ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನಸುಕಿನ ತುಂತುರು

ಕವಿತೆ ನಸುಕಿನ ತುಂತುರು ಸ್ಮಿತಾ ಶ್ಯಾಮ ತುಂತುರು ಹನಿಗಳ ಮುಂಜಾನೆಯ ಮಳೆಸರಿಗಮ ಪದನಿಸ ಹಾಡುತಿದೆಸಪ್ತ ಸ್ವರಗಳ ಸಂಗಮದಲಿ ತೇಲಿದೆಹಸಿರನುಟ್ಟು ಕಂಗೊಳಿಸುತಿಹ ವಸುಧೆ || ಪ|| ಹಕ್ಕಿಗಳಿಂಚರದಿ ಬೆರೆತಿದೆ ಮಳೆಗಾನಹೊಮ್ಮುತಲಿದೆ ಹೊಂಬೆಳಕಿನ ರವಿ ಕಿರಣಪರಿಮಳವನು ಸೂಸುತಲಿವೆ ಹೂಬನಪ್ರಕೃತಿಯ ಸೊಬಗದು ರೋಮಾಂಚನ. ||೧|| ಮುಂಜಾನೆಯ ಮಳೆಯ ಸಿಂಚನತನನ ತನನ ನವಿಲ ನರ್ತನಸಾಗರದ ದಡಕೆ ಅಲೆಯ ಚುಂಬನತಂಪು ಸೂಸುತ ಹಾಯ್ವ ಪವನ. ||೨|| ಸುಪ್ರಭಾತ ಹಾಡುತಲಿದೆ ಪ್ರಾತಃಕಾಲದಿ ವರ್ಷವುಗುಡಿಗೋಪುರಕದುವೆ ನಸುಕಿನ ಅಭಿಷೇಕವುಶುಭ್ರಗೊಂಡಿಹುದು ಮನೆ ಮನೆಯ ಅಂಗಳವುತನುಮನವನು ತುಂಬುತಲಿದೆ ನವೋಲ್ಲಾಸ ಚೇತನವು||೩|| *********************************

ನಸುಕಿನ ತುಂತುರು Read Post »

ಅಂಕಣ ಸಂಗಾತಿ, ಮರಣವೇ ಮಹಾನವಮಿ

ಅಂಕಣ ಬರಹ ಘೋರಾರಣ್ಯದಲ್ಲಿ ಹಾರುವ ಹಂಸೆ ಸಮಾಜದಲ್ಲಿ ತುಳಿತಕ್ಕೊಳಗಾದ ಜನರ ಪರವಾದ ನಿಲುವನ್ನು ತಾಳಿದ ಸಾಹಿತ್ಯಕ ಮತ್ತು ಧಾರ್ಮಿಕ ಚಳುವಳಿಯೆಂದರೆ ಅದು ವಚನಸಾಹಿತ್ಯ. ಅದರ ಉಗಮಕ್ಕೆ ಕಾರಣವಾದದ್ದು ಬಸವಾದಿ ಪ್ರಮಥರ ಧಾರ್ಮಿಕ ತಾತ್ವಿಕ ಸುಧಾರಣೆಗಳು ಅದರೊಂದಿಗಿನ ಸಾಮಾಜಿಕ ಸುಧಾರಣೆ. ಅವಿದ್ಯಾವಂತರಿಂದ ವಿದ್ಯಾವಂತರವರೆವಿಗೂ ತಮ್ಮದೇಯಾದ ಸಾಮಾಜಿಕ, ಧಾರ್ಮಿಕವಾಗಿ ಜೀವನಕ್ರಮದ ಬಗೆಗಿನ ಕಾಳಜಿಯ ಅಭಿವ್ಯಕ್ತಿಯು ಮುಕ್ತವಾಗಿ ನಡೆದದ್ದಾಗಿದೆ. ಸಮಾಜ ಸುಧಾರಣೆಯು ಮುಖ್ಯ ಆಶಯವಾಗಿ ವಚನಗಳು ರಚನೆಯಾದರೂ ಅದರೊಂದಿಗಿನ ಸಾಹಿತ್ಯಿಕ ಅಂಶಗಳು ಉಪೋತ್ಪನ್ನವಾಗಿ ಹೊಂದಿ ವಚನಗಳು ರಚಿಸಲ್ಪಟ್ಟವು. ಆ ಚಳುವಳಿಯಲ್ಲಿನ ‘ಕಂಭದ ಮಾರಿತಂದೆ’ ಎಂಬ ವಚನಕಾರನ ಒಂದು ವಚನದ ವಿವೇಚನೆ ಪ್ರಸ್ತುತ ಲೇಖನದ ಉದ್ದೇಶವಾಗಿದೆ.                         ಬಸವಣ್ಣನವರು ಪುರಾತನ ವಚನಕಾರರನ್ನು ತಮ್ಮ ವಚನಗಳಲ್ಲಿ ಸ್ಮರಿಸಿದ್ದಾರೆ. ಅವರಲ್ಲಿ ಕಂಭದ ಮಾರಿತಂದೆಯೂ ಒಬ್ಬ. ಉಳಿದಂತೆ ಕಿನ್ನರಿ ಬೊಮ್ಮಣ್ಣ, ತೆಲಗು ಜೊಮ್ಮಯ್ಯ, ತಂಗಟೂರು ಮಾರಯ್ಯ, ಮಾದಾರಚೆನ್ನಯ್ಯ ಇತರರು ಇದ್ದಾರೆ. ವಿಶೇಷವೆಂದರೆ ‘ಮಾರಿತಂದೆ’ ಹೆಸರಿನ ಎಂಟು ಜನ ವಚನಕಾರರು ಇರುವರೆಂದು ತಿಳಿದುಬಂದಿದೆ.೧ ಕವಿಚರಿತಾಕಾರರು ಅನುಬಂಧದಲ್ಲಿಯೂ೨ ಮತ್ತು ಡಿ. ಎಲ್. ನರಸಿಂಹಾಚಾರ್ಯರು ಪೀಠಿಕೆಗಳು ಲೇಖನಗಳು (ಕೆಲವು ವಚನಕಾರರು) ಕೃತಿಗಳಲ್ಲಿ ಮಾರಿತಂದೆಯ ಬಗೆಗೆ ಗಮನಸೆಳೆದಿದ್ದಾರೆ.೩ ಕಂಭದ ಮಾರಿತಂದೆಯು ಬೆಸ್ತರ ಜಾತಿಗೆ ಸೇರಿದವನಾಗಿದ್ದು, ಕ್ರಿ.ಶ. ೧೧೬೫ರಲ್ಲಿ ಬಸವಣ್ಣನವರ ಸಮಕಾಲೀನನಾಗಿದ್ದನೆಂದು ಹೇಳಿದ್ದಾರೆ. ಕಂಭದ ಮಾರಿತಂದೆಯು ವಚನ ಚಳುವಳಿಯನ್ನು ಗ್ರಹಿಸಿರುವ ರೀತಿಯೇ ಬೆರಗಾಗಿಸುತ್ತದೆ. ಕಂಭದ ಮಾರಿತಂದೆಯ ಅಂಕಿತನಾಮ ‘ಕದಂಬ ಲಿಂಗ’. ಮಹಾ ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾರುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದ್ದೆ ಕದಂಬಲಿಂಗದಲ್ಲಿಗೆ೪             ಪ್ರಕೃತ ವಚನವನ್ನು ಕವಿಚರಿತಾಕಾರರು ಮತ್ತು ಡಿ. ಎಲ್. ಎನ್ ಬೇರೆಯದೇ ರೀತಿಯ ವಿನ್ಯಾಸದಲ್ಲಿ ಮತ್ತು ಅಲ್ಪ ವಿರಾಮ ಚಿಹ್ನೆಗಳನ್ನಿಟ್ಟು ಕೊಟ್ಟಿದ್ದಾರೆ. ಮತ್ತು ಪಠ್ಯವು ಎರಡೂ ಕೃತಿಗಳಲ್ಲಿ ಸಮಾನವಾಗಿ ಬಂದಿದೆ.೫ ನಡುಗನ್ನಡ ಭಾಷಾರಚನೆಯ ಮುಖ್ಯ ಅಂಶವಾದ ಶಿಥಿಲದ್ವಿತ್ವವನ್ನು ಮತ್ತು ಶಕಟರೇಫೆಯನ್ನು ಕಲಬುರ್ಗಿಯವರು ಕೈ ಬಿಟ್ಟು ಸಂಪಾದಿಸಿದ್ದಾರೆ. ವಚನಸಾಹಿತ್ಯದ ಕಾವ್ಯಸೌಂದರ್ಯ, ಆಧ್ಯಾತ್ಮಿಕ ಸಾಧನೆ ಮತ್ತು ಸಾಮಾಜಿಕ ಔನ್ನತ್ಯದ ಬಗೆಗೆ ಸಮಾಜದಿಂದ ಬಹಿಷ್ಕೃತನೊಬ್ಬ ಬರೆದ ಸಾರ್ವಕಾಲಿಕ ಕಲಾತ್ಮಕ ವ್ಯಾಖ್ಯಾನವೇ ಪ್ರಸ್ತುತ ವಚನವಾಗಿದೆ.             ಹನ್ನೇರಡನೆ ಶತಮಾನದ ವಚನ ಚಳುವಳಿಯು ಸಾಮಾಜಿಕ ಅಸಮಾನತೆ, ಲಿಂಗ ಅಸಮಾನತೆ, ರಾಜಪ್ರಭುತ್ವದ ವಿರುದ್ಧದ ನೇರ ಧ್ವನಿಯಾಗಿದೆ. ಪ್ರಭುತ್ವಕ್ಕೇ ಪ್ರಭುಸಂಹಿತೆಯಂತೆಯೂ, ಸಮಾಜದ ಜನರಿಗೆ ಮಿತ್ರಸಂಹಿತೆಯಂತೆಯೂ, ವೈಯುಕ್ತಿಕ ಆಧ್ಯಾತ್ಮಿಕ ಉನ್ನತಿಗೆ ಕಾಂತಾಸಂಹಿತೆಯಂತೆಯೂ ಕೆಲಸಮಾಡಿದೆ. ರಾಜರ ದಬ್ಬಾಳಿಕೆ, ದೌರ್ಜನ್ಯ ಮೇಲ್ವರ್ಣ ವರ್ಗಗಳ ಕಂದಾಚಾರ-ಧಾರ್ಮಿಕ ಹಿಡಿತಗಳು ಸಾಮಾನ್ಯ ಜನರನ್ನು ಅತಿಯಾಗಿ ಬಹಿಷ್ಕೃತರನ್ನಾಗಿಸುತ್ತಾ ಕಂದಕವನ್ನು ಸೃಷ್ಠಿಸಿತ್ತು. ಅವು ‘ಘೋರಾರಣ್ಯ’ ಆಗಿತ್ತೆಂಬುದನ್ನು ಮೊದಲನೆಯಸಾಲು ಪ್ರತಿನಧಿಸುತ್ತದೆ.                         ಘೋರಾರಣ್ಯ ಸ್ಥಿತಿಯ ಸಮಾಜದಲ್ಲಿ ಅಭಿವ್ಯಕ್ತಿಯು ಮಹಾಕಾವ್ಯಗಳ ರೂಪದಲ್ಲಿ ರಚನೆಯಾಗುತ್ತಿದ್ದು ಅವು ಪಂಡಿತರಿಗಾಗಿದ್ದುದು ಎಂಬುದು ತಿಳಿದೇ ಇದೆ. ಅವುಗಳ ಪ್ರತಿಯಾಗಿ ಸರಳವಾದ ಮಾತು ಮನಸ್ಸಿನ ಸಮರೂಪಿಯ ಚಿತ್ತದಲ್ಲಿ ಹೊರಹಾಕಿದ ಮಾತೇ ‘ವಚನ’ ಗಳಾಗಿವೆ. ಅವು ಒಬ್ಬ ವಚನಕಾರನಿಂದ ಮತ್ತೊಬ್ಬ ವಚನಕಾರನಿಗೆ ಭಿನ್ನವಾಗುತ್ತಾ, ಅನುಭವದ ಪರಿದಿಯಲ್ಲಿ ವಿಸ್ತರಣೆ ಹಾಗು ವಿಭಿನ್ನತೆ ಹೊಂದಿದೆ. ಕಲಾತ್ಮಕತೆಯ ದೃಷ್ಠಿಯಿಂದಂತೂ ಅದ್ಭುತವಾಗಿದೆ. ಅದೇ ಎರಡನೆಯ ಸಾಲು ‘ಆಡುವ ನವಿಲು’ ನ್ನು ಪ್ರತಿನಿಧಿಸುತ್ತದೆ.                         ಕಲಾತ್ಮಕತೆ-ಸೌಂದರ್ಯ ಎಂಬುದು ಅಂತರಂಗದ ದೃಷ್ಠಿಯಿಂದಲೇ ಹೊರತು ಬಾಹ್ಯ ನೋಟದಿಂದಲ್ಲ. ಬಾಹ್ಯದಿಂದ ಸೌಂದರ್ಯವನ್ನು ನೋಡಿದರೂ ಅದರ ನಿಜವಾದ ಸಾರ್ಥಕ್ಯತೆಯು  ಅಂತರಂಗದಲ್ಲೇ ಇರುವುದು. ಸೌಂದರ್ಯವು ಆತ್ಮದ ಬಿಡುಗಡೆಯನ್ನು ಪ್ರತಿಕ್ಷಣವೂ ಮಾಡುತ್ತಿರುತ್ತದೆ. ಇದರಿಂದ ಕುರೂಪದಲ್ಲಿ- ಸುರೂಪಿಯನ್ನು, ಸುರೂಪಿಯಲ್ಲಿ- ಭವ್ಯತೆಯನ್ನು ಕಾಣಲು ಸಹಾಯಕವಾದ್ದಾಗಿದೆ. ಈ ‘ಘೋರಾರಣ್ಯದಲ್ಲಿಯೂ ‘ನವಿಲಿನ ನರ್ತನ’ವೂ ಆತ್ಮವನ್ನು ಬಿಡುಗಡೆಗೊಳಿಸುವ ‘ಹಾರುವ ಹಂಸೆ’ಯಾಗಿರುವ ವಚನಸಾಹಿತ್ಯದ ಆಧ್ಯಾತ್ಮಿಕ ಔನ್ನತ್ಯದ ಸ್ಥಿತಿಯನ್ನು ಮೂರನೆಯ ಸಾಲು ಪ್ರತಿನಿಧಿಸುತ್ತದೆ.(ಹಂಸೆಯು ಹಾರಲಾರದು ಎಂಬುದು ತಿಳಿದಿದ್ದರು ಅಧ್ಯಾತ್ಮದ ಪರಿಭಾಷೆಯಲ್ಲಿ ಜೀವವು ತಿಳುವಳಿಕೆ ಹೊಂದಿ ಮೇಲೆಹಾರುವ, ಬಿಡುಗಡೆ ಪಡೆಯುವ ಕ್ರಿಯೆಯನ್ನ ತಿಳಿಸುತ್ತದೆ. )                         ಬಸವಣ್ಣನವರ ಆದಿಯಾಗಿ ಸಾಮಾಜಿಕ ಜಾಗೃತಿಯು, ಅಲ್ಲಮನ ಮುಂದಾಳತ್ವದಲ್ಲಿ ತಾತ್ವಿಕ ಚಿಂತನೆಯೂ, ಚೆನ್ನಬಸವಣ್ಣನ ಆದಿಯಾಗಿ ಧಾರ್ಮಿಕ ವೀರಶೈವ ಚಿಂತನೆಯೂ ಬೆಳೆದು ಅದನ್ನೊಂದು ವಿಶ್ವಧರ್ಮವಾಗಿ ರೂಪಿಸಿದೆ. ಇವೆಲ್ಲವನ್ನು ಸೂಕ್ಷö್ಮವಾಗಿ ಸಮಾಜದ ಒಳಗಡೆ ಇದ್ದು ಇಲ್ಲದಂತಿದ್ದ ಕಂಬದ ಮಾರಿತಂದೆಯು ಈ ಮೂರು ಪ್ರಮುಖ ವ್ಯಕ್ತಿಗಳಲ್ಲಿ ಯಾರನ್ನು ‘ಕೋಳಿ’ ಎಂದು ಭಾವಿಸಿದ್ದನೆಂದು ನಿಖರವಾಗಿ ಹೇಳುವುದು ಕಷ್ಟವಾದರೂ ಈ ಮೂವರು ಕೋಳಿಯೋಪಾದಿಯಲ್ಲಿ ಕೂಗಿ-ಕೂಗಿ ಬೆಳಕನ್ನು ಕಂಡು ಎಲ್ಲರಿಗೂ ಅದನ್ನು ಕಾಣಿಸುವ ಹಂಬಲದಿಂದ ಮಧ್ಯಕಾಲೀನ ಸಮಾಜದಲ್ಲಿ ಕಾರ್ಯವನ್ನು ನಿರ್ವಹಿಸಿದವರೇ, ಅದನ್ನು ನಾಲ್ಕನೆ ಸಾಲು ಪ್ರತಿನಿಧಿಸುತ್ತದೆ.                         ಒಟ್ಟಾರೆಯಾಗಿ ಧಾರ್ಮಿಕವಾಗಿ, ಸಾಮಾಜಿಕವಾಗಿ, ಆಂತರಿಕವಾಗಿ ಕಲಾತ್ಮಕವಾಗಿ ಬಸವಾದಿ ಪ್ರಮಥರ ಮುಂದಾಳತ್ವದಲ್ಲಿ ನಡೆದ ಸಾಮಾಜಿಕ ಬದಲಾವಣೆಯ ಬೃಹತ್ ಚಳುವಳಿಯು ಸಾಮಾಜಿಕ ಹೊರತಳ್ಳುವಿಕೆಗೆ ಒಳಗಾಗಿದ್ದ, ಬೆಸ್ತರ ಜಾತಿಗೆ ಸೇರಿದ ಮಾರಿತಂದೆಯು ಪರಿಭಾವಿಸುವ ರೀತಿಯು ಅದ್ಭುತವಾಗಿದೆ.  ಇದು ವಚನಸಾಹಿತ್ಯ ಚಳುವಳಿಯನ್ನು ಅತೀ ಸಶಕ್ತವಾಗಿ ವ್ಯಾಖ್ಯಾನ ಮಾಡಿರುವುದು ಎಂದರೆ ಅತಿಶಯೋಕ್ತಿ ಆಗಲಾರದು. ‘ಹಾರುವ ಹಂಸೆ’ ಎಂಬ ಪ್ರತಿಮೆಯು ಅಲ್ಲಮನಿಂದ ಬಂದಿದ್ದೂ ಆಗಿರಬಹುದು, ಇಲ್ಲವೇ ಅಲ್ಲಮನ ವಚನಕ್ಕೇ ಪ್ರೇರಣೆ ನೀಡಿದುದೂ ಆಗಿರಬಹುದು. ಇದು ಅಲ್ಲಮ ಪ್ರಭುವೇ ಹೇಳುವಂತೆ ‘ನಿಂದ ಹೆಜ್ಜೆ’ ಯನ್ನು ಅರಿಯಲು ‘ಹಿಂದಣ ಹೆಜ್ಜೆ’ ಯನ್ನು ಮೌಲಿಕವಾಗಿ ನೋಡಿರುವ ಉನ್ನತಮಟ್ಟದ ವೈಚಾರಿಕ ಮತ್ತು ಕಲಾತ್ಮಕತೆಯು ಮಾರಿತಂದೆಯಲ್ಲಿರುವುದನ್ನು ತಿಳಿಸುತ್ತದೆ.                         ಭಾಷೆಯು ಸಂವಹನದ ಮೊದಲ ಮತ್ತು ಮೂಲಭೂತವಾದ ಮಾಧ್ಯಮವಾಗಿರುವುದರಿಂದ ಮತ್ತು ‘ವಚನ’ ವೆಂಬ ಸಾಹಿತ್ಯಿಕ ಪ್ರಕಾರವೂ ಮಾತೇ ಆಗಿರುವುದರಿಂದ ಭಾಷಿಕವಾಗಿ ನೋಡುವುದಾದರೆ-                         ‘ಘೋರಾರಣ್ಯದಲ್ಲಿ ಹೋಗುತ್ತಿರಲಾಗಿ’ ಎಂಬ ಸಾಲು ಸಾರ್ವಕಾಲಿಕ ಸಮಾಜದ ಸ್ಥಿತಿಯನ್ನು ಹೇಳುತ್ತಿದೆ. ‘ಹೋಗುತ್ತಿರಲಾಗಿ’ ಎಂಬುದು ವರ್ತಮಾನ ಕ್ರಿಯಾಪದವಾಗಿದ್ದು ಎಂದು ಈ ವಚನವನ್ನು ಓದಿದರೂ, ಯಾವ ಸ್ಥಳದಲ್ಲಿ ಓದಿದರೂ ಪ್ರಸ್ತುತಗೊಳ್ಳುತ್ತಾ ಸಾಗುತ್ತದೆ. ‘ಕಂಡು’ ಎಂಬುದು ಭೂತಕಾಲ ಪದವಾಗಿದ್ದು ಓದುಗನಲ್ಲಿ ಹಿಂದಕ್ಕೆ ಕರೆದುಕೊಂಡು ಹೋಗುತ್ತಲೇ, ಇಂದಿನ ಸಾಮಾಜಿಕ ಮತ್ತು ಕಾವ್ಯದ ವಿವೇಚನೆ ಮಾಡುವ ಹಾದಿಯನ್ನು ತೆರೆಯುತ್ತದೆ. ಬರೆದಿದ್ದೆಲ್ಲವೂ ಕಾವ್ಯವಾಗಬೇಕೆಂಬ ಹುಚ್ಚು ಹಠದಲ್ಲಿರುವಾಗ ‘ನವಿಲಿ’ನ ಕಲಾತ್ಮಕತೆ, ನರ್ತನವಿರದ, ಪ್ರಜ್ಞೆ – ಆತ್ಮದ ನಿರಸÀನದೊಂದಿಗೆ ಪ್ರಾರಂಭವಾಗುವ ‘ಹಾರುವ ಹಂಸೆ’ ಯ ಬಗೆಗೆ ಕೂತುಹಲವಿರದ ಅದನ್ನರಿಯದ ಸ್ಥಿತಿಯು ಇಂದು ಇರುವಾಗ ಮತ್ತೆ ಮತ್ತೆ ಬಿಡುಗಡೆಗೆ ಮಾರಿತಂದೆ ಕರೆಕೊಟ್ಟಂತೆ ಅನಿಸುತ್ತದೆ. ಕಾವ್ಯದ ಕಾರ್ಯ ಎಚ್ಚರಿಸಬೇಕಾಗಿರುವುದರಿಂದ, ವೈಯಕ್ತಿಕ ಬಿಡುಗಡೆಯೊಂದಿಗೆ ಸಾಮಾಜಿಕ ಬಿಡುಗಡೆಯು ಕಾವ್ಯದ ಕಾರ್ಯವಾಗಿರುವುದರಿಂದ ‘ಕೂಗುವ ಕೋಳಿ’ಯು ಹನ್ನೇರಡನೆ ಶತಮಾನದಲ್ಲಿ ಸಾಧ್ಯವಾಗಿದ್ದರಿಂದ ಮಾರಿತಂದೆಯು ‘ಕಂಡು’ ಎಂಬ ನಿಖರ ಕ್ರಿಯಾಪದವನ್ನು ಬಳಸಿರುವುದು ಔಚಿತ್ಯವಾಗಿದೆ. ಇಂದಿನ ಸಾಹಿತ್ಯಕ ಮತ್ತು ಕಾವ್ಯದ ಸ್ಥಿತಿಯನ್ನು ಪ್ರಶ್ನಿಸುವಂತೆ ಅಥವಾ ಅನುಮಾನದಿಂದ ನೊಡುವಂತೆ ಈ ವಚನ ಮಾಡುತ್ತದೆ. ‘ನವಿಲು’ ‘ಹಂಸ’ ‘ಕೋಳಿ’ ಯ ರೂಪಕಗಳು ಮತ್ತು ಅದರ ಕ್ರಿಯೆಗಳು ಒಂದು ಇಚ್ಚಾಶಕ್ತಿಯ ಜನಸಮೂಹದಿಂದ ಜರುಗಿದಾಗ ಉಂಟಾಗುವ ಬೆಳಕು ದಾರಿತೋರುವುದೇ ಪ್ರಥಮೋದ್ದೇಶವಾಗಿ ಕಾರ್ಯ ನಿರ್ವಹಿಸುತ್ತದೆ. ಅಲ್ಲಿ ಮಾರಿತಂದೆಯ ‘ಕದಂಬಲಿಂಗ’ ವೂ, ಬಸವಣ್ಣನವರ ‘ಕೂಡಲ ಸಂಗಮದೇವ’ ನೂ, ಅಲ್ಲಮನ ‘ಗುಹೇಶ್ವರ’ ನೂ ಕಾಣುತ್ತಾನೆಂದರೆ ಅತಿಶಯೋಕ್ತಿ ಎನಿಸಲಾರದು.                         ಹೀಗೆ ವಚನವೆಂಬ ಪ್ರಕಾರವು ಮೇಲ್ನೋಟಕ್ಕೆ ಕಂಡರೂ ತನ್ನೊಡಲಿನಲ್ಲಿ ಕಾಲಾತೀತವಾದ ಮಹತ್ತಿನ ಬಗೆಗೆ ಚಲನೆಯನ್ನು ಹೊಂದುತ್ತಾ ಆತ್ಮದ ಮತ್ತು ಸಮಾಜದ ಉನ್ನತಿಯನ್ನು ಬಯಸುತ್ತಲೇ ಸಾರ್ವಕಾಲೀನವಾಗಿ ಪ್ರಸ್ತುತವಾಗುತ್ತಿರುತ್ತದೆ.    ಅಡಿಟಿಪ್ಪಣಿಗಳು ೦೧. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೪ (೧೯೭೧) ( ಕಂಭದ ಮಾರಿತಂದೆ, ಸತ್ತಿಗೆ ಕಾಯಕದ ಮಾರಿತಂದೆ, ಕನ್ನದ ಮಾರಿತಂದೆ, ಕೂಗಿನ ಮಾರಿತಂದೆ, ನಗೆಯ ಮಾರಿತಂದೆ, ಅರಿವಿನ ಮಾರಿತಂದೆ, ವiನಸಂದ ಮಾರಿತಂದೆ, ಗಾವುದಿ ಮಾರಿತಂದೆ.) ೦೨. ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ (೧೯೨೪) ೦೩. ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ (೧೯೭೧) ೦೪. ಬಸವಯುಗದ ವಚನ ಮಹಾಸಂಪುಟ. ಸಂ. ಡಾ. ಎಂ. ಎಂ. ಕಲಬುರ್ಗಿ. ವ ಸಂಖ್ಯೆ ೦೬. ಪು ೧೧೯೭ (೨೦೧೬) ೦೫. ಮಹಾಘೋರಾರಣ್ಯದಲ್ಲಿ ಹೋಗುತ್ತಿರಲಾಗಿ ಆಡುವ ನವಿಲ ಕಂಡು, ಹಾಱುವ ಹಂಸೆಯ ಕಂಡು, ಕೂಗುವ ಕೋಳಿಯ ಕಂಡು, ಬೆಳಗಾಯಿತ್ತೆಂದು ಹೋಗುತ್ತಿದೆ೵ ಕದಂಬಲಿಂಗದಲ್ಲಿಗೆ        ಪೀಠಿಕೆಗಳು ಲೇಖನಗಳು. ಡಿ.ಎಲ್. ನರಸಿಂಹಾಚಾರ್ಯ. ಪು ೪೫೭ ಮತ್ತು ೪೫೮        ಕರ್ಣಾಟಕ ಕವಿಚರಿತೆ. ಆರ್. ನರಸಿಂಹಾಚಾರ್ಯ. ಪು ೫೫ ಮತ್ತ ೫೬ ************************************** ಆರ್.ದಿಲೀಪ್ ಕುಮಾರ್ ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Read Post »

ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ

ಅಂಕಣ ಬರಹ ಕತೆಗಾರ ರಾಮಕೃಷ್ಣ ಗುಂದಿ ಅವರ ಆತ್ಮಕಥೆ ….6 ನಾಗಮ್ಮಜ್ಜಿಯ ಅಂತಿಮಯಾತ್ರೆ                 ನಮ್ಮ ತಂದೆಯವರಿಗೆ ಶಿಕ್ಷಕ ವೃತ್ತಿ ದೊರೆಯಿತಾದರೂ ಇಲಾಖೆಯ ನಿಯಮದಂತೆ ಶಿಕ್ಷಕ ತರಬೇತಿ ಮುಗಿಸುವುದು ಅನಿವಾರ್ಯವಾಗಿತ್ತು. ತರಬೇತಿಗಾಗಿ ಆಯ್ಕೆಗೊಂಡು ಅವರು ಕಾರವಾರದ ಟ್ರೇನಿಂಗ್ ಕಾಲೇಜ್ ಸೇರುವಾಗ ಅವ್ವನ ಗರ್ಭದಲ್ಲಿ ನಾನು ಆಡಲಾರಂಭಿಸಿದ್ದೆನಂತೆ. ನಾಗಮ್ಮಜ್ಜಿಯ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ. ಅವ್ವನ ಸೀಮಂತ ಇತ್ಯಾದಿ ಸಡಗರದಲ್ಲಿ ಸಂಭ್ರಮಿಸುತ್ತ ತನ್ನ ಕಣ್ಗಾವಲಿನಲ್ಲಿ ಮಗಳ ಬಾಣಂತನಕ್ಕೆ ಬೇಕು ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಊರ ಸುತ್ತಲಿನ ಎಲ್ಲಾ ಗ್ರಾಮದೇವತೆಗಳಿಗೆ ಹಣ್ಣು ಕಾಯಿ ನೀಡಿ ಮೊಮ್ಮಗನೇ ಹುಟ್ಟಬೇಕೆಂದು ಹರಕೆ ಹೊತ್ತು ಬಂದಳಂತೆ. ಕೊನೆಗೂ ಅವ್ವನಿಗೆ ಹೆರಿಗೆಯ ನೋವು ಕಾಣಿಸುವಾಗ ಅಂಕೋಲೆಯ ಸಂಬಂಧಿಯೋರ್ವರ ಮನೆಗೆ ಕರೆತಂದು ಉಳಿಸಿಕೊಂಡಳು. ಏಕೆಂದರೆ ಆಗಿನ ಕಾಲದಲ್ಲಿ ಸರಿಯಾದ ಔಷಧೋಪಚಾರ ಸಿಗುವುದು ಅಂಕೋಲೆಯ ಮಿಶನರಿ ಆಸ್ಪತ್ರೆಯಲ್ಲಿ ಮಾತ್ರ ಎಂಬ ನಂಬಿಕೆ ಆಸುಪಾಸಿನಲ್ಲಿ ಬಲವಾಗಿತ್ತು. ನಾಗಮ್ಮಜ್ಜಿ ಸಾಕಷ್ಟು ಮುಂಜಾಗ್ರತೆ ವಹಿಸಿ ಮಗಳ ಹೆರಿಗೆಗೆ ಸಕಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿಯೇ ಮಾಡಿಕೊಂಡಿದ್ದಳು.                 ಮಾರ್ಚ್ ತಿಂಗಳ ಇಪ್ಪತ್ಮೂರನೆಯ ದಿನ, ಸಾವಿರದ ಒಂಬೈನೂರಾ ಐವತ್ಮೂರು ನನ್ನ ಜನನವಾಯಿತು. ನಾಗಮ್ಮಜ್ಜಿಯ ಸಂತೋಷಕ್ಕೆ ಪಾರವೇ ಇರಲಿಲ್ಲವೆಂದು ಅಮ್ಮ ನೆನೆಸಿಕೊಳ್ಳುತ್ತಾಳೆ. ದೇವರಿಗೆ ಹರಕೆ ಹೊತ್ತುದರಿಂದಲೇ ತನಗೆ ಮೊಮ್ಮಗ ಹುಟ್ಟಿದ್ದಾನೆ ಎಂಬ ಮುಗ್ದ ಬಿಂಕದಲ್ಲಿ ಬೇಡಿಕೊಂಡ ಎಲ್ಲಾ ದೇವರಿಗೆ ಹರಕೆಯೊಪ್ಪಿಸಿ, ಬಾಣಂತಿಯನ್ನೂ ಮಗುವನ್ನೂ ಊರಿಗೆ ಕರೆತಂದು ಆರೈಕೆಗೆ ನಿಂತಳು.                 ಮೂರು ತಿಂಗಳ ಕಾಲ ಬಾಣಂತನ ಮುಗಿಸಿ ಕಾರವಾರದಲ್ಲಿ ತರಬೇತಿ ಪಡೆಯುತ್ತಿರುವ ಅಪ್ಪನ ಕೈಗೊಪ್ಪಿಸಿ ಬಿಟ್ಟರೆ ತನ್ನ ಬಹುದೊಡ್ಡ ಜವಾಬ್ದಾರಿ ಮುಗಿಯಿತು ಎಂದುಕೊಂಡಿದ್ದಳು ನಾಗಮ್ಮಜ್ಜಿ. ಮಗುವಿಗೆ ಕೈಬಳೆ, ಕಾಲ್ಕಡಗ, ಹೊಸಬಟ್ಟೆ ತೊಡಿಸಿ ಮಗಳನ್ನೂ ಸಿಂಗರಿಸಿಕೊಂಡು ತೊಟ್ಟಿಲ ಹೊರೆ ಹೊತ್ತು ಕಾರವಾರಕ್ಕೆ ಬಂದಿಳಿದಳು. ಅಂದು ದಿನವಿಡೀ ಮಗಳು, ಅಳಿಯ, ಮೊಮ್ಮಗುವಿನೊಂದಿಗೆ ಆನಂದದಲ್ಲಿ ಮೈಮರೆತಿದ್ದ ನಾಗಮ್ಮಜ್ಜಿಗೆ ಸರಿರಾತ್ರಿ ನಿದ್ದೆಯಲ್ಲಿರುವಾಗ ಹೊಟ್ಟೆನೋವು ಕಾಣಿಸಿಕೊಂಡಿತು.                 ಸಾಮಾನ್ಯವಾಗಿ ತನಗೆ ಎಂಥ ಸಣ್ಣಪುಟ್ಟ ಕಾಯಿಲೆ ಬಂದರೂ ತಾನೇ ಏನಾದರೊಂದು ಔಷಧಿ ಮಾಡಿ ತಿಂದು ಸರಳವಾಗಿ ಬಿಡುತ್ತಿದ್ದ ನಾಗಮ್ಮಜ್ಜಿ ಅಂದು ಮಾತ್ರ ಧೃತಿಗೆಟ್ಟು ನರಳ ತೊಡಗಿದಳಂತೆ! ಅಪರಾತ್ರಿಯ ಹೊತ್ತಿನಲ್ಲಿ ಅಪ್ಪ ಕಾರವಾರದ ಎಲ್ಲಾ ಆಸ್ಪತ್ರೆಗಳ ಬಾಗಿಲು ಬಡಿದು ಕಳಕಳಿಯಿಂದ ಹುಡುಕಾಡಿದರೂ ವೈದ್ಯರೊಬ್ಬರೂ ದೊರೆಯಲಿಲ್ಲ.                 ಸಿಕ್ಕ ಒಬ್ಬಿಬ್ಬರು ಮಧ್ಯರಾತ್ರಿಯ ಹೊತ್ತಿನಲ್ಲಿ ಮನೆ ಬಿಟ್ಟು ಬರಲು ಒಪ್ಪಲಿಲ್ಲ. ರಾತ್ರಿಯೆಲ್ಲಾ ನೋವಿನ ಯಮಯಾತನೆಯಲ್ಲಿ ನರಳಿದ ನಾಗಮ್ಮಜ್ಜಿ ನಸುಕು ಹರಿಯುವ ಹೊತ್ತಿಗೆ ಗಾಢನಿದ್ದೆಗೆ ಶರಣಾಗಿದ್ದಳು.                 ಅವಳು ಈಗ ಮಲಗಿದ್ದಾಳೆ ನೋವು ಕಡಿಮೆಯಾಗಿರಬಹುದು ಎಂದೇ ಭಾವಿಸಿದ ಅಪ್ಪ ಅವ್ವ ಅಜ್ಜಿಯನ್ನು ಅವಳ ಪಾಡಿಗೆ ಬಿಟ್ಟು ದೈನಂದಿನ ಚಟುವಟಿಕೆಗಳಿಗೆ ಸಿದ್ಧರಾದರು. ಅಪ್ಪ ಉಪಹಾರ ಮುಗಿಸಿ ಮಂಜಾನೆಯೇ ಆರಂಭಗೊಳ್ಳುವ ತರಗತಿಗೆ ಹಾಜರಾಗಲು ಅತ್ತ ಹೋದಬಳಿಕ ಅವ್ವ ಕಸಮುಸುರೆ ಇತ್ಯಾದಿ ಕೆಲಸಗಳಲ್ಲಿ ಮೈಮರೆತಿದ್ದಳು. ಅಜ್ಜಿಯ ಪಕ್ಕದಲ್ಲಿಯೇ ನನಗೂ ಸೊಗಸಾದ ನಿದ್ದೆ ಬಿದ್ದುದರಿಂದ ಅವ್ವ ಇತ್ತ ಲಕ್ಷ್ಯ ಕೊಡುವ ಅಗತ್ಯವೂ ಬೀಳಲಿಲ್ಲವಂತೆ.                 ಮನೆಗೆಲಸವನ್ನೆಲ್ಲ ಮುಗಿಸಿ ಹತ್ತು ಹೊಡೆಯುವ ಹೊತ್ತಿಗೆ ಇಷ್ಟು ಹೊತ್ತಾದರೂ ಅವ್ವ ಏಕೆ ಏಳಲಿಲ್ಲ? ಎಂಬ ಅನುಮಾನ ಬಲವಾಗಿ ಬಳಿ ಬಂದು ಎಬ್ಬಿಸಿ ನೋಡುವಾಗ ನಾಗಮ್ಮಜ್ಜಿ ಮರಳಿಬಾರದ ಲೋಕಕ್ಕೆ ಹೊರಟು ಹೋಗಿದ್ದಳು!                 ಅಪರಿಚಿತವಾದ ಊರು. ಉಳಿದುಕೊಂಡದ್ದು ಯಾರದೋ ಮನೆ. ಹೇಳ ಕೇಳುವ ಬಂಧುಗಳು ಯಾರೂ ಹತ್ತಿರವಿಲ್ಲ. ಇಂಥ ಸಂದರ್ಭದಲ್ಲಿ ತೀರ ನಂಬಲೂ ಆಗದ ಸ್ಥಿತಿಯಲ್ಲಿ ಅಜ್ಜಿ ಹೆಣವಾಗಿ ಮಲಗಿದ್ದಾಳೆ….                 ಕಾರವಾರದ ಬೀದಿಗಳಲ್ಲಿ ಬೊಬ್ಬೆಯಿಡುತ್ತಲೆ ಶಿಕ್ಷಕರ ತರಬೇತಿ ಕೇಂದ್ರದತ್ತ ಓಡಿದ ಅವ್ವ ಅಪ್ಪನಿಗೆ ವಿಷಯ ತಿಳಿಸಿ ಅಪ್ಪನನ್ನು ಬೀಡಾರಕ್ಕೆ ಕರೆತರುವಷ್ಟರಲ್ಲಿ ಒಂದು ತಾಸಾದರೂ ಕಳೆದು ಹೋಗಿರಬಹುದು. ಹೆಣದ ಪಕ್ಕದಲ್ಲಿ ಯಾವ ಅರಿವೂ ಇಲ್ಲದೆ ಆಡುತ್ತ ಮಲಗಿದ ನನ್ನನ್ನು ನೆರೆ ಮನೆಯವರಾರೋ ನೋಡಿ ಎತ್ತಿಕೊಂಡಿದ್ದರಂತೆ.                 ಊರಿಗೆ ಸುದ್ದಿ ಮುಟ್ಟಿಸುವುದೂ ಕಷ್ಟವಾಗಿದ್ದ ಕಾಲ. ಸಮೀಪವೆಂದರೆ ಅಂಕೋಲೆಯ ದಾರಿಯಲ್ಲಿ ಅಮದಳ್ಳಿ ಎಂಬಲ್ಲಿ ಶಾನುಭೋಗಿಕೆ ಮಾಡಿಕೊಂಡಿರುವ ನಾಗಣ್ಣ ಎಂಬ ಪರಿಚಿತ ವ್ಯಕ್ತಿ ಮಾತ್ರ. ಅಪ್ಪ ಹೇಗೋ ನಾಗಣ್ಣನಿಗೆ ಸುದ್ದಿ ಮುಟ್ಟಿಸಿ ಅವನಿಂದ ಊರಿನವರೆಗೂ ನಾಗಮ್ಮಜ್ಜಿಯ ಮರಣ ವಾರ್ತೆ ತಲುಪುವಾಗ ಅರ್ಧ ದಿನ ಕಳೆದು ಹೋಗಿತ್ತು. ಅಲ್ಲಿಂದ ಬಂಧು ಬಾಂಧವರು ಹೊರಡ ಬೇಕೆಂದರೂ ಬಸ್ಸು ಇತ್ಯಾದಿ ಸೌಕರ್ಯಗಳಿಲ್ಲ! ಇದ್ದರೂ ಕೈಯಲ್ಲಿ ಕಾಸು ಇಲ್ಲದ ಜನ. ಕಾಲ್ನಡಿಗೆಯಲ್ಲೇ ಹೊರಟು ಕಾರವಾರ ಸೇರುವ ಹೊತ್ತಿಗೆ ಮತ್ತೆ ನಡುರಾತ್ರಿ.                 ಸರಿರಾತ್ರಿಯಲ್ಲಿ ನಾಗಮ್ಮಜ್ಜಿಯ ಶವವನ್ನು ಕಾರವಾರದ ಸ್ಮಶಾನದಲ್ಲಿ ಮಣ್ಣು ಮಾಡಿದರಂತೆ. ಮಗಳು ಮೊಮ್ಮಗನನ್ನು ಅತ್ಯಂತ ಸಡಗರದಿಂದ ಕರೆತಂದು ಅಳಿಯನ ಕೈಗೊಪ್ಪಿಸಿ ನಾಗಮ್ಮಜ್ಜಿ ತನ್ನ ಕನಸುಗಳೊಂದಿಗೆ ಕಣ್ಮರೆಯಾಗಿಬಿಟ್ಟಳು ಎಂಬ ಕತೆಯನ್ನು ಅವ್ವ ಹೇಳತೊಡಗಿದಾಗ ಅಜ್ಜಿಯ ಆಕೃತಿ, ಚಡಪಡಿಕೆ, ಕನಸುಗಳು, ತೀವೃವಾದ ಜೀವನೋತ್ಸಾಹಗಳು ನನ್ನ ಕಣ್ಣೆದುರೇ ಚಿತ್ರ ಶಿಲ್ಪವಾಗಿ ಮೂಡಿದಂತೆನಿಸುತ್ತದೆ. ಅಷ್ಟೊಂದು ಅಕ್ಕರೆ ತೋರುವ ಅಜ್ಜಿಯ ಪ್ರೀತಿ ಆರೈಕೆಗಳನ್ನು ಇನ್ನಷ್ಟು ಕಾಲ ಪಡೆಯುವ ಯೋಗ ನನಗಿದ್ದರೆ? ಎಂದೂ ಚಡಪಡಿಸುತ್ತದೆ. ********************************************

Read Post »

ಕಾವ್ಯಯಾನ

ಮುನ್ನಡೆಗೆ ಹಿಂಬಾಗಿ

ಕವಿತೆ ಮುನ್ನಡೆಗೆ ಹಿಂಬಾಗಿ ಹರೀಶ ಕೋಳಗುಂದ ಕಣ್ಣ ಪರದೆಯ ಮೇಲೆ ಓಡುವಬಣ್ಣ ಬಣ್ಣದ ಚಿತ್ರಗಳುಉರುಳುವ ಗಾಲಿಚಕ್ರದ ಪರಿಧಿಯಲಿಸರಿದು ಮರೆಯಾಗುವ ಮೈಲುಗಲ್ಲುಗಳುದೂರ ತೀರದಲ್ಲೆಲ್ಲೋ ಇಳಿಬಿದ್ದು ನೆಲಕಚ್ಚಿದಾಕಾಶಕಾಗಜದೋಣಿಯ ಬಟ್ಟಲಿಗೆ ತೊಟ್ಟಿಕ್ಕುವ ಪಾತಾಳಗಂಗೆಭೂಮಧ್ಯರೇಖೆಗೂ ಭ್ರಮಣದ ನಶೆಇರುಳು ಬೆಳಕಿನಾಟಗೇಲಿ ನಗುವ ಕತ್ತಲುಬೆಂಕಿಯುಗುಳುವ ಮುಗಿಲುತಣ್ಣಗೆ ಸುಡುವ ಹಸಿವ ಜ್ವಾಲೆಕುದಿವ ಮೌನತುಮುಲಗಳ ಅದುಮಿಟ್ಟಂತೆಲ್ಲಾರೆಕ್ಕೆ ಬಡಿವ ತವಕಮಂಜು ಹೊದ್ದು ಮಲಗಿದ ಬೂದಿಯೊಳಗೂಹೆಪ್ಪುಗಟ್ಟಿ ಕುಳಿತ ಅಗ್ನಿಶಿಲ್ಪಜೀವದುಸಿರಿನ ಕಾತರಉರಿವ ಮಂದಾಗ್ನಿಯ ಬುತ್ತಿಗೆ ಕೈಯಿಕ್ಕುವ ತುಡಿತದೊಂದಿಯಾಗದ ಕಟ್ಟಿಗೆಯ ನಿರಾಶಾಭಾವನೋಯುವ ಕರುಳ ಕಣ್ಣ ಹನಿಗೆಚಿಗುರೊಡೆವ ಸಾಂತ್ವನದ ಬೆರಳುಒಂದೋ ಎರಡೋಒಡಕಲು ಬಿಂಬಕ್ಕೆ ಕೈ ಚಾಚಿ ಕುಳಿತ ಮನದಕ್ಕಿಸಿಕೊಂಡದ್ದು ಏನನ್ನೋಬೆನ್ ತಿರುಗಿಸಲು ಸೋಲಿನ ಭಯಅಮೆ ನಡಿಗೆಯೋಬಸವನ ಹುಳುವಿನೋಟವೋಮುನ್ನಡೆಗೆ ಹಿಂಬಾಗಿದಾರಿ ಸಾಗಲೇಬೇಕುಪಯಣ ಮತ್ತೆ ಶುರುವಾಗಲೇಬೇಕುಹೆಜ್ಜೆ ಇಟ್ಟಲ್ಲೆಲ್ಲಾ ಬೇರೂರಬೇಕುಕತ್ತರಿಸಿದಷ್ಟೂ ಮತ್ತೆ ಮತ್ತೆ ಹಬ್ಬುವಲಂಟಾನಾ ಜಿಗ್ಗಿನ ಹಾಗೆ *******************************

ಮುನ್ನಡೆಗೆ ಹಿಂಬಾಗಿ Read Post »

ಇತರೆ, ಲಹರಿ

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್

ಕವಿತೆ ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ ಸ್ಮಿತಾ ಭಟ್ ವರ್ಷವೊಂದು ಗತಿಸಿ ಹೋಯಿತಲ್ಲ, ಎಂದು ಅಂತರ್ಮುಖಿಯಾಗಿ ಯೋಚಿಸುತ್ತಾ ಖಾಲಿ ಗೋಡೆಯತ್ತ ತದೇಕಚಿತ್ತದಿಂದ ನೋಡುತ್ತಿದ್ದೆ. ತನ್ನ ಅಸ್ತಿತ್ವವನ್ನು ನೆನಪಿಸುವಂತೆ, ತೂಗುಹಾಕಿದ ಕ್ಯಾಲೆಂಡರ್ ಗಾಳಿಗೆ ಹಾರುತ್ತಾ ಪರ ಪರ ಸದ್ದು ಮಾಡಿತು ಅದು ಏನನ್ನೋ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಬೀಸುವ ಗಾಳಿಗೆ ಉದುರಿ ಬಿದ್ದಾವು ಎಂದು,ಬರುತ್ತಿದ್ದ ಗಾಳಿಯನ್ನು ತಡೆಯಲು ಎದ್ದು ಕಿಟಕಿಯ ಕದವನ್ನು ಎಳೆದೆ. ಆಗಲೂ ಕ್ಯಾಲೆಂಡರ್ ನದು ಮತ್ತದೇ ಸದ್ದು. ಆಗಲೇ ನಾನು ಗಮನಿಸಿದ್ದು ನವೆಂಬರ್ ತಿಂಗಳಿನಲ್ಲಿಯೇ ನಿಂತು ತನ್ನ ದಯನೀಯ ಸ್ಥಿತಿಯನ್ನು ಹೇಳುತ್ತಿರುವಂತೆ ಭಾಸವಾಯಿತು. ಈ ನಡುವೆ ನಾನು ಗಮನಿಸಿಯೇ ಇರಲಿಲ್ಲ. ಭಾವದೊಳಗೆ ನಡೆದ ನೋವಿನ ಸಂಗತಿಗಳು ಸಂಪೂರ್ಣ ದಿನಚರಿಯನ್ನು ಅದಲು-ಬದಲು ಮಾಡಿತ್ತು. ಕೆಟ್ಟ ಗಡಿಯಾರ ಮತ್ತು ತಿರುಗಿಸಿ ಇರದ ಕ್ಯಾಲೆಂಡರ್ ಮನೆಯ ಗೋಡೆಯ ಮೇಲೆ ಯಾವತ್ತೂ ಇರಬಾರದು. ಅದು ಇದೆ ಅಂತಾದರೆ ಆ ಮನೆಯ ದಿನಚರಿ ಸರಿ ಇಲ್ಲ ಅಂತಲೇ ಅರ್ಥ. ಎನ್ನುವ ಅಪ್ಪನ ಮಾತು ತಕ್ಷಣ ನೆನಪಾಯಿತು. ನನ್ನ ಭಾವ ಕೂಡಾ ಅದಕ್ಕೆ ಪುಷ್ಟಿ ಕೊಡುತ್ತಿತ್ತು. ಎದ್ದು ಹೋಗಿ ಕ್ಯಾಲೆಂಡರನ್ನು ತಿರುವಿಹಾಕಿದೆ. ಇನ್ನು ಮೂರೇ ದಿನ ಇರುವುದು ಈ ಕ್ಯಾಲೆಂಡರಿನ ಅಸ್ತಿತ್ವ ಮುಗಿಯಲು. ಅಯ್ಯೋ ಪಾಪ ಅನ್ನಿಸಿ ಕ್ಯಾಲೆಂಡರ್ ಅನ್ನು ಸವರುತ್ತಾ ಕುಳಿತೆ. ಎಷ್ಟೊಂದು ನೋವುಗಳನ್ನು ಹೊತ್ತು ತಂದಿದ್ದೆ ನೀನು.ಸಾವು-ನೋವು,ರೋಗ,ಪ್ರವಾಹ, ಒಂದಾ ಎರಡಾ, ಮನುಕುಲಕ್ಕೆ ಅತಿ ತ್ರಾಸದಾಯಕವಾದ ವರ್ಷ ಅನ್ನಬಹುದು. ನೀನು ಕೊಟ್ಟ ನೋವಿನಿಂದ ನಿನ್ನ ಕಾಲ ಇತಿಹಾಸದಲ್ಲಿ ಕಹಿ ಭಾವದಿಂದ ನೆನಪಿರುವಂತಹ ವರ್ಷವಾಗುತ್ತದೆ ಅಂದೆ. ಅದೇ ಕ್ಷಣದಲ್ಲಿ ನನ್ನ ತಪ್ಪು ಮಾತಿನ ಅರಿವಾಯಿತು ನಡೆದ ಘಟನೆಗಳಿಗೆ ಕ್ಯಾಲೆಂಡರನ್ನು ದೂಷಿಸುತ್ತಿದ್ದೇನಲ್ಲ ಎಂದು. ನಡೆದ ತಪ್ಪುಗಳಿಗೆ ಯಾರನ್ನಾದರೂ ಹೊಣೆ ಮಾಡುವುದು ಮನುಷ್ಯನ ಸಹಜ ಗುಣ ಅನ್ನಿಸಿ ನಗು ಬಂತು.ಮತ್ತಲ್ಲೇ ತೂಗುಹಾಕಿ ಇನ್ನೆರಡು ದಿನ ಆರಾಮವಾಗಿ ಇರು ಕಾಲ ಎಲ್ಲರದ್ದು ಮುಗಿಯುತ್ತದೆ. ಹಾಗೆ ನಿನ್ನದೂ.. ಆದರೆ ಎಷ್ಟು ವಿಚಿತ್ರ ನೋಡು ನೀನು ಕಾಲ ಮುಗಿದ ಮೇಲೆ ಮತ್ತೆ ಇದೇ ರೂಪದಲ್ಲಿ ಬರುತ್ತೀಯ. ಯಾವ ವ್ಯತ್ಯಾಸವೂ ಇಲ್ಲದೇ. ಅದೇ ದಿನಾಂಕ, ಅದೇ ವಾರ, ಅದೇ ತಿಂಗಳು, ಅದೇ ಹಬ್ಬ ಹರಿದಿನಗಳನ್ನು ಹೊತ್ತು. ಕೇವಲ ಒಂದು ಸಂಖ್ಯೆಯನ್ನು ಬದಲಿಸಿಕೊಂಡು.ನಿನಗದು ಕರಾರುವಾಕ್ಕಾಗಿ ಗೊತ್ತಿದೆ. ಯಾರ ಕೈ ಚಳಕದೊಳಗೆ ಸಿಕ್ಕು ಹಣಿಸಿಕೊಂಡರೂ, ನಿನ್ನ ನಿಯಮಕ್ಕೇ ಬಂದು ನಿನಗೆ ರೂಪ ಕೊಡುತ್ತಾರೆ. ಮನುಷ್ಯನಂತೆ ಬೇರೆ ಬೇರೆ ದೇಹಗಳಿಗೆ ಹೊಕ್ಕು ಸಂಭ್ರಮಿಸುವ ನೋಯುವ ನಿಯಮವೂ ಇಲ್ಲ. ಆತ್ಮವು ಮಾತ್ಮತ್ತೆ ಅದದೇ ದೇಹದೊಳಗೆ ಹೊಕ್ಕು ನಗುವದೆಷ್ಟು ಸೋಜಿಗ ಅನ್ನಿಸುತ್ತದೆ. ಪ್ರತಿ ಮನೆಯಲ್ಲಿ ಅತ್ಯಂತ ಗೌರವದ ಸ್ಥಾನವೂ, ಮೂಲೆಗುಂಪು ಮಾಡುವ ನೋವು ಅನುಭವಿಸುವೆ.ಹೆಚ್ಚು ಕಡಿಮೆ ಮನುಷ್ಯನದು ಹಾಗೆ ಅಲ್ವಾ?ನಿನ್ನ ಹೊಸ ಹುಟ್ಟನ್ನು ತಂದು ಸಂಭ್ರಮಿಸುತ್ತಾರೆ, ಮತ್ತೆ ನಿನ್ನ ಎಸೆಯುತ್ತಾರೆ.ಬಹುಶಹ ಕಾಲಚಕ್ರ ಎನ್ನುವುದು ಇದೇ ಇರಬೇಕು.ಎಲ್ಲಿಂದಲೋ ಬಂದು, ಹೊಸತೊಂದು ಏನೂ ಸೇರಿಕೊಳ್ಳುವುದಿಲ್ಲ.ಇದೇ ಪರಿಧಿಯೊಳಗೆ ರೂಪಾಂತರವಾಗುತ್ತ ನಾವು ನೋಡುವ ರೀತಿಯಲ್ಲಿ ನಮಗೆ ಗೋಚರಿಸುತ್ತದೆ.ಹಾಗೆ ನಮ್ಮ ಸಂತೋಷ ಕೂಡ ಹೊರಗೆಲ್ಲೂ ಇರುವುದಿಲ್ಲ. ಅದು ನಮ್ಮೊಳಗೇ ಇರುತ್ತದೆ. ಅದನ್ನು ನಾವು ಗ್ರಹಿಸಬೇಕು ಮತ್ತದಕ್ಕೆ ಪುನಹಃ ಪುನಹಃ ಹೊಸ ರೂಪವನ್ನು ಕೊಡಬೇಕು ಅಷ್ಟೇ. ಕ್ಯಾಲೆಂಡರ್ ನಂತೆ.ಕಾಲದ ಜೊತೆಗೆ ಸಾಗುವಾಗ ನೀನೊಂದು ಅದ್ಭುತ ಸಂಗತಿ ಮತ್ತು ಸಂಗಾತಿಯಂತೂ ಹೌದು. ನಿನ್ನ ಬೀಳ್ಕೊಡುತ್ತಿಲ್ಲ ಮತ್ತೆ ಸ್ವಾಗತಿಸುತ್ತಿದ್ದೇನೆ ಎಂದೆ. ಸದ್ದು ಮಾಡುವುದು ನಿಲ್ಲಿಸಿ ನಕ್ಕಂತೆ ಭಾಸವಾಯಿತು ***********************************

ಮನುಷ್ಯನಂತೆ ನಕ್ಕಿತು ಕ್ಯಾಲೆಂಡರ್ Read Post »

ಕಾವ್ಯಯಾನ

ಹೊಸದಾಗುವುದಾದರೆ…!

ಕವಿತೆ ಹೊಸದಾಗುವುದಾದರೆ…! ಅನಿತಾ ಪಿ. ಪೂಜಾರಿ ತಾಕೊಡೆ ಎರಡು ಸಾವಿರದ ಇಪ್ಪತ್ತೊಂದರ ಪುಟಗಳಲಿಏನಾದರೂ ಹೊಸದಾಗುವುದಾದರೆಆ ಹೊಸತಿನೊಳು ಬದಲಾಗುವುದಾದರೆ…! ಸ್ವಾರ್ಥದ ಕಿಚ್ಚಿಳಿದು ಸೌಹಾರ್ದತೆ ಬೆಸೆದುಕ್ರೌರ್ಯವಳಿದು ಮಾನವೀಯತೆ ಮೊಳೆಯಲಿನಾನೆಂಬ ಅಹಂ ಮರೆತು ನಾವು ನಮ್ಮವರೆಂದುಉಳ್ಳವನು ಇಲ್ಲದವನ ಆಂತರ್ಯವನು ತಿಳಿಯಲಿ ಕಾರಣಗಳು ಸಂಬಂಧಗಳ ದೂರೀಕರಿಸದೆ ಸಕಾರಣಗಳು ಒಡೆದ ಮನಸ್ಸುಗಳನು ಕೂಡಿಸಲಿಬುದ್ಧಿಯು ಅತಿಯಾಸೆಯ ಕೈಗೆ ಸಿಲುಕದೆನೆಮ್ಮದಿಯ ಬದುಕಿಗಷ್ಟೆ ಸೀಮಿತವಾಗಿರಲಿ ಬೇಕು ಬೇಡಗಳ ನಡುವೆ ಸ್ವಾರ್ಥದೆಳೆಗಳು ಬಂದು ಅಂತರ ನಿರಂತರವಾಗದಿರಲಿಆಪ್ತ ಪರಮಾಪ್ತತೆಯ ಆಂರ್ತರ್ಯದ ಒಲವುಪದಗಳಲಿ ಹೊಳೆದು ಮಾಸುವ ಬಣ್ಣವಾಗದಿರಲಿ ಈ ವರ್ಷದಲಿ ಹೊಸತು ಹೀಗೂ ಒಂದಿರಲಿವೈರಾಣುವಿನಲ್ಲಿ ವಿನಾಶದ ಗುಣವಳಿದುಜೀವಕ್ಕೆ ಜೀವ ಕೊಡುವ ಸಂಜೀವಿನಿಯಾಗಲಿಈ ಸೃಷ್ಟಿಯಲಿ ಪ್ರತಿಯೊಂದು ಜೀವಿಗೂಬದುಕುವ ಸಮಾನ ಅವಕಾಶವಿರಲಿ ಎರಡು ಸಾವಿರದ ಇಪ್ಪತ್ತೊಂದರ ಹೊಸ್ತಿಲಿಗೆ ತಮಗೆಲ್ಲರಿಗೂ ಆತ್ಮೀಯ ಸ್ವಾಗತ ಕೋರುವ  ****************************

ಹೊಸದಾಗುವುದಾದರೆ…! Read Post »

ಕಥಾಗುಚ್ಛ

ಡಿಯರ್-ಟೈಗರ್!

ಕಥೆ ಡಿಯರ್-ಟೈಗರ್! ಡಾ. ಅರಕಲಗೂಡು ನೀಲಕಂಠ ಮೂರ್ತಿ ಹೆಣ್ಣು ಅಂದರೆ ಪ್ರಬಲವಾದ ಶಿಸ್ತು ಮತ್ತು ಕಬಂಧ ಬಾಹುಬಲದ  ಚೌಕಟ್ಟಿನಲ್ಲಿ ಬೆಳೆಯಬೇಕು; ಅಷ್ಟೇ ಕಟ್ಟುನಿಟ್ಟಿನ ಬೇಲಿಯೊಳಗೆ ಬದುಕಬೇಕು ಎಂಬ ಬಂಧಿಯಲ್ಲ. ಅವಳಿಗೂ ಸರ್ವಸ್ವತಂತ್ರದ ಬದುಕು ಇಷ್ಟ. ಖಂಡಿತ! ಇದು ಬಹುಶಃ ಎಲ್ಲರ  ಪಾಲಿನ ಸತ್ಯ.  ಆದರೆ, ಅನೇಕರಿಗೆ ಅಂಥ ಜೀವನ ಇರಲಿ, ಆ ರೀತಿಯ ಮುಕ್ತ ಯೋಚನೆ ಕೂಡ ಅಸಾಧ್ಯ, ಅನ್ನಿಸುವಷ್ಟು ‘ಸರಳುಗಳ ಹಿಂದಿನ ಬಾಳು!’. ವಾಸ್ತವವಾಗಿ, ಅವರಿಗೆ ಆ ಸರಳುಗಳನ್ನು ಎಣಿಸುವ ಧೈರ್ಯ ಸಹ ಇರಲಾರದು… ಕಲ್ಯಾಣಿ ಶಾಲೆಯಿಂದ ಬಂದವಳು, ಶಾಲೆಗೆ ಅಂತ ಅಲ್ಲಿಯ ಕಾಯಿದೆಯಂತೆ ತೊಟ್ಟಿದ್ದ ಸಮವಸ್ತ್ರ ಬಿಚ್ಚಿ ‘ಹೋಂ ಮೇಡ್ ಥರ ಬದಲಾಗಿ’, ಫ್ರೆಶ್ ಆಗಿ, ಕಾಫಿ ಮಾಡಿಕೊಂಡು ಹಜಾರದಲ್ಲಿ ಈಸಿ ಛೇರ್ ಆವರಿಸಿ, ಒಂದೊಂದೇ ಸಿಪ್ ಹೀರುತ್ತಾ, ಅದರೊಟ್ಟಿಗೆಯೇ  ಅಂತರ್ಮುಖಿಯಾದಂತೆ ಮೆದುಳ ತರಂಗಗಳಲಿ ತೇಲುತ್ತಿದ್ದಳು! ‘ಟೈಗರ್’ ಬರುವ ಸಮಯ ಹೀಗೆ ಅಂತ ಹೇಳುವ ಹಾಗಿರಲಿಲ್ಲ. ಹೌದು, ತನ್ನ ಗಂಡನನ್ನು ಅವಳು ‘ಟೈಗರ್’ ಎಂದು ಕರೆಯುತ್ತಿದ್ದಳು – ಅದು ಅವರಿಬ್ಬರೇ  ಇದ್ದಾಗ ಮಾತ್ರ. ಪಬ್ಲಿಕ್ಕಾಗಿ ಅವನು ಇವಳಿಗೆ ಸೂರ್ಯ. ವಾಸ್ತವವಾಗಿ ಅವನು  ಸೂರ್ಯತೇಜ್ – ಇದು ಪೂರ್ತಿ ಪಬ್ಲಿಕ್ಕಿಗಾಗಿ; ಹೊರ ಜಗತ್ತಿಗಾಗಿ. ಹೌದು, ಎಷ್ಟು ಜನ ಹೆಂಗಸರು ತನ್ನಂತೆ ಸಂಪೂರ್ಣ ಮುಕ್ತವಾಗಿ, ಸಡನ್ನಾಗಿ ಗಿಜಗುಟ್ಟುವ ರಸ್ತೆಯಲ್ಲಿ  ಬರ್ತ್ ಸೂಟ್ ನಲ್ಲೇ   ಓಡಾಡಿದ   ಆರ್ಕಿಮಿಡೀಸ್ ಥರ ಯೋಚಿಸಬಲ್ಲರು! ಹ್ಞಾ,ಹೌದಲ್ಲವೇ…? ಅಷ್ಟರಲ್ಲಿ ಯಾರೋ ಬೆಲ್ ಮಾಡಿದರು. ಹೋಗಿ ಬಾಗಿಲ ಪಕ್ಕದ ಕಳ್ಳ ಕಿಟಕಿ ತೆರೆದರೆ, ಮನೆ ಕೆಲಸದ ಬಾಯಮ್ಮ. ಕಿಟಕಿ ತೆರೆದದ್ದೇ, ನಿಂತಲ್ಲೇ ಸಂಕೋಚ ಇವರಿಗೆ. ‘ಈ ‘ಬಾಯಮ್ಮ’ನಿಗೆ ಪಾಪ ಮಾತಾಡೋ ಬಾಯೇ ಇಲ್ಲ. ಏನೇ ಕೇಳಿದರೂ, ಹ್ಞೂ,ಹ್ಞಾ; ಅಥವ ಇಲ್ಲ; ಅಥವ  ಎರಡು ಮೂರು ಅಕ್ಷರ ಅಷ್ಟೇ. ಆದರೂ, ಬಾಯಮ್ಮ! ಈ ಹುಟ್ಟು  ಹೆಸರುಗಳದ್ದೇ ಸೋಜಿಗದ ಸಂಗತಿ. ಅಂತ ಮನಸ್ಸಿನಲ್ಲೇ ಅಂದುಕೊಂಡು ಬಾಗಿಲು ತೆರೆದಳು, ಕಲ್ಯಾಣಿ. ಬಾಯಮ್ಮ ಒಳ ಬಂದು ಪಿಸು ಮತ್ತು ಗಡಸು ಮಿಶ್ರಣ ಅನ್ನಿಸುವಂಥ ದನಿಯಲ್ಲಿ ‘ಸ್ವಲ್ಪ ಕಾಸು ಬೇಕಾಗಿತ್ತು ಅಮ್ಮೋರೆ’ ಅಂತ ದೈನ್ಯದಲ್ಲಿ ಅನ್ನೋಥರ ಕೇಳಿದರು. ಅಯ್ಯೋ ಪಾಪ ಅನ್ನಿಸಿತು ಕಲ್ಯಾಣಿಗೆ. ಇದು ಇವರ ಬೆವರಿನ ಕಾಸಲ್ಲವೇ… ಒಂದು ತಿಂಗಳ ಸಂಬಳ ಒಟ್ಟಿಗೇ ಕೊಟ್ಟು ಕಳಿಸಿದಳು. ಏಣಿಯ ಮೇಲಿಂದ ರಪ್ಪಂತ ಒದ್ದಂತೆ ಕೆಳಗೆ ಬಿದ್ದರೂ ಸಹ ಸೊಲ್ಲಿಲ್ಲದಂತೆ ತೆವಳುವ  ಬಾಳು ಕೆಲವರದ್ದು… ಹೌದಲ್ಲವೇ! ನೋಡೋಣ, ನನ್ನ ಟೈಗರ್ ಈಗ, ಈ ಬೆಂಗಳೂರಿನ ನಿರಂತರ  ತುಂಬುಗರ್ಭದ ರಸ್ತೆಗಳಲ್ಲಿ ಎಲ್ಲಿ ಪ್ರಸವಕ್ಕಾಗಿ ಕಾಯುತ್ತ ಇರುವರೋ ಅಥವಾ ಇಂಚಿಂಚೇ ಹೊಟ್ಟೆಯೊಳಗಿಂದ ನೂಕಿಸಿಕೊಂಡಂತೆ ಬರುತ್ತಿರುವರೋ… ಎಂದು ಕಲ್ಯಾಣಿ ಮೊಬೈಲ್ ನಲ್ಲಿ ಟೈಗರ್ ಬಾಲ ಎಳೆದು ಕಾಲ್ ಮಾಡಿದಳು. ಆ ಕಡೆಯಿಂದ “ಹಲೋ”- ಪ್ರೇಮ ಘರ್ಜನೆ! ” ಇನ್ನೂ ಹೊರಟೇ ಇಲ್ಲ ಮೈ ಡಿಯರ್ ಡಿಯರ್; ಹೊರಟಾಗ ನಾನೇ ಫೋನ್ಮಾಡಿ ಘರ್ಜಿಸ್ತೀನಿ…” ಸಂಕ್ಷಿಪ್ತ ಅಷ್ಟೆ. ಈ ಐಟಿ ಆಫೀಸೇ ಹಾಗೆ; ಒಂದು ರೀತಿ ಅರಣ್ಯ ಇದ್ದ  ಹಾಗೆ! ಅಲ್ಲಿ, ಅರಣ್ಯದಲ್ಲಿ ಒಂದರ ಹಿಂದೆ ಇನ್ನೊಂದರ ತದೇಕ ಮಿಂಚಿನ ಓಟದ ಬೇಟೆ. ಇಲ್ಲಿ, ತಲೆಯ ಮೇಲೆ ಅದಕಿದ ಅಥವ ಅದಕಿಸಿಕೊಂಡಂಥ  ಕೆಲಸ…! ಅಂದಹಾಗೆ, ಈ ಎರಡು ಡಿಯರ್ ಗಳು ಏಕೆಂದರೆ, ಒಂದು ಎಲ್ಲರಂತೆ ಪ್ರೀತಿಯ ಸಂಕೇತ; ಇನ್ನೊಂದು ಜಿಂಕೆ! ಹೌದು, ಅವರು ನನಗೆ ಟೈಗರ್ ಆದಮೇಲೆ, ನಾನು ಅವರ ಜಿಂಕೆ ತಾನೆ! ಇದೇ ಥರ ಇನ್ನೂ ಯಾವ ಯಾವ ಮನೆಗಳಲ್ಲಿ ಬೇರೆ ಯಾವ ಯಾವ ಥರ ಪ್ರಾಣಿಗಳ  ಮೃಗಾಲಯಗಳೇ ಇರಬಹುದೋ ಏನೋ…! ಟೈಗರ್ ಘರ್ಜನೆ  ಮುಗಿದದ್ದೇ, ಮತ್ತೆ ನನ್ನ  ಮೊಬೈಲ್  ಪಿಟೀಲು…ಈಗ ಅಮ್ಮ. “ಹಲೋ ಅಮ್ಮ, ಎಲ್ಲ ಹೇಗಿದ್ದೀರಾ..?” ಅಮ್ಮ ಕಾತರದಲ್ಲಿ,  “ನಮ್ದಿರ್ಲಿ, ಈವತ್ತಿನ್ ರಿಸಲ್ಟ್ ಏನಾಯ್ತೇಳು..?” ನಾನು ಈ ಬೆಳಿಗ್ಗೆ ಮೆಡಿಕಲ್ ಟೆಸ್ಟ್ ಗಳಿಗೆ ಹೋಗಿದ್ದೆ; ಅದರ ಬಗ್ಗೆ ಕೇಳಿದ್ದರು. “ಸಂಜೆ ಸ್ಕೂಲಿಂದ ಬರುವಾಗ ಲ್ಯಾಬ್ ಕಡೆ ಹೋಗಿದ್ದೆ ಅಮ್ಮ; ಇನ್ನೂ ಒಂದೆರಡು ರಿಸಲ್ಟ್  ಬಂದಿಲ್ಲವಂತೆ, ಒಟ್ಟಿಗೇ ನಾಳೆ ಕೊಡ್ತಾರಂತೆ…” ನನ್ನ ಮಾತು ಕೇಳಿ ಅಮ್ಮನ ದುಗುಡ ಕಮ್ಮಿ ಆದ ಹಾಗೆ ಅನ್ನಿಸಲಿಲ್ಲ. ಹಾಗೇ ಅದೂ ಇದೂ ಮಾತಾಡ್ತಾ, “ನಿನ್ ಗಂಡನ್ನ ಕೇಳ್ದೆ ಅಂತೇಳು, ಈಗ ಇಡ್ತೀನಿ, ನನಗೂ ಕೆಲಸ ಇದೆ…” ಅಮ್ಮ ಡಿಸಪಾಯಿಂಟ್ ಆದಂತೆ ಅನ್ನಿಸಿತು. ಎಷ್ಟೇ ಆಗಲಿ, ತಾಯಿ ತಾನೆ; ಮಗಳಿಗೆ ಮದುವೆ ಆಗಿ, ಐದು ವರ್ಷಗಳೇ ಆಗಿದ್ದರೂ ಮಕ್ಕಳೇ ಇಲ್ಲ ಅಂದರೆ… ಹೌದು, ಟೈಗರ್ ಮತ್ತು ಡಿಯರ್ ಇಬ್ಬರೂ, ಇನ್ನೂ ‘ಸ್ಕೋರ್’ ಮಾಡಿರಲಿಲ್ಲ. ‘ಸೊನ್ನೆ-ಸವಾರಿ’ ಮಾಡ್ತಾ ಇದ್ದರು! ಅಂದರೆ,  ಅಪ್ಪ ಅಮ್ಮ ಆಗಿರಲಿಲ್ಲ… ನಾನೊಮ್ಮೆ ಬೇಡ ಅಂದರೆ, ಅವರೊಮ್ಮೆ ಬೇಡ ಅನ್ನೋರು… ಹೀಗೆ ಮೂರು ವರ್ಷ ಜೀಕು-ಜೀಕಾಟ ಆಡುತ್ತಾ ಉರುಳಿಸಿದ್ದೆವು… ಹಾಗಂತ, ಈ ಏರಿಳಿತದ ಆಟದ ನಡುವೆಯೂ, ನನ್ನ ಟೈಗರ್ ಏನೂ ಕಮ್ಮಿ ಇರಲಿಲ್ಲ! ಎಲ್ಲ ನಮೂನೆಯ ‘ಬೆಡ್ ರೂಂ ಯೋಗಾಸನ’ಗಳನ್ನೂ ಅರೆದು ಕುಡಿದಿದ್ದರು! ಅದರಿಂದ ನಾನು, ಒಮ್ಮೊಮ್ಮೆ ಅವರನ್ನ ತಿವಿದ ಹಾಗೆ, “ನೀವು ಒಂಥರಾ ‘ವಾತ್ಸಾಯನಾಸುರ’ ಇದ್ದಂತೆ” ಅಲ್ಲವಾ, ಅಂತ ರೇಗಿಸ್ತಿದ್ದೆ. ಅವರು, “ಹೌದ್ಹೌದು” ಅಂದು, ತುಂಟ ನಗು ಬೀರಿ, ಖುಷಿಯಲ್ಲಿ ತಿವಿದು ಬಿಡ್ತಿದ್ದರು!                        ಅಷ್ಟರಲ್ಲಿ, ನನ್ನ ಅಪ್ಪ ಅಮ್ಮನಿಗಿಂತ ಹೆಚ್ಚಾಗಿ, ಟೈಗರ್ ನನ್ನು ಹೆತ್ತು  ಹೊರಬಿಟ್ಟಿದ್ದ ಅತ್ತೆ ಮಾವ ತುಂಬಾ  ಬಲವಂತ ಹೇರುತ್ತಾ, ವರಾತ ಮಾಡೀ ಮಾಡಿ, ಕೊನೆಗೆ ಇವರಿಗೇ ಬೇಜಾರಾಗಿತ್ತು. ಹಾಗಾಗಿ, ನಮ್ಮಿಬ್ಬರ ನಡುವೆ, ಅದುವರೆಗೆ, ರಾತ್ರಿಹೊತ್ತಿನ ಸ್ವಚ್ಛಂದದ ಬ್ರೇಕ್  ಒತ್ತಲು ಇಡುತ್ತಿದ್ದ ಎಲ್ಲ ಥರ ‘ನಾಕಾಬಂದಿ’ಗಳನ್ನೂ ಕಿತ್ತೆಸೆದಿದ್ದವು! ಆದರೂ, ಊಹ್ಞೂ…ಮಕ್ಕಳ ಫ್ಯಾಕ್ಟರಿಗಳೇ  ಭೋರ್ಗರೆವ ನಮ್ಮ ಈ ಪುಣ್ಯ ನೆಲದ ಮಹಾಸಾಗರದಲ್ಲೂ, ನನ್ನಂತಹ ‘ಸುಕೃತೆ’ ಹಾಗೆಯೇ, ‘ಬಂಜೆ’ಯೋ ಎನಿಸುವಂತೆ  ಉಳಿದುಬಿಟ್ಟಿದ್ದೆ! ಅದು ನನಗಂತೂ ಹೆಮ್ಮೆ ಹಾಗೂ ಖುಷಿಯೇ ಆಗಿತ್ತು; ಏಕೆಂದರೆ ನನಗೆ ಮಾತ್ರ ಅಲ್ಲದೆ, ಟೈಗರ್ ಗೂ ಸಹ ಮಕ್ಕಳು ಅಂದರೆ ಬಿಲ್ಕುಲ್ ಬೇಕಾಗಿರಲಿಲ್ಲ! ಯಾವುದೇ ಥರದ ಎನ್ಕಂಬರೆನ್ಸಸ್ ಇಲ್ಲದೆ ಇಡೀ ಬದುಕನ್ನು ಬದುಕಬೇಕು ಅನ್ನುವ ಮಹದಾಸೆ ನಮ್ಮಿಬ್ಬರದು. ಆದರೆ, ಮೊಮ್ಮಕ್ಕಳು ಬೇಕು ಅಂತ ಹಂಬಲ ಇರುವವರು… ಅತ್ತೆ-ಮಾವ…? ಆಮೇಲೆ, ನನ್ನ ಅಮ್ಮ… ನನ್ನತ್ತೆ ಮಾವನವರಿಗೆ ಟೈಗರ್ ಆದಮೇಲೆ ಹುಟ್ಟಿದ್ದು ಇಬ್ಬರು ತಂಗಿಯರು. ಪಾಪ, ಇಬ್ಬರೂ, ಹೆಣ್ಣು ಹುಲಿಗಳ ಥರ ಇರಲಿಲ್ಲ. ತುಂಬಾ ಮೃದು! ಇಬ್ಬರೂ ಮದುವೆ ಆಗಿ  ಮಕ್ಕಳನ್ನೂ ಹಡೆದಿದ್ದಾರೆ. ಹಾಗಾಗಿ ನನ್ನ ಅತ್ತೆ ಮಾವನವರಿಗೆ  ಮೊಮ್ಮಕ್ಕಳೇನೂ ಇರಲಿಲ್ಲ ಅಂತಲ್ಲ. ಆದರೆ ನಮ್ಮತ್ತೆ ಪ್ರಕಾರ ಮಗನ ಮಕ್ಕಳು ಮಾತ್ರ ತಮ್ಮ ವಂಶೋದ್ಧಾರಕರು!… ಈ ರೀತಿ ಉದ್ಧಾರಕರಿಂದ ಮಾನವ ಇತಿಹಾಸದಲ್ಲಿ ಅದೆಷ್ಟು ವಂಶಗಳು ಎಂಥೆಂಥಾ ಏಣಿ ಹತ್ತಿವೆಯೋ ನಾ ಕಾಣೆ. ನೂರರ ಸೈನ್ಯವೇ ಇದ್ದೂ ಧೃತರಾಷ್ಟ್ರನ ವಂಶೋದ್ಧರ ಹೇಗಾಯಿತೆಂಬ ಭಯಂಕರ ನಿದರ್ಶನವೇ ಇಲ್ಲವೇ… ಅಂಥ ಕೆಟ್ಟ ದಾಯಾದಿ ಸಂತತಿ ಆಗಿಬಿಟ್ಟರೆ? ವಾಸ್ತವವಾಗಿ, ನಮ್ಮ ಮಾವನವರ ಮನಸ್ಸಿನಲ್ಲಿ ಮಕ್ಕಳ ಬಗ್ಗೆಯ ವಾಂಛೆ ಏನೋ ಹೇಗೋ ನಾನರಿಯೆ. ನನ್ನ ಮತ್ತು ನನ್ನ ಟೈಗರ್ ಅವರ ಹೃನ್ಮನಗಳ ವೇವ್ ಲೆಂಗ್ತ್ ಅದ್ಭುತ. ಇದೇ ಬಹುಷಃ, ನಮ್ಮಿಬ್ಬರ ಬದುಕಿನ ಬೆಳಕು!…ಕಹಿ ಸತ್ಯ ಏನೆಂದರೆ, ಪ್ರೇಮಪಾಶದಲ್ಲಿ ವಿವಾಹ ಬಂಧನ ಅಂತ ಆಗಿಬಿಟ್ಟರೆ…ಹೌದು, ಆಗಿಬಿಟ್ಟರೆ, ಎಷ್ಟು ಚಂದ, ಅನಿಸುತ್ತೆ ಅಲ್ಲವೇ? ಆದರೆ ನೈಜತೆ  ಬೇರೆ… ಪ್ರೇಮ ಬಂಧನವಾಗುವುದು ಮತ್ತು ಆಗಿ ಉಳಿಯುವುದು, ಎಲ್ಲ ಲಾಟರಿ ಆಟ! ಹಾಗಾಗಿ ಮದುವೆಗೆ ಮುನ್ನ ಅರ್ಥ ಮಾಡಿಕೊಳ್ಳಬೇಕು ಅಥವಾ ಮಾಡಿಕೊಂಡೇಬಿಟ್ಟೆವು ಅನ್ನುವುದು ಕಠೋರ ಅನರ್ಥ! ಎಲ್ಲರ ಬಾಳ್ವೆಯಲ್ಲೂ ಅಷ್ಟೆ… ಬದುಕ ಬಂಡಿ ಓಡುತ್ತಾ, ಓಡಿಸುತ್ತಾ ಅರ್ಥ ಹಿಗ್ಗುತ್ತಾ ಹಿಗ್ಗುತ್ತಾ,  ಓಡುತ್ತದೆ…ಹಾಗಂತ, ನಾನು ಪ್ರೇಮವಿವಾಹ ವಿರೋಧಿ ಖಂಡಿತ ಅಲ್ಲ… ಗೆಲುವಿಗೆ ತನ್ನದೇ ಆದ ಪ್ರಖರ ಕಿರಣಕಾಂತಿ ಇರುತ್ತದೆ… ಗೆಲುವಾದರೆ ಮಾತ್ರ! ಮತ್ತೆ ಮೊಬೈಲ್ ಗುಟುರು. ಹಲೋ…ಹಲೋ…ಕಟ್. ಮೊಬೈಲ್ ನಲ್ಲಿ ಸಹ ರಾಂಗ್ ನಂಬರ್! ಅಥವಾ ಈ ಕುಲಗೆಟ್ಟ ನೆಟ್ವರ್ಕ್ ಸಂತತಿಯೋ. ಮನುಷ್ಯನ ವಿಕಾಸ ಯಾವತ್ತೂ ಪರಿಪೂರ್ಣ ಅಲ್ಲವೇ ಅಲ್ಲ… ಜ್ಞಾನ-ವಿಜ್ಞಾನ ಅಗಾಧ ಇದ್ದೂ ಸಹ. ನನ್ನ ಬ್ಯಾಚಲರ್ ಡಿಗ್ರಿ ಸಹಪಾಠಿ ಮತ್ತು ಇಂದಿಗೂ ಓಕೆ ಎನಿಸುವಂಥ ಗೆಳತಿ, ಕ್ಷಮಾ. ಅವಳಿಗೂ ನನಗೂ ಒಳ್ಳೆಯ ಹೊಂದಾಣಿಕೆ. ಅಕಸ್ಮಾತ್ ಅಂಥ ಸಾಹಸೀ ಕಾಯಿದೆ ನಮ್ಮಲ್ಲೂ ಇದ್ದಿದ್ದರೆ, ಬಹುಶಃ ನಾವಿಬ್ಬರೂ ಏಕಲಿಂಗ ವಿವಾಹ ಆಗ್ತಿದ್ದೆವೋ ಏನೋ! ಇಬ್ಬರೂ ಕೂಡ ಅಷ್ಟೇ ‘ಬಿಡುಗಡೆ’ಯ ಮಾನಸಿಕ ಸ್ಥಿತಿ ಇದ್ದವರು. ಅವಳೀಗ ಇರುವುದು, ಮಸ್ಕಟ್ ನಲ್ಲಿ. ಎಲ್ಲ ರೀತಿಯ ಬಾರ್ಡರ್ ಗಳನ್ನೂ ಬಿಟ್ಟು ಬದುಕುವ ಮಹಿಳೆ, ಕ್ಷಮಾ; ಅಂಥವಳು ಈಗ ದೂರದ ಅರಬ್ಬರ ನಾಡಲ್ಲಿ!…ನಿಜ, ಅಂತಹ ಸೈಯಾಮೀಸ್ ಟ್ವಿನ್ ಗಳಂಥ ಗೆಳತಿ ಅಲ್ಲದೆ ಇರಬಹುದು ನಾವು; ಹಾಗಾದರೆ, ಹೇಗೆ ಅಂಥ ಮದುವೆ ಬಗ್ಗೆ ಮಾತಾಡಿದೆ? ಸಹಜ, ಹೌದಲ್ಲವೇ? ಹಾಗಾದರೆ ಗಂಡು ಹೆಣ್ಣು ಮದುವೆಯ ದಿನದ ಹೊತ್ತಿಗೆ ವಜ್ರಗಾರೆ ಥರ ಅಂಟಿದ ಆತ್ಮೀಯರೇ ಆಗಿರುವರೇ…? ಖಂಡಿತ ಇಲ್ಲವಲ್ಲ… ನೀವು ಹೇಗೇ ಇದ್ದು, ಹೇಗೇ ಮದುವೆ ಅಂತ ಆದರೂ ಸಹ ಅಂತ್ಯಕ್ಕೆ ಆಗುವುದೆಲ್ಲ ಅದೇ ಆದ್ದರಿಂದ  ತಾನೇ… ಒಂದೊಮ್ಮೆ ಅರಿವೆ ಕಾಣದ ಆದಿ ಮಾನವ ಹಗಲಿರುಳು ಬರೀ ಬೆತ್ತಲೆ; ಈಗ ಏಕಾಂತದಲ್ಲಿ ‘ನಾಗರಿಕ’ ಬೆತ್ತಲೆ…! ಇದರಿಂದಲೇ ತಾನೆ, ಕೊನೆಗೂ ಅನ್ಯೋನ್ನತೆ  ಅಂತ ಬಂದು, ಗಂಡನ  ಜೊತೆ ಹೆಂಡತಿಗೆ ಆತ್ಮೀಯತೆ ಬರೋದು…! ಹ್ಞಾ,..ಹೌದು, ಎಷ್ಟು ಜನ ಈ ನಗ್ನಸತ್ಯ ಒಪ್ಪುತ್ತಾರೆ…ಅದೂ ಒಂದು ಹೆಣ್ಣಿನ ಮೆದುಳಲ್ಲಿ ಬಂದ ಸತ್ಯಚಿಂತನೆಯಿಂದ…! ಕಾಲೇಜಿನಲ್ಲಿ ಇದ್ದಾಗಲೂ ನಾವಿಬ್ಬರೂ ಬೇರೆ ಹುಡುಗಿಯರ ಥರ ಇರಲಿಲ್ಲ — ಪೂರ್ತಿ ಗೌರಮ್ಮನೂ ಅಲ್ಲ ಅಥವ ಅರ್ಧ ಗೌರಿ ಇನ್ನರ್ಧ ಮಾಡರ್ನ್ ಅನ್ನೋ ಥರ ಕೂಡ ಅಲ್ಲ. ನಮ್ಮ ಸ್ಟೈಲೇ ಬೇರೆ; ಮಾಡರ್ನಿಟಿ ಎದ್ದು ಬಂದ ಹಾಗೆ! ಹುಡುಗರ ರೀತಿ ಡ್ರೆಸ್ ಮಾಡ್ತಾ, ಅವರ ಥರಾನೇ ಯಾರಾದರೂ ನೋಡಿದರೆ, ನಾವೂ ಎಗ್ಗಿಲ್ಲದೆ ಅವರನ್ನೇ ದುರುಗುಟ್ಟಿ ನೋಡೋದು, ವಿಶಲ್ ಹೊಡೆದರೆ ನಾವೂ ಅದೇ ಧಾಟಿಯಲ್ಲಿ ಪ್ರತಿಕ್ರಿಯೆ ಮಾಡೋದು, ಹೀಗೆಲ್ಲ!  ಯಾರಾದರೂ ಕಣ್ಣು ಹೊಡೆದರೆ ನಮ್ಮ ಕಣ್ಣೂ ಸುಮ್ಮನೆ ಇರಬಹುದಾ, ಖಂಡಿತ ಇಲ್ಲ. ಆ  ಕಡೆ   ಈಕಡೆ ನೋಡಿ, ಸಮಯ ಸರಿಯಾಗಿದ್ದರೆ!…ಆಗ ಹಾಗಿದ್ದೆವು ಅಂತ ಈಗಲೂ, ಮದುವೆ ಮುಂಜಿ ಆದಮೇಲೂ ಹಾಗೇ ಮಾಡಬಹುದಾ? ನನ್ನ ವಿಷಯ ಏನೋ ಬೇರೆ – ಯಾಕಂದರೆ ನನ್ನ ಗಂಡ ಹಾಗೇ ಇರೋದರಿಂದ. ಅದನ್ನ ನಾನು ಎಂದೂ ದುರುಪಯೋಗ ಮಾಡಿಕೊಂಡಿಲ್ಲ; ಅದೂ ಸತ್ಯ. ಹೌದು, ನಾಳೆ ಲ್ಯಾಬ್ ರಿಪೋರ್ಟ್ ಏನು ಬರಬಹುದು…ನನಲ್ಲೇ ಡಿಫೆಕ್ಟ್ ಇದ್ದರೆ? ಟೈಗರ್ ಏನು ಹೇಳಬಹುದು; ನಮ್ಮತ್ತೇಗೆ ಹೇಗನ್ನಿಸಬಹುದು? ಮಗನಿಗೆ  ಇನ್ನೊಂದು ಮದುವೆ ಆಗು ಅಂತ ಹೇಳಿ ಒತ್ತಾಯ ಮಾಡಬಹುದಾ? ಸಾಧ್ಯ ಇಲ್ಲ ಅನ್ನೋ ಹಾಗಿಲ್ಲ; ಅವರು ಅಂಥವರೇ. ಇನ್ನು ನಮ್ಮ ಮಾವನವರು; ಅವರಿಗೆ ನನ್ನ ಮೇಲೆ ಕನಿಕರ ಆಗಬಹುದು… ಈ ಯೋಚನಾಗುಂಗಿಗೆ ಕತ್ತರಿ ಹಾಕಿದ್ದು ಕಾಲಿಂಗ್ ಬೆಲ್. ಇದು ಗ್ಯಾರಂಟಿ ಟೈಗರ್ರೇ ಅನ್ನಿಸಿತು. ಹೌದು, ಜಿಂಕೆ ಬೇಟೆ ಆಡೋ ನನ್ನ  ಟೈಗರ್ ಬಂದರು. “ಸಾರಿ ರೀ, ಲೇಟಾಯ್ತು. ಇವತ್ತು ಹೆವಿ ವರ್ಕ್”.

ಡಿಯರ್-ಟೈಗರ್! Read Post »

ಅಂಕಣ ಸಂಗಾತಿ, ರಂಗ ರಂಗೋಲಿ

ಅಂಕಣ ಬರಹ ರಂಗ ರಂಗೋಲಿ-06 ಅಜ್ಜಿಯ ಗೂಡಲಿ ಹಾರಲು ಕಲಿತ ಗುಬ್ಬಿ ಮರಿ ಆ ಹಳೇ ಮನೆಯಲ್ಲಿ ತೆಂಗಿನ ಹಸಿ ಮಡಲಿನಿಂದ ಒಂದೊಂದು ಒಲಿಯನ್ನು ತನ್ನ ಚಿಕ್ಕಕತ್ತಿಯಿಂದ ಸರ್ರೆಂದು ಎಳೆದು ನನ್ನ ಆಟಕ್ಕೆ ಹಾವು ,ಬುಟ್ಟಿ, ವಾಚ್,ಕಾಲ್ಗೆಜ್ಜೆ, ಕನ್ನಡಕ ಎಷ್ಟು ಪರಿಕರಗಳು ತಯಾರಾಗುತ್ತಿದ್ದವು. ಮಿದುಳಲ್ಲಿ ಚಿತ್ರವಾದ ಕಲ್ಪನೆಗಳೆಲ್ಲಾ, ಅದ್ಭುತ ಆಟಿಗೆಯಾಗಿ, ಕಲಾಪರಿಕರಗಳಾಗಿ ತಯಾರಾಗುವ ಕಲೆಯ ಕುಲುಮೆಯೇ ಅವರಾಗಿದ್ದರು. ಕಾಡಿಗೆ ಹೋಗಿ ಅದೆಂತದೋ ಕಡ್ಡಿಯಂತಹ ಬಳ್ಳಿ ಎಳಕೊಂಡು ಬರುತ್ತಿದ್ದಳು. ಅದರ ಸಿಪ್ಪೆ ತೆಗೆದು ಹೂ ಬುಟ್ಟಿ,ಅನ್ನ ಬಸಿಯುವ ತಟ್ಟೆ, ದೋಸೆ ಹಾಕುವ ಪಾತ್ರೆ,ಅನ್ನ ಹಾಕಿಡುವ ಪಾತ್ರೆ ತಯಾರಿಸುತ್ತಿದ್ದಳು. ತಾನು ತಾಂಬೂಲ ಹಾಕಿಕೊಳ್ಳುವದಲ್ಲದೆ ಅದಕ್ಕೆಂದೇ ಪುಟ್ಟ ಪರಿಕರ ಈ ಬಳ್ಳಿಯಿಂದ ಮಾಡಿಕೊಂಡಿದ್ದಳು.  ಬಿದಿರನ ರೀತಿಯ ವಾಂಟೆ ಎನ್ನುವ ಗಿಡದಿದ  ಗೊರಬು, ಕುಡ್ಪು, ಈಂಚಿಲ ಗಿಡದ ಚಾಪೆ,ಮುಂಡುಗೆಯ ಚಾಪೆ..ಇದಕ್ಕೆ ಎಲೆ,ಗಿಡ ತಂದು ಕೊಡುವ ಕಾಯಕ ನನ್ನ ಬಾಬನದ್ದು(ಅಜ್ಜ) . ಮನೆಯ ಹಿತ್ತಲಿನನಲ್ಲಿ ಅಂಗಳದಲ್ಲಿ ಬಗೆಬಗೆಯ ಹೂವಿನ ಗಿಡಗಳು ಅದಕ್ಕೆ ಪಾತಿ ಮಾಡಿ ನೆಟ್ಟು ಗಿಡಗಳೊಂದಿಗೆ ಸಂಭಾಷಿಸಿ ಹೂವ ಕೊಯ್ದು ದಾರದಲ್ಲಿ  ಮಾಲೆಯಾಗಿಸುವ ಸೂತ್ರಧಾರೆ ಅವಳು. ಸಾಮಾನ್ಯ ಕಚ್ಛಾವಸ್ತುಗಳು ಅದ್ಭುತ ಕಲಾಪಾತ್ರಗಳಾಗುವ ಈ ಬೆರಗನ್ನು ನೋಡುತ್ತಾ, ಬೆಳೆದ ದಿನಗಳವು. ರಂಗಸ್ಥಳದ ಹಿನ್ನೆಲೆಯಲ್ಲಿ, ಚೌಕಿಯೊಳಗೆ ಪಾತ್ರಗಳ ಭಾವರೂಪಕಗಳು, ಅತಿ ಸಾಮಾನ್ಯ ವ್ಯಕ್ತಿಯೂ ನಾಟಕದ ಅಪೂರ್ವ ಪಾತ್ರಾಭಿವ್ಯಕ್ತಿಯಾಗಿ ತಯಾರಾಗುವ ಕ್ರಿಯೇಟಿವಿಟಿಯ ಮೂಲ ಹುಡುಕುತ್ತಾ ಹೋದರೆ ಬಂದು ನಿಲ್ಲುವುದು ಇಲ್ಲೇ. ಇವಳೊಂದು ಕಡಲು. ಅವಳ ದಂಡೆಯಲ್ಲಿ ಬೆಪ್ಪಾಗಿ ನಿಂತ ಪ್ರವಾಸಿಗಳು ನಾನು. ಕರೆಯುತ್ತಾಳೆ. ಎಷ್ಟು ಮೊಗೆದರೂ ಅಷ್ಟು ಬೊಗಸೆಗೆ ತುಂಬುತ್ತಾಳೆ. ನಾನೇ ಅದರೊಳಗೆ ಮುಳುಗಿ ಮುತ್ತು ರತ್ನ ಆಯಬಹುದು.ನಾನಂತೂ ಮನಸಃ ಈಜಿರುವೆ. ಅವಳ ಬಾಳ ಅಚ್ಚಿನ ಪಾತ್ರೆಯಲ್ಲಿ ತಯಾರಾಗಿ ಬಂದ ಬದುಕು ನಾಟಕದ ಪಾತ್ರ ನಾನು. ಅವಳು ದಾರ ಹಿಡಿದು ಬೊಂಬೆಯ ಕುಣಿತ ಕಲಿಸಿದಳು. ಬಹಿರಂಗದಲ್ಲಿ ಮೊಣಕಾಲೂರಿ ಬಾಗಿ ಪ್ರತಿಯೊಂದರಲ್ಲೂ ಪ್ರೀತಿ ಕಲಿಕೆಯ, ಪಾತ್ರದೊಳಗೆ ತನ್ಮಯತೆಯ ಮಹಾಮಂತ್ರ ಬೋಧಿಸಿದಳು. ಅವಳ ದೃಷ್ಟಿಯಲ್ಲಿ ಯಾವುದೂ ನಿರುಪಯೋಗಿ ವಸ್ತುವಿಲ್ಲ. ಪ್ರತಿಯೊಂದಕ್ಕೂ ಚೌಕಟ್ಟು ಕಟ್ಟಿ ಚೌಕಿಯೊಳಗೆ ಚೆಂದವಾಗಿಸುವುದನ್ನು ತೋರಿಕೊಟ್ಟವಳು.  ಯಕ್ಷಗಾನ ನೋಡಿ ಬಂದ ಮರುದಿನದ ಕತ್ತಲಿಗೆ ಆ ಕಥೆಯ ಉತ್ತರಾರ್ಧ ಚಿಮುಟಿ ದೀಪದ ಬೆಳಕಿನಲ್ಲಿ ಮುಂದುವರೆಸುತ್ತಿದ್ದಳು. ದೀಪದಿಂದ ಬರುವ ಹೊಗೆ ನನಗೆ ಯಾವಾಗಲೂ ಕಥೆ ಕೇಳುವಲ್ಲಿ ಅಡ್ಡಿಯಾಗಲಿಲ್ಲ.  ಹೇಳಿದ ಕಥೆ ಮತ್ತೆ ಪುನರಾವರ್ತನೆ ಆಗುವುದು ಬಹಳ ಕಡಿಮೆ. ಈಕೆಗೆ ಕೇವಲ ರಾಮಾಯಣ, ಮಹಾಭಾರತ ಮಾತ್ರವಲ್ಲ ಇತಿಹಾಸದ ಕಥೆಗಳನ್ನೂ ರೋಚಕವಾಗಿ ಹೇಳ ಬಲ್ಲಳು.ಚಂದ್ರಗುಪ್ತ ಮೌರ್ಯ,ಹಕ್ಕಬುಕ್ಕರು ಅವಳಿಗೆ ತೀರ ಪರಿಚಿತರು. ಹಗಲು ದುಡಿತ,ಮನೆಕೆಲಸ, ನನಗೆ ಕಥೆ..ಇವೆಲ್ಲದರ ಜೊತೆಗೆ ಸ್ವಲ್ಪವಾದರೂ ಕಥೆಗಳನ್ನು ಓದದೆ ಅವಳು ಅಡ್ಡವಾದ ನೆನಪಿಲ್ಲ. ನಾನು ಬೆಳೆದ ನಂತರ ನನ್ನ ಓದಿನ ಹಸಿವು ಹೆಚ್ಚಿದಂತೆ ಆಕೆ ನನ್ನ ಮಗುವಾಗುತ್ತಿದ್ದಳು. ” ಏನೆಲ್ಲ ಓದಿದ್ದೀ..ಅದರಲ್ಲಿ ನಿನಗಿಷ್ಟದ ಚೆಂದದ ಒಂದು ಕಥೆ ಹೇಳು ನೋಡುವ”. ನಾನು ಕಥೆ ಹೇಳುವ ಸಂದರ್ಭ ಬಂದಾಗಲೆಲ್ಲ ಅವಳ ಚರ್ಯೆ ನೆನಪಿಸಿ ಅನುಕರಿಸುತ್ತಿದ್ದೆ. ಕಥೆ ಮತ್ತಷ್ಟು ಅಲಂಕಾರಗೊಂಡು ನನಗಾದ ಆ ಅನುಭೂತಿಯೇ ಅವಳಿಗೂ ಉಣಿಸಬೇಕೆಂಬ ಆಸೆ. ಕೆಲವೊಮ್ಮೆ ಪುಸ್ತಕ ಕೊಟ್ಟು  “ಇದರಲ್ಲಿ ಚೆಂದದ ಇಂದು ಕಥೆ ಓದು. ಕೇಳುತ್ತೇನೆ “, ಎನ್ನುತ್ತಿದ್ದಳು. ನನ್ನ ಓದು ನಿಧಾನಗೊಂಡರೆ.. ” ನನಗೆ ಅರ್ಥ ಆಗುತ್ತಿದೆ. ಗಾಡಿ ಸ್ವಲ್ಲ ಬೇಗ ಹೋಗಲಿ” ಅನ್ನುತ್ತಿದ್ದರು.  ಹೇಳುವ ವೇಗ ಹೆಚ್ಚಿದರೆ,  “ಎಂತ ಅದು ಕಥೆಯಾ..ಓದಬೇಕೂಂತ ಓದುವುದಾ..ಸರಿ ಮಾಡಿ ಮೊದಲಿಂದ ಓದು” ಎನ್ನುವ ಅಪ್ಪಣೆ. ಮುಂದೆ ನಾಟಕವೊಂದು ರಂಗದ ಮೇಲೆ ಬರುವ ಪ್ರಕ್ರಿಯೆಗೆ ಪೂರ್ವಭಾವಿ ಕಾರ್ಯಗಳಲ್ಲಿ ಅದರ ಓದು ಎಷ್ಟೊಂದು ಪ್ರಮುಖ ಪಾತ್ರ ಎಂದು ಅರಿವಿಗೆ ಬಂದಾಗ ನನ್ನ ಕಣ್ಣೆದುರು ಕಥೆ ಓದಿಸುತ್ತಿದ್ದ ನನ್ನ ಮೊದಲ  ನಿರ್ದೇಶಕಿ ಬರುತ್ತಾಳೆ. ಹಗಲಿಡೀ ದುಡಿದು ದಣಿದ ಆಕೆ ನನ್ನ ಪುಟ್ಟ ಕರಗಳನ್ನು ತನ್ನ ಅಂಗೈಯೊಳಗಿರಿಸಿ ಮನೆಯ ಹೊರಗೆ ಸಗಣಿ ಸಾರಿಸಿದ ಅಂಗಳಕ್ಕೆ, ಆ ತೆರೆದ ರಂಗ ಮಂಟಪಕ್ಕೆ ಕರೆತರುತ್ತಿದ್ದಳು. ಎದುರು ಗಗನಚುಂಬನಕ್ಕೆ ಹೊರಟ ತೆಂಗಿನ ಮರ. ಆಕಾಶ ಭಿತ್ತಿಯಲ್ಲಿ ಚಂದಿರ, ನಕ್ಷತ್ರ, ಚೆಲ್ಲುವ ಬೆಳದಿಂಗಳು. ಆ ತಂಪು. ಅಮ್ಮ ನಕ್ಷತ್ರದ ಕಥೆ ಎಂದರೆ ಧ್ರುವ ಮಹಾರಾಜ,ಸವತಿ ಮಾತ್ಸರ್ಯ, ಸಪ್ತ ಋಷಿಗಳ ಕಥೆ, ನಚಿಕೇತ, ಉಲೂಪಿ,ಯಕ್ಷ,ಗಂದರ್ವರು, ನಾಗದೇವತೆಗಳು, ಜನಮೇಜಯನ ಸರ್ಪಯಾಗ ಇವೆಲ್ಲವೂ ಸಾಕ್ಷಾತ್ಕಾರಗೊಳ್ಖುವುದು ಅಲ್ಲೇ. ಚಂದಿರನ ಬೆಳಕು , ತೆಂಗಿನ ಗರಿಗಳ ರಂಗ ವಿನ್ಯಾಸ. ಆಕೆಯ ಮುಖದ ಮೇಲೆ ಕಥೆಯ ಭಾವಕ್ಕೆ ತಕ್ಕಂತೆ ಗಾಳಿಯ ಓಟಕ್ಕೆ ಹರಿದಾಡುವ ನೆರಳು ಬೆಳಕಿನ ಲೈಟಿಂಗ್ ತಂತ್ರಜ್ಞಾನ. ನಾನು ಪ್ರೇಕ್ಷಕಳು. ಆಕೆಯದು ಆ ಅಭಿನಯ ಜಗಲಿಯಲ್ಲಿ ಏಕವ್ಯಕ್ತಿ ಪ್ರಸ್ತುತಿ. ನೂರಾರು ಪ್ರೇಕ್ಷಕರ ಕಣ್ಣೊಳಗೆ ಬಿಂಬವಾಗಿ ಮೂಡುವ, ನಾಟಕದ ಪಾತ್ರವಾಗಲು ಎಂಟೆದೆಯ ಧೈರ್ಯ ಬೇಕು. ಭಾವ, ಅಭಿನಯ, ಮಾತುಗಳು, ರಂಗಚಲನೆ ಇವೆಲ್ಲ ದೇಹದೊಳಗೆ ಹೊಕ್ಕು ವೇಷವಾಗಿ,ಆವೇಶವಾಗಿ ಅಭಿವ್ಯಕ್ತಿಯಾಗಲು, ಒಂದಿಷ್ಟೂ ಹಿಂಜರಿಕೆ, ಭಯ, ಸ್ವಂತಶಕ್ತಿಯ ಮೇಲೆ ಸಂಶಯ ಇರಲೇ ಬಾರದು. ಬಾಲ್ಯದಲ್ಲಿ, ನಾನು ಗುಬ್ಬಿ ಮರಿ. ಗೂಡು ಮಾತ್ರ ಬೆಚ್ಚಗೆ, ಹೊರಗೆಲ್ಲಾ ಅಭದ್ರತೆಯ ಭಾವ. ಅಂಜಿಕೆ, ನಾಚಿಕೆ,ಹೆದರಿಕೆ ಧರಿಸಿಕೊಂಡ ಬಾಲ್ಯದ ನನ್ನ ಚಿತ್ತ ಚಿತ್ರವು ಹಲವಾರು ಸಲ ಭಯದ ಕುಲುಮೆಗೆ ದೂಡಿದಂತಾಗಿ ಚಡಪಡಿಸುತ್ತಿದ್ದೆ. ನಾಲ್ಕು ಜನಗಳಿದ್ದರೆ ಅಡಗಲು ಸುರಕ್ಷಿತ ತಾಣ ಹುಡುಕುತ್ತಿದ್ದೆ.  ಇದಕ್ಕೆ ಹಿನ್ನೆಲೆಯಾಗಿ ಕಾರಣಗಳೇನೇ ಇದ್ದರೂ ಅದು ನನ್ನ ವ್ಯಕ್ತಿತ್ವದ ಭಾಗವಾಗಿ ನಾನೇ ಅದಾಗಿ ಚಡಪಡಿಸುತ್ತಿದ್ದೆ.  ಯಾರ ಎದುರೂ ಬರಲಾರದ, ಮಾತನಾಡಲಾರದ ಪುಕ್ಕಲುತನ.  ಆಗೆಲ್ಲ ಬಡಕಲು ಪುಟ್ಟ ದೇಹದ ನನಗೆ ಶಾಲೆಯಲ್ಲಿ ಮೊದಲ ಬೆಂಚ್ ನಲ್ಲಿ ಸ್ಥಳ ಖಾಯಂ. ಅದೂ ಬಹಳಷ್ಟು ಸಲ ಮೊದಲ ಸಾಲಿನ ಮೊದಲ ಜಾಗ. ವಿಪರೀತ ಚಡಪಡಿಕೆ,ಅಸ್ಯವ್ಯಸ್ತಗೊಂಡು ಕುಂಯ್ಯ್ ಗುಡುವ ಮನ. ಟೀಚರ್ ನನ್ನನ್ನೇ ನೋಡುವರು..ಹೊರ ಒಳಗೆ ಹೋಗಿ ಬರುವಾಗ ನನ್ನ ಸಹಪಾಠಿ ಗಳ ದೃಷ್ಟಿಯೂ ನನ್ನ ಮೇಲೆ. ಪ್ರಶ್ನೆಯೂ ಬಾಣದಂತೆ ನನಗೆ. ಶಾಲೆಯಿಂದ ತಪ್ಪಿಸಿಕೊಂಡು ಮನೆಯ ಆ ಕತ್ತಲೆ ಕೊಠಡಿಯಲ್ಲಿ ಕೂತರೇ..ಅನ್ನಿಸುತ್ತಿತ್ತು. ಅಂತಹ  ಸಂದರ್ಭದಲ್ಲೆ ಮನಸ್ಸಿನ ಗಾಯಗಳಿಗೆ ಮುಲಾಮು ಹಚ್ಚುವಂತೆ ಅಜ್ಜಿ ನುಡಿದಿದ್ದಳು. “ಕೇವಲ ಸೈನಿಕನಾದರೆ ಸಾಲದು. ದಂಡನಾಯಕನಾಗುವ ಬಗ್ಗೆ ಯೋಚಿಸಬೇಕು”  ಒಮ್ಮೆಯಲ್ಲ! ಬಾರಿಬಾರಿ. ನಾನು ಕುಸಿದಾಗಲೆಲ್ಲ..ನಾಯಕತ್ವ ನಿನ್ನ ಕೈಗೆ ತೆಗೆದುಕೋ ಅನ್ನುವುದನ್ನೇ ಅದೆಷ್ಟು ಬಡಿದೆಬ್ಬಿಸುವಂತೆ ಹೇಳುತ್ತಾ ಇದ್ದಳು. “ನಾನು ಉದ್ದ ಇರಬೇಕಿತ್ತು ಅಮ್ಮ” ಎಂದು ನಾನಂದರೆ,  “ಪುಟ್ಟ ದೇಹ ಇರುವುದರಿಂದಲೇ ಸಾಧನೆ. ನೋಡುವ ನಾಳೆಯಿಂದ ಟೀಚರ್ ಹಿಂದೆ ಕುಳಿತುಕೊಳ್ಳಲು ಹೇಳಿದರೂ ನೀನು ಎದುರಿರಬೇಕು. ನಾಳೆ ನೀನು ದಂಡನಾಯಕಿ. ಸೈನ್ಯವನ್ನು ಮುನ್ನಡೆಸಬೇಕು. ನಿನಗೆ ಯಾವುದು ಸಾಧ್ಯವಿಲ್ಲ ಎಂಬ ಭಯ ಇದೆಯೋ, ಅದೇ ಸಾಧ್ಯ ಮಾಡಬೇಕು. ಗೊತ್ತಿಲ್ಲದೆ ಇರುವುದನ್ನು ಗೊತ್ತು ಮಾಡುವ ಬಗ್ಗೆ ಯೋಚಿನೆ,ಯೋಜನೆ ಇರಬೇಕು.” ಅನ್ನುತ್ತಾ ಕಥೆ, ಕಲ್ಪನೆ, ಕಲೆಯನೆಲೆ, ಧೈರ್ಯ ಎಲ್ಲವನ್ನೂ ಈ ಗುಬ್ಬಿ ಮರಿಯ ದೇಹದಲ್ಲಿ ತುಂಬಿ, ಹಾರಲು ಕಲಿಸಿದರು, ******************************* ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 29 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿ

Read Post »

You cannot copy content of this page

Scroll to Top