ಅಂಕಣ ಬರಹ ಬಸ್ ಸ್ಟ್ಯಾಂಡೆನ್ನುವ ಮಾಯಾಲೋಕ ಚಲನೆ ಎನ್ನುವ ಪದದ ನಿಜವಾದ ಅರ್ಥವೇನೆಂದು ತಿಳಿಯಬೇಕಾದರೆ ಈ ಬಸ್ ಸ್ಟ್ಯಾಂಡಿನಲ್ಲಿ ಅರ್ಧ ಗಂಟೆ ಸುಮ್ಮನೆ ನಿಂತುಬಿಡಬೇಕು; ಅವಸರದಲ್ಲಿ ಅತ್ತಿತ್ತ ಓಡಾಡುತ್ತ ಬೋರ್ಡು ಹುಡುಕುವವರನ್ನು, ಕಂಟ್ರೋಲ್ ರೂಮಿನಿಂದ ಅಶರೀರವಾಣಿಯಂತೆ ಮೊಳಗುವ ಅನೌನ್ಸ್‌ಮೆಂಟಿಗೆ ಬ್ಯಾಗನ್ನೆತ್ತಿಕೊಂಡು ಬಸ್ಸಿನೆಡೆಗೆ ಓಡುವವರನ್ನು, ಒಂದು ನಿಮಿಷವೂ ಆಚೀಚೆಯಾಗದಂತೆ ಅದೆಲ್ಲಿಂದಲೋ ಓಡಿಬಂದು ಹೊರಡುತ್ತಿರುವ ಬಸ್ಸನ್ನು ಹತ್ತಿಕೊಳ್ಳುವವರನ್ನು ಸಹನೆಯಿಂದ ಗಮನಿಸಬೇಕು! ಬಸ್ಸಿನ ಹಾಗೂ ಅದರ ಚಲನೆಯ ಹೊರತಾಗಿ ಬೇರಾವ ವಿಷಯಗಳೂ ಆ ಕ್ಷಣದ ಅಲ್ಲಿನ ಬದುಕುಗಳ ಎಣಿಕೆಗೆ ಸಿಕ್ಕುವುದಿಲ್ಲ. ಭೂಮಿ ಸೂರ್ಯನನ್ನು ಪರಿಭ್ರಮಿಸುವ, ಇನ್ಯಾವುದೋ ಉಪಗ್ರಹವೊಂದು ಭೂಮಿಯನ್ನು ಸುತ್ತುತ್ತಿರುವ ಯಾವುದೇ ನಿರ್ಣಯಾತ್ಮಕ ತತ್ವಗಳಿಗೆ ಒಳಪಡದ ಸರಳವಾದ ಚಲನೆಯ ಸಿದ್ಧಾಂತವೊಂದು ಬಸ್ಸಿನ ಅಸ್ತಿತ್ವದೊಂದಿಗೆ ನಿರ್ಣಯಿಸಲ್ಪಡುತ್ತದೆ. ಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ತಲುಪಿತು, ಅದರ ಬೋರ್ಡು ಯಾವಾಗ ಬದಲಾಯಿತು, ಅದರ ನಿರ್ಗಮನಕ್ಕೆ ನಿಗದಿಯಾದ ಅವಧಿಯೇನು ಹೀಗೆ ಸಮಯದ ಸುತ್ತ ಸುತ್ತುವ ಮಾಹಿತಿಗಳೇ ಅತ್ತಿತ್ತ ಸುಳಿದು ಚಲನೆಯ ದಿಕ್ಕುಗಳನ್ನು ನಿರ್ಧರಿಸುತ್ತಿರುತ್ತವೆ. ಅಂತಹ ನಿರ್ಣಾಯಕ ಹಂತದಲ್ಲಿ ಬಸ್ ಸ್ಟ್ಯಾಂಡೊಂದು ಪುಟ್ಟ ಗ್ರಹದಂತೆ ಗೋಚರವಾಗಿ, ತನ್ನ ನಿಯಮಗಳಿಗನುಸಾರವಾಗಿ ಬದುಕುಗಳ ಚಲನೆಯ ಬೋರ್ಡನ್ನು ಬದಲಾಯಿಸುತ್ತಿರುವಂತೆ ಭಾಸವಾಗುತ್ತದೆ. ನಾನು ಬಸ್ಸಿಗಾಗಿ ಕಾಯುತ್ತ ನಿಂತಿರುತ್ತಿದ್ದ ಕಾಲದಲ್ಲಿ ಈ ಬಸ್ಸಿನ ಬೋರ್ಡುಗಳೆಡೆಗೆ ನನಗೊಂದು ವಿಚಿತ್ರವಾದ ಕುತೂಹಲವಿತ್ತು. ಬೋರ್ಡೇ ಇರದ ಬಸ್ಸೊಂದು ತುಂಬಾ ಸಮಯದಿಂದ ಸ್ಟ್ಯಾಂಡಿನಲ್ಲಿಯೇ ನಿಂತಿದೆಯೆಂದರೆ ಅದು ಡಿಪೋಗೆ ಹೋಗುವ ಬಸ್ಸು ಎಂದು ಅದ್ಹೇಗೋ ತೀರ್ಮಾನವಾಗಿ ಆ ಬಸ್ಸಿನ ನಂಬರನ್ನಾಗಲೀ, ಅದರ ಆಗುಹೋಗುಗಳನ್ನಾಗಲೀ ಯಾರೂ ಗಮನಿಸುತ್ತಲೇ ಇರಲಿಲ್ಲ; ಡ್ರೈವರೊಬ್ಬ ಆ ಬಸ್ಸಿನೆಡೆಗೆ ನಡೆದುಕೊಂಡು ಹೋಗುತ್ತಿದ್ದರೂ ಅಲ್ಲಿರುವ ಯಾರ ಗಮನವೂ ಅದರ ಕಡೆಗೆ ಹರಿಯುತ್ತಿರಲಿಲ್ಲ. ಅದೇ ಬೋರ್ಡು ಹಾಕುವವ ಬಸ್ಸಿನೆಡೆಗೆ ಚಲಿಸಿದಾಗ ಮಾತ್ರ ಅಲ್ಲಿರುವವರೆಲ್ಲರ ದೃಷ್ಟಿಯೂ ಅವನನ್ನೇ ಅನುಸರಿಸುತ್ತ ತೀಕ್ಷ್ಣವಾಗತೊಡಗುತ್ತಿತ್ತು. ಅಷ್ಟು ಹೊತ್ತು ಅಲ್ಲಿಯೇ ನಿಂತಿರುತ್ತಿದ್ದ ಬಸ್ಸಿನ ಅಸ್ತಿತ್ವಕ್ಕೊಂದು ಬೆಲೆಯೇ ಇಲ್ಲದಂತೆ ಭಾಸವಾಗಿ, ನಾಲ್ಕಾರು ಅಕ್ಷರಗಳ ಬೋರ್ಡೊಂದು ನಿಮಿಷಾರ್ಧದಲ್ಲಿ ಅದರ ಇರುವಿಕೆಯ ಸ್ವರೂಪವನ್ನು ಬದಲಾಯಿಸಿಬಿಡುವುದನ್ನು ನೋಡಿ ನನಗೆ ಆಶ್ಚರ್ಯವಾಗುತ್ತಿತ್ತು. ಈ ಬೋರ್ಡುಗಳೆಲ್ಲ ಅದ್ಯಾವ ಫ್ಯಾಕ್ಟರಿಯಲ್ಲಿ ತಯಾರಾಗಬಹುದು, ಅದರ ಮೇಲೆ ಅಕ್ಷರಗಳನ್ನು ಬರೆಯುವವ ಯಾವ ಊರಿನವನಾಗಿರಬಹುದು, ತಾನೇ ಬರೆದ ಬೋರ್ಡನ್ನು ಹೊತ್ತು ಹೊರಡಲು ರೆಡಿಯಾದ ಬಸ್ಸನ್ನೇರುವಾಗ ಅವನ ಮನಸ್ಸಿನ ಭಾವನೆಗಳೇನಿರಬಹುದು ಎನ್ನುವಂತಹ ವಿಚಿತ್ರವಾದ ಆಲೋಚನೆಗಳೂ ಆಗಾಗ ಸುಳಿಯುತ್ತಿದ್ದವು. ಕಂಟ್ರೋಲ್ ರೂಮಿನ ಪಕ್ಕ ಒಂದಕ್ಕೊಂದು ಅಂಟಿಕೊಂಡು ನಿಂತಿರುತ್ತಿದ್ದ ಬೋರ್ಡುಗಳಲ್ಲಿ ತನಗೆ ಬೇಕಾಗಿದ್ದನ್ನು ಮಾತ್ರ ಎತ್ತಿಕೊಂಡು ವಿಚಿತ್ರವಾದ ಗತ್ತಿನಲ್ಲಿ ಓಡಾಡುತ್ತಿದ್ದ ಬೋರ್ಡು ಹಾಕುವವನೇ ಸ್ಟ್ಯಾಂಡಿನಲ್ಲಿ ಕಾಯುತ್ತಿರುವವರೆಲ್ಲರ ಬದುಕಿನ ಚಲನೆಯನ್ನು ನಿರ್ಧರಿಸುತ್ತಿರುವಂತೆ ಭಾಸವಾಗುತ್ತಿತ್ತು. ಈ ಕಂಟ್ರೋಲ್ ರೂಮ್ ಎನ್ನುವುದೊಂದು ಮಾಯಾಲೋಕದ ಕಲ್ಪನೆಯನ್ನು ಕಣ್ಣೆದುರು ತೆರೆದಿಡುವ ಜಾಗ. ಅಸಾಧಾರಣವಾದ ಲವಲವಿಕೆಯ ಆ ಸ್ಥಳದಲ್ಲಿ ನಡೆಯುವ ಮಾತುಕತೆಗಳು, ಅದ್ಯಾವುದೋ ಗುರುತು-ಪರಿಚಯಗಳಿಲ್ಲದ ಊರಿನಲ್ಲಿ ಸಂಜೆಯ ಹೊತ್ತು ನಡೆದ ಘಟನೆಗಳನ್ನು ತಮ್ಮದಾಗಿಸಿಕೊಂಡ ಜೋಕುಗಳು, ಬಸ್ಸಿನ ಆಗಮನವನ್ನೇ ಕಾಯುತ್ತಿರುವಂತೆ ತೋರುವ ಬಾಯಿಪಾಠದಂತಹ ಅನೌನ್ಸ್‌ಮೆಂಟುಗಳು ಎಲ್ಲವೂ ಸೇರಿಕೊಂಡು ಅಲ್ಲೊಂದು ವಿಶಿಷ್ಟವಾದ ಜೀವಂತಿಕೆಯ ಸಂವಹನವೊಂದು ಪ್ರತಿನಿಮಿಷವೂ ಹುಟ್ಟಿಕೊಳ್ಳುತ್ತಿರುತ್ತದೆ. ರೂಮಿನ ಒಳಹೋಗುತ್ತಿರುವ ಡ್ರೈವರಿನೊಂದಿಗೆ ಹೊರಬರುತ್ತಿರುವ ಕಂಡಕ್ಟರ್ ಒಬ್ಬ ಮುಖಾಮುಖಿಯಾಗಿ, ಬಾಗಿಲಿನಲ್ಲಿ ನಗುವೊಂದರ ವಿನಿಮಯವಾಗಿ, ಯಾರೋ ನಿರ್ಧರಿಸಿದ ಚಲನೆಯೊಂದು ಪರಿಚಯವೇ ಇಲ್ಲದ ಇಬ್ಬರ ನಗುವಿನಲ್ಲಿ ಸಂಧಿಸುತ್ತಿರುವಂತೆ ಅನ್ನಿಸುತ್ತದೆ. ಬೆಂಚಿನ ಮೇಲೆ ಬಸ್ಸಿಗಾಗಿ ಕಾಯುತ್ತ ಕುಳಿತಿದ್ದ ಶಾಲೆಗೆ ಹೋಗುವ ಮಗುವೊಂದು ಎದ್ದುಬಂದು, ಕಂಟ್ರೋಲ್ ರೂಮಿನ ಸರಳುಗಳನ್ನು ಹಿಡಿದುಕೊಂಡು ತಲೆ ಮೇಲೆತ್ತಿ ಬಸ್ಸಿನ ನಂಬರನ್ನು ವಿಚಾರಿಸುವಾಗಲೆಲ್ಲ ಕಾರಣವಿಲ್ಲದೆ ಆ ಮಗುವಿನ ಮೇಲೊಂದು ಪ್ರೀತಿ ಹುಟ್ಟಿಕೊಳ್ಳುತ್ತದೆ. ಪಡ್ಡೆ ಹುಡುಗರೆಡೆಗೆ ಒಂದು ಅಸಡ್ಡೆಯನ್ನು ತೋರಿಸುವ ಕಂಟ್ರೋಲ್ ರೂಮಿನ ಯಜಮಾನ ಮಗುವಿನ ಪ್ರಶ್ನೆಗೆ ನಗುನಗುತ್ತ ಉತ್ತರಿಸುವಾಗ, ಸರಳುಗಳ ಒಳಗೆ ಕುಳಿತೇ ಇರುವ ಮಾನವೀಯ ಧ್ವನಿಯೊಂದು ಸರಳುಗಳಾಚೆ ಹರಿದು ಕಾಯುವಿಕೆಯ ಅಸಹನೆಗಳೆಲ್ಲವನ್ನೂ ಕಡಿಮೆ ಮಾಡುತ್ತದೆ. ಬಾಗಿಲನ್ನೇ ಮುಚ್ಚದ ಕಂಟ್ರೋಲ್ ರೂಮಿನ ಗೋಡೆಯ ಮೇಲಿನ ದೊಡ್ಡ ಗಡಿಯಾರವೊಂದು ಬಾಗಿಲಿನಲ್ಲಿ, ಮೈಕಿನಲ್ಲಿ, ಸರಳುಗಳ ಸಂದಿಗಳಲ್ಲಿ ಸಂಧಿಸುವ ಸಂವಹನಗಳ ಸಮಯವನ್ನು ತನ್ನದಾಗಿಸಿಕೊಳ್ಳುತ್ತ ಚಲಿಸುತ್ತಲೇ ಇರುತ್ತದೆ. ಬಸ್ ಸ್ಟ್ಯಾಂಡೊಂದು ತನ್ನೊಳಗಿನ ಚುರುಕುತನವನ್ನು ಕಂಪೌಂಡಿನಾಚೆಯೂ ವಿಸ್ತರಿಸಿಕೊಳ್ಳುವ ರೀತಿ ಅಚ್ಚರಿ ಹುಟ್ಟಿಸುವಂಥದ್ದು. ನಾಲ್ಕೇ ಅಡಿಗಳ ಜಾಗದಲ್ಲಿ ಅಕ್ಕಪಕ್ಕದವರಿಗೆ ಒಂದು ಹನಿಯೂ ಸಿಡಿಯದಂತೆ ಎಳನೀರು ಕತ್ತರಿಸುವವನ ಪಕ್ಕದ ಮೂರಡಿಯಲ್ಲಿ ಹೂ ಮಾರುವವನ ಬುಟ್ಟಿ, ಹಣ್ಣಿನ ಅಂಗಡಿಯೊಂದಿಗೆ ಅಂಟಿಕೊಂಡಂತೆ ಕಾಣುವ ಜ್ಯೂಸ್ ಪಾರ್ಲರು, ಜೊತೆಗೊಂದು ಬೀಡಾ ಅಂಗಡಿಯ ರೇಡಿಯೋ ಸೌಂಡು, ಸಂಜೆಯಾಗುತ್ತಿದ್ದಂತೆ ಬೇಕರಿಯ ಗಾಜಿನ ಬಾಕ್ಸುಗಳ ಮೇಲೆ ಹಾಜರಾಗುವ ಬೋಂಡಾ-ಬಜ್ಜಿಗಳೆಲ್ಲವೂ ಬಸ್ ಸ್ಟ್ಯಾಂಡಿನ ಲೋಕದೊಂದಿಗೆ ಒಂದಾಗಿಹೋಗಿ ಸೌಂದರ್ಯಪ್ರಜ್ಞೆಯ ಹೊಸದೊಂದು ಪರಿಕಲ್ಪನೆಯನ್ನು ಹುಟ್ಟುಹಾಕುತ್ತವೆ. ಬಸ್ಸಿನ ಓಡಾಟದಿಂದಾಗಿ ನೆಲಬಿಟ್ಟು ಮೇಲೆದ್ದ ಬೇಸಿಗೆಯ ಧೂಳಾಗಲೀ, ಮಳೆಗಾಲದ ರಾಡಿಯಾಗಲೀ, ಬೇಕರಿಯ ಚಹಾದ ಕಪ್ಪನ್ನು ಮುತ್ತಿಕೊಳ್ಳುವ ನೊಣಗಳಾಗಲೀ ಆ ಸೌಂದರ್ಯದ ಭಾವವನ್ನು ಕೊಂಚವೂ ಅಲ್ಲಾಡಿಸುವುದಿಲ್ಲ. ಬೇಕರಿಯೆದುರು ನಿಂತಿರುವ ಕಾಲೇಜು ಹುಡುಗರ ಗ್ಯಾಂಗೊಂದು ಜ್ಯೂಸು ಕುಡಿಯುತ್ತಿರುವ ಹುಡುಗಿಯರೆಡೆಗೆ ಕಳ್ಳದೃಷ್ಟಿ ಬೀರುವ ಅಪ್ರತಿಮ ನೋಟಕ್ಕೆ ಸಾಲುಸಾಲು ಅಂಗಡಿಗಳ ಪಕ್ಕದಲ್ಲಿ ನಿಧಾನವಾಗಿ ಚಲಿಸುವ ಬಸ್ಸು ಸಾಕ್ಷಿಯಾಗುತ್ತದೆ. ಆ ಸಾಲು ಅಂಗಡಿಗಳ ನಡುವೆಯೇ ಅಲ್ಲೊಂದು ಇಲ್ಲೊಂದು ಪ್ರೇಮವೂ ಮೊಳಕೆಯೊಡೆದು ಕಳ್ಳಹೆಜ್ಜೆಗಳನ್ನಿಡುತ್ತ ಬಸ್ ಸ್ಟ್ಯಾಂಡಿನೆಡೆಗೆ ಚಲಿಸುತ್ತದೆ. ಹಾಗೆ ಚಿಗುರಿದ ಒಲವೊಂದು ಅದೇ ಬಸ್ ಸ್ಟ್ಯಾಂಡಿನ ಬೆಂಚುಗಳ ಮೇಲೆ ಬೆಳೆದು, ಬದಲಾದ ಬೋರ್ಡಿನ ಬಸ್ಸನ್ನೇರಿ ತಂಟೆ-ತಕರಾರುಗಳಿಲ್ಲದೆ ಊರು ಸೇರಿ ಬೇರೂರುತ್ತದೆ. ಈ ಬಸ್ ಸ್ಟ್ಯಾಂಡುಗಳಲ್ಲಿ ಹುಟ್ಟಿಕೊಳ್ಳುವ ಅನುಬಂಧಗಳ ಬಗ್ಗೆ ವಿಚಿತ್ರವಾದ ಆಸಕ್ತಿಯೊಂದು ನನ್ನಲ್ಲಿ ಈಗಲೂ ಉಳಿದುಕೊಂಡಿದೆ. ಸ್ಟ್ಯಾಂಡಿಗೆ ಬಂದ ಪ್ರತಿಯೊಂದು ವಿದ್ಯಾರ್ಥಿಯನ್ನೂ ಸಮಯಕ್ಕೆ ಸರಿಯಾಗಿ ಕಾಲೇಜು ತಲುಪಿಸುವುದು ತಮ್ಮ ಗುರುತರವಾದ ಜವಾಬ್ದಾರಿಯೆನ್ನುವಂತೆ ಹಾಜರಾಗುತ್ತಿದ್ದ ಸಿಟಿ ಬಸ್ಸಿನ ಡ್ರೈವರು-ಕಂಡಕ್ಟರುಗಳನ್ನು ಕಂಡಾಗ ಆಗುತ್ತಿದ್ದ ನೆಮ್ಮದಿ-ಸಮಾಧಾನಗಳ ಅನುಭವವನ್ನು ಜಗತ್ತಿನ ಬೇರಾವ ಸಂಗತಿಯೂ ದೊರಕಿಸಿಕೊಟ್ಟ ನೆನಪಿಲ್ಲ. ಬಸ್ಸಿಗಾಗಿ ಕಾಯುತ್ತಿದ್ದ ಸಮಯದಲ್ಲಿ ಡಿಪೋಗೆ ಹೋಗಲೆಂದು ನಿಂತಿರುತ್ತಿದ್ದ ಖಾಲಿ ಬಸ್ಸಿನೊಳಗೆ ಕುಳಿತು, ಬೇರೆ ಕಾಲೇಜಿನ ಹುಡುಗಿಯರೊಂದಿಗೆ ಮಾಡುತ್ತಿದ್ದ ಕಾಲಕ್ಷೇಪದ ಮಾತುಕತೆಯ ಭಾಗವಾಗುತ್ತಿದ್ದ ಹುಡುಗರ ಚಹರೆಗಳು ನೆನಪಿನಿಂದ ಮರೆಯಾಗುವುದಿಲ್ಲ. ಆ ಗ್ಯಾಂಗಿನಲ್ಲಿದ್ದ ಹುಡುಗನೊಬ್ಬನ ಮೇಲೆ ಚಿಕ್ಕದೊಂದು ಪ್ರೇಮವೂ ಹುಟ್ಟಿ, ಆತನ ಬಸ್ಸು ಹೊರಟುಹೋಗುವ ಸಮಯದಲ್ಲಿ ಕದ್ದುನೋಡುತ್ತಿದ್ದಾಗ, ಅಚಾನಕ್ಕಾಗಿ ಆತನೂ ತಿರುಗಿನೋಡಿ ಸೃಷ್ಟಿಯಾಗುತ್ತಿದ್ದ ನೈಜವಾದ ರೋಮಾಂಚಕ ದೃಶ್ಯವೊಂದು ಯಾವ ಸಿನೆಮಾದಲ್ಲಿಯೂ ಕಾಣಿಸಿಕೊಂಡಿಲ್ಲ. ಹೊಟೆಲಿನ ಎಸಿ ರೂಮಿನಲ್ಲಿ ಕುಳಿತು ದೋಸೆ ತಿನ್ನುವಾಗಲೆಲ್ಲ ಬಸ್ ಸ್ಟ್ಯಾಂಡಿನ ಕ್ಯಾಂಟೀನಿನಲ್ಲಿ ಮಸಾಲೆದೋಸೆ ತಿನ್ನುವ ಆಸೆಯೊಂದು ಆಸೆಯಾಗಿಯೇ ಉಳಿದುಹೋದದ್ದು ನೆನಪಾಗಿ, ತಿನ್ನುತ್ತಿರುವ ದೋಸೆಯ ರುಚಿ ಹೆಚ್ಚಿದಂತೆ ಅನ್ನಿಸುವುದೂ ಸುಳ್ಳಲ್ಲ. ಪ್ರತಿದಿನ ಬೆಳಗ್ಗೆ ರಸ್ತೆಯಲ್ಲಿ ತರಕಾರಿ ಮಾರುವವನ ಧ್ವನಿವರ್ಧಕದಲ್ಲಿ ತರಕಾರಿಯ ಹೆಸರುಗಳನ್ನು ಕೇಳುವಾಗಲೆಲ್ಲ, ಕಂಟ್ರೋಲ್ ರೂಮಿನ ಮೈಕಿನಿಂದ ಹೊರಬರುತ್ತಿದ್ದ ಊರಿನ ಹೆಸರುಗಳೆಲ್ಲ ಒಂದೊಂದಾಗಿ ನೆನಪಾಗುತ್ತವೆ. ಆ ಹೆಸರುಗಳನ್ನು ಹೊತ್ತ ಬೋರ್ಡುಗಳೆಲ್ಲ ಡಿಪೋದಿಂದ ಸ್ಟ್ಯಾಂಡಿಗೆ ಬರುವ ಫಸ್ಟ್ ಬಸ್ಸುಗಳಿಗಾಗಿ ಕಾಯುತ್ತಿರಬಹುದು ಎನ್ನುವ ಯೋಚನೆಯೊಂದು ಹಾದುಹೋಗಿ, ಮಾಯಾಲೋಕದಂತಹ ಬಸ್ ಸ್ಟ್ಯಾಂಡಿನ ಸಹಜಸುಂದರ ನೆನಪನ್ನು ನನ್ನದಾಗಿಸಿಕೊಳ್ಳುತ್ತೇನೆ. ************************************************* ಇದು ಈಅಂಕಣದ ಕೊನೆಯ ಕಂತು – ಅಂಜನಾ ಹೆಗಡೆ ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
ಅಂಕಣ ಬರಹ ಹಲವು ಬಣ್ಣಗಳನ್ನು ಹೊತ್ತ ಭಾವನೆಗಳ ಕೋಲಾಜ್ ಆಕಾಶಕ್ಕೆ ಹಲವು ಬಣ್ಣಗಳು (ಗಜಲ್ ಸಂಕಲನ)ಕವಿ- ಸಿದ್ಧರಾಮ ಹೊನ್ಕಲ್ಬೆಲೆ-೧೩೦/-ಪ್ರಕಾಶನ- ಸಿದ್ಧಾರ್ಥ ಎಂಟರ್‍ಪ್ರೈಸಸ್ ಇಲ್ಲಿ ಕತ್ತಲೆ ಕಳೆದು ಬೆಳಕು ಮೂಡಿಸಿದವರೆ ಸಂತ ಸೂಫಿಗಳು ಬಸವಾದಿ ಶರಣರು ಸಾಕಿ ಎನ್ನುತ್ತ ತಮ್ಮ ನೆಲದ ಗಟ್ಟಿ ದನಿಗಳನ್ನು ಉಲ್ಲೇಖಿಸಿ ಗಜಲ್‌ಲೋಕಕ್ಕೆ ಬಂದಿರುವ ಕವಿ ಸಿದ್ಧರಾಮ ಹೊನ್ಕಲ್ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಾ ಹಳಬರು. ಕಥೆ, ಕವನ, ಪ್ರವಾಸ ಕಥನ, ಪ್ರಬಂಧಗಳು ಹೀಗೆ ಹತ್ತಾರು ಪ್ರಕಾರಗಳಲ್ಲಿ ಕೈಯಾಡಿಸಿರುವ ಸಿದ್ಧರಾಮ ಹೊನ್ಕಲ್ ತಮ್ಮದೇ ನೆಲದ ಗಜಲ್‌ನ್ನು ಆತುಕೊಳ್ಳಲು ಇಷ್ಟು ತಡಮಾಡಿದ್ದೇಕೆ ಎಂದು ನಾನು ಬಹಳ ಸಲ ಯೋಚಿಸಿದ್ದೇನೆ. ಉತ್ತರ ಕರ್ನಾಟಕದ ಮಣ್ಣಿನಲ್ಲೇ ಹಾಸಿಕೊಂಡಿರುವ ಗಜಲ್‌ಗೆ ಒಲಿಯದವರೇ ಇಲ್ಲ. ಗಜಲ್‌ನ ಶಕ್ತಿಯೇ ಅಂತಹುದ್ದು. ಗಜಲ್‌ನ ಜೀವನ ಪ್ರೀತಿಯೇ ಹಾಗೆ. ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಸಮಷ್ಠಿ ಅದು. ಜಿಂಕೆಯ ಆರ್ತನಾದದ, ಮನದ ಮಾತುಗಳನ್ನು ನವಿರಾಗಿ ಹೇಳುವ, ಗೇಯತೆಯೊಂದಿಗೆ ಸಕಲರನ್ನು ಸೆಳೆದಿಟ್ಟುಕೊಳ್ಳುವ ಗಜಲ್ ಎನ್ನುವ ಮೋಹಪಾಶ ಹಾಗೆ ಯಾರನ್ನೂ ಬಿಡುವುದಿಲ್ಲ. ಇಲ್ಲಿ ಸಿದ್ಧರಾಮ ಹೊನ್ಕಲ್ ಆಕಾಶದ ಹಲವು ಬಣ್ಣಗಳನ್ನು ತಮ್ಮ ಪುಸ್ತಕದಲ್ಲಿ ಹಿಡಿದಿಟ್ಟುಕೊಂಡು ನಮ್ಮೆದುರಿಗೆ ನಿಂತಿದ್ದಾರೆ. ಒಂದು ಹಂತಕೆ ಬರುವವರೆಗೆ ಯಾರೂ ಗುರ್ತಿಸುವುದಿಲ್ಲಹಾಗಾಗಿ ಯಾರ ಮೆಚ್ಚುಗೆಗಾಗಿ ಕಾಯಬೇಡಎಂದು ತಮಗೆ ತಾವೇ ಹೇಳಿಕೊಂಡಂತೆ ಗಜಲ್ ಲೋಕದಲ್ಲಿ ಗುರುತಿಸಿಕೊಳ್ಳುವುದು ಅಷ್ಟೇನು ಸುಲಭದ್ದಾಗಿರಲಿಲ್ಲ ಎನ್ನುವ ವೈಯಕ್ತಿಕ ಮಾತಿನ ಜೊತೆಗೇ ಸಾಮಾಜಿಕ ಸತ್ಯವೊಂದನ್ನು ನಾಜೂಕಾಗಿ ಹೇಳಿಬಿಡುತ್ತಾರೆ. ಯಾವುದೇ ಒಂದು ಕ್ಷೇತ್ರವಿರಲಿ ಆರಂಭದಲ್ಲಿ ಯಾರು ಗುರುತಿಸುತ್ತಾರೆ ಹೇಳಿ? ಅದು ಸಾಹಿತ್ಯ ಕ್ಷೇತ್ರವಿರಬಹುದು, ಕ್ರೀಡೆಯಾಗಿರಬಹುದು ಅಥವಾ ಇನ್ಯಾವುದೇ ವಲಯದಲ್ಲಾಗಿರಬಹುದು. ಒಂದು ವ್ಯಕ್ತಿಯನ್ನು ಗುರುತಿಸಲು ಹಲವಾರು ವರ್ಷಗಳ ಕಾಲ ಕಾಯಬೇಕು. ಒಂದು ಹಂತಕ್ಕೆ ಬಂದಮೇಲೆ ತಾನೇ ತಾನಾಗಿ ಎಲ್ಲರಿಂದ ಗುರುತಿಸಲ್ಪಟ್ಟರೂ ಆರಂಭದಲ್ಲಿ ಮೂಲೆಗುಂಪಾಗುವುದು ಸಹಜ. ಹೀಗಾಗಿ ಯಾರ ಮೆಚ್ಚುಗೆಗಾಗಿ ಕಾಯುವ ಅಗತ್ಯವಿಲ್ಲ. ನಮ್ಮ ಆತ್ಮಬಲವೇ ನಮ್ಮನ್ನು ಕಾಪಾಡಬೇಕು ಎಂಬ ಮಾತು ಎಲ್ಲರಿಗೂ ಅನ್ವಯಿಸುವ ಮಾತು. ಗಜಲ್ ಹಾಗೆ ಎಲ್ಲ ಭಾವಗಳನ್ನು ತನ್ನೊಳಗೆ ಬಿಟ್ಟುಕೊಳ್ಳುವುದಿಲ್ಲ. ಅದಕ್ಕೆ ಅದರದ್ದೇ ಆದ ಹತ್ತಾರು ನಿಯಮಗಳಿವೆ. ತನ್ನದೇ ಆದ ಸಿದ್ಧ ಮಾದರಿಯ ಭಾವಗಳಿವೆ. ಪ್ರೀತಿ ಪ್ರೇಮ ಕ್ಕೆ ಒಗ್ಗಿಕೊಳ್ಳುವ ಗಜಲ್ ಅದಕ್ಕಿಂತ ವಿರಹಕ್ಕೆ ಹೆಚ್ಚು ಹತ್ತಿರವಾಗುತ್ತದೆ. ಹಾಗೆಂದು ತರ್ಕಕ್ಕೆ, ಆಧ್ಯಾತ್ಮಿಕಕ್ಕೆ ಗಜಲ್ ಒಗ್ಗುವುದಿಲ್ಲ ಎಂದಲ್ಲ. ಗಜಲ್‌ನ ಮೂಲವೇ ಅಲ್ಲಿದೆ. ಪ್ರೇಮದೊಳಗಿನ ತಾರ್ಕಿಕತೆಗೆ ಹಾಗೂ ಪ್ರೇಮದೊಳಗಿನ ಆಧ್ಯಾತ್ಮಿಕತೆಗೆ ಗಜಲ್‌ನ ಪೂರ್ವಸೂರಿಗಳು ಹೆಚ್ಚು ಒತ್ತು ನೀಡಿದ್ದನ್ನು ಗಮನಿಸಬೇಕು. ಪ್ರೇಮದ ಕೊನೆಯ ಗುರಿಯೇ ಆಧ್ಯಾತ್ಮ ಎಂಬುದನ್ನು ಮರೆಯುವಂತಿಲ್ಲ. ಹಾಗೆಂದು ಗಜಲ್ ಸಾಮಾಜಿಕ ಕಳಕಳಿಯನ್ನು ಬೇಡ ಎನ್ನುವುದೇ? ಖಂಡಿತಾ ಇಲ್ಲ. ಹಿತವಾದ ಮಾತಿನ ಎಲ್ಲವನ್ನೂ ಗಜಲ್ ಅಪ್ಪಿಕೊಳ್ಳುತ್ತದೆ. ಅದು ಸಾಮಾಜಿಕ ಅಸಮಾನತೆ ಇರಲಿ, ಪರಿಸರ ರಕ್ಷಣೆ ಇರಲಿ ಎಲ್ಲವೂ ಗಜಲ್‌ಗೆ ಸಮ್ಮತವೇ.ಸಸಿಯೊಂದು ಹಚ್ಚಿದರೆ ತಾನೆ ಬೆಳೆದು ಹೆಮ್ಮರವಾಗಿ ಹೂ ಹಣ್ಣು ಕೊಡುವುದುಹಚ್ಚುವ ಮುಂಚೆ ಭೂಮಿಯ ಹಸನಾಗಿಸುವುದು ನೀ ಕಲಿ ಗೆಳೆಯಾಎನ್ನುತ್ತಾರೆ ಕವಿ. ಸಸಿಯನ್ನು ನೆಟ್ಟರೆ ಮಾತ್ರ ಭೂಮಿ ಹಸನಾಗುವ ಮಾತು ಎಷ್ಟು ಮಾರ್ಮಿಕವಾಗಿ ಇಲ್ಲಿ ಮೂಡಿದೆ. ಸಸಿಯನ್ನೇ ನೆಡದೇ ಹಣ್ಣು ಬೇಕು ಹೂವು ಬೇಕು ಎಂದರೆ ಎಲ್ಲಿಂದ ತರಲಾದೀತು? ಕೃಷಿಯನ್ನು ಕೀಳಾಗಿ ಕಾಣುವ ಎಲ್ಲರ ಕುರಿತಾಗಿ ಈ ಮಾತು ಅನ್ವಯಿಸುತ್ತದೆ. ಕವಿಗೆ ಸಮಾಜದ ರೀತಿ ನೀತಿಗಳು ಗೊತ್ತಿದೆ. ಇಲ್ಲಿ ಎಲ್ಲವೂ ನಾವು ಅಂದುಕೊಂಡಂತೆ ಆಗುವುದಿಲ್ಲ. ಯಾರೋ ಬಂದು ನಮ್ಮ ಒಳ್ಳೆಯ ಕೆಲಸಕ್ಕೆ ಬೆನ್ನು ತಟ್ಟುತ್ತಾರೆ ಎಂಬ ಭ್ರಮೆಯಲ್ಲಿ ಇರಬೇಕಿಲ್ಲ. ಯಾರೂ ನಮ್ಮನ್ನು ಪ್ರೋತ್ಸಾಹಿಸುವುದಿಲ್ಲ. ಯಾರಾದರೂ ಸ್ವಲ್ಪ ಬೆಳವಣಿಗೆ ಕಂಡರೆ ಅವರ ಕಾಲು ಹಿಡಿದು ಎಳೆಯುವ ಮನೋಭಾವವೇ ಈ ಸಮಾಜದಲ್ಲಿ ತುಂಬಿಕೊಂಡಿದೆ. ಹೀಗಾಗಿಯೇ ಕವಿ,ಸಹಜ ಬೆನ್ನು ತಟ್ಟಿ ನಗು ಅರಳಿಸುವವರು ಜಗದಲ್ಲಿಲ್ಲಎಲ್ಲರೂ ಮಾನವೀಯರಿದ್ದಾರೆಂಬ ಭ್ರಮೆ ನಿನಗೆ ಬೇಡ ಗೆಳೆಯಎನ್ನುತ್ತಾರೆ. ನಮ್ಮ ಬೆನ್ನು ತಟ್ಟಿ ನಗು ಅರಳಿಸುವವರು ಸಿಗುವುದಿಲ್ಲ. ಕೇವಲ ನೋವು ನೀಡಿ ಸಂಭ್ರಮಿಸುವವರು ಮಾತ್ರ ನಮ್ಮ ಸುತ್ತಮುತ್ತ ತುಂಬಿಕೊಂಡಿದ್ದಾರೆ. ನಮ್ಮ ಸಮಾಜ ಜಾತಿ, ಧರ್ಮ ಮುಂತಾದ ಬೇಡದ ವ್ಯಾಧಿಯನ್ನು ತಲೆಯಲ್ಲಿ ತುಂಬಿಕೊಂಡು ನರಳುತ್ತಿದೆ.ಈ ಭೂಮಿಯಲ್ಲಿ ಗೀತೆ ಕುರಾನ್ ಬೈಬಲ್ ಗುರುವಾಣಿ ಹೀಗೆ ಏನೆಲ್ಲ ಒಳ್ಳೆಯದು ಬಿತ್ತಿಹರುಈ ಸಮಾನತೆಯ ಸಾಮರಸ್ಯ ಹೊಸ ಹೂವು ಏಕೆ ಮತ್ತೆ ಮತ್ತೆ ಅರಳುತ್ತಿಲ್ಲ ಸಾಕಿ ಪ್ರತಿ ಧರ್ಮದಲ್ಲೂ ಮನುಷ್ಯತ್ವವನ್ನೇ ಬೋಧಿಸಿದ್ದಾರೆ. ಮಾನವನ ಏಳ್ಗೆ ಇರುವುದೇ ಪ್ರೀತಿ ಮ,ತ್ತು ಸಹಬಾಳ್ವೆಯಲ್ಲಿ ಎಂದಿದ್ದರೂ ನಾವು ಮಾತ್ರ ಜಾತಿ ಧರ್ಮದ ಹೆಸರು ಹೇಳಿಕೊಂಡು ಕಚ್ಚಾಡುತ್ತಿದ್ದೇವೆ. ಗೀತೆ ಇರಲಿ, ಕುರಾನ್ ಇರಲಿ, ಬೈಬಲ್ ಇರಲಿ ಅಥವಾ ಗುರುವಾಣಿಯೇ ಇರಲಿ. ಎಲ್ಲರೂ ಪ್ರೀತಿಯೇ ಜಗದಲ್ಲಿ ಸರ್ವೋತ್ತಮ ಎಂದರೂ ಅದನ್ನು ಯಾರೂ ಆಚರಣೆಗೆ ತರುತ್ತಿಲ್ಲ. ನಾವು ಗೀತೆಯನ್ನು ನಂಬುತ್ತೇವೆ. ಅಂತೆಯೇ ಕುರಾನ್ ಹಾಗು ಬೈಬಲ್‌ನ್ನೂ ಕೂಡ. ಗೀತೆ, ಕುರಾನ್ ಬೈಬಲ್‌ನಲ್ಲಿರುವುದೇ ಪರಮಸತ್ಯ ಎಂದು ಭಾವಿಸುತ್ತ ಅದನ್ನು ಆಚರಣೆಗೆ ತರುತ್ತಿರುವುದಾಗಿ ಭ್ರಮೆಗೊಳಗಾಗಿದ್ದೇವೆ. ಆದರೆ ವಾಸ್ತವದಲ್ಲಿ ನಾವ್ಯಾರೂ ನಮ್ಮ ಧರ್ಮಗ್ರಂಥಗಳನ್ನು ತಿಳಿದೇ ಇಲ್ಲ. ಅದು ಬೋಧಿಸಿದ ಪ್ರೇಮವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡೇ ಇಲ್ಲ ಎಂಬ ವಿಷಾದ ಕವಿಗಿದೆ. ಸತ್ಯವಾಡಿದ ಹರಿಶ್ಚಂದ್ರ ಚಂದ್ರಮತಿಯನ್ನ ಮಾರಿಕೊಂಡದ್ದು, ಧರ್ಮರಾಯ ಧರ್ಮವನ್ನು ಉಳಿಸಲು ಹೋಗಿ ದ್ರೌಪದಿಯನ್ನೇ ಪಣಕ್ಕಿಟ್ಟು ಕಳೆದುಕೊಂಡಿದ್ದನ್ನು ಹೇಳುತ್ತ ಸಮಾಜದಲ್ಲಿ ಯಾರಂತೆ ಇರಬೇಕು ಎಂದು ಕೇಳುತ್ತಾರೆ. ಧರ್ಮ ಎಂದರೆ ಎಲ್ಲವನ್ನೂ ಒಳಗೊಂಡದ್ದು ಎನ್ನುವ ವಿಶ್ವ ಕುಟುಂಬದ ಮಾತು ಇಲ್ಲಿ ಕೇಳಿಸುತ್ತದೆ. ಹೀಗಾಗಿಯೇ ಜಾತಿ ಧರ್ಮದ ಹೆಸರಿನಲ್ಲಿ ‘ಮಾತು ಮಾತಲ್ಲಿ ಕೊಳ್ಳಿ ಇಟ್ಟು ಮನಸ್ಸು ಮುರಿಯುವುದು ಬೇಕಿರಲಿಲ್ಲ ಈಗ’ ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.ಕೆಲವರಿಗೆ ಜಾತಿಯದು ಹಲವರಿಗೆ ಧರ್ಮದ್ದು ಹೀಗೆ ಹೆಣ್ಣು ಮಣ್ಣಿನ ಹುಚ್ಚುಹೀಗೆ ಬಹುತೇಕರಿಗೆ ಹಣ ಅಧಿಕಾರ ಅಂತಸ್ತಿನ ಹುಚ್ಚು ತಲೆ ಕೆಡಿಸಿಕೊಬೇಡ ಸಖಿಎನ್ನುವ ಮಾತುಗಳಲ್ಲಿ ಸಮಾಜದ ಸತ್ಯ ಅಡಗಿದೆ. ಕೆಲವರು ಧರ್ಮ ಜಾತಿಯ ಉನ್ಮಾದದಲ್ಲಿ ತೇಲುತ್ತಿದ್ದರೆ ಕೆಲವರು ಹಣ, ಅಧಿಕರ ಹಾಗೂ ಅಂತಸ್ತಿನ ಗುಲಾಮರಾಗಿದ್ದಾರೆ. ಇನ್ನು ಕೆಲವರಿಗೆ ಹೆಣ್ಣಿನ ಹುಚ್ಚು. ಭಾರತ ಹೆಣ್ಣಿನ ಯೋನಿಯಿಂದ ಹರಿಯುವ ರಕ್ತದಲ್ಲಿ ಶುಭ್ರಸ್ನಾನ ಮಾಡುತ್ತಿದೆ. ಅತ್ಯಾಚಾರಗಳು ಹೆಚ್ಚಾಗಿರುವ ಈ ಕಾಲದಲ್ಲಿ ಇಂತಹ ಸಾಲುಗಳು ನಮ್ಮನ್ನು ಪದೇಪದೇ ಎಚ್ಚರಿಸುತ್ತವೆ. ‘ತನ್ನ ಹೆತ್ತವಳು ಒಡಹುಟ್ಟಿದವಳು ಒಂದು ಹೆಣ್ಣಂದರಿಯದ ಅವಿವೇಕಿ ಮೃಗಗಳಿವು’ ಎಂದು ವಿಷಾದಿಸುತ್ತಲೇ ಹೆಣ್ಣು ಪ್ರತಿ ಜೀವಕ್ಕೂ ನೀಡುವ ಸುಖವನ್ನು ನವಿರಾಗಿ ಹೇಳುತ್ತಾರೆ. ಕತ್ತಲೆಯಲಿ ಕಳೆದವನ ಬದುಕಿಗೆ ಬೆಳಕಾಗಿ ಬಂದವಳು ನೀ ಸಖಿಕಮರಿದ ಈ ಬದುಕಿಗೆ ಜೀವರಸ ತುಂಬಿದವಳು ನೀ ಸಖಿಹೆಣ್ಣು ಬದುಕಿನ ಕತ್ತಲೆಯನ್ನು ಹೋಗಲಾಡಿಸಿದವಳು. ಬದುಕಿಗೆ ಬೆಳಕಾಗಿ, ಬೆಳದಿಂಗಳಾಗಿ ಬಂದವಳು. ಬೇಸರದ ಬದುಕಿಗೆ ಆ ಪ್ರಿಯತಮೆ ಜೀವರಸವನ್ನು ತುಂಬುತ್ತಾಳೆ. ಜೀವಕ್ಕೆ ಜೀವವಾದ ಪ್ರಿಯತಮೆ ನಮ್ಮ ಬಾಳಿಗೆ ಬೆಳಕನ್ನು ತರುವ ಕಂದಿಲು ಎನ್ನುವುದು ತಪ್ತಗೊಂಡ ಎದೆಯೊಳಗೆ ಒಂದಿಷ್ಟು ತಂಪು ಸೂಸುತ್ತಾರೆ.ಕನಸಿನಲ್ಲಿ ಕಾಡುವಳು ಖುಷಿಯಲ್ಲೂ ಕುದಿಯುವಳುಬಿಸಿಲನ್ನೇ ಉಂಡು ಎಲ್ಲೆ ನೆರಳಾದಳು ಸಾಕಿ ಎನ್ನುವ ಮಾತಿನಲ್ಲಿಯೂ ಆ ಗೆಳತಿ ಉರಿಬಿಸಿಲಿನಲ್ಲೂ ತಮ್ಮನ್ನು ಸಲಹುವ ಕುರಿತು ಮನಸ್ಸು ಬಿಚ್ಚಿ ಹೇಳುತ್ತಲೇ ಕನಸಿನಲ್ಲಿ ಕಾಡುವ ಈ ಸುಂದರಿ ವಿರಹವನ್ನೂ ಕೊಡಬಲ್ಲಳು ಎನ್ನುತ್ತಾರೆ. ಹಾಗೆ ನೋಡಿದರೆ ವಿರಹವಿಲ್ಲದ ಪ್ರೇಮಕ್ಕೆ ಸವಿ ಎಲ್ಲಿದೆ? ವಿರಹವೇ ಪ್ರೇಮದ ಮಧುರತೆಯನ್ನು ಹೆಚ್ಚಿಸುತ್ತದೆ ಎಂಬುದನ್ನು ಈ ಜಗತ್ತಿನ ಎಲ್ಲ ಪ್ರೇಮಿಗಳೂ ಒಪ್ಪಿಕೊಂಡಿದ್ದಾರೆ. ಹಾಗಿದ್ದ ಮೇಲೆ ಈಗಾಗಲೇ ಹೇಳಿದಂತೆ ವಿರಹಕ್ಕೆಂದೇ ರಚಿತವಾಗಿರುವ ಗಜಲ್‌ನಲ್ಲಿ ವಿರಹವಿರದಿದ್ದರೆ ಏನು ಚೆನ್ನ ಹೇಳಿ?ಹತ್ತಿರವಿದ್ದೂ ಅಪರಿಚಿತರಂತೆ ದೂರವಾದವರ ಬಗ್ಗೆ ಕೇಳಿದ್ದೆದೂರವಿದ್ದೂ ಹತ್ತಿರವಾಗಿ ನಿನ್ನ ಸೇರುವಷ್ಟರಲಿ ನೀ ಕನಸಾದೆಈ ಹುಡುಗಿಯರೇನೂ ಕಡಿಮೆಯವರಲ್ಲ. ಹುಡುಗರನ್ನು ಕಾಡುವುದೇ ತಮ್ಮ ಜೀವನದ ಮಹದೋದ್ದೇಶ ಎಂದುಕೊಂಡವರು. ಹೀಗಾಗಿ ಇನ್ನೇನು ತನ್ನವಳಾದಳು ಎಂದುಕೊಳ್ಳುವಾಗಲೇ ದೂರ ಸರಿದು ತಮಾಷೆ ನೋಡುತ್ತಾರೆ. ಅಪರಿಚಿತಳು ಎಂದು ಸುಮ್ಮನಾದರೆ ತಾವಾಗಿಯೇ ಹತ್ತಿರ ಬಂದು ಆತ್ಮೀಯರಾಗುತ್ತಾರೆ. ದೂರವನ್ನು ಕ್ಷಣ ಮಾತ್ರದಲ್ಲೇ ಕರಗಿಸಿದರೂ ಕೈಗೆಟುಕದಂತೆ ಕನಸಾಗಿಬಿಡುವ ಕಲೆ ಹುಡುಗಿಯರಿಗಷ್ಟೇ ಗೊತ್ತಿದೆ. ಕವಿಗೆ ಹೀಗೆ ಪುಳಕ್ಕನೆ ಮಿಂಚಂತೆ ಮಿಂಚಿ ಮಾಯವಾಗುವ ಈ ಹುಡುಗಿಯರ ಕುರಿತು ವಿಚಿತ್ರ ತಲ್ಲಣವಿದೆ.ಈ ಪ್ರೀತಿ ಪ್ರೇಮ ವಿರಹ ಕಾಮದ ಬಗ್ಗೆ ಅನೇಕ ಕಥೆಗಳು ಗೊತ್ತುಹೊನ್ನಸಿರಿಯ ಈ ಅಲೌಕಿಕ ಪ್ರೀತಿ ಅರಿವಾಗುವಷ್ಟರಲಿ ನೀ ನಕ್ಷತ್ರವಾದೆಸದಾ ಜೊತೆಗಿರುತ್ತೇನೆ ಎಂದು ಆಣೆ ಕೊಟ್ಟು ಭಾಷೆಯಿತ್ತವರು ಹೀಗೆ ಒಮ್ಮೆಲೆ ದೂರ ಸರಿದು ನಕ್ಷತ್ರಗಳಾಗಿಬಿಡುವುದನ್ನು ಸಲೀಸಾಗಿ ಒಪ್ಪಿಕೊಳ್ಳಲಾಗುವುದಿಲ್ಲ. ಆದರೂ ಕವಿ ‘ಕಂದಿಲು ಬೇಡ ಕಣ್ಣ ಕಾಂತಿಯಲ್ಲಿ ಬಾ’ ಎನ್ನುತ್ತಾರೆ. ಇದು ಪ್ರೇಮದ ಪರಾಕಾಷ್ಟೆ. ತನ್ನ ಪ್ರೇಯಸಿಯ ಕಣ್ಣಿನ ಕಾಂತಿ ಎಲ್ಲ ಕಂದಿಲುಗಳ ಬೆಳಕನ್ನೂ ಮೀರಿಸುವಂತಹುದ್ದು ಎನ್ನುವುದು ಸಹಜ.ಕಾಯುವಲ್ಲಿ ಇರುವ ಕಾತರ ಸನಿಹದಲ್ಲಿ ಇರುವುದಿಲ್ಲಸಾಂಗತ್ಯಕ್ಕಾಗಿ ಸದಾ ಬಯಸಿ ಕಾಯುತ್ತಾನೆಹೀಗೆ ಕಾಯುವಿಕೆಯನ್ನು ನಿರಂತರವಾಗಿಸುತ್ತ, ಕಾಯುವುದೇ ತಪಸ್ಸು ಎಂದು ತಿಳಿದುಕೊಳ್ಳುವ ಕವಿಗೆ ಪ್ರೇಮ ಕೂಡ ಜೀವನದಲ್ಲಿ ಬೇಕಾಗಿರುವ ಭಾವಗಳಲ್ಲಿ ಒಂದು ಎಂಬ ಅರಿವಿದೆ. ಹೀಗಾಗಿಪ್ರೇಮಿಸಲಾಗದು ವಂಚಿಸಲಾಗದು ನಿನಗೆ ಮರೆತುಬಿಡುಹಂಬಲಿಸಿರಬಹುದು ಅಂಗಲಾಚಲಾಗದು ನಿನಗೆ ಮರೆತುಬಿಡು.ಎಂದು ಕೈಗೆ ಸಿಗದ್ದನ್ನು ಮರೆತು ಮುಂದೆ ಸಾಗಬೇಕಾದ ಜೀವನದ ಕುರಿತು ಎಚ್ಚರವಹಿಸುತ್ತಾರೆ. ಕೈಕೊಟ್ಟ ಪ್ರೇಮಿಯ ಬಗ್ಗೆ ಬೇಸರವಾಗುತ್ತದೆ ಎಂಬುದೇನೋ ನಿಜ. ಹಾಗೆಂದು ಅದೆಷ್ಟು ಸಮಯ ಕೊರಗಲಾದೀತು ಹೇಳಿ? ಹೀಗಾಗಿ ಆದದ್ದನ್ನೆಲ್ಲ ಮರೆತು ಮುಂದೆ ಸಾಗಬೇಕಾದ ಅನಿವಾರ್‍ಯತೆಯನ್ನು ಹೇಳುತ್ತಲೇ ಒಪ್ಪತ್ತಿನ ಗಂಜಿಗೂ, ತುಂಡು ರೊಟ್ಟಿಗೂ ಹೋರಾಟವಿದುಹಸಿವೆಯೇ ಖೋಡಿ ಏನೆಲ್ಲ ಮಾಡಿ ಹೆಣಗುತಿಹಳು ತಾಯಿಎಂದು ನಮ್ಮ ನಡುವೆ ತುತ್ತು ಕೂಳಿಗೂ ಕಷ್ಟ ಅನುಭವಿಸುತ್ತಿರುವವರ ವೇದನೆಯನ್ನು ಕಟ್ಟಿಕೊಡುತ್ತಾರೆ. ಮನೆ ನಡೆಸಲು ತಾಯಿ ಎಂಬ ಹೆಣ್ಣು ಅನುಭವಿಸುವ ಕಷ್ಟವನ್ನು ಗಂಡು ಅನುಭವಿಸಲಾರ. ಎಷ್ಟೋ ಮನೆಗಳಲ್ಲಿ ಹೆತ್ತಿಕೊಂಡ ತಪ್ಪಿಗಾಗಿ ಮಕ್ಕಳನ್ನು ಸಾಕುವ ಕರ್ಮ ತಾಯಿಯದ್ದೇ ಆಗಿರುತ್ತದೆ. ತನ್ನ ಕಾಮಕ್ಕಾಗಿ ಅವಳನ್ನು ಬಳಸಿಕೊಂಡು ತಾಯಿಯನ್ನಾಗಿ ಮಾಡಿದ ಮನೆಯ ಯಜಮಾನ ಎನ್ನಿಸಿಕೊಂಡ ಗಂಡಸು ಆ ಎಲ್ಲ ಜವಾಬ್ಧಾರಿಯನ್ನು ತಾಯಿಯ ತಲೆಗೆ ಕಟ್ಟಿ ನಿರುಮ್ಮಳವಾಗಿ ಬಿಡುವುದು ಈ ಸಮಾಜದ ಚೋದ್ಯಗಳಲ್ಲಿ ಒಂದು ಈ ಎಲ್ಲದರ ನಡುವೆ ನಮ್ಮ ಗೋಮುಖ ವ್ಯಾಘ್ರತನವೊಂದು ಇದೆಯಲ್ಲ ಅದು ಈ ಸಮಾಜಕ್ಕೆ ಕಂಟಕ. ಬದುಕಿನಲ್ಲಿ ಯಾವ್ಯಾವುದೋ ಕಾರಣಕ್ಕಾಗಿ ಮುಖವಾಡ ಹಾಕುವವರ ಸಂಖ್ಯೆ ಬಹುದೊಡ್ಡದಿದೆ. ಆದರೆ ಸತ್ತ ಮೇಲೂ ‘ಸೇರಿದರೆ ಸೇರಲಿ ತಮ್ಮ ದೇಹದ ಬೂದಿಯು ಗಂಗೆಯಲಿ ಅನ್ನುವವರ ಬಹುದೊಡ್ಡ ಸಾಲುಂಟು’ ಎಂದು ಕವಿ ಬೇಸರಿಸುತ್ತಾರೆ. ಗಂಗೆಯನ್ನು ಸ್ವಚ್ಛಗೊಳಿಸಬೇಕಿದೆ ಎನ್ನುತ್ತಲೇ ತಮ್ಮ ದೇಹದ ಬೂದಿಯೂ ಗಂಗೆಯಲ್ಲಿ ಸೇರಿ ಜೀವಿತಾವಧಿಯಲ್ಲಿ ಮಾಡಿದ ಪಾಪಗಳೆಲ್ಲ ಕಳೆದುಹೋಗಲಿ ಎನ್ನುತ್ತ ಸ್ವರ್ಗ ಬಯಸುವವರ ಕುರಿತಾಗಿ ಹೇವರಿಕೆಯಿದೆ.ಸುತ್ತ ಪರಸ್ಪರರು ಬೆನ್ನು ನೀವಿಕೊಳ್ಳುವುದು ಇವನಿಗೇಕೆ ಅರ್ಥವಾಗುವುದಿಲ್ಲನೀ ನನಗಿದ್ದರೆ ನಾ ನಿನಗೆ ಎಂಬ ಸೋಗಲಾಡಿಗಳ ಮಧ್ಯೆ ಭ್ರಮ ನಿರಸನವಾಗುತ್ತಿದೆ ಸಾಕಿಎಂಬ ಸಾಲು ಇಂದಿನ ಸಮಾಜಕ್ಕೆ ಹಿಡಿದ ಕನ್ನಡಿಯಾಗಿ ಕಾಣುತ್ತದೆ. ಎಲ್ಲೆಡೆಯೂ ಗುಂಪುಗಳದ್ದೇ ಸಾಮ್ರಾಜ್ಯ. ನೀವು ನಮ್ಮ ಪರವಾಗಿದ್ದರೆ ಮಾತ್ರ ನಾವು ನಿಮ್ಮ ಪರವಾಗಿರುತ್ತೇವೆ ಎನ್ನುವ ದೊಡ್ಡವರು ಎನ್ನಿಸಿಕೊಂಡಿರುವವರ ಮಾತು ತೀರಾ ಅಸಹ್ಯ ಹುಟ್ಟಿಸುವಂತಹುದ್ದು. ತಮ್ಮ ಗುಂಪಿಗೆ ಸೇರಿದವರಿಗೆ ಎಲ್ಲ ಅನುಕೂಲಗಳನ್ನು ಮಾಡಿಕೊಡುತ್ತ, ಪ್ರಶಸ್ತಿಗಳ ಸರಮಾಲೆಯನ್ನೇ ಕಟ್ಟಿ ಕೊರಳಿಗೆ ಹಾಕುವ ಬಲಾಢ್ಯರಿಗೆ ಅವರ ಹಿಂಬಾಲಕರ ಸಂಖ್ಯೆ ಹೆಚ್ಚಾಗಬೇಕಿದೆ. ಇದಕ್ಕೆ ಇಂದಿನ ಸಾಹಿತ್ಯ ಲೋಕ ಕೂಡ ಹೊರತಾಗಿಲ್ಲ. ಕವಿ ತಮ್ಮ ಸಾಲುಗಳಲ್ಲಿಯೇ ಇಂತಹ ಸೋಕಾಲ್ಡ್ ಪ್ರಮುಖರನ್ನು ವ್ಯಂಗ್ಯವಾಡುತ್ತಾರೆ. ಸಿದ್ಧರಾಮ ಹೊನ್ಕಲ್
ಅನುವಾದಕ್ಕಾಗಿ ಸದಾ ಇಂಗ್ಲಿಷ್ ಕ್ಲಾಸಿಕ್‌ಗಳನ್ನೇ ಆರಿಸಿಕೊಳ್ಳುವ ಶ್ಯಾಮಲಾ ಮಾಧವ ಅವರು ಸಾರ್ವಕಾಲಿಕ ಪ್ರಸ್ತುತಿಯುಳ್ಳ ಮೇರಿ ಷೆಲ್ಲಿಯ ‘ಫ್ರಾಂಕಿನ್‌ಸ್ಟೈನ್’ ಎಂಬ ಅದ್ಭುತ ವಸ್ತುವುಳ್ಳ ಕಾದಂಬರಿಯನ್ನು ಅನುವಾದಿಸಿದ್ದಾರೆ
ಹೊಸ ದನಿ – ಹೊಸ ಬನಿ – ೮. ತಲೆ ಬರಹ ಇಲ್ಲದೆಯೂ ತಲೆದೂಗಿಸುವ ನಾಗಶ್ರೀ ಎಸ್ ಅಜಯ್ ಕವಿತೆಗಳು. ಬೆಂಗಳೂರಿನ ಗಾಂಧಿ ಬಜಾರಿಗೆ ಕಾಲ್ನಡಿಗೆಯ ಅಂತರದ ಬಿ.ಪಿ.ವಾಡಿಯಾ ಸಭಾಂಗಣ. ಕವಿ ವಾಸುದೇವ ನಾಡಿಗರ ಕವನ ಸಂಕಲನದ ಬಿಡುಗಡೆ ಸಮಾರಂಭ. ವೇದಿಕೆಯಲ್ಲಿ ಸರ್ವ ಶ್ರೀ ಮೂಡ್ನಾಕೂಡು ಚಿನ್ನಸ್ವಾಮಿ, ಜಿ.ಕೆ.ರವೀಂದ್ರ ಕುಮಾರ್, ಸುಬ್ರಾಯ ಚೊಕ್ಕಾಡಿಯಂಥ ಅತಿರಥ ಮಹಾರಥರು. ಪುಸ್ತಕ ಬಿಡುಗಡೆಯ ಆತಂಕದಲ್ಲಿ ಕವಿ ದಂಪತಿ. ತುಂಬಿದ ಸಭೆಯ ಗೌರವಾನ್ವಿತರಿಗೆಲ್ಲ ಕಲಾಪದ ಸೊಗಸು ಮತ್ತು ಸಂದರ್ಭಕ್ಕೆ ತಕ್ಕ ಕವಿ ನುಡಿಗಳನ್ನೂ ಹಿತದ ಮಾತುಗಳನ್ನೂ ಆಡುತ್ತ ಸಭೆಗೆ ಶೋಭೆ ತರುತ್ತಿದ್ದ ನಿರೂಪಕಿ. ಇತ್ತೀಚೆಗೆ ಸಮಾರಂಭಗಳಲ್ಲಿ ನಿರೂಪಕರದೇ ಕಾರುಬಾರು. ಬರಿಯ ವಾಚಾಳಿತನ ಮತ್ತು ಹಗುರ ನಗೆ ಚಟಾಕಿ ಹಾರಿಸಿ ವೇದಿಕೆಯ ಗಣ್ಯರನ್ನು ನೋನುತ್ತ ಅಭಿನಂದಿಸಿದರೆ ಅವರ ಕೆಲಸ ಮುಕ್ತಾಯ. ಕಾರ್ಯಕ್ರಮ ಯಾವುದೇ ಇರಲಿ, ಈ ನಿರೂಪಕರ ಶೈಲಿ ಮಾತ್ರ ಬದಲಾಗದು. ಹಾಡಿದ್ದೇ ಹಾಡುವ ಹೇಳಿದ್ದೇ ಹೇಳುವ ಅವೇ ಅವೇ ಹಗುರ ಚಟಾಕಿಗಳು. ಅಪರೂಪಕ್ಕೆ ಈ ಬರಹದ ಮೊದಲಲ್ಲಿ ಹೇಳಿದ ಸಭೆಯಲ್ಲಿ ಆ ಸಮಾರಂಭದ ನಿರೂಪಕಿಯ ಮಾತು, ಆಕೆ ನಡು ನಡುವೆ ಕೋಟ್ ಮಾಡುತ್ತಿದ್ದ ಕನ್ನಡದ ಮಹಾ ಕವಿಗಳ ಪದ್ಯದ ಸಾಲುಗಳು, ಹಿತ ಮಿತದ ಸಂಕ್ಷೇಪ…ಆಕೆ ಕನ್ನಡ ಸಾಹಿತ್ಯವನ್ನು ಓದಿಕೊಂಡಿದ್ದಾರೆಂದು ಮತ್ತು ಸಾಹಿತ್ಯದ ಮೇಲೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ ಎಂಬುದನ್ನೂ ಸ್ಪಷ್ಟವಾಗಿ ಹೇಳುತ್ತಿತ್ತು. ಆಕೆಯ ಹೆಸರು ನಾಗಶ್ರೀ ಅಜಯ್ ಎಂದು ಆಮೇಲೆ ಗೊತ್ತಾಯಿತು. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ೯ ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ೫ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಕನ್ನಡ ಸಾಹಿತ್ಯದಲ್ಲಿ ಮತ್ತು ಕಾರ್ಯಕ್ರಮ ನಿರೂಪಣೆಯಲ್ಲಿ ಆಕೆ ಆಸಕ್ತರು ಎಂದೂ ಆಮೇಲೆ ತಿಳಿಯಿತು. ಸುರಹೊನ್ನೆ, ಅವಧಿ ಜಾಲತಾಣಗಳಲ್ಲಿ ಮತ್ತು ಫೇಸ್ಬುಕ್ಕಿನಲ್ಲೂ ಅವರ ಕವಿತೆಗಳನ್ನು ಗಮನಿಸುತ್ತ ಬಂದಂತೆ ನಿರೂಪಕರು ಎಂದ ಕೂಡಲೇ ಬಾಯಿಪಾಠ ಮಾಡಿದ ಮಾತನ್ನು ನಾಟಕೀಯವಾಗಿ ಒಪ್ಪಿಸುವವರು, ಸುಮ್ಮನೇ ನೋನುತ್ತ ಜೋಕ್ ಹೇಳುವವರು ಎಂದು ಅಂದುಕೊಂಡಿದ್ದ ನನ್ನ ಅರಿವನ್ನು ಬದಲಾಯಿಸಿಕೊಳ್ಳಬೇಕಾಯಿತು!! ಬದುಕೆಂದರೇನೆಂದು ಹುಡುಕುವ ಹೊತ್ತಿಗೆ ಮುಕ್ಕಾಲು ಉರಿದ ಊದುಬತ್ತಿ ಸುತ್ತ ಪರಿಮಳ ಉಸಿರಿಗೂ ಚೌಕಾಸಿ. ಇಂಥ ಅದ್ಭುತ ರೂಪಕಗಳ ಕವಿತೆಯ ಮೂಲಕವೇ ಬದುಕ ಅರ್ಥವನ್ನು ತೇದು ತೇದು ಅದರ ಘಮದಲ್ಲೇ ಉಳಿದು ಬಿಡುವ ತಹತಹಿಕೆ ಇವರ ಕವಿತೆಗಳ ಆಂತರ್ಯ. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಪ್ರೀತಿ ಪ್ರೇಮ ಪ್ರಣಯಗಳನ್ನು ಕುರಿತು ಬರೆಯದೇ ‘ಕವಿ’ ಎನ್ನುವ ಅಭಿದಾನಕ್ಕೆ ಪಾತ್ರರಾಗುವುದಾದರೂ ಹೇಗೆ ಸಾಧ್ಯ ಎನ್ನುವ ಪುರಾತನ ಪ್ರಶ್ನೆಗೆ ನಾಗಶ್ರೀ ಪದ್ಯಗಳೂ ಹೊರತಲ್ಲ! ತಾನು ಕವಿಯೆಂದು ಘೋಷಿಸದೆಯೂ ಓದುಗನಲ್ಲಿ ಇದನ್ನು ಬರೆದವರು ಕವಿಯಲ್ಲದೇ ಮತ್ತಿನ್ನೇನು ಅನ್ನುವ ಪ್ರಶ್ನಿಸುವ ಸಾಲನ್ನೇ ಗಮನಿಸಿ; ಅಕ್ಷರ ಗೊತ್ತಿರುವವರೆಲ್ಲ ಅನ್ನಿಸಿದ್ದನ್ನು ಗೀಚಬಹುದು, ಆದರೆ ಆಂತರ್ಯದ ಸಾಲುಗಳು ಮಾತ್ರ ಕವಿತೆಯಾಗಿ ಅರಳಬಲ್ಲವು. ಉಬ್ಬಸವೇ ಮೂಲತಃ ಪ್ರಾಣಾಂತಿಕ ವ್ಯಾಧಿ. ಅಂಥ ವ್ಯಾಧಿಯಲ್ಲಿ ನರಳುತ್ತಿದ್ದರೂ ತನ್ನಿನಿಯನ ಧ್ಯಾನದಲ್ಲೇ ಅವನನ್ನು ಹಚ್ಚಿಕೊಳ್ಳುವ ಆ ಹುಡುಗಿಯನ್ನು ಮೆಚ್ಚಲಾರದೇ ಹೇಗೆ ಉಳಿಯಬಹುದು? ಇದೇ ಪದ್ಯದ ಮುಂದಣ ಸಾಲುಗಳನ್ನು ಅಲ್ಲಲ್ಲಿಗೆ ತುಂಡು ಮಾಡದೇ ಗದ್ಯವಾಗಿಸಿ ಓದಿ ನೋಡಿದರೆ; ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮ ಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸು ಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ, ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ಪ್ರಾಯಶಃ ಪ್ರಯೋಗ ಎಂದರೆ ಇದೇ ಇರಬೇಕು. ಪದ್ಯಗಂಧೀ ಗದ್ಯ ಎಂದೆಲ್ಲ ಕರೆದುಕೊಳ್ಳುವವರ ನಡುವೆ ಗದ್ಯ ಗಂಧೀ ಪದ್ಯ ಬರೆಯುವ ಈ ಕವಿ ಯಾಕೋ ತೀರ ಸಹಜವಾಗಿ ನಿತ್ಯವೂ ಘಟಿಸುವ ಘಟನಾವಳಿಗಳನ್ನೆಲ್ಲ ಒಟ್ಟಾಗಿಸಿ ಬದುಕಿನ ಪ್ರಭಾವಳಿಯನ್ನಾಗಿಸುತ್ತಾರಲ್ಲ ಈ ಕವಿ ಇವರನ್ನು ಪ್ರಭಾವಿಸುತ್ತಿರುವುದು ಕೆ ಎಸ್ ನ ಅಲ್ಲದೇ ಮತ್ತಿನ್ನಾರು ಎನ್ನುವುದೂ ಆತುರದ ನಿರ್ಧಾರವೇ ಆದೀತು! ಜನಜಂಗುಳಿಯ ಮಧ್ಯೆಯೇ ತೀರಾ ಒತ್ತರಿಸಿ ಬಂದ ಅಳು ಕಡಿಮೆ ಬಿದ್ದ ಟಿಕೇಟು ಕಾಸು ಎಡವಿದಾಗ ಹರಿದ ಅಂಗಿ ಸದಾ ಮೇಲಾಟ ತೋರಿದವರ ಅಣಕು ನೋಟ ಕಿತ್ತ ಉಂಗುಷ್ಟದ ತೇಪೆ ಚಪ್ಪಲಿ ಜಾತ್ರೆಯಂತಹ ಮದುವೆಗೆ ತಪ್ಪು ಅಂದಾಜಿನಲಿ ತೊಟ್ಟ ಸಾದಾ ಅರಿವೆ ಇಲ್ಲಿ ಕವಿ ಬದುಕಿನ ಸೂಕ್ಷ್ಮಗಳನ್ನು ಅವಲೋಕಿಸುವ ರೀತಿ ಸದ್ಯ ಅಬ್ಬರದಲ್ಲಿ ಬೊಬ್ಬಿರಿಯುವ, ಸಮಾನತೆಯ ಬೇಡಿಕೆ ಇಟ್ಟು ಇದ್ದವರಿಂದ ಕಿತ್ತು ತಮ್ಮದಾಗಿಸಿಕೊಳ್ಳುವ ಹಕ್ಕೊತ್ತಾಯದ ಗದರಿಲ್ಲ, ತಮ್ಮನ್ನು ಯಾರೋ ತುಳಿದರು ಎನ್ನುವ ದೂರು ಮೊದಲೇ ಇಲ್ಲ ಅಥವ ಹತಭಾಗ್ಯದ ಬಗ್ಗೆ ದುಃಖವೂ ಇಲ್ಲ; ಇರುವುದು ಬರಿಯ ವಾಸ್ತವದ ನಿಜ ಚಿತ್ರ. ನಾಗಶ್ರೀ ಕವಿತೆಗಳಲ್ಲಿ ಹೆಚ್ಚಿನವು ಶೀರ್ಷಿಕೆಯೇ ಇಲ್ಲದೆ ಪ್ರಕಟವಾದವು. ಫೇಸ್ಬುಕ್ಕಿನಲ್ಲಿ ಶೀರ್ಷಿಕೆ ಇಲ್ಲದೆಯೂ ಪ್ರಕಟಿಸಬಹುದು. ಆದರೆ ಅಂತರ್ಜಾಲದ ಪತ್ರಿಕೆಗಳಲ್ಲೂ ಇವರ ತಲೆ ಬರಹ ಇಲ್ಲದೆಯೂ ಆ ಪದ್ಯಗಳ ಝಳದಲ್ಲಿ ತಲೆದೂಗಿಸುವಂತೆ ಮಾಡಬಲ್ಲ ಹಲವು ಪದ್ಯಗಳು ಇವೆ. ಅಪರೂಪಕ್ಕೆಂಬಂತೆ “ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ” ಶೀರ್ಷಿಕೆಯ ಕವಿತೆಯಲ್ಲಿ ವಾಸ್ತವವಾಗಿ ಗಾಳಿಪಟದ ಚಿತ್ರ ಬರುವುದೇ ಇಲ್ಲ! ಬರಿಯ ಶೀರ್ಷಿಕೆಯಲ್ಲೇ ಬದುಕನ್ನೇ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟವನ್ನಾಗಿಸಿರುವ ಕವಿತೆ ಹೇಳುತ್ತಿರುವುದು ದುರಂತಗಳ ಸರಮಾಲೆಯಲ್ಲಿ ಸಿಕ್ಕೂ ಮತ್ತೆ ಮೇಲೇರಬಯಸುವ ಗಾಳಿಪಟದ ಆಶೆಯಂಥ ಬದುಕನ್ನು!! ಪದ್ಯದ ಕಡೆಯ ಸಾಲು ಹೀಗಿದೆ; ಹೀಗಂತ ಗೊತ್ತಿದ್ದೂ ನಾನೇನೂ ಮಾಡಲಾರೆ ನಾಲ್ಕು ಹನಿ ಕಂಬನಿ ಹೊರತು ಮತ್ತೇನೂ ಕೊಡಲಾರೆ ಕೊಸರಷ್ಟು ಹಸಿಪ್ರೀತಿ ಉಳಿಸಿಟ್ಟಿರುವೆ ಸ್ವೀಕರಿಸು. ಬರಿಯ ಇಂಥ ಹತಾಶೆಗಳ ಚಿತ್ರಣದಲ್ಲಿ ವಾಸ್ತವವನ್ನು ಮರೆಮಾಚುತ್ತ ರಮ್ಯತೆಯನ್ನು ಬಯಸುವ ರೀತಿ ಕೆ ಎಸ್ ನ ಅವರಲ್ಲದೇ ಈ ನಾಗಶ್ರೀಗೂ ಒಲಿದಿರುವುದು ಅಪ್ಪಟ ಸತ್ಯ. ಬಹಳ ಗೊತ್ತೆಂಬ ಹಮ್ಮಿನಲಿ ಹೊಸ ಬಣ್ಣಗಳ ಹುಡುಕುವೆವು ಸೃಜಿಸಿದ ಮತ್ತಾವ ಬಣ್ಣಕ್ಕೂ ಸ್ವತಂತ್ರ ಅಸ್ತಿತ್ವವಿಲ್ಲ ಇದರ ಹೆಸರಿಗೆ ಅದರ ಉಲ್ಲೇಖ ಅದರ ಚಿತ್ತಾರಕ್ಕೆ ಇದರ ಸಹಯೋಗ ಹೊಸತು-ಹಳತು ಹೆಸರಿಗಷ್ಟೇ ವಿರುದ್ಧ ನನ್ನ ತಿಳುವಳಿಕೆಗದು ಜೋಡಿಪದ ಎಂದು ಮುಂದುವರೆಯುವ ಪದ್ಯ ಸಾಮಾನ್ಯ ಪ್ರತಿಮೆಗಳ ಅನಾವರಣದಲ್ಲೇ ಅಸಾಮಾನ್ಯ ರೂಪಕವೊಂದನ್ನು ಸೃಷ್ಟಿಸಿ ಭಲ ಭಲಾ ಎನ್ನಿಸುತ್ತದೆ. ಪದ್ಯ ಮುಗಿಯುವುದು ಹೀಗೆ; ಹಾಗಲ್ಲ ಹೀಗೆಂದರೂ ಹೀಗಲ್ಲ ಹಾಗೆಂದರೂ ಒಪ್ಪುವದು ಬಿಡುವುದು ಅವರವರ ಇಷ್ಟ ಇದ್ದ ಬಣ್ಣಗಳಲೆ ಹೊಸ ಕನಸು ಕಾಣುವುದು ಇರುವ ಭಾವಗಳಲೆ ಹೊಸ ಸಾಲು ಬರೆಯುವುದು ನನಗಿಷ್ಟ ಎಂದೆಂದೂ ಇಂಥ ಸಹಜ ಆಸೆಗಳನ್ನು ಮಾತ್ರ ತನ್ನ ಕವಿತೆಗಳ ಮುಖ್ಯ ಶೃತಿಯನ್ನಾಗಿರಿಸಿಕೊಂಡಿರುವ ಈ ಕವಿತೆಗಳು ಮತ್ತೆ ಮತ್ತೆ ಓದಿದರೆ ಹಳಹಳಿಕೆಯಂತೆ, ತನ್ನ ಕೈಗೆಟುಕದ ಸಂತಸದ ಬಗೆಗಿನ ತಿರಸ್ಕಾರದಂತೆ ಅಥವ ಶ್ರೇಣೀಕೃತ ಸಮಾಜದ ಶ್ರೇಣೀಕರಣದ ಉತ್ತುಂಗದಲ್ಲಿದ್ದೂ ಒಳಗೇ ಟೊಳ್ಳಾಗಿರುವ ಆ ಸಮಾಜದ ಕಿರೀಟದ ಹೊಳಪು ಕಳೆದ ಮಣಿಯಂತೆ ಕಾಣುತ್ತದೆ. ಆದರೆ ಬರಿಯ ಇಂಥ ಹಳಹಳಿಕೆಗಳು ಸದಾ ಸರ್ವದಾ ಯಾವುದೇ ಕವಿಯ ನಿತ್ಯ ಮಂತ್ರವಾಗಬಾರದು. ಹಾಗಾದಲ್ಲಿ ಅಳುಬುರುಕ ಕವಿ ಎಂಬ ಅಭಿದಾನಕ್ಕೆ ಸಿಕ್ಕು ತಾನೇ ತೋಡಿಕೊಂಡ ಹೊಂಡದಲ್ಲಿ ಕವಿ ಬೀಳುತ್ತಾನೆ. ಹಾಗಾಗದೇ ಇರಲು ಮೊದಲು ಈ ಕವಿ ತಾನಿರಿಸಿಕೊಂಡು ಬಂದಿರುವ ಕ್ಷೋಬೆಯಿಂದ ಹೊರಗೆ ಬರಬೇಕು ಮತ್ತು ನಿಜಕ್ಕೂ ಈ ಹಳವಂಡದಿಂದ ಮೇಲೆದ್ದು ಬರುವ ಮಾರ್ಗವನ್ನು ಹುಡುಕಬೇಕು. ಬಿದ್ದಮೇಲೂ ತಿರುಗುತ್ತಲೇ ಇರುವ ಗಾಲಿ ಸತ್ತಮೇಲೂ ಸುತ್ತುತ್ತಲೇ ಇರುವ ಆತ್ಮ ಏನೋ ಹೇಳ ಹೊರಟು ಮತ್ತೇನೋ ಆಗುವಾಗ ಒಂದು ಮನಸ್ಸು ಒಡೆಯಬಹುದು ಮತ್ತೆ ಸೇರಲೆಂದು ಶತಪ್ರಯತ್ನ ಏಕೆ? ಸಿಕ್ಕಿದ್ದು ದಕ್ಕಿದ್ದು ಋಣವಿದ್ದಷ್ಟೇ ಈ ಪದ್ಯ ಕಾವ್ಯದ ಪ್ರಯೋಗದಲ್ಲಿ ನಿಷ್ಕ್ರಮಣದ ಹಾದಿಯಲ್ಲಿದ್ದ ಅಧ್ಯಾತ್ಮದ ಪುನರ್ಪ್ರವೇಶ ಎಂದೇ ಅನ್ನಿಸುತ್ತಿದೆ. ಬದುಕಿನಾಚೆಗೆ ಏನಿದೆ, ಸತ್ತವರು ನಂತರ ಎಲ್ಲಿಗೆ ಹೋಗುತ್ತಾರೆ, ಪೂರ್ವಾಪರದ ಸಂಗತಿಗಳು ಏನಿವೆ ಎನ್ನುವುದನ್ನೆಲ್ಲ ಪದ್ಯದ ವಸ್ತುವನ್ನಾಗಿಸುವುದಕ್ಕೆ ಸಾಕಷ್ಟು ಅಧ್ಯಯನ ಮತ್ತು ಅಧ್ಯಾಪನಗಳ ಅನುಕ್ರಮಣಿಕೆಯ ಅವಶ್ಯಕತೆ ಅನಿವಾರ್ಯ. ನಾಗಶ್ರೀ ಈ ವಿಚಾರದಲ್ಲಿ ಸಾಕಷ್ಟು ದೂರ ಕ್ರಮಿಸಿರುವುದು ಅವರ ಪದ್ಯಗಳ ರೀತಿಯಲ್ಲೇ ಶೃತವಾಗುತ್ತದೆ. ನಡೆದು ಬಿಡಬೇಕು ಆಚೆ ಹಚ್ಚಹಸುರಿನ ಬಯಲಿನೆಡೆಗೆ ವಿಶಾಲ ಸಮುದ್ರದ ಏಕಾಂತಕೆ ಕಡೇಪಕ್ಷ ರಾತ್ರಿಯಾಗುವುದನೆ ಕಾದಿದ್ದು ನಕ್ಷತ್ರಲೋಕದ ವಿಹಂಗಮ ದರ್ಶನಕೆ ಇವೆಲ್ಲಾ ದುರ್ಲಭದ ನಗರಜಾತ್ರೆಯಲಿ ಮಗುವೊಂದರ ಕಣ್ಣಬೆಳಕೊಳಗೆ ಹಣ್ಣುಮುದುಕರ ಮನೆಯಂಗಳಕೆ ನಡೆದುಬಿಡಬೇಕು ದೂರ ದೂರ ಮತ್ತೆ ಸಣ್ಣತನಗಳು ನಂಬಿಕೆಯ ನೆಲೆಯ ಕುರೂಪಗೊಳಿಸದಂತೆ ಈ ಇಂಥ ಆಶಯ ಸದಾ ಉನ್ಮತ್ತತೆ ಮತ್ತು ಸ್ವಪ್ರತಿಷ್ಠೆಯನ್ನು ಮುಂದು ಮಾಡುವ ಲೋಕಾಂತದ ನಾಯಕ ಮಣಿಗಳಲ್ಲಿ ಅಸಾಧ್ಯದ ಧಾತು. ಲೋಕಾಂತದ ದಂದುಗಗಳಲ್ಲಿದ್ದೂ ಏಕಾಂತದ ಸಂಗತಕ್ಕಷ್ಟೇ ಹಾತೊರೆಯುವ ಮೃದು ಮನಸ್ಸಿನ ಅಸ್ತಿವಾರ. ಇಂಥ ಲೌಕಿಕದಾಚೆಗಿನ ಸಂಗತಿಗಳಲ್ಲೇ ಇರುವ ಈ ಕವಿ ಒಮ್ಮೊಮ್ಮೆ ಹೀಗೂ ಹೇಳಬಲ್ಲರು; ಉದ್ದು-ಕಡಲೆ-ಹೆಸರು ಗುರುತಿಸಲೂ ಇಪ್ಪತ್ತು ವರ್ಷ ತೆಗೆದುಕೊಂಡ ಜಾಣರಲ್ಲವೆ ನೀವು ಗಂಡು ಹೆಣ್ಣುಗಳ ನಡುವಿನ ಗುದ್ದಾಟ ನಿನ್ನೆ ಮೊನ್ನೆಯ ಪ್ರಶ್ನೆ ಏನಲ್ಲ. ಗಂಡು ಹೆಚ್ಚೆಂಬ ವಾದದ ಜೊತೆಯೇ ಹೆಣ್ಣು ಕೀಳಲ್ಲವೆಂಬ ಸಮದರ್ಶತ್ವವೂ ಇದ್ದೇ ಇದೆ. ಆದರೆ ಬದುಕನ್ನು ಅರಿಯುವುದಕ್ಕೆ ಅನುಭವಗಳೇ ಮುಖ್ಯ. ಅದು ಗಂಡೋ ಹೆಣ್ಣೋ ಲಿಂಗಾಧಾರಿತ ಅಲ್ಲದ ಆದರೆ ಬದುಕಿನ ನಿಜ ದರ್ಶನದಿಂದ ಹುಟ್ಟುವ ದರುಶನ. ಅದನ್ನು ಕಾಂಬುವ ಪರಿ ಬೇರೆ ಬೇರೆ ಅಷ್ಟೆ. ನಾಗಶ್ರೀ ಕವಿತೆಗಳಲ್ಲಿ ಪುರಾಣ ಪಾತ್ರಗಳು ನೇರವಾಗಿ ಪ್ರಸ್ತಾಪ ಆಗುವುದಿಲ್ಲ. ಆ ಅಂಥ ಕಾವ್ಯ ನಾಯಕರ ಒಣ ಉಪದೇಶಗಳೂ, ಹುಚ್ಚು ಆವೇಶಗಳೂ ಮೈ ತಳೆಯದೇ ಆ ಅಂಥ ಕಾವ್ಯ ನಾಯಕರು ಈ ಒಣ ನೆಲದಲ್ಲಿ ಉದುರಿಸಿ ಹೋದ ಆದರ್ಶಗಳು ಮಾತ್ರ ಸ್ಥಾಯಿ ಶೃತಿಯಾಗಿ ಈ ಕವಿಯ ಹಾಡಿಗೆ ಹಾದಿಯ ಸಾಥಿಯಾಗಿವೆ ಮತ್ತು ಆ ಅದೇ ಕಾರಣಕ್ಕೇ ಸದ್ಯ ಬರೆಯುತ್ತಿರುವವರಿಗಿಂತ ಭಿನ್ನವಾಗಿ ಅವರ ಕವಿತೆಗಳ ಆಪ್ತ ಓದಿಗೆ ಅನುಗೊಳಿಸುತ್ತವೆ. ಸಹೃದಯರ ಸಾಧಾರಕ್ಕಾಗಿ ನಾಗಶ್ರೀ ಅಜಯ ಅವರ ಆಯ್ದ ಆರು ಪದ್ಯಗಳು; ೧. ಹಚ್ಚಿಕೊಂಡರೆ ಹೇಗೆಂದು ಒಮ್ಮೆ ನನ್ನ ಜತೆಗಿದ್ದು ನೋಡು ಉಬ್ಬಸದ ಕಡೆ ಉಸಿರಿನಲೂ ನಿನ್ನದೇ ಹೆಸರು ಉಸುರುವ ಹುಚ್ಚುಚ್ಚು ಹುಡುಗಿ ನಾನು ಥಂಡಿ ಹವೆಯಲಿ ಎದ್ದ ಎದೆನಡುಕ ವಿರಹ ಬೆಚ್ಚನೆಯ ಉಣ್ಣೆಯಂಗಿ ಸುಡುವ ಚಹಾ ಬಿಸಿಯಾಗಿಸದು ಎಂದು ನಿನ್ನ ನೆವದಿಂದ ಜೋಮು ಬಿಡಿಸಿ ಕುಣಿಕುಣಿದು ಓಡುವ ಮರಿಜಿಂಕೆ ಪಾದಗಳು ಸಿಟ್ಟಿನ ಸಟ್ಟುಗದಲಿ ಒಂದೇಟು ಮುಟ್ಟಿಸಿ ಟೂ ಬಿಟ್ಟು ಮೂತಿಯುಬ್ಬಿಸಿ ಕೊನೆಯ ಸಂದೇಶ ಕೊನೆಯ ಮಾತು ಗಟ್ಟಿ ತೀರ್ಮಾನಗಳ ಮಾರಕಾಸ್ತ್ರ ಪ್ರಯೋಗಗಳು ಇನ್ನೂ ಹೊಸ್ತಿಲು ದಾಟುವಂತಿಲ್ಲ ಆಗಲೇ ಮೊದಮೊದಲ ಪ್ರೇಮಸಲ್ಲಾಪ ನೆನಪಾಗುವುದು ನಸುನಾಚಿಕೆಯಲಿ ತುಸುಬಿರಿವುದು ತುಟಿ ಗದ್ದೆಯಂಚಿನ ಬದು ಒಡೆದಂತೆ ಕೊಚ್ಚಿ ಹೋಗುವುದು ಮುನಿಸು ಅಷ್ಟೇಕೆ ವಿವರಿಸಲಿ? ಹಚ್ಚಿಕೊಂಡವರಿಗಷ್ಟೇ ಗೊತ್ತು ಮೆಚ್ಚಿಕೊಂಡವರ ಸುಖ-ದುಃಖ ಇಚ್ಚೆಯಿದ್ದವರ ಆಳು ಈ ಸ್ವರ್ಗ- ನರಕ ೨. ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ನೀನು ದೂರದ ಬೆಟ್ಟದಲಿ ಮರದ ತುದಿಗೆ ಸಿಕ್ಕಿಬಿದ್ದ ಗಾಳಿಪಟ ಬೇಸಿಗೆಯ ಸುಡು ಮಧ್ಯಾಹ್ನ ಮೊಸರಲಿ ಅದ್ದಿ, ಉಪ್ಪು ಹಚ್ಚಿ ಒಣಗಲೆಂದೇ ಇಟ್ಟ ಮೆಣಸಿನಕಾಯಿ ಮಳೆಗಾಲದ ಸಂಜೆ ಜಡಿಯಲಿ ತೊಯ್ದು ತೊಪ್ಪೆಯಾದ ಒದ್ದೆ
ಅಂಕಣ ಬರಹ ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು (ಟೈಂ ಬ್ಯಾಂಕ್ ಅಕೌಂಟ್ ಮೆಂಟೇನನ್ಸ್- ಹೀಗೆ ಮಾಡಿ ನೋಡಿ ) ಟೈಂ ನೋಡೋಕೂ ಟೈಂ ಇಲ್ಲ. ಎಲ್ಲಾ ಟೈಮಿನೊಳಗೂ ಮೈ ತುಂಬ ಕೆಲಸ. ಎಲ್ಲಿ ಕುಂತರೂ ಕೆಲಸ ಕೈ ಮಾಡಿ ಕರಿತಾವ..ಮೈ ಕೆರೆದುಕೊಳ್ಳಲೂ ಪುರುಸೊತ್ತಿಲ್ಲದಂಗ ಕೆಲಸ ಮಾಡಿದರೂ ಕೆಲಸ ಮುಗಿತಿಲ್ಲ. ಆದರೂ ಮಾಡಿದ ಕೆಲಸ ಒಂದೂ ನೆಟ್ಟಗಾಗ್ತಿಲ್ಲ ಎನ್ನುವದು ಅನೇಕರ ಗೊಣಗಾಟ. ಇಂಥ ಟೈಮಿನೊಳಗ ಕನಸು ಬೇರೆ ಕಾಡ್ತಾವ. ಕನಸು ಕಾಣಬೇಕೋ ನೆಟ್ಟಗಾಗುವಂಗ ಕೆಲಸ ಮಾಡೂ ರೀತಿನ ಬದಲಿಸಬೇಕೋ ಏನೂ ತಿಳಿತಿಲ್ಲ. ಎಲ್ಲಾ ಗೊಂದಲಮಯ. ಈ ಗೊಂದಲಕ್ಕೆ ಮಂಗಳಾರತಿ ಹಾಡಬೇಕಂದರೆ ಇದನ್ನು ಗಮನವಿರಿಸಿ ಓದಿ ಇದರಲ್ಲಿಯ ನಿಯಮ ಪಾಲಿಸಿ.ಕೆಲಸಕ್ಕೆ ಉತ್ತಮ ಫಲ ತಾನೆ ಸಿಗುತ್ತೆ ನೋಡಿ.. ಕಾಲ ಮಿತ್ರನೂ ಹೌದು ಶತ್ರುವು ಹೌದು ಅರೆ ಅದ್ಹೇಗೆ ಮಿತ್ರ ಶತ್ರು ಆಗುವದು ಸಾಧ್ಯವಿದೆ ಅಂತಿರೇನು? ಕಾಲವನ್ನು ನಾವು ಸಕಾರಾತ್ಮಕವಾಗಿ ಉಪಯೋಗಿಸಿಕೊಂಡರೆ ಮಾತ್ರ ಮಿತ್ರ ಇಲ್ಲದೇ ಹೋದರೆ ಶತ್ರು. ಬದುಕನ್ನು ನಂದನವನದಂತೆ ಸುಂದರಗೊಳಿಸುವ ದಿವ್ಯಶಕ್ತಿ ಮತ್ತು ಬಿರುಗಾಳಿಯಂತೆ ಹಾಳುಗೆಡುವುವÀ ದೈತ್ಯಶಕ್ತಿಯೂ ಇದಕ್ಕಿದೆ. ಕಾಲವನ್ನು ತಡೆಯೋರು ಯಾರು ಇಲ್ಲ. ಕಾಲ ಸಮುದ್ರದ ಅಲೆಯಂತೆ ಯಾರಿಗೂ ಕಾಯಲ್ಲ. ಕಾಲದ ಕಾಲಿಗೆ ಸಿಕ್ಕು ಹಲುಬದಿರಿ. ಚಿರದುಃಖಿಗಳಾಗದಿರಿ. ಅದನ್ನು ನೀವು ನಿಮ್ಮ ಆಪ್ತಮಿತ್ರನನ್ನಾಗಿಸಿಕೊಳ್ಳಿ. ಕಾಲವನ್ನು ಉಪೇಕ್ಷಿಸಿದರೆ ಅದು ನಮ್ಮನ್ನೂ ಉಪೇಕ್ಷಿಸುತ್ತದೆ. ಎನ್ನುವದು ನೆನಪಿರಲಿ ಕಾಲವನ್ನು. ಗೌರವಿಸಿದರೆ ನಮ್ಮನ್ನು ಗೌರವಿಸುವ ಕಾಲ ಬರುತ್ತೆ. ವ್ಯರ್ಥವಾಗಿ ವ್ಯಯ ಮಾಡಿದರೆ ನಮ್ಮ ಕಾಲುಗಳನ್ನೇ ಇಲ್ಲದಂತೆ ಮಾಡುತ್ತೆ. ಸದುಪಯೋಗಪಡಿಸಿಕೊಂಡರೆ ಸುಖದ ಉಡುಗೊರೆಯಾಗುತ್ತೆ. ಹೀಗೆ ಉಡುಗೊರೆಯಾಗಿಸಿಕೊಳ್ಳಲು ಕಳೆದು ಹೋದ ಸಮಯ ಒಡೆದ ಮುತ್ತಿನಂತೆ ಮರಳಿ ಮತ್ತೆಂದೂ ಬಾರದು ಎಂಬುದು ಮನದಲ್ಲಿರಲಿ. ಕೈಯಲ್ಲಿ ಹಿಡಿದುಕೊಂಡರೆ ಕಾಲಡಿಯಲ್ಲಿ ಬೀಳುತ್ತೆ. ಕಾಲವನ್ನು ಕೊಳ್ಳುವ ಶ್ರೀಮಂತ ಜಗತಿನಲ್ಲಿ ಇನ್ನೂ ಹುಟ್ಟಿಲ್ಲ. ಹಣದಿಂದ ಜಗತ್ತಿನ ಎಲ್ಲ ವೈಭೋಗಗಳನ್ನು ನಮ್ಮದಾಗಿಸಿಕೊಂಡು ಮೆರೆಯಬಹುದು. ಆದರೂ ಕಾಲವನ್ನು ಕೊಳ್ಳುವ ಶಕ್ತಿಯನ್ನು ಕಾಲ ಜಗತ್ತಿನ ನಂಬರ್ ಒನ್ ಶ್ರೀಮಂತನಿಗೂ ಕೊಟ್ಟಿಲ್ಲ.ಇಂಥ ಶಕ್ತಿಯುತ ಕಾಲವನ್ನು ಅಂಗೈಯಲ್ಲಿ ತಡೆದು ಹಿಡಿದಿಟ್ಟುಕೊಂಡರೆ ನಮ್ಮ ಕಾಲಡಿಯಲ್ಲಿ ಬೀಳುತ್ತೆ. ಹಿಡಿದಿಟ್ಟುಕೊಳ್ಳುವ ಶಕ್ತಿ ಮನಸ್ಸಿಗೆ ಮಾತ್ರ ಇದೆ.ಹೀಗೆ ಮನಸ್ಸು ಮಾಡಿದರೆ ಕಾಲನಿಗೆ ಯಜಮಾನರಾಗಬಹುದು. ಯಜಮಾನರಾಗಲು ಶಿಸ್ತು ಸಂಯಮವೆಂಬ ಹಣ ಬೇಕೇ ಬೇಕು. ದಿನದ ಪ್ರತಿ ಕ್ಷಣ ಹೇಗೆ ಕಳೆಯಬೇಕೆಂಬ ವೇಳಾಪಟ್ಟಿ ಹಿಂದಿನ ದಿನದ ರಾತ್ರಿಯೇ ಸಿದ್ಧವಾಗಿರಬೇಕು ನೀವು ಹಾಕಿಕೊಂಡೆ ವೇಳಾ ಪಟ್ಟಿಯ ಅನುಷ್ಟಾನದಲ್ಲಿ ಕೆಲವು ಅಡೆತಡೆಗಳು ಬಂದೇ ಬರುತ್ತವೆ ಅವಗಳನ್ನು ಜಾಣ್ಮೆಯಿಂದ ಪರಿಹರಿಸಿ..ಕಾಲದ ಸದುಪಯೋಗಪಡಿಸಿಕೊಂಡವನೇ ಜಾಣ. ಅವನೇ ಗೆಲುವಿನ ಸರದಾರ. ಸಮಯ ಸರಿಯಾಗಿ ಉಪಯೋಗಿಸುತ್ತ ಹೋದ ಹಾಗೆ ಆತ್ಮವಿಶ್ವಾಸದ ಬಲ ಹೆಚ್ಚುತ್ತೆ. ಆತ್ಮವಿಶ್ವಾಸವಿರುವವನು ಸಾಧನೆಗೆ ಬೇಗ ಹತ್ತಿರವಾಗುತ್ತಾನೆ. ದಿನದ ಒಟ್ಟು ಕಾಲವನ್ನು ಅಂಗೈಯಲ್ಲಿಟ್ಟುಕೊಂಡು ಗುರಿ ಸಾಧನೆಗೆ ಮೀಸಲಿಟ್ಟು ಕಾರ್ಯ ಪ್ರವೃತ್ತರಾಗಬೇಕು. ಹೀಗೆ ಮಾಡುವದರಿಂದ ಬೆರಗು ಸೃಷ್ಟಿಸಬಹುದು. ಕಾಲವನ್ನು ನಿಮಗಿಷ್ಟ ಬಂದಂತೆ ಆಡಿಸೋ ಶಕ್ತಿ ನಿಮಗಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ವೇಳಾ ಪಟ್ಟಿಯ ಅನುಸರಣೆಯ ರೂಡಿ ಅಂಟಿಸಿಕೊಳ್ಳಿ. ಸೋಮಾರಿತನದ ರೋಗದಿಂದ ಮುಕ್ತವಾದರೆ ಮಾತ್ರ ಕಾಲ ನಿಮ್ಮ ಕೈಗೆ ಸಿಗೋದು. ಸೋಮಾರಿತನಕ್ಕೆ ಮತ್ತು ಕಾಲಕ್ಕೆ ಎಣ್ಣೆ ಸೀಗೆಕಾಯಿ ಸಂಬಂಧ. ಕಾಲ ಎಲ್ಲ ಸಂಪತ್ತನ್ನೂ ಮೀರಿದ್ದು. ಈ ಸಂಪತ್ತಿನ ಒಡೆಯರಾಗಬೇಕೆಂದರೆ ಶ್ರದ್ಧೆ ಮತ್ತು ಪರಿಶ್ರಮದ ಅವಶ್ಯಕತೆಯಂತೂ ಇದ್ದೇ ಇದೆ. ಗುರಿಯ ಗೆರೆ ಮುಟ್ಟೋಕೆ ಕಾಲನ ಸಾಥ್ ಬೇಕೆ ಬೇಕು. ತಿಥಿ ಮಿತಿ ನೋಡದೆ ಒಂದೇ ಸಮನೆ ಓಡಬೇಕು. ಯಾವುದೇ ರಸ್ತೆಯಲ್ಲಿ ಸುಮ್ಮನೆ ಗೊತ್ತು ಗುರಿಯಿಲ್ಲದೆ ನಡೆಯುವದನ್ನು ಬಿಟ್ಟು ಗುರಿ ಯಾವುದು? ಎಷ್ಟು ಸಮಯದವರೆಗೆ ಅದರ ಜೊತೆ ಕಾಲು ಹಾಕಬೇಕು ಎನ್ನುವದನ್ನು ಮೊದಲೇ ನಿರ್ಧರಿಸಬೇಕು. ಹಿತ ಚಕ್ರದೊಂದಿಗೆ ಕಾಲು ಹಾಕಿ ಬೇರೆ ಎಲ್ಲರಿಗೂ ಹೊಂದಿಕೆಯಾಗುವಂತೆ ತನ್ನನ್ನ್ನು ಕತ್ತರಿಸಿಕೊಳ್ಳುವವÀನು ತನ್ನ ಸ್ವಂತ ಆಕಾರವನ್ನೇ ಕಳೆದುಕೊಳ್ಳುತ್ತಾನೆ. ಎಂಬುದೊಂದು ನುಡಿಮುತ್ತು. ನಿನ್ನ ಸ್ಡಂತ ಆಸಕ್ತಿಗಳ ಬಗ್ಗೆ ಯೋಚಿಸಿದ್ರೆ ಪರರ ಹಿತಾಸಕ್ತಿಗಳನ್ನು ಚೆನ್ನಾಗಿ ಪೋಷಿಸಬಲ್ಲಿರಿ. ಇದೇ ಹಿತಚಕ್ರ . ಈ ಹಿತಚಕ್ರದೊಂದಿಗೆ ಕಾಲು ಹಾಕಿದರೆ ಕಾಲದ ಮೌಲ್ಯ ನಿಮಗೆ ಪೂರ್ಣ ದಕ್ಕುತ್ತದೆ. ಉತ್ತಮ ನಾಯಕರು ಹುಟ್ಟಿ ಬಂದವರಲ್ಲ. ಕಾಲನ ಸದುಪಯೋಗದಿಂದ ರೂಪಗೊಂಡವರು. ಎಂಬ ಮಾತು ಮನದಲ್ಲಿರಲಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಅಂದುಕೊಳ್ಳುತ್ತಾರೊ ಎಂಬ ಯೊಚನೆಯಲ್ಲಿ ಬೀಳದಿರಿ. ನಿಮ್ಮಲ್ಲಿ ಇಲ್ಲದುದುರ ಬಗ್ಗೆ ಕೊರಗುವ ಬದಲು ನಿಮ್ಮಲ್ಲಿರುವ ಪ್ರತಿಭೆಯ, ಸದ್ಗುಣಗಳನ್ನು ಪೋಷಿಸಿ ಬೆಳೆಸಲು ಕಾಲ ಕಳೆಯಿರಿ. ಆಶಾರಹಿತ ಭಾವವೇ ಬೇಸರ. ಆಯಾಸವೆನಿಸಿದಾಗ ವಿರಾಮಕ್ಕೆ ಜಾಗ ಮಾಡಿಕೊಡಿ ಹೊರತು ಬೇಸರಕ್ಕಲ್ಲ. ಇಂದು ನಿಮ್ಮ ಕೈಯಲ್ಲಿದೆ. ಸಾಧನೆಗೆ ಬೇಕಾಗಿರುವ ಮೊದಲ ಭಾವ ಕನಸು. ಕಾಲ ಮತ್ತು ಕನಸಿನ ನಡುವೆ ಅವಿನಾಭಾವ ಸಂಬಂಧವುಂಟು. ಕಣ್ಣಲ್ಲಿ ಕನಸಿಲ್ಲದಿದ್ದರೆ ಹೋಗುವ ದಾರಿ ತಿಳಿಯುವದಿಲ್ಲ. ಸಾಧನೆಯಲ್ಲಿ ಕನಸು ಪ್ರಥಮ ಹೆಜ್ಜೆ. ಮೊದಲ ಹೆಜ್ಜೆ ಗಟ್ಟಿಯಾಗಿರಬೇಕು. ದಿಟ್ಟವಾಗಿರಬೇಕು. ಆತಂಕವನು ದೂರ ಸರಿಸಿ ಕಂಡ ಕನಸಿಗೆ ಶಕ್ತಿ ಸಾಮಥ್ರ್ಯ ಕೊಡಬೇಕಾದರೆ ನಿನ್ನೆ ನಾಳೆಗಳ ಚಿಂತೆಯಲ್ಲಿ ಇಂದನ್ನು ಹಾಳು ಮಾಡಿಕೊಳ್ಳದಿರಿ.ನಿನ್ನೆ ಇತಿಹಾಸ ನಾಳೆ ನಿಗೂಢ ಇಂದು ಉಡುಗೊರೆ ಅದನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವ ಯೋಜನೆ ಹಾಕಿಕೊಳ್ಳಿ ಯೋಜನೆ ಅನ್ನುವದು ಮಾನಸಿಕ ದೂರ ದೃಷ್ಟಿ. ಪ್ರತಿ ಕೆಲಸಕ್ಕೂ ಲೆಕ್ಕಾಚಾರ ಹಾಕಿ ತರ್ಕಬದ್ಧವಾಗಿ ಯೋಚಿಸಿ ಸಮಯದ ಸದುಪಯೋಗದ ಕುರಿತು ಮೈಂಡ್ ಟ್ಯೂನಿಂಗ್(ಮೆದುಳು ಹದಗೊಳಿಸುವದು) ಮಾಡಿಕೊಂಡರಂತೂ ಭಯ ಉದ್ವೇಗ ಖಿನ್ನತೆಗಳು ಮಾಯವಾಗುತ್ತವೆ. ಕಾಲದ ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಹಿಡಿದ ಕಾರ್ಯದಲ್ಲಿ ತಲ್ಲೀನವಾದರೆ ವಿಜಯದ ಮಾಲೆ ನಿಮ್ಮ ಕೊರಳನ್ನು ಹುಡುಕಿಕೊಂಡು ಬರುತ್ತೆ. ಕೆಲವೊಂದಕ್ಕೆ ಇಲ್ಲ ಅನ್ನಿ ಸಮಯವನ್ನು ರಬ್ಬರ ತರ ಹಿಗ್ಗಿಸೋಕೂ ಆಗಲ್ಲ ಕುಗ್ಗಿಸೋಕೂ ಆಗಲ್ಲ. ಒಂದು ದಿನಕ್ಕಿರೋದು 1440 ನಿಮಿಷ ಮಾತ್ರ. ಸಾಧಿಸಬೇಕಾದ ಗುರಿಗೆ ಈ ಸಮಯ ಸಾಕಾಗಲ್ಲ. ಅಂತಿಮವಾಗಿ ನಿಮ್ಮ ಸಮಯವನ್ನು ಹಾಳು ಮಾಡಲು ನಿಂತವರಿಗೆ ನಿರ್ದಾಕ್ಷಿಣ್ಯವಾಗಿ ಇಲ್ಲ ಎಂದು ಹೇಳಲು ಕಲಿಯಿರಿ. ದಾಕ್ಷಿಣ್ಯಕ್ಕೆ ಬಿದ್ದು ಅಮೂಲ್ಯ ಸಮಯ ಹಾಳು ಮಾಡಿಕೊಳ್ಳದಿರಿ. ನೀವು ಕೆಲಸ ಮಾಡುವ/ಓದುವ ಕೋಣೆಯಲ್ಲಿ ನನ್ನ ಸಮಯ ಅಮೂಲ್ಯ ಎಂದು ದೊಡ್ಡದಾಗಿ ಬರೆದು ಅಂಟಿಸಿ. ಸಮಯ ಪಾಲಿಸದವರ ಜೊತೆ ಅತಿಯಾದ ಸ್ನೇಹಬೇಡ. ಯಾರೋ ಯಾವುದೊ ಇಲ್ಲ ಸಲ್ಲದ ಕೆಲಸಕ್ಕೆ ಕರೆದರೆ ಇಲ್ಲ ಎನ್ನಲಾಗದೆ ಅವರ ಹಿಂದೆ ಕಾಲು ಎಳೆದುಕೊಂಡು ಹೊಗದಿರಿ. ನಿಮ್ಮ ಅತೀ ಜರೂರು ಕೆಲಸದ ಕಾರಣ ಹೇಳಿ ನಯವಾಗಿ ನಿರಾಕರಿಸಿ. ಹರಟೆ ತಡರಾತ್ರಿಯವರೆಗೂ ಹೊರಗೆ ತಿರುಗಾಡುವದು ಅಪರಿಚಿತ ವ್ಯಕ್ತಿಗಳೊಂದಿಗೆ ವಾಟ್ಸಪ್ ಫೇಸ್ ಬುಕ್ಗಳಲ್ಲಿ ಅನವಶ್ಯಕ ಚಾಟ್ ಮಾಡೋದು ಇವೆಲ್ಲವುಗಳಿಗೆ ಮುಲಾಜಿಲ್ಲದೆ ಇಲ್ಲ ಅನ್ನಿ. ಕಲೆ ಕರಗತಗೊಳಿಸಿಕೊಳ್ಳಿ ಸಮಯ ಆಭಾವದಿಂದ ಕೆಲಸದ ಒತ್ತಡ ಹೆಚ್ಚುತ್ತಿದೆ. ಅಂತ ಕಾರಣ ಹೇಳುವದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಬಹಳ ಕೆಲಸಗಳಲ್ಲಿ ತೊಡಗಿಸಿಕೊಂಡವರು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವಷ್ಟು ಸಮಯ ಹೊಂದಿರುತ್ತಾರೆ. ನೀವೊಂದು ಮಹಲು ಕಟ್ಟುವದಾದರೆ ಕೈತುಂಬ ಕೆಲಸವಿರುವ ವಾಸ್ತುಶಿಲ್ಪಿಯ ಬಳಿ ಹೋಗಿ. ಎನ್ನುವ ನುಡಿಮುತ್ತು ಸಮಯ ನಿರ್ವಹಣೆ ಒಂದು ಕಲೆ ಎನ್ನುವದನ್ನು ಸಾರಿ ಹೇಳುತ್ತೆ. ಸಮಯ ನಿರ್ವಹಣೆಯಲ್ಲಿ ಆದ್ಯತೆಗೆ ಪ್ರಥಮ ಆದ್ಯತೆಯಿದೆ. ಅದರಲ್ಲಿ ತುರ್ತು ಮತ್ತು ಮಹತ್ವದ್ದು. ಅಂತ ಎರಡು ಪ್ರಕಾರ ತುರ್ತು ಅನಿವಾರ್ಯವಾದ ಕೆಲಸಗಳಿದ್ದರೆ ಶ್ರದ್ಧೆ ಶಿಸ್ತು ಆಸಕ್ತಿಯಿಂದ ತೊಡಗಿಸಿಕೊಳ್ಳಿ. ತಕ್ಷಣದ್ದು ಮತ್ತು ಅನಿವಾರ್ಯವಾದದ್ದು ಅಂದರೆ ತಕ್ಷಣಕ್ಕೆ ನಿಮಗೆ ಖುಷಿ ಕೊಡಬಹುದು. ಆದರೆ ಅದರ ಅಗತ್ಯ ನಿಮಗಿಲ್ಲ. ಎನ್ನುವಂತದಕ್ಕೆ ಮಾರು ಹೋಗಲೇಬೇಡಿ. ಅನಿವಾರ್ಯ ಮತ್ತು ತಕ್ಷಣವಲ್ಲದ್ದು ಅಂದರೆ ಭವಿಷ್ಯತ್ತಿನಲ್ಲಿ ಲಾಭದಾಯಕವಾದುದು. ಈಗ ಮಾಡದೇ ಹೋದರೆ ಮುಂದೆ ತೊಂದರೆ ಆಗುವಂತಹುದು. ಸಮಯಾವಕಾಶ ಬಹಳವಿದೆಯೆಂದು ಮುಂದೂಡುತ್ತ ಬಂದರೆ ಸಂಕಷ್ಟಕ್ಕೆ ಸಿಲುಕಿ ಹಾಕಿಕೊಳ್ಳುವದು ನೂರಕ್ಕೆ ನೂರುಷ್ಟು ಖಚಿತ. ಮುಂಬರುವ ವಾರ್ಷಿಕ ಪರೀಕ್ಷೆಗೆ ಸ್ಪರ್ಧಾತ್ಮಕ ಪರೀಕ್ಷೆಗೆ .ಇನ್ನೂ ಸಾಕಷ್ಟು ಸಮಯವಿದಿಯೆಂದು ಉಪೇಕ್ಷಿಸಿ ತಯಾರಿ.ಮಾಡದೇ ಹೋದರೆ ಸಮಸ್ಯೇಗೆ ಆಹ್ವಾನ ನೀಡಿದಂತೆ ಸರಿ. ಊಟ ಆಟ ಟಿವಿ ಮನರಂಜನೆ ಕುಟುಂಬ ಗೆಳತನಕ್ಕೆ ಅಗತ್ಯವಿರುವಷ್ಟು ಸಮಯ ಎತ್ತಿಡಿ. ಟೈಂ ಬ್ಯಾಂಕ್ ಬ್ಯಾಲೆನ್ಸ್ ಒಂದು ದಿನ ಬ್ಯಾಂಕಿನ ಖಾತೆಯಲ್ಲಿ ಪ್ರತಿದಿನವೂ ಪ್ರತಿಯೊಬ್ಬರಿಗೂ ಬೆಳ್ಳಂಬೆಳಿಗ್ಗೆ 86400 ಸೆಕೆಂಡುಗಳು ಜಮೆಯಾಗಿರುತ್ತವೆ. ಈ ಸೆಕೆಂಡುಗಳನ್ನು ಅಂದೇ ಖರ್ಚು ಮಾಡಬೇಕು. ಇಲ್ಲಿ ಓವರ್ ಡ್ರಾಫ್ಟ್ ಸೌಲಭ್ಯವಿಲ್ಲ. ಅಂದಿನದು ಅಂದು ಖರ್ಚು ಮಾಡಬೇಕು ಇಲ್ಲದಿದ್ದರೆ ಖಾತೆಯಲ್ಲಿ ಬ್ಯಾಲೆನ್ಸ್ ನಿಲ್ ಆಗಿ ಹೋಗುತ್ತೆ. ದೇವರು ನೀಡಿದ ಟೈಂ ಬ್ಯಾಂಕಿನ ಸೆಕೆಂಡುಗಳನ್ನು ತಪ್ಪದೇ ಸದ್ವಿನಿಯೊಗಪಡಿಸಿಕೊಳ್ಳಬೇಕು. ಟೈಂ ವೇಗವಾಗಿ ಜಾರುತ್ತಿದೆಯಾದರೆ ನೀವು ತುಂಬಾ ಬಿಜಿ ಎಂದರ್ಥ. ಬಿಜಿಯಾಗಿರುವ ಸಾಧಕರಿಗೆ ಸಮಯ ನಿರ್ವಹಣೆ ತುಂಬಾ ಆಕರ್ಷಣೀಯವಾಗಿ ಸೆಳೆಯುತ್ತೆ ಹೀಗಾಗಿ ಅವರು ನಮ್ಮ ಟೈಂ ಬ್ಯಾಂಕಿನಲ್ಲಿ ಪ್ರತಿದಿನದ ಒಂದೊಂದು ಸೆಕಂಡನ್ನು ಕಳೆದುಕೊಳ್ಳಲು ಇಚ್ಛಿಸುವದಿಲ್ಲ. ಕಳೆದುಕೊಂಡಿದ್ದು ವಸ್ತು ಆದರೆ ಹುಡುಕಬಹುದು. ಸಿಗದಿದ್ದರೆ ಮತ್ತೊಂದು ಪಡೆದುಕೊಳ್ಳಲೂಬಹುದು. ಕಳೆದುಕೊಂಡದ್ದು ಸಮಯವಾದರೆ ಹುಡುಕಲೂ ಆಗದು ಪಡೆದುಕೊಳ್ಳಲೂ ಆಗದು. ಎನ್ನುವದನ್ನು ಮನಸ್ಸಿನಲ್ಲಿ ಬೇರೂರಿಸಿಕೊಂಡು ನಿಖರವಾದ ಗುರಿಯೊಂದಿಗೆ ಸಂವಹನ ಕಲೆ ಜಾಣ್ಮೆ ವ್ಯಹವಾರ ಕೌಶಲ ಬೆರೆಸಿ ಕಾಲದ ಜೊತೆ ಕಾಲು ಹಾಕಿದರೆ ಕಣ್ಣು ಕಂಡ ಕನಸುಗಳೆಲ್ಲ ನನಸಾಗಿ ಗೆಲುವು ನಿನ್ನ ಕಾಲಡಿಯಲ್ಲಿ ನಿಂತಿರುತ್ತದೆ ಹಾಗದರೆ ತಡವೇಕೆ? .ಬನ್ನಿ ಟೈಂ ಬ್ಯಾಂಕ್ ಬ್ಯಾಲನ್ಸ್ನ್ನು ಬೇಗ ಬೇಗ ಇಂದಿನಿಂದ ಇಂದೇ ಗುರಿ ಸಾಧನೆಗಾಗಿ ಖಾಲಿ ಮಾಡಿ ಯಶ ಗಳಿಸಿ. =============================================== ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು
ಅಂಕಣ ಬರಹ ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ ಕೆ.ಬಿ.ವೀರಲಿಂಗನಗೌಡ್ರ ಪರಿಚಯ ಬಾಗಲಕೋಟ ಜಿಲ್ಲೆ, ಬಾದಾಮಿ ತಾಲೂಕಿನ ನಂದಿಕೇಶ್ವರ ಸ್ವಗ್ರಾಮ. ಪ್ರಸ್ತುತ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ(ಶಿರ್ಸಿ) ಪಟ್ಟಣದಲ್ಲಿ ಚಿತ್ರಕಲಾ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಪ್ರಕಟಿತ ಕೃತಿಗಳು ‘ಅರಿವಿನ ಹರಿಗೋಲು’ (ಕವನ ಸಂಕಲನ), ‘ಅವಳು ಮಳೆಯಾಗಲಿ’ (ಕಥಾ ಸಂಕಲನ), ಘಟಸರ್ಪ (ಸಾಮಾಜಿಕ ನಾಟಕ), ‘ಸಾವಿನಧ್ಯಾನ’ (ಲೇಖನಗಳ ಸಂಕಲನ), ‘ಮೌನ’ (ಸಂಪಾದಿತ) ಸಂದರ್ಶನ ಪ್ರಶ್ನೆ :ನೀವು ಚಿತ್ರ ಮತ್ತು ಕವಿತೆಗಳನ್ನು ಏಕೆ ಬರೆಯುತ್ತಿರಿ? ಉತ್ತರ :ನನ್ನೊಳಗೆ ನುಸುಳುವ ತುಮುಲಗಳನ್ನು ಹೊರಹಾಕಿ ಹಗುರಾಗುವುದಕ್ಕೆ. ಪ್ರಶ್ನೆ :ಚಿತ್ರ ಮತ್ತು ಕವಿತೆ ಹುಟ್ಟುವ ಕ್ಷಣ ಯಾವುದು? ಉತ್ತರ :ಒಂದು ನೋವು ತಿಂದಾಗ, ಇನ್ನೊಂದು ನೋವಿಗೆ ಕಾಲವೇ ಮುಲಾಮು ಸವರುವಾಗ. ಪ್ರಶ್ನೆ :ನಿಮ್ಮ ಕವಿತೆಗಳ ವಸ್ತು, ವ್ಯಾಪ್ತಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಉತ್ತರ :ನಿರ್ದಿಷ್ಟವಾದ ವಸ್ತು ವ್ಯಾಪ್ತಿ ಅಂದ್ರೆ ಅದೊಂದು ಚೌಕಟ್ಟು ಅನ್ಸತ್ತೆ, ಚೌಕಟ್ಟಿಗೆ ಸಿಲುಕದೆ ಮೆಲ್ಲಗೆ ಎಲ್ಲವ ದಾಟಿಕೊಂಡು ಅಲ್ಲಮರ ಬಯಲಿಗೆ ಹೋಗಲು ಕನವರಿಸುವೆ, ಬಯಲೇ ನನ್ನ ವಸ್ತು ಮತ್ತು ವ್ಯಾಪ್ತಿ. ಇನ್ನು ನನ್ನನ್ನು ಪದೇ ಪದೇ ಕಾಡುವ ವಿಷಯ ಅಂದ್ರೆ, ಚಾಡಿ ಕೇಳಲಷ್ಟೇ ತೆರೆದುಕೊಳ್ಳುವ ಕೆಲ ಹಾಳು ಕಿವಿಗಳಿಗೆ, ಜೀವಪ್ರೀತಿಯ ಹಾಡನ್ನು ಹೇಗೆ ತಾಗಿಸುವುದು! ಪ್ರಶ್ನೆ :ಕವಿತೆಗಳಲ್ಲಿ ಬಾಲ್ಯ ಹರೆಯ ಇಣುಕಿದೆಯೇ? ಉತ್ತರ :ಅನುಭವಿಸದೇ ಬರೆಯುವುದು ಬಾಲ್ಯ, ಅನುಭವಿಸಿ ಬರೆಯುವುದು ಹರೆಯ, ಅನುಭವ ಅನುಭಾವ ಆಗುವುದೇ ಮುಪ್ಪು ಅಥವಾ ಮುಕ್ತಿ ಅಂತಾ ಅಂದ್ಕೊತಿನಿ. ಪ್ರಶ್ನೆ :ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ಉತ್ತರ :ಜಾತಿ ಧರ್ಮ ಮತ್ತು ಹಣಕ್ಕಾಗಿ ಅಮೂಲ್ಯವಾದ ಮತವನ್ನೇ ಮಾರಿಕೊಳ್ಳೊರು, ತೂರಿಕೊಳ್ಳೊರು, ಅಡ ಇಡೊವ್ರು ಇರೊವರ್ಗೂ ರಾಜಕೀಯ ಸನ್ನಿವೇಶ ಚೆನ್ನಾಗಿರಲ್ಲ.. ಪ್ರಶ್ನೆ :ಧರ್ಮ ದೇವರ ವಿಷಯದಲ್ಲಿ ನಿಮ್ಮ ನಿಲುವೇನು? ಉತ್ತರ : ಈ ಎರಡೂ ನಮ್ಮೊಳಗೆ ಮಾನವೀಯ ಪ್ರೀತಿ ತುಂಬಿ, ಚೂರು ದಾರಿ ತಪ್ಪಿದಾಗ ಎಡಬಿಡದೇ ಕಾಡಿ ನಿದ್ದೆಗೆಡಿಸಿ ಭಯ ಹುಟ್ಟಿಸಬೇಕಿತ್ತು, ಆದರೆ ಹಾಗಾಗದೇ ಸ್ವಾರ್ಥದ ಸರಕಾಗುತ್ತಿರುವುದರ ಕುರಿತು ತುಂಬಾ ಬೇಸರವಿದೆ. ಪ್ರಶ್ನೆ : ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಕುರಿತು ನಿಮಗೆ ಏನನ್ನಿಸುತ್ತಿದೆ? ಉತ್ತರ : ಮುಖಗಳಿಗಿಂತ ಮುಖವಾಡಗಳೇ ಹೆಚ್ಹೆಚ್ಚು ರಾಚುತ್ತಿವೆ ಅಂತಾ ಅನ್ನಸ್ತಿದೆ. ಪ್ರಶ್ನೆ : ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ಹೇಗೆ ಪ್ರತಿಕ್ರಿಯಿಸುವಿರಿ? ಉತ್ತರ : ನೇರ ರಾಜಕಾರಣಕ್ಕಿಂತ, ಸಾಹಿತ್ಯಿಕ ರಾಜಕಾರಣ ಸಮಾಜಕ್ಕೆ ಅತೀ ಹೆಚ್ಚು ಅಪಾಯಕಾರಿ. ಪ್ರಶ್ನೆ :ಈ ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತದೆ? ಉತ್ತರ :“ರಿಪೇರಿಯ ಹಂತವನ್ನೂ ಮೀರಿ ಹೋಗುತ್ತಿದೆ” ಎಂದ ಲಂಕೇಶ್‍ರ ಮಾತೇ ಹೇಳುತ್ತದೆ. ಪ್ರಶ್ನೆ :ನಿಮ್ಮ ಕನಸುಗಳೇನು? ಉತ್ತರ :ಬಯಲು ಸೀಮೆಯಲಿ ಕಾಡು ಬೆಳೆಸುವುದು, ಬೆಳೆಸಿದ ಆ ಕಾಡ ನೆರಳಲಿ ಕುಳಿತು ಸ್ನೇಹ ಪ್ರೀತಿ ಸೌಹಾರ್ದತೆಯ ಆಟ ಪಾಠ ಸಂವಾದ ನಡೆಸುವುದು. ಪ್ರಶ್ನೆ :ಕನ್ನಡ ಹಾಗೂ ಅನ್ಯ ಭಾಷೆಯ ಸಾಹಿತ್ಯದಲ್ಲಿ ನಿಮ್ಮ ಇಷ್ಟದ ಹಾಗೂ ಕಾಡಿದ ಕವಿ, ಸಾಹಿತಿ ಯಾರು? ಉತ್ತರ : ಕನ್ನಡದ ಕುವೆಂಪು, ತೇಜಸ್ವಿ, ಲಂಕೇಶ್, ನಿಸ್ಸಾರಹ್ಮದ್, ದೇವನೂರು ಮಹಾದೇವ ತುಂಬಾ ಇಷ್ಟ, ಇನ್ನು ಚಾಲ್ರ್ಸಬಕೊವಸ್ಕಿ, ರೂಮಿ, ಬ್ರೆಕ್ಟ್, ಬೋದಿಲೇರ್ ಮತ್ತು ಗೀಬ್ರಾನ್‍ರ ಅನುವಾದಿತ ಬರಹಗಳು ಸಹ ಕನ್ನಡದಷ್ಟೇ ಇಷ್ಟವಾಗ್ತಾವೆ. ಪ್ರಶ್ನೆ :ಈಚೆಗೆ ಓದಿದ ಕೃತಿಗಳಾವವು? ಉತ್ತರ :‘ನೋವೂ ಒಂದು ಹೃದ್ಯ ಕಾವ್ಯ’ ರಂಗಮ್ಮ ಹೊದೇಕಲ್ಲರ ಕವನ ಸಂಕಲನ, ‘ಏಪ್ರಿಲ್ ಫೂಲ್’ ಹನುಮಂತ ಹಾಲಿಗೇರಿಯವರ ಕಥಾ ಸಂಕಲನ. ‘ದೀಪದ ಗಿಡ’ ಬಸೂ ದ್ವಿಪದಿಗಳು. ಪ್ರಶ್ನೆ :ನಿಮಗೆ ಇಷ್ಟವಾದ ಕೆಲಸ ಯಾವುದು? ಉತ್ತರ :ಮಕ್ಕಳಿಗೆ ಪಾಠ ಮಾಡುವುದು. ಪ್ರಶ್ನೆ :ಇಷ್ಟವಾದ ಸ್ಥಳ ಯಾವುದು? ಉತ್ತರ :ಬಯಲು ಪ್ರಶ್ನೆ :ತುಂಬಾ ಇಷ್ಟಪಡುವ ಸಿನಿಮಾ ಯಾವುದು? ಉತ್ತರ :ದಿಯಾ ಪ್ರಶ್ನೆ :ನೀವು ಮರೆಯಲಾರದ ಘಟನೆ ಯಾವುದು? ಉತ್ತರ :ಪ್ರಕಟಿತ ಕಥೆಗೆ ನೋಟಿಸ್ ಪಡೆದು, ಒಂದು ಬಡ್ತಿ ಕಳೆದುಕೊಂಡಿದ್ದು. ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂಕಣ ಬರಹ ಕನಸಿನೂರಿನ ಕಿಟ್ಟಣ್ಣ ಕನಸಿನೂರಿನ ಕಿಟ್ಟಣ್ಣ ( ಮಕ್ಕಳ ಕಾದಂಬರಿ)ಮಲೆಯಾಳ ಮೂಲ : ಇ.ಪಿ.ಪವಿತ್ರನ್ ಕನ್ನಡಕ್ಕೆ : ಕೆ.ಪ್ರಭಾಕರನ್: ದೇಸಿ ಪುಸ್ತಕಪ್ರಕಟಣೆಯ ವರ್ಷ :೨೦೧೫ಬೆಲೆ :ರೂ.೮೦ಪುಟಗಳು :೧೩೮ ಕನ್ನಡದಲ್ಲಿ ಅತಿ ವಿರಳವೆಂದು ಹೇಳಬಹುದಾದ ಮಕ್ಕಳ ಕಾದಂಬರಿ ಪ್ರಕಾರಕ್ಕೆ ಕೊಡುಗೆಯಾಗಿ ಈ ಕಾದಂಬರಿ ಅನುವಾದವಾಗಿ ಬಂದಿದೆ ಎನ್ನಬಹುದು. ಶೀರ್ಷಿಕೆಯೇ ಸೂಚಿಸುವಂತೆ ಕಿಟ್ಟಣ್ಣ ಈ ಕಥೆಯ ನಾಯಕ. ಕನಸಿನೂರು ಎಂಬ ಪುಟ್ಟ ಹಳ್ಳಿಯ ಮಧ್ಯಮ ವರ್ಗದ ಜಮೀನ್ದಾರಿ ಕುಟುಂಬವೊಂದರಲ್ಲಿ ಪುರಾಣದ ಕೃಷ್ಣನಂತೆ ಜಡಿಮಳೆಯ ಆರ್ಭಟದ ನಡುವೆ ಹುಟ್ಟುವ ಕಿಟ್ಟಣ್ಣ ಮುಂದೆ ಉದ್ದಕ್ಕೂ ಪವಾಡಗಳನ್ನು ಸೃಷ್ಟಿಸುತ್ತ ಹೋಗುತ್ತಾನೆ. ಕಿಟ್ಟಣ್ಣನ ಬುದ್ಧಿಶಕ್ತಿ, ಅವನ ನಿಸರ್ಗ ಪ್ರೇಮ, ನಿಸರ್ಗದೊಂದಿಗಿನ ಅವನ ವಿಚಿತ್ರ ಒಡನಾಟ, ಅವನ ಸಾಹಸಗಳು, ಅವನ ಬದುಕಿನಲ್ಲಾಗುವ ಆಕಸ್ಮಿಕ ತಿರುವುಗಳು ಮತ್ತು ಆಶ್ಚರ್ಯಕರ ಬೆಳವಣಿಗೆಗಳು ಇಡೀ ಕಾದಂಬರಿಯ ಕಥಾನಕದ ಕವಲುಗಳಾಗಿ ಟಿಸಿಲೊಡೆಯುತ್ತ ಹೋಗುತ್ತವೆ. ಮಕ್ಕಳನ್ನು ಖುಷಿ ಪಡಿಸಲು ಬೇಕಾಗುವ ಎಲ್ಲ ಸರಕುಗಳೂ ಇಲ್ಲಿವೆ. ಮಕ್ಕಳ ಕುತೂಹಲವನ್ನು ಹೆಜ್ಜೆ ಹೆಜ್ಜೆಗೂ ಹೆಚ್ಚಿಸುವಂತಹ ನೂರಾರು ಘಟನೆಗಳಿಂದ ಕಾದಂಬರಿ ತುಂಬಿದೆ. ನಂಬಲಸಾಧ್ಯವಾದ ನೂರಾರು ಅಚ್ಚರಿಗಳು ಇದೊಂದು ಕನಸಿನ ಕಂತೆಯೇನೋ ಎಂಬ ಭಾವನೆಯನ್ನು ಹುಟ್ಟಿಸುತ್ತವೆ. ಹಳ್ಳಿಯ ಹಸಿರು ನಿಸರ್ಗ, ಪ್ರಾಣಿ-ಪಕ್ಷಿಗಳ ಓಡಾಟ, ದಟ್ಟ ಕಾಡಿನ ರುದ್ರ ರಮಣೀಯ ದೃಶ್ಯಗಳು ಮತ್ತು ಅತಿಯಾಗಿ ತಿಂದರೂ ಅರಗಿಸಿಕೊಳ್ಳುವ ದೈತ್ಯನಾಗಿ ಬೆಳೆಯುವ ಕಿಟ್ಟಣ್ಣನ ಪರಿ ಕಾದಂಬರಿಗೆ ಫ್ಯಾಂಟಸಿಯ ಸ್ಪರ್ಶವನ್ನು ಕೊಟ್ಟಿವೆ. ಆದರೆ ದೇವಸ್ಥಾನದಿಂದ ಕಳವಾಗುವ ಗಣಪತಿ ವಿಗ್ರಹವು ಕಾಡಿನ ಭಯಾನಕತೆಯೊಳಗೆ ಬಯಲಾಗುವ ಮೂಲಕ ಪತ್ತೆಯಾಗುವ ಕಳ್ಳರ ಜಾಲ ಹಾಗೂ ಆ ಬಗ್ಗೆ ಮುಂದುವರಿಯುವ ಕಾರ್ಯಾಚರಣೆಗಳು , ಪತ್ರಿಕೆಯಲ್ಲಿ ಪ್ರಕಟವಾಗುವ ಸುದ್ದಿಗಳು ನಮ್ಮನ್ನು ಕನಸಿನೂರಿನಿಂದ ವಾಸ್ತವ ಪ್ರಪಂಚಕ್ಕೆ ತರುತ್ತವೆ. ಒಟ್ಟಿನಲ್ಲಿ ಈಗಾಗಲೇ ಮಕ್ಕಳ ಮನಸ್ಸನ್ನು ಬಹುವಾಗಿ ಸೆಳೆದಿರುವ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯ ಇನ್ನೊಂದು ಮುಖವೇ ‘ಕನಸಿನೂರಿನ ಕಿಟ್ಟಣ್ಣ’ ಎನ್ನಬಹುದು. ಇಂದು ಮಕ್ಕಳಿಗೆ ಖುಷಿ ಕೊಡುವ, ಮಕ್ಕಳ ಮನಸ್ಸನ್ನು ತೆರೆದಿಡುವ, ಮಕ್ಕಳ ಕಲ್ಪನಾಶಕ್ತಿಯನ್ನು ಬೆಳೆಸುವ, ಅವರಲ್ಲಿ ಧೈರ್ಯವನ್ನೂ ಸಾಹಸ ಪ್ರವೃತ್ತಿಯನ್ನೂ ಪ್ರೋತ್ಸಾಹಿಸುವ ಸಾಹಿತ್ಯವನ್ನು ನಾವು ಮಕ್ಕಳಿಗೆ ಕೊಡ ಬೇಕಾಗಿದೆ. ಈ ನಿಟ್ಟಿನಲ್ಲಿ ‘ಕನಸಿನೂರಿನ ಕಿಟ್ಟಣ್ಣ’ ಒಂದು ಒಳ್ಳೆಯ ಸೇರ್ಪಡೆ. ಈಗಾಗಲೇ ಮಲೆಯಾಳದಿಂದ ಆರಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿರುವ ಪ್ರಭಾಕರನ್ ಈ ಕೃತಿಯನ್ನು ಸರಳ ಸುಂದರ ಭಾಷೆಯಲ್ಲಿ ಅನುವಾದಿಸಿದ್ದಾರೆ. ******************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ
ಅಂಕಣ ಬರಹ ಸಂತೆಯ ಗೌಜು ತರೀಕೆರೆಯಲ್ಲಿ ಸಂತೆ ಸೇರುವ ಜಾಗಕ್ಕೆ ಸಮೀಪದಲ್ಲಿ ನಮ್ಮ ಮನೆಯಿತ್ತು. ಪ್ರತಿ ಶುಕ್ರವಾರ ಎಬ್ಬಿಸುತ್ತಿದ್ದುದು ಮಸೀದಿಯ ಬಾಂಗಲ್ಲ, ಗುಡಿಯ ಸುಪ್ರಭಾತವಲ್ಲ, ಸಂತೆಗೌಜು. ಇಂಪಾದ ಆ ಗುಜುಗುಜು ನಾದ ಭಾವಕೋಶದಲ್ಲಿ ಈಗಲೂ ಉಳಿದಿದೆ. ಎಂತಲೇ ನನಗೆ ‘ಸಂತೆಯೊಳಗೊಂದು ಮನೆಯ ಮಾಡಿ’ ವಚನ ಓದುವಾಗ ಕೆಣಕಿದಂತಾಗುತ್ತದೆ. ಅಕ್ಕ ‘ಶಬ್ದಕ್ಕೆ ನಾಚಿದೊಡೆ ಎಂತಯ್ಯಾ?’ ಎಂದು ಪ್ರಶ್ನಿಸುತ್ತಾಳೆ. ಉತ್ತರ ಪ್ರಶ್ನೆಯೊಳಗೇ ಇದೆ-ನಾವು ಬದುಕುವ ಲೋಕಪರಿಸರ ಸಂತೆಯಂತಿದೆ; ಅಲ್ಲಿ ಸದ್ದಿರುವುದು ಸಹಜವೆಂದು. ಹಾಗಾದರೆ ಈ ಕಿರಿಕಿರಿಗೆ ಪರಿಹಾರ, ಸದ್ದಿರದ ಕಡೆ ಮನೆ ಮಾಡುವುದೊ ಅಥವಾ ಸದ್ದನ್ನೇ ಇಲ್ಲವಾಗಿಸುವುದೊ? ಅಕ್ಕನ ಪ್ರಕಾರ ಇವೆರಡೂ ಅಲ್ಲ. ಅದನ್ನು ಸಹಿಸಿಕೊಂಡೇ ಬದುಕುವುದು. `ಲೋಕದಲ್ಲಿ ಹುಟ್ಟಿರ್ದ ಬಳಿಕ ಸ್ತುತಿನಿಂದೆಗಳು ಬಂದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು’ ಎಂಬ ತತ್ವವು ಒಂದರ್ಥದಲ್ಲಿ ವಾಸ್ತವವಾದಿ. ಅನಗತ್ಯ ಆದರ್ಶವಾದಿ ಆಗಿರಬಾರದು, ಸ್ಥಿತಪ್ರಜ್ಞರಾಗಿರಬೇಕು ಎಂಬ ದನಿಯಿಲ್ಲಿದೆ. ವೈಯಕ್ತಿಕವಾಗಿ ಅಕ್ಕನ ಬಾಳೂ ಈ ನಿಲುವಿಗೆ ಕಾರಣವಿದ್ದೀತು. ಆಕೆ ಮನೆ ಗಂಡ ಸಂಸಾರ ಊರು ಬಿಟ್ಟು, ಒಂಟಿಯಾಗಿ ದೂರದ ಶ್ರೀಶೈಲಕ್ಕೆ ಅಲೌಕಿಕ ಗಂಡ ಮಲ್ಲಿಕಾರ್ಜುನನ್ನು ಹುಡುಕಿಕೊಂಡು ನಡೆದವಳು; ಬತ್ತಲೆಯಾಗದೆ ಬಯಲು ಸಿಕ್ಕದು ಎಂದು ಕೇಶಾಂಬರೆಯಾದವಳು; ಆಕೆ ಹಾದಿಯಲ್ಲಿ ಎದುರಿಸಿರಬಹುದಾದ ಕಿರುಕುಳವನ್ನು ಸುಲಭವಾಗಿ ಊಹಿಸಬಹುದು. ‘ಸಂತೆ’ಯನ್ನು ಒಂದು ರೂಪಕವಾಗಿ ನೋಡುತ್ತಿದ್ದರೆ, ಮೂರು ಆಯಾಮ ಹೊಳೆಯುತ್ತವೆ. ಒಂದು: ನಾವು ಸುತ್ತಲ ಪರಿಸರವನ್ನು ಬದಲಿಸಲು ಸಾಧ್ಯವಿಲ್ಲ. ಹೊಂದಿಕೊಂಡು ಅದರೊಟ್ಟಿಗೆ ಬದುಕಬೇಕು ಎಂಬ ಅಕ್ಕನ ಅರ್ಥ. ಬದುಕುವ ಪರಿಸರ ಚೆನ್ನಾಗಿದ್ದಾಗ ಈ ಯಥಾರ್ಥವಾದ ಸಮಸ್ಯೆಯಲ್ಲ. ಪರಿಸರ ಅಸಹನೀಯ ಎನಿಸುವಷ್ಟು ಕೆಟ್ಟಿದ್ದರೆ? ಹೊಂದಾಣಿಸಿ ಬದುಕಬೇಕು ಎನ್ನುವುದು ಬದಲಾವಣೆಯ ಮತ್ತು ಪರ್ಯಾಯ ಹುಡುಕಾಟದ ಸಾಧ್ಯತೆಯನ್ನೇ ನಿರಾಕರಿಸಿಕೊಂಡಂತೆ. ಈ ನಿಲುವನ್ನು ‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’ ಎನ್ನುತ್ತಿದ್ದ ಬಸವಣ್ಣ ತಾಳಿದ್ದರೆ ಏನಾಗಿರುತ್ತಿತ್ತು? ಬಹುಶಃ ಶರಣ ಚಳುವಳಿಯೇ ಇರುತ್ತಿರಲಿಲ್ಲ. ಎರಡು: ಇದು ರೋಮಿನಲ್ಲಿರುವಾಗ ರೋಮನನಂತಿರು ಎಂಬ ಬದುಕುವ ಉಪಾಯದ ಅರ್ಥ. ಈ ತಂತ್ರಗಾರಿಕೆ ಅವಕಾಶವಾದಿತನಕ್ಕೆ ಹಾದಿಕೊಡಬಲ್ಲ ಸಾಧ್ಯತೆಯೂ ಇದೆ. ನನ್ನ ನಿಲುವನ್ನು ಸನ್ನಿವೇಶಕ್ಕೆ ತಕ್ಕಂತೆ ಬದಲಿಸಲಾರೆ ಎಂಬ ಜಿಗುಟುತನಕ್ಕೆ ಬದಲು, ಲೋಕಸ್ವಭಾವವೇ ಹೀಗಿದೆ, ನಾನೊಬ್ಬ ಚಡಪಡಿಸಿ ಏನು ಮಾಡಲಿ ಎಂಬ ರಾಜಿಯತ್ತ ಇದು ಕರೆದೊಯ್ಯಬಹುದು. ಮೂರು: ಲೋಕರಚನೆಯಲ್ಲಿ ಕೆಲವು ಮೂಲಭೂತ ಸಂಗತಿಗಳನ್ನು ಬದಲಿಸಲಾಗದು. ಉದಾ: ಮುಪ್ಪು, ಸಾವು. ಮನುಷ್ಯರಾಗಿ ಜನಿಸಿದ ಮೇಲೆ ಇವನ್ನು ಮುಖಾಬಿಲೆ ಮಾಡಲೇಬೇಕು ಎಂಬರ್ಥ. ಇದು ಈ ಕಠೋರ ವಾಸ್ತವಕ್ಕೆ ಒಮ್ಮೆ ಡಿಕ್ಕಿ ಹೊಡೆಯಲೇಬೇಕಿದ್ದು, ಹೋರಾಟದ ಬದುಕು ವ್ಯರ್ಥ ಎಂಬ ನಿರಾಶೆಯನ್ನೂ ಹುಟ್ಟಿಸಬಹುದು. ಕೆಲವರಲ್ಲಿ ಕಂತೆ ಒಗೆವ ಮುನ್ನ ಅರ್ಥಪೂರ್ಣವಾಗಿ ಬದುಕಬೇಕು ಎಂಬ ಛಲವಾಗಿ ಪಲ್ಲಟವಾಗಲೂಬಹುದು. ಸಾವಿನ ಘೋರಸತ್ಯದ ಧ್ಯಾನವೂ ಇತ್ಯಾತ್ಮಕ ಪರಿವರ್ತನೆಗಳನ್ನು ಕೆಲವರ ಬದುಕಿನಲ್ಲಿ ತಂದಿರುವುದುಂಟು. ಪರಿಸ್ಥಿತಿಗೆ ಹೊಂದಿಕೊಂಡು ಹೋದವರು ಜೀವನದಲ್ಲಿ ದೊಡ್ಡದನ್ನೇನೂ ಸಾಧಿಸಿಲ್ಲ. ಲೋಕ ಬದಲಿಸಬೇಕೆಂದಿದ್ದ ಆದರ್ಶವಾದಿಗಳು ಸೋತಿರಬಹುದು. ಆದರೆ ಅವರ ಸೆಣಸಾಟ-ಸೋಲು ಲೋಕದೆದುರು ಆದರ್ಶವಾಗಿ ನಿಂತಿದೆ ತಾನೇ? ಎಷ್ಟೆಲ್ಲ ಚಿಂತಿಸಿದರೂ ‘ಸಂತೆ’ಗಿರುವ ಅನಿಷ್ಟಾರ್ಥವನ್ನು ಒಪ್ಪಲು ಕಷ್ಟವಾಗುತ್ತಿದೆ. ಚಿಕ್ಕಂದಿನಲ್ಲಿ ಈಗ ಬಂದೆ ಎಂದು ಲೆಕ್ಕಕೊಟ್ಟು ಹೊರ ಹೋದ ಮೇಷ್ಟರು ಅರ್ಧ ತಾಸಾದರೂ ಬಾರದಿದ್ದಾಗ, ನಾವು ಅಭೂತಪೂರ್ವ ಗಲಭೆ ಹುಟ್ಟುಹಾಕುತ್ತಿದ್ದೆವು. ಮೇಷ್ಟರು ಓಡಿ ಬಂದವರೇ ‘ಲೋಫರ್‍ಗಳಾ, ಇದೇನು ಸ್ಕೂಲೊ ಮೀನುಸಂತೆಯೋ’ ಎಂದು ಅಬ್ಬರಿಸುತ್ತಿದ್ದರು. ಪಕ್ಕದ ಕ್ಲಾಸಿನಲ್ಲಿದ್ದ ಮನೋರಮಾ ಮೇಡಂ ಜತೆ ನಡೆಯುತ್ತಿದ್ದ ಮುದ್ದಣ ಸಲ್ಲಾಪವನ್ನು ಅರ್ಧಕ್ಕೆ ನಿಲ್ಲಿಸಿ ಧಾವಿಸಿದಾಗಲಂತೂ ಅವರಿಗೆ ಪ್ರಚಂಡ ಸಿಟ್ಟು. ‘ಥೂ ಸಂತೆ ನನ್ನಮಕ್ಕಳಾ’ ಎಂದು ಹರಸುತ್ತಿದ್ದರು. ಅಪ್ಪ ಕೂಡ ಮನೆಯ ವಸ್ತುಗಳು ಅಲ್ಲಲ್ಲೇ ಬಿದ್ದುದನ್ನು ಕಂಡಾಗ ‘ಏನೇ! ಮನೇನ ಸಂತೆ ಮಾಡಿದಿಯಲ್ಲೇ’ ಎಂದು ಅಮ್ಮನಿಗೆ ಚುಚ್ಚುತ್ತಿದ್ದ. ಕರಾವಳಿಯ ಮಿತ್ರರೊಬ್ಬರು ತಮಗಾಗದವರ ಸುದ್ದಿ ಬಂದಾಗ ‘ಛೀ! ಅದೊಂದು ಸಂತೆ’ ಎನ್ನುತ್ತಿದ್ದರು. ‘ಚಿಂತಿಲ್ಲದೋಳಿಗೆ ಸಂತೇಲಿ ನಿದ್ದೆ ಬಂತಂತೆ’- ಗಾದೆಯಲ್ಲೂ ಸಂತೆ ಬಗ್ಗೆ ಸದಭಿಪ್ರಾಯವಿಲ್ಲ. ಅರಾಜಕತೆ, ಏಕಾಂತಿಗಳಿಗೆ ಸಲ್ಲದ ಸ್ಥಳ ಎಂಬರ್ಥವೇ ಹೆಚ್ಚು ಚಾಲ್ತಿಯಲ್ಲಿದೆ. ಆದರೆ ಇದೇ ‘ಸಂತೆ’, ಬೆಳೆದದ್ದನ್ನೊ ಸಾಕಿದ್ದನ್ನೊ ಮಾರುವ ರೈತರ ಮತ್ತು ಪಶುಗಾಹಿಗಳ ಅಥವಾ ತಮ್ಮಲ್ಲಿಲ್ಲದ ವಸ್ತು ಖರೀದಿಸಲು ಹೋಗುವ ಗಿರಾಕಿಗಳ ಪಾಲಿಗೆ’ ಅನಿಷ್ಟವಲ್ಲ. ಬಟವಾಡೆ ಮಾಡಿಕೊಂಡ ಕೂಲಿಯವರು ಸಂತೆದಿನ ಖುಶಿಪಡುತ್ತಾರೆ. ಸಂತೆಗೆ ಬಂದವರು ಕೇವಲ ಮಾರು-ಕೊಳ್ಳು ಮಾಡುವುದಿಲ್ಲ. ಮಸಾಲೆದೋಸೆ ತಿನ್ನುತ್ತಾರೆ; ಸಿನಿಮಾ ನೋಡುತ್ತಾರೆ; ಕದ್ದು ಪ್ರೇಮಿಯನ್ನು ಭೇಟಿಸುತ್ತಾರೆ; ಪರಿಚಿತರು ಸಿಕ್ಕರೆ ಕಷ್ಟ ಸುಖ ಹಂಚಿಕೊಳ್ಳುತ್ತಾರೆ; ಹುರಿದ ಮೀನು ನಂಚಿಕೊಂಡು ಕಳ್ಳು ಕುಡಿಯುತ್ತಾರೆ. ಮನೆಗೆ ಹೋಗುವಾಗ ಮಕ್ಕಳಿಗೆ ಪುರಿ, ಬಟ್ಟೆಬರೆ ಖರೀದಿಸುತ್ತಾರೆ. ನಮಗಂತೂ ಶುಕ್ರವಾರ ಸಂತೆಯ ಸಂಜೆ ಮಂಡಕ್ಕಿ ಕಾರ ಕಲಸಿಕೊಂಡು ನೀರುಳ್ಳಿ ತುಂಡಿನೊಡನೆ ತಿಂದು, ಮೇಲೆ ಟೀ ಇಳಿಸುವುದು ಹಬ್ಬವಾಗಿತ್ತು. ಉರುಸು ಜಾತ್ರೆಗಳೂ ಒಂದರ್ಥದಲ್ಲಿ ಧಾರ್ಮಿಕ ಆಯಾಮವಿರುವ ಸಂತೆಗಳು ತಾನೆ? ಜನಜಂಗುಳಿಯೇ ಅಲ್ಲಿನ ವಿಶಿಷ್ಟತೆ ಮತ್ತು ಸಂಭ್ರಮಕ್ಕೆ ಕಾರಣ. ಸಂತೆಯಿಲ್ಲದ ದಿನಗಳಲ್ಲಿ ಖಾಲಿಅಂಗಡಿ, ನಿಂತಕಂಬ, ಜನರಿಲ್ಲದ ಕಟ್ಟೆಗಳು ಮದುವೆ ಮುಗಿದ ಚಪ್ಪರವನ್ನೊ ಹೆಣದ ಮುಖವನ್ನೊ ನೋಡಿದಂತೆ ನಿರಾಶಾಭಾವ ಕವಿಸುತ್ತವೆ; ಹಾರುಹೊಡೆದ ಮನೆಯಂತೆ ಬಿಕೊ ಎನ್ನುತ್ತಿದ್ದ ಶೆಡ್ಡುಗಳೆಲ್ಲ, ಸಂತೆದಿನ ದವಸ ಹಣ್ಣು ತರಕಾರಿ ತಿಂಡಿ ಜೋಡಿಸಿಕೊಂಡಾಗ ಹರೆಯದವರಂತೆ ಕಂಗೊಳಿಸುತ್ತವೆ. ಸುತ್ತಲಿನ ಮೂವತ್ತು ಹಳ್ಳಿಯ ಜನ ಬರುವ ನಮ್ಮೂರ ಸಂತೆ, ಬೆಳಗಿನ ಜಾವದಿಂದಲೇ ಸಂಚಲನ ಪಡೆದುಕೊಳ್ಳುತ್ತಿತ್ತು. ತಿಂಡಿ ಅಂಗಡಿ ಹಾಕುವುದು; ವರ್ಣರಂಜಿತ ಗ್ಲಾಸುಗಳಲ್ಲಿ ಶರಬತ್ತು ಜೋಡಿಸುವುದು; ಹಾವಾಡಿಗರು ಆಟ ಹೂಡುವುದು; ರೈತರು ತರಕಾರಿ ಚೀಲಬಿಚ್ಚಿ ನಿಂತು ಗಿರಾಕಿಗಳಿಗೆ ಕಾತರದಿ ಕಾಯುವುದು; ಹಣೆತುಂಬ ಭಂಡಾರ ಲೇಪಿಸಿಕೊಂಡು ಗಂಟೆ ಬಾರಿಸಿಕೊಂಡು ಬಾಯಲ್ಲಿ ಜಾಕುವನ್ನು ಕಚ್ಚಿ, ಚಾಟಿಯಲ್ಲಿ ಬಾರಿಸಿಕೊಳ್ಳುತ್ತ ಊರಮಾರಿಯವನು ತಟ್ಟೆಹಿಡಿದು ಭಿಕ್ಷೆ ಬೇಡುವುದು; ಹಣ್ಣಿನವ ಸೀಳಿದ ಬನಾಸ್ಪತ್ರಿ ಹೋಳನ್ನು `ಹ್ಞಾ! ಇಲ್ಲಿ ಸಕ್ರೇರಿ ಸಕ್ರೆ’ ಎಂದು ಬಾಯಿ ಮುಂದೆ ಹಿಡಿಯುವುದು; ಕೊಳಕಾದ ಪಟಾಪಟಿ ಲುಂಗಿಯುಟ್ಟ ಮಲೆಯಾಳಿ ಕಾಕಾ, `ಹರೀರ ಹರೀರಾ’ ಎನ್ನುತ್ತ ಕೆಂಡದ ಮೇಲಿಟ್ಟ ಕೆಟಲಿನಲ್ಲಿ ಸಿಹಿಗಂಜಿ ತುಂಬಿಕೊಂಡು ಸುತ್ತುವುದು; ಅಜ್ಜಿಯೊಂದು ಕುದಿವ ಎಣ್ಣೆಯಲ್ಲಿ ನಡುಗುವ ಕೈಯಿಂದ ಕಡಲೆಹಿಟ್ಟನ್ನು ಇಳಿಬಿಟ್ಟು ಹೊಂಬಣ್ಣಕ್ಕೆ ತಿರುಗಿದ ಅತ್ತಿಕಾಯನ್ನು ಜರಡಿಯಿಂದ ಬಾಚಿ ಪುಟ್ಟಿಗೆ ಹಾಕುವುದು-ಒಂದೇ ಎರಡೇ. ಕೊಳ್ಳುವವರಿಗೂ ಮಾರುವವರಿಗೂ ನಡೆಯುವ ಚೌಕಾಸಿಯಾಟ ನಿಜಕ್ಕೂ ನಾಟಕೀಯ. ನಿನ್ನ ಮಾಲು ಇಷ್ಟವಿಲ್ಲ ಎಂಬ ಭಾವದಲ್ಲಿ ಮುನ್ನಡೆಯುವ ಗಿರಾಕಿ. ಬೇಡವಾದರೆ ಹೋಗು ಎಂದು ನಟಿಸುತ್ತ ಅವನನ್ನು ಸೆಳೆಯಲು ಹೊಸ ಕುಣಿಕೆಯೆಸೆದು ಬಂಧಿಸುವ ವರ್ತಕ; ‘ಸರಿಯಾಗಿ ಅಳೆಯಮ್ಮ’ ಎಂದು ಅಸಹನೆ ತೋರುವ ಗಿರಾಕಿ. ‘ಹ್ಞೂಂ ಕಣಪ್ಪ, ಅದರ ಮ್ಯಾಲೆ ನಾನೇ ಕುತ್ಕತೀನಿ’ ಎಂದು ಎದುರೇಟು ಕೊಡುವ ಮಾರುಗಾರ್ತಿ; ತೀರ ಕಡಿಮೆ ಬೆಲೆಗೆ ಕೇಳುವ ಗಿರಾಕಿ. ‘ಬ್ಯಾಡ. ಹಂಗೇ ತಗಂಡು ಹೋಗ್ ಬಿಡು ಅತ್ಲಾಗೆ’ ಎಂದು ವ್ಯಂಗ್ಯದ ಬಾಣವೆಸೆವ ವ್ಯಾಪಾರಿ; ಮಾವಿನಹಣ್ಣಿನ ಬುಟ್ಟಿಯ ಮುಂದೆ ತೀರ ಕಡಿಮೆ ಬೆಲೆಗೆ ಕೇಳುವ ಗ್ರಾಹಕ. ವ್ಯಗ್ರವಾಗಿ `ಎತ್ತಯ್ಯ ನಿನ್ನ ತಳಾನ’ ಎನ್ನುವ ಹಣ್ಣಾಕೆ-ಎಲ್ಲರೂ ನಟರೇ. ಹೊಸ ಊರಿಗೆ ಹೋದರೆ, ಸಂತೆಯಲ್ಲಿ ತಿರುಗುವ ಅವಕಾಶವನ್ನು ನಾನು ಕಳೆದುಕೊಳ್ಳುವುದಿಲ್ಲ. ಮೀನು ಸಂತೆಯಲ್ಲಿ ಎಷ್ಟೆಲ್ಲ ಜಲಚರಗಳು ಮೀನುಗಾರ್ತಿಯ ಮುಂದಣ ಹಲಗೆಯ ಮೇಲೆ ವಿವಿಧ ಭಂಗಿಗಳಲ್ಲಿ ಪವಡಿಸಿರುತ್ತವೆ? ಒಂದು ಸಂತೆಯಲ್ಲಿ ಒಬ್ಬ ಕುರಿಗಳನ್ನು ಹಿಡಿದು ನಿಂತಿದ್ದ ರೀತಿ, ಸೂರ್ಯನ ಸಾರಥಿ ಸಪ್ತಾಶ್ವಗಳ ಲಗಾಮನ್ನು ಹಿಡಿದುಕೊಂಡಂತಿತ್ತು. ನಮ್ಮೂರ ಸಂತೆಯ ಮೂಲೆಯಲ್ಲಿ ಮಾರಾಟವಾಗುತ್ತಿದ್ದ ಮಡಕೆಗಳು ನೆನಪಾಗುತ್ತಿವೆ. ಕೆರೆಯಂಗಳದ ಮಣ್ಣು ಕಾಲಲ್ಲಿ ತುಳಿಸಿಕೊಂಡು, ಕುಲಾಲಚಕ್ರದಲ್ಲಿ ತಿರುಗಿ, ಹಲಗೆಯಿಂದ ತಟ್ಟಿಸಿಕೊಂಡು, ಆವಿಗೆಯಲ್ಲಿ ಬೆಂದು, ಗಾಡಿಯಲ್ಲಿ ಹುಶಾರಾಗಿ ಪಯಣಿಸಿ, ಕೊಳ್ಳುವವರ ಕೈ ಕಂಠಕ್ಕೆ ಬೀಳಲೆಂದು ಬಾಯ್ತೆರೆದು ಕಾಯುತ್ತಿದ್ದವು. ಮುಂದೆಯೂ ಸುಟ್ಟುಕೊಳ್ಳುವ ವಿಧಿ ಅವಕ್ಕೆ ತಪ್ಪಿದ್ದಲ್ಲ. ಕಂತುಗಳಲ್ಲಿ ಸುಟ್ಟುಕೊಳ್ಳುವ ಅವು ನಮ್ಮ ಜಠರಾಗ್ನಿಯನ್ನು ತಣಿಸುತ್ತಿದ್ದವು. ಎಷ್ಟೊಂದು ಸಂಗತಿಗಳಿಗೆ ಕೊಂಡಿ-ವೇದಿಕೆ ಈ ಸಂತೆ! ಮನೆಯನ್ನು ಏಕಾಂತದ ನೆಮ್ಮದಿಯ ಅಂತರಂಗದ ಮತ್ತು ಬಜಾರು ಬೀದಿಗಳನ್ನು ಏಕಾಂತ ಸಾಧ್ಯವಿಲ್ಲದ ಲೋಕಾಂತದ ಸಂಕೇತವೆಂದು ಗಣಿಸಲಾಗುತ್ತದೆ. ಆದರೆ ಮನೆಯು ಅನುಭವ ವಂಚಿಸುವ ಮತ್ತು ವ್ಯಕ್ತಿತ್ವ ಬಂಧಿಸುವ ತಾಣವಾಗಿ ತಳಮಳ ಹುಟ್ಟಿಸಬಲ್ಲದು. ಬುದ್ಧನ ಪಾಲಿಗೆ ಅರಮನೆ ಮತ್ತು ಏಕಾಂತಗಳು ಲೋಕಸತ್ಯ ಮುಚ್ಚಿಡುವ ಸೆರೆಮನೆಯಾಗಿದ್ದವೆಂದೇ, ಆತ ಲೋಕದ ಸಂತೆಯಲ್ಲಿ ಬೆರೆತು ಬಾಳಿನ ದಿಟವನ್ನು ಹುಡುಕಲು ಹೊರಬಿದ್ದನು. ಪೇಟೆಯ ಗಲಭೆಯಿಂದ ತಪ್ಪಿಸಿಕೊಂಡು ಹೋಗುವವರಿಗೆ ಹಳ್ಳಿ ಕಾಡು ನಿರುಮ್ಮಳ ತಾಣವೆನಿಸಬಹುದು. ವಾರಾಂತ್ಯದಲ್ಲಿ ನಗರ ಬಿಡುವವರು ಇದಕ್ಕೆ ಸಾಕ್ಷಿ. ಆದರೆ ಹಳ್ಳಿಯಲ್ಲಿ ಬಸವಳಿದ ಬದುಕು ಪೇಟೆಗೆ ಹೋದರೆ ಚಿಗುರೀತು ಎಂದು ಹಂಬಲಿಸಿ ರೈಲು ಹತ್ತುವವರೂ ಇದ್ದಾರೆ. ಮಾರುಕಟ್ಟೆಯ ಆರ್ಥಿಕತೆಯಲ್ಲಿ ಮನೆಮಾಡಿ ಬದುಕುವುದಕ್ಕೆ ಬೇಕಾದ ವಿದ್ಯೆ ಪಡೆದ ಹೊಸತಲೆಮಾರೇ ಸಿದ್ಧವಾಗಿದೆ. ಇಲ್ಲಿ ಶಬ್ದಕ್ಕೆ ನಾಚುವ ಪ್ರಶ್ನೆಯೇ ಇಲ್ಲ. ಧಾವಿಸುವ ಜನಪ್ರವಾಹಕ್ಕೆ ಪೇಟೆಯೇ ನಾಚಬೇಕು. ಇಲ್ಲಿ ಸದ್ದೇ ಇಂಪಾದ ಜೋಗುಳವಾಗುತ್ತದೆ.ಒಂದೇ ವಸ್ತು ಬದಲಾದ ಕಾಲದೇಶದಲ್ಲಿ ಕರ್ಕಶ-ಮಧುರ, ನಂಜು-ಅಮೃತ ಆಗಬಲ್ಲದು. ಪ್ರತಿ ಸಂಗತಿಯಲ್ಲೂ ವಿರುದ್ಧ ಆಯಾಮ ಇರುತ್ತವೆ. ಅದರೊಟ್ಟಿಗೆ ಬದುಕುವವರು ಅವನ್ನು ತಮಗನುವಾಗುವಂತೆ ಬದಲಿಸಿಕೊಳ್ಳುವರು. ಮರಳುಗಾಡು ಹಿಮಪ್ರದೇಶದ ಜನ -ಪ್ರಾಣಿ-ಗಿಡ-ಪಕ್ಷಿಗಳು ಮಾಡಿಕೊಂಡಿರುವ ಉಪಾಯಗಳೇ ಇದಕ್ಕೆ ಪುರಾವೆ. ದುರ್ಭರ ಪರಿಸರವು ಕಲಿಸುವ ಪಾಠಗಳಲ್ಲಿ, ವೈರುಧ್ಯಗಳನ್ನು ಪೋಷಕ ದ್ರವ್ಯವನ್ನಾಗಿ ಮಾಡಿಕೊಳ್ಳುವುದೂ ಒಂದು. ಅಕ್ಕನಿಗೆ ಬಹುಶಃ ಈ ದಿಟವೂ ಗೊತ್ತಿತ್ತು. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ
ಕಬ್ಬಿಗರ ಅಬ್ಬಿ.-13 ಗಗನ ಚುಂಬಿ ಮತ್ತು ಲಿಫ್ಟು ಸರ್ಗೇಯಿ ಬೂಬ್ಕಾ ,ಎಂಬ ಸೋವಿಯತ್ ಯುನಿಯನ್ ನ ಹುಡುಗ ಉದ್ದ ಕೋಲು ಹಿಡಿದು ಪೋಲ್ ವಾಲ್ಟ್ ಹಾರಲು ಸಿದ್ಧನಾಗಿದ್ದ. ಇದೊಂದು ಥರದ ಹೈ ಜಂಪ್ ಸ್ಪರ್ಧೆ. ಈ ಆಟದಲ್ಲಿ ಒಂದು ಕೋಲಿನ ಸಹಾಯದಿಂದ ಜಿಗಿಯಲಾಗುತ್ತೆ, ಆ ಕೋಲನ್ನು ಹಾರುಗೋಲು ಎಂದು ಕರೆಯೋಣ. ಹೈಜಂಪ್ ಮಾಡೋವಾಗ ಮೊದಲೇ ನಿರ್ಧರಿಸಿದ ಎತ್ತರದಲ್ಲಿ ನೆಲಕ್ಕೆ ಸಮಾನಾಂತರವಾಗಿ ಒಂದು ಕೋಲು ( ಅಳೆಗೋಲು) ಇಟ್ಟಿರುತ್ತಾರೆ. ಉದ್ದದ ಹಾರುಗೋಲು ಹಿಡಿದು, ಓಡುತ್ತಾ ಬಂದು, ಕೋಲನ್ನು ಹೈ ಜಂಪ್ ನ ಎತ್ತರದ ಅಳೆಗೋಲಿನ ಹತ್ತಿರ ಬಂದಾಗ ನೆಲಕ್ಕೂರಿ, ಹಾರುಕೋಲಿನ ಸಹಾಯದಿಂದ ಎತ್ತರಕ್ಕೆ ಜಿಗಿದು,ಅಳೆಗೋಲಿನ ಆಚೆಗೆ ಧುಮುಕುವ ಆಟ ಅದು. ಸಾಧಾರಣವಾಗಿ, ಕೋಲನ್ನೆತ್ತಿ ಓಡಿ ಬರುವಾಗ, ವೇಗದಿಂದ ಉತ್ಪನ್ನವಾದ ಶಕ್ತಿಯನ್ನೆಲ್ಲಾ ಮೊಣಕಾಲು ಮತ್ತು ತೊಡೆಗಳ ಸ್ನಾಯುಗಳಿಗೆ ನೀಡಿ, ದೇಹವನ್ನು ಆಕಾಶದತ್ತ ಚಿಮ್ಮಿಸಬೇಕು. ಅಷ್ಟಾದರೆ ಸಾಕೇ?. ಆಕಾಶದಲ್ಲಿದ್ದಾಗಲೇ ಊರಿದ ಏರುಕೋಲನ್ನು ಗಟ್ಟಿಯಾಗಿ ಹಿಡಿದು, ಹೈಜಂಪ್ ನ ಅಳೆಗೋಲಿನ ಹತ್ತಿರ ದೇಹ ತಲಪಿದಾಗ, ಎದೆಯುಬ್ಬಿಸಿ ಬಿಗಿದ ರಟ್ಟೆಯ ಸಹಾಯದಿಂದ ದೇಹವನ್ನು ನೆಲಕ್ಕೆ ಸಮಾನಾಂತರವಾಗಿ (parallel) ಬ್ಯಾಲೆನ್ಸ್ ಮಾಡಿ ಅಳೆಗೋಲನ್ನು ಸ್ಪರ್ಷಿಸದೆಯೇ ಮುಂದಕ್ಕೆ ಹೊರಳಿ ಅಳೆಗೋಲನ್ನು ದಾಟಿ ಆಚೆಕಡೆಯ ಮರಳು ಹಾಸಿಗೆ ಮೇಲೆ ಬೀಳಬೇಕು. ಬುಬ್ಕಾ ಹಾರಲು ಆರಂಭದ ಬಿಂದುವಿನಲ್ಲಿ ನಿಂತಾಗ ಅಮ್ಮನ ಮಾತುಗಳು ಕಿವಿಯೊಳಗೆ ಅನುರಣಿಸುತ್ತಿದ್ದವು. ಶಾಲೆಯಲ್ಲಿದ್ದಾಗ ಹೈಜಂಪ್ ಸ್ಪರ್ಧೆಯಲ್ಲಿ ಸೋತಾಗ ಆಕೆ ಹೇಳಿದ ಮಾತುಗಳವು. ” ಮಗನೇ! ನೀನು ಸೋತಿಲ್ಲ! ನೀನು ಜಿಗಿದ ಮಟ್ಟ ಕಡಿಮೆಯಿತ್ತಷ್ಟೇ..ಜಿಗಿಯುವ ಎತ್ತರವನ್ನು ದಿನಕ್ಕೆ ಕೂದಲೆಳೆಯಷ್ಟೆತ್ತರ ಹೆಚ್ಚು ಮಾಡುತ್ತಾ ಹೋಗು! ಜಗತ್ತು ಕಾಯುತ್ತೆ ನಿನ್ನ ಗೆಲುವಿಗಾಗಿ!” ಹಾಗೆ ಎತ್ತರದಿಂದ ಎತ್ತರಕ್ಕೆ ಹಾರಿದ ಹುಡುಗ ಬುಬ್ಕಾ, ತನ್ನ ಮೊದಲ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಜಿಗಿಯಲು ನಿಂತಿದ್ದ. ಕ್ರಿ.ಶ. 1983 ನೇ ಇಸವಿ, ಹೆಲ್ಸಿಂಕಿಯಲ್ಲಿ ನಡೆದ ಸ್ಪರ್ಧೆ ಅದು. ಸ್ಟಾರ್ಟ್!… ಹಾರಲು ಸಿಕ್ಕಿದ ಗ್ರೀನ್ ಸಿಗ್ನಲ್! ಬ್ಯುಗಿಲ್ ಮೊಳಗಿತ್ತು! ಬೂಬ್ಕಾ ಹಾರು ಕೋಲನ್ನು ಎತ್ತಿ ಹಿಡಿದು ಓಡ ತೊಡಗಿದ. ಆ ಹೆಜ್ಜೆಗಳಲ್ಲಿ ಚಿರತೆಯ ಧೃಡತೆ. ಕಣ್ಣುಗಳು ಹಾರಬೇಕಾದ ಅಳೆಗೋಲನ್ನು ನೋಟದಲ್ಲೇ ಸೆರೆಹಿಡಿದು ಗುರಿ ಸಮೀಪಿಸಿದ ಬೂಬ್ಕಾ. ಕೋಲನ್ನು ನೆಲಕ್ಕೂರಿ ನೆಲಕ್ಕೆ ಎರಡೂಪಾದಗಳ ಸಂಯೋಜಿತ ಜಿಗಿತುಳಿತಕ್ಕೆ ರಾಕೆಟ್ಟಿನಂತೆ ಆತನ ದೇಹ ಆಗಸಕ್ಕೆ ಚಿಮ್ಮಿತ್ತು. ಬೂಬ್ಕಾ ಕೊನೆಯ ಕ್ಷಣದಲ್ಲಿ ಒಂದು ಅದ್ಭುತ ತಂತ್ರ ಉಪಯೋಗಿಸಿದ್ದು ಇಂದಿಗೂ ಮನೆಮಾತು. ಸಾಧಾರಣವಾಗಿ ನೆಲಕ್ಕೆ ದೇಹದುದ್ದವನ್ನು ಸಮಾನಾಂತರ ಮಾಡಿ ಅಳೆಗೋಲಿನ ಅತ್ತಕಡೆ ಹೊರಳುವ ಬದಲು,ಈ ಕನಸುಗಾರ, ಬಿದಿರ ಕೋಲಿನ ತುದಿಯಲ್ಲಿ ಅಂಗೈ ಊರಿ, ತಲೆ ಕೆಳಗೆ ಕಾಲು ಮೇಲೆ ಮಾಡಿದ ಪೋಸ್ಚರ್ ನಲ್ಲಿ ರಟ್ಟೆಯಲ್ಲಿ ಇದ್ದ ಅಷ್ಟೂ ಬಲ ಸೇರಿಸಿ ದೇಹವನ್ನು ಎರಡನೇ ಬಾರಿ ಎತ್ತರಕ್ಕೆ ಚಿಮ್ಮಿಸಿದ್ದ. ಅಂದು ಆತ ಹಾರಿದ ಎತ್ತರ ವಿಶ್ವ ದಾಖಲೆಯನ್ನು ಮುರಿದು ಹೊಸತು ಬರೆದಿತ್ತು. ಆ ನಂತರದ ಎರಡು ದಶಕಗಳಲ್ಲಿ ಆತ 34 ಬಾರಿ ತನ್ನದೇ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದ್ದ!. ಆರು ಬಾರಿ ವಿಶ್ವ ಚಾಂಪಿಯನ್, ಒಂದು ಬಾರಿ ಒಲಿಂಪಿಕ್ಸ್ ಚಿನ್ನದ ಪದಕ ಆತನ ಕೊರಳೇರಿದ್ದವು ಮನುಷ್ಯ ಚೇತನವೇ ಊರ್ಧ್ವ ಮುಖಿ. ಸಾಧನೆಯ ಶಿಖರದ ಎತ್ತರ ಏರಿಸುತ್ತಲೇ ಇರುವ ಹಟಮಾರಿ ಪ್ರಜ್ಞೆ. ಹೀಗೇ ಏರುವಾಗ, ಏರುವ ವಿಧಾನ, ಏರುವ ಎತ್ತರ, ಗುರಿ, ಇವುಗಳ ಜತೆಗೆ, ಬದುಕಿಗೆ ಮತ್ತು ಸಮಾಜಕ್ಕೆ, ಈ ಚಾರಣ ಧಮಾತ್ಮಕವೇ, ಋಣಾತ್ಮಕವೇ ಎಂಬ ಜಿಜ್ಞಾಸೆ ಹುಟ್ಟುತ್ತೆ. ದಿನಕ್ಕೊಂದು ದಾಖಲೆ ಮಾಡುವ, ಮರುದಿನ ಇನ್ನಾರೋ ಮುರಿಯುವ ಓಟ. ವಿಜ್ಞಾನ, ತಂತ್ರಜ್ಞಾನವೂ ಅಷ್ಟೇ. ಗಗನಕ್ಕೆ ಸವಾಲೆಸೆಯುವ ಗಗನ ಚುಂಬೀ ಕಟ್ಟಡಗಳು, ಸಮುದ್ರದಾಳದಲ್ಲಿ ಓಡುವ ರೈಲು, ಜಾಣ ಫೋನ್ ಮೂಲಕ ಭೂಮಿಯ ಆ ಭಾಗದ ಅಮೆರಿಕಾದ ಮೊಮ್ಮಗುವಿಗೆ ಹೈದರಾಬಾದ್ ನಿಂದ ಹ್ಯಾಪ್ಪೀ ಬರ್ತ್ ಡೇ ಹಾಡುವ ಅಜ್ಜಿ, ಇತ್ಯಾದಿ ನಮ್ಮ ವಿಕಸನ? ದ ಕಹಾನಿಗಳು. ಅನವರತ ಪ್ರಯತ್ನದಲ್ಲಿ ಫಲಿಸಿದ ಅವಿಷ್ಕಾರಗಳು ನಮ್ಮನ್ನು ಮಂಗಳನ ಅಂಗಳಕ್ಕೆ ತಲಪಿಸಿದೆ. ಅದೇ ಹೊತ್ತಿಗೆ ಓಟದಲ್ಲಿ ನೋಟ ನೆಟ್ಟ ಕನ್ನಡಕದ ಹಿಂದಿನ ಕಣ್ಣುಗಳಿಗೆ ಪಕ್ಕದಲ್ಲಿ ಹಸಿವಿನಿಂದ ಅಳುವ ಮಗುವಿನ ಮುಖ ಕಾಣಿಸುತ್ತಿಲ್ಲವೇ?. ವೃದ್ಧಾಶ್ರಮದಲ್ಲಿ ಹಣ ಕಟ್ಟಿ ಬಿಟ್ಟು ಬಂದ ವಯಸ್ಸಾದ ತಂದೆತಾಯಂದಿರ ಒಬ್ಬಂಟಿತನದಿಂದ ಸುಕ್ಕಿದ ಕೆನ್ನೆಗಳಲ್ಲಿ ಜಾರಿ, ಆರಿ ಹೋಗುವ ಕಣ್ಣೀರ ಬಿಂದುಗಳ ಅರಿವಿಲ್ಲವೇ?. ಹೀಗೇ ಬನ್ನಿ, ಇಲ್ಲಿದೆ ಸುಬ್ರಾಯ ಚೊಕ್ಕಾಡಿಯವರ ಕವಿತೆ. *** *** *** ಲಿಫ್ಟು ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು. ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದುಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ. ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ. ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು. ಅರಿವಿರದ ಯಾವುದೋ ಬಂದು ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ. *** *** *** ಕವಿತೆಯ ಹೆಸರು ಲಿಫ್ಟು. ಈ ಪದ ಆಂಗ್ಲಪದ. ಮೆಟ್ಟಿಲು ಹತ್ತುವ ಬದಲು, ನಿಂತಲ್ಲಿಯೇ ಮೇಲೆತ್ತುವ ಯಂತ್ರ! ಎಂದಾಗ ಇದು ನಾಮ ಪದ. ಮೇಲಕ್ಕೆತ್ತುವ ಕ್ತಿಯಾಸೂಚಕವಾಗಿ ಇದು ಕ್ರಿಯಾ ಪದವೂ ಹೌದು. ತಂತ್ರಜ್ಞಾನ, ಮನುಷ್ಯನ ಹತ್ತುವ ಇಳಿಯಿವ, ತೊಳೆಯುವ, ನಡೆಯುವ, ಓಡುವ ಇತ್ಯಾದಿ ಹಲವು ಕ್ತಿಯೆಗಳನ್ನು ಸುಲಭ ಮಾಡಲು, ಯಂತ್ರಾವಿಷ್ಕಾರ ಮಾಡಿದೆ. ಎಷ್ಟೆಂದರೆ, ಯಂತ್ರಗಳಿಲ್ಲದೆ ಬದುಕು ಅಸಾಧ್ಯ ಎನ್ನುವಷ್ಟು. ಮನುಷ್ಯನ, ವಿಕಸನದ ಹಲವು ಘಟ್ಟಗಳನ್ನು ವರ್ಗೀಕರಿಸುವಾಗ, ಶಿಲಾಯುಗ, ಲೋಹಯುಗ, ಹೀಗೆಯೇ ಮುಂದುವರೆದರೆ, ಈ ಯಂತ್ರಯುಗವೂ ಒಂದು ಮಹಾ ಲಂಘನವೇ. ಹಾಗಾಗಿ, ಈ ಕವಿತೆಯ ಶೀರ್ಷಿಕೆ, ಯಂತ್ರಯುಗದ ಅಷ್ಟೂ ಅಂಶಗಳ ಅಭಿವ್ಯಕ್ತಿ. ಕವಿತೆ ಓದುತ್ತಾ ಹೋದಂತೆ, ಈ ಶೀರ್ಷಿಕೆ, ಯಂತ್ರಯುಗದ ಮೊದಲು ಮತ್ತು ನಂತರದ ಸಾಮಾಜಿಕ ಪ್ರಕ್ರಿಯೆಗಳ ಮತ್ತು ಸಮಗ್ರಪ್ರಜ್ಞೆಗಳ ತಾಕಲಾಟವನ್ನೂ ಚಿತ್ರಿಸುತ್ತೆ. “ಏರುತ್ತ ಹೋದರು ಗಗನ ಚುಂಬಿಯ ತುದಿಗೆ ನೆಲದ ಸಂಪರ್ಕವನೆ ಕಡಿದುಕೊಂಡು ಪಿರೆಮಿಡ್ಡಿನಾಕೃತಿಯ ತುದಿಯಲೇಕಾಂತದಲಿ ತನ್ನ ತಾನೇ ಧ್ಯಾನ ಮಾಡಿಕೊಂಡು.” ಮನುಷ್ಯ ತನ್ನ ಪ್ರಯತ್ನದಿಂದ ಏರುತ್ತಲೇ ಹೋದ. ಗಗನ ಚುಂಬಿ ಎನ್ನುವುದು ಆಗಸಕ್ಕೆ ಮುತ್ತಿಡುವ ಎತ್ತರದ ಕಟ್ಟಡ. ಹತ್ತಲು ಉಪಯೋಗಿಸಿದ್ದು ಲಿಫ್ಟ್ ಎಂಬ ಯಂತ್ರ. ಎರುತ್ತಾ ಹೋದಂತೆ, ನೆಲ ಕಾಣಿಸಲ್ಲ. ನೆಲ ಎಂಬುದು, ಮೂಲ, ಆಧಾರಕ್ಕೆ ಪ್ರತಿಮೆ. ಏರುತ್ತಾ ಹೋದಂತೆ ತನ್ನ ಅಡಿಪಾಯವೇ ಮರೆತುಹೋಗಿ,ಅದರ ಸಂಪರ್ಕ ಕಡಿದುಹೋಯಿತು. ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಆಕೃತಿ ಇದೆ. ಈ ಪದವನ್ನು ಕವಿ ಉಪಯೋಗಿಸಿ ಕವಿತೆಗೆ ಅಚಾನಕ್ ಆಗಿ ಹೊಸ ದಿಕ್ಕು ಕೊಡುತ್ತಾರೆ. ಈಜಿಪ್ಟ್‌ನಲ್ಲಿ ಪಿರಮಿಡ್ ಒಳಗೆ ಮೃತದೇಹವನ್ನು ” ಮಮ್ಮಿ” ಮಾಡಿ ಸಮಾಧಿ ಮಾಡುತ್ತಿದ್ದರು. ಅಂದರೆ ಈ ಗಗನಚುಂಬಿ ಕಟ್ಟಡದ ತುದಿಯಲ್ಲಿ ಪಿರಮಿಡ್ ಇದ್ದರೆ, ಈ ಕಟ್ಟಡದ ನೆಲತಲದಿಂದ ಹತ್ತಿದ್ದು,ಬದುಕಿನ ಆದಿ ಮತ್ತು ಪಿರಮಿಡ್ ನಲ್ಲಿ, ಏಕಾಂತದಲ್ಲಿ, ತನ್ನ ತಾನೇ ಏಕಾಂತದಲ್ಲಿ ಸಮಾಧಿಯಾದ ಬದುಕಿನ ಅಂತ್ಯವೇ. ಹತ್ತುತ್ತಾ, ಕೊನೆಗೆ ನೆಲದ ಸಂಪರ್ಕ ಕಸಿದುಕೊಳ್ಳುವುದು ಎಂದರೆ, ಭೌತಿಕ ಜಗತ್ತಿನ ಸಂಪರ್ಕವಾದ,ದೇಹ ತೊರೆಯುವ ಕ್ರಿಯೆಯೇ?. ಪಿರಮಿಡ್ ಆಕೃತಿಯೊಳಗೆ ಜೀವಿಸುವ ದೇಹ, ಜೀವವಿದ್ದೂ ಸತ್ತಂತೆ,ಎಂಬ ಅರ್ಥವನ್ನೂ ಈ ಸಾಲುಗಳು ಪಡೆಯಬಹುದು ತಾನು ಏರಲು ಆರಂಭಿಸಿದ ಮೂಲ ಆಧಾರ, ತಂದೆ,ತಾಯಿ, ಶಾಲೆ,ಗುರುಗಳು, ಸಮಾಜ ಇವುಗಳ ಸೂತ್ರಗಳನ್ನು ಕಡಿದುಕೊಂಡು, ಏರಿದ ದಾರಿಯನ್ನು ಮರೆತು ಡಿಸ್ಕನೆಕ್ಟ್ ಆಗಿ ಬದುಕುವ ಜೀವನ, ಜೀವಮುಖೀ ಜೀವನವೇ? ಅಲ್ಲಾ,ಪಿರಮಿಡ್ ಒಳಗಿನ “ಮಮ್ಮಿ” ಬದುಕೇ?. ಇನ್ನೊಂದು ರೀತಿ ಅರ್ಥೈಸುವುದಿದ್ದರೆ, ಭೌತಿಕ ಬದುಕನ್ನು ತ್ಯಜಿಸಿ, ಧ್ಯಾನಮಾರ್ಗದತ್ತ ಏರಿದ ಸಂತನ ಅನುಭವಕ್ಕೆ, ತುದಿಯಲೇಕಾಂತದಲಿ, ಧ್ಯಾನಕ್ಕೆ ಅಣಿಯಾಗುವ ಪ್ರಯತ್ನ ಇದು. ಈ ಅರ್ಥಕ್ಕೆ ಕವಿತೆಯ ಉಳಿದ ಸಾಲುಗಳ ಸಮರ್ಥನೆ ದೊರಕುವುದಿಲ್ಲ. “ಯಾವುದೇ ಗಜಿಬಿಜಿಯ ಸದ್ದುಗದ್ದಲವಿಲ್ಲ ಬಳಿ ಸೆಳೆವ ಬಳಗಗಳ ಸೂತ್ರವಿಲ್ಲ ಸಂಬಂಧಗಳ ಬಂಧ ಕಡಿದು ಮುನ್ನಡೆದಾಯ್ತು ಸ್ವರ್ಗ ಸೀಮೆಗೆ ಈಗ ಮೆಟ್ಟಿಲೊಂದೆ.” ಈ ಗಗನಚುಂಬಿಯ ಮೇಲೆ ನೆಲದಲ್ಲಿ ನಡೆಯುವ ಅಷ್ಟೂ ಸಮಾಜಮುಖೀ ಶಬ್ಧಗಳು ಇಲ್ಲ. ಸ್ಪಂದನೆಯಿಲ್ಲ, ಬಂಧು ಬಳಗಗಳ,ಸಮಾಜದ ಕಟ್ಟುಪಾಡುಗಳಿಲ್ಲ. ಸಂಬಂಧಗಳ ಕಡಿದು ಮುನ್ನಡೆದಾಯ್ತು ಅಂತ ಕವಿವಾಣಿ. ಸಂಬಂಧ ಅದರಷ್ಟಕ್ಕೇ ಕಡಿದು ಹೋದದ್ದಲ್ಲ. ಎತ್ತರಕ್ಕೆ ಏರುವ ಭರದಲ್ಲಿ,ಆರೋಹಿಯೇ ಕಡಿದದ್ದು. ಇಲ್ಲೊಂದು ಧರ್ಮ ಸೂಕ್ಷ್ಮ ಇದೆ!. ಸಂಬಂಧಗಳ ಬಂಧ ಕಡಿಯದಿದ್ದರೆ ಹತ್ತಲು ಬಹುಷಃ ಕಷ್ಟವಾಗುತ್ತಿತ್ತು. ಆ ಸೂತ್ರಗಳು ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿದ್ದವು. ಬಿಂದಾಸ್ ಆಗಿ ಅಷ್ಟೆತ್ತರ ಏರಲು ಸಂಪೂರ್ಣ ಸ್ವಾತಂತ್ರ್ಯ ಬೇಕಿತ್ತು. ಆದರೆ ಪ್ರಶ್ನೆ, ಏರಿದ ಎತ್ತರಕ್ಕೆ ಅರ್ಥ ಇದೆಯೇ?. ಬಹುಜನಬಳಗದ ಬಂಧನದಿಂದ, ಕಸಿದುಕೊಂಡು ತನ್ನದೇ ಆದ ಚಿಕ್ಕ ಕುಟುಂಬಕ್ಕೆ ಸೀಮಿತವಾದ, ತಾನು,ತನ್ನ ಸಾಧನೆ ಮತ್ತು ತನ್ನ ಬದುಕಿನ ಮಿತಿಯೊಳಗೆ ಸ್ವರ್ಗ ಹುಡುಕುವ ಪ್ರಯತ್ನ ಇದು. “ಹಳೆಯ ಮೌಲ್ಯಗಳೆಲ್ಲ ಅಪಮೌಲ್ಯಗೊಂಡೀಗ ತಳದಲ್ಲಿ ಬಿದ್ದಿವೆ ಅನಾಥವಾಗಿ ತಾನು ತನ್ನದು ಎಂಬ ಸಸಿಯ ಊರಿದ್ದಾಯ್ತು ಕುಂಡದಲಿ ಇಲ್ಲಿ ತುದಿಹಂತದಲ್ಲಿ” ಈ ಗಗನಚುಂಬಿ ಕಟ್ಟಡದ ತುದಿಗೆ ತಲಪಿದ ವ್ಯಕ್ತಿಗೆ, ಕಟ್ಟಡದ ತಳಪಾಯವಾದ ಹಳೆಯ ಮೌಲ್ಯಗಳು ಅಪಮೌಲ್ಯವಾಗಿವೆ. ಇಲ್ಲಿ ಅಪಮೌಲ್ಯ ಎಂಬ ಪದ ವ್ಯಾಪಾರೀ ಜಗತ್ತಿನ ಕರೆನ್ಸಿಯನ್ನು ಡಿವೇಲ್ಯುವೇಷನ್ ಅನ್ನೋ ಶಬ್ಧ. ಲಿಫ್ಟ್ ಎಂಬ ಯಾಂತ್ರಿಕ ವ್ಯವಸ್ಥೆಯಲ್ಲಿ ಮೇಲೇರುತ್ತಾ ಹೋದಂತೆ, ಕುರುಡು ಕಾಂಚಾಣ ಮುಖ್ಯವಾಗಿ, ಮೌಲ್ಯಗಳು ತಳದಲ್ಲಿ ಬಿದ್ದಿವೆ ಅನಾಥವಾಗಿ. ತುದಿಯಲ್ಲಿ ತಾನು,ತನ್ನದು ಎಂಬ ಸ್ವಾರ್ಥವೇ ಮುಖ್ಯವಾಗಿ, ಆರ್ಟಿಫಿಶಿಯಲ್ ಆದ ಹಸಿರಿನ ವ್ಯವಸ್ಥೆ, ಹೂ ಕುಂಡದಲ್ಲಿ ಸಸಿ ಊರಿ ನಿರ್ಮಿಸಿ, ಅದನ್ನೇ ನೆಲದ ಮರಗಳಾಗಿ ಕಾಣುವ ಅವಸ್ಥೆ ಇದು. ಕವಿ ರೂಪಕವಾಗಿ,’ತಾನು ತನ್ನದು ಎಂಬ ಸಸಿ’ ಎನ್ನುತ್ತಾರೆ!. ತುದಿಹಂತದಲ್ಲಿ ಅಂತ ಕವಿ ಸೂಕ್ಷ್ಮವಾಗಿ ಹೇಳುವುದೇನು?. ಇಂತಹ ಬೆಳವಣಿಗೆಗೆ ಅಂತ್ಯವಿದೆ. ಇಂತಹ ಬೆಳವಣಿಗೆ ಕೊನೆಯಾಗುವುದು,ತಾನು ಮತ್ತು ತನ್ನದು ಎಂಬ “ಸಿಂಗ್ಯುಲಾರಿಟಿ” ಯಲ್ಲಿ ಎಂದೇ? “ಒಂದೊಂದೆ ಮೆಟ್ಟಿಲನು ಹತ್ತಿ ಬಂದರು ಕೂಡಾ ಬೇಡ ಅವು ಇನ್ನು ಲಿಫ್ಟೊಂದೆ ಸಾಕು ನಡೆದ ದಾರಿಯ ಮತ್ತೆ ನೋಡದೇ ನಡೆವವಗೆ ಕಾಂಚಾಣದೇಕಾಂತವಷ್ಟೆ ಸಾಕು.” ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ ಗಗನ ಚುಂಬಿ ಎತ್ತರಕ್ಕೆ ಏರಿದರೂ ಆ ಹತ್ತಿದ ದಾರಿ ಮರೆತು, ಯಾಂತ್ರೀಕೃತ, ಯಾಂತ್ರಿಕ ಬದುಕಿಗೆ ಮನುಷ್ಯ ಒಗ್ಗಿಕೊಳ್ಳುವ, ಒಪ್ಪಿಸಿಕೊಳ್ಳುವ, ಅವಸ್ಥೆಯ ಚಿತ್ರಣ. ಕಾಂಚಾಣದೇಕಾಂತ! ಇದಕ್ಕೆ ವಿವರಣೆ ಬೇಕೇ?! “ಅರಿವಿರದ ಯಾವುದೋ ಬಂದು ಹೊಡೆದರೆ ಢಿಕ್ಕಿ ತುದಿಯಲುಗಿ,ಒಂದೊಂದೆ ಹಂತ ಕುಸಿದು ಎದ್ದ ಬೆಂಕಿಯ ನಡುವೆ,ಕೆಟ್ಟಿರುವ ಲಿಫ್ಟೊಂದು ನಿಂತಿದೆ ಅನಾಥ–ನೆಲಬಾನ ನಡುವೆ.” ಈ ಪ್ಯಾರಾ ಓದುವಾಗ, ಅಮೆರಿಕಾದ ವರ್ಲ್ಡ್ ಟ್ರೇಡ್ ಸೆಂಟರ್ ನ ಗಗನಚುಂಬಿ ಅವಳಿ ಟವರ್ ಮೇಲೆ ಆದ ಅಟ್ಯಾಕ್ ನ ನೆನಪು ಬರುತ್ತೆ. ಗಗನಚುಂಬಿ ಕಟ್ಟಡ ಅದರ ಎತ್ತರದಲ್ಲಿ ಏರಿ ವಾಸವಾದವರು ಒಪ್ಪಲಿ ಬಿಡಲಿ, ಅದು ನಿಂತಿರುವುದಂತೂ ನೆಲದ ಮೇಲೆ. ಅರಿವಿರದ ಯಾವುದೇ ಹೊಡೆತಕ್ಕೆ, ಕಟ್ಟಡ ತುದಿಯಲುಗಿ ಕುಸಿಯುತ್ತೆ. ಈ ಅರಿವಿರದ ಹೊಡೆತ, ಭೂಕಂಪವೂ ಆಗಬಹುದು. ಕುಸಿಯುವುದೂ ಒಂದು ಕ್ರಾಂತಿಯೇ. ಆ ಹಠಾತ್ ಬದಲಾವಣೆಯ
ಅಂಕಣ ಬರಹ ರಾತ್ರಿಬಸ್ಸುಗಳೊಂದಿಗೆ ಮಾತುಕತೆ ರಾತ್ರಿಬಸ್ಸಿನಲ್ಲಿ ಎಷ್ಟೆಲ್ಲ ಕನಸುಗಳು ಪಯಣಿಸುತ್ತಿರುತ್ತವೆ; ತಲುಪಬೇಕಾದ ಸ್ಥಳವನ್ನು ಗಮನದಲ್ಲಿಟ್ಟುಕೊಂಡು ಹವಾಮಾನಕ್ಕೆ ತಕ್ಕ ಬಟ್ಟೆ ತೊಟ್ಟು ಬೆಳಗೆನ್ನುವ ಬೆರಗಿಗೆ ಕಣ್ಣುಬಿಡಲು ತಯಾರಾಗಿ ಹೊರಟುನಿಂತಿರುತ್ತವೆ! ಬಗಲಲ್ಲೊಂದು ಹಗುರವಾದ ಪರ್ಸು, ಕೈಯಲ್ಲೊಂದು ಭಾರವಾದ ಬ್ಯಾಗು, ಕೂದಲನ್ನು ಮೇಲೆತ್ತಿ ಕಟ್ಟಿದ ರಬ್ಬರ್ ಬ್ಯಾಂಡು ಎಲ್ಲವೂ ಆ ಕನಸುಗಳೊಂದಿಗೆ ಹೆಜ್ಜೆಹಾಕುತ್ತಿರುತ್ತವೆ. ಅವಸರದಲ್ಲಿ ಮನೆಬಿಟ್ಟ ಕನಸುಗಳ ಕಣ್ಣಿನ ಕನ್ನಡಕ, ಕೈಗೊಂದು ವಾಚು, ಬಿಸಿನೀರಿನ ಬಾಟಲಿಗಳೆಲ್ಲವೂ ಆ ಪಯಣದ ಪಾತ್ರಧಾರಿಗಳಂತೆ ಪಾಲ್ಗೊಳ್ಳುತ್ತವೆ. ಅರಿವಿಗೇ ಬಾರದಂತೆ ಬದುಕಿನ ಅದ್ಯಾವುದೋ ಕಾಲಘಟ್ಟದಲ್ಲಿ ಹುಟ್ಟಿಕೊಂಡ ಆ ಕನಸುಗಳನ್ನೆಲ್ಲ ಅಪರಿಚಿತ ರಾತ್ರಿಯೊಂದರ ಬೋರ್ಡಿಲ್ಲದ ಬಸ್ಸು ತನ್ನದಾಗಿಸಿಕೊಂಡು ಸಾಗಿಸುತ್ತಿರುತ್ತದೆ. ಒಂದೊಂದೇ ಬೀದಿದೀಪಗಳನ್ನು ದಾಟುತ್ತ ಚಲಿಸುತ್ತಲೇ ಇರುವ ಅವು ಆ ಸ್ಥಾನಪಲ್ಲಟದ ಮಾರ್ಗಮಧ್ಯದಲ್ಲಿ ಹುಟ್ಟು-ಕೊನೆಗಳ ಆಲೋಚನೆಯನ್ನು ಬದಿಗಿಟ್ಟು, ಬಸ್ಸಿನ ಚಲನೆಯನ್ನೇ ತಮ್ಮದಾಗಿಸಿಕೊಂಡು ಸೀಟಿಗೊರಗಿ ಸುಧಾರಿಸಿಕೊಳ್ಳುತ್ತವೆ. ಹಾಗೆ ದಣಿವಾರಿಸಿಕೊಳ್ಳುತ್ತಿರುವ ಕನಸುಗಳನ್ನು ಹೊತ್ತ ಬಸ್ಸು ಹಳೆ ಸಿನೆಮಾವೊಂದರ ರೊಮ್ಯಾಂಟಿಕ್ ಹಾಡಿನ ಟ್ಯೂನಿನಂತೆ ತನ್ನದೇ ಆದ ಗತಿಯಲ್ಲಿ ದಾರಿಯೆಡೆಗೆ ದೃಷ್ಟಿನೆಟ್ಟು ಓಡುತ್ತಿರುತ್ತದೆ. ಈ ರಾತ್ರಿಬಸ್ಸುಗಳೆಡೆಗಿನ ಮೋಹವೂ ಹಳೆಯ ಹಾಡುಗಳೆಡೆಗಿನ ಮೋಹದಂತೆ ತನ್ನಿಂತಾನೇ ಹುಟ್ಟಿಕೊಂಡಿತು. ಚಿಕ್ಕವಳಿದ್ದಾಗ ಜಾತ್ರೆಗೆ ಹೋದಾಗಲೋ ಅಥವಾ ಮಳೆಗಾಲದ ದಿನಗಳಲ್ಲಿ ಸಂಚಾರವ್ಯವಸ್ಥೆಗಳೆಲ್ಲ ಅಸ್ತವ್ಯಸ್ತವಾಗಿ ಬಸ್ಸುಗಳೆಲ್ಲ ಕ್ಯಾನ್ಸಲ್ ಆಗುತ್ತಿದ್ದ ಸಂದರ್ಭಗಳಲ್ಲೋ, ಲಾಸ್ಟ್ ಬಸ್ಸಿಗಾಗಿ ಬಸ್ ಸ್ಟ್ಯಾಂಡಿನಲ್ಲಿ ಕಾಯುತ್ತಿದ್ದ ಸಮಯಗಳಲ್ಲಿ ಹೊರಊರುಗಳಿಗೆ ಸಂಚರಿಸುತ್ತಿದ್ದ ರಾತ್ರಿಬಸ್ಸುಗಳು ಬಂದು ನಿಲ್ಲುತ್ತಿದ್ದವು. ಹಾಗೆ ಬಸ್ಸು ಬಂದು ನಿಲ್ಲುತ್ತಿದ್ದಂತೆಯೇ ಒಂದು ಕೈಯ್ಯಲ್ಲಿ ಟಿಕೆಟ್ ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಲಗೇಜು ಎತ್ತಿಕೊಂಡು ಗಡಿಬಿಡಿಯಲ್ಲಿ ಬಸ್ಸಿನೆಡೆಗೆ ಓಡುವವರನ್ನು ಕಂಡಾಗಲೆಲ್ಲ, ಈ ರಾತ್ರಿಯ ಸಮಯದಲ್ಲಿ ಇಷ್ಟೊಂದು ಜನರು ಊರು ಬಿಟ್ಟು ಅದೆಲ್ಲಿಗೆ ಹೋಗುತ್ತಿರಬಹುದು ಎನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿತ್ತು. ಪರ್ಸನ್ನು ಭದ್ರವಾಗಿ ಹಿಡಿದುಕೊಂಡು ಸ್ವೆಟರನ್ನು ಸರಿಪಡಿಸಿಕೊಳ್ಳುತ್ತ ಬಸ್ಸಿನಿಂದ ಇಳಿದು ಟಾಯ್ಲೆಟ್ಟಿನ ಬೋರ್ಡನ್ನು ಹುಡುಕುವವರನ್ನು ನೋಡುವಾಗಲೆಲ್ಲ, ಅವರೆಲ್ಲ ಅದ್ಯಾವುದೋ ಬೇರೆಯದೇ ಆದ ಲೋಕದೊಂದಿಗೆ ನನ್ನನ್ನು ಕನೆಕ್ಟ್ ಮಾಡುತ್ತಿರುವಂತೆ ಭಾಸವಾಗುತ್ತಿತ್ತು. ಹಾಗೆ ಒಂದೊಂದಾಗಿ ಸ್ಟ್ಯಾಂಡಿಗೆ ಬರುತ್ತಿದ್ದ ರಾತ್ರಿಬಸ್ಸುಗಳಿಂದಾಗಿ ಬಸ್ ಸ್ಟ್ಯಾಂಡಿನ ಬೇಕರಿಯ ಬ್ರೆಡ್ಡು-ಬಿಸ್ಕಿಟ್ಟುಗಳೂ ಒಂದೊಂದಾಗಿ ಖಾಲಿಯಾಗಿ ಅಂಗಡಿಯವನ ಮುಖದಲ್ಲೊಂದು ಸಮಾಧಾನ ಕಾಣಿಸಿಕೊಳ್ಳುತ್ತಿತ್ತು. ಆ ರೀತಿಯ ಹಗಲಲ್ಲಿ ಕಾಣಸಿಗದ ಒಂದು ವಿಚಿತ್ರವಾದ ಅವಸರದ, ಉಮೇದಿನ, ಸಮಾಧಾನದ ವಾತಾವರಣವನ್ನು ಸೃಷ್ಟಿ ಮಾಡುತ್ತಿದ್ದ ರಾತ್ರಿಬಸ್ಸುಗಳು ಒಂದನ್ನೊಂದು ರಿಪ್ಲೇಸ್ ಮಾಡುತ್ತಿರುವ ಸಮಯದಲ್ಲಿ ಲಾಸ್ಟ್ ಬಸ್ಸುಗಳು ಒಂದೊಂದಾಗಿ ಬಸ್ ಸ್ಟ್ಯಾಂಡಿನಿಂದ ಜಾಗ ಖಾಲಿಮಾಡುತ್ತಿದ್ದವು. ಹಾಗೆ ಲಾಸ್ಟ್ ಬಸ್ಸಿನಲ್ಲಿ ಕಿಟಕಿಪಕ್ಕದ ಸೀಟಿನಲ್ಲಿ ಕುಳಿತ ನಾನು ರಾತ್ರಿಬಸ್ಸಿನೊಳಗೆ ಕುಳಿತ ಜನರನ್ನು ಬೆರಗಿನಿಂದ ಇಣುಕಿ ನೋಡುತ್ತ, ಅವುಗಳ ಬಗ್ಗೆಯೇ ಯೋಚಿಸುತ್ತ ಬಸ್ಸಿನ ಸರಳಿಗೊರಗಿ ನಿದ್ರೆ ಮಾಡುತ್ತಿದ್ದೆ. ನಾನೂ ಅಂಥದ್ದೇ ರಾತ್ರಿಬಸ್ಸಿನೊಳಗೆ ಕುಳಿತು ಊರುಬಿಟ್ಟು ರಾತ್ರಿಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ, ಕ್ಯಾಬ್ ಗಳಿಗೆ ಎದುರಾಗುತ್ತಿದ್ದ ರಾತ್ರಿಬಸ್ಸುಗಳ ಬೋರ್ಡಿನೆಡೆಗೆ ದೃಷ್ಟಿ ಹಾಯಿಸುತ್ತಿದ್ದೆ; ಬೋರ್ಡುಗಳೇ ಇರದ ಬಸ್ಸುಗಳ ಡ್ರೈವರುಗಳೆಡೆಗೆ ಇಣುಕಿ ನೋಡುವ ಒಂದು ವಿಚಿತ್ರವಾದ ಚಟವೂ ಅಂಟಿಕೊಂಡಿತ್ತು. ಅವರ ಕಣ್ಣುಗಳಲ್ಲಿರುತ್ತಿದ್ದ ತೀಕ್ಷ್ಣತೆ-ಜಾಗರೂಕತೆಗಳೆಲ್ಲ ಕಂಪ್ಯೂಟರಿನೆದುರಿಗೆ ಕುಳಿತು ಮಂಜಾಗಿರುತ್ತಿದ್ದ ನನ್ನ ಕಣ್ಣುಗಳಲ್ಲೊಂದು ಹೊಸ ಚುರುಕನ್ನು ತುಂಬಿದಂತೆನ್ನಿಸಿ ಖುಷಿಯಾಗಿ, ಆ ಡ್ರೈವರುಗಳ ಮತ್ತು ನನ್ನ ಬದುಕಿನ ನಡುವಿನಲ್ಲೊಂದು ವಿಚಿತ್ರವಾದ ಹೋಲಿಕೆಯಿರುವಂತೆ ಭಾಸವಾಗುತ್ತಿತ್ತು. ಆ ಸಾಮ್ಯತೆಯೇ ಎಲ್ಲ ಬದುಕುಗಳ ನಿಜಸ್ಥಿತಿಯನ್ನು ಕಣ್ಣೆದುರು ತೆರೆದಿಟ್ಟಂತೆನ್ನಿಸಿ, ಹುಟ್ಟು-ಕೊನೆಗಳನ್ನು ಮರೆತು ಬಸ್ಸಿನಲ್ಲಿ ಚಲಿಸುತ್ತಿರುವ ಕನಸುಗಳು ಒಂದಿಲ್ಲೊಂದು ನಿಲುಗಡೆಯಲ್ಲಿ ಇನ್ನೊಂದು ಬಸ್ಸಿನ ಕನಸುಗಳೊಂದಿಗೆ ಸಂಧಿಸಿ ಎಲ್ಲರ ಬದುಕುಗಳನ್ನು ನಿರ್ಧರಿಸುತ್ತಿರುವಂತೆ ತೋರುತ್ತಿತ್ತು. ರಾತ್ರಿಬಸ್ಸಿನ ಮುಚ್ಚಿದ ಕಿಟಕಿಗಳ ಕರ್ಟನ್ನಿನ ಹಿಂದಿರುವ ಕನಸುಗಳೆಲ್ಲ ಬೆಳಗಾಗುವುದನ್ನೇ ಕಾಯುತ್ತಿರಬಹುದು, ಆ ಕಾಯುವಿಕೆಯ ಪ್ರಕ್ರಿಯೆಯೊಂದಿಗೇ ಅವುಗಳ ಸತ್ಯತೆಯೂ ಕೆಲಸ ಮಾಡುತ್ತಿರಬಹುದು ಎನ್ನುವಂತಹ ಯೋಚನೆಗಳೆಲ್ಲ ಪ್ರತಿದಿನವೂ ಬಸ್ಸಿನೊಂದಿಗೆ ಎದುರಾಗುತ್ತಿದ್ದವು. ಇಷ್ಟೆಲ್ಲ ಯೋಚನೆಗಳ ನಡುವೆಯೂ ಕೊನೆಯ ರಾತ್ರಿಬಸ್ಸು ಯಾವ ಸಮಯಕ್ಕೆ ಬಸ್ ಸ್ಟ್ಯಾಂಡನ್ನು ಬಿಡಬಹುದು, ಬಸ್ ಸ್ಟ್ಯಾಂಡಿನಲ್ಲಿರುವ ಬಿಸ್ಕಿಟಿನ ಅಂಗಡಿಯ ಬಾಗಿಲು ಯಾವಾಗ ಮುಚ್ಚಬಹುದು, ಬ್ಯಾಗಿನ ತುಂಬ ಕನಸುಗಳನ್ನು ತುಂಬಿಕೊಂಡು ರಾತ್ರಿಬಸ್ಸು ಹತ್ತಿರುವವರ ಕನಸುಗಳೆಲ್ಲ ಯಾವ ತಿರುವಿನಲ್ಲಿ ಚಲಿಸುತ್ತಿರಬಹುದು ಎನ್ನುವ ಪ್ರಶ್ನೆಗಳೆಲ್ಲ ಪ್ರಶ್ನೆಗಳಾಗಿಯೇ ಉಳಿದಿವೆ. ಈ ರಾತ್ರಿಬಸ್ಸಿಗಾಗಿ ಕಾಯುವವರೆಲ್ಲ ಸೇರಿ ಅಲ್ಲೊಂದು ಹಗಲುಗಳಿಂದ ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿ ಮಾಡಿರುತ್ತಾರೆ. ಸ್ಕರ್ಟು ತೊಟ್ಟು ಅದಕ್ಕೆ ತಕ್ಕ ಹೈ ಹೀಲ್ಸ್ ಧರಿಸಿ ಎಸಿ ರೂಮಿನಲ್ಲಿ ನಿರಂತರವಾಗಿ ಕ್ಲೈಂಟ್ ಮೀಟಿಂಗಿನಲ್ಲಿರುವ ಹುಡುಗಿಯೊಬ್ಬಳು ಸಾಧಾರಣವಾದ ಚಪ್ಪಲಿ ಕಾಟನ್ ಬಟ್ಟೆಯನ್ನು ಧರಿಸಿ ಮೆಟ್ಟಿಲುಗಳ ಮೇಲೆ ಕುಳಿತು, ಎಣ್ಣೆಹಾಕಿ ತಲೆಬಾಚಿ ಕನಕಾಂಬರ ಮುಡಿದ ಅಪರಿಚಿತ ಹೆಂಗಸಿನೊಂದಿಗೆ ತರಕಾರಿ ರೇಟಿನ ಬಗ್ಗೆ ಮಾತನಾಡುತ್ತಿರುತ್ತಾಳೆ; ಕೆಲಸದ ಒತ್ತಡದಲ್ಲಿ ತಮ್ಮವರೊಂದಿಗೆ ಮಾತನಾಡಲು ಸಮಯವೇ ಸಿಗದ ಹುಡುಗನೊಬ್ಬ ಬಸ್ಸು ತಡವಾಗಿ ಬರುತ್ತಿರುವುದಕ್ಕೆ ಕಾರಣವನ್ನೋ, ಆಫೀಸಿನ ಪ್ರಮೋಷನ್ ವಿಷಯವನ್ನೋ, ಸ್ನೇಹಿತನ ಮದುವೆಯ ಸಂಗತಿಯನ್ನೋ ಅಕ್ಕ-ತಂಗಿಯರೊಂದಿಗೆ ಹರಟುತ್ತ ಆಚೀಚೆ ಓಡಾಡುತ್ತಿರುತ್ತಾನೆ; ಹೆಂಡತಿಯನ್ನು ಬಸ್ ಹತ್ತಿಸಲು ಬಂದವನ ಕಾರಿನಲ್ಲಿ ಹಳೆಯ ಗಝಲ್ ಗಳು ಒಂದೊಂದಾಗಿ ಪ್ಲೇ ಆಗುತ್ತ ಹೊಸದೊಂದು ಸಂವಹನವನ್ನು ಹುಟ್ಟುಹಾಕುತ್ತವೆ; ಡಿಸ್ಕೌಂಟಿನಲ್ಲಿ ಖರೀದಿಸಿದ ರೇಷ್ಮೆ ಸೀರೆ, ಹೊಸ ಸಿನೆಮಾವೊಂದರ ನಾಯಕನ ಹೇರ್ ಸ್ಟೈಲ್, ಕ್ರಿಕೆಟ್ಟಿನ ಬೆಟ್ಟಿಂಗ್ ನಲ್ಲಿ ಕಳೆದುಕೊಂಡ ಹಣ, ಟ್ರೆಕ್ಕಿಂಗ್ ನಲ್ಲಿ ಸಿಕ್ಕಿದ ಹೊಸ ಗೆಳೆಯರು, ಅತ್ತೆ-ಸೊಸೆಯರ ಮನಸ್ತಾಪಗಳೆಲ್ಲವೂ ಮಾತಾಗಿ ಹೊರಬಂದು ಬಸ್ ಸ್ಟಾಪಿನ ಪ್ಲಾಟ್ ಫಾರ್ಮ್ ಮೇಲೆ ಒಂದರೊಳಗೊಂದು ಸೇರಿಹೋಗುತ್ತವೆ. ಹಾಗೆ ಸಂಧಿಸಿದ ಮಾತುಕತೆಗಳೆಲ್ಲವೂ ಆ ಕ್ಷಣದ ಬದುಕನ್ನು ತಮ್ಮದಾಗಿಸಿಕೊಂಡು ಬಸ್ಸನ್ನೇರಲು ರೆಡಿಯಾಗುತ್ತವೆ. ರಾತ್ರಿಬಸ್ಸಿನೊಳಗಿನ ಮಾತುಕತೆಗಳದ್ದೂ ಒಂದು ವಿಶಿಷ್ಟವಾದ ಪ್ರಪಂಚ. ಸ್ನೇಹವೊಂದು ಅದೆಷ್ಟು ಸುಲಭವಾಗಿ ಹುಟ್ಟಿಕೊಳ್ಳಬಹುದೆನ್ನುವ ಪ್ರಾಕ್ಟಿಕಲ್ ಎನ್ನಬಹುದಾದಂತಹ ಕಲ್ಪನೆ ಈ ಬಸ್ಸುಗಳೊಳಗೆ ಸಿದ್ಧಿಸುತ್ತದೆ. ಅಂಥದ್ದೊಂದು ಸ್ನೇಹ ಹುಟ್ಟಿಕೊಳ್ಳಲು ಒಂದೇ ರೀತಿಯ ಆಸಕ್ತಿಯಾಗಲೀ, ಹವ್ಯಾಸಗಳಾಗಲೀ, ಮನೋಭಾವಗಳಾಗಲೀ ಅಗತ್ಯವಿಲ್ಲ; ವಯಸ್ಸಿನ ಇತಿಮಿತಿಗಳಂತೂ ಮೊದಲೇ ಇಲ್ಲ! ಪಕ್ಕದಲ್ಲಿ ಕುಳಿತವರೆಲ್ಲ ಸಲೀಸಾಗಿ ಸ್ನೇಹಿತರಾಗಿ, ಕಷ್ಟ-ಸುಖಗಳ ವಿನಿಮಯವೂ ಆಗಿ, ಮಧ್ಯರಾತ್ರಿಯಲ್ಲಿ ಅದ್ಯಾವುದೋ ಊರಿನಲ್ಲಿ ಬಸ್ಸು ನಿಂತಾಗ ಒಟ್ಟಿಗೇ ಕೆಳಗಿಳಿದು ಜೊತೆಯಾಗಿ ಟೀ ಕುಡಿದು, ಬೆಳಗ್ಗೆ ಬಸ್ಸಿಳಿದ ನಂತರ ಸಂಪರ್ಕವೇ ಇಲ್ಲದಿದ್ದರೂ, ರಾತ್ರಿಬಸ್ಸಿನಲ್ಲಿ ಜೊತೆಯಾಗಿ ಪ್ರಯಾಣ ಮಾಡಿದವರ ಚಹರೆ-ಸಂಭಾಷಣೆಗಳೆಲ್ಲವೂ ಮನಸ್ಸಿನಲ್ಲಿ ಉಳಿದುಹೋಗಿರುತ್ತವೆ. ಆ ವ್ಯಕ್ತಿಯನ್ನು ಮತ್ತೆಂದೂ ಭೇಟಿಯಾಗದಿದ್ದರೂ ಅಲ್ಪಕಾಲದ ಆ ಸ್ನೇಹದ ತುಣುಕೊಂದು ನೆನಪಾಗಿ ಉಳಿದು, ಯಾವುದೋ ಸಂದರ್ಭದ ಯಾವುದೋ ಸಂಗತಿಗಳೊಂದಿಗೆ ತನ್ನನ್ನು ತಾನು ಜೋಡಿಸಿಕೊಂಡು ಸದಾಕಾಲ ಜೊತೆಗಿರುತ್ತದೆ. ಅಂತಹ ಚಿಕ್ಕಪುಟ್ಟ ಸ್ನೇಹಗಳೇ ಒಂದಾಗಿ ಮಾನವೀಯ ನೆಲೆಯಲ್ಲಿ ಅಂತರಂಗದೊಂದಿಗೆ ಮಾತುಕತೆ ನಡೆಸುತ್ತ ಚಾಕಲೇಟ್ ಬಾಕ್ಸಿನೊಳಗಿನ ಬೊಂಬೆಗಳಂತೆ ಬದುಕಿನ ಸವಿಯನ್ನು ಹೆಚ್ಚಿಸುತ್ತಿರುತ್ತವೆ. ಈ ರಾತ್ರಿಬಸ್ಸುಗಳನ್ನು ಏರುವಾಗಲೆಲ್ಲ ನನ್ನನ್ನೊಂದು ವಿಚಿತ್ರವಾದ ಭಯವೂ ಆವರಿಸಿಕೊಳ್ಳುತ್ತಿತ್ತು. ಚಿಕ್ಕವಳಿದ್ದಾಗ ವಿಧಿ-ಹಣೆಬರಹಗಳ ಕಥೆಗಳನ್ನೆಲ್ಲ ಕೇಳುತ್ತ ಬೆಳೆದಿದ್ದ ನನಗೆ ಈ ಬೋರ್ಡುಗಳಿಲ್ಲದ ಬಸ್ಸುಗಳನ್ನು ಏರುವಾಗಲೆಲ್ಲ, ಹಣೆಬರಹವನ್ನೇ ಬರೆದಿರದ ಬದುಕಿನೊಂದಿಗೆ ಓಡುತ್ತಿರುವ ಅನುಭವವಾಗಿ ವಿಚಿತ್ರವಾದ ತಳಮಳವಾಗುತ್ತಿತ್ತು. ಐದನೇ ಕ್ಲಾಸಿನಲ್ಲಿ ಕಲಿತ ಇಂಗ್ಲಿಷ್ ಅಕ್ಷರಮಾಲೆಯನ್ನು ಮತ್ತೊಮ್ಮೆ ಮನನ ಮಾಡಿಕೊಂಡು, ಬೋರ್ಡಿನ ಬದಲಾಗಿ ಗ್ಲಾಸಿನ ಮೇಲೆ ಬರೆದಿರುತ್ತಿದ್ದ ಅಕ್ಷರವನ್ನು ಮತ್ತೆಮತ್ತೆ ಓದಿಕೊಂಡು, ವಿಧಿಯ ಮೇಲೆ ಭಾರ ಹಾಕುತ್ತಿರುವ ಭಾವದಲ್ಲಿ ಬಸ್ಸಿನೊಳಗೆ ಲಗೇಜು ಇಳಿಸುತ್ತಿದ್ದೆ. ಲಗೇಜಿನಲ್ಲಿರುವ ಟೆಡ್ಡಿಬೇರ್-ಚಾಕಲೇಟುಗಳೆಲ್ಲ ಸುಸೂತ್ರವಾಗಿ ಮಕ್ಕಳ ಕೈಯನ್ನು ತಲುಪುವಂತಾಗಲಿ ಎಂದು ಪ್ರಾರ್ಥಿಸುತ್ತ ಡ್ರೈವರಿನ ಮುಖವನ್ನೊಮ್ಮೆ ನೋಡುತ್ತಿದ್ದೆ. ಎರಡು ತಿಂಗಳಿಗೊಮ್ಮೆಯಾದರೂ ರಾತ್ರಿಬಸ್ಸಿನೊಂದಿಗೆ ಒಡನಾಟವಿಟ್ಟುಕೊಂಡಿದ್ದ ನನಗೆ ಎಷ್ಟೋ ಸಲ ಮುಖಪರಿಚಯವಿರುವ ಡ್ರೈವರಿನ ದರ್ಶನವಾಗಿ, ವರುಷಗಳಿಂದ ಬದಲಾಗದೇ ಪೀಠದಲ್ಲಿ ಕುಳಿತಿರುವ ದೇವರನ್ನು ನೋಡಿದ ಸಮಾಧಾನವಾಗುತ್ತಿತ್ತು. ಆ ನೆಮ್ಮದಿಯ ಭಾವದಲ್ಲಿಯೇ ಸೀಟಿನ ನಂಬರನ್ನು ಹುಡುಕಿ ಕಾಲುಚಾಚಿದ ತಕ್ಷಣ, ಅದೇ ಲಾಸ್ಟ್ ಬಸ್ಸಿನ ಕಿಟಕಿಪಕ್ಕದ ಸೀಟು ತಪ್ಪದೇ ನೆನಪಾಗುತ್ತಿತ್ತು. ರಾತ್ರಿಬಸ್ಸೊಂದು ಕನಸಿನಂತೆ ಮನಸ್ಸನ್ನಾವರಿಸಿಕೊಂಡು, ನಿಧಾನವಾಗಿ ನೆನಪುಗಳೊಂದಿಗೆ ಒಡನಾಡುತ್ತಿರುವ ಸಮಯದಲ್ಲಿಯೂ ಅವುಗಳೆಡೆಗಿನ ಮೋಹ ಮಾತ್ರ ಟಿವಿ ಸ್ಟ್ಯಾಂಡಿನಲ್ಲಿರುವ ಹಳೆಯ ಹಾಡುಗಳ ಸಿಡಿಗಳಂತೆ ಹಳತಾಗದೇ ಉಳಿದುಕೊಂಡಿದೆ. ಮಾತುಕತೆಗಳೆಲ್ಲ ಮೊಬೈಲಿಗೆ ಸೀಮಿತವಾಗಿಹೋಗುತ್ತಿರುವ ಕಾಲದಲ್ಲಿಯೂ ರಾತ್ರಿಬಸ್ಸುಗಳಲ್ಲಿ ಸುಂದರವಾದ ಸಂಬಂಧವೊಂದು ಹುಟ್ಟಿಕೊಂಡು ಕಾಂಟ್ಯಾಕ್ಟ್ ನಂಬರುಗಳನ್ನು ವಿನಿಮಯ ಮಾಡಿಕೊಳ್ಳುತ್ತಿರಬಹುದು; ನಿಲುಗಡೆಯ ಚಹಾದ ಅಂಗಡಿಯಲ್ಲೊಬ್ಬ ಬಿಸ್ಕಿಟ್ ಪ್ಯಾಕೆಟ್ಟುಗಳಲ್ಲಿ ಸ್ನೇಹವನ್ನು ಹಂಚುತ್ತಿರಬಹುದು; ಲಗೇಜಿನೊಳಗಿನ ಮಾರ್ಕ್ಸ್ ಕಾರ್ಡು, ಲಗ್ನಪತ್ರಿಕೆ, ನೆಲ್ಲಿಕಾಯಿ, ತುಳಸಿಬೀಜಗಳೆಲ್ಲವೂ ನಿಶ್ಚಿಂತೆಯಿಂದ ಕನಸುಕಾಣುತ್ತಿರಬಹುದು. *************************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ
