತೆಯೆ ಆಗಲಿ,ಒಂದು ಸೂಕ್ತಿಯೇ ಆಗಲಿ ಅದು ವಿವರಣೆಯಾಗುತ್ತಾ ನಡೆದಂತೆ ಅವುಗಳ ಅರ್ಥ ಸಾಂದ್ರತೆ ಕಡಿಮೆಯಾಗುತ್ತದೆ. ದೇವರು,ಧರ್ಮ ಇಂತಹ ಅನುಭಾವದ ಮಾತುಗಳೂ ಇವೆ. ಪ್ರೊ.ಗಂಗಾಧರ ಅವಟೇರ ಅವರ ಸ್ನೇಹವಲಯ ದೊಡ್ಡದು.ಹೀಗಾಗಿ ಅರವತ್ತು ಪುಟಗಳ ಈ -ಅಲೆಮಾರಿಯ ದಿನದ ಮಾತುಗಳು -ಸಂಕಲನ ಕ್ಕೆ ೩೬ ಪುಟಗಳ ಬೇರೆಯವರ ಅಭಿಪ್ರಾಯ, ಮುನ್ನುಡಿ ಪ್ರಸ್ತಾವನೆಗಳೇ ಇವೆ.ಮೂಗುತಿ ಮುಂಭಾರ ಎನ್ನುವಂತೆ! ಇರಲಿ ಪ್ರೀತಿಯ ಭಾರ ತುಸು ಹೆಚ್ಚಾದರೂ ತಡೆಯಬಹಯದಲ್ಲವೇ.ಮೊಬಾಯಲ ಮಾಧ್ಯಮದ ಮೂಲಕ ಜೀವನ ಸಂದೇಶ ಹಂಚಿದ ಗೆಳೆಯರನ್ನು ಅಭನಂದಿಸುತ್ತೇನೆ.ನನಗೆ ಕವಿ ಗಂಗಾಧರ ಆವಟೇರ ಇಷ್ಟ.ಅವರು ಇನ್ನಷ್ಟು ಕವಿತೆ ಬರೆಯಲಿ ಎಂದು ಹಾರೈಸುತ್ರೇನೆ. ********* ಡಾ.ಯ.ಮಾಯಾಕೊಳ್ಳಿ
ಪುಸ್ತಕ ಸಂಗಾತಿ
ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಮಕ್ಕಳ ಸಾಹಿತ್ಯ ಕೃತಿ ಪರಿಚಯ ಪುಸ್ತಕದ ಹೆಸರು- ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕತೆಗಳು ಲೇಖಕರು – ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯ ಪ್ರಕಾಶಕರು – ಅಕ್ಷಯ ಪ್ರಕಾಶನ – ತುಮಕೂರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಮಕ್ಕಳಿಗೆ ಹೆಚ್ಚು ಕುತೂಹಲ ಕೆರಳಿಸಿ ಅವರಿಗೆ ನೀತಿಯನ್ನು ತಿಳಿಸುವ ಬಹುಮುಖ್ಯ ಪ್ರಕಾರವೆಂದರೆ ಈ ಕಥಾಪ್ರಕಾರ. ಇದು ಮಕ್ಕಳಲ್ಲಿ ಕಲ್ಪನಾ ಕೌಶಲ್ಯವನ್ನು ಬೆಳೆಸುವುದಲ್ಲದೆ ಆಲಿಸುವ ಸಾಮರ್ಥ್ಯವನ್ನು ಕೂಡ ಹೆಚ್ಚಿಸುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಪ್ರಕಾರವಾದ ಕತೆಗಳು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡುವಲ್ಲಿಯೂ ಬಹುಮುಖ್ಯ ಪಾತ್ರ ವಹಿಸುತ್ತಿದೆ. ಇದಕ್ಕೊಂದು ಉತ್ತಮ ನಿದರ್ಶನವಾಗಿ ವೀರಮಾತೆ ಜೀಜಾಬಾಯಿಯವರು ಚಿಕ್ಕಂದಿನಲ್ಲೇ ಶಿವಾಜಿಯಲ್ಲಿ ಉದಾತ್ತ ಗುಣಗಳನ್ನು ಬೆಳೆಸಿದ ಪರಿಯನ್ನು ನಾವಿಲ್ಲಿ ಸ್ಮರಿಸಬಹುದು. ಇಂತಹ ಈಗಾಗಲೇ ಲೋಕದಲ್ಲಿ ಪ್ರಚಲಿತದಲ್ಲಿದ್ದು ಮೆಚ್ಚುಗೆಯ ಮೂಲಕ ಹೃದಯವಾಸಿಯಾಗಿರುವ ಒಟ್ಟು ಮೂವತ್ತ ನಾಲ್ಕು ಲೋಕಪ್ರಸಿದ್ದ ಸಚಿತ್ರ ಮಕ್ಕಳ ಕಥಾಗುಚ್ಛವೇ ಈ ಹೊತ್ತಗೆಯಾಗಿದೆ. ಇದರ ಲೇಖಕರು ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯನವರು ಹಾಗೂ ಪ್ರಕಾಶಕರು ಅಕ್ಷಯ ಪ್ರಕಾಶನ, ತುಮಕೂರು. ಇದರಲ್ಲಿನ ಕಥೆಗಳಿಗೆ ಸೂಕ್ತವಾದ ಚಿತ್ರಗಳನ್ನು ರಚಿಸಿ ಪುಸ್ತಕದ ಸೊಗಸನ್ನು ಕಲಾವಿದೆಯಾದ ಶ್ರೀಮತಿ ಸಿ. ಎಸ್ ನಿರ್ಮಲ ಕುಮಾರಿಯವರು ಹೆಚ್ಚಿಸಿದ್ದಾರೆ. ಶೀರ್ಷಿಕೆಯೇ ಹೇಳುವಂತೆ ಲೋಕದಲ್ಲಿ ಪ್ರಸಿದ್ದವಾಗಿರುವಂತಹ ನಾವು ನೀವೆಲ್ಲರೂ ನಮ್ಮ ಬಾಲ್ಯವನ್ನು ಸವಿದು ಬೆಳೆದು ಇಂದು ಕಣ್ಮರೆಯಾಗಿರುವ ಅತ್ಯಮೂಲ್ಯ ಮೌಲ್ಯಗಳುಳ್ಳ ಈ ಕತೆಗಳನ್ನು ಮಕ್ಕಳಮಟ್ಟಕ್ಕೆ ಅರ್ಥವಾಗುವಂತೆ ಲೇಖಕರು ಬಹಳ ಸರಳ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಖಪುಟವು ಗಮನಸೆಳೆಯುವಂತಿದ್ದು ಆಕರ್ಷಕ ಸನ್ನಿವೇಶದ ಚಿತ್ರವನ್ನು ಒಳಗೊಂಡಿದೆ. ಈ ಪುಸ್ತಕಕ್ಕೆ ಬೆನ್ನುಡಿಯನ್ನು ಡಿ. ಸುಮಿತ್ರ ಸಣ್ಣಗುಡ್ಡಯ್ಯನವರು ಬರೆದಿದ್ದಾರೆ. ಒಳಪುಟಗಳಲ್ಲಿರುವ ಪ್ರತಿಯೊಂದು ಕತೆಯೂ ಉನ್ನತ ಮೌಲ್ಯವನ್ನು ಹೊಂದಿದ್ದು ಮಕ್ಕಳ ಮನಸ್ಸಿನಲ್ಲಿ ಅಚ್ಚಳಿಯದೆ ಬೀರುತ್ತವೆ. ಬೆಕ್ಕು ಕಲಿಸಿದ ಪಾಠ ಕತೆಯು ಅಲ್ಪಜ್ಞಾನಿಯಾದವನು ಎಂದಿಗೂ ಗರ್ವ ಪಡಬಾರದು. ಮರಕ್ಕಿಂತ ಮರ ದೊಡ್ಡದಿರುತ್ತದೆ ಎಂಬ ನೀತಿಯನ್ನು ಸಾರಿದರೆ, ಹುಡುಗಿಯನ್ನು ಬಯಸಿದ ಸಿಂಹ ಕತೆ ವಿವೇಚನೆಯಿಲ್ಲದೆ ಯಾರಿಗೂ ಕೋಪದಲ್ಲಿ ಮತ್ತು ಖುಷಿಯಲ್ಲಿ ಮಾತು ಕೊಡಬಾರದು ಎಂಬುದನ್ನು ತಿಳಿಸುತ್ತದೆ. ಕೋತಿ ಚೇಷ್ಟೆ ಕತೆಯು ಆತುರದ ಬುದ್ದಿಯಿಂದ ಪೇಚಾಟಕ್ಕೆ ಸಿಲುಕಿಕೊಳ್ಳುವ ಪ್ರಸಂಗವನ್ನು ತಿಳಿಸಿದರೆ ಠಕ್ಕ ನರಿ ಕತೆಯು ಅಸೆ, ಆಮಿಷ, ಅನಿವಾರ್ಯತೆಗೆ ಒಳಗಾಗಿ ವಂಚನೆಯ ಬಲೆಯಲ್ಲಿ ಸಿಲುಕಿಕೊಳ್ಳುವ ಪರಿಯನ್ನು ತೋರಿಸಿಕೊಡುತ್ತದೆ. ಚೇಷ್ಟೆಯ ಫಲ ಕತೆಯು ಚೇಷ್ಟೆ ಅತಿಯಾದರೆ ಆಪತ್ತಿನ ಸಂದರ್ಭದಲ್ಲೂ ಸಹಾಯ ಸಿಗದೇ ಹೋಗುವ ನೀತಿಯನ್ನು ತಿಳಿಸುತ್ತದೆ. ಪರಸ್ಪರ ಸಹಾಯ ಕತೆಯಲ್ಲಿ ಒಬ್ಬರಿಗೊಬ್ಬರು ಸಹಕಾರ ಇಲ್ಲದಿದ್ದರೆ ಒಬ್ಬಂಟಿಯಾಗಿ ಹೆಚ್ಚಿನ ಹೊರೆಯನ್ನು ಹೊರಬೇಕಾದ ಪರಿಸ್ಥಿತಿಯನ್ನು ತಿಳಿದರೆ ಕೋಟಿಯ ನ್ಯಾಯ ಕತೆಯಲ್ಲಿ ಬೆಕ್ಕುಗಳ ಪರಸ್ಪರ ಜಗಳದಿಂದ ಇಬ್ಬರ ಜಗಳ, ಮೂರನೆಯವರಿಗೆ ಲಾಭ ಎಂಬುದನ್ನು ತಿಳಿಯಬಹುದು. ಮೇಕೆಗಳ ಮೇಲಾಟವು ಗರ್ವದಿಂದ ಹಳ್ಳಕ್ಕೆ ಬೀಳುವುದನ್ನು ತೋರಿಸಿದರೆ ಚಿನ್ನದ ಮೊಟ್ಟೆಯ ಕೋಳಿ ಕತೆಯು ಅತಿ ಆಸೆ ಗತಿಗೇಡು ಎಂಬುದನ್ನು ಅರಿವು ಮಾಡಿಕೊಡುತ್ತದೆ. ಮುದುಕಿಯ ಹುಂಜ ಕತೆಯು ಕೇವಲ ತನ್ನಿಂದಲೇ ಬೆಳಗಾಗುವುದಿಲ್ಲ ಎಂಬ ನೀತಿ ಹೇಳಿದರೆ ಮಗು ಯಾರದು? ಕತೆಯು ಸತ್ಯಕ್ಕೆ ಜಯವಿದೆ ಎಂಬುದನ್ನು ನಿರೂಪಿಸುತ್ತದೆ. ಬುದ್ದಿವಂತ ದೊರೆ ಕತೆಯಲ್ಲಿ ಸತ್ಯವು ಯಾವುದಾದರೊಂದು ರೀತಿಯಲ್ಲಿ ಅರಿವಾಗುತ್ತದೆ ಎಂಬುದನ್ನು ತಿಳಿಸಿದರೆ ಯಾರ ಶಕ್ತಿ ಹೆಚ್ಚು? ಕತೆಯು ಗಾಳಿಗಿಂತಲೂ ಸೂರ್ಯನೇ ಶಕ್ತಿಶಾಲಿ ಎಂಬ ತೀರ್ಮಾನವನ್ನು ಕೊಡುತ್ತದೆ. ದುಂದುಗಾರ್ತಿ ಕತೆಯು ಮಾತಿಗೂ ವರ್ತನೆಗೂ ಇರುವ ಸತ್ಯವನ್ನು ಅರಿಯುವ ನೀತಿಯನ್ನು ತಿಳಿಸಿದರೆ ಬೆಕ್ಕಿನ ಕೊರಳಿಗೆ ಘಂಟೆ ಕತೆಯು ಕಲ್ಪನೆಯ ಕನಸುಗಳೆಲ್ಲವೂ ನನಸಾಗುವುದಿಲ್ಲ ಎಂಬುದನ್ನು ತಿಳಿಸುತ್ತವೆ. ಓಟದ ಸ್ಪರ್ಧೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಸೋಲುಂಟಾಗುತ್ತದೆ ಮತ್ತು ತಾಳ್ಮೆಯಿಂದ ಕಠಿಣವಾದದ್ದನ್ನು ಸಾಧಿಸಬಹುದು ಎಂಬುದನ್ನು ತಿಳಿಸುತ್ತದೆ. ವೇಷ ಕತೆಯು ಸತ್ಯವನ್ನು ಹೆಚ್ಚುಕಾಲ ಬಚ್ಚಿಡುವುದಕ್ಕೆ ಸಾಧ್ಯವಿಲ್ಲ ಎಂಬ ನೀತಿಯನ್ನು ಸಾರಿದೆ. ಹೀಗೆ ದೊರೆ ಮತ್ತು ಆಮೆ, ನರಿ ಮತ್ತು ಕೊಕ್ಕರೆ, ಸಿಂಡರೆಲ್ಲ, ಸೊಹ್ರಬ್ ಮತ್ತು ರುಸ್ತುಮ್, ಬ್ಲೆನ್ಹೀಮ್ ಯುದ್ಧ, ಡೊಂಬರ ಚೆನ್ನೆ, ಕುರೂಪಿ ಬಾತುಕೋಳಿ ಮರಿ, ತೊಟಕಪ್ಪ, ಸಿರಾಕ್ಯೂಸಿನ ಇಬ್ಬರು ಅಪೂರ್ವ ಸ್ನೇಹಿತರು, ಜಾರ್ ಚಕ್ರವರ್ತಿ ಮತ್ತು ರೈತ, ಪ್ರೀತಿಯ ಮೂಲಕ ನೀತಿ, ಬೊ ಬೊನ ತುಂಟಾಟ, ನಾವಾಬಾಯಣ, ಮದುವಣಿಗನ ಪ್ರೇತ, ಪಾಪದ ಹುಡುಗ ಪೀಟರ್, ಸಾಂಕೊ ಪಾಂಜಾನ ತೀರ್ಪುಗಳು ಮತ್ತು ವ್ಯರ್ಥವಾದ ವರಗಳು.. ಹೀಗೆ ಒಂದೊಂದು ಕತೆಯೂ ವಿಭಿನ್ನವಾಗಿದ್ದು ಓದಿದಾಗ ಒಂದು ರಸಮಯ ಅನುಭವವನ್ನು ನೀಡುತ್ತವೆ. ಒಟ್ಟಾರೆಯಾಗಿ ಈಗಾಗಲೇ ಲೋಕಪ್ರಸಿದ್ಧವಾಗಿ ಜನರ ಮನದಲ್ಲಿ ಅಚ್ಚೂತ್ತಿದ್ದ ಕತೆಗಳನ್ನು ಮಕ್ಕಳಿಗೆಂದು ತಮ್ಮದೇ ಆದ ಸರಳ ಭಾಷೆಯಲ್ಲಿ ಪ್ರೊ. ಜಿ ಎಸ್ ರವರು ಬರೆದಿದ್ದಾರೆ. ಇಲ್ಲಿಯ ಪಾತ್ರಗಳ ಜಾಣ್ಮೆ, ಸಾಹಸ, ಛಲ, ಸಹನೆ ಮುಂತಾದ ಸದ್ಗುಣಗಳು ಮಕ್ಕಳನ್ನು ಪ್ರೇರೇಪಿಸಲಿ, ಅವರನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯಲಿ ಎಂಬುದು ಇಲ್ಲಿಯ ಕತೆಗಳ ಹೂರಣ. ಇಂಥದ್ದೊಂದು ಕೃತಿ ಮಕ್ಕಳ ಸಾಹಿತ್ಯ ಪ್ರಕಾರದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಅಮೂಲ್ಯ ಕೊಡುಗೆಯನ್ನು ನೀಡಿದೆ. ಈ ಪುಸ್ತಕವು ಪೋಷಕರಲ್ಲಿ ಹಾಗೂ ಮಕ್ಕಳಲ್ಲಿ ಒಳ್ಳೆಯ ಓದಿನ ಅಭಿರುಚಿಯನ್ನು ಬೆಳೆಸುವಂತ ಕೃತಿಯಾಗಿದೆ.. ********* ತೇಜಾವತಿ ಹೆಚ್. ಡಿ.
