Category: ಕಾವ್ಯಯಾನ

ಕಾವ್ಯಯಾನ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಜುಲ್ ಕಾಫಿ಼ಯಾ ಗಜ಼ಲ್………….. ಜಂಜಾಟಗಳ ಒತ್ತಡವೇ ನಿಜಬದುಕೆಂದು ನೆಮ್ಮದಿಯನ್ನೇ ಮರೆತೆ ಅಜ್ಞಾನದ ಕತ್ತಲಕೂಪವೇ ಜಗತ್ತೆಂದು ಜ್ಞಾನಜ್ಯೋತಿಯನ್ನೇ ಮರೆತೆ ಎದುರಾದ ನೂರು ಸಂಕಷ್ಟಗಳು ತಾತ್ಕಾಲಿಕವೆಂಬ ಅರಿವು ಇರಬೇಕಿತ್ತು ನಿನ್ನ ದುಃಖ ವೇದನೆಯೇ ಎಲ್ಲಕಿಂತ ಮಿಗಿಲೆಂದು ನಗುವುದನ್ನೇ ಮರೆತೆ ದ್ವೇಷ ಮದ ಮತ್ಸರಗಳ ಜ್ವಾಲಾಮುಖಿ ಸುಡುವುದಿಲ್ಲವೇ ನಿನ್ನನ್ನು ? ಇತರರ ಅವನತಿಯಲ್ಲೇ ನಲಿವಿದೆಯೆಂದು ಪ್ರೀತಿಯನ್ನೇ ಮರೆತೆ ಮೂರು ದಿನದ ಬಾಳಿನಾಟದಿ ಯಾರೂ ಯಾವುದೂ ಶಾಶ್ವತವಲ್ಲ ಸ್ವಾರ್ಥ ಲಾಲಸೆಯಲ್ಲೇ ಏಳಿಗೆಯಿದೆಯೆಂದು ನಿಸ್ವಾರ್ಥವನ್ನೇ ಮರೆತೆ ಎಚ್ಚರಿಸಬೇಕಿತ್ತು ನಿನ್ನ ಮನಸ್ಸಾಕ್ಷಿ ಎಂದೂ ಕೇಡು ಬಗೆಯದಿರೆಂದು ಪರರ ಸಾವಿನಲ್ಲೇ ಸಾರ್ಥಕತೆ ಇದೆಯೆಂದು ಮಾನವತೆಯನ್ನೇ ಮರೆತೆ *************************************

ಕಾವ್ಯಯಾನ

ನೀರೊಲೆಯ ಮೇಲೆ. ಶಶಿಕಲಾ ವೀ ಹುಡೇದ ನೀರೊಲೆಯ ಮೇಲೆ. ಸೀಗೆಯ ಹೊಗರು ಸುಡುಸುಡು ನೀರು ಬೆರಕೆಯ ಬೇಡುವ ಹೊತ್ತು ಸುಣ್ಣ ನುಂಗಿದ ಹೊಗೆಸುತ್ತಿದ ಗೋಡೆಗಳ ಮೇಲೆ ನೀರ ಹನಿಗಳದೇ ಚಿತ್ತಾರ ಯಾವ ಯುದ್ಧದ ಕತೆಯ ಹೇಳುತ್ತಾವೋ ನೋಡುವ ಕಣ್ಣುಗಳಿಗೆ ಒಂದೊಂದು ರೀತಿಯ ಅರ್ಥ ಉಸಿರಾಡಲು ಒದ್ದಾಡುವ ಒಂದೇ ಒಂದು ಕಿಂಡಿಯ ಕುತ್ತಿಗೆಯ ಮಟ್ಟ ಧೂಳು ಮಸಿಯದೇ ಕಾರುಬಾರು ಹೆಸರೂ ನೆನಪಿರದ ಮುತ್ತಜ್ಜ ಬುನಾದಿ ಹಾಕಿದ ಈ ಬಚ್ಚಲು ಮನೆ ಯಾವ ವಾರಸುದಾರನ ಅವಧಿಗೆ ಏನನು ಸುಖ ಕಂಡಿದೆಯೋ ಯಾರಿಗೂ ನೆನಪಿಲ್ಲ ತಿಕ್ಕಿ ತೊಳೆಯಲು ಹೋಗಿ ಅದೆಷ್ಟು ಬಳೆಗಳು ಚೂರಾಗಿವೆಯೋ ಆ ದೇವರೇ ಬಲ್ಲ! ನೀರು ಕುಡಿದು ಲಡ್ಡಾದ ಕದ ಮುಚ್ಚಿದ ಈ ಕೋಣೆಯೊಳಗೆ ಮಾತ್ರ ಇಷ್ಟು ಹತ್ತಿರ ನಾನು ನನಗೆ ಬಯಲಿನಷ್ಟು ಬೆಳೆದು ಬೆಟ್ಟವಾಗಿ ಬೆತ್ತಲಾಗಿ ಮಲ್ಲಿಕಾರ್ಜುನನಿಗಾಗಿ ಕಾಡುಮೇಡ ಅಲೆದ ಅಕ್ಕ ಫಕ್ಕನೆ ನೆನಪಾಗುತ್ತಾಳೆ ಇದೇ ಬಚ್ಚಲಿನಲ್ಲಿ ಧರ್ಮರಾಯನ ಕೃಪೆ ತುಂಬಿದ ಸಭೆಯೊಳಗೆ ಮುಟ್ಟಾದ ಪಾಂಚಾಲಿ ಗೇಣು ಬಟ್ಟೆಯ ಕರುಣಿಸುವ ಜಾರ ಕೃಷ್ಣನ ಕೈಗಳನು ಹುಡುಕಿ ಕಣ್ಣೀರಿಡುವ ಚಿತ್ರ ಮರೆಯಾಗಲು ಇನ್ನೇಸು ದಿನ ಬೇಕು? ಸೀರೆಯ ಸೆಳೆದ ದುಶ್ಯಾಸನ ದುರುಳನೇ ಸರಿ ಆದರೆ ಒಬ್ಬನಲ್ಲ ಇಬ್ಬರಲ್ಲ ಕೋತ್ವಾಲರಂತಹ ಐವರಿರುವಾಗ ಗಂಡ ಅನ್ನುವುದಕೆ ಏನು ಅರ್ಥ ಹೇಳಿ? ಸ್ವಯಾರ್ಜಿತ ಆಸ್ತಿಯಾಗಿ ಹೋದೆ ನನ್ನ ಬೆತ್ತಲೆ ಮಾಡಲು ಹೋಗಿ ಲೋಕವೇ ಬೆತ್ತಲಾಯಿತಲ್ಲ! ಎನ್ನುವ ಪಾಂಚಾಲಿಯ ಸ್ವಗತಕ್ಕೆ ಯಾರೋ ಸ್ಪೀಕರು ಹಚ್ಚಿದ್ದಾರೆ ಅಹಲ್ಯೆಯ ಸೇರಲು ಹೋಗಿ ಇಂದ್ರ ಸಹಸ್ರಯೋನಿಯಾದದ್ದೇನೋ ಸರಿ ಅವಳೇಕೆ ಕಲ್ಲಾಗಿ ರಾಮನಿಗಾಗಿ ಕಾಯಬೇಕು? ಅಷ್ಟಕ್ಕೂ ಆ ರಾಮನೇನು ಸಾಜೋಗನೆ? ತುಳಿತುಳಿದು ಆಳಲೆಂದು ಹತ್ತತ್ತು ಅವತಾರವೆತ್ತಿ ಮತ್ತೆ ಮತ್ತೆ ಬರುತ್ತಾರಿವರು ಗಂಧರ್ವರ ರತಿಕೇಳಿ ನೋಡಿದ ರೇಣುಕೆ ತಲೆಯನ್ನೇ ಕೊಡಬೇಕಾಗಿತ್ತೆ? ನೂರೆಂಟು ಪ್ರಶ್ನೆಗಳಿವೆ ಉತ್ತರಿಸುವ ಧೀರರಾರೊ ಕಾಣೆ ಕೂಸಾಗಿ ಇದೇ ಬಚ್ಚಲಲ್ಲಿ ಮೂಗು ಹಣೆ ತಿಕ್ಕಿಸಿಕೊಂಡು ಕೆಂಪಾಗಿ ಚಿಟಿಚಿಟಿ ಚೀರಿದ್ದು ದೊಡ್ಡವಳಾದೆನೆಂದು ಹಾಲು ತುಪ್ಪ ಹಾಕಿ ಅರಿಷಿಣವ ಪೂಸಿ ಮೀಯಿಸಿದರು ಮತ್ತೆ ಇದೇ ಬಚ್ಚಲಲ್ಲಿ ಮಣೆಯ ಮೇಲೆ ಸೇಸೆ ವಧುವಾಗಿ ಮಧುವಾಗಿ ಹಣ್ಣಾಗಿ ಹೆಣ್ಣಾಗಿ ಮತ್ತೆ ದಣಿವು ಕಳೆಯಲೆಂದು ಇದೇ ಬಚ್ಚಲಿನ ಸುಡುಸುಡು ನೀರು ಮೀಯಲೆಂದು ಮೀಯಿಸಲೆಂದು ಹುಟ್ಟಿದ ಜೀವವೇ ನೀರೊಲೆಯ ನೆಂಟಸ್ತಿಕೆ ನಿನಗೆ ಕುದಿವ ನೀರಿಗೆ ಬೆರಕೆಯ ಹದ ಅಷ್ಟಕೇ ದಣಿವು ಕಳೆಯಿತೆಂದು ನಿದ್ದೆ ಮಾಡೀಯೆ ಜೋಕೆ! ಸೀತೆ ಸಾವಿತ್ರಿ ದ್ರೌಪದಿ ಅನಸೂಯೆ ಏಸೊಂದು ಮಾದರಿ ನಡುವೆ ನಿನಗಿಷ್ಟ ಬಂದದ್ದು ಆರಿಸಿಕೋ ಪರವಾಗಿಲ್ಲ ನೆನಪಿಡು ಇದು ದಿಗಂತವಿರದ ನಿರ್ಭಯದ ನಿತ್ಯ ವ್ಯವಹಾರ ಇಲ್ಲಿ ನೋವು ಚಿರಾಯುವಾಗಿದೆ ಗೆಳತಿ ಸೀಗೆಯ ಕಡುಹೊಗರು ಈಗಿಲ್ಲದಿರಬಹುದು ಕೆಂಡಸಂಪಿಗೆಯಂಥ ಬೆಂಕಿ ಈಗ ಕಾಣದಿರಬಹುದು ಮಸಿಬಳಿದು ಹುಗಿದ ಹಂಡೆ ಕಾಣೆಯಾಗಿರಬಹುದು ಝಳ ಹೆಚ್ಚುತ್ತಲೇ ಇದೆ ಹೀಗೆ ಈ ಬಚ್ಚಲು ನಮ್ಮೊಳಗಿನ ನಮ್ಮನ್ನು ತಟ್ಟಿ ಎಬ್ಬಿಸುತ್ತಲೇ ಇದೆ ಬೆಚ್ಚಿ ಬೀಳಿಸುತ್ತಲೇ ಇದೆ.. ************

ಕಾವ್ಯಯಾನ

ಪ್ರೇಮದ ಹನಿಗಳು ನಾಗರಾಜ ಹರಪನಹಳ್ಳಿ ಬಿಕೋ ಎನ್ನುವ ರಸ್ತೆಗಳ ಮಧ್ಯೆಯೂ ನಿನ್ನದೇ ಧ್ಯಾನ ಎಂದಾದರೆ ಅದೇ ಪ್ರೀತಿ ; ಮತ್ತಿನ್ನೇನು ಅಲ್ಲ… ಜನ ಮನೆ ಸೇರಿದರು ಸರ್ಕಾರದ ಆದೇಶದಿಂದ ಪ್ರೀತಿಯ ಬಂಧಿಸುವುದು ಕಷ್ಟ ಉರಿ ಬಿಸಿಲಲ್ಲೂ ಮೈತುಂಬ ಹೂ ಹೊದ್ದ ಮರ ನೆರಳ ಚೆಲ್ಲಿ ವಿರಹಿಗೆ ಸಾಂತ್ವಾನ ಹೇಳಿತು ನನ್ನ ಕೂಗಾಟ, ಚರ್ಚೆ ವಾದ ಎಲ್ಲವೂ ನಿನಗಾಗಿ ಪ್ರೇಮ ಹುಲುಮಾನವರಿಗೆ ಅರ್ಥವಾಗುವುದಿಲ್ಲ ದೂರದಿಂದ ಸಂತೈಸುವ ನೀನು ನನ್ನ ತಾಯಿ ಪ್ರೇಮಿ, ಕಡು ವ್ಯಾಮೋಹಿ ಕೊಂಚ ಅಸಮಧಾನಿ ಸಹಜ ‌ಪ್ರೇಮಿಗೆ , ಪ್ರೇಮಿಗಳಿಗೆ ಪಕ್ಕದ ಚೆಲುವೆಯರ ಬಗ್ಗೆ ಅಸಹನೆ ,ಹೊಟ್ಟೆಕಿಚ್ಚು , ಅನುಮಾನಗಳಿರಬೇಕು ತನ್ನ ಸ್ವಾಮಿತ್ಯದ ಹಕ್ಕು ಬಿಟ್ಟುಕೊಡಲಾಗದು ಅದೇ ಪ್ರೇಮದ ಸೊಗಸು ಬಿಕೋ ಎನ್ನುವ ಬೀದಿ ಬರಡಾಗಿದೆ ಬಂಜೆಯಾಗಿದೆ ಮತ್ತೆ ಫಲವತ್ತತೆಗೆ ದಿನಗಳ ಕಾಯಬೇಕು ನಿನಗೆ ಮಕ್ಕಳು ಸಂಬಂಧಿಕರು ತೋಟ, ಗದ್ದೆ,ಮನೆ ಹಾಲು ಮಜ್ಜಿಗೆ ಹೊಟ್ಟೆ ತುಂಬಾ ರೊಟ್ಟಿ ಕೈತುಂಬ ಪ್ರೀತಿಸುವ ಜನ ಸ್ವಲ್ಪ ಯೋಚಿಸು ನನಗಾರು ಇಲ್ಲ ಇಲ್ಲಿ ‌ ಪ್ರೀತಿಸುವವರು ನಾನಿಲ್ಲಿ ಅನಾಥನಾಗಿದ್ದೇನೆ ಒಂಟಿಯಾಗಿದ್ದೇನೆ ಇಷ್ಟು ನಿನ್ನ ಮನದಲ್ಲಿ ಸುಳಿದರೂ ಸಾಕು ನಾನು‌‌ ಧನ್ಯ ನಾನು ನಿನ್ನ ಪ್ರೇಮಿ ಒಲವೇ ತಪ್ಪೇ ಮಾಡದ ನನ್ನ ಮನ್ನಿಸು ನಿನ್ನ ಉಡಿಯೊಳಗಿನ ಬೆಳಕು ನಾನು ನನ್ನ ಹಣತೆ ಮಾಡಿ ನಿನ್ನ‌ ಎದೆಯೊಳಗಿರಿಸು ಪ್ರೀತಿಯ ಎರೆದು ************

ಕಾವ್ಯಯಾನ

ಭ್ರೂಣಹತ್ಯೆ ಶಾಲಿನಿ ಆರ್. ಕನಸುಗಳು ಹೌ ಹಾರಿವೆ ನಾ ಬರುವ ಮೊದಲೆ ಅಮ್ಮಾ , ಬಾಯಿಯಿರದ ನಾ’ ನಿರಪರಾಧಿನೆ ಕಣೆ ! ಮನದ ಭಾವನೆಗಳು ಒಡಲಲಿಳಿದು ಒಡಮೂಡಿದಾಗ ಹೊಡೆತಗಳ ಸವಿ‌ ತಿನಿಸು, ಚುಚ್ಚು ಮಾತುಗಳಾರತಿಗೆ, ಭಾವಗಳ ಬಸಿರಲೆ, ನನ್ನಿರುವು ಕಮರಿ ಕುಸಿದು ಹೋಯಿತು, ಕಥೆ ಮುಗಿದ ನನ್ನ ವ್ಯಥೆಗೆ ಅಂಕಣ ಪರದೆ ಜಾರಿತು, ರಕ್ಷಿಸುವ ಕೈಗಳಿಗೆ ಕೊಳ ತೊಡಿಸಿದ ರಾಕ್ಷಸರು, ನೋಡುವ ಹೃದಯಗಳು ಕೆಲವು ಚೀತ್ಕರಿಸಲರಿಯದ ಮನಗಳು ಹಲವು, ಬಾಯಿ‌ ಇರುವ ಮೂಕರನೇಕರ ನಡುವೆ ,ನತದೃಷ್ಟೆ ನಾನಮ್ಮ! ಅಮ್ಮಾ’ ನಿನ್ನಾರ್ಥನಾದ ಅಡಗಿಹುದು ಇಲ್ಲಿ‌,   ಅಹಿಂಸತ್ವವ ಸಾರಿದ ನಾಡಲ್ಲಿ, ನನ್ನಂಥ ನಿರಪರಾಧಿ ಕೂಸಿಗೆ ‘ ಭ್ರೂಣದಲಿರುವಾಗಲೆ ಹೆಣ್ಣೆಂಬ ಅಪರಾಧಿ ಪಟ್ಟ … ********

ಕಾವ್ಯಯಾನ

ಗಝಲ್ ಮರುಳಸಿದ್ದಪ್ಪ ದೊಡ್ಡಮನಿ ಎಷ್ಟೊಂದು ಕನಸುಗಳು ನಿನ್ನ ತಲೆಯಲಿ ಕುಂತಿವೆ ಅಮ್ಮಾ ನಾಳೆ ಬಿದ್ದು ಹೋಗುವ ಸೂರಿನೊಳಗೆ ನಿಂತಿವೆ ಅಮ್ಮಾ ಹಕ್ಕಳೆ ಉದುರಿದ ಗೋಡೆ ಇಂದೋ ನಾಳೆ ಬಿಳಲಿದೆ ಎಲ್ಲ ಚಿಂತೆಗಳನ್ನು ಗಂಟು ಕಟ್ಟಿ ಕುಳಿತಿರುವೆ ಅಮ್ಮಾ ಗೆದ್ದಿಲು ಹಿಡಿದ ಬಾಗಿಲು ಇಂದೋ ಎಂದೋ ಕಿತ್ತು ಹೋಗಲಿದೆ ನಿನ್ನೊಳಗೆ ಎಷ್ಟು ಕನಸುಗಳ ತುಂಬಿ ಕೊಂಡಿರುವೆ ಅಮ್ಮಾ ಇಂದು ನಾಳೆಗಳ ಹಂಗಿಗಂಜದೆ ಗಂಜಿಯ ಚಿಂತೆ ಬಿಟ್ಟು ಹೋಗಿದೆ ಪುಸ್ತಕದೊಳು ನೀ ಮುಳುಗಿ ಈಜಾಡುತ್ತ ಸಾಗುತ್ತಿರುವೆ ಅಮ್ಮಾ ಬಡತನ ಸಿರಿತನದ ಹಂಗಿಲ್ಲ ಮರುಳನಿಗೆ ನಿನ್ನ ಹೊರತು ನಿನ್ನೊಳಗೆ ಜ್ಞಾನ ನಿಧಿಯ ಹಂಬಲಕೆ ಮೆಟ್ಟು ಬಿಡದೆ ಧ್ಯಾನಿಸುತಿರುವೆ ಅಮ್ಮಾ *******

ಕಾವ್ಯಯಾನ

ನನ್ನೊಳಗಿನ ನೀನು ದೀಪಾ ಗೋನಾಳ ಏನೋ ಹೇಳಬೇಕಿತ್ತು ಹೇಳುವುದು ಬೆಟ್ಟದಷ್ಟಿತ್ತು ಸಂತಸದ ಮೂಟೆ‌ಹೊತ್ತು ನಿನ್ನ ಬಾಗಿಲು ತಟ್ಟಿದೆ ನೂಕಿಕೊಂಡು ರಭಸವಾಗಿ ಒಳನುಗ್ಗಿದೆ, ಅವಸರ ಸಲ್ಲದು ನಿಧಾನ ಎಂದವನ ಧ್ವನಿಯಲ್ಲಿ ಕೋಪ ಮಿಶ್ರಿತ ಪ್ರೀತಿಯಿತ್ತು ಇನ್ನೇನು ಎಲ್ಲ ಹೇಳಿ ಗೆಲುವ ಹಂಚಿ ತೇಗಬೇಕು ಮಾತಿನ ನಡುವಿನ ಅಂತರದಲ್ಲಿ ಅವಾಂತರವೆದ್ದಿತು ಹೋಗು ಇನ್ನೊಮ್ಮೆ ಹುಡುಕಿ ತಾ ಎಂದಿ, ಬಂದೆ, ತಿರುವಿನಲ್ಲಿ ನಿಂತು ಬಿಕ್ಕಳಿಸಿ ತಂದ ಮೂಟೆಯ ತಲೆಯಲ್ಲೆ ಉಳಿಸಿ ಹೊರಟೆ, ಎಲ್ಲಿಗೆ!? ನನ್ನ ಜೀವ ತಲ್ಲಣಿಸುತ್ತಿತ್ತು ಹಿಡಿ ಮಾತು ಹುಡಿಯಾಗಿ ಇಡೀ ಜೀವ ಮುದ್ದೆಮಾಡಿ ಪಳ್ಳನೆ ಉದುರಿದ ಹನಿ ನೆಲಕಾಣುವ ಮನ್ನ ಕವಸ್ತ್ರಕ್ಕಿಟ್ಟು ಕರಗಿಸಿ ನೆಲಕಚ್ಚಿ ಕುಳಿತೆ ಈ ನೆಲ ಒಮ್ಮೆ ಬಿರಿದು ನುಂಗಿಬಿಡಲಿ ಸಮಾಧಾನದ ಧಾತ್ರಿಯ ಒಡಲ ಸೇರಿಬಿಡಲಿ, ಅಲ್ಲಿಗೆ.. ಸಂತಸ ಸಂಕಟ ಬಿಕ್ಕು ಕಣ್ಣಹನಿ ಒಡಲು ಕಡಲು ನಾನು ನನ್ನೊಳಗಿನ ನೀನು ಇಲ್ಲೆ ಸಮಾಧಿಯಾಗಿಬಿಡಲಿ.. **********

ಕಾವ್ಯಯಾನ

ನೀನೆಂದರೆ ಮೋಹನ್ ಗೌಡ ಹೆಗ್ರೆ ನೀನೆಂದರೆ ಬರಿ ಬೆಳಕಲ್ಲ ಕುರುಡು ಕತ್ತಲೆಯ ಒಳಗೆ ಮುಳ್ಳು ಚುಚ್ಚಿದ ಕಾಲಿನ ನೋವ ಗುರುತಿಸುವ ಮಹಾಮಾತೆ ಜಗದ ತದ್ವಿರುದ್ಧಗಳ ಸಮದೂಗಿಸಿ, ಅಳುವ ಕಣ್ಣೀರಿಗೆ ಬಾಡಿ ಹೋದ ಮೊಲೆಯ ತೊಟ್ಟಿಂದ ಅಮೃತವ ಉಣಬಡಿಸುವ ಕರುಣಾಳು…. ನೀನೆಂದರೆ ಬರಿ ಕಷ್ಟಜೀವಿಯಲ್ಲ ಕಷ್ಟಗಳನೆ ಅಂಜಿಸುವ ಮಹಾತಾಯಿ ಬರೆಯದೇ ಇರುವ ಖಾಲಿ ಪುಸ್ತಕದೊಳಗೆ ನಾನೊಬ್ಬನೇ ಓದಬಹುದಾದ ಕೋಟಿ ಕಥೆ ನಿನ್ನ ಮುಖ ಯಾವ ಚಟಕ್ಕೂ ಹಾತೊರೆಸದ ದಿಗ್ಬಂಧನದ ಮಹಾ ಮಂಟಪ ಸಹಸ್ರ ಸಂಕಷ್ಟಗಳ ಹಡೆದ ನಿನ್ನ ಪಾದದಲ್ಲೆ ನನಗೆಲ್ಲಾ ಪುಣ್ಯಸ್ಥಳ….. ನೀನೆಂದರೆ ಬರಿಯ ಒಂದು ಜೀವವಲ್ಲ ದೂರದೂರದೂರಿನಲಿ ನಾನು ನೀನು ದುಡಿಯುತ್ತಿದ್ದರೂ ಪಂಚಭೂತಗಳಲ್ಲಿ ಸದಾ ನಿನ್ನಿರುವ ತೋರಿಸುವ ಜಗದ್ರೂಪಿ ಜಗತ್ತಿನ ಹೊಸೆತೆಲ್ಲವ ಹಳೆತು ಮಾಡುವ ಕಳೆದುಹೋದ ಹಳೆಯದಕ್ಕೆ ಮರು ಜೀವ ತುಂಬಿಸುವ ಎದೆಯೊಳಗೆ ಹದವಾದ ಸಿಹಿ ಒಲವ ಬಲವ ಉಣಿಸುವ ದಿವ್ಯ ಕಂಗಳ ಕಷ್ಟ, ಕಣ್ಣೀರುಗಳನೇ ಅಂಜಿಸುವ ಮಗನ ಜಗದ ” ತಾಯಿ” *********

ಕಾವ್ಯಯಾನ

ಜೀವ ಕನಿಷ್ಠವಲ್ಲ ಮದ್ದೂರು ಮಧುಸೂದನ ಕಾಣದ ಜೀವಿಯ ಕರಾಮತ್ತಿಗೆ ದೀಪದ ಹುಳುಗಳಾಂತದ ಭಾರತ ವಿಲವಿಲದ ನಡುವೆ ಸಾವಿನ ದಳ್ಳುರಿ ಧಗ ಧಗಿಸಿ ಆವರಿಸುತ್ತಿದ್ದರೂ ಧರ್ಮದ ಅಪೀಮು ತಿಂದವರ ದಿಗಿ ದಿಗಿ ನೃತ್ಯ ನಿಂತಿಲ್ಲ.. ಜಾತಿ ಮತ ಧರ್ಮಗಳ ಸ್ಪೃಶ್ಯ ಅಸ್ಪೃಶ್ಯಗಳ ಸೋಂಕಿತರ ನಡುವೆ ಅವರವರ ಧರ್ಮದ ಉಳುವಿಗೆ ವಿಧ ವಿಧ ಲೆಕ್ಕಚಾರದ ಅಸಹ್ಯವೂ ಸಹ್ಯ ಧರ್ಮದ ಕಿನ್ನರಿ ಮುಂದೆ ಸಾವು ತುಟ್ಟಿಯಲ್ಲ ಬಿಡಿ! ನನ್ನ ಒಂದು ಕಣ್ಣು ಕಿತ್ತಾದರೂ ವಿರೋಧಿಗಳ ಎರೆಡೆರಡು ಕಣ್ಣು ಕೀಳುವ ಕುಹಕ ಕೇಕೆ ನಡುವೆ ಜೀವವೂ ಕನಿಷ್ಠತಮ ಎನ್ನುವುದೇ ಚೋದ್ಯ ***********************************

ಕಾವ್ಯಯಾನ

ಪ್ರಿಯತಮೆ ವೀಣಾ ರಮೇಶ್ ಈ ಧರೆಯ ಒಡಲು ಧರಿಸಿದೆ, ಸ್ವರ್ಗದ ಹಸಿರು ತಳಿರು,ತಳೆದಿದೆ ಸೊಬಗಿನ ಸಿರಿಯ ಸೌಂದರ್ಯ ಮೇಳೈಸಿದೆ ಮೌನವಿಲ್ಲಿ ಪ್ರೀತಿಸಿದೆ ಸ್ರಷ್ಟಿಯ ಸಿರಿಯಲಿ ರಸ ವೈಭೋಗ ತೂಗಿದೆ ಮತ್ತೆ ಋತುರಾಜ ಬಂದ ಚಿಗುರು ತಂದ ಚಲುವ ನಗೆಯ  ಅರಳೋ ಮುಗುಳು ಈ ಇಳೆಯ ಹಸಿರಲಿ ನಿನ್ನ ನಗುವಿನ ಸವಾರಿ ಕೇಳೇ ನನ್ನ ವೈಯಾರಿ ಈ ಕಣ್ಣ ನೋಟದ ಬಿಗಿ ಸರಳು,ಸೆರೆಯಾದೆ ನಾ ನಿನಗೆ ಪ್ರತಿಬಿಂಬದ ಪ್ರತಿಕ್ಷಣದ ಪ್ರತಿ ನೆರಳು ಸೆಳೆವ ಕಂಗಳ ಅಂಚಿಗೆ ಮುತ್ತಿಡುವ ಈ ಮುಂಗುರುಳು ತುಟಿಮೇಲೆ ಹರಿದ ನನ್ನ ಕೆಣಕುವ ಮಂಜಿನ ಹರಳು,ಮೌನ ಸ್ಪರ್ಶದ ಪ್ರತಿನಿಮಿಷದ ಎದೆಯ ಬಡಿತಗಳು,   ಈ ನೆನಪುಗಳು, ನನ್ನ ಮೈಮನಗಳು ಮಧುರ ಯಾತನೆ ಪಲ್ಲವಿಸಿದೆ ಈ ಇರುಳು *******

ಕಾವ್ಯಯಾನ

ಪ್ರೀತಿಸಲಾಗುವುದಿಲ್ಲವಲ್ಲ ದೀಪಾ ಗೋನಾಳ.. ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಎನೆಲ್ಲ ನೋವು ಹತಾಷೆ, ಸಂಕಟ ಅನುಭವಿಸಿಯು ಅನದೆ ಉಳಿಯಬೇಕಲ್ಲ ಹಾವು ತುಳಿದರೂ ಹೂವು ತುಳಿದದ್ದೆಂದು ಸಂಭಾಳಿಸಬೇಕಲ್ಲ ಕನಸು ಕನವರಿಕೆ ಬೆಸುಗೆ ಹಾಕಿ ಚೆಂದದ ಮಾತ ಹೇಳಿದಾಗಲೂ ಮುನಿಸು ಮಾಡುವ ಗೆಳೆಯನ ಉಳಿಸಿಕೊಳಬೇಕಲ್ಲ ಕಾಡಿಗೆಯಿಟ್ಟ ಕಣ್ಕೆಳಗಿನ ಕಪ್ಪು ವರ್ತುಲಕೆ ಬೆಳ್ಳಂಬೆಳ್ಳಗಿನ ಪೌಡರು ಹಾಕಿ ನಿಂದು, ಒಂದೂದ್ದದ ನಿದ್ದೆ ಮಾಡಿದೆ ಕನಸಿನ ತುಂಬ ನೀನೆ ಎಂದಂದು ಅವನ ಕನಸಿನ ಹೆಣಿಕೆಗೆ ದಾರವಾಗಬೇಕಲ್ಲ ಭುಜ ಹಿಡಿದು ಅಲುಗಿಸಿದಾಗೆಲ್ಲ ಕಳೆದು ಹೋದ ಚಿಂತೆಜಾತ್ರೆಯ ಮುಚ್ಚಿಟ್ಟು ಆಕಾಶ ನಿರುಕಿಸಬೇಕಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ ಅವನೆಂಬ ಅಂಬಾರಿಯ ಎದೆತುಂಬ ಹೊತ್ತು ಜೀವನ ಸವಾರಿಗೆ ಸಿಗದ ಸುಖೀ ಚಣಗಳ‌‌ ಹುಡುಕುತ್ತ ರಥ‌ ಬೀದಿಯಲ್ಲಿ ಸಾಗಬೇಕಲ್ಲ ಭಾರವಾಯಿತೆನ್ನುವಂತಿಲ್ಲ ಶ್ವಾಸಕ್ಕಿಳಿದ ಗಾಳಿ, ಅರಸುತ್ತ ಉಸಿರೆಳೆದವಳು ನಾನೇ ಅಲ್ಲವೇ ಅನ್ನುತ್ತಾನಲ್ಲ ದ್ವೇಷಿಸುವಷ್ಟು ಸುಲಭವಾಗಿ ಪ್ರೀತಿಸಲಾಗುವುದಿಲ್ಲವಲ್ಲ.. ********

Back To Top