ವಿಜ್ಞಾನ
ವಿಜ್ಞಾನದ ಕ್ಷಿತಿಜ, ಮನುಕುಲದ ಪ್ರಗತಿ ವಿಸ್ತರಿಸುವ ಮೈಕ್ರೊವೈಟಾ ವಿಶೇಷವಾದ ಜ್ಞಾನವೇ ವಿಜ್ಞಾನ. ಹೊಸ ಸಂಶೋಧನೆಗಳು, ಹೊಸ ಆವಿಷ್ಕಾರಗಳಿಗೆ ಮೂಲ ಕಾರಣ, ಕನಸನ್ನು ಕಾಣುವ ಮತ್ತು ಅದನ್ನು ನನಸಾಗಿಸುವ ತೀವ್ರ ತುಡಿತ ಜೊತೆಗೆ ನಿರಂತರ ಪ್ರಯತ್ನ. ಹಕ್ಕಿಗಳಂತೆ ತಾನು ಆಕಾಶದಲ್ಲಿ ವಿಹರಿಸಬೇಕೆಂಬ ಕನಸನ್ನು ಕಂಡು ನನಸಾಗಿಸಿದವರಿಂದಾಗಿ ಇಂದು ವಾಯುಯಾನ ಸಾಧ್ಯವಾಗಿದೆ. ಸ್ಥೂಲ ಜಗತ್ತೇ ಸರ್ವಸ್ವ ಎಂದುಕೊಂಡಲ್ಲಿಂದ ನ್ಯಾನೋ ತಂತ್ರಜ್ಞಾನದ ಬಳಕೆಯ ದಿನಗಳು ಬಂದಿವೆ. ಇಡೀ ವಿಶ್ವವು ತರಂಗರೂಪಿ ಅಸ್ತಿತ್ವವೆಂಬ ಅರಿವಿನಿಂದಾಗಿ, ವಿಜ್ಞಾನದ ಮೂಲ ನಂಬಿಕೆಗಳೂ ಬದಲಾಗುತ್ತಿವೆ. ಪ್ರೋಟೋನ್, ಪಾಸಿಟ್ರಾನ್‍ಗಳಿಗಿಂತ ಸೂಕ್ಷ್ಮಾತಿ ಸೂಕ್ಷ್ಮ ಜೀವಕಣಗಳಾದ ಮೈಕ್ರೊವೈಟಾ ಕುರಿತಾದ ಸಿದ್ಧಾಂತದಿಂದಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಮೈಕ್ರೊವೈಟಾ ಸಿದ್ಧಾಂತದ ಹಿನ್ನೆಲೆಯಲ್ಲಿ ಸಂಶೋಧನೆಗಳು ಪ್ರಾರಂಭವಾಗುತ್ತಿವೆ. ಮೈಕ್ರೊವೈಟಾಗಳು ಸ್ಥೂಲ, ಸೂಕ್ಷ್ಮ ಮತ್ತು ಸೂಕ್ಷ್ಮಾತಿ ಸೂಕ್ಷ್ಮ ರೂಪದಲ್ಲಿರುವುದರಿಂದ ಭೌತಿಕ ಪ್ರಯೋಗಾಲಯಗಳಲ್ಲೇ ಈ ಸಂಶೋಧನೆಗಳು ಪೂರ್ಣಗೊಳ್ಳಲಾರವು. ಈ ಸೂಕ್ಷ್ಮ ಸ್ಥಿತಿಯನ್ನು ಗ್ರಹಿಸಲು ಅವರವರ ಕ್ಷೇತ್ರಗಳಲ್ಲಿ ಪರಿಣ ತಿ ಹೊಂದಿದ ವಿಜ್ಞಾನಿಗಳಿಗೆ ಅಗ್ರಬುದ್ಧಿಯನ್ನು ಬೆಳೆಸಿಕೊಳ್ಳುವುದು ಅನಿವಾರ್ಯ. ಸಂಶೋಧಕರ ಮನಸ್ಸು ವಿಸ್ತಾರ ಹೊಂದಿದಷ್ಟು, ಸೂಕ್ಷ್ಮವಾದಷ್ಟು ಅವರ ಕಲ್ಪನಾ ಶಕ್ತಿ ಮತ್ತು ಗ್ರಹಿಕಾ ಸಾಮಥ್ರ್ಯ ಹೆಚ್ಚಾಗುತ್ತದೆ. ಇದಕ್ಕಿರುವ ಒಂದೇ ದಾರಿಯೆಂದರೆ ಮನಸ್ಸನ್ನು ಏಕಾಗ್ರಗೊಳಿಸಿ, ಅನಂತತೆಯಲ್ಲಿ ಒಂದಾಗಿಸುವ ಧ್ಯಾನ ಮಾಡುವುದು. ಕೋಟಿಗಟ್ಟಲೆ ಮೈಕ್ರೊವೈಟಾಗಳಿಂದ ಒಂದು ಎಲೆಕ್ಟ್ರಾನ್ ರೂಪುಗೊಳ್ಳುತ್ತದೆಂಬ ಆಧಾರದಲ್ಲಿ ನಡೆಸುವ ಸಂಶೋಧನೆಗಳಿಂದಾಗಿ ಇಂದಿನ ಭೌತಶಾಸ್ತ್ರದ ಅರಿವು ಹಿಗ್ಗಲಿದೆ. ಅಣು ಶಕ್ತಿಯನ್ನು ಬಳಸಿ ಹಾರಲಿರುವ ರಾಕೆಟ್‍ಗಳು ಕೂಡಾ ಸೌರಮಂಡಲದಾಚೆಗೆ ಹೋಗಲಾಗಿಲ್ಲ. ಸಂಶೋಧನೆಗಳಿಂದ ಹೊಸ ಇಂಧನಗಳ ಸೃಷ್ಟಿಯಾಗಲಿದೆ. ಪೆಟ್ರೋಲ್ , ಡೀಸೆಲ್‍ಗಳಿಗೆ ಪರ್ಯಾಯಗಳು, ಕೃತಕ ಪೆಟ್ರೋಲ್ ಸೃಷ್ಟಿಯಾಗಲಿವೆ. ಸೌರಮಂಡಲದಾಚೆಗಿನ ನಕ್ಷತ್ರ, ಗ್ರಹಗಳಿಗೆ ತಲ್ಪುವ ಮಾನವನ ಕನಸು ನನಸಾಗುತ್ತದೆ. ಶತಮಾನಗಳಿಂದಲೂ ಉತ್ತರ ಕಂಡುಕೊಳ್ಳಲಾಗದ ಅದೆಷ್ಟೋ ನಿಸರ್ಗದ ವೈಚಿತ್ರ್ಯಗಳಿಗೆ ವಿವರಣೆ ಸಿಗಲಿದೆ. ಉದಾಹರಣೆಗಾಗಿ ಪ್ರಪಂಚದ ಎಲ್ಲಾ ಸಮುದ್ರಗಳೂ ಒಂದಕ್ಕೊಂದು ಬೆಸೆದುಕೊಂಡಿವೆ. ಆದರೂ, ಅವುಗಳ ಉಷ್ಣತೆ, ಕ್ಷಾರೀಯತೆಗಳಲ್ಲಿ ವ್ಯತ್ಯಾಸವಿದೆ. ಆದರೆ ಈ ಸಮುದ್ರಗಳ ನೀರನ್ನು ತಂದು ಒಂದೇ ಪಾತ್ರೆಯಲ್ಲಿ ಬೆರೆಸಿದಾಗ ಅವು ಒಂದಾಗಿ ಏಕವಾಗುತ್ತವೆ. ಇದಕ್ಕೆ ಅವುಗಳಲ್ಲಿರಬಹುದಾದ ಮೈಕ್ರೊವೈಟಾಗಳ ಸಂಖ್ಯೆ ಅಥವಾ ಪ್ರಭೇದಗಳು ಕಾರಣವಿರಬಹುದೇ? ಬರ್ಮೋಡಾ ತ್ರಿಕೋನದ ರಹಸ್ಯ ಇತ್ಯಾದಿಯಾಗಿ ಎಷ್ಟೋ ನಿಗೂಢತೆಗಳ ರಹಸ್ಯ ಬಯಲಾಗಲಿವೆ. ಅಣು ವಿಕಿರಣ ಯಾಕಾಗುತ್ತದೆ? ಅದನ್ನು ತಡೆಯಲು ಸಾಧ್ಯವೇ? ಅಥವಾ ಕಿರಣ ಹೊರಸೂಸದೇ ಹೀರಿಕೊಳ್ಳಲ್ಪಡುವಂತೆ (ಪರಾವರ್ತನ) ಮಾಡಬಹುದೇ ಎಂಬುದರ ಸಾಧ್ಯತೆಗಳಿಗೆ ಮೈಕ್ರೊವೈಟಾ ಸಂಶೋಧನೆಯೇ ಉತ್ತರ ನೀಡಬಲ್ಲದು. ವಿದ್ಯುತ್ ಸಂಪರ್ಕಕ್ಕಾಗಿ ಎಲ್ಲೆಡೆ ತಂತಿ ಎಳೆಯುವ ಬದಲಿಗೆ ಪರ್ಯಾಯ ವಿಧಾನಗಳ ಸಾಧ್ಯತೆಯನ್ನು ಮೈಕ್ರೊವೈಟಾ ಅಧ್ಯಯನ ತೋರಿಸಿಕೊಡಲಿದೆ. ರಸಾಯನಶಾಸ್ತ್ರದ ಸೂತ್ರಗಳು ಇನ್ನಷ್ಟು ಉದ್ದವಾಗಲಿದೆ. ಉದಾಹರಣೆಗಾಗಿ ಕೃಷಿಕರು ಬಳಸುವ ತುತ್ತ ಅಥವಾ ಕಾಪರ್ ಸಲ್ಫೇಟ್ ಇದರ ಸಂಕೇತ ಅuSಔ4. ಎಲ್ಲಾ ತಯಾರಕರು ಪೂರೈಸುವ ತುತ್ತದ ಪರಿಣಾಮ ಮಾತ್ರ ಒಂದೇ ರೀತಿಯಾಗಿರುವುದಿಲ್ಲ. ಎಲ್ಲೊ ಒಂದೆಡೆ ಪರಿಣಾಮಕಾರಿಯಾದ ತುತ್ತ, ಇನ್ನೊಂದೆಡೆ ಪರಿಣಾಮ ಬೀರುವುದಿಲ್ಲ. ಇದಕ್ಕೆ ಕಾರಣ ಅವುಗಳಲ್ಲಿರುವ ಮೈಕ್ರೊವೈಟಾಗಳ ಪ್ರಭೇದ ಮತ್ತು ಸಂಖ್ಯೆ. ಇದರ ಅಧ್ಯಯನ ಸಾಧ್ಯವಾದಾಗ ತುತ್ತದ ರಾಸಾಯನಿಕ ಸೂತ್ರ ಇನ್ನಷ್ಟು ಉದ್ದವಾಗಿ ಅuSಔ4-ಒಂ 20 ಲಕ್ಷ ಎಂದಾಗಬಹುದು. ಅಂದರೆ ಈ ತುತ್ತದಲ್ಲಿ ಂ ಪ್ರಭೇದದ 20 ಲಕ್ಷ ಮೈಕ್ರೊವೈಟಾಗಳು ಇವೆ ಎಂದು ಅರ್ಥ. ಒಂದಕ್ಕಿಂತ ಹೆಚ್ಚು ಪ್ರಭೇದಗಳಿರುವಾಗ ಅದನ್ನು ಕೂಡಾ ನಮೂದಿಸಬೇಕಾಗುತ್ತದೆ. ಈ ಸಂಶೋಧನೆಗಳಿಂದಾಗಿ ರಾಸಾಯನಿಕಗಳ ಬಳಕೆಯಲ್ಲಿ ನಿಖರತೆ ಬರುತ್ತದೆ. ರಸಾಯನಶಾಸ್ತ್ರದಲ್ಲಾಗುವ ಸಂಶೋಧನೆಗಳ ಪರಿಣಾಮ ಇತರ ಸಂಬಂಧಿತ ಕ್ಷೇತ್ರಗಳಾದ ಔಷಧಗಳು (ಮಾನವ, ಪಶು, ಗಿಡ- ಮರಗಳಿಗೆ), ರಾಸಾಯನಿಕ ಗೊಬ್ಬರಗಳು, ಇಂಧನ ಮೂಲ ಮುಂತಾದವುಗಳಲ್ಲಿ ಮಹತ್ತರ ಬದಲಾವಣೆಗಳಾಗಲಿವೆ. ಇಂಗಾಲದ ಕಣಗಳಿಂದಲೇ ಜೀವೋದ್ಭವವಾಗಿದೆಯೆಂಬ ನಂಬಿಕೆಯ ಆಧಾರದಲ್ಲೇ ಜೀವಶಾಸ್ತ್ರದ ಸಂಶೋಧನೆಗಳು ನಡೆದಿವೆ. ಪ್ರತಿಯೊಂದು ಕಾರ್ಬನ್ ಕಣವೂ ಕೋಟ್ಯಾಂತರ ಮೈಕ್ರೊವೈಟಾಗಳಿಂದ ರೂಪುಗೊಳ್ಳುತ್ತದೆ. ಮೈಕ್ರೊವೈಟಮ್ ಎನ್ನುವ ಸೂಕ್ಷ್ಮಾತಿ ಸೂಕ್ಷ್ಮ ಜೀವ ಬೀಜವೇ ಪ್ರಥ್ವಿಯ ಮೇಲೆ ಜೀವೋದ್ಭವಕ್ಕೆ ಕಾರಣ ಎಂಬ ಸಿದ್ಧಾಂತದನ್ವಯ ನಡೆಯುವ ಸಂಶೋಧನೆಗಳ ಪರಿಣಾಮವಾಗಿ ಜೀವಶಾಸ್ತ್ರದ ಇಂದಿನ ಜ್ಞಾನದ ವಿಸ್ತಾರ ಅಗಾಧವಾಗಲಿದೆ. ಇಷ್ಟೊಂದು ವಿಧದ ಸಸ್ಯ ಮತ್ತು ಪ್ರಾಣ ಪ್ರಭೇದಗಳು ಯಾಕಿವೆ? ಅವಕ್ಕೆ ಕಾರಣಗಳೇನು? ಅವುಗಳ ನಡುವಿನ ಸಂಬಂಧಗಳೇನು ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ವಂಶವಾಹಿನಿಯಾಗಿ ವ್ಯಕ್ತಿಯ ವಿಶಿಷ್ಟತೆಯನ್ನು ನಿರ್ಧರಿಸುವ ಆರ್‍ಎನ್‍ಎ, ಡಿಎನ್‍ಎಗಳು ಹೇಗೆ ರೂಪುಗೊಳ್ಳುತ್ತವೆ?ವಿವಿಧ ರೀತಿಯ ರಕ್ತದ ಗುಂಪುಗಳಿರಲು ಕಾರಣವೇನು ಮುಂತಾದ ರಹಸ್ಯಗಳು ಬಯಲಾಗಲಿವೆ. ಧಾನ್ಯ, ಹಣ್ಣು, ಹಂಪಲು, ತರಕಾರಿಗಳ ವಂಶೀಯ ಗುಣಗಳನ್ನು ಗುರ್ತಿಸಿ, ಅವುಗಳ ಮೈಕ್ರೊವೈಟಾ ಸಂಖ್ಯೆ ಮತ್ತು ಸ್ವರೂಪವನ್ನು ಬದಲಿಸುವುದರೊಂದಿಗೆ ಪೌಷ್ಠಿಕಾಂಶಗಳ ಪ್ರಮಾಣವನ್ನು ನಿಗದಿಗೊಳಿಸಲು ಸಾಧ್ಯವಾಗಲಿದೆ ಹಾಗೂ ಪೇರಲೆಯನ್ನು ಮಾವಿನಹಣ್ಣನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿದೆ. ಜೀವಶಾಸ್ತ್ರದ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದರಿಂದ ಆರೋಗ್ಯ ಕ್ಷೇತ್ರದ ಬಲ ವರ್ಧಿಸಲಿದೆ. ವಿವಿಧ ಔಷಧಿಗಳ ಪರಿಣಾಮದ ನಿಖರತೆಯನ್ನು, ಅದರಲ್ಲೂ ಹೋಮಿಯೋಪಥಿ ಚಿಕಿತ್ಸಾ ವಿಧಾನಕ್ಕೆ ಬಹಳಷ್ಟು ಹೊಸ ಆಯಾಮಗಳು ಸೇರ್ಪಡೆಯಾಗಲಿದೆ. ವಿಷ ಚಿಕಿತ್ಸಾ ವಿಧಾನವೆಂಬುದು ಪ್ರಾಚೀನ ಭಾರತದಲ್ಲಿ ಪ್ರಚಲಿತವಿದ್ದರೂ, ಕಾರಣಾಂತರಗಳಿಂದ ಹಿನ್ನೆಲೆಗೆ ಸರಿದಿದ್ದರಿಂದಾಗಿ, ಅದೇ ತತ್ವ ಆಧಾರಿತ ಹೋಮಿಯೋಪಥಿಯ ಮೂಲವನ್ನು ಪಾಶ್ಚಾತ್ಯ ದೇಶಗಳಿಗೆ ತಪ್ಪಾಗಿ ನೀಡಲಾಗುತ್ತಿದೆ. ಮೈಕ್ರೊವೈಟಾ ಸಂಶೋಧನೆಗಳು ಇಡೀ ಜಗತ್ತಿನ ಆರ್ಥಿಕ ಕ್ಷೇತ್ರದ ಮೇಲೆ ಮಹತ್ತರ ಪರಿಣಾಮ ಬೀರಲಿವೆÉ. ಆಯಾತ, ನಿರ್ಯಾತವಾಗುವ ವಸ್ತುಗಳು ಮತ್ತು ಅವುಗಳ ಸ್ವರೂಪ ಬದಲಾಗಲಿದೆ. ಉದಾಹರಣೆಗಾಗಿ ತೈಲಕ್ಕೆ ಪರ್ಯಾಯ ವಸ್ತುವನ್ನು ಸಿದ್ಧಪಡಿಸಿದಾಗ ತೈಲ ಉತ್ಪಾದಕ ರಾಷ್ಟ್ರಗಳ ಮೇಲಿನ ಅವಲಂಬನೆ ತಗ್ಗಲಿದೆ. ಪೊಟ್ಯಾಶ್ ಮತ್ತು ರಂಜಕ ಒದಗಿಸುವ ರಾಸಾಯನಿಕ ಗೊಬ್ಬರಗಳ ತುಟಾಗ್ರತೆ ಭಾರತವನ್ನು ಕಾಡುತ್ತಿದ್ದು, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಪೊಟ್ಯಾಶ್ ಪ್ರಮಾಣವನ್ನು ಹೆಚ್ಚಿಸುವ ಸಂಶೋಧನೆಗಳಿಂದಾಗಿ, ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಲಿದೆ. ಸಂಪನ್ಮೂಗಳು ಎಂದರೆ ಇಂದಿನ ಸ್ಥಿತಿಯಲ್ಲಿ ಭೌತಿಕ ಸಂಪನ್ಮೂಲಗಳೆಂದು ಅರ್ಥೈಸಲಾಗುತ್ತದೆ. ಮಾನವ ಸಂಪನ್ಮೂಲದ ಕುರಿತು ಹೇಳುವಾಗ ಮಾನವನ ಬುದ್ಧಿಶಕ್ತಿಯನ್ನು ಪರಿಗಣ ಸಲಾಗುತ್ತದೆ. ಇದರಾಚೆಗಿನ ಸಂಪನ್ಮೂಲಗಳ ಪರಿಚಯವನ್ನು ಮೈಕ್ರೊವೈಟಾ ಸಿದ್ಧಾಂತ ನೀಡಲಿದೆ. ಭೌತಿಕ, ಅಭೌತಿಕ, ಮಾನಸಿಕ, ಆಧ್ಯಾತ್ಮಿಕ ಸಂಪನ್ಮೂಲಗಳ ಕಲ್ಪನೆ, ವೈಯಕ್ತಿಕ ಮತ್ತು ಸಾಮೂಹಿಕ ಸ್ತರದಲ್ಲಿ ಲಭ್ಯವಿರುವ ಈ ಸಂಪನ್ಮೂಲಗಳನ್ನು ಸಾಮೂಹಿಕ ಹಿತಕ್ಕಾಗಿ ಬಳಸುವ ವಿಧಾನಗಳು ರೂಪುಗೊಳ್ಳಲಿವೆ. ಅತಿಸೂಕ್ಷ್ಮ ಅಸ್ತಿತ್ವದ ವಿಶ್ವದ ಜೈವ ಬೀಜ, ವಿಶ್ವ ಚೈತನ್ಯದ ನಿಗೂಢ ಉತ್ಪತ್ತಿಯನ್ನು ಮೈಕ್ರೊವೈಟಮ್ (ಬಹುವಚನದಲ್ಲಿ ಮೈಕ್ರೊವೈಟಾ) ಎಂದು ಪರಿಚಯಿಸಿದ ದಾರ್ಶನಿಕ ಶ್ರೀ ಪ್ರಭಾತರಂಜನ್ ಸರ್ಕಾರರು ನೀಡಿರುವ ಆರ್ಥಿಕ ಸಿದ್ಧಾಂತವಾದ ಪ್ರಗತಿಶೀಲ ಉಪಯೋಗ ತತ್ವದಲ್ಲಿ ( ಸಂಕ್ಷಿಪ್ತದಲ್ಲಿ ಪ್ರಉತ) ಸಂಪನ್ಮೂಲಗಳ ಗುರುತಿಸುವಿಕೆ ಮತ್ತು ಬಳಸುವಿಕೆಯ ವಿಧಾನವನ್ನು ಮೇಲಿನಂತೆ ವಿವರಿಸಲಾಗಿದೆ. ಮೈಕ್ರೊವೈಟಾಗಳ ಪರಿಣಾಮವನ್ನು ಆಧರಿಸಿ ಅವುಗಳನ್ನು ನಕಾರಾತ್ಮಕ, ಸಕಾರಾತ್ಮಕ ಹಾಗೂ ತಟಸ್ಥ ಎಂದು ವರ್ಗೀಕರಿಸಲಾಗುತ್ತದೆ. ಜಗತ್ತನ್ನು ಕಾಡುತ್ತಿರುವ ಹಲವು ವಿಧದ ವೈರಸ್‍ಗಳು ನÀಕಾರಾತ್ಮಕ ಸ್ಥೂಲ ಮೈಕ್ರೊವೈಟಾಗಳು. ಇವುಗಳ ಕುರಿತಾದ ಹೆಚ್ಚಿನ ತಿಳುವಳಿಕೆ ಹಾಗೂ ನಿಯಂತ್ರಣದ ವಿಧಾನಗಳ ಅಳವಡಿಕೆಗೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಔಷಧಿಗಳಿಂದ ನಕಾರಾತ್ಮಕ ಮೈಕ್ರೊವೈಟ್‍ಗಳನ್ನು ಕೊಲ್ಲಲು ಸಾಧ್ಯವಿಲ್ಲ. ಆದರೆ ಸಕಾರಾತ್ಮಕ ಮೈಕ್ರೊವೈಟಾಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಅವುಗಳ ನಿಯಂತ್ರಣ ಸಾಧ್ಯ. ಆರ್ಥಿಕ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಮೈಕ್ರೊವೈಟಾ ಕುರಿತಾಗಿ ನಡೆಯುವ ಸಂಶೋಧನೆಗಳಿಂದಾಗಿ ಇಡೀ ಮಾನವ ಸಮಾಜ ಲಾಭ ಪಡೆಯಲಿದೆ. ಇಂದಿನ ಪರಿಸ್ಥಿತಿಯಲ್ಲಿ ತನ್ನ ಭೌತಿಕ ಅಸ್ತಿತ್ವವನ್ನು ಕಾಪಾಡಿಕೊಳ್ಳುವುದೇ ಮಾನವರಿಗೆ ದೊಡ್ಡ ಸವಾಲಾಗಿದೆ. ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳ ಪೂರೈಕೆಗಾಗಿ ಜೀವನವಿಡೀ ಸೆಣಸುವುದೇ ಹಲವರ ಪಾಡಾಗಿದೆ. ಅಂದರೆ, ವ್ಯಕ್ತಿಯ ಸಾಮಥ್ರ್ಯದ ಹೆಚ್ಚಿನ ಭಾಗ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಗಾಗಿಯೇ ವ್ಯಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಇಡೀ ಮಾನವ ಸಮಾಜಕ್ಕೆ ಈ ಸಮಸ್ಯೆಯಿಂದ ಬಿಡುಗಡೆ ಸಿಗಲಿದೆ. ಜೀವನದ ಬಹುಪಾಲು ಸಮಯವನ್ನು ತನ್ನ ಅಸ್ತಿತ್ವದ ರಕ್ಷಣೆಗಾಗಿಯೇ ಕಳೆಯಬೇಕಾದ ಪರಿಸ್ಥಿತಿ ಬದಲಾಗಿ ಸಾಕಷ್ಟು ಬಿಡುವು ಸಿಗಲಿದೆ. ದಿನಕ್ಕೆ 10 ರಿಂದ 12 ತಾಸು ದುಡಿದರೂ ಬದುಕು ಕಟ್ಟಿಕೊಳ್ಳಲಾಗದ ಸ್ಥಿತಿಯಲ್ಲಿ ಬದುಕುತ್ತಿರುವ ನಮಗೆ ದಿನಕ್ಕೆ ಎರಡು ಗಂಟೆಗಿಂತ ಕಡಿಮೆ ದುಡಿದರೂ ಉತ್ತಮ ಬದುಕು ಸಿಗುತ್ತದೆನ್ನುವುದನ್ನು ಊಹಿಸಲೂ ಇಂದು ಕಷ್ಟವಾಗುತ್ತದೆ. ಅಂತಹ ದಿನಗಳು ಬಂದಾಗ ಏನಾಗಬಹುದು? ಸಮಯದ ಬಳಕೆ ಹೇಗಾದೀತು ಎಂಬ ಪ್ರಶ್ನೆ ಸಹಜ. ಮಾನವನ ಅಸ್ತಿತ್ವವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಎಂಬ ಮೂರು ಸ್ತರಗಳಲ್ಲಿದೆ. ಇಂದಿನ ಪರಿಸ್ಥಿತಿಯಲ್ಲಿ ಹೆಚ್ಚಿನವರ ಬದುಕು ದೈಹಿಕ ಅಸ್ತಿತ್ವದಾಚೆಗೆ ಹೋಗುವುದಿಲ್ಲ. ಕೆಲವರು ತಮ್ಮ ಮಾನಸಿಕ ಅಸ್ತಿತ್ವವನ್ನು ಬೆಳೆಸಿಕೊಳ್ಳುತ್ತಾರೆ. ತೀರಾ ಕ್ವಚಿತ್ತಾಗಿ ಕೆಲವರು ಆಧ್ಯಾತ್ಮಿಕ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿದೆ. ಮಾನವರ ಮಾನಸಿಕ ಸಾಮಥ್ರ್ಯದ ಶೇಕಡಾ 10 ರಷ್ಟನ್ನು ಕೂಡ ಹೆಚ್ಚಿನವರು ಬಳಸುತ್ತಿಲ್ಲವೆಂದು ಹೇಳಲಾಗುತ್ತದೆ. ಅಂದರೆ ಉಳಿದ ಶೇಕಡಾ 90 ರಷ್ಟು ಮಾನವನ ಮಾನಸಿಕ ಸಾಮಥ್ರ್ಯ ಬಳಕೆಯಾಗದೇ ವ್ಯರ್ಥವಾಗುತ್ತಿದೆ. ಬದಲಾಗಲಿರುವ ಸಾಮಾಜಿಕ- ಆರ್ಥಿಕ ಪರಿಸ್ಥಿತಿಯಲ್ಲಿ ಮಾನವನ ಮಾನಸಿಕ, ಆಧ್ಯಾತ್ಮಿಕ ಪ್ರಗತಿಗೆ ಅನುಕೂಲಕರವಾದ ಸನ್ನಿವೇಶ ಸೃಷ್ಟಿಯಾಗಲಿದೆ. ಭೌತಿಕ ಅಸ್ತಿತ್ವದ ನಿರ್ವಹಣೆ ಸುಲಭವಾದಷ್ಟು ಹೆಚ್ಚುವರಿಯಾಗಿ ಸಿಗುವ ಬಿಡುವಿನ ವೇಳೆಯನ್ನು ಉನ್ನತ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ಪ್ರಕೃತಿ ಕಡ್ಡಾಯಗೊಳಿಸಲಿದೆ. ಯಾಕೆಂದರೆ ವಿಕಾಸ ಪಥದಲ್ಲಿ ಮಾನವನ ಸೃಷ್ಟಿಯಾಗಿಸುವುದೇ ವಿಕಾಸವನ್ನು ಮುಂದುವರಿಸುವ ಉದ್ದೇಶದಿಂದ. ಅಪರಿಪೂರ್ಣತೆಯಿಂದ ಪರಿಪೂರ್ಣತೆಯೆಡೆಗಿನ ಪಯಣವೇ ಜೀವನವೆಂದು ಅನುಭಾವಿಗಳು ಹೇಳುತ್ತಾರೆ. ಪರಿಪೂರ್ಣತೆಯನ್ನು ಸಾಧಿಸುವ ದಾರಿಯಲ್ಲಿ ಮಾನವ ಜೀವಿಯ ಹಂತ ಪ್ರಾಮುಖ್ಯವಾದದ್ದು. ಯಾಕೆಂದರೆ ಸ್ವ ಪ್ರಯತ್ನದಿಂದ ಪರಿಪೂರ್ಣತೆಯ ದಾರಿಯಲ್ಲಿ ಸಾಗುವ ಸಾಮಥ್ರ್ಯವನ್ನು ಪ್ರಕೃತಿ ಮಾನವರಿಗೆ ಮಾತ್ರ ನೀಡಿದೆ. ಸಕಾರಾತ್ಮಕ ಮೈಕ್ರೊವೈಟಾಗಳು ವಿಕಾಸದ ದಾರಿಯಲ್ಲಿ ಚಲಿಸುವವರಿಗೆ ಸಹಕಾರಿಯಾಗಲಿವೆÉ. ಕೆಲವೇ ವ್ಯಕ್ತಿಗಳು ಆಧ್ಯಾತ್ಮದ ( ವಿಕಾಸ) ಪಥದಲ್ಲಿ ನಡೆದು ಗುರಿ ತಲುಪುವುದು ಪ್ರಕೃತಿಯ ಉದ್ದೇಶವಲ್ಲ. ಇಡೀ ಮಾನವ ಕುಲ ಒಂದು ಸಮಾಜವಾಗಿ, ಒಗ್ಗಟ್ಟಿನಿಂದ ವಿಕಾಸದ ಪಯಣ ಮುಂದುವರಿಸಲು ಪ್ರಕೃತಿ ಸದಾ ಸಹಾಯ ಮಾಡುತ್ತದೆ. ಇದರ ಮೊದಲ ಹಂತವೆಂದರೆ, ಭೌತಿಕ ಸ್ತರಕ್ಕೆ ನೇರವಾಗಿ ಸಂಬಂಧಿಸಿದ ಸಾಮಾಜಿಕ, ಆರ್ಥಿಕ ಕ್ಷೇತ್ರ, ಮಾನವನ ಸ್ವಾರ್ಥ-ಸಂಕುಚಿತತೆಗಳ ಆಧಾರದ ಮೇಲೆ ರೂಪುಗೊಂಡಿರುವ ಇಂದಿನ ಕ್ರೂರ ಬಂಡವಾಳವಾದ ನೀತಿಯ ಅಧಃಪತನ ಹಾಗೂ ನಿರಾಕರಣೆ. ಒಂದು ಚಿಕ್ಕ ವೈರಾಣುವಿನ ಹೊಡೆತಕ್ಕೆ ಇಡೀ ವಿಶ್ವದ ಆರ್ಥಿಕತೆ ಏರುಪೇರಾಗಿದೆ. ಹಲವು ದೇಶಗಳಲ್ಲಿ ಆರ್ಥಿಕ ಹಿಂಜರಿತ ಪ್ರಾರಂಭವಾಗಿದ್ದು, ಭೀಕರ ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆ. ಯಾವ ದೇಶ ಆರ್ಥಿಕ ವಿಕೇಂದ್ರೀಕರಣ ನೀತಿ ಅರ್ಥಾತ್ ಜನಾಧಿಕಾರದ ವ್ಯವಸ್ಥೆಯನ್ನು ಎಷ್ಟು ಬೇಗ ಅಳವಡಿಸಿಕೊಳ್ಳುತ್ತದೋ ಅಷ್ಟು ಬೇಗ ಆರ್ಥಿಕ ಚೇತರಿಕೆ ಕಾಣಲಿದೆ. ಈ ಪೃಥ್ವಿ ಇರುವುದು ಕೇವಲ ಮಾನವರಿಗಾಗಿ ಮಾತ್ರವಲ್ಲ. ಅವರಿಗಿಂತ ಮೊದಲಿನಿಂದಲೂ ಇಲ್ಲಿಯೇ ಇದ್ದ ಗಿಡ ಮರಗಳು, ಪಕ್ಷಿ, ಪ್ರಾಣ ಸಂಕುಲಕ್ಕೂ ಅದು ಸೇರಿದೆ. ತನ್ನ ವೈಯಕ್ತಿಕ ಹಾಗೂ ಸಾಮೂಹಿಕ ಬದುಕಿನ ರೀತಿ- ನೀತಿಗಳನ್ನು, ಸಿದ್ಧಾಂತ – ಆಚರಣೆಗಳಲ್ಲಿ ಪ್ರಕೃತಿ ಪೂರಕ ನಿಲುವನ್ನು ಅಳವಡಿಸಿಕೊಳ್ಳದಿದ್ದರೆ, ನಿಸರ್ಗ ತನ್ನದೇ ರೀತಿಯಲ್ಲಿ ಪಾಠ ಕಲಿಸುತ್ತದೆ. ಸೃಷ್ಟಿಯ ವೈಚಿತ್ರ್ಯವನ್ನು ಅರಿಯಲು, ಮನುಕುಲದ ಉಳಿವಿಗಾಗಿ ಅದನ್ನು ಬಳಸಲು ಮೈಕ್ರೊವೈಟಾ ಸಿದ್ಧಾಂತ ಹೊಸ ಹೊಳಹುಗಳನ್ನು ನೀಡಿದೆ. ಇದು ವಿಜ್ಞಾನದ ಇತಿಮಿತಿಗಳನ್ನು ದಾಟಲು ಮಾತ್ರವಲ್ಲ, ಇಡೀ ಮಾನವ ಸಮಾಜದ ಪ್ರಗತಿಯ ವೇಗವನ್ನು ಹೆಚ್ಚಿಸಲೂ ಸಹಕಾರಿ ಹಾಗೂ ಅನಿವಾರ್ಯ. (Microvita – ಕುರಿತಾದ ಹೆಚ್ಚಿನ ಮಾಹಿತಿ ಅಂತರ್ಜಾಲದಲ್ಲಿ ಲಭ್ಯ.) ******* ಗಣೇಶ್ ಭಟ್, ಶಿರಸಿ –
ಜಾನಪದ
ಗರ್ದಿ ಗಮ್ಮತ್ತು ಅಳಿದು ಹೋದ ಜಾನಪದ ಕಲೆ ನಮ್ಮ ಎಳೆಯ ಕಾಲದ ‘ಗರ್ದಿ ಗಮ್ಮತ್ತು’..! ವಿಧಾನಸೌಧ ನೋಡ… ಹೇಮಾ ಮಾಲಿನಿ ನೋಡ… ದುರ್ಗಪ್ಪನ; ‘ಗರ್ದಿ ಗಮ್ಮತ್ತು’ ನೋಡ..!! 1970 ಮತ್ತು 1980ರ ಆಸುಪಾಸಿನಲ್ಲಿ ಮನರಂಜನೆ ಎಂಬುದೇ ವಿರಳವಾಗಿತ್ತು. ಆಗ ಸಿನೆಮಾಗಳು ಹಾಗೂ ವರ್ಷಕ್ಕೊಮ್ಮೆ ಜರುಗುವ ಜಾತ್ರೆ, ಹಬ್ಬಹರಿದಿನಗಳು ಇವುಗಳೇ ಮನರಂಜನೆಯಾಗಿದ್ದವು… ಆ ಸಮಯದಲ್ಲಿ ಪ್ರತಿ ಜಾತ್ರೆಯಲ್ಲಿ ತಪ್ಪದೇ ಕಾಣುತ್ತಿದ್ದ ಒಂದು ವಿಶೇಷ ಅಂದರೆ ‘ಗರ್ದಿ ಗಮ್ಮತ್ತು’. ಮೊಬೈಲ್, ವಾಟ್ಸ್ ಅಪ್‌ನಲ್ಲಿ ಕಳೆದುಹೋದ ಇಂದಿನ ಬಹುತೇಕ ಮಕ್ಕಳಿಗೆ ‘ಗರ್ದಿ ಗಮ್ಮತ್ತು’ ಅಂದರೇನು ಎಂಬುದೇ ಗೊತ್ತಿಲ್ಲ. ಗರ್ದಿ ಗಮ್ಮತ್ತು ಎಂದರೆ, ಒಂದು ಡಬ್ಬಾದಂತಹ ಪೆಟ್ಟಿಗೆಯು ಫೋಟೊಗಳ ನೆಗಟಿವ್ ಗಳನ್ನು ಬಳಸಿಕಂಡು ಚಿಕ್ಕ ಕಿಂಡಿಯಿಂದ ಅಂದರೆ, ಒಂದೇ ಕಣ್ಣಿನಿಂದ ಇಣುಕಿ ನೋಡುವಷ್ಟು ಕಿಂಡಿಯಿಂದ 2 ರಿಂದ 3 ನಿಮಿಷಗಳ ಚಿತ್ರಗಳ ಸರಣಿಗಳನ್ನು ತೋರಿಸುವ ವೈವಿಧ್ಯಮಯ ಸಾಧನ… ಈ ಸಾಧನವನ್ನು ಹಿಡಿದುಕೊಂಡಿರುವ ವ್ಯಕ್ತಿಯು ಚಿಣ್ಣರಿಂದ ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ಪರಿ ವಿಶಿಷ್ಟ. ಏನಿದೆ ಆ ಚಿಕ್ಕ ಡಬ್ಬಾದಲ್ಲಿ ಎಂದು ಕಿಂಡಿಯಲ್ಲಿ ಕಣ್ಣು ಹಾಯಿಸಿದೊಡನೆಯೇ ಆ ವ್ಯಕ್ತಿ ಒಂದು ಕಾಲಿಂಗ್ ಬೆಲ್ ತರಹ ಚಿಕ್ಕ ಘಂಟೆಯನ್ನು ಬಾರಿಸುತ್ತ, “ವಿಧಾನ ಸೌಧ ನೋಡ… ಹೇಮಾ ಮಾಲಿನಿ ನೋಡ… ಅಮಿತಾಭ ಬಚ್ಚನ್ ನೋಡ… ರಾಜಕುಮಾರ ನೋಡ…” ಎಂದು ಹಾಡುತ್ತಿದ್ದನು. ಆ ಹಾಡಿಗೂ ಆ ಡಬ್ಬಾದಲ್ಲಿ ಬರುವ ಚಿತ್ರಗಳಿಗೂ ಸರಿಹೊಂದುವಂತಹ ಪಕ್ಕಾ ಟೈಮಿಂಗ್ ಪ್ರಕಾರ ಮನರಂಜಿಸುವ ಪರಿ ಎಲ್ಲರಿಗೂ ಆಪ್ತ ಮತ್ತು ಇಷ್ಟವಾಗಿರುತ್ತಿತ್ತು… ಜಾಗತೀಕರಣ, ತಂತ್ರಜ್ಞಾನ ಕ್ಷೇತ್ರದ ಕ್ಷಿಪ್ರ ಬೆಳವಣಿಗೆ ಇಂದು ನಮಗೆಲ್ಲ ಹೊಸ ಜಗತ್ತನ್ನೇ ತೋರಿಸಿತು ನಿಜ. ಆದರೆ, ನಮ್ಮದೇ ಎನ್ನುವಂತಹ ನಮ್ಮಿಷ್ಟದ ಹಲವು ಪುರಾತನ ಸಾಂಪ್ರದಾಯಿಕ ಜಾನಪದ ವೈಶಿಷ್ಟ್ಯಗಳನ್ನು ರೂಢಿಗಳನ್ನು ಮತ್ತು ಮನರಂಜನಾ ವಿಧಾನಗಳನ್ನು ನಮಗರಿವಿಲ್ಲದೇ ದೂರ ಕರೆದುಕೊಂಡು ಹೋಯಿತು ಎನ್ನುವುದು ವಿಷಾದನೀಯ… ಅವುಗಳಲ್ಲಿ ‘ಗರ್ದಿ ಗಮ್ಮತ್ತು’ ಒಂದು. ಇಂದು 40ರ ವಯಸ್ಸಿನ ಮೇಲೆ ಇರುವ ಬಹುತೇಕ ಜನರು ‘ಗರ್ದಿ ಗಮ್ಮತ್ತ’ನ್ನು ತಮ್ಮೂರ ಜಾತ್ರೆಯಲ್ಲಿ ನೋಡಿಯೇ ನೋಡಿರುತ್ತಾರೆ. ಆದರೆ, ಇಂದಿನ ಕೆಲವು ಯುವಕರಿಗೆ ಹಾಗೂ ಹಲವು ಮಕ್ಕಳಿಗೆ ಇದರ ಬಗ್ಗೆ ಗೊತ್ತೇ ಇಲ್ಲದಂತಾಗಿದೆ… ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳ ಪ್ರತಿ ಜಾತ್ರೆಗಳಲ್ಲೂ ಕಂಡುಬರುತ್ತಿದ್ದ ‘ಗರ್ದಿ ಗಮ್ಮತ್ತು’ ಇಂದು ಮಾಯವಾಗಿದೆ. ಅಂಗೈನಲ್ಲಿರುವ ಮೊಬೈಲ್ ತೆಗೆದು ಆನ್‌ಲೈನ್‌ನಲ್ಲೇ ಬೇಕಾದ ಚಲನಚಿತ್ರಗಳನ್ನು ನೋಡುವ ಈಗಿನ ಜಮಾನಾದಲ್ಲಿ ‘ಗರ್ದಿಯ ಗಮ್ಮತ್ತು’ ಕಿಮ್ಮತ್ತಿಲ್ಲದೇ ಮೂಲೆಗುಂಪಾಗುತ್ತಿದೆ. ಡಬ್ಬಾ ಟಾಕೀಸ್‌ನಿಂದ ದಿನಕ್ಕೆ ಬೇಕಾದ ಕನಿಷ್ಠ ಗಳಿಕೇನೂ ಆಗಲ್ಲ ಎಂದು ಇದನ್ನು ಬಿಟ್ಟು ಬೇರೆ ಉದ್ಯೋಗ ಅರಸಿ ಹೋಗಿದ್ದಾರೆ. ಈ ಪೆಟ್ಟಿಗೆಗಳು ಎಷ್ಟೋ ಮನೆಗಳ ಮೂಲೆಯಲ್ಲಿ ಹಾಳಾಗುತ್ತಿವೆ ಹಾಗೂ ಇದರ ನೆನಪುಗಳ ಎಷ್ಟೋ ಮನಗಳ ಮೂಲೆಯಲ್ಲಿ ಹಳೆಯದನ್ನು ನೆನಯುತ್ತ ಮೆಲುಕು ಹಾಕುತ್ತ ಕುಳಿತಿವೆ… ‘ಗರ್ದಿ ಗಮ್ಮತ್ತ’ನ್ನು ಇಂದಿನ ಚಿಣ್ಣರಿಗೂ ಪರಿಚಯಿಸಬೇಕೆಂಬ ಇರಾದೆಯಿಂದ ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದ ವೃದ್ಧರೊಬ್ಬರು ಇಂದಿಗೂ ಅದಮ್ಯ ಉತ್ಸಾಹದಿಂದ ಓಣಿ ಕೇರಿಗೆ ಭೇಟಿ ನೀಡುತ್ತಿದ್ದಾರೆ, :ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ. ಅವರ ಹೆಸರು ದುರ್ಗಪ್ಪ ಅಂತ, ಇವರು ಕೊಪ್ಪಳದವರು. 65 ವರ್ಷದ ದುರ್ಗಪ್ಪ ಇಂದಿಗೂ ಹಳ್ಳಿ ಹಳ್ಳಿಗಳಿಗೆ ಹಾಗೂ ಪಟ್ಟಣಗಳಿಗೆ ತೆರಳಿ ‘ಗರ್ದಿ ಗಮ್ಮತ್ತ’ನ್ನು ಪರಿಚಯಿಸುತ್ತಿದ್ದಾರೆ. ಮೊದಲು ಗದಗ ಹತ್ತಿರದ ಅಬ್ಬಿಗೇರಿಯಲ್ಲಿ ವಾಸಿಸುತ್ತಿದ್ದ ಇವರು ಈಗ ರೋಣ ಪಟ್ಟಣದಲ್ಲಿ ವಾಸವಾಗಿದ್ದಾರೆ. ಇವರಿಗೆ ಇಬ್ಬರು ಮಕ್ಕಳು. ಇಬ್ಬರೂ ರೋಣದಲ್ಲಿ ಪ್ಲಾಸ್ಟಿಕ್ ಅಂಗಡಿ ಇಟ್ಟುಕೊಂಡಿರುವುದರಿಂದ ಇವರು ವಾಸಸ್ಥಳ ಬದಲಾಯಿತು. ರೋಣ ಪಟ್ಟಣಕ್ಕೆ ಬಂದ ಮೇಲೆಯೂ ದುರ್ಗಪ್ಪ ಸುಮ್ಮನೇ ಕೂಡಲಿಲ್ಲ. ಇಲ್ಲಿಯೂ ಪ್ರತಿದಿನ ಬಿಸಿಲು, ಮಳೆ ಲೆಕ್ಕಿಸದೇ ‘ಗರ್ದಿ ಗಮ್ಮತ್ತು’ ಅನ್ನು ತೆಗೆದುಕೊಂಡು ಹಾಡುತ್ತ ಓಣಿ ಓಣಿ ಅಲೆಯುವ ದುರ್ಗಪ್ಪ ಅವರಿಗೆ ದಣಿವೆಂಬುದು ಗೊತ್ತಿಲ್ಲ. ಇವರು ಕಳೆದ 45 ವರ್ಷಗಳಿಂದಲೂ ‘ಗರ್ದಿ ಗಮ್ಮತ್ತ’ನ್ನು ಜಾತ್ರೆಗಳಲ್ಲಿ ಕೊಂಡೊಯ್ದು ಮಕ್ಕಳ ಮನ ತಣಿಸುತ್ತಲೇ ಇದ್ದಾರೆ. ಈಗಲೂ ಪ್ರತಿದಿನ ಬಸ್ಸಿನಲ್ಲಿ ಆಸುಪಾಸಿನ ಊರುಗಳಿಗೆ ಹೋಗಿ :ಗರ್ದಿ ಗಮ್ಮತ್ತ:ನ್ನು ಪರಿಚಯಿಸುತ್ತಿದ್ದಾರೆ. ದುರ್ಗಪ್ಪ ಅವರನ್ನು ನೋಡಿ ಕೆಲವರು ಸೆಲ್ಫಿ ಅಂತ ಕೇಳಿದ್ದೂ ಇದೆ, ತೆಗೆದುಕೊಳ್ಳಿ ಅಂತಾರೆ, ಆದರೆ ಮೊಬೈಲ್ ನೋಡಿ ಇವರು ನಗುವುದಿಲ್ಲ, ಯಾಕೆ ಅಂತೀರಾ, ಇದು ಇವರ ‘ಗಮ್ಮತ್ತು’… ದುರ್ಗಪ್ಪ ಕೊಪ್ಪಳ ‘ಪ್ರತಿಧ್ವನಿ’ ಪ್ರತಿನಿಧಿ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ– “ನಾನು 20 ವರ್ಷದವನಿದ್ದಾಗಲೇ ಸ್ವತಂತ್ರವಾಗಿ ‘ಗರ್ದಿ ಗಮ್ಮತ್ತು’ ತೋರಿಸಲು ಸಜ್ಜಾದೆ. ಆಗ ಒಂದು ಕುಟುಂಬದಲ್ಲಿ ಎರಡು ಅಥವಾ ಮೂರು ಪೆಟ್ಟಿಗೆಗಳು ಇರುತ್ತಿದ್ದವು. ನಾವು ಜಾತ್ರೆಗೆ ಹೋದರೆ ಸಾಕು, ಮಕ್ಕಳು ದುಂಬಾಲು ಬೀಳುತ್ತಿದ್ದರು. ಆಗ ಕೆಲವರು 5 ಪೈಸೆ ಅಥವಾ 10 ಪೈಸೆ ಕೊಡುತ್ತಿದ್ದರು. ಜಾತ್ರೆ ಇಲ್ಲದ ಸಮಯದಲ್ಲಿ ನಾವು ಓಣಿ ಕೇರಿಗಳಿಗೆ ಹಾಗೂ ಪಟ್ಟಣಗಳಿಗೆ ಹೋಗುತ್ತಿದ್ದೆವು. ಅಲ್ಲಿಯೂ ಕೆಲವು ಜನರು 5 ಪೈಸೆ ಕೊಡುತ್ತಿದ್ದರು. ಇಲ್ಲವಾದರೆ ಒಂದು ಲೋಟ ಜೋಳ ಅಥವಾ ಗೋದಿ ನೀಡುತ್ತಿದ್ದರು. ಆಗ ಅದೇ ನಮ್ಮ ಜೀವನ. ಈ ಪೆಟ್ಟಿಗೆಯು ನಮ್ಮ ಕುಟುಂಬದ ಹಸಿವು ನೀಗಿಸುವಲ್ಲಿ ಮುಖ್ಯ ಪಾತ್ರ ವಹಿಸಿವೆ. ಈಗ ನಾವು ಮೊಬೈಲ್ ಬಂದೈತಿ ಅದು-ಇದು ಬಂದೈತಿ ಅಂತ, ನಮ್ಮನ್ನು ಸಾಕಿ ಸಲುಹಿದ ಈ ಕಲೆಯನ್ನು ಬಿಡಬಾರದು ಎಂದು ಪ್ರತಿದಿನ ಈ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಇವತ್ತೂ ಈ ಪೆಟ್ಟಿಗೆ ನನಗೆ ದೇವರಿದ್ದಂತೆ. ಹಣವೇ ಮುಖ್ಯವಲ್ಲ ಇಲ್ಲಿ, ಮಕ್ಕಳು ಇದ ನೋಡಿ ಕೇಕೆ ಹೊಡಿಯುವುದನ್ನು ನೋಡಿದರೆ ನನ್ನ ಹೊಟ್ಟೆ ತುಂಬಿದಂತಾಗುತ್ತದೆ.”..! ಎಂದು ‘ಗರ್ದಿ ಗಮ್ಮತ್ತಿ’ನ ದುರ್ಗಪ್ಪ ತಮ್ಮ ಕಲೆಯ ವಾರಸುದಾರನಾಗಿ ಹೇಳಿಕೊಳ್ಳುತ್ತಾರೆ… ರೊಕ್ಕಾ ಬರೂದ ಕಷ್ಟ ಆದರೂ…– ಮೊಬೈಲ್ ಕ್ರಾಂತಿ ‘ಗರ್ದಿ ಗಮ್ಮತ್ತಿ’ನ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಿದರೂ, ಅದರಲ್ಲೇ ಹೊಸತನದಿಂದ ಮಕ್ಕಳನ್ನು ನಗಸ್ತಿನಿ ಅಂತ ಮತ್ತೆ ಮಾತು ಶುರು ಹಚ್ಚಿಕೊಂಡರು ದುರ್ಗಪ್ಪ. “ಹೌದು ಸಾರ್, ಒಪ್ಪತಿನಿ, ಇಂದು ಮೊಬೈಲ್ ಎಲ್ಲಾ ಇವೆ. ಆದರೂ ನಾವು ಈಗ ಹೊಸದನ್ನೇನಾದರೂ ತೋರಿಸಬೇಕು, ಅದಕ್ಕಾಗಿ ಬಾಹುಬಲಿ, ರೋಬೋಟ್, ಅವತಾರ, ಕ್ರಿಶ್ ಹೀಗೆ ಹೊಸ ಹೊಸ ಹೀರೋಗಳ ಫೋಟೊಗಳನ್ನು ಸಂಗ್ರಹಿಸಿ ಡಬ್ಬಾ ಟಾಕೀಸ್‌ನಲ್ಲಿ ತೋರಿಸಿದಾಗ ಚಿಕ್ಕ ಮಕ್ಕಳು ಕೇಕೆ ಹೊಡೆಯುತ್ತ ನಕ್ಕು ನಲಿಯುತ್ತಾರೆ. ನಿಮಗೆಲ್ಲ ‘ಗರ್ದಿ ಗಮ್ಮತ್ತು’ ಹಳೆಯದು. ಆದರೆ ಈಗಿನ ಮಕ್ಕಳಿಗೆ ಇದು ಹೊಸದೇ ಅಲ್ಲವೇ. ಕೆಲವರಂತೂ ಮತ್ತೆ ಮತ್ತೆ ನೋಡಲು ಮುಗಿಬೀಳುತ್ತಾರೆ.”… ನಿಜ, ಇಂದಿನ ಮಕ್ಕಳಿಗೆ ಈ ಡಬ್ಬಾ ಟಾಕೀಸ್ ಹೊಸದು. ತಾವು ಚಿಕ್ಕಂದಿನಿಂದ ರೂಢಿಸಿಕೊಂಡ ಬಂದ ಈ ಪಾರಂಪರಿಕ ಮನರಂಜನಾ ವಿಧಾನವನ್ನು ಇಂದು ಹಲವರಿಗೆ ಮತ್ತೆ ಪರಿಚಯಿಸುತ್ತಿರುವ ದುರ್ಗಪ್ಪ, ಎಷ್ಟೋ ಜನರ ಮನದಲ್ಲಿ ಕಳೆದುಹೋದ ಪುಸ್ತಕಗಳ ಮರೆತ ಪುಟಗಳನ್ನು ಮತ್ತೇ ತಿರುವಿಹಾಕುವಂತೆ ಮಾಡಿ ಅವರ ಬಾಲ್ಯ ನೆನಪಿಸುತ್ತಿದ್ದಾರೆ… ಗದಗ ಜಿಲ್ಲೆಯ ರೋಣದ ಸಾಧು ಅಜ್ಜ ನಗರದ ಆರು ವಯಸ್ಸಿನ ಪುಠಾಣಿ ಪ್ರಶಾಂತ ಕುರಿ ಡಬ್ಬಾ ಟಾಕೀಸ್ ನೋಡಿ ಹೇಳಿದ್ದು ಹೀಗೆ– “ಆ ಅಜ್ಜನ ಹಾಡು, ಆ ಹಾಡಿಗೆ ತಕ್ಕ ಹಾಗೆಯೇ ಸಣ್ಣ ಟಾಕೀಸಿನಲ್ಲಿರುವ ಫೋಟೊಗಳು ಬರುತ್ತಿರುತ್ತವೆ. ಬಾಹುಬಲಿ ಶಿವಲಿಂಗವೆತ್ತಿ ಬರುತ್ತಿದ್ದ ಹಾಗೂ ಛೋಟಾ ಭೀಮನ ಚಿತ್ರ ಸೇರಿ ಎಲ್ಲ ಚೆನ್ನಾಗಿವೆ. ಇದೊಂಥರ ಮಜಾ. ಈ ಅಜ್ಜ ಮತ್ತೆ ಮತ್ತೆ ಬರಲಿ.”..! ದುರ್ಗಪ್ಪ ಅವರನ್ನು ಬಲ್ಲವರಾದ ಗದಗದ ಪರಮೇಶಪ್ಪ ಹಳ್ಳಿ ಹೇಳುವುದು ಹೀಗೆ– “ನಾವು ದುರ್ಗಪ್ಪ ಅವರನ್ನು ಕಳೆದ ಮೂವತ್ತು ವರ್ಷಗಳಿಂದ ನೋಡುತ್ತಿದ್ದೇವೆ. ಅವರು ಪ್ರತಿ ಜಾತ್ರೆಯಲ್ಲಿರುತ್ತಾರೆ. ಮುಂಜಾನೆಯಿಂದ ಸಂಜೆವರೆಗೂ ದಣಿಯದೇ ಹಾಡುತ್ತ ಮಕ್ಕಳನ್ನು ರಂಜಿಸುತ್ತಾರೆ. ಇಂಥವರನ್ನು ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಗುರುತಿಸಬೇಕು. 3-4 ನಿಮಿಷಗಳವರೆಗೆ ಇರುವ ಒಂದು ಡಬ್ಬಾ ಟಾಕೀಸ್ ನೋಡುವುದಕ್ಕೆ ಈಗ 5 ರೂಪಾಯಿಗಳು ಮಾತ್ರ. ಪ್ರತಿದಿನ 120-150ರವರೆಗೆ ದುಡಿಯುವ ದುರ್ಗಪ್ಪ, ಇಂದಿನ ತಲೆಮಾರಿನ ಜನರಿಗೆ ‘ಗರ್ದಿ ಗಮ್ಮತ್ತಿ’ನ ಪರಿಚಯ ಮಾಡುತ್ತಿರುವುದು ಸ್ತುತ್ಯಾರ್ಹವಾಗಿದೆ…” ಗರ್ದಿ ಗಮ್ಮತ್ತಿನಲ್ಲಿ ಮೊದಲೇನಿರುತ್ತಿದ್ದವು?– 70ರಿಂದ 80ರ ದಶಕ– 70 ಹಾಗೂ 80ರ ದಶಕದಲ್ಲಿ ಅಮಿತಾಭ್ ಬಚ್ಚನ್, ಹೇಮಾ ಮಾಲಿನಿ, ರಾಜ್ ಕಪೂರ್, ದೇವಾನಂದ, ನೂತನ, ಶಮ್ಮಿ ಕಪೂರ್, ವಿಧಾನ ಸೌಧ, ತಾಜಮಹಲ್, ಇಂಡಿಯಾ ಗೇಟ್, ಗೇಟ್‌ವೇ ಆಫ್ ಇಂಡಿಯಾ ಇವೆಲ್ಲ ಫೋಟೊಗಳು ಚಿರಪರಿಚಿತವಾಗಿದ್ದವು..! 90ರ ದಶಕದ ನಂತರ– ಸಂಜಯ ದತ್, ಶಾರೂಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರವೀನಾ ಟಂಡನ್, ಶಕ್ತಿಮಾನ್, ರಾಮಾಯಣ ಮತ್ತು ಮಹಾಭಾರತದ ಪಾತ್ರಗಳು, ರಾಜೀವ್ ಗಾಂಧಿ ಮತ್ತು ಕಾರ್ಟೂನ್ ಹೀರೋಗಳಾದ ಮೋಗ್ಲಿ, ಹೀ-ಮ್ಯಾನ್, ಲಾಲ್‌ಬಾಗ್, ಕಬ್ಬನ್ ಪಾರ್ಕ್ ಇವೆಲ್ಲ ಸಾಮಾನ್ಯವಾಗಿರುತ್ತಿದ್ದವು..! 2010ರ ನಂತರ: 2010ರಲ್ಲಿ ‘ಗರ್ದಿ ಗಮ್ಮತ್ತು’ ಕಾಣೆಯಾದರೂ, 90ರ ದಶಕದ ಚಿತ್ರಗಳನ್ನಿಟ್ಟಕೊಂಡೇ ತೋರಿಸುತ್ತಿದ್ದ ದುರ್ಗಪ್ಪ, 2015ರ ನಂತರ ಹೊಸ ಚಿತ್ರಗಳನ್ನು ಸೇರಿಸತೊಡಗಿದರು. ಈ ಹೊಸ ಚಿತ್ರಗಳಲ್ಲಿ ಬಾಹುಬಲಿ, ಕಟ್ಟಪ್ಪ, ಬಲ್ಲಾಳದೇವ, ರೋಬೊ, ಅವತಾರ್, ಕ್ರಿಶ್, ಕೊಚ್ಚಾಡಿಯನ್, ಯಶ್, ದರ್ಶನ, ಪುನೀತ್ ರಾಜಕುಮಾರ, ಶಿವರಾಜಕುಮಾರ್, ಸುದೀಪ್ ಮತ್ತು ಕಾರ್ಟೂನ್ ತಾರೆಗಳಾದ ಛೋಟಾ ಭೀಮ್ ಹಾಗೂ ಬಾಲವೀರ್ ಸೇರ್ಪಡೆಯಾಗಿವೆ… ನಿಮಗೂ ನೆನಪುಂಟೇ?– ‘ಗರ್ದಿ ಗಮ್ಮತ್ತಿ’ನಿಂದ ಜೀವನ ನಡೆಸುತ್ತಿದ್ದ ಕೆಲವು ಸಮುದಾಯಗಳ ಜನರು ಇದೀಗ ಪರ ಊರುಗಳತ್ತ ಉದ್ಯೋಗ ಅರಸಿ ಹೋಗಿದ್ದಾರೆ. ಮೊದಲು ಮಳೆ-ಬೆಳೆ ಚೆನ್ನಾಗಿದ್ದ ಕಾರಣ, ರೈತಾಪಿ ಜನರು ಇವರಿಗೆ ಅಕ್ಕಿ, ಜೋಳ, ಗೋಧಿಯನ್ನು ಕೊಡುತ್ತಿದ್ದರು. ಈಗ ಬರ ತಾಂಡವವಾಡುತ್ತಿದೆ. ಇಲವೇ ಅತಿವೃಷ್ಟಿ ತಾಂಡವ ಆಡುತ್ತದೆ. ಆದ್ದರಿಂದ ಇವರೆಲ್ಲ ಇಂದು ತಮ್ಮ ಕುಲಕಸುಬುಗಳನ್ನು ಬಿಟ್ಟು ಹೊಸದನ್ನು ಹುಡುಕುತ್ತ ಬದುಕಲೆತ್ನಿಸುತ್ತಿದ್ದಾರೆ. ಇಂದಿನ ತಲೆಮಾರಿನ ಜನರು, ಅಂದರೆ ‘ಗರ್ದಿ ಗಮ್ಮತ್ತ’ನ್ನೇ ಕುಲಕಸುಬಾಗಿ ಜೀವನ ನಡೆಸುತ್ತಿದ್ದವರು ಇಂದು ಇದೇ ‘ಗರ್ದಿ ಗಮ್ಮತ್ತಿ’ನಿಂದ ಕೈ ತುಂಬಾ ಸಂಪಾದಿಸಲು ಆಗಲ್ಲ ಎಂಬ ಕಾರಣದಿಂದ ಹಂದಿ ಸಾಕಾಣಿಕೆ ಹಾಗೂ ಪ್ಲಾಸ್ಟಿಕ್ ಮಾರಾಟ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ. ಗದಗ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿ ಹೆಚ್ಚಾಗಿರುವ ಈ ಜನರಲ್ಲಿ ಹಲವರು ಗುಳೆ ಹೋಗಿ, ಗೋವಾ, ಮಂಗಳೂರು ಹಾಗೂ ಸೊಲ್ಲಾಪುರಗಳಲ್ಲಿ ನೆಲೆಸಿದ್ದಾರೆ. ಹೀಗಾಗಿ ಇದು ಕಡಿಮೆಯಾಗುತ್ತ ಇಂದು ಕಣ್ಮರೆಯಾಗುವಂತಹ ದುಸ್ಥಿತಿಗೆ ಬಂದಿದೆ ‘ಗರ್ದಿ ಗಮ್ಮತಿ’ಗೆ. ಇಂದಿನ ಚಿಣ್ಣರು ಇದರ ಬಗ್ಗೆ ತಿಳಿಯಲಿ ಎಂಬುದು ನಮ್ಮ ಆಶಯವಾಗಿದೆ..! *********************************** ಕೆ.ಶಿವು.ಲಕ್ಕಣ್ಣವರ
ಮಕ್ಕಳ ವಿಭಾಗ
ಗುಬ್ಬಚ್ಚಿ ಮಲಿಕಜಾನ್ ಶೇಖ್ ಒಂದು ಸುಂದರ ಕಾಡು. ಅಲ್ಲೊಂದು ಸಿಹಿ ನೀರಿನ ಹೊಂಡ. ಅದರ ದಂಡೆಗೆ ಆಲದ ಮರ, ಅದರ ಕೆಳಗಿದ್ದ ಜಾಲಿ ಮರವು ನೀರಿನತ್ತ ಬಾಗಿತ್ತು. ಅದರ ಟೊಂಗೆಗೆ ಒಂದು ಗುಬ್ಬಚ್ಚಿ ಗೂಡು ಕಟ್ಟಿಕೊಂಡು ಮಕ್ಕಳ ಜೊತೆ ವಾಸವಿತ್ತು. ಆ ಆಲದ ಮರದ ಮೇಲೆ ಕಾಗೆಗಳ ಗ್ಯಾಂಗು. ಅವರಲ್ಲಿ ಸಭ್ಯ ಕೋಗಿಲೊಂದು ವಾಸವಿತ್ತು. ಗುಬ್ಬಚ್ಚಿಗೆ ಶಿಸ್ತು ಮತ್ತು ಸ್ವಚ್ಛತೆ ಬಹಳ ಇಷ್ಟ. ಅರುಣೋದಯದ ಮುಂಚೆ ಗೂಡಿನ ಹೊರ ಬಂದು ದೂರ ಹೋಗಿ ಶೌಚ ಮಾಡಿ, ಚಿಲಿಪಿಲಿ ಗಾನದಿ ಮರದಿಂದ ಮರಕ್ಕೆ ಜಿಗಿಯುತ್ತಾ, ನಲಿಯುತ್ತಾ… ಹೊಂಡಕ್ಕೆ ಸ್ನಾನಕ್ಕಾಗಿ ಹೋಗುತಿತ್ತು. ಸ್ನಾನ ಮಾಡಿ ಸೂರ್ಯನ ಎಳೆಯ ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕೂತು, ಬುರ್ರೆಂದು ಗೂಡಿಗೆ ಬಂದು ಮಕ್ಕಳ ನೋಡಿ ತಿಂಡಿ ಹುಡುಕಲು ಭರ್ರೆಂದು ಹೋಗುತ್ತಿತ್ತು. ಅತ್ತ ಕಾಗೆಗಳ ದಿನಚರಿ ಬೇರೇನೆ. ಎಲ್ಲರಿಗಿಂತ ತಡವಾಗಿ ಎದ್ದು ಕಾವ್ ಕಾವ್ ಗದ್ದಲ ಸುರು ಇಡುತ್ತಿದ್ದವು. ಅಲ್ಲಿ, ಇಲ್ಲಿ ಎಲ್ಲಿಯೂ ಸಿಕ್ಕ ಸಿಕ್ಕಲ್ಲಿ ಶೌಚ ಮಾಡುತ್ತಿದ್ದವು. ಗಾನವಿಲ್ಲ, ಸ್ನಾನವಿಲ್ಲ . ನೇರ ಹಳಸಿದ ಅನ್ನ ಅಥವಾ ಸತ್ತ ಪ್ರಾಣಿ ತಿನ್ನಲು ಅವರ ಗ್ಯಾಂಗು ಭರ್ರೆಂದು ರವಾನೆ ಆಗುತಿತ್ತು. ಅವೆಲ್ಲಾ ಹೋದ ನಂತರ ಕೋಗಿಲೆ ಮಾತ್ರ ಗುಬ್ಬಚ್ಚಿಯಂತೆ ಸ್ವಚ್ಛ ಸ್ನಾನ ಮಾಡಿ ಮಾವಿನ ಅಥವಾ ಹುಣಸೆ ಚಿಗುರು ತಿಂದು ಕೂಡುತ್ತಿತ್ತು. ಒಂದು ದಿನ ಗುಬ್ಬಚ್ಚಿ ಮಕ್ಕಳ ತಿಂಡಿಗಾಗಿ ಹೋದಾಗ ಕಾಗೆಗಳೆಲ್ಲಾ ಕೂಡಿ ದೊಡ್ಡ ರಂಪಾಟವನ್ನೆ ಮಾಡಿದ್ದವು. “ಕೋಗಿಲೆ ನಮ್ಮ ಜಾತಿಯವಳಲ್ಲಾ, ಅವಳಿಗೆ ನಮ್ಮ ಪರಂಪರೆ ಗೊತ್ತಿಲ್ಲಾ..” ಎಂದು ಹೇಳಿ ಕಾಗೆ ಗ್ಯಾಂಗು ಅದಕ್ಕೆ ಕಾಡಿ, ಕಚ್ಚಿ ಹಾರಿ ಹೋಗಿತ್ತು. ಅಷ್ಟರಲ್ಲಿ ಗುಬ್ಬಚ್ಚಿ ಚುಂಚಿನಲ್ಲಿ ತಿಂಡಿ ತಂದು ಚಿಂವ್ ಚಿಂವ್ ಎಂದು ಬಾಯಿ ತೆರೆದು ಕೂತ ಮಕ್ಕಳ ಬಾಯಿಗೆ ಹಾಕಿದಾಗ ಮಕ್ಕಳು, “ಅಮ್ಮಾ, ಛೀ.. ಥೂ ಏನೋ ವಾಸನೆ,,” ಎಂದವು. ಅದಕ್ಕೂ ವಾಸನೆ ಸಹಿಸದು, ಹೊರಬಂದು ನೋಡಿದರೆ ಅಲ್ಲಿ ಕಾಗೆ ಶೌಚ ಮಾಡಿತ್ತು. ಸಿಟ್ಟು ಬಂತು. ಆದರೆ ಅಲ್ಲಿ ಯಾರು ಇಲ್ಲ. ಸುಮ್ಮನಾಗಿ ಸ್ವತಃ ಕಡ್ಡಿಯಿಂದ ತೆಗೆದು ಹಾಕಿತು. ಆಗ ಅದರ ಗಮನ ಎಲೆಯಲ್ಲಿ ಭಯದಿಂದ ಅವಿತ ಕೋಗಿಲೆಯತ್ತ ಹೋಯಿತು. “ಏನ್ ಕೋಗಿಲಕ್ಕಾ ಹೀಗೆ ಕೂತೆಯಲ್ಲಾ ಏನಾಯಿತು..?” ಎಂದು ಕೇಳಿತು. ಆಗ ಕೋಗಿಲೆ ಅಳುತ್ತಾ, “ಗುಬ್ಬಕ್ಕಾ ಏನ್ ಹೇಳಲಿ ನನ್ನ ಪಾಡು, ಇಷ್ಟು ದಿನ ಸುಮ್ಮನಿದ್ದು ಇಂದು ಒಮ್ಮೇಲೆ ನೀನು ನಮ್ಮ ಜಾತಿಯವಳು ಅಲ್ಲಾ, ಹೋಗು ಇಲ್ಲಿಂದ ಅಂದವು. ನೀನೆ ಹೇಳು ಗುಬ್ಬಕ್ಕಾ,, ನಮ್ಮಮ್ಮಾ ಇಲ್ಲಿ ಮೊಟ್ಟೆ ಇಡುವಾಗ ಇವರ ಜಾತಿ ಕೇಳಿದಳಾ, ಇಲ್ಲವಲ್ಲ.” ಎಂದು ಹೇಳಿತು. ಆಗ “ಇರಲಿ ಬಿಡು ಕೋಗಿಲಕ್ಕಾ, ಹುಚ್ಚು ಕಾಗೆಗಳು ಅವು..” ಗುಬ್ಬಚ್ಚಿ ಸಾಂತ್ವನ ಮಾಡಲು ಕೋಗಿಲೆ, “ಇಲ್ಲ.. ನಾನಿಲ್ಲಿ ಇರುವದಿಲ್ಲಾ, ಸಂಕಟದಲ್ಲಿ ಇವರೆ ನನ್ನ ಹತ್ತಿರ ಬರುತ್ತಾರೆ..” ಹೇಳಿ ಬುರ್ರೆಂದು ಹಾರಿತು. ಎಲ್ಲ ಹಕ್ಕಿಗಳು ರವಿ ಮುಳುಗುತ್ತಿದ್ದಂತೆ ಗೂಡು ಸೇರುತಿದ್ದವು. ಆದರೆ ಕಾಗೆಗಳು ಮಾತ್ರ ತಡವಾಗಿ ಬಂದು ಒಂದೆರಡು ತಾಸು ಗಲಭೆ ಮಾಡಿ ಮಲಗುವ ರೂಢಿ. ಕಾಗೆಗಳು ಬಂದ ತಕ್ಷಣ ಗುಬ್ಬಚ್ಚಿ, “ಯಾರು ನನ್ನ ಗೂಡಿನ ಮೇಲೆ ಶೌಚ ಮಾಡಿದಿರಿ, ಸ್ವಲ್ಪನಾದರೂ ಮಾನ ಮರ್ಯಾದೆ ಇದೆಯಾ ನಿಮಗೆ..?” ಎಂದು ರೇಗುತ್ತದೆ. ಈ ಮಾತು ಕೇಳಿದ ನಾಯಕ ಕಾಗೆ, “ಯಾರು ಗುಬ್ಬಿನಾ, ಲೇ ನೀನು ನನ್ನ ಕೊಕ್ಕಿನಷ್ಟು ಇದ್ದಿಯಾ..? ನನ್ನ ಮುಂದೆ ಮಾತನಾಡುವ ಧೈರ್ಯ ನಿನಗೆ. ನಿಲ್ಲು ನಿನ್ನನ್ನು..” ಅಷ್ಟರಲ್ಲಿ ಇನ್ನೊಂದು ಕಾಗೆ, “ಇರಲಿ, ಶಾಂತ ಆಗಣ್ಣಾ, ಬೇಡಾ. ಅದು ನಮಗೆಲ್ಲಿ ಸಾಲುತ್ತದೆ, ಲೇ ಗುಬ್ಬಿ ನಾನೇ ಶೌಚ ಮಾಡಿದ್ದು, ಏನು ಇವಾಗ..?” “ಅಲ್ಲಪ್ಪಾ ಕಾಗೆಗಳಿರಾ, ನೀವೆಲ್ಲಾ ಹೀಗೆ ಹೊಲಸು ತಿಂದು ಸುತ್ತಮುತ್ತ ಗಲೀಜು ಮಾಡಿದರೆ ಹೇಗೆ..? ನಿಮ್ಮ ಕ್ರೂರ ಕರ್ಮ ನಾಳೆ ನಮ್ಮ ಇಡಿ ಪಕ್ಷಿ ಸಂಕುಲಕ್ಕೆ ಸಂಕಟ ತರಬಹುದು..” ಎಂದು ಗುಬ್ಬಚ್ಚಿ ಬುದ್ಧಿ ಮಾತು ಹೇಳಲು ಹೋದಾಗ, ಕಾಗೆಗಳೆಲ್ಲಾ ಗಹ ಗಹಿಸಿ ನಗುತ್ತಾ, “ನಮಗೆ ಬುದ್ಧಿ ಮಾತು ಹೇಳಬೇಡ. ನೀನ್ಯಾರು,,? ನಮ್ಮ ರಕ್ಷಣೆಗೆ ದೇವಿ ಕಾಗಮ್ಮಾ ಇದ್ದಾಳೆ..” ಎಂದವು. ಆಗ ಗುಬ್ಬಚ್ಚಿ ಸುಮ್ಮನೆ ಹೋಗಿ ಮಕ್ಕಳೊಂದಿಗೆ ಮಲಗುತ್ತದೆ. ರಾತ್ರಿ ಪೂರ್ಣ ಮಳೆ. ರವಿ ಬಂದಿದ್ದು ಕಾಣುತ್ತಿರಲಿಲ್ಲ, ಅಷ್ಟು ಧಾರಾಕಾರ ಮಳೆ. ಮಧ್ಯಾಹ್ನ ಕಾಗೆಗಳಿಗೆ ಹಸಿವೆಯಾಗಿ ಜಿಟಿ ಜಿಟಿ ಮಳೆಯಲ್ಲಿಯೆ ರಾತ್ರಿ ತಂದ ಕೊಳೆತ ಮೌಂಸವನ್ನು ತಿನ್ನಲು ಪ್ರಾರಂಭ ಮಾಡುತ್ತವೆ. ಅದರಲ್ಲಿ ಒಂದು ಕಾಗೆ ಗುಬ್ಬಚ್ಚಿಯನ್ನು ತೆಗಳುತ್ತಾ, “ಏ ಸಾಧು ಗುಬ್ಬಿ, ನಿನ್ನೆ ರಾತ್ರಿ ಬಹಳ ಮಾತನಾಡುತಿದ್ದಿಯಲ್ಲಾ ಈಗೇನು ತಿನ್ನುತ್ತೀಯಾ, ಚಳಿ ಇದೆ, ಸಾಯುತ್ತಿ ಹಿಡಿ ತಿನ್ನು” ಎಂದು ಕೊಳೆತ ಮೌಂಸದ ತುಣುಕು ಗೂಡಿನತ್ತ ಬೀಸಿತು. ಕಾಗೆಯ ಬಾಯಿಗೆ ಏಕೆ ಸಿಕ್ಕಬೇಕೆಂದು ಗುಬ್ಬಚ್ಚಿ ಗೂಡು ಬಿಟ್ಟು ಬರಲಿಲ್ಲ. ಗೂಡಿನಲ್ಲಿದ್ದ ಸ್ವಲ್ಪ ಕಾಳು ಮಕ್ಕಳಿಗೆ ತಿನ್ನಲು ಕೊಟ್ಟು ತಾನು ಎರಡು ದಿನ ಉಪವಾಸ ಮಾಡಿತು. ಅದಕ್ಕೆ ಗೊತ್ತಿತ್ತು ಸಂಕಟ ಬಹಳ ದಿನ ಇರುವದಿಲ್ಲ. ಮಾರನೆಯ ದಿನ ಮಳೆ ನಿಂತಿತು. ಏನಾದರೂ ತಿನ್ನಲು ತರಬೇಕೆಂಬ ವಿಚಾರದಲ್ಲಿ ಹೊರಗೆ ಬಂದು ನೋಡಿದರೆ, ಕಾಗೆಗಳು ಅದರ ಗೂಡಿನ ಸುತ್ತಲೆಲ್ಲಾ ಶೌಚ ಮಾಡಿ, ಎಲುಬು ತೂಗು ಹಾಕಿದ್ದವು. ಗುಬ್ಬಚ್ಚಿಗೆ ಭಯವಾಯಿತು. ಇಲ್ಲಿಯೆ ಇದ್ದರೆ ಈ ಕಾಗೆಗಳು ಬದುಕಲು ಬಿಡುವದಿಲ್ಲ ಎಂದು ತಿಳಿದು ಮಕ್ಕಳನ್ನು ತನ್ನ ರೆಕ್ಕೆ ಮೇಲೆ ಕೂಡಿಸಿಕೊಂಡು ಮತ್ತೊಂದು ಕಾಡಿಗೆ ಬುರ್ರನೆ ಹಾರಿತು. ಗುಬ್ಬಚ್ಚಿ ಹೇಳುತಿತ್ತು, ಕೇಳುತಿತ್ತು ಆದರೆ ಈಗ ಮಾತ್ರ ಕಾಗೆಗಳಿಗೆ ಹೇಳುವರಿಲ್ಲಾ, ಕೇಳುವವರಿಲ್ಲಾ. ಅವುಗಳ ಕ್ರೂರತೆ ಮತ್ತಷ್ಟು ಹೆಚ್ಚಾಯಿತು. ಸಿಕ್ಕಿದೆಲ್ಲಾ, ಸತ್ತಿದೆಲ್ಲಾ ತಿನ್ನಲು ಪ್ರಾರಂಭ ಮಾಡಿದವು. ಒಮ್ಮೆ ದೂರ ದೇಶದ ಬಾವುಲಿಗಳು ಅಲ್ಲಿಗೆ ಬಂದು ಸತ್ತು ಬಿದ್ದಿದ್ದವು. ಸಂಜೆ ಹೊತ್ತು ಮನೆಯತ್ತ ಬರುವಾಗ ಕಾಗೆಗಳ ನಾಯಕನ ಕಣ್ಣು ಅತ್ತ ಬಿದ್ದಾಗ ಸಂತೋಷದಿಂದ ತಕ್ಷಣ ಎಲ್ಲ ಕಾಗೆಗಳನ್ನು ಕರೆದು ಬೇಟೆ ಎತ್ತಿಕೊಂಡು ಮರದತ್ತ ಒಯ್ಯಲು ಹೇಳಿತು. ಅಂದು ಕಾಗೆಗಳ ಸಂಭ್ರಮ ಹೇಳತೀರದು, ಅವುಗಳ ಕಿರುಚಾಟ ಕಾಡು ತುಂಬಿತ್ತು. ಇದನ್ನು ನೋಡಿದ ಎರಡು ಮುದಿ ಕಾಗೆ, “ಏ,, ಏನು ತಿನ್ನುತ್ತಿದ್ದೀರಿ.. ಛೀ, ನಾವು ಎಂದಿಗೂ ಇಂತಹ ಪ್ರಾಣಿಗಳನ್ನು ತಿಂದಿಲ್ಲಾ, ಮೂರ್ಖಗಳಿರಾ.. ನಮಗೆಲ್ಲಾ ದೊಡ್ಡ ವಿಪತ್ತು ಕಾದಿದೆ..” ಎಂದು ಹೇಳಿ ಅವು ಸಹ ಅಲ್ಲಿಂದ ಭರ್ರೆಂದು ಹಾರಿ ಹೋದವು. ಮರುದಿನ ನೋಡಿದರೆ ಎಲ್ಲ ಕಾಗೆಗಳು ಅಲ್ಲಲ್ಲೆ ಸಾಯಲು ಪ್ರಾರಂಭ ಮಾಡಿದವು. ಅವುಗಳಿಗೆ ಬಾವುಲಿಯ ರೋಗ ತಗಲಿತ್ತು. ಆ ಮಹಾಮಾರಿ ಅತ್ಯಂತ ವೇಗವಾಗಿ ಕಾಡಿನ ತುಂಬೆಲ್ಲಾ ಪಸರಿಸಿತು. ಎಲ್ಲ ಪಕ್ಷಿಗಳ ಪ್ರಾಣಕ್ಕೆ ಕುತ್ತು ಬಂತು. ಇಡೀ ಕಾಡು ಹಕ್ಕಿ ಇಲ್ಲದಂತೆ ಆಗುವ ಭಯಾನಕ ಪರಿಸ್ಥಿತಿ ನಿರ್ಮಾಣವಾಯಿತು. ಇದು ಆ ಮುದಿ ಕಾಗೆಗಳಿಗೆ ಗೊತ್ತಾಯಿತು. ಒಂದು ಕಾಲದಲ್ಲಿ ಇಂತಹ ಮಹಾಮಾರಿ ಬಂದಾಗ ಕೋಗಿಲೆ ತಂದ ಸಂಜೀವಿನಿ ಕಡ್ಡಿಯಿಂದ ಪಕ್ಷಿ ಸಂಕುಲ ಉಳಿದಿದ್ದು ಅವುಗಳ ನೆನಪಿಗೆ ಬಂತು. ಆದರೆ “ಕೋಗಿಲೆ ನಮ್ಮ ಮೇಲೆ ಸಿಟ್ಟಾಗಿ ಹೋಗಿದೆ ಅದನ್ನು ನಾವು ಕೇಳಿದರೆ ಕೊಡುವದಿಲ್ಲ,, ಏನು ಮಾಡುವುದೆಂದು..” ಮುದಿ ಕಾಗೆ ಚಿಂತಿಸಲು ಮತ್ತೊಂದು ಕಾಗೆ, “ಅದರ ಪ್ರೀತಿಯ ಗೆಳತಿ ಗುಬ್ಬಚ್ಚಿ ಕೇಳಿದರೆ ಇದಕ್ಕೆ ಸಹಕರಿಸಬಹುದು…” ಎಂಬ ವಿಚಾರದಲ್ಲಿ ಗುಬ್ಬಚ್ಚಿ ಹುಡುಕಿ ಮತ್ತೊಂದು ಕಾಡಿಗೆ ಹೊರಟವು. ಕೊನೆಗೆ ಬಹಳ ಪರಿಶ್ರಮದಿಂದ ಗುಬ್ಬಚ್ಚಿಯನ್ನು ಹುಡುಕಿ, ಕ್ಷಮೆ ಕೇಳಿ, “ಗುಬ್ಬಕ್ಕಾ, ನಮ್ಮ ಕಾಗೆಗಳು ಮಾಡಿದ ತಪ್ಪಿನಿಂದ ನಾವೆಲ್ಲರೂ ದೊಡ್ಡ ಸಂಕಟದಲ್ಲಿ ಸಿಲುಕಿದ್ದೇವೆ. ದಯವಿಟ್ಟು ನಮಗೀಗ ಸಂಜೀವಿನಿ ಕಡ್ಡಿ ಬೇಕು. ನೀನು ಸಹಕರಿಸಿದರೆ ಕೋಗಿಲೆ ನಮಗೆ ಕೊಡುತ್ತದೆ. ನಮ್ಮೆಲ್ಲರ ಪ್ರಾಣ ಉಳಿಯುತ್ತದೆ..” ಎಂದು ವಿನಂತಿಸಿ ಕೊಂಡವು. ತಕ್ಷಣ ಗುಬ್ಬಚ್ಚಿ ಕೋಗಿಲಕ್ಕನ ಹತ್ತಿರ ಹೋಗಿ ಎಲ್ಲ ಪರಿಸ್ಥಿತಿಯನ್ನು ಹೇಳುತ್ತಾಳೆ. ‘ಅಯ್ಯೋ..! ದೊಡ್ಡ ಸಂಕಟವೇ ಉದ್ಭವ ಆಗಿದೆಯಲ್ಲಾ..” ಎಂದು ಜೀವ ಪರ್ವತದ ಮೇಲೆ ಹೋಗಿ ಸಂಜೀವಿನಿ ಕಡ್ಡಿಯನ್ನು ತಂದು ಆ ಮಹಾಮಾರಿಯಿಂದ ಪಕ್ಷಿ ಸಂಕುಲವನ್ನು ಬದುಕಿಸುತ್ತದೆ. ಎಲ್ಲ ಹಕ್ಕಿಗಳು ಕೋಗಿಲೆಗೆ ಧನ್ಯವಾದ ಹೇಳುತ್ತವೆ. ಮುಂದೆ ಎಲ್ಲ ಹಕ್ಕಿ ಸಭ್ಯರಾಗಿ, ಪ್ರೀತಿಯಿಂದ ಒಬ್ಬರನೊಬ್ಬರು ವಿಶ್ವಾಸದಲ್ಲಿ ಕಾಣುತ್ತಾ ಬದುಕುತ್ತವೆ. *****
ಪ್ರಸ್ತುತ
ನಿಜವಾದ ವಿಮೋಚಕ ಸುರೇಶ ಎನ್ ಶಿಕಾರಿಪುರ ಹಿಂದೂ ಧರ್ಮದ ಪ್ರಕಾರ ಹೆಣ್ಣುಮಕ್ಕಳಿಗೆ ಆಸ್ತಿಯ ಹಕ್ಕಿರಲಿಲ್ಲ. ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ಮಾತಿನ ಮೂಲಕ ತವರಿನ ಯಾವುದೇ ಆಸ್ತಿಗೆ ಆಕೆ ಹಕ್ಕುದಾರಳಲ್ಲ ಸಂಬಂಧದವಳಲ್ಲ ಎಂಬುದನ್ನು ನೆಲೆಗೊಳಿಸಲಾಗಿತ್ತು. ಅವಳಿಗೆ ತವರಿನ ಆಸ್ತಿಯೇನಾದರೂ ಇದ್ದರೆ ಅದು ಆಕೆಯ ತಾಯಿ ಮಾತ್ರವೇ ಆಗಿರುತ್ತಿದ್ದಳು. ಅದೂ ಬದುಕಿದ್ದರೆ ಇಲ್ಲದಿದ್ದರೆ ಅದೂ ಇಲ್ಲ. ಹಿಂದೆಲ್ಲಾ ಬಾಲ್ಯ ವಿವಾಹವಾಗಿ ಚಿಕ್ಕ ವಯಸ್ಸಿನಲ್ಲೇ ಗಂಡ ತೀರಿ ಹೋದರಂತೂ ಮುಗಿಯಿತು. ಇಟ್ಟುಕೊಂಡರೆ ಗಂಡನ ಮನೆ ಇಲ್ಲದಿದ್ದರೆ ತವರು ಮನೆ. ಹೊಟ್ಟೆ ಪಾಡಿಗಾಗಿ ಆಕೆ ಅಣ್ಣ ಅತ್ತಿಗೆ ನಾದಿನಿ ಅತ್ತೆ ಮಾವ ಮಲತಾಯಿ ಎಲ್ಲರನ್ನೂ ಸಹಿಸಿಕೊಂಡು ದೀನಳಾಗಿ ಬದುಕಬೇಕಾದ ದುಸ್ಥಿತಿ ಇತ್ತು. ತುತ್ತಿನ ಚೀಲ ತುಂಬಿಕೊಳ್ಳಲು ಆಕೆ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಇದ್ದು ಸಾಯಬೇಕಾಗಿತ್ತು. ಮೇಲ್ವರ್ಗ ಮೇಲ್ಜಾತಿಯ ಕುಟುಂಬಗಳಲ್ಲಂತೂ ಇದು ಅವ್ಯಾಹತ. ಆಸ್ತಿ ಕೊಡುವ ಯೋಚನೆ ಆಕೆಯ ಸಹೋದರನಿಗೋ ತಂದೆಗೋ ಇದ್ದರೆ ಅದನ್ನು ಆಕ್ಷೇಪಿಸುವ ವಿರೋಧಿಸುವ ಅತ್ತಿಗೆಯೋ ನಾದಿನಿಯೋ ಮಲತಾಯಿಯೋ ಇರುತ್ತಿದ್ದಳು. ಅಂದರೆ ಶೋಷಿತ ಹೆಣ್ಣು ಹೆಣ್ಣಿನಿಂದಲೇ ಈ ಪರಿಯ ಹಿಂಸೆ ವಧೆ ಅನುಭವಿಸಬೇಕಾಗಿತ್ತು. ಹೆಣ್ಣು ಹೆಣ್ಣಿಗೇ ಆಸರೆ ಎಂಬುದು ಮಾತ್ರ ಇಂತಹಾ ಸಂದರ್ಭದಲ್ಲಿ ಸುಳ್ಳಾಗದೇ ಇರುವುದಿಲ್ಲ. ಇಲ್ಲಿ ಒಂದು ಜೀವಕ್ಕಿಂತ ತನ್ನ ಕುಟುಂಬದ ತನ್ನ ಮಕ್ಕಳ ಸ್ವಾರ್ಥ ಮುಖ್ಯವಾಗುತ್ತದೆ. ಹಾಗಾಗಿ ವಿಧವೆಯೋ ನಿರ್ಗತಿಕಳೋ ಆದ ಹೆಣ್ಣಿಗೆ ಹೀನಾಯವಾದ ಬಾಳು ತಪ್ಪುತ್ತಿರಲಿಲ್ಲ. ಗಂಡ ಸತ್ತ ಮೇಲೆ ಚಿತೆ ಏರುತ್ತಿದ್ದ ಬಹುತೇಕ ಹೆಣ್ಣು ಮಕ್ಕಳು ಇಂಥಹಾ ಭೀಕರ ಭವಿಷ್ಯವನ್ನು ಕಲ್ಪಿಸಿಕೊಂಡೇ ಚಿತೆ ಏರಲು ನಿರ್ಧರಿಸುತ್ತಿದ್ದದ್ದೂ ಇದೆ. ಗಂಡ ಸತ್ತ ಮೇಲೆ ನಮಗೇನೂ ಇಲ್ಲ ಎಂಬುದು ಹೆಚ್ಚಿನದಾಗಿ ಅವಳು ಆಸ್ತಿಯ ಹಕ್ಕಾಗಲೀ ಬದುಕುವ ಬಾಳುವ ಅವಕಾಶವಾಗಲೀ ಇಲ್ಲದ ದುರ್ಬರ ಸನ್ನಿವೇಷವನ್ನು ಎದುರಿಸಬೇಕಾದ ಭೀತಿಯನ್ನೇ ದ್ವನಿಸುತ್ತದೆ. ಬಾಬಾ ಸಾಹೇಬ ಅಂಬೇಡ್ಕರರು ಹಿಂದೂ ಕೋಡ್ ಬಿಲ್ಲನ್ನು ತರಲು ಹೋರಾಡಿದ್ದು ಇದೇ ಉದ್ದೇಶಕ್ಕೆ. ಭಾರತದ ಹಿಂದೂ ಮಹಿಳೆಯರ ವಿಮೋಚಕ ಬಾಬಾ ಸಾಹೇಬರೇ ಆಗಿದ್ದಾರೆ. ಅವರು ಹಿಂದೂ ಕೋಡ್ ಬಿಲ್ಲಿನ ಮೂಲಕ ಹಿಂದೂ ಮಹಿಳೆಯ ಆಸ್ತಿಯ ಹಕ್ಕನ್ನು ಪ್ರತಿಪಾದಿಸಿದ್ದು ನಮ್ಮ ಸಂಪ್ರದಾಯವಾದೀ ಹಿಂದೂ ಪುರುಷ ಪುಂಗವರಿಗೆ ಸರಿ ಬರಲಿಲ್ಲ. ಅವರ ಪ್ರಕಾರ ಹಿಂದೂ ಧರ್ಮವೆಂಬ ಆಲದ ಮರಕ್ಕೆ ಬಾಬಾ ಸಾಹೇಬರು ಕೊಡಲಿ ಪೆಟ್ಟು ನೀಡುತ್ತಿದ್ದಾರೆಂಬುದೇ ನುಂಗಲಾರದ ತುತ್ತಾಗಿತ್ತು. ಒಂದು ಧರ್ಮದಲ್ಲಿ ಸುಧಾರಣೆ ತಂದರೆ ಅದು ಹೇಗೆ ಧರ್ಮಕ್ಕೆ ಚ್ಯುತಿ ಬರುತ್ತದೋ ಕಾಣೆ. ಬದಲಾವಣೆ ಇಲ್ಲದ ಧರ್ಮಕ್ಕೆ ಭವಿಷ್ಯವೂ ಇಲ್ಲ ಉಳಿಗಾಲವೂ ಇಲ್ಲ. ಹೆಣ್ಣು ಧರ್ಮದ ಭಾಗವೋ ಹೊರತು ಆಕೆ ಧರ್ಮ ಭ್ರಷ್ಟಳಲ್ಲ. ಹೆಣ್ಣನ್ನು ಗೌರವಿಸದ ಬದುಕಲು ಬಿಡದ ಧರ್ಮ ಧರ್ಮವೇ ಅಲ್ಲ. ಹಿಂದೂ ಸೋಗು ಹಾಕಿಕೊಂಡಿರುವ ಸನಾತನ ವೈದಿಕರಿಗೆ ಅಂಬೇಡ್ಕರರ ಈ ಹಿಂದೂ ಕೋಡ್ ಬಿಲ್ ಪುರಿಗಣೆಯಾಗಿ ಕಾಡಿದ್ದರ ಪರಿಣಾಮವೇ ಅವರು ಆ ಬಿಲ್ ಪಾಸಾಗದಂತೆ ತಡೆಯುವ ಎಲ್ಲಾ ಹೋರಾಟವನ್ನೂ ತಂತ್ರ ಕುತಂತ್ರಗಳನ್ನೂ ಶುರುವಿಟ್ಟುಕೊಂಡರು. ಮಹಿಳಾ ಪರವಾದ ಕಾಯ್ದೆಯನ್ನು ಮಹಿಳೆಯರ ಮೂಲಕವೇ ಹಿಮ್ಮೆಟ್ಟಿಸಲು ಹರಸಾಹಸ ಪಟ್ಟು ಹೋರಾಡಿದರು. ಜಢ ಸಮಾಜದ ಸಿಕ್ಕುಗಳಲ್ಲಿ ಸಿಕ್ಕು ನಾಶವಾಗುತ್ತಿದ್ದ ಮಹಿಳೆಯರನ್ನು ರಕ್ಷಿಸಲು ಅಂಬೇಡ್ಕರ್ ಪ್ರಾಮಾಣಿಕ ಮತ್ತು ನಿರ್ಣಾಯಕ ಹೋರಾಟ ನಡೆಸಿದ್ದರು. ಆದರೆ ಅವರಿಗೆ ಸಹಕಾರ ಸಿಗಲಿಲ್ಲ ಬಿಲ್ ಇದ್ದದ್ದು ಇದ್ದಂತೆ ಜಾರಿಗೆ ಬರಲಿಲ್ಲ. ಬಾಬಾ ಸಾಹೇಬರು ರಾಜಿನಾಮೆ ಸಲ್ಲಿಸಿದರು. ನಮ್ಮ ಮಹಿಳೆಯರು ಕೆಲವರು ಮಾತ್ರ ಚರಿತ್ರೆಯ ಈ ಘಟನೆಯನ್ನು ಮರೆತು ತಮ್ಮನ್ನು ತುಳಿಯುವ ಮನು ಸಿದ್ಧಾಂತಿಗಳ ಜೊತೆ ಕೈ ಜೋಡಿಸಿ ತಮ್ಮನ್ನು ತಾವೇ ಬಲಿಹಾಕಿಕೊಳ್ಳುತ್ತಿದ್ದಾರೆ. ಬಾಬಾ ಸಾಹೇಬರ ಪ್ರಯತ್ನದ ಫಲ ಬಿಲ್ ಬಹಳಷ್ಟು ತಿದ್ದುಪಡಿಗಳ ಮೂಲಕ ಪಾಸಾಗಿ ಮಹಿಳೆಯರಿಗೆ ಆಸ್ತಿಯ ಹಕ್ಕು ಲಭಿಸಿದ್ದರೂ ಈ ಸಮಾಜ ಅದನ್ನಿನ್ನು ಮಾನಸಿಕವಾಗಿ ಒಪ್ಪಿಲ್ಲ. ಅದರ ಅಂತರಂಗದೊಳಗೆ ಆಕೆಗೆ ಯಾವ ಹಕ್ಕೂ ಇನ್ನೂ ದೊರೆತಿಲ್ಲ. ಅವಳು ಈ ವಿಚಾರದಲ್ಲಿ ಬಹುದೊಡ್ಡ ವಂಚನೆ ಅನುಭವಿಸುತ್ತಿದ್ದಾಳೆ. ಸಮಾಜ ಅವಳ ಬಾಳು ಕೆಟ್ಟಿತೆಂದರೆ ಈಗಲೂ ಅನಾಥಳಾಗಿಯೇ ಇರಿಸುವ ಮನಸ್ಥಿತಿಯಲ್ಲಿದೆ. ಇದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು. ಬಾಬಾ ಸಾಹೇಬರ ಹೋರಾಟದ ಒಳಗಿನ ಅಂತಃಕ್ಕರಣ ಎಲ್ಲರಿಗೂ ಅರ್ಥವಾಗಬೇಕು. ಮಹಿಳೆಯು ದೇವರು ಮತ್ತು ಭಕ್ತಿಯ ಹಾಗೂ ಪುರುಷಪ್ರಧಾನ ಧಾರ್ಮಿಕ ವ್ಯವಸ್ಥೆಯು ಹೇರುವ ಮೂಲಕ ನಂಬಿಸಲ್ಪಟ್ಟ ಮೌಢ್ಯಗಳಿಂದ ಹಾಗೂ ಸಂಪ್ರದಾಯ ಕಟ್ಟುಕಟ್ಟಳೆಗಳ ದಾಸ್ಯದಿಂದ ಹೊರಬಂದು ಹಕ್ಕನ್ನು ಪಡೆಯುವ, ಶೋಷಣೆಯನ್ನು ಪ್ರಶ್ನಿಸುವ ದಾಸ್ಯವನ್ನು ನಿರಾಕರಿಸುವ ಪ್ರಗತಿಶೀಲೆಯರಾಗಬೇಕು ಎಂದೇ ಅವರು ಮಹಿಳೆಯರು ದೇವಾಲಯಗಳ ಮುಂದು ಸಾಲುಹಚ್ಚಿ ನಿಲ್ಲುವುದಕ್ಕಿಂತ ಗ್ರಂಥಾಲಯಗಳ ಮುಂದು ಸಾಲುಹಚ್ಚಿ ನಿಲ್ಲಬೇಕೆಂದಿದ್ದರು. ಶೋಷಿತ ಹಿಂದೂ ಹೆಣ್ಣುಮಕ್ಕಳ ಬಿಡುಗಡೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂಬುದು ಅವರ ಧೋರಣೆಯಾಗಿತ್ತು. ಇಂದು ಎಷ್ಟು ಜನ ಇದನ್ನು ಸ್ಮರಿಸುತ್ತಾರೆ. ಎಷ್ಟು ಜನಕ್ಕೆ ಬಾಬಾಸಾಹೇಬರ ಈ ಬಡಿದಾಟದ ಒಳಗಿನ ಕಾಳಜಿ ಅರ್ಥವಾಗಿದೆ? ಇಂದೂ ಕೂಡಾ ಕತ್ತಿಯಂಚಿನ ದಾರಿಯಲ್ಲೇ ನಡೆಯುತ್ತಿರುವ ನಮ್ಮ ದೇಶದ ಮಹಿಳೆಯರೆಲ್ಲರೂ ಇದನ್ನು ಯೋಚಿಸಬೇಕು. ಹಾಗೆ ನೋಡಿದರೆ ಈ ದೇಶದ ಎಲ್ಲಾ ಬಗೆಯ ಶೋಷಣೆಗಳ ನಿಜವಾದ ವಿಮೋಚಕ ಅಂಬೇಡ್ಕರರೇ. *********
ಪ್ರಸ್ತುತ
ಮಹಾನ್ ಮಾನವತಾವಾದಿ ಅಂಬೇಡ್ಕರ ರೇಷ್ಮಾ ಕಂದಕೂರ ನಮ್ಮ ದೇಶದ ಕಾನೂನು ವ್ಯವಸ್ಥೆಗೆ ಪ್ರತೀಕವಾಗಾರುವ ಲಿಖಿತ ದಾಖಲೆಯ ಹೊತ್ತಿಗೆ ಸಂವಿಧಾನ ಇದರ ರಚನೆಗೆ ಮಹತ್ವದ ಕೊಡುಗೆ ನೀಡಿದ ಮಹನೀಯ ಅಂಬೇಡ್ಕರ.ಸ್ವಾತಂತ್ರ್ಯ,ಸಮಾನತೆ,ಬಂಧುತ್ವದ ಆಧಾರವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನ ರಚಿತವಾಗಿದೆ. ನಮ್ಮ ಹಕ್ಕು,ಕರ್ತವ್ಯಗಳನ್ನು ತಿಳಿಸಿ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ ವ್ಯವಸ್ಥೆಗಳ ಅರಿವು ನೀಡುವ ವಿಶ್ವದಲ್ಲಿಯೇ ಬ್ರಹತ್ ಸಂವಿಧಾನ ಇಂಗ್ಲೆಂಡನ ಸಂವಿಧಾನ ಮಾದರಿಯನ್ನು ಅಳವಡಿಸಿ ಕೊಳ್ಳಲಾಯಿತು. ಅಂಬೇಡ್ಕರ ಬಾಲಕನಿದ್ದಾಗಲೇ ಪ್ರತಿಭಾವಂತ, ಕಲಿಯುವ ಹಂಬಲ,ಸೂಕ್ಷ್ಮತೆಯನ್ನು ಗುರುತಿಸಿ ಶಿಕ್ಷಕರ ಪ್ರೀತಿಗೆ ಪಾತ್ರರಾದರು.ಅಮೇರಿಕಾ,ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಂಗ ಮಾಡಿದರು.ಸಾಹು ಮಹಾರಾಜರಿಂದ ಶಿಷ್ಯವೇತನ ಪಡೆದರು . ಸಾಮಾಜಿಕ,ಆರ್ಥಿಕ ಪ್ರಗತಿಗಾಗಿ ನಿರಂತರ ಹೋರಾಟ ನಡೆಸಿದರು.ಭಾರತದ ನೀರಾವರಿ ಜನಕನೆಂದೆ ಹೇಳಬಹುದು ಪಂಡಿತ ನೆಹರುರವರ ಕಾಲದಲ್ಲಿನ ಮಂತ್ರಿಯಾಗಿದ್ದರು ಇವರನ್ನು ಮಂತ್ರಿ ಮಂಡಲದ ವಜ್ರ ಎಂದೇ ನೆಹರುರವರು ಪರಿಚಯಿಸುತ್ತಿದ್ದರು. ಹತ್ತನೇ ತರಗತಿಯಲ್ಲಿ ಮುಂಚೂಣಿಯಲ್ಲಿ ಪಾಸಾದಾಗ ಇವರಿಗೆ ಬಹುಮಾನವಾಗಿ ದೊರೆತ “ಬುದ್ಧನ ಚರಿತ್ರೆ” ಪುಸ್ತಕ ಮುಂದೆ ಬೌದ್ಧ ಧರ್ಮ ಸ್ವೀಕರಿಸಲು ಪ್ರೇರಣೆ ನೀಡಿತು.ಬುದ್ಧ,ಮಾರ್ಕ್ಸ ರ ಪ್ರಭಾವ ಇವರ ಅಪಾರ ಮೇಲೆ ಅಪಾರವಾಯಿತು.ಮನುಸ್ಮೃತಿಯಲ್ಲಿ ಅಸ್ಪೃಶ್ಯರನ್ನು ನಡೆಸಿಕೊಳ್ಳುತ್ತಿದ್ದ ರೀತಿಯನ್ನು ವಿರೋಧಿಸಿದರು.ಜಾತಿ ಆಧಾರಿತ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು. ಪ್ರಜಾ ಪ್ರಭುತ್ವದಲ್ಲಿ ಎದ್ದು ಕಾಣುವ ಸ್ಥೂಲ ಕಲ್ಪನೆಯ ವಿಭಿನ್ನ ಸಮಾಜವನ್ನು ಆದರ್ಶ ಸಮಾಜದ ಕಲ್ಪನೆ ಸುಖಿರಾಜ್ಯವನ್ನಾಗಿ ಬದಲಾಯಿಸಿ ಸ್ವಾತಂತ್ರ್ಯ,ಸಮಾನತೆ,ಭ್ರಾತೃತ್ವಗಳು ಒಟ್ಟಿಗೆ ಸಾಧಿಸುವುದನ್ನು ಕಲ್ಪಿಸಿದರು. ಇಂದಿನ ಸಮಾಜದಲ್ಲಿ ಒಂದು ಮನೋಭಾವ ಸಹವರ್ತಿಗಳಿಗೆ ಗೌರವ ಮತ್ತು ಸಮಾನತೆ ನೀಡುವುದು ಅವಶ್ಯಕ.ಪೆಡಸಾದ ಸಾಮಾಜಿಕ ಅಡೆತಡೆಗಳಿಂದ ಮುಕ್ತ ಸಮಾಜದ ನಿರ್ಮಾಣ ಅವಶ್ಯಕವಾಗಿದೆ. ಅಮರ ಚೇತನ ಮಹಾನ್ ಮಾನವತಾವಾದಿ ಶೋಷಿತರ ಏಳ್ಗೆಗಾಗಿ,ಸರ್ವ ಸಮಾನತೆಗಾಗಿ ಮೀಸಲಾತಿಯ ಅಧಿನಿಯಮ ಜಾರಿಗಾಗಿ ಶ್ರಮಿಸಿದರು.ಶ್ರಮಿಕರ ಕಣ್ಣೀರ ಒರೆಸುವಲ್ಲಿ.ದೇವರಿದ್ದಾನೆ ಎಂದು ತಿಳಿದ ಮಾನವೀಯ ಮೌಲ್ಯಗಳಿಗೆ ಮಹತ್ವ ನೀಡಿದವರು ಭಾರತದ ಸಂವಿಧಾನದ ಶಿಲ್ಪಿ ಅಂಬೇಡ್ಕರ. *******
ಪ್ರಸ್ತುತ
ದಲಿತ ಸೂರ್ಯ ದಲಿತ ಸೂರ್ಯ..ವಿಶ್ವಮಾನವ… ಜೈಭೀಮ….! ಒಂದು ಮಂದಿರ ಕಟ್ಟಿಸಿದರೆ ಸಾವಿರ ಭಿಕ್ಷುಕರು ಹುಟ್ಟಿಕೊಳ್ಳುತ್ತಾರೆ ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ.” …………….ಡಾ!!ಬಿ.ಆರ್ ಅಂಬೇಡ್ಕರ್ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ವ್ಯಕ್ತಿತ್ವವಾಗಿ ಪರಿವರ್ತನೆಗೊಳ್ಳುವ ಸಮಯ ಬಹು ಕಷ್ಟದ್ದು.ಜೀವನದ ಪ್ರತಿಕ್ಷಣದಲ್ಲೂ ಏಳುಬೀಳುಗಳನ್ನು ಕಂಡು,ನೋವಿನ ಅಗ್ನಿ ಕುಂಡದಲ್ಲಿ ಬೆಂದರೂ,ಪುಟಕ್ಕಿಟ್ಟ ಚಿನ್ನದಂತೆ ಪ್ರಖರವಾದ ಪ್ರಕಾಶ ಹೊರಹೊಮ್ಮಿಸುತ್ತಿರುವುದು ಪ್ರತಿಭೆಯ ಆಗರದ ಪ್ರತಿಮೆಯೆಂದರೆ ತಪ್ಪಾಗದು.ಇಂದು ನಾವೆಲ್ಲ ಭವ್ಯ ಭಾರತದ ಶ್ರೇಷ್ಠ ನಾಯಕರಲ್ಲಿ ಅಗ್ರಸ್ಥಾನದಲ್ಲಿ ಶ್ರೀ ಜಗಜ್ಯೋತಿ ಬಸವಣ್ಣನವರು ಶ್ರೀ ಮಹಾತ್ಮಗಾಂಧೀಜಿ, ಡಾ!!ಬಿ.ಆರ್.ಅಂಬೇಡ್ಕರ್….ತ್ರಿಮೂರ್ತಿಗಳು ….ದೇಶ ವಿದೇಶಗಳಲ್ಲಿ ಈ ಮಹಾತ್ಮರ ಪ್ರತಿಮೆಗಳು,ವಿಶ್ವ ಇವರನ್ನು ಗೌರವಿಸಿ,ಅವರ ಆದರ್ಶಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವತ್ತ ಜಗತ್ತು ಸಾಗುತ್ತಿದೆ……ಅದು ಹೆಮ್ಮೆಯ ಸಂಗತಿ.ಲಿಖಿತ ಸಂವಿಧಾನದ ಕೊಡುಗೆ ಇಡೀ ಪ್ರಪಂಚಕ್ಕೆ ಭಾರತದ ಹೆಜ್ಜೆಗಳು ಪಕ್ಕಾ ಹಾಗೂ ಶಾಶ್ವತವಾದ ಭದ್ರ ಬುನಾದಿ, ಎಲ್ಲರೂ ಸಂವಿಧಾನಕ್ಕೆ ಕಾಯಾ ವಾಚಾ ಸಮಾನರು ಎಂಬ ಸಂದೇಶವನ್ನು ಜಗತ್ತಿಗೆ ಮಾದರಿ ನೀಡಿದ ಮಹಾನುಭಾವ, “ಜ್ಞಾನಿಗಳು ಪುಸ್ತಕಗಳನ್ನು ಪೂಜಿಸಿದರೆ, ಅಜ್ಞಾನಿಗಳು ಕಲ್ಲನ್ನು ಪೂಜಿಸುತ್ತಾರೆ”…… ಎಂಬ ಜೈಭೀಮರವರ ಮಾತು ಇಂದಿಗೂ ಪ್ರಸ್ತುತ ಎಂದರೆ ಅಲ್ಲಗಳೆಯುವಂತಿಲ್ಲ. … ಭರತಖಂಡದಲ್ಲಿ ಇಂತಹ ಅಭೂತಪೂರ್ವ ಮಾಣಿಕ್ಯ ಜನಿಸಿದ್ದು.. ಏಪ್ರಿಲ್ ೧೪, ೧೮೯೧ ರಂದು ಮಧ್ಯಪ್ರದೇಶದ ಮಾಹೋ ಎಂಬ ಮಿಲಿಟರಿ ಕ್ಯಾಂಪ್ನಲ್ಲಿ ಜನಿಸಿದರು.ಇವರು ಮೂಲತಃ ಮಹಾರಾಷ್ಟ್ರದ ರತ್ನಗಿರಿಯ ಖೇಡಾ ತಾಲೂಕಿನ ಅಂಬೆವಾಡ ಗ್ರಾಮದವರು.ಇವರು ಮಹಾರ್ ಜಾತಿಯಲ್ಲಿ ಹುಟ್ಟಿದರು.ಇವರಜ್ಜ ಮಾಲೋಜಿ ಸಕ್ವಾಲ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಬೊಂಬೆ ಸೇನೆಯಲ್ಲಿ ಹವಾಲ್ದಾರ್ ರಾಗಿ ನಿವೃತ್ತಿ ಹೊಂದಿದವರು. ಆ ಕಾಲದಲ್ಲಿಯೇ ಇವರು ೧೯ ಮೆಡಲ್ಗಳನ್ನು ಗಳಿಸಿದ್ದರು. ಮಗ ರಾಮಜೀ ಸಕ್ವಾಲ ಸೊಸೆ ಭೀಮಾಬಾಯಿಯ ೧೪ನೆಯ ಪುತ್ರರಾಗಿ ಭೀಮ ಜನಿಸಿದ್ದು …ಜಗತ್ತನ್ನು ಹೊಸಚಿಂತನೆಗೆ ದಾರಿ ತೋರುವ ನವ ಭಾಸ್ಕರ ಉದಯಿಸಿದಂತೆ ನಭದಲ್ಲಿ ನಕ್ಷತ್ರಗಳು ಹೊಳಪನ್ನೆಲ್ಲ ಈ ಬಾಲಕನಲ್ಲಿ ತುಂಬಿದಂತೆ ಕಾಣಿತಿತ್ತು.ಕಾಣುವ ಕಂಗಳಿಗೆ ಮಾತ್ರ..!ತಂದೆ ಮಿಲಿಟರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಾ…ಭೀಮನಲ್ಲಿ ದೇಶ ಪ್ರೇಮ,ಭಕ್ತಿ,ಧರ್ಮ,ಜ್ಞಾನದ ಬೆಳಕನ್ನು ಬಿತ್ತುವ ಕಾರ್ಯ ಮಾಡುತ್ತಿದ್ದರು.ತಾಯಿ ಭೀಮಾಬಾಯಿ ಕರುಣೆಯ ಸಾರ ಉಣಿಸುವಾಗಲೇ ಕಣ್ಮರೆಯಾದರು…ಆ ಪ್ರೀತಿಯನ್ನು ಸೋದರತ್ತೆ ಮೀರಾ ಉಣಿಸಿ ಬೆಳೆಸುತ್ತಿದ್ದಳು. ಜಾತಿ ಭೇದ ಮೇಲುಕೀಳು ಬಡವ ಶ್ರೀಮಂತ ಎನುವ ಅಸಮಾನತೆ ತುಂಬಿರುವ ಈ ಸಮಾಜವ ನಾಗರಿಕ ಎಂದು ನಾ ಹೇಗೆ ಹೇಳಲಿ?? ನಾಚಿಕೆ ತುಂಬಾ ನಾಚಿಕೆ ನಾಗರಿಕತೆ ಎನುವ ಪದಕೆ ನಾಚಿಕೆ………. ಈ ಮೇಲಿನ ಸಾಲುಗಳು ಎನ್ನೆದೆಯಲ್ಲಿ ಇನ್ನು ಮುಳ್ಳು ಮುರಿದಂತೆ ಭಾಸವಾಗುತ್ತದೆ……ಎಂತಹ ಅಗಾಧ ಶಕ್ತಿ, ಪ್ರತಿಭೆಗಳಿದ್ದರೂ…….ಅಡ್ಡಗೋಡೆ ಜಾತಿ *ಮಹಾರ್ನಾವೆಷ್ಷೇ ಸಮಾಜದ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದರೂ…ಪ್ರಗತಿ ಸಾಧಿಸಿದರೂ ನಮ್ಮ ನಿಲುವುಗಳು ಮಾತ್ರ ಭಿನ್ನವಾಗಿಲ್ಲ…….ದಲಿತ,ಅಸ್ಪೃಶ್ಯತೆ ನುಡಿಯೇ,ಪದವೇ ಮೆಟ್ಟಿ ತುಳಿದು ನಿಲ್ಲುವಂತಹುದು.. ಇಂತಹ ಸನ್ನಿವೇಶ ಪ್ರತಿ ಹಂತದಲ್ಲೂ ಬಾಲ್ಯದ ಜೀವನ ಹಾಗೂ ಬದುಕಿನುದ್ದಗಲಕ್ಕೂ ಈ ಹಿಂಸೆಯನ್ನು ಅನುಭವಿಸಿದ್ದರು….ಅದೊಂದು ಚಮತ್ಕಾರ ಇವರ ಜೀವನದಲ್ಲಿ ಎಲ್ಲ ಶಿಕ್ಷಕರಿಗೂ,ಸಹಪಾಠಿಗಳಿಗೂ ಭೀಮ ಕೀಳುಜಾತಿಯವನಾಗಿದ್ದರೂ,ತರಗತಿಯ ಮೂಲೆ,ಬಾಗಿಲ ಬಳಿ ತಟ್ಟನ್ನು ಹಾಸಿ ಕುಳಿತು ಕಲಿಯುವಾಗ ದೃತಿಗೆಡಲಿಲ್ಲ..! ಆ ಸಂಧರ್ಭದಲ್ಲಿ ಅವನ ಗುರುಗಳಾದ #ಶ್ರೀ ಫೆಂಡಸೇ ಅಂಬೇಡ್ಕರ್# ದಲಿತ ಮಗುವೆಂದು ತಿಳಿದರೂ,ತನ್ನ ಮನೆಯಿಂದ ತಂದ ಊಟದಲ್ಲೆ ಊಟ ಮಾಡಿಸುತ್ತಿದ್ದ.ಕುಲದಲ್ಲಿ ಬ್ರಾಹ್ಮಣ ರಾದರೂ ಭೀಮನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದರು.ಭೀಮನ ಹಾಜರಿಯಲ್ಲಿ ಭೀಮರಾವ್ ರಾಮಜೀ ಅಂಬೆವಾಡ್ಕರ ಎಂಬುದನ್ನು ತಿದ್ದಿ *ಭೀಮರಾವ್ ಅಂಬೇಡ್ಕರ್ ಆದುದು.. . ಸತ್ಯ…ಇಂತಹ ಶಿಕ್ಷಕರು ಎಲೆಮರೆಯ ಭಾಗವಾಗಿ ಮರೆಯಾಗುತ್ತಾರೆ.ಮುಂದೊಂದು ದಿನ ಈ ಭೀಮ ಜಗತ್ತಿಗೆ ** ಜೈಭೀಮನಾಗುವನೆಂಬ ಭವಿಷ್ಯ ಕಂಡಂತಿತ್ತು… ವಿಧ್ಯೆ ಯಾರ ಸೊತ್ತಲ್ಲ…ಅದು ಒಲಿಯುವುದು ಸಾಧನೆಯ ಮೆಟ್ಟಿಲನ್ನು ಹತ್ತಲು ಛಲ ಹೊಂದಿದವರಿಗೆ. ಎಡಬಿಡದೇ ಸಂಘರ್ಷಗಳ ನಡುವೆ…ಹತಾಶೆಯ ಕೂಪದಲ್ಲಿ ಮಿಂದರೂ ಕಮಲದಂತೆ ಪರಿಶುದ್ಧ… ಜೈಭೀಮ…! ಓದುವುದರಲ್ಲಿ ನಿಸ್ಸೀಮ.! ಅಂಧಕಾರದ ಕರಿ ನೆರಳಲ್ಲಿ ಜ್ಯೋತಿಯಂತೆ ಬೆಳಗಲು ಬಂದನಿಲ್ಲಿ.. ಮೌಡ್ಯತೆಗಳ ಮೋಡಗಳ ಕರಗಿಸಲು ಪಣ ತೊಟ್ಟನಿಲ್ಲಿ….. ಭೀಮರಾವ್…ಗಳಿಸಿರುವ ಪದವಿಗಳ ಸಾಲು ನೆನೆದರೇನೆ…ಮನತುಂಬಿ ಬರುತ್ತದೆ… ಹತ್ತನೇ ತರಗತಿ ಮುಗಿದಿದ್ದೇ ತಡ ಭೀಮನಿಗೆ ಕಂಕಣ ಬಲ ಕೂಡಿ ಬಂದಿತ್ತು.. ಡಾಪೋಲಿಯಾ ಬಿಕ್ಕು ವಾಲಂಗಕರ್ ರವರ ಪುತ್ರಿ ರಮಾಬಾಯಿಯವರೊಂದಿಗೆ ನೆರವೇರುತ್ತೆ….ಜ್ಞಾನ ದಾಹದ ಝರಿ ಕಡಲನ್ನು ಸೇರಲು ಹಾತೊರೆಯುತ್ತಿತ್ತು..ಅದಕ್ಕೆ ಕೈಜೋಡಿಸಿದವರು..ಕೆ.ಎ.ಕೇಲಸ್ಕರವರು ..ಬರೋಡಾ ಮಹಾರಾಜರಿಂದ ತಿಂಗಳಿಗೆ ೨೫ ರೂಪಾಯಿ ಶಿಕ್ಷಣ ವೇತನ ನಿಗದಿ ಪಡಿಸಿ ಪಿ.ಯು.ಸಿ, ಬಿ.ಎ. ಶಿಕ್ಷಣಕ್ಕೆ,ಉನ್ನತ ವ್ಯಾಸಂಗಕ್ಕೆ ಅಮೇರಿಕಾ ಕೊಲಂಬಿಯಾ ವಿಶ್ವವಿದ್ಯಾಲಯ ದಲ್ಲಿ,ಅರ್ಥಶಾಸ್ತ್ರ, ಸಮಾಜಶಾಸ್ತ್ರ,ಇತಿಹಾಸ,ತರ್ಕಶಾಸ್ತ್ರ, ರಾಜ್ಯಶಾಸ್ತ್ರದಲ್ಲಿ ಅಧ್ಯಯನ, ಪಿ.ಎಚ್.ಡಿ.ಅಲ್ಲದೆ ಅಮೇರಿಕಾ,ಇಂಗ್ಲೆಂಡ್ ಗ್ರೇಸ್ ಇನ್ ಕಾಲೇಜನಲ್ಲಿ ಕಾನೂನು ಪದವಿ,ಲಂಡನ್ ದಲ್ಲಿ ಎಮ್.ಎಸ್.ಇ,ಹಾಗೂ ಡಿ.ಎಸ್ಸಿ,ಪಡೆಯಲು ಪ್ರೋತ್ಸಾಹ ನೀಡುವರು ಹಾಗೂ ಸ್ನೇಹಿತರು,ಸ್ವಯಂ ದುಡಿಮೆಯಿಂದ ಪೂರೈಸಿಕೊಂಡು,ತಾಯ್ನಾಡಿಗೆ ಮರಳಿದರು.ಒಪ್ಪಂದದಂತೆ ಬರೋಡಾಮಹಾರಾಜರ ಆಸ್ಥಾನದಲ್ಲಿ ಕಾರ್ಯರ್ಶಿಯಾಗಿ ನೇಮಕವಾದರು…. ಮಹಾರಾಜರಲ್ಲಿ ಪ್ರಜೆಗಳೆಲ್ಲ ಒಂದೆಂಬ ಭಾವನೆಯಿದ್ದರೂ ಅವರ ಅರಿವಿಗೆ ಬಾರದಂತೆ ಭೀಮರಾವ್ ರವರ ಫೈಲುಗಳನ್ನು ಆಸ್ಥಾನದ ಸಿಪಾಯಿ ಕೂಡ ಮುಟ್ಟುತ್ತಿರಲಿಲ್ಲ..ಅಲ್ಲದೆ ಉಳಿದುಕೊಳ್ಳಲು ಆಸ್ಥಾನದಲ್ಲಿ ನಿವೇಶನವನ್ನು ನೀಡದೇ ಪಾರ್ಸಿ ಹೋಟೆಲ್ ನಿಂದ ಹೊರದಬ್ಬಿದರು…. …ಅಸಾಮಾನ್ಯ ವಿದ್ಯಾವಂತ ದೇಶದ ಹೆಮ್ಮೆಯ ಪುತ್ರ ಇವರ ಕಣ್ಣಿಗೆ ಕೇವಲ ಮಾಹರ ಜಾತಿಯ ಭೀಮ ಕಂಡ. ಬಿಟ್ಟರೆ ಬೇರೇನೂ ಕಾಣಲಿಲ್ಲ…. ಅಂಬೇಡ್ಕರ್ ರ ಉದ್ದೇಶ ಸ್ಪಷ್ಟವಾಗಿತ್ತು..ವಕೀಲ ವೃತ್ತಿ ಪ್ರಾರಂಭಿಸುತ್ತಾ..ಸಾಮಾಜಿಕ ಕಾಳಜಿಯುಳ್ಳ ಇವರು ೧೯೨೭ರಲ್ಲಿ ದಲಿತ ವರ್ಗದವರನ್ನು ಜಾಗೃತವಾಗಿ ಮಾಡಲುಬಹಿಷ್ಕೃತ ಭಾರತ* ಪತ್ರಿಕೆಯ ಮೂಲಕ,ಹಾಗೂ ೧೯೨೦ರಲ್ಲೆ ಮುಖ ನಾಯಕಪತ್ರಿಕೆ ಪ್ರಕಟಿಸಿದ್ದು ಮರೆಯುವಂತಿಲ್ಲ.. ಮಹಾಡದ ಚೌಡದ ಕೆರೆಯ ನೀರನ್ನು ಮುಟ್ಟುವ ಚಳುವಳಿ,೧೯೩೦ರಲ್ಲಿ ಹದಿನೈದು ಸಾವಿರ ಅನುಯಾಯಿಗಳೊಂದಿಗೆ ನಾಸಿಕ ಕಾಳರಾಂ ದೇವಾಲಯದ ಪ್ರವೇಶ ಚಳುವಳಿ….ಹೀಗೆ ಭೀಮ ದಲಿತರ ಧ್ವನಿಯಗುವುದರೊಂದಿಗೆ….೧೯೩೦-೩೨ ರವರೆಗೆ ಲಂಡನ್ನಿನಲ್ಲಿ ನಡೆದ ದುಂಡುಮೇಜಿನ ಸಮ್ಮೇಳನದಲ್ಲಿ ದಲಿತರ ಪ್ರತಿನಿಧಿಯಾಗಿ ಭಾಗವಹಿಸಿ ದಲಿತರಿಗೆ ಪ್ರತ್ಯೇಕ ಮತದಾನದ ಸೌಲಭ್ಯ ಕಲ್ಪಿಸಿಕೊಟ್ಟ ಧೀಮಂತ ನಾಯಕ ಭೀಮ.ಮತದಾನ ನಮ್ಮ ಹಕ್ಕೆಂದು ಮನವರಿಕೆ ಮಾಡಿಕೊಟ್ಟವ.ಇಂಗ್ಲೆಂಡ್ ಪ್ರಧಾನಿ ವ್ಯಾಕಡೋನಾಲ್ಡ್ ನೀಡಿದ ಕೋಮು ಆದೇಶವನ್ನು ತೀರ್ಪನ್ನು ಮಹಾತ್ಮ ಗಾಂಧಿಯವರು ಇಡೀ ಹಿಂದು ಧರ್ಮ ಒಡೆದು ಹೋಗುತ್ತದೆಂದು ವಿರೋಧಿಸಿ…ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ನಂತರ ಅಂಬೇಡ್ಕರ್ ಮತ್ತು ಗಾಂಧೀಜಿಯವರ ನಡುವೆ ಒಪ್ಪಂದ. ೧೯೩೨ ರಲ್ಲಿ.ಪ್ರತ್ಯೇಕ ಮತದಾನ ತ್ಯಜಿಸಿ ಜಂಟಿ ಮತದಾನ ಸೀಟುಗಳ ಸಂಖ್ಯೆ ೧೪೮ ನೀಡಿದರು. ಇದನ್ನು ಪೂನಾ*ಒಪ್ಪಂದವೆಂದು ಕರೆಯಲಾಯಿತು. ಅಸ್ಪೃಶ್ಯತೆ ನಿವಾರಣೆಗಾಗಿ ,ಅವರ ಆರ್ಥಿಕ ಪ್ರಗತಿಗಾಗಿ ನಿರಂತರವಾದ ಹೋರಾಟ ಬ್ರಿಟಿಷ್ ಹಾಗೂ ವರ್ಣ ವ್ಯವಸ್ಥೆಯ ವಿರುಧ್ದ ನಡೆಸಿದರು.ಅಲ್ಲದೇ ಮನಸ್ಸು ರೋಸಿಹೋಗಿತ್ತು… ೧೯೩೫. ಅಂಬೇಡ್ಕರ್ ರವರು* ಯೌಲ್ ಸಮ್ಮೇಳನದಲ್ಲಿ “ನಾನು ಹಿಂದೂ ಧರ್ಮ ದಲ್ಲಿ ಇರುವುದಿಲ್ಲ,ನಾನು ಹಿಂದೂವಾಗಿ ಹುಟ್ಟಿದ್ದು ಅನಿಶ್ಚಿತವಾಗಿ,ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂಬ ಪ್ರತಿಜ್ಞೆ ಮಾಡುತ್ತಾರೆ” ಎಂದ ಮೇಲೆ ಅವರು ಅನುಭವಿಸಿದ ನೋವು ಇಂದು ಸಹ ಅನುಭವಿಸುತ್ತಿರುವುದು ವಿಪರ್ಯಾಸ…!! ಬದಲಾಗದ ಸಾಂಪ್ರದಾಯಿಕ ಮೌಢ್ಯ ಕಟ್ಟುಪಾಡುಗಳು.,.. ೧೯೩೬ರಲ್ಲಿ *ಇಂಡಿಪೆಂಡೆಂಟ್ ಲೇಬರ್ ಪಾರ್ಟಿ*ಸ್ಥಾಪಿಸಿ ಹದಿನೈದು ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿ,ದಲಿತರಿಗೆ ಶಿಕ್ಷಣ ಅತೀ ಅವಶ್ಯವೆಂದು ಮನಗಂಡು ೧೯೪೬ ರಲ್ಲಿ ಫಿಲಿಪ್ಸ್ ಎಜುಕೇಶನ್ ಇನ್ಸ್ಟಿಟ್ಯೂಷನ್ ಪ್ರಾರಂಭಿಸಿದರು…. *ದಲಿತ ಸೂರ್ಯ ನಿನಗಿದೋ ನಮನ ಭೀಮರಾಯ ನಿನಗಿದೋ ನಮನ……ಎಂಬ ಸಾಲುಗಳು ಅರಿವಿಲ್ಲದೆ ಮನದ ಮೂಲೆಯಲ್ಲಿ ಗುಣುಗುಟ್ಟಿದ್ದಂತೂ ಸತ್ಯ…ವೇದಗಳು ಸಾರುವ ಮೂಲತತ್ವದ ಬೇರ ಅರಿಯಬೇಕಿದೆ…೧೯೪೬ ರಲ್ಲಿ ಸಂವಿಧಾನ ರಚನಾ ಸಭೆಗೆ ಬಂಗಾಳ ಪ್ರಾಂತ್ಯದಿಂದ ಆಯ್ಕೆಯಾಗಿ ೧೯೪೭ರಲ್ಲಿ ಕರಡು ಸಮಿತಿಯ ಅಧ್ಯಕ್ಷರಾಗಿ ಮೂರು ವರ್ಷ ಹಗಲೆನ್ನದೇ ರಾತ್ರಿಯೆನ್ನದೇ ಸಂವಿಧಾನ ಬರೆದು ೧೯೫೦ ರಲ್ಲಿ ಭಾರತ ಮಾತೆಗೆ ತಮ್ಮ ಕರ್ತವ್ಯದ ಋಣ ಅರ್ಪಿಸಿದರು…ಪ್ರಜೆಗಳು ನ್ಯಾಯ ಸಮ್ಮತ ವಿಧೇಯಕ ಗಳು ದೇಶದ ಭವಿಷ್ಯ ಸುಭದ್ರಗೊಳಿಸುವುದಾಗಿದೆ. ದೇಶಭಕ್ತ ಜಾತಿ ಧರ್ಮ ಎಂದೆಣಿಸದೇ ನ್ಯಾಯ ನೀಡಿರುವುದು ನಮ್ಮ ಹೆಮ್ಮೆ.. .ನಮ್ಮ ದೇಶ ಲಿಖಿತ ಸಂವಿಧಾನದ ಹೊಂದಿದ ರಾಷ್ಟ್ರವೆಂಬ ಹೆಮ್ಮೆಗೆ ಕಾರಣವಾಗಲು ಅದ್ವಿತೀಯ ಅಸಾಮಾನ್ಯ ಸರಸ್ವತಿ ಪುತ್ರ ವಿದ್ಯಾ ಆರಾಧಕ…ಭೀಮರಾವ್ ಅಂಬೇಡ್ಕರ್….. ಇಂತಹ ಸಾಧನೆಗೆ ೧೯೫೦ರಲ್ಲಿ ಅಮೆರಿಕಾ ಕೊಲಂಬಿಯಾ ವಿಶ್ವವಿದ್ಯಾಲಯ ಇವರನ್ನು ಸಂವಿಧಾನ ಶಿಲ್ಪಿಆಧುನಿಕ ಭಾರತದ ನಿರ್ಮಾತೃಎಂದು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದ್ದು,ಆಂದ್ರಪ್ರದೇಶದ ಉಸ್ಮಾನಿಯಾ ವಿಶ್ವವಿದ್ಯಾಲಯ ಇವರನ್ನು *ಡಾಕ್ಟರ್ ಆಫ್ ಲಿಟರೇಚರ್*ಎಂದು ಗೌರವಿಸಿರುವುದು..ಹೆಮ್ಮೆ… ನಿನ್ನ ಹೆತ್ತ ಭಾರತಾಂಭೆ ಪುಣ್ಯವಂತಳೋ *ಹುಟ್ಟಿ ಬಂದೆ ಕೋಟಿಜನರ ನೋವಿನೊಳಗೆ ನೀನು ಕಷ್ಟ ಕೊಟ್ಟರು ಘಾಟಿ ಜನರು ಗೆದ್ದು ಬಂದೆ ನೀನು ಪುಣ್ಯ ಪುರುಷ ನೀನು,ಏಕಲವ್ಯ ನೀನು ಮುಂದೆ ಸಾಗಲಿ ನಿನ್ನ ರಥವು ಇಂದು ನಾವು ಇವರ ಬಗ್ಗೆ ಅಧ್ಯಯನ ಮಾತ್ರ ಮಾಡದೇ…ಅದರ ಹಿಂದಿರುವ ಶಕ್ತಿ ಯನ್ನು ಗುರುತಿಸಿ ನಮ್ಮೊಳಗೊಬ್ಬ ಭೀಮ ಹುಟ್ಟು ವಂತೆ ಮಾಡಬೇಕಾದುದು ಅನಿವಾರ್ಯ……ಜಾತಿಗಳು,ಧರ್ಮಗಳು ಮನುಷ್ಯನ ಅಸ್ಥಿತ್ವದಲ್ಲಿರುವ ವಿಷಬೀಜಗಳು….ಅವನ್ನು ಕಿತ್ತೊಗೆಯದೇ ಮನುಷ್ಯನಲ್ಲಿ ಮಾನವೀಯ ಗುಣಗಳು ಬೇರೂರುವ ಸಮಯ ಇಡೀ ವಿಶ್ವವೇ ಕಾದು ಕುಳಿತಂತಿದೆ.. ಅಂಬೇಡ್ಕರ್ ರವರು ಪಾರ್ಲಿಮೆಂಟ್ ನಲ್ಲಿ ಹಿಂದೂ ತಂದ ಕೋಡ್ ಬಿಲ್.. ದೇಶದ ಮಹಿಳಾ ವಿಮೋಚನೆಯನ್ನು ಮನುಸ್ಮೃತಿ ಯ ಮೂಲಕ ಶೋಷಿತ ಮಹಿಳೆಯರ ಬಿಡುಗಡೆಗೊಳಿಸಲು .ಮತ್ತು.. ಸಮಾನ ಹಕ್ಕನ್ನು ನೀಡಲು ಮಂಡಿಸಿದರು.ಆದರೆ ಇವರ ಈ ಬಿಲ್ಲನ್ನು… ಸಂಪ್ರದಾಯದಿಂದ ಕೂಡಿದ ಪಾರ್ಲಿಮೆಂಟ್ ಸಭೆ “ಹಿಂದೂ ಕೋಡ್ ನ್ನು” ನಿರಾಕರಿಸಿತು.ಮನನೊಂದ ಅಂಬೇಡ್ಕರ್ ರವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು….ನಂತರದ ದಿನಗಳಲ್ಲಿ ಬೌದ್ಧಧರ್ಮದ ಆಚಾರ ಹಾಗೂ ಪ್ರಚಾರಕ್ಕಾಗಿ ಜೀವನವನ್ನು ಅರ್ಪಿಸಿಕೊಂಡರು…೧೯೫೫ರಲ್ಲಿ ಭಾರತೀಯ ಬೌದ್ಧ ಮಹಾಸಭೆ ಸ್ಥಾಪಿಸಿದರು. ೧೯೫೬ ಅಕ್ಟೋಬರ್ ೧೪ ರಂದು ೫ ಲಕ್ಷ ಅನುಯಾಯಿಗಳೊಂದಿಗೆ ಪತ್ನಿ ಸವಿತಾ ಅಂಬೇಡ್ಕರ್ ಜೊತೆ ನಾಗ ಜನತೆಯ ಮೂಲ ನಾಡಾದ ನಾಗಪುರದಲ್ಲಿ ಬೌದ್ಧ ಧರ್ಮ ಸ್ವೀಕರಿಸಿ…ನಾನು ಹಿಂದುವಾಗಿ ಸಾಯಲಾರೆ ಎಂಬ ಪ್ರತಿಜ್ಞೆಯನ್ನು ಪೂರ್ಣಗೊಳಿಸಿದರು….ಬರ್ಮಾದ ಬೌದ್ಧ ಬಂತೆ,ವೀರ ಚಂದ್ರಮಣಿ ಬೌದ್ಧಧೀಕ್ಷೆ ನೀಡಿದರು ಡಿಸೆಂಬರ್ ೬ ,೧೯೫೬ರಲ್ಲಿ ದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು..ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕೃತಿಗಳು ೮ ಭಾರತದಲ್ಲಿ ಜಾತಿಪದ್ದತಿ,ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮ.ಇತ್ಯಾದಿ…….ವಿಶ್ವದ ದೇಶಗಳು ಇಂದಿಗೂ ಅಂಬೇಡ್ಕರ್ ರ ಜೀವನ ಚರಿತ್ರೆಯಿಂದ ಯಶಸ್ಸಿನ ಮುನ್ನುಡಿ ಬರೆಯುತ್ತಿವೆ.. ವಿಶ್ವಮಾನವ *ಸಂದೇಶದ ಮೂಲಪುರುಷನನ್ನು.ತಮ್ಮ ಯು ಎಸ್ ಎ.ತಮ್ಮ ಗ್ರಂಥಾಲಯಕ್ಕೆ ಅಂಬೇಡ್ಕರ್ ಪುತ್ಥಳಿಯಿರಿಸಿ ಗೌರವಿಸಿವೆ…….ದೀಪದ ಬುಡಕ್ಕೆ ಕತ್ತಲು ಎಂಬಂತೆ ನಮ್ಮ ದೇಶದ ಜನತೆ ಈ ಮಹಾನ್ ವ್ಯಕ್ತಿಯ ವ್ಯಕ್ತಿತ್ವದ ಅನಾವರಣ ಮಾಡಲು ತಾಕತ್ತು,ಸಂಯಮ,ಛಲ ತಮ್ಮದಾಗಿಸಿಕೊಳ್ಳಲು ಶ್ರಮಪಡಬೇಕಿದೆ…. ಭಾರತರತ್ನ **ಪ್ರಶಸ್ತಿ ಲಭಿಸಿದರೂ ನಮ್ಮೊಳಗಿನ ಮೌಡ್ಯತೆ ಬೇರುಸಹಿತ ಕಿತ್ತುವ ತನಕ ಎಲ್ಲರೂ ನಮ್ಮವರು,ನಮ್ಮಂತೆ ಇರುವವರೆಂಬ ಭಾವ ಗಟ್ಟಿಯಾಗಿ ನೆಲೆನಿಲ್ಲುವ ತನಕ ಸಾಧಕರ ಸಾಧನೆಗೆ ಬೆಲೆ ಬರಲಾರದು….ಡಾ!!ಬಿ.ಆರ್.ಅಂಬೇಡ್ಕರ್ ಮಾನವತಾವಾದಿ ಭಾರತರತ್ನ ಅಂಬೇಡ್ಕರ್ ಧ್ವನಿಯ ನೀಡಿದ ಮೂಕ ನಾಯಕ ನಿನಗಿದೋ ವಂದನೆ ಬುದ್ದ, ಬಸವ ಕರುಣಿಸಿದ ವರಪ್ರಸಾದ.. ಬಹುಜನನಾಯಕ ಜಯ ಜೈ ಭೀಮ ಅಮರಗೊಳಿಸುವೆವು ನಿನ ನಾಮ ನಿನ್ನ ತತ್ವದಲಿ ಮುನ್ನಡೆವೆವು ಜೈಭೀಮ…… ನಮ್ಮೆದೆಯ ಗೂಡಲಿ ಬಂದೂಕುಗಳು ಮೊಳಗದಿರಲಿ…ಪ್ರೀತಿ ನಗೆಯ ಮಲ್ಲಿಗೆ ಅರಳಲಿ….ವಿಶ್ವ ನಾಯಕನ ದಿನದಿಂದಾದರೂ ನಾವೆಲ್ಲ ಮನುಕುಲದ ಉಳಿವಿಗೆ ಒಗ್ಗಟ್ಟಿನಿಂದ ಬದುಕ ನಡೆಸುವ ಶಪಥ ಮಾಡೋಣ…ಪ್ರತಿ ಮನೆಯಲ್ಲಿ ಛಲವಿರುವ,ಗುರಿಯಿರುವ ಜೈಭೀಮನಂತವರು ಜಾತಿ,ಧರ್ಮ,ಅಂಧಾನುಕರಣೆ ಮೆಟ್ಟಿನಿಲ್ಲುವ ಪುತ್ರರು ಜನಿಸಲಿ….ಭಾರತಾಂಬೆಯ ಕೀರ್ತಿ ಬೆಳಗಿಸುವಂತಾಗಲಿ. ಮಸ್ತಕದಲಿ ಪುಸ್ತಕ ಅರಳುವಂತೆ ಮಾಡೋಣವೆಂದು ….ಮತ್ತೊಮ್ಮೆ ಭವ್ಯ ಚೇತನ ದಿವ್ಯಾನಿಭೂತಿಯ ಬೌದ್ಧ ಅನುಯಾಯಿಗೆ ಶಿರ ಸಾಷ್ಟಾಂಗ ನಮನಗಳು…ಜೈಭೀಮ…. ******* ಶಿವಲೀಲಾ ಹುಣಸಗಿ
ಪ್ರಸ್ತುತ
ಡಾ.ಬಿ.ಆರ್.ಅಂಬೇಡ್ಕರ್..! ಎಲ್ಲಾ ಜನಾಂಗೀಯ ನಾಯಕ ಮತ್ತು ಸರ್ವರ ಅದರಲ್ಲೂ ದಲಿತರ ಏಳಿಗೆಗಾಗಿ ದುಡಿದ ಡಾ.ಬಿ.ಆರ್.ಅಂಬೇಡ್ಕರ್..! ಏಪ್ರಿಲ್ 14 ರಂದು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ. ಆ ನಿಮಿತ್ತವಾಗಿ ಈ ಪುಟ್ಟ ಲೇಖನ… ಅಂದು ಆ ಬಾಲಕ ಅಸ್ಪೃಶ್ಯತೆ, ಬಡತನವನ್ನು ಮೆಟ್ಟಿ ನಿಂತು ವಿದ್ಯಾಭ್ಯಾಸ ಮಾಡದೆ ಹೋಗಿದ್ದರೆ ಇವತ್ತು ಈ ಅಖಂಡ ಭಾರತದಲ್ಲಿ ಮರೆಯಲಾರದ ಚೇತನವೊಂದು ಸೃಷ್ಟಿಯಾಗುತ್ತಿರಲಿಲ್ಲವೇನೋ? ಆ ಬಾಲಕ ಯಾರೆಂದು ಕ್ಷಣಮಾತ್ರದಲ್ಲಿ ಊಹಿಸಬಹುದು. ಅದೇ ಡಾ. ಬಿ.ಆರ್. ಅಂಬೇಡ್ಕರ್. ಈ ಹೆಸರು ಹೇಳುತ್ತಿದ್ದಂತೆಯೇ ಮೈ ರೋಮಾಂಚನಗೊಳ್ಳುತ್ತದೆ… ಭೀಮರಾವ್ ರಾಮ್‍ಜಿ ಅಂಬೇಡ್ಕರ್ ಅವರು ಬಾಲ್ಯದಲ್ಲಿ ಅನುಭವಿಸಿದ ನೋವುಗಳು ಒಂದೇ-ಎರಡೇ? ಅದನ್ನು ಹೇಳುತ್ತಾ ಹೋದರೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತದೆ… ಆಗಿನ್ನೂ ಅಂಬೇಡ್ಕರ್ ಅವರಿಗೆ ಏಳೆಂಟು ವರ್ಷ. ಒಂದು ದಿನ ಆ ಪುಟ್ಟ ಬಾಲಕ ತನ್ನ ತಂದೆಯನ್ನು ನೋಡಲು ಎತ್ತಿನಗಾಡಿಯಲ್ಲಿ ಕುಳಿತು ಸಾಗುತ್ತಿದ್ದ. ಗಾಡಿ ಸ್ವಲ್ಪ ದೂರ ಹೋಗಿತ್ತು. ಎತ್ತಿನ ಗಾಡಿಯವನಿಗೆ ಆ ಹುಡುಗ ದಲಿತ ಎಂಬುದು ತಿಳಿದು ಕೂಡಲೇ ಗಾಡಿಯನ್ನು ನಿಲ್ಲಿಸಿ ಆ ಪುಟ್ಟ ಬಾಲಕನನ್ನು ಕೆಳಕ್ಕೆ ತಳ್ಳಿ ಮುಂದೆ ಸಾಗಿಬಿಟ್ಟ. ಆ ಕ್ಷಣ ಆ ಪುಟ್ಟ ಹುಡುಗನ ಮನಸ್ಸಿಗೆ ಅತ್ಯಂತ ಆಘಾತವಾಯಿತು… ಇನ್ನೊಮ್ಮೆ ಕೆರೆಯಲ್ಲಿ ನೀರು ಕುಡಿದ ಎಂಬ ಕಾರಣಕ್ಕೆ ಗ್ರಾಮಸ್ಥರೆಲ್ಲ ಸೇರಿ ಬಾಲಕನಿಗೆ ಥಳಿಸಿದರು. ಆಕಸ್ಮಿಕವಾಗಿ ಮಳೆ ಬಂದಿದ್ದರಿಂದ ರಸ್ತೆ ಬದಿಯಲ್ಲಿದ್ದ ಮನೆಯೊಂದರ ಜಗಲಿಯ ಮೇಲೆ ನಿಂತಿದ್ದಕ್ಕೆ ಮನೆಯ ಯಜಮಾನಿ ಕೋಪದಿಂದ ಜಗಲಿಯಿಂದ ತಳ್ಳಿದ್ದಳಂತೆ… ಕ್ಷೌರಿಕ ಕ್ಷೌರ ಮಾಡದೆ ಹಿಂದಕ್ಕೆ ಕಳುಹಿಸಿದ್ದನಂತೆ. ಹೀಗೆ ಒಂದೇ ಎರಡೇ? ನೂರಾರು ಅವಮಾನ, ಹಿಂಸೆ ಆ ಬಾಲಕನನ್ನು ಇನ್ನಿಲ್ಲದಂತೆ ಕಾಡಿದವು. ನಾವೂ ಮನುಷ್ಯರೇ, ಹಿಂದುಳಿದ ಜನಾಂಗದಲ್ಲಿ ಹುಟ್ಟಿದ್ದೇ ತಪ್ಪಾಯಿತಾ? ಎಂಬ ಭಾವನೆ ಆಗ ಆ ಬಾಲಕನನ್ನು ಕಾಡಿತ್ತು. ಅದಕ್ಕೆಲ್ಲಾ ಹೆದರಿ ಆ ಬಾಲಕ ಮುದುರಿ ಕೂತಿದ್ದರೆ ಇವತ್ತು ಜಗತ್ತೇ ಹೆಮ್ಮೆಯಿಂದ ಕೊಂಡಾಡುವ ಚೇತನವೊಂದು ಇರುತ್ತಿರಲಿಲ್ಲ… ಆದರೆ, ಎಲ್ಲವನ್ನೂ ಗೆದ್ದು ನಿಂತಿದ್ದರಿಂದಲೇ ಇವತ್ತು ದೇಶ ಮರೆಯಲಾರದ ಚೇತನವಾಗಿ, ಸಂವಿಧಾನಶಿಲ್ಪಿಯಾಗಿ ಡಾ.ಬಿ.ಆರ್. ಅಂಬೇಡ್ಕರ್ ನಿಲ್ಲುವಂತಾಯಿತು… ಡಾ.ಬಿ.ಆರ್.ಅಂಬೇಡ್ಕರ್ ಜನಿಸಿದ್ದು 1891ರ ಏಪ್ರಿಲ್ 14ರಂದು ಮಹರ್ ಎಂಬ ದಲಿತ ಜನಾಂಗದಲ್ಲಿ. ಮಹಾರಾಷ್ಟ್ರದ ರತ್ನಗಿರಿ ಜಿ¯್ಲÉಯ ಅಂಬವಾಡೆ ಗ್ರಾಮದಲ್ಲಿ ಸುಭೇದಾರ್ ರಾಮ್ಜೀ ಸಕ್ಬಾಲ್, ತಾಯಿ ಭೀಮಾಬಾಯಿ ಅವರ ಪುತ್ರರಾಗಿ ಜನಿಸಿದರು… ಅಂದಿನ ದಿನದಲ್ಲಿ ಕೆಳಜಾತಿಯ ಹುಡುಗನೊಬ್ಬ ಶಾಲೆಗೆ ಹೋಗಿ ಅಕ್ಷರ ಕಲಿಯುವುದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. ಆದರೆ, ಅಂಬೇಡ್ಕರ್‍ರಿಗೆ ಚಿಕ್ಕಂದಿನಿಂದಲೇ ಓದಬೇಕು, ಏನನ್ನಾದರೂ ಸಾಧಿಸಬೇಕು ಎಂಬ ಛಲ ಇತ್ತು. ಇದಕ್ಕೆ ಹೆತ್ತವರು ನೀರೆರೆದು ಪೋಷಿಸಿದರು. ಇದರ ಜತೆಗೆ ಸಂಸ್ಕøತ ಕಲಿಯಬೇಕೆಂಬ ಮಹದಾಸೆಯಿತ್ತು. ಇದಕ್ಕೆ ಮೇಲ್ಜಾತಿಯವರು ಅಡ್ಡಿಪಡಿಸಿದರು. ಆದರೆ, ಇವರು ಬಗ್ಗಲಿಲ್ಲ… ಬದಲಿಗೆ ಹಠತೊಟ್ಟವರಂತೆ ಸಂಸ್ಕøತ ಕಲಿತು, ಅದರಲ್ಲಿ ಸಂಪೂರ್ಣ ಪಾಂಡಿತ್ಯಗಳಿಸಿ, ತಾವೇ ಹಲವಾರು ವಿಚಾರ ಕ್ರಾಂತಿ ಕೃತಿಗಳನ್ನು ರಚಿಸುವುದರ ಮೂಲಕ ಆಧುನಿಕ ಮನು ಎಂಬ ಕೀರ್ತಿಗೆ ಪಾತ್ರರಾದರು. ಇದನ್ನು ಮಾತ್ರ ಯಾರಿಂದಲೂ ತಡೆಯಲು ಸಾಧ್ಯವಾಗಲೇ ಇಲ್ಲ. ಏಕೆಂದರೆ ಹಠವಾದಿ ಅಂಬೇಡ್ಕರ್‍ರ ಭೀಮಶಕ್ತಿ ಅಂಥದ್ದು… 1907ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಂಬೇಡ್ಕರ್ ತೇರ್ಗಡೆಯಾದರು. ಅವರಿಗೆ ಆ ವರ್ಷವೇ ರಮಾಬಾಯಿಯೊಂದಿಗೆ ವಿವಾಹವಾಯಿತು. ಆ ನಂತರ ಅವರು ಮುಂಬೈನ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಇಂಟರ್‍ಮೀಡಿಯಟ್ ಮುಗಿಸಿ 1921ರಲ್ಲಿ ಬಿಎ ಪದವೀಧರರಾದರು. ನಂತರ ಬರೋಡಾ ಮಹಾರಾಜರ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು… ಆದರೆ, ಆಗ ಬರೋಡ ಮಹಾರಾಜರೇ ಇವರ ಬುದ್ಧಿಶಕ್ತಿಗೆ ಮಾರುಹೋಗಿ ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದ ನಂತರ ತಮ್ಮ ಹತ್ತು ವರ್ಷಗಳ ಕಾಲ ಕೆಲಸ ಮಾಡಬೇಕೆಂಬ ಕರಾರಿನೊಂದಿಗೆ ಉನ್ನತ ವ್ಯಾಸಂಗಕ್ಕೆ ಅಂಬೇಡ್ಕರ್ ಅವರನ್ನು ಅಮೇರಿಕಾಕ್ಕೆ ಕಳುಹಿಸಿದರು… ಅಲ್ಲಿ ಎಂಎ ಪದವಿಯೊಡನೆ ಪಿಎಚ್‍ಡಿಯನ್ನು ಗಳಿಸಿ 1917ರ ಆಗ 21ರಂದು ಮತ್ತೆ ಭಾರತಕ್ಕೆ ಮರಳಿದರು. ಇಷ್ಟಾದರೂ ಅವರ ಶಿಕ್ಷಣ ದಾಹ ಇಂಗಿರಲಿಲ್ಲ. ಹಾಗಾಗಿ ಪುನಃ 1920ರಲ್ಲಿ ಮತ್ತಷ್ಟು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಲಂಡನ್‍ಗೆ ಹೋದ ಇವರು 1922ರಲ್ಲಿ ಬ್ಯಾರಿಸ್ಟರ್ ಎಂಬ ಪದವಿಯೊಡನೆ ಭಾರತಕ್ಕೆ ವಾಪಸಾದರು… ವಿದೇಶದಲ್ಲಿ ಕಲಿತು, ಒಂದು ಸಾಲದು ಅಂತ ಹಲವಾರು ಡಾಕ್ಟರೇಟ್ ಪದವಿಗಳನ್ನು ಗಳಿಸಿ ಅಂಬೇಡ್ಕರ್ ಅವರು ಸ್ವದೇಶಕ್ಕೆ ಬಂದಿದ್ದರೂ, ಇಲ್ಲಿ ಮಾತ್ರ ಅದೇ ಅಸ್ಪೃಶ್ಯತೆ ಅವರನ್ನು ಅಪಮಾನಿಸುತ್ತಿತ್ತು. ಆಗ ಅಂಬೇಡ್ಕರ್ ಮೂಕನಾಯಕ ಎಂಬ ಪತ್ರಿಕೆ ಆರಂಭಿಸಿ ಅದರ ಮುಖೇನ ಅಸ್ಪೃಶ್ಯತೆಯ ವಿರುದ್ಧ ಜನ ಜಾಗೃತಿಗೆ ನಿಂತರು… ಬಹಿಷ್ಕೃತ ಹಿತಕಾರಿಣಿ ಎಂಬ ಸಭಾದಂತಹ ಸಂಘಟನೆಗಳನ್ನು ಕಟ್ಟಿ ಅಸ್ಪೃಶ್ಯತೆ ವಿರುದ್ಧ ಸಮಾನತೆಗಾಗಿ ಬೀದಿಗಿಳಿದು ಹಲವು ಹೋರಾಟ ಮಾಡುವ ಮೂಲಕ ದಲಿತರ ಪಾಲಿಗೆ ಅಕ್ಷರಶಃ ತೋರುಬೆರಳಾಗಿದ್ದರು. ಇವರ ಚೌದರ್ ಕೆರೆ ಚಳವಳಿಯಂತೂ ಭಾರತದ ಇತಿಹಾಸದಲ್ಲಿ ದಾಖಲಿಸುವಂಥದ್ದು… ಹೀಗೆ ದಲಿತರ ಪರ ಕ್ರಾಂತಿ ಕಹಳೆ ಪ್ರಾರಂಭವಾಗಿ ನಿಧಾನವಾಗಿ ದೇಶದೆಲ್ಲಾಡೆ ಮೊಳಗತೊಡಗಿತು. ಈ ಸಂದರ್ಭದಲ್ಲಿ ಎರಡನೆ ಮಹಾಯುದ್ಧ ಪ್ರಾರಂಭವಾಗಿತ್ತು. ಆ ಸಂದರ್ಭದಲ್ಲಿ ಬ್ರಿಟಿಷರು ಕೆಲವು ಭಾರತೀಯರನ್ನು ಮಂತ್ರಿಮಂಡಲಕ್ಕೆ ಸೇರಿಸಿಕೊಂಡಾಗ ಪ್ರಥಮ ಪ್ರಾಶಸ್ತ್ಯದಲ್ಲಿ ಅಂಬೇಡ್ಕರ್ ಅವರಿಗೆ ಸ್ಥಾನ ದೊರಕಿತ್ತು… ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ನೆಹರೂ ಸರ್ಕಾರದಲ್ಲಿ ಪ್ರಥಮ ಕಾನೂನು ಸಚಿವರಾಗಿದ್ದ ಹೆಗ್ಗಳಿಕೆ ಹೊಂದಿದ್ದ ಅಂಬೇಡ್ಕರ್, ಭಾರತ ದೇಶಕ್ಕೆ ಸಶಕ್ತ ಸಂವಿಧಾನ ನೀಡಿದ ಶಿಲ್ಪಿಯಾದರು. ಇದು ಇಡೀ ವಿಶ್ವಕ್ಕೇ ಮಾದರಿ ಸಂವಿಧಾನವಾಗಿರುವುದು ಇವರಿಗೆ ಸಂದ ಮಹಾಗೌರವವೇ ಸರಿ… ಅಧಿಕಾರ ಇರಲಿ, ಇಲ್ಲದಿರಲಿ ಅಂಬೇಡ್ಕರ್ ಅವರು ಹೆಜ್ಜೆ ಇಟ್ಟಲ್ಲೆಲ್ಲಾ ಅಸ್ಪೃಶ್ಯತೆ ನಿವಾರಣೆಗಾಗಿಯೇ ಅವರ ಹೃದಯ ತುಡಿಯುತ್ತಿತ್ತು. ಅಂತೆಯೇ ದಲಿತರ ಪುರೋಭಿವೃದ್ಧಿಗಾಗಿಯೇ ಅವರ ಜೀವ ಸದಾ ಮಿಡಿಯುತ್ತಿತ್ತು. ಭಾರತ ದೇಶದಲ್ಲಿ ಅಂಬೇಡ್ಕರ್ ಎಂಬ ಕ್ರಾಂತಿ ಪುರುಷ ಜನಿಸಿದ್ದರಿಂದಲೇ ದೇಶದ ಅರ್ಧ ಭಾಗದಂತಿರುವ ಉತ್ತರ ಪ್ರದೇಶ ಕಾನ್ಷಿರಾಂರಂಥ ದಲಿತ ನಾಯಕನ ಹಿಡಿತಕ್ಕೆ ಸಿಕ್ಕಿದ್ದು. ಮಾಯಾವತಿಯಂತಹ ದಲಿತ ಮಹಿಳೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು (ಈಗ ಮಾಜಿ) ಸಾಧ್ಯವಾದದ್ದು… ಅಂಬೇಡ್ಕರ್ ಅವರ ಇಡೀ ಜೀವನ ಅಸ್ಪೃಶ್ಯರೆನಿಸಿಕೊಂಡವರಿಗೆ ನ್ಯಾಯವನ್ನೂ, ಸಮಾನತೆಯನ್ನೂ ದೊರಕಿಸಿಕೊಡುವುದಕ್ಕೆ ಮುಡಿಪಾಗಿತ್ತು. ಇದರಲ್ಲಿ ಅವರು ಸಾಕಷ್ಟು ಯಶಸ್ಸನ್ನೂ ಸಾಧಿಸಿದ್ದರು. ಆದರೂ ಹಿಂದೂ ಧರ್ಮದ ಅಸಮಾನತೆಯಿಂದ ರೋಸಿಹೋಗಿದ್ದ ಅವರು ಬುದ್ಧನ ಕಾರುಣ್ಯದಲ್ಲಿ ಆಕರ್ಷಿತರಾಗಿ 1956ರ ಅಕ್ಟೋಬರ್ 14ರಂದು ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭವೊಂದರಲ್ಲಿ ತಮ್ಮ ಪತ್ನಿ ಡಾ.ಶಾರದಾ ಸೇರಿದಂತೆ ತಮ್ಮ ಅಪಾರ ಅಭಿಮಾನಿಗಳೊಡನೆ ಬೌದ್ಧಧರ್ಮಕ್ಕೆ ಸೇರಿದರು… 1956ರ ಡಿಸೆಂಬರ್ 6ರಂದು ಇಡೀ ದೇಶವನ್ನು ಅನಾಥವಾಗಿಸಿ ಕಾಣದ ಊರಿನತ್ತ ಪಯಣಿಸಿದ ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ಸರ್ಕಾರ 1991ರಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಅಂಬೇಡ್ಕರ್ ಇಂದು ನಮ್ಮ ಮುಂದೆ ಇಲ್ಲದಿರಬಹುದು. ಆದರೆ, ಅವರು ಮಾಡಿದ ಮಹತ್ ಸಾಧನೆಯಿಂದ ನೆನಪಾಗುತ್ತಲೇ ಇರುತ್ತಾರೆ… ******* ಕೆ.ಶಿವು.ಲಕ್ಕಣ್ಣವರ
ಪ್ರಬಂಧ
ಮಠದ ಆನೆ ರೇಶ್ಮಾ ಗುಳೇದಗುಡ್ಡಾಕರ್ ಆನೆ ಎಂದರೆ ಸಂಭ್ರಮ, ಸಡಗರ ದೈವೀಕತೆ ಆಶ್ಚರ್ಯ ಹತ್ತು ಹಲವು ಉದ್ಗಾರ. ಊರಿನಲ್ಲಿ ಕಂಡರೆ .ಅದೆ ಆನೆ ಅಚಾನಕ್ ಅಗಿ ನಾವು ಹೋಗುವ ದಾರಿಯಲ್ಲಿ ,ಕಾಡಿನಲ್ಲಿ ಊರ ಬಯಲಿನಲ್ಲಿ ಕಂಡರೆ !!!! ಹೃದಯ ವೇ ಬಾಯಿಗೆ ಬಂದಂತಾಗುತ್ತದೆ . ಅಲ್ಲವೇ ಅದನ್ನು ದೈರ್ಯ ವಾಗಿ ಸ್ವಾಗತಿಸುವರು ಸ್ವಲ್ಪ ಕಡಿಮೆಯೇ . ಆನೆ ಎಂದರೆ ನೆನಪಾಗುವದು ಅದರ ಗಾತ್ರ ಗತ್ತು ರಾಜಗಾಂಭಿರ್ಯ ನಡಿಗೆ ಅದರ ತೊಕದಷ್ಟೇ ಇರುವ ಸಂಮಯಮ .ಆನೆ ಒಂದು ಅದರೆ ಅದು ತಿಳಿಸುವ ನೀತಿ ಪಾಠ ಹಲವು ತಿಳಿದರೆ!ಇಂತಹ ಆನೆ ನಮ್ಮೊರಿಗೊ ಬರುತ್ತದೆ ವರ್ಷಕ್ಕೆ ೨ ಬಾರಿ ಅದು ಮಠದಿಂದ ಅದೇ ರಾಜಗಾಂಭೀರ್ಯ ಗತ್ತು ಅದೇ ಸಂಮಯಮದಿಂದ ಮಾವುತನನ್ನು ತನ್ನ ಮೇಲೆ ಹೊತ್ತುಕೊಂಡು ತನ್ನ ಬಹುಗಾತ್ರ ದೇಹವನ್ನು ಲೆಕ್ಕಿಸದೆ ಅವನ ಆಣತಿಗೆ ತಲೆಬಾಗುತ್ತಾ! ಆಗ ಊರಲ್ಲಿರುವ ಶ್ವಾನ ಬಳಗವೇ ಅದನ್ನು ಮೊದಲು ಸ್ವಾಗತಿಸುವದು! ತಮ್ಮ ಅಸಹನೆಯನ್ನು ಹೊಳಿಡುವದರ ಮೂಲಕ ಹೊರಹಾಕುತ್ತಾ .ಆ ಗಜರಾಜನನ್ನು ಕಂಡರೆ ಈ ಶ್ವಾನ ಪಡೆಗೆ ಎಕೆ ಅಂತಹ ಕೋಪವೋ ನಾ ಅರಿಯೆ ಮಾರುದೊರದಲ್ಲಿ ನಿಂತು ಒಂದೇ ಉಸಿರಿನಲ್ಲಿ ಹೊಳಿಡುತ್ತವೆ !? ಇದ್ಯಾವುದನ್ನೊ ಗಜರಾಜ ಗಮನಿಸುವದಿಲ್ಲ ತನ್ನ ಶಕ್ತಿಯನ್ನೊ ಆ ತೃಣಮಾತ್ರಗಳ ಮೇಲೆ ಪ್ರಯೋಗಿಸುವ ಗೋಜಿಗೊ ಹೊಗುವದಿಲ್ಲ ಗಜರಾಜ ಬೀದಿಯಲ್ಲಿ ಬರುತ್ತಿದ್ದರೆ ಅದನ್ನು ನೋಡುವದೇ ಒಂದು ಸೊಬಗು . ಎಂದಿನಂತೆ ನಿಧಾನವಾಗಿ ಸಾಗುತ್ತದೆ ಅವನ ನಡಿಗೆಗೆ ಅವನ ಕೊರಳಲ್ಲಿ ರುವ ಗಂಟೆಯ ನಾದವೋ ಜೊತೆಯಾಗಿರುತ್ತದೆ ತಲೆ ಬಾಗಿದವರಿಗೆ ಆಶಿರ್ವದಿಸುತ್ತಾ.ಹಣ್ಣು ,ಬೆಲ್ಲ ನೀಡಿದರೆ ವಿನಮ್ರವಾಗಿ ಸ್ವೀಕರಿಸುತ್ತಾ ಹಣ ನೀಡಿದರೆ ತನ್ನ ಒಡೆಯನಿಗೆ ಕೊಡುತ್ತಾ ! ಎಂತಹ ಗುಣ ಮನುಜರು ಕಲಿಯಬೇಕು ಎನಿಸುತ್ತದೆ ಇರಲಿ ಮಠದ ಆನೆ ಬಂತೆದರೆ ನನ್ನ ಪುತ್ರನಿಗೊ ಎಲ್ಲಿಲ್ಲದ ಹರ್ಷ .ಪಟಪಟನೆ ಓಡಿಹೊಗಿ ನನ್ನ ಪುಟಾಣಿ ಅದರ ಮುಂದೆ ನಿಲ್ಲುತ್ತಾನೆ ನನ್ನೊ ಕೆರೆದ್ಯೊಯಿದು “ಮಮ್ಮಿ ಬಾಹುಬಲಿ ,ಮಮ್ಮಿ ಬಾ ಬಾಹುಬಲಿ ” ಎನ್ನುತ್ತಾ ಬಾಹುಬಲಿ ೨ ಚಿತ್ರದಲ್ಲಿ ನಾಯಕ ಆನೆಯನ್ನು ಅದರ ಸೊಂಡಿಲಿನ ಮೂಲಕ ಎರುತ್ತಾನೆ ಇದು ಪ್ರತಿ ಬಾರಿ ಆನೆ ಬಂದಾಗಲೂ ಅವನು ಅದರ ಸೊಂಡಿಲನ್ನು ಗಮನಿಸುತ್ತಾ ನಿಲ್ಲುತ್ತಾನೆ …!!ನನ್ನ ಬಾಹುಬಲಿ ಆನೆಯನ್ನು ಮುಟ್ಟಲು ,ಅವನಿಗೆ ಕುತೊಹಲ ನನಗೊ ಅಷ್ಟು ದೈತ್ಯಾಕಾವನ್ನು ಹತ್ತಿರದಿಂದ ನೋಡಿ ತಳಮಳ ಟಿ.ವಿ ಯಲ್ಲಿ ನೋಡುವದು ಬೇರೆ ಈಗ real zoom ಅಲ್ಲಿ ನೋಡುವದೇ ಬೇರೆ. ಗಜರಾಜ ಮಾತ್ರ ಯಾವುದನ್ನು ಗಮನಿಸದೆ ವಿನಮ್ರತೆಯಿಂದ ನಿಂತಿರುತ್ತಾನೆ ಹಣ್ಣನ್ನು ಸ್ವೀಕರಿಸಿ, ಆಶೀರ್ವದಿಸುತ್ತಾನೆ ಅವನಿಗಾಗಿ ಕಾಯುತ್ತಿರುವವರ ಬಳಿಸಾಗುತ್ತಾನೆ ಭಕ್ತಗಣ ಎಷ್ಟೇ ದೊಡ್ಡ ದಿದ್ದರೂ ಎಂತಹ ವಾದ್ಯಗಳ ಘೋಷ ಮೊಳಗಿದ್ದರೊ ,ತನ್ನ ಆಗಾಧ ಶಕ್ತಿಯನ್ನು ಮರೆತು,ಮೃಗತ್ವ ತೊರೆದು , ಜನಮಾನಸದಲ್ಲಿ ಬೇರೆಯುತ್ತಾನೆ..!! ಗಜರಾಜ ಹಲವು ಮಾತುಗಳನ್ನು ತನ್ನ ಮೌನದಿಂದಲೇ ಹೇಳುತ್ತಾನೆ ಅನಿಸುತ್ತದೆ ನನಗೆ .ನಮ್ಮಲ್ಲಿ ಒಂದು ಮಾತು ಇದೆ “ಆನೆ ಹೊಗುತ್ತಿರುತ್ತದೆ,ಶ್ವಾನ ಬೊಗಳುತ್ತಿರುತ್ತದೆ” ಅಂತ ಇದು ಬಹಳ ಅರ್ಥ ಗರ್ಭಿತ ಮಾತು ಅಲ್ಲವೆ? .ಲೋಕದಲ್ಲಿ ಟೀಕೆ-ಹೊಗಳಿಕೆ, ವಿಮರ್ಶೆ ,ನಿಂದನೆ , ಸಹಜ ಅದಕ್ಕೆ ನಮ್ಮ ಗುರಿಯನ್ನು ಬಿಟ್ಟು ಶಕ್ತಿ ,ಅಥವಾ ಯುಕ್ತಿ ಪ್ರದರ್ಶನ ಎಕೆ ಮಾಡಬೇಕು ? ನಿಂದಿಸುವರು ,ತೆಗಳುವರು ಇರಲಿ ನಾವು ನಮ್ಮ ಗಮನ ನಮ್ಮ ಸಾಧನೆತ್ತ ಹಾಗೊ ನಮ್ಮ ಕೆಲಸದತ್ತ ಇರಬೇಕು . ಆನೆ ಅಷ್ಟು ಶಕ್ತಿ ಶಾಲಿಯಾದರೂ ಶ್ವಾನಗಳ ವಿರುದ್ದ ನಿಲ್ಲುವದಿಲ್ಲ .ಮಾವುತನ ಆಣತಿ ಮೀರುವದಿಲ್ಲ ….ಅದರ ತಾಳ್ಮೆ ಕೆಟ್ಟಿತೆಂದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ …!! ಇದು ನಮ್ಮೆಲ್ಲರಿಗೊ ಗೊತ್ತು ಅಂತಹ ಗಜರಾಜ ಶಾಂತ ಮೂರ್ತಿ ಯಾಗಿ ನಮ್ಮೆದರು ನಿಂತಾಗ ….. ಆ ದೈವವೇ ಬಂದತೆ ಭಾಸವಾಗುತ್ತದೆ .ಪ್ರಾಣಿ ಯಾದರೊ ಹೃದಯದ ಭಾಷೆ ಅರಿಯುತ್ತದೆ ….!!! ಅದರೆ ನಾವು ಒಮ್ಮೊಮ್ಮೆ ಮನುಷ್ಯತ್ವ ಮರೆತು ಬದುಕುತ್ತೆವೆ ….!!?? ನಮ್ಮವರ ಮರೆಯುತ್ತೆವೆ …ಜವಾಬ್ದಾರಿ ಯಿಂದ ನುಣುಚಿಕೊಳ್ಳುತ್ತೆವೆ … ಪ್ರಾಣಿ ಪಕ್ಷಿ ಗಳಲ್ಲಿ ಇರುವ ಪ್ರೀತಿ ಬಾಂಧವ್ಯ ನಮ್ಮಲ್ಲಿ ನೇಪಥ್ಯಕ್ಕೆ ಸರಿಯುತ್ತಿದೆ ದಿನ ಕಳೆದಂತೆ ಹಣ ಅಧಿಕಾರ ದಿಂದ ಸ್ನೇಹ ,ಸಂಬಂಧ ಅಳೆಯುತ್ತೆವೆ ,ನಮ್ಮ ನಮ್ಮಲ್ಲೆ ಕೋಟೆ ಕಟ್ಟಿಕೊಳ್ಳುತ್ತೇವೆ ಮಾನವೀಯತೆ ತೊರೆದು ಜೀವಿಸುತ್ತಿದ್ದೆವೆ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಳ್ಳತ್ತೆವೆ …..ನಮಗೆ ಬದುಕಲು ಹಲವು ಅಯಾಮಗಳಿವೆ ಪ್ರಣಿಗಳಿಗೆ ನಮ್ಮಂತೆ ಯಾವ ಸೌಲಭ್ಯ ಇಲ್ಲ ಹಣ ,ಆಸ್ತಿ, ಮೊಬೈಲ್, ಸಾಮಾಜಿಕ ಜಾಲತಾಣ , ಯಾವುದೊ ಇಲ್ಲ …!! ಅದರೊ ಅವು ಬದುಕುತ್ತವೆ ನಾವು ಸಾಯುತ್ತೆವೆ ಇಲ್ಲ ಸೋಲುತ್ತೇವೆ .ಸೋಲು ಗೆಲುವಿನ ಮೆಟ್ಟಿಲು ಎಂಬು ಅರಿಯಲು ವಿಫಲವಾಗುತ್ತೇವೆ “ಇದು ಮಾನವ ಜನ್ಮ ಹಾಳುಮಾಡಿಕೊಳ್ಳ ಬೇಡಿ ಹುಚ್ಚಪ್ಪಗಳಿರಾ ” ಎಂಬ ದಾಸರ ನಾಣ್ಣುಡಿಯನ್ನು ಗಜರಾಜ ನಮಗೆ ಹೇಳಿಹೋದಂತೆ ಅನಿಸುತ್ತದೆ. ಪ್ರಾಣಿ ಗಳಿಂದ ಜನರಿಗೆ ಅಗಾಗ , ತೊಂದರೆ ಅದರೆ ಅದರೆ ನಮ್ಮಲ್ಲೆ ಬೇಕಾದಷ್ಟೊ ನಿತ್ಯ ನಡೆಯುತ್ತವೆ ಹಲವು ರೊಪದಲ್ಲಿ ….!!ಯಾವ ಪ್ರಾಣಿ ಪಕ್ಷಿ ಯನ್ನು ಅನ್ಯಥಾ ಕೆಣಕುವದು ತಪ್ಪು ಅವಕ್ಕೊ ನಮ್ಮಂತೆ ಬದುಕಲು ಹಕ್ಕಿದೆ ಈ ಜೀವ ಜಗತ್ತಲ್ಲಿ ಅದರದ್ದೇ ಆದ ನಿರ್ದಿಷ್ಟ ಜವಾಬ್ದಾರಿ ಇದೆ .ಎಂಬುದನ್ನು ನಾವು ಮನದಟ್ಟು ಮಾಡಿ ಕೊಳ್ಳಬೇಕು . ಗಜರಾಜನ ಆಗಮನ ಕ್ಕಾಗಿ ಅವನ ಘಂಟೆಯ ನಾದವನ್ನು ನನ್ನ ಪೋರ ಮತ್ತೆ ಕಾಯುತ್ತಿರುತ್ತಾನೆ .ನನಗೆ ಗಜರಾಜನ ಮಾತುಗಳು ಅವನು ಹೊದ ದಾರಿಯಲ್ಲೆಲ್ಲಾ ಮಾರ್ದನಿಸುತ್ತಿದೆ ಎನಿಸುತ್ತದೆ *******
ನೆನಪು
ಜ್ಯೋತಿಬಾ ಫುಲೆಯವರ ಜಯಂತಿ “ಜ್ಯೋತಿ ಬೆಳಗೋಣ ಬನ್ನಿ” ಏಪ್ರೀಲ ತಿಂಗಳು ನಿಜಕ್ಕೂ ಭಾರತ ದೇಶಕ್ಕೆ ಎರಡು ತಾರೆ ನೀಡಿತು. ಒಬ್ಬರು ಮಹಾಮಾನವ ಬಾಬಾಸಾಹೇಬ ಅಂಬೇಡ್ಕರರು ಮತ್ತು ಇನ್ನೊಬ್ಬರು ಕ್ರಾಂತಿಜ್ಯೋತಿ ಮಹಾತ್ಮಾ ಜ್ಯೋತಿಭಾ ಫುಲೆ. ಜ್ಯೋತಿರಾವರು ಹುಟ್ಟಿದ್ದು ೧೧ ಏಪ್ರೀಲ ಮತ್ತು ಅಂಬೇಡ್ಕರರು ಹುಟ್ಟಿದ್ದು ೧೪ ಏಪ್ರೀಲ. ದಮನಿತ ಮತ್ತು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿ, ಅಂಧಕಾರವನ್ನು ಹೋಗಲಾಡಿಸಿ, ದೇಶದ ಆಂತರಿಕ ಸ್ವಾತಂತ್ರö್ಯ ಮತ್ತು ಸಾತ್ವಿಕ ಸ್ವಾತಂತ್ರಕ್ಕೆ ಹೋರಾಡಿದ ಇರ್ವರೂ ತಾರೆಗೆ ಸಮಾನರು. ಅಂಬೇಡ್ಕರರಿಗೆ ಆದರ್ಶರಾದ ಜ್ಯೋತಿರಾವರು ಭಾರತದ ಆಧುನಿಕತೆಗೆ ಹಾಕಿದ ಬದ್ರ ಬುನಾದಿ ಇಂದು ದೇಶವನ್ನು ಜಗತ್ತಿನಲ್ಲಿ ಮಿನುಗುವಂತೆ ಮಾಡಿದೆ. ಫುಲೆಯವರು ೧೧ ಏಪ್ರೀಲ್ ೧೮೨೭ ರಂದು ಮಹಾರಾಷ್ಟದ ಸಾತಾರಾ ಜಿಲ್ಲೆಯ ‘ಕಟ್ಗುಣ’ ಹಳ್ಳಿಯಲ್ಲಿ ತರಕಾರಿ ಮಾರುವವನ ಮನೆಯಲ್ಲಿ ಜನಿಸಿದರು. ಸಮಾನತೆ ಬೋಧಿಸಿದ ಸಂತ ತುಕಾರಾಮ, ಸಮಾನತೆಯ ತತ್ವದಡಿಯಲ್ಲಿ ರಾಜ್ಯ ಸ್ಥಾಪಿಸಿದ ಶಿವಾಜಿ ಮಹಾರಾಜರು, ಅನ್ಯಾಯದ ವಿರುದ್ಧ ಹೋರಾಡಿದ ಮಾರ್ಟಿನ್-ಲೂಥರ್-ಕಿಂಗ್ ಮತ್ತು ಮಾನವ ಹಕ್ಕು ಹೋರಾಟಗಾರ ಲೇಖಕ ಥಾಮಸ್ ಪೇನ್‌ರ ಪ್ರಭಾವಕ್ಕೆ ಒಳಗಾಗಿ ಭಾರತ ದೇಶದಲ್ಲಿ ದಮನಿತ ಮತ್ತು ಶೋಷಿತ ವರ್ಗದ ದಂಡನಾಯಕನಾಗಿ ಒಂಟಿ ಸಲಗದಂತೆ ಕಾದಾಡಿದ ವೀರ. ಕುಟುಂಬದ ಮತ್ತು ಸಮಾಜದ ಎಷ್ಟೆ ಒತ್ತಡ ಇದ್ದರೂ ಅತ್ಯಂತ ಜಿದ್ದಿನಿಂದ ಶಿಕ್ಷಣ ಪಡೆದರು. ನೌಕರಿ ಮಾಡುತ್ತಾ ಆರಾಮಾಗಿ ಇರಬಹುದಿತ್ತು. ಆದರೆ ಹಾಗೆ ಮಾಡದೆ ಸಮಾಜ ಸೇವೆಗೆ ತಮ್ಮನ್ನು ತಾವು ಮುಡುಪಾಗಿಟ್ಟರು. ೧೮೪೮ರಲ್ಲಿ ಜ್ಯೋತಿರಾವರು ತಮ್ಮ ಮೇಲ್ವವರ್ಗದ ಆತ್ಮೀಯ ಸ್ನೇಹಿತನ ಮದುವೆಗೆ ಹೋದಾಗ ಸಂಭವಿಸಿದ ಅವಮಾನವು ಅವರ ಕಣ್ಣು ತೆರೆಸಿತು. ಈ ಅನಿಷ್ಠ ರೂಢಿ-ಪರಂಪರೆ ಮತ್ತು ಜಾತಿವ್ಯವಸ್ಥೆ ಮಣ್ಣುಗೂಡದೆ ಸಮಾಜದ ಮತ್ತು ದೇಶದ ಏಳಿಗೆ ಸಾಧ್ಯವಿಲ್ಲ. ಇದಕೆಲ್ಲಾ ಕಾರಣ ಅಜ್ಞಾನ. ಅಜ್ಞಾನ ತೊಲಗಬೇಕಾದರೆ ವಿದ್ಯೆಯೆ ಬಹುದೊಡ್ಡ ಅಸ್ತç ಎಂದು ತಿಳಿದು ಸಮಾಜದ ಪ್ರತಿಯೊಂದು ವರ್ಗಕ್ಕೆ ಶಿಕ್ಷಣ ಸಿಗುವಂತೆ ಪಣ ತೋಡುತ್ತಾರೆ. “ವಿದ್ಯೆಯಿಲ್ಲದೆ ಮತಿ ಹೋಯಿತು ಮತಿ ಇಲ್ಲದೆ ನೀತಿ ಹೋಯಿತು ನೀತಿ ಇಲ್ಲದೆ ಗತಿ ಹೋಯಿತು ಗತಿ ಇಲ್ಲದೆ ವಿತ್ತ ಹೋಯಿತು ವಿತ್ತವಿಲ್ಲದೆ ಶೂದ್ರನು ಕುಸಿದ. ಇಷ್ಟೆಲ್ಲಾ ಒಂದು ಅವಿದ್ಯೆ ಮಾಡಿತೆಂದು ಅವರು ಆ ವರ್ಷವೆ ಅಗಸ್ಟ ೧೮೪೮ ರಲ್ಲಿ ಪುಣೆಯಲ್ಲಿ ಶಾಲೆಯನ್ನು ತೆರೆಯುತ್ತಾರೆ. ಶಾಲೆಯಲ್ಲಿ ಪಾಠಕ್ಕೆ ಪತ್ನಿ ಸಾವಿತ್ರಿಬಾಯಿ ಫುಲೆಯವರಿಗೆ ಸ್ವತಃ ವಿದ್ಯೆ ಕಲಿಸಿ ದೇಶದ ಪ್ರಥಮ ಶಿಕ್ಷಕಿಯನ್ನಾಗಿ ಮಾಡುತ್ತಾರೆ. ಶಾಲೆಯ ಮುಖ ನೋಡದ ಸಾವಿತ್ರಿ ಪತಿಯ ವಿಚಾರಗಳಿಗಾಗಿ ತನ್ನ ಜೀವನವನ್ನೆ ಮುಡುಪಾಗಿಟ್ಟ ಧೀಮಂತ ಮಹಿಳೆ. ಶಾಲೆ ಕಲಿಸಲು ಹೋರಟಾಗ ಮೇಲ್ವರ್ಗದ ಕಿಡಗೇಡಿತನಕ್ಕೆ ಭಯಪಡದೆ ತಮ್ಮ ಕಾಯಕ ಚಾಲ್ತಿಯಿಟ್ಟರು. ಈ ಕಾರಣಕ್ಕೆ ಅವರಿಗೆ ಕುಟುಂಬದಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಅದಕ್ಕೂ ಅಂಜದ ಅವರು ಮುಂದೆ ೧೮೫೧ ರಲ್ಲಿ ಹೆಣ್ಣು ಮಕ್ಕಳಿಗಾಗಿ ಮತ್ತೊಂದು ಶಾಲೆಯನ್ನು ಪ್ರಾರಂಭ ಮಾಡಿದರು. ಮೊದಲಿಗೆ ಸಮಾಜದ ಭಯದಿಂದ ಕೇವಲ ೮ ಹೆಣ್ಣು ಮಕ್ಕಳು ಮಾತ್ರ ಶಾಲೆಗೆ ಬರುತಿದ್ದರು. ಆದರೆ ಇಂದು ದೇಶದಲ್ಲಿ ಕೋಟ್ಯಾವಧಿ ಹೆಣ್ಣು ಮಕ್ಕಳು ವಿದ್ಯೆ ಪಡೆದುಕೊಳ್ಳುತಿದ್ದಾರೆ, ಇದರ ಶ್ರೇಯ ನಿಜಕ್ಕೂ ಈ ದಂಪತಿಗಳಿಗೆ ಸಲ್ಲಬೇಕು. ಜ್ಯೋತಿರಾವ ಇಷ್ಟಕ್ಕೆ ನಿಲ್ಲದೆ ೧೮೫೨ ರಲ್ಲಿ ಅಸ್ಪೃಶ್ಯ ಜಾತಿಗಳಾದ ಮಹಾರ ಮತ್ತು ಮಾಂಗ ಮಕ್ಕಳಿಗೆ ಶಾಲೆಯನ್ನು ತೆರೆದರು. ದಾರಿದ್ರ್ಯ, ಬಡತನ, ಮೇಲು-ಕೀಳು, ಮೂಡನಂಬಿಕೆ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯವೆಂದು ಕೃಷಿಕ ಮತ್ತು ಕಾರ್ಮಿಕ ವರ್ಗದವರಿಗೂ ಜ್ಞಾನದ ಬಾಗಿಲನ್ನು ತೆರೆದರು. ಏಕೆಂದರೆ ಬ್ರಿಟೀಷ ಸರಕಾರವು ಕೃಷಿಕ ಮತ್ತು ಕಾರ್ಮಿಕರ ಅಜ್ಞಾನದ ಲಾಭ ಪಡೆದುಕೊಂಡು ವಿಪರಿತ ಕಂದಾಯ ವಸೂಲಿ ಮಾಡುತ್ತಿತ್ತು. ಕಷ್ಟ ಮಾಡುವದು ಇವರು ಆದರೆ ವಸೂಲಿ ಮಾಡುವ ಅಧಿಕಾರಿಗಳು ಮಾತ್ರ ಮೇಲ್ವರ್ಗದವರು. ಅದಕ್ಕಾಗಿ ಫುಲೆಯವರು ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಈ ಬಗ್ಗೆ ಧ್ವನಿ ಎತ್ತಿದರು. ಜಮೀನ್ದಾರ ಪದ್ಧತಿ, ಸಾಮಂತಶಾಹಿ, ಸಾಹುಕಾರ ಪದ್ಧತಿ ಹೋಗಲಾಡಿಸಬೇಕು ಮತ್ತು ಕೃಷಿಕರಿಗೆ ಅತ್ಯಾಧುನಿಕ ಸಲಕರಣೆ ಕೊಡಬೇಕು ಎಂದು ನೇರ ಶಬ್ದಗಳಲ್ಲಿ ಕೇಳಿಕೊಂಡರು. ಜ್ಞಾನ ಮುಚ್ಚಿಟ್ಟು ಉಳಿದ ಸಮಾಜದ ಕತ್ತು ಹಿಸುಕುವ ಮೇಲ್ವರ್ಗದ ಜೊತೆ ಬಹಿರಂಗ ಸಮರ ಸಾರಿದ್ದರು. ಪ್ರಥಮ ಬಾರಿಗೆ ಪುರೋಹಿತನಿಲ್ಲದ ಮದುವೆಯನ್ನು ಮಾಡಿಸಿ ತಮ್ಮ ಸಮಾಜದಿಂದ ಬಹಿಸ್ಕೃತಗೊಂಡರು. ಬಾಲ್ಯವಿವಾಹದ ನಿರ್ಭಂದನೆಗೆ ಹೋರಾಡಿದರು. ಬಾಲ್ಯವಿವಾಹ ಪರಿಣಾಮವೆಂದರೆ ಸಮಾಜದಲ್ಲಿ ವಿಧವೆಯರ ಸಂಖ್ಯೆ ಹೆಚ್ಚಾಗಿತ್ತು. ಅಂದಿನ ಸಮಾಜವು ಈ ವಿಧವೆಯರಿಗೆ ಅತ್ಯಂತ ಹೀನವಾಗಿ ನೋಡಿಕೊಳ್ಳುತಿತ್ತು. ಅವರನ್ನು ಕೇಶಮುಂಡನೆ ಮಾಡಿಸಿ ಕತ್ತಲೆ ಕೋಣೆಯಲ್ಲಿ ಇಡಲಾಗುತಿತ್ತು. ಯೌವನದಲ್ಲಿಯೆ ವಿಧವೆಯರಾಗಿ ಅನೈತಿಕ ಮಾರ್ಗದಿಂದ ಗರ್ಭೀಣಿಯಾದರೆ ನವಜಾತ ಮಕ್ಕಳನ್ನು ಬಿಸಾಕಬೇಕಾಗುತ್ತಿತ್ತು ಇಲ್ಲದಿದ್ದರೆ ಎಲ್ಲಾದರು ಬಿಡಬೇಕಾಗುತ್ತಿತ್ತು. ಫುಲೆಯವರು ಇವರಿಗಾಗಿ ಮುಂದೆ ಬಂದು ವಿಧವೆ ಮತ್ತು ಮಕ್ಕಳ ಸಲುವಾಗಿ ೧೮೬೩ರಲ್ಲಿ ಅನಾಥಾಲಯ ತೆರೆದರು. ೧೮೭೩ ರಲ್ಲಿ ಬ್ರಾಹ್ಮಣ ವಿಧವೆಗೆ ಅನೈತಿಕ ಮಾರ್ಗದಿಂದ ಜನಿಸಿದ ಮಗುವನ್ನು ದತ್ತು ತೆಗೆದುಕೊಂಡು ಸಮಮಾಜದಲ್ಲಿ ಹೊಸ ಆದರ್ಶ ನಿರ್ಮಾಣ ಮಾಡಿದರು. ಸಮಾಜಕ್ಕೆ ಸತ್ಯದ ಅರಿವಾಗಬೇಕೆಂದು ೧೮೭೩ ರಲ್ಲಿ ‘ಸತ್ಯಶೋಧಕ ಸಮಾಜ’ ದ ಸ್ಥಾಪನೆ ಮಾಡುತ್ತಾರೆ. ಈ ಮೂಲಕ ಸಮಾಜದಲ್ಲಿಯ ಅನಿಷ್ಠ ಪದ್ಧತಿಗಳನ್ನು ಮೊಟಕುಗೊಳಿಸಿ ಸುಧಾರಣೆ ಮಾಡುವಂತೆ ಬ್ರಿಟೀಷ ಸರಕಾರಕ್ಕೆ ಶಿಪಾರಸು ಮಾಡಿದಾಗ ಸರಕಾರವು ‘ಎಗ್ರಿಮೆಂಟ್ ಆಕ್ಟ’ ಪಾಸು ಮಾಡುತ್ತದೆ. ೧೮೮೮ ರಲ್ಲಿ ಇಂಗ್ಲೇಂಡ್ ರಾಣಿಯ ಪುತ್ರ ಭಾರತ ಭೇಟಿಗೆ ಬಂದಿದ್ದರು. ಅವರ ಕಾರ್ಯಕ್ರಮದಲ್ಲಿ ಫುಲೆಯವರು ಒಕ್ಕಲಿಗರ ಪಾರಂಪರಿಕ ವೇಷ-ಭೂಷದಲ್ಲಿ ಹೋಗಿ ದೇಶದ ಪರಿಸ್ಥಿತಿಯ ಬಗ್ಗೆ ರಾಣಿಯವರಿಗೆ ಮನವರಿಕೆ ಮಾಡಿಕೊಟ್ಟರು. ‘ರಾಷ್ಟಿçಯ ಕಾಂಗ್ರೇಸ್’ ಪಕ್ಷವು ೧೮೮೯ರ ತನ್ನ ಸಮಾವೇಶ ಮುಂಬಯಿಯಲ್ಲಿ ಇಟ್ಟಿಕೊಂಡಿತು. ಅಲ್ಲಿ ಕೂಡ ಫುಲೆಯವರು ರೈತನ ಭೆತ್ತ ಮತ್ತು ಹುಲ್ಲಿನ ಗಂಟಿನ ಜೊತೆ ಹೋಗಿ ವಿರೋಧ ವ್ಯಕ್ತ ಪಡಿಸಿದ್ದರು. ರಾಷ್ಟಿçಯ ಕಾಂಗ್ರೇಸ ಪಕ್ಷವನ್ನು ವಿರೋಧ ಮಾಡಿದವರು ಮೊದಲಿಗರೆಂದು ಹೇಳಬಹುದು. ಏಕೆಂದರೆ ಇದರಲ್ಲಿ ಇರುವವರೆಲ್ಲಾ ಮೇಲ್ವರ್ಗದದವರು, ಸಮಾಜದ ಆಂತರಿಕ ಸ್ವಾತಂತ್ರದ ವಿಷಯ ಇರಲಿಲ್ಲ. ಅದಕ್ಕಾಗಿ ಇವರು ಈ ಪಕ್ಷದ ದೇಶಕ್ಕೆ ಯಾವ ಅವಶ್ಯಕತೆ ಇಲ್ಲವೆಂದು ಹೇಳಿದ್ದರು. ಈಶ್ವರ ಒಬ್ಬನೆ ಇದ್ದಾನೆ ಅವನಿಗಾಗಿ ದಲ್ಲಾಲಿಗಳ ಅವಶ್ಯಕತೆ ಇಲ್ಲ. ಅದಕ್ಕಾಗಿ ಸಮಯ ಮತ್ತು ದುಡ್ಡು ವ್ಯರ್ಥ ಮಾಡದೆ, ವಿದ್ಯೆಯ ಉನ್ನತಿಗಾಗಿ ಶ್ರಮಿಸಿರಿ ಅದುವೆ ಶಾಂತಿ ನೆಲೆಸಲು ಸಹಕಾರಿ ಆಗುತ್ತದೆ ಎಂದು ಹೇಳಿದ್ದರು. ಸಮಾಜದ ಉನ್ನತಿಯ ಜೊತೆಗೆ ಇವರ ಸಾಹಿತ್ಯ-ಕೃಷಿಯು ಅತ್ಯಂತ ಮಹತ್ವದ್ದಾಗಿದೆ. ಅವರು ಬರೆದ ಶಿವಾಜಿ ಪುವಾಡ, ಬ್ರಾಹ್ಮಣರ ಕುಯುಕ್ತಿ, ದಾಸ್ಯ, ರೈತನ ಚಾಟ, ಸಾರ್ವಜನಿಕ ಸತ್ಯ-ಧರ್ಮ ಇಂತಹ ಹಲವಾರು ಮಹತ್ವದ ಕೃತಿಗಳು ಇಂದಿಗೂ ಅದೆಷ್ಟೋ ಸಲ ವಿಮರ್ಶೆಗೆ ಬರುತ್ತಿವೆ. ಬದುಕಿನ ಕೊನೆಗೆ ಇವರು ಪಾರ್ಶ್ವವಾಯಿವಿನ ಆಘಾತದಿಂದ ತಮ್ಮ ಬಲಗೈ ಶಕ್ತಿ ಹೀನವಾದಾಗ ಎಡಗೈಯಿಂದ ಸಮಾಜ ಪ್ರಬೋಧನೆ ಕುರಿತು ಬರೆದ ಮಹಾನುಭಾವರು. ಇಂತಹ ಮಹಾನ್ ಚೇತನ ೨೮ ನವ್ಹೆಂಬರ ೧೮೯೦ಕ್ಕೆ ನಮ್ಮನ್ನು ಅಗಲಿದರು. ಇವರ ಆದರ್ಶ ಮುಂದೆ ಮಹಾರಾಷ್ಟç ಸಾಮಾಜಿಕ ಚಳುವಳಿಯ ಮುಖ್ಯ ಕೇಂದ್ರಬಿಂದು ಆಗುತ್ತದೆ. ಮಹಾತ್ಮಾ ಗಾಂಧೀಜಿ, ಶಾಹೂ ಮಹಾರಾಜ, ಇಂದಿನ ಛಗನ್ ಭುಜಬಳದ ವರೆಗೆ ಅನೇಕ ನಾಯಕರು ಇವರ ಕಾರ್ಯದ ಪ್ರೇರಣೆ ಪಡೆದಿದ್ದಾರೆ. ಕೆಲವರ ಅಭಿಪ್ರಾಯದಂತೆ ಮಹಾತ್ಮಾ ಗಾಂಧೀಜಿಯವರೆ ಇವರಿಗೆ ಪ್ರಥಮಬಾರಿಗೆ ‘ಮಹಾತ್ಮಾ’ ಎಂದು ಕರೆದರು. ಆದರೆ ೧೮೮೦ರಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನೋಡಿ ಮುಂಬಯಿ ಸರಕಾರ ಮತ್ತು ಜನರು ಇವರಿಗೆ ‘ಮಹಾತ್ಮಾ’ ಎಂದು ಕರೆಯುತ್ತಾರೆ. ಪ್ಲೇಟೋ ಹೇಳಿದಂತೆ ‘ಅಜ್ಞಾನವು ಎಲ್ಲ ಕೆಡಕುಗಳ ಮೂಲ ಮತ್ತು ಮಹಾಮಾರಿ.’ ಆ ಅಜ್ಞಾನವನ್ನೆ ಕಿತ್ತೊಗೆಯಲು ಪ್ರಯತ್ನಸಿದ ಫುಲೆಯವರ ವಿಚಾರಗಳು ಇಂದು ಎಷ್ಟರ ಮಟ್ಟಿಗೆ ಅನುಷ್ಠಾನಕ್ಕೆ ಬಂದಿವೆ ನಾವು ಭಾರತಿಯರು ಕೇಳಿಕೊಳ್ಳುವದು ಅವಶ್ಯಕವಾಗಿದೆ. ಸುಮಾರು ೧೭೫ ವರ್ಷಗಳ ಹಿಂದೆ ದೇಶಕ್ಕೆ ಬೆಳಕಿನ ಮಾರ್ಗ ತೋರಿಸಿದ ಜ್ಯೋತಿರಾವರ ಜ್ಯೋತಿಯನ್ನು ಇಂದಿಗೂ ಅದೆಷ್ಟೋ ಹುಳಗಳು ಆರಿಸುವ ಪ್ರಯತ್ನ ಮಾಡುತ್ತಿವೆ. ಅದಕ್ಕಾಗಿ ನಾವು ಭಾರತಿಯರು ಸತ್ಯವನ್ನು ಅರಿತುಕೊಂಡು ಅವರ ಜ್ಯೋತಿಯನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಬೇಕಿದೆ. ಅವರು ಒಂದು ಮಾತನ್ನು ಸದಾ ಹೇಳುತ್ತಿದ್ದರು, “ಒಂದು ವೇಳೆ ಜನರು ನೀವು ಮಾಡುವ ಸಂಘರ್ಷದಲ್ಲಿ ಬಂದರೆ, ದಯವಿಟ್ಟು ಅವರ ಜಾತಿ ಕೇಳಬೇಡಿ.” ಆದರೆ ಇಂದು ನಾವು ಮುಂಜಾನೆ ‘ವಾಕಿಂಗ್’ ಹೋಗುವಾಗ ಸಹ ಜಾತಿ ನೋಡುತ್ತೇವೆ. ದೇಶದ ರಾಜಕಾರಣವಂತು ಹೇಳಲಿಕ್ಕೆ ಬಾರದಷ್ಷು ಹದಗೆಡುತ್ತಿದೆ. ಪ್ರತಿಯೊಂದನ್ನು ನಾವು ಜಾತಿ-ಧರ್ಮದ ಆಧಾರದ ಮೇಲೆ ನೋಡುತ್ತೇವೆ. ಅಂದಶೃದ್ಧೆ ಎಷ್ಟರ ಮಟ್ಟಿಗೆ ನಮ್ಮಲ್ಲಿ ಹೂತಿದೆ ಅಂದರೆ ಮುಂಜಾನೆ ಎರಡು ಗಂಟೆಗಳ ಕಾಲ ಎಲ್ಲ ವಾಹಿನಿಗಳ ಭವಿಷ್ಯ ನೋಡದೆ ಹೊರಗೆ ಬರುವದಿಲ್ಲ. ಇಂದು ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾದ ಯುವಕ ಬಂಧುಗಳು ಇಲ್ಲದ-ಸಲ್ಲದ ವಿಚಾರಗಳನ್ನು ಚರ್ಚೆ ಮಾಡುವದಕ್ಕಿಂತ, ನಾವು ನಿಜಕ್ಕೂ ದಾಸ್ಯದಿಂದ ಮುಕ್ತರಾ..? ನಮಗೆ ಸ್ವತಂತ್ರ ಇದೆಯಾ..? ಸ್ತಿçಯರು ಮುಕ್ತರಾಗಿದ್ದಾರಾ..? ಬಾಲ್ಯವಿವಾಹ ಪದ್ಧತಿ ಕೊನೆ ಆಯಿತಾ..? ದೇಶ ಬಡತನ ಮುಕ್ತ ಆಗಿದೆಯೆ..? ದಾರಿದ್ರ್ಯ ಅಂದರೇನು..? ದೇಶದಲ್ಲಿ ಸಮಾನತೆಯೆ ಇದೆಯಾ..? ಯಾರಾದರೂ ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರಾ? ನಿಜವಾದ ಧರ್ಮ ಮತ್ತು ದೇವರು ಯಾರು..? ಈ ಪ್ರಶ್ನೆಗಳನ್ನು ಕೇಳಿಕೊಂಡು ಅದಕ್ಕೆ ಉತ್ತರ ಕಂಡುಕೊಳ್ಳುವದು ಒಳ್ಳೆಯದೆಂದು ಅನಿಸುತ್ತದೆ. ಬಹುತೇಕ ಇಂದು ಕೊರೋನಾ ಮಹಾಮಾರಿ ಈ ಎಲ್ಲ ಪ್ರಶ್ನೆಗಳನ್ನು ಕೇಳುವಂತೆ ಮಾಡುತ್ತದೆ ಎಂಬುದು ನನ್ನ ಭಾವನೆ. *************************************************** ಮಲಿಕಜಾನ ಶೇಖ
ಪ್ರಸ್ತುತ
ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ ಗಣೇಶ್ ಭಟ್,ಶಿರಸಿ ಮೈಕ್ರೋವೈಟಾ ಸಿದ್ಧಾಂತ ಮತ್ತು ವೈರಸ್ ನಿಯಂತ್ರಣ ಒಂದು ಚಿಕ್ಕ ವೈರಾಣು ಜಗತ್ತನ್ನು ನಡುಗಿಸುತ್ತಿದೆ. ಪ್ರಕೃತಿಯನ್ನು ಜಯಿಸಿದ್ದೇನೆಂಬ ಮಾನವನ ಅಹಂಕಾರದ ಗುಳ್ಳೆಯನ್ನು ಒಡೆದಿದೆ. ಬಡವ, ಶ್ರೀಮಂತ, ಜಾತಿ, ಮತಗಳೆಂಬ ಮಾನವ ನಿರ್ಮಿತ ಕೃತಕ ಗೋಡೆಗಳು ವೈರಾಣುವಿನ ಅಬ್ಬರಕ್ಕೆ ನೆಲಕಚ್ಚಿವೆ. ಒಂದು ಶತಮಾನದ ಹಿಂದೆ ಮಾನವ ಕುಲವನ್ನು ಇನ್ಫ್ಲುಯೆಂಝಾ ರೋಗದ ಮೂಲಕ ಮಣಿಸಿದ್ದ ವೈರಾಣು ಕಲಿಸಿದ ಪಾಠವನ್ನು ಮರೆತಿದ್ದರಿಂದ ಬಹುಶಃ ಕಳೆದ ಎರಡು ದಶಕಗಳಿಂದೀಚೆಗೆ ಹೊಸ ಹೊಸ ರೂಪ ತಾಳಿ ವೈರಾಣು ದಾಳಿ ಇಡುತ್ತಿದೆ. ಸಾರ್ಸ್, ಎಬೋಲಾ, ಹಕ್ಕಿಜ್ವರ, ಹಂದಿಜ್ವರ, ಡೆಂಗ್ಯೂ, ಚಿಕನ್ಗುನ್ಯಾ ಇತ್ಯಾದಿ ರೋಗಗಳ ನಂತರ ಈಗ ಕೊರೊನಾ. ವೈರಸ್ನ ಒಂದು ರೂಪವನ್ನು ನಿಯಂತ್ರಿಸಿದ್ದೇವೆಂದು ಹೆಮ್ಮೆಪಡುವಷ್ಟರಲ್ಲಿ ಮತ್ತೊಂದು ಪ್ರಭೇದ ಕಾಣಿಸಿಕೊಳ್ಳುತ್ತಿದೆ. ರಾಜ್ಯಗಳ ನಡುವಿನ ಗಡಿ, ದೇಶಗಳ ನಡುವಿನ ಅಂತಾರಾಷ್ಟ್ರೀಯ ಗಡಿರೇಖೆಗಳು ಮಾನವರ ಓಡಾಟವನ್ನು ನಿಯಂತ್ರಿಸಬಹುದೇ ಹೊರತು ವೈರಾಣುಗಳ ಚಲನೆಯನ್ನಲ್ಲ. ಕೊರೊನಾ ವೈರಸ್ ಚೀನಾದಿಂದ ಹಬ್ಬಿತು ಎಂದು ಹೇಳಲಾಗುತ್ತದೆ. ಅಲ್ಲಿಯ ಬಾವಲಿಗಳಲ್ಲಿ ಈ ವೈರಸ್ ಇತ್ತು, ಮಾನವನ ದೇಹದಲ್ಲಿ ಸೇರಿಕೊಂಡ ನಂತರ ಅದರ ಪ್ರಕೋಪ ಹೆಚ್ಚಾಯಿತೆಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಬಾವಲಿಯಲ್ಲಿ ಎಂದಿನಿಂದ ಈ ವೈರಸ್ ಇತ್ತು? ಎಲ್ಲಿಂದ ಬಂತು? ಯಾಕೆ ಬಂತು ಇತ್ಯಾದಿಗಳಿಗೆ ಉತ್ತರ ಸಿಗುತ್ತಿಲ್ಲ. ಇಷ್ಟಾಗಿಯೂ ಈ ವೈರಸ್ಗಳಿಗೆ ಜೀವ ಇದೆಯೇ? ಪೃಥ್ವಿಯ ಮೇಲೆ ವಿಕಾಸಹೊಂದಿರುವ ಜೀವಜಾಲದಲ್ಲಿ ವೈರಸ್ನ ಸ್ಥಾನ ಎಲ್ಲಿ ಎಂಬುದಕ್ಕೆ ಇನ್ನೂ ಉತ್ತರ ಕಂಡುಕೊಳ್ಳಬೇಕಿದೆ. ಬರಿಗಣ್ಣಿಗೆ ಕಾಣಿಸದ ವೈರಸ್ಗಳು ಏಕಕೋಶ ಜೀವಿಗಳೇ ಅಥವಾ ಬರೀ ಪ್ರೋಟೀನ್ ಕಣಗಳೇ ಎಂಬ ಕುರಿತು ಚರ್ಚೆ ನಡೆದೇ ಇದೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರವನ್ನು ಮೈಕ್ರೋವೈಟಾ ಸಿದ್ಧಾಂತ ನೀಡುತ್ತದೆ. ದಾರ್ಶನಿಕ ಶ್ರೀ ಪ್ರಭಾತರಂಜನ್ ಸರ್ಕಾರರು ೧೯೮೬ರ ಡಿಸೆಂಬರ್ ೩೧ರಂದು ತಮ್ಮ ಪ್ರವಚನದಲ್ಲಿ ‘ಮೈಕ್ರೋವೈಟಮ್-ದಿ ಮಿಸ್ಟೀರಿಯಸ್ ಎಮನೇಶನ್ ಆಫ್ ಕೋಸ್ಮಿಕ್ ಫ್ಯಾಕ್ಟರ್’ (microvitum- The mysterious emanation of cosmic factor) ಅಂದರೆ ವಿಶ್ವಶಕ್ತಿಯ ನಿಗೂಢ ಉದ್ಭವ-ಮೈಕ್ರೋವೈಟಮ್ ಎಂಬ ವೈಜ್ಞಾನಿಕ ವಿಷಯವನ್ನು ಪ್ರಥಮ ಬಾರಿಗೆ ಪ್ರಸ್ತುತಪಡಿಸಿ, ನಂತರದ ಹಲವಾರು ಪ್ರವಚನಗಳಲ್ಲಿ ಇನ್ನಷ್ಟು ವಿವರ ನೀಡಿದರು. ಅಣು, ಪರಮಾಣುಗಳೇ ಅತೀ ಚಿಕ್ಕ ಅಸ್ತಿತ್ವವೆಂದು ಮೊದಲು ನಂಬಲಾಗಿತ್ತು. ಪ್ರೋಟಾನ್, ಇಲೆಕ್ಟ್ರಾನ್, ನ್ಯೂಟ್ರಾನ್ಗಳು ಅಣುವಿಗಿಂತ ಸೂಕ್ಷ್ಮವೆಂದು ಈಗ ಹೇಳಲಾಗುತ್ತದೆ. ಇವುಗಳಿಗಿಂತ ಸೂಕ್ಷ್ಮವಾದ ಅಸ್ತಿತ್ವ, ಭೌತಿಕ ಮತ್ತು ಮಾನಸಿಕ ಸ್ತರಗಳಲ್ಲಿ ಇರುವ ಅಸ್ತಿತ್ವವನ್ನು ‘ಮೈಕ್ರೋವೈಟಮ್’ ಎಂದು ಹೆಸರಿಸಿದ ಶ್ರೀ ಸರ್ಕಾರರು, ಅದರ ಬಹುವಚನ ಶಬ್ದವಾಗಿ ಮೈಕ್ರೊವೈಟಾ ಎಂಬ ಪದವನ್ನು ಬಳಸಿದರು. ಮೈಕ್ರೊವೈಟಾವು ಭೌತಿಕ ಸ್ತರದ ಎಲೆಕ್ಟ್ರಾನ್ ಅಲ್ಲ, ಜೀವಕೋಶದ ಬಾಹ್ಯದ್ರವವೂ (ectoplasm) ಅಲ್ಲ. ಇವೆರಡರ ನಡುವಿನ ಸ್ಥಾನ ಅವುಗಳದ್ದು. ಅವಕ್ಕೆ ಜೀವ ಇದ್ದರೂ ಕೂಡ ಅವು ಏಕಕೋಶ ಜೀವಿಗಳೂ (protozoic) ಅಲ್ಲ. ಅಥವಾ ಜೀವಕೋಶಗಳು ಅಂಗಗಳಾಗಿ ವಿಂಗಡಣೆಗೊಳ್ಳುವಂಥವೂ (metazoic) ಅಲ್ಲ. ಜೀವೋದ್ಭವವಾಗಲು ಇಂಗಾಲದ ಕಣ ಇರಲೇಬೇಕೆನ್ನುವ ನಿಯಮ ಅವುಗಳಿಗೆ ಅನ್ವಯವಾಗದು. ಬದಲಿಗೆ ಲಕ್ಷಾಂತರ ಮೈಕ್ರೋವೈಟಾಗಳು ಸೇರಿ ಇಂಗಾಲದ ಅಣುವಿನ ಸೃಷ್ಟಿಯಾಗುತ್ತದೆ. ಮೈಕ್ರೋವೈಟಾಗಳ ಅಸ್ತಿತ್ವವನ್ನು ಅರಿಯಲು ಮಾನವನಿಗೆ ಸಾಧ್ಯವಿದೆ. ಆದರೆ ಅವುಗಳ ಉತ್ಪತ್ತಿಯ ಮೂಲ ಕಾರಣವನ್ನು ಕಂಡುಕೊಳ್ಳುವುದು, ಅವುಗಳನ್ನು ಸೃಷ್ಟಿಸುವುದು ಮಾನವನಿಗೆ ಸಾಧ್ಯವಾಗದು. ಆ ಕಾರಣಕ್ಕಾಗಿಯೇ ಮೈಕ್ರೋವೈಟಾವನ್ನು ವಿಶ್ವಶಕ್ತಿಯ ನಿಗೂಢ ಉದ್ಬವವೆಂದು ಶ್ರೀ ಸರ್ಕಾರರು ಹೇಳುತ್ತಾರೆ. ಮೈಕ್ರೋವೈಟಾಗಳ ಸೂಕ್ಷ್ಮತೆಯನ್ನು ಮೂರು ಹಂತಗಳಲ್ಲಿ ಗುರುತಿಸಲಾಗಿದೆ. ಮೊದಲನೆಯ ಹಂತವೆಂದರೆ ಬರಿಗಣ್ಣಿಗೆ ಕಾಣದ ಆದರೆ ಶಕ್ತಿಯುತ ಸೂಕ್ಷ್ಮದರ್ಶಕಗಳ (ಮೈಕ್ರೊಸ್ಕೋಪ್) ಮೂಲಕ ನೋಡಬಹುದಾದವು. ಇವುಗಳನ್ನು ವೈರಸ್ಗಳೆಂದು ಹೇಳಲಾಗುತ್ತದೆ. ವೈರಸ್ ಎಂಬ ಪದವು ಸ್ಪಷ್ಟತೆಯನ್ನು ಹೊಂದಿಲ್ಲದ ಕಾರಣಕ್ಕಾಗಿ ಮೈಕ್ರೋವೈಟಾ ಎಂಬ ಪದವನ್ನು ಬಳಸುವುದು ಸೂಕ್ತವೆಂಬುದು ಶ್ರೀ ಸರ್ಕಾರರ ಅಭಿಪ್ರಾಯ. ಎರಡನೆಯ ಹಂತದ ಮೈಕ್ರೋವೈಟಾಗಳು ಕಾರ್ಯವೈಖರಿ ಅಥವಾ ಅವು ಉಂಟುಮಾಡುವ ಪರಿಣಾಮದಿಂದಾಗಿ ಮಾನವನ ಗ್ರಹಿಕೆಗೆ ಬರುವಂಥವು ಅಂದರೆ ಅನುಭವ ವೇದ್ಯವಾಗುವಂಥವು. ಮೂರನೆಯ ಹಂತದ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಕೂಡ ಮಾನವನ ಗ್ರಹಿಕೆಯ ವ್ಯಾಪ್ತಿಯಲ್ಲೇ ಇರುತ್ತವಾದರೂ ಅದಕ್ಕಾಗಿ ವಿಶೇಷ ಅರಿವಿನ ಅಗತ್ಯವಿರುತ್ತದೆ. ಆಧ್ಯಾತ್ಮ ಸಾಧನೆಯಿಂದ ಮನಸ್ಸನ್ನು ವಿಕಾಸಗೊಳಿಕೊಂಡವರ ಕಲ್ಪನಾ ಶಕ್ತಿಯ ಅರಿವಿಗೆ ಈ ಅತಿ ಸೂಕ್ಷ್ಮ ಮೈಕ್ರೋವೈಟಾಗಳು ಬರುತ್ತವೆ. ಸೃಷ್ಟಿಗೆ ಪಂಚಭೂತಗಳು ಕಾರಣವೆಂದು ಹೇಳುತ್ತಾರೆ.ಅವುಗಳಲ್ಲಿ ಅತಿ ಸೂಕ್ಷ್ಮವಾದುದು ಆಕಾಶತತ್ವ. ಅದಕ್ಕಿಂತ ಸೂಕ್ಷ್ಮವಾದುದು ವಿಶ್ವಮನ. ಮೈಕ್ರೋವೈಟಾಗಳ ಸ್ಥಾನ ಇವೆರಡರ ನಡುವೆ ಇರುವುದರಿಂದ ಅವು ವಿಶ್ವದೆಲ್ಲೆಡೆ ಸಂಚರಿಸಬಲ್ಲವು. ಅವುಗಳ ಚಲನೆ ಬರೀ ಪೃಥ್ವಿಗೆ ಮಾತ್ರ ಸೀಮಿತವಾಗಿಲ್ಲ, ವಿವಿಧ ಗ್ರಹ, ಆಕಾಶ ಕಾಯಗಳು, ನಕ್ಷತ್ರ ಮಂಡಲ, ನಿಹಾರಿಕೆ ಮುಂತಾಗಿ ಇಡೀ ಬ್ರಹ್ಮಾಂಡವೇ ಮೈಕ್ರೋವೈಟಾಗಳ ತಾಣಗಳಾಗಿವೆ. ಮೈಕ್ರೋವೈಟಾಗಳು ಜೀವಿಗಳೇ ಆಗಿರುವುದರಿಂದ ಅವುಗಳಿಗೂ ಅಸ್ತಿತ್ವ, ಸಂಖ್ಯಾವೃದ್ಧಿ ಹಾಗೂ ಮರಣವಿದೆ.ಅವುಗಳ ಚಲನೆಗೆ ವಾಹಕದ ಅವಶ್ಯಕತೆ ಇದ್ದೇ ಇದೆ.ಕೆಲವು ಮೈಕ್ರೋವೈಟಾಗಳು ಏಕಕಾಲಕ್ಕೆ ವಿವಿಧ ವಾಹಕಗಳ ಮೂಲಕ ಚಲಿಸಬಲ್ಲವು. ರೂಪ, ಗಂಧ (ವಾಸನೆ/ಪರಿಮಳ), ಸ್ಪರ್ಶ, ಶಬ್ದಗಳು ಅವುಗಳ ಸಾಮಾನ್ಯ ವಾಹಕಗಳು. ಅತೀ ಸೂಕ್ಷ್ಮವಾದ ಮೈಕ್ರೊವೈಟಾಗಳು ವಿಚಾರಗಳ ಮೂಲಕ ಕೂಡ ಹರಡಬಲ್ಲವು. ಅಂದರೆ ಪ್ರಬಲವಾದ ಮಾನಸಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿಯ ವಿಚಾರಗಳ ಮೂಲಕ ವಿಶ್ವದ ವಿವಿಧೆಡೆಗೆ ಮೈಕ್ರೋವೈಟಾ ಪಸರಿಸಬಲ್ಲದು. ವಿಶ್ವದಲ್ಲಿ ಜೀವೋದ್ಭವಕ್ಕೆ ಇಂಗಾಲದ ಕಣಗಳೇ ಕಾರಣ ಎಂದು ವಿಜ್ಞಾನ ಹೇಳುತ್ತದೆ. ಆದರೆ ಮೈಕ್ರೋವೈಟಾಗಳೇ ಪ್ರಾಣಶಕ್ತಿ ಹಾಗೂ ಜೀವವಿಕಾಸದ ಮೂಲ ಕಾರಣವೆನ್ನುತ್ತಾರೆ ಶ್ರೀ ಸರ್ಕಾರ್. ದೇಹ ಮತ್ತು ಮನಸ್ಸಿನ ಸೃಷ್ಟಿಗೂ ಅವೇ ಕಾರಣವಾಗಿರುವುದರಿಂದ ವಿಶ್ವದ ಯಾವುದೇ ಭಾಗದಲ್ಲಿಯಾದರೂ ದೇಹ ಮತ್ತು ಮನಸ್ಸನ್ನು ನಾಶಪಡಿಸುವ ಶಕ್ತಿ ಅವಕ್ಕಿದೆ. ಮೈಕ್ರೋವೈಟಾಗಳು ಉಂಟುಮಾಡುವ ಪರಿಣಾಮಗಳನ್ನಾಧರಿಸಿ ಮೂರು ವಿಧಗಳು- ಋಣಾತ್ಮಕ, ಧನಾತ್ಮಕ ಹಾಗೂ ತಟಸ್ಥ. ಇವು ಮಾನವರ ಮೇಲೆ ವೈಯಕ್ತಿಕವಾಗಿ ಅಥವಾ ಸಾಮೂಹಿಕವಾಗಿ ಪರಿಣಾಮ ಬೀರಬಲ್ಲವು. ಸ್ಥೂಲ ಮೈಕ್ರೋವೈಟಾಗಳು ಭೌತಿಕ ಸ್ತರದಲ್ಲಿ ವಾಸಿಸುತ್ತವೆ. ಸೂಕ್ಷ್ಮವಾಗಿರುವವು ಮಾನಸಿಕ ಸ್ತರದಲ್ಲಿ ವಾಸಿಸಿದರೆ, ಸೂಕ್ಷ್ಮಾತಿಸೂಕ್ಷ್ಮವಾಗಿರುವವು ಮನಸ್ಸಿನ ಸೂಕ್ಷ್ಮ ಸ್ತರಗಳಲ್ಲಿ ವಾಸಿಸಬಲ್ಲವು. ಆದರೆ ಆಧ್ಯಾತ್ಮಿಕ ಸ್ತರದಲ್ಲಿ ಮೈಕ್ರೋವೈಟಾಗಳು ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿರುವುದಿಲ್ಲ. ಋಣಾತ್ಮಕ ಸ್ವಭಾವದ ಮೈಕ್ರೊವೈಟಾಗಳು ಮಾನವದೇಹವನ್ನು ಪ್ರವೇಶಿಸಿ ರೋಗಗ್ರಸ್ಥನನ್ನಾಗಿಸಬಲ್ಲವು. ಧನಾತ್ಮಕ ಸ್ವಭಾವದವುಗಳಿಂದ ಮಾನವನ ದೈಹಿಕ ಹಾಗೂ ಮಾನಸಿಕ ಉನ್ನತಿ ಸಾಧ್ಯವಾಗುತ್ತದೆ. ತಂತ್ರಶಾಸ್ತ್ರದನ್ವಯ ಮಾನವನ ದೇಹದಲ್ಲಿ ಇಡಾ, ಪಿಂಗಳ ಮತ್ತು ಸುಷುಮ್ನ ಎಂಬ ಮೂರು ನಾಡಿಗಳಿರುತ್ತವೆ. ಇವು ಪರಸ್ಪರವಾಗಿ ಸಂಧಿಸುವ ಸ್ಥಳವನ್ನು ಚಕ್ರ ಎನ್ನುತ್ತಾರೆ. ಹುಬ್ಬುಗಳ ನಡುವೆ ಇರುವ ಆಜ್ಞಾಚಕ್ರದ ಹೊರತಾಗಿ ಉಳಿದ ಚಕ್ರಗಳು ಕಶೇರುಕದಲ್ಲಿ ಇರುತ್ತವೆ. ತಂತ್ರಶಾಸ್ತ್ರದ ಈ ವಿಚಾರವನ್ನು ಆಧುನಿಕ ವೈದ್ಯಶಾಸ್ತ್ರ ಒಪ್ಪುವುದಿಲ್ಲ. ದೇಹಗಳನ್ನು ಕುಯ್ದು ವಿವಿಧ ಭಾಗಗಳನ್ನು ಪರೀಕ್ಷಿಸುವ ವೈದ್ಯರಿಗೆ ಅಂತಹ ಯಾವುದೇ ನಾಡಿಗಳು ಅಥವಾ ಚಕ್ರಗಳು ಕಂಡಿಲ್ಲ. ಅದರೆ ತಂತ್ರಸಾಧನೆಯ ಕುರಿತು ಅಭ್ಯಾಸ ಮಾಡುವವರು ಸೂಕ್ಷ್ಮರೂಪದಲ್ಲಿರುವ ಈ ಚಕ್ರ ಹಾಗೂ ನಾಡಿಗಳ ಅಸ್ತಿತ್ವ ತಮ್ಮ ದೇಹದಲ್ಲಿರುವುದನ್ನು ಅನುಭವಿಸಬಲ್ಲರು. ಮಾನವರಲ್ಲಿ ಪ್ರಮುಖವಾಗಿ ೫೦ ಪ್ರವೃತ್ತಿಗಳನ್ನು ಗುರುತಿಸಲಾಗಿದೆ. ಪ್ರತಿಚಕ್ರವೂ ನಿರ್ದಿಷ್ಟ ಪ್ರವೃತ್ತಿಯನ್ನು (ಉದಾ: ಧರ್ಮ, ಅರ್ಥ, ಕಾಮ, ಲಜ್ಜಾ, ಭಯ, ಈರ್ಷೆ, ಕ್ರೌರ್ಯ, ಆಸೆ, ಮಮತೆ, ಇತ್ಯಾದಿ) ನಿಯಂತ್ರಿಸುತ್ತದೆ. ನಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರಕ್ಕಿಂತ ಉನ್ನತ ಚಕ್ರಗಳ ಮೇಲೆ ಪರಿಣಾಮ ಬೀರಲಾರವು. ಅವುಗಳ ಪರಿಣಾಮವೇನಿದ್ದರೂ ಮೂಲಾಧಾರದಿಂದ ವಿಶುದ್ಧ ಚಕ್ರದವರೆಗಿನ ಐದು ಚಕ್ರಗಳ ಮೇಲೆ ಮಾತ್ರ. ಈ ಐದು ಚಕ್ರಗಳು ಪಂಚಭೂತ ತತ್ವಗಳನ್ನು ಪ್ರತಿನಿಧಿಸುವುದರಿಂದ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದರ ಪರಿಣಾಮದಿಂದಾಗಿ ಮನಸ್ಸಿಗೆ ಸಂಬಂಧಿಸಿದ ಆಜ್ಞಾ ಚಕ್ರವು ಅಪ್ರತ್ಯಕ್ಷವಾಗಿ ಪೀಡಿತವಾಗುವುದರಿಂದ ವ್ಯಕ್ತಿಯು ಹಲವು ವಿಧದ ಮಾನಸಿಕ ಖಾಯಿಲೆಗಳಿಗೆ ತುತ್ತಾಗುತ್ತಾನೆ. ಸಕಾರಾತ್ಮಕ ಮೈಕ್ರೋವೈಟಾಗಳು ಆಜ್ಞಾಚಕ್ರದ ಮೇಲೆ ಪರಿಣಾಮ ಬೀರುವುದರಿಂದಾಗಿ ಮಾನವರಲ್ಲಿ ಉನ್ನತ ವಿಚಾರಗಳು, ವಿಶಾಲ ಭಾವ, ಆಧ್ಯಾತ್ಮದಲ್ಲಿ ಆಸಕ್ತಿ ಮುಂತಾದವು ಮೂಡುತ್ತವೆ. ಈ ಧನಾತ್ಮಕತೆಯ ಪರಿಣಾಮದಿಂದಾಗಿ ದೇಹ ಕೂಡ ಆರೋಗ್ಯಪೂರ್ಣವಾಗಿರುತ್ತದೆ. ಮನುಷ್ಯನ ಭಾವನೆಗಳಿಗೆ ತಕ್ಕುದಾದ ಮೈಕ್ರೋವೈಟಾಗಳು ಆಕರ್ಷಿಸಲ್ಪಡುತ್ತವೆ. ಸ್ವಾರ್ಥ, ಸಂಕುಚಿತತೆ, ಅಸೂಯೆ, ನೀಚತನ, ಕ್ರೌರ್ಯ ಮುಂತಾದ ಹೀನ ಮನಸ್ಸಿನ ವ್ಯಕ್ತಿಯೆಡೆಗೆ ನಕಾರಾತ್ಮಕ ಮೈಕ್ರೋವೈಟಾ ಆಕರ್ಷಿಸಲ್ಪಡುತ್ತದೆ. ಇದೇ ತತ್ವ ಸಮುದಾಯಕ್ಕೆ ಕೂಡ ಅನ್ವಯವಾಗುತ್ತದೆ. ಇದರಿಂದಾಗಿ ಪರಸ್ಪರರಲ್ಲಿ ದ್ವೇಷ, ಅಪನಂಬಿಕೆ, ಶೋಷಣೆಗಳಿಗೆ ಕಾರಣವಾಗುತ್ತದೆ. ಧನಾತ್ಮಕ ಚಿಂತನೆಗಳು ಸಕಾರಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುತ್ತವೆ. ಇವು ವ್ಯಕ್ತಿ ಹಾಗೂ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯುತ್ತವೆ. ಈ ಹಿನ್ನೆಲೆಯಲ್ಲಿ ಇಂದಿನ ಕರೊನಾ ಸಮಸ್ಯೆಗೆ ಪರಿಹಾರವನ್ನು ಕಾಣಲು ಸಾಧ್ಯ. ಮೈಕ್ರೋವೈಟಾದ ಅತ್ಯಂತ ಸ್ಥೂಲ ರೂಪವಾಗಿರುವ ವೈರಸ್ಸನ್ನು ಔಷಧಗಳಿಂದ ಕೊಲ್ಲಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಔಷಧವು ದೇಹದ ನೋವನ್ನು ಕಡಿಮೆ ಮಾಡಬಲ್ಲದು ಅಷ್ಟೆ. ನಕಾರಾತ್ಮಕ ಮೈಕ್ರೋವೈಟಾಗಳ ನಿಯಂತ್ರಣದ ಒಂದು ವಿಧವೆಂದರೆ ಅವು ತಾನಾಗಿಯೇ ಸಾಯುವುದಕ್ಕಾಗಿ ಕಾಯುವುದು, ಇನ್ನೊಂದು ವಿಧವೆಂದರೆ ಸಕಾರಾತ್ಮಕ ಮೈಕ್ರೋವೈಟಾಗಳನ್ನು ಬಳಸುವುದು. ಮಾನವರಿಗೆ ಮೈಕ್ರೋವೈಟಾಗಳನ್ನು ಸೃಷ್ಟಿಸುವ ಶಕ್ತಿಯಿಲ್ಲ. ಆದರೆ ಅವುಗಳನ್ನು ಆಕರ್ಷಿಸುವ ಶಕ್ತಿಯಿದೆ. ಸಕಾರಾತ್ಮಕ ಹಾಗೂ ಆಧ್ಯಾತ್ಮಿಕ ಚಿಂತನೆಯಿಂದ ಮಾತ್ರ ಇದು ಸಾಧ್ಯ. ಸಾವಿನ ಭಯ ಬಿತ್ತುವ ಮಾಧ್ಯಮ ವರದಿಗಳು, ಜನರನ್ನು ಬಲವಂತವಾಗಿ ಪ್ರತ್ಯೇಕತೆಗೆ ತಳ್ಳುವ ಲಾಕ್ಡೌನ್ನಂತಹ ಕ್ರಮಗಳು, ಉದ್ಯೋಗವಿಲ್ಲದೇ; ಆಹಾರವೂ ಇಲ್ಲದೇ ನಾಳಿನ ಚಿಂತೆಯಿಂದ ಬಳಲುವಂತೆ ಮಾಡಿರುವುದರಿಂದ ಜನರಲ್ಲಿ ನಕಾರಾತ್ಮಕ ಭಾವನೆಯೇ ಹೆಚ್ಚಾಗುತ್ತದೆ. ಈಗಾಗಲೇ ಬೇರು ಬಿಟ್ಟಿರುವ ಸ್ವಾರ್ಥ ಅಸೂಯೆಗಳ ಜೊತೆಗೆ ಪರಿಸ್ಥಿತಿಯ ಪ್ರಭಾವವೂ ಸೇರಿ ಋಣಾತ್ಮಕ ಮೈಕ್ರೋವೈಟಾಗಳನ್ನು ಆಕರ್ಷಿಸುವುದು ಸಹಜ. ಇದರಿಂದಗಿ ವೈರಸ್ ಪ್ರಭಾವ ಇನ್ನಷ್ಟು ತೀವ್ರವಾಗಿ ಕಾಡಲಿದೆ. ಸ್ಪರ್ಶದಿಂದಲೇ ಪಸರಿಸುತ್ತದೆಂದು ನಂಬಲಾಗಿರುವ ಕೊರೊನಾ ವೈರಸ್, ಸೋಂಕಿತ ವ್ಯಕ್ತಿಗಳ ಸಂಪರ್ಕವೇ ಇಲ್ಲದವರಿಗೂ ತಗಲುತ್ತಿರುವುದು ಅವು ಹಲವು ಮಾಧ್ಯಮಗಳನ್ನು ಬಳಸಿ ಚಲಿಸಬಲ್ಲವು ಎಂಬ ವಿಚಾರಕ್ಕೆ ಪುಷ್ಠಿ ನೀಡುತ್ತದೆ. ಇಷ್ಟಕ್ಕೇ ತತ್ತರಿಸಿರುವ ಮಾನವ ಸಮಾಜ ಗಂಧ, ಶಬ್ಧ, ವಿಚಾರಗಳ ಮೂಲಕ ಪಸರಿಸಬಲ್ಲ ಮೈಕ್ರೋವೈಟಾಗಳಿಂದ ಪ್ರಭಾವಿತರಾಗುವ ಸಂದರ್ಭದ ಪರಿಣಾಮದ ಭೀಕರತೆ ಊಹೆಗೂ ನಿಲುಕದು. ಇದಕ್ಕೆಲ್ಲಾ ಪರಿಹಾರವೆಂದರೆ ಸಕಾರಾತ್ಮಕ ಚಿಂತನೆ. ನಾಳಿನ ಬದುಕಿನ ಭದ್ರತೆ ಹಾಗೂ ಭರವಸೆಯನ್ನು ಪ್ರತಿಯೋರ್ವ ವ್ಯಕ್ತಿಯಲ್ಲೂ ಮೂಡಿಸುವ ಸರ್ಕಾರದ ನಡೆ-ನುಡಿ- ಕಾರ್ಯಕ್ರಮಗಳು, ಭಯದ ವಾತಾವರಣವನ್ನು ದೂರ ಮಾಡುವುದು, ಸಕಾರಾತ್ಮಕ ಚಿಂತನೆಯ ಪ್ರೇರೇಪಣೆ ಆದ್ಯತೆ ಪಡೆಯಬೇಕು. ನಕಾರಾತ್ಮಕತೆ ಬೆಳೆಸುತ್ತಿರುವ ಹೊಣೆಗೇಡಿ ಮಾಧ್ಯಮಗಳ ಕಿವಿ ಹಿಂಡುವ ಕೆಲಸದ ಜೊತೆಗೆ, ಜನರಲ್ಲಿ ಅಂಧ ವಿಶ್ವಾಸ, ಮೂಢನಂಬಿಕೆ ಬೆಳೆಸುವ ಕಾರ್ಯಕ್ರಮಗಳಿಗೆ ತಡೆ ಹಾಕಿ; ಆತ್ಮವಿಶ್ವಾಸ ಬೆಳೆಸುವ, ಸಕಾರಾತ್ಮಕ ಚಿಂತನೆಗಳನ್ನು ಪ್ರೇರೇಪಿಸುವ ಕಾರ್ಯಕ್ರಮ ಬಿತ್ತರಿಸುವುದನ್ನು ಕಡ್ಡಾಯ ಮಾಡಬೇಕು. ಭಜನೆ, ಕೀರ್ತನೆ, ಜಪ, ಧ್ಯಾನಗಳಿಂದ ಸಕಾರಾತ್ಮಕ ಮೈಕ್ರೊವೈಟಾಗಳು ಆಕರ್ಷಿಸಲ್ಪಡುತ್ತವೆ. ಪಂಚವಟಿ (ಬೇವು, ಬಿಲ್ವ, ಶಾಲ್ಮಲಿ, ಆಲ, ಅಶ್ವಥ್ಥ, ಕೆಲವೊಮ್ಮೆ ನೆಲ್ಲಿ ಗಿಡಗಳ ಸಮೂಹ) ಯಲ್ಲಿ ಕೆಲ ಸಮಯ ಕಾಲ ಕಳೆಯುವುದು ದೈಹಿಕ, ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು; ಯಾಕೆಂದರೆ ಇವು ಸಕಾರಾತ್ಮಕ ಮೈಕ್ರೋವೈಟಾವನ್ನು ಆಕರ್ಷಿಸುತ್ತವೆ. ವಿಜ್ಞಾನದ ಮೂಲ ನಂಬಿಕೆಗಳಿಗೇ ಸವಾಲು ಎಸೆದಿರುವ, ವಿಜ್ಞಾನದ ಕ್ಷಿತಿಜವನ್ನು ವಿಸ್ತರಿಸುವ ಮೈಕ್ರೊವೈಟಾ ಕುರಿತಾದ ಸಂಶೋಧನೆಗಳಿಂದಾಗಿ ಇಂದಿನ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮುಂತಾದವುಗಳಲ್ಲಿ ಮಹತ್ತರ ಬದಲಾವಣೆಗಳಾಗಿವೆ. ಅರ್ಥಶಾಸ್ತ್ರದ ಸಂಪನ್ಮೂಲಗಳ ಕಲ್ಪನೆಯ ವಿಸ್ತಾರವು ಇಂದಿನ ತಜ್ಞರು ಊಹಿಸಲಾರದಷ್ಟು ಹಿಗ್ಗಲಿದೆ. ಇಡೀ ಮಾನವ ಸಮಾಜ ನೈಜ ಪ್ರಗತಿಯ ದಾರಿಯಲ್ಲಿ ಮುನ್ನಡೆಯಲಿದೆ. *********
