Category: ಕಾವ್ಯಯಾನ

ಕಾವ್ಯಯಾನ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-10 ಅನ್ನದಾತಾ ಸುಖಿಭವ.. ಮನೆಯ ಬಾಗಿಲು ಕಿಟಕಿಗಳನ್ನು ಸದಾ ಮುಚ್ಚಿಟ್ಟರೂ ಅಡುಗೆ ಮನೆಯಲ್ಲಿ ತುಂಬಿಟ್ಟ ಡಬ್ಬಿಗಳು ಖಾಲಿಯಾದಾಗ ಬಾಗಿಲು ತೆಗೆದು ಕಿರಾಣಿ ಅಂಗಡಿಗೆ ಧಾವಿಸುತ್ತೇವೆ. ಸೊಪ್ಪು ತರಕಾರಿ ಎಂಬ ವ್ಯಾಪಾರಿಗಳ ಕೂಗು ಕೇಳುದಾಗ ಕಿಟಕಿ ಬಾಗಿಲನ್ನು ಕೊಂಚ ತೆಗೆದು ಅವರು ತಂದಿರುವ ತರಕಾರಿಯಲ್ಲಿ ನಮಗೆ ಬೇಕಾದದ್ದೇನಾದರೂ ಇದೆಯೇ ನೋಡುತ್ತೇವೆ. ಬೇಕಾದ್ದನ್ನೆಲ್ಲ ಖರೀದಿಸಿ ರುಚಿಕಟ್ಟಾಗಿ ಅಡುಗೆ ಮಾಡಿ ಉಣ್ಣುವಾಗ ನಾವು ಇವುಗಳನ್ನೆಲ್ಲ ಬೆಳೆದ ರೈತರ ಬಾಳು ತಣ್ಣಗಿರಲೆಂದು ಹಾರೈಸುತ್ತೇವೆ…ಬದುಕಿನ ಹಿಂದಿನ ಪುಟಗಳನ್ನು ತಿರುವಿದೆ.. ನಾಲ್ಕು ದಶಕಗಳ ಹಿಂದೆ ಸರಿ ಸುಮಾರು ಎಲ್ಲರೂ ಸಾವಯವ ಕೃಷಿಕರಾಗಿದ್ದರು. ಬೀಜ ಗೊಬ್ಬರದ ವಿಷಯದಲ್ಲಿ ಸ್ವಾವಲಂಬಿಗಳಾಗಿದ್ದರು. ರೈತರು ಕೂಲಿಕಾರರೊಂದಿಗೆ ಬೆರೆತು ದುಡಿಯುತ್ತಿದ್ದರು. ಕೈಕೆಸರಾದರೆ ಬಾಯಿಗೆ ಮೊಸರು ಎಂಬುದನ್ನು ಅರಿತಿದ್ದರು. ಇರುವ ತೋಟ ಗದ್ದೆಗಳಲ್ಲಿ ವೈವಿಧ್ಯದ ಬೆಳೆ ಬೆಳೆಯುತ್ತಿದ್ದರು. ಆಹಾರ ಭದ್ರತೆಗೆ ಆದ್ಯತೆ ಇತ್ತು. ಜೇನುಕೃಷಿ, ಪಶುಸಂಗೋಪನೆ, ಕುರಿ ಸಾಕಣೆ…ಹೀಗೆ ಉಪಕಸುಬುಗಳಿಗೂ ಆದ್ಯತೆ ನೀಡುತ್ತಿದ್ದರು. ಬೆಳೆದ ಬೆಳೆ ನಿರ್ವಿಷವಾಗಿರುತ್ತಿತ್ತು. ಉಣ್ಣುವವರಿಗೆ ಸತ್ವಯುತ ಆಹಾರವಾಗಿತ್ತು. ಕ್ರಮೇಣ ಹಸಿರು ಕ್ರಾಂತಿಯ ಪರಿಣಾಮ ರಸಗೊಬ್ಬರಗಳ ಬಳಕೆ, ಹೈಬ್ರೀಡ್ ತಳಿ ಬೀಜಗಳ ಬಳಕೆಯಿಂದ ಹೇರಳ ಬೆಳೆ ಬೆಳೆಯಲಾರಂಭಿಸಿದರು. ಉಪಕಸುಬುಗಳು ಸೊರಗಿದವು. ಬೆಳೆದ ಬೆಳೆಗಳಿಗೆ ಕೀಟನಾಶಕಗಳ ಸಿಂಪಡಣೆ ಅನಿವಾರ್ಯ ಎಂಬಂತಾಯಿತು. ರೈತರು ಲಾಭದಾಯಕ ಕೃಷಿಯತ್ತ ಒಲವು ತೋರುವುದು ಹೆಚ್ಚಾದಂತೆ ವಾಣಿಜ್ಯ ಬೆಳೆಗಳು ಜನಪ್ರಿಯವಾದವು ಕಡಿಮೆ ಶ್ರಮ ಅಧಿಕ ಲಾಭ ಎನ್ನುವ ಸೂತ್ರಕ್ಕೆ ಜೋತು ಬಿದ್ದರು. ಅತೀ ಹೆಚ್ಚು ನೀರಿನ ಬಳಕೆಯ ಕಬ್ಬು ಭತ್ತ ಬೆಳೆದು ಅದೆಷ್ಟೋ ಹೆಕ್ಟೆರ್ ಭೂಮಿ ಜವುಳಾಗಿದೆ. ಶುಂಠಿ ಬೆಳೆದ ಭೂಮಿ ಬರಡಾಗಿದೆ. ಪರಂಪರೆಯಿಂದ ಬಂದ ಜ್ಞಾನ ಮೂಲೆಗುಂಪಾಗಿದೆ. ಅಕ್ಕಡಿ ಬೆಳೆ. ಬಹು ವೈವಿಧ್ಯದ ಬೆಳೆ ಎಂಬುದನ್ನೆಲ್ಲ ಒಪ್ಪದ ರೈತರನೇಕರು ಬೇಗ ಬೇಗ ಬಿತ್ತಿ ಬೆಳೆದು ಲಾಭ ಗಳಿಸುವ ಮನಸ್ಥಿತಿಗೆ ಬಂದಿದ್ದಾರೆ. ಹೆಚ್ಚು ಗೊಬ್ಬರ ಹೆಚ್ಚು ನೀರು,ಲೆಕ್ಕಕ್ಕಿಲ್ಲದಷ್ಟು ಕೀಟನಾಶಕ, ಇನ್ವೆಸ್ಟ ಮಾಡಿದ ಹಣ ಆದಷ್ಟು ಹತ್ತಾರು ಪಟ್ಟಾಗಿ ತಿರುಗಿ ಬಂದು ಬಿಡುತ್ತದೆ ಎಂಬ ಲೆಕ್ಕಾಚಾರ. ಬರಲೇ ಬೇಕು ಎಂಬ ಹಠದಲ್ಲಿ ಸಾಲ ತೆಗೆದು, ಬೆಳೆ ಬೆಳೆದು ಯಶಸ್ಸು ಕಂಡರೆ ಸರಿ ಇಲ್ಲವಾದರೆ ಸಾಲ ತೀರಿಸಲಾರದೇ ನೇಣಿಗೆ ಶರಣು!. . ಒಬ್ಬ ರೈತ ಒಂದು ಬೆಳೆಯಲ್ಲಿ ಲಾಭ ಗಳಿಸಿದ ಸುದ್ದಿ ಸಿಕ್ಕರೆ ಸಾಕು ಸಾವಿರಾರು ರೈತರು ಅದೇ ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಮಾರಾಟವಾಗದೇ ವ್ಯವಸ್ಥೆಗೆ ಬೈದು ಬೆಳೆದ ಬೆಳೆಯನ್ನು ನಡು ರಸ್ತೆಯಲ್ಲಿ ಸುರಿದು ಪ್ರತಿಭಟಿಸುವುದು ಮಾಮೂಲು.. ಈಗೀಗ ತಿನ್ನುವ ಧವಸ ಧಾನ್ಯಗಳಲ್ಲಿ, ಹಣ್ಣು ತರಕಾರಿಗಳಲ್ಲಿ ಬೆರೆತ ವಿಷವನ್ನು ಬೇರ್ಪಡಿಸಿ ಉಣಲಾರದ ಅಸಹಾಯಕತೆ ಬಳಕೆದಾರರದ್ದು. ಆಗ ಅನ್ನದಾತ ಸುಖಿ ಭವ!? ( ಹಾರೈಸಲು ವಿಚಾರ ಮಾಡುವಂತಾಗುತ್ತದೆ), ಅಂಗಡಿಗೆ ಹೋದರೆ ದುಬಾರಿ ಬೆಲೆ ತೆತ್ತು ಕೊಳ್ಳಲಾಗದ ಅಸಹಾಯಕತೆ ಅನೇಕರದ್ದು. ‌ಈಗ ಹೇಗಿದ್ದಾರೆ ಹಾಗಾದರೆ ರೈತರು? ಉಳಿದ ಕ್ಷೇತ್ರದಲ್ಲಿ ಕಂಡ ಬಿಕ್ಕಟ್ಟು ರೈತರನ್ನೆಂತು ಕಾಡುತ್ತಿದೆ? ಬೆಳೆದ ಬೆಳೆ ಭಾಗ್ಯದ ಬಾಗಿಲನ್ನು ತೆರೆದಿದೆಯೇ? ಮುಂದುವರಿಯುವುದು.. ******** ಮಾಲತಿ ಹೆಗಡೆ

ಕಾವ್ಯಯಾನ

ಗಝಲ್ ಎ.ಹೇಮಗಂಗಾ ನಡುರಾತ್ರಿ ಎದ್ದು ಹೋಗುವ ಮುನ್ನ ಒಮ್ಮೆ ಹಿಂತಿರುಗಿ ನೋಡಬೇಕಿತ್ತು ಯಶೋಧರೆಯ ಅಳಲ ಕೊನೆಯ ಬಾರಿಗಾದರೂ ಕೇಳಬೇಕಿತ್ತು ನೀನೇನೋ ಕಷ್ಟ, ಕೋಟಲೆಯ ಸಂಕಟ ಕಳೆಯಲು ಹೊರಟವನು ಸಂಗಾತಿಯಿರದ ಒಂಟಿ ಜೀವದ ನೋವಿಗೆ ಮಿಡಿಯಬೇಕಿತ್ತು ಸಿರಿ ಸಂಕೋಲೆ ಕಳಚಿ ಯಾರ ಗೊಡವೆಯಿರದೇ ನಡೆದುಹೋದೆ ನೀನೇ ಎಲ್ಲವೂ ಎಂದುಕೊಂಡವಳ ಬಾಳು ಬರಡು ಮಾಡಬಾರದಿತ್ತು ಧ್ಯಾನ,. ಚಿಂತನೆಗಳಲ್ಲಿ ತೊಡಗಿದವನಿಗೆ ಸಂಸಾರದ ಬಂಧವೆಲ್ಲಿ ? ನಿನ್ನನೇ ನಂಬಿದ ಜೀವವ ಧಿಕ್ಕರಿಸಿದ ಯಾತನೆ ಅರಿವಾಗಬೇಕಿತ್ತು ಗೌತಮ ಬುದ್ಧನಾಗಿ ಅರಿವಿನ ಗುರುವಾಗಿ ನಂಬಿದವರ ಉದ್ಧರಿಸಿದೆ ಲೌಕಿಕ ಯುದ್ಧದಿ ಬಲಿಯಾದವಳ ಪತಿಯಾಗಿ ಕಾಪಿಡಬೇಕಿತ್ತು ******

ಕಾವ್ಯಯಾನ

ಇಷ್ಟೇ ಸಾಕು! ಮಮತ ಕೆಂಕೆರೆ ಮನೆಯಲ್ಲಿ ಇಲ್ಲದಿದ್ದರೂ ಮನಸಲ್ಲಿ ಇದ್ದರೆ ಸಾಕು ನನಸಲ್ಲಿ ಸಿಗದಿದ್ದರೂ ಕನಸಲ್ಲಿ ಬಂದರೆ ಸಾಕು ಹೆಸರಲ್ಲಿ ಸೇರದಿದ್ದರೂ ಉಸಿರು ಮಿಡಿದರೆ ಸಾಕು ಗಳಿಸಿ ಗೌರವ ತರದಿದ್ದರೂ ಗೆಳೆಯನಾಗಿದ್ದರೆ ಸಾಕು ಇಷ್ಟವೆ ಇಲ್ಲವೆಂದಾದರೂ ಕಷ್ಟ ಕೊಡದಿದ್ದರೆ ಸಾಕು ಅಪ್ಪಿ ಮುದ್ದಾಡದಿದ್ದರೂ ಬೆಪ್ಪಳನ್ನಾಗಿಸದಿದ್ದರೆ ಸಾಕು ಜೊತೆಜೊತೆ ಸಾಗದಿದ್ದರೂ ಹಿತವ ಬಯಸಿದರೆ ಸಾಕು ಹೂನಗೆಯ ತುಳುಕಿಸದಿದ್ದರೂ ಹಗೆಯಾಗದಿದ್ದರೆ ಸಾಕು ದೇಹ-ಮೋಹ ಬೆಸೆಯದಿದ್ದರೂ ಜೀವ-ಭಾವ ಬೆಸೆದರೆ ಸಾಕು ದೂರದಲ್ಲಿ ಎಲ್ಲೋ ನೆಲೆಸಿದರೂ ಎದುರಾದಾಗ ವಾರೆನೋಟ ಸಾಕು ********

ಕಾವ್ಯಯಾನ

ಗಝಲ್ ತೇಜಾವತಿ.ಹೆಚ್.ಡಿ ಗರ್ಭದ ಕೊರಳ ಹಿಂಡಿ ಬಸಿದ ದ್ರವದಲ್ಲಿ ತೇಲುತ್ತಾ ಬಂದೆಯಲ್ಲ ನವಮಾಸದ ನೋವ ಒಂದೇ ಅಳುವಲ್ಲಿ ಮಾಯ ಮಾಡಿದೆಯಲ್ಲ ತಾಯ್ತನದ ಸುಖವ ಕ್ಷಣಕ್ಷಣವೂ ಸವಿದು ಪುಳಕಿತಗೊಂಡಿದ್ದೆ ಬಯಸಿದವಳು ಬಗಲಿಗೆ ಬಂದೊಡನೆ ಅಮ್ಮನ ಮಡಿಲು ಮರೆತೆಯಲ್ಲ ವೃದ್ಧಾಪ್ಯದಲಿ ನೆರಳಾಗುವೆಯೆಂದು ನೂರಾರು ಭವಿಷ್ಯದಕನಸು ಕಂಡಿದ್ದೆ ರೆಕ್ಕೆ ಬಲಿತೊಡನೆ ಗುಟುಕುಕೊಟ್ಟ ಗೂಡುತೊರೆದು ಹಾರಿಹೋದೆಯಲ್ಲ ತಾಯ ಹಾಲುಂಡ ಕೂಸಿದು ವಾತ್ಸಲ್ಯದ ಪರ್ವತವೆಂದುಕೊಂಡಿದ್ದೆ ಕರುಳಬಳ್ಳಿ ಹರಿದು ಕಿಂಚಿತ್ತು ಕರುಣೆಯೂ ಇಲ್ಲದಾಯಿತಲ್ಲ ನಿನ್ನ ಪಡೆದ ಈ ಜೀವ ಏಳೇಳು ಜನ್ಮದ ಪುಣ್ಯವೆಂದುಕೊಂಡಿದ್ದೆ ನಿತ್ಯವೂ ಮಾತೃಹೃದಯ ತಾ ಮಾಡಿದ ಪಾಪವೇನೆಂದು ಕೊರಗುತ್ತಿದೆಯಲ್ಲ *******

ಕಾವ್ಯಯಾನ

ನೀರಿಗೇತಕೆ ಬಣ್ಣವಿಲ್ಲ? ಮಹಾಂತೇಶ ಮಾಗನೂರ ಅರೆ ಯಾರು ಹೇಳಿದರು ನೀರಿಗೆ ಬಣ್ಣವಿಲ್ಲವೆಂದು… ನೋಡಿಲ್ಲಿ ಕವಿತೆ ಸಾರಿ ಹೇಳುತಿದೆ ನೀರಿಗೂ ತರತರದ ಬಣ್ಣಗಳುಂಟು ಎಂದು ನೀರಿಗೇತಕೆ ಬಣ್ಣವಿಲ್ಲ? ಧುಮ್ಮಿಕ್ಕುವ ಜಲಪಾತದಿ ಹಾಲಿನಂತಹ ಬಿಳುಪು ಸೂರ್ಯಾಸ್ತದ ಸಮಯದಲ್ಲಿ ಸಾಗರದಿ ನಸುಗೆಂಪು ನೀರಿಗೇತಕೆ ಬಣ್ಣವಿಲ್ಲ? ಆಗಸದಿಂದ ನೋಡಿದೊಡೆ ನೀರೆಲ್ಲ ತಿಳಿನೀಲಿ ಕಾನನದಿ ಹರಿಯುವ ಜುಳು ಜುಳು ನೀರು ಪ್ರಕೃತಿಯ ಬಣ್ಣದಲಿ ನೀರಿಗೇತಕೆ ಬಣ್ಣವಿಲ್ಲ? ಬೆಟ್ಟಗಳಲಿ ಸುಳಿ ಸುಳಿದಾಡಿ ಹರಿಯುವುದು ಝರಿಯಾಗಿ,ಗಿಡ ಮರಗಳಿಗೆ ನೀಡುತ ಉಸಿರು ಕಾಣುವದು ಹಸಿರು ಹಸಿರು! ನೀರಿಗೇತಕೆ ಬಣ್ಣವಿಲ್ಲ? ಆಕಾಶದಿಂದ ಧರೆಗಿಳಿಯುತ ಸೂರ್ಯರಶ್ಮಿಯ ಚುಂಬಿಸಿ ಕಾಣುವುದಿಲ್ಲವೇ ಬಣ್ಣ ಬಣ್ಣದ ಮೋಹಕ ಕಾಮನಬಿಲ್ಲು ನೀರಿಗೇತಕೆ ಬಣ್ಣವಿಲ್ಲ? ರೈತನೊಂದಿಗೆ ಬೆರೆತು ಗದ್ದೆಯಲ್ಲಿ ಹರಿದಾಡಿ, ಪೈರಿನೊಂದಿಗೆ ಸೇರಿ ಹಚ್ಚ ಹಸಿರಾಗಿ ಹೊಮ್ಮುವುದು ನೀರಿಗೇತಕೆ ಬಣ್ಣವಿಲ್ಲ? ಆಧುನಿಕತೆಯ ಭರದಲ್ಲಿ ಕಾರ್ಖಾನೆಗಳು ಉಗುಳುವ ವಿಷ ಗಾಳಿಗೆ ಬಿಗಿದಪ್ಪಿ ಸುಟ್ಟು ಕಪ್ಪಾದ ನೀರು ನೀರಿಗೇತಕೆ ಬಣ್ಣವಿಲ್ಲ? ನಗರೀಕರಣದ ಕೊಳಕಿನೊಂದಿಗೆ ಮೋರೆಯ ಸೇರಿ, ಹಳಸಿ ಪಡೆಯುವದಿಲ್ಲವೆ ಬೇಡದ ಬಣ್ಣ ನಿಜ, ನೀರು ವರ್ಣರಹಿತ ಕಾಪಾಡಿದರೆ ಪರಿಸರ, ಸಾಧ್ಯ ಸುಂದರ ಬಣ್ಣವೂ ಸಹಿತ; ತಪ್ಪಿದರೆ, ಬಯಲಾಗುವದು ಶುದ್ಧ ನೀರಿನ ಅಭಾವದ ಬಣ್ಣ! ******

ಕಾವ್ಯಯಾನ

ತವರಿನ ಮುತ್ತು ರೇಮಾಸಂ ಡಾ.ರೇಣುಕಾತಾಯಿ.ಸಂತಬಾ ಮರೀಯಲಿ ಹ್ಯಾಂಗ ಮರೀ ಅಂದರ ಅವ್ವನ ಅರಮನೆಯ ಅಂತಃಪುರವ ತವರಿನ ಗಂಜಿಯು ಅಮೃತದ ಕಲಶವು ಅಕ್ಕರೆಯು ಅಚ್ಚಿನ ಬೆಲ್ಲವ ಮೆಲ್ಲದಂಗ// ತವರಿನ ಉಡುಗೊರೆ ಆಗೇನಿ ನಾನು ಅತ್ತೆಯ ಮನೆಗೆ ಮುತ್ತಾಗಿ ಬಂದೇನಿ ಕಟ್ಟ್ಯಾರ ಕಂಕಣವ ಕೂಡು ಬಾಳ್ವೆಗೆ ಹಾದಿಗೆ ಹರವ್ಯಾರ ಹವಳದ ಹೂವ// ತಾಯಂಗ ತಡದೇನ ಕಂಟಕದ ಕದನವ ಅಪ್ಪನಂಗ ತಪ್ಪಿಲ್ಲದ ಹೆಜ್ಜೆನ ಇಟ್ಟೇನಿ ನುಡಿದಂಗ ನೇರ ನಡೆ ನಡದೇನಿ ಮಾತನ್ಯಾಗ ಮಂದ್ಯಾಗೆಲ್ಲ ಹೌದಾಗೇನಿ// ಬಂಗಾರದಂತ ನನ್ನ ಅಣ್ಣರ ತಮ್ಮರ ಬಳುವಳಿಯಾಗಿ ಬಂದೇನಿ ಬಂಧುರದ/ ಬಳಗದಾಗೆಲ್ಲರ ಬಾಯಾಗ ಬೆಣ್ಣಿಯಾಗೇನಿ/ ಬಂದೇನಿ ಮುತ್ತಾಗಿ ಮಾಲೆಯ ಕಟ್ಟಲು// ಹ್ಯಾಂಗರ ತೀರಿಸಲಿ ತವರಿನ ಋಣವ ಅವ್ವ ಅಪ್ಪನ ಮಮತೆಯ ಬೆಳಕನ ಅಣ್ಣ ತಮ್ಮರ ಒಲವಿನ ಹೊಳೆಯನು ಸಾವಿರ ಜನುಮಕು ಋಣವ ತೀರಿಸಲಾರೆ// *******

ಕಾವ್ಯಯಾನ

ಗಝಲ್ ಎ.ಹೇಮಗಂಗಾ ಅವನಿಗಾಗಿ ಕಾದ ಕಣ್ಣ ನೋಟ ಮಬ್ಬಾಗಿದೆ ಸಖಿ ಅವನಿಲ್ಲದೇ ಯಾವ ಹಬ್ಬವೂ ಬೇಡವಾಗಿದೆ ಸಖಿ ವಚನ ಮೀರದವ ಇಂದು ವಚನ ಮೀರಿದನೇಕೋ ಮಿಲನವಿಲ್ಲದ ಯಮುನೆ ತಟ ಭಣಗುಡುತಿದೆ ಸಖಿ ಒಮ್ಮೆಗೇ ಬಂದು ಪರಿಪರಿಯಾಗಿ ಕಾಡುವ ಅವನು ರಾಸಲೀಲೆಯಿಲ್ಲದ ಬಾಳು ನೀರಸಗೊಂಡಿದೆ ಸಖಿ ಸುತ್ತಲಿನ ಗಾಳಿಯೂ ಅವನ ಬರುವಿಕೆ ಸೂಚಿಸುತ್ತಿಲ್ಲ ಸೊಲ್ಲಿಲ್ಲದೇ ನಗುವಿಲ್ಲದೇ ಮನ ಮಸಣವಾಗಿದೆ ಸಖಿ ತೊರೆದು ಹೋದ ಶ್ಯಾಮ ಮತ್ತೆ ಬರುವನೇ ಹೇಳು ಅವನಿರದೇ ಸಾವೇ ಹಿತವಾಗಿ ಹತ್ತಿರ ಸೆಳೆದಿದೆ ಸಖಿ ********

ಕಾವ್ಯಯಾನ

ಅಮುಕ್ತ ಅಮೃತಮತಿ ಲಕ್ಷ್ಮೀ ಪಾಟೀಲ ಅಂಗ ಸೌಷ್ಠವದ ಬಾಹ್ಯ ಸೌಂದರ್ಯ ರಾಜ ವರ್ಚಸ್ಸು ವಜ್ರ ವೈಡೂರ್ಯ ಭೋಗ ಭಾಗ್ಯಗಳ ನಿವಾಳಿಸಿ ಅಂತರಂಗ ಬೇಟಕೆ ಮನವ ಬೀಳಿಸಿ ಬಿಗಿ ಮೌನ ಮುರಿದು ಮಾತಾಗಲು ನಡೆದೆ ಪಂಜರದ ಅರಗಿಳಿಗೆ ಮಾತು ಕಲಿಸಿದ್ದೂ ಮರೆತು, ಕಾಡ ಕೋಗಿಲೆ ಕರೆಗೆ ವಸಂತ ಕೂಟಕೆ ನಡೆದೆ ಬೇಟ ಕೂಟಕೆ ಮನವ ಮಿಡಿಸಿ ಶರತ್ತುಗಳಿಲ್ಲದೆ ಪ್ರೀತಿ ಕೊಡಲು ಮೈ ಬೆವರ ಬಸಿದು ಸೋನೆ ಸುಯ್ಯಲು ಬಿಡುವಿಲ್ಲದೆ ನಡೆದೆ, ಭಾವ ಕೂಟಕೆನಡೆದೆ,,, ಅಗ್ನಿ ದಿವ್ಯದ ದಾರಿಗೆ ಅಗ್ನಿ ಮಳೆಯಾದರೂ ಸಾಕಿದ ಗಂಡಿನ ಕ್ರೌರ್ಯಕೆ ನಲುಗಿದೆ ರಾಗ ಭಾವದೊಳು ಲಯವಾಗಲು ನಡೆದೆ ಅಮೃತಧಾರೆ ಎದೆಗವಚಿ ನಡೆದೆ,,, ಇಂಪಾದ ಕೊರಳ ಮೆದು ಬೆರಳ ಸ್ಪರ್ಶದಲಿ ಪ್ರೀತಿ ಕಾಮನೆಗಳ ಕಟೆದಂತೆ ಭಗ್ನಶಿಲ್ಪ ಕನಸುಗಳಿಗೆ ಅಮೃತ ಹನಿಸಿ ಅರಮನೆಯ ಕಣ್ಣಕೆಂಪಿಗೆ ನಂಜೇರಿಸಿ ಲೋಕದೆಲ್ಲೆಗೆ ವಿಷವಾಗಲು ನಡೆದೆ ಸುರಂಗದಾರಿಯಲ್ಲಿ ಮಲ್ಲಿಗೆಮನವಾಗಿನಡೆದೆ ಭಾವಮೇಳದಲಿ ನಾಟ್ಯವಾಡಲು ನಡೆದೆ ಬಿಡುವಿಲ್ಲದೆ ನಡೆದೆ ಭಾವ ಕೂಟಕೆ ನಡೆದೆ,,, ಅಂತರಂಗ ಅರಳಿಸಲು ಅಮೃತ ನರಳಿಸಲದು ವಿಷ ಕಾಲಕರ್ಮವಿಧಿಗಳನ್ನು ಬೆರಗಾಗಿಸಿ ಷರಾ ಹೊಡೆದು ನಡೆದೆ ವಿಷ ಮಥಿಸಿ ಕಕ್ಕಿಸಿ, ಎದೆಯಲ್ಲಿ ಇಳಿಸಿದರು ಗುಂಡುಗಳ ಭಾರ, ನಿನ್ನ ಬೆತ್ತಲೆ ಬರೆದು ತಮ್ಮಬೆತ್ತಲೆ ಮರೆತು , ಯಶೋಧರನ ಯಶೋದುಂದುಭಿ ಹಾಡಿ ನಿನ್ನ ಬೆಂತರ ಮಾಡಿದರು ಅವರ ಗಂಡುಗಳಿಗಿಲ್ಲಿ ಮುಕ್ತಿಸಾಲು ಈಗಲೂಸಂಕಟದಲಿ ಕುದಿವ ಅಮೃತಮತಿನೀನು,ಅತೃಪ್ತಪ್ರೇತಗಳುನಾವು ಯಶೋಧರರ ಪರಮಾಧಿಕಾರ ದಾಟಲು ಅಷ್ಟಾವಕ್ರರ ಅಸಹನೆ ಅಳಿಯಲು ನಡದಲ್ಲೆಲ್ಲ ಅಹಂ ಮೂರ್ಖತೆಗೆ ತಲೆ ತಿರುಗಿಸಿ ಬದುಕಿದ್ದೇವೆ ಅಮೃತಮತಿ ನಾವೂ ನಿನ್ನಂತೆ ನಿನ್ನೊಳಗಿನ ಉಸಿರಂತೆ ಅಷ್ಟಾವಕ್ರರ ಚಕ್ರಬಂಧ, ಯಶೋದುಂಧುಭಿಗಳ ಷರಾ ಎಲ್ಲ ಬಾಹುಗಳ ಬಿಗಿತದಲಿ ಹಣ್ಣಾದರೂ ನಿಂತಿದ್ದೇವೆ ಅಮೃತಮತಿ ನಿನ್ನ ಮರೆಯದೆ !ನಿನ್ನ ಹೆಜ್ಜೆಗಳಲಿ ನಮ್ಮ ಅಸ್ಮಿತೆಯ ಅಗೆಯಲು,,, ಒಡೆಯ ಒಕ್ಕಲು, ಹೆಣ್ಣು ಗಂಡು ಸುಂದರ ಕುರೂಪ, ನೀತಿ ನಿಷ್ಟುರಗಳ ಬೆಂಕಿಬಂಧ ನಡೆದಿದ್ದೇವೆ ದಾಟಲು ನಮ್ಮ ದಾರಿಯ ಗುರಿಗೆ ಶ್ರದ್ದೆಗಳ ತಳಕು ಕಟ್ಟಿದವರ ಕೈಗಿತ್ತು ಗೌರವದ ಸೀರೆ ತಲೆಗೆ, ಪಾವಿತ್ರ್ಯದಕಲಶ ಕೊಟ್ಟವರಿಗೇ ಎತ್ತಿಟ್ಟು, ಸೆರಗು ಸೀರೆಯಾಚೆ ನಗ್ನರಾಗಿದ್ದೇವೆ. ಲಕ್ಶ್ಮಣರೇಖೆಗಳನ್ನು ದಾಟಿಯೇ ಬದುಕುವ ಹಮ್ಮಿಗೆ. ನಾವೂ ನಡೆದಿದ್ದೇವೆ ಅಮೃತಮತಿ ನಮ್ಮದೇ ಹೆಜ್ಜೆಯ ನಡಿಗೆ,,, ಪ್ರೀತಿಯ ಘಾತುಕವರಿತರೂ ಪ್ರಿತಿಸಿದೆ ಆಳ ಅಳೆಯಲು ಪ್ರೀತಿಯ ಇಣುಕಿದೆ ಆಳಕ್ಕಿಳಿದು ಒಂಟಿಯಾದರೂ ಪ್ರೀತಿಯ ತಬ್ಬಿದೆ ‘ಪ್ರೀತಿಗೆ ಸ್ವಾತಂತ್ರ್ಯವೇ ಪ್ರೀತಿ ಎಂದು ಸಾರಿದೆ ಮುಕ್ತಿಗೆ ದೂರಾದೆ ನೆಲಕೆ ಹತ್ತಿರವಾದೆ ನೆಲದ ಘಮವಾಗಿ ಬಂಡಾಯದಕೂಗಾದೆ ಹೆಣ್ಣುಗಳ ಸುಪ್ತಲೋಕಕೆ ಇಳಿದು ಈ ನೆಲದಲ್ಲೇ ಉಳಿವ ಪ್ರೀತಿಬೇರಾದೆ ಮುಕ್ತದಾರಿಗೆ ಶಕ್ತರೂಪಿಣಿ ಅಮುಕ್ತ ಅಮೃತಮತಿಯಾದೆ ********

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ಮಹಾಮಾರಿಯ ಬಲಿ ಕಂಡು ಎದೆಗೆ ಬೆಂಕಿ ಇಟ್ಟಂತಾಗಿದೆ ಎಲ್ಲರ ಕೈಮೀರುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ನನ್ನ ದೌರ್ಬಲ್ಯಗಳನ್ನು ಖಚಿತ ಪಡಿಸಿಕೊಂಡು ನನ್ನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿರುವೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಹಳೆಯದಾದರೂ ಮರೆಯಾಗುತ್ತಿಲ್ಲ ಹೆಚ್ಚುತ್ತಿದೆ ನೋವು ಮನ ನೆನಪಿಸುತ್ತಿದೆಯೆಂದು ಎದೆಗೆ ಬೆಂಕಿ ಇಟ್ಟಂತಾಗಿದೆ ಅಂದಿನ ಅನ್ನವನ್ನು ಅಂದೇ ಗಳಿಸುವ ಜನ ನಾವು ಗೃಹಬಂಧನದಿ ಹೊಟ್ಟೆ ಹೊರೆದುಕೊಳ್ಳುವದ್ಹೇಗೆಂದು ಎದೆಗೆ ಇಟ್ಟಂತಾಗಿದೆ ಅತಿಯಾದ ಸ್ವಾರ್ಥವನೆಂದಿಗೂ ನಾನು ಯೋಚಿಸಿಲ್ಲ ‘ಚೆಲುವೆ’ ಈ ಅನೀರಿಕ್ಷಿತತೆಯ ಮಾತು ಎದೆಗೆ ಬೆಂಕಿ ಇಟ್ಟಂತಾಗಿದೆ *********

ಕಾವ್ಯಯಾನ

ಹಂಬಲಿಸಿರುವೆ ಶಿವಲೀಲಾ ಹುಣಸಗಿ ನಿನ್ನ ಮೇಲೊಂದು ಮುನಿಸಿದೆ ಕಾರಣ ಹೇಳಲ್ಲ ಚಿಂತಿಸೊಮ್ಮೆ.! ಕನಿಕರಿಸದ ಇರುಳುಗಳೆಲ್ಲ ಉರುಳುಗಳಾಗಿ ಬೆಸೆದಿವೆ..! ಮಬ್ಬಿನಲೊಂದು ನಿಟ್ಟುಸಿರು ತುಟಿಯಂಚಿನಲೊಂದು ಹಸಿಯಾದ ಮೌನದುಸಿರು.! ಕಾಡಿಗೆಯ ಕರಿನೆರಳು.. ಕಮರಿದಾ ಪುಷ್ಪದಂತೆ ರತಿ ಉರಿದು ಭಸ್ಮವಾದಂತೆ..! ಕಪ್ಪುಛಾಯೆಯ ಬಿಂಕನಾನೊಲ್ಲೇ ಮಡುಗಟ್ಟಿದ ಒಡಲುನನ್ನಲ್ಲೇ ನಿನ್ನುಸಿರ ಅಪ್ಪುಗೆಯಲಿ ಬಿಗಿದು ಮುತ್ತಿನಾ ಮಳೆಯ ಸುರಿದ ಬಾರದೇ ನನಗಿನ್ನೇನೂ ಬೇಕಿಲ್ಲ..ನಲ್ಲಾ.. ನಿನ್ನ ಹಿಡಿ ಪ್ರೀತಿಯ ಹೊರತು…! ನಿನ್ನೊಟಕೆ ಹುಸಿಗೋಪ ಮರೆವೆನು ಮರುಗಿದಾಗೆಲ್ಲ ಕನವರಿಕೆಗಳು ಮೊಳಕೆಯೋಡಯದ ಕನಸುಗಳು ನಿಟ್ಟೂಸಿರು ಬಿಡದಾ ಕಂಗಳು..! ನೀ ನೀಡಿದ ಉದರಾಗ್ನಿಯಲಿ ಬೆಂದು- ಬಸವಳಿದಿರುವೆ ಚಿರನಿದ್ರೆಗೆ ಜಾರುವ ಗಳಿಗೆಯಲಿ ಮನದ ಪ್ರತಿಬಿಂಬವಾಗ ಬಾರದೆ….? ಮುನಿಸಾದರೂ ನನ್ನೊಳಗೆ ಮನಸಾದರೆ ನಾ ನಿನ್ನೊಳಗೆ ಹೃದಯವನರಿಯೆಂದು ಪರಿತಪಿಸಿರುವೆ. ಪ್ರೀತಿಗಾಗಿ ಹಗಲಿರುಳು ಹಂಬಲಿಸಿರುವೆ. *********

Back To Top